Thursday, 8 February 2018

 ಗ್ಯಾಸ್ ವಿತರಕರ ವಿರುದ್ದ ಅಧಿಕಾರಿಗಳ ಮೌನ
  ಹೆಚ್ಚುವರಿ 50 ರೂ ಪಡೆದರೂ ಕ್ರಮವಿಲ್ಲ





ಅಡುಗೆ ಅನಿಲ ವಿತರಕರು ಮೊದಲ 5 ಕಿ. ಮೀ ವರೆಗೆ ಯಾವುದೇ ಶುಲ್ಕವಿಲ್ಲದೆ ಸಿಲಿಂಡರ್ ಪೂರೈಸಬೇಕು. ಆನಂತರ ಪ್ರತಿ ಒಂದು ಕಿ. ಮೀಗೆ ಒಂದೂವರೆ ರೂ. ನಂತೆ ಶುಲ್ಕ ವಿಧಿಸಬೇಕು. ಇದನ್ನು ಗ್ರಾಹಕರು ಮೊದಲು ಅರಿತುಕೊಳ್ಳಬೇಕಿದೆ. ಆನಂತರ ಪ್ರಶ್ನಿಸಬೇಕಿದೆ. ಪ್ರಶ್ನಿಸುವ ಮನೋಭಾವ ಪ್ರತಿ ಮನೆಯಿಂದ ಆರಂಭವಾದರೆ ಇದನ್ನು ನಿಲ್ಲಿಸಲು ಸಾಧ್ಯ. ಜೊತೆಗೆ ಅನಿವಾರ್ಯಾವಾದರೆ ಸಂಘಟನೆಗಳು, ಸಾರ್ವಜನಿಕರು ಧರಣಿ ಹೂಡಿಯಾದರೂ ಈ ಶುಲ್ಕ ಪಡೆಯುವ ಪದ್ದತಿಗೆ ಪೂರ್ಣವಿರಾಮ ಹಾಕಬೇಕಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆಯಾ ತಾಲೂಕಿನ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರು ಕೂಡಲೇ ಕ್ರಮ ಕೈಗೊಳ್ಳಬೇಕಿದೆ.


ಶಿವಮೊಗ್ಗ ಜಿಲ್ಲೆಯಾದ್ಯಂತ ಅಡುಗೆ ಅನಿಲ ಸಿಲಿಂಡರ್ ವಿತರಕರು ವಿತರಣೆಯ ವೇಳೆ ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ಪಡೆಯುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಇದೇ ವಿಚಾರ ಮೊನ್ನೆ ಜರುಗಿದ ಜಿಪಂ ಸಭೆಯಲ್ಲೂ ಚರ್ಚೆಗೆ ಒಳಗಾಗಿದೆ. ಆದರೆ ಸಾರ್ವಜನಿಕರು ಮತ್ತು ಸಂಘಟನೆಗಳು ಮಾತ್ರ ಈ ಬಗ್ಗೆ ಮೌನ ತಾಳಿರುವುದು ವಿಶೇಷವಾಗಿದೆ.
ಅಡುಗೆ ಅನಿಲ ಸಿಲಿಂಡರ್ ವಿತರಣೆಯಲ್ಲಿ ನಿಗದಿತ ದರಕ್ಕಿಂತ 50 ರಿಂದ 100ರೂ.ಗಳನ್ನು ಸಂಬಂಧಿಸಿದ ಏಜೆನ್ಸಿಯವರು ಜನಸಾಮಾನ್ಯರಿಂದ ವಸೂಲಿ ಮಾಡುತ್ತಿದ್ದಾರೆ.  ಈ ರೀತಿ ವಸೂಲಿ ಮಾಡಬೇಕೆಂದು ಯಾವ ಅಡುಗೆ ಅನಿಲ ಕಂಪೆನಿಯವರೂ ಹೇಳಿಲ್ಲ. ಪ್ರತಿ ಮನೆಯ ಬಾಗಿಲಿಗೂ ತಲುಪಿಸುವ ಜವಾಬ್ದಾರಿಯ ಜೊತೆಗೆ ಕಂಪನಿ ನಿಗದಿಪಡಿಸಿದ ದರವನ್ನು ಮಾತ್ರ ವಸೂಲು ಮಾಡಬೇಕು. ಆದರೆ ಸಿಲಿಂಡರ್ ವಿತರಕರು ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಈ ಬಗ್ಗೆ ವಿತರಕರು ಏಕೆ ಗಮನಹರಿಸುತ್ತಿಲ್ಲ ಎನ್ನುವುದು ಬಹುಮುಖ್ಯ ಪ್ರಶ್ನೆ.
ಕೇವಲ ಒಂದು ಸಿಲಿಂಡರ್‌ಗೆ 50 ರೂ ಪಡೆದರೂ ದಿನವೊಂದಕ್ಕೆ ಲೋಡ್‌ಗಟ್ಟಲೆ ಸಿಲಿಂಡರ್ ವಿತರಿಸುವ ಏಜೆನ್ಸಿಯವರು ಎಷ್ಟು ಹಣ ಗಳಿಸಬಹುದೆನ್ನುವುದುನ್ನು ಯೋಚಿಸಬೇಕಿದೆ. ಇದನ್ನೇ ವಾರ್ಷಿಕವಾಗಿ ಲೆಕ್ಕಹಾಕಿದರೆ ಎಷ್ಟೋ ಲಕ್ಷ ರೂ. ಪುಕ್ಕಟೆಯಾಗಿ ಅವರಿಗೆ ಲಾಭವಾಗುತ್ತದೆ.
ದಿನಸಿ ಅಂಗಡಿ, ತರಕಾರಿ ಅಂಗಡಿಯಲ್ಲಿ ಚೌಕಾಸಿ ಮಾಡುವ ಸಾರ್ವಜನಿಕರು ಈ ಬಗ್ಗೆ ತುಟಪಿಟಕ್ಕೆನ್ನುತ್ತಿಲ್ಲ. ಏಕೆ ಎನ್ನುವುದೇ ಪ್ರಶ್ನೆಯಾಗಿದೆ. ಎಲ್ಲಿಯವರೆಗೆ ಸಾರ್ವಜನಿಕರು ಇಂತಹ ಅನ್ಯಾಯದ ವಿರುದ್ದ ಪ್ರತಿಭಟಿಸುವುದಿಲ್ಲವೋ ಅಲ್ಲಿಯವರೆಗೆ ಅನ್ಯಾಯ ಮುಂದುವರೆಯುತ್ತಲೇ ಇರುತ್ತದೆ. ಕೆಲವು ಸಂಘಟನೆಗಳು ಬೇಡವಾದ, ತಮಗೆ ಸಂಬಂಧಿಸದ ಅಥವಾ ರಾಜಕೀಯ ವಿಷಯಗಳ ಬಗ್ಗೆ ಹೋರಾಡುತ್ತಾರೆ. ಆದರೆ ಸಾರ್ವಜನಿಕ ಸಮಸ್ಯೆಯನ್ನು ಏಕೆ ಕೈಗೆತ್ತಿಕೊಳ್ಳುತ್ತಿಲ್ಲ. ಏಜೆನ್ಸಿಯವರ ಶೋರೂಮ್ ಮುಂದೆ ಧರಣಿ ಮಾಡಿ ಇದನ್ನು ಪ್ರತಿಭಟಿಸುವ ಕೆಲಸವಾಗಬೇಕಿದೆ.
ಇಲ್ಲಿಯವರೆಗೆ ಯಾವ ಗ್ರಾಹಕನೂ ಇದನ್ನು ಧೈರ್ಯವಾಗಿ ಪ್ರಶ್ನಿಸಿಲ್ಲ. ಏಕೆ ಗೊತ್ತೇ? ಪ್ರಶ್ನ್ನಿಸಿದವರಿಗೆ ಸಕಾಲದಲ್ಲಿ ಸಿಲಿಂಡರ್ ತಲುಪಿಸುವುದಿಲ್ಲ. ಇಲ್ಲಸಲ್ಲದ ನೆವ ಹೇಳಿ ತೊಂದರೆ ಕೊಡುತ್ತಾರೆ. ಇಂತಹ ಬಲಿಷ್ಠ ಅನಿಲ ವಿತರಕರ  ವಿರುದ್ದ ಜನರು ಇನ್ನಾದರೂ ಪ್ರತಿಭಟಿಸಬೇಕಿದೆ. ಪ್ರತಿ ಗ್ರಾಹಕ ವರ್ಷಕ್ಕೆ ಕನಿಷ್ಠ 10 ಸಿಲಿಂಡರ್ ಪಡೆದರೂ ಕನಿಷ್ಟ 500 ರೂ. ವನ್ನು ಪುಕ್ಕಟೆಯಾಗಿ ಏಜೆನ್ಸಿಯವರಿಗೆ ಕೊಟ್ಟಂತಾಗುತ್ತದೆ. ಇದನ್ನೆಲ್ಲ ಕೇಳುವವರಿಲ್ಲವೇ?
ಶಿವಮೊಗ್ಗ ನಗರದಲ್ಲೇ ಸುಮಾರು 8 ಗ್ಯಾಸ್ ಏಜೆನ್ಸಿಗಳಿವೆ. ಇವು ಕೂಡಲೇ ಇಂತಹ ಅನಧಿಕೃತ ಶುಲ್ಕ ಪಡೆಯುವುದನ್ನು ನಿಲ್ಲಿಸಬೇಕಿದೆ. ಜೊತೆಗೆ ಸಾರ್ವಜನಿಕವಾಗಿ ಹೇಳಿಕೆ ಕೊಟ್ಟು ಯಾರೂ ಹೆಚ್ಚುವರಿ ಸಾಗಾಣಿಕೆ ವೆಚ್ಚ ಕೊಡಬಾರದೆಂದು ಪ್ರಚುರಪಡಿಬೇಕು. ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಇದನ್ನು ತಡೆಗಟ್ಟುವ ಕೆಲಸವನ್ನು ಮಾಡಬೇಕಿದೆ.
ಜಿಪಂ ಸಭೆಯಲ್ಲಿ ಈ ಬಗ್ಗೆ ಸಮರ್ಪಕ ಉತ್ತರವನ್ನು ಕೊಡದೆ ಅಧಿಕಾರಿಗಳು ನುಣುಚಿಕೊಂಡಿದ್ದಾರೆ. ಕಾಯಿದೆ ಇದೆ ಎಂದು ಹೇಳುವವರು ಅದನ್ನು ಅನುಷ್ಠಾನಕ್ಕೆ ತರುವಂತೆ ನೋಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಏಜೆನ್ಸಿಗಳ ಪರ ಕೆಲಸ ಮಾಡುತ್ತಾರೆ ಎಂಬ ಸಾರ್ವಜನಿಕರ ಆರೋಪಕ್ಕೆ ಇನ್ನಷು ಪುಷ್ಠಿ ಬಂದಂತಾಗುತ್ತದೆ.

published on Feb-5/2018
 ......................................

No comments:

Post a Comment