Wednesday, 26 October 2016

ದುರ್ವರ್ತನೆಯ ಆಟೋ ಚಾಲಕರಿಗೆ ಕಡಿವಾಣ ಅಗತ್ಯ 

 ಇತ್ತೀಚೆಗೆ ಹೊಸದಾಗಿ ಆಟೋ ಚಾಲನೆಗೆ ಆಗಮಿಸುವ ಕೆಲವು ಯುವಕರು ಮನಸೋಇಚ್ಚೆ ನಡೆದುಕೊಳ್ಳುತ್ತಿದ್ದಾರೆ. ಹೇಳುವವರು, ಕೇಳುವವರು ಇಲ್ಲವಾಗಿದ್ದಾರೆ. ಇವರಿಗೆ ಮೊದಲು ಶಿಸ್ತಿನ ಪಾಠ ಹೇಳಿಕೊಡಬೇಕಾಗಿದೆ. ಚಾಲನಾ ಪರವಾನಿಗೆ ಇಲ್ಲದೆ, ಅಶಿಸ್ತಿನಿಂದ ವರ್ತಿಸುವವವರ ವಿರುದ್ದ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಎಲ್ಲಾ ಆಟೋ ಚಾಲಕರಿಗೂ ಇದು ಕೆಟ್ಟ ಹೆಸರನ್ನು ತರುತ್ತದೆ. 17 ವರ್ಷಕ್ಕಿಂತ ಕಡಿಮೆ ವಯೋಮಾನದವರು ಆಟೋ ಓಡಿಸುತ್ತಾರೆ. ಅಪ್ರಾಪ್ತ ವಯಸ್ಸಿನವರಿಗೆ ಆಟೋ ಓಡಿಸಲು ಅವಕಾಶ ಕೊಡುವ ಆಟೋ ಮಾಲೀಕರ ವಿರುದ್ಧವೂ ಕ್ರಮ ಜರುಗಿಸಬೇಕು. 
-ದಾದಾಪೀರ್, ಆಟೋ ಚಾಲಕ


 ಸಾಕಷ್ಟು ಆಟೋ ನಿಲ್ದಾಣಗಳಿಗೆ ಆಗಾಗ ತೆರಳಿ ಗಮನಿಸಲಾಗುತ್ತಿದೆ. ಜೊತೆಗೆ ಅಲ್ಲಿರುವವರಿಗೆ ಸೂಚನೆಯನ್ನು ಕೊಡಲಾಗುತ್ತಿದೆ. ಆದರೆ ನಿಲ್ದಾಣದಲ್ಲಿ ಖಾಯಂ ಆಗಿ ನಿಲ್ಲದ ಕೆಲವು ಆಟೋ ಚಾಲಕರ ಬಗ್ಗೆ ದುರ್ವರ್ತನೆಯ ದೂರು ಬರುತ್ತಿದೆ. ಇಂತಹವರ ಮೇಲೆ ಕ್ರಮ ಜರುಗಿಸಲಾಗುವುದು. ಹಲವೆಡೆ ಆಟೋ ಚಾಲಕರು ಅನಧಿಕೃತವಾಗಿ ಆಟೋಗಳ ನಿಲುಗಡೆ ಮಾಡುತ್ತಿದ್ದಾರೆ. ಈ ಕುರಿತು ಚಾಲಕರಿಗೆ ಸೂಚನೆ ಕೂಡ ನೀಡಲಾಗಿದೆ. ಅಗತ್ಯವಿರುವೆಡೆ ನಿಲ್ದಾಣಗಳನ್ನು ಅಧಿಕೃತಗೊಳಿಸುವ ಪ್ರಕ್ರಿಯೆ ನಡೆಯಬೇಕಾಗಿದೆ. 
- ಸಂತೋಷ್‌ಕುಮಾರ್, ಸಂಚಾರಿ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ


ಶಿವಮೊಗ್ಗ: ನಗರದಲ್ಲಿ ಆಟೋ ಚಾಲಕರ ಬಗ್ಗೆ ಬಹುಹಿಂದಿನಿಂದಲೂ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಅಭಿಪ್ರಾಯ ಕೇಳಿಬರುತ್ತಿಲ್ಲ. ಇದಕ್ಕೆ ಆಯಾಯ ಸಾಂದರ್ಭಿಕ ಘಟನೆಗಳೇ ಕಾರಣ. ಕೆಲವು ಚಾಲಕರು ಮಾಡುವ ದುಷ್ಕೃತ್ಯಗಳಿಂದ ನಾಗರಿಕರು ಇಡೀ ಆಟೋ ಚಾಲಕ ಸಮುದಾಯವನ್ನೇ ದೂಷಿಸುವುದರ ಜೊತೆಗೆ ಅನುಮಾನದಿಂದ ನೋಡುವಂತಾಗಿದೆ. ಈಗ ಮತ್ತೆ ಅದೇ ಸಂದರ್ಭ ಎದುರಾಗಿದೆ.
ಬೆಂಗಳೂರಿನಿಂದ ಮನೆ ಬಿಟ್ಟು ಬಂದಿದ್ದ ಅಪ್ರಾಪ್ತ ವಿದ್ಯಾರ್ಥಿನಿಗೆ ರಕ್ಷಣೆ ನೀಡುವ ನೆಪದಲ್ಲಿ ರೈಲು ನಿಲ್ದಾಣದಿಂದ ಕರೆದೊಯ್ದು ಆಟೊ ಚಾಲಕರಿಬ್ಬರು ಅತ್ಯಾಚಾರ ಮಾಡಿದ ಘಟನೆ ಈಗ ರಾಜ್ಯವ್ಯಾಪಿ ಸುದ್ದಿಯಾಗಿದೆ.  ಇದರಿಂದ ಶಿವಮೊಗ್ಗದ ಆಟೋ ಚಾಲಕರನ್ನು ಸ್ಥಳೀಯ ಪ್ರಯಾಣಿಕರೇ ನಂಬದ ಸ್ಥಿತಿ ಎದುರಾಗಿದೆ. ಇದು ಸಜ್ಜನ ಆಟೋ ಚಾಲಕರಿಗೂ ತೊಂದರೆ ಉಂಟುಮಾಡಿದೆ.
ಇದಕ್ಕೆಲ್ಲ ಕಾರಣವನ್ನು ವಿಶ್ಲೇಷಿಸುತ್ತ ಹೋದರೆ  ಕಂಡುಬರುವುದು, ಕಂಡಕಂಡವರೆಲ್ಲ ಆಟೋ ಚಾಲಕರಾಗುತ್ತಿರುವುದು. ಚಾಲನಾ ಪರವಾನಿಗೆ ಇಲ್ಲದವರೂ ಆಟೋ ಚಾಲನೆ ಮಾಡುತ್ತಿದ್ದಾರೆ. ಸರಿಯಾಗಿ ಮೀಸೆ ಮೂಡದವರೂ ಆಟೋ ಚಾಲಕರು. ಇವರಿಗೆಲ್ಲ ನಿಶ್ಚಿತ ಆಟೋ ನಿಲ್ದಾಣವಿಲ್ಲ. ನಿರಂತರ ಸಂಚಾರಿಗಳು. ರಸ್ತೆ ಮಧ್ಯೆ ಪ್ರಯಾಣಿಕರು ಎಲ್ಲಿ ಕೈ ಮಾಡಿ ಕರೆಯುತ್ತಾರೋ ಅಲ್ಲಿಯೇ ಹತ್ತಿಸಿಕೊಂಡು ಹೋಗುವವರು. ಶಿಸ್ತಿನ ಚಾಲನೆ. ವೃತ್ತಿಯ ಗೌರವ, ಸಜ್ಜನಿಕೆಯ ನಡೆವಳಿಕೆ, ಕಾನೂನು, ಟ್ರಾಫಿಕ್ ನಿಯಮ ಏನೂ ಗೊತ್ತಿಲ್ಲ. ಹುಡುಗಾಟಿಕೆಯ ಮನೋಭಾವದಲ್ಲೇ ಚಾಲನೆ ನಡಸುತ್ತಿರುವುದು ಕಂಡುಬರುತ್ತಿದೆ.
ಎರಡನೆಯದಾಗಿ,  ನಗರದಲ್ಲಿ ಸುಮಾರು 5 ಸಾವಿರದಷ್ಟು ಆಟೋ ನೊಂದಣಿಯಾಗಿದೆ.  ಇವರಿಗೆ ಒಂದೇ ಒಂದೇ ಸಂಘಟನೆ ಇಲ್ಲ. ಇದರರ್ಥ ಹೇಳುವವರು-ಕೇಳುವವರು ಯಾರೂ ಇಲ್ಲ. ಅವರು ಆಡಿದ್ದೇ ಆಟ. ಪ್ರಯಾಣಿಕರೇ ಪ್ರಶ್ನಿಸಬೇಕಾದ ಸ್ಥಿತಿ ಇದೆ. ಬೇರೆ ಬೇರೆ ನಗರಗಳಲ್ಲಿ 2-3 ಸಂಘಟನೆಗಳಿವೆ. ಆದರೆ ಇಲ್ಲಿ ಸಂಘಟನೆಯೇ ಇಲ್ಲ. ಒಳ್ಳೆಯ ನಾಯಕನ ನೇತೃತ್ವದಲ್ಲಿ ಸಂಘಟನೆ ಮೊದಲು ಆಗಬೇಕಿದೆ. ಈ ಸಂಘಟನೆ ಇಂತಹ ಪುಂಡ ಆಟೋ ಚಾಲಕರನ್ನು ಕಂಡುಹಿಡಿದು ಕಿವಿ ಹಿಂಡುವುದರ ಜೊತೆಗೆ ಉಳಿದ ಚಾಲಕರಿಗೆ ಕಷ್ಟಕಾಲ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ನೆರವಾಗಲು ಅನುಕೂಲವಾಗುತ್ತದೆ. ಇದರ ಸದಸ್ಯನಾದವನು ಆ ಸಂಘಟನೆಯಲ್ಲಿ ಗುರುತಿಸಿಕೊಳ್ಳುತ್ತಾನೆ. ಆತನ ಪರಿಚಯ ಉಳಿದ ಸದಸ್ಯರಿಗೂ ಇರುತ್ತದೆ. ಇದರಿಂದ ದುಷ್ಕೃತ್ಯಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಆತ ಸಂಘಕ್ಕೆ ಬಾಧ್ಯಸ್ಥನಾಗುತ್ತಾನೆ.
ಮೂರನೆಯದಾಗಿ, ಸುಸಜ್ಜಿತ  ಆಟೋ ನಿಲ್ದಾಣ ಮತ್ತು ನಿಗದಿತ ಆಟೋಗಳು ಅಲ್ಲಿ ಇಲ್ಲದಿರುವುದು. ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ, ಯಾರು ಯಾವ ನಿಲ್ದಾಣಕ್ಕೆ ಬೇಕಾದರೂ ಹೋಗಿ ನಿಲ್ಲಬಹುದು. ಶಿಸ್ತು ಎನ್ನುವುದು ಇಲ್ಲಿಲ್ಲ. ಉದಾಹರಣೆಗೆ ಬಸ್ ನಿಲ್ದಾಣದ ಎದುರು ಗಮನಿಸಬಹುದು. ಇಲ್ಲಿ ನಾಲ್ಕಾರು ಆಟೋ ನಿಲ್ದಾಣಗಳಿವೆ. ಒಂದು ಅಥವಾ ಎರಡು ಕಡೆ ನಿಲ್ದಾಣ ಇದ್ದರೆ ಪ್ರಯಾಣಿಕರೇ ಅಲ್ಲಿಗೆ ಹೋಗಿ ಆಟೋ ಏರಿ ಹೋಗಬಹುದು. ಇದರಿಂದ ಪ್ರಯಾಣಿಕರಿಗೂ ರಕ್ಷಣೆ ಇರುತ್ತದೆ. ಯಾವ ಚಾಕ ಎಲ್ಲಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಾನೆ ಎನ್ನುವುದು ಉಳಿದವರಿಗೆ ತಿಳಿದಿರುತ್ತದೆ. ಈ ನಿಲ್ದಾಣಗಳು ಶೇ. 90ರಷ್ಟು ಅನಧಿಕೃತ. ಅಂದರೆ ಚಾಲಕರೇ ಮಾಡಿಕೊಂಡಂತಹವು. ಆರ್‌ಟಿಓ, ಪಾಲಿಕೆ, ಪೊಲೀಸ್ ಇವರಿಂದ ಅನುಮತಿ ಪಡೆದು ನಿರ್ಮಿತವಾದುವಲ್ಲ.
 ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದ ಬಳಿ ಆಟೋ ಚಾಲಕರ  ದುರ್ವರ್ತನೆ ಹೆಚ್ಚು. ಸದಾ ಜಗಳವಾಡುವುದು, ಮಹಿಳೆ ಮತ್ತು ಯುವತಿಯರು ಹೋಗುತ್ತಿದ್ದರೆ ಅವರನ್ನು ವಿಚಿತ್ರ ರೀತಿಯಲ್ಲಿ ಗಮನಿಸುವುದು, ಸಾರ್ವಜನಿಕವಾಗಿಯೇ ಬೀಡಿ, ಸಿಗರೇಟು ಸೇದುವುದು, ಶಿಸ್ತಿನಿಂದ ವರ್ತಿಸದಿರುವುದು ದಿನನಿತ್ಯ ಕಂಡುಬರುತ್ತಿದೆ. ಇಂತಹ ದುರ್ವರ್ತನೆಯನ್ನು ಬಿಟ್ಟರೆ ಮಾತ್ರ ಅಂತಹ ಚಾಲಕರ ಬಗ್ಗೆ ಪ್ರಯಾಣಿಕರಿಗೆ ನಂಬಿಕೆ, ವಿಶ್ವಾಸ ಮೂಡುತ್ತದೆ.
ಪ್ರಿಪೇಯ್ಡ್ ಆಟೋ ನಿಲ್ದಾಣ ಬಸ್ ನಿಲ್ದಾಣ, ರೈಲು ನಿಲ್ದಾಣದಂತಹ ಅನೇಕ ಪ್ರಮುಖ ಸ್ಥಳಗಳಲ್ಲಿ ಅಗತ್ಯವಿದೆ. ಇದು ಜನರಲ್ಲಿ ಹೆಚ್ಚಿನ ವಿಶ್ವಾಸವನ್ನು ಮೂಡಿಸುತ್ತದೆ. ಇದಿಲ್ಲದಿರುವುದರಿಂದ ಆಟೋ ಮೀಟರ್ ಕಡ್ಡಾಯವಿದ್ದರೂ ಶೇ.  50ಕ್ಕೂ ಅಧಿಕ ಚಾಲಕರು ಮಿನಿಮಮ್ ದರಕ್ಕಿಂತಲೂ ಹೆಚ್ಚಿನ ದರವನ್ನೇ ಕೇಳುತ್ತಾರೆ. ಕೊಡದಿದ್ದಾಗ ಜಗಳಕ್ಕಿಳಿಯುತ್ತಾರೆ. ಇವೆಲ್ಲ ದಿನನಿತ್ಯದ ಬೆಳವಣಿಗೆ.    
ಇತ್ತೀಚೆಗೆ ಯುವ ಆಟೋ ಚಾಲಕರ ಪುಂಡಾಟ ಮಿತಿಮೀರುತ್ತಿರುವ ಮಾತು ಚಾಲಕ ವಲಯದಲ್ಲೇ ಕೇಳಿಬರುತ್ತಿದೆ. ಇನ್ನಾದರೂ ಉಳಿದ ಆಟೋ ಚಾಲಕರು ಇಂತಹ ಪುಂಡರನ್ನು ತಾವೇ ಮುಂದಾಗಿ ನಿಗ್ರಹಿಸುವ ಅಥವಾ ಪೊಲೀಸರಿಗೆ ಇವರ ದುರ್ವರ್ತನೆ ಬಗ್ಗೆ ಮಾಹಿತಿ ಕೊಡುವ ಮೂಲಕ ತಡೆಯಬೇಕಿದೆ. ಇಲ್ಲವಾದಲ್ಲಿ ಎಲ್ಲಾ ಆಟೋ ಚಾಲಕರು ಮತ್ತೆ ಮತ್ತೆ ಜನವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ.   ಪ್ರಯಾಣಿಕರೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳದಿದ್ದರೆ ನಾಗರಿಕರಲ್ಲಿ ಒಳ್ಳೆಯ ಅಭಿಪ್ರಾಯ ಮೂಡುವುದಿಲ್ಲ, ಗೌರವವೂ ಸಿಗುವುದಿಲ್ಲ. ಇದನ್ನು ಗಳಿಸುವ, ಮೂಡಿಸುವ ಕೆಲಸ ಚಾಲಕರಿಂದಲೇ ಆಗಬೇಕಿದೆ.

No comments:

Post a Comment