Wednesday, 4 May 2016





  ಭೂದಾಹದ ದುರಾಸೆಗೆ  ಸಮಾಧಿಯಾಗುತ್ತಿರುವ ಕೆರೆಗಳು

ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಅನೇಕ ರಾಜ-ಮಹಾರಾಜರು, ಸಾಮಂತ - ಮಾಂಡಲೀಕರು, ಊರ ಗೌಡ -ಪಟೇಲರು, ದಾನ ಚಿಂತಾಮಣಿಗಳೆಲ್ಲ ಕೆರೆ-ಬಾವಿಗಳನ್ನು ನಿರ್ಮಿಸಿದ ಉಲ್ಲೇಖ  ತಿಳಿದುಬರುತ್ತದೆ.   ಜೀವಜಲಧಾರೆಯಾಗಿರುವ ಇಂತಹ ಕೆರೆ-ಬಾವಿಗಳು  ನಿಸರ್ಗದ ಬಹುಮುಖ್ಯ ಸಂಪತ್ತಾಗಿದ್ದವು; ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಜ್ಞೆಯ ಸಂಕೇತಗಳಾಗಿದ್ದವು. ಆದರೆ ಈಗ ಹೊಸ ಕೆರೆಗಳಂತೂ ನಿರ್ಮಾಣವಾಗುತ್ತಿಲ್ಲ ಬಿಡಿ, ಹಳೆಯ ಕೆರೆಗಳನ್ನು ಸುಸ್ಥಿತಿಯಲ್ಲಿ ಇರಿಸುವ ಪ್ರಯತ್ನವೂ ಆಗುತ್ತಿಲ್ಲ ಎನ್ನುವುದನ್ನು ಅತ್ಯಂತ ವಿಷಾದದಿಂದ ಹೇಳಬೇಕಾಗಿದೆ. ಕೆರೆಯ   ಕಥೆಯ  ಹಿಂದೆ ಮಾನವನ ಎಲ್ಲ ದುಷ್ಟತನಗಳನ್ನು, ನಿಸರ್ಗದ ಮೇಲಿನ ಅವನ ಎಗ್ಗಿಲ್ಲದ ಆಕ್ರಮಣವನ್ನು ನಾವು ಕಾಣಬಹುದು. ಸಮೃದ್ಧತೆಯಿಂದ ಕೂಡಿದ್ದ, ಜೀವಸತ್ವದೊಂದಿಗೆ  ಪಾವಿತ್ರ್ಯಕ್ಕೆ ಹೆಸರಾಗಿದ್ದ  ಕೆರೆಗಳ ದುಸ್ಥಿತಿಗೆ ನಾವೇ ಕಾರಣರು ಎಂಬ ನಾಚಿಕೆ ನಮ್ಮನ್ನು ಕಾಡುತ್ತದೆ. ಕಾಲದ ನಡಿಗೆಯಲ್ಲಿ ನಿಸರ್ಗದ ಮೇಲಿನ ಮನುಷ್ಯನ ಕ್ರೌರ್ಯ ಪರಮಾವಧಿಯನ್ನು ತಲುಪುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉತ್ತಮ ಉದಾಹರಣೆ ಬೇಕಾಗಿಲ್ಲ ಅಲ್ಲವೇ....?

ಮನುಷ್ಯನ  ಭೂದಾಹ ಮಿತಿಮೀರಿ ಕೆರೆಗಳೆಲ್ಲ ಒತ್ತುವರಿ ಆಗುತ್ತಿವೆ; ಕೆರೆಯ ಸಮಾಧಿಯ ಮೇಲೆ ಲೇ ಔಟ್‌ಗಳು ವಿಜೃಂಭಿಸುತ್ತಿವೆ. ಮನುಷ್ಯನ ದುಷ್ಟತನ, ನಿಸರ್ಗದ ಮೇಲಿನ ಅವನ ಆಕ್ರಮಣ ನಿತ್ಯನಿರಂತರವಾಗಿ ನಡೆಯುತ್ತಿದೆ. ನಮ್ಮ ಕೆರೆ- ಸರೋವರ-ನದಿಗಳೆಲ್ಲ ಜೀವಜಲಧಾರೆಯಾಗುವ ಬದಲು ಕಲುಷಿತಗೊಂಡಿವೆ; ಪಾಚಿಗಟ್ಟಿವೆ; ನುಸಿ- ಕ್ರಿಮಿ-ಕೀಟಗಳ ಆವಾಸಸ್ಥಾನವಾಗಿದೆ. ಸದ್ಯದ ಸ್ಥಿತಿಯಲ್ಲಿ ದನಕರುಗಳು, ಕಾಡುಪ್ರಾಣಿಗಳು ಕುಡಿಯಲೂ ಆ ನೀರು ಅಯೋಗ್ಯವಾಗಿದೆ.
ಜಿಲ್ಲಾಡಳಿತ ನೀಡಿರುವ ಮಾಹಿತಿಯ ಪ್ರಕಾರ, ಶಿವಮೊಗ್ಗ ನಗರದಲ್ಲಿ  ಒಟ್ಟಾರೆ 109 ಕೆರೆಗಳಿರಬೇಕಾಗಿತ್ತು. ಆದರೆ ಈಗ 77 ಕೆರೆಗಳಿವೆ. ನಮ್ಮ ಆಡಳಿತ ವ್ಯವಸ್ಥೆಯೇ ವಿವಿಧ ಕಾರಣಗಳಿಗಾಗಿ ಕೆರೆಯ ಜಾಗವನ್ನೇ ಮಂಜೂರು ಮಾಡಿರುವುದರಿಂದ ಉಳಿದ 32 ಕೆರೆಗಳೇ ನಾಪತ್ತೆಯಾಗಿವೆ. ಬಿಟ್ಟಿದೆ. ಇದು  ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ ನೀಡಿರುವ ಕಡತದಲ್ಲಿರುವ ಮಾಹಿತಿ.  ವಾಸ್ತವಾಂಶವೇನೆಂದರೆ, 77 ಕೆರೆಗಳಲ್ಲಿ ಪ್ರಸ್ತುತ ಉಳಿದುಕೊಂಡಿರುವುದು ಸುಮಾರು 20 ರಿಂದ 25 ಕೆರೆಗಳು ಮಾತ್ರ. ಉಳಿದ ಕೆರೆಗಳು ಬಡಾವಣೆಗಳಾಗಿ, ಕಟ್ಟಡಗಳಾಗಿ, ನಿವೇಶನಗಳಾಗಿ ಪರಿವರ್ತಿತವಾಗಿವೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಈಗಿರುವ ಕೆರೆಗಳೂ ಕಣ್ಮರೆಯಾಗಿ ಹೋಗಲಿವೆ .
ಜಿಲ್ಲಾಡಳಿತದವರು ಗಾಡಿಕೊಪ್ಪದಲ್ಲಿ ಐದು ಕೆರೆಗಳಿವೆ ಎಂದು ಮಾಹಿತಿ ನೀಡುತ್ತಾರೆ. ಹೇಳುತ್ತಾರೆ. ಆದರೆ ಪ್ರಸ್ತುತ ಒಂದೂ ಕೆರೆಯೂ ಅಲ್ಲಿ ಕಾಣ ಸಿಗುವುದಿಲ್ಲ. ಅಲ್ಲಿರುವ ಕೆರೆಯೊಂದನ್ನು ಜಿಲ್ಲಾಡಳಿತವೇ ಖಾಸಗಿ ಸಿಟಿ ಕ್ಲಬ್‌ಗೆ ಲೀಸ್ ಆಧಾರದ ಮೇಲೆ ಕೊಟ್ಟಿದೆ. ಮತ್ತೊಂದು ಕೆರೆಯಲ್ಲಿ ಸರ್ಕಾರಿ ಸಂಸ್ಥೆಯ ಕಟ್ಟಡಗಳು ನಿರ್ಮಾಣವಾಗಿವೆ.
  ಜಿಲ್ಲಾಡಳಿತ ನೀಡುವ ಮಾಹಿತಿಯನುಸಾರ 77 ಕೆರೆಯನ್ನು  ಕೆರೆ ಹುಡುಕಿಕೊಂಡು ಹೋದರೆ, ಕೆರೆ ಜಾಗದಲ್ಲಿ ದೊಡ್ಡ ದೊಡ್ಡ ಬಡಾವಣೆ - ಕಟ್ಟಡಗಳು ನಿರ್ಮಾಣವಾಗಿರುವುದು ಕಂಡುಬರುತ್ತದೆ. ಅಧಿಕಾರಿಗಳು ಬರೀ ಕಡತದಲ್ಲಿರುವ ಮಾಹಿತಿ ಕೊಡುತ್ತಾರೆ. ಆದರೆ ಕೆರೆಗಳ ವಾಸ್ತವ ಸ್ಥಿತಿಗತಿ ಅರಿಯುವ ಪ್ರಯತ್ನ ಮಾಡುತ್ತಿಲ್ಲ. ಪ್ರಸ್ತುತ ನಗರದಲ್ಲಿ 20 ರಿಂದ 25 ಕೆರೆಗಳು ಮಾತ್ರ ಇದೆ. ಇದರಲ್ಲಿ ಹಲವು ಕೆರೆಗಳು ಒತ್ತುವರಿಯಾಗಿವೆ ಎನ್ನುವುದು ಹೋರಾಟಗಾರರ ಅಭಿಮತ.
ಒಂದು ಉದಾಹರಣೆ ಗಮನಿಸಿ: ಗೋಪಿಶೆಟ್ಟಿಕೊಪ್ಪ ಗ್ರಾಮದ ಸ.ನಂ 95ರಲ್ಲಿ ಇತಿಹಾಸ ಪ್ರಸಿದ್ಧ ದೊಡ್ಡಕೆರೆ ಇದೆ. 1965 ರಿಂದ ಇದು ಸಣ್ಣ ನೀರಾವರಿ ಇಲಾಖೆಯ ವಶದಲ್ಲಿದೆ. ದಾಖಲಾತಿಯ ಪ್ರಕಾರ, 32 ಹೆಕ್ಟೇರ್ (79.07 ಎಕರೆ) ವಿಸ್ತೀರ್ಣದಕೆರೆಯಿದು. ಈ ಕೆರೆಗೆ ಕೆಲವು ವರ್ಷಗಳ ಹಿಂದೆ ಒಂದು ಕೋಟಿ ರೂ ಮೊತ್ತಗಳ ಕಾಮಗಾರಿ ನಡೆದಿದೆ. ಪ್ರಸ್ತುತ ಈ ಕೆರೆಗೆ ಎರಡು ಯೋಜನೆ ಅಡಿಯಲ್ಲಿ ಎರಡು ಕೋಟಿ ರೂಪಾಯಿಗಳ ಕಾಮಗಾರಿ ಚಾಲ್ತಿಯಲ್ಲಿದೆ.  ಆದರೆ ಕೆರೆಯ ಸರ್ವೆ ಮಾಡದೆ, ಅದು ನಿಜಕ್ಕೂ ತನ್ನ ವಿಸ್ತೀರ್ಣವನ್ನು ಉಳಿಸಿಕೊಂಡಿದೆಯೇ, ಅತಿಕ್ರಮಣವಾಗಿದೆಯೇ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇಲಾಖೆ ಕಾಮಗಾರಿ ನಡೆಸುತ್ತಿದೆ.  79.07 ವಿಸ್ತೀರ್ಣದ ಕೆರೆಯ ಸರ್ವೆ ಮಾಡಿಸಿ ವ್ಯತ್ಯಾಸ ಕಂಡುಬಂದಲ್ಲಿ ಅದನ್ನು ತೆರವುಗೊಳಿಸುವ ಕೆಲಸವನ್ನು ಮಾಡಿ, ನಂತರ ಕಾಮಗಾರಿಯನ್ನು ಮುಂದುವರೆಸಬೇಕಿತ್ತು. ಕೆರೆಯ  ಒತ್ತುವರಿದಾರರು ಹಾಗೂ ಕೆರೆಗೆ ಗಲೀಜು, ಕೊಳಚೆ ನೀರನ್ನು ಬಿಡುವವರ ಮತ್ತು ಕಸ, ಮಣ್ಣು ಹಾಕುವವರ ವಿರುದ್ಧ ಪ್ರಕರಣ ದಾಖಲಿಸಿ  ಕ್ರಮ ಕೈಗೊಳ್ಳಬೇಕು.
  ಒಂದು ಕಾಲದಲ್ಲಿ  ಕೆರೆ ಪವಿತ್ರ ಉದ್ದೇಶಕ್ಕೆ ಸುಂದರವಾಗಿ ನಿರ್ಮಾಣ ಮಾಡಲಾಗುತ್ತಿತ್ತು. ಮೆಟ್ಟಿಲುಗಳು, ಕಲ್ಲಿನ ಹಾಸುಗಳು, ಸುತ್ತ ಮರಗಳ ನೆರಳು ಇತ್ತು. ಋಷಿಗಳು, ದೇವಸ್ಥಾನದವರು  ನಿತ್ಯಕರ್ಮಗಳಿಗಾಗಿ, ದೇವತಾಪೂಜೆಗಳಿಗಾಗಿ ಕೆರೆಯನ್ನು ಬಳಸುತ್ತಿದ್ದರು. ಕಾಲ ಬದಲಾದಂತೆ ಸಾರ್ವಜನಿಕ ಸ್ವತ್ತಾಗಿ ಋಷಿ-ಮುನಿಗಳಿಗಾಗಿ ಜನ್ಮ ತಳೆದ ಅದು, ಆಮೇಲೆ ಕೃಷಿಗಾಗಿ ಬಳಕೆಯಾಗಿ, ಈಗ ನುಸಿಗಳ ಆವಾಸಸ್ಥಾನವಾಗಿ ರೋಗ-ರುಜಿನಗಳ ಬೀಡಾಗಿದೆ. ಇನ್ನೊಂದೆಡೆ, ಕೆರೆ ಸಣ್ಣ ನೀರಾವರಿ ಇಲಾಖೆಯದ್ದಾದರೆ, ಅದರ ಹೂಳನ್ನು ನಾವೇಕೆ ಎತ್ತಬೇಕು ಎಂದು ಗ್ರಾಮಸ್ಥರು ಹಲವೆಡೆ ಸುಮ್ಮನಾದರು. ಹೀಗೆ ಕೆರೆಯ ನೀರೆಲ್ಲ ಬತ್ತಿ ಕೆರೆಗೆ ಹೂಳು ತುಂಬಿಕೊಂಡಿತು. ಸಾಲದೆಂಬಂತೆ, ಹಿರಿಕಿರಿಯರೆನ್ನದೆ ಜಾತಿಬೇಧ ಮರೆತು ಎಲ್ಲರೂ ಕೆರೆಯ ಸೋಪಾನದ ಕಲ್ಲುಗಳನ್ನು ತಮ್ಮ ಮನೆಗಳಿಗೆ ಹೊತ್ತು ಸಾಗಿಸಿದರು.  ಆ ಕಲ್ಲುಗಳು ಕೆಲವರ ಮನೆಯ ಕೊಟ್ಟಿಗೆಗೆ ಹಾಸುಗಲ್ಲಾದರೆ, ಮತ್ತೆ ಕೆಲವರಿಗೆ ಬಟ್ಟೆ ತೊಳೆಯುವ ಚಪ್ಪಡಿ ಕಲ್ಲಾಯಿತು; ಇನ್ನೂ ಕೆಲವರಿಗೆ ಸಣ್ಣ ಕಾಲುವೆ ದಾಟುವ ಹಾಸುಗಲ್ಲಾಯಿತು. ಕೆರೆಯ ಸೋಪಾನ ಕಲ್ಲುಗಳೆಲ್ಲ ಕಳಚಿದ್ದರಿಂದ, ಮನುಷ್ಯರಷ್ಟೇ ಏಕೆ ಈ ಕೆರೆಯನ್ನು ಬಳಸಿಕೊಳ್ಳಬೇಕು?- ನಾವೂ ನಮ್ಮ ಸಾಮ್ರಾಜ್ಯವನ್ನು ಇಲ್ಲಿಯೇ ಸ್ಥಾಪಿಸೋಣ ಎಂದು ಪಣ ತೊಟ್ಟಂತೆ ಎಮ್ಮೆ-ಕೋಣಗಳೂ ಈ ಕೆರೆಯನ್ನು ಅತಿಕ್ರಮಿಸಿದವು. ಕಪ್ಪೆಗಳೂ ಇಲ್ಲಿ ಬೀಡುಬಿಟ್ಟವು. ಹಾವುಗಳಿಗೂ ಇದುವೇ ಆವಾಸಸ್ಥಾನವಾಯಿತು. ಪಾಚಿಗಟ್ಟಿ ರಾಡಿಯಾದ ನೀರಿನಲ್ಲಿ ಕ್ರಿಮಿ-ಕೀಟಗಳು, ಬ್ಯಾಕ್ಟೀರಿಯಾಗಳು, ನುಸಿಗಳು ಹುಟ್ಟಿಕೊಂಡವು. ಇಂತಹ ದುರವಸ್ಥೆಯ ನೂರಾರು ಕೆರೆಗಳನ್ನು ಜಿಲ್ಲೆಯಲ್ಲಿ ಕಾಣಬಹುದು. ಇಂತಹ ಕೆರೆಯ ದಡದಲ್ಲಿ ನಿಂತರೆ ಅದರ ಮೂಕರೋದನ ಯಾರಿಗೆ ಕೇಳಿಸದೆ ಹೋದರೂ, ಪರಿಸರ ಪ್ರೇಮಿಗಳಿಗೆ ಕೇಳಿಸದಿರದು.
ಕೆರೆಯ   ಕಥೆಯ  ಹಿಂದೆ ಮಾನವನ ಎಲ್ಲ ದುಷ್ಟತನಗಳನ್ನು, ನಿಸರ್ಗದ ಮೇಲಿನ ಅವನ ಎಗ್ಗಿಲ್ಲದ ಆಕ್ರಮಣವನ್ನು ನಾವು ಕಾಣಬಹುದು. ಸಮೃದ್ಧತೆಯಿಂದ ಕೂಡಿದ್ದ, ಜೀವಸತ್ವದೊಂದಿಗೆ  ಪಾವಿತ್ರ್ಯಕ್ಕೆ ಹೆಸರಾಗಿದ್ದ  ಕೆರೆಗಳ ದುಸ್ಥಿತಿಗೆ ನಾವೇ ಕಾರಣರು ಎಂಬ ನಾಚಿಕೆ ನಮ್ಮನ್ನು ಕಾಡುತ್ತದೆ. ಕಾಲದ ನಡಿಗೆಯಲ್ಲಿ ನಿಸರ್ಗದ ಮೇಲಿನ ಮನುಷ್ಯನ ಕ್ರೌರ್ಯ ಪರಮಾವಧಿಯನ್ನು ತಲುಪುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉತ್ತಮ ಉದಾಹರಣೆ ಬೇಕಾಗಿಲ್ಲ ಅಲ್ಲವೇ....?
...............................

No comments:

Post a Comment