Wednesday, 10 May 2017

 ಲಿಂಗನಮಕ್ಕಿಯ ಕಾಣದ ಮುಖಗಳು




ಲಿಂಗನಮಕ್ಕಿಯಲ್ಲಿ 150 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಇದೆ. ಆದರೆ ಸದ್ಯ ಕೇವಲ 18 ಟಿಎಂಸಿ ನೀರಿದೆ. ಇಲ್ಲಿಯವರೆಗೆ ಅತಿ ಕಡಿಮೆ ನೀರು  (ಎಪ್ರಿಲ್ ಅಂತ್ಯಕ್ಕೆ) 1986ರಲ್ಲಿ ಅಂದರೆ 1727 ಅಡಿ ಇತ್ತು.  2003ರಲ್ಲಿ 1725.4 ಅಡಿ ಇತ್ತು. ಕಡಿಮೆ ನೀರಿನ ಸಂಗ್ರಹದ ನಡುವೆಯೂ, ಲಿಂಗನಮಕ್ಕಿಯ ಮಹಾತ್ಮ ಗಾಂಧಿ ವಿದ್ಯುದಾಗಾರದಲ್ಲಿ ಪ್ರಸ್ತುತ ಪ್ರತಿ ದಿನ 12 ರಿಂದ 15 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಸರಾಸರಿ 10 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲು ಸುಮಾರು 8000 ಸಾವಿರ ಕ್ಯೂಸೆಕ್ ನೀರಿನ ಅವಶ್ಯಕತೆಯಿದೆ.
ಶಿವಕುಮಾರ್, ಹಿರಿಯ ಇಂಜಿನಿಯರ್, ಲಿಂಗನಮಕ್ಕಿ

 ಲಿಂಗನಮಕ್ಕಿ ಜಲಾಶಯದ ಒಡಲಿನಲ್ಲಿರುವ ನೀರಿನ ಪ್ರಮಾಣ ದಿನೇದಿನೇ ಇಳಿಮುಖವಾಗುತ್ತಿದೆ. ಒಂದೆಡೆ  ಏರುತ್ತಿದೆ ಬಿಸಿಲಿನ ಪ್ರಮಾಣ, ಮಗದೊಂದೆಡೆ ದಿನದಿಂದ ದಿನಕ್ಕೆ ಏರುತ್ತಿದೆ ವಿದ್ಯುತ್ ಬೇಡಿಕೆ. ಇದೆಲ್ಲವನ್ನೂ ಸರಿದೂಗಿಸಲು ಕರ್ನಾಟಕ ವಿದ್ಯುತ್ ನಿಗಮದ  ಇಲ್ಲಿನ ಇಂಜಿನಿಯರ್‌ಗಳು ಹೋರಾಡುತ್ತಿದ್ದಾರೆ. ಅಣೆಕಟ್ಟಿನಿಂದ ನೀರು ಸ್ಥಗಿತಗೊಂಡು ಯಾವಾಗ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುವುದೋ ಎಂಬ ಭಯದಲ್ಲಿದ್ದವರಿಗೆ ಸದ್ಯ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುವ ಭೀತಿ ಇಲ್ಲ ಎನ್ನುವುದು ಸಮಾಧಾನದ ವಿಷಯ.
ಶರಾವತಿ ಯೋಜನಾ ಪ್ರದೇಶಕ್ಕೆ ಮತ್ತು ಲಿಂಗನಮಕ್ಕಿ ಅಣೆಕಟ್ಟಿಗೆ ಶಿವಮೊಗ್ಗದ ಪತ್ರಕರ್ತರ ತಂಡವೊಂದು ಕಳೆದ ವಾರ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿಯನ್ನು ಕಣ್ಣಾರೆ ಕಂಡು, ಇಂಜಿನಿಯರ್‌ಗಳೊಂದಿಗೆ ಮಾತನಾಡಿದಾಗ ಸುಮಾರು 40 ದಿನಗಳಿಗಾಗುವಷ್ಟು ನೀರನ್ನು ಅಣೆಕಟ್ಟು ಪೂರೈಸುವ ಸಾಮರ್ಥ್ಯ ಹೊಂದಿದೆ ಎನ್ನುವುದು ಬಹಿರಂಗವಾಯಿತು. ಲಿಂಗನಮಕ್ಕಿ ಜಲಾಶಯದ ಒಟ್ಟು ಸಾಮರ್ಥ್ಯ 1819 ಅಡಿ. ಜಲಾಶಯ ನಿರ್ಮಾಣವಾದ್ದದು 1964ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಒಟ್ಟೂ 15 ಬಾರಿ ಮಾತ್ರ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಸತತವಾಗಿ ಮಳೆ ಕಡಿಮೆಯಾಗುತ್ತಿರುವುದರಿಂದ ಜಲಾಶಯ ತುಂಬುತ್ತಿಲ್ಲ.
ಲಿಂಗನಮಕ್ಕಿ ಎಂಬ ಗ್ರಾಮದಲ್ಲಿ ಜಲಾಶಯ ಮತ್ತು ಅಣೆಕಟ್ಟು ನಿರ್ಮಾಣವಾದುದರಿಂದ ಲಿಂಗನಮಕ್ಕಿ ಅಣೆಕಟ್ಟು ಎಂದು ಹೆಸರು ಬಂದಿದೆ.  ಈ ಅಣೆಕಟ್ಟು ಜೋಗದಿಂದ 7 ಕಿ.ಮೀ ದೂರದಲ್ಲಿರುವ ಮಹಾತ್ಮಾಗಾಂಧಿ ವಿದ್ಯುದಾಗಾರಕ್ಕೆ ನೀರನ್ನು ಪೂರೈಸುತ್ತಿದೆ. ಜೊತೆಗೆ ಶರಾವತಿ ವಿದ್ಯುದಾಗರಕ್ಕೂ ಜೀವನಾಡಿಯಾಗಿದೆ. ಒಟ್ಟೂ ನಾಲ್ಕು ವಿದ್ಯುತ್ ಕೇಂದ್ರಗಳನ್ನು ಈ ಅಣೆಕಟ್ಟಿನ ನೀರಿನಿಂದ ನಡೆಸಲಾಗುತ್ತಿದೆ. ಲಿಂಗನಮಕ್ಕಿ ವಿದ್ಯುದಾಗಾರ ಹಾಗೂ ಗೇರುಸೊಪ್ಪಾ ವಿದ್ಯುದಾಗಾರ ಇನ್ನೆರಡು ವಿದ್ಯುದಾಗಾರಗಳು. ಗೇರುಸೊಪ್ಪಾ ಹೊನ್ನಾವರ ತಾಲೂಕು ವ್ಯಾಪ್ತಿಯಲ್ಲಿದೆ.
ಲಿಂಗನಮಕ್ಕಿ ಅಣೆಕಟ್ಟು 59.13 ಮೀಟರ್ ಎತ್ತರವಾಗಿದ್ದು, 2749 ಮೀಟರ್ ಉದ್ದವಿದೆ. 1992 ಚದರ ಕಿ. ಮೀ. ಗಳಷ್ಟು ಜಲಾನಯನ ಪ್ರದೇಶವನ್ನು ಹೊಂದಿದೆ. ಹೆಚ್ಚುವರಿ ನೀರಿನ ಬಿಡುಗಡೆಗಾಗಿ 11 ರೇಡಿಯಲ್ ಗೇಟುಗಳನ್ನು ಅಳವಡಿಸಲಾಗಿದೆ. ಮಳೆಗಾಲದಲ್ಲಿ ಜಲಾಶಯ ನಿಗದಿತ ಮಟ್ಟ ತುಂಬುತ್ತಿದ್ದಂತೆಯೇ ಈ ಗೇಟುಗಳನ್ನು ತೆರೆಯಲಾಗುತ್ತದೆ. ಆಗ ಜಲಾಶಯ ಭೋರ್ಗರೆಯುವ ರೀತಿ, ಹಾಲಿನ ಹೊಳೆಯೇ ಉಕ್ಕುತ್ತಿದೆಯೇನೋ ಎನ್ನುವಂತೆ ಭಾಸವಾಗುವ ರೀತಿಯಲ್ಲಿ ನೀರಿನ ಧಾರೆ ಧುಮ್ಮಿಕ್ಕುವುದು ಅವರ್ಣನಿಯ. ಇದರ ವೀಕ್ಷಣೆ ಸಹ ಒಂದು ಅಪೂರ್ವ ಅವಕಾಶ.  
ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ, ರಾಜ್ಯದ ವಿದ್ಯುತ್ ಬೇಡಿಕೆಯಲ್ಲಿ ಶೇ. 30 ರಷ್ಟು ವಿದ್ಯುತ್ ಪೂರೈಕೆ ಮಾಡುವ ಹಾಗೂ ಏಷ್ಯಾ ಖಂಡದಲ್ಲಿಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸುವ ಹೆಗ್ಗಳಿಕೆಗೆ ಪಾತ್ರವಾದ  ಲಿಂಗನಮಕ್ಕಿ ಜಲಾಶಯದಲ್ಲಿ ಸದ್ಯ ನೀರಿನ ಪ್ರಮಾಣ 1740.08 ಅಡಿಯಷ್ಟಿದೆ. 1715 ಅಡಿ ತಲುಪಿದೊಡನೆ ನೀರು ಹರಿವನ್ನು ಸ್ಥಗಿತಗೊಳಿಸಲಾಗುತ್ತದೆ. ಕಳೆದ ವರ್ಷ ಇದೇ ಅವಧಿಗೆ 1768.45ರಷ್ಟಿತ್ತು. ಅಂದರೆ ಕಳೆದ ಮಳೆಗಾಲದಲ್ಲಿ ಕಡಿಮೆ ಮಳೆ ಬಿದ್ದ ಪರಿಣಾಮ ನೀರಿನ ಪ್ರಮಾಣವು ಕುಸಿತವಾಗಿತ್ತು.  2016ರಲ್ಲಿ ಡ್ಯಾಂನಲ್ಲಿ ನೀರು  1800 ಅಡಿಯನ್ನೂ ದಾಟಿಲ್ಲ. ಇದರಿಂದಾಗಿ ಆಗಲೇ ನೀರಿನ ಕೊರತೆಯನ್ನು ಅಂದಾಜಿಸಲಾಗಿತ್ತು.
ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಿರುವುದನ್ನರಿತ ಇಂಧನ ಇಲಾಖೆಯು, ಲಿಂಗನಮಕ್ಕಿ ವಿದ್ಯುದಾಗಾರ ಸೇರಿದಂತೆ ರಾಜ್ಯದ ಜಲ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಉತ್ಪಾದಿಸುವ ವಿದ್ಯುತ್‌ನ ಪ್ರಮಾಣವನ್ನು ಕಡಿಮೆ ಮಾಡಿದೆ. ಉಷ್ಣ ವಿದ್ಯುತ್ ಸ್ಥಾವರಗಳಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದೆ.
ಸದ್ಯ ಡ್ಯಾಮ್‌ನ ತಗ್ಗು ಪ್ರದೇಶದಲ್ಲಿ ಮಾತ್ರ ನೀರಿದೆ. ಅದನ್ನೇ ಕಾಲುವೆಗಳ ಮೂಲಕ ಹರಿಸಲಾಗುತ್ತಿದೆ. ಈಗ ಇದು ನೋಡಲು ರಮಣೀಯ ಸ್ಥಳ. ಅಲ್ಲಲ್ಲಿ ಖಾಲಿಜಾಗದಲ್ಲಿ ಹುಲುಸಾಗಿ ಹುಲ್ಲುಗಳು ಬೆಳೆದಿದ್ದು, ಸುತ್ತಮುತ್ತಲ ಗ್ರಾಮದ ದನಕರುಗಳು ಮೇಯುತ್ತಿವೆ. ಅಣೆಕಟ್ಟು ನಿರ್ಮಾಣವಾಗುವ ಮುನ್ನ ಇದ್ದ ಕೆಲವು ಗಿಡಮರಗಳು ಇಂದಿಗೂ ತಮ್ಮ ಅಸ್ಥಿಪಂಜರವನ್ನು ಉಳಿಸಿಕೊಂಡಿವೆ. ಬೆಳ್ಳಕ್ಕಿಗಳು ಬೇಟೆಗೆ ಸಿದ್ಧವಾಗಿ ಕುಳಿತಿರುವ ದೃಶ್ಯಗಳು ಮನಸೂರೆಗೊಳ್ಳುತ್ತವೆ.
 ಒಟ್ಟಾರೆ, ಅಣೆಕಟ್ಟಿನ  ಭವ್ಯತೆಯನ್ನು, ಸುಂದರ ದೃಶ್ಯವನ್ನು, ಸುತ್ತಮುತ್ತಲಿನ ಮನಮೋಹಕ ದೃಶ್ಯ, ಪರಿಸರವನ್ನು ಮನದಣಿಯೆ ಸವಿಯಬಹುದಾಗಿದೆ. ಅಣೆಕಟ್ಟು ತುಂಬಿದಾಗ ಎಲ್ಲೆಡೆ ನೀರೇ ಗೋಚರಿಸುವುದರಿಂದ ಸಂಪೂರ್ಣ ಸಮುದ್ರದಂತೆ ಗೋಚರಿಸುತ್ತದೆ. ಆದರೆ ಅದರ ತಳಭಾಗವನ್ನು, ಒಡಲಲ್ಲಿರುವ ಪ್ರದೇಶವನ್ನು ಈಗ ಕಾಣುವ ಅವಕಾಶ ಎದುರಾಗಿದೆ.

ಭರದಿಂದ ಸಾಗಿದೆ ಕಾಮಗಾರಿ
ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ನೀರು ಸೋರಿಕೆಯಾಗುವುದನ್ನು ತಡೆಗಟ್ಟುವ ಕಾಮಗಾರಿ ನಡೆದಿದೆ. ಸುಮಾರು 18.41 ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು ಮುಂಬೈನ ಮೆ. ಐಟಿಡಿ ಇಂಡಿಯಾ ಎಂಬ ಕಂಪನಿಗೆ ವಹಿಸಲಾಗಿದೆ. ಈ ಕಂಪನಿಯು ದೇಶದ ಬಹುತೇಕ ಅಣೆಕಟ್ಟುಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದೆ.
 ವಾರ್ಷಿಕ ಸುಮಾರು 11.97  ಕ್ಯೂಸೆಕ್ಸ್‌ನಷ್ಟು ನೀರು ಇಲ್ಲಿಂದ ಸೋರಿಕೆಯಾಗುತ್ತಿತ್ತು. ವಿಶೇಷವೆಂದರೆ, ಸೋರಿಕೆಯಾಗುವ ನೀರನ್ನೂ ಸಹ ಲೆಕ್ಕ ಹಾಕುವ ಕೆಲಸ ಇಲ್ಲಿ ನಡೆಯುತ್ತದೆ. ಸೋರಿಕೆಯಿಂದ ನಷ್ಟ ಹೆಚ್ಚುತ್ತಿರುವುದನ್ನು ಮನಗಂಡು ಯೋಜನೆ ತಯಾರಿಸಿ ಕಾಮಗಾರಿಗೆ ಗುತ್ತಿಗೆ ನೀಡಲಾಗಿದೆ. ನೀರಿನ ಅಡಿಯಲ್ಲಿರುವ ಏಡಿಗಳು ಒಳಗಿಂದೊಳಗೆಯೇ ತೂತು ಮಾಡಿರುವುದರಿಂದ ನೀರು ಸೋರಿಕೆಯಾಗುತ್ತಿತ್ತು. ಸುಮಾರು 53ರ ಹರಯದ ಈ ಡ್ಯಾಮ್‌ನ ನಿರ್ಮಾಣ ತಂತ್ರಜ್ಞಾನ ಹಳೆಯದಾಗಿರುವುದರಿಂದಲೂ ನೀರು ಸೋರಿಕೆಯಾಗುತ್ತಿತ್ತು. ಕಂಪನಿಯವರು ಅಣೆಕಟ್ಟೆಯ ಗೋಡೆಗೆ ತಂತಿಯ ತೆಳುವಾದ ಮೆಷ್ ಅಳವಡಿಸಿ ಸಂದಿಗಳಿಗೆ ಸಿಮೆಂಟನ್ನು ಉಪಕರಣಗಳಿಂದ ಶೂಟ್ ಮಾಡುತ್ತಾರೆ. ಖಾಲಿ ಇರುವ ಜಾಗಗಳಲ್ಲಿ ಅ ದು ಭದ್ರವಾಗಿ ಕುಳಿತುಕೊಳ್ಳುತ್ತದೆ. ಜೊತೆಗೆ ಇನ್ನು ಮುಂದೆ ಏಡಿ ಅಥವಾ ಯಾವುದೆ ಜಲಚರಗಳಿಗೆ ಅಲ್ಲಿ ಪ್ರವೇಶಿಸಲಾರದಂತಾಗುತ್ತದೆ. ನಂತರ ಮೆಷ್ ಕಾಣದಂತೆ ತೆಳುವಾಗಿ ಸಿಮೆಂಟ್ ಪ್ಲಾಸ್ಟರ್ ಮಾಡುತ್ತಾರೆ. ಇದರಿಂದ ಗೋಡೆ ಹೊಸದಾಗಿ ನಿರ್ಮಾಣವಾದಂತೆ ಕಾಣುತ್ತಿದೆ.
ಈಗ ನೀರಿನ ಪ್ರಮಾಣ ಕಡಿಮೆ ಇರುವದರಿಂದ ದುರಸ್ತಿಗೆ ಅನುಕೂಲವಾಗಿದೆ. ಎರಡು ವರ್ಷಗಳಿಂದ ಈ ಕಾಮಗಾರಿ ನಡೆಯುತ್ತಿದೆ. ಆದರೆ ಬೇಸಿಗೆಯ ದಿನದಲ್ಲಿ ನೀರು ಕಡಿಮೆಯಾದಾಗ ಮಾತ್ರ ಮಾಡುವ ಕೆಲಸ ಇದಾಗಿದೆ. ಅಣೆಕಟ್ಟೆಯ ಗೋಡೆಯ ಭಾಗದಲ್ಲಿ ನೀರನ್ನು ಕಡಿಮೆಮಾಡಿಕೊಂಡು ಅಲ್ಲಿಗೆ ಸಣ್ಣ ಬಾರ್ಜ್ ತರಹದ ಯಂತ್ರದ ಮೂಲಕ ತೆರಳಿ ತೀರ ಕ್ಲಿಷ್ಟಕರ ಮತ್ತು ಅಷ್ಟೇ ಸೂಕ್ಷ್ಮವಾದ ಈ ಕೆಲಸ ಮಾಡಲಾಗುತ್ತಿದೆ ಎಂದು ಇಂಜಿನಿಯರ್‌ಗಳು ವಿವರಿಸುತ್ತಾರೆ.  

 ವಿದ್ಯುದಾಗಾರಗಳ ತಾಯಿ  ಲಿಂಗನಮಕ್ಕಿ

ಲಿಂಗನಮಕ್ಕಿ ನೀರಿನಿಂದ ನಾಲ್ಕು ಪ್ರತಿಷ್ಠಿತ ವಿದ್ಯುದಾಗಾರಗಳು ನಡೆಯುತ್ತಿವೆ. ಇವುಗಳಲ್ಲಿ  ರಾಜ್ಯದ ಅತ್ಯಂತ ಜನಪ್ರಿಯವಾದ ಮಹಾತ್ಮಾ ಗಾಂಧಿ ವಿದ್ಯುದಾಗಾರವೂ ಒಂದು.
 ಜೋಗ ಜಲಪಾತದಿಂದ ಶರಾವತಿ ಕಣಿವೆ ರಸ್ತೆಯಲ್ಲಿ, ಹಾವಿನಂತೆ ಸಾಗುವ ರಸ್ತೆಯಲ್ಲಿ  7  ಕಿಮೀ ದೂರ ಸಾಗಿದಾಗ ಮಹಾತ್ಮಾ ಗಾಂಧಿ ವಿದ್ಯುದಾಗಾರ ಕಣ್ಮನ ಸೆಳೆಯುತ್ತದೆ. ಈ ರಸ್ತೆಯಲ್ಲಿ ಸಾಗುವಾಗ ಆಗುಂಬೆ ಘಾಟ್ ನೆನೆಪಿಗೆ ಬರುತ್ತದೆ. ಅಷ್ಟೊಂದು ಸಮೃದ್ಧವಾದ, ನೆರಳಿನ ಕಾಡು ಇಲ್ಲಿದೆ. ಅತ್ಯಂತ ಕೆಳಪ್ರದೇಶದಲ್ಲಿ ಇರುವ ಶರಾವತಿ ನದಿಯ ಸ್ವಲ್ಪ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸಲು ಒಟ್ಟು 8 ಘಟಕಗಳಿರುವ ಮಹಾತ್ಮಾಗಾಂಧಿ ಜಲವಿದ್ಯುತ್ ಕೇಂದ್ರವನ್ನು 1948ರಲ್ಲಿ ಸ್ಥಾಪಿಸಲಾಗಿದೆ. ಇದರ ಸಾಮರ್ಥ್ಯ 139.2 ಮೆಗಾವ್ಯಾಟ್‌ಗಳು.
  ಲಿಂಗನಮಕ್ಕಿ ಅಣೆಕಟ್ಟಿನ ಎಡದಂಡೆಯಲ್ಲಿ 27.5 ಮೆಗಾವ್ಯಾಟ್‌ನ ಎರಡು ಘಟಕಗಳು 1980ರಲ್ಲಿ ಆರಂಭವಾಗಿವೆ, ಇವುಗಳ ಒಟ್ಟು ಉತ್ಪಾದನಾ ಸಾಮರ್ಥ್ಯ 55 ಮೆಗಾವ್ಯಾಟ್‌ಗಳು. ಲಿಂಗನಮಕ್ಕಿ ವಿದ್ಯುದಾಗರದಲ್ಲಿ ವಿದ್ಯುತ್ ಉತ್ಪಾದನೆಯ ನಂತರ ಹೊರಬಂದ ನೀರು ಮಳಲಿ ಸುರಂಗ ಹಾಗೂ ಹೆಚ್ಚುವರಿ ನೀರುವಾಹಕ  ವ್ಯವಸ್ಥೆ ಮೂಲಕ ತಲಕಳಲೆ ಅಣೆಕಟ್ಟನ್ನು ಸೇರುತ್ತದೆ. ತಲಕಳಲೆ ಜಲಾಶಯದಿಂದ ವಡನ್‌ಬೈಲ್ ಸುರಂಗಮಾರ್ಗ, ಸರ್ಜಾ ಟ್ಯಾಂಕ್ ಹಾಗೂ ಕೊಳವೆ ಮೂಲಕ ಶರಾವತಿ ವಿದ್ಯುದಾಗಾರಕ್ಕೆ ನೀರನ್ನು ಪೂರೈಸಲಾಗುತ್ತದೆ.
ಶರಾವತಿ ವಿದ್ಯುದಾಗಾರದಲ್ಲಿ  ಒಟ್ಟು 10 ಘಟಕಗಳಿವೆ. ಇವುಗಳ ಒಟ್ಟು ಉತ್ಪಾದನಾ ಸಾಮರ್ಥ್ಯ 1035 ಮೆಗಾವ್ಯಾಟ್. ಈ ವಿದ್ಯುದಾಗಾರದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಬಿಡುಗಡೆಯಾದ ನೀರನ್ನು ಗೇರುಸೊಪ್ಪ ಅಣೆಕಟ್ಟಿನಲ್ಲಿ ಸಂಗ್ರಹಿಸಿ ಅಲ್ಲಿಯೂ ನಿರ್ಮಿಸಲಾಗಿರುವ ವಿದ್ಯುದಾಗಾರದ 4 ಘಟಕಗಳಿಂದ ಒಟ್ಟು 240 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಗೇರುಸೊಪ್ಪಾ ವಿದ್ಯುದಾಗಾರದಿಂದ ಬಿಡುಗಡೆಯಾದ ನೀರು ಹೊನ್ನಾವರದ ಬಳಿ  ಅರಬ್ಬಿ ಸಮುದ್ರವನ್ನು ತಲುಪುತ್ತದೆ.      
 ಶರಾವತಿ ನದಿಯು ಇವೆಲ್ಲದಕ್ಕ್ಕೂ ಮೂಲ. ಅಂಬುತೀರ್ಥದ ಬಳಿ 730 ಅಡಿ ಎತ್ತರದ ಪ್ರದೇಶದಲ್ಲಿ ಹುಟ್ಟುವ ನದಿ ಆನಂತರ ಸುಮಾರು 132 ಕಿ. ಮೀ. ಉದ್ದವಾಗಿ ಹರಿಯುತ್ತದೆ. ಈ ನದಿಯು ತನ್ನ ಹರಿವಿನ 80ನೆಯ ಕಿ. ಮೀ. ಬಳಿ ಜೋಗ ಜಲಪಾತವಾಗಿ 293 ಮೀಟರ್ ಎತ್ತರದಿಂದ ಧುಮುಕುತ್ತದೆ. ಇಲ್ಲಿಂದ ನೀರು ಶರಾವತಿ ವಿದ್ಯುದಾಗಾರಕ್ಕೂ ಪೂರೈಕೆಯಾಗುತ್ತದೆ.  


ನಂ. ವಿದ್ಯುತ್ ಉತ್ಪಾದನಾ ಘಟಕಗಳು   ಒಟ್ಟು ಘಟಕಗಳು  ಸಾಮರ್ಥ್ಯ ಒಟ್ಟೂ ಸ್ಥಾಪಿತ ಸಾಮರ್ಥ್ಯ (ಮೆಗಾವ್ಯಾಟ್‌ನಲ್ಲಿ)
1.  ಶರಾವತಿ ವಿದ್ಯುದಾಗಾರ              10            103.5       1035.00
2.  ಮಹಾತ್ಮಾ ಗಾಂಧಿ ವಿದ್ಯುದಾಗರ          8             43.63       139.30
3.  ಲಿಂಗನಮಕ್ಕಿ ವಿದ್ಯುದಾಗರ             2              13.20       55.00
4.  ಗೇರುಸೊಪ್ಪ ವಿದ್ಯುದಾಗರ              4               60           240.00
                            ವಿದ್ಯುತ್ ಉತ್ಪಾದನಾ ಒಟ್ಟು ಸಾಮರ್ಥ್ಯ  1469.20 ಮೆ.ವ್ಯಾಟ್


ಶರಾವತಿ ವಿದ್ಯುದಾಗಾರದ ದಾಖಲೆಗಳು
* 2007-08ರ ಸಾಲಿನಲ್ಲಿ ವಾರ್ಷಿಕ 5825 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ.
* ಕಾರ್ಯಕ್ಷಮತೆಗೆ ರಾಷ್ಟ್ರೀಯ ಮಟ್ಟದಲ್ಲಿ ನೀಡುವ ಪ್ರತಿಷ್ಠಿತ ಐಇಇಎಂಎ ಪವರ್ ಅವಾರ್ಡ್ 2009ರಲ್ಲಿ ಇದರ ಪಾಲು.
* 2013ರ ಮಾರ್ಚ್ ತಿಂಗಳೊಂದರಲ್ಲೇ 665.825 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ.
* 2012ರ ಮಾ. 13ರಂದು ಒಂದೇ ದಿನ 23.461 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ.

ವಿದ್ಯುತ್ ಅವಘಡ ಮತ್ತು ಪುನಃಶ್ಚೇತನ
ಶರಾವತಿ ವಿದ್ಯುದಾಗಾರದಲ್ಲಿ 2015ರ ಡಿ. 18ರಂದು  ಶಾರ್ಟ್ ಸರ್ಕ್ಯೂಟ್ ಆಗಿ ಅಗ್ನಿ ದುರಂತ ಸಂಭವಿಸಿತ್ತು. ಇದರಿಂದ ನಿಯಂತ್ರಣ ಕೊಠಡಿಯ ಕೇಬಲ್ ಪ್ರೊಟೆಕ್ಷನ್ ಮತ್ತು ಕಂಟ್ರೋಲ್ ಪ್ಯಾನೆಲ್ ಸಂಪೂರ್ಣ ಭಸ್ಮವಾಗಿತ್ತು. ಅಗ್ನಿ ಅವಘಡ ಸಂಭವಿಸಿದಾಕ್ಷಣ 9 ಘಟಕಗಳನ್ನು ಸುರಕ್ಷಿತವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಹೆಚ್ಚಿನ ಅನಾಹುತ ತಪ್ಪಿತು.್ತ 
ಈ ಅಗ್ನಿ ಅವಘಡದಿಂದ ಪ್ರಮುಖ ಉಪಕರಣಗಳಾದ ಟರ್ಬೈನ್, ಜನರೇಟರ್, ಟ್ರಾನ್ಸ್‌ಫಾರ್ಮರ್ ಮತ್ತು ಬ್ರೇಕರ್‌ಗಳಿಗೆ ಯಾವುದೇ ಹಾನಿ ಸಂಭವಿಸಿರಲಿಲ್ಲ. ರಾಜ್ಯ ಸರ್ಕಾರ ಕರ್ನಾಟಕ ವಿದ್ಯುತ್ ಅಧಿನಿಯಮ (ಎ) ಪ್ರಕಾರ ತುರ್ತು ಪರಿಸ್ಥಿತಿ ಎಂದು ಘೋಷಿಸಿ ವಿದ್ಯುದಾಗಾರವನ್ನು ಪೂರ್ವಸ್ಥಿತಿಗೆ ತರಲು ನಿರ್ದೇಶಿಸಿತ್ತು. ಇದಕ್ಕನುಗುಣವಾಗಿ ಸುಟ್ಟುಹೋಗಿದ್ದ ಉಪಕರಣಗಳ ಸರಬರಾಜಿಗೆ ಮುಂಬೈನ ಮೆ. ಎ.ಬಿ.ಬಿ. ಲಿಮಿಟೆಡ್ ಕಂಪನಿಯೊಂದಕ್ಕೆ ಕಾರ್ಯಾದೇಶ ನೀಡಿತ್ತು. ಆದೇಶ ನೀಡಿದ 8 ದಿನದಲ್ಲೇ ಅದನ್ನು ತರಿಸಿಕೊಂಡು ಪುನರ್ಜೋಡಣೆ ನಡೆಸಲಾಗಿತ್ತು. ಇದರಿಂದಾಗಿ ಕೇವಲ  34 ದಿನದಲ್ಲಿ (ಒಟ್ಟೂ 10 ಘಟಕಗಳ ಪೈಕಿ) 7ನೆಯ ಘಟಕವನ್ನು ಮೊಟ್ಟಮೊದಲನೆಯದನ್ನಾಗಿ ಪುನರಾರಂಭಿಸಲು ಸಾಧ್ಯವಾಯಿತು.
 ನಂತರ ಒಟ್ಟೂ 178 ದಿನದಲ್ಲಿ  ಎಲ್ಲ 10 ಘಟಕವನ್ನು ಕಾರ್ಯಾರಂಭ ಮಾಡಲಾಯಿತು. ಇದು ನಿಗಮದ ಇತಿಹಾಸದಲ್ಲಿ ಹೊಸ ಮುನ್ನುಡಿ ಬರೆದಿದೆ. 
 - ವಿದ್ಯುದಾಗಾರದ ಮುಖ್ಯ ಇಂಜಿನಿಯರ್ ರವಿಚಂದ್ರ ಶಿರಾಲಿ.
.................................

No comments:

Post a Comment