Monday, 6 March 2017



 ಶಿವಮೊಗ್ಗ ಪಾಲಿಕೆಯಲ್ಲಿ ಅವಕಾಶವಾದಿ ಪಕ್ಷೇತರರು



ಹಣ ಮತ್ತು ಅಧಿಕಾರ ಎಲ್ಲಿ ತಮಗೆ ದೊರೆಯುತ್ತದೆಯೋ ಅಲ್ಲಿಗೆ ಪಕ್ಷೇತರರು ಜಿಗಿಯುವುದನ್ನು ಕಂಡಿದ್ದೇವೆ. ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನರ ನಿಲುವಿಗೆ ವಿರುದ್ಧವಾಗಿ,  ತಾವು ಸೋಲಿಸಿದ ಪಕ್ಷದ ಅಭ್ಯರ್ಥಿಯೊಂದಿಗೇ ರಾಜಿಯಾಗಿ ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ. ರಾಜಕೀಯ ಬದ್ಧತೆ ಮತ್ತು ದೃಢ ನಿಲುವಿಲ್ಲದ ಇಂತಹವರನ್ನು ಮುಂದಿನ ಚುನಾವಣೆ ವೇಳೆ ಮತದಾರರು ತಿರಸ್ಕರಿಸಬೇಕು.



ಶಿವಮೊಗ್ಗ:  ಪಕ್ಷೇತರರನ್ನು ನಂಬಿಕೊಂಡು ಅಧಿಕಾರ ನಡೆಸುವಂತಹ ಸ್ಥಿತಿ ಎದುರಾದರೆ ಏನಾಗುತ್ತದೆ ಎನ್ನುವುದನ್ನು ವಿವಿಧ ರಾಜ್ಯದಲ್ಲಿ ನೋಡಿದ್ದೇವೆ. ಅದೇ ರೀತಿ ನಮ್ಮಲ್ಲೂ ಅನೇಕ ಸ್ಥಳಿಯ ಸಂಸ್ಥೆಗಳಲ್ಲಿ ಕಾಣುತ್ತಿದ್ದೇವೆ. ಅವರ ದೊಂಬರಾಟದಿಂದ ಆಡಳಿತ ವ್ಯವಸ್ಥೆ  ಹದಗೆಡುವ ಸ್ಥಿತಿ ಎದುರಾಗುತ್ತದೆ. ಈಗ ಶಿವಮೊಗ್ಗ ನಗರಪಾಲಿಕೆಯಲ್ಲೂ ಸಹ ಇಬ್ಬರು ಪಕ್ಷೇತರರಿದ್ದು, ಯಾವ ಪಕ್ಷಕ್ಕೂ ಬಹುಮತ ಇಲ್ಲದಿರುವುದರಿಂದ ಅವರನ್ನೇ ನಂಬಿಕೊಳ್ಳುವಂತಹ ಸ್ಥಿತಿ ಎದುರಾಗಿದೆ.
35ನೆಯ ವಾರ್ಡಿನ ಅಬ್ದುಲ್ ರೆಹಮಾನ್, 31ನೆಯ ವಾರ್ಡಿನ ಶಾಹಿಸ್ತಾ ಬಾನು ಪಕ್ಷೇತರರಾಗಿದ್ದಾರೆ.  5ನೆಯ ವಾರ್ಡಿನಿಂದ ಪಕ್ಷೇತರರಾಗಿ ಗೆದ್ದಿರುವ ನರಸಿಂಹಮೂರ್ತಿ ಅಲಿಯಾಸ್ ಬಾಬಣ್ಣ ಇವರು ಜೆಡಿಎಸ್ ಸೇರಿದ್ದಾರೆ. ಪಕ್ಷೇತರ ಸದಸ್ಯರು ತಮಗೆ ಅನುಕೂಲವಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕಳೆದ ಮೂರು ಬಾರಿ ಕಾಂಗ್ರೆಸ್ ಪರವಿದ್ದ ಪಕ್ಷೇತರರಿಬ್ಬರು ಈ ಬಾರಿ ಜೆಡಿಎಸ್- ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ. ವಿಶೇಷವೆಂದರೆ, ಇವರಿಬ್ಬರೂ ಅಲ್ಪಸಂಖ್ಯಾತರು.  ಅಲ್ಪಸಂಖ್ಯಾತರು ಯಾವತ್ತೂ ಕಾಂಗ್ರೆಸ್ ಪರ ಎಂಬ ಮಾತನ್ನು ಇವರು ಸುಳ್ಳುಮಾಡಿ ತೋರಿಸಿದ್ದಾರೆ.
 ಇನ್ನೊಬ್ಬ ಪಕ್ಷೇತರ ನರಸಿಂಹಮೂರ್ತಿ ಮಾತ್ರ ಒಮ್ಮೆ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟಕ್ಕೆ ಬೆಂಬಲ ನೀಡಿದರೆ, ನಂತರ ಅಧಿಕೃತವಾಗಿ ಬಿಜೆಪಿ ಸೇರಿದರು. ಅಲ್ಲಿಯೂ ಸೇರಿಬಾರದೆ   ಈಗ ಜೆಡಿಎಸ್‌ನಲ್ಲಿದ್ದಾರೆ. ಪಕ್ಷೇತರರ ಬೆಂಬಲವನ್ನು ನಂಬಿಕೊಂಡ ಪಕ್ಷಗಳ ಸ್ಥಿತಿ ಗೋಳಿನ ಕತೆಯಾಗಿದೆ. ಶಿವಮೊಗ್ಗ ಪಾಲಿಕೆಯ ಮಟ್ಟಿಗೆ ಹೇಳುವುದಾದರೆ ತಮಗೆಲ್ಲಿ ಅಧಿಕಾರ ಸಿಗುತ್ತದೆಯೋ ಆ ಕಡೆ ವಾಲುತ್ತಿದ್ದಾರೆ.
ಎಸ್.ಎಸ್. ಸತೀಶ, ಗೌರಿ ಶ್ರೀನಾಥ, ಗೋಪಾಲಕೃಷ್ಣ  ಮತ್ತು ಅರ್ಚನಾ ಬಳ್ಳೆಕೆರೆ ಕೆಜೆಪಿಯಿಂದ ಗೆದ್ದಿದ್ದ  ಸದಸ್ಯರು. ಇವರಲ್ಲಿ ಅರ್ಚನಾ ಮತ್ತು ಸತೀಶ್ ಕೆಜೆಪಿಯು ಬಿಜೆಪಿಯಲ್ಲಿ ವಿಲೀನವಾದ ನಂತರ ಬಿಜೆಪಿ ಸೇರಿದ್ದಾರೆ. ಆದರೆ ಗೋಪಾಲಕೃಷ್ಣ ಮತ್ತು ಗೌರಿ ಪಕ್ಷೇತರರಾಗಿ ಇದ್ದಾರೆ. ಇವರು ಒಮ್ಮೆ ಕಾಂಗ್ರೆಸ್- ಜೆಡಿಎಸ್‌ಗೆ, ಇನ್ನೊಮ್ಮೆ ಬಿಜೆಪಿ- ಜೆಡಿಎಸ್‌ಗೆ ಬೆಂಬಲ ನೀಡಿದ್ದಾರೆ. ಗೋಪಾಲಕೃಷ್ಣ ಅವರು ಮೊದಲ ಅವಧಿಯಲ್ಲಿ ಬಿಜೆಪಿ ಪರ ನಿಂತಿದ್ದರು. ನಂತರ ಕಾಂಗ್ರೆಸ್ ಪರ ವಾಲಿದರು. ಈಗ ಮತ್ತೆ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಹೀಗಾದರೆ ಆಡಳಿತ ನಡೆಸುವವರು ಈ ಪಕ್ಷೇತರರನ್ನು ನಂಬಿಕೊಳ್ಳುವುದಾದರೂ ಹೇಗೆ,  ಅವರನ್ನು ಸಂತೈಸುವುದರಲ್ಲೇ ಅವಧಿಮುಗಿಸಬೇಕಾಗುತ್ತದೆ. ಪ್ರತಿ ಬಾರಿಯೂ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷತೆ ಮೇಲೆ ಕಣ್ಣಿಟ್ಟೇ ತಮ್ಮ ಬೆಂಬಲ ಕೊಡುತ್ತಿದ್ದಾರೆ.
 ಪಕ್ಷೇತರರ ಬೆಂಬಲ ಪಡೆಯುವಾಗ ಅವರಿಗೆ ಆಳ್ವಿಕೆ ನಡೆಸುವವರು ಅನೇಕ ಭರವಸೆಗಳನ್ನು ಕೊಡಬೇಕಾಗುತ್ತದೆ. ಅವರು ಹೇಳಿದ ಕೆಲಸಗಳನ್ನು ಮಾಡಿಕೊಡಬೇಕಾಗುತ್ತದೆ.  ಇದಾದ ನಂತರ ಅವರನ್ನು ಯಾವುದಾದರೂ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿಸಬೇಕಾಗುತ್ತದೆ, ಇಲ್ಲವೇ ಅವರ ವಾರ್ಡಿಗೆ ಹೆಚ್ಚಿನ ಅನುದಾನವನ್ನು ನೀಡಬೇಕಾಗುತ್ತದೆ.  ಇಲ್ಲವಾದರೆ ಮುಂದಿನ ಅವಧಿಗೆ ಮತ್ತೆ ನಿರ್ಧಾರ ಬದಲಿಸುತ್ತಾರೆ
 ಈ ಹಿಂದೆ ಕಾಂಗ್ರೆಸ್- ಜೆಡಿಎಸ್ ಬೆಂಬಲಿಸಿದ್ದ ಮೂರ್ತಿ, ತನ್ನ ವಾರ್ಡಿಗೆ ಶಾಸಕರು ಹೆಚ್ಚಿನ ಕಾಮಗಾರಿ ನೀಡಿಲ್ಲ, ತನ್ನನ್ನು ಅವಮಾನಿಸಿದ್ದಾರೆ, ಕೊಟ್ಟ ಮಾತಿಗೆ ತಪ್ಪಿದ್ದಾರೆಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಯ ಸತ್ಯಾಸತ್ಯತೆ ಏನೇ ಇರಬಹುದು. ಇಲ್ಲಿ ವಿಪಕ್ಷದವರು ಇವರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರೇ ಎನ್ನುವ ಎರಡನೆಯ ಪ್ರಶ್ನೆಯೂ ಉದ್ಭವಿಸುತ್ತದೆ.
ಹಣ ಮತ್ತು ಅಧಿಕಾರ ಎಲ್ಲಿ ತಮಗೆ ದೊರೆಯುತ್ತದೆಯೋ ಅಲ್ಲಿಗೆ ಪಕ್ಷೇತರರು ಜಿಗಿಯುವುದನ್ನು ಕಂಡಿದ್ದೇವೆ. ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನರ ನಿಲುವಿಗೆ ವಿರುದ್ಧವಾಗಿ,  ತಾವು ಸೋಲಿಸಿದ ಪಕ್ಷದ ಅಭ್ಯರ್ಥಿಯೊಂದಿಗೇ ರಾಜಿಯಾಗಿ ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ. ರಾಜಕೀಯ ಬದ್ಧತೆ ಮತ್ತು ದೃಢ ನಿಲುವಿಲ್ಲದ ಇಂತಹವರನ್ನು ಮುಂದಿನ ಚುನಾವಣೆ ವೇಳೆ ಮತದಾರರು ತಿರಸ್ಕರಿಸಬೇಕು. ಗೆದ್ದ ಎತ್ತಿನ ಬಾಲ ಹಿಡಿದು ಕುಣಿಯುವ ಪಕ್ಷೇತರರಿಗೆ ಎಲ್ಲ ವೇಳೆಯೂ ಇಂತಹ ಅವಕಾಶ ಸಿಗುವುದಿಲ್ಲ. ಆದರೆ ಅವಕಾಶ ಸಿಕ್ಕಿದ್ದನ್ನು ಮಾತ್ರ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಎಷ್ಟೋ ಸಂದರ್ಭದಲ್ಲಿ ಇದೇ ಅವರ ಮುಂದಿನ ರಾಜಕೀಯ ಭವಿಷ್ಯಕ್ಕೆ ಮುಳುವಾಗುವುದೂ ಉಂಟು.
ಇಂತಹ ಅವಕಾಶವಾದಿಗಳನ್ನು ಇನ್ನು ಮುಂದೆ ಚುನಾಯಿಸುವಾಗ ಮತದಾರರು ಮತ್ತೊಮ್ಮೆ ಯೋಚಿಸಬೇಕಿದೆ.
................................

No comments:

Post a Comment