Monday, 1 May 2017

ಮಾನ ಹರಾಜು ಹಾಕುತ್ತಿದೆ ಖಾಸಗಿ ಬಸ್ ನಿಲ್ದಾಣ
  ದಂಧೆಕೋರರ ತಾಣ, ಪುಂಡರ ಆಡುಂಬೊಲ, ಮಾನವಂತರಿಗೆ ಇಲ್ಲಿಲ್ಲ ರಕ್ಷಣೆ   









ರಾಜ್ಯದಲ್ಲೇ  ಮಾದರಿಯಾದ ಖಾಸಗಿ ಬಸ್ ನಿಲ್ದಾಣವನ್ನು ಶಿವಮೊಗ್ಗದಲ್ಲಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ ಕಾಲದಲ್ಲಿ 2010ರಲ್ಲಿ ಉದ್ಘಾಟಿಸಲಾಗಿದೆ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡೇ ಇರುವುದರಿಂದ ಪ್ರಯಾಣಿಕರಿಗೆ ಅತಿ ಉಪಯುಕ್ತವೂ ಇದು ಆಗಿದೆ. ನಗರಕ್ಕೆ ಕಲಶಪ್ರಾಯವಿಟ್ಟಂತೆ ಈ ಬಸ್ ನಿಲ್ದಾಣ ಎಂದು ಕೊಂಡಾಡಲಾಗಿತ್ತು. ಆನಂತರ  ಬಸ್ ನಿಲ್ದಾಣವನ್ನು ಯಾವತ್ತು ಪಾಲಿಕೆಗೆ ವಹಿಸಲಾಯಿತೋ ಅಂದಿನಿಂದ ಇದು ಸಂಪೂರ್ಣ ಕುಲಗೆಟ್ಟು ಹೋಗಿದೆ. ಕಲಶಪ್ರಾಯವಾಗುವ ಬದಲು ನಗರದ ಮಾನ ಹರಾಜು ಹಾಕುವ ಕೆಲಸಗಳು ಇಲ್ಲಿ ಹಾಡಹಗಲೇ ನಡೆಯುತ್ತಿವೆ. ಆದರೂ ತನಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ಪಾಲಿಕೆ ಸುಮ್ಮನಿದೆ. ಇನ್ನೂ ವಿಶೇಷವೆಂದರೆ, ಹಾಲಿ ಮೇಯರ್ ಏಳುಮಲೈ ಅವರಿಗೆ ಸೇರಿದ ವಾರ್ಡಿನಲ್ಲಿ ಈ ಬಸ್ ನಿಲ್ದಾಣವಿದೆ. ದಿನಬೆಳಗಾದರೆ ಅವರೂ ಈ ಮಾರ್ಗದಲ್ಲೇ ಪಾಲಿಕೆಗೆ ಬರುತ್ತಾರೆ. (ಅವರ ಮನೆ ಇರುವುದು ಬಸ್ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿ ) ಸಮಸ್ಯೆ ಅವರಿಗೆ ಗೊತ್ತಿದೆ. ಆದರೆ ಇನ್ನೂ ನಗರದ ಜೊತೆಗೆ ಪಾಲಿಕೆಯ ಮಾನವನ್ನೂ ಸಹ  ಉಳಿಸುವ ಕೆಲಸಕ್ಕೆ ಮುಂದಾಗಿಲ್ಲ.



* ಹಲವು ತಿಂಗಳಿನಿಂದ ರಾತ್ರಿ ಬೆಳಕೇ ಇಲ್ಲದೆ ಅಕ್ಕಪಕ್ಕದ ಅಂಗಡಿ, ಹ್ಯಾಲೊಜಿನ್ ಲೈಟಿನಲ್ಲಿ ಕಾಕಲಳೆಯುತ್ತಿರುವ ರಾಜ್ಯದ ಏಕೈಕ ಖಾಸಗಿ ಬಸ್ ನಿಲ್ದಾಣ.
* ಶಿಸ್ತು, ಸ್ವಚ್ಛತೆ, ಇಲ್ಲ. ಗಬ್ಬು ನಾರುತ್ತಿವೆ ಚರಂಡಿ.
*  ಬೈಕ್ ಸವಾರರ ಆಟಾಟೋಪ, ಒಂದೆಡೆಯಿಂದ ಇನ್ನೊಂಡೆದೆ ಸಾಗಲು ಅವರಿಗೂ ಬಸ್ ನಿಲ್ದಾಣನವೇ ರಹದಾರಿ. 
* ಪ್ರಯಾಣಿಕರಿಗೆ ರಕ್ಷಣೆ ಇಲ್ಲ, ಮಹಿಳೆ, ಯುವತಿಯರಿಗೆ ಪುಂಡರ ಕಾಟ. ಸರಗಳ್ಳತನ. ಪಿಕ್‌ಪಾಕೆಟ್ ಸಂಭವಿಸಿದರೆ ಪೊಲೀಲಿಸರಿಲ್ಲ.
* ಉಪಯೋಗವಿಲ್ಲದೆ ಹಾಳುಬಿದ್ದಿದೆ ಸಿಸಿ ಕ್ಯಾಮರಾ 
* ಪ್ರತಿ ಕಂಬಗಳಿಗೂ ಜಾಹೀರಾತು ಪತ್ರ ಅಂಟಿಸಿ ಇವು ಕಂಬಗಳೇ ಎನ್ನುವ ಸಂಶಯ ಬರುವಂತೆ ವಿರೂಪಗೊಳಿಸಲಾಗಿದೆ.
* ಬಸ್ ಆಗಮನ, ನಿರ್ಗಮನದಲ್ಲಿ ಶಿಸ್ತಿಲ್ಲ. ಎಲ್ಲಿ ಬೇಕಾದರೂ ಬರಬಹುದು, ಹೋಗಬಹುದು, ನಡೆದಾಡುವವರ ಸ್ಥಿತಿ ಅಯೋಮಯ
* ಕ್ಯಾಂಟೀನ್ ಬಾಗಿಲು, ಮೀಟರ್ ಬೋರ್ಡ, ಸ್ವಿಚ್ ಬೋರ್ಡ್ ಮುರಿಯಲಾಗಿದೆ. ಕಿಟಕಿ ಗಾಜು ಒಡೆಯಲಾಗಿದೆ. 
* ಸಂಜೆಯಾಯಿತೆಂದರೆ ಗಿರಾಕಿಗಳನ್ನು ಹುಡುಕುವವರೇ ಜಾಸ್ತಿ. ಕುಡುಕರ ಕಾಟ, ಮಾನವಂತರಿಗಿದು ಸ್ಥಳವಲ್ಲ.
* ತಿಂಡಿಗಾಡಿಗಳ ಕಾಟ, ಬಸ್ ನಿಲ್ದಾಣದೊಳಕ್ಕೆಯೇ ನುಗ್ಗಿ ಅಂಚಿನಲ್ಲಿ ಸಾಲಾಗಿ ನಿಲ್ಲುತ್ತಾರೆ. ಪ್ರಯಾಣಿಕರನ್ನು ಬಲವಂತವಾಗಿ ಅಡ್ಡಗಟ್ಟಿ ಕರೆಯುವ ಪದ್ದತಿ.
* ಪೊಲಿಸರು ಮತ್ತು ಸೆಕ್ಯೂರಿಟಿಗಳಿಲ್ಲದಿರುವ ರಾಜ್ಯದ ಏಕೈಕ ಬಸ್ ನಿಲ್ದಾಣ.
 
 
ಶಿವಮೊಗ್ಗ:  ಇಲ್ಲಿ ಕುಡಿದು ಬಂದು ಹಾಯಾಗಿ ಮಲಗಬಹುದು, ಭಿಕ್ಷುಕರು ಭಿಕ್ಷೆ ಬೇಡಬಹುದು, ಅಂಗವಿಕಲರು, ಮಾನಸಿಕ ಅಸ್ವಸ್ಥರು ಅಲ್ಲಿಯೇ ಗಲೀಜು ಮಾಡುತ್ತ ತಂಗಬಹುದು, ಅಂಗಡಿ ಇಟ್ಟುಕೊಂಡು ಬಳೆ, ಕರ್ಚೀಫ್, ರೋಲ್ಡ್‌ಗೋಲ್ಡ್ ಆಭರಣ, ಪರ್ಸ್, ಬೆಲ್ಟ್ , ತಿಂಡಿ-ತಿನಿಸು, ಹಣ್ಣುಗಳನ್ನು ಮಾರಬಹುದು. ಇವರ ಮಧ್ಯದಲ್ಲಿ ಬಸ್‌ಗೆ ಹೋಗುವವರು ಕುಳಿತುಕೊಳ್ಳಬೇಕು. ಇದು ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ದಯನೀಯ ಸ್ಥಿತಿ.
ಇಲ್ಲಿಯವರೆಗೆ ಯಾವ ಮೇಯರ್ ಕೂಡ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸುವ್ಯವಸ್ಥೆ ಕಲ್ಪಿಸುವ ಗೋಜಿಗೆ ಬರಲೇ ಇಲ್ಲ. ಇಲ್ಲಿನ ಅನೈತಿಕ ವ್ಯವಹಾರ ತಡೆಗಟ್ಟಲಿಲ್ಲ. ಪೊಲೀಸ್ ಠಾಣೆ ಪಕ್ಕದಲ್ಲೇ ಇದ್ದರೂ ಅವರಿಗೆ ಇನ್ನೂ ವಿಷಯವೇ ಗೊತ್ತಿಲ್ಲ. ಇಲ್ಲಿನ  ಬಳೆ, ಕರ್ಚಿಫ್, ಇತರೆ ವಸ್ತುಗಳ  ವ್ಯಾಪಾರಸ್ಥರಿಗೂ ಹೇಳುವವರು- ಕೇಳುವವರು ಇಲ್ಲ.  ಒಟ್ಟಿನಲ್ಲಿ  ಅಪ್ಪ- ಅಮ್ಮ ಇಲ್ಲದ ಮಕ್ಕಳ ಸ್ಥಿತಿಯಲ್ಲಿದೆ ಬಸ್ ನಿಲ್ದಾಣ. ಹೋಗಲಿ, ಕನಿಷ್ಠ ಸೆಕ್ಯೂರಿಟಿಗಳೂ ಇಲ್ಲ.
 ಈ ಬಸ್ ನಿಲ್ದಾಣದ ದುರ್ಗತಿ, ಕೊಳಕು, ಇಲ್ಲಸಲ್ಲದ ವ್ಯವಹಾರ, ಸಂಜೆಯಾದರೆ ಅನೈತಿಕ ವ್ಯವಹಾರ  ಇದನ್ನೆಲ್ಲ ನೋಡಿದವರು ಯಾರೂ ಇಲ್ಲಿಗೆ ಮರಳಿ ಬರುವುದಿಲ್ಲ.  ಬಸ್ ನಿಲ್ದಾಣದ ಒಳಹೊಕ್ಕರೆ ಕನಿಷ್ಠ 10 ಭಿಕ್ಷುಕರು, ಅಸ್ವಸ್ಥರು ಕಾಣುತ್ತಾರೆ. ಪುಂಡ ಯುವಕರ ತಂಡ ಅಲಲೇ ಠಳಾಯಿಸಿರುತ್ತದೆ. ಬಸ್ ನಿಲ್ದಾಣದ ಗಲೀಜಿನಲ್ಲಿ ಅರ್ಧದಷ್ಟು ಪಾಲು ಇವರದ್ದೇ ಇರುತ್ತದೆ. ಗಲೀಜು ಮಾಡುತ್ತಾ, ಬಂದು ಹೋಗುವವರಿಗೆ ಕಿರಿಕಿರಿಯುಂಟು ಮಾಡುತ್ತಿದ್ದಾರೆ. ಅವರವರಲ್ಲೇ  ಗಲಾಟೆ ಮಾಡುವುದು, ದಾರಿಹೋಕರಿಗೆ ಬಯ್ಯುವುದನ್ನೂ ರೂಢಿಮಾಡಿಕೊಂಡಿದ್ದಾರೆ.
ಸಂಜೆಯಾಯಿತೆಂದರೆ ಮಾನವಂತರು ಇಲ್ಲಿಗೆ ಬರುವಂತಿಲ್ಲ. ಯುವಕರೇ ಕುಡಿದುಕೊಂಡು ಹೆಂಗಸರೊಂದಿಗೆ ಅನೈತಿಕವಾಗಿ ವರ್ತಿಸುವುದನ್ನು ಕಾಣಬಹುದು. ಕೆಲಸ ಮುಗಿಸಿ ಮನೆಗೆ ತೆರಳುವ ಯುವತಿ, ವಿವಾಹಿತ ಮಹಿಳೆಯರಿಗೂ ಇವರ ಕಾಟ. ಈ ಪುಂಡರನ್ನು ನಿಗ್ರಹಿಸುವ ಬಗ್ಗೆ ಯಾರೂ ಗಮನಹರಿಸಿಲ್ಲ. ಕಂಡು ಸುಮ್ಮನೆ ಹೋಗುತ್ತಾರೆ. ಇವರೊಟ್ಟಿಗೆ ಅಲ್ಲಿಯೇ ಕಾಲಕಳೆಯುವ ಒಂದಷ್ಟು ನಿರ್ಗತಿಕರು ಸೇರಿಕೊಳ್ಳುತ್ತಾರೆ. ಮಾನ-ಮರ್ಯಾದೆ ಬಿಟ್ಟು ಬಹಿರಂಗವಾಗಿಯೇ ಇವರ ಚೆಲ್ಲಾಟ ಆರಂಭವಾಗುತ್ತದೆ. ಇನ್ನೂ ಮೀಸೆ ಮೂಡದ ಯುವಕರ ಹಾವಳಿ ಇಲ್ಲಿ ಹೆಚ್ಚು.    
ಪ್ರಯಾಣಿಕರಿಗೂ ಕಾಳಜಿ ಇಲ್ಲ:
ಕನಿಷ್ಠ ಜ್ಞಾನವೂ ಇಲ್ಲದಂತೆ ಪ್ರಯಾಣಿಕರೂ ಸಹ ಇಲ್ಲಿ ಕೊಳಕು ಮಾಡುತ್ತಿದ್ದಾರೆ. ಕಂಡಕಂಡಲ್ಲಿ ಉಗುಳುವುದು, ತಿಂಡಿ ತಿಂದ ಪೇಪರ್, ಉಳಿದ ತಿಂಡಿಗಳನ್ನು ಎಸೆಯುತ್ತಾರೆ, ಗುಟ್ಕಾ ತಿನ್ನುವವರಿಂದಲೇ ಅರ್ಧದಷ್ಟು ಬಸ್ ನಿಲ್ದಾಣ ಕೆಂಪಾಗಿದೆ. ಕುಳಿತಲ್ಲೇ ಹಿಂದುಮುಂದೆ ನೋಡದೆ ಪಿಚಕ್ಕನೆ ಉಗಿಯುತ್ತಾರೆ. ಹಣ್ಣಿನ ಸಿಪ್ಪೆ, ಚಾಕಲೇಟ್, ತಿಂಡಿಗಳ ಕವರ್ ಎಸೆಯುತ್ತಾರೆ. ಬಸ್  ನಿಲ್ದಾಣವನ್ನು ಶುಚಿಯಾಗಿಡಬೇಕೆಂಬ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಕತ್ತಲ ಕೂಪ:
ನಂಬಲಸಾಧ್ಯವಾದರೂ ನಂಬಲೇ ಬೇಕಾದ ವಿಚಾರ ಇದು. ಈ ಬಸ್ ನಿಲ್ದಾಣಕ್ಕೆ ಕೆಲವು ತಿಂಗಳಿಂದ ವಿದ್ಯುತ್ ದೀಪವಿಲ್ಲ. ವಿದ್ಯುತ್ ದೀಪದ ಸೌಕರ್ಯವಿದೆ. ಆದರೆ ದೀಪಗಳು ಉರಿಯುವುದಿಲ್ಲ. ಇಡಿ ಬಸ್ ನಿಲ್ದಾಣದೊಳಕ್ಕೆ ಒಂದೇ ಒಂದು ಟ್ಯೂಬ್‌ಲೈಟ್ ಅಥವಾ ಇನ್ನಿತರ ಲೈಟ್ ಬೆಳಗುವುದಿಲ್ಲ. ಅಕ್ಕಪಕ್ಕದ ಅಂಗಡಿಗಳು ಮತ್ತು ಹ್ಯಾಲೊಜಿನ್ ಲೈಟ್‌ಗಳೇ ಬಸ್ ನಿಲ್ದಾಣದ ದೀಪಗಳು. ಇಷ್ಟೊಂದು ಅವ್ಯವಸ್ಥೆ ತಾಂಡವವಾಡುತ್ತಿದ್ದರೂ, ಸಾವಿರಾರು ನಾಗರಿಕರು ಹಗಲು - ಸಂಜೆ ಎನ್ನದೆ ಬಸ್‌ಗೆ ಬರುತ್ತಿದ್ದರೂ ಕನಿಷ್ಠ ಮೂಲಸೌಕರ್ಯವೂ ಇಲ್ಲದೆ ಅವರು ತೆರಳುವಂತಾಗಿದೆ.
ಹೆಂಗಸರ ಶೌಚಾಲಯಕ್ಕೆ ಅಡ್ಡವಾಗಿ ಗೋಡೆ ಇಲ್ಲ. ಇದರಿಂದ ಒಳಗೆ ಹೋಗುವವರು ಮತ್ತು ಬರುವವರು ಮುಕ್ತವಾಗಿಯೇ ಕಾಣುತ್ತಾರೆ.ಇದು ಪುಂಡರಿಗೆ ಇನ್ನಷ್ಟು ಅನುಕೂಲ ಕಲ್ಪಿಸಿದೆ. ಅಕ್ಕಪಕ್ಕದಲ್ಲಿ ಅಂಗಡಿಗಳಿದ್ದರೂ ಅವರ‌್ಯಾರೂ ಕನಿಷ್ಠ ಅಡೆತಡೆ ನಿರ್ಮಿಸಿಕೊಳ್ಳಲು ಯೋಚಿಸಿಲ್ಲ. ಇನ್ನು ಬಸ್ ಬರುವ ಮತ್ತು ಹೋಗುವ ಮಾರ್ಗವನ್ನು ನಿಗದಿಗೊಳಿಸಿದ್ದರೂ ಅದನ್ನು ಅನುಸರಿಸುವವರು ವಿರಳ.  ಬಸ್ ನಿಲ್ದಾಣದ ಎದುರಿರುವ ಅಶೋಕ ಸರ್ಕಲ್‌ನಲ್ಲಿ ಪೊಲೀಸರು ಇಲ್ಲವೆಂದಾದಲ್ಲಿ ಸರ್ಕಲ್‌ನಲ್ಲೇ ನುಗ್ಗಿಸುತ್ತಾರೆ. ಬೈಕ್ ಸವಾರ ಉಪಟಳ ಮಿತಿಮಿರಿದೆ. ಕಂಡಕಂಡಲ್ಲೆಲ್ಲ ತಂದು ನಿಲ್ಲಿಸುತ್ತಾರೆ. ಮಿಳಘಟ್ಟ ರಸ್ತೆಯಿಂದ ಮುಖ್ಯರಸ್ತೆಗೆ  ಬರುವವರು ಬಸ್ ನಿಲ್ದಾಣದೊಳಕ್ಕೆಯೇ ಬೈಕ್‌ನಲ್ಲಿ ಬರುತ್ತಾರೆ.
ಸ್ವಚ್ಛತೆ ಇಲ್ಲಿ ಮರೀಚಿಕೆ, ನಗರದ ವಿವಿಧ ವಾರ್ಡುಗಳಲ್ಲಿ ಸಂಘಟನೆಯವರು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ಅದರೆ ಬಸ್ ನಿಲ್ದಾಣದ ಕೊಳಕಿನ ಕೊಂಪೆಯೇ ಇದ್ದರೂ ಅದರ ಬಳಿ ಸುಳಿದಾಡುವವರೇ ಇಲ್ಲ. ಇಲ್ಲಿನ ಚರಂಡಿಗಳು ನಾರುತ್ತಿವೆ. ನೀರು ಹರಿಯದೆ ರೋಗರುಜಿನುಗಳ ತಾಣವಾಗಿವೆ. ಕಸಗಳ ರಾಶಿಯೇ ಹರಡಿದೆ. ಪ್ರತಿ ಕಂಬಗಳಿಗೂ ಜಾಹಿರಾತು ಪತ್ರ ಅಂಟಿಸಿ ಕೊಳಕು ಮಾಡಲಾಗಿದೆ. ಕಂಡಕಂಡಲ್ಲೆಲ್ಲ ಕರಪತ್ರ ಅಂಟಿಸಲಾಗಿದೆ. ಕುಳಿತುಕೊಳ್ಳುವ ಸ್ಥಳದಲ್ಲೇ ಮಾರಾಟದ ವಸ್ತುಗಳನ್ನು ಹರಡಿ ಇಟ್ಟುಕೊಂಡಿದ್ದರೂ ಅದನ್ನು ತಪ್ಪಿಸುವವರಿಲ್ಲ.
 ನಿರ್ಗತಿಕರ ಕೇಂದ್ರ!:
ಅನಾಥರು ಮತ್ತು ಭಿಕ್ಷುಕರು ಹಗಲಿಡಿ ಕಂಡಲ್ಲೆಲ್ಲ ಭಿಕ್ಷೆ ಬೇಡಿ ರಾತ್ರಿಯಾಯಿತೆಂದರೆ ಮಲಗಲು ಬಸ್ ನಿಲ್ದಾಣಕ್ಕೆ ಬರುತ್ತಾರೆ. ವಿಶಾಲವಾಗಿರುವ ಇಲ್ಲಿನ ಜಾಗದಲ್ಲಿ ಏನು ಮಾಡಿದರೂ ಕೇಳುವವರು ಹೇಳುವವರು ಇಲ್ಲದಿರುವುದರಿಂದ ಇವರ ಪಾಲಿಗೆ ಖಾಯಂ ಆಶ್ರಯತಾಣವಾಗುತ್ತಿದೆ.
  ಪಾಲಿಕೆ ಇಂತಹವರನ್ನು ನಿರ್ಗತಿಕ ತಾಣಕ್ಕೆ ಅಥವಾ ಭಿಕ್ಷುಕರ ಕೇಂದ್ರಕ್ಕೆ ಕಳುಹಿಸುವಲ್ಲಿ ವಿಫಲವಾಗಿದೆ. ಪ್ರತಿ ತಿಂಗಳು ಸುಮಾರು 100ರಷ್ಟು ಭಿಕ್ಷುಕರು ಖಾಸಗಿ ಬಸ್ ನಿಲ್ದಾಣಕ್ಕೆ ಬರುತ್ತಾರೆ ಎಂದು ಅಲ್ಲಿನ ಬಸ್ ಏಜೆಂಟರೊಬ್ಬರು ಹೇಳುತ್ತಾರೆ. ಮಾನಸಿಕ ಅಸ್ವಸ್ಥರನ್ನು ಕೆಲವರು ಇಲ್ಲಿಗೆ ತಂದುಬಿಡುವುದೂ  ಇದೆ. ಕೆಲವು ವೃದ್ಧರನ್ನು ಅವರ ಕುಟುಂಬದವರು ತಂದು ಭಿಕ್ಷೆಗೆ ಇಳಿಸಿದ ಉದಾಹರಣೆಯೂ ಇದೆ. ಪಾಲಿಕೆ ಇದನ್ನೆಲ್ಲ ತಡೆಗಟ್ಟದಿದ್ದರೆ ಇದೇ ಭಿಕ್ಷುಕರ ಮತ್ತು ಮಾನಸಿಕ ಅಸ್ವಸ್ಥರ, ನಿರ್ಗತಿಕರ ಕೇಂದ್ರವಾದರೂ ಆಶ್ಚರ್ಯವೇನಿಲ್ಲ.    
ಪಾಲಿಕೆಗೆ ಹೊಸ ಆಯುಕ್ತರು ಬಂದಿದ್ದಾರೆ. ಮೇಯರ್ ಸಹ ಇದೇ ವಾರ್ಡಿನವರಾಗಿರುವುದರಿಂದ ಅವರೊಡಗೂಡಿ ತಮ್ಮ ಕಾಲದಲ್ಲಾದರೂ ಇದು ಇನ್ನಷ್ಟು ಹೆಸರು ಗಳಿಸುವಂತಾಗಬೇಕಿದೆ. ಈಗಿರುವ ಅವ್ಯವಸ್ಥೆಯನ್ನೆಲ್ಲ ತೊಡೆದಹಾಕಿ ನಾಲ್ಕಾರು ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಿ ನಿರ್ದಾಕ್ಷಿಣ್ಯವಾಗಿ ಸಣ್ಣಪುಟ್ಟ ವ್ಯಾಪಾರಸ್ಥರನ್ನು ದಂಧೆಕೋರರನ್ನು, ಪುಂಡರನ್ನು ಹೊರಹಾಕುವ ಕೆಲಸ ಮಾಡಬೇಕು. ಹೊರಊರಿನಿಂದ ಬರುವ ಪ್ರಯಾಣಿಕರಿಗೆ ತಂಗಲು, ಸೂಕ್ತ ಅವಕಾಶ ಕಲ್ಪಿಸಬೇಕು. ಮಳಿಗೆ ಇಟ್ಟುಕೊಂಡಿರುವ ವ್ಯಾಪಾರಸ್ಥರೂ ಸಹ ಹೆಚ್ಚು ದರ ವಿಧಿಸುತ್ತಿರುವ ಬಗ್ಗೆಯೂ  ದೂರು ಸಾಕಷ್ಟಿದೆ. ಅವರೂ ಸಹ ಬಸ್ ನಿಲ್ದಾಣದೊಳಕ್ಕೆಯೇ ತಮ್ಮ ಅಂಗಡಿಯ ವಸ್ತುಗಳನ್ನಿಡುತ್ತ  ಜಾಗವನ್ನು ಅತಿಕ್ರಮಿಸುತ್ತಿದ್ದಾರೆ. ಇದನ್ನೆಲ್ಲ ತಡೆಗಟ್ಟುವಂತಾಗಬೇಕು.
 ಸ್ಮಾರ್ಟ್ ಸಿಟಿಯಾಗುವ ಸಂದರ್ಭದಲ್ಲಿ ಇರುವಂತಹ ಮಾದರಿ ಬಸ್ ನಿಲ್ದಾಣವನ್ನೇ ನಾವು ಸ್ಮಾರ್ಟ್ ಮಾಡಿಕೊಳ್ಳದೇ ಇದ್ದರೆ ಸ್ಮಾರ್ಟ್ ಕಲ್ಪನೆಯೇ ನಮಗಿಲ್ಲ ಎನ್ನುವ ಸಂದೇಶ ನೀಡುತ್ತದೆ. ಮೊದಲು ಖಾಸಗಿ ಬಸ್ ನಿಲ್ದಾಣವನ್ನು ಪಾಲಿಕೆ ಸ್ಮಾರ್ಟ್ ಮಾಡಬೇಕಿದೆ.    
ಬಸ್ ನಿಲ್ದಾನ ಕೊನೆಯ ಭಾಗದಲ್ಲಿ ಕ್ಯಾಂಟಿನ್ ನಿರ್ಮಿಸಲಾಗಿದೆ. ಸದ್ಯ ಆ ಜಾಗ ಖಾಲಿ ಇರುವುದರಿಂದ ಅಲ್ಲಿ ಅನೈತಿಕ ವ್ಯವಹಾರಗಳೇ ನಡೆಯುತ್ತಿವೆ. ರಾತ್ರಿಯಂತೂ ಇಲ್ಲಿ ತಿರುಗಾಡುವಂತಿಲ್ಲ.  ಕ್ಯಾಂಟೀನಿನ ಬಾಗಿಲು ಮುರಿಸುಹಾಕಲಾಗಿದೆ. ಒಳಗೆಲ್ಲ ಗಲೀಜು ಮಾಡಲಾಗಿದೆ. ಮೀಟರ್ ಬೋರ್ಡ್, ಸ್ವಿಚ್  ಬೋರ್ಡುಗಳನ್ನೆಲ್ಲ ಮುರಿದಿರುವುದರಿಂದ  ವೈರ್‌ಗಳೆಲ್ಲ ಜೋತುಬಿದ್ದಿವೆ. ಇಲ್ಲಿ ಪೊಲೀಸರು ಸುಳಿಯುವುದಿಲ್ಲ. ಇದರಿಂದ ಪುಂಡರಿಗೆ- ಕಾಮುಕರಿಗೆ ಪ್ರಶಸ್ತ ಸ್ಥಳವಾಗಿದೆ.
,,,,,,,,,,,,,,,,,,,,,,,,,,,,,,,,,,,,,,,,,,

No comments:

Post a Comment