Thursday, 28 July 2016

ಮತ್ತೆ  ಎದ್ದಿದೆ ಮಹದಾಯಿ ಜ್ವಾಲೆ 



ಕನ್ನಡ ನೆಲ, ಜಲ, ಗಡಿ, ಭಾಷೆಗಳ ಸಮಸ್ಯೆಗಳಿಗೆ ಕನ್ನಡಿಗರು ಯಾವ ರೀತಿ ಸ್ಪಂದಿಸಿದ್ದಾರೆ, ಸ್ಪಂದಿಸುತ್ತಿದ್ದಾರೆ ಎನ್ನುವುದನ್ನು ಈ ಹಿಂದಿನಿಂದಲೂ ನಾವು ವಿವಿಧ ಹೋರಾಟಗಳಲ್ಲಿ ಕಾಣುತ್ತಿದ್ದೇವೆ. ಮಹದಾಯಿ ವಿಚಾರದಲ್ಲೂ ಅದೇ ಮತ್ತೆ ಮರುಕಳಿಸಿದೆ. ರಾಜಕೀಯ ಪಕ್ಷಗಳ ಮೇಲಾಟ ಮತ್ತು ರೈತರಲ್ಲಿ ಒಗ್ಗಟ್ಟಿಲ್ಲದ ಕಾರಣ ಈ ವಿವಾದ ಬಗೆಹರಿಯದಂತಾಗಿದೆ. ಜೊತೆಗೆ, ಕರ್ನಾಟಕದಲ್ಲಿ  ಸಮಸ್ಯೆಗಳನ್ನು ತೀಯವಾಗಿ ಕಾಣಲಾಗುತ್ತಿದೆ. ಕಾವೇರಿ ಸಮಸ್ಯೆಯನ್ನು ಮೈಸೂರು ಭಾಗಕ್ಕೆ, ಕೃಷ್ಣೆ ವಿವಾದ ವಿಜಯಪುರ ಭಾಗಕ್ಕೆ, ರೈಲು ವಲಯ ಹುಬ್ಬಳ್ಳಿ ಭಾಗಕ್ಕೆ, ಬೆಳಗಾವಿ ಗಡಿ ವಿವಾದ ಆ ಜಿಲ್ಲೆಗೆ ಮಾತ್ರ ಸಂಬಂಧಿಸಿದ್ದು ಎಂಬ ಭಾವನೆಯನ್ನು ಬಿಡಬೇಕಿದೆ. ವಿಶಾಲ ಕರ್ನಾಟಕ ಎಂಬ ಮನೋಭಾವವಿಲ್ಲದಿರುವುದು ಇದಕ್ಕೆ ಕಾರಣವಾಗಿದೆ.


 ಮಹದಾಯಿ ನದಿಯ ನೀರನ್ನು ಕರ್ನಾಟಕ ಬಳಸಿಕೊಳ್ಳುವುದಕ್ಕೆ ಗೋವಾ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಧೀಕರಣದ ಮೊರೆ ಹೋದ ಹಿನ್ನೆಲೆಯಲ್ಲಿ ನಿನ್ನೆ ಪ್ರಕಟವಾದ ತೀರ್ಪಿನಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ.  ಇದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಹದಾಯಿ ಮತ್ತೆ ಕಿಚ್ಚನ್ನು ಹೊತ್ತಿಸಿದೆ.
ಧಾರವಾಡ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಕಳಸಾ ಬಂಡೂರಿ ನಾಲಾ ಯೋಜನೆಯನ್ವಯ ಮಲಪ್ರಭಾ ನದಿಗೆ 7.56 ಟಿಎಂಸಿ ನೀರನ್ನು  ಪಡೆಯಲು ಕರ್ನಾಟಕ ಸರ್ಕಾರ ಮುಂದಾಗಿ ಈ ಯೋಜನೆಯನ್ನು ರೂಪಿಸಿತ್ತು. ಆದರೆ 2002ರಲ್ಲಿ  ಇದು ಹುಟ್ಟಿದಾರಭ್ಯದಿಂದ ವಿವಾದಕ್ಕೆಡೆಯಾದ್ದ್ದು ಮಾತ್ರ ನಿಜಕ್ಕೂ ವಿಷಾದನೀಯ.    ಅಂದು ಎಸ್.ಎಂ. ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಗೋವಾದಲ್ಲಿ ಬಿಜೆಪಿಯ ಮನೋಹರ್ ಪರಿಕ್ಕರ್ (ಈಗಿನ ಕೇಂದ್ರ ರಕ್ಷಣಾ ಸಚಿವ) ಮುಖ್ಯಮಂತ್ರಿಯಾಗಿದ್ದರು.  ಈ ಯೋಜನೆ ಜಾರಿಯಾದರೆ ತಮಗೆ ಇದರಿಂದ ತೊಂದರೆಯಾಗುತ್ತದೆ ಎಂದು ಹೇಳಿ ಗೋವಾ ಕಲ್ಲು ಹಾಕಿತು. ಆಗ ಕೇಂದ್ರದಲ್ಲೂ ಎನ್‌ಡಿಎ ಸರ್ಕಾರ ಇದ್ದುದರಿಂದ ಅದು ಗೋವಾ ಪರ ನಿಂತಿತು. ಇದರಿಂದ ಯೋಜನೆಗೆ ಅದು ಹಣ ಬಿಡುಗಡೆೆ ಮಾಡಲೇ ಇಲ್ಲ.  ಆಗ ಯೋಜನೆ ಸ್ಥಗಿತಗೊಂಡಿತ್ತು.
 ನಂತರ 2006ರಲ್ಲಿ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಯೋಜನೆ ಜಾರಿಗೆ ಮತ್ತೆ ಮುಂದಾದರು. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಎಂಬಲ್ಲಿ ಕಳಸಾ ಬಂಡೂರಿ ಯೋಜನೆಗೆ ಶಿಲಾನ್ಯಾಸ ಮಾಡಿದರು. ಆದರೆ ನ್ಯಾಯಾಧೀಕರಣದಿಂದ ಗೋವಾ ತಡೆಯಾಜ್ಞೆ ತಂದು ಕಾಮಗಾರಿ ನಡೆಯದಂತೆ ಮಾಡಿದ್ದರಿಂದ ಎರಡನೆ ಬಾರಿಯೂ ಜಾರಿಯಾಗಲಿಲ್ಲ. ಇಂದಿಗೂ ಈ ಯೋಜನೆ ಜಾರಿಯಾಗದಂತೆ ಮಾಡುವಲ್ಲಿ ಅದು ಯಶಸ್ವಿಯಾಗಿದೆ.
ಮಹದಾಯಿ ಅರ್ಥಾತ್ ಮಾಂಡೊವಿ ನದಿ ಗೋವಾದ ಜೀವನದಿಯಾಗಿದೆ. ಇದು ಹುಟ್ಟುವುದು ಪಶ್ಚಿಮ ಘಟ್ಟದ ಮಡಿಲಲ್ಲಿರುವ ಬೆಳಗಾವಿ ತಾಲೂಕಿನ ಭೀಮಘಡ್ ಎನ್ನುವಲ್ಲಿ. ಅಲ್ಲಿಂದ  ನದಿಯು ಉತ್ತರ ಕನ್ನಡ ಜಿಲ್ಲೆಯ ಜೊಯಡಾ, ಕ್ಯಾಸಲ್‌ರಾಕ್ ಮೂಲಕ ಗೋವಾ ಸೇರುತ್ತದೆ. ದೂದ್‌ಸಾಗರ್ ಜಲಪಾತ ಇದೇ ನದಿಯಿಂದಾದದ್ದು. ಅಂದರೆ ಕರ್ನಾಟಕದಲ್ಲಿ ಹುಟ್ಟಿ ಸುಮಾರು 29 ಕಿ. ಮೀ ಹರಿದು, ಗೋವಾ ಪ್ರವೇಶಿಸಿ ಅಲ್ಲಿಯೂ 52 ಕಿ. ಮೀ ಹರಿಯುತ್ತದೆ.
ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಬೆಳಗಾವಿ, ಧಾರವಾಡ ಮತ್ತು ಗದಗ್ ಜಿಲ್ಲೆಗಳಲಿ ಕುಡಿಯುವ ನೀರಿನ ಅಭಾವ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಈ ಯೋಜನೆಯನ್ನು ಜಾರಿಗೊಳಿಸಬೇಕೆಂದು ಹಠ ಹಿಡಿದಿದ್ದಾರೆ. ಆದರೆ ನ್ಯಾಯಾಧಿಕರಣದಲ್ಲಿ ಪ್ರಕರಣ ಇರುವುದರಿಂದ ಸರ್ಕಾರ ಏನೂ ಮಾಡದಂತಾಗಿದೆ. ಈ ಮಧ್ಯೆ ನಿನ್ನೆ ಬಂದ ತೀರ್ಪು ಸಹ ಕರ್ನಾಟಕಕ್ಕೆ ಮಾರಕವಾಗಿರುವದುರಿಂದ ರೈತರು ಮತ್ತು ಪ್ರತಿಭಟನೆಗಿಳಿದಿದ್ದಾರೆ.
ಕಳೆದ ವರ್ಷದಿಂದ ಈ ಬಗ್ಗೆ ಹೋರಾಟ ಮತ್ತಷ್ಟು ಹೆಚ್ಚಿದೆ. ಸುಮಾರು 265 ದಿನದಿಂದ ಈ ಸಂಬಂಧ ನಿರಂತರ ಪ್ರತಿಭಟನೆ, ಧರಣಿ ನಡೆಯುತ್ತಿದೆ. ಜೊತೆಗೆ ಕರ್ನಾಟಕ ಬಂದ್‌ಗೂ ಕಳೆದ ಸೆಪ್ಟೆಂಬರ್‌ನಲ್ಲಿ ಕರೆಕೊಡಲಾಗಿತ್ತು. ಆದರೆ ರಾಜಕೀಯ ಪಕ್ಷಗಳ ಮೇಲಾಟ ಮತ್ತು ರೈತರಲ್ಲಿ ಒಗ್ಗಟ್ಟಿಲ್ಲದ ಕಾರಣ ಈ ವಿವಾದ ಬಗೆಹರಿಯದಂತಾಗಿದೆ. ಗೋವಾ ಮತ್ತು ಕರ್ನಟಕದಲ್ಲಿ ಬೇರೆಬೇರೆ ಪಕ್ಷಗಳು ಅಧಿಕಾರದಲ್ಲಿರುವುದರಿಂದ ವಿವಾದ ಬಗೆಹರಿಯುತ್ತಿಲ್ಲ. ಕೇಂದ್ರದ ಮಧ್ಯಪ್ರವೇಶವೂ ಇದಕ್ಕೆ ಅನಿವಾರ್ಯವಾಗಿತ್ತು. ಆದರೆ ಅದೂ ಸಹ ಏಕೋ ಈ ಕಾಮಗಾರಿಗೆ ಪೂರಕವಾದ ಆಸಕ್ತಿಯನ್ನು ತೋರುತ್ತಿಲ್ಲ. ಇದರಿಂದ ವಿವಾದ ಕಗ್ಗಂಟಾಗಿದ್ದು ಜನ ಮತ್ತೆ ಪ್ರತಿಭಟನೆ, ರಸ್ತೆ ತಡೆ, ಬಂದ್‌ಗೆ ಮುಂದಾಗುವಂತಾಗಿದೆ.
   ಕನ್ನಡಿಗರ ದೌರ್ಬಲ್ಯ:
      ಎಲ್ಲ ಸಮಸ್ಯೆಗಳಿಗೂ ಕನ್ನಡಿಗರಲ್ಲಿ ಒಗ್ಗಟ್ಟಿಲ್ಲದಿರುವುದು ಕಾರಣ ಎನ್ನುವುದು ಕಟುಸತ್ಯ.. ನಮ್ಮ ವೈಯಕ್ತಿಕಕ್ಕಾದರೆ  ಅನ್ಯಾಯದ ವಿರುದ್ದ ಎಷ್ಟೊಂದು ಹೋರಾಟ ಪ್ರದರ್ಶಿಸುತ್ತೇವೆ. ರಾಜ್ಯದ ವಿಚಾರದಲ್ಲಿ ಅಷ್ಟೇ ಹಿಂದೆ ಬೀಳುತ್ತೇವೆ. ಈ ಸಂದರ್ಭದಲ್ಲಿ ‘‘ ಪ್ರತಿಭಟನೆ, ಹೋರಾಟ, ನಮ್ಮ ಜನ್ಮಸಿದ್ಧ ಹಕ್ಕು, ಅನ್ಯಾಯವನ್ನು ಪ್ರತಿಭಟಿಸದೆ , ಪ್ರಶ್ನಿಸದೆ ಹೋದರೆ ಯಾವ ಕೆಲಸಗಳೂ ನಡೆಯುವುದಿಲ್ಲ. ಪ್ರಶ್ನಿಸುವುದು, ಪ್ರತಿಭಟಿಸುವುದು ನಮ್ಮ ಮೂಲಭೂತ ಹಕ್ಕು ಎಂಬ ಬುದ್ಧ ವಾಣಿ ಅತ್ಯಂತ ಸಕಾಲಿಕವಾಗಿ ಕಾಣುತ್ತದೆ.
ಒಂದೆಡೆ, ಹರಿದು ಹಂಚಿ ಹೋಗಿದ್ದ ಕನ್ನಡದ ಭಾಗಗಳನ್ನು ಏಕೀಕರಣಗೊಳಿಸಿದ ನಂತರ ಪ್ರತ್ಯೇಕ ರಾಜ್ಯಗಳಾಗಬೇಕೆಂದು ಕೂಗೇಳುತ್ತಿದೆ. ಇನ್ನೊಂದೆಡೆ, ಕಾವೇರಿ ನೀರಿಗಾಗಿ ಚಳವಳಿ ನಡೆಯುವುದು ಬಹುತೇಕ ಬೆಂಗಳೂರು, ಮಂಡ್ಯ, ಮೈಸೂರುಗಳಲ್ಲಿ ಮಾತ್ರ, ಉಳಿದ ಪ್ರದೇಶದ ಜನ ಈ ಸಮಸ್ಯೆ ನಮ್ಮದಲ್ಲ ಎಂದು ಉಳಿದುಬಿಡುತ್ತಾರೆ. ಮತ್ತೊಂದೆಡೆ, ಹುಬ್ಬಳ್ಳಿ ರೈಲ್ವೆ ವಲಯ ರಚನೆಯ ಹೋರಾಟದಲ್ಲಿ ಬೆಂಗಳೂರು, ಮೈಸೂರು ಭಾಗದವರು ಸುಮ್ಮನಾಗುತ್ತಾರೆ. ಮಗದೊಂದೆಡೆ, ಬಚಾವತ್ ತೀರ್ಪಿನ ಪ್ರಕಾರ, ಕೃಷ್ಣಾ ಕೊಳ್ಳದಲ್ಲಿ ನಮ್ಮ ರಾಜ್ಯಕ್ಕೆ ಹಂಚಿರುವ ನೀರನ್ನು ಬಳಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಇದೇ ನೆಪ ಒಡ್ಡಿ ನೀರು ಹಂಚಿಕೆಯನ್ನು ನಿಲ್ಲಿಸಿದರೂ ಆಶ್ಚರ್ಯವೇನಿಲ್ಲ.
ನಮ್ಮ ಗಡಿ, ಭಾಷೆ, ನೆಲ, ಜಲದ ರಕ್ಷಣೆ ಕೇವಲ ಕರ್ನಾಟಕ ಒಂದು ಭಾಗಕ್ಕೆ ಸೀಮಿತವಲ್ಲ. ಅದು ಸಮಗ್ರ ಕರ್ನಾಟಕದ ಜನತೆಗೆ ಸಂಬಂಧಿಸಿದ್ದು ಎನ್ನುವುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಮಸ್ತ ಕನ್ನಡಿಗರು ಒಗ್ಗಟ್ಟಿನಿಂದ ಚಿಂತಿಸುವ ಅಗತ್ಯವಿದೆ. ಗಡಿ, ಭಾಷೆ ಸಮಸ್ಯೆಗಳನ್ನು ಪರಿಹರಿಸುವುದೇನೋ ಸರ್ಕಾರದ ಕರ್ತವ್ಯವಾದರೂ, ನೀರಿನ ಪ್ರಶ್ನೆ ಬಂದಾಗ ರಾಜಕಾರಣಿಗಳ ಅಗತ್ಯವಿಲ್ಲ. ಈ ಪ್ರಶ್ನೆ ಬಗೆಹರಿಸಿಕೊಳ್ಳಬೇಕಾದುದು ರೈತರು ಮತ್ತು ನೀರಾವರಿ ತಜ್ಞರು ಮಾತ್ರ.
ಹೀಗಾಗಿ ಕನ್ನಡ ನಾಡಿನ ರೈತರೆಲ್ಲ ಒಗ್ಗಟ್ಟಾಗಬೇಕಿದೆ. ನಮ್ಮ ಹೋರಾಟದ ಮೂಲಕ ನಮ್ಮ ದೌರ್ಬಲ್ಯವನ್ನು ಕೊನೆಗಾಣಿಸಬೇಕಾಗಿದೆ. ರಾಜಕೀಯ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ, ತಮಗೆ ಸಾಧಕವಾಗುವ ರೀತಿಯಲ್ಲಿ ನಡೆದುಕೊಳ್ಳುವುದು ಸಹಜವೇ. ಆದರೆ ಕರ್ನಾಟಕದ ಜನ ತಮ್ಮ ನೆಲ, ಜಲ, ಗಡಿ, ಭಾಷೆ ಎಲ್ಲದರ ಕುರಿತು ಚಿಂತಿಸುವವರಾಗಬೇಕಿದೆ.
........................................  

Wednesday, 27 July 2016

 ಅಲ್ಲಿ ಮರಿಗೌಡ, ಇಲ್ಲಿ ಖಾಂಡ್ಯ ಪ್ರವೀಣ್
ಕಾಂಗ್ರೆಸ್-ಬಿಜೆಪಿಗರ ನಿಜಬಣ್ಣ ಬಿಚ್ಚಿಟ್ಟ ಎರಡು ಪ್ರಕರಣ

ಯಾರು ಏನೇ ಹೇಳಲಿ, ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇಬ್ಬರೂ ಅಧಿಕಾರದಲ್ಲಿದ್ದಾಗ ಮಾಡಬಾರದ್ದನ್ನೆಲ್ಲ ಮಾಡಿದವರೇ. ಒಬ್ಬರು ಜಾಸ್ತಿ ಭ್ರಷ್ಟಾಚಾರ ಮಾಡಿರಬಹುದು, ಮತ್ತೊಬ್ಬರು ಕಡಿಮೆ ಮಾಡಿರಬಹುದು. ಅಧಿಕಾರವಿಲ್ಲದಿದ್ದಾಗ ಮಾತ್ರ ತಾವೇ ಸುಭಗರಂತೆ, ನೈಜ ಹೋರಾಟಗಾರರೂ, ಕಳಕಳಿ ಉಳ್ಳವರೂ ನಾಚುವಂತೆ  ಪೋಸು ಕೊಡುತ್ತಿದ್ದಾರೆ. ರಾಜಕೀಯ ವ್ಯವಸ್ಥೆಯನ್ನು ಹದಗೆಡಿಸಿ, ಸ್ವಜನಪಕ್ಷಪಾತ, ಅಧಿಕಾರ, ಜಾತಿ ವ್ಯಾಮೋಹದಿಂದ ಜನರ ಕೆಂಗಣ್ಣಿಗೆ ತುತ್ತಾಗಿದ್ದಾರೆ.  ಇತ್ತೀಚೆಗೆ ನಡೆದ ಕೆಲವು ಘಟನೆಗಳು ಇವರ ನೈಜತನವನ್ನು ಜನರ ಮುಂದೆ ಮತ್ತಷ್ಟು ಬಿಚ್ಚಿಟ್ಟಿವೆ.


ರಾಜಕೀಯ ಪುಢಾರಿಗಳು ಯಾವುದೇ ಅಪರಾಧ ಎಸಗಿದರೂ ಅವರನ್ನು ಬಂಧಿಸುವುದು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸುಲಭದ ಮಾತಲ್ಲ. ಪಕ್ಷಗಳು ಬೇಕಾದಷ್ಟು ಹಾರಾಟ ಮಾಡಲಿ, ಕೆಸರೆರೆಚಿಕೊಳ್ಳಲಿ, ಮಾಡುವುದು ಮಾತ್ರ ತಮ್ಮ ಹಿಂಬಾಲಕರನ್ನು ಅಥವಾ ನಾಯಕರನ್ನು ರಕ್ಷಿಸುತ್ತಾರೆ. ಜೊತೆಗೆ ಅಧಿಕಾರಕ್ಕೇರಿದಾಗ ಅವರ ಮೇಲಿನ ಕೇಸುಗಳನ್ನೆಲ್ಲ ವಾಪಸ್ ಪಡೆದು ಪ್ರಕರಣ ಮುಕ್ತರನ್ನಾಗಿಸುತ್ತಾರೆ.
ಇತ್ತೀಚೆಗೆ ರಾಜ್ಯದಲ್ಲಿ ಘಟಿಸಿದ ಎರಡು ಪ್ರಮುಖ ಪ್ರಕರಣಗಳ ಹಿನ್ನೆಲೆಯಲ್ಲಿ ಇದನ್ನು ಗಮನಿಸಬಹುದು. ಒಂದು ಮೈಸೂರು ಜಿಲ್ಲಾಧಿಕಾರಿ  ಶಿಖಾ  ಅವರಿಗೆ ಸಿಎಂ ಎದುರೇ ತನ್ನ ಪಟಾಲಂ ಜೊತೆ  ಸೇರಿ ಧಮ್ಕಿ ಹಾಕಿದ ಸಿದ್ದರಾಮಯ್ಯ ಅವರ ಆಪ್ತ ಮತ್ತು ಮಾಜಿ ಜಿಪಂ ಅಧ್ಯಕ್ಷ ಮರಿಗೌಡ, ಇನ್ನೊಬ್ಬ ಚಿಕ್ಕಮಗಳೂರು ಡಿವೈಎಸ್ಪಿಯಾಗಿದ್ದ ದಿ.ಕಲ್ಲಪ್ಪ ಹಂಡೀಬಾಗ್ ಅವರನ್ನು  ಅಪಹರಣ ಪ್ರಕರಣ ಮತ್ತು 10 ಲಕ್ಷ ರೂ ಪ್ರಕರಣದಲ್ಲಿ ಸಿಲುಕಿಸಿದ  ಖಾಂಡ್ಯ ಪ್ರವೀಣ್.
ವಿಶೇಷವೆಂದರೆ, ಈಗ ಇಬ್ಬರು ಕಾಣೆಯಾಗಿದ್ದಾರೆ. ಪೊಲೀಸರಿಗೆ ಸಿಗುತ್ತಿಲ್ಲ. ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ. ಇದರಿಂದ ಅವರ ಆಪ್ತರನ್ನೆಲ್ಲ ಪೊಲೀಸರು ಬಂಧಿಸಿ ವಿಚಾರಿಸುತ್ತಿದ್ದಾರೆ. ಆದರೂ ಇವರಿಬ್ಬರು ಎಲ್ಲೋ ಅಡಗಿ ಕುಳಿತು ನಿರೀಕ್ಷಣಾ ಜಾಮೀನಿಗೆ ಜಿಲ್ಲಾ ಮತ್ತು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮರಿಗೌಡ  ಸಿಎಂ ಆಪ್ತ ಎಂಬ ಕಾರಣಕ್ಕೆ ಇಷ್ಟೊಂದು ಪ್ರಚಾರವನ್ನು ಪಡೆದುಕೊಂಡರು. ಮೈಸೂರು ತಹಶೀಲ್ದಾರ್ ಅವರಿಗೆ ವರ್ಗಾವಣೆಯಾದರೂ ಜಿಲ್ಲಾಧಿಕಾರಿ ಬಿಡುಗಡೆ ಮಾಡಿರಲಿಲ್ಲ. ಇದನ್ನೇ ದೊಡ್ಡದನ್ನಾಗಿ ಮಾಡಿ ಸಿಎಂ ಎದುರು ಡಿಸಿಗೆ ಅವಾಜ್ ಹಾಕಿದ್ದ ಮರಿಗೌಡ ವಿರುದ್ದ ಡಿಸಿ ದೂರು ಸಲ್ಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಸುಮ್ಮನಿದ್ದ ಮರಿಗೌಡ, ಒತ್ತಡ ಹೆಚ್ಚಾಗಿ ರಾಜಕೀಯ ಲೇಪಿತವಾಗಿ ಆತನನ್ನು ಬಂಧಿಸಲೇಬೇಕೆಂಬ ಪೊಲೀಸರ ಯತ್ನ ಶುರುವಾಯಿತೋ ಅಲ್ಲಿಂದ ಕಾಣೆಯಾಗಿದ್ದಾರೆ. ಆವರ ಕಾರನ್ನು ಮೈಸೂರಿನ ಅವರ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ. ಆದರೆ ಮನೆಗೆ ಬೀಗ ಹಾಕಿ ಕುಟುಂಬ ಸಹಿತ ನಾಪತ್ತೆಯಾಗಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್‌ನವರು ಮರಿಗೌಡ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನೂ ಮಾಡಿದ್ದಾಗಿದೆ. ಮರಿಗೌಡ ಕಾಂಗ್ರೆಸ್ ಮುಖಂಡನಾಗಿದ್ದು, ಕಳೆದ ವಿಧಾನಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ಬಯಸಿ ಅದನ್ನು ಪಡೆಯುವಲ್ಲಿ ವಿಫಲನಾಗಿದ್ದ. ಆಗ ಸಿದ್ದರಾಮಯ್ಯ ಅವರಿಗೂ ಅವಾಜ್ ಹಾಕಿ ನಿಂದಿಸಿದ್ದ ಎನ್ನುವುದು ಬಯಲಾಗಿದೆ. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತ್ತೆ ಅವರ ಬೆಂಬಲಿಗನಾದ ಮರಿಗೌಡ ಸಿದ್ದರಾಮಯ್ಯ ಜೊತೆಗೆ ಮಿಂಚುತ್ತಿದ್ದರು. ಜುಲೈ 3ರಂದು ಶಿಖಾ ಪ್ರಕರಣ ಆರಂಭವಾದಂದಿನಿಂದ ಕಣ್ಮರೆಯಾಗಿರುವ ಮರಿಗೌಡನನ್ನು ಸಿಎಂ ರಕ್ಷಿಸುತ್ತಿದ್ದಾರೆಂಬ ಬಲವಾದ ಆರೋಪ ಕೇಳಿಬರುತ್ತಿದೆ.
 ಖಾಂಡ್ಯ ಪ್ರವೀಣ್ ಸಹ ಕಲ್ಲಪ್ಪ ಆತ್ಮಹ್ತತ್ಯೆ ನಂತರ ನಾಪತ್ತೆಯಾದ ವ್ಯಕ್ತಿ. ಈತ ಹಿಂದು ಸಂಘಟನೆಯೊಂದರ ವಿಭಾಗೀಯ ಮುಖಂಡನಾಗಿದ್ದ. ಈತನ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ವಿವಿಧ  ಠಾಣೆಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳಿವೆ ಎನ್ನುವುದು ಈಗಾಗಲೆ ವರದಿಯಾಗಿದೆ.  ಹಿಂದೂ ಸಂಘಟನೆಗೆ ಈತ ಸೇರಿದ್ದರಿಂದ ಈತನ ವಿರುದ್ಧ ಬಿಜೆಪಿಯವರು ಬಾಯ್ಬಿಡಲೇ ಇಲ್ಲ. ಈ ಪ್ರಕರಣಕ್ಕೂ ತಮಗೂ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸುತ್ತಿದ್ದಾರೆ. ಜೊತೆಗೆ ಸಂಘ ಪರಿವಾರದವರು ಮತ್ತು ಬಿಜೆಪಿಯವರೇ ಈತನನ್ನು ರಕ್ಷಿಸುತ್ತಿದ್ದಾರೆನ್ನುವ ಮಾತೂ ಸಹ ಕೇಳಿಬರುತ್ತಿದೆ.  ಪ್ರವೀಣ್ ಎಲ್ಲಿ ಅಡಗಿದ್ದಾನೆನ್ನುವುದು ಗೊತ್ತಿಲ್ಲವಾದರೂ ಪೊಲೀಸರಂತೂ  ಈತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಬಾಳೆಹೊನ್ನೂರು ಸಮೀಪದ ಖಾಂಡ್ಯ ಗ್ರಾಮದವನಾದ ಈತ ಎಲ್ಲಾ ವೃತ್ತಾಂತಗಳೂ ದಿನನಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.
ಈತನ ಬಗ್ಗೆ ಇಷ್ಟೆಲ್ಲ ಗೊತ್ತಿದ್ದೂ ಆತನನ್ನು ಹಿಂದೂ ಸಂಘಟನೆಗಳು ಮುಖಂಡನನ್ನಾಗಿಸಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ. ಅಂದರೆ ಇವರು ಪೋಷಿಸುತ್ತಿರುವುದು ಯಾರನ್ನು ಎನ್ನುವುದನ್ನು ಜನರು ಮಾತನಾಡಿಕೊಳ್ಳುವಂತಾಗಿದೆ. ಕಲ್ಲಪ್ಪ  ಪ್ರಕರಣದಲ್ಲಿ ಬೇಕಾದವನಾದ ಕಾರಣ ಈತನ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಸಮಾಜದಲ್ಲಿ ಮುಖವಾಡ ಹಾಕಿಕೊಂಡು ಬದುಕುತ್ತ ಹಿಂಬಾಗಿಲಿನಲ್ಲಿ ಇನ್ನೇನನ್ನೋ ಮಾಡುತ್ತ ಬದುಕುವ ಇಂತಹವರು ಯಾವುದೇ ಪಕ್ಷ, ಸಂಘಟನೆಗೆ ಸೇರಲಿ, ಅವರನ್ನು ಯಾರೂ ಬೆಂಬಲಿಸಬಾರದು.
ಖಾಂಡ್ಯ ಮತ್ತು ಮರಿಗೌಡ ಪ್ರಕರಣದಂತೆಯೇ ಮಂಗಳೂರಿನ ದೇವಸ್ಥಾನದ ಪ್ರಕರಣವೊಂದರಲ್ಲಿ ತನ್ನ ಸಮಾಜದವನೇ ಆದ ವಿನಾಯಕ ಬಾಳಿಗಾ ಎನ್ನುವವನನ್ನು ಕೊಲೆ ಮಾಡಿ ಸುಮಾರು 6 ತಿಂಗಳು ತಲೆಮರೆಸಿಕೊಂಡಿದ್ದ ಹಿಂದೂ ಸಂಘಟನೆಯ ಮುಖಂಡ, ನಮೋ ಬ್ರಿಗೇಡ್‌ನ ನರೇಶ್ ಶೆಣೈ  ಪ್ರಕರಣವೂ ನಮ್ಮ ಮುಂದಿದೆ. ಶೆಣೈ ಇತ್ತಿಚೆಗಷ್ಟೇ ಬಂಧನಕ್ಕೊಳಗಾಗಿದ್ದಾನೆ.
 ರಾಜಕೀಯ ಅಥವಾ ಬಲಿಷ್ಠ ಸಂಘಟನೆಯ ವ್ಯಕ್ತಿ ಏನೇ ತಪ್ಪು ಮಾಡಿದರೂ ಆತ ಅದರಿಂದ ಬಚಾವಾಗುತ್ತಾನೆ ಎನ್ನುವುದನ್ನು  ಇದು ತೋರಿಸುತ್ತದೆ. ಮಡಿಕೇರಿಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಸಚಿವ ಜಾರ್ಜ್ ರಾಜಿನಾಮೆ ಕೊಡಬೇಕು, ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದ ಬಿಜೆಪಿ ಮತ್ತು ಸಂಘ ಪರಿವಾರದವರು ಖಾಂಡ್ಯನನ್ನು ಬಂಧಿಸಬೇಕು ಅಥವಾ ಶೆಣೈ ಬಂಧಿಸಬೇಕೆಂದು ಒಮ್ಮೆಯೂ ರಸ್ತೆಗಿಳಿದು ಹೋರಾಡಿಲ್ಲ. ನಮ್ಮ ವ್ಯವಸ್ಥೆಯಲ್ಲಿ ತಮ್ಮವರನ್ನು ರಾಜಕೀಯದವರು ಹೇಗೆ ರಕ್ಷಿಸುತ್ತ್ತಾರೆ ಎನ್ನುವುದನ್ನು ಇದು ತೋರಿಸುತ್ತದೆ.
ಈ ನೆಲದ ಕಾನೂನು ಎಲ್ಲರಿಗೂ ಒಂದೇ ಎಂದು ಎಲ್ಲರೂ ಹೇಳುತ್ತಾರೆ. ಜೊತೆಗೆ ಕಾನೂನಿನ  ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎನ್ನುತ್ತೇವೆ. ಆದರೆ ಕೆಲವರು ಮಾತ್ರ ಹೆಚ್ಚು ಸಮಾನರಾಗುತ್ತಿರುವುದು ದೌರ್ಭಾಗ್ಯವೇ ಸರಿ.
.....................................

Tuesday, 26 July 2016

ಬೇಡಿಕೆ ಈಡೇರಿಕೆಗೆ ಬಸ್ ಬಂದ್ ಪರಿಹಾರವೇ?


* ನೌಕರರ ಬೇಡಿಕೆಗನುಗುಣವಾಗಿ ಶೇ. 12.5ರಷ್ಟು ವೇತನ ಏರಿಕೆಗೆ ಸರ್ಕಾರ ಚಿಂತನೆ.
* 2000ರಲ್ಲಿ ನೌಕರರಿಗೆ ಶೇ 11ರಷ್ಟು, 2004ರಲ್ಲಿ ಶೇ 5ರಷ್ಟು, 2008ರಲ್ಲಿ ಶೇ. 6ರಷ್ಟು, 2012ರಲ್ಲಿ ಶೇ 10ರಷ್ಟು ವೇತನ ಏರಿಕೆಯಾಗಿದೆ. 
* ಕೆಎಸ್ಸಾರ್ಟಿಸಿ ಮುಷ್ಕರದಿಂದ ಒಂದು ದಿನಕ್ಕೆ ನಷ್ಟವಾಗುತ್ತಿರುವುದುದ 17 ಕೋಟಿ ರೂ. ಆದಾಯ
* ಬೇಡಿಕೆ ಈಡೇರಿಕೆಗೆ ಒತ್ತಡ, ಹಠಮಾರಿತನ ಸಲ್ಲದು, ಮಾತುಕತೆಯೊಂದೇ ದಾರಿ.ಮುಷ್ಕರವೇ ಅಂತಿಮ ಮಾರ್ಗವಲ್ಲ.
* 19 ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳಿಗೆ ಎರಡನೆಯ ದಿನವಾದ ಇಂದೂ ರಜ


ಇತ್ತೀಚೆಗೆ ವಿವಿಧ ಇಲಾಖೆಗಳ ನೌಕರರ ಮುಷ್ಕರ ಅಧಿಕವಾಗುತ್ತಿದೆ. ಮುಷ್ಕರದ ಜೊತೆಗೆ ಸಾರ್ವಜನಿಕ ಜನಜೀವನಕ್ಕೂ ತೊಂದರೆಯಾಗುತ್ತಿದೆ. ಎಲ್ಲ ನೌಕರರದ್ದೂ ಒಂದೇ ಬೇಡಿಕೆ. ಅದೆಂದರೆ ವೇತನ ಪರಿಷ್ಕರಣೆ. ನೌಕರರ ವೇತನ ಕಾಲಕಾಲಕ್ಕೆ ಪರಿಷ್ಕರಣೆಯಾಗುತ್ತಿದೆ. ಆದರೂ ತಾವು ಹೇಳಿದಷ್ಟು ಪ್ರಮಾಣದಲ್ಲೇ ವೇತನ ಏರಿಕೆಯಾಗಬೇಕು ಎನ್ನುತ್ತಾ ಜನಸಾಮಾನ್ಯರಿಗೆ ತೊಂದರೆಯಾಗುವಂತೆ ಪ್ರತಿಭಟನೆ, ಮುಷ್ಕರ ಹೂಡುತ್ತಿರುವುದು ಸರಿಯಲ್ಲ.
ಕೆಎಸ್ಸಾರ್ಟಿಸಿ ನೌಕರರು ನಿನ್ನೆಯಿಂದ  ಮುಷ್ಕರ ಆರಂಭಿಸಿದ್ದಾರೆ. ಕೆಎಸ್ಸಾರ್ಟಿಸಿ ಸೇವೆಗೆ ಸಂಬಂಧಿಸಿದ್ದು. ಇಲ್ಲಿ ಜನರೇ ಜೀವಾಳ. ಹೀಗಿರುವಾಗ ಲಕ್ಷಾಂತರ ಜನರಿಗೆ ತೊಂದರೆ ಕೊಟ್ಟು  ಅನಿರ್ದಿಷ್ಟ ಮುಷ್ಕರಕ್ಕೆ ಕರೆಕೊಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅವಶ್ಯಕ ವಸ್ತುಗಳ ಕಾಯ್ದೆ (ಎಸ್ಮಾ) ವ್ಯಾಪ್ತಿಯಲ್ಲಿ ಸಾರಿಗೆ ಇಲಾಖೆ ಸೇರುತ್ತದೆ. ಆದ್ದರಿಂದ ಮನಬಂದಂತೆ ಇದರ ನೌಕರರು ಮುಷ್ಕರ ಹೂಡುವಂತಿಲ್ಲ.
ಹೀಗೆ ವಿವಿಧ ಇಲಾಖೆಯವರು ತಮ್ಮ ಬೇಡಿಕೆ ಈಡೇರಿಕೆಗೆ ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಈಗ ಪ್ರತಿಯೊಬ್ಬರ ಪ್ರಶ್ನೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿಭಟಿಸಲು ಅಥವಾ ಮುಷ್ಕರ ಹೂಡಲು ಬರುವುದಿಲ್ಲವೇ, ಪ್ರತಿಭಟನೆಗೆ ಸಾಕಷ್ಟು ಮಾರ್ಗಗಳಿದ್ದರೂ ಜನಸಾಮಾನ್ಯರಿಗೆ ತೊಂದರೆ ಕೊಟ್ಟರೆ ಮಾತ್ರ ಸರ್ಕಾರ ಗಮನಹರಿಸುತ್ತದೆ ಅಥವಾ ತಮ್ಮ ಮುಷ್ಕರಕ್ಕೆ ಪ್ರಚಾರ ಸಿಕ್ಕು ಬೇಗ ಇತ್ಯರ್ಥವಾಗುತ್ತದೆ ಎನ್ನುವ ಭಾವನೆಯೂ ಪ್ರತಿಭಟನೆ ಹೂಡುವವರಲ್ಲಿದೆಯೇ. ಕಾರ್ಮಿಕ ಸಂಘಟನೆಗಳ ಅಡಿ ಕೆಎಸ್ಸಾರ್ಟಿಸಿ ನೌಕರರು ಬರುವುದರಿಂದ ಇಲ್ಲಿ ಸಂಘಟನೆಗಳದ್ದೇ ಆಟ. ಅವರ ಹಠವೇ ಮುಖ್ಯ. ಒಂದು ದಿನ ಬಸ್ ಬಂದ್ ಮಾಡಿದರೆ ಅದರಿಂದಾಗುವ ಪರಿಣಾಮಗಳ ಬಗ್ಗೆ ಬಂದ್ ಕರೆಕೊಡುವವರು ಮೊದಲು ಯೋಚಿಸಬೇಕು. ಜೊತೆಗೆ ತಮಗೆ ಅನ್ನ ಕೊಡುವ ದುಡಿಮೆಗೆ ತಾವೇ ಕಲ್ಲು ಹಾಕಿಕೊಳ್ಳುವುದರ ಬಗ್ಗೆಯೂ ಯೋಚಿಸಬೇಕು. ಇದೇ ರೀತಿ ಮನಬಂದಂತೆ ಮುಷ್ಕರ ಹೂಡಿದ್ದರ ಪರಿಣಾಮವಾಗಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು ಬಾಗಿಲು ಹಾಕಿರುವ ಉದಾಹರಣೆ ನಮ್ಮ ಕಣ್ಮುಂದೆ ಇರುವಾಗ ಮುಂದೆ ತಮಗೂ ಇದೇ ಗತಿ ಎದುರಾಗಬಹುದು (ಖಾಸಗೀಕರಣವಾಗಬಹುದು) ಎನ್ನುವುದರ ಅರಿವೂ, ಆತಂಕವೂ ಇರಬೇಕು.
ಕೆಎಸ್ಸಾರ್ಟಿಸಿ ನೌಕರರಿಗೆ ವೇತನ ಆಯೋಗದ ಶಿಫಾರಸುಗಳು ಅನ್ವಯಿಸುವುದಿಲ್ಲ. ಸರ್ಕಾರವೇ ಕಾಲಕಾಲಕ್ಕೆ ವೇತನ ನಿಗದಿ ಮಾಡುತ್ತದೆ. ಈಗ ಈ ನೌಕರರು ಶೇ. 30ರಷ್ಟು ವೇತನ ಏರಿಸಬೇಕೆಂದು ಹಠ ಹಿಡಿದಿದ್ದಾರೆ. ಆದರೆ ಮಾತುಕತೆ ವೇಳೆ ಸರ್ಕಾರ ಶೇ. 10ರಷ್ಟು ಮಾತ್ರ ಏರಿಸಲು ಸಿದ್ಧವಿರುವುದಾಗಿ ಹೇಳಿದೆ. ಮೊಲದೇ ಸತತ ನಷ್ಟದಲ್ಲಿರುವ ನಿಗಮ ಇದು.  ಶೇ. 10ರಷ್ಟು ಏರಿಸಿದರೂ  4650 ಕೋಟಿ ರೂ. ಸರಕಾರದ ಬೊಕ್ಕಸಕ್ಕೆ ಅಧಿಕ ಖರ್ಚು ತಗಲುತ್ತದೆ. ಇದಕ್ಕೊಪ್ಪದ ಕಾರ್ಮಿಕ ಸಂಘಟನೆಗಳ ಸದಸ್ಯರು ಮುಷ್ಕರ ಆರಂಭಿಸಿದ್ದಾರೆ. 2012ರ ಸೆಪ್ಟೆಂಬರ್‌ನಲ್ಲಿ ನಿಗಮದ ನೌಕರರ ವೇತನವನ್ನು ಸರ್ಕಾರ ಶೇ. 15ರಷ್ಟು ಏರಿಸಿತ್ತು. ಇದಕ್ಕೆ ಕನಿಷ್ಠ 4 ವರ್ಷವಾದರೂ ಆದ ನಂತರ ಮತ್ತೆ ವೇತನ ಏರಿಕೆ ಅನ್ವಯವಾಗುತ್ತದೆ. ಆದರೆ ನೌಕರರು ಯಾರದ್ದೊ ಚಿತಾವಣೆಗೆ ಒಳಗಾದವರಂತೆ ಇನ್ನೂ 2 ತಿಂಗಳು ಬಾಕಿ ಇರುವಂತೆಯೇ ಮುಷ್ಕರ ಆರಂಭಿಸಿದ್ದಾರೆ.
ನೌಕರರ ವೇತನ ಕಡಿಮೆ ಇರಬಹುದು ನಿಜ, ಆದರೆ ಮರ್ಯಾದೆಯಿಂದ ಬದುಕಲಿಕ್ಕೆ ಏನೂ ಇದರಿಂದ ತೊಂದರೆ ಇಲ್ಲ. ನಮ್ಮ ದೇಶದಲ್ಲಿ ಇದಕ್ಕೂ ಕಡಿಮೆ ಸಂಬಳದಲ್ಲಿ ದುಡಿಯುವವರಿದ್ದಾರೆ ಎನ್ನುವುದನ್ನು ಗಮನಿಸಬೇಕು. ನಮಗಿಂತ ಮೇಲಿನವರನ್ನು ನೋಡಿ ಅದರಂತೆ ತಮಗೂ ಬೇಕೆನ್ನುವವರೇ ಜಾಸ್ತಿ ಇದ್ದಾರೆಯೇ ವಿನಾ ತಮಗಿಂತ ಕೆಳಗೆ ಇದ್ದು ಕನಿಷ್ಠ ವೇತನವೂ ಇಲ್ಲದೆ ಬದುಕುತ್ತಿರುವವರನ್ನು ಕಂಡು ಮರುಗುವವರಿಲ್ಲ. ಇದೇ ನಮ್ಮ ಸಮಾಜದ ದೊಡ್ಡ ದುರಂತ.
ಸಾರಿಗೆ ನೌಕರರ ಮುಷ್ಕರದ ಬಗ್ಗೆ ಸರ್ಕಾರ ಮತ್ತು ಕಾರ್ಮಿಕ ಸಂಗಟನೆಗಳ ಮಾತುಕತೆ ವಿಫಲವಾಗಿದೆ. ಮತ್ತೆ ಮಾತುಕತೆ ನಡೆಯಲಿದೆ. ಆದರ  ಇಬ್ಬರೂ ತಮ್ಮ ಹಠಮಾರಿ ಧೋರನೆಯನ್ನು ಕೈಬಿಡಬೇಕಿದೆ. ರಾಜ್ಯದ ಶೇ. 60ರಷ್ಟು ಆದಾಯ ಸರ್ಕಾರಿ ನೌಕರರ ಆದಾಯಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಅಭಿವೃದ್ಧಿ ಎನ್ನುವುದು ಕನಸಿನ ಮಾತಾಗುತ್ತಿದೆ. ಇನ್ನು ಮುಂದೆ ಹೀಗೆ ಪ್ರತಿ ನೌಕರರೂ ಇದೇ ಮಾರ್ಗದಲ್ಲಿ ಸಾಗಿದರೆ  ಪರಿಸ್ಥಿತಿ ಏನಾಗಬಹುದು  ಎನ್ನುವುದನ್ನು ಎಲ್ಲರೂ ರಾಜಕೀಯರಹಿತವಾಗಿ ಯೋಚಿಸಬೇಕಿದೆ. ನೌಕರರು ಮಷ್ಕರ ಮಾಡಬಾರದು, ವೇತನ ಏರಿಕೆ ಕೇಳಬಾರದು ಎನ್ನುವುದು ಇದರ ಅರ್ಥವಲ್ಲ. ಮುಷ್ಕರಕ್ಕೂ ಮಾರ್ಗವಿದೆ. ಆದರೆ ಜನಸಾಮಾನ್ಯರಿಗೆ ತೊಂದರೆ ಮಾಡಿ ಅಲ್ಲ. ತೊಂದರೆ ಆಗದಂತೆ ಮುಷ್ಕರ ಮಡಬೇಕಿದೆ. ನಿಗದಿತಕ್ಕಿಂತ ಒಂದು ಗಂಟೆ ಹೆಚ್ಚು ಕೆಲಸ ಮಾಡದ ಇವರು ಸಕಲ ಸೌಲಭ್ಯಗಳನ್ನೆಲ್ಲ ಬಯಸುತ್ತಾರೆ. ಪ್ರತಿಭಟನಾರ್ಥವಾಗಿ ಹೆಚ್ಚು ಕೆಲಸ ಮಾಡಲಿ, ಪಾಳಿಯಂತೆ ಮುಷ್ಕರದಲ್ಲಿ ಭಾಗವಹಿಸಲಿ,  ಹೀಗೆ ಹೊಸ ಮಾರ್ಗದ ಮೂಲಕ ಹೋರಾಡಲಿ. ಇದನ್ನು ಬಿಟ್ಟು ಬಸ್ ಬಂದ್ ಮಾಡಿದರ ಸಾರಿಗೆ ನಿಗಮಕ್ಕೆ ನಷ್ಟ. ನಿಗಮಕ್ಕೆ ನಷ್ಟವಾದರೆ ತಮಗೇ ನಷ್ಟ ಎನ್ನುವುದನ್ನು ಪ್ರತಿಭಟಿಸುತ್ತಿರುವ ಪ್ರತಿಯೊಬ್ಬ ನೌಕರ ಅರಿಯಬೇಕಿದೆ.


Saturday, 23 July 2016

ಗಣಪತಿ ಆತ್ಮಹತ್ಯೆ ಮಾತ್ರ ಬೇಕು, ಕಲ್ಲಪ್ಪ ವಿಚಾರ ಬೇಡ
  ರಾಜ್ಯ ಬಿಜೆಪಿಯ ಹೋರಾಟದ ಪರಿ ಇದು 



ಚಿಕ್ಕಮಗಳೂರು ಡಿಎಸ್ಪಿಯಾಗಿದ್ದ ಕಲ್ಲಪ್ಪ ಹಂಡೀಭಾಗ 10 ಲಕ್ಷ ರೂ ಪಡೆದಿದ್ದಾರೆಂಬ ಆರೋಪದಿಂದ ಮನನೊಂದು ಮಾವನ ಮನೆಯಲ್ಲಿ ನೇಣಿಗೆ ಶರಣಾದರು. ಈ ಬಗ್ಗೆ ಯಾವ ಪಕ್ಷದವರೂ ತಲೆಕೆಡಿಸಿಕೊಳ್ಳಲಿಲ್ಲ. ಸಿಓಡಿ ತನಿಖೆ ನಡೆಯುತ್ತಿದೆ. ಆದರೆ ಗಣಪತಿ ಪ್ರಕರಣಕ್ಕೆ ಮಾತ್ರ ಬೇಡದಷ್ಟು ಪ್ರಚಾರ. ಕೊಡಗಿನಲ್ಲಿ ಬಿಜೆಪಿ ನೆಲೆಯಿದೆ. ಅದನ್ನು ಗಟ್ಟಿಮಾಡಿಕೊಳುವ ದೃಷ್ಟಿಯಿಂದ ಬಿಜೆಪಿಯವರು ಹೋರಾಟ ಮಾಡಿದರು. ಆದರೆ ಕಲ್ಲಪ್ಪ ಪ್ರಕರಣದಲ್ಲಿ ಬಿಜೆಪಿ ತುಟಿಬಿಚ್ಚಲಿಲ್ಲ.  ಈ ಪ್ರಕರಣದಲ್ಲಿ ಮುಖ್ಯ ಆರೋಪಿಗಳೆಲ್ಲ ಹಿಂದೂ ಸಂಘಟನೆಯವರು. ಜೊತೆಗೆ ಇದರಲ್ಲಿ ಅಲ್ಲಿನ ಮಾಜಿ ಸಚಿವರೊಬ್ಬರ ಪಾತ್ರವೂ ಇದೆ ಎನ್ನುವ ಮಾಹಿತಿ ಇದೆ. ಇದನ್ನು ಮುಚ್ಚಿಕೊಳ್ಳಲು ಬಿಜೆಪಿ ಗಣಪತಿ ಪ್ರಕರಣವನ್ನು ಅತಿರಂಜಿತವಾಗಿ ಬಿಂಬಿಸಿದ್ದು ಸುಳ್ಳಲ್ಲ. ಟಿವಿ ಚಾನೆಲ್‌ನವರೂ ಸಹ ಈ ಘಟನೆಯನ್ನು ವೈಭವೀಕರಿಸಲಿಲ್ಲ.


 ಇತ್ತೀಚೆಗ ಡಿವೈಎಸ್ಪಿಗಳಾದ ಕಲ್ಲಪ್ಪ ಹಂಡೀಭಾಗ್ ಮತ್ತು ಎಂ.ಕೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡ ವಿಚಾರದಲ್ಲಿ ಬಿಜೆಪಿಯ ಹೋರಾಟದ ತಾರತಮ್ಯ ಢಾಳಾಗಿ ಕಾಣುತ್ತಿದೆ. ಗಣಪತಿ ಆತ್ಮಹತ್ಯೆ ಸಂಬಂಧಿಸಿದಂತೆ ವಿಧಾನಸೌಧದಿಂದ ಹಿಡಿದು ತಾಲೂಕು ಮಟ್ಟದವರೆಗೆ ಹೋರಾಡಿದ ಬಿಜೆಪಿಯವರಿಗೆ ಕಲ್ಲಪ್ಪ ಮಾತ್ರ ಕಾಣಲೇ ಇಲ್ಲ. ತಮ್ಮ ವೋಟ್ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳುವ ಭರದಲ್ಲಿ ಕೊಡಗಿನಲ್ಲಿ ವಾರಗಟ್ಟಲೆ ಧರಣಿ, ಪ್ರತಿಭಟನೆ, ಬಂದ್‌ಗಳನ್ನು ನಡೆಸಿದವರಿಗೆ ಕನಿಷ್ಟ ಕಲ್ಲಪ್ಪನ ಮನೆಗೆ ಭೇಟಿ ಕೊಟ್ಟು ಸಂತಾಪ ಸೂಚಿಸಬೇಕು, ಆತನ ಪತ್ನಿಗೆ ಸಾಂತ್ವನ ಹೇಳಿಬರಬೇಕೆಂದು ಅನ್ನಿಸಲೇ ಇಲ್ಲ.  
ಇದಕ್ಕೆ ಕಾರಣ ಏನೆನ್ನುವುದು ಎಲ್ಲರಿಗೂ ಗೊತ್ತು. ಗಣಪತಿ ಸಾಯುವ ಮುನ್ನ ಅಂದು ಸಚಿವರಾಗಿದ್ದ ಕೆ. ಜೆ. ಜಾರ್ಜ್ ಮತ್ತು ಇಬ್ಬರು ಐಪಿಎಸ್ ಅಧಿಕಾರಿಗಳ ಹೆಸರು ಹೇಳಿ, ತನಗೇನಾದರೂ ಸಂಭವಿಸಿದರೆ ಇವರೇ ಕಾರಣ ಎಂದಿದ್ದರು.  ಇದನ್ನೇ ಮುಂದಿಟ್ಟುಕೊಂಡು ಹೋರಾಡಿದ್ದರಲ್ಲಿ ಬಿಜೆಪಿಯವರ ಸ್ವಾರ್ಥವೇ ಎದ್ದು ಕಾಣುತ್ತದೆ. ಕಲ್ಲಪ್ಪ ತಮಗೆ ಅವಮಾನವಾಯಿತೆಂದು ಆತ್ಮಹತ್ಯೆ ಮಾಡಿಕೊಂಡರು. ಆದರೆ ಅವರ ಬಗ್ಗೆ ಪಶ್ಚಾತ್ತಾಪವೂ ಬಿಜೆಪಿಗರಿಗೆ ಹುಟ್ಟಲೇ ಇಲ್ಲ. ಕಲ್ಲಪ್ಪ ಅತಿ ಬಡಕುಟುಂಬದ ವ್ಯಕ್ತಿ. ಗಣಪತಿ ಅಂತಹವರಲ್ಲ. ಜೊತೆಗೆ ಕಲ್ಲಪ್ಪ ವಿಚಾರದಲ್ಲಿ ಹೋರಾಡಿದರೆ ಲಾವಿಲ್ಲ ಎನ್ನುವುದೂ ಬಿಜೆಪಿಯವರಿಗೆ ಗೊತ್ತಿದೆ.
ಗಣಪತಿ ಕೊಡವ ಜನಾಂಗದವರು. ಕೊಡಗಿನಲ್ಲಿ ಬಿಜೆಪಿಗೆ ಸದ್ಯ ಭದ್ರ ನೆಲೆಯಿದೆ. ಅದನ್ನು ಈ ನೆಪದಲ್ಲಾದರೂ ಹೋರಾಡಿ ಉಳಿಸಿಕೊಳ್ಳಬೇಕು. ತಮ್ಮ ಕೋಟೆಯನ್ನು ಇನ್ನಷ್ಟು ಗಟ್ಟಿಗಳಿಸಿಕೊಳ್ಳಬೇಕೆಂದು ವಿಧಾನಸಭೆ ಮತ್ತು ಪರಿಷತ್‌ನ ನಾಯಕರೂ ಸಹ ಅವರ ಮನೆಗೆ ತೆರಳಿ  ಸಾಂತ್ವನ ಹೇಳಿ ಬಂದರು. ಇದೇ ಕೆಲಸವನ್ನು ಕಲ್ಲಪ್ಪ ಅವರ ಮನೆಗೂ ತೆರಳಿ ಮಾಡಬಹುದಿತ್ತು. ಸಾವಿನಲ್ಲೂ ‘ರಾಜಕೀಯ’ ಮಾಡಿದ ಬಿಜೆಪಿಯ ಹೋರಾಟದ ಮರ್ಮ ರಾಜ್ಯದ ಜನರಿಗೆ ಅರ್ಥವಾಗಿದೆ.
ಜಾರ್ಜ್ ರಾಜಿನಾಮೆ ಕೊಡಬೇಕೆಂದು ಆಗ್ರಹಿಸಿ ವಿಧಾನಸಬೆಯ ಕಲಾಪವನ್ನೇ ಹಾಳು ಮಾಡಿದ ಬಿಜೆಪಿಯವರು ಚಿಕ್ಕಮಗಳೂರು ಡಿವೈಎಸ್‌ಪಿ ಆತ್ಮಹತ್ಯೆ ಕಾರಣವನ್ನು ಪತ್ತೆಹಚ್ಚಿ ಎಂದು ಏಕೆ ಕೇಳಲಿಲ್ಲ. ಹಿಂದು ಸಂಘಟನೆಯೊಂದರ ಮುಖಂಡರೇ ಇದರಲ್ಲಿ ಪಾಲ್ಗೊಂಡಿದ್ದರಿಂದ ಅವರನ್ನು ರಕ್ಷಿಸುವ ಕೆಲಸವನ್ನೇ ಮಾಡಹೊರಟರು. ಇಲ್ಲಿ ಅಧಿಕಾರಿಯ ಆತ್ಮಹತ್ಯೆ ಮುಖ್ಯವಾಗಲೇ ಇಲ್ಲ.  ಆತ್ಮಹತ್ಯೆಗೆ ಕಾರಣರಾದವರೇ ಮುಖ್ಯವಾದರು. ಅವರನ್ನು ಬಂಧಿಸಿ ಎಂದು ಬಿಜೆಪಿಯ ಒಬ್ಬನೇ ಒಬ್ಬ ನಾಯಕ ಹೇಳಲಿಲ್ಲ ಎಂದರೆ ಅವರನ್ನು ರಕ್ಷಿಸಲು ಎಷ್ಟೊಂದು ಕಟಿಬದ್ಧರಾಗಿ ನಿಂತಿದ್ದರೆನ್ನುವುದನ್ನು ಊಹಿಸಬಹುದು. ಚಿಕ್ಕಮಗಳೂರು ಎಸ್‌ಪಿಯ ಅಮಾನತಿಗೆ ಆಗ್ರಹಿಸಬಹುದಿತ್ತು. ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಕೂಗಾಡಬಹುದಿತ್ತು.   ಚಿಕ್ಕಮಗಳೂರು ಬಂದ್‌ನ್ನೂ ಆಚರಿಸಬಗಹುದಿತ್ತು. ರಸ್ತೆಯಲ್ಲಿ ಟೈರ್ ಸುಟ್ಟು, ಅಂಗಡಿ ಬಂದ್ ಮಾಡಿಸಬಹುದಿತ್ತು. ಸ್ವತಃ ಚಿಕ್ಕಮಗಳೂರು ಬಿಜೆಪಿಯವರೇ ಮುಂದಾಗಿ ಇದನ್ನು ಆಚರಿಸಬಹುದಿತ್ತು.
 ಮಹತ್ವದ ವಿಷಯವೆಂದರೆ, ಪ್ರತಿ ಪ್ರಕರಣಕ್ಕೂ ಸಿಬಿಐ ತನಿಖೆ ಎಂದು ಬೊಬ್ಬೆ ಹೊಡೆಯುವ ಈ ನಾಯಕರು ಇಲ್ಲಿ ಆ ಶಬ್ದವನ್ನೂ ಪ್ರಸ್ತಾಪಿಸಲಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗ ಸಿಬಿಐನ್ನು ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಎಂದು ವ್ಯಾಖ್ಯಾನ ಕೊಡುತ್ತಿದ್ದವರಿಗೆ ಈಗೇಕೆ ಅದೇ ಸಿಬಿಐ ಮೇಲೆ ವ್ಯಾಮೋಹ ಏಕೆ ಬಂತೋ ಅರ್ಥವಾಗುತ್ತಿಲ್ಲ. ಅಂದರೆ ಈಗ ಬಿಜೆಪಿ ಸರ್ಕಾರವಿರುವುದರಿಂದ ಅವರ ಸಿಬಿಐ ಆಗಿದೆ ಎಂದೇ ಇಲ್ಲಿ ಊಹಿಸಬಹುದೇನೋ. ಅಂದು ಸಿಬಿಐ ಮೇಲೆ ವಿಶ್ವಾಸವಿಲ್ಲದವರಿಗೆ ಈಗೇಕೆ
ಬಂತೋ ? ಅಂದರೆ, ಗಣಪತಿ ಬಗ್ಗೆ ಇವರು ಸುರಿಸಿದ್ದು ಮೊಸಳೆ ಕಣ್ಣೀರು ಎನ್ನದೆ ವಿಧಿಯಿಲ್ಲ.
 ಕಲ್ಲಪ್ಪ ಬಗ್ಗೆ ಬಿಜೆಪಿಯರಷ್ಟೇ, ಕಾಂಗ್ರೆಸ್ಸಿಗರೂ ಸಹ ತಲೆಕೆಡಿಸಿಕೊಳ್ಳಲಿಲ್ಲ. ಅವರ ಮನೆಗೆ ತೆರಳಿ ಸಂತಾಪ ವ್ಯಕ್ತಪಡಿಸಲಿಲ್ಲ. ಕೊಡಗಿನಲ್ಲಿ ಬಿಜೆಪಿಯವರು ಹೋರಾಡುತ್ತಿದ್ದರೆ ಜಾರ್ಜ್ ಅವರನ್ನು ಸಮರ್ಥಿಸಿಕೊಳ್ಳು ಹೆಣಗಾಡಿದ ಕಾಂಗ್ರೆಸ್ಸಿಗರು ನಿಜಕ್ಕೂ ಚಿಕ್ಕಮಗಳೂರಿನಲ್ಲಿ ಹಿಂದೂ ಸಂಘಟನೆಯವರನ್ನು ರಕ್ಷಿಸಲು ಹೊರಟಿರುವ ಬಿಜೆಪಿ ವಿರುದ್ಧ ಪ್ರತಿಭಟನೆ, ಧರಣಿ ಮಾಡಬಹುದಿತ್ತು. ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಬಹುದಿತ್ತು. ಕನಿಷ್ಟ ವಿಧಾನಸಭಾ ಅಧಿವೇಶನದಲ್ಲಾದರೂ ಪ್ರಸ್ತಾಪಿಸಬಹುದಿತ್ತು. ಆದರೆ ಹಾಗೆ ಮಾಡದೆ ಇಲ್ಲೂ ಸುಮ್ಮನಾಯಿತು. ಆಡಳಿತ ಪಕ್ಷವಾಗಿ ರಾಜ್ಯದ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ ಸರ್ಕಾರ ಎಸ್‌ಪಿ ವಿರುದ್ದ ದೂರು, ಆರೋಪ ಬಂದರೂ ಅವರನ್ನು ವರ್ಗಾಯಿಸಲಿಲ್ಲ. ಇದರಿಂದ ಕಾಂಗ್ರೆಸ್ಸಿಗರಿಗೂ, ಬಿಜೆಪಿಪಿಗರಿಗೂ ಏನೂ ವ್ಯತ್ಯಾಸವಿಲ್ಲ ಎನ್ನುವುದು ಸಾಬೀತಾಗಿದೆ. ಎರಡೂ ಪಕ್ಷಗಳು ರಾಜಕೀಯ ಮಾಡಿದವೇ ವಿನಾ ನ್ಯಾಯದ ಬಗ್ಗೆ ಗಮನಹರಿಸಲಿಲ್ಲ.
ಇಲ್ಲಿ ಇನ್ನೊಂದು ಮಾತನ್ನು ಹೇಳಲೇಬೇಕು. ಮಾಧ್ಯಮದವರೂ ಸಹ ಗಣಪತಿ ವಿಚಾರದಲ್ಲಿ ತಾವೇ ನ್ಯಾಯಾಧೀಶರಂತೆ ಕೆಲವು ವಿಚಾರಗಳಲ್ಲಿ ತೀರ್ಪು ಕೊಟ್ಟು ಮೂರ್ನಾಲ್ಕು ದಿನ ಪ್ರಸಾರ ಮಾಡಿದರು. ಅದರಲ್ಲೂ ಬಿಜೆಪಿಯವರ ಪ್ರತಿಭಟನೆಯನ್ನು ಅತಿರಂಜಿಸಿದರು. ಜಾರ್ಜ್ ಮೇಲೆ ಬಂದಿದ್ದು ಆರೋಪ ಎನ್ನುವುದನ್ನು ತಿಳಿದುಕೊಳ್ಳದೆ ಅಪರಾಧಿ ಎಂದೇ ಬಿಂಬಿಸಿದರು. ಆದರೆ ಕಲ್ಲಪ್ಪ ಬಗ್ಗೆ ಇವರೇಕೆ ಪ್ರಸಾರ ಮಾಡಲಿಲ್ಲ?   ಸಿಕ್ಕಿದ್ದೇ ಸುದ್ದಿ ಎಂಬಂತೆ ವಿಜೃಂಭಿಸಿದರೆ ಜನವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಅದೇ ರೀತಿ ಇಬ್ಬಗೆ ನೀತಿ ತೋರಿದರೆ ಜನರು ಪಕ್ಷಗಳ ಬಂಡವಾಳ ಏನೆನ್ನುವುದನ್ನೂ ಅರಿಯುತ್ತಾರೆ.





Wednesday, 20 July 2016

ಉ.ಪ್ರ.: ಶೀಲಾ ದೀಕ್ಷಿತ್ ಕಾಂಗ್ರೆಸ್ ಸಿಎಂ ಅಭ್ಯರ್ಥಿ
ಬ್ರಾಹ್ಮಣರ ಮತದ ಮೇಲೆ ಕಾಂಗ್ರೆಸ್ ಕಣ್ಣು* ಇನ್ನೂ ಸಿದ್ಧವಾಗದ ಬಿಜೆಪಿ ಪಡೆ

ದೇಶದ ರಾಜಕೀಯದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಫೆಬ್ರುವರಿ ವೇಳೆ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ  ಎಲ್ಲ ಪಕ್ಷಗಳೂ ತಯಾರಿ ಆರಂಭಿಸಿವೆ. ದೇಶದ ದೊಡ್ಡ ರಾಜ್ಯವಾದ ಇಲ್ಲಿ ಅಧಿಕಾರ ಹಿಡಿಯುವುದು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಈ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಕಾರುಬಾರು ಜಾಸ್ತಿ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ ( ಎಸ್‌ಪಿ) ಹಾಲಿ ಅಧಿಕಾರದಲ್ಲಿರುವ ಪಕ್ಷದ ಮಧ್ಯೆ ಕಾಳಗವೇ ಇತ್ತೀಚಿನ ನಾಲ್ಕಾರು ಚುನಾವಣೆಯಲ್ಲಿ ಜಾಸ್ತಿ. ಆದರೂ ಬಹುಪಕ್ಷಗಳ ರಾಜಕೀಯ ಇಲ್ಲಿದೆ. ಕಾಂಗ್ರೆಸ್, ಬಿಜೆಪಿ, ರಾಷ್ಟ್ರೀಯ ಲೋಕದಳ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಅಸ್ತಿತ್ವವೂ ಇಲ್ಲಿದೆ.
ಇಲ್ಲಿಯವರೆಗಿನ  ರಾಜಕೀಯವನ್ನು ಗಮನಿಸಿದಾಗ ಈ ರಾಜ್ಯದ ರಾಜಕೀಯದಲ್ಲಿ ಜಾತಿ ಮತ್ತು ಧರ್ಮವೇ ಬಹುಮುಖ್ಯ ಪಾತ್ರ ವಹಿಸುತ್ತಿರುವುದು ಕಂಡುಬರುತ್ತಿದೆ. ಅದರಲ್ಲೂ ಬಿಎಸ್‌ಪಿ ಮತ್ತು ಎಸ್‌ಪಿ ಇದನ್ನು ಸಮರ್ಥವಾಗಿ ಬಳಸಿಕೊಂಡು ವಿಭಜಿಸಿ ಆಳು ನೀತಿಯನ್ನು ಅನುಸರಿಸುತ್ತಿವೆ. ಇದರಿಂದಾಗಿಯೇ ಮಾಯಾವತಿ ದೇಶದ ಶ್ರೀಮಂತ ಮುಖ್ಯಮಂತ್ರಿ ಎಂದು ಹೆಸರಾದರು. ಮುಂದಿನ ಚುನಾವಣೆಗೂ ದಲಿತರ ಮತಬ್ಯಾಂಕಿನ ಮೇಲೆಯೇ ಕಣ್ಣಿಟ್ಟು ಕಾರ್ಯತಂತ್ರ ಆರಂಭಿಸಿದ್ದಾರೆ. ಇದರಿಂದ ಮುಲಾಯಂ ಸಹ ಹೊರತಾಗಿಲ್ಲ.  
 ಕಾಂಗ್ರೆಸ್ ಈಗ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವುದರಿಂದ ಮತ್ತು ಬಿಜೆಪಿಯು ಕಾಂಗ್ರೆಸ್ ಮುಕ್ತ ಎನ್ನುವ ಘೋಷಣೆಯೊಂದಿಗೆ ಹೆಜ್ಜೆ ಇಟ್ಟಿರುವುದರಿಂದ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕೆಂದು ಈಗಿನಿಂದಲೇ ಕಾಂಗ್ರೆಸ್ ಯೋಜನೆ ರೂಪಿಸುತ್ತಿದೆ. ಚುನಾವಣೆ ಘೋಷಿತವಾದರೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದೆ ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದ ಕಾಂಗ್ರೆಸ್ ಈಗ ಆಧುನಿಕ ಪದ್ದತಿಗೆ ಕಾಲಿಡುತ್ತಿರುವಂತಿದೆ. ಬಿಜೆಪಿ ಆಧುನಿಕ ಪ್ರಚಾರ ತಂತ್ರಗಳನ್ನು ಸಮರ್ಪಕವಾಗಿ ಬಳಸಿಕೊಂಡಿರುವುದರಿಂದ ಈ ಬಾರಿ ಕಾಂಗ್ರೆಸ್ ಸಹ  ಇದೇ ಮಾರ್ಗದಲ್ಲಿ ಸಾಗಲು ರಾಜಕೀಯ ತಂತ್ರದಾರರ ಸಹಾಯ ಪಡೆಯುತ್ತಿದೆ.
ಹೆಸರಾಂತ ರಾಜಕೀಯ ತಂತ್ರದಾರ ಪ್ರಶಾಂತ್ ಕಿಶೋರ್ ಈ ಬಾರಿ ಕಾಂಗ್ರೆಸ್‌ಗೆ ಎಲ್ಲ ತಂತ್ರಗಳನ್ನು ಹೇಳಿಕೊಡುತ್ತಿದ್ದಾರೆ. ಆ ಪ್ರಕಾರ ಮುಂದಡಿ ಇಟ್ಟಿರುವ ಪಕ್ಷ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಕಾಂಗ್ರೆಸ್‌ನ 130 ವರ್ಷದ ಇತಿಹಾಸಲ್ಲಿ ಚುನಾವಣೆಗೂ ಸುಮಾರು ನಾಲ್ಕಾರು ತಿಂಗಳ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದು ಇದೇ ಮೊದಲಾಗಿದೆ.
ಉತ್ತರ ಪ್ರದೇಶದ ರಾಜಕೀಯ ಗಮನಿಸುವುದಾದರೆ, ಇಲ್ಲಿ ಹಿಂದೂಗಳೇ ಅಧಿಕ. ಶೇ. 78.50ರಷ್ಟು ಹಿಂದೂಗಳು, ಶೇ. 19ರಷ್ಟು ಮುಸ್ಲೀಮರು ಮತ್ತು ಶೇ. 2.5ರಷ್ಟು ಇತರೇ ಧರ್ಮೀಯರಿದ್ದಾರೆ. ರಾಜ್ಯದಲ್ಲಿ ಬ್ರಾಹ್ಮಣ ಮತದಾರರನ್ನು  ಸೆಳೆಯುವ ಕಾರಣಕ್ಕೆ ಈ ಬಾರಿ ಶೀಲಾ ದೀಕ್ಷಿತ್ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ನಿರ್ಧರಿಸಿದೆ. ಪ್ರಶಾಂತ್ ಕಿಶೋರ್ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಪ್ರಿಯಾಂಕಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರನ್ನು ಬಿಂಬಿಸಲು ಸೂಚಿಸಿದ್ದರು. ಶೀಲಾ ದೀಕ್ಷಿತ್ ಅವರ ಹೆಸರು ಮೂರನೆಯದಾಗಿತ್ತು. ಆದರೆ ಹೈಕಮಾಂಡ್ ನೆಹರೂ ಕುಟುಂಬದ ಮೊದಲಿನಿಬ್ಬರನ್ನೂ ಪ್ರಾದೇಶಿಕ ನಾಯಕರನ್ನಾಗಿ ಮಾಡಲು ಒಪ್ಪಿಲ್ಲ. ಏಕೆಂದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನ್ನು ಅ ಧಿಕಾರಕ್ಕೇರಿಸಲು ಇವರೇ ಸಾರಥ್ಯ ವಹಿಸಬೇಕಾಗುತ್ತದೆ ಎನ್ನುವುದು ಆ ಪಕ್ಷದ ಲೆಕ್ಕಾಚಾರ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 1999ರಿಂದ 2013ರವರೆಗೆ 3 ಬಾರಿ ನಿರಂತರವಾಗಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿರುವ ಶೀಲಾ ದೀಕ್ಷಿತ್ ಅವರನ್ನು ಘೋಷಿಸಲಾಗಿದೆ. ಶೀಲಾ ಮೂಲತಃ ಪಂಜಾಬಿನ ಖತ್ರಿ ಕುಟುಂಬದವರು. ಮಾಜಿ ಕೇಂದ್ರ ಸಚಿವ ಮತ್ತು ಕರ್ನಾಟಕದ ಮಾಜಿ ರಾಜ್ಯಪಾಲ ಉಮಾಶಂಕರ್ ದೀಕ್ಷಿತ್ ಅವರ ಸೊಸೆ.
ಉತ್ತರ ಪ್ರದೇಶದಲ್ಲಿ ಘಟಾನುಘಟಿ ನಾಯಕರು ಮುಖ್ಯಮಂತ್ರಿಯಾಗಿ ಆ ಪೈಕಿ ಕೆಲವರು ಪ್ರಧಾನಿ, ಉಪಪ್ರಧಾನಿ ಕೇಂದ್ರದ ಸಚಿವರೂ ಆಗಿದ್ದಾರೆ.  ಗೋವಿಂದ ವಲ್ಲಭ್ ಪಂತ್ ಆ ರಾಜ್ಯದ ಮೊದಲ ಮುಖ್ಯಮಂತ್ರಿ. ವಿ.ಪಿ.ಸಿಂಗ್, ಚರಣ್ ಸಿಂಗ್, ಸುಚೇತಾ ಕೃಪಲಾನಿ, ರಾಜನಾಥ ಸಿಂಗ್, ಎನ್.ಡಿ. ತಿವಾರಿ ಪ್ರಮುಖ ಸಿಎಂಗಳು. ಆದರೆ ವಿ.ಪಿ. ಸಿಂಗ್ ಪ್ರದಾನಿಯಾಗಿದ್ದ ಕಾಲದಲ್ಲಿ ಜಾರಿಗೊಳಿಸಲಾದ ಮಂಡಲ್ ವರದಿಯಿಂದ ಉತ್ತರ ಪ್ರದೇಶದ ಬ್ರಾಹ್ಮಣರು ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ. ಈಗ ಮತ್ತೆ ಬ್ರಾಹ್ಮಣನ್ನು ಒಲಿಸಿಕೊಳ್ಳುವ ಯತ್ನ ಸಾಗಿದೆ.
ಬಿಜೆಪಿ ಕಳೆದ 3 ಚುನಾವಣೆಗಳಲ್ಲೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಅಯೋಧ್ಯೆಯ ರಾಮಜನ್ಮಭೂಮಿ ವಿವಾದದಿಂದ ಹೊತ್ತಿಕೊಂಡ ಬೆಂಕಿಯ ಪರಿಣಾಮ ಅಧಿಕಾರವನ್ನು 1996ರಲ್ಲಿ ಹಿಡಿದಿತ್ತು. ಹಿಂದುಳಿದ ವರ್ಗಗಳ ನಾಯಕ ಕಲ್ಯಾಣ್ ಸಿಂಗ್ ಆಗ ಮುಖ್ಯಮಂತ್ರಿಯಾದರು. ನಂತರ 1997 ಮತ್ತರಿಂದ 2002ರವೆರೆಗೆ ಮತ್ತೆ ಅಧಿಕಾರಕ್ಕೇರಿತ್ತು. ಕಾಂಗ್ರೆಸ್ 1989ರಲ್ಲಿ ಅಧಿಕಾರ ಮುಗಿಸಿದ ನಂತರ ಮತ್ತೆ ಗದ್ದುಗೆ ಹಿಡಿದಿಲ್ಲ.  ಕಳೆದ ಲೋಕಸಭೆ ಚುನಾವಣೆಯಲ್ಲಿ 80ರಲ್ಲಿ 71 ಸೀಟುಗಳನ್ನು ಗೆದ್ದುಕೊಂಡಿತು. ಇದಕ್ಕೆ ಮೋದಿ ಮೇನಿಯಾ ಅಥವಾ ತ್ಸುನಾಮಿ ಏನಾದರೂ ಅನ್ನಿ. ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದದ ನಂತರವೂ ಇಷ್ಟೊಂದು ಸ್ಥಾನವನ್ನೂ ಬಿಜೆಪಿ ಗೆದ್ದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಅಲ್ಲಿನ ವಿಧಾನಸಭೆಯ ಮೇಲೆ ಕಣ್ಣಿಟ್ಟಿದೆ. ಗೆಲುವು ತನ್ನದೇ ಎಂಬ ಹೇಳಿಕೆಯನ್ನು ಈಗಲೇ ತೇಲಿಬಿಡಲಾರಂಭಿಸಿದೆ.  
ಇಲ್ಲಿ ಬ್ರಾಹ್ಮಣರು, ಬನಿಯಾಗಳು ಮತ್ತು ವೈಶ್ಯರು ಬಿಜೆಪಿಯ ವೋಟ್ ಬ್ಯಾಂಕ್ ಆಗಿದದ್ರು. ಆದರೆ ಕಳೆದ 3-4 ಚುನಾವಣೆಯಿಂದ ಇವರು ಬಿಜೆೆಯಿಂದ ದೂರ ಸರಿದಿದ್ದಾರೆ. ಪಕ್ಷ ಅದಿಕಾರಕ್ಕೆ ಬರುವ ಸಂಭವವಿದ್ದರೆ ಮಾತ್ರ ಅವರು ಬಿಜೆಪಿಗೆ ಮತ ಹಾಕುತ್ತಾರೆ. ಇಲ್ಲವಾದರೆ ಗೆಲ್ಲುವ ಅಭ್ಯರ್ಥಿಗಳಿಗೆ ಮತ ಹಾಕುತ್ತಿದ್ದಾರೆ. ಇದರಿಂದ ಎಸ್‌ಪಿ ಕಳೆದ ಬಾರಿ ಜಯಗಳಿಸಿದೆ.          
ಕೇಂದ್ರ ಸಚಿವೆ ಸ್ಮತಿ ಇರಾನಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂಬ ನಿಲುವು ಪಕ್ಷದಲ್ಲಿದೆ. ಆದರೆ ಅವರು ಎಸಗಿಕೊಂಡ ಕೆಲವು ಎಡವಟ್ಟುಗಳೇ ಅವರನ್ನು ಆ ಹಾದಿಯಿಂದ ಹಿಂದೆ ಸರಿಸಿವೆ.  ಜೊತೆಗೆ ಅವರು ಸಿಂಧಿ ಜನಾಂಗದವರು. ಆ ಜನಾಂಗದ ಮತಗಳೇ ಇಲ್ಲ. ಇತ್ತೀಚೆಗೆ ಕೇಶವ ಪ್ರಸಾದ್ ಮೌರ್ಯ ಎಂಬ ಹಿಂದುಳಿದ ವರ್ಗದ ನಾಯಕನನ್ನು ರಾಜ್ಯ ಬಿಜೆಪಿ ಅದ್ಯಕ್ಷರನ್ನಾಗಿ ನೇಮಿಸಲಾಗಿದೆ.
 ಬ್ರಾಹ್ಮಣರನ್ನು, ಓಬಿಸಿ ಮತ್ತು ದಲಿತರ ಮತ ಸೆಳೆಯುವುದು ಈಗ ಬಿಜೆಪಿ ಮುಂದಿರುವ ಗುರಿಯಾಗಿದೆ. ಬಿಎಸ್ಪಿ ದಲಿತರ ವಿಶ್ವಾಸವನ್ನು ಕಳೆದುಕೊಂಡಿದೆ. ಅದೇ ಹಾದಿಯಲ್ಲಿ ಈಗ ಮುಖ್ಯಮಂತ್ರಿ ಅಖಿಲೇಶ್ ಸಹ ಸಾಗುತ್ತಿದ್ದಾರೆ. ಕೇವಲ ಅಲ್ಪಸಂಖ್ಯಾತರ ಓಲೈಕೆಗೆ ಅಖಿಲೇಶ್ ಎಲ್ಲ ಯತ್ನ ಮಾಡುತ್ತಿದ್ದಾರೆ. ಇ ಎಲ್ಲ ಅಂಶಗಳು ಮುಂದಿನ ಚುನಾವಣೆಯಲ್ಲಿ ಎಸ್‌ಪಿ, ಬಿಎಸ್‌ಪಿಗೆ ಮಾರಕವಾಗುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ಆರೆಸ್ಸೆಸ್ ಜೊತೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡುು ಅಸ್ಸಾಂನಲ್ಲಿ ಜಯಿಸಿದಂತೆ ಇಲ್ಲಿಯೂ ಗೆಲುವು ಸಾಧಿಸಬೇಕೆನ್ನುವುದು ಅಲ್ಲಿನ ಬಿಜೆಪಿ ನಾಯಕರ ಮಾತು.
ಆದರೆ, ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ನಿರ್ಧಾರವೇ ಪ್ರಧಾನವಾಗುತ್ತಿರುವುದರಿಂದ ಯಾವ ಜಾತಿಯವರಿಗೆ ಮಣೆ ಹಾಕಬೇಕೆನ್ನುವುದು ಇನ್ನೂ ಇತ್ಯರ್ಥವಾಗಿಲ್ಲ. ಬಿಜೆಪಿ ಲೋಕಸಭೆಯ ಫಲಿತಾಂಶ ಮರುಕಳಿಸಬಹುದೆನ್ನುವ ಲೆಕ್ಕಾಚಾರದಲ್ಲಿದೆ. ಆದರೆ ಬ್ರಾಹ್ಮಣ ಸಮುದಾಯದ ಶೀಲಾ ದೀಕ್ಷಿತ್  ಸಿಎಂ ಅಭ್ಯರ್ಥಿಯಾಗಿರುವುದರಿಂದ ಬ್ರಾಹ್ಮಣರು ಯಾವ ನಿರ್ಧಾರ ಕೈಗೊಳ್ಳಬಹುದೆನ್ನುವುದರ ಮೇಲೆ ಬಿಜೆಪಿ ಭವಿಷ್ಯ ತಿಳಿಯಲಿದೆ. ಬ್ರಾಹ್ಮಣ  ಸಮುದಾಯದ ಓಲೈಕೆ ಮಾಡಲು ಆ ವರ್ಗದವರನ್ನೇ ಸಿಎಂ ಕ್ಯಾಂಡಿಡೇಟ್ ಎಂದು ಘೋಷಸಿಬೇಕೆಂದು ರಾಜಕೀಯ ತಂತ್ರಜ್ಞರು ಸೂಚಿಸಿದ್ದರ ಮೇರೆಗೆ  ಕಾಂಗ್ರೆಸ್ ಹಾಗೆಯೇ ಮಾಡಿ ಬಹುಬೇಗ ಕಣಕ್ಕಿಲಿಯುವ ಸೂಚನೆ ನೀಡಿದೆ. ಇದು ಆ ಪಕ್ಷಕ್ಕೆ ವರವಾಗಬಹುದೇ, ಸತತ ಸೋಲಿನಲ್ಲಿರುವ ಕಾಂಗ್ರೆಸ್‌ಗೆ ಬ್ರಾಹ್ಮಣರು ಮತ್ತೆ ಚೈತನ್ಯ ನೀಡುವರೇ ಎನ್ನುವುದು ಚುನಾವಣೆ  ನಂತರವಷ್ಟೇ ಗೊತ್ತಾಗಬೇಕಿದೆ.  ಆದರೆ ಪ್ಲಾನ್ ಮಾಡುವುದರಲ್ಲಿ  ಸದಾ ಮುಂದಿರುತ್ತಿದ್ದ ಬಿಜೆಪಿ ಇನ್ನೂ ತನ್ನ ಯೋಚನೆ ಏನೆನ್ನುವುದನ್ನು ಪ್ರಕಟಿಸಿಲ್ಲ. ಹಾಗಂತ ಅದು ತಯಾರಿ ನಡೆಸಿಲ್ಲ ಎಂದರ್ಥವಲ್ಲ. ಆದರೆ ಬ್ರಾಹ್ಮಣರು ಮಾಡಿದ ನಿರ್ಧಾರ ಉತ್ತರ ಪ್ರದೇಶದ ರಾಜಕೀಯದ ದಿಕ್ಸೂಚಿಯಾಗಿರುತ್ತದೆ.  

Tuesday, 19 July 2016

ನ್ಯಾಯಪಾಲನೆಗೆ ಇಷ್ಟು ದಿನ ಬೇಕಿತ್ತೆ?
 ಜಾರ್ಜ್ ರಾಜಿನಾಮೆ


ಚಿಕ್ಕಮಗಳೂರು ಡಿಎಸ್ಪಿಯಾಗಿದ್ದ ಕಲ್ಲಪ್ಪ ಹಂಡೀಭಾಗ 10 ಲಕ್ಷ ರೂ ಪಡೆದಿದ್ದಾರೆಂಬ ಆರೋಪದಿಂದ ಮನನೊಂದು ಮಾವನ ಮನೆಯಲ್ಲಿ ನೇಣಿಗೆ ಶರಣಾದರು. ಈ ಬಗ್ಗೆ ಯಾವ ಪಕ್ಷದವರೂ ತಲೆಕೆಡಿಸಿಕೊಳ್ಳಲಿಲ್ಲ. ಸಿಓಡಿ ತನಿಖೆ ನಡೆಯುತ್ತಿದೆ. ಆದರೆ ಗಣಪತಿ ಪ್ರಕರಣಕ್ಕೆ ಮಾತ್ರ ಬೇಡದಷ್ಟು ಪ್ರಚಾರ. ಎಂತಹ ವೈಚಿತ್ರ್ಯ ನೋಡಿ. ಕಲ್ಲಪ್ಪ ಅತಿ ಬಡಕುಟುಂಬದ ವ್ಯಕ್ತಿ. ಗಣಪತಿ ಅಂತಹವರಲ್ಲ. ಕೊಡಗಿನಲ್ಲಿ ಬಿಜೆಪಿ ನೆಲೆಯಿದೆ. ಅದನ್ನು ಗಟ್ಟಿಮಾಡಿಕೊಳುವ ದೃಷ್ಟಿಯಿಂದ ಬಿಜೆಪಿಯವರು ಹೋರಾಟ ಮಾಡಿದರು. ಆದರೆ ಕಲ್ಲಪ್ಪ ಪ್ರಕರಣದಲ್ಲಿ ಬಿಜೆಪಿ ತುಟಿಬಿಚ್ಚಲಿಲ್ಲ.  ಈ ಪ್ರಕರಣದಲ್ಲಿ ಮುಖ್ಯ ಆರೋಪಿಗಳೆಲ್ಲ ಹಿಂದೂ ಸಂಘಟನೆಯವರು. ಜೊತೆಗೆ ಇದರಲ್ಲಿ ಅಲ್ಲಿನ ಮಾಜಿ ಸಚಿವರೊಬ್ಬರ ಪಾತ್ರವೂ ಇದೆ ಎನ್ನುವ ಮಾಹಿತಿ ಇದೆ. ಇದನ್ನು ಮುಚ್ಚಿಕೊಳ್ಳಲು ಬಿಜೆಪಿ ಗಣಪತಿ ಪ್ರಕರಣವನ್ನು ಅತಿರಂಜಿತವಾಗಿ ಬಿಂಬಿಸಿದ್ದು ಸುಳ್ಳಲ್ಲ. ಟಿವಿ ಚಾನೆಲ್‌ನವರೂ ಸಹ ಈ ಘಟನೆಯನ್ನು ವೈಭವೀಕರಿಸಲಿಲ್ಲ.


ಮಂಗಳೂರಿನಲ್ಲಿ ಡಿವೈಎಸ್‌ಪಿಯಾಗಿದ್ದ ಎಂ. ಕೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡು 12 ದಿನವಾದ ನಂತರ ಕೊನೆಗೂ ಸಚಿವ ಕೆ. ಜೆ. ಜಾರ್ಜ್ ರಾಜೀನಾಮೆ ಸಲ್ಲಿಸಿದ್ದಾರೆ. ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನಗೇನಾದರೂ ಸಂಭವಿಸಿದಲ್ಲಿ ಅದಕ್ಕೆ ಮಾಜಿ ಗೃಹ ಸಚಿವ ಕೆ. ಜೆ. ಜಾರ್ಜ್  ಮತ್ತು ಗುಪ್ತಚರ ವಿಭಾಗ ಡಿಜಿಪಿ ಎ. ಎಂ. ಪ್ರಸಾದ್ ಹಾಗೂ ಲೋಕಾಯುಕ್ತ ಡಿಜಿಪಿ ಪ್ರಣಬ್ ಮೊಹಂತಿ ಕಾರಣರೆಂದು ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಗಣಪತಿಗೆ ಇವರೇ ಕಿರುಕುಳ ನೀಡಿದ್ದರು. ಇದನ್ನು  ಸಹಿಸಿಕೊಳ್ಳಲಾಗದೆ ಗಣಪತಿ ಆತ್ಮಹತ್ಯೆ ಮಾಡಿಕೊಂಡರೆನ್ನವುದು, ನಂತರ ನಡೆದ ಹೋರಾಟ, ವಿಧಾಸಭೆ ಕಲಾಪದಲ್ಲಿ ಪ್ರತಿಭಟನೆ... ಇವೆಲ್ಲ ಈಗ ಇತಿಹಾಸ.
ಗಣಪತಿ ಸಾವಿನ ಹಿನ್ನೆಲೆಯಲ್ಲಿ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ 12 ದಿನದಿಂದಲೂ ಒಂದಲ್ಲ ಒಂದು ರೀತಿಯ ಹೋರಾಟ ನಡೆದೇ ಇತ್ತು.  ಕೊಡಗು ಸಹಿತ ಕೆಲವೆಡೆ ಬಂದ್ ಆಚರಿಸಲಾಯಿತು. ಗಣಪತಿ ಕುಟುಂಬಸ್ಥರು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದರೂ ಅವರು ಸ್ವೀಕರಿಸಿರಲಿಲ್ಲ ಎನ್ನುವ ಆರೋಪ ಇತ್ತು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಮಡಿಕೇರಿ  ಜೆಎಂಎಫ್‌ಸಿ ನ್ಯಾಯಾಲಯಕ್ಕೆಗಣಪತಿ ಅವರ ಪುತ್ರ ನೇಹಾಲ್ ವಕಿಲರ ಮೂಲಕ  ಅರ್ಜಿ ಸಲ್ಲಿಸಿ, ಜಾರ್ಜ್ ಮತ್ತು  ಅಧಿಕಾರಿಗಳಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಚಿಸಬೇಕೆಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ನಡೆದ ವಿಚಾರಣೆಯಲ್ಲಿ ಕೋರ್ಟ್ ನೇಹಾಲ್ ಕೋರಿಕೆಯಂತೆ ಎಫ್‌ಐಆರ್ ದಾಖಲಿಸಿ ಆಗಸ್ಟ್ 5ರೊಳಗೆ ವರದಿ ಸಲ್ಲಿಸುವಂತೆ ಠಾಣಾಧಿಕಾರಿಗೆ ಸೂಚಿಸಿದೆ.
ಈ ಎಲ್ಲ ಬೆಳವಣಿಗೆಯ ನಂತರ ಜಾರ್ಜ್ ನಿನ್ನೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಸರಕಾರ ಉಳಿದಿಬ್ಬರೂ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ. ಈ ಮಧ್ಯೆ ಪ್ರಣಬ್ ಮೊಹಂತಿ ಮಡಿಕೇರಿ ನ್ಯಾಯಾಲಯದ ಆದೇಶವನ್ನು ಪಶ್ನಿಸುವುದಾಗಿ ಹೇಳಿದ್ದಾರೆ. ಈಗ ಗಣಪತಿ ಕುಟುಂಬದವರ ಒಂದು ಹಂತದ ಹೋರಾಟಕ್ಕೆ ಜಯ ಸಿಕ್ಕದಂತಾಗಿದೆ. ಜಾರ್ಜ್ ತಮ್ಮ ಮೇಲೆ ಆರೋಪ ಬಂದಾಕ್ಷಣ ರಾಜಿನಾಮೆ ಕೊಟ್ಟಿದ್ದರೆ ಇಷ್ಟೆಲ್ಲ ಪ್ರಚಾರ ಸಿಗುತ್ತಿರಲಿಲ್ಲ. ಜೊತೆಗೆ ಸರಕಾರಕ್ಕೆ ಮುಜುಗುರ, ಅವರನ್ನು ರಕ್ಷಿಸಲು ಪರದಾಟ. ವಿಧಾನಸಭೆಯಲ್ಲೂ ಗದ್ದಲ, ವಾಕ್ಸಮರ ನಡೆಯುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಸಹೋದ್ಯೋಗಿಯನ್ನು ರಕ್ಷಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡಿದ್ದರು. ಇದರಿಂದ ಪಕ್ಷಕ್ಕೆ ಮತ್ತು ಸರಕಾರದ ಘನತೆಗೆ ಧಕ್ಕೆಯಾಗಿದೆ ಎಂದೇ ಹೇಳಬಹುದು.  ನ್ಯಾಯಾಲಯದವರೆಗೆ ಹೋಗಲು ಬಿಡದೆ ಸಚಿವರು ರಾಜಿನಾಮೆ ನೀಡಿದ್ದರೆ ಅವರೂ ಸಹ ಜನಮನ ಗೆಲ್ಲಬಹುದಿತ್ತು. ಉಳಿದ ರಾಜಕಾರಣಿಗಳಿಗೆ ಒಂದು ಮೇಲ್ಪಂಕ್ತಿ ಹಾಕಿಕೊಟ್ಟಂತಾಗುತ್ತಿತ್ತು. ನ್ಯಾಯಪಾಲನೆಯನ್ನೂ  ಮಾಡಿದಂತಾಗುತ್ತಿತ್ತು.  ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಹರತಾಳು ಹಾಲಪ್ಪ ವಿರುದ್ದ ಅಕ್ರಮ ಸಂಬಂಧದ ಕುರಿತೆ  ಪ್ರಕರಣ ಹೊರಬಂದಾಗ ಅಂದೇ ಹಾಲಪ್ಪ ರಾಜಿನಾಮೆ ಕೊಟ್ಟು ಸತ್ಸಂಪ್ರದಾಯ  ಪಾಲಿಸಿದ್ದರು.
ಆದರೆ ಜಾರ್ಜ್ ತಾನು ತಪ್ಪೇ ಎಸಗಿಲ್ಲ ಎಂದು ವಾದಿಸುತ್ತಾ ನ್ಯಾಯಾಲಯ ಎಫ್‌ಐಆರ್ ಹಾಕಲು ಸೂಚಿಸಿದ ನಂತರವೇ ರಾಜಿನಾಮೆ ಕೊಟ್ಟಿದ್ದಾರೆ. ಜಾರ್ಜ್ ರಾಜಿನಾಮೆ ಕೊಡದಂತೆ ಸರ್ಕಾರ ಅವರನ್ನು ರಕ್ಷಿಸಿತ್ತು. ಜಾರ್ಜ್ ಗೆ ಹೈಕಮಾಂಡ್  ಬೆಂಬಲವೂ ಇದ್ದಿದ್ದರಿದಂ ಇಷ್ಟೆಲ್ಲ ಬೆಳವಣಿಗೆ ಕಾಣಬೇಕಾಯಿತು.  ಪ್ರಭಾವಿ ಅಥವಾ ಪ್ರಬಲ ಸಚಿವನಲ್ಲದಿದ್ದರೆ ಘಟನೆಯಾದ ದಿನವೇ ರಾಜಿನಾಮೆ ಕೊಡಬೇಕದ ಸ್ಥಿತಿ ಎ ದುರಾಗುತ್ತಿತ್ತು. ಹಾಲಪ್ಪ ಅವರಿಗೆ ಆದದ್ದೂ ಇದೇ.
ಜಾರ್ಜ್ ರಾಜಿನಾಮೆ ಕೊಡದೆ ಉಳಿಯಲು ಹಲವು ಕಾರಣಗಳಿವೆ. ಮೇಲೆ ಹೇಳಿದಂತೆ ಹೈಕಮಾಂಡ್‌ನಲ್ಲಿ ಪ್ರಭಾವ ಹೊಂದಿರುವುದರ ಜೊತೆಗೆ ಸಿದ್ದರಾಮಯ್ಯ ಅವರ ಹಠವೂ ಕಾರಣ.  ಇಲ್ಲಿ ಗೃಹ ಇಲಾಖೆಯ ಸಲಹೆಗಾರರಾದ ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರ ಪಾತ್ರವೂ ಇದೆ ಎಂಬ ಮಾತು ಕೇಳಿಬರುತ್ತಿದೆ. ಏಕೆಂದರೆ, ಆ ಇಲಾಖೆಯ ಸಲಹೆಗಾರನಾದ ಮೇಲೆ ಸಂಬಂಧಿತ ಪ್ರಕರಣಗಳಲ್ಲಿ ಹೇಗೆ ವರ್ತಿಸಬೇಕು, ಹೇಗೆ ನಿಭಾಯಿಸಬೇಕು ಎನ್ನುವ ಸಲಹೆಯನ್ನು ಅವರು ಕೊಡಬೇಕಾಗುತ್ತದೆ. ಜೊತೆಗೆ ಅವರೂ ಸಹ ಐಪಿಎಸ್ ಆಗಿರುವುದರಿಂದ ಜಾರ್ಜ್ ಅವರನ್ನು ಉಳಿಸಲು ಯತ್ನ ಮಾಡಿಬರಬಹುದೆಂಬ ಶಂಕೆ ಪ್ರಬಲವಾಗಿದೆ. ಇದನ್ನೆಲ್ಲ ಗಮನಿಸಿದಾಗ ದುರ್ಯೋಧನನ್ನು ಶಕುನಿ ಹಾಳುಮಾಡಿದ ಹಾಗೆ ಸಿದ್ದರಾಮಯ್ಯ ಅವರನ್ನು ಕೆಂಪಯ್ಯ ದಾರಿತಪ್ಪಿಸಿದರೇ ಎನ್ನುವ ಪಶ್ನೆ ಉದ್ಭವವಾಗುತ್ತದೆ.
ಜಾರ್ಜ್ ರಾಜಿನಾಮೆ ನಂತರ ರಾಜ್ಯದಲ್ಲಿ ಪ್ರತಿಪಕ್ಷಗಳು ಸುಮ್ಮನಾಗಬಹುದು. ಪ್ರಕರಣ ಕೆಲವೇ ದಿನಗಳಲ್ಲಿ  ಸದ್ದುಗದ್ದಲವಿಲ್ಲದೆ ತೆರೆಗೆ ಸರಿಯಬಹದು. ಏಕೆಂದರೆ ಸಿಓಡಿ ತನಿಖೆ ನಡೆಸುತ್ತಿದೆ, ಸೆ. 1ರೊಳಗೆ ವರದಿ ನೀಡಲು ಅದಕ್ಕೆ ಸೂಚಿಸಲಾಗಿದೆ. ಈ ಮಧ್ಯೆ ಸಿಂಎಂ ನಿವೃತ್ತ ನ್ಯಾಯಮೂರ್ತಿ ಕೇಶವ ನಾರಾಯಣ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ. ಇನ್ನೆನಿದ್ದರೂ ತನಿಖೆಗಳದ್ದೇ ದಾರಿ. ಸತ್ಯ ಯಾವುದು, ಮಿಥ್ಯ ಯಾವುದು ಎನ್ನುವುದು ತನಿಖೆಯಿಂದ ಗೊತ್ತಾಗುತ್ತದೆ.
.........................................

Monday, 18 July 2016

ಯಜಮಾನನಿಲ್ಲದ ಮನೆಗೆ ನಿರಂಜನ್ ಸಾರಥ್ಯ?



ನಿರಂಜನ್ ಜಿಲ್ಲಾ ಜೆಡಿಎಸ್ ಚುಕ್ಕಾಣಿ ಹಿಡಿಯಲು ಸನ್ನದ್ಧರಾಗಿದ್ದಾರೆ. ಲೋಕೋಪಯೋಗಿ ಇಲಾಖೆ ಮತ್ತು ಜಿಪಂನ ನಿವೃತ್ತ ಕಾರ್ಯರ್ವಾಹಕ ಇಂಜಿನೀಯರ್ ಆಗಿರುವ ಅವರು, ಮೂಲತಃ ಭದ್ರಾವತಿ ತಾಲೂಕು ಡಿ.ಬಿ.ಹಳ್ಳಿಯವರು. ನಿವೃತ್ತರಾದ ನಂತರ ರಾಜಕೀಯಕ್ಕೆ ಕಾಲಿಟ್ಟ ಅವರು, ಪ್ರಪ್ರಥಮವಾಗಿ ಎದುರಿಸಿದ್ದೇ ಚುನಾವಣೆ. ಆ ಮೂಲಕ ಒಂದಷ್ಟು ಹೆಸರು ಸಂಪಾದಿಸಿ ಈಗ ಜಿಲ್ಲೆಯ ಮಟ್ಟಿಗೆ ಅಷ್ಟೇನೂ ಅಪರಿಚಿತರಾಗಿ ಉಳಿದಿಲ್ಲ. ಸದ್ಯ ಜಿಲ್ಲಾಧ್ಯಕ್ಷರಾಗಲು ಅಭ್ಯರ್ಥಿಗಳೇ ಇಲ್ಲದ ಹಂತದಲ್ಲಿ ಎಲ್ಲ ಅರ್ಹತೆಯುಳ್ಳ ಅವರನ್ನು ನೇಮಿಸಲು ಚಿಂತನೆ ನಡೆದಿದೆ. ಜಿಲ್ಲೆಯ ಲಿಂಗಾಯತರಲ್ಲಿ ಶೇ 75ರಷ್ಟು ಸಾದರ ಲಿಂಗಾಯಿತರಿದ್ದಾರೆ. ನಿರಂಜನ್ ಸಹ ಅದೇ ಸಮುದಾಯದವರು. ಇದನ್ನೆಲ್ಲ ಲೆಕ್ಕ ಹಾಕಿ ಅವರಿಗೆ ಪಟ್ಟಾಭಿಷೇಕ ಮಾಡಲು ಸಿದ್ಧತೆ ನಡೆದಿದೆ. ಮುಂಬರುವ ವಿಧಾನಸಭೆಗೂ ಅವರನ್ನು ಜಾತಿ ಆಧಾರದಲ್ಲೇ ಕಣಕ್ಕಿಳಿಸಲು ಚಿಂತನೆ ನಡೆದಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಶಿವಮೊಗ್ಗ: ಜಿಲ್ಲಾ ಜೆಡಿಎಸ್‌ಲ್ಲಿ ಬದಲಾವಣೆಯ ಪರ್ವ ಇನ್ನೂ ಕಂಡುಬರುತ್ತಿಲ್ಲ. ರಾಜ್ಯ ಜೆಡಿಎಸ್‌ನಲ್ಲಿನ ಭಿನ್ನಮತದಿಂದ ಸುಧಾರಿಸಿಕೊಳ್ಳಲಾಗದ ವರಿಷ್ಠರು ಜಿಲ್ಲೆಗಳಲ್ಲಿ ಪಕ್ಷ  ಸಂಘಟನೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೇ ಕೆಲವು ಜಿಲ್ಲೆಗಳಲ್ಲಿ ತಮ್ಮ ಪಕ್ಷಕ್ಕೆ ನೆಲೆ ಇಲ್ಲದಿರುವುದನ್ನು ಮೊನ್ನೆ ಶಿವಮೊಗ್ಗದಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ಶಿವಮೊಗ್ಗದಲ್ಲಿ ಮೂರು ಶಾಸಕರನ್ನು ಹೊಂದಿದ್ದರೂ ಪಕ್ಷ ಸಂಘಟನೆ ಏನೂ ಇಲ್ಲ. ಈ ಶಾಸಕರು ತಮ್ಮ ಕ್ಷೇತ್ರ ಬಿಟ್ಟು ಪಕ್ಕದ ಕ್ಷೇತ್ರದಲ್ಲೂ ಜನಪ್ರಿಯರಾಗಿಲ್ಲ. ಇಡೀ ಜಿಲ್ಲೆಯನ್ನು ನಿಭಾಯಿಸುವ ಒಬ್ಬ ನಾಯಕನೂ ಇಲ್ಲ. ಈ ಮಧ್ಯೆ ವಿಧಾನ ಪರಿಷತ್‌ಗೆ ಅಭ್ಯರ್ಥಿಯಾಗಿದ್ದ ನಿರಂಜನ್ ಜಿಲ್ಲಾಧ್ಯಕ್ಷರಾಗಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್  ಪಕ್ಷದ ಸಮರ್ಥ ನಾಯಕತ್ವ ವಹಿಸಿದ್ದರು. ಆದರೆ ಅವರು ಎರಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡ ಬಳಿಕ ಹಿಂದಡಿ ಇಟ್ಟಂತಿದೆ. ಈಗ ಅವರೂ ಸಂಘಟನೆಯಿಂದ ದೂರವುಳಿದಿದ್ದಾರೆ. ಜೊತೆಗೆ ಶಿವಮೊಗ್ಗವನ್ನು ಹೆಚ್ಚುಕಡಿಮೆ ಬಿಟ್ಟು ಬೆಂಗಳೂರು ನಗರ ಸೇರಿ ಅಲ್ಲಿ ತಮ್ಮ ಉದ್ಯಮದಲ್ಲಿ ಮತ್ತು ರಾಜಕೀಯದಲ್ಲಿ ತಲ್ಲೀನರಾಗಿದ್ದಾರೆ. ಇದರಿಂದ ಜೆಡಿಎಸ್‌ಗ ಜಿಲ್ಲೆಯಲ್ಲಿ  ಸಂಘಟನೆಯ ಕೊರತೆ ಎದುರಾಗಿದೆ. ಸಮರ್ಥ ನಾಯಕರಿಲ್ಲದೆ ಪಕ್ಷ ಸೊರಗುತ್ತಿದೆ.
ಶಾಸಕ ಮಧು ಬಂಗಾರಪ್ಪ ಜಿಲ್ಲೆಗೆ ತಾನೇ ನಾಯಕ ಎಂಬಂತೆ ಮಾತನಾಡುತ್ತಿದ್ದಾರೆ. ಆದರೆ ಸೊರಬ ಬಿಟ್ಟರೆ ಅವರ ಜನಪ್ರಿಯತೆ ಏನಿಲ್ಲ. ಶಿವಮೊಗ್ಗ ನಗರದಲ್ಲಿ ಜೆಡಿಎಸ್‌ಗೆನಾಯಕರಿದ್ದಾರೆ. ಎರಡನೆಯ ತಲೆಮಾರಿನ ಯುವಕರಿದ್ದಾರೆ. ಅದರದ್ದೇ ಆದ ಕಾರ್ಯಕರ್ತರಿದ್ದಾರೆ. ಆದರೆ ಅವರನ್ನು ಸಂಘಟಿಸುವವರಿಲ್ಲ. ಯಜಮಾನನಿಲ್ಲದ ಮನೆಯಂತಾಗಿದೆ ಪಕ್ಷ. ಪಾಲಿಕೆ ಮತ್ತು ಜಿಪಂ, ತಾಪಂನಲ್ಲಿ ಆ ಪಕ್ಷದ ಸದಸ್ಯರಿದ್ದಾರೆ. ಇದರಿಂದ ಲಾಭವನ್ನು ಪಡೆದುಕೊಳ್ಳುವ ಯತ್ನವನ್ನು ಆ ಪಕ್ಷದವರು ಮಾಡಬಹುದಿತ್ತು. ಆದರೆ ನಾಯಕರೇ ಇಲ್ಲದೆ ಸೊರಗುತ್ತಿದೆ. ಇದ್ದ ಕಾರ್ಯಕರ್ತರನ್ನೂ ಅದು ಕಳೆದುಕೊಳ್ಳುತ್ತಿದೆ. ಬಹುತೇಕ ಕಾರ್ಯಕರ್ತರು ಅನ್ಯ ಪಕ್ಷಗಳತ್ತ ವಾಲುತ್ತಿದ್ದಾರೆ. ಕೆಲವರು ರಾಜಕೀಯದಿಂದ ತಟ್ಸತರಾಗಿದ್ದಾರೆ. ಇದಕ್ಕೆಲ್ಲ ಕಾರಣ ರಾಜ್ಯ ನಾಯಕರ ನಿರ್ಲಕ್ಷ್ಯ.
 ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ ಮತ್ತು ಭದ್ರಾವತಿ ಶಾಸಕ ಎಂ. ಜೆ. ಅಪ್ಪಾಜಿ ಗೌಡ ಅವರಿಗೆ ತಮ್ಮ ಕ್ಷೇತ್ರ ಬಿಟ್ಟು ಉಳಿದೆಡೆಯ ಪರಿಚಯವಿಲ್ಲ. ಶಾಸಕ ಮಧು ಬಂಗಾರಪ್ಪ ಅವರು ಸೊರಬದಿಂದ ಹೊರಬರುವ ಯಾವುದೇ ಲಕ್ಷಣವನ್ನು ಮೈಗೂಡಿಸಿಕೊಂಡಿಲ್ಲ. ಏಕೆಂದರೆ, ಇತ್ತೀಚಿನ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಅವರ ಅಭ್ಯರ್ಥಿಗಳು ಮಹತ್ತರ ಸಾಧನೆ ಮಾಡಿರುವುದರಿಂದ ಅವರು ಅದರಲ್ಲೇ ಮೈಮರೆತಿದ್ದಾರೆ. ಈ ಮೂವರೂ ಜಿಲ್ಲೆಯ ನಾಯಕತ್ವ ವಹಿಸುವ ಜನಪ್ರಿಯತೆಯನ್ನು ಬೆಳೆಸಿಕೊಂಡಿಲ್ಲ. ಈ ಎಲ್ಲ ಬೆಳವಣಿಗೆಯಿಂದ ಜಿಲ್ಲೆಯಲ್ಲಿ ಜೆಡಿಎಸ್ ಈ ಮೂವರಿಗೇ ಸೀಮಿತವಾಗಿದೆ.
ಈ ವರ್ಷದ ಜನವರಿಯಲ್ಲಿ ಜರುಗಿದ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಜೆಡಿಎಸ್ ನಿವೃತ್ತ ಇಂಜಿನೀಯರ್ ನಿರಂಜನ್ ಎನ್ನುವವರನ್ನು ಕರೆತಂದು ಕಣಕ್ಕಿಳಿಸಿ ಸಾಧನೆ ಮಾಡಿದೆ. ಅವರು ಎರಡನೆಯ ಸ್ಥಾನಕ್ಕಿಳಿದರೂ ಸಹ ಸಾಕಷ್ಟು ಮತ ಗಳಿಸಿದ್ದರು. ಅದೇ ರೀತಿ ಲೋಕಸಭೆ ಚುನಾವಣೆಗೂ ಗೀತಾ ಶಿವರಾಜಕುಮಾರ್ (ಮಧು ಬಂಗಾರಪ್ಪ ಅವರ ಸಹೋದರಿ) ಅವರನ್ನು ಕಣಕ್ಕಿಳಿಸಿ ಎರಡನೆಯ ಸ್ಥಾನ ಕಂಡಿದ್ದರು. ಜಿಲ್ಲೆಯ ನಾಯಕರನ್ನು ಅಲಕ್ಷಿಸಿ, ಹೊರಗಿನಿಂದ ಅದರಲ್ಲೂ ಹಣವಂತರಿಗೇ ಮಣೆ ಹಾಕುವ ಜಾಯಮಾನವನ್ನು ಜೆಡಿಎಸ್ ಜಿಲ್ಲೆ ಮತ್ತು ರಾಜ್ಯದೆಲ್ಲೆಡೆ ಬೆಳೆಸಿಕೊಂಡಿರುವುದು ಆ ಪಕ್ಷದ ಏಳಿಗೆಗೆ ಅಡ್ಡಿಯಾಗಿದೆ. ಪರಿಸ್ಥಿತಿ ಎಲ್ಲಿಯವರೆಗೆ ತಲುಪಿದೆ ಎಂದರೆ, ಚುನಾವಣೆ ಬಂತೆಂದರೆ, ಯಾರೋ ಹೊರಗಿನ ಹಣವಂತರು ಜೆಡಿಎಸ್ ಅಭ್ಯರ್ಥಿ ಎಂದು ಜನ ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಬಂದು ನಿಂತಿದೆ.