Tuesday, 18 October 2016

ಸೊರಬದಲ್ಲಿ  ಕಾಂಗ್ರೆಸ್ ನಾಯಕರಿಂದಲೇ ಪಕ್ಷ ನಿರ್ನಾಮ!
....................................................................................



 -ಇದೊಂದು ವಿಚಿತ್ರ ಘಟನೆ. ಬಹುಶ; ಬೇರಾವ ಜಿಲ್ಲಾ ಕಾಂಗ್ರೆಸ್ ಈ ಕೆಲಸವನ್ನು ಮಾಡಲಿಕ್ಕಿಲ್ಲ. ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ, ಮುಂದಿನ ಚುನಾವಣೆಗೆ ಸನ್ನದ್ಧರಾಗಬೇಕಿದ್ದ ಕಾಲದಲ್ಲಿ  ಕಾಂಗ್ರೆಸ್ ಮುಖಂಡರು, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಸೊರಬದಲ್ಲಿ ಜೆಡಿಎಸ್‌ಗೆ ನೀರೆರೆಯುತ್ತಿದ್ದಾರೆ. ಮೊದಲೇ ಅಲ್ಲಿ ಪಕ್ಷ ಐಸಿಯುನಲ್ಲಿದೆ. ಅದನ್ನು ಬದುಕಿಸುವ ಕೆಲಸ ಮಾಡುವ ಬದಲು ಕಾಗೋಡು ಮಾಡಿದ ಎಡವಟ್ಟನ್ನೇ ಬೆಂಬಲಿಸುತ್ತಿದ್ದಾರೆ. ಇನ್ನೊಂದೆಡೆ, ಕುಮಾರ್ ಬಂಗಾರಪ್ಪ ತಮ್ಮ ಹಳೆ ಚಾಳಿಯನ್ನು ಬಿಡದೆ ಮುಂದುವರೆಸುತ್ತಿದ್ದಾರೆ. ಇಬ್ಬರ ಕದನ ಪಕ್ಷವನ್ನು ನಿರ್ನಾಮ ಮಾಡುತ್ತಿದೆ.

ಸೊರಬ ತಾಲೂಕು ಬಗರ್‌ಹುಕುಂ ಸಮಿತಿಗೆ ಸದಸ್ಯರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರ್ ಬಂಗಾರಪ್ಪ ಹಾಗೂ ಸೊರಬದ ಪಕ್ಷದ ಮುಖಂಡ ತಬಲಿ ಬಂಗಾರಪ್ಪ ತನ್ನ ಗಮನಕ್ಕೆ ತಂದಿದ್ದರು. ಈ ಬಗ್ಗೆ ತಾನು ಕಾಗೋಡು ತಿಮ್ಮಪ್ಪರೊಂದಿಗೆ ಚರ್ಚೆ ಕೂಡ ನಡೆಸಿದ್ದೆ. ಈ ಬಗ್ಗೆ ಸೂಕ್ತ ಗಮನಹರಿಸುವ ಭರವಸೆಯನ್ನು ಕಾಗೋಡು ನೀಡಿದ್ದರು. ಆದರೆ
ಇಂತಹ ಸಂದರ್ಭದಲ್ಲಿ ಕುಮಾರ್ ಕಾಗೊಡು ವಿರುದ್ಧ ಬಹಿರಂಗವಾಗಿ ಆರೋಪ ಮಾಡುತ್ತಿರುವುದು ಸರಿಯಲ್ಲ. ಕುಮಾರ್ ಪಕ್ಷದ ಹಿತಾಸಕ್ತಿ, ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಬಾರದು. ಏನೇ ಸಮಸ್ಯೆಯಿದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿಯೇ ಪರಿಹರಿಸಿಕೊಳ್ಳಬೇಕು.
- ತೀ.ನ. ಶ್ರೀನಿವಾಸ್ 

   ಸೊರಬ ತಾಲೂಕು ಬಗರ್‌ಹುಕುಂ ಸಮಿತಿಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬದಲಿಸಿ, ಆ ಸ್ಥಾನಕ್ಕೆ ಜೆಡಿಎಸ್ ಕಾರ್ಯಕರ್ತರನ್ನು ಜಿಲ್ಲಾ ಉಸ್ತುವಾರಿ ಸಚಿವ  ಕಾಗೋಡು ತಿಮ್ಮಪ್ಪ ನೇಮಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮತ್ತು ಕಾಗೋಡು ಮಧ್ಯೆ ಇದು ಪರಿಸ್ಥಿತಿ ವಿಷಮಿಸುವಂತೆ ಮಾಡಿದೆ.
ಕಾಗೋಡು ಈ ವಿಷಯದಲ್ಲಿ ಕೈಗೊಂಡ ನಿರ್ಧಾರ ವಿಚಿತ್ರವಾಗಿ ಕಾಣಿಸುತ್ತಿದೆ. ತನ್ನ ಪಕ್ಷದವರಿಗೆ ಅಧಿಕಾರ ನೀಡಬೇಕಾದ ಸಚಿವರೇ ಇನ್ನೊಂದು ಪಕ್ಷವನ್ನು ಪರೋಕ್ಷವಾಗಿ ಬೆಂಬಲಿಸುತ್ತಾರೆಂದರೆ ಇದರಲ್ಲಿ ಯಾವುದೋ ವಾಸನೆಯನ್ನು ಗ್ರಹಿಸಬಹುದಾಗಿದೆ. ಸೊರಬದಲ್ಲಿ ಶಾಸಕರಾಗಿ ಜೆಡಿಎಸ್‌ನ  ಮಧು ಬಂಗಾರಪ್ಪ್ಪ ಇದ್ದಾರೆ. ತಮ್ಮ ಪಕ್ಷದವರೇ ಆದ ಕುಮಾರ್ ಬಂಗಾರಪ್ಪ ಅವರನ್ನು ಹಣಿಯಬೇಕೆಂಬ ಉದ್ದೇಶದಿಂದ ಕಾಗೋಡು ಈ ನಿರ್ಧಾರ ಕೈಗೊಂಡರೇ ಎನ್ನುವ ಪ್ರಶ್ನೆ ಕಾಂಗ್ರೆಸಿಗರಲ್ಲೇ ಚರ್ಚೆಗೀಡಾಗಿದೆ.
ಈ ವಿಚಾರ ಈಗ ಶೀತಲಸಮರಕ್ಕೆ ಕಾರಣವಾಗಿದೆ. ಕಾಗೋಡು ನಿರ್ಧಾರವನ್ನು ಕುಮಾರ್ ಬಹಿರಂಗವಾಗಿ ವಿರೋಧಿಸಿ ಹೇಳಿಕೆ ಕೊಟ್ಟಿರುವುದು ಕಾಂಗ್ರೆಸ್‌ನಲ್ಲಿ ತಲ್ಲಣವನ್ನುಂಟುಮಾಡಿದೆ. ಕಾಂಗ್ರೆಸಿಗರು ಕಾಗೋಡು ಪರ ಹೇಳಿಕೆ ಕೊಡುತ್ತಿದ್ದಾರೆಯೇ ವಿನಾ ಕಾಗೋಡು ಮಾಡಿದ್ದು ಸರಿಯಲ್ಲ ಎಂದು ಯಾರೂ ಹೇಳದಿರುವ ಬಗ್ಗೆ ಆಶ್ಚರ್ಯ ಉಂಟಾಗುತ್ತಿದೆ. ಸಚಿವರಾದಾಕ್ಷಣ ಏನು ಮಾಡಿದರೂ ಸರಿ ಎಂದು ಕಾಂಗ್ರೆಸಿಗರು ಒಪ್ಪಿಕೊಂಡಂತಿದೆ. ಕಾಗೋಡು ಅವರಿಗೆ ತಮ್ಮ ಪಕ್ಷವರಾರು, ಬೇರೆ ಪಕ್ಷದವರಾರು ಎನ್ನುವ ಮಾಹಿತಿ ಇಲ್ಲವೇ, ಹಾಗಾದರೆ ಇದ್ದ ಕಾಂಗ್ರೆಸ್ ಸದಸ್ಯರನ್ನು ಕಿತ್ತೊಗೆಯಲು  ಅವರನ್ನು ದಾರಿ ತಪ್ಪಿಸಿದವರಾರು ಎನ್ನುವುದಕ್ಕೂ ಪಕ್ಷ ಉತ್ತರಿಸಬೇಕಿದೆ.
ಕುಮಾರ್ ಅವರು ಏಕಾಏಕಿ ಕಾಗೋಡು ವಿರುದ್ದ ಮಾತನಾಡುವುದಕ್ಕಿಂತ ಮೊದಲು ಅವರನ್ನು ಭೇಟಿ ಮಾಡಿ ನಡೆದಿರುವ ಅನಾಹುತದ ಬಗ್ಗೆ ವಿವರಿಸಬಹುದಿತ್ತು. ಪಕ್ಷದ ನಾಯಕರ ಬಗ್ಗೆ, ಅದರಲ್ಲೂ ಹಿರಿಯ ಕಾಗೋಡು ಬಗ್ಗೆ ಹೇಳಿಕೆ ಕೊಡುವ ಮುನ್ನ ಯೋಚನೆ ಮಾಡಬೇಕಿತ್ತು. ಪಕ್ಷದ ಶಿಸ್ತನ್ನು ಮೀರಿ ಬಹಿರಂಗವಾಗಿ ನಾಯಕರ ವಿರುದ್ದ ಹೇಳಿಕೆ ಕೊಡುವುದು ಸರಿಯಲ್ಲ ಎನ್ನುವುದನ್ನು ಅರಿಯಬೇಕಿತ್ತು. ತನ್ನ ಬೆಂಬಲಿಗರನ್ನು ಸಮಾಧಾನಿಸಲೋ ಅಥವಾ ಹಳೆಯ ವಿಷಯಗಳ ದ್ವೇಷದ ಹಿನ್ನೆಲೆಯಲ್ಲೋ ಟೀಕಿಸಿರಬಹುದೆಂದು ವಿಶ್ಲೇಷಿಸಲಾಗುತ್ತಿದೆ.ಇದು ಕುಮಾರ್ ಮಾಡಿದ ತಪ್ಪು. ಜಿಲ್ಲಾ ಕಾಂಗ್ರೆಸ್ ನಾಯಕರ ಗಮನಕ್ಕೆ ತಂದು ಸರಿ ಮಾಡಿಸುವಂತೆ ಕೋರಬಹುದಿತ್ತು.
ಸೊರಬದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಕಟ್ಟಲು ಜಿಲ್ಲಾ ಕಾಂಗ್ರೆಸ್ ಕ್ರಮ ಕೈಗೊಳ್ಳಬಹುದಿತ್ತು. ನೇಮಕಾತಿ ವಿಚಾರದಲ್ಲೇ ಈ ರೀತಿ ಎಡವಿದರೆ, ಕಾರ್ಯಕರ್ತರಿಗೆ ಅನ್ಯಾಯ ಮಾಡಿದರೆ ಸುಮ್ಮನಿರಲು ಸಾಧ್ಯವೇ, ಕಾಗೋಡು ಪರ ವಕಾಲತ್ತು ವಹಿಸುವ ಕಾಂಗ್ರೆಸ್ ಮುಖಂಡರು ಇದಕ್ಕೆ ಉತ್ತರ ಕೊಡಬೇಕು. ಸೊರಬದಲ್ಲಿ ಪಕ್ಷ ನಿರ್ನಾಮವಾಗುವ ಹಂತದಲ್ಲಿದೆ. ಅಲ್ಲಿ ನಾಯಕರನ್ನು ಬೆಳೆಸುತ್ತಿಲ್ಲ. ಕುಮಾರ್ ಕೆಲವೊಮ್ಮೆ ಆಡಿದ್ದೇ ಆಟ ಎನ್ನುವಂತಾಗಿದೆ. ತನಗಿಂತ ಬೇರೆ ಯಾರೂ ನಾಯಕರಿಲ್ಲ ಎನ್ನುವುದೂ ಇದಕ್ಕೆ ಕಾರಣವಾಗಿರಬಹುದು. ಇದನ್ನೆಲ್ಲ ನಿಗ್ರಹಿಸಲು ಜಿಲ್ಲಾ ಸಮಿತಿ ವಿಫಲವಾಗಿದೆ. ಇದು ಇಂದು- ನಿನ್ನೆಯ ವಿವಾದವಲ್ಲ. ಬಂಗಾರಪ್ಪ ಕಾಂಗ್ರೆಸ್ ಬಿಟ್ಟ ನಂತರ ಸೊರಬದಲ್ಲಿ ಕಾಂಗ್ರೆಸ್ ಮೂಲೆಗುಂಪಾಗಿದೆ ಎನ್ನುವುದು ಸೂರ್ಯನಷ್ಟೇ ಸತ್ಯ.
ಜೊತೆಗೆ ಪಕ್ಷವನ್ನು ಕಟ್ಟಬೇಕು, ಹೊಸಬರನ್ನು ಮುಂದೆ ತರಬೇಕೆನ್ನುವ ಛಾತಿಯಂತೂ ಮೊದಲಿಲ್ಲ. ಇರುವ ನಾಯಕರಿಗೂ ಪ್ರೋತ್ಸಾಹವಿಲ್ಲ. ಜಾತಿ ವಿಷಬೀಜವನ್ನು ಬಿತ್ತುತ್ತ ಸಾಗಿದರೆ ಪಕ್ಷ ಉದ್ಧಾರವಾಗದು. ಕುಮಾರ್ ಆಗಲಿ, ಜಿಲ್ಲಾ ಮುಂಡರಾಗಲಿ, ಸಚಿವರಾಗಲಿ ಇದನ್ನರಿಯಬೇಕಿದೆ. ಕಳೆದ ಜಿಪಂ ಚುನಾವಣೆಯಲ್ಲಿ ತಾಲೂಕಿನ 5 ಸ್ಥಾನವನ್ನೂ ಕೈಚೆಲ್ಲಿದೆ. ತಾಂನಲ್ಲೂ ಅಷ್ಟಕಷ್ಟೇ. ಇದರ ಬಗ್ಗೆ ಜವಾಬ್ದಾರಿ ಹೊತ್ತು ಕುಮಾರ್, ಇತರರು ಮಾತನಾಡಬೇಕಿತ್ತು.
ಮಧು ಸಲಹೆಯಂತೆ ಕಾಗೋಡು ತಿಮ್ಮಪ್ಪ ಕಾರ್ಯಕರ್ತರ ನೇಮಕ ಮಾಡಿದ್ದಾರೆ ಎನ್ನುವುದು ಕುಮಾರ್ ಬಂಗಾರಪ್ಪ ಬೆಂಬಲಿಗರ ಆರೋಪವಾಗಿದೆ. ದಿವಂಗತ ಮುಖ್ಯಮಂತ್ರಿ  ಎಸ್.ಬಂಗಾರಪ್ಪರ ಪುತ್ರರಾದ ಕುಮಾರ್ ಹಾಗೂ ಮಧು ನಡುವೆ ನಡೆಯುತ್ತಿರುವ ಕಲಹದಲ್ಲಿ ಕಾಗೋಡು ತಿಮ್ಮಪ್ಪ ಕೂಡ ಸೇರ್ಪಡೆಯಾಗುವಂತಾಗಿದೆ. ಇದರಿಂದ ’ಸಹೋದರರ ಫೈಟ್’ ಹೊಸ ತಿರುವು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ರಂಗುಪಡೆಯುವ ಸಾಧ್ಯತೆ ದಟ್ಟವಾಗಿದೆ.
  ಕಾಗೋಡು ತಿಮ್ಮಪ್ಪ ಹಾಗೂ ಸೊರಬ ಕ್ಷೇತ್ರದ ಜೆಡಿಎಸ್ ಶಾಸಕ ಮಧು ಬಂಗಾರಪ್ಪರ ನಡುವೆ ಸುಮಧುರ ಬಾಂಧವ್ಯವಿದೆ. ಸಾಕಷ್ಟು ಆತ್ಮೀಯತೆಯಿದೆ. ಕಾಗೋಡು ಬಗ್ಗೆ ಸಾಕಷ್ಟು ಗೌರವ ಭಾವನೆಯನ್ನು ಮಧು ಹೊಂದಿದ್ದಾರೆ. ಉಳಿದಂತೆ ಕಾಗೋಡು ಹಾಗೂ ಕುಮಾರ್ ಬಂಗಾರಪ್ಪ ಒಂದೇ ಪಕ್ಷದಲ್ಲಿದ್ದರೂ ಇಬ್ಬರ ನಡುವಿನ ಸಂಬಂಧ ಅಷ್ಟಕಷ್ಟೆ ಎಂಬಂತಿದೆ. ಈಗ ಬಗರ್‌ಹುಕುಂ ಸಮಿತಿ ಸದಸ್ಯರ ನೇಮಕದ ವಿಷಯಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಮತ್ತೆ ಕಲಹ ಆರಂಭವಾಗಿದೆ. ಈ ಜಗಳ ಉಳಿದ ಪಕ್ಷದವರಿಗೆ ಲಾಭವಾಗುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ.  







No comments:

Post a Comment