Thursday, 25 January 2018


ಯುವಜನಾಂಗ ಮತಿ(ತ)ವಂತರಾಗುವುದೆಂದು?
 



 ಮತದಾನ ನಮ್ಮ ಹಕ್ಕು. ಅದನ್ನು ಕೊಡದಿದ್ದರೆ ನಾವು ಬಹುಶಃ ಚಳವಳಿ, ಪ್ರತಿಭಟನೆ ನಡೆಸುತ್ತಿದ್ದೇವೆಯೇನೋ. ಆದರೆ 18 ವರ್ಷ ತುಂಬಿದ ಎಲ್ಲ ಯುವಕ-ಯುವತಿಯರಿಗೆ ಈ ಹಕ್ಕನ್ನು ಕೊಟ್ಟಿದ್ದರಿಂದ ಇದರ ಮಹತ್ವವವನ್ನು ಅರಿಯದೆ ನಿರ್ಲಕ್ಷಿಸುತ್ತಿದ್ದೇವೆ. ಮತದಾನದ ಸೌಭಾಗ್ಯ ಸಿಕ್ಕಿತೆಂದು ಸಂಭ್ರಮಿಸಬೇಕಿತ್ತು. ಆದರೆ ರಜೆ ಸಿಕ್ಕಿತೆಂದು ಸಂತೋಷಪಡುತ್ತೇವೆ. ಎಲ್ಲಿಯವರೆಗೆ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಅರಿವಿರುವುದಿಲ್ಲವೋ ಅಲ್ಲಿಯವರೆಗೆ ದೇಶದ ಬಗ್ಗೆ ಕಾಳಜಿ ಹುಟ್ಟುವುದಿಲ್ಲ. ಪ್ರಜಾಪ್ರಭುತ್ವ ಅರ್ಥಪೂರ್ಣವಾಗಬೇಕಾದರೆ ನಮ್ಮ ಪಾಲ್ಗೊಳ್ಳುವಿಕೆ ಅವಶ್ಯ.




ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರತಿ ಚುನಾವಣೆಯಲ್ಲೂ ಸರಾಸರಿ ಮತದಾನವಾಗುವುದು ಕೇವಲ ಶೇಕಡಾ 65 ಪ್ರಮಾಣ ಮಾತ್ರ. ಅಂದರೆ ಇಡೀ ಪ್ರಪಂಚದಲ್ಲಿ ಮತದಾನದ ಬಗ್ಗೆ ದಿವ್ಯ ನಿರ್ಲಕ್ಷ್ಯ ಹೊಂದಿರುವ ದೇಶ ನಮ್ಮದಾಗಿದೆ.  ಉತ್ತಮ ಆಳ್ವಿಕೆ, ಸಶಕ್ತ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನಮ್ಮಲ್ಲಿ ಬಹುತೇಕರು ಮತ ಚಲಾಯಿಸಲು ಹೋಗುವುದಿಲ್ಲ. ಮತದಾನ ಪ್ರಕ್ರಿಯೆಯಲ್ಲಿ ನಮ್ಮ ದೇಶ ಅತ್ಯಂತ ಕೊನೆ ಸ್ಥಾನದಲ್ಲಿದೆ.
 ಜನಮನಕ್ಕೆ ಸ್ಪಂದಿಸಿ ಕೆಲಸ ಮಾಡುವ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಅಮೂಲ್ಯ ಅವಕಾಶ ಸಿಕ್ಕಿದೆಯಾದರೂ ಯಾರು ಬಂದರೇನು, ನಮಗೇನಾಗಬೇಕು ಎಂಬ ಆಲಸ್ಯದಲ್ಲೇ ಕಾಲಕಳೆಯುತ್ತೇವೆ, ಒಂದು ದಿನ ರಜಾ ಸಿಕ್ಕಿತೆಂಬ ಖುಷಿಯನ್ನೂ ಅನುಭವಿಸುತ್ತೇವೆ. ಆದರೆ ಇದೇ ಒಂದು ಮತ ದೇಶದ ಭವಿಷ್ಯವನ್ನು ನಿರ್ಧರಿಸಬಲ್ಲದು, ಉತ್ತಮ ಆಡಳಿತಗಾರರ‌್ನು ಆಯ್ಕೆ ಮಾಡಲು ನಾಂದಿಯಾದೀತೆಂಬ ಕನಿಷ್ಠ ಯೋಚನೆಯನ್ನೂ ಮಾಡುವುದಿಲ್ಲ.
ಇದೇ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳುವಂತೆ ಮಾಡುವ ದೃಷ್ಟಿಯಿಂದ 2011ರಲ್ಲಿ ಮತದಾರರ ದಿನವನ್ನು ಆಚರಿಸಲು ನಾಂದಿ ಹಾಡಲಾಯಿತು. ಇಂದು  (ಜ. 25)ಚುನಾವಣಾ ಆಯೋಗದ ಸಂಸ್ಥಾಪನಾ ದಿನವೂ ಹೌದು. ಪ್ರಸಕ್ತ ವರ್ಷ 8ನೆಯ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ.
18 ವರ್ಷ ತುಂಬಿದವರು ನಮ್ಮ ದೇಶದಲ್ಲಿ ಮತ ಚಲಾಯಿಸುವ ಹಕ್ಕನ್ನು ಪಡೆಯುತ್ತಾರೆ. ಇಂತಹ ಸೌಭಾಗ್ಯ ಸಿಕ್ಕಿತೆಂದು ಭಾವಿಸುವ ಬದಲು ಆ ದಿನವನ್ನು ನಿರ್ಲಕ್ಷಿಸುವ ಯುವಕ-ಯುವತಿಯರೇ ಹೆಚ್ಚುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ಮತದಾನದಿಂದ ಹೊರಗುಳಿಯುವವರಲ್ಲಿ ಬಹುತೇಕರು ಯುವಜನಾಂಗದವರೇ ಆಗಿರುತ್ತಾರೆ ಎನ್ನುವುದು ಕಂಡುಬರುತ್ತಿದೆ. ಇಂತಹವರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಮತದಾನದಿಂದ ಲಾಭವೇನು ಎಂದು ಕೇಳುವ ಜನರಿಗೆ ಅನಾಹುತವಾದಾಗ ಮಾತ್ರ ಎಚ್ಚರವಾಗುತ್ತದೆ. ಅಥವಾ ಕೆಟ್ಟ ಜನಪ್ರತಿನಿಧಿ ಆಯ್ಕೆಯಾಗಿ ಜನವಿರೋಧಿ ಕೆಲಸವನ್ನು ಮಾಡಿದಾಗ ಆತನನ್ನು ತೆಗಳುತ್ತೇವೆ. ಆದರೆ ತಾನು ಮತ ಚಲಾಯಿಸಿಲ್ಲ ಎನ್ನುವುದನ್ನು ಮಾತ್ರ ಮರೆಯುತ್ತೇವೆ. ಆಗ ನಮ್ಮ ತಪ್ಪಿನ ಅರಿವಾಗುತ್ತದೆ. 
 ಮತದಾರರು ತಮ್ಮ ನಿರ್ಣಯಾತ್ಮಕ ಹಕ್ಕನ್ನು ಕಳೆದುಕೊಳ್ಳಬಾರದು. ದೇಶವು 68ನೆಯ ಗಣರಾಜ್ಯ ಆಚರಿಸುತ್ತಿದ್ದರೂ ನಾವು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಮಹಿಳೆ ಮತ್ತು ಪುರುಷ ಇಬ್ಬರಿಗೂ ಸಮಾನ ಹಕ್ಕು ದಯಪಾಲಿಸಿದ ದೇಶ ನಮ್ಮದು ಎಂಬ ಹೆಮ್ಮೆ ನಮ್ಮದಾಗಿದೆ.  ಇಷ್ಟೊಂದು ದೊಡ್ಡ ಪ್ರಜಾಪ್ರಭುತ್ವ ದೇಶವಾದರೂ ಚುನಾವಣೆಗಳಲ್ಲಿ ಆಗುತ್ತಿರುವ ಸರಾಸರಿ ಕಡಿಮೆ ಎಂಬ ಹಣೆಪಟ್ಟಿಯನ್ನು ತೊಡೆದು ಹಾಕಬೇಕಾದರೆ ಪ್ರತಿಯೊಬ್ಬರೂ ತಮ್ಮ ಮತ ಹಕ್ಕು ಚಲಾಯಿಸಲೇಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗೆ ಸಿಕ್ಕ ಮತದಾನದ ಹಕ್ಕನ್ನು ಸಶಕ್ತವಾಗಿ ಬಳಸಿಕೊಳ್ಳಬೇೀಕು. ಯಾವುದಾದರೂ ಹಕ್ಕು ಚ್ಯುತಿಗೊಂಡಲ್ಲಿ ಅಥವಾ ಧಕ್ಕೆಯಾದಲ್ಲಿ ಅದನ್ನು ಏರುಧ್ವನಿಯಲ್ಲಿ ಪ್ರಶ್ನಿಸುವ ನಾವು, ಮತದಾನವೂ ಒಂದು ಹಕ್ಕು ಎನ್ನುವುದನ್ನು ಮರೆತುಬಿಡುತ್ತೇವೆ. ಇದು ಜಾಣಮರೆವಲ್ಲದೆ ಬೇರೇನೂ ಅಲ್ಲ. ಇದನ್ನೆಲ್ಲ ಮನಗಂಡು ಚುನಾವಣಾ ಆಯೋಗವು ಕಡ್ಡಾಯ ಮತದಾನದ ಬಗ್ಗೆ ಆಸಕ್ತಿ ವಹಿಸಿ ಜಾರಿಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಸಿಸ್ಟೆಮೆಟಿಕ್ ವೋಟರ್ಸ್ ಎಜುಕೇಶನ್ ಆಂಡ್ ಎಲೆಕ್ಟೋರಲ್ ಪಾರ್ಟಿಸಿಪೇಶನ್ (ಎಸ್‌ವಿಇಇಪಿ- ಸ್ವೀಪ್) ಎನ್ನುವುದು ಪ್ರಮುಖವಾದುದು.   
ಆಯೋಗ ಪ್ರತಿ ವರ್ಷದ ಜನವರಿ 1ನ್ನು ನಿಗದಿಯಾಗಿರಿಸಿಕೊಂಡು 18 ವರ್ಷ ತುಂಬಿದವರು ಮತದಾರರ ಯಾದಿಗೆ ಹೆಸರು ನೋಂದಾಯಿಸಿಕೊಳ್ಳಲು ಸಾಕಷ್ಟು ಬಗೆಯಲ್ಲಿ ಪ್ರಚಾರ ಮಾಡುತ್ತಿದೆ. ಆದರೂ ಶೇ. 20ರಿಂದ 25ರಷ್ಟು ಯುವಜನಾಂಗ ಇದರಲ್ಲಿ ತೊಡಗಿಕೊಳ್ಳುತ್ತಿಲ್ಲ ಎನ್ನುವ ಅಂಶ ದೊರೆತ ಹಿನ್ನೆಲೆಯಲ್ಲಿ ಜಾಗೃತಿಗೆ ಮುಂದಾಗಿದೆ. ಯುವ ಮತದಾರರನ್ನು ನೋಂದಾಯಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿದ ಮತ್ತು ಕೆಲಸ ಮಾಡಿದ ಸಂಘ-ಸಂಸ್ಥೆ, ಎನ್‌ಜಿಓ, ಅಧಿಕಾರಿ ಮತ್ತಿತರರನ್ನು ಸನ್ಮಾನಿಸುವ ಕೆಲಸವೂ ಈ ದಿನದಂದು ನಡೆಯುತ್ತದೆ.



ಮತದಾರರ ದಿನವನ್ನು ಎಲ್ಲಾ ಜಿಲ್ಲೆಗಳಲ್ಲೂ ಕಡ್ಡಾಯವಾಗಿ ಆಚರಿಸುವಂತೆ ಆಯೋಗ ಸೂಚಿಸಿರುವ ಹಿನ್ನೆಲೆಯಲ್ಲಿ ಆಚರಣೆ ನಡೆಯುತ್ತದೆ. ಮತದಾರರು ಅಂದು ಕಡ್ಡಾಯ ಮತಚಲಾವಣೆ ಬಗ್ಗೆ ಪ್ರಮಾಣವಚನ ಸ್ವೀಕರಿಸುವ, ಜಾಗೃತಿಗಾಗಿ ಬೀದಿ ನಾಟಕ, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಜಾಥಾ, ರ‌್ಯಾಲಿಗಳನ್ನು ಏರ್ಪಡಿಸಲಾಗುತ್ತಿದೆ. ಆಯೋಗದ ಉದ್ದೇಶ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರನ್ನು ಮತದಾರರ ಯಾದಿಗೆ ಸೇರಿಸಿಕೊಳ್ಳಬೇಕು ಮತ್ತು ಮತಗಟ್ಟೆಗೆ ಬಂದು ಮತಚಲಾವಣೆ ಮಾಡಬೇಕೆನ್ನುವುದಾಗಿದೆ. ಯುವಕರಲ್ಲಿ ಮತದಾನದ ಬಗ್ಗೆ ಇರುವ ನಿರಾಸಕ್ತಿಯನ್ನು ಹೋಗಲಾಡಿಸಲುವುದು ಈ ದಿನದ ಆಚರಣೆಯ ಉದ್ದೇಶವಾಗಿದೆ.
............................. 
ಉಡುಪಿ ಸರ್ಕಾರಿ ಬಸ್‌ಗೆ ‘ಖಾಸಗಿ’ ಕಾಟ
  ಪುಂಡರಿಂದ ಕಲ್ಲು ಎಸೆಯುವ, ಹಲ್ಲೆ ಮಾಡುವ ಕೆಲಸ 


 ಉಡುಪಿ- ಶಿವಮೊಗ್ಗ ಸರ್ಕಾರಿ ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ಹೆಚ್ಚುತ್ತಿದೆ. ಈ ಬಗ್ಗೆ ಪೊಲೀಸರಿಗೆ ಇಲಾಖೆ ದೂರು ನೀಡಿದೆ. ಜನವರಿ 19ರಂದು  ನಗರದ ಟೆಂಪೊಸ್ಟ್ಯಾಂಡ್ ಬಳಿ ಬೈಕ್ ಸವಾರನೊಬ್ಬ ಉಡುಪಿ ಬಸ್ ಚಾಲಕನಿಗೆ ಹೊಡೆದಿದ್ದಾನೆ. ಈ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ. 21ರಂದು  ಆಗುಂಬೆ ಬಳಿ ಪುಂಡರು ಬಸ್‌ಗೆ ಕಲ್ಲು ಹೊಡೆದಿದ್ದರಿಂದ ಚಾಲಕನ ಮುಂಭಾಗದ ಗಾಜು ಬಿದ್ದು ಪುಡಿಯಾಗಿದೆ. ಈ ಬಗ್ಗೆಯೂ ದೂರು ನೀಡಿದ್ದೇವೆ. ಪೊಲೀಸರು ಅಪರಾಧಿಗಳನ್ನು ಬಂಧಿಸಬೇಕು. ಪದೇ ಪದೇ ಇಂತಹ ಅಹಿತಕರ ಘಟನೆ ನಡೆಯುತ್ತಿರುವುದನ್ನು ತಡೆಯುವಂತೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ.
-ಅಶ್ರಫ್, ಶಿವಮೊಗ್ಗ ವಿಭಾಗಿಯ ನಿಯಂತ್ರಣಾಧಿಕಾರಿ



ಶಿವಮೊಗ್ಗ: ಇಲ್ಲಿ ಸರ್ಕಾರಿ ಬಸ್‌ಗೆ ಮಾತ್ರ ಕಲ್ಲು ಹೊಡೆಯುತ್ತಾರೆ. ಖಾಸಗಿ ಬಸ್‌ಗಳು ಯಾವ ತೊಂದರೆಯೂ ಇಲ್ಲದೆ ಸಂಚರಿಸಬಹುದು. ಕಲ್ಲು ಹೊಡೆಯುವವರು ಕ್ಷಣಮಾತ್ರದಲ್ಲಿ ಕಲ್ಲೆಸೆದು ಪರಾರಿಯಾಗುತ್ತಾರೆ. ಎಲ್ಲಿಂದ ಕಲ್ಲು ಬಂತು ಎಂದು ನೋಡಿದರೆ ಏನೂ ಗೊತ್ತಾಗುವುದಿಲ್ಲ. ಶಿವಮೊಗ್ಗದಿಂದ ಉಡುಪಿಗೆ ಸಂಚರಿಸುವ 10 ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಎದುರಾಗಿರುವ ಸಂಕಷ್ಟ ಇದು.
  ತೀರ್ಥಹಳ್ಳಿಯಿಂದ ಆಗುಂಬೆ ದಾಟುವುದರೊಳಗೆ ಈ ರೀತಿ ಕಲ್ಲೆಸೆದು ಪರಾರಿಯಾಗುವ ಪುಂಡರು ಹುಟ್ಟಿಕೊಂಡಿದ್ದಾರೆ. ಬಸ್‌ನ ಗಾಜು ಸಾಕಷ್ಟು ಬಾರಿ ಒಡೆದಿದೆ. ಕಿಟಕಿಯ ಗಾಜುಗಳು ಹಾನಿಗೊಳಗಾಗಿವೆ. ಆದರೆ ಯಾರ ಮೇಲೆ ದೂರು ಕೊಡುವುದು ಎಂದು ಚಾಲಕ- ನಿರ್ವಾಹಕ ಚಿಂತಿತರಾಗದೆ ದೂರು ಕೊಡುತ್ತಲೇ ಇದ್ದಾರೆ. ಆದರೆ ಪೊಲೀಸರು ಇನ್ನೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಹಾಗಾಗಿ ಇಂತಹ ಪುಂಡಾಟ ಪದೇ ಪದೇ ಮರುಕಳಿಸುತ್ತಿದೆ.
ಈ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ಗಳಿಗೆ ಒಂದೇ ಒಂದು ಕಲ್ಲು ಬೀಳುವುದಿಲ್ಲ. ದಿನನಿತ್ಯ ನೂರಾರು ಟ್ರಿಪ್ ಮಾಡಿದರೂ ಯಾರೂ ಕಲ್ಲೆಸೆಯುವುದಿಲ್ಲ. ಸರ್ಕಾರಿ ಬಸ್‌ಗೆ ಮಾತ್ರ ಈ ಸಂಕಷ್ಟ ಎದುರಾಗಿದೆ. ಕಾರಣ ಇಷ್ಟೆ. ಈ ಮಾರ್ಗದಲ್ಲಿ ಸರ್ಕಾರಿ ಬಸ್ ಸಂಚರಿಸುವುದರಿಂದ ಖಾಸಗಿಯವರಿಗೆ ಎದುರಾಗಿರುವ ಪ್ರಯಾಣಿಕರ ಸಮಸ್ಯೆ. ಬಹುತೇಕ ಪ್ರಯಾಣಿಕರು ಸುರಕ್ಷತೆ ಮತ್ತು ಸುಖಕರ ಪ್ರಯಾಣಕ್ಕಾಗಿ ಸರ್ಕಾರಿ ಬಸ್‌ನ್ನೇ ಅವಲಂಬಿಸುತ್ತಿದ್ದಾರೆ. ಓವರ್‌ಟೇಕ್, ಕಂಡಲ್ಲೆಲ್ಲ ಸ್ಟಾಪ್ ಕೊಡುವುದು, ಕರ್ಣಕಠೋರ ಹಾರ್ನ್, ಆವೇಶಭರಿತರಾಗಿ ಬಸ್ ಚಾಲನೆ ಮಾಡುವುದು, ಆಸನ ಕೊಡುತ್ತೇವೆಂದು ಹತ್ತಿಸಿಕೊಂಡು ನಿಂತೇ ಪ್ರಯಾಣಿಸುವಂತೆ ಮಾಡುವುದು ಮೊದಲಾದವುಗಳಿಂದ ಬೇಸತ್ತ ಪ್ರಯಾಣಿಕರು ಇವುಗಳಿಂದ ಮುಕ್ತಿ ಪಡೆಯಲು ಸರ್ಕಾರಿ ಬಸ್‌ಗೆ ಮೊರೆ ಹೋಗುತ್ತಿದ್ದಾರೆ.    ಇದು ಖಾಸಗಿಯವರ ನಿದ್ದೆ ಕೆಡಿಸಿದೆ. ಈಗ ನಿಲ್ದಾಣಗಳಲ್ಲಿ ಬಲವಂತವಾಗಿ ಸರ್ಕಾರಿ ಬಸ್ ಹತ್ತದಂತೆ ಮಾಡುವ ಕೆಲಸಕ್ಕೆ ಏಜೆಂಟರು ಮುಂದಾಗಿದ್ದಾರೆ. ತೀರ್ಥಹಳ್ಳಿಯಿಂದ ಆಗುಂಬೆಯವರೆಗೆ ಮಾತ್ರ ಈ ಕಿಡಿಗೇಡಿತನ ನಡೆಯುತ್ತಿದೆ. ಗ್ರಾಮಾಂತರ ಭಾಗದಲ್ಲಿ ಅಮಾಯಕರನ್ನು ಇದಕ್ಕಾಗಿ ಬಳಸಿಕೊಳ್ಳುವ ಕೆಲಸ ನಡೆಯುತ್ತಿದೆ. ಹೆದರಿಸಿ, ಬೆದರಿಸಿ ಸರ್ಕಾರಿ ಬಸ್ ಸಂಚಾರ ನಿಲ್ಲಿಸುವ ಕೆಲಸಕ್ಕೆ ಖಾಸಗಿಯವರು ಮುಂದಾಗಿದ್ದಾರೆ. ನ್ಯಾಯಾಲಯದ ಮೂಲಕ ತಡೆಯಾಜ್ಞೆ ತರಲು ವಿಫಲರಾದಾಗ ಉಡುಪಿಯ ಸಾರಿಗೆ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಬಸ್ ಸಂಚಾರಕ್ಕೆ ಅನುಮತಿ ನೀಡದಂತೆ ಮಾಡಲೆತ್ನಿಸಿ ಅಲ್ಲಿಯೂ ವಿಫಲರಾದ ಖಾಸಗಿ ಬಸ್ ಮಾಲಕರು ಈಗ ಗೂಂಡಾಗಿರಿ ಮತ್ತು ಹಲ್ಲೆಯತ್ತ ಹೆಜ್ಜೆ ಇಟ್ಟಿದ್ದಾರೆ. 
ಇತ್ತೀಚೆಗೆ ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲೇ ಸರ್ಕಾರಿ ಬಸ್ ನಿರ್ವಾಹಕನಿಗೆ ಬಸ್ ಏಜೆಂಟನೊಬ್ಬ ಹೊಡೆದಿದ್ದನು. ಇದು ಪ್ರಕರಣ ದಾಖಲಾದರೂ ಆರೋಪಿಯ ಬಂಧಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿಲ್ಲ. ಇದರಿಂದ ಉತ್ತೇಜನ ಸಿಕ್ಕಂತಾಗಿರುವುದರಿಂದ ಪದೇ ಪದೇ ಬೈಕ್‌ನಲ್ಲಿ ಬಂದು ಕಲ್ಲೆಸೆದು ಹೇಡಿಗಳಂತೆ ಓಡಿ ಹೋಗುವ ಪದ್ದತಿ ಆರಂಭಿಸಿದ್ದಾರೆ. ತನಗೆ ಸೈಡ್ ಕೊಡಲಿಲ್ಲ ಎಂದು ಬಸ್ ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ಸಹ ಆಗುಂಬೆ ಬಳಿ ನಡೆದಿತ್ತು. ಆಗ ದೂರು ದಾಖಲಾಗಿದೆ. ಇಷ್ಟೆಲ್ಲ ಆದ ನಂತರ ಈಗ ಕಲ್ಲೆಸೆಯುವ  ಕೆಲಸ ಆರಂಭವಾಗಿದೆ.
ಕೆಎಸ್ಸಾರ್ಟಿಸಿ ಬಸ್‌ಗೆ ಉತ್ತಮ ಪ್ರತಿಕ್ರಿಯೆ ಸಿಗುವುದನ್ನು ಸಹಿಸಿಕೊಳ್ಳಲಾಗದೆ ಹತಾಶರಾದ ಖಾಸಗಿ ಬಸ್ ಏಜೆಂಟರು ಕೆಲವು ಮಾಲಕರ ಕುಮ್ಮಕ್ಕಿನಿಂದ ಈ ದುಷ್ಕೃತ್ಯ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೊಲೀಸರು ಸೂಕ್ತ ಕ್ರಮ ಜರುಗಿಸುವುದೇ ಉತ್ತರ. ಆದರೆ ಕಲ್ಲು ತೂರಾಟದಿಂದ ಚಾಲಕರು ಮತ್ತು ನಿರ್ವಾಹಕರಿಗೆ ಭೀತಿ ಎದುರಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. 
..................................................

Thursday, 21 December 2017





 
  ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟ 
ಈರ್ ಮಾಸ್ತೆವ್ವ ನಾಟಕ




ಹೆಣ್ಣು, ಹೊನ್ನು, ಮಣ್ಣಿಗಾಗಿ ಹಿಂದಿನ ಕಾಲದಲ್ಲಿ ಅಸಖ್ಯಾಂತ ಹೋರಾಟಗಳು ನಡೆದಿರುವುದು ಇತಿಹಾಸದ ಸಂಗತಿಗಳಾಗಿವೆ. ಈ ನಾಟಕದಲ್ಲಿ ಸ್ನೇಹ, ಊರಿನ ಪ್ರತಿಷ್ಠೆ, ಮಹಿಳೆಯರ ಮಾನ, ಗೌರವ ಕಾಪಾಡುವ ಸಲುವಾಗಿ ಮಹಿಳೆಯರು ಹೇಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಘಟನೆಯನ್ನು ನೈಜವಾಗಿ ರಂಗದ ಮೇಲೆ ತರುವ ಮೂಲಕ ಹಿಂದಿನ ಘಟನೆಗಳನ್ನು ಸ್ಮರಿಸಿದ್ದಾರೆ. ಇದರ ಜೊತೆಗೆ ಮಾಸ್ತಿಕಲ್ಲು ಹಾಗೂ ವೀರಗಲ್ಲುಗಳ ಮಹತ್ವವನ್ನು ಮತ್ತು ಅದರ ಇತಿಹಾಸವನ್ನು ಸಂರಕ್ಷಿಸಿ ಮುಂದಿನ ತಲೆಮಾರಿನವರಿಗೆ ಅದರ ಪ್ರಾಮುಖ್ಯತೆಯನ್ನು ತಿಳಿಸುವ ನಾಟಕದ ನಿರ್ದೇಶಕರ ಚಿಂತನೆ ಜಾಣ್ಮೆ ಮೆಚ್ಚುವಂತದ್ದ


 ಕಲೆಯ ಎಲ್ಲ ಪ್ರಕಾರಗಳಿಗಿಂತ ನಾಟಕ ಪ್ರಕಾರ ಹೆಚ್ಚು ಪರಿಣಾಮಕಾರಿ. ದೃಶ್ಯ ಮಾಧ್ಯಮವಾಗಿರುವ ಈ ಕಲಾಪ್ರಕಾರಕ್ಕೆ ಪ್ರೇಕ್ಷಕರನ್ನು ಹಿಡಿದಿಡುವುದು  ಒಂದು ಸವಾಲಿನ ಕೆಲಸವೇ ಸರಿ. ಉತ್ತಮ ಕಥಾ ಹಂದರವನ್ನು ಹೊಂದಿದ್ದರೆ ಆ ನಾಟಕ ಪ್ರೇಕ್ಷಕರನ್ನು ಹಿಡಿದಿಡಬಹುದು ಎನ್ನುವುದಕ್ಕೆ ಈರ್ ಮಾಸ್ತೆವ್ವ ನಾಟಕ ಒಂದು ಉದಾಹರಣೆ.
ತ್ಯಾಗ, ಬಲಿದಾನದ ಮೂಲಕ ಹೆಣ್ಣು ಹೇಗೆ ಅರ್ಪಣಾ ಮನೋಭಾವದಿಂದ ತನ್ನನ್ನು ಸಮಾಜಕ್ಕೆ ಸಮರ್ಪಿಸಿಕೊಳ್ಳುತ್ತಾಳೆ, ಆತ್ಮ ಗೌರವಕ್ಕೆ ಧಕ್ಕೆ ಬಂದಾಗ  ಸಿಡಿದೆದ್ದು ನಿಂತು  ಊರಿನ ಘನತೆ, ಗೌರವವನ್ನು ಕಾಪಾಡುತ್ತಾಳೆ ಎನ್ನುವುದನ್ನು ಸಮರ್ಥವಾಗಿ ಅಷ್ಟೇ ಸರಳವಾಗಿ ನಿರೂಪಿಸಿದ ಜಾನಪದ ನಾಟಕ ಇದಾಗಿದೆ.
ಭದ್ರಾವತಿಯ ಶಾಂತಲಾ ಕಲಾ ವೇದಿಕೆ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಕುವೆಂಪು  ರಂಗಮಂದಿರದಲ್ಲಿ ಪ್ರದರ್ಶಿದ  ಒಂದು ವೀರ ಮಹಾಸತಿ ಕಲ್ಲಿನ ಕಥೆ ವ್ಯಥೆ ಆಧಾರಿತ ಈರ್‌ಮಾಸ್ತೆವ್ವೆ ಉತ್ತರ ಕರ್ನಾಟಕ ಸೀಮೆಯ ಗ್ರಾಮ್ಯ ಸೊಗಡಿನ ಜಾನಪದ ಐತಿಹಾಸಿಕ ನಾಟಕವಾಗಿದೆ. ಇದು  ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟಿದ್ದಲ್ಲದೆ ಅದ್ಭುತ ಪ್ರದರ್ಶನ ಎಂಬ ಪ್ರಶಂಸೆಗೆ ಪ್ರತಿಯೊಬ್ಬರಿಂದಲೂ ಪಾತ್ರವಾಯಿತು. ಕಲಾವಿದರು ಯಾವುದೇ ವೃತ್ತಿಪರ ಕಲಾವಿದರಿಗೆ ಕಡಿಮೆ ಇಲ್ಲದಂತೆ ಪ್ರದರ್ಶಿಸಿದ್ದನ್ನು ಶ್ಲಾಘಿಸಲೇಬೇಕು. ಸಂಭಾಷಣೆ ಸಂಪೂರ್ಣ ಉತ್ತರ ಕರ್ನಾಟಕದ ಶೈಲಿಯಲ್ಲಿದ್ದು, ಪಾತ್ರಧಾರಿಗಳು ಸಹ ಆ ಭಾಗದ ಉಡುಗೆ ತೊಡುಗೆಗಳನ್ನು ಧರಿಸಿ ಅಭಿನಯಿಸಿದ್ದು ಪ್ರೇಕ್ಷಕರಿಗೆ ಹೊಸತನದ ಮದ ನೀಡುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ರುಂಡ ಬೆತ್ತಲೆಯಾಗಿ ಮುಂಡ   ಚಂಡಾಡೇ..ರಂಡೆಯೋರ್ವಳು ಬಂಡೆದ್ದ ಸದೆಬಡಿಯೇ. ಬೆಂಡೆದ್ದು ಮುಳುಗೀತೊ...! ಗುಂಡೆದ್ದು ತೇಲಿತೊ...! ಬಂಡೆದ್ದ ರುಂಡ ಕಡಿದು ಧೆರೆಗುರುಳಿತೋ....! ಇದು ಮುಳ್ಳಾವಿಗೆ ಜಂಗಮ ಹಾವಯ್ಯನ ಕಾರ್ಣೀಕ ನುಡಿ.
ಅಂದಿನ ಕಾಲದಲ್ಲಿ ವೀರ ವನಿತೆಯರು ಗ್ರಾಮದ ಉದ್ಧರಕ್ಕಾಗಿ ಅಥವ ಗಂಡಾತರಗಳನ್ನು ನೀಗಿಸಲು ತಮ್ಮನ್ನು ತಾವೇ ಬಲಿ ನೀಡಿದುದರ ನೆನಪಿಗಾಗಿ ವೀರ ಮಹಾಸತಿ ಕಲ್ಲುಗಳನ್ನು ಊರ ಮುಂದಣ ಅಗಸೆಬಾಗಿಲುಗಳಲ್ಲಿ ನೆಡುತ್ತಿದ್ದರು. ಇವುಗಳು ನಮ್ಮ ಪೂರ್ವಜರ ಇತಿಹಾಸವನ್ನು ತಿಳಿಸುವ ನೈಜ ಕುರುಹುಗಳಾಗಿವೆ. ಇಂತಹ ಕುರುಹುಗಳ ಮಾಹಿತಿಗಳು ಸರ್ಕಾರದ ಯಾವುದೇ ಇಲಾಖೆಗಳಲ್ಲಿ ದೊರೆಯುವುದಿಲ್ಲ. ಹಾಗಾಗಿ ಅಂತಹ ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಯವರಿಗೆ ತಿಳಿಸಬೇಕಾಗಿದೆ. ತ್ಯಾಗ ಬಲಿದಾನದ ಕುರುಹಾದ ವೀರ ಮಹಾಸತಿ ಕಲ್ಲುಗಳು ಇಂದು ಏನಾಗಿವೆ ಎನ್ನುವುದರ ಸಂಶೋಧನೆಗಿಳಿದ ವಿಧ್ಯಾರ್ಥಿನಿಗೆ ಹೆಳವರ ಗಿರಿಯಜ್ಜನಿಂದ ದೊರೆತ ಮಾಹಿತಿ ಏನು ಎನ್ನುವುದೇ ನಾಟಕದ ಕಥಾವಸ್ತುವಾಗಿದೆ.
ಹೆಣ್ಣು, ಹೊನ್ನು, ಮಣ್ಣಿಗಾಗಿ ಹಿಂದಿನ ಕಾಲದಲ್ಲಿ ಅಸಖ್ಯಾಂತ ಹೋರಾಟಗಳು ನಡೆದಿರುವುದು ಇತಿಹಾಸದ ಸಂಗತಿಗಳಾಗಿವೆ. ಈ ನಾಟಕದಲ್ಲಿ ಸ್ನೇಹ, ಊರಿನ ಪ್ರತಿಷ್ಠೆ, ಮಹಿಳೆಯರ ಮಾನ, ಗೌರವ ಕಾಪಾಡುವ ಸಲುವಾಗಿ ಮಹಿಳೆಯರು ಹೇಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಘಟನೆಯನ್ನು ನೈಜವಾಗಿ ರಂಗದ ಮೇಲೆ ತರುವ ಮೂಲಕ ಹಿಂದಿನ ಘಟನೆಗಳನ್ನು ಸ್ಮರಿಸಿದ್ದಾರೆ. ಇದರ ಜೊತೆಗೆ ಮಾಸ್ತಿಕಲ್ಲು ಹಾಗೂ ವೀರಗಲ್ಲುಗಳ ಮಹತ್ವವನ್ನು ಮತ್ತು ಅದರ ಇತಿಹಾಸವನ್ನು ಸಂರಕ್ಷಿಸಿ ಮುಂದಿನ ತಲೆಮಾರಿನವರಿಗೆ ಅದರ ಪ್ರಾಮುಖ್ಯತೆಯನ್ನು ತಿಳಿಸುವ ನಾಟಕದ ನಿರ್ದೇಶಕರ ಚಿಂತನೆ ಜಾಣ್ಮೆ ಮೆಚ್ಚುವಂತದ್ದಾಗಿದೆ.
ಸಂಶೋಧನಾ ವಿದ್ಯಾರ್ಥಿಯಾಗಿ ಎ.ಎಂ.ನೇತ್ರಾವತಿ ಕುತೂಹಲದಿಂದ ಮಾಸ್ತಿಕಲ್ಲುಗಳನ್ನು ವೀಕ್ಷಿಸಿ ಅದರ ಇತಿಹಾಸದ ಬಗ್ಗೆ ಕೇಳುವ ಹಾಗೂ ಅದರ ಮಹತ್ವವನ್ನು ಅರಿಯುವ ಮನೋಭಾವದ ಪರಿ ಇಂದಿನ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಹೆಳವರ ಗಿರಿಯಜ್ಜನ ಮುದುಕನ ಪಾತ್ರದಲ್ಲಿ ಕತ್ತಲಗೆರೆ ತಿಮ್ಮಪ್ಪ ತಮ್ಮ ಅಭಿನಯದ ಮೂಲಕ ವೃಧ್ಧನ ಪಾತ್ರಕ್ಕೆ ಜೀವ ತುಂಬಿದರು. ಕಥೆಯನ್ನು ಅಚ್ಚುಕಟ್ಟಾಗಿ ಸಂಶೋಧನಾ ವಿಧ್ಯಾರ್ಥಿಗೆ ನಾಟಕದೂದ್ದಕ್ಕೂ ತಿಳಿಸುವ ಶೈಲಿ ಅರ್ಥ ಪೂರ್ಣವಾಗಿದ್ದು,  ನಾಟಕವನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗುವಲ್ಲಿ ಯಶಸ್ವಿಯಾಯಿತು.
         ಮಲ್ಲಯ್ಯಪುರದ ನಾಡಗೌಡ ಮಲ್ಲನ ಗೌಡನಾಗಿ ಅಪೇಕ್ಷಾ ಮಂಜುನಾಥ ಪಾತ್ರಕ್ಕೆ ತಕ್ಕಂತೆ ಹಿರಿಯ ಗೌಡನಾಗಿ ಅಭಿನಯಿಸಿದ್ದಾರೆ, ಮಗ ವೀರನಗೌಡನಾಗಿ ಟಿ.ಲೋಕೇಶ್, ಶಿವದುರ್ಗದ ಯುವ ದೇಸಾಯಿ ಲಿಂಗಣ್ಣ ದೇಸಾಯಿಯಾಗಿ ಎಲ್.ವರದರಾಜು, ಲಿಂಗಣ್ಣ ದೇಸಾಯಿ ಸೋದರ ಸಂಬಂಧಿ ಗುರುಲಿಂಗ ದೇಸಾಯಿಯಾಗಿ ಎಂ.ವಿರುಪಾಕ್ಷಪ್ಪ, ಗುರುಲಿಂಗ ದೇಸಾಯಿ ಆಪ್ತ ಈರ‌್ಯನಾಗಿ ವಿರುಪಾಕ್ಷಯ್ಯ ಹಿರೇಮಠ್ ನಂಬಿಕಸ್ಥ ಭಂಟಬಾಗಿ ಮಾಡಿರುವ ಅಭಿನಯ ಮನಸ್ಸಿನಲ್ಲಿ ಉಳಿಯುವಂತಿದೆ, ಮಲ್ಲನಗೌಡರ ಒಡನಾಡಿ ಆಪ್ತ ಗುರವಜ್ಜನಾಗಿ ವೈ.ಕೆ.ಹನುಮಂತಯ್ಯ, ವಾಡೇದ ಕರಣಿಕ ನರಸಪ್ಪಯ್ಯನಾಗಿ ಜಿ.ವಿ.ಸದಾಶಿವಪ್ಪ ನಾಟಕ ಕಥೆಗೆ ತಕ್ಕಂತೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಾಟಕ ನಿರಾಂತಕವಾಗಿ ಮುಂದುವರೆಯುವಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
      ಇನ್ನು ನಾಟಕದ ಪ್ರಮುಖ ಪಾತ್ರ ಮುಳ್ಳಾವಿಗೆ ಜಂಗಮ ಹಾವಯ್ಯನಾಗಿ ಬಸನಗೌಡ ಮಾಳಗಿ ಸಮರ್ಥವಾಗಿ ಮುಳ್ಳಾವಿಗೆ ಮೇಲೆ ನಿಂತು ಹೇಳುವ ಭಾವಪೂರ್ಣ ಭಂಗಿ ಪ್ರೇಕ್ಷಕರ ಮನದಲ್ಲಿ  ಅಚ್ಚೊತ್ತುವಂತಿದೆ. ನಾಟಕದಲ್ಲಿ ಅದು 3-4 ಭಾರಿ ಪುನರಾವರ್ತನೆಯಾಗಿದೆ. ಅವರ ಧ್ವನಿ ದೃಶ್ಯಕ್ಕೆ ಗಡಸುತನದಿಂದ ಕೂಡಿದ್ದು ಜನರಿಗೆ ನಿಜಕ್ಕೂ ಕಾರ್ಣಿಕದ ಜಂಗಮರ ನೆನೆಪನ್ನು ತರಿಸಿತು.
ಈರ‌್ಯಾನ ನಂಬಿಕಸ್ತ ಭಂಟರಾಗಿ ಹೆಚ್.ಮಲ್ಲಿಕಾರ್ಜುನ್ ಮತ್ತು ಚಿದಾನಂದ, ಓಲೆಕಾರ ತಲವಾರ ಸಂಕನಾಗಿ ಕಾ.ರಾ.ನಾಗರಾಜ್ ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ಮಾಡಿದ್ದಾರೆ. ಮಲ್ಲನ ಗೌಡರ ಮಗಳು ಮಲ್ಲವ್ವನಾಗಿ ದೀಪ್ತಿ ಶ್ರೀಹರ್ಷ  ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದರು. ತಮ್ಮ ಭಾವ ಪೂರ್ಣ ಅಭಿನಯ ಮಾಡಿದಲ್ಲದೆ ಕೊನೆಯ ಎರಡು ದೃಶ್ಯದಲ್ಲಿ ಅವರ ರೌದ್ರಾವತಾರದ ಭಾವಾಭಿನಯ, ವಿಕಟ ನಗೆ, ಆಂಗಿಕ ಅಭಿನಯ, ಸಭಿಕರ ಮನದಲ್ಲಿ ಬಹಳ ಕಾಲ ನೆನೆಪಿನಲ್ಲಿ ಉಳಿಯುವಂತೆ ಮಾಡಿತು. ಜೊತೆಗೆ ತಾನೊಬ್ಬ ಸಮರ್ಥ ಮತ್ತು ಪರಿಪಕ್ವ ನಟಿ ಎನ್ನುವುದನ್ನು ಅವರು ಸಾಬೀತುಪಡಿಸಿದರು. ಇಡೀ ನಾಟಕಕ್ಕೆ ಜೀವಕಳೆ ತುಂಬಿದ್ದೇ ಅವರ ಪಾತ್ರ.
       ಮಲ್ಲವ್ವನ ಅತ್ತಿಗೆ ನೀಲವ್ವನಾಗಿ ಮಮತಾ (ಸುನೀತಾ) ಗಿರೀಶ್ ಪಾತ್ರಕ್ಕೆ ತಕ್ಕ  ನ್ಯಾಯ ಒದಗಿಸಿದ್ದಾರೆ.  ನಾಟಕದಲ್ಲಿ ಎಲ್ಲ ಪಾತ್ರವನ್ನು ಅಚ್ಚುಕಟ್ಟಾಗಿ ದೃಶ್ಯಕ್ಕೆ ತಕ್ಕಂತೆ ಸಮರ್ಥವಾಗಿ ನಿಭಾಯಿಸಿರುವುದು ನಾಟಕದ ಪ್ಲಸ್ ಪಾಯಿಂಟ್ ಎನ್ನಬಹುದು. 
ಈ ನಾಟಕದ ರಚನೆ, ವಿನ್ಯಾಸ, ಸಂಗೀತ, ನಿರ್ದೇಶನ ಎಸ್.ಜಿ.ಶಂಕರಮೂರ್ತಿ ಅವರದ್ದಾಗಿದ್ದು ಎಂದಿನಂತೆ ಅವರು ತಮ್ಮ ಜೀವನದ ಅನುಭವವನ್ನು ಇಲ್ಲಿ ಸಂಪೂರ್ಣ ಧಾರೆ ಎರೆದು ನಾಟಕದ ಶ್ರೀಮಂತಿಕೆಗೆ ಕಾರಣಕರ್ತರಾಗಿದ್ದಾರೆ , ಬೆಳಕು ವಿನ್ಯಾಸ ಹೆಚ್.ಬಿ.ಉಮೇಶ್ ರಾವ್, ಸಹಾಯಕ ನಿರ್ದೇಶನ ವಿರುಪಾಕ್ಷಯ್ಯ ಹಿರೇಮಠ ಅವರದು. ನಾಟಕದ ಧ್ವನಿ ಮುದ್ರಣದಿಂದ ಕೂಡಿದ್ದರಿಂದ ಎಲ್ಲೂ ಸಂಭಾಷಣೆ, ಅಸ್ಪಷ್ಟ ಮಾತು, ಮೈಕ್ ಸಮಸ್ಯೆ ಎದುರಾಗಲಿಲ್ಲ. ಹಿನ್ನೆಲೆ ಗಾಯನವನ್ನು (ಜಾನಪದ ಗೀತೆ) ಬಹು ಸುಂದರವಾಗಿ ಹಾಡಿದ್ದು, ಎಲ್ಲರೂ ಗುನುಗುನಿಸುವಂತೆ ಮಾಡಿತು. 
ನಾಟಕವನ್ನು ಧ್ವನಿ ಮುದ್ರಣ ಮಾಡುವುದಕ್ಕಿಂತ ಸಹಜವಾಗಿಯೇ ನಟರು ತಮ್ಮ ಧ್ವನಿಯ ಮೂಲಕ ಅಭಿನಯಿಸಬೇಕಿತ್ತು. ಇದರಿಂದ ನಾಟಕಕ್ಕೆ ಇನ್ನಷ್ಟು ಕಳೆಕಟ್ಟುತ್ತಿತ್ತು. ಈ ನಾಟಕದಲ್ಲಿ ಕಲಾವಿದರು ಮಾತನಾಡದೆ ಕೇವಲ ಮಾತನಾಡುವಂತೆ ತುಟಿ ಚಲನೆ ಮಾಡಿದ್ದು ಕಂಡುಬಂದಿತು ಧ್ವನಿಮುದ್ರಣದ ಪ್ರದರ್ಶನ ಹೊಸ ಬಗೆಯಾಗಿ ಗೋಚರಿಸಿತು. ಇದೊಂದನ್ನು ಬಿಟ್ಟರೆ ಅನುಭವಿ ನಿರ್ದೇಶನ, ಕಲಾವಿದರು ಮೇಳೈಸಿದ ಪ್ರದರ್ಶನ ಇದಾಗಿತ್ತು.
.......................................
ಹಳ್ಳಿಗಳಲ್ಲಿ ಓಡಲಿದೆ ಸರ್ಕಾರಿ ಬಸ್




ಒಬ್ಬ ಅಧಿಕಾರಿಗೆ ಜನಪರ ಕಾಳಜಿ ಇದ್ದರೆ ಸಾರ್ವಜನಿಕ ಕೆಲಸಕ್ಕೆ ಯಾರು ಎಷ್ಟೇ ಅಡ್ಡಿ ಮಾಡಿದರೂ ಅದನ್ನು ಲೆಕ್ಕಕ್ಕೆ ತೆಗದುಕೊಳ್ಳದೆ ಜನೋಪಕಾರಿ ಅಥವಾ ಸಮಾಜಮುಖಿ ಕೆಲಸವನ್ನೇ ಮಾಡುುತ್ತಾನೆ. ಜಿಲ್ಲೆಯಲ್ಲಿ ಇಂತಹ ಜಿಲ್ಲಾಧಿಕಾರಿ ಇರುವುದು ಜನರಿಗೆ ಅನುಕೂಲವಾಗಿದೆ. ಖಾಸಗಿ ಬಸ್‌ನವರ ದೌರ್ಜನ್ಯ, ದಬ್ಬಾಳಿಕೆಯಿಂದ ಬೇಸತ್ತಿದ್ದ ಜನರಿಗೆ ಈಗ ಅವರ ಹಳ್ಳಿಗೂ ಸರ್ಕಾರಿ ಬಸ್ ಸೌಲಭ್ಯ ಸಿಗಲು ನೆರವಾಗಿದ್ದಾರೆ. ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಇಲ್ಲಿಯವರೆಗೆ ಸಲ್ಲಿಸಿದ ಮನವಿಯನ್ನೆಲ್ಲ ಕಸದ ಬುಟ್ಟಿಗೆ ಎಸೆದು, ಖಾಸಗಿಯವರ ಪರ ಕೆಲಸ ಮಾಡಿದ ಆರ್‌ಟಿಒ ಅಧಿಕಾರಿಗಳು, ಇನ್ನಾದರೂ ತಮಗೆ ಸಂಬಳ ಕೊಡುವ ಸರ್ಕಾರದ ನಿಗಮವಾದ ಕೆಎಸ್ಸಾರ್ಟಿಸಿ ಪರ ನಿಲ್ಲಬೇಕಿದೆ. ಜಿಲ್ಲೆಯಲ್ಲಿ ನಿಗಮದ ಬಸ್ ಇನ್ನೂ ಹೆಚ್ಚು ಪ್ರಮಾಣದಲ್ಲಿ ಓಡಿಸಲು ಕೆಎಸ್ಸಾರ್ಟಿಸಿಯವರೂ ಲಕ್ಷ್ಯ ವಹಿಸಬೇಕಿದೆ. 

ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಬೇಕೆನ್ನುವ ನಾಗರಿಕರ ಬೇಡಿಕೆ ಈಗ ಬಗೆಹರಿಯುವ ಹಂತಕ್ಕೆ ಬಂದಿದೆ. ಶಿವಮೊಗ್ಗದಲ್ಲಿ ನಿಗಮವು ವಿಭಾಗಿಯ ಕಚೇರಿಯನ್ನು ಆರಂಭಿಸಿದ ನಂತರ ಹೊಸ ಬಸ್‌ಗಳು ಬರಲಾರಂಭಿಸಿದ್ದು, ಮಾರ್ಗದ ಸರ್ವೆಯೂ ನಡೆದಿದೆ. ಮೊನ್ನೆ ಜರುಗಿದ ರಸ್ತೆ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಸುಮಾರು 49 ಬಸ್‌ಗಳಿಗೆ ಪರವಾನಿಗೆಯೂ ದೊರೆತಿದೆ.
ಖಾಸಗಿ ಬಸ್‌ನವರ ಆಟಾಟೋಪ, ದಬ್ಬಾಳಿಕೆ ಮತ್ತು ದೌರ್ಜನ್ಯದಿಂದ ಮುಕ್ತಿಯೇ ಇಲ್ಲ ಎನ್ನುವಂತಹ ವಾತಾವರಣ ದೂರವಾಗುವ ಸಂದರ್ಭ ಹತ್ತಿರ ಬಂದಿದೆ. ಇಲ್ಲಿಯವರೆಗೆ ಅವರದ್ದೇ ದರ್ಬಾರ್ ಇದ್ದುದರಿಂದ ಬಾಯ್ಮುಚ್ಚಿ ಸಂಚರಿಸಬೇಕಾದ ಅನಿವಾರ್ಯತೆ ಇತ್ತು. ಆದರೆ ಈಗ ಬದಲಾವಣೆಯ ಸಮಯ ಬಂದಿದೆ. ಸೊರಬ, ಶಿಕಾರಿಪುರ ಮತ್ತು ಶಿವಮೊಗ್ಗ ಗ್ರಾಮಾಂತರ ಹಾಗೂ ಹೊನ್ನಾಳಿ ತಾಲೂಕಿನ ಸಾಕಷ್ಟು ಹಳ್ಳಿಗಳಿಗೆ ನಿಗಮವು ಕೆಲವೇ ವಾರಗಳಲ್ಲಿ ಬಸ್ ಬಿಡಲು ತೀರ್ಮಾನಿಸಿದೆ. 
ಪ್ರಾಧಿಕಾರದ ಸಭೆಯಲ್ಲಿ ಈ ತಾಲೂಕುಗಳ ಗ್ರಾಮಸ್ಥರು ಅನುಭವಿಸುತ್ತಿರುವ ಸಮಸ್ಯೆ, ವಿದ್ಯಾರ್ಥಿಗಳು ಪಡುತ್ತಿರುವ ಪಡಿಪಾಲನ್ನು ಹಲವರು ಎಳೆಎಳೆಯಾಗಿ ಬಿಚ್ಚಿಟ್ಟಾಗ ಖಾಸಗಿಯವರ ಏಕಸ್ವಾಮ್ಯದಿಂದ ಆಗುತ್ತಿರುವ ತೊಂದರೆಯನ್ನು ಕೇಳಿ ಸ್ವತಃ ಜಿಲ್ಲಾಧಿಕಾರಿಯವರೇ ದಂಗುಬಡಿದಂತಾದರು. ನಿಗಮದ ಬಸ್ ನಿಲ್ದಾಣದೊಳಕ್ಕೆ ಬಸ್ ಬಾರದಂತೆ ತಡೆಯುವ, ಹಲ್ಲೆ ನಡೆಸುವ ಖಾಸಗಿ ಬಸ್ ಏಜೆಂಟರ ವಿರುದ್ದ ದೂರು ನೀಡಿದರೂ ದಾಖಲಿಸಿದೆ ಅವರ ಪರ ನಿಂತಿದ್ದಕ್ಕೆ ಶಿಕಾರಿಪುರ ಮತ್ತು ಶಿರಾಳಕೊಪ್ಪ ಪೊಲೀಸರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದರ ಫಲವಾಗಿಯೇ ನಿಗಮಕ್ಕೆ ಬಸ್ ಓಡಿಸಲು ಪರವಾನಿಗೆ ದೊರೆಯಿತು. ಜನಪರ ಕಾಳಜಿಗೆ ಕೊನೆಗೂ  ಜಯ ಸಿಕ್ಕಿತು.
ಸುಮಾರು ನಾಲ್ಕಾರು ವರ್ಷದಿಂದ ಗ್ರಾಮಾಂತರ ಭಾಗಗಳಿಗೆ ಸರ್ಕಾರಿ ಬಸ್ ಸೌಲಭ್ಯ ಬೇಕೆಂದು ಸಾರ್ವಜನಿಕರು ಮನವಿ ಕೊಡುತ್ತಲೇ ಇದ್ದರು. ಸಾರಿಗೆ ಅಧಿಕಾರಿಗಳು ಖಾಸಗಿಯವರ ಪರ ನಿಂತು ಅರ್ಜಿಯನ್ನು ಮೂಲೆಗೆಸೆಯುತ್ತ, ಮರುಪ್ರಶ್ನಿಸಿದರೆ ಸಬೂಬು ಹೇಳುತ್ತ ಕಾಲಕಳೆದರು. ಕೆಎಸ್ಸಾರ್ಟಿಸಿ ಬಳಿ ಬಸ್‌ಗಳು ಇಲ್ಲದ್ದರಿಂದ ಇದಕ್ಕೆ ಅವಕಾಶ ಸಿಕ್ಕಿದಂತಾಗಿತ್ತು. ಯಾವಾಗ ವಿಭಾಗೀಯ ಕಚೇರಿ ಆರಂಭವಾಯಿತೋ ಅಗ ಎಚ್ಚೆತ್ತ ಖಾಸಗಿಯವರು ಇನ್ನು ತಮ್ಮ ಬುಡಕ್ಕೇ ನೀರು ಬರುತ್ತದೆ ಎಂದರಿತು ಪರವಾನಿಗೆ ಕೊಡದಂತೆ ಮಾಡಲು ಶತಪ್ರಯತ್ನ ಮಾಡಿದರು. ಇಲ್ಲಸಲ್ಲದ ಕಾರಣ ಕೊಟ್ಟರು. ಖಾಸಗಿಯವರು ಬೀದಿಪಾಲಾಗುತ್ತಾರೆ. ಅವರನ್ನು ನಂಬಿಕೊಂಡ ಸಾವಿರಾರು ಸಿಬ್ಬಂದಿಗಳು ಕೆಲಸವಿಲ್ಲದೆ ಅತಂತ್ರತರಾಗಬೇಕಾಗುತ್ತದೆ ಎಂದೆಲ್ಲ ಮಾತನಾಡತೊಡಗಿದರು. 
 ಈಗ ಆರ್‌ಟಿಒ ಅಧಿಕಾರಿಗಳು ಏನೂ ಮಾಡದಂತಾಗಿದ್ದಾರೆ. ಏಕೆಂದರೆ, ಪ್ರತಿ ತಿಂಗಳೂ ಹೊಸ ಬಸ್‌ಗಳು ಶಿವಮೊಗ್ಗ ವಿಭಾಗಕ್ಕೆ ಬರುತ್ತಿವೆ. ಹೊಸ ಮಾರ್ಗಕ್ಕೆ ಪರವಾನಿಗೆ ಕೊಡಲೇಬೇಕಿದೆ. ಜನರಿಗೆ ಅನುಕೂಲ ಕಲ್ಪಿಸಬೇಕೆಂಬ ಸದುದ್ದೇಶ ಇರುವ ಜಿಲ್ಲಾಧಿಕಾರಿ ಖಾಸಗಿಯವರ ಲಾಬಿಗೆ ಸೊಪ್ಪು ಹಾಕದಿರುವುದು ಅವರನ್ನು ಇನ್ನಷ್ಟು ಆತಂಕಕ್ಕೆ ನೂಕಿದೆ. ಹೊಸ ಬಸ್‌ಗಳು ಸಂಚಾರ ಆರಂಭಿಸಿದರೆ ಗ್ರಾಮಾಂತರ ಭಾಗದವರು ಅದನ್ನು ಸದುಪಯೋಗಪಡಿಸಿಕೊಳ್ಳುವ ಕೆಲಸವನ್ನು ಮಾಡಬೇಕಿದೆ.
ಖಾಸಗಿಯವರು ಎಷ್ಟೋ ಪರವಾನಿಗೆ ಪಡೆದು ಬಸ್‌ನ್ನೇ ಓಡಿಸದಿರುವ ಬಗ್ಗೆ ಜಿಲ್ಲಾಧಿಕಾರಿ ಸಿಟ್ಟಿಗೆದ್ದು, ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವೂ ಸೌಕರ್ಯ ಕೊಡಲ್ಲ, ನಿಗಮಮದವರೂ ಕೊಡಬಾರದು ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ. ಜಿಲ್ಲೆಯ ಮಟ್ಟಿಗೆ ಇದೊಂದು ಒಳ್ಳೆಯ ಬೆಳವಣಿಗೆ ಎನ್ನಬಹುದಾಗಿದೆ. ಸೊರಬ ಮತ್ತು ಶಿಕಾರಿಪುರ ಗ್ರಾಮಾಂತರದವರು ಪಡುತ್ತಿದ್ದ ಬವಣೆಗೆ ಕೆಎಸ್ಸಾರ್ಟಿಸಿ ಇನ್ನಾದರೂ ಪರಿಹಾರ ಕೊಡಬೇಕಿದೆ. ಜೊತೆಗೆ ಈ ಮಾರ್ಗವಾಗಿ ಕೆಲವು ದೂರದ ಊರುಗಳಿಗೆ ಬಸ್ ಓಡಿಸಲೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇದರಿಂದ ವಿಶೇಷವಾಗಿ ಮಣಿಪಾಲ, ಹುಬ್ಬಳ್ಳಿ, ರಾಣೆಬೆನ್ನೂರು, ಹಾನಗಲ್, ಬೆಂಗಳೂರು, ಶಿರಸಿಗೆ ತೆರಳುವವರಿಗೆ ಅನುಕೂಲವಾಗಲಿದೆ. ನೂರಾರು ಸಾರ್ವಜನಿಕರು ಶಿವಮೊಗ್ಗಕ್ಕೆ ಬಂದು ಇನ್ನೊಂದು ಬಸ್ ಏರಿ ಪ್ರಯಾಣ ಮಾಡುವುದು ತಪ್ಪಿದಂತಾಗಲಿದೆ.
ಈಗಾಗಲೇ ಕೆಎಸ್ಸಾರ್ಟಿಸಿಯವರು ತೀರ್ಥಹಳ್ಳಿ, ಶಿವಮೊಗ್ಗ ಗ್ರಾಮಾಂತರದ ಕೆಲವು ಭಾಗಗಳಿಗೆ ಬಸ್ ಓಡಿಸಲಾರಂಭಿಸಿದ್ದಾರೆ. ಇನ್ನೂ ಅನೇಕ ಗ್ರಾಮಗಳಿಗೆ ಇಲ್ಲಿ ಬಸ್ ಸೌಕರ್ಯ ಇಲ್ಲದಿರುವುದನ್ನು ಮನಗಂಡು ಅಲ್ಲಿಗೂ ಬಸ್ ಸೌಕರ್ಯ ಕಲ್ಪಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಸುಲಭದಲ್ಲಿ ಜಿಲ್ಲಾ ಕೇಂದ್ರಕ್ಕೆ ಬಂದು ಕೆಲಸ ಮುಗಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಕೆಎಸ್ಸಾರ್ಟಿಸಿ ಅಧಿಕಾರಿಗಳು ಇನ್ನಾದರೂ ನೆಪ ಹೇಳಿ ಜನರನ್ನು ದೂರವಿಡದೆ ಅವಶ್ಯವಿದ್ದಲ್ಲಿ ಬಸ್ ಸೌಕರ್ಯವನ್ನು  ನೀಡುವ ಮನಸ್ಸು ಮಾಡಬೇಕು. ಖಾಸಗಿಯವರಿಗೆ ಆರೋಗ್ಯಕರ ಸ್ಪರ್ಧೆಯ ಮೂಲಕ ಪೈಪೋಟಿ ನೀಡಿ ಉತ್ತರ ಕೊಡಬೇಕು ಮತ್ತು ಇದೇ ವೆಳೆ ಉತ್ತಮ ಸೇವೆಯ ಮೂಲಕ ಜನರ ಮನಸ್ಸನ್ನು ಗೆಲ್ಲಬೇಕಿದೆ.
......................................

Monday, 18 December 2017

ಕವಿಗೋಷ್ಠಿ, ಸನ್ಮಾನಕ್ಕೆ ನೂಕುನುಗ್ಗಲು! 
  ಜಿಲ್ಲಾ ಸಾಹಿತ್ಯ ಸಮ್ಮೇಳನದ ಅವಾಂತರಗಳು* 91 ಕವಿಗಳು, 77 ಸನ್ಮಾನಿತರು!



ಸಿಕ್ಕಿದ್ದೇ ಅವಕಾಶ ಎಂದು ವೇದಿಕೆ ಏರುವವರು ಜಾಸ್ತಿಯಾಗುತ್ತಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಅವಕಾಶಕ್ಕಾಗಿಯೇ ಕೆಲವರು ಕಾದು ಕುಳಿತಿರುತ್ತಾರೆ. ನಾಡಿದ್ದು ನಡೆಯುವ ಸಮ್ಮೇಳನ ಇಂತಹ ಎಡವಟ್ಟುಗಳಿಗೆ ಸಾಕ್ಷಿಯಾಗಿದೆ. ಜಿಲ್ಲಾ ಸಮಿತಿ ಅಸ್ತಿತ್ವಲ್ಲಿದೆಯೇ, ಅಥವಾ ಕಣದ ಕೈ ಇದನ್ನು ನಡೆಸುತ್ತಿದೆಯೇ ಎನ್ನುವ ಅನುಮಾನ ಉಂಟಾಗುವಂತಾಗಿದೆ. ಇಲ್ಲಿ ಸನ್ಮಾನ, ಕವಿಗೋಷ್ಠಿಗೆ ಯಾವ ಮಾನದಂಡ, ಅರ್ಹತೆ ಬೇಕಾಗಿಲ್ಲ. ನಿಮಗೆ ವಶೀಲಿ, ಲಾಬಿ, ಜಾತೀಯತೆ ಮಾಡುವುದು ತಿಳಿದಿದ್ದರೆ ನೀವೂ ಸನ್ಮಾನಿತರಾಗಬಹುದು, ಕವಿಗಳಾಗಬಹುದು, ಅಥವಾ ಎರಡರಲ್ಲೂ ಅವಕಾಶ ಗಿಟ್ಟಿಸಬಹುದು. ಹೀಗಿದೆ ನಮ್ಮ ಜಿಲ್ಲಾ ಕಸಾಪ ಸಮಿತಿ!


ಸಾಹಿತ್ಯ ಸಮ್ಮೇಳನ ಎಂದರೆ ಜಾತ್ರೆ ಎಂಬ ವ್ಯಂಗ್ಯೋಕ್ತಿ ಇದೆ. ಇದನ್ನು ಪದೇ ಪದೇ ಎಲ್ಲ ಸಮ್ಮೇಳನಗಳೂ ಸಾಬೀತು ಮಾಡುತ್ತಲೇ ಬಂದಿವೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 18 ಮತ್ತು 19ರಂದು ನಗರದಲ್ಲಿ ನಡೆಯಲಿದೆ. ಇದರಲ್ಲಿನ ಕಾರ್ಯಕ್ರಮಗಳನ್ನು ಗಮನಿಸಿದರೆ ಹೊಸ ಚಿಂತನೆಗಳ ಮತ್ತು ಪ್ರಬುದ್ಧ ವಿಚಾರಗಳ ಗೋಷ್ಠಿಗಳನ್ನು  ಮಾಡಬೇಕೆಂಬ ಕಲ್ಪನೆಯೇ ಸಮಿತಿಗೆ ಇಲ್ಲವೆನ್ನುವುದು ತಿಳಿಯುತ್ತದೆ.
ಬದಲಾಗುತ್ತಿರುವ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಸಾಹಿತ್ಯ ಕ್ಷೇತ್ರವೂ ನಿಂತ ನೀರಾಗಿಲ್ಲ. ಆದರೆ ನಮ್ಮಲ್ಲಿ ಅದನ್ನು ಅಳವಡಿಸಿಕೊಕೊಳ್ಳಲು ನಾವು ಇನ್ನೂ ಸಿದ್ಧರಿಲ್ಲ. ಜಿಲ್ಲಾ ಕಸಾಪ  ಮಾತ್ರ ಹೊಸತನಕ್ಕೆ ತನ್ನನ್ನು ತೆರೆದುಕೊಂಡಿಲ್ಲ, ತೆರೆದುಕೊಳ್ಳುವ ಯತ್ನವನ್ನೂ ಮಾಡುತ್ತಿಲ್ಲ. ಅಪ್ಪ ನೆಟ್ಟ ಮರಕ್ಕೆ ನೇಣು ಹಾಕಿಕೊಳ್ಳುವ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ರಾಜ್ಯ ಕಸಾಪ ಕೊಡುವ ಹಣವನ್ನು ಖರ್ಚು ಮಾಡಬೇಕೆಂಬ ಉದ್ದೇಶದಿಂದ ಸಮ್ಮೇಳನ ನಡೆಸಲಾಗುತ್ತಿದೆ. 
ಶಿವಮೊಗ್ಗ ಜಿಲ್ಲಾ ಸಮ್ಮೇಳನದ ಬಗ್ಗೆ ಗಮನಿಸುವುದಾದರೆ, ಎರಡು ದಿನದ ಈ ಸಮ್ಮೇಳನದಲ್ಲಿ ಜಿಲ್ಲೆಯ ರಂಗಭೂಮಿ, ಜನಪದರ ಬದುಕು ಮತ್ತು ಬವಣೆ ಹಾಗು ಸಾಹಿತ್ಯದ ನೆಲೆಯ ಬಗ್ಗೆ ಗೋಷ್ಠಿ ಏರ್ಪಡಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಇದರ ಹೊರತಾಗಿ ಅಧ್ಯಕ್ಷರ ಜೊತೆ ಸಂವಾದ, ಅಧ್ಯಕ್ಷರ ಬದುಕು-ಬರಹ ಗೋಷ್ಠಿಯನ್ನಿಡಲಾಗಿದೆ. ಕಸಾಪದಲ್ಲಿ ಇಂತಿಂತಹ ಗೋಷ್ಠಿ ಇರಲೇಬೇಕೆಂಬ ಶಾಸನವೇನಾದರೂ ಇದೆಯೇ ಎಂಬ ಅನುಮಾನ ಮೂಡುವಂತಾಗಿದೆ. ಎರಡು ಕವಿಗೋಷ್ಠಿಯ ಅವಶ್ಯಕತೆ ಇತ್ತೇ ಎನ್ನುವುದು ಮತ್ತೊಂದು ಪ್ರಶ್ನೆ.
 ಇದರಲ್ಲಿ ಭಾಗವಹಿಸುವವರ ಸಂಖ್ಯೆ ಎಷ್ಟು ಗೊತ್ತೇ? ಬರೋಬ್ಬರಿ 91. ಜಿಲ್ಲೆ ಸಾಹಿತ್ಯಿಕವಾಗಿ ಮೊದಲಿನಿಂದಲೂ ಸಂಪದ್ಭರಿತವಾದುದು. ಈ ಛಾಪನ್ನು ಉಳಿಸಿಕೊಂಡೇ ಇಂದಿಗೂ ಗುರುತಿಸಲ್ಪಡುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಬರಬರುತ್ತ ಪ್ರಬುದ್ಧ ಸಾಹಿತಿಗಳಾಗಿ ಗುರುತಿಸಿಕೊಳ್ಳುವವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ತೋಚಿದ್ದನ್ನೆಲ್ಲ ಗೀಚಿದವರೆಲ್ಲ ಕವಿಗಳಾಗುತ್ತಿರುವುದು ಮಾತ್ರ ದುರಂತವೇ ಸರಿ. ಬರೆದಿದ್ದೆಲ್ಲ ಸಾಹಿತ್ಯ ಅಥವಾ ಕವಿತೆ ಆಗದು. ಇದನ್ನು ಸಮಿತಿ ಅರಿತುಕೊಳ್ಳಬೇಕಿತ್ತು. ಸಶಕ್ತ ಕವನಗಳನ್ನು ಮಾತ್ರ ಆಯ್ಕೆ ಮಾಡಿ ಎರಡೂ ಗೋಷ್ಠಿಗಳಿಂದ ಗರಿಷ್ಠ 30 ಕವಿಗಳಿಗೆ ಆಹ್ವಾನ ಕೊಡಬಹುದಿತ್ತು.
ಇಲ್ಲಿ ಕವನವನ್ನು ಅಳೆದು ತೂಗಿ ನೋಡುವವರೇ ಇಲ್ಲ.  ಅದನ್ನು ವಿಮರ್ಶಿಸುವವರಿಲ್ಲ. ಓದಿದ ಕವನಕ್ಕೆ ಚಪ್ಪಾಳೆ ಬಂದರಾಯಿತು. ಚಪ್ಪಾಳೆ ಬಾರದಿದ್ದರೆ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿ ಎಂದು ನಿರೂಪಕರು ಹೇಳಿದರೆ ಒಂದಷ್ಟು ಚಪ್ಪಾಳೆ ಬಂದೇ ಬರುತ್ತದೆ. ಕವಿಗೋಷ್ಠಿಯ ಮಹತ್ವವನ್ನೇ ನಾಶ ಮಾಡುವ ಮಟ್ಟಕ್ಕೆ ಬಂದು ನಿಂತಿದ್ದೇವೆ. ಇನ್ನೂ ವಿಶೇಷವೆಂದರೆ, ಜಿಲ್ಲಾ ಮತ್ತು ತಾಲೂಕು ಸಮಿತಿಯ ಪದಾಧಿಕಾರಿಗಳಲ್ಲಿ ಬಹುತೇಕರು ಕವಿಗಳಾಗಿ ಬಿಟ್ಟಿದ್ದಾರೆ. ಅವರಿಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಎಲ್ಲಿಗೆ ಬಂತು ಕವಿಗೋಷ್ಠಿಯ ಅವಸ್ಥೆ? ಎರಡು ಕವಿಗೋಷ್ಠಿ ಮಾಡಿದ್ದೇ ತಪ್ಪು. ಒಂದೇ ಕವಿಗೋಷ್ಠಿ ಸಾಕಿತ್ತು.
ಇನ್ನು ಸಮ್ಮೇಳನದ ಸಮಾರೋಪಕ್ಕಿಂತ ಮುಂಚೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಇದರಲ್ಲಿ ಸನ್ಮಾನಿತರ ಸಂಖ್ಯೆಯೇ 77. ಇವರಲ್ಲಿ ಎಂತೆಂತಹ ಸಾಧನೆ ಮಾಡಿದವರಿದ್ದಾರೆಂದು ಮಾತ್ರ ಕೇಳಬೇಡಿ. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಮತ್ತು ಸಾಧನೆಯ ಕ್ಷೇತ್ರದ ಬಗ್ಗೆ ಮಾಹಿತಿ ನೀಡಬೇಕಿತ್ತು. ಆದರೆ ಹಾಗೆ ಮಾಡಿಲ್ಲ. ಕನಿಷ್ಠ ತಾಲೂಕಿಗೆ ಇಬ್ಬರಂತೆ ಗರಿಷ್ಠ ಒಟ್ಟೂ 20 ಜನರನ್ನು ಸನ್ಮಾನಿಸಬಹುದಿತ್ತು. ಕೆಲವರು ಸನ್ಮಾನದಲ್ಲೂ, ಕವಿಗೋಷ್ಠಿಯಲ್ಲೂ ತೂರಿಕೊಂಡಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಜಿಲ್ಲಾಧ್ಯಕ್ಷರು ಸನ್ಮಾನ ಮತ್ತು ಕವಿಗೋಷ್ಠಿಗೆ ಮಾನದಂಡ ಏನೆನ್ನುವ ಪ್ರಶ್ನೆಗೆ ಉತ್ತರಿಸಬೇಕಿದೆ. 
ಈ ರೀತಿ ವಶೀಲಿ, ಪ್ರಭಾವ, ಜಾತಿ ವ್ಯಾಮೋಹದಿಂದ ಯಾರ್ಯಾರೋ ವೇದಿಕೆ ಹಂಚಿಕೊಳ್ಳುವಮತಹ ಸ್ಥಿತಿ ಎದುರಾಗಬಾರದಿತ್ತು. ಹೊಸ ಮುಖಗಳನ್ನು ಪರಿಚಯಿಸುವ ಕೆಲಸವೇನೋ ಒಳ್ಳೆಯದು. ಆದರೆ ಆ ಮುಖಗಳು ನಿಜಕ್ಕೂ ಮುಖಗಳೇ ಅಥವಾ ಮುಖವಾಡಗಳೇ ಎನ್ನುವುದನ್ನೂ ಗಮನಿಸಬೇಕಲ್ಲವೇ? ಜಿಲ್ಲಾಧ್ಯಕ್ಷರು ವಿಮರ್ಶೆ ಮಾಡದೆ ಯಾವುದನ್ನೂ ಒಪ್ಪಬಾರದು. ಯಾರದ್ದೋ ಒತ್ತಾಯಕ್ಕೆ ಎಲ್ಲರನ್ನೂ ವೇದಿಕೆ ಹತ್ತಿಸುವ ಕೆಲಸ ಮಾಡಿದರೆ ಕೆಟ್ಟ ಹೆಸರು ಬರುವುದು ಜಿಲ್ಲಾ ಸಮಿತಿಗೆ ಎನ್ನುವುದನ್ನು ಮರೆಯಬಾರದು.
ಈ ರೀತಿಯ ಸಮ್ಮೇಳನಗಳು ನಡೆಯದೇ ಇದ್ದರೂ ಜನರೇನೂ ಪ್ರಶ್ನಿಸುವುದಿಲ್ಲ. ಎಲ್ಲೋ ಕೆಲವರು ಈ ಜಾತ್ರೆಯ ಮೋಜು ಅನುಭವಿಸಲೆಂದೇ ಇರುವವರು ಮಾತ್ರ ಪ್ರಶ್ನಿಸಬಹುದು. ಆದ್ದರಿಂದ ಜಿಲ್ಲಾಧ್ಯಕ್ಷರು ಮಾನದಂಡವಿಲ್ಲದೆ ಯಾವ ಆಯ್ಕೆಯನ್ನೂ ಮಾಡಬಾರದು. ಕೆಟ್ಟ ಹೆಸರು ಬಂದರೆ ಅದನ್ನು ಎದುರಿಸಬೇಕಾದವನು ತಾನು ಎನ್ನುವುದನ್ನು ಅರಿಯಬೇಕು. ಇನ್ನು ಮುಂದಾದರೂ ಇಂತಹುದಕ್ಕೆ ಅವಕಾಶ ಕೊಡದೆ ನಿರ್ದಿಷ್ಟ ಮಾನದಂಡ ಅಳವಡಿಸಿಕೊಂಡು ಸಾಹಿತ್ಯ ಸಮ್ಮೇಳನ ಹೆಸರಿಗೆ ತಕ್ಕಂತೆ ನಡೆಯಲು ಅವಕಾಶ ಕೊಡಬೇಕಿದೆ.
..................................

Friday, 15 December 2017

ಜಿಲ್ಲಾ ಜೆಡಿಎಸ್‌ನಲ್ಲಿ ಮತ್ತೆ ಭಿನ್ನರಾಗ
* ಜಿಲ್ಲಾಧ್ಯಕ್ಷರ ನಿರ್ಧಾರಗಳಿಗೆ ಬೇಸರ* ವಲಸೆ ಬಂದವರಿಗೆ ಮಣೆ 


  ಜಿಲ್ಲಾ ಜೆಡಿಎಸ್ ಇನ್ನೇನು ಬಲಿಷ್ಠವಾಗುತ್ತಿದೆ. ಉತ್ತಮ ರೀತಿಯಲ್ಲಿ ಸಂಘಟನೆಯಾಗುತ್ತಿದೆ ಎಂದುಕೊಳ್ಳುವ ವೇಳೆಯೇ ಭಿನ್ನರಾಗ ಮೂಡಿದೆ. ಶಿವಮೊಗ್ಗ ನಗರ ಘಟಕದ ವಿಸರ್ಜನೆ ಸಂಬಂಧ ಜಿಲ್ಲಾಧ್ಯಕ್ಷ ನಿರಂಜನ್ ವಿರುದ್ಧ ಹಲವರು ಕಿಡಿಕಾರುತ್ತಿದ್ದಾರೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ತಮಗೆ ಅಧಿಕಾರವಿಲ್ಲದಿದ್ದರೂ ವಿಸರ್ಜನೆ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದನ್ನು ಸರಿಮಾಡಲು ಮತ್ತೆ ರಾಜ್ಯ ನಾಯಕರೇ ಧಾವಿಸುವಂತಾಗಿದೆ. ಒಂದೆಡೆ ಶಾಸಕ ಮಧು ಬಂಗಾರಪ್ಪ ಮತ್ತು ಶಾಸಕಿ ಶಾರದಾ ಪೂರ‌್ಯಾ ನಾಯ್ಕ್ ಏಕತೆಗೆ ಶ್ರಮಿಸುತ್ತಿದ್ದರೆ ಇನ್ನೊಂದೆಡೆ ಇಂತಹ ವಿಚಿತ್ರ ನಿರ್ಧಾರದಿಂದ ಅವರೂ ಸಹ ರೋಸಿಹೋಗಿದ್ದಾರೆ.



ಜಿಲ್ಲಾ ಜೆಡಿಎಸ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನ ಬೇಸರ ಉಂಟು ಮಾಡಿದೆ. ಇದು ಪಕ್ಷದ ಸಂಘಟನೆಗೆ ಧಕ್ಕೆ ಉಂಟು ಮಾಡಲಿದೆ. ಹಿರಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಭಿನ್ನಾಭಿಪ್ರಾಯ ಶಮನ ಮಾಡಲಾಗುವುದು.  ನಗರ ಸಮಿತಿಯ ವಿಸರ್ಜನೆಗೆ ಸಂಬಂಧಿಸಿದಂತೆ ತಮಗೆ ಹೆಚ್ಚಿನ ಮಾಹಿತಿಯಿಲ್ಲ. ಪಕ್ಷದ ವೇದಿಕೆಯಲ್ಲಿ ಕುಳಿತು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು
ಎಂ.ಶ್ರೀಕಾಂತ್  - ಜೆಡಿಎಸ್  ರಾಜ್ಯ ಪ್ರಧಾನ ಕಾರ್ಯದರ್ಶಿ



ಪಕ್ಷದಲ್ಲಿ ಯಾವ ಭಿನ್ನಮತವೂ ಇಲ್ಲ. ಸುಬ್ಬೇಗೌಡರನ್ನು ರಾಜ್ಯ ಪದಾಧಿಕಾರಿಯನ್ನಾಗಿ ಮಾಡಲಾಗಿದೆ. ನರಸಿಂಹಮೂರ್ತಿ 80ರ ದಶಕದಲ್ಲಿ ಜನತಾಪಕ್ಷದಲ್ಲೇ ಇದ್ದರು. ಅವರು ವಲಸಿಗರಲ್ಲ. ಪಕ್ಷ ನಡೆಸಲು ಸಮರ್ಥರು ಎಂಬ ಕಾರಣಕ್ಕೆ ಅವರನ್ನು ನೇಮಿಸಲಾಗಿದೆ. ಇದರಲ್ಲಿ ಯಾವ ದುರುದ್ದೇಶವೂ ಇಲ್ಲ. ಎಲ್ಲವೂ ಚೆನ್ನಾಗಿದೆ. ಸಂಘಟನೆ ನಡೆಯುತ್ತಿದೆ.
- ನಿರಂಜನ್, ಜಿಲ್ಲಾಧ್ಯಕ್ಷ  

 ಜೆಡಿಎಸ್‌ನಲ್ಲಿ ಜಿಲ್ಲಾಧ್ಯಕ್ಷರ ವಿರುದ್ಧ ಅವರು ಆಯ್ಕೆಯಾದ ದಿನದಿಂದಲೂ ಒಂದಲ್ಲ ಒಂದು ರೀತಿಯ ಅಸಮಾಧಾನ ಕೇಳಿಬರುತ್ತಲೇ ಇದೆ. ಅವರ ಕಾರ್ಯವೈಖರಿ ಬಗ್ಗೆ ಕಾರ್ಯಕರ್ತರು ಇರಲಿ, ನಾಯಕರಿಗೂ ಸಮಾಧಾನವಿಲ್ಲ. ಅವರ ಕೆಲವೊಂದು ನಿರ್ಧಾರಗಳು ಒಮ್ಮಿಂದೊಮ್ಮೆಗೆ ಪ್ರಕಟವಾಗಿ ಪಕ್ಷದಲ್ಲಿ ಅಂತಃಕಲಹಕ್ಕೆ ಕಾರಣವಾಗುತ್ತಿದೆ.
ಇದಕ್ಕೊಂದು ತಾಜಾ ಉದಾಹರಣೆ ಮೊನ್ನೆಯಷ್ಟೇ ಶಿವಮೊಗ್ಗ ನಗರಾಧ್ಯಕ್ಷ ಎ.ಟಿ. ಸುಬ್ಬೇಗೌಡ ಅವರನ್ನು ಬದಲಾಯಿಸಿದ್ದು. ಸುಬ್ಬೇಗೌಡ ಅಧ್ಯಕ್ಷರಾಗಿ ಕೇವಲ ಮೂರು ತಿಂಗಳಾಗಿತ್ತು. ಮಾಹಿತಿ ಇಲ್ಲದ ಏಕಾಏಕಿ ಅವರನ್ನು ತೆಗೆದು ಹಾಕಿ ಆ ಸ್ಥಾನಕ್ಕೆ ನಗರಪಾಲಿಕೆ ಸದಸ್ಯ  ನರಸಿಂಹಮೂರ್ತಿ (ಬಾಬಣ್ಣ) ಅವರನ್ನು ತಂದು ಕೂಡ್ರಿಸಲಾಗಿದೆ. ಅವರಿಗೆ ಪಟ್ಟಾಭಿಷೇಕವೂ ಆಗಿಹೋಗಿದೆ. ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸಿದರೆ ಅದು ಭಿನ್ನಮತದ ಆರಂಭಕ್ಕೆ ಕಹಳೆ ಊದುತ್ತದೆ ಎನ್ನುವ ವಿಚಾರ ಗೊತ್ತಿಲ್ಲದವರಂತೆ ಜಿಲಾಧ್ಯ್ಯಕ್ಷ ನಿರಂಜನ್ ಅವರು ನಿರ್ಣಯ ತೆಗೆದುಕೊಳ್ಳುತ್ತಿರುವುದು ಪಕ್ಷದ ಸಂಘಟನೆ ಮೇಲೆ ಗಂಭೀರ ಪರಿಣಾಮ ಬೀರಲಿದೆ.
 ಸುಬ್ಬೇಗೌಡ ಅವರು ಉತ್ತಮ ಕಾರ್ಯನಿರ್ವಹಣೆಯಲ್ಲೇ ಇದ್ದರು. ಮನೆಮನೆಗೆ ತಮ್ಮ ಆಪ್ತರು ಮತ್ತು ವಾರ್ಡಿನ ಜೆಡಿಎಸ್ ಕಾರ್ಯಕರ್ತರನ್ನು ಸೇರಿಸಿಕೊಂಡು ತೆರಳಿ ಸಂಘಟನೆ ಮಾಡುವ ಕೆಲಸಕ್ಕೆ ಕೈ ಹಾಕಿದ್ದರು. ಆದರೆ ಇದೇ ಅವರಿಗೆ ಮುಳುವಾದಂತಿದೆ. ಸುಬ್ಬೇಗೌಡರನ್ನು ಕೇಳಿದರೆ ಕಾರಣ ತಮಗೆ ತಿಳಿದೇ ಇಲ್ಲ ಎನ್ನುತ್ತಾರೆ. ನಿರಂಜನ್ ಅವರು ಕಾರಣ ನೀಡಿ ಅಥವಾ ಅವರಿಗೆ ಉನ್ನತ ಹುದ್ದೆ ನೀಡಿ ಕೆಳಗಿಳಿಸಬಹುದಿತ್ತು. ಆದರೆ ತಮ್ಮ ಕೆಲವು ಆಪ್ತರ  ಮಾತನ್ನು ಕೇಳಿ ಈ ಬದಲಾವಣೆ ಮಾಡಿದ್ದಾರೆಂಬ ಮಾತು ಕೇಳಿಬರುತ್ತಿದೆ. ಸುಬ್ಬೇಗೌಡ ಅವರು ಈ ಬಗ್ಗೆ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೂ ದೂರು ನೀಡಿದ್ದಾರೆ. ಇದನ್ನು ಶಾಸಕ ಮಧು ಬಂಗಾರಪ್ಪ ಮೂಲಕ ಶಮನಗೊಳಿಸುವುದಾಗಿ ಕುಮಾರಸ್ವಾಮಿ ಭರವಸೆ ಕೊಟ್ಟಿದ್ದಾರಂತೆ. ಆದರೆ ಸುಬ್ಬೇಗೌಡ ಮಾತ್ರ ನಾಯಕರ ವರ್ತನೆಯಿಂದ ರೋಸಿಹೋಗಿದ್ದಾರೆ.
ಪಕ್ಷದ ಕೆಲಸ ಮಾಡುವ ಇಚ್ಛೆಯಿಲ್ಲದವರೇ ಹೆಚ್ಚುತ್ತಿರುವ, ಆಸಕ್ತಿಯಿಂದ ಸಂಘಟನೆ ಮಾಡುವವರೇ ಇಲ್ಲವಾದ ಇಂದಿನ ದಿನಮಾನದಲ್ಲಿ ಅಂತಹವರನ್ನೇ ಕೆಲಸಕ್ಕೆ ಮುಂದಾದವರನ್ನೇ ಕೈಬಿಟ್ಟರೆ ಪಕ್ಷದ ಗತಿಯೇನು ಎನ್ನುವುದನ್ನು ನಿರಂಜನ್ ಯೋಚಿಸಬೇಕಿತ್ತು. ಅವರಿಗೆ ರಾಜ್ಯ ಪದಾಧಿಕಾರಿ ಹುದ್ದೆ ಕೊಡಲಾಗಿದೆ ಎಂದು ನಿನ್ನೆ ಸಮಜಾಯಿಶಿ ನೀಡಿದ್ದಾರೆ. ಆದರೆ ಹುದ್ದೆ ಕೊಟ್ಟ ಬಗ್ಗೆ ಅವರಿಗೆ ಮೊದಲೇ ತಿಳಿಸಬೇಕಿತ್ತಲ್ಲವೇ. ಅವರನ್ನು ತಣಿಸುವುದಕ್ಕಾಗಿ ಈಗ ಹುದ್ದೆ ಕೊಡಲಾಗಿದೆ.
ನರಸಿಂಹಮೂರ್ತಿ ಪಕ್ಷೇತರರಾಗಿ ಪಾಲಿಕೆಗೆ ಗೆದ್ದುಬಂದು ಕಾಂಗ್ರೆಸ್ ಬೆಂಬಲಿಸಿದ್ದರು. ಆನಂತರ ಬಿಜೆಪಿ ಸೇರಿದರು. ಅಲ್ಲಿಯೂ ಸೇರಿಬರದೆ ಮತ್ತೆ ಸ್ವತಂತ್ರರಾದರು. ಕೆಲವು ತಿಂಗಳ ಹಿಂದೆಯಷ್ಟೇ ಪಕ್ಷ ಸೇರಿದವರು. ಅವರಿಗೆ ಈಗ ನಗರ ಘಟಕದ ಅಧ್ಯಕ್ಷ ಸ್ಥಾನ. ಹೇಗಿದೆ ನೋಡಿ ರಾಜಕೀಯ! ವಲಸೆ ಬಂದವರಿಗೆ ಮೂರ್ನಾಲ್ಕು ತಿಂಗಳಲ್ಲೇ ಹುದ್ದೆ ಕೊಡುವುದಾದರೆ  ಮೂಲ ಕಾಯಕರ್ತರಿಗೇನು ಬೆಲೆ ಬಂತು? ಪಕ್ಷದಲ್ಲಿ ಮೂಲ ಕಾರ್ಯಕರ್ತರು ಸಾಕಷ್ಟಿದ್ದಾರೆ. ಅವರನ್ನು ಗುರುತಿಸುವ ಕೆಲಸವನ್ನು ಮಾಡದೆ ವಲಸೆ ಬಂದವರಿಗೆ ಮಣೆ ಹಾಕಿದರೆ ಸಂಘಟನೆಯಿಂದ ಹಿಂದೆ ಸರಿಯುತ್ತಾರೆ. ಇನ್ನು ಮುಂದುವರೆದರೆ ಬೇಸರದಿಂದ ಪಕ್ಷವನ್ನೂ ತೊರೆಯಬಹುದು. ಈ ವಿಚಾರ ನಿರಂಜನ್ ಅವರಿಗೆ ಗೊತ್ತಿಲ್ಲವೇ?
ಈಗ ಅವರು ಮಾಡಿಕೊಂಡ ಅನಾಹುತದಿಂದ ಖಂಡಿತ ಪಕ್ಷಕ್ಕೆ ನಷ್ಟವಾಗಲಿದೆ. ಇದನ್ನು ಸರಿಪಡಿಸಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಸುಬ್ಬೇಗೌಡರ ಜೊತೆ ಇದ್ದಷ್ಟು ಕಾರ್ಯಕರ್ತರು ಮೂರ್ತಿ ಜೊತೆ ಇಲ್ಲ. ಸುಬ್ಬೇಗೌಡ ಪತ್ರಿಕಾಗೋಷ್ಠಿ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು. ಆಗ ಹಾಜರಿದ್ದು ಬೆಂಬಲಿಸಿದ್ದ ಪಾಲಿಕೆ ಸದಸ್ಯರಾದ ನಾಗರಾಜ ಕಂಕಾರಿ ಮತ್ತು ಫಾಲಾಕ್ಷಿ ಅಧ್ಯಕ್ಷ ನಿರಂಜನ್ ಕರೆದ ಪತ್ರಿಕಾಗೋಷ್ಠಿಯಲ್ಲೂ ಹಾಜರಿದ್ದು ತಮ್ಮ ದ್ವಂದ್ವ ನಿಲುವನ್ನು ಪ್ರದರ್ಶಿಸಿದ್ದಾರೆ.
ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿರಂಜನ್, ಮೂರ್ತಿ ಪಾಲಿಕೆ ಸದಸ್ಯ ಎನ್ನುವುದು ಗೊತ್ತಿದ್ದೂ ನಗರಾಧ್ಯಕ್ಷ ಸ್ಥಾನ ನೀಡಿದ್ದಾರೆ. ಇದರರ್ಥ ಏನೆನ್ನುವುದನ್ನು ಊಹಿಸಬಹುದು. ಪಕ್ಷದಲ್ಲಿ ಮುಸ್ಲೀಮರು ಸಾಕಷ್ಟಿದ್ದಾರೆ. ಅವರಿಗೆ ಹುದ್ದೆ ಕೊಡಬಹುದಿತ್ತು ಎಂಬ ಮಾತು ಸಹ ಕೇಳಿಬರತೊಡಗಿದೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ 60 ಸಾವಿರದಷ್ಟಿದೆ. ಮುಸ್ಲಿಂ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ನೇಮಿಸಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಮತಗಳಿಕೆಗೆ ಸಹಕಾರಿಯಾಗುತ್ತಿತ್ತೇನೋ. ಇವೆಲ್ಲವುಗಳ ಪರಿಣಾಮ ಮುಂದಿನ ತಿಂಗಳ ಆರಂಭದಲ್ಲಿ ಗೊತ್ತಾಗಲಿದೆ ಎಂದು ಪಕ್ಷದ ಕೆಲವು ಮುಖಂಡರೇ ಹೇಳುತ್ತಿದ್ದಾರೆ.
ಈಗ ಚುನಾವಣಾ ಹೊಸ್ತಿಲಿನಲ್ಲಿರುವುದರಿಂದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷವನ್ನು ಸಜ್ಜುಗೊಳಿಸುವ ಕಾರ್ಯ ನಡೆಸಬೇಕಾಗಿದ್ದ ನಿರಂಜನ್, ಅನಗತ್ಯವಾಗಿ ಅಸಮಾಧಾನ ಸ್ಫೋಟಗೊಳ್ಳುವಂತೆ ಮಾಡಿಕೊಂಡಿದ್ದಾರೆ. ಇದು ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಜೊತೆಗೆ ಪರಿಣಾಮಕಾರಿ ಸಂಘಟನೆಗೆ ತೀವ್ರ ಹಿನ್ನೆಡೆಯಾಗಲಿದೆ. ಪಕ್ಷಾಂತರಕ್ಕೆ ನಾಂದಿಯಾಗಲೂಬಹುದು. 
........................

Friday, 1 December 2017


ನಗರಕ್ಕೆ ಪೊಲೀಸ್ ಕಮಿಷನರೇಟ್?


 ಶಿವಮೊಗ್ಗ- ಭದ್ರಾವತಿ ಸೇರಿಸಿ ಪೊಲೀಸ್ ಕಮಿಷನರೇಟ್ ಸ್ಥಾಪಿಸಬಹುದಾಗಿದೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ಇಲ್ಲಿವೆ. ಅಪರಾಧ ಕೃತ್ಯ ಒಂದೇ ಸಮನೆ ಹೆಚ್ಚುತ್ತಿವೆ. ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಯೊಬ್ಬರಿಂದಲೇ ಇವುಗಳನ್ನು ನಿಗ್ರಹಿಸುವುದು ಮತ್ತು ಉಳಿದ ತಾಲೂಕುಗಳ ವ್ಯವಸ್ಥೆಯತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಮಿಷನರೇಟ್ ಸ್ಥಾಪನೆಯ ಚಿಂತನೆ ನಡೆದಿದೆ. ಸ್ವತಃ ಎಸ್‌ಪಿ ಅಭಿನವ್ ಖರೆ ಅವರೇ ಈ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.




 ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮತ್ತು ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಕಚೇರಿ ಇದೆ. ಶಿವಮೊಗ್ಗ- ಭದ್ರಾವತಿ ಈ ಎರಡೂ ನಗರಗಳ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದೇ ಜಿಲ್ಲಾ ಪೊಲೀಸರಿಗಿರುವ ದೊಡ್ಡ ತಲೆನೋವು. ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಇಂತಹ ಸ್ಥಿತಿ ಇಲ್ಲ


* ದತ್ತಾತ್ರೇಯ ಹೆಗಡೆ


ರಾಜ್ಯದಲ್ಲಿ ಅತ್ಯಂತ ಹೆಚ್ಚು ಅಪರಾಧ ಕೃತ್ಯಗಳು ನಡೆಯುವ ಎರಡನೆಯ ಜಿಲ್ಲೆ ಎಂಬ ಕುಖ್ಯಾತಿ ಶಿವಮೊಗ್ಗ ಜಿಲ್ಲೆಗೆ ಅಂಟಿಕೊಂಡಿದೆ. ಬೆಂಗಳೂರು ನಗರಕ್ಕೆ ಮೊದಲ ಸ್ಥಾನವಿದೆ. ಆದರೆ ಅಲ್ಲಿ ಪೊಲೀಸ್ ಆಯುಕ್ತರ (ಕಮಿಷನರ್) ಕಚೇರಿ ಇದೆ. ಶಿವಮೊಗ್ಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಯಿದ್ದು. ಎಸ್‌ಪಿಯವರೇ ಜಿಲ್ಲಾ ಪೊಲೀಸ್ ಮುಖ್ಯಸ್ಥರು. ಇತ್ತೀಚಿನ ವರ್ಷಗಳಲ್ಲಿ ಅಪರಾಧ ಕೃತ್ಯಗಳು ಜಿಲ್ಲೆಯಲ್ಲಿ ಒಂದೇ ಸಮನೆ ಹೆಚ್ಚುತ್ತಿವೆ. ದಕ್ಷ ಎಸ್ಪಿ ಆಗಮಿಸಿದರೂ ಸಹ ನಿಗ್ರಹ ಸಾಧ್ಯವಾಗುತ್ತಿಲ್ಲ. ಒಂದೆಡೆ ಕೊಲೆ, ಸುಲಿಗೆ, ಕಳ್ಳತನ, ಜೂಜು, ಮತ್ತೊಂದೆಡೆ ರೌಡಿಸಂ, ಮಗದೊಂದೆಡೆ, ಮಾಫಿಯಾಗಳ ಹಾವಳಿ. ಇವೆಲ್ಲಕ್ಕೂ ಕಡಿವಾಣ ಹಾಕುವುದು ಜಿಲ್ಲಾ ಪೊಲೀಸರಿಂದ ಸಾಧ್ಯವಾಗುತ್ತಿಲ್ಲ.
ಹಾಲಿ ಜಿಲ್ಲಾ ಪೊಲೀಸ್ ವರಿಷ್ಠರಾಗಿರುವ ಅಭಿನವ್ ಖರೆ ಶಿವಮೊಗ್ಗ ಮತ್ತು ಭದ್ರಾವತಿಯನ್ನು ಸೇರಿಸಿ ಪೊಲೀಸ್ ಕಮೀಷನರ್ ಕಚೇರಿಯನ್ನು ತೆರೆಯುವ ಬಗ್ಗೆ ರೂಪುರೇಶೆ ಸಿದ್ಧಪಡಿಸುತ್ತಿದ್ದಾರೆ. ಬೆಳೆಯುತ್ತಿರುವ ಈ ಎರಡೂ ನಗರಗಳು ಅಪರಾಧಿಗಳ ತವರು ಎಂಬಂತಾಗುತ್ತಿವೆ. ಇಲಾಖೆಯ ಪ್ರಕಾರ ಭದ್ರಾವತಿಯಲ್ಲಿ ಕಳ್ಳರು, ಪುಂಡರು, ಅಕ್ರಮ ಚಟುವಟಿಕೆಗಳು ಹೆಚ್ಚು. ಈ ಹಿನ್ನೆಲೆಯಲ್ಲಿ ಎರಡೂ ನಗರಗಳನ್ನು ಸೇರಿಸಿ ಕಮಿಷನರೇಟ್ ತೆರೆದರೆ ಇವುಗಳನ್ನು ಹತ್ತಿಕ್ಕುವುದು ಸುಲಭವಾಗುತ್ತದ ಎಂಬ ನಿರ್ಧಾರಕ್ಕೆ ಬಂದಿರುವ ಎಸ್‌ಪಿಯವರು ಇದಕ್ಕೆ ಮುನ್ನುಡಿ ಬರೆಯಲಾರಂಭಿಸಿದ್ದಾರೆ.
ಮೊದಲೇ ಕೋಮು ಸೂಕ್ಷ್ಮ ಪ್ರದೇಶ ಎಂದು ಈ ಎರಡೂ ನಗರಗಳಿಗೆ ಹಣೆಪಟ್ಟಿ ಅಂಟಿಕೊಂಡಿದೆ. ಅದರಲ್ಲೂ ರಾಜಕೀಯ ಮತ್ತು ಧಾರ್ಮಿಕ ವಿಚಾರಗಳಿಗೆ ನಡೆಯುವ ಗಲಭೆ, ಗಲಾಟೆಗಳೇ ಹೆಚ್ಚು. ಗಣೇಶ ವಿಸರ್ಜನೆಯ ದಿನಗಳಲ್ಲಿ ಆತಂಕದ ವಾತಾವರಣ ನೆಲೆಸಿರುತ್ತದೆ. ಇದಕ್ಕಾಗಿ ಪೊಲಿಸರಿಗೆ ಸುಮಾರು ಒಂದು ತಿಂಗಳು ಬೇರೆ ಚಿಂತನೆ ಮಾಡಲು ಅವಕಾಶವೇ ಇರುವುದಿಲ್ಲ. ಮುಸ್ಲಿಂ ಹಬ್ಬಗಳಲ್ಲೂ ಇದೇ ಸ್ಥಿತಿ. ಕೆಎಸ್ಸಾರ್ಪಿ ತುಕಡಿಯೇ ಮಾಚೇನಹಳ್ಳಿಯಲ್ಲಿ ಇದ್ದರೂ ಕೇವಲ ಬಂದೋಬಸ್ತ್‌ಗಾಗಿಯೇ ಹೆಚ್ಚಿನ ಪಡೆಯನ್ನು ಇಟ್ಟುಕೊಳ್ಳುವ ಸ್ಥಿತಿ ಇದೆ. ಜೊತೆಗೆ ದಕ್ಷಿಣ ವಲಯದ ಇತರೆ ಜಿಲ್ಲೆಗಳಿಂದಲೂ ಹೆಚ್ಚಿನ ತುಕಡಿಗಳು ಇಲ್ಲಿಗೆ ಬರುವಂತಾಗಿದೆ.
  ನಗರದಲ್ಲಿ ಗಲಭೆಗಳು ಮೂರ್ನಾಲ್ಕು ವರ್ಷಗಳಿಗೊಮ್ಮೆ ಸಂಭವಿಸುತ್ತಿರುವುದರಿಂದ ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ಇಡೀ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠರೊಬ್ಬರಿಂದಲೇ ಸಾಧ್ಯವಾಗುವುದಿಲ್ಲ. ಹೊರ ಜಿಲ್ಲೆಯ ದಿಟ್ಟ ಅಧಿಕಾರಿಗಳೇ ಬರಬೇಕಾದ ಅನಿವಾರ್ಯತೆ ಇದೆ. ಇದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ.   ಸಮರ್ಥ ರೀತಿಯಲ್ಲಿ ಇಂತಹ ಗಲಭೆಗಳನ್ನು ಹತ್ತಿಕ್ಕಲು ನಗರಕ್ಕಷ್ಟೇ ಸೀಮಿತವಾಗುವ ಕಮಿಷನರೇಟ್ ಇದ್ದರೆ ಸಾಧ್ಯ.
ಕಮಿಷನರ್ ಕಚೇರಿ ಬಂದರೆ ಅನುಭವಿ ಐಪಿಎಸ್ ಅಧಿಕಾರಿ ಕಮೀಷನರ್ ಆಗಿ ಬರುತ್ತಾರೆ. ಅವರ ಅಡಿಯಲ್ಲಿ ಒಬ್ಬ ಉಪ ಆಯುಕ್ತರು ಮತ್ತು ಇನ್ನಿಬ್ಬರು ಸಹಾಯಕ ಆಯುಕ್ತರು, ಜೊತೆಗೆ ಟ್ರಾಫಿಕ್‌ಗೂ ಒಬ್ಬ ಸಹಾಯಕ ಆಯುಕ್ತರ ಹುದ್ದೆ ಸೃಷ್ಟಿಯಾಗುತ್ತದೆ. ಆಗ ಈಗಿರುವ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಶಿವಮೊಗ್ಗ ನಗರ ಹೊರತಾಗಿ ಉಳಿದ ತಾಲೂಕುಗಳತ್ತ ಗಮನ ಹರಿಸಲು ಸಾಧ್ಯವಾಗುತ್ತದೆ.
 ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮತ್ತು ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಕಚೇರಿ ಇದೆ. ಶಿವಮೊಗ್ಗ- ಭದ್ರಾವತಿ ಈ ಎರಡೂ ನಗರಗಳ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದೇ ಜಿಲ್ಲಾ ಪೊಲೀಸರಿಗಿರುವ ದೊಡ್ಡ ತಲೆನೋವು. ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಇಂತಹ ಸ್ಥಿತಿ ಇಲ್ಲ. 
 ಇದೆಲ್ಲವನ್ನೂ ಮನಗಂಡು ಕೋಮು ಸೂಕ್ಷ್ಮವೂ ಆಗಿರುವ ಈ ನಗರಕ್ಕೆ ಕಮಿಷನ್ ಹುದ್ದೆ ಮಂಜೂರು ಮಾಡುವುದು ಈಗ ಅನಿವಾರ್ಯವೂ ಆಗಿದೆ. ಸಕಾಲವೂ ಹೌದು. ಪೊಲಿಸ್ ಕಮಿಷನರ್ ಹುದ್ದೆಯು ಬಹುತೇಕ ದೊಡ್ಡ ನಗರಗಳಿಗೆ, ಅದರಲ್ಲೂ ವಿಶೇಷವಾಗಿ ಕೋಮು ಸೂಕ್ಷ್ಮ ಪ್ರದೇಶಗಳಿಗೆ ಮಂಜೂರು ಮಾಡಲಾಗುತ್ತದೆ. ಕಮಿಷನರೇಟ್ ಸ್ಥಾಪಿಸಲು ಸರ್ಕಾರಕ್ಕೆ ಇದು ಸಕಾಲ. ಈ ನಿಟ್ಟಿನಲ್ಲಿ ಮುಂದಡಿ ಇಡಬೇಕಿದೆ.
 ಸದ್ಯ ಇವರೆಡೂ ನಗರದ ಹಾಲಿ ಜನಸಂಖ್ಯೆಗೆ ತಕ್ಕಂತೆ ಪೊಲೀಸ್ ಸಿಬ್ಬಂದಿಗಳಿಲ್ಲ, ಠಾಣೆ ಇಲ್ಲ. ಇನ್ನೂ ಎರಡು- ಮೂರು ಪೊಲೀಸ್ ಠಾಣೆಗಳನ್ನು ತೆರೆಯುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಯೋಚಿಸಿರುವ ಎಸ್‌ಪಿಯವರು, ಇದಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ ಇಲಾಖೆಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ. ಕಮೀಷನರೆಟ್ ತೆರೆದು ಎರಡೂ ನಗರದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುವಂತೆ ಸರಕಾರ ಮಾಡಬೇಕಿದೆ. ಜನಪ್ರತಿನಿಧಿಗಳೂ ಸಹ ಪಕ್ಷಭೇದ ಮರೆತು ಎಸ್‌ಪಿ ಅವರ ಈ ಚಿಂತನೆಯನ್ನು ಬೆಂಬಲಿಸಿ ಆದಷ್ಟು ಶೀಘ್ರ ಅನುಷ್ಠಾನಗೊಳ್ಳಲು ಸಹಕರಿಸಬೇಕಿದೆ.
............................................