Friday, 26 May 2017

7 ತಿಂಗಳಲ್ಲಿ 447 ಎಕರೆ ಕೆರೆ ಒತ್ತುವರಿ ತೆರವು
 ದಾಖಲೆ ನಿರ್ಮಿಸಿದ ಶಿವಮೊಗ್ಗ ಜಿಲ್ಲಾಡಳಿತ


ಜಿಲ್ಲಾಡಳಿತದ  ಮಾಹಿತಿಯ ಪ್ರಕಾರ, ಡಾ. ಎಂ. ಲೋಕೇಶ್ ಡಿ.ಸಿ.ಯಾಗಿ ಅಧಿಕಾರ ಸ್ವೀಕರಿಸಿದ ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಪ್ರಸ್ತುತ ಮೇ 22 ರವರೆಗಿನ ಸುಮಾರು 7 ತಿಂಗಳ ಅವಧಿಯಲ್ಲಿ, ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಏಳು ತಾಲೂಕು ವ್ಯಾಪ್ತಿಯ 175 ಪ್ರಕರಣಗಳಿಗೆ ಸಂಬಂಧಿಸಿದಂತೆ 447.38 ಎಕರೆಯಷ್ಟು ಕೆರೆ ಒತ್ತುವರಿ ತೆರವುಗೊಳಿಸಲಾಗಿದೆ. 
ಕೆರೆ ಒತ್ತುವರಿ ತೆರವಿನಲ್ಲಿ ಶಿವಮೊಗ್ಗ ತಾಲೂಕು ಆಡಳಿತ ಮೊದಲ ಸ್ಥಾನದಲ್ಲಿದೆ. 7 ತಿಂಗಳಲ್ಲಿ 23 ಪ್ರಕರಣಗಳಲ್ಲಿ 154.19 ಎಕರೆಯಷ್ಟು ಕೆರೆ ಒತ್ತುವರಿ ತೆರವುಗೊಳಿಸಿ ಇಡೀ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಉಳಿದಂತೆ ಭದ್ರಾವತಿ ತಾಲೂಕು ಆಡಳಿತ ದ್ವಿತೀಯ ಸ್ಥಾನದಲ್ಲಿದ್ದು, 24 ಪ್ರಕರಣಗಳಲ್ಲಿ 147.12 ಎಕರೆಯಷ್ಟು ಕೆರೆ ಒತ್ತುವರಿ ತೆರವುಗೊಳಿಸಿದೆ. 
ಶಿಕಾರಿಪುರ ತಾಲೂಕು ಆಡಳಿತವು 20 ಪ್ರಕರಣಗಳಲ್ಲಿ 51.39 ಎಕರೆ, ಸಾಗರ ತಾಲೂಕು ಆಡಳಿತವು 45 ಪ್ರಕರಣಗಳಲ್ಲಿ 35.63 ಎಕರೆ, ಸೊರಬ ತಾಲೂಕು ಆಡಳಿತವು 18 ಪ್ರಕರಣಗಳಲ್ಲಿ 21.02 ಎಕರೆ, ಹೊಸನಗರ ತಾಲೂಕು ಆಡಳಿತವ 35 ಪ್ರಕರಣಗಳಲ್ಲಿ 25.28 ಎಕರೆ ಹಾಗೂ ತೀರ್ಥಹಳ್ಳಿ ತಾಲೂಕು ಆಡಳಿತವು 10 ಪ್ರಕರಣಗಳಲ್ಲಿ ಕೇವಲ 8.22 ಎಕರೆಯಷ್ಟು ಕೆರೆ ಒತ್ತುವರಿ ತೆರವು ಮಾಡಿದೆ. 

ಶಿವಮೊಗ್ಗ :  ಏಳು ತಿಂಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕುಗಳ ವ್ಯಾಪ್ತಿಯಲ್ಲಿ ಸರಿಸುಮಾರು 447.38 ಎಕರೆಯಷ್ಟು ಕೆರೆ ಒತ್ತುವರಿ ತೆರವುಗೊಳಿಸಿ, ಶಿವಮೊಗ್ಗ ಜಿಲ್ಲಾಡಳಿತ ಸಾರ್ವಜನಿಕ ವಲಯದಲ್ಲಿ ಹೊಸ ದಾಖಲೆ  ಸೃಷ್ಟಿಸಿದೆ. ಇನ್ನುಳಿದಿರುವ ಕೆರೆ ಒತ್ತುವರಿದಾರರು ನಿದ್ದೆಗೆಡುವಂತೆ ಮಾಡಿದೆ. ಸೀಮಿತಾವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಕೆರೆ ಒತ್ತುವರಿ ತೆರವುಗೊಳಿಸಿದ್ದು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಯಾಗಿದೆ.
  ರಾಜ್ಯದಲ್ಲಿ ಅತಿ ಹೆಚ್ಚು ಕೆರೆ ಹೊಂದಿರುವ ಜಿಲ್ಲೆಗಳಲ್ಲಿ ಒಂದಾಗಿರುವ ಶಿವಮೊಗ್ಗದಲ್ಲಿ  ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಕೆರೆಗಳ ಒತ್ತುವರಿಯಾಗಿತ್ತು. ಒತ್ತುವರಿಯಾದದ್ದು ಬಹುತೇಕ ಪ್ರಭಾವಿಗಳಿಂದಲೇ ಎನ್ನುವುದು ಇನ್ನೊಂದು ವಿಶೇಷ. ಕಾನೂನುಬಾಹಿರ ವ್ಯವಹಾರ ನಡೆಸುವ ಕೆಲವರು ಸಹ  ಅವ್ಯಾಹತವಾಗಿ ಕೆರೆ ಒತ್ತುವರಿ ಮಾಡಿಕೊಂಡಿದ್ದ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು.
ಕಳೆದ ವರ್ಷ ಕೆರೆ ಒತ್ತುವರಿ ತೆರವಿಗೆ ಅಂದಿನ ಜಿಲ್ಲಾದಿಕಾರಿ ವಿ. ಪಿ, ಇಕ್ಕೇರಿ ಗಾಡಿಕೊಪ್ಪದಲ್ಲಿ ಮೊಟ್ಟಮೊದಲ ಬಾರಿ ಚಾಲನೆ ನೀಡಿದ್ದರು. ಅಲ್ಲಿಂದ ಶುರುವಾದ ಈ  ಅಭಿಯಾನ ಇನ್ನೂ ಮುಂದುವರೆದಿದೆ.  ಹಲವು ನಾಗರಿಕ ಸಂಘಟನೆಗಳು ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಾಗಿರುವ ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಡಿ.ಸಿ. ಕಚೇರಿ ಮುಂಭಾಗ ಪ್ರತಿಭಟನೆ ಕೂಡ ನಡೆಸಿದ್ದವು. ಇದಾದ ನಂತರ ಶಿವಮೊಗ್ಗ ನಗರದಲ್ಲಿ ಕೆರೆ ಒತ್ತುವರಿ ತೆರವುಗೊಳಿಸಲು ಜಿಲ್ಲಾಡಳಿತ ಕ್ರಮಕೈಗೊಂಡಿತ್ತು. ಮಳೆಗಾಲ ಆರಂಭವಾಗಿದ್ದರಿಂದ  ಈ ಕಾರ್ಯಾಚರಣೆ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ನೆಪಮಾತ್ರಕ್ಕೆ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಆರೋಪವನ್ನು ಸ್ವತಃ ಪ್ರತಿಭಟನೆ ನಡೆಸಿದ್ದ ಸಂಘಟನೆಗಳೇ ಬಹಿರಂಗವಾಗಿ ದೂರಿದ್ದವು.
ಇದಾದ ನಂತರ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಿರೀಕ್ಷಿತ ಮಟ್ಟದಲ್ಲಿ ನಡೆದಿರಲಿಲ್ಲ. ಡಾ. ಎಂ. ಲೋಕೇಶ್ ಜಿಲ್ಲಾಧಿಕಾರಿಯಾಗಿ ಆಗಮಿಸಿದ ನಂತರ ಕೆರೆ ಒತ್ತುವರಿ ಕಾರ್ಯಾಚರಣೆಗೆ ವೇಗ ದೊರಕಿತು.  ಆಗಮಿಸಿದ ಕೇವಲ ಏಳು ತಿಂಗಳ ಅವಧಿಯಲ್ಲಿ, ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಸೀಮಿತಾವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೆರೆ ಒತ್ತುವರಿ ತೆರವುಗೊಳಿಸಿದ ಉದಾಹರಣೆ ಜಿಲ್ಲಾಡಳಿತದ ಇತಿಹಾಸದಲ್ಲಿಯೇ ಇಲ್ಲ ಎನ್ನುವುದನ್ನು ಹಿರಿಯರು ಹೇಳುತ್ತಾರೆ.
ಸಂರಕ್ಷಣೆಗೆ ಒತ್ತು:
 ಡಾ. ಲೋಕೇಶ್ ಗ್ರಾಮೀಣ ಪ್ರದೇಶಗಳಿಗೆ ನಿರಂತರವಾಗಿ ಭೇಟಿಯಿತ್ತು ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಸಾರ್ವಜನಿಕರು ತಮ್ಮ ಭಾಗದಲ್ಲಾಗಿರುವ ಕೆರೆಗಳ ಒತ್ತುವರಿಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇದರ ಆಧಾರದ ಮೇಲೆ ಡಿ.ಸಿ.ಯವರೇ ಖುದ್ದು ಹಲವು ಕೆರೆಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸುತ್ತಿದ್ದಾರೆ. ವಾರದಲ್ಲಿ ತಮ್ಮ ವ್ಯಾಪ್ತಿಯಲ್ಲಾಗಿರುವ ಎರಡು ಕೆರೆಗಳ ಒತ್ತುವರಿ ತೆರವುಗೊಳಿಸಿ ತಮಗೆ ವರದಿ ನೀಡುವಂತೆ ಎಲ್ಲ ತಾಲೂಕು ಆಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ. ಇದರಿಂದಾಗಿ ಕೆಳ ಹಂತದ ಅಧಿಕಾರಿಗಳು ಕೆರೆ ಒತ್ತುವರಿ ತೆರವಿಗೆ ಮಹತ್ವ ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.  ನಿರ್ಲಕ್ಷ್ಯವಹಿಸುವ ಅಧಿಕಾರಿ, ಸಿಬ್ಬಂದಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವೆಂದು ಎಚ್ಚರಿಕೆ ನೀಡಿದ್ದಾರೆ. ಡಿ.ಸಿ.ಯವರ ಕಟ್ಟುನಿಟ್ಟಿನ ಸೂಚನೆಯಿಂದ ತಾಲೂಕು ಆಡಳಿತಗಳು ಕೂಡ ಸ್ಥಳೀಯ ರಾಜಕೀಯ ಒತ್ತಡ-ಪ್ರಭಾವಕ್ಕೆ ಮಣಿಯದೆ ಸಮರೋಪಾದಿಯಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದ ಸೀಮಿತಾವಧಿಯಲ್ಲಿಯೇ ಜಿಲ್ಲೆಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಕೆರೆಗಳ ಒತ್ತುವರಿ ತೆರವುಗೊಳ್ಳುವಂತಾಗಿದೆ.

-----------------------------------------

1 comment:

  1. ಶಿವಮೊಗ್ಗ ತಾಲೂಕಲ್ಲಿ ಎಷ್ಟು ಕೆರೆಗಳಿವೆ. ಎಷ್ಟು ಒತ್ತುವರಿ ಆಗಿವೆ ??

    ReplyDelete