Friday, 9 February 2018

ಮರೆಯಲಿ ನಿನ್ನ ಹ್ಯಾಂಗ?



ಹಳೆಯ ಸಿನಿಮಾ ಗೀತೆಗಳಿಗೆ 50 ವರ್ಷ ದಾಟಿದ್ದರೂ ಇಂದಿಗೂ  ಅವು ಆಸಕ್ತರ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ಸುಮಾರು 60,70,80ರ ದಶಕದವರೆಗೆ ಸಿನಿಮಾ ಗೀತೆಗಳಿ.ಗೆ ಇದ್ದ ಜನಪ್ರಿಯತೆ ಇಂದಿನ ಹಾಡಿಗಿಲ್ಲ. ಅಂದಿನ ಹಾಡು ಇಂದಿಗೂ ಗುನುಗುನಿಸಲ್ಪಡುತ್ತದೆ. ಕೇಳುವಾಗ ನಮಗರಿವಿಲ್ಲದಂತೆ ಕೈಕಾಲುಗಳು ಅಲ್ಲಾಡುತ್ತವೆ. ಎಂತಹ ಕಂಠಸಿರಿ, ಎಂತಹ ಚಿತ್ತಾಕರ್ಷಕ ಸಂಗೀತ, ಎಂತಹ ಭವ್ಯ ಅರ್ಥ. ಇಂತಹ ಅಪೂರ್ವ ‘ಗಾನಯಾನವನ್ನು ನಗರದ ನಾಗರಿಕರಿಗೆ ವಾರ್ತಾ ಇಲಾಖೆ ಉಣಬಡಿಸಿತು 




ಸುಮಾರು 60ರಿಂದ 80ರ ದಶಕದ ಕನ್ನಡ ಚಲನಚಿತ್ರದ ಗೀತೆಗಳು ಇಂದಿಗೂ ಹಸಿರಾಗಿ ಜನರ ಮನದಲ್ಲಿ ನೆಲೆಸಿವೆ. ಆ ಕಾಲದಲ್ಲಿ ಅವುಗಳನ್ನು ಆಕಾಶವಾಣಿಯಲ್ಲಿ ಮಾತ್ರ ಕೇಳುವ ಅವಕಾಶವಿತ್ತು. ಹಾಗಾಗಿ ಚಲನಚಿತ್ರಗೀತೆ ಪ್ರಸಾರವಾಗುವ ಸಮಯದಲ್ಲಿ ಆಸಕ್ತರು ರೇಡಿಯೋವನ್ನು ಆನ್ ಮಾಡಿಡುತ್ತಿದ್ದರು. ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತಿತ್ತು.
ಇಂದು ಅದೇ ಹಾಡುಗಳನ್ನು ಗಾಯಕರ ಬಾಯಲ್ಲಿ ಕೇಳಬಹುದಾಗಿದೆ. ಎಸ್.ಪಿ ಬಾಲಸುಬ್ರಹ್ಮಣ್ಯಂ, ರಾಜಕುಮಾರ್, ಪಿ. ಸುಶೀಲಾ, ಬಾಲಮುರಳಿ ಕೃಷ್ಣ, ಘಂಟಸಾಲಾ, ಎಸ್. ಜಾನಕಿ, ಪಿ. ಬಿ. ಶ್ರೀನಿವಾಸ್, ಮೊದಲಾದವರು ಹಾಡಿರುವ ಈ ಗೀತೆಗಳು ಇಂದಿಗೂ ನೆನಪಾದಾಗ ಗುನುಗುನಿಸಲ್ಪಡುತ್ತಿವೆ. ಅಂದರೆ ಅವುಗಳಲ್ಲಿರುವ ಲಯ, ಅರ್ಥ, ಸುಮಧುರತೆ ಎಂತಹವರನ್ನೂ ಮೋಡಿ ಮಾಡುವ ಶಕ್ತಿಯನ್ನು ಹೊಂದಿದೆ ಎನ್ನಬಹುದು.
ಶಿವಮೊಗ್ಗದ ಸರ್ಕಾರಿ ನೌಕರರ ಕಚೇರಿಯ ಸಭಾಂಗಣದಲ್ಲಿ ಫೆ. 8ರಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ಏರ್ಪಡಿಸಿದ್ದ ‘ಗಾನಯಾನ’ ಹಳೆಯ ಹಾಡುಗಳನ್ನು ಮತ್ತೆ ಮೆಲುಕು ಹಾಕುವ ಹಾಗೂ ಸುಮಾರು ಎರಡು ಗಂಟೆಗಳ ಕಾಲ ಸಂಸಾರದ ಹೊಯ್ದಾಟವನ್ನೆಲ್ಲ ದೂರೀಕರಿಸುವ,  ಸುಮಧುರತೆಯನ್ನು ಆಸ್ವಾದಿಸುವ ಅವಕಾಶ ಕಲಿಸಿತು.
ಬೆಂಗಳೂರಿನ ಕಲಾನಮನ ಸಾಂಸ್ಕೃತಿಕ ಪ್ರತಿಷ್ಠಾನ ತಂಡದವರು ಪ್ರಸ್ತುತಪಡಿಸಿದ ಈ ಕಾರ್ಯಕ್ರಮ ನೆರೆದಿದ್ದವರನ್ನು ತಣಿಸುವಲ್ಲಿ ಸಫಲವಾಯಿತು. ತಂಡದ ಗಾಯಕರಾದ ನಾಗಚಂದ್ರಿಕಾ ಭಟ್, ದಾಕ್ಷಾಯಿಣಿ ನಾಗರಾಜ್, ಶ್ರೀನಿವಾಸಮೂರ್ತಿ ಮತ್ತು ಉದಯ್ ಅಂಕೋಲಾ ಸುಮಧುರ ಕಂಠದಲ್ಲಿ ಹಳೆಯ ಹಾಡುಗಳನ್ನು ಅವುಗಳ ಧಾಟಿಯಲ್ಲೇ ಎದೆ ತುಂಬಿ ಹಾಡಿ ಮನರಂಜಿಸಿದರು.
ವಿಶೇಷವೆಂದರೆ, ಇಲ್ಲಿ ಸಿಳ್ಳೆ ಹೊಡೆಯುವವರಿರಲಿಲ್ಲ, ಕುಣಿಯುವವರಿರಲಿಲ್ಲ. ಏಕೆಂದರೆ ಈ ಹಾಡುಗಳನ್ನು ಆಲಿಸಲು ಬಂದವರೆಲ್ಲ ಬಹುತೇಕ ಹಳೆಯ ಹಾಡುಗಳ ರಸಾಸ್ವಾದನೆಗೆ ಆಗಮಿಸಿದವರಾಗಿದ್ದರು. ಅವುಗಳ ಪ್ರಿಯರೂ ಆಗಿದ್ದರು. ಆದ್ದರಿಂದ ಚಪ್ಪಾಳೆಯೊಂದೇ ಅಲ್ಲಿ ಹೆಚ್ಚಿನ ಸದ್ದು ಮಾಡುತ್ತಿತ್ತು.
ಪ್ರೇಕ್ಷಕರು ಕುಳಿತಲ್ಲಿಯೇ ಅವರಿಗೆ ಅರಿವಿಲ್ಲದಂತೆ ತಲೆದೂಗುತ್ತಿದ್ದರು, ಕೈಕಾಲುಗಳು ಸಂಗೀತದ ನಿನಾದಕ್ಕೆ ಸ್ಪಂದಿಸುತ್ತಿದ್ದವು, ಹಾಡಿನಲ್ಲೇ ತನ್ಮಯರಾಗಿ, ಅವುಗಳನ್ನು ಆಸ್ವಾದಿಸಿದರು. 60, 70 ಮತ್ತು 80ರ ದಶಕದ ವರೆಗಿನ ಗೀತೆಗಳೆಲ್ಲ ಈ ರೀತಿ ಸಂಗೀತದ ಹುಚ್ಚು ಹಿಡಿಸುವಂತಹವಾಗಿದ್ದರಿಂದ, ಅವುಗಳಿಗೆ ವಿಶೇಷ ಮಹತ್ವವಿತ್ತು, ವಿಶೇಷ ಅರ್ಥವಿತ್ತು. ಮತ್ತೆ ಮತ್ತೆ ಕೇಳಬೇಕೆನಿಸುತ್ತಿತ್ತು. ಇವುಗಳಲ್ಲಿ ನವರಸಗಳು ತುಂಬಿರುತ್ತಿದ್ದವು. ಎಷ್ಟು ಸೊಗಸಾಗಿರುತ್ತಿದ್ದವೆಂದರೆ ಹತ್ತಾರು ಬಾರಿ ಅದನ್ನೇ ಕ್ಯಾಸೆಟ್‌ನಲ್ಲಿ ರಿವೈಂಡ್ ಮಾಡಿ ಕೇಳುವವರೂ ಇದ್ದರು. ಗೊತ್ತಿಲ್ಲದಂತೆ ತನ್ಮಯರಾಗುತ್ತಿದ್ದರು. ಸೊಬಗು, ಸೊಗಡಿನಿಂದ ಕೂಡಿರುತ್ತಿದ್ದವು.
ಇತೀಚಿನ ವರ್ಷಗಳಲ್ಲಿ ಈ ಹಳೆಯ ಹಾಡುಗಳನ್ನು ಕೇಳುವ ಜನರು ಹೆಚ್ಚುತ್ತಿದ್ದಾರೆ ಎನ್ನುವುದಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು. ಟಿವಿಯಲ್ಲಿ ವಿವಿಧ ಹೆಸರಿನಲ್ಲಿ ಇಂತಹ ಹಾಡುಗಳನ್ನು ಪ್ರಸಾರಮಾಡಲಾಗುತ್ತಿದೆ. ಸ್ಪರ್ಧೆಯ ಹೆಸರಿನಲ್ಲಿ ಮಕ್ಕಳಿಂದ ಹಾಡಿಸಲಾಗುತ್ತಿದೆ. ಇದರಿಂದಾಗಿ ಇನ್ನಷ್ಟು ಇದರ ಕಂಪು ಉಳಿದಿದೆಯೇನೋ. ರೇಡಿಯೋ ಮೂಲೆಗುಂಪಾಗಿರುವುದರಿಂದ ಈಗ ಮೊಬೈಲ್‌ನಲ್ಲಿ ಸಂಗ್ರಹಿಸಿಟ್ಟುಕೊಂಡು ಅದರ ಪ್ರಿಯರು ಕೇಳುತ್ತಿದ್ದಾರೆ. ಒಂದಷ್ಟು ರಸನಿಮಿಷದ ಅವಕಾಶ ಸಿಗುವಂತಾಗಿದೆ. ಜೊತೆಗೆ ವಿವಿಧ ಸಂಗೀತ ತಂಡದವರು, ಗಾಯಕರು ಇಂತಹ ಗೀತೆಗಳನ್ನು ಹಾಡುತ್ತಿರುವುದರಿಂದ ಅವು ಎಂದೂ ಮರೆಯದ ಹಾಡಾಗಿರುವುದು ಸುಳ್ಳಲ್ಲ.
ನಿನ್ನೆಯ ‘ಗಾನಯಾನ’  ಕಾರ್ಯಕ್ರಮದಲ್ಲಿ ಗಾಯಕರು ಹಾಡಿದ ಎಲ್ಲಾ ಹಾಡುಗಳು ಪ್ರೇಕ್ಷಕರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದವು. ಕೊನೆಕೊನೆಗೆ ಕೆಲವು ಹಳೆಯ ಹಾಡುಗಳನ್ನು ಹಾಡುವಂತೆ ಮನವಿ ಸಹ ಸಲ್ಲಿಸಲಾಯಿತು. ಅವುಗಳನ್ನು ಕೇಳಿ ಖುುಷಿಪಟ್ಟರು. ಕಾರ್ಯಕ್ರಮದ ಅಂತ್ಯದವರೆಗೂ ಜನಸಾಗರವಿತ್ತು. ಹಳೆಯ ಹಾಡುಗಳ ವೈಭವ ಮರುಕಳಿಸುವಂತೆ ಮಾಡಿದ  ಗಾನಯಾನ ಇದಾಗಿತ್ತು. ಮೆಚ್ಚಿನ ಗೀತೆಗಳ ನಾದಯಾನದಲ್ಲಿ ಸಾರ್ವಜನಿಕರು ಮಿಂದೆದ್ದರು.
Published on 9.2.2018
............................................  

No comments:

Post a Comment