Tuesday, 23 May 2017

  ಇವಿಎಂ ವಿಶ್ವಾಸಾರ್ಹತೆ : ಮತದಾರ ಗೊಂದಲದಲ್ಲಿ

ಭಾರತದಲ್ಲಿ ಚುನಾವಣೆ ನಡೆಸುವುದು ಸವಾಲಿನ ಕೆಲಸ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಂದರ್ಭದಲ್ಲಿ ತಂತ್ರಜ್ಞಾನಕ್ಕೆ ಮೊರೆ ಹೋಗಲೇಬೇಕಿದೆ. ಆದರೆ ನಾವು ಬಳಸುವ ಮತಯಂತ್ರ ಅಥವಾ ತಂತ್ರಜ್ಞಾನ ಎಷ್ಟು ಸುರಕ್ಷಿತ ಎನ್ನುವ ವಿಮರ್ಶೆ ಮೊದಲು ನಡೆಯಬೇಕಿದೆ. ಅಭಿವೃದ್ಧಿ ಹೊಂದಿದ ದೇಶವಾದ ನೆದರ್ಲಾಂಡ್‌ನಲ್ಲಿ  ಇವಿಎಂ ಬಳಕೆಯನ್ನು ನಿಲ್ಲಿಸಲಾಗಿದೆ. ಇವಿಎಂ ಹ್ಯಾಕ್ ಮಾಡಲು ಅನುಕೂಲಕರ ಸಾಫ್ಟ್‌ವೇರ್ ಹೊಂದಿದೆ ಎನ್ನುವುದು ಆ ದೇಶದ ಹೇಳಿಕೆ. ಈಗ ಭಾರತದಲ್ಲೂ ಇವಿಎಂ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಚುನಾವಣಾ ಆಯೋಗ ಈ ಸಂಬಂಧ  18 ರಾಜಕೀಯ ಪಕ್ಷದ ಮುಖಂಡರಿಗೆ ಸವಾಲು ಹಾಕಿ ಮತಯಂತ್ರ ಹ್ಯಾಕ್ ಮಾಡಿತೋರಿಸಲು ಕೋರಿದೆ. ಜೂನ್ 3ರಿಂದ ಈ ಸವಾಲು ಆರಂಭವಾಗಲಿದೆ. ಒಟ್ಟಿನಲ್ಲಿ ಯಾರೇ ಸೋಲಲಿ, ಯಾರೇ ಗೆಲ್ಲಲಿ ಇವಿಎಂ ಅಸಲೀತನ ಮತದಾರನಿಗೆ ತಿಳಿಯಬೇಕಿದೆ.  

* ದತ್ತಾತ್ರೇಯ ಹೆಗಡೆ

 ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯವಾದ ನಂತರ  ಎಲೆಕ್ಟ್ರಾನಿಕ್ ವೋಟಿಂಗ್ ಮಶಿನ್ (ಇವಿಎಎಂ) ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಉದ್ಭವವಾಗಿದೆ. ಚುನಾವಣೆಗೆ ಬಳಸಲಾದ ಮತಯಂತ್ರಗಳನ್ನು ತಿರುಚಲಾಗಿದೆ ಎನ್ನುವ ಆರೋಪ ಕೆಲವು ರಾಜಕಿಯ ಪಕ್ಷಗಳಿಂದ ಬಲವಾಗಿ ಕೇಳಿಬಂದಿದೆ. ಮತಯಂತ್ರವನ್ನು ಹ್ಯಾಕ್ ಮಾಡಲು ಸಾಧ್ಯ ಎಂದು ಸಹ ಕೆಲವರು ಹೇಳಿದ್ದರು. ಮಧ್ಯಪ್ರದೇಶದಲ್ಲಿ ನ್ಯಾಯಾಧೀಶರು, ಪತ್ರಕರ್ತರೆದರೇ ಮತಯಂತ್ರ ತಿರುಚಿವ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಈ ಎಲ್ಲ ಕಾರಣಗಳಿಂದ ಈಗ ದೇಶದಾದ್ಯಂತ ಇವಿಎಂ ಬಗ್ಗೆ ಚರ್ಚೆ ನಡೆಯುತ್ತಿದೆ.
 ಉ. ಪ್ರ. ದ ಚುನಾವಣೆ ಫಲಿತಾಂಶ ಹೊರಬಿದ್ದ ಕೂಡಲೇ ಬಹುಜನ ಸಮಾಜವಾದಿ ಪಕ್ಷ ಮೊಟ್ಟಮೊದಲು  ಈ ಆರೋಪವನ್ನು ಮಾಡಿತ್ತು. ಆದರೆ ಆಗ ಇದನ್ನು ರಾಜಕೀಯ ಪ್ರೇರಿತ ಎಂದು ಟೀಕಿಸಲಾಯಿತು. ಆನಂತರ ಆಮ್ ಆದ್ಮಿ ಆರೋಪಿಸಿತು. ಒಟ್ಟಾರೆ 18 ಪಕ್ಷಗಳು ಇವಿಎಂ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿವೆ. ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗ, ಸಾರ್ವಜನಿಕ ಕ್ಷೇತ್ರದ ಎರಡು ಕಂಪನಿಗಳು ಈ ಮತಯಂತ್ರವನ್ನು ತಯಾರಿಸುತ್ತಿವೆ. ಅವು ಬಳಸುವ ಸಾಫ್ಟ್‌ವೇರ್ ಯಾರಿಗೂ ಗೊತ್ತಿರುವುದಿಲ್ಲ ಎಂದು ಸಮಜಾಯಿಸಿ ನೀಡಿತ್ತು.
 ಆದರೆ ಆಮ್ ಆದ್ಮಿ ಇತ್ತೀಚೆಗೆ ದೆಹಲಿಯಲ್ಲಿ ಮತಯಂತ್ರವೊಂದನ್ನು ಹ್ಯಾಕ್ ಮಾಡಿ ತೋರಿಸಿತ್ತು. ಇದರಿಂದ ಎಚ್ಚೆತ್ತ  ಆಯೋಗ ಮೊನ್ನೆ 56 ರಾಜಕಿಯ ಪಕ್ಷಗಳ ನಾಯಕರ ಸಭೆ ಕರೆದಿತ್ತು. ಇದರಲ್ಲಿ 42 ರಾಜಕೀಯ ಪಕ್ಷದವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಮತಯಂತ್ರ ತಿರುಚುವ ಅವಕಾಶವನ್ನು ಪಕ್ಷಗಳಿಗೆ ನೀಡುವುದಾಗಿ ಆಯೋಗ ಹೇಳಿದೆ. ಆದರೆ ನಾಯಕರು ಇದನ್ನು ಒಪ್ಪದೆ ಉತ್ತರ ಪ್ರದೇಶದ ಚುನಾವಣೆಗೆ ಬಳಸಿದ ಮತಯಂತ್ರಗಳತ್ತಲೇ ಹೆಚ್ಚಿನ ಸಂಶಯವಿರುವುದನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.
ಇದೇನೇ ಇರಲಿ, ಇವಿಎಂ ಬಗ್ಗೆ ಈ ಎಲ್ಲ ವಿವಾದಗಳಿಂದ ಮತದಾರನಿಗೆ ಸಂಶಯ ಉಂಟಾಗಿದೆ. ಇದನ್ನು ಪರಿಹರಿಸುವ ಜವಾಬ್ದಾರಿ ಆಯೋಗದ ಮೇಲಿದೆ. ಸಾರ್ವಜನಿಕ ರಂಗದಲ್ಲಿ ಯಾವುದೇ ವಿಚಾರದ ಬಗ್ಗೆ ಸಂಶಯ ಬಂದಾಗ ಅದನ್ನು ಸ್ಪಷ್ಟವಾಗಿ ನಿರಾಕರಿಸುವ ಬದಲು ಮುಕ್ತ ಚರ್ಚೆಗೆ ಅವಕಾಶ ಕೊಡಬೇಕು. ಅಥವಾ ಪ್ರಾಯೋಗಿಕವಾಗಿ ಇದು ಸಾಧ್ಯವಿದೆಯೇ ಎನ್ನುವುದನ್ನು ತಂತ್ರಜ್ಞರ ಮೂಲಕ ಸ್ಪಷ್ಟಪಡಿಸಬೇಕು. ಆಯೋಗ ಇಂತಹ ಕೆಲಸವನ್ನು ಮೊದಲು ಮಾಡಬೇಕಿದೆ.  ಈಗ ದಿನೇದಿನೆ ಇವಿಎಂ ಬಗ್ಗೆ ಬರುತ್ತಿರುವ ವದಂತಿಗಳಿಗೆ ಈ ಮೂಲಕ ಕಡಿವಾಣ ಹಾಕಬಹುದು.
ಮೊನ್ನೆಯಷ್ಟೇ ಆಯೋಗ ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿ ಜೂನ್ 3ರಿಂದ ಮತಯಂತ್ರ ದುರ್ಬಳಕೆ ಸಾಧ್ಯತೆಯನ್ನು ಸಾಬೀತು ಮಾಡಬೇಕೆಂದಿದೆ. ಇದಕ್ಕಾಗಿ ಅವಕಾಸ ಒದಗಿಸಿ ಕೆಲವು ಶರತ್ತುಗಳನ್ನೂ ವಿಧಿಸಿದೆ.
ಆಯೋಗ ಯಾವ ಪಕ್ಷದ ಬಗ್ಗೆಯೂ ತಾನು ತಾರತಮ್ಯ ಹೊಂದಿಲ್ಲ. ಎಲ್ಲ ಪಕ್ಷಗಳೂ ತಮಗೆ ಒಂದೇ. ಮುಂದಿನ ಚುನಾವಣೆ ವೇಳೆಗೆ  ಇವಿಎಂ ಜೊತೆಗೆ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ ( ವಿವಿಪಿಎಟಿ) ಅಳವಡಿಸಲಾಗುವುದು ಎಂದು ಸ್ಪಷ್ಟನೆ ನೀಡಿದೆ. ಆದರೆ ಈಗ ನಡೆದಿದೆ ಎನ್ನಲಾಗುತ್ತಿರುವ ತಿರುಚುವಿಕೆಯ ಬಗ್ಗೆ ಮನದಟ್ಟಾಗುವಂತಹ ಸ್ಪಷ್ಟ ಹೇಳಿಕೆಯನ್ನು ನೀಡಿಲ್ಲ.
5 ವರ್ಷಗಳ ಹಿಂದೆಯೇ ಅಂದು ಬಿಜೆಪಿ ವಕ್ತಾರರಾಗಿದ್ದ ಜಿವಿಎಲ್ ನರಸಿಂಹರಾವ್ ಎನ್ನುವವರು ತಮ್ಮ  ಕೃತಿ ‘ ಸಂಕಷ್ಟದಲ್ಲಿ ಪ್ರಜಾಪ್ರಭುತ್ವ. ನಾವು ಇವಿಎಂಗಳನ್ನು ನಂಬಬಹುದೇ?’  ಇದರಲ್ಲಿ ಇವಿಎಂ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದರು. ಈ ಕೃತಿಗೆ ಎಲ್ ಕೆ. ಆಡ್ವಾಣಿ ಮುನ್ನುಡಿ ಬರೆದಿದ್ದರು. ಆದರೆ ಈ ವಿಚಾರದ ಬಗ್ಗೆ ಯಾರೂ ಗಂಭೀರವಾಗಿ ಮಾತನಾಡಲೇ ಇಲ್ಲ. ಭಾರತದಲ್ಲಿ ಚುನಾವಣೆ ನಡೆಸುವುದು ಸವಾಲಿನ ಕೆಲಸ ಎನ್ನುವದರಲ್ಲಿ ಎರಡು ಮಾತಿಲ್ಲ. ಈ ಸಂದರ್ಭದಲ್ಲಿ ತಂತ್ರಜ್ಞಾನಕ್ಕೆ ಮೊರೆ ಹೋಗಲೇಬೇಕಿದೆ. ಆದರೆ ನಾವು ಬಳಸುವ ಯಂತ್ರ ಅಥವಾ ತಂತ್ರಜ್ಞಾನ ಎಷ್ಟು ಸುರಕ್ಷಿತ ಎನ್ನುವ ವಿಮರ್ಶೆ ಮೊದಲು ನಡೆಯಬೇಕಿದೆ.  
ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ, ಅಭಿವೃದ್ಧಿ ಹೊಂದಿದ ದೇಶವಾದ ನೆದರ್ಲಾಂಡ್‌ನಲ್ಲಿ  ಇವಿಎಂ ಬಳಕೆಯನ್ನು ನಿಲ್ಲಿಸಲಾಗಿದೆ. ಇವಿಎಂ ಹ್ಯಾಕ್ ಮಾಡಲು ಅನುಕೂಲಕರ ಸಾಫ್ಟ್‌ವೇರ್ ಹೊಂದಿದೆ ಎನ್ನುವುದನ್ನು  ಗಮನಿಸಿ ಸ್ಥಗಿತಗೊಳಿಸಲಾಗಿದೆ. ಆದರೆ ಆಯೋಗ ಇದಕ್ಕೆ ಕೊಟ್ಟ ವಿವರಣೆ ಏನೆಂದರೆ, ಆ ದೇಶದಲ್ಲಿ ಆನ್‌ಲೈನ್‌ನಲ್ಲಿ ಇವಿಎಂ ಬಳಕೆ ಮಾಡುತ್ತಿದ್ದರು ಎಂದು.
ಭಾರತದಲ್ಲಿ ಮತಪತ್ರದಿಂದ ಮತಯಂತ್ರದ ಯುಗಕ್ಕೆ  ಕಾಲಿಟ್ಟ ನಂತರ  ಸಾಕಷ್ಟು ಕಾನೂನಾತ್ಮಕ ಸವಾಲುಗಳು ಮತ್ತು  ಭದ್ರತೆ ಸಮಸ್ಯೆ ಎದುರಾಗಿದೆ. ನ್ಯೂಯಾರ್ಕ್‌ನ ಬೆಟರ್ ಡೆಮಾಕ್ರಸಿ ಫೋರಂ ಎನ್ನುವ ಸಂಸ್ಥೆ ಭಾರತದಲ್ಲಿ ಇವಿಎಂ ಬಳಕೆ ಮಾಡಕೂಡದೆಂದು  ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ದಾಖಲಿಸಿತ್ತು. ಇವಿಎಂನಲ್ಲಿರುವ ಕಂಪ್ಯೂಟರ್  ಚಿಪ್ಸ್‌ಗಳನ್ನು ಸುಲಭದಲ್ಲಿ ತಿರುಚಲು ಸಾಧ್ಯವಿದೆ. ಮತದಾರರು ನೀಡುವ ಮತ ಒಂದೇ ಅಭ್ಯರ್ಥಿಗೆ ಹೋಗುವಂತೆ ಮಾಡಬಹುದಾಗಿದೆ. ಇಂತಹವುಗಳನ್ನು ಮತಗಟ್ಟೆ ಅಧಿಕಾರಿ ಅಥವಾ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಅದು ಹೇಳಿತ್ತು. ಆದರೆ ಇದನ್ನು ನ್ಯಾಯಾಲಯ ಪುರಸ್ಕರಿಸಿರಲಿಲ್ಲ.
ಯಾವುದೇ ಸಂಶಯ ಬಾರದಂತೆ ಒಂದೇ ಅಭ್ಯರ್ಥಿಗೆ ಸಾಲಾಗಿ ಮತಬರುವಂತೆ ಮಾಡಬಹುದೆನ್ನುವ ವಿಡಿಯೋವೊಂದು ಎರಡು ವರ್ಷಗಳ ಹಿಂದೆ ಹರಿದಾಡಿತ್ತು.  ಇದನ್ನು ಆಯೋಗ ಅಸಾಧ್ಯ ಎಂದಿತ್ತು. ತಾಂತ್ರಿಕ ತಜ್ಞರು ಹೇಳುವ ಪ್ರಕಾರ ಯಾವುದೇ ರೀತಿಯ ತಿರುಚುವಿಕೆ ಸಾಧ್ಯವಿಲ್ಲ. ಆದರೆ ಇತ್ತೀಚೆಗೆ ತಿರುಚುವಿಕೆಯನ್ನು ಸಾಬೀತುಪಡಿಸಲಾಗಿರುವುದರಿಂದ  ಸಾಫ್ಟ್‌ವೇರ್ ಬಗ್ಗೆ ಅನೇಕ ಸಂಶಯಗಳು ಹುಟ್ಟಿಕೊಂಡಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ದಿನೇದಿನೇ ಏನೆಲ್ಲ ಬೆಳವಣಿಗೆ ನಡೆಯುತ್ತಿರುವುದರಿಂದ  ತಿರುಚುವಿಕೆ ಸಾಧ್ಯವಿಲ್ಲ ಎಂದರೆ ನಂಬಲಾಗದ ಸ್ಥಿತಿ ಎದುರಾಗಿದೆ.
ಅಂದರೆ ಇಲ್ಲಿಯವರೆಗೆ ವಿಶ್ವಾಸಾರ್ಹತೆಯನ್ನು ಪರೀಕ್ಷಿಸಲೇ ಇಲ್ಲ. ಬದಲಾಗಿ ಕೇವಲ ಆರೋಪ ಎಂಬಂತೆ ಬಿಂಬಿಸಲಾಯಿತು. ಈಗ ಕಾಲ ಕೂಡಿ ಬಂದಿದೆ. ಇವಿಎಂನ ಬಗ್ಗೆ ಸತ್ಯಾಸತ್ಯತೆ ಜನರಿಗೆ ತಿಳಿಯಬೇಕಿದೆ. ಇದೇ ವೇಳೆ ಮುಂದುವರೆದ ದೇಶಗಳಲ್ಲಿ ಏಕೆ ಮತಯಂತ್ರ ಬಳಕೆಯಾಗುತ್ತಿಲ್ಲ ಎಂಬ ಪ್ರಶ್ನೆಗೂ ಉತ್ತರ ಸಿಗಬೇಕಿದೆ. ತಂತ್ರಜ್ಞಾನದಲ್ಲಿ ಭಾರತಕ್ಕಿಂತ ಮುಂದುವರೆದಿರುವ ದೇಶಗಳು ಇವಿಎಂ ಬಳಸುತ್ತಿಲ್ಲ.
ಈ ಎಲ್ಲ ವಾದ- ವಿವಾದ ಏನೇ ಇದ್ದರೂ ಆಯೋಗವು ಸಾರ್ವಜನಿಕವಾಗಿ ಮತದಾರರಿಗೆ ಈ ಯಂತ್ರದ ಸಾಫ್ಟ್‌ವೇರ್‌ನ ಸುರಕ್ಷತೆ ಬಗ್ಗೆ ತಿಳಿಸಬೇಕಿದೆ. ರಾಜಕೀಯ ಪಕ್ಷಗಳು ಏನೇ ಹೇಳಿದರೂ ಅದನ್ನು ತಳ್ಳಿ ಹಾಕುವ ಕೆಲಸ ಮಾಡದೆ ಅವರೆದುರು ಹ್ಯಾಕ್ ಸಾಧ್ಯವೇ ಎನ್ನುವುದನ್ನು ಪ್ರಾತ್ಯಕ್ಷಿಕೆ ಮೂಲಕ ಸಾಬೀತುಪಡಿಸಬೇಕು. ಅಂದಾಗ ಮಾತ್ರ ಅಪನಂಬಿಕೆ ಹೋಗಲಾಡಿಸಲು ಸಾಧ್ಯ. ಇಲ್ಲವಾದಲ್ಲಿ ಮತ್ತೆ ಮುಂದಿನ ಚುನಾವಣೆ ವೇಳೆೆ ಇಂತಹ ಗೊಂದಲ ಉದ್ಭವಿಸುತ್ತದೆ.  ಸದ್ಯ ಅಯೋಗ ಇಂತಹ ಕ್ರಮಕ್ಕೆ ಮುಂದಾಗಿರುವುದು  ಉತ್ತಮ ಬೆಳವಣಿಗೆ.



ಇವಿಎಂ ಕಾರ್ಯನಿರ್ವಹಣೆ 
 ಭಾರತದ ಇವಿಎಂ ಕಂಟ್ರೋಲ್ ಯುನಿಟ್ ಹೊಂದಿದೆ. ಇದು ಪೋಲಿಂಗ್ ಅಧಿಕಾರಿಯ ಕಂಟ್ರೋಲ್‌ನ್ನೂ ಹೊಂದಿರುತ್ತದೆ. ಮತ್ತು ಬ್ಯಾಲೆಟಿಂಗ್ ಯುನಿಟ್ ಸಹ ಇದ್ದು,  ಇವರೆಡೂ ಯುನಿಟ್‌ಗಳು ವೈರ್ ಮೂಲಕ ಸಂಪರ್ಕ ಹೊಂದಿವೆ. ಇವಿಎಂ 6 ವೋಲ್ಟ್‌ನ ಅಲ್ಕಾಲೈನ್ ಬ್ಯಾಟರಿ ಮೂಲಕ ಕೆಲಸ ಮಾಡುತ್ತದೆ.  ಇದಕ್ಕೆ ಇಂಟರ್ನೆಟ್ ಸಂಪರ್ಕದ ಅವಶ್ಯವಿಲ್ಲ.  ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮಗಳಲ್ಲೂ ಇದನ್ನು ಬಳಸಬಹುದು. ಒಂದು ಇವಿಎಂ 64 ಅಭ್ಯರ್ಥಿಗಳನ್ನು ನೊಂದಣಿ ಮಾಡಿಕೊಳ್ಳಬಲ್ಲದು ಮತ್ತು 3840 ಮತ ದಾಖಲಿಸಬಲ್ಲದು.   ಬ್ಯಾಲೆಟಿಂಗ್ ಯುನಿಟ್ ಪ್ರತ್ಯೇಕ ವಿಭಾಗವನ್ನು ಹೊಂದಿದ್ದು, ಮತದಾನದ ನಂತರ  ಅದನ್ನು ದಾಖಲಿಸಿಕೊಳ್ಳುತ್ತದೆ. ಮತ್ತು ಗುಟ್ಟಾಗಿಡುತ್ತದೆ. ಪೋಲಿಂಗ್ ಅಧಿಕಾರಿಯು ಕಂಟ್ರೋಲ್ ಯುನಿಟ್ ನಿರ್ವಹಿಸುವ ಅಧಿಕಾರ ಹೊಂದಿರುತ್ತಾನೆ. 
ಪ್ರತಿ ಇವಿಎಂಗೆ ಗುರುತಿನ ನಂಬರ್ ಕೊಡಲಾಗುತ್ತದೆ. ಮತಯಂತ್ರ ಯಾವುದೇ ಮತಕೇಂದ್ರದಲ್ಲಿದ್ದರೂ  ಆಯೋಗದ ಡಾಟಾಬೇಸ್‌ನಿಂದ ಮತಯಂತ್ರ ಪತ್ತೆಮಾಡಬಹುದಾಗಿದೆ.  ಈ ಮತಯಂತ್ರಕ್ಕೆ ಪೊಲೀಸರ ಅಥವಾ ಭದ್ರತಾ ಸಿಬ್ಬಂದಿಗಳ ರಕ್ಷಣೆ ಮತಕೇಂದ್ರದಲ್ಲಿರುತ್ತದೆ. ಚುನಾವಣೇಗೂ ಮುನ್ನ ರಾಜಕೀಯ ಪಕ್ಷದ ನಾಯಕರೆದುರು ಮತಯಂತ್ರ ತಯಾರಕ ಕಂಪನಿಯ ಇಂಜಿನಿಯರ್‌ಗಳು ಪರೀಕ್ಷಿಸಿ ತೋರಿಸುತ್ತಾರೆ. ಅಣಕು ಕಾರ್ಯಾಚರಣೆ ಮಾಡುತ್ತಾರೆ. ಮತದಾನದ ದಿನ ಆರಂಭದಲ್ಲಿ ಮತ್ತೆ ಅಣಕು ಪ್ರದರ್ಶನ ಮಾಡಲಾಗುತ್ತದೆ.  ಮತದಾನ ಮುಗಿದ ನಂತರ ರಾಜಕೀಯ ಪಕ್ಷದ ನಾಯಕರ ಸಮ್ಮುಖದಲ್ಲಿ ಮತಯಂತ್ರವನ್ನು ಸೀಲ್ ಮಾಡಲಾಗುತ್ತದೆ.  
...........................

No comments:

Post a Comment