Saturday, 25 November 2017

ಟೊಮೆಟೊ, ಈರುಳ್ಳಿ ಬೆಲೆ ಮತ್ತೆ ಗಗನಮುಖಿ 
  ಟೊಮೆಟೊ 65, ಈರುಳ್ಳಿ, 60ರೂ ಗೆ ಮಾರಾಟ



ಕೆಲವು ತಿಂಗಳಿಂದ ಇಳಿಮುಖವಾಗಿದ್ದ ತರಕಾರಿ ಬೆಲೆ ಈಗ ಮತ್ತೆ ಏರುಮುಖಿಯಾಗಿದೆ. ಇದರಿಂದ ಮೊದಲೇ ಏರಿಕೆಯಲ್ಲಿರುವ ಹೊಟೆಲ್ ತಿಂಡಿಗಳ ದರ ಇನ್ನಷ್ಟು ಏರಲಿದೆ. ಮತ್ತೊಂದೆಡೆ, ಗ್ರಾಹಕನ ಜೇಬಿಗೆ ಹೊರೆಯಾಗುತ್ತಿದೆ. ಮಗದೊಂದೆಡೆ, ಸಾಮಾನ್ಯ ವರ್ಗದವರ ಬದುಕಿಗೆ ಬರೆ ಬೀಳುವಂತಾಗಿದೆ. ಒಟ್ಟಿನಲ್ಲಿ ಗ್ರಾಹಕ ಆತಂಕಿತನಾಗಿದ್ದಾನೆ. 
ಅತಿ ಹೆಚ್ಚು ಬಳಸಲ್ಪಡುವ ಟೊಮೆಟೊ ಮತ್ತು ಈರುಳ್ಳಿ ಜನರ ಕೈಗೆ ಸಿಗದ ಮಟ್ಟಕ್ಕೆ ಏರಿಕೆಯಾಗುತ್ತಿವೆ. ತರಕಾರಿ ಹೊರತಾಗಿ ಬಡವರಿಗಾಗಲಿ, ಶ್ರೀಮಂತರಿಗಾಗಲಿ ದೈನಂದಿನ ಅಡುಗೆ, ತಿಂಡಿ ಇರುವುದಿಲ್ಲ. ಈಗ ಚಳಿಗಾಲ ಆರಂಭವಾಗುತ್ತಿದ್ದು, ಹೊಸ ತರಕಾರಿಗಳ ಆಗಮನವಾಗಬೇಕಿತ್ತು. ಆದರೆ ಕೆಲವು ಸೊಪ್ಪುಗಳನ್ನು ಹೊರತುಪಡಿಸಿದರೆ ಬೇರಾವ ತರಕಾರಿಯೂ ಇನ್ನೂ ಮಾರುಕಟ್ಟೆಗೆ ಕಾಲಿಟ್ಟಿಲ್ಲ. ಇದೇ ಸಮಯವನ್ನು ಬಳಸಿಕೊಂಡು ದಲ್ಲಾಳಿಗಳು ತರಕಾರಿ ದ ರ ಏರಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಇನ್ನೊಂದೆಡೆ, ಅಕಾಲಿಕ ಮಳೆ ಬಿದ್ದುದದರಿಂದ ತರಕಾರಿ ಗಿಡಗಳಿಗೆ ಮತ್ತು ಬಳ್ಳಿಗಳಿಗೆ ತೀವ್ರ ತೊಂದರೆಯಾಗಿದೆ. ಇದರಿಂದ ಇಳುವರಿ ಕುಂಠಿತಗೊಂಡಿದೆ. ಪರಿಣಾಮವಾಗಿ ಮಾರುಕಟ್ಟೆಗೆ ಸಮರ್ಪಕ ಪೂರೈಕೆ ಆಗುತ್ತಿಲ್ಲ. ದರ ಏರಿಕೆಗೆ ಇದೂ ಸಹ ಒಂದು ಕಾರಣವಾಗಿದೆ. ಈ ವರ್ಷ ಮಳೆ ಆಗಾಗ ಬಿದ್ದುದದರಿಂದ ಹೆಚ್ಚಿನ ಕಾಲ ತರಕಾರಿ ಕಡಿಮೆ ದರದಲ್ಲೇ ಗ್ರಾಹಕರಿಗೆ ಲಭ್ಯವಾಗಿದೆ. ಆದರೆ 8-10 ದಿನದಿಂದ ಟೊಮೆಟೊ, ಈರುಳ್ಳಿ ದರ ಏರಿಕೆಯಾಗುತ್ತಲೇ ಇದೆ. ಇದರೊಡನೆ ಕೆಲವು ತರಕಾರಿಯ ದರವೂ ಹೆಚ್ಚಿದೆ. ಆದರ ಇವ್ಯಾವುವೂ ಅನಿವಾರ್ಯ ಬಳಕೆಯ ಪಟ್ಟಿಯಲ್ಲಿ ಇಲ್ಲದ ಕಾರಣ ಗ್ರಾಹಕರಿಗೆ ಅಷ್ಟೊಂದು ತೊಂದರೆ ಆಗುತ್ತಿಲ್ಲ.
ಆದರೆ ಈರುಳ್ಳಿ ಮತ್ತು ಟೊಮೆಟೊ ಮಾತ್ರ ಅವಶ್ಯಕವಾಗಿವೆ. ಟೊಮೆಟೊ 65 ರೂ. ಗೆ ಒಂದು ಕೆ. ಜಿ. ಯಾದರೆ, ಈರುಳ್ಳಿ 60 ರೂನಲ್ಲಿದೆ. ನುಗ್ಗೆಕಾಯಿ 120 ರೂ. ಕೆಜಿ. ಗಿದೆ. ಕ್ಯಾರೆಟ್ 100 ರೂ ಗೆ ಮಾರಾಟವಾಗುತ್ತಿದೆ. ಹೊಟೆಲ್‌ಗಳಿಗೆ ಮತ್ತು ಮನೆಗಳಲ್ಲಿ ಟೊಮೆಟೊ, ಈರುಳ್ಳಿಯೇ ಪ್ರಮುಖ ತರಕಾರಿ. ಈಗ ಇವುಗಳ ದರ ಏರಿಕೆಯಿಂದ ಮತ್ತೆ ಹೊಟೆಲ್‌ನವರು ದರ ಏರಿಸುತ್ತಿದ್ದಾರೆ. ಮನೆಯಲ್ಲೂ ಟೊಮೆಟೊ, ಈರುಳ್ಳಿಯನ್ನು ಲೆಕ್ಕ ಮಾಡಿ ಬಳಸುವಂತಹ ಸಂದರ್ಭ ಎದುರಾಗಿದೆ.
ಹಾಪ್‌ಕಾಮ್ಸ್‌ನಲೂ ಇವುಗಳ ದರ ಏರಿಕೆಯಾಗಿದೆ. ಆದರೆ ಮಾರುಕಟ್ಟೆ ದರಕ್ಕಿಂತ 5-10 ರೂ. ಕಡಿಮೆಯಲ್ಲಿ ಲಭ್ಯವಾಗುತ್ತಿವೆ. ವಿಶೇಷವಾಗಿ ಶಿವಮೊಗ್ಗದಲ್ಲಿ ಹಾಪ್‌ಕಾಮ್ಸ್ ಪರಿಣಾಮ ತೀರಾ ಕಡಿಮೆ. ಏನಿದ್ದರೂ ಜನರು ಮಾರುಕಟ್ಟೆಗೆ ಜೋತುಬೀಳುತ್ತಾರೆ. ಎಷ್ಟೇ ದೂರವಿದ್ದರೂ ಗಾಂಧಿಬಜಾರ್‌ಗೆ ಬರುತ್ತಾರೆ. ಹಾಪ್‌ಕಾಮ್ಸ್ ತನ್ನ ಪ್ರಭಾವವನ್ನು ಜನರ ಮೇಲೆ ಬೀರುವಲ್ಲಿ ಅಷ್ಟೊಂದು ಯಶಸ್ವಿಯಾಗಿಲ್ಲ. ಗುಣಮಟ್ಟದ ತರಕಾರಿ, ಹಣ್ಣುಗಳು ಅಲ್ಲಿ ಮಾರುಕಟ್ಟೆ ದರಕ್ಕಿಂತ ಸ್ವಲ್ಪ ಕಡಿಮೆ ದರದಲ್ಲಿ ಲಭ್ಯವಿದ್ದರೂ ಜನರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿದೆ. ಇನ್ನೂ ಸಾಕಷ್ಟು ಗ್ರಾಹಕರಿಗೆ ಹಾಪ್‌ಕಾಮ್ಸ್ ಸೌಲಭ್ಯ ಸಿಗುತ್ತಿಲ್ಲ. ಅಗತ್ಯ ಸ್ಥಳಗಳಲ್ಲಿ ಅಥವಾ ಪ್ರತಿ ಬಡಾವಣೆಯಲ್ಲಿ ಇದರ ಮಾರಾಟ ಕೇಂದ್ರ ಇದ್ದಿದ್ದರೆ ಅನುಕೂಲವಾಗುತ್ತಿತ್ತು.
ಇದೇನೇ ಇರಲಿ, ತರಕಾರಿ ದರ ಏರಿಕೆ ಮತ್ತೆ ಗ್ರಾಹಕನಿಗೆ ಬರೆ ಹಾಕುತ್ತಿದೆ. ಸರಕಾರ ಈ ತರಕಾರಿಗಳ ರಫ್ತನ್ನು ಇಳಿಮುಖ ಮಾಡುವತ್ತ ಗಮನಹರಿಬೇಕೆಂದು ಹೋಲ್‌ಸೆಲ್ ವರ್ತಕರು ಆಗ್ರಹಿಸಿದ್ದಾರೆ. ಸದ್ಯದ ಮಾರುಕಟ್ಟೆ ದರವನ್ನು ಇಳಿಯುವಂತೆ ಮಾಡಿ, ನಿಗದಿತ ದರಕ್ಕೆ ಸಿಗುವಂತೆ ಮಾಡಬೇಕಿದೆ. ನಾಲ್ಕಾರು ದಿನದ ಹಿಂದೆ 25 ರೂ. ಇದ್ದ ಟೊಮೆಟೊ ಈಗ ದಿಢೀರ್ 60-65 ರೂ. ಗೆ ಏರಿದೆ. ಈರುಳ್ಳಿ ಸುಮಾರು 15 ದಿನದಿಂದಲೇ 40ರ ಆಜುಬಾಜಿನಲ್ಲಿತ್ತು. ಇವೆರಡೂ ದರ ಇಳಿಕೆಯಾದರೆ ಮಾತ್ರ ಗ್ರಾಹಕನಿಗೆ ನೆಮ್ಮದಿ. ಇಲ್ಲವಾದಲ್ಲಿ ಬಡವರ ದಿನನಿತ್ಯದ ಸಾರೂ ಸಹ ಅಡುಗೆಮನೆಯಲ್ಲಿ ತಯಾರಾಗುವುದು ನಿಂತುಹೋಗಲಿದೆ.
....................................

Thursday, 23 November 2017

ಶುರುವಾಯ್ತು ಮತ್ತೆ ಮರಳು ಲೂಟಿ 
  ಸ್ವತಃ ಕಾರ್ಯಾಚರಣೆಗಿಳಿದ ಜಿಲ್ಲಾ ಪೊಲೀಸ್ ವರಿಷ್ಠ ಖರೆ




 -
ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ದಂಧೆ ಅವ್ಯಾಹತವಾಗಿದ್ದು, ಯಾರೂ ನಿಯಂತ್ರಣ ಮಾಡದ ಮಟ್ಟಕ್ಕೆ ಬೆಳೆದು ನಿಂತಿದೆ. ಇನ್ನಾದರೂ ಜಿಲ್ಲಾಡಳಿತ ಮರಳು ಮಾಫಿಯಾ ಅಟ್ಟಹಾಸಕ್ಕೆ ಪೂರ್ಣ ಪ್ರಮಾಣದಲ್ಲಿ ನಿಯಂತ್ರಿಸಲು ಪ್ರಾಮಾಣಿಕ ಗಮನಹರಿಸಬೇಕು. ನಾಗರಿಕರಿಗೆ ಸುಲಭಗತಿಯಲ್ಲಿ ಮರಳು ಲಭ್ಯವಾಗುವ ವ್ಯವಸ್ಥೆ ಮಾಡಲು ಮುಂದಾಗಬೇಕಾಗಿದೆ. ಅಕ್ರಮ ಮರಳು ಲೂಟಿಗೆ ಕಡಿವಾಣ ಹಾಕಲು ಹಾಗೂ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಸುಲಭವಾಗಿ ಮರಳು ದೊರಕಿಸಿಕೊಡಲು ಸರ್ಕಾರ, ಸ್ಥಳೀಯಾಡಳಿತಗಳು ಹತ್ತು ಹಲವು ಕ್ರಮಕೈಗೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ.



ತೀರ್ಥಹಳ್ಳಿ ತಾಲೂಕಿನಲ್ಲಿ ಮರಳು ಲೂಟಿಯಾಗುತ್ತಿರುವುದನ್ನು ನೋಡಲಾಗದೆ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠರೇ ಸತತ ದಾಳಿಗಿಳಿದಿದ್ದಾರೆ. ಮೂರು ದಿನದಿಂದ ತಾಲೂಕಿನಲ್ಲಿ ಮರಳು ಲಭ್ಯವಿರುವ ಗ್ರಾಮಗಳಲ್ಲೆಲ್ಲಾ ತಿರುಗಾಡಿ ನೂರಾರು ಲೋಡ್ ಅಕ್ರಮ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ.
ಇಲ್ಲಿ ನಡೆಯುತ್ತಿರುವ ಮರಳು ಲೂಟಿಯನ್ನು ಗಮನಿಸಿದರೆ ಇಷ್ಟು ವರ್ಷದಿಂದ ಎಷ್ಟು ಕೋಟಿ ರೂ. ಮೌಲ್ಯದ ಮರಳನ್ನು  ಅಕ್ರಮವಾಗಿ ಮಾರಾಟಮಾಡಿ ಕೋಟಿ ಕೋಟಿ ಎಣಿಸಿರಬಹುದು ಎನ್ನುವುದನ್ನು ಅರಿಯಬಹುದು. ಕೆಲವರಂತೂ ಮಳೆಗಾಲವನ್ನೂ ಲೆಕ್ಕಿಸದೆ ಈ ದಂಧೆಯಲ್ಲಿ ನಿರತರಾಗಿದ್ದು ಬೆಳಕಿಗೆ ಬಂದಿದೆ. ಶಾಲಾ ಆವರಣ, ದಟ್ಟ ಅಡವಿ, ಮನೆಯ ಹಿಂದಿನ ಜಾಗ, ನದಿಯ ಪಕ್ಕದಲ್ಲಿ ಸಂಗ್ರಹಿಸಿಡುವುದು, ಆನಂತರ ಸಾಗಾಟ ಮಾಡುವುದು ಇವರ ದಿನನಿತ್ಯದ ದಂಧೆಯಾಗಿದೆ. ಕಳೆದ ವರ್ಷವೇ ನೂರಾರು ಜನರಿಗೆ ಬಿಸಿಮುಟ್ಟಿಸಿದ್ದ ಎಸ್.ಪಿ ಅಭಿನವ್ ಖರೆ, ಈ ವರ್ಷ ತಮ್ಮ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಿದ್ದು, ಹಲವರು ಮತ್ತೆ ಜೈಲುಪಾಲಾಗುವುದು ನಿಶ್ಚಿತ.
ಕಳೆದ ವರ್ಷವೇ ಸಾಕಷ್ಟು ದಂಧೆಕೋರರರು ಎಸ್‌ಪಿಯವರ ವಿರುದ್ಧವೇ ರಾಜಕಾರಣಿಗಳನ್ನು ಎತ್ತಿಕಟ್ಟಿದ್ದರು. ಇದರಿಂದ ಕೆಲವು ಜನಪ್ರತಿನಿಧಿಗಳು ಎಸ್‌ಪಿ  ವಿರುದ್ದ ಹರಿಹಾಯ್ದಿದ್ದರು. ಪೊಲೀಸರು ಈ ವಿಷಯದಲ್ಲಿ ನಿಷ್ಕ್ರಿಯರಾಗಿದ್ದಾರೆಂದು ದೂರಿದ್ದರು. ಆದರೂ ಛಲಬಿಡದೆ ಎಸ್‌ಪಿ ಖರೆ ತಮ್ಮ ಕೆಲಸವನ್ನು ಮತ್ತೆ ಮುಂದುವರೆಸಿದ್ದಾರೆ. ನಕಲಿ ಪರವಾನಿಗೆ, ಎಂ. ಸ್ಯಾಂಡ್ ಎಂದೆಲ್ಲ ಮರಳು ಸಾಗಾಟವಾಗುತ್ತಿದೆ. ಇದನ್ನು ಮೊದಲು ಪತ್ತೆ ಮಾಡಬೇಕಿದೆ. ದಂಧೆಕೋರರು ಎಸ್‌ಪಿಯವರ ಈ ಕ್ರಮದಿಂದ ಚಳಿಗಾಲದಲ್ಲೂ ಬೆವರುವಂತಾಗಿದೆ. ಮರಳು ಅಕ್ರಮ ಸಂಗ್ರಹ ಪತ್ತೆ ಹಚ್ಚುವ ಕೆಲಸವನ್ನು ಕಳೆದ ವರ್ಷವೇ ಜಿಲ್ಲಾ ಡಿಸಿಬಿ ಇನ್ಸ್‌ಪೆಕ್ಟರ್ ಕುಮಾರ್ ನೇತೃತ್ವದ ತಂಡಕ್ಕೆ ಎಸ್‌ಪಿ ವಹಿಸಿದ್ದಾರೆ. ಅವರು ಪತ್ತೆ ಮಾಡಿದ್ದು  ಸಾವಿರಾರು  ಲೋಡ್ ಮರಳು. 
ಇವರೆಲ್ಲ ಸಂಗ್ರಹಿಸಿ ಮಾರಾಟ ಮಾಡುವ ಮರಳಿನ ಮೌಲ್ಯ ನೂರಾರು ಕೋಟಿ ರೂ.ಗಳಿಗೂ ಅಧಿಕ ಮೊತ್ತದ್ದಾಗಿದೆ. ಇದೊಂದು ದೊಡ್ಡ ಮಾಫಿಯಾವಾಗಿ ಬೆಳೆದು ನಿಂತಿದೆ. ಆಡಳಿತ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವ ಮಟ್ಟದಲ್ಲಿ ಈ ಮಾಫಿಯಾ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಕೆಲವು ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು, ನಾನಾ ವರ್ಗದ ಪ್ರಭಾವಿಗಳು ಮರಳಿನ ವ್ಯವಹಾರದಲ್ಲಿ ಪ್ರತ್ಯಕ್ಷ - ಪರೋಕ್ಷವಾಗಿ ಶಾಮೀಲಾಗುತ್ತಿರುವುದು ಮರಳು ದಂಧೆಯ ಅಗಾಧತೆಗೆ ಹಿಡಿದ ಕೈಗನ್ನಡಿಯಾಗಿದೆ.
 ಜಿಲ್ಲೆಯ ಗಡಿ ದಾಟಿ, ಚೆಕ್‌ಪೋಸ್ಟ್ - ಪೊಲೀಸ್ ಠಾಣೆಗಳ ಸರಹದ್ದು ಮೀರಿ, ಆಡಳಿತ ಯಂತ್ರದ ಕಣ್ಣಿಗೆ ಮಣ್ಣೆರಚಿ ಮರಳು ಲೂಟಿಯಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಎಲ್ಲ ದಿನಗಳಲ್ಲಿಯೂ ನದಿಪಾತ್ರಗಳಿಂದ ಮರಳು ಲೂಟಿ ಮಾಡಲಾಗುತ್ತಿದೆ. ಮತ್ತೊಂದೆಡೆ, ಸಾಮಾನ್ಯ ನಾಗರಿಕರು ಕಟ್ಟಡ ನಿರ್ಮಾಣಕ್ಕೆ ಲೋಡ್ ಮರಳು ಪಡೆಯಲು ಪರದಾಡುವಂತಾಗಿದೆ. ಬ್ಲಾಕ್‌ನಲ್ಲಿ 40 ರಿಂದ 50 ಸಾವಿರ ರೂ. ತೆತ್ತು ಮರಳು ಖರೀದಿಸುವಂತಹ ಸ್ಥಿತಿಯಿದೆ. ರಾಜ್ಯದಲ್ಲಿ ಅತೀ ಹೆಚ್ಚು ಮರಳು ಲಭ್ಯವಾಗುವ ಜಿಲ್ಲೆಗಳಲ್ಲೊಂದಾದ ಶಿವಮೊಗ್ಗದಲ್ಲಿಯೇ ನಾಗರಿಕರು ಮರಳು ಪಡೆಯಲು ಹರಸಾಹಸ ನಡೆಸುವಂತಹ ದುಃಸ್ಥಿತಿಯಿದೆ ಎಂದರೆ ನಂಬಲಸಾಧ್ಯ.
 ಶಿವಮೊಗ್ಗದ  ನದಿ ಪಾತ್ರಗಳಲ್ಲಿ ದೊರಕುವ ಮರಳಿಗೆ ಬೆಂಗಳೂರು ಮತ್ತಿತರ ನಗರಗಳಲ್ಲಿ ಭಾರೀ ಬೇಡಿಕೆ ಇದೆ. ಒಂದು ಲಾರಿ ಲೋಡ್ ಮರಳಿಗೆ 50 ಸಾವಿರ ರೂ. ಮೇಲ್ಪಟ್ಟು ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಗಲು-ರಾತ್ರಿಗಳ ಪರಿವೆಯೇ ಇಲ್ಲದೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ಮೂಲಕ ಹೊರ ಜಿಲ್ಲೆಗಳಿಗೆ ಮರಳು ಸಾಗಾಣೆ ನಡೆಸಲಾಗುತ್ತಿದೆ ಎನ್ನುವ ಆರೋಪ ಜನಸಾಮಾನ್ಯರದು. ಈ ರಸ್ತೆಗಳಲ್ಲಿರುವ ಚೆಕ್‌ಪೋಸ್ಟ್, ವ್ಯಾಪ್ತಿಯ ಪೊಲೀಸ್ ಠಾಣೆಗಳ ಗಮನಕ್ಕೆ ಬರದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.
ಕಾನೂನುಬದ್ಧವಾಗಿ ಮರಳು ಸಾಗಾಣೆಯಾದರೆ ಯಾರಿಗೂ ಮಾಮೂಲಿ ಸಿಗುವುದಿಲ್ಲ. ನಾಗರಿಕರಿಗೆ ಮಾತ್ರ ಅನುಕೂಲವಾಗುತ್ತದೆ. ಅದೇ ಕಾನೂನುಬಾಹಿರ ಮರಳು ಸಾಗಾಣೆಯಾದರೆ ಎಲ್ಲರಿಗೂ ನಿಯಮಿತವಾಗಿ ಮಾಮೂಲಿ ಲಭ್ಯವಾಗುತ್ತದೆ. ಇದರಿಂದ ಕಾನೂನುಬಾಹಿರ ಮರಳು ಗಣಿಗಾರಿಕೆಯ ಬಗ್ಗೆಯೇ ಎಲ್ಲರಿಗೂ ಆಸಕ್ತಿ ಹೆಚ್ಚಾಗಿದೆ.
------------------------------------

Saturday, 18 November 2017

ಸಾಹಿತ್ಯ ಸಮ್ಮೇಳನ: ಸ್ವರೂಪ ಚಿಂತನೆ


  
 ಸಾಹಿತ್ಯ ಸಮ್ಮೇಳನ ಎಂದರೆ ಜಾತ್ರೆ ಎಂಬ ಆರೋಪವಿದೆ. ಇದು ಕನ್ನಡ ನುಡಿಹಬ್ಬವಾಗಬೇಕೇ ಹೊರತು ಜಾತ್ರೆಯಾಗಬಾರದು. ಇತ್ತೀಚೆಗಂತೂ ಈ ಸಮ್ಮೇಳನ ಯಾರದ್ದೋ ದುಡ್ಡು ಯಲ್ಲಯಮ್ಮನ ಜಾತ್ರೆ ಎನ್ನುವಂತಾಗಿದ್ದು ನಿಜ. ಈ ಹಿನ್ನೆಲೆಯಲ್ಲಿ ತಾಲೂಕು, ಜಿಲ್ಲೆ, ರಾಜ್ಯ, ವಿಶ್ವ ಯಾವುದೇ ಇರಲಿ, ಕನ್ನಡ ಸಮ್ಮೇಳನ ಸರಳವಾಗಿ, ವಿಷಯಕ್ಕಷ್ಟೇ ಸಿಮಿತವಾದ ಚರ್ಚೆ, ಗೋಷ್ಠಿ, ಸಂವಾದಗಳೊಂದಿಗೆ ನಡೆಯುವಂತಾಗಬೇಕು. ಅದ್ದೂರಿ, ದುಂದುವೆಚ್ಚದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದು ಕಸಾಪದ ಗಮನಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ಸಮ್ಮೇಳನಗಳ ಸ್ವರೂಪ ಹೇಗಿರಬೇಕೆಂಬ ಕುರಿತು ಒಂದು ಚಿಂತನೆಯನ್ನು ಇಲ್ಲಿ ಮಾಡಲಾಗಿದೆ.


ಈ ವಾರಾಂತ್ಯದಲ್ಲಿ ಮೈಸೂರಿನಲ್ಲಿ 83ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಲಿದೆ. ಕನ್ನಡ, ಕನ್ನಡ ಎನ್ನುತ್ತಲೇ ಮೋಜು-ಮೇಜವಾನಿಯಲ್ಲೇ ಅದ್ದೂರಿಯಾಗಿ ನಡೆಸಲು  ಎಲ್ಲ ಸಿದ್ಧತೆ ನಡೆಯುತ್ತಿದೆ. ಭೂರಿ ಭೋಜನ, ಅನವಶ್ಯಕ ಗೋಷ್ಠಿಗಳು, ಬೇಡವಾದ ಚಿಂತನೆಗಳೇ ಇಲ್ಲಿನ ಪ್ರಮುಖ ವಿಷಯಗಳಾಗುತ್ತಿವೆ. ಸರ್ಕಾರ ಕೊಡುವ 5 ಕೋಟಿ ರೂ.ಗೂ ಮಿಕ್ಕಿ ಖರ್ಚು ಮಾಡುವ ಆಲೋಚನೆ ನಡೆಯುತ್ತದೆಯೇ ವಿನಾ ಹಣ ಉಳಿಸುವ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ.
 ಪ್ರತಿ ಸಮ್ಮೇಳನಗಳೂ ಅಧ್ವಾನದಲ್ಲೇ ನಡೆದು ಮುಗಿದು ಹೋಗುತ್ತಿವೆ. ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಮಾತ್ರ ಟೀಕೆಗಳು ಬರುತ್ತವೆ. ಹಾಗೆಯೇ ಸಂಘಟಕರು ಅಥವಾ ಕಸಾಪ ಅದನ್ನು ಮರೆತು ಬಿಡುತ್ತದೆ. ಮಾಧ್ಯಮಗಳು ದೊಡ್ಡದಾಗಿ ವೈಫಲ್ಯವನ್ನು ಚಿತ್ರಿಸುತ್ತವೆಯೇ ವಿನಾ ಯಾವ ರೀತಿ ಇದನ್ನು ನಡೆಸಬೇಕು ಎನ್ನುವುದರ ಕುರಿತು ಅಭಿಪ್ರಾಯ ನೀಡುವುದಿಲ್ಲ. ನಾಡು-ನುಡಿಯ ಚಿಂತನೆಯ ಈ ಸಮ್ಮೇಳನಗಳು ಹೇಗೆ ನಡೆಯಬೇಕು ಎನ್ನುವ ಬಗೆಗೆ ಸಾಹಿತ್ಯ ವಲಯದಲ್ಲಿ ಗಂಭೀರ ಚಿಂತನೆ ಇಲ್ಲಿಯವರೆಗೆ ನಡೆದಿಲ್ಲ. ಸರ್ಕಾರ ಕೊಟ್ಟ ಹಣವನ್ನು ಖರ್ಚು ಮಾಡುವುದಷ್ಟೇ ಅವರ ಗುರಿಯಾಗಿರುತ್ತದೆ ವಿನಾ ಗುಣಮಟ್ಟದ ಬಗ್ಗೆಯಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ.
ಒಟ್ಟಿನಲ್ಲಿ, ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಾಗಬೇಕಿದೆ. ಅನಾವಶ್ಯಕ ವಿಚಾರಗಳನ್ನು ಇದರಲ್ಲಿ ತುಂಬುವುದು, ಸಮ್ಮೇಳನದ ಹೆಸರಲ್ಲಿ ಒಓಡಿ ಪಡೆದು ಬಂದು ಪ್ರವಾಸ ಮಾಡುವ ನೌಕರರು, ಊಟಕ್ಕೆಂದೇ ಬರುವ ಸ್ಥಳೀಯರು.... ಇವುಗಳನ್ನು ತಪ್ಪಿಸಲೇಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಅಥವಾ ಜಿಲ್ಲಾ, ತಾಲೂಕು ಸಮ್ಮೇಳನದ ಸಂಘಟಕರು ಯೋಚಿಸಬೇಕಿದೆ.

ಸ್ವರೂಪ ಹೀಗಿರಲಿ:

ಯಾವುದಾದರೂ ಒಂದು ಮಹಾಕಾವ್ಯವನ್ನು ವರ್ತಮಾನದ ಬದುಕಿನೊಂದಿಗೆ ವಿಶ್ಲೇಷಣೆ ಮಾಡುವುದು, ಬಬ್ಬರಿಂದ ವಿಚಾರ ಮಂಡನೆ, ಇಬ್ಬರಿಂದ ಪ್ರತಿಕ್ರಿಯೆ, ಎಳೆಯ ಪೀಳಿಗೆಯಲ್ಲಿ ಗಂಭೀರವಾದ ಓದು ದೂರವಾಗುತ್ತಿರುವುದರ ಚಿಂತನೆ, ಗೋಷ್ಠಿ, ಮಾರ್ಗದರ್ಶನ ಯುವಕರ ಪ್ರತಿಕ್ರಿಯೆ ಇವುಗಳ ಕುರಿತು ಸಮ್ಮೇಳನದಲ್ಲಿ ಗೋಷ್ಠಿ ನಡೆಯಬೇಕು.
* ಸಮ್ಮೇಳನದಲ್ಲಿ ಮೂರು ಕವಿಗೋಷ್ಠಿಯನ್ನು ಏರ್ಪಡಿಸುವ ಪರಿಸ್ಥಿತಿ ಬಂದೊದೊದಗಿದೆ. ಇದು ಯಾರನ್ನು ಮೆಚ್ಚಿಸಲು ಎಂದು ಪ್ರಶ್ನಿಸಬೇಕಾಗುತ್ತದೆ. ಕವಿಗಳ ಸಂಖ್ಯೆ ಹೆಚ್ಚುತ್ತಿರುವುದು ನಿಜ. ಆದರೆ ಅವರು ಬರೆದ ಕವಿತೆಯ ಗುಣಮಟ್ಟವನ್ನು ಪರಾಮರ್ಶಿಸುವವರಾರು? ಈ ಹಿನ್ನೆಲೆಯಲ್ಲಿ ಇದಕ್ಕಿಂತ ಭಿನ್ನವಾಗಿ ನಾನು ಮೆಚ್ಚಿದ ಕವಿ, ಮೆಚ್ಚಿದ ಕವನ ಇದರ ವಾಚನಕ್ಕೆ ಸೀಮಿತಗೊಳಿಸಬೇಕು.
* ಇತ್ತೀಚಿನ ಸಮ್ಮೇಳನಗಳಲ್ಲಿ ವೇದಿಕೆಯಲ್ಲಿ ಹಿರಿಯ ಸಾಹಿತಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಎಲ್ಲ ಸಾಹಿತ್ಯಪ್ರಿಯರನ್ನು ಚಿಂತೆಗೀಡು ಮಾಡಿದೆ. ಈ ಕ್ಷೇತ್ರದಲ್ಲಿ ಹೆಸರು ಮಾಡಿದ, ಕನ್ನಡಕ್ಕೆ ಅತ್ಯಮೂಲ್ಯ ಕಾಣಿಕೆ ಕೊಟ್ಟವರನ್ನೇ ದೂರವಿಟ್ಟು ಸಮ್ಮೇಳನ ನಡೆಸಲಾಗುತ್ತಿದೆ. ಇದರ ಬಗೆಗೆ ಸಹ ಯೋಚಿಸುವ ಕೆಲಸವಾಗಬೇಕಿದೆ.
* ಗೋಷ್ಠಿಯ ಸಂಖ್ಯೆ ಕಡಿಮೆಯಾಗಬೇಕು. ದಿನಕ್ಕೆ ಮೂರಕ್ಕಿಂತ ಹೆಚ್ಚಿನ ಗೋಷ್ಠಿಯನ್ನು ನಡೆಸಬಾರದು. ಇದರಿಂದ ಸಮಯ ಪಾಲನೆ ಸಾಧ್ಯ. ಇಲ್ಲವಾದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಇರುವುದೇ ಒಂದು ಸಮಯ, ಗೋಷ್ಠಿ ನಡೆಯುವುದೇ ಇನ್ನೊಂದು ಸಮಯಕ್ಕೆ. ದಿನದ ಅಂತ್ಯದಲ್ಲಿರುವ ಸಾಂಸ್ಕೃತಿಯ ಕಾರ್ಯಕ್ರಮಗಳು ಆರಂಭವಾಗುವುದೇ ರಾತ್ರಿ 9ಕ್ಕೆ ಎನ್ನುವಂತಾಗುತ್ತದೆ.
* ಪ್ರತಿ ಗೋಷ್ಠಿಯ ನಂತರ ಸಭಾಸದರಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಲು ಇಬ್ಬರಿಗೆ ಅವಕಾಶ ಕೊಡಬೇಕು. ಇದರಿಂದ ಗೋಷ್ಠಿಯ ಮೌಲ್ಯಮಾಪನ ಸಾಧ್ಯವಾಗುತ್ತದೆ. ಹಾಜರಿದ್ದವರಿಗೆ ಎಷ್ಟು ಆಸಕ್ತಿಯನ್ನು ಇದು ಉಂಟು ಮಾಡಿತು ಎಂಬ ಅಂಶ ತಿಳಿಯಲನುಕೂಲವಾಗುತ್ತದೆ. ವಿಷಯ ಮಂಡಿಸಿದವರು ಸಫಲ, ವಿಫಲರಾದರೋ ಎನ್ನುವುದೂ ಸಹ ಅರಿಯಲು ಸಾಧ್ಯವಾಗುತ್ತದೆ.
* ಇತ್ತೀಚಿನ ದಿನಗಳಲ್ಲಿ ಕನ್ನಡ ಕಾವ್ಯಗಳು ಸತ್ತಿವೆ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಕುರಿತು ಹಿರಿಕಿರಿಯ ಸಾಹಿತಿಗಳಿಂದ ಒಂದು ಅವಲೋಕನವನ್ನು ನಡೆಸಬಹುದು.
* ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ರಾಜಕೀಯ ನಾಯಕರಿಂದ ಆದಷ್ಟು ಮುಕ್ತಗೊಳಿಸಬೇಕು. ಏಕಕಾಲಕ್ಕೆ 20-30 ಜನರನ್ನು ಸನ್ಮಾನಿಸುವ ಬದಲು ರಾಜ್ಯೋತ್ಸವ ಪ್ರಶಸ್ತಿಗೆ ಬಳಸುವ ಮಾನದಂಡದಲ್ಲೇ ಆಯ್ಕೆ ಮಾಡಿ ಜಿಲ್ಲೆಗೊಬ್ಬರನ್ನು ಸನ್ಮಾನಿಸುವುದು ಸೂಕ್ತ.
* ಕನ್ನಡ ಸಾಹಿತ್ಯ ಸಮ್ಮೇಳನವನ್ನು ನುಡಿ ಹಬ್ಬ ಎಂದು ಕರೆಯಲಾಗುತ್ತಿದೆ. ಇದಕ್ಕೆ ತಕ್ಕಂತೆ ಸಮ್ಮೇಳನ ರೂಪಿಸುವುದು ಸಂಘಟಕರ ಜವಾಬ್ದಾರಿಯಾಗಬೇಕು. ಕನ್ನಡದ ಹೆಸರಲ್ಲಿ ಇಲ್ಲಸಲ್ಲದ ವಿಚಾರಗಳ ಗೋಷ್ಠಿ, ಕನ್ನಡಕ್ಕೂ ಗೋಷ್ಠಿಗೂ ಸಂಬಂಧವಿಲ್ಲದ ವಿಚಾರಗಳನ್ನು ತುರುಕುವುದು ಹೆಚ್ಚುತ್ತಿದೆ. ಇಂತಹವುಗಳನ್ನು ಕೈಬಿಟ್ಟು ಕೇವಲ ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆ ಕುರಿತು ಒಂದಷ್ಟು ಚಿಂತನೆ ಮಾಡುವ ಸಮಯ ಇದಾಗಬೇಕು.
   * ಸಮ್ಮೇಳನದ ಊಟದ ವಿಚಾರದಲ್ಲಿ ಒಂದಷ್ಟು ಗಮನಾರ್ಹ ಬದಲಾವಣೆ ಅನಿವಾರ್ಯವಾಗಿದೆ. ಸಮ್ಮೇಳನಕ್ಕೆ ಬರುವವರಿಗೆ ಸುಗ್ರಾಸ ಭೋಜನ ಹಾಕಬೇಕೆಂದು ಯಾವ ಸಾಹಿತ್ಯವೂ, ಕವಿಯೂ ಹೇಳಿಲ್ಲ. ಅಚ್ಚುಕಟ್ಟಾದ, ಅತಿಸರಳ ಊಟದ ವ್ಯವಸ್ಥೆ ಮಾಡಿದರೆ ಸಾಕು. ಊಟದ ಮೆನು ತಯಾರು ಮಾಡುವುದು, ಎರಡು ದಿನ ಮೊದಲೇ ಇದನ್ನು ಪ್ರಚುರಪಡಿಸಿ ಊಟಕ್ಕೆ ನೂಕು-ನುಗ್ಗಲು ಉಂಟಾಗುವಂತೆ ಮಾಡಿ ವ್ಯವಸ್ಥೆ ಹದಗೆಡಿಸಲಾಗುತ್ತಿದೆ. ಪ್ರತಿವರ್ಷ ಊಟದ ವ್ಯವಸ್ಥೆಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಇದಕ್ಕಾಗಿ ಪ್ರತಿನಿಧಿ ಶುಲ್ಕವನ್ನು ಭಾಗವಹಿಸುವವರಿಗೆ ಕಡ್ಡಾಯಗೊಳಿಸಬೇಕು. ಶುಲ್ಕವಿಲ್ಲದವರಿಗೆ ಪ್ರವೇಶ ನಿಷೇಧಿಸಬೇಕು. ಇದರಿಂದ ಊಟ ಸಹಿತ ಎಲ್ಲಿಯೂ ಗೊಂದಲವಾಗುವುದಿಲ್ಲ.
* ಪುಸ್ತಕ ಮಳಿಗೆಗಳಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಪ್ರಕಟಣೆಗಳು, ಪರಿಷತ್ ಪ್ರಕಟಣೆ ಕಡ್ಡಾಯವಾಗಿ ಇರುವಂತೆ ಮಾಡಬೇಕು.
* ಸಾಂಸ್ಕೃತಿಕ ಕಾರ್ಯಕ್ರಮ ನಿಗದಿ ಮಾಡುವಾಗಲೇ ಹೊರ ಜಿಲ್ಲೆ, ಪರರಾಜ್ಯದವರನ್ನು ಆಹ್ವಾನಿಸುವುದನ್ನು ಕೈಬಿಟ್ಟು ಅದೇ ಜಿಲ್ಲೆಯ ಹೆಸರಾಂತ ಕಲಾವಿದರಿಗಷ್ಟೇ ಅವಕಾಶ ಕೊಟ್ಟರೆ ನಿಗದಿತ ಅವಧಿಯಲ್ಲಿ ಆಕರ್ಷಕ, ರಂಜನೀಯ ಪ್ರದರ್ಶನ ಸಾಧ್ಯವಾಗುತ್ತದೆ.
* ಸಮ್ಮೇಳನಾಧ್ಯಕ್ಷರ ಅದ್ದೂರಿಯ ಮೆರವಣಿಗೆಯನ್ನು ಕೈಬಿಟ್ಟು ಅತಿ ಸರಳವಾಗಿ ಇದನ್ನು ನಿರ್ವಹಿಸಬೇಕು.
           ಒಟ್ಟಿನಲ್ಲಿ, ಸಮ್ಮೇಳನಗಳು ಜ್ಞಾನಾರ್ಜನೆಗೆ ಬಾಗಿಲನ್ನು ತೆರೆಯಬೇಕೇ ವಿನಾ ಜನಾಕರ್ಷಣೆಯ ಕೇಂದ್ರವಾಗಬಾರದ
.......................................

Thursday, 16 November 2017

ಅಕ್ರಮ ಆಟೋ, ಕಾರು ನಿಲ್ದಾಣಗಳಿಗೆ ಬ್ರೇಕ್ ಎಂದು? 


 ಆಟೋ ಚಾಲಕರಿಗೆ ಸೂಕ್ತ ಶೆಲ್ಟರ್ ನಿರ್ಮಿಸಿ ಕೊಡುವುದು ಸ್ಥಳಿಯಾಡಳಿತ, ಸಂಬಂಧಿಸಿದ ಇಲಾಖೆಗಳ ಆದ್ಯ ಕರ್ತವ್ಯ. ಆದರೆ ಸ್ಟ್ಯಾಂಡ್ ನಿರ್ಮಿಸಲು ಮುಂದಾಗಿರುವ ಸ್ಥಳವು ಆಟೋಗಳ ನಿಲುಗಡೆಗೆ ಪ್ರಶಸ್ತವಾಗಿದೆಯೇ, ಜನ - ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಿಲ್ಲವೇ ಎಂಬುವುದನ್ನು ಮೊದಲು ಪರಿಶೀಲಿಸಬೇಕು. ನಗರದ ಬಾಲರಾಜ್ ಅರಸ್ ರಸ್ತೆ ಮತ್ತು ಆ ರಸ್ತೆಯ ಫುಟ್‌ಪಾತ್‌ಗೆ ಹೊಂದಿಕೊಂಡಂತೆ ಮೊನ್ನೆಯಷ್ಟೇ ಫುಟ್‌ಪಾತ್ ಮೇಲೆಯೇ ಶೆಲ್ಟರ್‌ವೊಂದನ್ನು ನಿರ್ಮಿಸಲಾಗಿದೆ. ನೆಹರೂ ರಸ್ತೆಯ ಕೆನರಾ ಬ್ಯಾಂಕ್ ಎದುರು ಅಕ್ರಮವಾಗಿ ಆಟೋಗಳು ನಿಲ್ದಾಣ ಮಾಡಿಕೊಂಡಿವೆ. ಇಂತಹ ಹತ್ತಾರು ಉದಾಹರಣೆ ಕಣ್ಣಮುಂದಿದೆ. ಇದನ್ನೆಲ್ಲ ಗಮನಿಸಿ ಕ್ರಮ ಜರುಗಿಸುವವರಾರು?  



  ನಗರದೊಳಕ್ಕೆ ಎಲ್ಲೆಂದರಲ್ಲಿ ಇತ್ತೀಚೆಗೆ ಅವೈಜ್ಞಾನಿಕವಾಗಿ ಆಟೋ ನಿಲ್ದಾಣ ಶೆಲ್ಟರ್‌ಗಳು ತಲೆ ಎತ್ತುತ್ತಿವೆ. ಇದಕ್ಕೆ ಯಾರ ಅನುಂಮತಿಯನ್ನೂ ಇದರ ಸಂಸತಪಕರು ಪಡೆಯುತ್ತಿಲ್ಲ. ಹತ್ತಾರು ಅಟೋ ನಿಲ್ಲುತ್ತವೆ ಎಂದಾದರೆ ಆಟೊ ಸ್ಟ್ಯಾಂಡ್ ನಿಮಾಣವಾಗುತ್ತಿದೆ. ಲೆಕ್ಕಕ್ಕೆ ಇಲ್ಲದಷ್ಟು ಇಂತಹ ನಿಲ್ದಾನಗಳು ಅಕ್ರಮವಾಗಿ ಸ್ಥಾಪಿತವಾಗಿವೆ. ಆದರೆ ಇದನ್ನು ಗಮನಿಸುವ ಅಧಿಕಾರಿಗಳೇ ಇಲ್ಲ!
 ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜನ ಮತ್ತು ವಾಹನ ಸಂಚಾರ ದಟ್ಟಣೆಯಿರುವ ವೃತ್ತ ಮೊದಲಾದೆಡೆ ಆಟೊ ನಿಲ್ದಾಣ ನಿರ್ಮಾಣವಾಗುವಾಗ ಕೆಲವೊಂದು ನಿಯಮಗಳಿವೆ. ಹೆದ್ದಾರಿ ಪಕ್ಕದಲ್ಲಿ, ಪಾಲಿಕೆಗೆ ಸೇರಿದ ಜಾಗದಲ್ಲಿ, ಲೊಕೊಪಯೊಗಿ ಇಲಾಖೆಯ ರಸ್ತೆಯಾದರೆ ಸಂಬಂಧಿತರ ಪರವಾನಿಗೆ ಬೇಕು. ಆದರೆ ಇಲ್ಲಿ ಆಟೊ ಚಾಲಕರದ್ದೇ ಸಾಮ್ರಾಜ್ಯ. ಅವರದ್ದೇ ಅಂತಿಮ ತೀರ್ಮಾನ. 
 ರಸ್ತೆ ವಿಸ್ತರಣೆ ಆಗಬೇಕೆಂದರೆ ಈ ನಿಲ್ದಾಣಗಳನ್ನು ತೆಗೆಯಲೇಬೇಕಾಗುತ್ತದೆ. ಜೊತೆಗೆ ಪಾದಚಾರಿ ಮಾರ್ಗಕ್ಕೂ ಕೆಲವೆಡೆ ತೊಂದರೆ ಆಗುವಂತೆ ನಿಲ್ದಾಣ ಇದೆ. ಇವುಗಳ ಬಗ್ಗೆ ಗಮನಿಸದೆ ತಮ್ಮ ಆಟೊ ನಿಲ್ಲಲು ಜಾಗವಾದರೆ ಸಾಕೆಂಬ ದೃಷ್ಟಿಯಿಂದ ಆಟೊ ಚಾಲಕರು ಗುಂಪು ಸೇರಿ ಈ ರೀತಿ ಅಕ್ರಮ ನಿಲ್ದಾಣ ಸ್ಥಾಪಿಸುತ್ತಿದ್ದಾರೆ. ಪಾಲಿಕೆಯವರಂತೂ ಇವರ ಗೋಜಿಗೇ ಹೋಗುವುದಿಲ್ಲ. ಸಂಬಂಧಿತ ವಾರ್ಡ್ ಸದಸ್ಯರು ಜಾಣ ಕುರುಡರು. ಅಧಿಕಾರಿಗಳು ಕಾ
ಆರಿನಲ್ಲಿ ಸಂಚರಿಸುವುದರಿಂದ ಇವರ ಬಗ್ಗೆ ಗಮನವಿಲ್ಲ. ಸಮಸ್ಯೆ ಏನಿದ್ದರೂ ಸಾಮಾನ್ಯ ನಾಗರಿಕರದ್ದು. ಅದನ್ನು ಹೇಳಿದರೂ ಕೇಳಿಸಿಕೊಳ್ಳುವವರಿಲ್ಲ. ಹಾಗಾಗಿ ಸಮಸ್ಯೆ ಪರಿಹರಿಸುವವರೇ ಇಲ್ಲ.
ಇನ್ನೊಂದೆಡೆ ಜನಪ್ರತಿನಿಧಿಗಳೇ, ಇತ್ತೀಚೆಗೆ ನಗರದ ವಿವಿಧೆಡೆ ಜನಪ್ರತಿನಿಧಿಗಳ ಅನುದಾನದಡಿ ಆಟೋಗಳ ನಿಲುಗಡೆಗೆ ನಿರ್ಮಿಸುತ್ತಿರುವ ಶೆಲ್ಟರ್‌ಗಳು ಸಾಕ್ಷಿಯಾಗಿವೆ. ಎಲ್ಲೆಂದರಲ್ಲಿ ಶೆಲ್ಟರ್ ನಿರ್ಮಿಸಲಾಗುತ್ತಿದೆ. ನೀತಿ - ನಿಯಮ ಗಾಳಿಗೆ ತೂರಲಾಗುತ್ತಿದೆ. ಇದರಿಂದ ಜನ-ವಾಹನ ಸಂಚಾರಕ್ಕೆ ತೊಂದರೆಯಾಗುವುದರ ಜೊತೆಗೆ, ಸರ್ಕಾರದ ಅನುದಾನದ ಅನಗತ್ಯ ದುಂದು ವೆಚ್ಚವಾಗುತ್ತಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
 ’ಪ್ರಮುಖ ವೃತ್ತ, ಪಾದಚಾರಿ ಮಾರ್ಗಗಳು, ಭಾರೀ ಪ್ರಮಾಣದ ಜನ-ವಾಹನ ಸಂಚಾರ ದಟ್ಟಣೆಯಿರುವ ಪ್ರದೇಶಗಳಲ್ಲಿಯೇ ಆಟೋಗಳ ನಿಲುಗಡೆಗೆ ಶೆಲ್ಟರ್ ನಿರ್ಮಿಸಲು ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳು ಅನುಮತಿ ನೀಡಿರುವುದು  ಸಖೇದಾಶ್ಚರ್ಯವೇ ಸರಿ. 
’ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆ ಕೊಂಡೊಯ್ಯುವ ಆಟೋ ಚಾಲಕರಿಗೆ ಸೂಕ್ತ ಶೆಲ್ಟರ್ ನಿರ್ಮಿಸಿ ಕೊಡುವುದು ಸ್ಥಳಿಯಾಡಳಿತ, ಸಂಬಂಧಿಸಿದ ಇಲಾಖೆಗಳ ಆದ್ಯ ಕರ್ತವ್ಯವಾಗಿದೆ. ಆದರೆ ಸ್ಟ್ಯಾಂಡ್ ನಿರ್ಮಿಸಲು ಮುಂದಾಗಿರುವ ಸ್ಥಳವು ಆಟೋಗಳ ನಿಲುಗಡೆಗೆ ಪ್ರಶಸ್ತವಾಗಿದೆಯೇ, ಜನ - ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಿಲ್ಲವೇ ಎಂಬುವುದನ್ನು ಮೊದಲು ಪರಿಶೀಲಿಸಬೇಕು.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ವಿ. ಪೊನ್ನುರಾಜ್ ನಗರದ ಬಾಲರಾಜ್ ಅರಸ್ ರಸ್ತೆ ಮತ್ತು ಆ ರಸ್ತೆಯ ಫುಟ್‌ಪಾತ್‌ಗೆ ಹೊಂದಿಕೊಂಡಂತೆ ಕಾರುಗಳ ನಿಲುಗಡೆ ನಿರ್ಬಂಧಿಸಿದ್ದರು. ಜನಪ್ರತಿನಿಧಿಗಳ ಒತ್ತಡಕ್ಕೂ ಮಣಿದಿರಲಿಲ್ಲ. ಆದರೆ ಇದೀಗ ಎಂದಿನಂತೆ ಆ ರಸ್ತೆಯಲ್ಲಿ ಕಾರುಗಳ ನಿಲುಗಡೆ ಮಾಡಲಾಗುತ್ತಿದೆ. ಪಾದಚಾರಿಗಳು ರಸ್ತೆಯ ಮೇಲೆ ಓಡಾಡುವಂತಾಗಿದೆ. ಮೊನ್ನೆಯಷ್ಟೇ ಫುಟ್‌ಪಾತ್ ಮೇಲೆಯೇ ಶೆಲ್ಟರ್‌ವೊಂದನ್ನು ನಿರ್ಮಿಸಲಾಗಿದೆ.

ಬಾಕ್ಸ್
ಶೆಲ್ಟರ್ ನಿರ್ಮಾಣಕ್ಕೆ ತಡೆ
 ನಗರದ ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲಿ ಪೊಲೀಸ್ ಠಾಣೆಗೆ ಹೊಂದಿಕೊಂಡಂತೆ ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ ರಸ್ತೆಯಲ್ಲಿ ಇತ್ತೀಚೆಗೆ  ನಿರ್ಮಿಸಲಾಗುತ್ತಿದ್ದ ಆಟೋ ಶೆಲ್ಟರ್ ನಿರ್ಮಾಣ ಕಾರ್ಯಕ್ಕೆ ಪಿಡಬ್ಲ್ಯೂಡಿ ಇಲಾಖೆ ತಡೆ ನೀಡಿದೆ. ತಮ್ಮ ಇಲಾಖೆಗೆ ಸೇರಿದ ರಸ್ತೆಗೆ ಹೊಂದಿಕೊಂಡಂತೆ ಆಟೋ ಶೆಲ್ಟರ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಜನ - ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಸ್ತೆಯಿಂದ ನಿರ್ದಿಷ್ಟ ಅಂತರದಲ್ಲಿ ಶೆಲ್ಟರ್ ನಿರ್ಮಿಸಿ’ ಎಂದು ನಿರ್ಮಾಣ ಸಂಸ್ಥೆಗೆ ಪಿಡಬ್ಲ್ಯೂಡಿ ಇಲಾಖೆ ಪತ್ರ ಬರೆದು ಸೂಚನೆ ನೀಡಿದೆ. ಇಲಾಖೆಯ ಸೂಚನೆಯ ಹಿನ್ನೆಲೆಯಲ್ಲಿ ಶೆಲ್ಟರ್ ನಿರ್ಮಾಣ ಕಾರ್ಯವನ್ನು  ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.

ಬಾಕ್ಸ್
 ಪಾಲಿಕೆಯ ದರ್ಬಾರು
’ನಗರ ವ್ಯಾಪ್ತಿಯಲ್ಲಿ ತಮ್ಮ ಇಲಾಖೆಗೆ ಸೇರಿದ ರಸ್ತೆಗಳಂಚಿನಲ್ಲಿಯೇ ಆಟೋ ಇತರೆ ವಾಹನಗಳ ನಿಲುಗಡೆಯ ಶೆಲ್ಟರ್ ನಿರ್ಮಾಣ ಮಾಡಲು ಮಹಾನಗರ ಪಾಲಿಕೆ ಆಡಳಿತ ಕೆಲವೊಮ್ಮೆ ಎನ್‌ಓಸಿ ನೀಡುತ್ತದೆ. ಶೆಲ್ಟರ್ ನಿರ್ಮಾಣ ತಡೆಯಲು ಮುಂದಾದರೆ ನಮ್ಮ ಮೇಲೆಯೇ ಆಕ್ರೋಶ ವ್ಯಕ್ತವಾಗುತ್ತದೆ. ಕೆಲವು ಜನಪ್ರತಿನಿಧಿಗಳಿಂದಲೂ ಸಾಕಷ್ಟು ಒತ್ತಡ ಬರುತ್ತದೆ. ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪಿಡಬ್ಲ್ಯೂಡಿ ಎಂಜಿನಿಯರ್ ಒಬ್ಬರು ಹೇಳುತ್ತಾರೆ.
---------------------------------

Tuesday, 14 November 2017

ಇನ್ನೆಷ್ಟು ಸಾವು ಬೇಕು, ಹೋರಿ ಸ್ಪರ್ಧೆ ನಿಲ್ಲಿಸಲು? 


 ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ನಡೆಯುವ ಅನಾಹುತಗಳಿಗೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ. ರಾಜಕಾರಣಿಗಳ ಒತ್ತಡಕ್ಕೆ ಮಣಿಯುತ್ತಿರುವ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುತ್ತಿಲ್ಲ. ಚುನಾವಣೆ ಸಮಿಪಿಸುತ್ತಿರುವುದರಿಂದ ಕೆಲವು ರಾಜಕಾರಣಿಗಳು ಹೋರಿ ಸ್ಪರ್ಧೆ ಪರ ನಿಂತು ವಾದಿಸುತ್ತಿದ್ದಾರೆ. ನಿನ್ನೆಯಷ್ಟೇ ಒಬ್ಬರು ಈ ಸ್ಪರ್ಧೆಗೆ ಬಲಿಯಾಗಿದ್ದಾರೆ. ಕಳೆದ ವರ್ಷ ಮೂವರು ಬಲಿಯಾಗಿ 15ಕ್ಕೂ ಹೆಚ್ಚು ಜನ ಇರಿತದಿಂದ ಗಾಯಗೊಂಡಿದ್ದರು. ಈ ಹಿಂದೆ ಜಿಲ್ಲಾಡಳಿತ ಸ್ಪರ್ಧೆ ಆಯೋಜಿಸುವವರಿಗೆ ವಿಧಿಸಿದ್ದ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕಾಗಿದೆ. ನಿಯಮ ಪಾಲನೆ ಮಾಡದವರ ವಿರುದ್ದ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಬೇಕಿದೆ. 




ಎಷ್ಟೋ ಕಡೆ ಸ್ಪರ್ಧೆ ಆಯೋಜಕರು ಅನುಮತಿ ಪಡೆಯುವುದಿರಲಿ, ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆ ಕೂಡ ಮಾಡುತ್ತಿಲ್ಲವೆಂಬ ಮಾಹಿತಿ ಸ್ವತಃ ಅಧಿಕಾರಿಗಳ ವಲಯದಿಂದಲೇ ಕೇಳಿಬರುತ್ತಿದೆ. ಕೆಲವೊಮ್ಮೆ ಈ ಬಗ್ಗೆ ಸಂಬಂಧಿಸಿದವರಿಗೆ ತಿಳಿಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಲತಲಾಂತರದಿಂದ ಸ್ಪರ್ಧೆ ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಈಗೇಕೆ ಅನುಮತಿ ಪಡೆಯಬೇಕು ಎಂದು ಕೆಲವರು ಪ್ರಶ್ನಿಸುತ್ತಾರೆ.  ಅನುಮತಿ  ಕುರಿತಂತೆ ತಹಶೀಲ್ದಾರ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿ, ಸ್ಪರ್ಧೆಗಳಲ್ಲಿ ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳ ಪಾಲನೆ ಮಾಡುವಂತೆಯೂ ಜಿಲ್ಲಾಡಳಿತ ಆದೇಶಿಸಿದೆ. ನಿಯಮ ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆಯೂ ಸೂಚಿಸಿದೆ. ಆದರೂ ಇದು ಪಾಲನೆಯಾಗುತ್ತಿಲ್ಲ. ನಿಯಮ ಪಾಲನೆ ಮಾಡುವಂತೆ ಆಯೋಜಕರ ಮನವೊಲಿಸುವುದು ದೊಡ್ಡ ಸವಾಲಿನ ಕೆಲಸವಾಗಿದ್ದು, ಕಿರಿಕಿರಿಯಾಗಿ ಪರಿಣಮಿಸುತ್ತಿದೆ ಎನ್ನುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು.  

ಶಿವಮೊಗ್ಗ ಜಿಲ್ಲೆಯಲ್ಲಿ  ಹೋರಿ ಬೆದರಿಸುವ ಸ್ಪರ್ಧೆಯ ಕ್ರೇಜ್ ಹೆಚ್ಚುತ್ತಿದೆ. ಇದರೊಟ್ಟಿಗೆ ಅಲ್ಲಿ ಸಾವು-ನೋವು ಸಹ ಸಂಭವಿಸುತ್ತಿದೆ. ನಿನ್ನೆಯಷ್ಟೇ ಅಯನೂರಿನಲ್ಲಿ ಹೋರಿ ಸ್ಪರ್ಧೆಗೆ ಒಬ್ಬ ಬಲಿಯಾಗಿದ್ದಾನೆ.  ಇದು ಜಾನಪದರಿಂದ ಬೆಳೆದುಬಂದಿದ್ದರೂ  ಜೀವಹಾನಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿ. ನಿಷೇಧಿಸಬೇಕೆಂಬ ಕೂಗೆದ್ದ ತಕ್ಷಣ ತಮಿಳುನಾಡಿನ ಜಲ್ಲಿಕಟ್ಟು ಮತ್ತು ದಕ್ಷಿಣ ಕನ್ನಡದ ಕಂಬಳದ ಉದಾಹರಣೆ ಕೊಟ್ಟು ಸಮರ್ಥನೆ ಮಾಡಿಕೊಳ್ಳುವವರೇ ಜಾಸ್ತಿಯಾಗಿದ್ದಾರೆ.
 ಈ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ನಿಷೇಧಿಸಿಲ್ಲ. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಕಳೆದ ವರ್ಷವಷ್ಟೇ ಇದನ್ನು ತಡೆಗಟ್ಟಲು ಮುಂದಾಗಿತ್ತು. ಮೊನ್ನೆ ದೀಪಾವಳಿ ಸಂದರ್ಭದಲ್ಲಿ ಆನವಟ್ಟಿಯಲ್ಲಿ ಹೋರಿ ಸ್ಪರ್ಧೆ ನಡೆದಾಗ ಪೊಲೀಸರು ಅದನ್ನು ತಡೆದಿದ್ದರು. ಈ ವೇಳೆ ಘರ್ಷಣೆಯೂ ಸಂಭವಿಸಿತ್ತು. ಆನಂತರದ ಬೆಳವಣಿಗೆಯಲ್ಲಿ ಈ ಕ್ರೀಡೆ ನಡೆಸಲು ಅನುಮತಿ ಕೊಡಬೇಕೆಂದು ಆ ಭಾಗದವರು ಹಠ ಹಿಡಿದಿದ್ದರು. ಜಿಲ್ಲಾಧಿಕಾರಿಗೆ ಮನವಿ ಸಹ ಸಲ್ಲಿಸಿದ್ದರು. ಈ ಕ್ರೀಡೆ ನಡೆಸುವವರು  ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕೆಂಬ ನಿಯಮವಿದ್ದರು ಅದನ್ನು ಪಾಲಿಸದೆ ದುರಂತ ಎಸಗಿಕೊಳ್ಳುತ್ತಿದ್ದಾರೆ. 
ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಎರಡು ಸಂದರ್ದಲ್ಲಿ ನಡೆಯುತ್ತದೆ. ದೀಪಾವಳಿ ಹಬ್ಬದ ನಂತರ ಜಿಲ್ಲೆಯ ವಿವಿಧೆಡೆ ಇದನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತದೆ.  ಎರಡನೆಯ ಬಾರಿ ಸಂಕ್ರಾಂತಿ ಹಬ್ಬದ ಸುತ್ತಮುತ್ತ ನಡೆಯುತ್ತದೆ. ಇದನ್ನು ಎರಡನೆಯ ಹಟ್ಟಿಹಬ್ಬ ಎಂದು ಕರೆಯಲಾಗುತ್ತದೆ. ಹೋರಿ ಬೆದರಿಸುವ ಸ್ಪರ್ಧೆಗಳು ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸುವವರ ಪ್ರಮಾಣ ಏರಿಕೆಯಾಗುತ್ತಿದೆ.  ಇಷ್ಟೇ ಏಕೆ, ಇದರ ಬಹುಮಾನವಾಗಿ ಕಾರು, ಬೈಕುಗಳನ್ನು ನೀಡಲಾಗುತ್ತದೆ.
ಇದರಿಂದ ಈ ಸ್ಪರ್ಧೆ ಅಂತರ್‌ಜಿಲ್ಲಾ ಮಟ್ಟದಲ್ಲಿ ನಡೆಯಲಾರಂಭಿಸಿದೆ. ಶಿವಮೊಗ್ಗ ಗ್ರಾಮಾಂತರ, ಸೊರಬ, ಶಿಕಾರಿಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇದಕ್ಕೆ ಅಕ್ಕಪಕ್ಕದ ಹಾವೇರಿ, ದಾವಣಗೆರೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯ ಹೋರಿಗಳನ್ನು ಸ್ಪರ್ಧೆಗೆ ತರಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಇದು ರಂಗೇರುತ್ತಿದೆ.
ಕಳೆದ  ವರ್ಷ ಶಿವಮೊಗ್ಗ ತಾಲೂಕಿನ ಕುಂಸಿ ಹಾಗೂ ಹಾರ‌್ನಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿತದಿಂದ ಆರು ಜನರು ಗಾಯಗೊಂಡಿದ್ದರು. ಶಿಕಾರಿಪುರ ಹಾಗೂ ಶಿವಮೊಗ್ಗ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಓರ್ವ ಮೃತಪಟ್ಟು, ಐದಕ್ಕೂ ಅಧಿಕ ಜನರು ಗಾಯಗೊಂಡಿದದ್ರು. ಆನವಟ್ಟಿ ಸಮೀಪದ ತತ್ತೂರಿನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಒಬ್ಬ ಬಾಲಕ ಮತ್ತು ಒಬ್ಬ ಯುವಕ ಪ್ರಾಣ ತೆತ್ತಿದ್ದಾರೆ.  9 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಇಷ್ಟೆಲ್ಲಾ ಸಾವು-ನೋವಿನ ಅಂಕೆ- ಅಂಶಗಳು ಕಣ್ಣೆದುರೇ ಇದ್ದರೂ ಅಧಿಕಾರಿಗಳು ರಾಜಕಾರಣಿಗಳ, ಸರ್ಕಾರದ ಒತ್ತಡಕ್ಕೆ ಮಣಿದು ಬಾಯ್ಮುಚ್ಚಿ ಕೆಲಸ ಮಾಡುವಂತಾಗಿದೆ. ಇತ್ತೀಚೆಗಷ್ಟೇ ಸೊರಬ ಶಾಸಕ ಮಧು ಬಂಗಾರಪ್ಪ ಹೋರಿ ಸ್ಪರ್ಧೆ ನಡೆಯಲೇಬೇಕು ಎಂದು ಹೇಳಿದ್ದಾರೆ. ಚುನಾವಣೆಯು ಸಮಿಪಿಸುತ್ತಿರುವುದರಿಂದ ಜನರನ್ನು ಬುಟ್ಟಿಗೆ ಹಾಕಿಕೊಳ್ಳಲು ರಾಜಕಾರಣಿಗಳಿಗೆ ಇದು ಒಂದು ಅಸ್ತ್ರವಾಗುತ್ತಿದೆ. ಆದರೆ ಜೀವ ಹೋದರೆ ತಾವು ಜವಾಬ್ದಾರರೇ ಎನ್ನುವದುನ್ನು ಅವರೇ ಹೇಳಬೇಕಿದೆ.   
ಅನುಮತಿ ಕಡ್ಡಾಯ:
ಇತ್ತೀಚಿನ ವರ್ಷಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿರುವುದು ಹಾಗೂ ಸಾವು-ನೋವುಗಳು ಹೆಚ್ಚುತ್ತಿರುವುದನ್ನು ಮನಗಂಡಿದ್ದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು, ಸ್ಪರ್ಧೆ ಆಯೋಜನೆ ಮಾಡುವವರು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆದುಕೊಳ್ಳಬೇಕೆಂದು ಆದೇಶಿಸಿತ್ತು. ಅನಾಹುತಕ್ಕೆ ಆಸ್ಪದವಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಮಾಡುವಂತೆ ಆಯೋಜಕರಿಗೆ ಸೂಚಿಸಿತ್ತು. ಸ್ಪರ್ಧೆಗಳ ಬಗ್ಗೆ ಗಮನಹರಿಸುವಂತೆ ತಾಲೂಕು ಆಡಳಿತಗಳಿಗೂ ನಿರ್ದೇಶನ ನೀಡಲಾಗಿತ್ತು. ಮತ್ತೊಂದೆಡೆ, ಸ್ಥಳೀಯ ಪೊಲೀಸರಾಗಲಿ, ತಾಲೂಕು ಆಡಳಿತದ ಅಧಿಕಾರಿಗಳಾಗಲಿ ಅನುಮತಿ ಪಡೆಯದೆ ಆಯೋಜಿಸುವ ಸ್ಪರ್ಧೆಗಳನ್ನು ತಡೆಯುವ ಗೋಜಿಗೆ ಹೋಗುತ್ತಿಲ್ಲ. ಎಲ್ಲಿ ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆಯೋ ಎಂಬ ಆತಂಕದಿಂದ ಸುಮ್ಮನಾಗುತ್ತಿದ್ದಾರೆ. 
ನಿಷೇಧಿಸಲಿ:
ಹೋರಿಗಳು ಓಡುವಾಗ ಗಾಬರಿಯಿಂದ ಜನರ ಮೈಮೇಲೆ ನುಗ್ಗುವುದರಿಂದ ಸರ್ವೇಸಾಮಾನ್ಯವಾಗಿ ನೂಕುನುಗ್ಗಲು, ಕಾಲ್ತುಳಿತ, ಸಾವು ಉಂಟಾಗುತ್ತದೆ. ಸಾವು-ನೋವುಗಳು ಸಂಭವಿಸುತ್ತಿವೆ. ಇದನ್ನು ನಿಲ್ಲಿಸಲು ಇನ್ನೂ ಎಷ್ಟು ಸಾವು ಸಂಭವಿಸಬೇಕು ಎನ್ನುವ ಪ್ರಶ್ನೆಗೆ  ಆಯೋಜಕರು ಮತ್ತು ಅಧಿಕಾರಿಗಳು ಉತ್ತರಿಸಬೇಕಿದೆ.  ಈ ಹಿನ್ನೆಲೆಯಲ್ಲಿ ಆಯೋಜಕರಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗುತ್ತದೆ. ಇದು ಅನಿವಾರ್ಯ ಕೂಡ.
ಜನರ ಜೀವದ ಜೊತೆ ಆಡುವ ಇಂತಹ ಸ್ಪರ್ಧೆ ನಿಷೇಧವಾಗಬೇಕಿದೆ. ಆಯೋಜಕರಿಗೆ ಯಾವ ಕಾರಣಕ್ಕೂ ಸ್ಪರ್ಧೆ ನಡೆಸದಂತೆ ಸೂಚಿಸಬೇಕು. ಜಿಲ್ಲೆಯ ಮಟ್ಟಿಗೆ ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಪ್ರತಿ ವರ್ಷ ಅಮಾಯಕರು ಇದಕ್ಕೆ ಬಲಿಯಾಗುತ್ತಿರುವುದರಿಂದ ನಿಲ್ಲಿಸುವತ್ತ ಕ್ರಮ ಜರುಗಿಸಲೇಬೇಕಿದೆ. 
..........................................


Saturday, 11 November 2017

ಬಂಪರ್  ಬೆಳೆ ; ಕುಸಿದಿದೆ ಬೆಲೆ  


ಶಿವಮೊಗ್ಗ, ನ. 2: ’ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ...’ ಎಂಬ ಮಾತು ಮೆಕ್ಕೆಜೋಳ ಬೆಳೆಗಾರರಿಗೆ ಸೂಕ್ತವಾಗಿ ಅನ್ವಯವಾಗುತ್ತದೆ. ಈ ಬಾರಿ ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯ ನಡುವೆಯೂ ದಾಖಲೆ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆ ಬೆಳೆಯಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿತದಿಂದ ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ.
ಒಂದೆಡೆ ಕಡಿಮೆ ಮೊತ್ತಕ್ಕೆ ಮೆಕ್ಕೆಜೋಳ ಮಾರಲಾಗದೆ, ಇನ್ನೊಂದೆಡೆ ಉತ್ತಮ ಬೆಲೆ ಬರುವವರೆಗೆ ದಾಸ್ತಾನು ಮಾಡಿಟ್ಟುಕೊಳ್ಳಲು ಸಾಧ್ಯವಾಗದೆ ರೈತರು ಪರಿತಪಿಸುವಂತಾಗಿದೆ. ಈಗಾಗಲೇ ಬಡ - ಮಧ್ಯಮ ವರ್ಗದ ರೈತರು ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮೆಕ್ಕೆಜೋಳ ಬೆಳೆಯನ್ನು ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಮತ್ತೆ ಕೆಲವು ರೈತರು ರಾಜ್ಯ ಸರ್ಕಾರ ಆರಂಭಿಸಲಿರುವ ಬೆಂಬಲ ಬೆಲೆ ಖರೀದಿ ಕೇಂದ್ರಗಳತ್ತ ಚಿತ್ತ ಹರಿಸಿದ್ದಾರೆ. ಸರ್ಕಾರ ನಿಗದಿಪಡಿಸುವ ಬೆಲೆಯತ್ತ ಗಮನಹರಿಸಿದ್ದು, ಅಲ್ಲಿಯವರೆಗೂ ಖಾಸಗಿ ವ್ಯಾಪಾರಿಗಳಿಗೆ ಬೆಳೆ ಮಾರಾಟ ಮಾಡದಿರಲು ನಿರ್ಧರಿಸಿದ್ದಾರೆ. ಸರ್ಕಾರ ಮೆಕ್ಕೆಜೋಳಕ್ಕೆ ಬೆಲೆ ನಿಗದಿ ಮಾಡಿ ಖರೀದಿಸಲು ಮುಂದಾದರೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಯಾಗುವ ನಿರೀಕ್ಷೆ ರೈತರದ್ದಾಗಿದೆ.
ದೀಪಾವಳಿ ಹಬ್ಬದ ಆಸುಪಾಸಿನ ದಿನಗಳಿಂದ ಜಿಲ್ಲೆಯಾದ್ಯಂತ ಮೆಕ್ಕೆಜೋಳ ಬೆಳೆ ಕಟಾವು ಕಾರ್ಯ ಆರಂಭವಾಗಿದೆ. ಈಗಾಗಲೇ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಕಟಾವು ಮಾಡಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ದಿಢೀರ್ ಆಗಿ ಬೆಲೆ ಕುಸಿತ ಉಂಟಾಗಿದೆ. ಕಳೆದ ತಿಂಗಳು ಸುಮಾರು 1200 ರೂ.ಗಳಿದ್ದ ಕ್ವಿಂಟಾಲ್ ಮೆಕ್ಕೆಜೋಳದ ಬೆಳೆ ಪ್ರಸ್ತುತ 1000, 1100 ರೂ. ಆಜುಬಾಜಿನಲ್ಲಿದೆ. 
ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಮೆಕ್ಕೆಜೋಳ ಬರುತ್ತಿರುವುದರಿಂದ ಬೆಲೆ ಇಳಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಬೆಳೆ ದಾಸ್ತಾನು ಮಾಡಲು ಅವಕಾಶವಿಲ್ಲದೆ ಕಡಿಮೆ ಧಾರಣೆಗೆ ಬೆಳೆ ಮಾರಾಟ ಮಾಡುವಂತಾಗಿದೆ ಎನ್ನುವುದು ಬೆಳೆಗಾರರ ನೋವಿನ ಮಾತು.
ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಉತ್ತಮ ಧಾರಣೆ ಬರಬೇಕಾದರೆ ಸರ್ಕಾರ ತತಕ್ಷಣ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ನಿಗದಿ ಮಾಡಿ, ಬೆಂಬಲ ಬೆಲೆ ಖರೀದಿ ಕೇಂದ್ರಗಳ ಸ್ಥಾಪನೆ ಮಾಡಬೇಕು. ಇದರಿಂದ ರೈತರಿಗೆ ಸಾಕಷ್ಟು ಅನುಕೂವಾಗಲಿದೆ. ಆದರೆ ಈಗಾಗಲೇ ಮೆಕ್ಕೆಜೋಳ ಕಟಾವು ಕಾರ್ಯ ಆರಂಭವಾಗಿ ಪೂರ್ಣ ಹಂತಕ್ಕೆ ಬರುತ್ತಿದ್ದರೂ ಖರೀದಿ ಕೇಂದ್ರ ಆರಂಭವಾಗದಿರುವುದು ರೈತರಿಗೆ ನಷ್ಟು ಉಂಟಾಗುವಂತೆ ಮಾಡಿದೆ’ ಎನ್ನುತ್ತಾರೆ  ಗೆಜ್ಜೇನಹಳ್ಳಿಯ ರೈತ ದೂದ್ಯ ನಾಯ್ಕ್.
ಇತ್ತೀಚಿನ ವರ್ಷಗಳಲ್ಲಿ ಅತೀವೃಷ್ಟಿ, ಅನಾವೃಷ್ಟಿ, ರೋಗ ಬಾಧೆ ಮತ್ತೀತರ ಕಾರಣದಿಂದ ಮೆಕ್ಕೆಜೋಳ ಇಳುವರಿ ಹೇಳಿಕೊಳ್ಳುವಂತಿರಲಿಲ್ಲ. ಆದರೆ ಈ ಬಾರಿ ಬಿದ್ದ ಮಳೆ ಮೆಕ್ಕೆಜೋಳ ಬೆಳೆಗೆ ಪೂರಕವಾಗಿತ್ತು. ರೋಗ ಭಾದೆಯು ಕಡಿಮೆಯಿತ್ತು. ಈ ಕಾರಣದಿಂದ ಉತ್ತಮ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಳೆಗೆ ಸೂಕ್ತ ಬೆಲೆಯಿಲ್ಲದಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ. ತಕ್ಷಣವೇ ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಗೆ ಮುಂದಾಗಬೇಕು’ ಎನ್ನುವುದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ. ಗಂಗಾಧರ ಅಭಿಮತ.


  ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮಳೆಯ ಕಣ್ಣಾಮುಚ್ಚಾಲೆಯಾಟದಿಂದ ಸಾಂಪ್ರದಾಯಿಕ ಬತ್ತ ಬೆಳೆಯ ಪ್ರಮಾಣ ಕಡಿಮೆಯಾಗಿದೆ. ಸುಮಾರು 1.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬೆಳೆಯ ನಿರೀಕ್ಷೆ ಮಾಡಲಾಗಿತ್ತು. ಆದರೆ 71 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬತ್ತ ಬೆಳೆಯಲಾಗಿದೆ. ಮತ್ತೊಂದೆಡೆ 54 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಿರೀಕ್ಷಿಸಲಾಗಿದ್ದ ಮೆಕ್ಕೆಜೋಳ ಬೆಳೆಯನ್ನು 72 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ತಾಲೂಕಿನ ಹಲವೆಡೆ ಬತ್ತದ ಗದ್ದೆಗಳಲ್ಲಿಯೂ ಮೆಕ್ಕೆಜೋಳ ಬೆಳೆಯಲಾಗಿದೆ. ಎಕರೆಗೆ ಸರಾಸರಿ 40 ರಿಂದ 50 ಕ್ವಿಂಟಾಲ್‌ನಂತೆ, ಸರಿಸುಮಾರು 3.6 ಲಕ್ಷ ಟನ್ ಮೆಕ್ಕೆಜೋಳ ಉತ್ಪಾದನೆಯ ನಿರೀಕ್ಷೆ ಕೃಷಿ ಇಲಾಖೆಯದ್ದಾಗಿದೆ. ಇತ್ತೀಚಿನ ವರ್ಷಗಳಲ್ಲಿಯೇ ಇದು ಅತ್ಯದಿಕ ಪ್ರಮಾಣದ್ದಾಗಿದೆ. ಸರ್ವೆಸಾಮಾನ್ಯವಾಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಅವಧಿಯಲ್ಲಿ 2.50 ದಿಂದ 3 ಲಕ್ಷ ಟನ್ ಒಳಗೆ ಮೆಕ್ಕೆಜೋಳ ಬೆಳೆ ಬೆಳೆಯಲಾಗುತ್ತದೆ.
-ಕೃಷಿ ಇಲಾಖೆ  


 ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಅನುಮತಿ ಕೋರಿ ಈಗಾಗಲೇ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಅನುಮತಿ ಸಿಗುತ್ತಿದ್ದಂತೆ ನಿಯಾಮಾನುಸಾರ ಅಗತ್ಯವಿರುವೆಡೆ ಖರೀದಿ ಕೇಂದ್ರ ತೆರೆಯಲಾಗುವುದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯಲಾಗಿದೆ.
 - ಮಧುಸೂಧನ್,  ಕೃಷಿ ಇಲಾಖೆಯ ಜಂಟಿ ನಿರ್ದೇಶಕ  
-----------------------------------------

Friday, 10 November 2017

ಎಲ್ಲಿ ಮರೆಯಾದೆ, ನೀನು ಏಕೆ ದೂರಾದೆ?
 500, 1 ಸಾವಿರ ರೂ. ನೋಟನ್ನು ಮರೆಯಲಿ ಹ್ಯಾಂಗ?



ನೀವಿಬ್ಬರೂ ನಮ್ಮನ್ನಗಲಿ ಇಂದಿಗೆ ಒಂದು ವರ್ಷ ತುಂಬಿತು. ಸದಾ ನಿಮ್ಮದೇ ನೆನಪು ಕಾಡುತ್ತಿದೆ. ನಮ್ಮಿಂದ ಅಗಲಿದರೂ ನಿಮ್ಮ ಬಗ್ಗೆ ಚರ್ಚೆಯೇನೂ ಇನ್ನೂ ನಿಂತಿಲ್ಲ. ಅಷ್ಟೊಂದು ಗಾಢವಾಗಿ ನಮ್ಮ ಬದುಕಿನಲ್ಲಿ ಬೇರೂರಿದ್ದ ನಿಮ್ಮನ್ನು ಮರೆಯಲಿ ಹ್ಯಾಂಗ ಎಂದು ಕೇಳಬೇಕಾಗುತ್ತದೆ.
ಈಗ ನಿಮ್ಮ ಜಾಗವನ್ನು ಬೇರೆಯವರು ಆಕ್ರಮಿಸಿದ್ದಾರೆ. ಆದರೆ ಅವರ ಬಗ್ಗೆ ಜನರಿಗೆ ಅಷ್ಟೊಂದು ಆಸಕ್ತಿ ಇಲ್ಲ. ಏಕೆಂದರೆ ನೀವು ಅಷ್ಟೊಂದು ಹಾಸುಹೊಕ್ಕಾಗಿದ್ದಿರಿ ನಮ್ಮ ಜೀವನದಲ್ಲಿ. ಹಳಬರನ್ನು ಮರೆಯುವುದು ತೀರಾ ಕಷ್ಟವಾಗುತ್ತದೆ ಅಲ್ಲವೇ? ನಾವು ಹುಟ್ಟಿದಾಗಿನಿಂದ ನಿಮ್ಮನ್ನು ನೋಡುತ್ತಲೇ ಬೆಳೆದೆವು. ನಿಮ್ಮನ್ನು ಅಪ್ಪಿಕೊಂಡೆವು, ಒಪ್ಪಿಕೊಂಡೆವು. ಆದರೆ ಒಂದು ವರ್ಷದ ಹಿಂದೆ ರಾತ್ರಿ ಬೆಳಗಾಗುವುದರೊಳಗೆ ನೀವು ಹೊರಟುಹೋದಿರಿ. ನೀವು ಹೋದ ನಂತರ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಿಮ್ಮ ಜಾಗದಲ್ಲಿ ಬೇರೆ ಯಾರನ್ನು ಕಾಣಲಿ ಅಥವಾ ಹುಡುಕಲಿ? ನೀವಿದ್ದಾಗ ನಿಮ್ಮನ್ನು ಇಟ್ಟು ಆರಾಧಿಸಿದ್ದವರು ಯಾವಾಗ ನಿಮ್ಮನ್ನು ಕೈಬಿಡಲಾಯಿತೋ ಆ ಕ್ಷಣದಿಂದ ನಿಮ್ಮನ್ನು ಹೊರಗಟ್ಟಲಾರಂಭಿಸಿದ್ದು ನಿಮಗೆ ನೆನೆಪಿರಬಹುದು.
ಎಷ್ಟೋ ಜನರು ಇಂದಿಗೂ ನಿಮ್ಮನ್ನು ಇಟ್ಟುಕೊಂಡು ಏನೂ ಮಾಡಲಾಗದೆ ದೇವರ ಕಾಣಿಕೆ ಡಬ್ಬಿಗಳಿಗೆ ತುರುಕುತ್ತಿದ್ದಾರೆ. ಕೆಲವರಂತೂ ನಿಮ್ಮನ್ನು ಹೊರಕಳುಹಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ನಿಮಗೆ ಇನ್ನು ಜೀವವಿಲ್ಲ, ಕಿಮ್ಮತ್ತಿಲ್ಲ ಎಂದು ಗೊತ್ತಾದೊಡನೆಯೇ ಎಷ್ಟೋ ಜನರು ಬ್ಯಾಂಕ್ ಖಾತೆಗೆ ನಿಮ್ಮನ್ನು ಕಳುಹಿಸಿದರು. ಕೆಲವೆಡೆ ನಿಮ್ಮನ್ನು ಸುಟ್ಟು ಹಾಕಿದ್ದೂ ಇದೆ. ಮತ್ತೆ ಕೆಲವೆಡೆ ಕಸದ ರಾಶಿಯಲ್ಲಿ ಗಂಟು ಕಟ್ಟಿ ಬಿಸಾಡಿದ್ದರು. ನಮ್ಮ ಮಕ್ಕಳು ಅದನ್ನು ಹೆಕ್ಕಿಕೊಂಡು ಬಂದಿದ್ದರು. ಪಾಪ ಅವರಿಗೇನು ಗೊತ್ತು, ಆನಂತರ ಪಾಲಕರು ಬೈದರೆಂದು ತಮ್ಮೊಂದಿಗೆ ಆಟವಾಡಲು ಬಳಸಿಕೊಂಡರು. ಇನ್ನೂ ಹಲವರ ಮನೆಯಲ್ಲಿ ನಿಮಗೆ ಭದ್ರ ಸ್ಥಾನ ಇದೆ ಎಂಬ ಮಾಹಿತಿ ಇದೆ. ಅವರು ನಿಮ್ಮನ್ನು ಹೇಗೆ ಹೊರಕಳುಹಿಸಲಿ ಎಂದು ಚಿಂತಿಸುತ್ತಿದ್ದಾರೆ ನೆನೆಪಿರಲಿ.
  ಸದ್ಯ ನಿಮ್ಮ ಬಗ್ಗೆ ಆಲೋಚನೆ ಕಡಿಮೆ ಆಗಿದೆ. ಏಕೆಂದರೆ ವರ್ಷವಾಯಿತಲ್ಲ. ದಿನಗಳೆದಂತೆ ನೆನೆಪಿನಿಂದ ಮಾಸುವುದು ಜಾಸ್ತಿ ಅಲ್ಲವೇ? ಅದರಲ್ಲೂ ನಮ್ಮ ಜನರ ಬಗ್ಗೆ ನಿನಗೆ ಗೊತ್ತೇ ಇದೆಯಲ್ಲ, ನಾಳೆ ಹೊಸ ವಿಚಾರ ಬಂತೆಂದರೆ ಇಂದಿನದನ್ನು ಮರೆತೇ ಬಿಡುತ್ತಾರೆ.
ಆದರೆ ಅತಿ ಹೆಚ್ಚು ದಿನ ನೆನೆಪಿನಲ್ಲಿ ಉಳಿವವರು ನೀವಿಬ್ಬರಾಗಿದ್ದೀರಿ. ನೀವು ಹೋದ ಬಗ್ಗೆ ಇಲ್ಲೆಲ್ಲಾ ವಾದ, ವಿವಾದ, ಚರ್ಚೆ, ಸಂವಾದ ಎಲ್ಲ ನಡೆದವು. ಕೆಲವರು ನೀವು ಹೋದರೂ ಏನೂ ತೊಂದರೆಯಾಗಿಲ್ಲ ಎಂದರೆ ಇನ್ನೂ ಕೆಲವರು ಹೋಗಬಾರದಿತ್ತು ಎನ್ನುತ್ತ ಸ್ಮರಿಸಿದರು. ನಿಮ್ಮನ್ನು ಕಳಕೊಂಡ ನಮ್ಮಂತವರು ಮಾತ್ರ ಅನುಭವಿಸಿದ ಪಾಡು ಮರೆಯಲಾಗದ್ದು.
ಏನೇ ಇರಲಿ, ಅಂತೂ ನಮ್ಮನ್ನಗಲಿ ಒಂದು ವರ್ಷವಾಗಿಯೇ ಬಿಟ್ಟಿತು. ಅದಕ್ಕಾಗಿಯೇ ಹೇಳಿದೆ, ಮರೆಯಲಿ ಹ್ಯಾಂಗ ಎಂದು. ಇನ್ನೊಂದು ಹಾಡಿನ ಸಾಲು ನಿನ್ನ ಬಗ್ಗೆ  ನೆನಪಾಗುತ್ತಿದೆ. ಕೊನೆಯದಾಗಿ ಹೇಳಿ ವಿರಮಿಸ್ತೀನಿ ಕೇಳಿಸಿಕೊ.
 ಎಲ್ಲಿ ಮರೆಯಾದೆ...., ನೀನು ಏಕೆ ದೂರಾದೆ...?
..................................