Wednesday, 11 May 2016

ವಿ.ಎನ್. ಭಟ್ ಬೆತ್ತಗೆರೆ ಅಸ್ತಂಗತ


  ಹಿರಿಯ ವಿದ್ವಾಂಸ, ವಾಗ್ಮಿ ಹಾಗೂ ನಿವೃತ್ತ ಪ್ರೊಫೆಸರ್ ವಿದ್ವಾನ್ ವಿ.ಎನ್. ಭಟ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷವಾಗಿತ್ತು.
ವಿಷ್ಣು ನರಸಿಂಹ ಭಟ್ (ವಿ.ಎನ್. ಭಟ್) ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆತ್ತಗೆರೆ ಗ್ರಾಮದವರು. ಆದರೆ ಅವರ ಕರ್ಮಭೂಮಿ ಶಿವಮೊಗ್ಗವಾಗಿತ್ತು.
ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಇಲ್ಲಿನ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಎರಡೂ ವಿಷಯಗಳಲ್ಲಿ ಪ್ರಾಧ್ಯಾಪಕರಾಗಿದ್ದರು. ಜೊತೆಗೆ ಪತ್ರಿಕೋದ್ಯಮ ವಿಭಾಗದಲ್ಲೂ ಕೆಲಸ ಮಾಡಿದ್ದರು. ಸಂಸ್ಕೃತ ಸ್ನಾತಕೋತ್ತರ ವಿಭಾಗಕ್ಕೆ ಪಾಠ ಮಾಡಿದ್ದರು.
ಅಧ್ಯಾಪನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ, ವೇದಾಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಪುರೋಹಿತರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಶಿವಮೊಗ್ಗದಲ್ಲಿ ವೈದಿಕ ಪರಿಷತ್ ಅಸ್ತಿತ್ವಕ್ಕೆ ಬರಲು ಕಾರಣ ಪುರುಷರಾಗಿದ್ದರು. ನಗರದಲ್ಲಿರುವ ವೈದಿಕರನ್ನೆಲ್ಲ ಒಂದೇ ಸೂರಿನಡಿ ತಂದ ಕೀರ್ತಿ ಇವರದ್ದು.
ಯಕ್ಷಗಾನ, ಪ್ರಬಂಧ ಮಂಡನೆಯಲ್ಲಿ ವಿ.ಎನ್. ಭಟ್ ಎತ್ತಿದ ಕೈ. ಯಜುರ್ವೇದ, ಕಾಲೋಚಿತ ಪೂರ್ವಾಭ್ಯಾಸಗಳನ್ನು ಸಾಂಪ್ರಾದಾಯಿಕವಾಗಿ ಅಧ್ಯಯನ ಮಾಡಿದ್ದರು. ಜ್ಞಾನ ಸಾಧಕ ಎಂದೇ ಖ್ಯಾತರಾಗಿದ್ದ ಭಟ್ ಅವರು, ಎಲ್ಲರೊಳಗೆ ಒಂದಾಗಿ ಮಾತನಾಡುವ, ಸುಖ-ದುಃಖಗಳನ್ನು ಹಂಚಿಕೊಳ್ಳುವ ಸಹೃದಯಿ ವ್ಯಕ್ತಿಯಾಗಿದ್ದರು. ತಮ್ಮ ಜ್ಞಾನ ಸಂಪತ್ತಿನಿಂದಲೇ ಅನೇಕ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಜೊತೆಗೆ ನೂರಾರು ಶಿಷ್ಯರು ಸಹ ಅವರಿಗಿದ್ದಾರೆ.
ಭಾರತೀಯ ಹಬ್ಬಗಳ ವೈಶಿಷ್ಟ್ಯ ಕುರಿತು ಅವರು ಬರೆದಿರುವ ಕೃತಿ ತೀರಾ ಜನಪ್ರಿಯವಾದುದಾಗಿದೆ. ಇದರಲ್ಲಿ ಹಬ್ಬಗಳ ಬಗ್ಗೆ ಶಾಸ್ತ್ರೀಯ ಜ್ಞಾನ ಮತ್ತಿ ಮಹತ್ವಗಳ ಬಗ್ಗೆ ವಿವರವಿದೆ. ಅದೇ ರೀತಿ ಇನ್ನೂ ಹಲವಾರು ಗ್ರಂಥಗಳನ್ನು ಅವರು ಬರೆದಿದ್ದಾರೆ.
ತಮಗಿರುವ ಜ್ಞಾನ ಸಂಪತ್ತನ್ನು ಕೇವಲ ತಾವೇ ಇಟ್ಟುಕೊಳ್ಳದೆ ಇತರರಿಗೆ ಅದನ್ನು ನೀಡುವ ಕೆಲಸವನ್ನು ಅವರು ಸದಾ ಮಾಡುತ್ತಿದ್ದರು. ಹಾಗಾಗಿಯೇ ಅವರು ತೀರಾ ಜನಪ್ರಿಯರಾಗಿದ್ದರು. 74ರ ಹರಯದಲ್ಲೂ ಅವರ ಉತ್ಸಾಹ ಬತ್ತದೇ ಉಳಿದಿತ್ತು.
ಇತ್ತೀಚೆಗೆ ಅವರ ಅಭಿಮಾನಿಗಳು, ಶಿಷ್ಯರು ಮತ್ತು ಮಿತ್ರರರು ವಿ.ಎನ್. ಭಟ್ ಅಭಿನಂದನ ಗ್ರಂಥವನ್ನು ಹೊರತರಲು ನಿಶ್ಚಯಿಸಿದ್ದರು. ಆ ಪ್ರಕಾರ ಅದರ ಕೆಲಸ ನಡೆದಿತ್ತು. ನಿನ್ನೆ ಸಂಜೆಯವರೆಗೆ ಭಟ್ ಅವರು ಆ ಲೇಖಕನಗಳ ಕರಡು ಪ್ರತಿಗಳನ್ನು ತಿದ್ದುಪಡಿ ಮಾಡಿ ಮುಗಿಸಿದ್ದರು. ಮತ್ತು ಪತ್ನಿ ನಿರ್ಮಲಾ ಭಟ್ ಅವರ ಬಳಿ ತಮ್ಮ ಕೆಲಸ ಇಲ್ಲಿಗೆ ಮುಕ್ತಾಯವಾಯಿತು ಎಂದು ಹೇಳಿದ್ದರಂತೆ.
ಇಂದು ಬೆಳಿಗ್ಗೆ 9 ಗಂಟೆ ವೇಳೆಗೆ ಏಕಾಏಕಿ ಹೃದಯಾಘಾತಕ್ಕೊಳಗಾದ ವಿ.ಎನ್. ಭಟ್ ಅವರನ್ನು ಕೂಡಲೇ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿಯೇ ಅವರು ಇಹಲೋಕ ತ್ಯಜಿಸಿದರು. ನಂತರ ಪಾರ್ಥೀಪ ಶರೀರವನ್ನು ಸಹ್ಯಾದ್ರಿ ನಗರದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.
ಅನೇಕ ಅಭಿಮಾನಿಗಳು, ಮುಖಂಡರು, ಶಿಷ್ಯರು ಮತ್ತು ಸಾರ್ವಜನಿಕರು ಧಾವಿಸಿ ಭಟ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

No comments:

Post a Comment