Friday, 14 October 2016

ಅತೃಪ್ತ ಕಾಂಗ್ರೆಸ್ಸಿಗರತ್ತ ದೇವೇಗೌಡರ ನೋಟ
.................................................................




 ದೇವೇಗೌಡರೇ ಹಾಗೆ. ಹೊಸಬರನ್ನು ಪಕ್ಷಕ್ಕೆ ಸೇರಿಸಿಕೊಂಡು ಪಕ್ಷ ಬಲಿಷ್ಠಗೊಳಿಸುವ ಜಾಯಮಾನದವರಲ್ಲ. ಏಕೆಂದರೆ ಪಕ್ಷದ ಅಧಿಕಾರದ ಚುಕ್ಕಾಣಿ ಕುಟುಂಬದಿಂದ ಕೈತಪ್ಪಬಾರದೆನ್ನುವ ನಿಲುವಿನವರು. ಇದಕ್ಕಾಗಿ ಮತ್ತೆ ಮತ್ತೆ ಪಕ್ಷ ಬಿಟ್ಟು ಹೋದವರನ್ನೇ ಕರೆತರುತ್ತಾರೆ. ಇಲ್ಲಿಗೆ ಬರುವ ಅತೃಪ್ತರು ಸಹ ಕೆಲವೇ ತಿಂಗಳಲ್ಲಿ ಮತ್ತೆ ಅತೃಪ್ತರಾಗಿ ಬೇರೊಂದು ಪಕ್ಷಕ್ಕೆ ಹೋಗುತ್ತಾರೆ. ಆಯಾರಾಂ ಗಯಾರಾಂ ಸಂಸ್ಕೃತಿಯನ್ನು ಮಟ್ಟ ಹಾಕಿ ಪಕ್ಷವನ್ನು ತಳಮಟ್ಟದಿಂದ ಕಟ್ಟಬೇಕೆನ್ನುವ ಸಂಕಲ್ಪ ಇಲ್ಲದೆ ಇರುವುದೇ ಜೆಡಿಎಸ್ ಬೆಳೆಯದಿರಲು ಮೂಲ ಕಾರಣ. ಅಧಿಕಾರ ಇದ್ದಲ್ಲಿಗೆ ಬಂದು ಮುತ್ತಿಕೊಳ್ಳುವ ಇಂತಹ ಅತೃಪ್ತ ಮನಸ್ಸುಗಳಿಗೆ ಸ್ಥಾನವಿಲ್ಲ ಎಂದು ಎದೆಸೆಟೆಸಿ ಹೇಳುವ ತಾಕತ್ತು ನಮ್ಮ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲದಿರುವುದು ದೊಡ್ಡ ದುರಂತ. ಹಳೆಯ ಗಂಡನ ಪಾದವೇ ಗತಿ ಎಂದು ಬರುವವರು ಹೊಸ ಗಂಡನತ್ತ ಹೋಗುವ ವೇಳೆ ಇದನ್ನೆಲ್ಲ ಯೋಚಿಸಿದರೆ ಇಂತಹ ಪರಿಸ್ಥಿತಿಯೇ ಎದುರಾಗುವುದಿಲ್ಲ.


 ತನ್ನ ಪಕ್ಷದ ಬಲಿಷ್ಠ 9 ಶಾಸಕರನ್ನು ನಾಲ್ಕಾರು ತಿಂಗಳ ಹಿಂದೆ ಹೊರ ಹಾಕಿದ ನಂತರ 2ನೆಯ ತಲೆಮಾರಿನ ನಾಯಕರಿಲ್ಲದೆ, ಸಂಘಟನೆಯೂ ಇಲ್ಲದೆ ನಿತ್ರಾಣಗೊಂಡಿರುವ ಜಾತ್ಯತೀತ ಜನತಾದಳ ಈಗ ಕಾಂಗ್ರೆಸ್ ಅತೃಪ್ತ ಶಾಸಕರನ್ನು ತನ್ನತ್ತ ಸೆಳೆಯುವ ತಂತ್ರ ಹೂಡಿದೆ. ಜೆಡಿಎಸ್‌ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಅಧಿಪತಿಯಾಗಿರುವುದರಿಂದ ಅವರ ಒಪ್ಪಿಗೆ ಪಡೆದೆಯೇ ಸೆಳೆಯುವ ಯತ್ನ ಸಾಗಿದೆ.
ಕಾಂಗ್ರೆಸ್‌ನಿಂದ ಇತ್ತೀಚೆಗಷ್ಟೇ ಸಚಿವ ಸ್ಥಾನ ಕಳೆದುಕೊಂಡಿರುವ ವಿ. ಶ್ರೀನಿವಾಸಪ್ರಸಾದ್, ಸತೀಶ್ ಜಾರಕಿಹೊಳಿ ಮತ್ತು ಹಾಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸದ್ಯ ಜೆಡಿಎಸ್ ಸೇರುವ ತವಕದಲ್ಲಿದ್ದಾರೆ. ವಿಶೇಷವೆಂದರೆ, ಈ ಮೂವರೂ ಮೊದಲು ಅದೇ ಪಕ್ಷದಿಂದ ಕಾಂಗ್ರೆಸ್‌ಗೆ ಬಂದವರು.
ಕಾವೇರಿ ವಿವಾದದಲ್ಲಿ ತಮ್ಮ ಚಾಣಾಕ್ಷತನ ಮತ್ತು ಮುತ್ಸದ್ದಿತನದಿಂದ ಸಿದ್ದರಾಮಯ್ಯ ಅವರಿಗೆ ದಾರಿತೋರಿದ ದೇವೇಗೌಡರು ಈಗ ಅದೇ ಸಿದ್ದರಾಮಯ್ಯ ಅವರ ಒಂದು ಕಾಲದ ಅತ್ಯಾಪ್ತರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ. ಮೈಸೂರು ಭಾಗದಲ್ಲಿ ಜೆಡಿಎಸ್‌ನ್ನು ಬಲಗೊಳಿಸಲು ಕಾವೇರಿ ವಿವಾದ ದೇವೇಗೌಡರಿಗೆ ಒಂದು ಸದವಕಾಶವನ್ನು
ಕಲ್ಪಿಸಿದೆ. ಆದರೆ ಉಳಿದ ಜಿಲ್ಲೆಗಳಲ್ಲಿ ನಿರ್ಜೀವವಾಗಿರುವ ಪಕ್ಷಕ್ಕೆ ಜೀವ ತುಂಬುವವರೇ ಇಲ್ಲದ ಬಗ್ಗೆ ತಲೆಮೇಲೆ ಕೈ ಹೊತ್ತಿದ್ದ ಗೌಡರಿಗೆ ಈಗ ಉತ್ತರ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಮುಸ್ಲೀಂ ಮತ ಸೆಳೆಯಲು ಸಿ.ಎಂ ಇಬ್ರಾಹಿಂ ಮತ್ತು ದಲಿತರ ಮತ ಸೆಳೆಯಲು ಶ್ರೀನಿವಾಸಪ್ರಸಾದ್ ಕಣ್ಣಿಗೆ ಬಿದ್ದಿದ್ದಾರೆ. ಹಾಗಾಗಿ ಅವರನ್ನು ಸೆಳೆಯಲು ತೆರೆಮರೆಯ ಯತ್ನ ನಡೆಸಿದ್ದಾರೆ.
 ಜೆಡಿಎಸ್‌ನಲ್ಲಿ ದಲಿತ ನಾಯಕರು ಮತ್ತು ಮುಸ್ಲಿಂ ನಾಯಕರೇ ಇಲ್ಲದೆ ಕಂಗೆಟ್ಟಿರುವ ಸಂದರ್ಭದಲ್ಲಿ ಇವರು ಸಿಕ್ಕಂತಾಗಿದೆ. ಆದರೆ ಇವರು ದಳ ಸೇರುವುದು ಇನ್ನೂ ನಿಗದಿಯಾಗಿಲ್ಲ. ಶ್ರೀನಿವಾಸಪ್ರಸಾದ್ ಇನ್ನಷ್ಟೇ ರಾಜೀನಾಮೆ ಕೊಡಬೇಕಿದೆ. ನಂತರ ಸಭೆ ನಡೆಸಿ ಮುಂದಿನ ಹೆಜ್ಜೆ ನಿರ್ಧರಿಸುವುದಾಗಿ ಹೇಳಿದ್ದಾರೆ. ಅವರಿಗೆ ತನ್ನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಿಂದ ತೆಗೆದುಹಾಕಿದ ಬಗ್ಗೆ ಆಕ್ರೋಶವಿದೆ. ತನ್ನನ್ನು ಕಿತ್ತುಹಾಕಲು ಕಾರಣವಾದ ಅಂಶಗಳೇನು ಎನ್ನುವುದು ಗೊತ್ತಿದ್ದರೂ ಅದನ್ನು ಬಾಯ್ಬಿಡುತ್ತಿಲ್ಲ. ಅನಾರೋಗ್ಯದಿಂದ ಬಳಲುತ್ತ, ಇಲಾಖೆಯ ಕೆಲಸವನ್ನು ಸಮರ್ಪಕವಾಗಿ ಮಾಡದೆ, ಕಂದಾಯ ಸಚಿವರಾಗಿಯೂ ವಿವಿಧ ಪ್ರಮುಖ ಸಮಸ್ಯೆಗಳಿಗೆ ಸ್ಪಂದಿಸದೆ, ರಾಜ್ಯ ಪ್ರವಾಸ ಮಾಡದೆ  ಸುಮ್ಮನಿದ್ದರು. ಪ್ರಮುಖ ಖಾತೆ ಹೊತ್ತವರೇ ಹೀಗೆ ಮಾಡಿದರೆ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ ಎಂದರಿತು ಹೈಕಮಾಂಡ್ ಮನವೊಲಿಸಿ ಪ್ರಸಾದ್‌ಗೆ ಗೇಟ್‌ಪಾಸ್ ಕೊಡಲಾಗಿತ್ತು. ಅಂದಿನಿಂದಲೂ ಸಿಎಂ ವಿರುದ್ದ ಬುಸುಗುಡುತ್ತಿರುವ ಇವರು ದಸರಾ ಮುಗಿದ ನಂತರ ರಾಜಿನಾಮೆ ಕೊಡಲು ಮುಂದಾಗಿದ್ದಾರೆ.
ದಲಿತರ ನಾಯಕ, ಸಜ್ಜನ ರಾಜಕಾರಣಿ ಚಾಮರಾಜನಗರದಿಂದ 5 ಬಾರಿ ಲೋಕಸಭೆ ಸದಸ್ಯನಾಗಿ ಆಯ್ಕೆ,  ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವಿದ್ದಾಗ ಮಂತ್ರಿಗಿರಿ ಅನುಭವಿಸಿ, ಕಾಂಗ್ರೆಸ್, ಲೋಕಶಕ್ತಿ, ಜೆಡಿಯು, ಸಮತಾ ಪಕ್ಷ, ಜೆಡಿಎಸ್ ಒಳಹೊಕ್ಕು ಎಲ್ಲಿಯೂ ನಿಲ್ಲಲಾಗದೆ ಮತ್ತೆ ಕಾಂಗ್ರೆಸ್ ಸೇರಿ ಕಳೆದ ವಿಧಾನಸಬೆ ಚುನಾವಣೆಯಲ್ಲಿ ನಂಜನಗೂಡು ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ಮಂತ್ರಿಯಾಗಿದ್ದರು. ಆದರೆ ಹೆಸರು ಉಳಿಸಿಕೊಳ್ಳುವಲ್ಲಿ  ಅವರು ಸಂಪೂರ್ಣ ವಿಫಲರಾದರು. ಇದೇ ಅವರಿಗೆ ಮುಳುವಾಯಿತು. ಸತತ ಅನಾರೋಗ್ಯವಿದ್ದರೂ ಇದಕ್ಕೆ  ಖುರ್ಚಿಗೆ ಅಂಟಿಕೊಂಟರು. ಇಂತಹವರನ್ನು ನಂಬಿಕೊಂಡು ದೇವೇಗೌಡರು ದಲಿತ ಮತ ಪಡೆಯು ಮುಂದಾಗಿದ್ದಾರೆ. ರಾಜ್ಯದಲ್ಲಿ 25 ದಲಿತ ಮೀಸಲು ಕ್ಷೇತ್ರಗಳಿವೆ. ಇದರ ಮೇಲೆ ಕಣ್ಣಿಟ್ಟು  ಪ್ರಸಾದ್‌ಗೆ ಮತ್ತೆ ಮಣೆ ಹಾಕಲಾಗುತ್ತಿದೆ ಎಂದು ಭಾವಿಸಲಾಗುತ್ತಿದೆ.
ಎರಡನೆಯದಾಗಿ ಸತಿಶ್ ಜಾರಕಿಹೊಳಿ. ಇವರೂ ಸಹ ದಳದಿಂದಲೇ ಎಂಎಲ್‌ಸಿಯಾಗಿ, ಸಚಿವರಾಗಿ ನಂತರ ಕಾಂಗ್ರೆಸ್ ಸೇರಿ ವಿಧಾನಸಭಾ ಸದಸ್ಯರಾಗಿ  ಮತ್ತೆ ಸಚಿವರಾಗಿ ಇತ್ತೀಚೆಗೆ ಸಹೋದರ ರಮೇಶ ಜಾರಕಿಹೊಳಿ ಅವರಿಗಾಗಿ ಸ್ಥಾನ ಬಿಡಬೇಕಾಯಿತು. ಸಚಿವರಾಗಿದ್ದಾಗ ಇವರು ಹೇಳಿಕೊಳ್ಳುವಂತಹ ಕೆಲಸ ಮಾಡಲಿಲ್ಲ. ಇವರು ಸಚಿವರು ಎನ್ನುವುದೇ ಎಷ್ಟೋ ಜನರಿಗೆ ಗೊತ್ತಿರಲಿಲ್ಲ. ತಾವಾಯಿತು, ತಮ್ಮ ಕೆಲಸವಾಯಿತು ಎನ್ನುವ ಸ್ವಭಾವದ ಸತೀಶ್, ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುಳಿಸಿಕೊಂಡರೂ, ಸಂಘಟನಾ ಶಕ್ತಿ ಇದೆಯಾದರೂ ಅದರ ಸದ್ಬಳಕೆ ಮಾಡಿಕೊಳ್ಳಲಿಲ್ಲ. ರಾಜ್ಯ ನಾಯಕರಾಗಿ ಬೆಳೆಯಲಿಲ್ಲ. ರಾಜ್ಯದಲ್ಲಿ ನಾಯಕ ಜನಾಂಗವು ನಿರ್ಣಾಯಕವಾಗುವ 10 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳಿಂದ ಒಂದಷ್ಟು ಲಾಭ ತಂದುಕೊಡಬಹುದಾದ ಸಾಮರ್ಥ್ಯ ಇದೆಯಾದರೂ ಜೆಡಿಎಸ್ ಗೆಲ್ಲಿಸುವ ತಾಕತ್ತಿಲ್ಲ. ಆದರೆ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ. ರಾಜಕೀಯ ತಂತ್ರ ಹೆಣೆಯುವುದರಲ್ಲಿ ನಿಸ್ಸಿಮ, ಮೌನವೇ ಇವರ ಕೆಲಸದ ಗುಟ್ಟು.
ಮೂರನೆಯದಾಗಿ ಸಿ.ಎಂ ಇಬ್ರಾಹಿಂ, ಬಾಯಿ ಬಿಟ್ಟರೆ ಕುರಾನ್, ಬೈಬಲ್, ಭಗವದ್ಗೀತೆಯನ್ನು ಹೇಳಬಲ್ಲ ತಾಕತ್ತಿರುವ ಇಬ್ರಾಹಿಂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭದ್ರಾವತಿಯಲ್ಲಿ ಪರಾಭವಗೊಂಡವರು. ಇವರು ಸಹ 1978ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಗುಂಡೂರಾವ್ ಸಂಪುಟಲ್ಲಿ ಸಚಿವರಾದವರು. 94ರಲ್ಲಿ ಜನತಾದಳ ಸೇರಿ ರಾಜ್ಯಸಭೆ ಸದಸ್ಯರಾಗಿ ದೇವೇಗೌಡ ಪ್ರಧಾನಿಯಾದಾಗ ಅಚಾನಕ್ ಮಂತ್ರಿಯೂ ಆಗಿ ಕೆಲಸ ಮಾಡಿದ್ದಾರೆ. ಮಾತಿನ ಮಲ್ಲ ಎಂದಷ್ಟೇ ಹೇಳಬಹುದೇ ವಿನಾ ಇವರ ಮಾತನ್ನು ನಂಬುವವರು ಒಬ್ಬರೂ ಇಲ್ಲ. ಸಂಘಟನೆ ಮಾಡುವ ತಾಕತ್ತಿಲ್ಲ. ಜನ ಸೇರಿಸುತ್ತಾರೆ, ಜನರು ಇವರ ವಾಗ್ಬಾಣಯುಕ್ತ, ವಚನ, ಮಂತ್ರ, ಸಂಸ್ಕೃತ, ಶಾಯಿರಿ ಸಹಿತ ರಸವತ್ತಾದ ಭಾಷಣಕ್ಕಷ್ಟೇ ಸೀಮಿತರಾಗಿಬಿಟ್ಟಿದ್ದಾರೆ.
ಜೆಡಿಎಸ್‌ನಲ್ಲಿ ಅಪ್ಪ-ಮಕ್ಕಳ ರಾಜಕೀಯವನ್ನೇ ಟೀಕಿಸಿ ಮತ್ತೆ ಸಿದ್ದರಾಮಯ್ಯ ಬೆನ್ನುಬಿದ್ದು ಟಿಕೆಟ್ ಪಡೆದು ಸ್ಪರ್ಧಿಸಿ ಸೋತರು. ಆದರೂ ಸಿದ್ದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಮಾಡಿದರು. ಆದರೆ ಕಾಂಗ್ರೆಸ್‌ನಲ್ಲಿ ತನ್ನನ್ನು ಕಡೆಗಣಿಸುತ್ತಿದ್ದಾರೆಂಬ ಭ್ರಮೆ ಇರುವುದರಿಂದ ಈಗ ಮತ್ತೆ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.
 ಈ ಮೂವರಲ್ಲಿ ಸತೀಶ್ ಹೊರತುಪಡಿಸಿ ಉಳಿದಿಬ್ಬರಿಗೆ ಪಕ್ಷ ಸಂಘಟನೆಯನ್ನು ಮಾಡುವ ತಾಕತ್ತಿಲ್ಲ, ಮೂವರೂ ಹಣವಂತರು, ಇಬ್ರಾಹಿಂ ಮಾತ್ರ ವಾಚಾಳಿ. ಜನರತ್ತ ಮುಖ ಮಾಡುವುದೇ ಅಪರೂಪವಾಗಿರುವ ಈ ರತ್ನತ್ರಯಗಳು ದೇವೇಗೌಡರಿಗೆ ಹೇಗೆ ಮತ್ತೆ ಜೊತೆಯಾಗಲಿವೆಯೋ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಅಧಿಕಾರ ಅನುಭವಿಸಿ  ಈಗ ಹೊರಗಿರುವುದರಿಂದ ಅಧಿಕಾರವಿಲ್ಲದ ಕಾಲಕಳೆಯುವುದು ಇವರಿಗೆ ಸಾಧ್ಯವಾಗುತ್ತಿಲ್ಲ. ಮತ್ತೆ ಹಳೆಮನೆಯತ್ತ ನೋಟ ಬೀರಿದ್ದಾರೆ. ಕಾಂಗ್ರೆಸ್ ಮನೆಗೆ ಬಾಗಿಲಿಲ್ಲದಿರುವುದರಿಂದ  ಆಯಾರಾಂ ಗಯಾರಂ ನಡೆಯುತ್ತಲೇ ಇರುತ್ತದೆ.
......................................

No comments:

Post a Comment