Wednesday, 5 October 2016

ಪ್ರೀತಿ, ಪ್ರೇಮ, ಪ್ರಣಯ, ಜೈಲು

 ಸಾಮಾಜಿಕ ಜಾಲತಾಣದಲ್ಲಿಯೇ ಹುದುಗಿಹೋಗಿರುವ ಯುವಕ-ಯುವತಿಯರು ಪ್ರೀತಿ, ಪ್ರೇಮ, ಪ್ರಣಯದಲ್ಲಿ ಸಿಲುಕಿ ಎಷ್ಟೋ ಘಟನೆಗಳಲ್ಲಿ ಜೈಲು ಪಾಲಾಗಿದ್ದಾರೆ. ಕೆಲವು ಘಟನೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂತ್ರಜ್ಞಾನ ಮುಂದುವರೆದಂತೆ ಅದರ ದುರ್ಬಳಕೆಯು ಹೆಚ್ಚುತ್ತಿದೆ. ಯುವಜನತೆ ಅದರ ಹಿಂದೆ ಬಿದ್ದು ತಮ್ಮ ಬಾಳನ್ನು ಹಾಳುಮಾಡಿಕೊಳ್ಳುತ್ತ್ತಿದ್ದಾರೆ. ಕಾಲೇಜು ದಿನಗಳಲ್ಲಿ ಕಲಿಕೆಗೆ ಹೆಚ್ಚಿನ ಗಮನ ಕೊಡದೆ ಕೇವಲ ವಾಟ್ಸಾಪ್, ಫೇಸ್‌ಬುಕ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಯೌವ್ವನದ ದಿನಗಳಲ್ಲಿ ಇದೆಲ್ಲ ಸುಂದರವಾಗಿ ಕಾಣುತ್ತದೆಯಾದರೂ, ಇದನ್ನು ಬೆನ್ನುಹತ್ತಿ ಹೋದವರಾರೂ ಸುಖದ ಬಾಳ್ವೆ ಕಂಡಿಲ್ಲ. ಇಂತಹ ನೂರಾರು ಉದಾಹರಣೆ ನಮ್ಮ ಕಣ್ಮುಂದೆ ಇದ್ದರೂ ಇಂದಿನ ಯುವಜನತೆ ಪಾಠ ಕಲಿಯದೆ ‘ಹಗಲು ಕಂಡ ಬಾವಿಗೆ ರಾತ್ರಿ ಬಿದ್ದರು’ ಎನ್ನುವಂತೆ ವರ್ತಿಸುತ್ತಿದ್ದಾರೆ.


ರಿಪ್ಪನ್‌ಪೇಟೆಯ ನಾಲ್ವರು ಯುವಕರು ಯುವತಿಯ ಹಿಂದೆ ಬಿದ್ದು ಈಗ ಜೈಲುಕಂಬಿ ಎಣಿಸುತ್ತಿದ್ದಾರೆ. ಒಬ್ಬ ಕೇವಲ ಪ್ರೀತಿ ಮಾಡಿದರೆ, ಮತ್ತೊಬ್ಬ ಆಕೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಾನೆ, ಮೂರನೆಯವ ದುರ್ಬಳಕೆಯನ್ನೇ ಮಾಡಿಕೊಳ್ಳುತ್ತಾನೆ. ನಾಲ್ಕನೆಯ ಮೂರನೆಯವನಿಗೆ ಸಹಕರಿಸುತ್ತಾನೆ. ಒಟ್ಟಿನಲ್ಲಿ ನಾಲ್ವರೂ ಒಟ್ಟಿಗೆ ಜೈಲೊಳಗಡೆ ಪ್ರವೇಶಿಸುತ್ತಾರೆ.
ದಾವಣಗೆರೆಯ ಇಂಜಿನೀಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಸಿದ್ದಾರ್ಥ ಶಿವಮೊಗ್ಗದ ಕಾಲೇಜೊಂದರ ಅಂತಿಮ ಪದವಿಯಲ್ಲಿ ಓದುತ್ತಿದ್ದ ಯುವತಿಯನ್ನು ಫೇಸ್‌ಬುಕ್‌ನಲ್ಲಿ  ಪರಿಚಯ ಮಾಡಿಕೊಂಡಿದ್ದ. ಫೇಸ್‌ಬುಕ್ ಚಾಟಿಂಗ್, ವ್ಯಾಟ್ಸಾಪ್ ಚಾಟಿಂಗ್ ಮೂಲಕ ಮುಂದುವರೆದ ಪರಿಚಯ ಪರಸ್ಪರರು ಭೇಟಿಯಾಗುವವರೆಗೆ ಹೋಯಿತು. ಶಿವಮೊಗ್ಗದ ಬಸ್ ನಿಲ್ದಾಣ ಮತ್ತು ಕೆಲವು ಐಸ್‌ಕ್ರೀಮ್ ಪಾರ್ಲರ್‌ಗಳಲ್ಲಿ ಇಬ್ಬರೂ ಭೇಟಿಯಾಗಿ ಪ್ರೀತಿ-ಪ್ರೇಮ ಇನ್ನಷ್ಟು ಬೆಳೆಯುವಂತೆ ಪೋಷಿಸಿದರು. ಸಿದ್ದಾರ್ಥ್ ಈ ಯುವತಿ ಭೇಟಿಗಾಗಿ ದಾವಣಗೆರೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ.
ಪ್ರೀತಿ, ಆತ್ಮೀಯತೆ  ಗಾಢವಾದಂತೆ ಆಕೆಯ ಬಳಿ ಮೊದಲು ಫೋಟೋ ಪಡೆದುಕೊಂಡ ಸಿದ್ದಾರ್ಥ್ , ಬರಬರುತ್ತ ನಗ್ನ ಚಿತ್ರಕ್ಕಾಗಿ ಪೀಡಿಸುತ್ತಾನೆ. ಸುತರಾಂ ಇದನ್ನು ಕೊಡಲೊಪ್ಪದ ಯುವತಿ ಅದ್ಯಾವ ಘಳಿಗೆಯಲ್ಲಿ ಇದನ್ನು ಕೊಟ್ಟಳೋ ಗೊತ್ತಿಲ್ಲ. ಅಲ್ಲಿಂದ ಈ ನಾಲ್ವರು ಯುವಕರ ಕಥೆಗೆ ಹೊಸ ತಿರುವು ಸಿಗುತ್ತದೆ.  ಸಿದ್ದಾರ್ಥ ರಿಪ್ಪನ್‌ಪೇಟೆಗೆ ಹೋದಾಗ ತನ್ನಮಿತ್ರ ವಿನಯ್ ಎದುರು ಲವ್ ಸ್ಟೋರಿಯನ್ನು ಬಿಚ್ಚಿಡುತ್ತಾನೆ. ಜೊತೆಗೆ ತನ್ನಲ್ಲಿರುವ ಚಿತ್ರಗಳನ್ನು ತೋರಿಸುತ್ತಾನೆ. ಇದನ್ನು ಗಮನಿಸಿದ ವಿನಯ್ ತನ್ನ ಮೊಬೈಲ್‌ಗೆ ಶೇರ್ ಮಾಡುವಂತೆ ದುಂಬಾಲು ಬೀಳುತ್ತಾನೆ. ಹೇಗೋ ಆತನಿಂದ ಈ ಚಿತ್ರಗಳನ್ನು ಪಡೆದುಕೊಂಡುಬಿಡುತ್ತಾನೆ.  ನಂತರ ಯುವತಿಯನ್ನು ಸಂಪರ್ಕಿಸಲಾರಂಭಿಸುತ್ತಾನೆ. ಈ ವೇಳೆ ನೌಕರಿಗಾಗಿ ಸಿದ್ದಾರ್ಥ್ ಬೆಂಗಳೂರಿಗೆ ತೆರಳುತ್ತಾನೆ. ಇದನ್ನೇ ಲಾಭ ಮಾಡಿಕೊಂಡ ವಿನಯ್, ಪದೇ ಪದೇ ಕರೆ ಮಾಡಿ ಪ್ರೀತಿಸುವಂತೆ ಆಕೆಗೆ ಪ್ರೇಮ ನಿವೇದನೆ ಮಾಡುತ್ತಾನೆ. ನಗ್ನ ಚಿತ್ರ ಇರುವುದಾಗಿಯೂ ಬ್ಲಾಕ್‌ಮೇಲ್ ಮಾಡುತ್ತಾನೆ. ಇದರಿಂದ ಹೆದರಿದ ಯುವತಿ ಈತನ ಸ್ನೇಹಕ್ಕೆ ಬೀಳುತ್ತಾಳೆ. ಇವರ ಪ್ರೀತಿ- ಪ್ರೇಮ ಜಾಸ್ತಿಯಾಗುತ್ತಿರುವಂತೆ ದೈಹಿಕ ಸುಖಕ್ಕೆ ಒತ್ತ್ತಾಯಿಸುತ್ತಾನೆ. ಆದರೆ ಆಕೆ ತಿರಸ್ಕರಿಸುತ್ತಾಳೆೆ.
ಮೊಬೈಲ್‌ನಲ್ಲಿರುವ ನಗ್ನ ಚಿತ್ರ ತೆಗೆದುಹಾಕುವಂತೆ ಗೋಗರೆಯುತ್ತಾಳೆ. ಆಗ ತನ್ನ ಮಿತ್ರ ನಾಗರಾಜ್ ಎನ್ನುವವನು ಮಾಟ-ಮಂತ್ರ- ತಂತ್ರಗಳ ಮೂಲಕ ಮೊಬೈಲ್‌ನಿಂದ ಚಿತ್ರ ತೆಗೆದುಹಾಕುತ್ತಾನೆ  ಎಂದು ನಂಬಿಸಿ ಆತನ ಪರಿಚಯ ಮಾಡಿಕೊಡುತ್ತಾನೆ. ಈ ಯುವತಿ ಇದನ್ನು ನಿಜ ಎಂದು ನಂಬಿ ಆತನ ಬಲೆಗೆ ಬೀಳುತ್ತಾಳೆ. ಇಲ್ಲಿಂದ ಆಕೆಗೆ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವವಾಗುತ್ತದೆ.
ನಾಗರಾಜ್ ಐಟಿಐ ಮಾಡಿಕೊಂಡು ವೈರಿಂಗ್ ಕೆಲಸ ಮಾಡುತ್ತ ಬೆಂಗಳೂರಿನಲ್ಲಿ ಜೀವಿಸುತ್ತಿದ್ದಾನೆ. ಈತನಿಗೆ ಮದುವೆಯಾಗಿ ಮಗುವಿದೆ. ಆದರೆ ಯುವತಿಯ ನಗ್ನ ಚಿತ್ರ ನೋಡಿದ ನಂತರ ಆತನಲ್ಲೂ ಕಾಮತೃಷೆ ಹೆಡೆಬಿಚ್ಚಲಾರಂಭಿಸುತ್ತದೆ. ಸಿದ್ದಾರ್ಥ ಮತ್ತು ವಿನಯ್ ಅವರ ಕೈಜಾರಿದ ರೊಟ್ಟಿ ತನ್ನ ತಟ್ಟೆಗೆ ಬಿದ್ದಿತು ಎಂದು ಖುಷಿಪಡುತ್ತಾನೆ. ಯುವತಿ ಪರಿಚಯವಾದೊಡನೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹಲವಾರು ಸಲ ನಾಗರಾಜ್ ಬರುತ್ತಾನೆ. ಸುತ್ತಾಡುತ್ತಾರೆ, ಕೊನೆಗೆ ಮದುವೆಯಾಗಿ ಸುಖ ದಾಂಪತ್ಯ ಮಾಡುವ ಭರವಸೆ ಕೊಡುತ್ತಾನೆ. ಇದರ ಹಿಂದಿರುವ ಕಾಮದಾಹವನ್ನು ಅರಿಯದ ಮುಗ್ಧೆ ಯುವತಿ ನಾಗರಾಜ್ ಹೇಳಿದಂತೆ  ಮದುವೆಯಾಗಲು ಒಪ್ಪುತ್ತಾಳೆ.
ಉಬ್ಬಿ ಹೋದ ಆತ ಒಮ್ಮೆ ಧರ್ಮಸ್ಥಳಕ್ಕೆ ಈಕೆಯನ್ನು ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಾನೆ. ಆದರೆ ಮೊದಮೊದಲು ಒಪ್ಪದ ಆಕೆ ಕೊನೆಗೂ ಒತ್ತ್ತಾಯಕ್ಕೆ ಮಣಿಯುತ್ತಾಳೆ. ಇದಾದ ಕೆಲವು ದಿನಗಳ ನಂತರ ಕಾರವಾರ, ಗೋವಾಕ್ಕೆ ಹೋಗಿಬರುತ್ತಾರೆ. ಅಲ್ಲಿಯೂ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಸತತವಾಗಿ  ಬಳಸಿಕೊಳ್ಳುತ್ತಾನೆ.
 ಯುವತಿಯು ನಾಲ್ಕು ತಿಂಗಳ ಗರ್ಭಿಣಿಯಾಗುತ್ತಾಳೆ. ಈ ವಿಷಯ ಗೊತ್ತಾದೊಡನೆ ಬೆವರಿಹೋದ ನಾಗರಾಜ ತನ್ನ ಸಹಾಯಕ ಕೆಲಸಗಾರ ಕಿರಣ್‌ನಲ್ಲಿ ಸಲಹೆ ಕೇಳುತ್ತ್ತಾನೆ.
    ಕಿರಣ್ ಆಕೆಯನ್ನು ಉಪಾಯ ಮಾಡಿ ಶಿವಮೊಗ್ಗದಿಂದ ಬೆಂಗಳೂರಿಗೆ ಕರೆತರುತ್ತಾನೆ. ನಾಗರಾಜ್ ಜೊತೆ ಮದುವೆ ಮಾಡಿಸುವ ಭರವಸೆ ನೀಡುತ್ತಾನೆ. ಇದರಿಂದ ಸಂತಸಗೊಂಡ ಆಕೆ ಬೆಂಗಳೂರಿಗೆ ತೆರಳಿದರೆ ಅಲ್ಲಿ ನಡೆಯುವುದೇ ಬೇರೆ. ಯುವತಿಯನ್ನು ಮನೆಯೊಂದರಲ್ಲಿ ಕೂಡಿಹಾಕುತ್ತಾರೆ. ಈ ವೇಳೆ ಯುವತಿ ನಾಪತ್ತೆಯಾದ ವಿಚಾರ ಮನೆಯವರಿಗೆ ಗೊತ್ತ್ತಾದೊಡನೆ ಆಕೆಯ ಪಾಲಕರು ಶಿವಮೊಗ್ಗ ಮಹಿಳಾ ಠಾಣೆೆಗೆ ದೂರು ಕೊಡುತ್ತಾರೆ. ಆಕೆಯ ಮೊಬೈಲ್ ಸಹಾಯದಿಂದ ಬೆಂಗಳೂರಿನಲ್ಲಿರುವುದನ್ನು ಪೊಲೀಸರು ಪತ್ತೆ ಮಾಡುತ್ತ್ತಾರೆ. ಮತ್ತು ಆಕೆಯ ಜೊತೆ ಸತತ ಸಂಪರ್ಕದಲ್ಲಿರುವ ನಂಬರ್  ಪಡೆದು ನಾಗರಾಜನನ್ನು ಮೊದಲು ಬಂಧಿಸುತ್ತಾರೆ. ನಂತರ ಉಳಿದ ಮೂವರು ಬಲೆಗೆ ಬೀಳುತ್ತಾರೆ. ಅಲ್ಲಿಗೆ ನಾಲ್ಕೇ ದಿನದಲ್ಲಿ ಕಾರ್ಯಾಚರಣೆ ಮುಗಿಯುತ್ತದೆ
ನಾಲ್ವರು ಯುವಕರು ಪ್ರೀತಿ, ಪ್ರೇಮ, ಕಾಮ ಎನ್ನುತ್ತ ಜೈಲು ಪಾಲಾದರೆ ಯುವತಿಯನ್ನು ಹೆತ್ತ ಮನೆಯವರು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸುತ್ತಾರೆ. ನಂತರ ಮಹಿಳಾ ಪೊಲೀಸರ ಸಮ್ಮುಖದಲ್ಲಿ ಸಂಧಾನ ನಡೆದು ಯುವತಿ ಸುರಕ್ಷಿತ ನೆಲೆಗೆ ಸೇರುತ್ತಾಳೆ.
ಇದು ಸಿನಿಮಾ ಕತೆಯಂತೆ ಕಂಡರೂ ಜಾಲತಾಣದಲ್ಲಿ ಸಕ್ರಿಯರಾಗಿರುವವರು ಎಚ್ಚರಿಕೆಯಿಂದ ಇರಬೇಕೆನ್ನುವ ಸಂದೇಶವನ್ನು ನೀಡುತ್ತದೆ. ಅಪರಿಚಿತರಿಗೆ ಫೋಟೊ ಕೊಡುವುದು, ಸ್ನೇಹಿತರಿಗೆ ಕೊಡುವುದು ಎಷ್ಟು ದುಬಾರಿಯಾಗಿ  ಪರಿಣಮಿಸುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅದರಲ್ಲೂ ನಗ್ನ ಚಿತ್ರ ಕೇಳುವವರು ಹೆಚ್ಚು ಕಡಿಮೆ ಸೈಕೋಪಾತ್ ಗಳಾಗಿರುತ್ತಾರೆ ಎನ್ನುವುದನ್ನು ವೈಜ್ಞಾನಿಕ ಸಂಶೋಧನೆ ಹೇಳುತ್ತದೆ. ಹುಡುಗ ಅಥವಾ ಯಾರೋ ಅಪರಿಚಿತ ತನ್ನ ಫೇಸ್‌ಬುಕ್‌ನಲ್ಲಿ ಲೈಕ್ ಬಟನ್ ಒತ್ತಿದರೆ, ಕಾಮೆಂಟ್ ಮಾಡಿದರೆ ಅದರ ಮೂಲಕವೇ ಸಂಬಂಧ  ಬೆಳೆಸಿಕೊಂಡು, ಅವರ ಬೈಕ್-ಕಾರನ್ನೇರಿ ಸುತ್ತುತ್ತಾ,  ಹಿಂದೆ-ಮುಂದೆ ನೋಡದೆ ಮದುವೆಗೂ ಒಪ್ಪಿಕೊಳ್ಳುವ ಯುವತಿಯರಿಗೂ ಈ ಘಟನೆ ಒಂದು ಪಾಠವಾಗಬೇಕಿದೆ.
ಖಾಸಗಿ ಬದುಕು ಖಾಸಗಿಯಾಗಿಯೇ ಇರಬೇಕು. ಅದು ಬಹಿರಂಗವಾದರೆ ಏನಾಗುತ್ತದೆ ಎನ್ನುವುದಕ್ಕೆ ರಿಪ್ಪನ್‌ಪೇಟೆಯ ನಾಲ್ವರು ಯುವಕರ ಮತ್ತು ವಿದ್ಯಾರ್ಥಿನಿಯ ಈ ಘಟನೆ ಉದಾಹರಣೆಯಾಗಿ ನಮ್ಮೆದುರು ನಿಲ್ಲುತ್ತದೆ.
............................................... 

No comments:

Post a Comment