Monday, 22 May 2017



ಹಿರಿಯ ಅಧಿಕಾರಿಗಳೇ ವಂಚನೆಗೆ ಇಳಿದರೆ........ 
  ಕಾರ್ಪೋರೇಷನ್ ಬ್ಯಾಂಕ್‌ನಲ್ಲಿ ಹಣ ದುರುಪಯೋಗ ಪ್ರಕರಣ 



ರೈತರನ್ನು ಮತ್ತು ಅಮಾಯಕ ಗ್ರಾಹಕರನ್ನು ಬ್ಯಾಂಕ್ ಅಧಿಕಾರಿಗಳು ಸುಲಭದಲ್ಲಿ ಸತಾಯಿಸುತ್ತಾರೆ. ಅಂತೆಯೇ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ. ರೈತರು ಸಾಲ ಕೇಳಿದರ ಕೊಡಲು ಹಿಂದೆ ಮುಂದೆ ನೋಡುತ್ತವೆ ಬ್ಯಾಂಕುಗಳು. ಇದನ್ನೇ ವಂಚಕ ಅಧಿಕಾರಿಗಳು ಲಾಭ ಮಾಡಿಕೊಳ್ಳುತ್ತಾರೆ. ಸುಲಭದಲ್ಲಿ ತಮ್ಮ ಬಲೆಗೆ ಬೀಳಿಸಿಕೊಂಡು ಸಾಲ ಕೊಡುವ ನಾಟಕವಾಡಿ ಮೋಸಗೊಳಿಸುತ್ತಾರೆ. ಇಂತಹ ಘಟನೆಗಳು ಒಂದಲ್ಲ ಒಂದು ಕಡೆ ನಡೆಯುತ್ತಲೇ ಇರುತ್ತವೆ. ಆದರೂ ಗ್ರ್ರಾಹಕರು ಮಾತ್ರ ಸಾಲ ಸಿಗುತ್ತದೆಯಲ್ಲ ಎಂಬ ಆಸೆಯಿಂದ ಇಂತಹವರ ಮಾತು ನಂಬಿ ಕೊನೆಗೆ ಪ್ರತಿಭಟನೆ, ಧರಣಿಯ ಹಾದಿ ಹಿಡಿಯುತ್ತಾರೆ. ಬ್ಯಾಂಕ್  ಶಾಖಾಧಿಕಾರಿ, ಹಿರಿಯ ಅಧಿಕಾರಿಗಳೇ ಈ ರೀತಿ ವಂಚನೆಗೆ ಇಳಿದರೆ ಯಾರನ್ನು ನಂಬಿ ವ್ಯವಹಾರ ಮಾಡಬೇಕೆಂಬ ಪ್ರಶ್ನೆ ಗ್ರಾಹರಕನ್ನು ಕಾಡುವಂತಾಗಿದೆ.



 ಶಿವಮೊಗ್ಗ : ಸಾಲಕ್ಕಾಗಿ ಅರ್ಜಿ ಹಾಕಿ ಬ್ಯಾಂಕಿಗೆ ಹತ್ತಾರು ಬಾರಿ ಅಲೆದಾಡಿದರೂ ಬ್ಯಾಂಕ್‌ನವರು ವಿವಿಧ ನೆಪ ಹೇಳಿ ಮಂಜೂರು ಮಾಡದೆ ಸತಾಯಿಸುವ ಈ ಕಾಲದಲ್ಲಿ ಕಾರ್ಪೋರೇಷನ್ ಬ್ಯಾಂಕಿನ ಕ್ಷೇತ್ರ ಸಹಾಯಕ ಅಧಿಕಾರಿ ರೈತರ ಮನೆಗೆ ತೆರಳಿ ಸಾಲ ಪಡೆಯಲು ಒತ್ತಾಯಿಸುತ್ತಿದ್ದ!
ಹಣ ದುರುಪಯೋಗದಡಿ ಈಗ ಸೇವೆಯಿಂದ ಅಮಾನತುಗೊಂಡಿರುವ  ಕ್ಷೇತ್ರ ಸಹಾಯಕ ಅಧಿಕಾರಿ ಮಧುಸೂದನ್ ರಾವ್ ನಡೆಸಿರುವ ವ್ಯವಹಾರದ ಕೈಚಳಕ ಇದು.
ರಾವ್ ಎಷ್ಟು ಚಾಣಾಕ್ಷರೆಂದರೆ, ಒಬ್ಬನೇ ಒಬ್ಬ ರೈತನಿಗೆ ಸ್ವಲ್ಪವೂ ಅನುಮಾನ ಮೂಡದಂತೆ ವ್ಯವಹಾರ ಮಾಡಿದ್ದಾರೆ. ತಾಲೂಕಿನ ಕೊಮ್ಮನಾಳು, ಹರಮಘಟ್ಟ, ಹಾಡೋನಹಳ್ಳಿ, ಬೀರನಹಳ್ಳಿ, ಚಿಕ್ಕಕೂಡ್ಲಿ, ಸೂಗೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ಅವರು ತೆರಳಿದ್ದರು. ಅಲ್ಲೆಲ್ಲ ಸಾಲ ಪಡೆಯುವಂತೆ ಅವರಿಗೆ ಬುದ್ಧಿ ಹೇಳುತ್ತಿದ್ದರು. ಮನೆ ಬಾಗಿಲಿಗೇ ಬಂದು ಸಾಲ ಕೊಡುತ್ತೇನೆ ಎನ್ನುವ ಅಧಿಕಾರಿಯನ್ನು ರೈತರು  ನಂಬಿದರು. ಬರಗಾಲದ ಈ ದಿನದಲ್ಲಿ ನೆರವಾದೀತೆಂದು ನಂಬಿದರು. ತಮ್ಮ ಜಮೀನಿಗೆ ಸಂಬಂಧಿಸಿದ ನಾನಾ ದಾಖಲಾತಿಗಳೊಂದಿಗೆ ಸಾಲಕ್ಕಾಗಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು.
  ಆದರೆ ಎಷ್ಟು ದಿನವಾದರೂ  ಸಲ ಮಂಜೂರಾಗಿರುವ ಬಗ್ಗೆ ಮಾಹಿತಿ ಇರಲಿಲ್ಲ. ರೈತರು ಬ್ಯಾಂಕ್‌ಗೆ ಎಡತಾಕಿದರೂ ಸಾಲ ಮಂಜೂರಾಗಿಲ್ಲವೆಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದರು. ಬ್ಯಾಂಕ್‌ನವರ ವರ್ತನೆಯಿಂದ ಅನುಮಾನಗೊಂಡ ಕೆಲವು ರೈತರು ಪಾಸ್ ಪುಸ್ತಕದಲ್ಲಿ ತಮ್ಮ ಖಾತೆಯ ವಹಿವಾಟು ದಾಖಲು ಮಾಡಿಕೊಡುವಂತೆ ಕೋರಿದ್ದರು. ಇದಕ್ಕೆ ಬ್ಯಾಂಕ್‌ನವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಸತಾಯಿಸಲಾರಂಭಿಸಿದ್ದರು. ಕೆಲವು ರೈತರು ಪಟ್ಟು ಹಿಡಿದು ಪಾಸ್ ಪುಸ್ತಕದಲ್ಲಿ ವಹಿವಾಟಿನ ದಾಖಲು ಪಡೆದುಕೊಂಡಾಗ, ತಮಗೆ ಹತ್ತಿಪ್ಪತ್ತು ಲಕ್ಷ ರೂ. ಸಾಲ ಮಂಜೂರಾಗಿ ಖಾತೆಗಳಿಂದ ಹಣ ಡ್ರಾ ಮಾಡಿಕೊಂಡಿರುವುದು ಬೆಳಕಿಗೆ ಬಂದಿತು.
ಈ ವಿಷಯ ಇತರೆ ರೈತರಿಗೂ ಗೊತ್ತಾಗಿ ಅವರು ಕೂಡ ಪಾಸ್ ಪುಸ್ತಕ ದಾಖಲು ಅಪ್‌ಡೇಟ್ ಮಾಡಿಸಿಕೊಂಡಾಗ ಹಣ ದುರುಪಯೋಗವಾಗಿರುವುದು ಬೆಳಕಿಗೆ ಬಂದಿತು. ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ವಂಕಟರಾಘವ ಅವರಿಗೆ ದೂರಲಾರಂಭಿಸಿದಾಗ ದಾಖಲೆಗಳಗಳ ಪರಿಶೀಲನೆ ನಡೆಸಲಾಯಿತು. ಮೊಟ್ಟಮೊದಲಿಗೆ ಒಂದು ಖಾತೆಗೆ ಯಾವುದೇ ದಾಖಲೆ ಇಲ್ಲದೆ ಸಾಲ ಕೊಟ್ಟಿದ್ದು ಪತ್ತೆಯಾಗಿತ್ತು. ಹಲವು ರೈತರಿಗೆ ಇದೇ ರೀತಿ ಮೋಸವಾಗಿರಬಹುದು ಎಂಬ ಅನುಮಾನಗೊಂಡ ಮ್ಯಾನೇಜರ್ ಈ ವಿಷಯವನ್ನು ಉಡುಪಿಯ ಕ್ಷೇತ್ರ ಕಚೇರಿಯ ಮುಖ್ಯಸ್ಥರಿಗೆ ಮಾಹಿತಿ ನೀಡಿದರು.
 ಮಾರನೆಯ ದಿನವೇ ಅಲ್ಲಿಂದ ಬಂದ ಅಧಿಕಾರಿಯೊಬ್ಬರು ಪರಿಶೀಲನೆ ನಡೆಸಿದಾಗ ಸುಮಾರು 43 ಖಾತೆಗಳಲ್ಲಿ ಈ ರೀತಿ ವ್ಯವಹಾರ ನಡೆದಿರುವುದು ಬಯಲಾಯಿತು. ಕೂಡಲೇ ಅವರು ಕೇಂದ್ರ ಕಚೇರಿಗೆ ಮನವಿ ಮಾಡಿ ಅಡಿಟ್ ಅಗತ್ಯತೆ ಇರುವುದನ್ನು ವಿವರಿಸಿದ್ದರು. ಆ ಪ್ರಕಾರ ಬ್ಯಾಂಕ್‌ನ ವಿಜಿಲೆನ್ಸ್ ಅಧಿಕಾರಿ ಮುರಳೀಧರ ಕಿಣಿ ನೇತೃತ್ವದಲ್ಲಿ ಬಂದ ತಂಡ ತಪಾಸಣೆ ನಡೆಸಿ ಆಡಿಟ್ ನಡೆಸಿದಾಗ ಹಣ ದುರುಪಯೋಗ ಬಯಲಿಗೆ ಬಂದಿತು. ಜೊತೆಗೆ ಕಿಣಿ ಅವರು ಕೊಮ್ಮನಾಳು ಮತ್ತು ಹರಮಘಟ್ಟದ ಕೆಲವು ರೈತರ ಮನೆಗೆ ಹೋಗಿ ಈ ಬಗ್ಗೆ ಮಾಹಿತಿ ಪಡೆದಿದ್ದರು. ಈ ರೈತರ ಹೆಸರಿನಲ್ಲಿ ಮಧುಸೂದನ್ ರಾವ್ ಸಾಲ ಎತ್ತಿದ್ದರು.  
ಆ ಸಂದಭ್ದಲ್ಲಿ  ಈ ವೇಳೆ ಸಾಲ ಮಂಜೂರಾಗಿ ಖಾತೆಗಳಿಂದ ಲಕ್ಷಾಂತರ ರೂ. ಡ್ರಾ ಆಗಿರುವುದು ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ಶುಕ್ರವಾರ ಸಂಜೆ ಬ್ಯಾಂಕ್ ಮುಂಭಾಗ ಜಮಾಯಿಸಿ, ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಈ ಪ್ರಕರಣ  ಬಯಲಾಗುವಂತಾಗಿದೆ.


ಗೊತ್ತೇ ಇಲ್ಲ!:
ರೈತರ ದಾಖಲೆಗಳ ಆಧಾರದ ಮೇಲೆ ಅಡಮಾನ ಸಾಲ, ಕೃಷಿ ಸಾಲ ಹಾಗೂ ಜಮೀನು ಅಭಿವೃದ್ದಿ ಸಾಲಗಳನ್ನು ಮಂಜೂರು ಮಾಡಲಾಗಿದೆ. ಕನಿಷ್ಠ 5 ಲಕ್ಷದಿಂದ ಗರಿಷ್ಠ 28 ಲಕ್ಷ ರೂ.ಗಳವರೆಗೂ ಸಾಲ ಮಂಜೂರಾಗಿದೆ. ಆದರೆ ಬಹುತೇಕ ರೈತರಿಗೆ ಸಾಲ ಮಂಜೂರಾಗಿರುವ ವಿಷಯವೇ ಗೊತ್ತಿಲ್ಲ.! ಆದರೆ ಅವರ ಖಾತೆಗೆ ಜಮಾ ಆಗಿದ್ದ ಹಣದಲ್ಲಿ ಒಂದಿಷ್ಟು ಹಣವು ಬೇರೊಬ್ಬರ ಖಾತೆಗೆ ವರ್ಗಾವಣೆಯಾಗಿದೆ. ಚಿಕ್ಕ ಕೂಡ್ಲಿ ಗ್ರಾಮದ ರೈತರೊಬ್ಬರು ತಮ್ಮ ಜಮೀನಿನ ಮೇಲೆ 6 ಲಕ್ಷ ರೂ. ಅಡಮಾನ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರಿಗೆ 16 ಲಕ್ಷ ರೂ. ಸಾಲ ಮಂಜೂರಾಗಿದೆ. ಹರಮಘಟ್ಟ ಗ್ರಾಮದ ರೈತರಿಬ್ಬರ ಜಂಟಿ ಖಾತೆಗೆ 28 ಲಕ್ಷ ರೂ. ಸಾಲ ಮಂಜೂರಾಗಿದ್ದು, ಆ ರೈತರು ಖಾತೆಯಿಂದ ಡ್ರಾ ಮಾಡಿಕೊಂಡಿದ್ದು ಕೇವಲ 8 ಲಕ್ಷ ರೂ. ಮಾತ್ರ. ಎಂದು ವಂಚನೆಗೊಳಗಾದ ರೈತರು ಮಾಹಿತಿ ನೀಡಿದ್ದಾರೆ.
 ............................................

No comments:

Post a Comment