Thursday, 8 February 2018



ಮಂಗನ ಕಾಯಿಲೆ ನಿರ್ಮೂಲನೆ ಎಂದು?


ಮಂಗನ ಕಾಯಲೆ ಬಗ್ಗೆ ಹತ್ತಾರು ಸಭೆ ನಡೆಯುತ್ತದೆ. ಆದರೆ ಫಲಿತಾಂಶ ಶೂನ್ಯ. ಕಾಡಿಗೆ ಹೋಗಬೇಡಿ ಎಂಬ ಪುಕ್ಕಟೆ ಸಲಹೆಯನ್ನು ಅಧಿಕಾರಿಗಳು  ನೆನಪಿಟ್ಟು ಪ್ರತಿವರ್ಷ ಕೊಡುತ್ತಿದ್ದಾರೆ. ಇದು ಸರಿಯಾದುದೇ ಆದರೂ, ಜನರು ಕಾಡಿಗೆ ಹೋಗದೆ ಹಳ್ಳಿಯಲ್ಲಿ ಜೀವನ ನಡೆಯುವುದಿಲ್ಲ. ಪ್ರತಿಯೊಂದಕ್ಕೂ ಕಾಡನ್ನೇ ಆಶ್ರಯಿಸುತ್ತಾರೆ. ಮನೆಯ ಸುತ್ತಮುತ್ತವೇ ಕಾಡಿರುತ್ತದೆ ಎನ್ನುವುದು ನಗರದ ಕಾಂಕ್ರೀಟ್ ಕಾಡಿನಲ್ಲಿರುವವರಿಗೆ ಅರ್ಥವೇ ಆಗುತ್ತಿಲ್ಲ.



ಪ್ರತಿವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಮಂಗನ ಕಾಯಿಲೆ ಬಗ್ಗೆ ವರದಿಗಳು ಆರಂಭವಾಗುತ್ತವೆ. ಚಳಿಗಾಲ ಮುಗಿಯುತ್ತಿದ್ದಂತೆಯೇ ಇದರ ಪ್ರಮಾಣ ಹೆಚ್ಚುತ್ತಿದೆ. ಬಿಸಿಲು ಧಗಧಗಿಸುವ ವೇಳೆ ಇನ್ನಷ್ಟು ಉಲ್ಬಣಿಸಿರುತ್ತದೆ. ಇಷ್ಟರ ಮಧ್ಯೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಹತ್ತಾರು ಸಭೆ ನಡೆದಿರುತ್ತದೆ. ಕೇವಲ ಸಭೆ ನಡೆಸಿ ಜಾಗೃತಿ ಮೂಡಿಸುವುದಷ್ಟೇ ಈಗಿನ ಕೆಲಸವಾಗಿದೆಯೇ ವಿನಾ ರೋಗ ನಿರ್ಮೂಲನೆಗೆ ಯಾವ ಸರ್ಕಾರಗಳೂ ಮುಂದಾಗದಿರುವುದು ಬೇಸರದ ವಿಚಾರ.
ಮಂಗನ ಕಾಯಿಲೆ 1957ರಲ್ಲಿ ಮೊಟ್ಟಮೊದಲ ಬಾರಿಗೆ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಪತ್ತೆಯಾಗಿತ್ತು. ಅಲ್ಲಿಂದೀಚೆಗೆ ಇದರ ಬಗ್ಗೆ ಸಾಕಷ್ಟು ವಿದೇಶಿ ತಜ್ಞರು ಸಹ ಬಂದು ಚರ್ಚಿಸಿ ಹೋದರು. ಆದರೆ ಸಂಶೋಧನಾಲಯವನ್ನು ಸ್ಥಾಪಿಸಲು ಯಾರೂ ಮುಂದಾಗಲಿಲ್ಲ. ಕೇವಲ ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದಷ್ಟೇ ಸದ್ಯದ ಕೆಲಸವಾಗಿದೆ. ಈ ಅರಿವನ್ನು ಅಧಿಕಾರಿಗಳು ಮೂಡಿಸಬೇಕೇಂದೇನಿಲ್ಲ. ಯಾವ ರೀತಿ ರಕ್ಷಿಸಿಕೊಳ್ಳಬೇಕೆನ್ನುವುದು ಜನರಿಗೆ ಚೆನ್ನಾಗಿ ಗೊತ್ತಿದೆ.
ಇಷ್ಟೊಂದು ವೈಜ್ಞಾನಿಕವಾಗಿ ಮುಂದುವರೆದಿರುವಾಗ ಈ ರೋಗಕ್ಕೆ ಇನ್ನೂ ಮದ್ದು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇನ್ನೂ ವಿಚಿತ್ರವೆಂದರೆ, ಇದರ ಸಂಶೋದನಯೆನ್ನು ಜಿಲ್ಲೆಯಲ್ಲಿ ನಡೆಸದೆ ಪುಣೆಯಲ್ಲಿ ನಡೆಸಲಾಗುತ್ತಿದೆ. ಸತ್ತ ಮಂಗನ ಬಗ್ಗೆ ಸಂಶೋಧನೆ ಪುಣೆಯಲ್ಲಾದರೆ ಅದರ ವರದಿ ಬರಲು ತಿಂಗಳೇ ಕಳೆಯುತ್ತದೆ. ಅಲ್ಲಿಯವರೆಗೆ ಇದರ ಬಾಧೆಗೆ ಒಳಗಾದವರ ಗತಿ ಏನು, ಈ ಬಗ್ಗೆ ಜನಪ್ರತಿನಿಧಿಗಳು ಏಕೆ ಗಂಭೀರವಾಗಿ ಯೋಚಿಸುತ್ತಿಲ್ಲ. ಇದನ್ನೆಲ್ಲ ನೋಡಿದಾಗ ಈವರೆಗಿನ ಸರ್ಕಾರಗಳು, ಮಲೆನಾಡಿನ ರಾಜಕಾರಣಿಗಳು ಇದರ ನಿರ್ಮೂಲನೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಗೋಚರವಾಗುತ್ತದೆ.
ಪೋಲಿಯೋ ನಿರ್ಮೂಲನೆ ಮಾಡಿಯಾಗಿದೆ. ಇದರಂತೆ ಇನ್ನೂ ಹತ್ತಾರು ರೋಗಗಳು ಈಗ ನಾಪತ್ತೆಯಾಗಿವೆ. ಆದರೆ 60 ವರ್ಷದ ಮಂಗನ ಕಾಯಿಲೆ ಮಾತ್ರ ನಿರ್ಮೂಲನೆಯಾಗಿಲ್ಲ. ಇದಕ್ಕೆ ಕಾರಣವೂ ಇದೆ. ಇದು ಕೇವಲ ಮಲೆನಾಡಿನ ಜನರ ಸಮಸ್ಯೆ ಆಗಿದೆ. ಎರಡನೆಯದಾಗಿ, ನಿರ್ದಿಷ್ಟ ಕಾಲದಲ್ಲಿ ಮಾತ್ರ ಕಾಣಿಸಿಕೊಳ್ಳುವುದರಿಂದ  ವಿಶೇಷ ಗಮನವನ್ನು ಸರ್ಕಾರ ನೀಡುತ್ತಿಲ್ಲ. ಮಂಗನ ಕಾಯಿಲೆ ಪ್ರತಿ ವರ್ಷ ಬಂದು ನಾಲ್ಕಾರು ತಿಂಗಳಲ್ಲಿ ಹಲವರನ್ನು ಬಲಿ ಪಡೆಯುತ್ತಿದ್ದರೂ ಗಮನಹರಿಸುವವರಿಲ್ಲ ಎಂದರೆ ಇದರ ಗಂಭೀರತೆ ಇನ್ನೂ ಅರ್ಥವಾಗಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ.
ಇನ್ನು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಭೆ ನಡೆಸುವುದೇ ಒಂದು ಕೆಲಸ. ನಾಲ್ಕಾರು ಸಭೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸಿದ್ದೇ, ಜನರಿಗೆ ಕರಪತ್ರ ಹಂಚಿ ಜಾಗೃತಿ ಮೂಡಿಸಿದ್ದೇವೆ, ಸತ್ತ ಮಂಗನ ಬಗ್ಗೆ ಸಂಶೋಧನೆಗೆ ಪುಣೆಗೆ ಮಾದರಿ ರವಾನಿಸಲಾಗಿದೆ, ಕಾಡಿಗೆ ತೆರಳದಂತೆ ಸೂಚಿಸಲಾಗಿದೆ. ಎರಡು ಬಾರಿ ಲಸಿಕೆ ಹಾಕಲಾಗಿದೆ ಎನ್ನುವುದು ಸಭೆಯಿಂದ ಬರುವ ಸಿದ್ಧ ನಿರ್ಣಯ. ಇವಿಷ್ಟನ್ನು ಮಾಡಲು ಸಭೆ ಕರೆದು ಚರ್ಚಿಸಬೇಕಾದ್ದೇನಿದೆ?
ಜಿಲ್ಲಾಧಿಕಾರಿ ಹಂದಿಗೋಡಿಗೆ ಭೇಟಿ ನೀಡಿ ಬಂದಿದ್ದಾರೆ. ಅಲ್ಲಿಯ ವಸ್ತ್ತುಸ್ಥಿತಿ ಗಮನಿಸಿದ್ದಾರೆ. ಸ್ವತಃ ಅವರೇ ವೈದ್ಯರಾಗಿರುವುದರಿಂದ  ಇನ್ನಷ್ಟು ಕಾಳಜಿ ವಹಿದ್ದಾರೆ. ಇದು ಮೆಚ್ಚತಕ್ಕ ವಿಚಾರವಾದರೂ ಮುಂದೇನು ಎನ್ನುವ ಪ್ರಶ್ನೆಗೆ ಅವರು ಉತ್ತರಿಸಬೇಕಾಗುತ್ತದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು ಕೇವಲ ಸರ್ಕಾರಕ್ಕೆ ಪ್ರಸ್ತಾವನೆ, ವರದಿ ಕಳುಹಿಸಿದರೆ ಮುಗಿಯಿತು ಎಂದು ಭಾವಿಸಿದಂತಿದೆ.
ಇದನ್ನೆಲ್ಲ ಕೈಬಿಟ್ಟು ಅಧಿಕರಿಗಳು, ಜನಪ್ರತಿನಿಧಿಗಳು ಮತ್ತು ಸರ್ಕಾರ ಮುಂದಾಗಿ ಖಾಯಂ ನಿವಾರಣೆಗೆ ಮುಂದಾಗಬೇಕಿದೆ. ಸಂಶೋಧನಾ ಕೇಂದ್ರ, ಆಸ್ಪತ್ರೆ ಆರಂಭಿಸಬೇಕಿದೆ. ಇಡೀ ರಾಜ್ಯಕ್ಕೆ ಸಂಬಂಧಿಸಿದ್ದರೆ ಮಾತ್ರ ಇದಕ್ಕೆ ಮಹತ್ವ ಬರುತ್ತಿತೇನೋ. ದುರ್ದೈವವೆಂದರೆ, ಮಲೆನಾಡಿನ ಮೂಲೆಯಲ್ಲಿರುವವರಿಗೆ ಮಾತ್ರ ಇದರ ಅಪಾಯ ತಟ್ಟುತ್ತಿದೆ.  ಸೇವಾ ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಿರುವುದು ಕಂಡುಬರುತ್ತಿಲ್ಲ. ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ಅವರು ಗ್ರಾಮಗಳಿಗೆ ಹೋಗಿ ಜನರ ಆರೋಗ್ಯದ ಬಗ್ಗೆ ಕೆಲಸ ಮಾಡಬೇಕಿದೆ.
ಕೇವಲ ಸಭೆ ನಡೆಸಿ ಮತ್ತು ಸಲಹೆ ಕೊಡುವುದರಿಂದ ಮಂಗನ ಕಾಯಿಲೆಯನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಇಚ್ಛಾಶಕ್ತಿ ಹೊಂದಿ ಮುನ್ನುಗ್ಗಿ ಕೆಲಸ ಮಾಡುವವವರು ಈಗ ಬೇಕಾಗಿದ್ದಾರೆ.
ಒಟ್ಟಿನಲ್ಲಿ, ಮಂಗನ ಕಾಯಿಲೆಯನ್ನು ಸರ್ಕಾರಗಳು ನಿರ್ಲಕ್ಷಿಸದೆ ಸಂಶೋಧನೆ ಕೇಂದ್ರ, ವಿಶೇಷ ಆಸ್ಪತ್ರೆ ತೆರೆಯುವ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಜೊತೆಗೆ ಅವಶ್ಯಕ ಔಷಧಿಯನ್ನು ಅತಿ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಜನರಿಗೆ ತಲುಪಿಸುವ ಕೆಲಸವನ್ನೂ ಮಾಡಬೇಕಿದೆ. ಲಯನ್ಸ್, ರೋಟರಿಯಂತಹ ಸೇವಾಮನೋಭಾವದ ವಿವಿಧ ಸಂಘ-ಸಂಸ್ಥೆಗಳು ಇದರಲ್ಲಿ ಕೈಜೋಡಿಸಬೇಕಿದೆ.  



ಈ ವರ್ಷ ಮಂಗನ ಕಾಯಿಲೆಯಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಒಂದು ಸಾವು ಸಂಭವಿಸಿದೆ. 2012ರಲ್ಲಿ 92, 2013ರಲ್ಲಿ 3, 2014ರಲ್ಲಿ ಜಿಲ್ಲೆಯಲ್ಲಿ 147 ಮಂಗನ ಕಾಯಿಲೆ ಪ್ರಕರಣಗಳು, 2015ರಲ್ಲಿ 41ಪ್ರಕರಣಗಳು, 2016ರಲ್ಲಿ 13, 2017ರಲ್ಲಿ 37ಪ್ರಕರಣಗಳು ಪತ್ತೆಯಾಗಿತ್ತು. ಪ್ರಸ್ತುತ ಮಂಗನ ಕಾಯಿಲೆ ದೃಢೀಕರಿಸಲು ಪುಣೆಯ ಪ್ರಯೋಗಾಲಯಕ್ಕೆ ಸತ್ತ ಮಂಗದ ಜೈವಿಕ ಅಂಶಗಳನ್ನು ಕಳುಹಿಸಲಾಗುತ್ತಿದೆ. ವರದಿ ಸಿಗುವುದು ವಿಳಂಬವಾಗುತ್ತಿದೆ.
-ಪ್ರಭಾರ ಡಿಎಚ್‌ಓ ಹನುಮಂತಪ್ಪ.

published on Feb  6/2018
..........................................

No comments:

Post a Comment