Saturday, 20 August 2016

ಜಾತಿ ರಾಜಕೀಯದತ್ತ ಹೊರಳುತ್ತಿದೆ ಬಿಜೆಪಿ 

ಭಾಷಣ ಮಾಡುವಾಗ ಸಮಾನತೆ, ಸಹಬಾಳ್ವೆ ಎಂದೆಲ್ಲ ಘೋಷಿಸುವವರು ವೇದಿಕೆಯಿಂದ ಕೆಳಗಿಳಿದಾಕ್ಷಣ ಮಾಡುವುದೇ ಮತ್ತೊಂದು. ಜಾತಿ, ಮತ, ಪಂಥವನ್ನೆಲ್ಲ ತೊರೆದು ಜನಸಾಮಾನ್ಯರ ಏಳಿಗೆಗೆ ಹೋರಾಡಬೇಕಾದವರೇ ಒಂದೊಂದು ಜಾತಿ ಹಿಡಿದುಕೊಂಡು ಬಡಿದಾಡುತ್ತಿದ್ದಾರೆ. ಕನಕದಾಸರ ‘‘ಕುಲಕುಲ ಎಂದು ಹೊಡೆದಾಡಬೇಡಿ’’ ಎಂಬ ಮಾತು ಪುಸ್ತಕಕಷ್ಟೇ ಸೀಮಿತವಾಗಿದೆ. ಇದು ನಿಜಕ್ಕೂ ಈ ದೇಶದ ದುರಂತ ಎನ್ನಲೇಬೇಕು. ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಎಲ್ಲ ಜಾತಿಗಳ ಮಧ್ಯೆ ಭೀಕರ  ಕಂದಕ ಉಂಟಾಗುವುದು ನಿಶ್ಚಿತ. ಜಾತಿಯ ಹೆಸರಿನಲ್ಲೇ ಹೊಡೆದಾಡಿಕೊಂಡು, ಕಚ್ಚಾಡಿಕೊಂಡು ಬದುಕಬೇಕಾದ ದಿನವೂ ಎದುರಾಗಬಹುದು.   

ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು)  ರಾಜ್ಯದಲ್ಲಿ ಘರ್ಜಿಸಿದ್ದು ಎಲ್ಲರ ನೆನಪಿನಾಳದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ  ಅಹಿಂದ ಸಂಘಟನೆಯನ್ನು ಹುಟ್ಟು ಹಾಕಿ ಅದರಲ್ಲಿ ಯಶಸ್ಸು ಕಂಡವರು. ಆ ವೇಳೆ ಅಹಿಂದವನ್ನು ಬಿಜೆಪಿ ಟೀಕಿಸಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಬಿಜೆಪಿ  ಜಾತಿ ರಾಜಕೀಯದತ್ತ ಬಲವಾಗಿ ಹೊರಳುತ್ತಿದೆ. ಇದರಿಂದ ಹಿಂದ (ಹಿಂದುಳಿದವರು ಮತ್ತು ದಲಿತರು) ಸಂಘಟನೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರಂಭಿಸಲು ಸಕಲ ಸಿದ್ಧತೆ ನಡೆಸಿದ್ದಾರೆ. ಆದರೆ ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಹಿತ ಅವರ ಬಣ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿಯಲ್ಲಿ ಮತ್ತೆ ಭಿನ್ನಮತಕ್ಕೆ ಇದು ಕಾರಣವಾಗಿದೆ.
 ಸಿದ್ದರಾಮಯ್ಯ ಅಹಿಂದ ಹುಟ್ಟುಹಾಕಿದಾಗಲೂ ಕಾಂಗ್ರೆಸ್‌ನಲ್ಲಿ ಇದಕ್ಕೆ ಅಪಸ್ವರ ಎದ್ದಿತ್ತು. ಆದರೆ ನಂತರ ಅದನ್ನು ಎಲ್ಲರೂ ಒಪ್ಪಿಕೊಂಡಿದ್ದರು. ಆದರೆ ಬಿಜೆಪಿಯಲ್ಲಿ ಪರಿಸ್ಥಿತಿ ಹಾಗಿಲ್ಲ. ಏಕೆಂದರೆ ಬಿಜೆಪಿ ಮೇಲ್ವರ್ಗದವರಿಂದಲೇ ತುಂಬಿರುವ ಪಕ್ಷ. ಹಿಂದವನ್ನು ಅವರು ಸಹಿಸುತ್ತಿಲ್ಲ. ಆದರೆ ಈಶ್ವರಪ್ಪ ಹಿಂದುಳಿದ ಕುರುಬ ಸಮುದಾಯದವರಾಗಿದ್ದು, ಅವರು ಹಿಂದುಳಿದವರನ್ನು ಮತ್ತು ದಲಿತರನ್ನು ಸಂಘಟಿಸಲು, ಅವರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಇದನ್ನು ಸ್ಥಾಪಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ಅಹಿಂದ ಮತ ಬ್ಯಾಂಕ್ ಮೇಲೆ ರಾಜಕಾರಣಿಗಳಿಗೆ ಕಣ್ಣಿದೆ. ಏಕೆಂದರೆ, ನಿರ್ಣಾಯಕ ಮತದಾರರು ಅವರೇ ಆಗಿರುವುದು. ಸಿದ್ದರಾಮಯ್ಯ ಸಹ ಹಿಂದುಳಿದವರಾಗಿರುವುದರಿಂದ ಅವರನ್ನೆಲ್ಲ ಸಂಘಟಿಸಿ ಅಹಿಂದ ಸಮುದಾಯದವರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಹೋರಾಟ ನಡೆಸಿ ಅದರಲ್ಲಿ ಯಶಸ್ವಿಯಾಗಿ ಮುಖ್ಯಮಂತ್ರಿಯೂ ಆದರು.  ವಿಶೇಷವೆಂದರೆ, ಬಿಜೆಪಿ ಮೇಲ್ಜಾತಿಯವರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದರೂ ಅಹಿಂದವರನ್ನು ನಿರ್ಲಕ್ಷಿಸಲು ತಯಾರಿಲ್ಲ. ಹಾಗಂತ ಅವರು ಮುಂದೆ ಬರುವುದನ್ನೂ ಸಹಿಸುತ್ತಿಲ್ಲ. ಇದರ ಪರಿಣಾಮವೇ ಈಗ ಯಡಿಯೂರಪ್ಪ- ಈಶ್ವರಪ್ಪ ಮಧ್ಯೆ ಎದ್ದಿರುವ ಭಿನ್ನಮತ. ಈಶ್ವರಪ್ಪ ಹಿಂದ ಹೆಸರಿನಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಲು ಸಿದ್ಧತೆ ನಡೆಸಿದ್ದಾರೆ. ಅವರು ಹೇಳುವಂತೆ ಇದು ಜಾತಿ ಸಂಘಟನೆಯಲ್ಲ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವೀರಶೈವರನ್ನು ಮುಂದಿಟ್ಟುಕೊಂಡೇ ಸದಾ ರಾಜಕೀಯ ಮಾಡುವವರು. ಮಾಜಿ ಪ್ರಧಾನಿ ದೇವೇಗೌಡ ಒಕ್ಕಲಿಗರನ್ನು ಮುಂದಿಟ್ಟುಕೊಂಡೇ ರಾಜಕೀಯ ಮಾಡುವವರು ಎನ್ನುವ ಮಾತು ಇಡಿ ರಾಜ್ಯದಲ್ಲಿ ಪ್ರಚಲಿತದಲ್ಲಿದೆ. . ಇವರ ಹೊರತಾಗಿ ಕರ್ನಾಟಕದಲ್ಲಿ ಉಳಿದ ಸಮುದಾಯದವರಿಗೆ ಬಲವಾದ ನಾಯಕ ಎನ್ನುವವರಿಲ್ಲ. ಬ್ರಾಹ್ಮಣರಾಗಲಿ, ದಲಿತರಾಗಲಿ, ಮುಸ್ಲಿಮರಾಗಲಿ ಪ್ರಬಲ ನಾಯಕನನ್ನು ಹೊಂದಿಲ್ಲ. ಅದಕ್ಕಾಗಿ ಕುರುಬ ಸಮುದಾಯದಲ್ಲಿ ಈಶ್ವರಪ್ಪ ನಾಯಕನೆನ್ನಿಸಿಕೊಳ್ಳಲು ಈ ಸಂಘಟನೆ ಕಟ್ಟುತ್ತಿದ್ದಾರೆಂದೇ ಊಹಿಸಲಾಗುತ್ತಿದೆ.
ಇದಕ್ಕೆಲ್ಲ ಮೂಲ ಕಾರಣ ನಮ್ಮಲ್ಲಿ ನೆಲೆಯೂರಿರುವ ಜಾತಿ ರಾಜಕಾರಣ. ಪ್ರತಿಯೊಂದು ವಿಚಾರದಲ್ಲಿ ಬರುವುದೇ ಜಾತಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅತಿ ಹೆಚ್ಚು ಪ್ರಮಾಣದಲ್ಲಿ ಲಿಂಗಾಯಿತರನ್ನು ಓಲೈಸಿಕೊಂಡರೆಂಬ ಆರೋಪ ಹೊತ್ತಿದ್ದಾರೆ. ಕೆಲವು ಲಿಂಗಾಯಿತ ಸ್ವಾಮಿಗಳಂತೂ  ತಾವೂ ಸಹ ರಾಜಕೀಯ ಮುಖಂಡರಿಗಿಂತ ಕಡಿಮೆ ಏನಿಲ್ಲ ಎಂಬಂತೆ ವರ್ತಿಸಿದ್ದ್ದೂ ಇದೆ. ಇದಕ್ಕೆಲ್ಲ ಅವರಿಗೆ ಸಿಕ್ಕ ಅತಿಯಾದ ಪ್ರೋತ್ಸಾಹ ಕಾರಣ. ಆದರೆ ನೂರಾರು ಜಾತಿಯವರಿರುವ ರಾಜ್ಯದಲ್ಲಿ, ದೇಶದಲ್ಲಿ ಜಾತಿ ರಾಜಕೀಯ ಎಂದಿಗೂ ಯಶಸ್ವಿಯಾಗುವುದಿಲ್ಲ. ಈವರೆಗೆ ಯಶಸ್ವಿಯಾಗಿಯೂ ಇಲ್ಲ. ಇದಕ್ಕೆ ಹಲವಾರು ನಾಯಕರ ಉದಾಹರಣೆ ಕೊಡಬಹುದು.  
ಪ್ರಸ್ತುತ ಬಿಎಸ್‌ವೈ- ಈಶ್ವರಪ್ಪ ಮಧ್ಯೆ ಎದ್ದಿರುವ ವಿವಾದವೂ ಇದೇ ಜಾತಿಯದ್ದು. ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಈಗಲೇ ಕನಸು ಕಾಣುತ್ತಿರುವ ಯಡಿಯೂರಪ್ಪ  ತಾನೇ ಮುಖ್ಯಮಂತ್ರಿ ಎಂದು ಹೆಚ್ಚು ಕಡಿಮೆ ಬಿಂಬಿಸಿಕೊಂಡಿದ್ದಾರೆ.  ತಾನು ಆ ಕುರ್ಚಿ ಏರಲು ಸಿದ್ಧತೆಯನ್ನು ತಳಹಂತದಿಂದ ಮಾಡಿಕೊಂಡಿದ್ದಾರೆ. ಪಕ್ಷದ ರಾಜ್ಯ ಸಮಿತಿ ರಚಿಸುವಾಗಲೇ ಇದು ಸ್ಫೋಟವಾಗಿದ್ದನ್ನು ಗಮನಿಸಬಹುದು. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲೂ ಜಾತಿ ಎದುರಾಯಿತು. ಪದಾಧಿಕಾರಿಗಳ ಆಯ್ಕೆಯಲ್ಲೂ ಇದನ್ನು ಪೋಷಿಸಲಾಯಿತು. ಇದು ಬಿಜೆಪಿಯ ಕೆಲವು ನಾಯಕರಿಗೆ ಸಹ್ಯವಾಗಲಿಲ್ಲ. ಪ್ರತಿಭಟಿಸಿದರು. ಆದರೂ ವಿವಾದ ಇಂದಿಗೂ ಬಗೆಹರಿಯದೆ ಉಳಿದಿದೆ. ಪ್ರತಿಯಾಗಿ ಈಶ್ವರಪ್ಪ ಬ್ರಿಗೇಡ್ ಆರಂಭಕ್ಕೆ ಹೆಜ್ಜೆ ಇಟ್ಟಿದ್ದಾರೆ.
ಬಿಜೆಪಿಯ ಈ ನಡೆ ಅದರ ಮುಂದಿನ ಹಾದಿಗೆ ಮುಳ್ಳಾಗುವ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ. ಈಶ್ವರಪ್ಪ ಅವರ ಬ್ರಿಗೇಡ್ ರಚನೆಯಾದ ನಂತರವೇ ಹೆಚ್ಚಿನ ಫಲಿತಾಂಶ ಗೊತ್ತ್ತಾಗುತ್ತದೆ.
ಬಸವಣ್ಣ ‘‘ಇವನಾರವ, ಇವನಾರವ ಇವನಾರವ ಎಂದೆಣಿಸದಿರಯ್ಯ’’ ಎಂದರು. ಸರ್ವಜ್ಞ ‘‘ಜಾತಿ-ವಿಜಾತಿ ಎನಬೇಡ’’ ಎಂದರು. ಪಂಪ ‘‘ಮಾನವಕುಲ ತಾನೊಂದೇ ವಲಂ ’’ಎಂದರೆ, ಮಹಾಕವಿ ಕುವೆಂಪು ‘‘ಮನುಜಮತ ವಿಶ್ವಪಥ’’ ಎಂದರು. ಆದರೆ ಇಂದು ಇವುಗಳ ಆಚರಣೆ ಮಾತ್ರ ಶೂನ್ಯವಾಗಿದೆ. ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿವೆ. ರಾಜಕೀಯ ಮಾತ್ರ ಜಾತಿಯ ಹೆಸರಿನಲ್ಲೇ ಸಾಗುತ್ತಿದೆ, ಮುನ್ನಡೆಯುತ್ತಿದೆ.

Thursday, 11 August 2016


ಭರವಸೆಯ ಬೆಳಕಾಗಿ ಹೊರಹೊಮ್ಮಿದ ಪನ್ನಗಾ 
 ಅಮೃತಮತಿ-ಏಕವ್ಯಕ್ತಿ ಪ್ರದರ್ಶನ




ಒಂದು ದೃಷ್ಟಿಯಿಂದ ನೋಡಿದರೆ, ಅಮೃತಮತಿ ಆಡುವ ಮಾತುಗಳು, ಅವಳ ಸಮರ್ಥನೆಗಳು ಸ್ತ್ರೀ ಸ್ವಾತಂತ್ರ್ಯದ ಅಭಿವ್ಯಕ್ತಿಯಂತೆ ಕಾಣುವುದು ಸುಳ್ಳಲ್ಲ. ಆದರೆ, ಜಾರಿದ ಅಮೃತಮತಿಗೆ ತಡೆದು ನಿಲ್ಲುವುದಕ್ಕೆ ಸಾಕಷ್ಟು ಅವಕಾಶಗಳಿದ್ದವು. ಆದರೆ ಅವಳಿಗದು ಸಾಧ್ಯವಾಗುವುದಿಲ್ಲ. ಅವಳು ಮತ್ತೆ ಮತ್ತೆ ಜಾರುತ್ತಾಳೆ. ಜಾರಿ ಜಾರೆಯಾಗುತ್ತಾಳೆ. ನಿಜಕ್ಕೂ ಅವಳದು ಅನುರಾಗವಲ್ಲ; ಕೇವಲ ಸುಖ-ಭೋಗದ ತೆವಲು. ಅದು ಪ್ರೇಮವಲ್ಲ; ಕಾಮ. ಅದೂ ಸಹ ಕೆರಳಿದ ಕಾಮ. ಕಾಮ ಅರಳಿದರೆ ದೇವತೆ: ಕೆರಳಿದರೆ ರಾಕ್ಷಸ. ಅಮೃತಮತಿಯ ಕಾಮುಕತೆ ಅವಳ ಮತಿ ಕೆಡಿಸುತ್ತದೆ.  ವ್ಯಭಿಚಾರದ ಗುಟ್ಟು ರಟ್ಟಾದಾಗ ಗಂಡನಿಗೂ, ಅತ್ತೆಗೂ ವಿಷ ನೀಡುತ್ತಾಳೆ. ಆ ಮೂಲಕ ಅಮೃತಮತಿ ವಿಷಮತಿಯಾಗುತ್ತಾಳೆ.  ನಿಜಕ್ಕೂ ಇದು ಸ್ರ್ತೀ ಮನೋದೌರ್ಬಲ್ಯದ ರೂಪಕ ಕತೆ.

* ದತ್ತಾತ್ರೇಯ ಹೆಗಡೆ

ಕವಿಚಕ್ರವರ್ತಿ ಎಂದು ಬಿರುದಾಂಕಿತನಾದ, ರತ್ನತ್ರಯರಲ್ಲಿ ಒಬ್ಬನೆಂದು ಖ್ಯಾತಿವೆತ್ತ ಜನ್ನನ ಪ್ರಸಿದ್ಧ ಕೃತಿ ‘ಯಶೋಧರ ಚರಿತೆ’.  ಇದು ಯಶೋಧರ ಚಕ್ರವರ್ತಿಯ ಬದುಕು-ಭವಾವಳಿಗಳನ್ನು ಹೇಳುವ ಕೃತಿಯಾದರೂ, ಇದರ ಕೇಂದ್ರಪಾತ್ರ ಯಶೋಧರನ ಪಟ್ಟಮಹಿಷಿ ಅಮೃತಮತಿ ಎನ್ನುವುದು ಉಲ್ಲೇಖನೀಯ.  
ಆಗಸ್ಟ್ 9ರಂದು ಕುವೆಂಪು ರಂಗಮಂದಿರದಲ್ಲಿ ಯಶೋಧರ ಚರಿತೆಯ ಮುಖ್ಯಪಾತ್ರವಾದ ಅಮೃತಮತಿಯನ್ನು ಕುರಿತಾಗಿ ಏಕವ್ಯಕ್ತಿ ಪ್ರದರ್ಶನ ನಡೆಯಿತು. ಮನುಷ್ಯ ಸಹಜವಾದ ಆಕರ್ಷಣೆ, ಅದಕ್ಕೆ ಅಡೆತಡೆಯಾಗಿರುವ ಸಾಮಾಜಿಕ ಬಂಧಗಳು, ಯುಕ್ತಾಯುಕ್ತ ನಡೆಯ ನಡುವಿನ ಸಂಘರ್ಷ-ತುಮುಲಗಳು, ಸೌಂದರ್ಯದ ಪರಿಕಲ್ಪನೆಯ ವಿವಿಧ ಮಜಲುಗಳನ್ನು ತೆರೆದಿಡುವಲ್ಲಿ ಈ ಪ್ರಯೋಗ ನಿಜಕ್ಕೂ ಪ್ರಶಂಸನೀಯ.
ಜೈನಧರ್ಮದ ಹಿನ್ನೆಲೆಯಲ್ಲಿ, ಜೈನ ಸಿದ್ಧಾಂತವನ್ನು ಪ್ರತಿಪಾದಿಸುವುದೇ ಈ ಕಥಾಹಂದರದ ಮುಖ್ಯಗುರಿಯಾಗಿತ್ತು.   ಹೆಂಡತಿಯ ಅನೈತಿಕ ಸಂಬಂಧವನ್ನು ಕಂಡು ಹೇಸಿ-ರೋಸಿ ಹೋಗುವ ಯಶೋಧರ ತನ್ನ ಅಳಲನ್ನು ತಾಯಿ ಚಂದ್ರಮತಿಯೊಂದಿಗೆ ತೋಡಿಕೊಳ್ಳುವುದು, ತಾಯಿಯ ಸಲಹೆಯಂತೆ ಹಿಟ್ಟಿನ ಹುಂಜವನ್ನು ಕೊಲ್ಲುವ ಸಂಕಲ್ಪ ತಳೆಯುವುದು, ಆ ಸಂಕಲ್ಪದ ಪರಿಣಾಮವಾಗಿ ಪಾಪಪ್ರಜ್ಞೆಯಿಂದ ತೊಳಲುವುದು, ಅದರ ನಿವಾರಣೆಗಾಗಿ ಎಂಬಂತೆ ಗಂಡ ಯಶೋಧರ ಮತ್ತು  ಅತ್ತೆ ಚಂದ್ರಮತಿಗೆ ವಿಷವಿಕ್ಕಿ ಉಪಕರಿಸಿದೆನೆಂದು ಅಮೃತಮತಿ ತನ್ನ ತಪ್ಪನ್ನು ತಾನು ಸಮರ್ಥಿಸಿಕೊಳ್ಳುವುದು - ಒಟ್ಟು ಪ್ರದರ್ಶನದ ಜೀವಾಳ.
ಯಕ್ಷಗಾನದ ಎಲ್ಲ ಮಜಲುಗಳನ್ನು ಕರತಲಾಮಲಕ ಮಾಡಿಕೊಂಡ ಪರಮೇಶ್ವರ ಹೆಗಡೆ ಐನಬೈಲು ಇವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರೆ ಮತ್ತು ಖ್ಯಾತ ರಂಗನಿರ್ದೇಶಕ ಪ್ರೊ. ಗೌರೀಶಂಕರ್ ಅವರ ಪುತ್ರಿ ಪನ್ನಗಾ ಜೋಯ್ಸ್ ಅವರು  ಅಮೃತಮತಿ ಪಾತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಹಿತ-ಮಿತವಾದ, ಆಕರ್ಷಕವಾದ ವೇಷಭೂಷಣ, ಯಕ್ಷಗಾನದ ಬಾಗು-ಬಳುಕಿನ ನರ್ತನ, ಪಾತ್ರಕ್ಕೆ ಜೀವತುಂಬುವ ಭಾವಪೂರ್ಣವಾದ, ತರ್ಕಬದ್ಧವಾದ ವಾಕ್ಸರಣಿಯ ಮೂಲಕ ಜನಮನವನ್ನು ಹಿಡಿದಿಡುವಲ್ಲಿ ಪನ್ನಗಾ ಅವರು ಯಶಸ್ವಿಯಾದರೆಂದೇ ಹೇಳಬೇಕು.
ನಮ್ಮ ಕರ್ಮೇಂದ್ರಿಯಗಳಿಗೆ ಜ್ಞಾನೇಂದ್ರಿಯಗಳೇ ಶತ್ರುಗಳು.  ಕಿವಿಗೆ ಶಬ್ದ, ಚರ್ಮಕ್ಕೆ ಸ್ಪರ್ಶ, ಕಣ್ಣಿಗೆ ರೂಪ, ನಾಲಗೆಗೆ ರಸ, ಮೂಗಿಗೆ ಗಂಧ ಶತ್ರುವಾಗಿ ಪರಿಣಮಿಸುತ್ತದೆ. ಇವು ನಮ್ಮನ್ನು ಎಲ್ಲೆಂದರಲ್ಲಿ ದಿಕ್ಕೆಡಿಸಿ ಘಾಸಿಗೊಳಿಸುತ್ತವೆ; ಕೆಡಹುತ್ತವೆ. ಅದಕ್ಕೆ ಉಪ್ಪರಿಗೆಯ ಹಾಸಿಗೆಯೂ ಆದೀತು; ತಿಪ್ಪೆಯ ಗುಂಡಿಯೂ ಆದೀತು. ಅಮೃತಮತಿಯ ಬದುಕಿನಲ್ಲಿ ನಾವು ಇವೆರಡನ್ನೂ ಕಾಣುತ್ತೇವೆ. ಅಮೃತಮತಿ ಉಪ್ಪರಿಗೆಯ ಹಂಸತೂಲಿಕಾ ತಲ್ಪದಲ್ಲಿ  ಗಂಡನ ತೋಳಿಗೆ ತಲೆಯಿಟ್ಟು ತನಿನಿದ್ದೆಯಲ್ಲಿ ಮುಳುಗಿದ್ದಾಳೆ; ತನ್ನ ಕಿವಿದೆರೆಯನ್ನು ಮುಟ್ಟಿದ ಶಬ್ದದಿಂದ ತಿಳಿದೇಳುತ್ತಾಳೆ. ಕಿವಿಗೆ ನಾದ ತಲುಪಿತು. ಆ ರಾಗ ಎಲ್ಲಿಂದ ಬಂತೋ....? ಅದನ್ನು ಮುಟ್ಟುವ ಅನುರಾಗ ಅವಳಲ್ಲಿ  ಹೆಚ್ಚಾಯಿತು. ಮೊದಲು ಶಬ್ದ: ಅನಂತರ ಸ್ಪರ್ಶದ ಹಂಬಲ. ಆದರೆ ಅದು ಕಾಣಲಿಲ್ಲ. ಮಾವುತನ ‘‘ಕತ್ತಲಿದು ರಸಿಕರಿಗೆ ರಸದಂಗಳ’’ ಎನ್ನುವ ಸೊಲ್ಲು ಅವಳನ್ನು ಸೂಜಿಗಲ್ಲಿನಂತೆ ಸೆಳೆಯಿತು. ಕಾಣುವ ಹಂಬಲ ಹೆಚ್ಚಾಯಿತು. ಅದು ರೂಪವೋ, ಕುರೂಪವೋ ಅವಳಿಗದು ಗೊತ್ತಿಲ್ಲ. ಅವನನ್ನು ಕೂಡುವ, ಸುಖಿಸುವ ಚಪಲತೆ ಉಂಟಾಯಿತು. ತನ್ನ ಮನಸ್ಸನ್ನೇ ಅವನಿಗೆ ಮೆಚ್ಚುಗಾಣಿಕೆಯಾಗಿ ಕೊಟ್ಟಳು. ಭಾವತೀವ್ರತೆಯಿಂದ ಅಮೃತಮತಿ ಕಾಮೋತ್ಕಂಠಿತೆಯಾಗುವುದನ್ನು ಈ ಸಂದರ್ಭದಲ್ಲಿ ಪನ್ನಗ ಅತ್ಯಂತ  ಮನೋಜ್ಞವಾಗಿ ಅಭಿನಯಿಸಿ ಜನಮನ ಸೂರೆಗೊಂಡರು.
ಮಾವುತನ ರಾಗಕ್ಕೆ ಮರುಳಾಗಿ ಅನುರಾಗಕ್ಕೊಳಗಾದ ಅಮೃತಮತಿಗಾದುದು ಮೊದಲು ಕಿವುಡುತನ. ದೂತಿ ಬಂದು  ಮಾವುತ ಅಷ್ಟಾವಂಕನ ರೂಪವನ್ನು ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟರೂ ಅವಳಿಗದು ಕೇಳಿಸುವುದಿಲ್ಲ.  ಅಷ್ಟಾವಂಕನನ್ನು ಸಂಧಿಸಿದಾಗಲೂ ಅವನ ಕುರೂಪ ಅವಳಲ್ಲಿ ಹೇಸಿಗೆ ತರಿಸುವುದಿಲ್ಲ. ಆಗ ಅವಳಿಗಾಗುವುದು ಕಣ್ಗುರುಡತನ; ಜೊತೆಯಲ್ಲಿ ಬಗೆಕುರುಡತನ.  ಅವಳ ಮಾತಿನಲ್ಲೇ ಹೇಳುವುದಾದರೆ, ‘‘ಇನ್ನೆನಗೆ ಆತನೇ ಕಾಮದೇವಂ, ಇಂದ್ರಂ, ಚಂದ್ರಂ’’. ಹೀಗಾಗಿಯೇ ಆಕೆ ‘‘ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್’’ ಎಂಬಷ್ಟು ಕುರುಡಿಯಾಗುತ್ತಾಳೆ; ಕತ್ತಲಲ್ಲೇ ಬೆತ್ತಲಾಗುತ್ತಾಳೆ; ‘ಚಿತ್ರಮಪಾತ್ರೇ ರಮತೇ ನಾರಿ’’ ಎನ್ನುವುದಕ್ಕ್ಕೆ ರೂಪಕ ವಾಗುತ್ತಾಳೆ.
ಶ್ರುತಿಬದ್ಧವಾದ ಹಾಡುಗಾರಿಕೆ, ಪೂರಕವಾದ ಚಂಡೆ-ಮದ್ದಲೆಗಳ ಹಿಮ್ಮೇಳ, ನಿಶೆಯ ನಶೆ ಏರಿಸುವ ಆಕರ್ಷಕ ಮಂದ ಬೆಳಕು, ಕಲಾಪ್ರೇಮಿಗಳಿಂದ ಕೂಡಿದ ಸಭೆ, ಕಾರ್ಯಕ್ರಮದ ಘನತೆ- ಗಾಂಭೀರ್ಯಕ್ಕೆ ಮೆರುಗು ನೀಡಿತು. ಏಕವ್ಯಕ್ತಿ ಪ್ರದರ್ಶನಕ್ಕೆ ಬಹುಜಟಿಲವೆನಿಸುವ ಈ ಕಥಾನಕವನ್ನು ತನ್ನ ಪ್ರಥಮ ಪ್ರಯತ್ನದಲ್ಲೇ ಸಶಕ್ತವಾಗಿ ಪ್ರದರ್ಶಿಸುವಲ್ಲಿ ಪನ್ನಗಾ ಸಫಲರಾಗಿದ್ದಾರೆ ಎನ್ನುವುದಕ್ಕೆ ಅಷ್ಟಾವಂಕನಿಂದ ಚಾಟಿ ಏಟು ತಿನ್ನುವಂತೆ, ಅವನಿಂದ ಒದೆಸಿಕೊಳ್ಳುವಂತೆ ಅವರು ನೀಡಿದ ಅಭಿನಯ ಮತ್ತೆ ಮತ್ತೆ ಮೆಲುಕುಹಾಕುವಂತಿತ್ತು.
  ಒಂದು ದೃಷ್ಟಿಯಿಂದ ನೋಡಿದರೆ, ಅಮೃತಮತಿ ಆಡುವ ಮಾತುಗಳು, ಅವಳ ಸಮರ್ಥನೆಗಳು ಸ್ತ್ರೀ ಸ್ವಾತಂತ್ರ್ಯದ ಅಭಿವ್ಯಕ್ತಿಯಂತೆ ಕಾಣುವುದು ಸುಳ್ಳಲ್ಲ. ಆದರೆ, ಜಾರಿದ ಅಮೃತಮತಿಗೆ ತಡೆದು ನಿಲ್ಲುವುದಕ್ಕೆ ಸಾಕಷ್ಟು ಅವಕಾಶಗಳಿದ್ದವು. ಆದರೆ ಅವಳಿಗದು ಸಾಧ್ಯವಾಗುವುದಿಲ್ಲ. ಅವಳು ಮತ್ತೆ ಮತ್ತೆ ಜಾರುತ್ತಾಳೆ. ಜಾರಿ ಜಾರೆಯಾಗುತ್ತಾಳೆ. ನಿಜಕ್ಕೂ ಅವಳದು ಅನುರಾಗವಲ್ಲ; ಕೇವಲ ಸುಖ-ಭೋಗದ ತೆವಲು. ಅದು ಪ್ರೇಮವಲ್ಲ; ಕಾಮ. ಅದೂ ಸಹ ಕೆರಳಿದ ಕಾಮ. ಕಾಮ ಅರಳಿದರೆ ದೇವತೆ: ಕೆರಳಿದರೆ ರಾಕ್ಷಸ. ಅಮೃತಮತಿಯ ಕಾಮುಕತೆ ಅವಳ ಮತಿ ಕೆಡಿಸುತ್ತದೆ.  ವ್ಯಭಿಚಾರದ ಗುಟ್ಟು ರಟ್ಟಾದಾಗ ಗಂಡನಿಗೂ, ಅತ್ತೆಗೂ ವಿಷ ನೀಡುತ್ತಾಳೆ. ಆ ಮೂಲಕ ಅಮೃತಮತಿ ವಿಷಮತಿಯಾಗುತ್ತಾಳೆ.  ನಿಜಕ್ಕೂ ಇದು ಸ್ರ್ತೀ ಮನೋದೌರ್ಬಲ್ಯದ ರೂಪಕ ಕತೆ.
ಈ ಪ್ರದರ್ಶನದ ಕೊನೆಯಲ್ಲಿ ಅಮೃತಮತಿಯ ಬಾಯಿಯಿಂದ ಹೊರಹೊಮ್ಮುವ- ‘‘ನಮಗೆ ಬೇಕಾದ್ದನ್ನು ನಾವು ದಕ್ಕಿಸಿಕೊಳ್ಳಬೇಕು. ಹಾಗೆಂದ ಮಾತ್ರಕ್ಕೆ ಇದು ಎಲ್ಲರಿಂದ ಸಾಧ್ಯವಿಲ್ಲ. ಅಮೃತಮತಿಯಂತಹವರಿಗೆ ಮಾತ್ರ ಸಾಧ್ಯ’’ ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುವುದು ಪ್ರ್ರಾಯಶಃ  ಸಹೃದಯ ಪ್ರೇಕ್ಷಕರಿಗೆ ಸಹ್ಯವಾಗುವುದಿಲ್ಲವೇನೋ.
......................................

Wednesday, 10 August 2016

ಸಿಟ್ಯಾಕೊ, ಸಿಡುಕ್ಯಾಕೊ ಮಳೆರಾಯ
 ಮಳೆಗಾಲ ಕೆಲವೇ ವರ್ಷಗಳ ಹಿಂದೆ ಜೂನ್ ಮೊದಲ ವಾರದಲ್ಲೇ ನಿಗದಿತವಾದಂತೆ ಆರಂಭವಾಗುತ್ತಿತ್ತು. ಆದರೆ ಕಳೆದ ಮೂರ್ನಾಲ್ಕು ವರ್ಷದಿಂದ ಗಮನಿಸಿದರೆ ಜೂನ್ ಆಂತ್ಯ, ಜುಲೈನಲ್ಲಿ ಆರಂಭವಾಗುತ್ತಿದೆ. ಇದರರ್ಥ ಮಳೆ ಪ್ರಮಾಣ ಇಳಿಮುಖವಾಗುತ್ತಿದೆ ಎಂದು. ಜೂನ್ ಮತ್ತು ಜುಲೈನಲ್ಲೇ ಶೇ. 785ರಷ್ಟು ಮಳೆಯಾಗುತ್ತಿದ್ದ ಕಾಲವಿತ್ತು. ಹಳ್ಳ-ಕೊಳ್ಳಗಳು ನಾಲ್ಕಾರು ತಿಂಗಳು ತುಂಬಿ ಹರಿಯುವಂತಹ ಸ್ಥಿತಿ ನಿಮಾಣವಾಗುತ್ತಿತ್ತು. ಜೊತೆಗೆ ವರ್ಷವಿಡೀ ಎಲ್ಲೆಡೆ ನೀರಿನ ಲಭ್ಯತೆ ಇರುತ್ತಿತ್ತು. ಆದರೆ ಈಗ ಅಕ್ಟೋಬರ್ ವೇಳೆಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಜಿಲ್ಲೆಗಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತ್ವತಾರ ಬಂದು ಟ್ಯಾಂಕರ್ ಮೂಲಕ ಪೂರೈಸುವುದನ್ನು ಕಾಣುತ್ತಿದ್ದೇವೆ. ಮಲೆನಾಡು ಬಯಲುಸೀಮೆಯಾಗುವತ್ತ ಹೆಜ್ಜೆ ಇಟ್ಟಿದೆಯೇ ಎನ್ನುವ ಆತಂಕ ಎದುರಾಗುತ್ತಿದೆ. ನಮ್ಮ ಪರಿಸರ, ಕಾಡು ಉಳಿಸಿಕೊಳ್ಳದಿದ್ದರೆ ಭೀಕರ ಸ್ಥಿತಿ ಎದುರಿಸಬೇಕಾದ ಸ್ಥಿತಿ ಎದುರಾಗುವುದು ಸತ್ಯ. ಈ ಬಗ್ಗೆ ಈಗಾಗಲೇ ಅನೇಕ ಪರಿಸರ ತಜ್ಞರು, ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಆದರೂ ಎಚ್ಚೆತ್ತುಕೊಳ್ಳದ ಸ್ಥಿತಿಯಲ್ಲಿ ನಾವಿದ್ದೇವೆ.



ಮಳೆರಾಯ ಮತ್ತೆ ಮುನಿಸಿಕೊಂಡಿದ್ದಾನೆ. ಮಳೆ ಬಾರದಿರುವುದನ್ನು ಕಂಡಾಗ, ಅದರಲ್ಲೂ ದಟ್ಟವಾದ ಕಪ್ಪು ಮೋಡ ಆವರಿಸಿ, ಇನ್ನೇನು ಭರ್ಜರಿ ಮಳೆ ಬೀಳುತ್ತದೆ ಎಂದುಕೊಂಡರೂ ಚದುರಿದಂತೆ ಮಳೆಯಾಗಿ ನಿರಾಶೆ ಮೂಡಿಸಿದಾಗ  ಜಾನಪದರ ಹಾಡು ‘ಸಿಟ್ಯಾಕೊ, ಸಿಡುಕ್ಯಾಕೊ ನನರಾಯ’  ಎನ್ನುವುದು ನೆನಪಾಗುತ್ತದೆ. ಆದರೆ ಪರಿಸರ ನಾಶವನ್ನು ಮಾಡಿಕೊಂಡ ನಾವು ಅದಕ್ಕೆ ಭಾರಿ ಪ್ರಮಾಣದಲ್ಲಿ ಬೆಲೆ ತೆರುತ್ತಿರುವುದು ಸತ್ಯ.
ಈ ವರ್ಷ ಮಳೆ ಮತ್ತೆ ಕೈಕೊಟ್ಟಿದೆ. ಕಳೆದ ವರ್ಷವೇ ಮಳೆ ಕಡಿಮೆ ಪ್ರಮಾಣದಲ್ಲಿ ಬಿದ್ದಿದ್ದರಿಂದ ಬಹುತೇಕ ಜಿಲ್ಲೆಗಳಲ್ಲಿ ಬರಗಾಲ ಎದುರಾಗಿತ್ತು. ಮಲೆನಾಡು ಈಗ ಹಿಂದಿನ ಮಳೆನಾಡಾಗಿ ಉಳಿದಿಲ್ಲ. ಇಲ್ಲಿಯೂ ಕೆಲವು ತಾಲೂಕುಗಳು ಬರಪೀಡಿತವಾಗಿದ್ದವು. ನಂತರದ ದಿನಗಳಲ್ಲಿ ಈ ವರ್ಷ ಉತ್ತಮ ಮಳೆ ಬೀಳಲಿದೆ ಎಂದೇ ಹವಾಮಾನ ತಜ್ಞರು ಹೇಳಿದ್ದರು. ಆದರೆ ಈಗ ಅದು ಸುಳ್ಳಾಗಿದೆ. ಮಲೆನಾಡಿನಲ್ಲಿ ಈ ವರ್ಷ ಮತ್ತೆ ನೀರಿನ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಎದುರಾಗುವುದು ಖಚಿತವಾಗಿದೆ. ಜೂನ್, ಜುಲೈನಲ್ಲಿ ವಾಡಿಕೆ ಮಳೆಯೂ ಜಿಲ್ಲೆಯಲ್ಲಿ ಆಗಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಇನ್ನೆಷ್ಟು ಮಳೆ ನಿರೀಕ್ಷಿಸಲು ಸಾಧ್ಯ.  ಲಿಂಗನಮಕ್ಕಿ ಜಲಾಶಯವೂ ತುಂಬುವ ಲಕ್ಷಣ ಗೋಚರವಾಗುತ್ತಿಲ್ಲ. ಆಗಸ್ಟ್‌ನಲ್ಲಿ ಮಳೆ ಬೀಳುವುದು ಅನುಮಾನವಾಗಿದೆ. ಏಕೆಂದರೆ, ಜಿನುಗು ಮಳೆ ಮಾತ್ರ ಬೀಳುತ್ತಿದೆ.
 ಆದರೆ ಬಯಲು ಸೀಮೆ ಜಿಲ್ಲೆಗಳಲ್ಲಿ ಮಾತ್ರ ಪ್ರವಾಹವೇ ಎದುರಾಗಿದೆ. ಮಲೆನಾಡಿನ ಜಿಲ್ಲೆಗಳಲ್ಲಿ ಅಕಾಲದಲ್ಲಿ ಅಂದರೆ ಅಕ್ಟೋಬರ್-ನವೆಂಬರ್‌ನಲ್ಲಿ ಮಳೆಯಾಗುವ ಸಂಭವವನ್ನು ಈಗ ಅಂದಾಜಿಸಲಾಗುತ್ತಿದೆ. ಹೀಗಾದರೆ ಇನ್ನಷ್ಟು ಬೆಳೆ ನಾಶ ಖಚಿತವಾಗಿ, ರೈತರು ಸಂಕಷ್ಟಕ್ಕೆ ಸಿಲುಕುವುದಲ್ಲಿ ಸಂದೇಹವೇ ಇಲ್ಲ.
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಲ್ಲಿ ಶೇ. 34ರಷ್ಟು ಮಳೆ ಕಡಿಮೆಯಾಗಿರುವುದಾಗಿ ಇಲಾಖೆಗಳು ಹೇಳುತ್ತ್ತಿವೆ. ಇದರಿಂದ ಕೃಷಿಗೆ ತೀರಾ ಹಿನ್ನಡೆಯಾಗದಿದ್ದರೂ ಮುಂದಿನ ದಿನಗಳಲ್ಲಿ ನೀರಿನ ಕೊರತೆಯನ್ನು ಎದುರಿಸಬೇಕಾಗಬಹುದು ಎನ್ನುವುದು ದೂರಾಲೋಚನೆ.
ಇದರಿಂದ ಮಲೆನಾಡಿನ ರೈತರು ಈ ಬಾರಿ ಕಂಗಾಲಾಗಿದ್ದಾರೆ. ನೀರಿನ ಸಮಸ್ಯೆ ಜೊತೆಗೆ ಬೆಳೆಹಾನಿಯೂ ಕಟ್ಟಿಟ್ಟದ್ದು ಎಂಬ ನಿಲುವಿಗೆ ಬಂದಿದ್ದಾರೆ. ಕಳೆದ ಬೇಸಿಗೆಯಲ್ಲೇ ನೀರಿಲ್ಲದೆ ಜಿಲ್ಲೆಯಲ್ಲಿ ಬಹಳಷ್ಟು ಅಡಕೆ ತೋಟಗಳು ಒಣಗಿ ಹೋಗಿದ್ದವು. ಗದ್ದೆಗಳು ಬಿರುಕುಬಿಟ್ಟಿದ್ದವು. ಬೆಳೆಗಾರ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತೆ
ಆಗಿತ್ತು. ಮಲೆನಾಡು ಮತ್ತು ಬಯಲುಸೀಮೆಯ ಅಂಚಿನಲ್ಲಿರುವ ಅಡಕೆ ತೋಟಗಳೇ ಹೆಚ್ಚಿನ ಪ್ರಮಾಣದಲ್ಲಿ ನಾಶವಾಗಿದ್ದವು. ಬಿಸಿಲಿನ ಹೊಡೆತಕ್ಕೆ ಸುಟ್ಟುಹೋಗಿದ್ದವು. ಈ ಎಲ್ಲ ಕಹಿ ನೆನಪು ಮತ್ತೆ ರೈತರನ್ನು ಕಾಡತೊಡಗಿದೆ.
ಜಿಲ್ಲೆಯ ವಾಡಿಕೆ ಮಳೆ 1813 ಮಿ.ಮೀ. ಆದರೆ ಈ ವರ್ಷ ಇನ್ನು ತಲುಪುವುದು ಅಸಾಧ್ಯ ಎನ್ನಬಹುದು. ಈ ವರ್ಷದ ಜನವರಿಯಿಂದ ಜುಲೈ ಅಂತ್ಯದವರೆಗೆ 1400 ಮಿ. ಮೀ ಮಾತ್ರ ಮಳೆಯಾಗಬೇಕಿತ್ತು. ಆದರೆ 975 ಮಿ. ಮೀ. ಮಾತ್ರ ಮಳೆಯಾಗಿದೆ. ಕಳೆದ ವರ್ಷದ ಮೊದಲ 6 ತಿಂಗಳಲ್ಲಿ  1371 ಮಿ. ಮೀ ಮಳೆಯಾಗಿತ್ತು. ಅಂದರೆ ಕಳೆದ ಸಾಲಿಗಿಂತ 396 ಮಿ. ಮೀ. ಮಳೆ ಕೊರತೆಯಾಗಿದೆ.
ಕಳೆದ ಎರಡು ವರ್ಷಗಳ ಮಳೆ ಪ್ರಮಾಣ :
2015ರಲ್ಲಿ ವಾರ್ಷಿಕವಾಗಿ ಸರಾಸರಿ ಆಗಬೇಕಿದ್ದ  ವಾಡಿಕೆ ಮಳೆಯಾಗಿದೆ. ವಾಡಿಕೆ ಮಳೆ 1818.9 ಮಿಲಿಮೀಟರ್ ಇದೆ. ಆದರೆ ಆ ವರ್ಷ ಸೆ. 15ರವರೆಗಿನ ವರದಿಯಂತೆ ಜಿಲ್ಲೆಯಲ್ಲಿ ಬಿದ್ದ ಮಳೆ 1955.5 ಮಿಲಿಮೀಟರ್. 2014ರಲ್ಲಿ ಇದೇ ವೇಳೆಗೆ 1978.4 ಮಿಮೀ ಮಳೆಯಾಗಿತ್ತು. 2013ರಲ್ಲಿ 2192.6 ಮಿಮೀ, ಮಳೆಯಾಗಿತ್ತು.
ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಹೆಸರಾಗಿದ್ದ ಆಗುಂಬೆಯಲ್ಲಿ ಪ್ರತಿ ವರ್ಷ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಅದೇ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹುಲಿಕಲ್‌ನಲ್ಲಿ ಮಳೆ ಪ್ರಮಾಣ ಹೆಚ್ಚುತ್ತಿದೆ. ಆಗುಂಬೆ ವ್ಯಾಪ್ತಿಯಲ್ಲಿ ಸತತ ಕಾಡುನಾಶ ನಡೆದಿರುವುದು ಈ ದುರಂತಕ್ಕೆ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದಟ್ಟ ಕಾಡುಗಳು ಒಳಗಿಂದೊಳಗೇ ಬೋಳಾಗುತ್ತಿವೆ. ಪರಿಸರ ನಾಶವಾದ ಮೇಲೆ ಸಸಿ ನೆಡುವ, ಪರಿಸರ ಕಾಪಾಡುವ ಭಾಷಣ ಮಾಡಲಾಗುತ್ತಿದೆ. ಕೆಲವೇ ವರ್ಷಗಳ ಹಿಂದೆ ಮಳೆಗಾಲ ಎಂದರೆ 6 ತಿಂಗಳು ಎಡೆಬಿಡದೆ ಸುರಿಯುತ್ತಿದ್ದ ಮಲೆನಾಡು ಮುಂದಿನ ವರ್ಷಗಳಲ್ಲಿ ಮಳೆ ಕೊರತೆ ಎದುರಿಸುವುದು ನಿಶ್ಚಿತ. ಇದರ ಪರಿಣಾಮ ಜಿಲ್ಲೆಯ ಆರ್ಥಿಕತೆಯ ಮೇಲೆ ಆಗಲಿದೆ. ಈ ರೀತಿ ಕೈಕೊಡುವ ಮಳೆಯಿಂದಾಗಿ ಸತತ ನಷ್ಟದಲ್ಲಿರುವ ರೈತರೂ ಸಹ ಕೃಷಿಯಿಂದ ವಿಮುಖರಾಗುತ್ತಿದ್ದಾರೆ


Monday, 8 August 2016


 ಬೆಳೆಗಾರರ ನಿದ್ದೆಗೆಡಿಸಿದೆ ಆಮದು ಅಡಿಕೆ, ದರ ಕುಸಿತ
 ಮಾರಕವಾಗಿದೆ ಮುಕ್ತ ಆಮದು ನೀತಿ 



2015ರ ಮಾರ್ಚ್  2ರಿಂದ ಮೇ ಅಂತ್ಯದವರೆಗೆ ಶ್ರೀಲಂಕಾದಿಂದ ಶೇ. 89ರಷ್ಟು, ಇಂಡೊನೇಷ್ಯಾದಿಂದ ಶೇ. 10.7 ಮತ್ತು ಮಡ್ಗಾಸ್ಕರ್‌ನಿಂದ ಶೇ.0.3ರಷ್ಟು ಅಡಿಕೆ , ಭಾರತಕ್ಕೆ (ಸುಮಾರು 1,00,846 ಕ್ವಿಂಟಾಲ್) ಆಮದಾಗಿದೆ. ಇದರ ಮೌಲ್ಯ ಸುಮಾರು 144 ಕೋಟಿ ರೂ.
2014ರ ಇದೇ ಅವಧಿಯಲ್ಲಿ ಭಾರತಕ್ಕೆ ಆಮದುಗೊಂಡ ವಿದೇಶಿ ಅಡಿಕೆ ಪ್ರಮಾಣ 18,288 ಕ್ವಿಂಟಾಲ್ ಮಾತ್ರವಾಗಿತ್ತು. ಮೌಲ್ಯ ಸುಮಾರು 21.8 ಕೋಟಿ ರೂ. ಆಗಿತ್ತು. ಇದರಲ್ಲಿ ಶ್ರೀಂಕಾದಿಂದ ಶೇ 50ರಷ್ಟು, ಪಾಕಿಸ್ತಾನದಿಂದ ಶೇ 41ರಷ್ಟು, ಬಾಂಗ್ಲಾದಿಂದ ಶೇ. 7.5ರಷ್ಟು ಮತ್ತು ಥೈಲ್ಯಾಂಡ್‌ನಿಂದ ಶೇ. 0.5ರಷ್ಟು ಇತ್ತು. ಒಟ್ಟಿನಲ್ಲಿ ಅಕ್ರಮವಾಗಿ ಕಳಪೆ ಮತ್ತು ಕಡಿಮೆ ಗುಣಮಟ್ಟದ ಅಡಿಕೆ ಭಾರತಕ್ಕೆ ಬರುತ್ತಿರುವುದರಿಂದ ಧಾರಣೆ ಇಲ್ಲಿ ಅಸ್ಥಿರಗೊಂಡಿದೆ.  
ಈ ವರ್ಷದ ಜನವರಿಯಿಂದ ಜೂನ್ ಅಂತ್ಯದವರೆಗೆ 1 ಲಕ್ಷ ಟನ್ ಆಮದಾಗಿದೆ. ಕಳೆದ  ವರ್ಷ ಈ ಅವಧಿಯಲ್ಲಿ 67,224 ಟನ್ ಆಮದಾಗಿತ್ತು.


ಶಿವಮೊಗ್ಗ:   ವಿದೇಶಿ ಅಡಿಕೆ ಆಗಮನದಿಂದ ಕರ್ನಾಟಕದ ಅಡಿಕೆ ಬೆಳೆಗಾರರು ತಲ್ಲಣಿಸಿ ಹೋಗಿರುವ  ವಿಚಾರ ಮತ್ತೆ ಸದ್ದು ಮಾಡಲಾರಂಭಿಸಿದೆ. ಹೇಗಾದರೂ ಮಾಡಿ ಅಡಿಕೆ ಆಮದನ್ನು ನಿಲ್ಲಿಸಬೇಕೆಂದು ಕೇಂದ್ರ ಸರಕಾರಕ್ಕೆ ಮೊರೆ ಇಡುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಕೇಂದ್ರ ಈ ಬಗ್ಗೆ ಗಮನಹರಿಸದೆ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಹಾಗೆಯೇ ಜೀವಂತವಾಗಿರಿಸಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿತಕ್ಕೊಳಗಾಗುವಂತಾಗಿದೆ.
ಕರ್ನಾಟಕದಲ್ಲಿ ಸುಮಾರು 3 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. ಕೇರಳದಲ್ಲಿ ಸುಮಾರು 50 ಸಾವಿರ ಟನ್ ಮತ್ತು ಗೋವಾದಲ್ಲಿ 8 ಸಾವಿರ ಟನ್, ಅಸ್ಸಾಂನಲ್ಲಿ 25 ಸಾವಿರ ಟನ್ ಅಡಿಕೆ ಬೆಳೆಯಲಾಗುತ್ತಿದೆ. ರಾಜ್ಯದ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯ ಪ್ರಮುಖ ವಾಣಿಜ್ಯ ಬೆಳೆ ಎನ್ನಬಹುದು. ರಾಜ್ಯದ 22 ಜಿಲ್ಲೆಯಲ್ಲಿ 2.15 ಹೆಕ್ಟೇರ್‌ನಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಉತ್ಪಾದನೆ 3.16 ಲಕ್ಷ ಟನ್‌ನಷ್ಟಿದೆ. ದೇಶದ ಅಡಿಕೆ ಉತ್ಪಾದನೆಯ ಶೇ. 47 ಭಾಗವನ್ನು ಕರ್ನಾಟಕವೊಂದೇ ಬೆಳೆಯುತ್ತಿದೆ.  ಕರ್ನಾಟಕ ಸರಕಾರಕ್ಕೆ 100 ಕೋಟಿ ರೂ. ಗೂ ಅಧಿಕ ಆದಾಯವನ್ನು ಅಡಿಕೆ ನೀಡುತ್ತಿದೆ. ಆದರೆ ದಕ್ಷಿಣ ಏಷ್ಯಾ ರಾಷ್ಟ್ರಗಳಿಂದ ಹೇರಳವಾಗಿ ಭಾರತಕ್ಕೆ ಅಡಕೆ ಆಮದಾಗುತ್ತಿದೆ. ಅಡಕೆ ಆಮದಿನ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ಇದಕ್ಕೆ ಕೇಂದ್ರ ಸರಕಾರದ ಮುಕ್ತ ಆಮದು ನೀತಿ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.
 ಅಡಕೆ ಆಮದು ನಿರ್ಬಂಧದ ಸಡಿಲಿಕೆಯ ಹಿಂದೆ ಗುಟ್ಕಾ ಕಂಪೆನಿಗಳ ಲಾಬಿಯ ಕೈವಾಡದ ಶಂಕೆ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಗುಟ್ಕಾ ಕಂಪೆನಿಯ ಲಾಬಿಗೆ ಮಣಿಯಬಾರದು. ವಿದೇಶಿ ಅಡಕೆ ಆಮದು ನೀತಿಯಲ್ಲಿ ಬದಲಾವಣೆ ಮಾಡಬಾರದು. ಒಂದು ವೇಳೆ ಆಮದು ನೀತಿಯಲ್ಲಿ ವ್ಯತ್ಯಾಸವಾದರೆ, ಅಡಕೆ ಬೆಳೆಯನ್ನೇ ನಂಬಿಕೊಂಡಿರುವ ದೇಶೀಯ ಅಡಿಕೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಬೇಕಾದ ಪರಿಸ್ಥಿತಿ ಉಂಟಾಗಲಿದೆ ಎನ್ನುವುದು ಬೆಳೆಗಾರರ ಅಭಿಮತ.
 ಕೇಂದ್ರ ವಾಣಿಜ್ಯ ಸಚಿವಾಲಯದ ಅಧೀನದಲ್ಲಿರುವ ಆಮದು ಮತ್ತು ರಫ್ತು ಬೆಲೆ ನಿಗದಿ ಮಾಡುವ ಕೇಂದ್ರದ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಅಡಿಕೆ ಆಮದು ಸುಂಕದ ಕನಿಷ್ಟ ದರವನ್ನು ಈಗ 162 ರೂ.ಗೆ ನಿಗದಿ ಮಾಡಿದೆ. ಶ್ರೀಲಂಕಾ, ಇಂಡೋನೇಶ್ಯಾ, ಥೈಲ್ಯಾಂಡ್, ಮ್ಯಾನ್ಮಾರ್, ಮಲೇಶಿಯಾ ಮೊದಲಾದ ದೇಶಗಳಲ್ಲಿ ಬೆಳೆಯುವ ಕಡಿಮೆ ಗುಣಮಟ್ಟದ ಅಡಿಕೆಗೆ ಅಲ್ಲಿ ಬೇಡಿಕೆ ಇಲ್ಲದಿರುವುದರಿಂದ ಅದನ್ನು ಇಲ್ಲಿಗೆ ತಂದು ಇಲ್ಲಿನ ಅಡಿಕೆ ಜೊತೆ ಕಲಬೆರಕೆ ಮಾಡಲಾಗುತ್ತಿತ್ತು. ಈ ಕಾರಣದಿಂದ ಆಮದು ಸುಂಕ ಹೆಚ್ಚಳ ಮಾಡಿದ್ದರೂ ಈ ಆದೇಶವನ್ನು 30 ಅಡಿಕೆ ವರ್ತಕರು ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
  ರಾಜ್ಯದ ಪ್ರಮುಖ ಅಡಿಕೆ ಖರೀದಿ ಸಹಕಾರ ಸಂಘಗಳಾದ ಕ್ಯಾಂಪ್ಕೋ, ಮ್ಯಾಮ್ಕೋಸ್, ಶಿರಸಿಯ ಟಿಎಸ್ಸೆಸ್, ಚೆನ್ನಗಿರಿಯ ತುಮ್ಕೋಸ್, ರಾಮ್ಕೋಸ್ ಮೊದಲಾದ ಸಹಕಾರ ಸಂಘಗಳ ಮುಖಂಡರು ನವದೆಹಲಿಗೆ ತೆರಳಿ ಅಲ್ಲಿ ಅರ್ಥ ಸಚಿವ, ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಆಮದು ಅಡಿಕೆ ನಿಷೇಧಿಸುವಂತೆ ಮತ್ತು ಕರ್ನಾಟಕದ ಅಡಿಕೆ ಬೆಳೆಗಾರರ ಹಿತ ಕಾಪಾಡುವಂತೆ ಮನವಿ ಮಾಡಿ ಬಂದಿದ್ದಾರೆ.
ಆಮದು ಬೇಡ:
  ಕೇಂದ್ರ ಸರ್ಕಾರ ಗುಟ್ಕಾ ಕಂಪನಿಗಳ ಒತ್ತಡಕ್ಕೆ ಮಣಿದು ಅಡಿಕೆ ಆಮದಾಗದಂತೆ ನೋಡಿಕೊಂಡರೆ ಮುಂದಿನ ಅಡಿಕೆ ಹಂಗಾಮಿನಲ್ಲೂ ರೈತರಿಗೆ ಉತ್ತಮ ದರ ದೊರೆಯುವ ನಿರೀಕ್ಷೆ ಇದೆ. ನೇಪಾಳ ಹಾಗೂ ಬಾಂಗ್ಲಾದೇಶಗಳು ಭಾರತ ದೇಶದೊಂದಿಗೆ ಆಪ್ತಮಿತ್ರ ರಾಷ್ಟ್ರಗಳಾಗಿರುವ ಕಾರಣ ಹೊಂದಿರುವ "ವಿಶೇಷ ವ್ಯಾಪಾರ ಒಪ್ಪಂದ"ದ ರಿಯಾಯಿತಿಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಹಾಗೂ ಮೇಲ್ಕಂಡ ದೇಶಗಳ ಮೂಲಕ ದಕ್ಷಿಣ ಏಷ್ಯಾ ರಾಷ್ಟ್ರಗಳು ಬೆಳೆಯುವ ಅಡಿಕೆಯನ್ನು ಅಮದು ಮಾಡಿಕೊಳ್ಳದಂತೆ ಕಠಿಣ ಕ್ರಮವನ್ನು ಕೈಗೊಳ್ಳಬೇಕಿದೆ. ಈ ಮೂಲಕ ದೇಶೀಯ ಅಡಿಕೆ ಮಾರುಕಟ್ಟೆಯ ಉತ್ತಮ ಧಾರಣೆಯ ಸ್ಥಿರತೆಯನ್ನು ಕಾಯಬಹುದು ಎನ್ನುತ್ತಾರೆ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದವರು.
 ವಿದೇಶಿ ಅಡಕೆ ಆಮದು ನೀತಿಯಲ್ಲಿ ಬದಲಾವಣೆ ಮಾಡಬಾರದು. ಒಂದು ವೇಳೆ ಆಮದು ನೀತಿಯಲ್ಲಿ ವ್ಯತ್ಯಾಸವಾದರೆ, ಅಡಕೆ ಬೆಳೆಯನ್ನೇ ನಂಬಿಕೊಂಡಿರುವ ದೇಶೀಯ ಅಡಿಕೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಬೇಕಾದ ಪರಿಸ್ಥಿತಿ ಉಂಟಾಗಲಿದೆ ಎನ್ನುವುದು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಅಭಿಮತ.
ಅಡಕೆ ಧಾರಣೆ:
 ಅಡಕೆ ಧಾರಣೆ ಗಮನಿಸುವುದಾದರೆ, ಕೆಂಪಡಕೆ ಧಾರಣೆ ಇಳಿಮುಖವಾಗುತ್ತಲೇ ಇದೆ. ಸದ್ಯ 20 ರಿಂದ 22 ಸಾವಿರದವರೆಗೆ ಅಡಕೆ ದರ ಕ್ವಿಂಟಾಲ್‌ಗೆ ಇದೆ.  ಕಳೆದ ವರ್ಷದ ಜೂನ್‌ನ್‌ನಲ್ಲಿ 26ರಿಂದ 27 ಸಾವಿರದವರೆಗೆ ಧಾರಣೆ ಇತ್ತು.  ಹಿಂದಿನ ವರ್ಷಕ್ಕಿಂತ ಈ ವರ್ಷ ಕೆಂಪಡಕೆ ಆವಕ ಶೇ 7ರಷ್ಟು ಕಡಿಮೆಯಾಗಿದೆ. ಆದರೆ ದರ ಶೇ. 28ರಷ್ಟು ಕುಸಿತ ಕಂಡಿದೆ.  ಇದರಿಂದ ಶಿವಮೊಗ್ಗ ಎಪಿಎಂಸಿಯೊಂದರಲ್ಲೇ 3 ಲಕ್ಷ ಚೀಲದಷ್ಟು ಕೆಂಪಡಕೆ ದಾಸ್ತಾನಿದೆ. ಬಿಳಿಚಾಲಿಯ ದರವನ್ನು ಗಮನಿಸುವುದಾದರೆ, ಕಳೆದ ವರ್ಷಕ್ಕಿಂತ ಈ ವರ್ಷ ಶೇ. 6ರಷ್ಟು ದರ ಕುಸಿದಿದೆ.
.




Wednesday, 3 August 2016

ಇವರಿಗೆ ಬುದ್ಧಿ ಹೇಳುವವರಾರು?


ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜನರು ಮತ್ತು ಸಂಘ-ಸಂಸ್ಥೆಗಳು ಇಲಾಖೆಗಳೊಂದಿಗೆ ಕೈಜೋಡಿಸಬೇಕಿದೆ. ಶಿವಮೊಗ್ಗದಲ್ಲಂತೂ ಬಹುಮಹಡಿ ಕಟ್ಟಡಗಳೇ ದೊಡ್ಡ ತಲೆನೋವಾಗಿವೆ. ಉದ್ದೇಶಪೂರ್ವಕವಾಗಿ ಇವರು ಟ್ರಾಫಿಕ್‌ಗೆ ತೊಂದರೆ ಮಾಡುತ್ತಿದ್ದಾರೆ. ಪಾರ್ಕಿಂಗ್‌ಗೆ ಬಿಡುವ ಜಾಗದಲ್ಲೂ  ಮಳಿಗೆ ನಿರ್ಮಿಸುತ್ತಾರೆ. ಅದನ್ನು ತೆರವುಗೊಳಿಸಲು ಮುಂದಾಗುವ ಅಧಿಕಾರಿಯನ್ನು ವರ್ಗಾವಣೆ ಅಥವಾ ಅಮಾನತು ಬೇಕಾದರೂ ಮಾಡಿಸುತ್ತಾರೆ. ಅದೇ ರೀತಿ ಅಂಗಡಿ ಮಾಲಕರೂ ಫುಟ್‌ಪಾತ್ ತಮ್ಮ ಅಂಗಡಿಗೆ ಸೇರಿದ ಜಾಗ. ತಾವು ಅದಕ್ಕೆ ಬಾಡಿಗೆ ಕೊಡುತ್ತಿದ್ದೇವೆ ಎಂದು ತಿಳಿದಂತಿದೆ.


ಇವರೆಲ್ಲರೂ ವಿದ್ಯಾವಂತರು. ಜೊತೆಗೆ ಆರ್ಥಿಕವಾಗಿ ಸದೃಢರು. ಬಹುವರ್ಷದಿಂದ ವ್ಯಾಪಾರ- ವಹಿವಾಟು ನಡೆಸುತ್ತಿರುವವರು. ಆದರೆ  ಪಾದಚಾರಿ ಮಾರ್ಗ ಬಿಡುವುದು, ಪಾರ್ಕಿಂಗ್‌ಗೆ ಅನುಕೂಲ ಕಲ್ಪಿಸಿಕೊಡುವ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲ.
ಇದು ಶಿವಮೊಗ್ಗ ನಗರದಲ್ಲಿ ಅತಿ ಹೆಚ್ಚು ಸಮಸ್ಯೆಯಾಗಿ ಕಾಡುತ್ತಿರುವ ಪಾರ್ಕಿಂಗ್ ಅವ್ಯವಸ್ಥೆ ಮತ್ತು ಪಾದಚಾರಿ ಮಾರ್ಗಗಳ ಒತ್ತುವರಿಯ ಬಗ್ಗೆ ಗಮನಿಸಿದಾಗ ಕಂಡುಬರುವ ಪ್ರಮುಖ ಅಂಶಗಳು. ಇಲ್ಲಿ ಮಹಾನಗರ ಪಾಲಿಕೆ ಇದೆ. ಪೊಲೀಸ್ ಇಲಾಖೆ ಇದೆ. ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ನಿಗಮ  ಇದೆ.  ಆದರೂ ಸಂಚಾರ ವ್ಯವಸ್ಥೆ ಮಾತ್ರ ಹದಗೆಟ್ಟಿದೆ. ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆ  ಕೇವಲ ವಾಹನಗಳ ಭರಾಟೆಯಿಂದ ಮಾತ್ರವಲ್ಲ. ತಾಂತ್ರಿಕವಾಗಿ ರಸ್ತೆಗಳನ್ನು ನಿರ್ಮಾಣ ಮಾಡದಿದ್ದರೆ, ವೃತ್ತಗಳನ್ನು ರಚಿಸದಿದ್ದರೆ, ನಿಯಮಬಾಹಿರವಾಗಿ ಕಟ್ಟಡ ನಿರ್ಮಿಸಿದರೆ ಎದುರಾಗುತ್ತದೆ. ಇವುಗಳನ್ನು ಸಂಬಂಧಿತ ಇಲಾಖೆಯವರು ಜವಾಬ್ದಾರಿಯಿಂದ ನಿರ್ವಹಿಸಬೇಕಾಗುತ್ತದೆ. ಆದರೆ ಪ್ರಸ್ತುತ ಟ್ರಾಫಿಕ್ ಎಂದಾಕ್ಷನ ಪೊಲೀಸ್ ಇಲಾಖೆಯೊಂದನ್ನು ಮಾತ್ರ ದೂಷಿಸುವ ಪದ್ಧತಿ ಜನರಲ್ಲಿ ಬೆಳೆದುಬಂದಿದೆ.
 ಅಂಡರ್ ಗ್ರೌಂಡ್‌ನಲ್ಲಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಬಿಡಬೇಕೆಂದು ಹೈಕೋರ್ಟ್ ಆದೇಶವಿದ್ದರೂ ಇದನ್ನು ಪಾಲಿಸುವವರಿಲ್ಲ. ಈ ಆದೇಶವನ್ನು ಜಾರಿಗೊಳಿಸುವವರೇ ಇಲ್ಲ. ಎಲ್ಲರೂ ಉಲ್ಲಂಘಿಸುವವರೇ ಆಗಿದ್ದಾರೆ. ಬಹುಮಹಡಿ ಕಟ್ಟಡವನ್ನು ಸ್ವಲ್ಪವೂ ಜಾಗ ಬಿಡದೆ ಫುಟ್‌ಪಾತ್‌ವರೆಗೆ ಕಟ್ಟುತ್ತಾರೆ. ಇನ್ನೂ ಹಲವೆಡೆ ಒತ್ತುವರಿ ಮಾಡಿ ನಿರ್ಮಿಸಿದ್ದೂ ಇದೆ. ಹೀಗಾದರೆ ಪಾರ್ಕಿಂಗ್‌ಗೆ ಎಲ್ಲಿ ಅವಕಾಶ ಸಿಗುತ್ತದೆ. ಆ ಕಟ್ಟಡಕ್ಕೆ ಬರುವವರು ರಸ್ತೆಯಂಚಿನಲ್ಲೇ ವಾಹನ ನಿಲ್ಲಿಸುತ್ತಾರೆ. ಇದರಿಂದ ವಾಹನಗಳು ಜಾಮ್ ಆಗುತ್ತವೆ. ಇಕ್ಕಟ್ಟಾದ ರಸ್ತೆ ಆದರಂತೂ ಸಮಸ್ಯೆ ಬಗೆಹರಿಯುವುದೇ ಇಲ್ಲ.
ಪಾಲಿಕೆಯವರು  ಮತ್ತು ರಸ್ತೆ ಇಂಜಿನಿಯರಿಂಗ್ ನಿರ್ವಹಿಸುವವರು ಎಸಗುತ್ತಿರುವ ಬಹುದೊಡ್ಡ ತಪ್ಪುಗಳಿಗೆ ಸಾರ್ವಜನಿಕರು ಅದರಲ್ಲೂ ವಾಹನ ಸವಾರರು ಬೆಲೆತೆರಬೇಕಾಗುತ್ತಿದೆ. ಪಾಲಿಕೆಯವರು ಕಟ್ಟಡ ಅನುಮತಿ ನೀಡುವಾಗ ಕೆಲವು ಶರತ್ತುಗಳನ್ನು ವಿಧಿಸುತ್ತಾರೆ. ಅದನ್ನು ಅಳವಡಿಸಿಕೊಂಡು ಪರವಾನಿಗೆ ಪಡೆದವರು ಕಟ್ಟಡ ನಿರ್ಮಿಸಬೇಕು. ಆದರೆ ಹಾಗೆ ಮಾಡದೆ  ಅದನ್ನು ಪಾಲಿಸದೆ ತಮಗಿಷ್ಟ ಬಂದಂತೆ ಕಟ್ಟಡ ನಿರ್ಮಿಸುತ್ತಾರೆ. ಜೊತೆಗೆ ಪಾಲಿಕೆಯವರೂ ಸಹ ಇದನ್ನು ಪರಿಶೀಲನೆ ಮಾಡುವ ಗೋಜಿಗೆ ಹೋಗುವುದೇ ಇಲ್ಲ. ಈ ಮಧ್ಯೆ ನಗರಾಭಿವೃದ್ಧಿ ಪ್ರಾಧಿಕಾರ ಇದೆ. ಅವರು ಈ ವಿಷಯದಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದೇ ಯಾರಿಗೂ ಗೊತ್ತಿಲ್ಲ.  
ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹುಮಹಡಿ ಕಟ್ಟಡಗಳು ಅಧಿಕವಾಗುತ್ತಿವೆ. ಮುಂದಿನ ದಿನಗಳಲ್ಲಿ ಇವೇ ರಾರಾಜಿಸಲಿವೆ. ಇವರೆಲ್ಲ ಕಾನೂನು ಮೀರುವವರಾದರೆ ಪಾರ್ಕಿಂಗ್ ಹಾಳಾಗಿ ಹೋಗಲಿ, ನಡೆದಾಡಲೂ ಜಾಗವಿಲ್ಲದಂತಹ ಪರಿಸ್ಥಿತಿ ತಲೆದೋರುವುದು ನಿಶ್ಚಿತ. ಬಹುಮಹಡಿ ಕಟ್ಟುವವರು ಶ್ರೀಮಂತರೇ ವಿನಾ ಬಡವರಲ್ಲ. ಅವರಿಗೆ ಕಾನೂನು ಉಲ್ಲಂಘಿಸುವುದೂ ಗೊತ್ತು, ಅದರಿಂದ ಪಾರಾಗುವುದೂ  ಗೊತ್ತಿರುತ್ತದೆ. ಇಂತಹವರಿಗೆ ರಾಜಕಾರಣಿಗಳ ಬೆಂಬಲ ಸದಾ ಇರುತ್ತದೆ. ಈ ಎಲ್ಲವುಗಳ ಉದಾಹರಣೆ ನಮ್ಮ ಕಣ್ಣೆದುರೇ ಇದೆ.
ಈ ರೀತಿ ಕಾನೂನು ಉಲ್ಲಂಘಿಸುವವರು ಜಾಸ್ತಿ ಇರುವಾಗ ಟ್ರಾಫಿಕ್ ನಿರ್ವಹಣೆ ಮಾಡುವುದು ಹೇಗೆ ಸಾಧ್ಯ. ಮೊನ್ನೆ ಪೊಲೀಸ್ ವರಿಷ್ಠರು ಕರೆದಿದ್ದ ಈ ಕುರಿತ ಸಂವಾದದಲ್ಲಿ ಮಾತನಾಡಿದ ಬಹುತೇಕರು  ಬಹುಮಹಡಿ ಕಟ್ಟಡಗಳು ಮತ್ತು ಆಸ್ಪತ್ರೆಗಳು ಪಾರ್ಕಿಂಗ್‌ಗೆ ಜಾಗ ಬಿಡದೆ ಫುಟ್‌ಪಾತ್‌ವರೆಗೆ ಕಟ್ಟಡ ನಿರ್ಮಿಸಿದ್ದು ಪ್ರಸ್ತ್ತಾಪವಾಯಿತು. ಎರಡನೆಯದಾಗಿ , ಅಂಗಡಿಕಾರರು ಫುಟ್‌ಪಾತ್‌ನಲ್ಲಿ ತಮ್ಮ ಮಾರಾಟದ ಸರಕುಗಳನ್ನು ಇಟ್ಟು ಜನಸಂಚಾರಕ್ಕೆ ಅಡ್ಡಿ ಮಾಡುವುದು, ಮೂರನೆಯದಾಗಿ, ತಪ್ಪಾದ ಇಂಜಿನಿಯರಿಂಗ್ ವ್ಯವಸ್ಥೆಗಳಿಂದ ವಾಹನ  ಸವಾರರು ಪರದಾಡಬೇಕಾದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಯಿತು.
ಜನರು ಎಲ್ಲಿಯವರೆಗೆ ಪಾರ್ಕಿಂಗ್, ಕಾನೂನು,  ಟ್ರಾಫಿಕ್ ಸಮಸ್ಯೆ ಬಗ್ಗೆ ಅರಿವು ಹೊಂದುವುದಿಲ್ಲವೋ ಅಲ್ಲಿಯವರೆಗೆ ಏನೇ ಮಾಡಿದರೂ ಅವರನ್ನು ಸುಧಾರಿಸಲು ಸಾಧ್ಯವಿಲ್ಲ. ಪೊಲೀಸರು ಎಷ್ಟೇ ಕಷ್ಟಪಟ್ಟರೂ, ಜನ ಎಷ್ಟೇ ಅವರನ್ನು ಬೈದರೂ ಲಾಭವಿಲ್ಲ. ನೆಹರೂ ರಸ್ತೆ ಮತ್ತು ಬಿಎಚ್ ರಸ್ತೆ ಅಮೀರ್ ಅಹಮದ್ ವೃತ್ತದಿಂದ ಬಸ್ ನಿಲ್ದಾಣದವರೆಗೆ ಇರುವ ಫುಟ್‌ಪಾತ್ ಗಮನಿಸಿ. ಫುಟ್‌ಪಾತ್ ಇರುವುದು ಓಡಾಟಕ್ಕಲ್ಲ, ಅಂಗಡಿಕಾರರ ಸಾಮಗ್ರಿ ಸಂಗ್ರಹಿಸಿಡಲು ಎನ್ನುವುದು ಗೊತ್ತ್ತಾಗುತ್ತದೆ.
ತಮ್ಮ ಜವಾಬ್ದಾರಿ ಈ ಸಮಾಜದಲ್ಲಿ ಏನು ಎನ್ನುವುದನ್ನು ಪ್ರತಿಯೊಬ್ಬ ಮನುಷ್ಯ ಅರ್ಥ ಮಾಡಿಕೊಳ್ಳಬೇಕು. ತಾನು ತಪ್ಪು ಮಾಡಿದರೆ ಎಷ್ಟು ಜನ ತೊಂದರೆಪಡಬಹುದು ಎಂಬ  ಅರಿವು ಇರಬೇಕು. ಇಲ್ಲವಾದರೆ ಪತ್ರಿಕೆಯಲ್ಲಿ ಎಷ್ಟೇ ಬರೆಯಲಿ, ಪೊಲೀಸರು ಎಷ್ಟೇ ಎಚ್ಚರಿಸಲಿ, ಅದರಿಂದ ಲಾಭವಿಲ್ಲ. ಇನ್ನುಮುಂದೆ ಪೊಲೀಸರು ಫುಟ್‌ಪಾತ್‌ನಲ್ಲಿಡುವ ಅಂಗಡಿಕಾರರ ಸಾಮಗ್ರಿಗಳನ್ನು ಎತ್ತಿಹಾಕಿಕೊಂಡು ಹೋಗಿ ಪಾಠ ಕಲಿಸಲು ಮುಂದಾಗಬೇಕಿದೆ.
ನಗರದ ಸಂಚಾರ ವ್ಯವಸ್ಥೆ ಸುಧಾರಿಸಬೇಕಾದಲ್ಲಿ ಇವರೆಲ್ಲ ಮುಕ್ತ ಮನಸ್ಸಿನಿಂದ ಮುಂದೆ ಬಂದು ಸಹಕರಿಬೇಕೇ ವಿನಾ ಪೊಲೀಸರನ್ನು ಬಯ್ಯುವುದಲ್ಲ. ವಾಹನಗಳ ನಿರ್ವಹಣೆ ಪೊಲೀಸರ ಜವಾಬ್ದಾರಿ. ಸುಗಮ ಸಂಚಾರಕ್ಕೆ ಇಲಾಖೆ ಎಲ್ಲ ರೀತಿಯ ಯತ್ನವನ್ನು ಮಾಡುತ್ತಿದೆ. ಜನರಿಂದ ಸಲಹೆಗಳನ್ನೂ ಪಡೆಯುತ್ತಿದೆ. ಇದನ್ನರಿತು ಸಾರ್ವಜನಿಕರು ಸಹಕಾರ ಕೊಟ್ಟರೆ ಮಾತ್ರ ಸುವ್ಯವಸ್ಥಿತ ಸಂಚಾರ ಸಾಧ್ಯ. 

Tuesday, 2 August 2016

ಎಂಎಲ್ಸಿಯಾಗಲು  ಶುರುವಾಗಿದೆ  ಪೈಪೋಟಿ   
* ಮೂರು ನಾಮನಿರ್ದೇಶನ ಸ್ಥಾನಕ್ಕೆ ನಟರು, ಸಮಾಜಸೇವಕರು, ಸಾಹಿತಿಗಳ ಯತ್ನ


ವಿಧಾನಪರಿಷತ್‌ನ ಮೂರು ನಾಮನಿರ್ದೇಶಿತ ಸದಸ್ಯರ ಸ್ಥಾನಕ್ಕೆ  ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ. ಸಿನಿಮಾ ನಟರು, ಸಮಾಜ ಸೇವಕರು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಈ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗುತ್ತದೆ. ಈ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಮುಂದಿನ ತಿಂಗಳ ಮೊದಲ ವಾರದಲ್ಲಿ ಅಂತಿಮ ಪಟ್ಟಿ ಪ್ರಕಟವಾಗಲಿದೆ.
ನಟ ಜಗ್ಗೇಶ್, ಪ್ರೊ. ಪಿ.ವಿ.ಕೃಷ್ಣ ಭಟ್ ಮತ್ತು  ವಿ. ಸೋಮಣ್ಣ ಅವರನ್ನು ಹಿಂದಿನ ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ನಾಮನಿರ್ದೇಶನ ಮಾಡಿತ್ತು. ಆದರೆ ಅವರ ಅವಧಿ ಮುಗಿದು ಸುಮಾರು ಎರಡು ತಿಂಗಳೇ ಗತಿಸಿದೆ. ಶೀಘ್ರದಲ್ಲಿ ಈ ಮೂರು ಸ್ಥಾನವನ್ನು ಹಾಲಿ ಸರ್ಕಾರ ತುಂಬಬೇಕಿದೆ.
ಈ ಮೂರು ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಗಳೆಂದರೆ, ಸಿನಿಮಾ ಕ್ಷೇತ್ರದಿಂದ ನಟಿಯರಾದ ರಮ್ಯಾ ಮತ್ತು ಭಾವನಾ, ಸಾಹಿತ್ಯ ಕ್ಷೇತ್ರದಿಂದ ಬರಗೂರು ರಾಮಚಂದ್ರಪ್ಪ, ಪ್ರೊ.ಎಸ್. ಜಿ. ಸಿದ್ದರಾಮಯ್ಯ, ಪ್ರೊ. ಜಿ.ಕೆ. ಗೋವಿಂದರಾವ್, ಸಮಾಜ ಸೇವಕರ ಕ್ಷೇತ್ರದಿಂದ ಕೆ.ಪಿ.ನಂಜುಂಡಿ,  ರಾಜಕಾರಣಿಗಳಾದ ಬೆಂಗಳೂರಿನ ಮಾಜಿ ಮೇಯರ್ ಮತ್ತು ಕೆಪಿಸಿಸಿ ಮುಖಂಡ ರಾಮಚಂದ್ರಪ್ಪ ಮತ್ತು ಮೂಲತಃ ಚಿಕ್ಕಮಗಳೂರಿನವರಾದ, ಕೆಪಿಸಿಸಿ ವಕ್ತಾರರಾದ ಬಿ.ಎಲ್. ಶಂಕರ್ ಇವರ ಹೆಸರು ಮುಂಚೂಣಿಯಲ್ಲಿದೆ. ಆದರೆ ಆಯ್ಕೆ ಕೆಪಿಸಿಸಿ ಮತ್ತು ಮುಖ್ಯಮಂತ್ರಿಗೆ ಬಿಟ್ಟಿದ್ದಾಗಿದೆ.
ನಟಿ ರಮ್ಯಾ ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾದವರು. ಜೊತೆಗೆ ಎಐಸಿಸಿಯಲ್ಲೂ ಹೆಚ್ಚಿನ ಪ್ರಭಾವವಿರುವವರಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದಲ್ಲಿನ ನಾಯಕರ ಭಿನ್ನಮತದಿಂದ ಅವರು ಸೋಲುಂಡಿದ್ದಾರೆ. ನಂತರ ರಾಜ್ಯ ರಾಜಕಾರಣದಲ್ಲಿ ಅಷ್ಟೇನೂ ಸಕ್ರಿಯರಾಗಿರದಿದ್ದರೂ  ಆಗಾಗ ಹೆಸರು ಕೇಳಿಬರುತ್ತಿತ್ತು. ಇತ್ತೀಚೆಗೆ ನಡೆದ ಎಂಎಲ್ಸಿ ಚುನಾವಣೆ ವೇಳೆಯೂ ಅವರ ಹೆಸರು ಕೇಳಿಬಂದಿತ್ತು. ನಟಿ ಭಾವನಾ ಸಹ ಕಾಂಗ್ರೆಸ್‌ನಲ್ಲಿದ್ದುಕೊಡೇ ಮಕ್ಕಳ ಹಕ್ಕುಗಳ ಸಮಿತಿ (ಬಾಲಭವನ) ರಾಜ್ಯಾಧ್ಯಕ್ಷೆಯಾಗಿದ್ದಾರೆ. ಇವರ ಹೆಸರೂ ಸಹ ಇತ್ತೀಚೆಗೆ ಜರುಗಿದ ಎಂಎಲ್‌ಸಿ ಚುನಾವಣೆ ವೇಳೆ ಕೇಳಿಬಂದಿತ್ತು. ಆದರೆ ಕೊನೆಗಳಿಗೆಯಲ್ಲಿ ಅವರಿಗೆ ಟಿಕೆಟ್ ಕೈತಪ್ಪಿತ್ತು. ಈ ಬಾರಿ ಇವರಿಬ್ಬರಲ್ಲಿ ಯಾರಿಗಾದರೊಬ್ಬರಿಗೆ ಟಿಕೆಟ್ ಸಿಗುವುದು ಬಹುತೇಕ ನಿಶ್ಚಿತವಾಗಿದೆ.
 ಸಾಹಿತ್ಯ ವಲಯದಿಂದ ಹೆಚ್ಚಿನ ಪೈಪೋಟಿ ಎದುರಾಗಿದೆ. ಎಲ್ಲ ಆಕಾಂಕ್ಷಿಗಳೂ  ತಮ್ಮ ಪ್ರಭಾವ ಬೀರಲಾರಂಭಿಸಿದ್ದಾರೆ. ಪ್ರಮುಖವಾಗಿ ಬರಗೂರು ಮತ್ತು ಪ್ರೊ. ಸಿದ್ದರಾಮಯ್ಯ ಅವರ ಹೆಸರು ಚಾಲ್ತಿಯಲ್ಲಿದೆ. ಜೊತೆಗೆ ಇನ್ನೂ ಹಲವರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇಲ್ಲಿ ಬರಗೂರು ಅವರಿಗೆ ಅವಕಾಶ ಹೆಚ್ಚಿನ ಪ್ರಮಾಣದಲ್ಲಿದೆ. ಜೊತೆಗೆ ಅನೇಕ ಸಚಿವರು ಮತ್ತು ಕಾಂಗ್ರೆಸಿಗರು ಬರಗೂರು ಅವರನ್ನೇ ನಾಮಕರಣ ಮಾಡುವಂತೆ ಕೆಪಿಸಿಸಿಗೆ ಮತ್ತು ಸಿಂಎಗೆ ಮನವಿ ಮಾಡಿದ್ದಾರೆ. ಇವರನ್ನು ಹೊರತುಪಡಿಸಿದರೆ ಸಿದ್ದರಾಮಯ್ಯ ಮತ್ತು ಜಿ. ಕೆ. ಗೋವಿಂದರಾವ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಸಮಾಜ ಸೇವೆ ಕ್ಷೇತ್ರದಿಂದ  ಕೆ. ಪಿ. ನಂಜುಂಡಿ ಸ್ಥಾನ ಪಡೆದರೆ ಆಶ್ಚರ್ಯವೇನಿಲ್ಲ. ಏಕೆಂದರೆ, ಕೆಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿರುವ ನಂಜುಂಡಿ ಪಕ್ಷಕ್ಕೆ ಫೈನಾನ್ಶಿಯರ್ ಸಹ ಆಗಿದ್ದಾರೆ. ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ಎಂಬ ಸ್ವರ್ಣೋದ್ಯಮದ ಮೂಲಕ ರಾಜ್ಯದಲ್ಲಿ ಹೆಸರುಗಳಿಸಿರುವ ಅವರು, ಉತ್ತಮ ಸಂಘಟಕರೂ, ಧಾರಾವಾಹಿ ಮೂಲಕ ನಟನೆ, ನಿರ್ಮಾಪಕರಾಗಿ ಮನೆಮಾತಾದವರು. ಕಾಂಗ್ರೆಸ್‌ನಲ್ಲಿ ಆಸ್ಕರ್ ಫರ್ನಾಂಡೀಸ್ ಅವರ ಅತ್ಯಾಪ್ತರೆಂಬ ಮಾತಿದೆ. ಕಳೆದ ಎಂಎಲ್‌ಸಿ ಚುನಾವಣೆಯಲ್ಲೂ ಇವರಿಗೆ ಕೊನೆಹಂತದಲ್ಲಿ ಅವಕಾಶ ತಪ್ಪಿದೆ. ಇದೆಲ್ಲ ಈ ಬಾರಿ ಅವರಿಗೆ ಪ್ಲಸ್ ಆಗಬಹುದೆಂದು ಲೆಕ್ಕಾಚಾರ ಹಾಕಲಾಗುತ್ತಿದೆ.
 ಆದರೆ ಇವರಿಗೆ ಅಷ್ಟೇ ಪ್ರಬಲ ಸ್ಪರ್ಧೆ ಒಡ್ಡುತ್ತಿರುವವರೆಂದರೆ, ಹಿರಿಯರಾದ ರಾಮಚಂದ್ರಪ್ಪ ಮತ್ತು ಬಿ.ಎಲ್.ಶಂಕರ್. ರಾಮಚಂದ್ರಪ್ಪ ಮತ್ತು ಶಂಕರ್ ಪಕ್ಷದಲ್ಲಿ ಪ್ರಭಾವಿಗಳು. ಶಂಕರ್ ಪಕ್ಷವನ್ನು ಸಮರ್ಥಿಸಿಕೊಳ್ಳುವ ಮಾತುಗಾರ. ಆದರೂ ರಾಮಚಂದ್ರಪ್ಪ ಬಹುುತೇಕ ಟಿಕೆಟ್ ಪಡೆಯುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಇವರೆಲ್ಲರ ಹೊರತಾಗಿ ಇನ್ನೂ ಹಲವರು ಪಟ್ಟಿ ಸೇರಲೂಬಹುದು.
ಅಂತಿಮವಾಗಿ, ಏನಿದ್ದರೂ ಜಾತಿ ಲೆಕ್ಕಾಚಾರದ ಮೇಲೆ ಎಲ್ಲವೂ ನಿರ್ಧರಿತವಾಗಲಿದೆ. ಪ್ರಭಾವವೂ ಕೆಲಸ ಮಾಡುತ್ತದೆ. ಆದ್ದರಿಂದ ಮೂರು ಸ್ಥಾನದ ಆಯ್ಕೆ ಅಷ್ಟು ಸಲೀಸಾಗಿಲ್ಲ. ಮುಖಂಡರು ಅಳೆದು-ತೂಗಿ ತಿಂಗಳಾಂತ್ಯದ ವೇಳೆ ಆಯ್ಕೆ ಮಾಡುವ ಸಾಧ್ಯತೆ ಇದೆ.
.................................................    

Monday, 1 August 2016

 ಮಾನಸಿಕ ಅಸ್ವಸ್ಥರ ಬಾಳು ಬೆಳಗಲು ಮುಂದಾದ ನ್ಯಾಯಾಲಯ


ಸರ್ಕಾರದ ಎಷ್ಟೋ ಯೋಜನೆಗಳು ಜನರಿಗೆ ಗೊತ್ತಿಲ್ಲದೆ, ಪ್ರಚಾರ ಸಿಗದೆ ಮೂಲೆಗುಂಪಾಗುತ್ತವೆ. ಹಾಗೆಯೇ ಕಾನೂನಿನಲ್ಲಿ ಇರುವ ಒಳ್ಳೆಯ ಅವಕಾಶಗಳೂ ಸಹ ಜನಸಾಮಾನ್ಯರಿಗೆ ಗೊತ್ತಾಗುವುದೇ ಇಲ್ಲ. ಕಾನೂನಿನಲ್ಲಿ ಮಾನಸಿಕ ಅಸ್ವಸ್ಥರಿಗೆ ಬದುಕು ಕಟ್ಟಿಕೊಡಲು ದಾರಿ ಇದೆ ಎನ್ನುವುದನ್ನು ನಗರದ ಒಬ್ಬ ಹಿರಿಯ ನ್ಯಾಯಾಧೀಶರು ತೋರಿಸಿಕೊಟ್ಟಿದ್ದಾರೆ. ಇದು ನಗರದಲ್ಲಿರುವ ಎಲ್ಲ ಅಧಿಕಾರಿ, ಇಲಾಖೆಗಳ ಮುಖ್ಯಸ್ಥರ, ಜನಸಾಮಾನ್ಯರ ಕಣ್ತೆರೆಸಬೇಕಿದೆ.  ಜೀವನದಲ್ಲಿ ಸಂಭವಿಸಿದ ಯಾವುದೋ  ಘಟನೆಯಿಂದ  ಮಾನಸಿಕ ಅಸ್ವಸ್ಥರಾಗಿ ಮನೆ ಬಿಟ್ಟು ಅಲೆಯುತ್ತಿರುವವರನ್ನು ಹಾಗೆಯೇ ಬಿಡದೆ ಸಮಾಜದ ಮುಖ್ಯವಾಹಿನಿಗೆ ತರಲು ನ್ಯಾಯಾಲಯಕ್ಕೆ ಹಾಜರ್ಪಡಿಸಿ ನಿಮ್ಹಾನ್ಸ್‌ಗೆ ಸೇರಿಸಿ ಉಚಿತ ಚಿಕಿತ್ಸೆಗೆ ಅನುವು ಮಾಡಿಕೊಡಬೇಕು.



ಮಾನಸಿಕ ಅಸ್ಥಸ್ಥರು ರಸ್ತೆಯಲ್ಲಿ ತಿರುಗಾಡುತ್ತಿದ್ದರೆ ಅವರ ಬಗ್ಗೆ ಪೊಲೀಸರಿಗೆ ಇಲ್ಲವೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮಾಹಿತಿ ಕೊಡಿ.  ಇವರ ಮೂಲಕ ಅವರನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಿದರೆ ನ್ಯಾಯಾಧೀಶರು ಸ್ವೀಕೃತಿ ಆದೇಶವನ್ನು ಹೊರಡಿಸುತ್ತಾರೆ. ಕೂಡಲೇ ನಿಮ್ಹಾನ್ಸ್‌ಗೆ ಸೇರಿಸಲು ಆದೇಶಿಸುತ್ತಾರೆ. ಇದರಿಂದ ಈ ರೋಗಿಗೆ ಉಚಿತ ಚಿಕಿತ್ಸೆ ನಿಮ್ಹಾನ್ಸ್‌ನಲ್ಲಿ ದೊರೆಯುತ್ತದೆ.
ಇಂತಹ ಯೋಜನೆ ಜಾರಿಯಲ್ಲಿರುವುದು ಬಹುತೇಕರಿಗೆ ಗೊತ್ತಿಲ್ಲ. ಸ್ವತಃ ಪೊಲೀಸರಿಗೇ ಗೊತ್ತಿಲ್ಲ. ಹಾಗಾಗಿಯೇ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಬೀದಿಯಲ್ಲಿ ಕೂಗಾಡುತ್ತಾ, ಗಲಾಟೆ ಮಾಡುತ್ತ ಅಥವಾ  ಅಂಡಲೆಯುತ್ತಿರುವುದು ಕಂಡುಬರುತ್ತಿದೆ. ಕೆಲವೆಡೆ ಇಂತಹವರನ್ನು ಚುಡಾಯಿಸುವುದು, ತಮಾಷೆ ಮಾಡುವುದು ಕಂಡುಬರುತ್ತದೆ. ಆದ್ದರಿಂದ ಇನ್ನುಮು ಂದೆ ಇಂತಹವರು ಎಲ್ಲೇ ಕಂಡುಬಂದರೂ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ಕೊಡಿ. ಅವರು ಈ ರೋಗಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಲು ಮನವಿ ಮಾಡಿ. ಇದರಿಂದ ಮಾನಸಿಕ ಅಸ್ವಸ್ಥರು ಬೀದಿಗಳಲ್ಲಿ ಅಲೆಯುವುದು ತಪ್ಪುತ್ತದೆ. ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.
ನಗರಪಾಲಿಕೆಯವರು ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು, ಪೊಲೀಸರು ಇಂತಹ ಮಹತ್ತರ ಯೋಜನೆಗಳ ಬಗ್ಗೆ ತಾವೇ ತಿಳಿದುಕೊಂಡಿಲ್ಲ. ಜನರಲ್ಲೂ ಜಾಗೃತಿ ಮೂಡಿಸಿಲ್ಲ.
  ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ. ಮಾನಸಿಕ ಅಸ್ಥಸ್ಥರು ಎಲ್ಲರಂತೆ ಜೀವನ ನಡೆಸಲು ಹಕ್ಕಿದೆ. ಇದನ್ನು ತಿಳಿದುಕೊಂಡು ಅವರಿಗೆ ಉಚಿತ ತಪಾಸಣೆ ನಡೆಸಲಾಗುತ್ತಿದೆ. ಅವಶ್ಯವಿದ್ದರೆ ಚಿಕಿತ್ಸೆಯನ್ನೂ ಎಲ್ಲ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊಡಿಸಲು ಅವಕಾಶವಿದೆ. ಅದರೆ ನ್ಯಾಯಾಧೀಶರು ನಿಮ್ಹಾನ್ಸ್‌ನಲ್ಲಿ ಹೆಚ್ಚಿನ ಅನುಕೂಲಗಳು, ಸೌಲಭ್ಯಗಳು ಇರುವುದರಿಂದ ಅಲ್ಲಿಗೇ ಆದೇಶ ಹೊರಡಿಸುತ್ತಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಆಸ್ಪತ್ರೆಯಲ್ಲಿ ಯಾರೂ ಇರಬೇಕೆಂದಿಲ್ಲ. ಆಸ್ಪತ್ರೆಗೆ ದಾಖಲಿಸಿದ ನಂತರ ಅವರು ಬಿಡುಗಡೆಯಾಗುವವರೆಗೂ ಆಸ್ಪತ್ರೆಯವರೇ ಜವಾಬ್ದಾರರಾಗಿರುತ್ತಾರೆ. ಅವರಿಗೆ ಸಲಹೆ, ಸಮಾಲೋಚನೆ ಆಯೋಜಿಸಲಾಗುತ್ತದೆ.
 ಈ ಬಗ್ಗೆ ಜನಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಜಿಲ್ಲೆಗೆ ಇತ್ತೀಚೆಗಷ್ಟೇ ಬಂದಿರುವ ನೂತನ ಜಿಲ್ಲಾ ಪ್ರಧಾನ ಮತ್ತು ಸತ್ರನ್ಯಾಯಾಧೀಶ ಭೀಮನಗೌಡ ಕೆ. ನಾಯಿಕ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ನಗರದಲ್ಲಿ ಮಾನಸಿಕ ಅಸ್ಥಸ್ಥ ಮತ್ತು ಮಾನಸಿಕ ವಿಕಲಚೇತನರಿಗೆ ಕಾನೂನು ಸೇವೆಗಳ ಬಗ್ಗೆ ಒಂದು ದಿನ ಕಾರ್ಯಾಗಾರವನ್ನು ಮತ್ತು ಉಚಿತ ಆಪ್ತಸಮಾಲೋಚನೆ, ಚಿಕಿತ್ಸೆ ಶಿಬಿರವನ್ನು ಮೊನ್ನೆ ಏರ್ಪಡಿಸಿದ್ದರು. ಇದರ ಬಗ್ಗೆ  ಜಾಗೃತಿಯನ್ನು  ಯಾರಲ್ಲಿ ಮೂಡಿಸಬೇಕೋ ಅಂತಹವರನ್ನೇ ಈ ಶಿಬಿರಕ್ಕೆ ವಿಶೇಷವಾಗಿ ಆಹ್ವಾನಿಸಿದ್ದರು. ಅವರೆಂದರೆ, ಪೊಲೀಸ್ ಅಧಿಕಾರಿಗಳು, ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು. ಹೆಸರಾಂತ ಮಾನಸಿಕ ತಜ್ಞರನ್ನು ಕರೆಯಿಸಿ ಅವರಿಂದ ಸಲಹೆ ಕೊಡಿಸಿದ್ದಾರೆ. ಇನ್ನಾದರೂ ಸಂಬಂಧಿತ ಇಲಾಖೆಯವರು ಅಥವಾ ಸಾರ್ವಜನಿಕರು ಇಂತಹವರ ಸಂಖ್ಯೆಯನ್ನು ನಗರದಲ್ಲಿ ಕಡಿಮೆ ಮಾಡಲು  ಮುಂದೆಬರಬೇಕಿದೆ.
ನಗರಗಳಲ್ಲಿ ಬೀದಿಗಳಲ್ಲಿ ತಿರುಗುತ್ತ ಇರುವ ಇಂತಹವರನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಲಾಗುತ್ತಿದೆ. ಅಲ್ಲಿ ಕೆಲವು ದಿನ ಅವರಿಗೆ ಉಪಚಾರ ಮಾಡಲಾಗುತ್ತದೆ. ನಂತರ ಮತ್ತೆ ಬಿಟ್ಟುಬಿಡುತ್ತಾರೆ. ಅವರು ಮತ್ತೆ ಅದೇ ರಸ್ತೆಯಲ್ಲಿ ತಿರುಗಾಡುತ್ತಾ ಇರುತ್ತಾರೆ. ಅಂದರೆ  ಈ ಕೇಂದ್ರಗಳು ಜವಾಬ್ದಾರಿಯನ್ನು ಹೊರುವುದಿಲ್ಲ. ದಾಖಲೆಯಲ್ಲಿ ಮಾತ್ರ ಇಂತಹ ರೋಗಿಗಳನ್ನು ಸೇರಿಸಿಕೊಂಡಿದ್ದನ್ನು, ಅವರಿಗೆ ಚಿಕಿತ್ಸೆ ನೀಡಿದ್ದನ್ನು ತೋರಿಸುತ್ತಾರೆ. ಆದರೆ ನಂತರ ಆ ರೋಗಿ ಗುಣಮುಖನಾದನೇ, ಎಲ್ಲಿದ್ದಾನೆ ಎನ್ನುವುದನ್ನು ಮಾತ್ರ ಎಲ್ಲಿಯೂ ಬಹಿರಂಗಪಡಿಸುವುದಿಲ್ಲ.
ಶಿವಮೊಗ್ಗದಲ್ಲಿ ಇಂತಹ ಕೇಂದ್ರಗಳು ಸುಮಾರು ಎಂಟು-ಹತ್ತರಷ್ಟಿವೆ. ಈ ಎನ್‌ಜಿಒಗಳು ಯಾವ ಮಾನಸಿಕ ರೋಗಿಯನ್ನೂ ಇಲ್ಲಿಯವರೆಗೆ ಪೊಲೀಸರ ಸಹಾಯದಿಂದ ನ್ಯಾಯಾಧೀಶರ ಬಳಿ ಕರದೊಯ್ದು ನಿಮ್ಹಾನ್ಸ್‌ಗೆ ದಾಖಲಿಸುವ ಕೆಲಸ ಮಾಡಿಲ್ಲ. ನಿರಾಶ್ರಿತರ, ಅಸ್ವಸ್ಥರ ಸೇವೆ ಎಂದು ಹೇಳಿಕೊಂಡು  ಕೆಲಸ ಮಾಡುತ್ತಿವೆ. ನಿಜಕ್ಕೂ ಮಾನಸಿಕ ಅಸ್ವಸ್ಥ ಗುಣಮುಖನಾಗಲು ಸಹಕರಿಸಿದ್ದರೆ ಅವರ ಸಂಸ್ಥೆ ಇನ್ನಷ್ಟು ಜನಪ್ರಿಯವಾಗುತ್ತಿತ್ತು.
ಸಾರ್ವಜನಿಕರಿಗೂ ಈ ಬಗ್ಗೆ ಮಾಹಿತಿ ಇಲ್ಲದ್ದರಿಂದ ಇಲ್ಲಿಯವರೆಗೆ ಮಾನಸಿಕ ಅಸ್ವಸ್ಥರು ನಗರದಲ್ಲಿ ಸಾಕಷ್ಟು ತಿರುಗಾಡುತ್ತಿರುವುದು ಕಂಡುಬರುತ್ತಿದೆ. ಇನ್ನಾದರೂ ಇಂತಹವರು ಕಂಡುಬಂದರೆ ಕೂಡಲೇ ಪೊಲೀಸರಿಗೆ ತಿಳಿಸಿ, ಅವರ ಮೂಲಕ ಆ ರೋಗಿ ಚಿಕಿತ್ಸೆಗೆ ದಾಖಲಾಗಲು ಸಹಕರಿಸುವಂತಾಗಬೇಕಿದೆ. ಆತ ಗುಣಮುಖನಾದಲ್ಲಿ ಎಂದಿನಂತೆ ತನ್ನ ಕುಟುಂಬದ ಜೊತೆ ಜೀವನ ಸಾಗಿಸಲು ಸಮರ್ಥನಾಗುತ್ತಾನೆ. ಮಾನಸಿಕ ಅಸ್ವಸ್ಥರಿಗೂ ಎಲ್ಲರಂತೆ ಸಮಾಜದಲ್ಲಿ  ಬದುಕುವ ಹಕ್ಕಿದೆ ಎನ್ನುವುದು ಇದರಿಂದ ಬಹಿರಂಗವಾಗುತ್ತದೆ. ಇಂತಹ ಉತ್ತಮ ಯೋಜನೆಯನ್ನು ಸಾರ್ವಜನಿಕರು ಅರಿತು ಮಾನಸಿಕ ಅಸ್ವಸ್ಥರ ಬಾಳು ಬೆಳಗಿಸಲು ಮುಂದಾಗಬೇಕಿದೆ.
...............................