ಯುವಜನಾಂಗ ಮತಿ(ತ)ವಂತರಾಗುವುದೆಂದು?
ಮತದಾನ ನಮ್ಮ ಹಕ್ಕು. ಅದನ್ನು ಕೊಡದಿದ್ದರೆ ನಾವು ಬಹುಶಃ ಚಳವಳಿ, ಪ್ರತಿಭಟನೆ ನಡೆಸುತ್ತಿದ್ದೇವೆಯೇನೋ. ಆದರೆ 18 ವರ್ಷ ತುಂಬಿದ ಎಲ್ಲ ಯುವಕ-ಯುವತಿಯರಿಗೆ ಈ ಹಕ್ಕನ್ನು ಕೊಟ್ಟಿದ್ದರಿಂದ ಇದರ ಮಹತ್ವವವನ್ನು ಅರಿಯದೆ ನಿರ್ಲಕ್ಷಿಸುತ್ತಿದ್ದೇವೆ. ಮತದಾನದ ಸೌಭಾಗ್ಯ ಸಿಕ್ಕಿತೆಂದು ಸಂಭ್ರಮಿಸಬೇಕಿತ್ತು. ಆದರೆ ರಜೆ ಸಿಕ್ಕಿತೆಂದು ಸಂತೋಷಪಡುತ್ತೇವೆ. ಎಲ್ಲಿಯವರೆಗೆ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಅರಿವಿರುವುದಿಲ್ಲವೋ ಅಲ್ಲಿಯವರೆಗೆ ದೇಶದ ಬಗ್ಗೆ ಕಾಳಜಿ ಹುಟ್ಟುವುದಿಲ್ಲ. ಪ್ರಜಾಪ್ರಭುತ್ವ ಅರ್ಥಪೂರ್ಣವಾಗಬೇಕಾದರೆ ನಮ್ಮ ಪಾಲ್ಗೊಳ್ಳುವಿಕೆ ಅವಶ್ಯ.
ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರತಿ ಚುನಾವಣೆಯಲ್ಲೂ ಸರಾಸರಿ ಮತದಾನವಾಗುವುದು ಕೇವಲ ಶೇಕಡಾ 65 ಪ್ರಮಾಣ ಮಾತ್ರ. ಅಂದರೆ ಇಡೀ ಪ್ರಪಂಚದಲ್ಲಿ ಮತದಾನದ ಬಗ್ಗೆ ದಿವ್ಯ ನಿರ್ಲಕ್ಷ್ಯ ಹೊಂದಿರುವ ದೇಶ ನಮ್ಮದಾಗಿದೆ. ಉತ್ತಮ ಆಳ್ವಿಕೆ, ಸಶಕ್ತ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನಮ್ಮಲ್ಲಿ ಬಹುತೇಕರು ಮತ ಚಲಾಯಿಸಲು ಹೋಗುವುದಿಲ್ಲ. ಮತದಾನ ಪ್ರಕ್ರಿಯೆಯಲ್ಲಿ ನಮ್ಮ ದೇಶ ಅತ್ಯಂತ ಕೊನೆ ಸ್ಥಾನದಲ್ಲಿದೆ.
ಜನಮನಕ್ಕೆ ಸ್ಪಂದಿಸಿ ಕೆಲಸ ಮಾಡುವ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಅಮೂಲ್ಯ ಅವಕಾಶ ಸಿಕ್ಕಿದೆಯಾದರೂ ಯಾರು ಬಂದರೇನು, ನಮಗೇನಾಗಬೇಕು ಎಂಬ ಆಲಸ್ಯದಲ್ಲೇ ಕಾಲಕಳೆಯುತ್ತೇವೆ, ಒಂದು ದಿನ ರಜಾ ಸಿಕ್ಕಿತೆಂಬ ಖುಷಿಯನ್ನೂ ಅನುಭವಿಸುತ್ತೇವೆ. ಆದರೆ ಇದೇ ಒಂದು ಮತ ದೇಶದ ಭವಿಷ್ಯವನ್ನು ನಿರ್ಧರಿಸಬಲ್ಲದು, ಉತ್ತಮ ಆಡಳಿತಗಾರರ್ನು ಆಯ್ಕೆ ಮಾಡಲು ನಾಂದಿಯಾದೀತೆಂಬ ಕನಿಷ್ಠ ಯೋಚನೆಯನ್ನೂ ಮಾಡುವುದಿಲ್ಲ.
ಇದೇ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳುವಂತೆ ಮಾಡುವ ದೃಷ್ಟಿಯಿಂದ 2011ರಲ್ಲಿ ಮತದಾರರ ದಿನವನ್ನು ಆಚರಿಸಲು ನಾಂದಿ ಹಾಡಲಾಯಿತು. ಇಂದು (ಜ. 25)ಚುನಾವಣಾ ಆಯೋಗದ ಸಂಸ್ಥಾಪನಾ ದಿನವೂ ಹೌದು. ಪ್ರಸಕ್ತ ವರ್ಷ 8ನೆಯ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ.
18 ವರ್ಷ ತುಂಬಿದವರು ನಮ್ಮ ದೇಶದಲ್ಲಿ ಮತ ಚಲಾಯಿಸುವ ಹಕ್ಕನ್ನು ಪಡೆಯುತ್ತಾರೆ. ಇಂತಹ ಸೌಭಾಗ್ಯ ಸಿಕ್ಕಿತೆಂದು ಭಾವಿಸುವ ಬದಲು ಆ ದಿನವನ್ನು ನಿರ್ಲಕ್ಷಿಸುವ ಯುವಕ-ಯುವತಿಯರೇ ಹೆಚ್ಚುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ಮತದಾನದಿಂದ ಹೊರಗುಳಿಯುವವರಲ್ಲಿ ಬಹುತೇಕರು ಯುವಜನಾಂಗದವರೇ ಆಗಿರುತ್ತಾರೆ ಎನ್ನುವುದು ಕಂಡುಬರುತ್ತಿದೆ. ಇಂತಹವರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಮತದಾನದಿಂದ ಲಾಭವೇನು ಎಂದು ಕೇಳುವ ಜನರಿಗೆ ಅನಾಹುತವಾದಾಗ ಮಾತ್ರ ಎಚ್ಚರವಾಗುತ್ತದೆ. ಅಥವಾ ಕೆಟ್ಟ ಜನಪ್ರತಿನಿಧಿ ಆಯ್ಕೆಯಾಗಿ ಜನವಿರೋಧಿ ಕೆಲಸವನ್ನು ಮಾಡಿದಾಗ ಆತನನ್ನು ತೆಗಳುತ್ತೇವೆ. ಆದರೆ ತಾನು ಮತ ಚಲಾಯಿಸಿಲ್ಲ ಎನ್ನುವುದನ್ನು ಮಾತ್ರ ಮರೆಯುತ್ತೇವೆ. ಆಗ ನಮ್ಮ ತಪ್ಪಿನ ಅರಿವಾಗುತ್ತದೆ.
ಮತದಾರರು ತಮ್ಮ ನಿರ್ಣಯಾತ್ಮಕ ಹಕ್ಕನ್ನು ಕಳೆದುಕೊಳ್ಳಬಾರದು. ದೇಶವು 68ನೆಯ ಗಣರಾಜ್ಯ ಆಚರಿಸುತ್ತಿದ್ದರೂ ನಾವು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಮಹಿಳೆ ಮತ್ತು ಪುರುಷ ಇಬ್ಬರಿಗೂ ಸಮಾನ ಹಕ್ಕು ದಯಪಾಲಿಸಿದ ದೇಶ ನಮ್ಮದು ಎಂಬ ಹೆಮ್ಮೆ ನಮ್ಮದಾಗಿದೆ. ಇಷ್ಟೊಂದು ದೊಡ್ಡ ಪ್ರಜಾಪ್ರಭುತ್ವ ದೇಶವಾದರೂ ಚುನಾವಣೆಗಳಲ್ಲಿ ಆಗುತ್ತಿರುವ ಸರಾಸರಿ ಕಡಿಮೆ ಎಂಬ ಹಣೆಪಟ್ಟಿಯನ್ನು ತೊಡೆದು ಹಾಕಬೇಕಾದರೆ ಪ್ರತಿಯೊಬ್ಬರೂ ತಮ್ಮ ಮತ ಹಕ್ಕು ಚಲಾಯಿಸಲೇಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗೆ ಸಿಕ್ಕ ಮತದಾನದ ಹಕ್ಕನ್ನು ಸಶಕ್ತವಾಗಿ ಬಳಸಿಕೊಳ್ಳಬೇೀಕು. ಯಾವುದಾದರೂ ಹಕ್ಕು ಚ್ಯುತಿಗೊಂಡಲ್ಲಿ ಅಥವಾ ಧಕ್ಕೆಯಾದಲ್ಲಿ ಅದನ್ನು ಏರುಧ್ವನಿಯಲ್ಲಿ ಪ್ರಶ್ನಿಸುವ ನಾವು, ಮತದಾನವೂ ಒಂದು ಹಕ್ಕು ಎನ್ನುವುದನ್ನು ಮರೆತುಬಿಡುತ್ತೇವೆ. ಇದು ಜಾಣಮರೆವಲ್ಲದೆ ಬೇರೇನೂ ಅಲ್ಲ. ಇದನ್ನೆಲ್ಲ ಮನಗಂಡು ಚುನಾವಣಾ ಆಯೋಗವು ಕಡ್ಡಾಯ ಮತದಾನದ ಬಗ್ಗೆ ಆಸಕ್ತಿ ವಹಿಸಿ ಜಾರಿಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಸಿಸ್ಟೆಮೆಟಿಕ್ ವೋಟರ್ಸ್ ಎಜುಕೇಶನ್ ಆಂಡ್ ಎಲೆಕ್ಟೋರಲ್ ಪಾರ್ಟಿಸಿಪೇಶನ್ (ಎಸ್ವಿಇಇಪಿ- ಸ್ವೀಪ್) ಎನ್ನುವುದು ಪ್ರಮುಖವಾದುದು.
ಆಯೋಗ ಪ್ರತಿ ವರ್ಷದ ಜನವರಿ 1ನ್ನು ನಿಗದಿಯಾಗಿರಿಸಿಕೊಂಡು 18 ವರ್ಷ ತುಂಬಿದವರು ಮತದಾರರ ಯಾದಿಗೆ ಹೆಸರು ನೋಂದಾಯಿಸಿಕೊಳ್ಳಲು ಸಾಕಷ್ಟು ಬಗೆಯಲ್ಲಿ ಪ್ರಚಾರ ಮಾಡುತ್ತಿದೆ. ಆದರೂ ಶೇ. 20ರಿಂದ 25ರಷ್ಟು ಯುವಜನಾಂಗ ಇದರಲ್ಲಿ ತೊಡಗಿಕೊಳ್ಳುತ್ತಿಲ್ಲ ಎನ್ನುವ ಅಂಶ ದೊರೆತ ಹಿನ್ನೆಲೆಯಲ್ಲಿ ಜಾಗೃತಿಗೆ ಮುಂದಾಗಿದೆ. ಯುವ ಮತದಾರರನ್ನು ನೋಂದಾಯಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿದ ಮತ್ತು ಕೆಲಸ ಮಾಡಿದ ಸಂಘ-ಸಂಸ್ಥೆ, ಎನ್ಜಿಓ, ಅಧಿಕಾರಿ ಮತ್ತಿತರರನ್ನು ಸನ್ಮಾನಿಸುವ ಕೆಲಸವೂ ಈ ದಿನದಂದು ನಡೆಯುತ್ತದೆ.
ಮತದಾರರ ದಿನವನ್ನು ಎಲ್ಲಾ ಜಿಲ್ಲೆಗಳಲ್ಲೂ ಕಡ್ಡಾಯವಾಗಿ ಆಚರಿಸುವಂತೆ ಆಯೋಗ ಸೂಚಿಸಿರುವ ಹಿನ್ನೆಲೆಯಲ್ಲಿ ಆಚರಣೆ ನಡೆಯುತ್ತದೆ. ಮತದಾರರು ಅಂದು ಕಡ್ಡಾಯ ಮತಚಲಾವಣೆ ಬಗ್ಗೆ ಪ್ರಮಾಣವಚನ ಸ್ವೀಕರಿಸುವ, ಜಾಗೃತಿಗಾಗಿ ಬೀದಿ ನಾಟಕ, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಜಾಥಾ, ರ್ಯಾಲಿಗಳನ್ನು ಏರ್ಪಡಿಸಲಾಗುತ್ತಿದೆ. ಆಯೋಗದ ಉದ್ದೇಶ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರನ್ನು ಮತದಾರರ ಯಾದಿಗೆ ಸೇರಿಸಿಕೊಳ್ಳಬೇಕು ಮತ್ತು ಮತಗಟ್ಟೆಗೆ ಬಂದು ಮತಚಲಾವಣೆ ಮಾಡಬೇಕೆನ್ನುವುದಾಗಿದೆ. ಯುವಕರಲ್ಲಿ ಮತದಾನದ ಬಗ್ಗೆ ಇರುವ ನಿರಾಸಕ್ತಿಯನ್ನು ಹೋಗಲಾಡಿಸಲುವುದು ಈ ದಿನದ ಆಚರಣೆಯ ಉದ್ದೇಶವಾಗಿದೆ.
.............................

No comments:
Post a Comment