Friday, 19 May 2017

ಅನಾಥವಾಗುತ್ತಿದೆ ಗಾಂಧಿ ಪಾರ್ಕ್
*ನಿರ್ವಹಣೆ ಇಲ್ಲ* ದುಬಾರಿ ದರ ವಸೂಲಿ * ಎಲ್ಲೆಂದರೆಲ್ಲಿ ಕಸದ ರಾಶಿ 

ನಗರದ ಹೃದಯ ಭಾಗದಲ್ಲಿರುವ ಮಹಾತ್ಮ ಗಾಂಧಿ ಉದ್ಯಾನವನ ಅವ್ಯವಸ್ಥೆಯ ಆಗರವಾಗುತ್ತಿದೆ. ಇದರ ಜೊತೆಗೆ ಸಾರ್ವಜನಿಕರಿಂದ ದುಬಾರಿ ದರ ಕೂಡ ವಸೂಲಿ ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ಮಹಾನಗರ ಪಾಲಿಕೆ ಆಡಳಿತ ಯಾವುದೇ ಗಮನಹರಿಸದೆ, ನಿರ್ಲಕ್ಷ್ಯ ವಹಿಸಿದೆ. ಸಾರ್ವಜನಿಕರಿಂದ ಪ್ರವೇಶ ಧನ ಪಡೆದ ಮೇಲೆ ಅದಕ್ಕೆ ತಕ್ಕ ಕನಿಷ್ಠ ಮೂಲಸೌಕರ್ಯವನ್ನಾದರೂ ಕಲ್ಪಿಸಬೇಕು. ಇಲ್ಲವಾದಲ್ಲಿ ಈಗಿರುವ ಪ್ರೇಮಿಗಳ, ಪುಂಡರ ಸಂತೆ ಮುಂದುವರೆಯುತ್ತದೆ. ಸಜ್ಜನರು ಮಕ್ಕಳೊಂದಿಗೆ ಬಿಡುವಿನ ವೇಳೆಯಲ್ಲಿ ಮನಃಸಂತೋಷಕ್ಕಾಗಿ ಬರುತ್ತಾರೆ. ಇಂತಹವರಿಗೆ ನೈಜ ಸಂತೋಷ ಸಿಗುವಂತೆ ಇಮ್ಮಡಿಸುವಂತೆ ಪಾಲಿಕೆ ಮಾಡಬೇಕು. ಮೇಯರ್ ಕನಿಷ್ಟ ವಾರಕ್ಕೆರಡು ಬಾರಿಯಾದರೂ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಕೆಲಸವಾಗಬೇಕಿದೆ. 



ಶಿವಮೊಗ್ಗ: ಪಾರ್ಕ್‌ನ ಉದ್ದೇಶವನ್ನೇ ಮರೆತು ಕೇವಲ ಹಣಗಳಿಕೆ ದೃಷ್ಟಿಯಿಂದ ಅಥವಾ ನಿರ್ಲಕ್ಷ್ಯ ಮನೋಭಾವದಿಂದ ಕಂಡರೆ ಅದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ನಗರದ ಅತ್ಯಂತ ದೊಡ್ಡದಾದ ಏಕೈಕ ಪಾರ್ಕ್ ಆದ ಗಾಂಧಿ ಪಾರ್ಕ್‌ನ್ನು ಇಂದು ಪಾಲಿಕೆ ಮಲತಾಯಿಯಂತೆ ಕಾಣುತ್ತಿದೆ. ಇದರ ಅಭಿವೃದ್ಧಿಯ ಚಿಂತನೆ ನಗಪಾಲಿಕೆಗೆ ಇರಬೇಕಿತ್ತು. ಆದರೆ ಇದನ್ನು ಕೇವಲ ಮಕ್ಕಳಾಟದ್ದು ಎಂದು ಗಮನಿಸಿದಂತಿದೆ. ಅದಕ್ಕಾಗಿ ಅದರ ಗೊಡವೆಗೆ ಹೋಗದೆ ಹಾಳಾಗಲು ಏನೇನು ಬೇಕೋ ಅದಕ್ಕೆಲ್ಲ ಸಹಕಾರ ಕೊಡುತ್ತಿದೆ ಎಂದು ಬೇಸರದಿದ ಹೇಳಬೇಕಾಗಿದೆ.
ಆಡಳಿತಗಾರರಿಗೆ ದೂರದೃಷ್ಟಿ ಇರಬೇಕು. ಮೇಯರ್ ಆದವರು ತಮ್ಮ ಕಾಲದಲ್ಲಿ ಹೊಸತನವನ್ನು ಛಾಪಿಸುವ ಮನೋಭಾವ ಹೊಂದಿರಬೇಕು. ಇದ್ಯಾವುದರ ಪರಿವೆಯೇ ಇಲ್ಲದೆ ಪಾಲಿಕೆ ಗಾಂಧಿಪಾರ್ಕನ್ನು ಅದರ ಪಾಡಿಗೆ ಬಿಟ್ಟುಬಿಟ್ಟಿದೆ. ಈ ಹಿಂದಿನ ಮೇಯರ್‌ಗಳಾದ ಖುರ್ಷಿದಾ ಬಾನು, ಮಂಗಳಾ ಅಣ್ಣಪ್ಪ ಹಾಗೂ ಎಸ್.ಕೆ. ಮರಿಯಪ್ಪ ಅವಧಿಯಲ್ಲೂ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿದ್ದೂ, ಪಾರ್ಕ್‌ನ ಈ ಅವ್ಯವಸ್ಥೆಗೆ ಕೊಡುಗೆ ನೀಡಿದ್ದು, ಹಾಲಿ ಮೇಯರ್ ಏಳುಮಲೈ ಕಾಲದಲ್ಲೂ ಇದೇ ಮುಂದುವರೆದಿದೆ.
ಪರಿಣಾಮವಾಗಿ ಪಾರ್ಕ್ ಅವ್ಯವಸ್ಥೆಯ ಆಗರವಾಗುತ್ತಿದೆ. ಉಸ್ತುವಾರಿ ಇಲ್ಲದೆ ಅಂದಗೆಡುತ್ತಿದೆ. ಮಕ್ಕಳಿಗೆ ನೆಮ್ಮದಿ, ಖುಷಿ ಕೊಡುವ  ಕೇಂದ್ರವಾಗದೆ ವ್ಯಾವಹಾರಿಕ ಕೇಂದ್ರವಾಗುತ್ತಿದೆ.    
ಕೆಲವು ವರ್ಷಗಳ ಹಿಂದೆ ಗಾಂಧಿ ಉದ್ಯಾನವನವನ್ನು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿತ್ತು. ಇದರ ರೂವಾರಿ ಅಂದು ಜಿಪಂ ಸಿಇಒ ಆಗಿದ್ದ ಐಎಫ್‌ಎಸ್ ಅಧಿಕಾರಿ ಸಂಜಯ್ ಬಿಜ್ಜೂರ್ ಅವರು. ಅರಣ್ಯಾಧಿಕಾರಿಯಾಗಿದ್ದರಿಂದ ಮತ್ತು ಸಕ್ರೆಬೈಲ್‌ನ ಅಶ್ವಿನಿವನವನ್ನೂ ಸಹ ರೆಸಾರ್ಟ್ ಮಾದರಿಯಲ್ಲಿ ಪ್ರವಾಸಿತಾಣವನ್ನಾಗಿ ಮಾಡುವ ಕನಸು ಹೊತ್ತು ಆ ಪ್ರಕಾರ ಕೆಲಸ ಮಾಡಿದ್ದರು. ಜಿಪಂನಿಂದಲೇ ಹಣ ವ್ಯಯಿಸಿ ಅಂದವಾದ ಗಾಂಧಿ ಪಾರ್ಕನ್ನು ರೂಪಿಸಿದ್ದರು. ಆಮೇಲೆ ನಿರ್ವಹಣೆಗಾಗಿ ಪಾಲಿಕೆಗೆ ವಹಿಸಿಕೊಡಲಾಗಿತ್ತು.
ಯಾವತ್ತು ಪಾಲಿಕೆಗೆ ಹಸ್ತಾಂತರವಾಯಿತೋ ಅಂದಿನಿಂದ ಇಂದಿನವರೆಗೂ ಆಡಳಿತ ನಡೆಸಿದವರು ಪಾರ್ಕ್ ಉದ್ಧಾರಕ್ಕೆ ಮನಸ್ಸು ಮಾಡಲೇ ಇಲ್ಲ. ಅದನ್ನೊಂದು ಲಾಭದಾಯಕ ಉದ್ಯಮವನ್ನಾಗಿಯಷ್ಟೇ ಗಮನಿಸಿದರು. ತಮ್ಮ ಕಚೇರಿ ಎದುರೇ ಇದ್ದರೂ ಕನಿಷ್ಠ ವಾರಕ್ಕೊಮ್ಮೆಯಾದರೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಅಥವಾ ಆಗಬೇಕಾದ ಕೆಲಸ, ಮಕ್ಕಳಿಗೆ ಇನ್ನಷ್ಟು ವ್ಯವಸ್ಥೆ ಕಲ್ಪಿಸುವ ಬಗ್ಗೆ ಅಲ್ಲಿಗೆ ಬಂದವರೊಂದಿಗೆ ಚರ್ಚಿಸಬಹುದಿತ್ತು. ಬದಲಿಗೆ ಇದನ್ನು ಮೂರನೆಯ ವ್ಯಕ್ತಿಗೆ ನಿರ್ವಹಣೆಗೆ ಹಸ್ತಾಂತರಿಸಿ ಕೈತೊಳೆದುಕೊಂಡರು. ಇವೆಲ್ಲವುಗಳ ಪರಿಣಾಮವಾಗಿ ಪಾರ್ಕ್ ಇಂದು ವಿನಾಶದ ಅಂಚಿಗೆ ಸರಿಯುವಮತಾಗಿದೆ. ಪಾಲಿಕೆಯ ನಿರಾಸಕ್ತಿ ಇದಕ್ಕೆ ನೇರ ಕಾರಣವಾಗಿದೆ.
ಪಾರ್ಕಿನಲ್ಲಿ ಅತ್ಯಾಧುನಿಕ ಸೌಲಭ್ಯಗಳ ಜೊತೆಗೆ ಮಕ್ಕಳ ಆಟದ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಪಾಲಿಕೆ ಆಡಳಿತವು, ಪಾರ್ಕ್‌ನ ಪರಿಣಾಮಕಾರಿ ಮೇಲುಸ್ತುವಾರಿ ಉದ್ದೇಶದಿಂದ ಪಾರ್ಕ್‌ನ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ಹೊರಗುತ್ತಿಗೆ ನೀಡಿತ್ತು. ಹೊರಗುತ್ತಿಗೆ ಸಂದರ್ಭದಲ್ಲಿ ಪ್ರವೇಶ ಶುಲ್ಕ, ಪಾರ್ಕ್‌ನಲ್ಲಿ ಅಳವಡಿಸಲಾಗಿರುವ ವಸ್ತುಗಳ ನಿರ್ವಹಣೆ ಮತ್ತಿತರ ಶರತ್ತುಗಳನ್ನು ವಿಧಿಸಿತ್ತು.
ಪ್ರಸ್ತುತ ಬೇಸಿಗೆ ರಜೆಯಿರುವ ಕಾರಣದಿಂದ ಪಾರ್ಕ್‌ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. ಆದರೆ ಪಾರ್ಕ್‌ನಲ್ಲಿ ದುಬಾರಿ ಶುಲ್ಕ ವಿಧಿಸುತ್ತಿರುವುದರಿಂದ ಕುಟುಂಬ ಸಮೇತ ಪಾರ್ಕ್‌ಗೆ ಆಗಮಿಸುವವವರಿಗೆ ಹೊರೆಯಾಗಿ ಪರಿಣಮಿಸಿದೆ. ಈ ಹಿಂದೆ 5 ರೂ. ಪ್ರವೇಶ ಶುಲ್ಕ ವಿಧಿಸಲಾಗುತ್ತಿತ್ತು. ಈಗ ಪುಟಾಣಿ ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ 10 ರೂ. ಪ್ರವೇಶ ಶುಲ್ಕ ಸಂಗ್ರಹಿಸಲಾಗುತ್ತಿದೆ. ಪಾರ್ಕ್ ಒಳಾಂಗಣದಲ್ಲಿರುವ ರೈಲು ಸಂಚಾರಕ್ಕೆ 30 ರೂ., ವಿವಿಧ ಆಟಗಳಿಗೆ ತಲಾ 20 ರೂ. ಹಣ ವಸೂಲಿ ಮಾಡಲಾಗುತ್ತಿದೆ. ಮತ್ತೊಂದೆಡೆ ತಿಂಡಿ - ತಿನಿಸುಗಳಿಗೂ ದುಬಾರಿ ದರ ವಿಧಿಸಲಾಗುತ್ತಿದೆ.
ಪಾರ್ಕ್‌ನಲ್ಲಿ ಮಕ್ಕಳು ಉಚಿತವಾಗಿ ಆಟವಾಡಲು ವ್ಯವಸ್ಥೆ ಮಾಡಲಾಗಿರುವ ಆಟದ ಸಾಮಾಗ್ರಿಗಳು ದುಃಸ್ಥಿತಿಯಲ್ಲಿವೆ. ಪಾರ್ಕ್‌ನ ಎಲ್ಲೆಂದರೆಲ್ಲಿ ಕಸದ ರಾಶಿ ಬಿದ್ದಿದೆ. ಕಾರಂಜಿ, ಅಲಂಕಾರಿಕ ದೀಪಗಳು ಹಾಳಾಗಿವೆ. ಅಸಮರ್ಪಕ ನಿರ್ವಹಣೆಯಿಂದ ದಿನದಿಂದ ದಿನಕ್ಕೆ ಪಾರ್ಕ್ ಸೊರಗುತ್ತಿದೆ.
ತತಕ್ಷಣವೇ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಡಳಿತ ಪಾರ್ಕ್‌ನಲ್ಲಿರುವ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು. ನಾಗರಿಕರಿಂದ ದುಬಾರಿ ಶುಲ್ಕ ಸಂಗ್ರಹಕ್ಕೆ ಕಡಿವಾಣ ಹಾಕಬೇಕಿದೆ.


ದುಬಾರಿ ಶುಲ್ಕ ವಸೂಲಿ
5 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಶುಲ್ಕದಿಂದ ವಿನಾಯ್ತಿ ನೀಡಲಾಗಿತ್ತು. 5 ವರ್ಷ ಮೇಲ್ಪಟ್ಟವರಿಂದ ಮಾತ್ರ ಪ್ರವೇಶ ಶುಲ್ಕ ಸಂಗ್ರಹಿಸಲು ಅನುಮತಿ ನೀಡಲಾಗಿತ್ತು. ಆದರೆ ಪ್ರಸ್ತುತ ಈ ನಿಯಮ ಉಲ್ಲಂಘಿಸಲಾಗುತ್ತಿದ್ದು, 5 ವರ್ಷದೊಳಗಿನ ಮಕ್ಕಳಿಗೂ 10 ರೂ. ಪ್ರವೇಶ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಪಾರ್ಕ್ ಒಳಭಾಗದಲ್ಲಿರುವ ಪುಟಾಣಿ ರೈಲಿನ ಸಂಚಾರಕ್ಕೂ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ. ಪುಟಾಣಿಗಳು ರೈಲಿನಲ್ಲಿ ಸಂಚರಿಸಲು 30 ರೂ. ತೆರಬೇಕಾಗಿದೆ. ಹೊಸದಾಗಿ ಅಳವಡಿಸಲಾಗಿರುವ ಕೆಲವು ಆಟದ ವಿಭಾಗಗಳಿಗೆ ತಲಾ 20 ರೂ. ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತಿದೆ.


* ಸರಿಯಾಗಿ ಬೆಳಗದ ವಿದ್ಯುದ್ದೀಪಗಳು
* ಪ್ರವೇಶದ್ವಾರದ ಕೊಳ ಗಲೀಜುಮಯ
* ಅಸಮರ್ಪಕ ನೀರಿನ ವ್ಯವಸ್ಥೆ 
* ತುಕ್ಕು ಹಿಡಿದ ಕಬ್ಬಿಣದ ಕಂಬಗಳು
* ಕುರುಕಲು ತಿಂಡಿ, ವಾಟರ್ ಬಾಟಲ್ ನಿಷೇಧಿಸಿ
* ಕುಡಿಯುವ ನೀರಿನ ವ್ಯವಸ್ಥೆ ಅತ್ಯಗತ್ಯ 
* ಸಂಗೀತ ಕಾರಂಜಿ ಪುನರಾರಂಭಿಸಿ
* ಪ್ರೇಮಿಗಳ ಅಸಭ್ಯ ವರ್ತನೆಗೆ ಕಡಿವಾಣ ಅವಶ್ಯ 
* ಪಾರ್ಕ್‌ನಲ್ಲಿ ಕಂಡಕಂಡಲ್ಲಿ ಮಲಗುವವರನ್ನು ತಪ್ಪಿಸಿ
* ಸುಸಜ್ಜಿತ ಮತ್ತು ಕಡಿಮೆ ದರದಲ್ಲಿ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಿ
* ಸೆಕ್ಯುರಿಟಿ ಬೀಟ್ ಮತ್ತಷ್ಟು ಬಲಗೊಳ್ಳಬೇಕು
* ಪುಂಡರಿಗೆ ನಿಯಂತ್ರಣ ಹೇರಬೇಕು

No comments:

Post a Comment