Thursday, 1 June 2017

ಎರಡನೆಯ ಹಂತದಲ್ಲಿ  ಆಗಮಿಸಿದ್ದು 
ಕೇವಲ 6 ಸರ್ಕಾರಿ ಸಿಟಿ ಬಸ್‌ಗಳು ! 

ಪಾಸ್ ಸೌಲಭ್ಯ ಕಲ್ಪಿಸಿಲ್ಲ
ಇಲ್ಲಿಯವರೆಗೂ ವಿದ್ಯಾರ್ಥಿಗಳಿಗಾಗಲಿ, ನಾಗರಿಕರಿಗಾಗಲಿ ಪಾಸ್ ಸೌಲಭ್ಯವನ್ನು ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ಕಲ್ಪಿಸಿಲ್ಲ. ಪೂರ್ಣ ಪ್ರಮಾಣದಲ್ಲಿ ಬಸ್‌ಗಳು ರಸ್ತೆಗಿಳಿದ ನಂತರ ಪಾಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ. ಮೂಲಗಳು ಹೇಳುತ್ತ್ತಿವೆ. ಸರ್ಕಾರಿ ಸಿಟಿ ಬಸ್‌ಗಳ ಸೇವೆ ಕಲ್ಪಿಸಿ, ಪಾಸ್ ಸೌಲಭ್ಯ ನೀಡಿ ಎಂದು ನಾಗರಿಕರೇ ಆಗ್ರಹಿಸುತ್ತಿದ್ದಾರೆ. ಆದರೆ ಕೆ.ಎಸ್.ಆರ್.ಟಿ.ಸಿ. ಹಾಗೂ ಜಿಲ್ಲಾಡಳಿತಕ್ಕೆ ಈ ಬಗ್ಗೆ ಯಾವುದೇ ಆಸಕ್ತಿಯಿಲ್ಲದಂತೆ ಕಾಣುತ್ತಿದೆ. ಬಸ್ ಓಡಿಸಿ ಎಂದರೂ ಕೆಲವು ಬಡಾವಣೆಗೆ ಓಡಿಸುತ್ತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಿವಮೊಗ್ಗ,  : ಎರಡನೇ ಹಂತದಲ್ಲಿ ಜೆನರ್ಮ್ ಯೋಜನೆಯಡಿ  ಶಿವಮೊಗ್ಗ ನಗರಕ್ಕೆ ಮತ್ತೆ 20 ಬಸ್‌ಗಳು ಮಂಜೂರಾಗಲಿವೆ ಎಂದು ಸಾರಿಗೆ ಇಲಾಖೆಯ ಮೂಲಗಳು ಈ ಹಿಂದೆ ಹೇಳಿದ್ದವಾದರೂ ಪ್ರಸ್ತುತ ನಗರಕ್ಕೆ ಆಗಮಿಸಿರುವ ಬಸ್‌ಗಳ ಸಂಖ್ಯೆ ಕೇವಲ ಆರು ಮಾತ್ರ. ಇದನ್ನು ಕೆ.ಎಸ್.ಆರ್.ಟಿ.ಸಿ. ಮೂಲಗಳು ಕೂಡ ಖಚಿತಪಡಿಸಿವೆ.
ಹೊಸದಾಗಿ ಆಗಮಿಸಿರುವ ಬಸ್‌ಗಳಿಗೆ ಚಾಲಕ ಹಾಗೂ ನಿರ್ವಾಹಕರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಹೊಸ ಬಸ್‌ಗಳನ್ನು ಸಂಚಾರಕ್ಕೆ ಬಿಡಲಾಗುವುದು ಎಂದು ಮೂಲಗಳು ಹೇಳುತ್ತವೆ.
ಸರ್ಕಾರಿ ಸಿಟಿ ಬಸ್‌ಗಳ ಸಂಚಾರ ಕೂಡ ಆರಂಭವಾಗಿದೆ. ಶಿವಮೊಗ್ಗಕ್ಕೆ ಮಂಜೂರಾಗಿದ್ದ 65 ಸಿಟಿ ಬಸ್‌ಗಳಲ್ಲಿ ಪ್ರಥಮ ಹಂತದಲ್ಲಿ 20 ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ಕೂಡ ತೋರಿಸಲಾಗಿದೆ.  ಕೇವಲ 10 ಬಸ್‌ಗಳು ಮಾತ್ರ ನಗರದ ವಿವಿಧ ಬಡಾವಣೆಯಲ್ಲಿ ಸಂಚರಿಸುತ್ತಿವೆ.  ಬಸ್‌ಗಳ ಚಾಸ್ಸಿ ಉದ್ದವಿದೆ ಎಂಬ ಕಾರಣಕ್ಕೆ ಉಳಿದ 10 ಬಸ್‌ಗಳನ್ನು ಶಿವಮೊಗ್ಗ-ಭದ್ರಾವತಿ ನಗರಗಳ ನಡುವೆ ಓಡಿಸಲಾಗುತ್ತಿದೆ.
   ನಗರಕ್ಕೆ ಸರ್ಕಾರಿ ಸಿಟಿ ಬಸ್ ಮಂಜೂರು ಆದ ನಂತರ  ಸರ್ಕಾರದ ಹಂತದಲ್ಲಿ ಲಾಬಿ ನಡೆಸಿ, ಶತಾಯಗತಾಯ ಸರ್ಕಾರಿ ಸಿಟಿ ಬಸ್‌ಗಳು ಓಡದಂತೆ ಮಾಡುವ ಹುನ್ನಾರ ನಡೆಸಿದ್ದ ಆರೋಪಗಳು ಈ ಹಿಂದೆ ಕೇಳಿಬಂದಿದ್ದವು. ಇದು ನಿಜವೆಂಬಂತೆ ಸರ್ಕಾರಿ ಸಿಟಿ ಬಸ್ ಓಡಿಸಲು ಆಡಳಿತ ವ್ಯವಸ್ಥೆ ಯಾವುದೇ ಕ್ರಮಕೈಗೊಳ್ಳದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿತ್ತು. ಸರ್ಕಾರಿ ಸಿಟಿ ಬಸ್‌ಗೆ ಪ್ರತ್ಯೇಕ ಬಸ್ ಟರ್ಮಿನಲ್, ವರ್ಕ್‌ಶಾಪ್ ಹಾಗೂ ಡಿಪೋ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾದರೂ ಅಧಿಕಾರಿಗಳು ಅನುದಾನದ ಸದ್ಬಳಕೆಗೆ ಮುಂದಾಗಿರಲಿಲ್ಲ. ಇದರಿಂದ ಅನುದಾನ ವಾಪಾಸ್ ಹೋಗುವಂತಾಗಿತ್ತು. ಮತ್ತೊಂದೆಡೆ ಸಂತೆಕಡೂರು ಗ್ರಾಮದಲ್ಲಿ ಸರ್ಕಾರಿ ಸಿಟಿ ಬಸ್‌ಗೆ 8 ಎಕರೆ ಸರ್ಕಾರಿ ಭೂಮಿಯನ್ನು ಜಿಲ್ಲಾಡಳಿತ ರಿಯಾಯ್ತಿ ಮೊತ್ತದಲ್ಲಿ ಮಂಜೂರು ಮಾಡಿತ್ತು.
ಜಿಲ್ಲಾಡಳಿತ ನಿಗದಿ ಮಾಡಿದ್ದ ಅತ್ಯಲ್ಪ ಮೊತ್ತ ಪಾವತಿಸಿ ಜಮೀನು ವಶಕ್ಕೆ ಪಡೆಯಲು ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಮುಂದಾಗಿರಲಿಲ್ಲ. ಯೋಜನೆ ಹಳ್ಳ ಹಿಡಿಯುತ್ತಿರುವುದರ ಮಾಹಿತಿ ಅರಿತ ಕೆಲ ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸಿದ್ದವು. ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ್ಯವಹಿಸುತ್ತಿರುವ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ನಾಗರಿಕರ ಒತ್ತಡಕ್ಕೆ ಮಣಿದ ಸರ್ಕಾರವು ಕೊನೆಗೂ ಶಿವಮೊಗ್ಗ ನಗರದಲ್ಲಿ ಸರ್ಕಾರಿ ಸಿಟಿ ಬಸ್ ಸಂಚಾರಕ್ಕೆ ಆದೇಶ ಹೊರಡಿಸಿತ್ತು. ಪ್ರಥಮ ಹಂತವಾಗಿ 20 ಬಸ್ ಸಂಚಾರಕ್ಕೆ ಅನುಮತಿ ನೀಡಿತ್ತು.
ಖಾಸಗಿ ಲಾಬಿಗೆ ಮಣಿದರೇ?
  ಪ್ರಸ್ತುತ ಸರ್ಕಾರಿ ಸಿಟಿ ಬಸ್‌ಗಳ ಸ್ಥಿತಿಗತಿ ಗಮನಿಸಿದರೆ ಇಡೀ ಯೋಜನೆ ಹಳ್ಳ ಹಿಡಿಯುವಂತೆ ಮಾಡುವ ವ್ಯವಸ್ಥಿತ ಹುನ್ನಾರಗಳು ನಡೆಯುತ್ತಿರುವ ಅನುಮಾನಗಳು ನಾಗರಿಕ ವಲಯದಲ್ಲಿ ವ್ಯಕ್ತವಾಗಲಾರಂಭಿಸಿವೆ. 65 ಬಸ್‌ಗಳು ಶಿವಮೊಗ್ಗಕ್ಕೆ ಬಿಡುಗಡೆಯಾಗಲು ಎರಡು ವರ್ಷವಾದರೂ ಸರಿ, ಅವು ಬರಲೇಬೇಕು. ಆದರೆ ಈಗ ಮಂಜೂರಾಗಿ ಎರಡು ವರ್ಷ ಕಳೆದಿದೆ.  ನಾಲ್ಕಾರು ತಿಂಗಳಿಗೆ 8-10 ಬಸ್ ಬರುತ್ತಿವೆ. ಇದು ಖಾಸಗಿ ಲಾಬಿಯ ಪ್ರಭಾವವನ್ನು ಎತ್ತಿತೋರಿಸುತ್ತಿದೆ. ಖಾಸಗಿ ಬಸ್ ಮಾಲಕರು ಎಷ್ಟು ಪ್ರಭಾವಿಗಳೆಂದರೆ ಈ ಯೋಜನೆ ಮಂಜೂರಾದ ಕ್ಷಣವೇ ಅದನ್ನು ಸ್ಥಗಿತಗೊಳಿಸಲು ಯತ್ನಿಸಿದರು. ಅದು ಸಾಧ್ಯವಾಗದಾದಾಗ ಬಸ್‌ಗಳು ಬಾರದಂತೆ ವಿಳಂಬ ಮಾಡಿಸುವಲ್ಲಿ ಕೈಚಳಕ  ತೋರಿಸಿದ್ದಾರೆ.
ಇದಕ್ಕೆಲ್ಲಾ ಜನಪ್ರತಿನಿಧಿಗಳ, ಅಧಿಕಾರಿಗಳ ಸಹಭಾಗಿತ್ವ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಖಾಸಗಿಯವರು ನಗರ ಸಾರಿಗೆ ತಮ್ಮ ಕೈಯಲ್ಲಿ ಇರಬೇಕೆಂದು ಬಯಸುತ್ತಿದ್ದಾರೆ. ಇಲ್ಲಿ  ಪ್ರಯಾಣಿಕರು ಈ ಬಸ್‌ನಲ್ಲಿ  ಮತ್ತು ಬಸ್‌ನಿಂದ ಅನುಭವಿಸುತ್ತಿರುವ ಕಿರುಕುಳ, ತೊಂದರೆ, ಸಿಬ್ಬಂದಿಗಳ ಬೇಜವಾಬ್ದಾರಿ ಮತ್ತು ಉಡಾಫೆ ವರ್ತನೆ ಗಮನಿಸಿದರೆ ಯಾರಿಗೂ ಈ ಖಾಸಗಿ ಬಸ್ ಬೇಡ ಎಂದೆನಿಸದೆ ಇರಲಾರದು. ಕಾನೂನು ಇರುವುದೇ ಗಾಳಿಗೆ ತೂರಲು ಎನ್ನುವುದು ಇವರ ನಿಲುವು. ಇವನ್ನೆಲ್ಲ ಮಟ್ಟ ಹಾಕಬೇಕಾದರೆ ಶಾಸಕರು ಮೊದಲು ಜೆನರ್ಮ್ ಸಂಚಾರಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಬೇಕಿತ್ತು ಎನ್ನುವುದು ಪ್ರಯಾಣಿಕರ ವಾದ. ಎಷ್ಟೋ ಬಡಾವಣೆಗಳು ತಮ್ಮಲ್ಲಿಗೆ ಜೆನರ್ಮ್ ಬಸ್  ಬಿಡಿ ಎಂದು ಡಿಸಿಗೆ, ಶಾಸಕರಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಅವರ‌್ಯಾರೂ ಇದನ್ನು ಗಮನಿಸುತ್ತಿಲ್ಲ.
ತಾವು ಕಳೆದುಕೊಳ್ಳುವುದು ಏನೂ ಇಲ್ಲವಾದರೂ ಸರ್ಕಾರಿ ಸವಲತ್ತನ್ನು ಜನರಿಗೆ ನೀಡಲು ಹಿಂದೇಟು ಏಕೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಶಾಸಕರು ಕೊಡಬೆಕಿದೆ. ಇಲ್ಲವಾದಲ್ಲಿ   ಖಾಸಗಿಯವರ ಲಾಬಿಗೆ ಮಣಿದಿದ್ದಾರೆಂಬ ಬಲವಾದ ಆರೋಪವನ್ನು ಹೊರಬೇಕಾಗುತ್ತದೆ. . ಮತದಾರರ ನಿರೀಕ್ಷೆ ಹುಸಿ ಮಾಡದೆ ಲಾಬಿಗೆ ಮಣಿಯದೆ  ಅವಶ್ಯ ಇರುವ ಮತ್ತು ನಗರದಿಂದ ಹೊರಭಾಗದಲ್ಲಿರುವ ಬಡಾವಣೆಗಳಿಗೆ ಜೆನರ್ಮ್ ಬಸ್ ಸೌಕರ್ಯ ಕಲ್ಪಿಸಬೇಕೆನ್ನುವುದು ಜನರ ಆಗ್ರಹ.
  
-------------------------------

Tuesday, 30 May 2017

ಪೊಲೀಸರಿಂದ ಲರ್ಕಿಂಗ್ ಬೀಟ್, ಗುಡ್ ಮಾರ್ನಿಂಗ್ ಬೀಟ್ 
 ಅಪರಾಧ ಕೃತ್ಯ ತಡೆಗೆ ಪೊಲೀಸ್ ಇಲಾಖೆಯಿಂದ ವಿನೂತನ ಹೆಜ್ಜೆ



ಶಿವಮೊಗ್ಗ : ರಾತ್ರಿ ಮತ್ತು ಬೆಳಗಿನ ಜಾವ ನಡೆಯುವ ಅಪರಾಧ ಕೃತ್ಯಗಳನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆಯು ನಗರದಲ್ಲಿ ’ಲರ್ಕಿಂಗ್ ಬೀಟ್’ ವ್ಯವಸ್ಥೆಯನ್ನು ಈಗಾಗಲೆ ಜಾರಿಗೊಳಿಸಿದ್ದು, ಇನ್ನಷ್ಟು  ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಿದೆ.
 ಪೊಲೀಸ್ ಇಲಾಖೆಯಲ್ಲಿರುವ ಗಸ್ತು ವ್ಯವಸ್ಥೆಗಳಲ್ಲಿ ’ಲರ್ಕಿಂಗ್ ಬೀಟ್’ ಕೂಡ ಒಂದಾಗಿದೆ. ಈ ಬೀಟ್ ವ್ಯವಸ್ಥೆಯಲ್ಲಿ ಪೊಲೀಸರು ರಾತ್ರಿ 12 ಗಂಟೆಯಿಂದ ಮುಂಜಾನೆಯವರೆಗೂ ಆಯಕಟ್ಟಿನ ಪ್ರದೇಶಗಳಲ್ಲಿ ಮಫ್ತಿ ಬಟ್ಟೆ ತೊಟ್ಟು ಕಾರ್ಯನಿರ್ವಹಣೆ ಮಾಡುತ್ತಾರೆ. ಕಳ್ಳಕಾಕರಿಗೆ ಇವರು ಪೊಲೀಸರೆಂಬ ಅನುಮಾನಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಾರೆ. ಇದನ್ನು ಇಂಗ್ಲಿಷ್‌ನಲ್ಲಿ ’ಲರ್ಕಿಂಗ್ ಬೀಟ್’ ಎಂದು ಕರೆಯಲಾಗುತ್ತದೆ.
’ಪೊಲೀಸರು ಸಮವಸ್ತ್ರ ತೊಟ್ಟು ಓಡಾಡುವುದನ್ನು ಕಳ್ಳಕಾಕರು-ಕಿಡಿಗೇಡಿಗಳು ಗಮನಿಸುತ್ತಾರೆ. ಪೊಲೀಸರು ಹೋಗುವವರಗೆ ಕಾದು ನಂತರ ದುಷ್ಕೃತ್ಯ ನಡೆಸಿದ ಉದಾಹರಣೆಗಳು ಸಾಕಷ್ಟಿವೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಬೀಟ್‌ಗಳಲ್ಲಿ ’ಲರ್ಕಿಂಗ್ ಬೀಟ್’ ಅತ್ಯಂತ ಮಹತ್ವದ್ದಾಗಿದೆ. ಪೊಲೀಸರಿಲ್ಲವೆಂಬ ಕಾರಣದಿಂದ ಕಳ್ಳಕಾಕರು, ದುಷ್ಕರ್ಮಿಗಳು ದುಷ್ಕೃತ್ಯ ನಡೆಸಲು ಮುಂದಾಗುತ್ತಾರೆ. ಇಂತಹ ವೇಳೆ ಮಫ್ತಿ ಬಟ್ಟೆ ತೊಟ್ಟು, ಪೊಲೀಸರೆಂಬ ಅನುಮಾನ ಬಾರದ ರೀತಿಯಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ತಕ್ಷಣವೇ ಕಿಡಿಗೇಡಿಗಳ ದುಷ್ಕೃತ್ಯ ಪತ್ತೆ ಹಚ್ಚಿ ತಡೆಗಟ್ಟುತ್ತಾರೆ. ಜೊತೆಗೆ ದುಷ್ಕರ್ಮಿಗಳನ್ನು ಸುಲಭವಾಗಿ ಸೆರೆ ಹಿಡಿಯುತ್ತಾರೆ.
ಇದರಿಂದ ಕಿಡಿಗೇಡಿಗಳು ಭಯಭೀತರಾಗಿ ದುಷ್ಕೃತ್ಯ ನಡೆಸಲು ಹಿಂಜರಿಯುತ್ತಾರೆ. ರಾತ್ರಿ ವೇಳೆ ರಸ್ತೆಗಿಳಿಯಲು ಅಂಜುತ್ತಾರೆ. ಇದರಿಂದ ಸಾಮಾನ್ಯವಾಗಿ ರಾತ್ರಿ ವೇಳೆ ನಡೆಯುವ ಅಪರಾಧ ಕೃತ್ಯಗಳು ಇಳಿಮುಖವಾಗುತ್ತವೆ’ ಎಂದು ಹಿರಿಯ  ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತ್ತಾರೆ.
’ಶಿವಮೊಗ್ಗ ನಗರದ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ’ಲರ್ಕಿಂಗ್ ಬೀಟ್’ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದೆ. ಸಿಬ್ಬಂದಿಗಳ ಕೊರತೆಯ ಹಿನ್ನೆಲೆಯಲ್ಲಿ ಕೆಲವು ಠಾಣೆಗಳಲ್ಲಿ ಈ ಬೀಟ್ ವ್ಯವಸ್ಥೆಗೆ ನಿಯೋಜನೆ ಮಾಡಿರುವ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಿದೆ. ಉಳಿದಂತೆ ಪ್ರಮುಖ ಠಾಣಾ ವ್ಯಾಪ್ತಿಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಈ ಬೀಟ್ ವ್ಯವಸ್ಥೆಗೆ ತೊಡಗಿಸಲಾಗಿದೆ’ ಎಂದು ಅವರು ವಿವರಿಸುತ್ತಾರೆ.
ಇಳಿಮುಖ: ಈ ಬೀಟ್ ವ್ಯವಸ್ಥೆಯಿಂದ ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ತಡರಾತ್ರಿಯ ನಂತರ ನಡೆಯುತ್ತಿದ್ದ ಅಪರಾಧ ಚಟುವಟಿಕೆಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ. ಯಾವ ರೂಪದಲ್ಲಿ, ಎಲ್ಲಿ ಪೊಲೀಸರು ಬರುತ್ತಾರೋ ಎಂಬ ಆತಂಕದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ದುಷ್ಕೃತ್ಯ ನಡೆಸಲು ಹಿಂಜರಿಯುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ಹೇಳುತ್ತವೆ.
’ಗುಡ್ ಮಾರ್ನಿಂಗ್ ಬೀಟ್:
  ಮುಂಜಾನೆಯ ವೇಳೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯದಲ್ಲಿರುವುದಿಲ್ಲ ಎಂಬುವುದನ್ನರಿತು  ಕಳ್ಳರುಮ ಕಿಡಿಗೇಡಿಗಳು ತಮ್ಮ ದುಷ್ಕೃತ್ಯಗಳಿಗೆ ಮುಂಜಾನೆಯ ಸಮಯವನ್ನೇ ಆಯ್ದುಕೊಳ್ಳುತ್ತಿದ್ದರು. ಮುಂಜಾನೆಯ ವೇಳೆಯೇ ಕೆಲವೊಮ್ಮೆ ಹೆಚ್ಚಿನ ಅಪರಾಧ ಕೃತ್ಯಗಳು ವರದಿಯಾಗುತ್ತಿದ್ದವು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆಯು ’ಗುಡ್ ಮಾರ್ನಿಂಗ್’ ಬೀಟ್ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಿದೆ. ಮುಂಜಾನೆ 4 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಪೊಲೀಸರು ನಗರಾದ್ಯಂತ ಗಸ್ತು ನಡೆಸುತ್ತಾರೆ. ಪೊಲೀಸರ ಗಸ್ತು ಹಿನ್ನೆಲೆಯಲ್ಲಿ ಮುಂಜಾನೆಯ ವೇಳೆ ನಡೆಯುತ್ತಿದ್ದ ಅಪರಾಧ ಕೃತ್ಯಗಳ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ.

’ಪೊಲೀಸ್ ಇಲಾಖೆಯಲ್ಲಿ ನಾನಾ ರೀತಿಯ ಗಸ್ತು ವ್ಯವಸ್ಥೆಗಳಿದ್ದು, ಇದರಲ್ಲಿ ’ಲರ್ಕಿಂಗ್ ಬೀಟ್’ ಕೂಡ ಒಂದಾಗಿದೆ. ಈ ಬೀಟ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ತಡರಾತ್ರಿಯ ನಿರ್ದಿಷ್ಟ ಸಮಯಗಳಂದು ಪೊಲೀಸರು ಮಫ್ತಿ ಬಟ್ಟೆಯಲ್ಲಿ ಬೀಡುಬಿಟ್ಟು ಕಿಡಿಗೇಡಿಗಳ ಚಲನವಲನಗಳ ಮೇಲೆ ನಿಗಾ ಇಡಲಿದ್ದಾರೆ. ಈ ಬೀಟ್ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಡರಾತ್ರಿಯ ನಂತರ ನಡೆಯುತ್ತಿದ್ದ ಅಪರಾಧ ಕೃತ್ಯಗಳಲ್ಲಿ ಗಣನೀಯ ಇಳಿಮುಖ ಕಂಡುಬಂದಿದೆ.
-ಡಿವೈಎಸ್‌ಪಿ ಮಂಜುನಾಥ್ ಶೆಟ್ಟಿ.
------------------------------

Friday, 26 May 2017



 ಸ್ವಂತ ವೆಚ್ಚದಲ್ಲಿ ಸಿಮೆಂಟ್ ರಿಂಗ್ ನೀಡಿದ ಪರಿಸರ ಹೋರಾಟಗಾರ



ಶಿವಮೊಗ್ಗ,  : ಪರಿಸರ ಸಂರಕ್ಷಣೆಯ ಪರವಾಗಿ ಹೋರಾಟ ನಡೆಸುವ ಶಿವಮೊಗ್ಗ ನಗರದ ಪರಿಸರ ಹೋರಾಟಗಾರರೊಬ್ಬರು, ಗಿಡ ಬೆಳೆಸಲು ಹಾಗೂ ಸಂರಕ್ಷಿಸಲು ತಮ್ಮ ಸ್ವಂತ ವೆಚ್ಚದಲ್ಲಿಯೇ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರೋರ್ವರಿಗೆ ಸಿಮೆಂಟ್ ರಿಂಗ್‌ಗಳನ್ನು ಖರೀದಿಸಿಕೊಟ್ಟಿದ್ದಾರೆ. ಈ ಮೂಲಕ ಪರಿಸರ ಕಾಳಜಿ ಮೆರೆದು, ಇತರರಿಗೆ ಮಾದರಿಯಾಗಿದ್ದಾರೆ. ಜೊತೆಗೆ ಆಡಳಿತ ವ್ಯವಸ್ಥೆಯ ಕಣ್ತೆರೆಸುವ ಕೆಲಸ ಕೂಡ ಮಾಡಿದ್ದಾರೆ.
 ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಲಕ್ಷಾಂತರ ರೂ. ವೆಚ್ಚದಲ್ಲಿ ಫುಟ್‌ಪಾತ್ ಅಭಿವೃದ್ದಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ಆದರೆ ಗಿಡ ನೆಡಲು ಜಾಗ ಬಿಡದೆ, ಸಂಪೂರ್ಣವಾಗಿ ಫುಟ್‌ಪಾತ್‌ಗೆ ಇಂಟರ್‌ಲಾಕ್ ಟೈಲ್ಸ್ ಅಳವಡಿಸುವ ಕಾರ್ಯವನ್ನು ಗುತ್ತಿಗೆದಾರರು ನಡೆಸುತ್ತಿದ್ದರು. ಇದನ್ನು ಗಮನಿಸಿದ ಪರಿಸರ ಹೋರಾಟಗಾರ ಪರಿಸರ ರಮೇಶ್, ಕಾಮಗಾರಿ ನಿರ್ವಹಣೆ ಮಾಡುತ್ತಿದ್ದ ಗುತ್ತಿಗೆದಾರರ ಕಡೆಯವರೊಂದಿಗೆ ಮಾತನಾಡಿದ್ದಾರೆ. ಈ ಸ್ಥಳದಲ್ಲಿ ಇಂಟರ್‌ಲಾಕ್ ಟೈಲ್ಸ್ ಅಳವಡಿಸುವುದಕ್ಕೂ ಮುನ್ನ, ಗಿಡ ನೆಡಲು ಸಿಮೆಂಟ್ ರಿಂಗ್‌ಗಳನ್ನು ಅಳವಡಿಸಿ ಎಂದು ಮನವಿ ಮಾಡಿದ್ದಾರೆ.
ಆದರೆ ಇದಕ್ಕೆ ಗುತ್ತಿಗೆದಾರನ ಕಡೆಯವರು ಈ ಕುರಿತಂತೆ ತಮಗೆ ಅಧಿಕಾರಿಗಳಿಂದ ಯಾವುದೇ ಸೂಚನೆಯಿಲ್ಲ. ಹಾಗೆಯೇ ತಮ್ಮ ಬಳಿ ಸಿಮೆಂಟ್ ರಿಂಗ್‌ಗಳೂ ಇಲ್ಲವೆಂದು ಹೇಳಿದ್ದಾರೆ. ತತಕ್ಷಣವೇ ಪರಿಸರ ರಮೇಶ್ ಸಾವಿರಾರು ರೂ. ವೆಚ್ಚ ಮಾಡಿ, ಸಿಮೆಂಟ್ ರಿಂಗ್‌ಗಳನ್ನು ಖರೀದಿಸಿ ವಾಹನವೊಂದರಲ್ಲಿ ಕೆಲಸದ ಸ್ಥಳಕ್ಕೆ ತಂದಿದ್ದಾರೆ. ತದನಂತರ ಉಲ್ಟಾ ಹೊಡೆದ ಗುತ್ತಿಗೆದಾರನ ಕಡೆಯವರು, ಈ ರಿಂಗ್ ಅಳವಡಿಸಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳ ಅನುಮತಿ ಬೇಕೆಂದು ಮಾರುತ್ತರ ನೀಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಪರಿಸರ ರಮೇಶ್ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಅಮ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇವರ ಕಾಳಜಿಗೆ ಅಪರ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿ ಕೂಡಲೇ ಪಿಡಬ್ಲ್ಯೂಡಿ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಸಿಮೆಂಟ್ ರಿಂಗ್ ಅಳವಡಿಸಿದ ನಂತರ ಇಂಟರ್‌ಲಾಕ್ ಟೈಲ್ಸ್ ಅಳವಡಿಕೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದರಂತೆ ಗುತ್ತಿಗೆದಾರನು ಸಿಮೆಂಟ್ ರಿಂಗ್ ಅಳವಡಿಕೆ ಮಾಡಿದ್ದಾರೆ.
’ನಗರದ ಫುಟ್‌ಪಾತ್‌ಗಳ ಅಭಿವೃದ್ಧಿ ವೇಳೆ ಕಡ್ಡಾಯವಾಗಿ ಗಿಡಗಳನ್ನು ನೆಡಲು ಸಿಮೆಂಟ್ ರಿಂಗ್‌ಗಳನ್ನು ಅಳವಡಿಸಬೇಕು. ಇದರಿಂದ ಗಿಡಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ. ಗಿಡ ಬೆಳೆಸಲು ಫುಟ್‌ಪಾತ್‌ಗಳನ್ನು ಹಾಳಾಗದಂತೆ ನೋಡಿಕೊಳ್ಳಲು ಸಾಧ್ಯವಾಗಲಿದೆ. ಈ ರೀತಿಯ ಅಭಿವೃದ್ದಿ ಯೋಜನೆಗಳ ಅನುಷ್ಠಾನಕ್ಕೂ ಮುನ್ನ ಸಂಬಂಧಿಸಿದ ಇಲಾಖೆಗಳು ಗಿಡ-ಮರಗಳ ಸಂರಕ್ಷಣೆಗೆ ಟೆಂಡರ್‌ನಲ್ಲಿಯೇ ಪ್ರತ್ಯೇಕ ಅನುದಾನ ಮೀಸಲಿಡಬೇಕು. ಪರಿಸರ ಕಾಳಜಿ ಮೆರೆಯಬೇಕು ಎನ್ನುವುದು ಗೊತ್ತಿದ್ದರೂ ಪಿಡಬ್ಲೂಡಿ ಇಲಾಖೆಯವರು ನಿರ್ಲಕ್ಷ್ಯ ವಹಿಸಿದ್ದರು.


ರಸ್ತೆ, ಫುಟ್‌ಪಾತ್ ಅಭಿವೃದ್ಧಿ ವೇಳೆ ಗಿಡ-ಮರಗಳ ಸಂರಕ್ಷಣೆಗೆಂದೇ ಟೆಂಡರ್ ಮೊತ್ತದಲ್ಲಿ ಸೂಕ್ತ ಅನುದಾನವನ್ನು ಮೀಸಲಿಡಬೇಕು. ಇದನ್ನು ಕಡ್ಡಾಯಗೊಳಿಸಬೇಕು. ಅಭಿವೃದ್ದಿಯ ಜೊತೆ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕು. ಇದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂಬುವುದನ್ನು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಬಂಧಿಸಿದ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ಮಾಡಬೇಕು.
- ಪರಿಸರ ರಮೇಶ್ 
---------------------------------------
7 ತಿಂಗಳಲ್ಲಿ 447 ಎಕರೆ ಕೆರೆ ಒತ್ತುವರಿ ತೆರವು
 ದಾಖಲೆ ನಿರ್ಮಿಸಿದ ಶಿವಮೊಗ್ಗ ಜಿಲ್ಲಾಡಳಿತ


ಜಿಲ್ಲಾಡಳಿತದ  ಮಾಹಿತಿಯ ಪ್ರಕಾರ, ಡಾ. ಎಂ. ಲೋಕೇಶ್ ಡಿ.ಸಿ.ಯಾಗಿ ಅಧಿಕಾರ ಸ್ವೀಕರಿಸಿದ ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಪ್ರಸ್ತುತ ಮೇ 22 ರವರೆಗಿನ ಸುಮಾರು 7 ತಿಂಗಳ ಅವಧಿಯಲ್ಲಿ, ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಏಳು ತಾಲೂಕು ವ್ಯಾಪ್ತಿಯ 175 ಪ್ರಕರಣಗಳಿಗೆ ಸಂಬಂಧಿಸಿದಂತೆ 447.38 ಎಕರೆಯಷ್ಟು ಕೆರೆ ಒತ್ತುವರಿ ತೆರವುಗೊಳಿಸಲಾಗಿದೆ. 
ಕೆರೆ ಒತ್ತುವರಿ ತೆರವಿನಲ್ಲಿ ಶಿವಮೊಗ್ಗ ತಾಲೂಕು ಆಡಳಿತ ಮೊದಲ ಸ್ಥಾನದಲ್ಲಿದೆ. 7 ತಿಂಗಳಲ್ಲಿ 23 ಪ್ರಕರಣಗಳಲ್ಲಿ 154.19 ಎಕರೆಯಷ್ಟು ಕೆರೆ ಒತ್ತುವರಿ ತೆರವುಗೊಳಿಸಿ ಇಡೀ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಉಳಿದಂತೆ ಭದ್ರಾವತಿ ತಾಲೂಕು ಆಡಳಿತ ದ್ವಿತೀಯ ಸ್ಥಾನದಲ್ಲಿದ್ದು, 24 ಪ್ರಕರಣಗಳಲ್ಲಿ 147.12 ಎಕರೆಯಷ್ಟು ಕೆರೆ ಒತ್ತುವರಿ ತೆರವುಗೊಳಿಸಿದೆ. 
ಶಿಕಾರಿಪುರ ತಾಲೂಕು ಆಡಳಿತವು 20 ಪ್ರಕರಣಗಳಲ್ಲಿ 51.39 ಎಕರೆ, ಸಾಗರ ತಾಲೂಕು ಆಡಳಿತವು 45 ಪ್ರಕರಣಗಳಲ್ಲಿ 35.63 ಎಕರೆ, ಸೊರಬ ತಾಲೂಕು ಆಡಳಿತವು 18 ಪ್ರಕರಣಗಳಲ್ಲಿ 21.02 ಎಕರೆ, ಹೊಸನಗರ ತಾಲೂಕು ಆಡಳಿತವ 35 ಪ್ರಕರಣಗಳಲ್ಲಿ 25.28 ಎಕರೆ ಹಾಗೂ ತೀರ್ಥಹಳ್ಳಿ ತಾಲೂಕು ಆಡಳಿತವು 10 ಪ್ರಕರಣಗಳಲ್ಲಿ ಕೇವಲ 8.22 ಎಕರೆಯಷ್ಟು ಕೆರೆ ಒತ್ತುವರಿ ತೆರವು ಮಾಡಿದೆ. 

ಶಿವಮೊಗ್ಗ :  ಏಳು ತಿಂಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕುಗಳ ವ್ಯಾಪ್ತಿಯಲ್ಲಿ ಸರಿಸುಮಾರು 447.38 ಎಕರೆಯಷ್ಟು ಕೆರೆ ಒತ್ತುವರಿ ತೆರವುಗೊಳಿಸಿ, ಶಿವಮೊಗ್ಗ ಜಿಲ್ಲಾಡಳಿತ ಸಾರ್ವಜನಿಕ ವಲಯದಲ್ಲಿ ಹೊಸ ದಾಖಲೆ  ಸೃಷ್ಟಿಸಿದೆ. ಇನ್ನುಳಿದಿರುವ ಕೆರೆ ಒತ್ತುವರಿದಾರರು ನಿದ್ದೆಗೆಡುವಂತೆ ಮಾಡಿದೆ. ಸೀಮಿತಾವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಕೆರೆ ಒತ್ತುವರಿ ತೆರವುಗೊಳಿಸಿದ್ದು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಯಾಗಿದೆ.
  ರಾಜ್ಯದಲ್ಲಿ ಅತಿ ಹೆಚ್ಚು ಕೆರೆ ಹೊಂದಿರುವ ಜಿಲ್ಲೆಗಳಲ್ಲಿ ಒಂದಾಗಿರುವ ಶಿವಮೊಗ್ಗದಲ್ಲಿ  ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಕೆರೆಗಳ ಒತ್ತುವರಿಯಾಗಿತ್ತು. ಒತ್ತುವರಿಯಾದದ್ದು ಬಹುತೇಕ ಪ್ರಭಾವಿಗಳಿಂದಲೇ ಎನ್ನುವುದು ಇನ್ನೊಂದು ವಿಶೇಷ. ಕಾನೂನುಬಾಹಿರ ವ್ಯವಹಾರ ನಡೆಸುವ ಕೆಲವರು ಸಹ  ಅವ್ಯಾಹತವಾಗಿ ಕೆರೆ ಒತ್ತುವರಿ ಮಾಡಿಕೊಂಡಿದ್ದ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು.
ಕಳೆದ ವರ್ಷ ಕೆರೆ ಒತ್ತುವರಿ ತೆರವಿಗೆ ಅಂದಿನ ಜಿಲ್ಲಾದಿಕಾರಿ ವಿ. ಪಿ, ಇಕ್ಕೇರಿ ಗಾಡಿಕೊಪ್ಪದಲ್ಲಿ ಮೊಟ್ಟಮೊದಲ ಬಾರಿ ಚಾಲನೆ ನೀಡಿದ್ದರು. ಅಲ್ಲಿಂದ ಶುರುವಾದ ಈ  ಅಭಿಯಾನ ಇನ್ನೂ ಮುಂದುವರೆದಿದೆ.  ಹಲವು ನಾಗರಿಕ ಸಂಘಟನೆಗಳು ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಾಗಿರುವ ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಡಿ.ಸಿ. ಕಚೇರಿ ಮುಂಭಾಗ ಪ್ರತಿಭಟನೆ ಕೂಡ ನಡೆಸಿದ್ದವು. ಇದಾದ ನಂತರ ಶಿವಮೊಗ್ಗ ನಗರದಲ್ಲಿ ಕೆರೆ ಒತ್ತುವರಿ ತೆರವುಗೊಳಿಸಲು ಜಿಲ್ಲಾಡಳಿತ ಕ್ರಮಕೈಗೊಂಡಿತ್ತು. ಮಳೆಗಾಲ ಆರಂಭವಾಗಿದ್ದರಿಂದ  ಈ ಕಾರ್ಯಾಚರಣೆ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ನೆಪಮಾತ್ರಕ್ಕೆ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಆರೋಪವನ್ನು ಸ್ವತಃ ಪ್ರತಿಭಟನೆ ನಡೆಸಿದ್ದ ಸಂಘಟನೆಗಳೇ ಬಹಿರಂಗವಾಗಿ ದೂರಿದ್ದವು.
ಇದಾದ ನಂತರ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಿರೀಕ್ಷಿತ ಮಟ್ಟದಲ್ಲಿ ನಡೆದಿರಲಿಲ್ಲ. ಡಾ. ಎಂ. ಲೋಕೇಶ್ ಜಿಲ್ಲಾಧಿಕಾರಿಯಾಗಿ ಆಗಮಿಸಿದ ನಂತರ ಕೆರೆ ಒತ್ತುವರಿ ಕಾರ್ಯಾಚರಣೆಗೆ ವೇಗ ದೊರಕಿತು.  ಆಗಮಿಸಿದ ಕೇವಲ ಏಳು ತಿಂಗಳ ಅವಧಿಯಲ್ಲಿ, ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಸೀಮಿತಾವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೆರೆ ಒತ್ತುವರಿ ತೆರವುಗೊಳಿಸಿದ ಉದಾಹರಣೆ ಜಿಲ್ಲಾಡಳಿತದ ಇತಿಹಾಸದಲ್ಲಿಯೇ ಇಲ್ಲ ಎನ್ನುವುದನ್ನು ಹಿರಿಯರು ಹೇಳುತ್ತಾರೆ.
ಸಂರಕ್ಷಣೆಗೆ ಒತ್ತು:
 ಡಾ. ಲೋಕೇಶ್ ಗ್ರಾಮೀಣ ಪ್ರದೇಶಗಳಿಗೆ ನಿರಂತರವಾಗಿ ಭೇಟಿಯಿತ್ತು ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಸಾರ್ವಜನಿಕರು ತಮ್ಮ ಭಾಗದಲ್ಲಾಗಿರುವ ಕೆರೆಗಳ ಒತ್ತುವರಿಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇದರ ಆಧಾರದ ಮೇಲೆ ಡಿ.ಸಿ.ಯವರೇ ಖುದ್ದು ಹಲವು ಕೆರೆಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸುತ್ತಿದ್ದಾರೆ. ವಾರದಲ್ಲಿ ತಮ್ಮ ವ್ಯಾಪ್ತಿಯಲ್ಲಾಗಿರುವ ಎರಡು ಕೆರೆಗಳ ಒತ್ತುವರಿ ತೆರವುಗೊಳಿಸಿ ತಮಗೆ ವರದಿ ನೀಡುವಂತೆ ಎಲ್ಲ ತಾಲೂಕು ಆಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ. ಇದರಿಂದಾಗಿ ಕೆಳ ಹಂತದ ಅಧಿಕಾರಿಗಳು ಕೆರೆ ಒತ್ತುವರಿ ತೆರವಿಗೆ ಮಹತ್ವ ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.  ನಿರ್ಲಕ್ಷ್ಯವಹಿಸುವ ಅಧಿಕಾರಿ, ಸಿಬ್ಬಂದಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವೆಂದು ಎಚ್ಚರಿಕೆ ನೀಡಿದ್ದಾರೆ. ಡಿ.ಸಿ.ಯವರ ಕಟ್ಟುನಿಟ್ಟಿನ ಸೂಚನೆಯಿಂದ ತಾಲೂಕು ಆಡಳಿತಗಳು ಕೂಡ ಸ್ಥಳೀಯ ರಾಜಕೀಯ ಒತ್ತಡ-ಪ್ರಭಾವಕ್ಕೆ ಮಣಿಯದೆ ಸಮರೋಪಾದಿಯಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದ ಸೀಮಿತಾವಧಿಯಲ್ಲಿಯೇ ಜಿಲ್ಲೆಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಕೆರೆಗಳ ಒತ್ತುವರಿ ತೆರವುಗೊಳ್ಳುವಂತಾಗಿದೆ.

-----------------------------------------

Tuesday, 23 May 2017

  ಇವಿಎಂ ವಿಶ್ವಾಸಾರ್ಹತೆ : ಮತದಾರ ಗೊಂದಲದಲ್ಲಿ

ಭಾರತದಲ್ಲಿ ಚುನಾವಣೆ ನಡೆಸುವುದು ಸವಾಲಿನ ಕೆಲಸ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಂದರ್ಭದಲ್ಲಿ ತಂತ್ರಜ್ಞಾನಕ್ಕೆ ಮೊರೆ ಹೋಗಲೇಬೇಕಿದೆ. ಆದರೆ ನಾವು ಬಳಸುವ ಮತಯಂತ್ರ ಅಥವಾ ತಂತ್ರಜ್ಞಾನ ಎಷ್ಟು ಸುರಕ್ಷಿತ ಎನ್ನುವ ವಿಮರ್ಶೆ ಮೊದಲು ನಡೆಯಬೇಕಿದೆ. ಅಭಿವೃದ್ಧಿ ಹೊಂದಿದ ದೇಶವಾದ ನೆದರ್ಲಾಂಡ್‌ನಲ್ಲಿ  ಇವಿಎಂ ಬಳಕೆಯನ್ನು ನಿಲ್ಲಿಸಲಾಗಿದೆ. ಇವಿಎಂ ಹ್ಯಾಕ್ ಮಾಡಲು ಅನುಕೂಲಕರ ಸಾಫ್ಟ್‌ವೇರ್ ಹೊಂದಿದೆ ಎನ್ನುವುದು ಆ ದೇಶದ ಹೇಳಿಕೆ. ಈಗ ಭಾರತದಲ್ಲೂ ಇವಿಎಂ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಚುನಾವಣಾ ಆಯೋಗ ಈ ಸಂಬಂಧ  18 ರಾಜಕೀಯ ಪಕ್ಷದ ಮುಖಂಡರಿಗೆ ಸವಾಲು ಹಾಕಿ ಮತಯಂತ್ರ ಹ್ಯಾಕ್ ಮಾಡಿತೋರಿಸಲು ಕೋರಿದೆ. ಜೂನ್ 3ರಿಂದ ಈ ಸವಾಲು ಆರಂಭವಾಗಲಿದೆ. ಒಟ್ಟಿನಲ್ಲಿ ಯಾರೇ ಸೋಲಲಿ, ಯಾರೇ ಗೆಲ್ಲಲಿ ಇವಿಎಂ ಅಸಲೀತನ ಮತದಾರನಿಗೆ ತಿಳಿಯಬೇಕಿದೆ.  

* ದತ್ತಾತ್ರೇಯ ಹೆಗಡೆ

 ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯವಾದ ನಂತರ  ಎಲೆಕ್ಟ್ರಾನಿಕ್ ವೋಟಿಂಗ್ ಮಶಿನ್ (ಇವಿಎಎಂ) ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಉದ್ಭವವಾಗಿದೆ. ಚುನಾವಣೆಗೆ ಬಳಸಲಾದ ಮತಯಂತ್ರಗಳನ್ನು ತಿರುಚಲಾಗಿದೆ ಎನ್ನುವ ಆರೋಪ ಕೆಲವು ರಾಜಕಿಯ ಪಕ್ಷಗಳಿಂದ ಬಲವಾಗಿ ಕೇಳಿಬಂದಿದೆ. ಮತಯಂತ್ರವನ್ನು ಹ್ಯಾಕ್ ಮಾಡಲು ಸಾಧ್ಯ ಎಂದು ಸಹ ಕೆಲವರು ಹೇಳಿದ್ದರು. ಮಧ್ಯಪ್ರದೇಶದಲ್ಲಿ ನ್ಯಾಯಾಧೀಶರು, ಪತ್ರಕರ್ತರೆದರೇ ಮತಯಂತ್ರ ತಿರುಚಿವ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಈ ಎಲ್ಲ ಕಾರಣಗಳಿಂದ ಈಗ ದೇಶದಾದ್ಯಂತ ಇವಿಎಂ ಬಗ್ಗೆ ಚರ್ಚೆ ನಡೆಯುತ್ತಿದೆ.
 ಉ. ಪ್ರ. ದ ಚುನಾವಣೆ ಫಲಿತಾಂಶ ಹೊರಬಿದ್ದ ಕೂಡಲೇ ಬಹುಜನ ಸಮಾಜವಾದಿ ಪಕ್ಷ ಮೊಟ್ಟಮೊದಲು  ಈ ಆರೋಪವನ್ನು ಮಾಡಿತ್ತು. ಆದರೆ ಆಗ ಇದನ್ನು ರಾಜಕೀಯ ಪ್ರೇರಿತ ಎಂದು ಟೀಕಿಸಲಾಯಿತು. ಆನಂತರ ಆಮ್ ಆದ್ಮಿ ಆರೋಪಿಸಿತು. ಒಟ್ಟಾರೆ 18 ಪಕ್ಷಗಳು ಇವಿಎಂ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿವೆ. ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗ, ಸಾರ್ವಜನಿಕ ಕ್ಷೇತ್ರದ ಎರಡು ಕಂಪನಿಗಳು ಈ ಮತಯಂತ್ರವನ್ನು ತಯಾರಿಸುತ್ತಿವೆ. ಅವು ಬಳಸುವ ಸಾಫ್ಟ್‌ವೇರ್ ಯಾರಿಗೂ ಗೊತ್ತಿರುವುದಿಲ್ಲ ಎಂದು ಸಮಜಾಯಿಸಿ ನೀಡಿತ್ತು.
 ಆದರೆ ಆಮ್ ಆದ್ಮಿ ಇತ್ತೀಚೆಗೆ ದೆಹಲಿಯಲ್ಲಿ ಮತಯಂತ್ರವೊಂದನ್ನು ಹ್ಯಾಕ್ ಮಾಡಿ ತೋರಿಸಿತ್ತು. ಇದರಿಂದ ಎಚ್ಚೆತ್ತ  ಆಯೋಗ ಮೊನ್ನೆ 56 ರಾಜಕಿಯ ಪಕ್ಷಗಳ ನಾಯಕರ ಸಭೆ ಕರೆದಿತ್ತು. ಇದರಲ್ಲಿ 42 ರಾಜಕೀಯ ಪಕ್ಷದವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಮತಯಂತ್ರ ತಿರುಚುವ ಅವಕಾಶವನ್ನು ಪಕ್ಷಗಳಿಗೆ ನೀಡುವುದಾಗಿ ಆಯೋಗ ಹೇಳಿದೆ. ಆದರೆ ನಾಯಕರು ಇದನ್ನು ಒಪ್ಪದೆ ಉತ್ತರ ಪ್ರದೇಶದ ಚುನಾವಣೆಗೆ ಬಳಸಿದ ಮತಯಂತ್ರಗಳತ್ತಲೇ ಹೆಚ್ಚಿನ ಸಂಶಯವಿರುವುದನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.
ಇದೇನೇ ಇರಲಿ, ಇವಿಎಂ ಬಗ್ಗೆ ಈ ಎಲ್ಲ ವಿವಾದಗಳಿಂದ ಮತದಾರನಿಗೆ ಸಂಶಯ ಉಂಟಾಗಿದೆ. ಇದನ್ನು ಪರಿಹರಿಸುವ ಜವಾಬ್ದಾರಿ ಆಯೋಗದ ಮೇಲಿದೆ. ಸಾರ್ವಜನಿಕ ರಂಗದಲ್ಲಿ ಯಾವುದೇ ವಿಚಾರದ ಬಗ್ಗೆ ಸಂಶಯ ಬಂದಾಗ ಅದನ್ನು ಸ್ಪಷ್ಟವಾಗಿ ನಿರಾಕರಿಸುವ ಬದಲು ಮುಕ್ತ ಚರ್ಚೆಗೆ ಅವಕಾಶ ಕೊಡಬೇಕು. ಅಥವಾ ಪ್ರಾಯೋಗಿಕವಾಗಿ ಇದು ಸಾಧ್ಯವಿದೆಯೇ ಎನ್ನುವುದನ್ನು ತಂತ್ರಜ್ಞರ ಮೂಲಕ ಸ್ಪಷ್ಟಪಡಿಸಬೇಕು. ಆಯೋಗ ಇಂತಹ ಕೆಲಸವನ್ನು ಮೊದಲು ಮಾಡಬೇಕಿದೆ.  ಈಗ ದಿನೇದಿನೆ ಇವಿಎಂ ಬಗ್ಗೆ ಬರುತ್ತಿರುವ ವದಂತಿಗಳಿಗೆ ಈ ಮೂಲಕ ಕಡಿವಾಣ ಹಾಕಬಹುದು.
ಮೊನ್ನೆಯಷ್ಟೇ ಆಯೋಗ ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿ ಜೂನ್ 3ರಿಂದ ಮತಯಂತ್ರ ದುರ್ಬಳಕೆ ಸಾಧ್ಯತೆಯನ್ನು ಸಾಬೀತು ಮಾಡಬೇಕೆಂದಿದೆ. ಇದಕ್ಕಾಗಿ ಅವಕಾಸ ಒದಗಿಸಿ ಕೆಲವು ಶರತ್ತುಗಳನ್ನೂ ವಿಧಿಸಿದೆ.
ಆಯೋಗ ಯಾವ ಪಕ್ಷದ ಬಗ್ಗೆಯೂ ತಾನು ತಾರತಮ್ಯ ಹೊಂದಿಲ್ಲ. ಎಲ್ಲ ಪಕ್ಷಗಳೂ ತಮಗೆ ಒಂದೇ. ಮುಂದಿನ ಚುನಾವಣೆ ವೇಳೆಗೆ  ಇವಿಎಂ ಜೊತೆಗೆ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ ( ವಿವಿಪಿಎಟಿ) ಅಳವಡಿಸಲಾಗುವುದು ಎಂದು ಸ್ಪಷ್ಟನೆ ನೀಡಿದೆ. ಆದರೆ ಈಗ ನಡೆದಿದೆ ಎನ್ನಲಾಗುತ್ತಿರುವ ತಿರುಚುವಿಕೆಯ ಬಗ್ಗೆ ಮನದಟ್ಟಾಗುವಂತಹ ಸ್ಪಷ್ಟ ಹೇಳಿಕೆಯನ್ನು ನೀಡಿಲ್ಲ.
5 ವರ್ಷಗಳ ಹಿಂದೆಯೇ ಅಂದು ಬಿಜೆಪಿ ವಕ್ತಾರರಾಗಿದ್ದ ಜಿವಿಎಲ್ ನರಸಿಂಹರಾವ್ ಎನ್ನುವವರು ತಮ್ಮ  ಕೃತಿ ‘ ಸಂಕಷ್ಟದಲ್ಲಿ ಪ್ರಜಾಪ್ರಭುತ್ವ. ನಾವು ಇವಿಎಂಗಳನ್ನು ನಂಬಬಹುದೇ?’  ಇದರಲ್ಲಿ ಇವಿಎಂ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದರು. ಈ ಕೃತಿಗೆ ಎಲ್ ಕೆ. ಆಡ್ವಾಣಿ ಮುನ್ನುಡಿ ಬರೆದಿದ್ದರು. ಆದರೆ ಈ ವಿಚಾರದ ಬಗ್ಗೆ ಯಾರೂ ಗಂಭೀರವಾಗಿ ಮಾತನಾಡಲೇ ಇಲ್ಲ. ಭಾರತದಲ್ಲಿ ಚುನಾವಣೆ ನಡೆಸುವುದು ಸವಾಲಿನ ಕೆಲಸ ಎನ್ನುವದರಲ್ಲಿ ಎರಡು ಮಾತಿಲ್ಲ. ಈ ಸಂದರ್ಭದಲ್ಲಿ ತಂತ್ರಜ್ಞಾನಕ್ಕೆ ಮೊರೆ ಹೋಗಲೇಬೇಕಿದೆ. ಆದರೆ ನಾವು ಬಳಸುವ ಯಂತ್ರ ಅಥವಾ ತಂತ್ರಜ್ಞಾನ ಎಷ್ಟು ಸುರಕ್ಷಿತ ಎನ್ನುವ ವಿಮರ್ಶೆ ಮೊದಲು ನಡೆಯಬೇಕಿದೆ.  
ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ, ಅಭಿವೃದ್ಧಿ ಹೊಂದಿದ ದೇಶವಾದ ನೆದರ್ಲಾಂಡ್‌ನಲ್ಲಿ  ಇವಿಎಂ ಬಳಕೆಯನ್ನು ನಿಲ್ಲಿಸಲಾಗಿದೆ. ಇವಿಎಂ ಹ್ಯಾಕ್ ಮಾಡಲು ಅನುಕೂಲಕರ ಸಾಫ್ಟ್‌ವೇರ್ ಹೊಂದಿದೆ ಎನ್ನುವುದನ್ನು  ಗಮನಿಸಿ ಸ್ಥಗಿತಗೊಳಿಸಲಾಗಿದೆ. ಆದರೆ ಆಯೋಗ ಇದಕ್ಕೆ ಕೊಟ್ಟ ವಿವರಣೆ ಏನೆಂದರೆ, ಆ ದೇಶದಲ್ಲಿ ಆನ್‌ಲೈನ್‌ನಲ್ಲಿ ಇವಿಎಂ ಬಳಕೆ ಮಾಡುತ್ತಿದ್ದರು ಎಂದು.
ಭಾರತದಲ್ಲಿ ಮತಪತ್ರದಿಂದ ಮತಯಂತ್ರದ ಯುಗಕ್ಕೆ  ಕಾಲಿಟ್ಟ ನಂತರ  ಸಾಕಷ್ಟು ಕಾನೂನಾತ್ಮಕ ಸವಾಲುಗಳು ಮತ್ತು  ಭದ್ರತೆ ಸಮಸ್ಯೆ ಎದುರಾಗಿದೆ. ನ್ಯೂಯಾರ್ಕ್‌ನ ಬೆಟರ್ ಡೆಮಾಕ್ರಸಿ ಫೋರಂ ಎನ್ನುವ ಸಂಸ್ಥೆ ಭಾರತದಲ್ಲಿ ಇವಿಎಂ ಬಳಕೆ ಮಾಡಕೂಡದೆಂದು  ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ದಾಖಲಿಸಿತ್ತು. ಇವಿಎಂನಲ್ಲಿರುವ ಕಂಪ್ಯೂಟರ್  ಚಿಪ್ಸ್‌ಗಳನ್ನು ಸುಲಭದಲ್ಲಿ ತಿರುಚಲು ಸಾಧ್ಯವಿದೆ. ಮತದಾರರು ನೀಡುವ ಮತ ಒಂದೇ ಅಭ್ಯರ್ಥಿಗೆ ಹೋಗುವಂತೆ ಮಾಡಬಹುದಾಗಿದೆ. ಇಂತಹವುಗಳನ್ನು ಮತಗಟ್ಟೆ ಅಧಿಕಾರಿ ಅಥವಾ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಅದು ಹೇಳಿತ್ತು. ಆದರೆ ಇದನ್ನು ನ್ಯಾಯಾಲಯ ಪುರಸ್ಕರಿಸಿರಲಿಲ್ಲ.
ಯಾವುದೇ ಸಂಶಯ ಬಾರದಂತೆ ಒಂದೇ ಅಭ್ಯರ್ಥಿಗೆ ಸಾಲಾಗಿ ಮತಬರುವಂತೆ ಮಾಡಬಹುದೆನ್ನುವ ವಿಡಿಯೋವೊಂದು ಎರಡು ವರ್ಷಗಳ ಹಿಂದೆ ಹರಿದಾಡಿತ್ತು.  ಇದನ್ನು ಆಯೋಗ ಅಸಾಧ್ಯ ಎಂದಿತ್ತು. ತಾಂತ್ರಿಕ ತಜ್ಞರು ಹೇಳುವ ಪ್ರಕಾರ ಯಾವುದೇ ರೀತಿಯ ತಿರುಚುವಿಕೆ ಸಾಧ್ಯವಿಲ್ಲ. ಆದರೆ ಇತ್ತೀಚೆಗೆ ತಿರುಚುವಿಕೆಯನ್ನು ಸಾಬೀತುಪಡಿಸಲಾಗಿರುವುದರಿಂದ  ಸಾಫ್ಟ್‌ವೇರ್ ಬಗ್ಗೆ ಅನೇಕ ಸಂಶಯಗಳು ಹುಟ್ಟಿಕೊಂಡಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ದಿನೇದಿನೇ ಏನೆಲ್ಲ ಬೆಳವಣಿಗೆ ನಡೆಯುತ್ತಿರುವುದರಿಂದ  ತಿರುಚುವಿಕೆ ಸಾಧ್ಯವಿಲ್ಲ ಎಂದರೆ ನಂಬಲಾಗದ ಸ್ಥಿತಿ ಎದುರಾಗಿದೆ.
ಅಂದರೆ ಇಲ್ಲಿಯವರೆಗೆ ವಿಶ್ವಾಸಾರ್ಹತೆಯನ್ನು ಪರೀಕ್ಷಿಸಲೇ ಇಲ್ಲ. ಬದಲಾಗಿ ಕೇವಲ ಆರೋಪ ಎಂಬಂತೆ ಬಿಂಬಿಸಲಾಯಿತು. ಈಗ ಕಾಲ ಕೂಡಿ ಬಂದಿದೆ. ಇವಿಎಂನ ಬಗ್ಗೆ ಸತ್ಯಾಸತ್ಯತೆ ಜನರಿಗೆ ತಿಳಿಯಬೇಕಿದೆ. ಇದೇ ವೇಳೆ ಮುಂದುವರೆದ ದೇಶಗಳಲ್ಲಿ ಏಕೆ ಮತಯಂತ್ರ ಬಳಕೆಯಾಗುತ್ತಿಲ್ಲ ಎಂಬ ಪ್ರಶ್ನೆಗೂ ಉತ್ತರ ಸಿಗಬೇಕಿದೆ. ತಂತ್ರಜ್ಞಾನದಲ್ಲಿ ಭಾರತಕ್ಕಿಂತ ಮುಂದುವರೆದಿರುವ ದೇಶಗಳು ಇವಿಎಂ ಬಳಸುತ್ತಿಲ್ಲ.
ಈ ಎಲ್ಲ ವಾದ- ವಿವಾದ ಏನೇ ಇದ್ದರೂ ಆಯೋಗವು ಸಾರ್ವಜನಿಕವಾಗಿ ಮತದಾರರಿಗೆ ಈ ಯಂತ್ರದ ಸಾಫ್ಟ್‌ವೇರ್‌ನ ಸುರಕ್ಷತೆ ಬಗ್ಗೆ ತಿಳಿಸಬೇಕಿದೆ. ರಾಜಕೀಯ ಪಕ್ಷಗಳು ಏನೇ ಹೇಳಿದರೂ ಅದನ್ನು ತಳ್ಳಿ ಹಾಕುವ ಕೆಲಸ ಮಾಡದೆ ಅವರೆದುರು ಹ್ಯಾಕ್ ಸಾಧ್ಯವೇ ಎನ್ನುವುದನ್ನು ಪ್ರಾತ್ಯಕ್ಷಿಕೆ ಮೂಲಕ ಸಾಬೀತುಪಡಿಸಬೇಕು. ಅಂದಾಗ ಮಾತ್ರ ಅಪನಂಬಿಕೆ ಹೋಗಲಾಡಿಸಲು ಸಾಧ್ಯ. ಇಲ್ಲವಾದಲ್ಲಿ ಮತ್ತೆ ಮುಂದಿನ ಚುನಾವಣೆ ವೇಳೆೆ ಇಂತಹ ಗೊಂದಲ ಉದ್ಭವಿಸುತ್ತದೆ.  ಸದ್ಯ ಅಯೋಗ ಇಂತಹ ಕ್ರಮಕ್ಕೆ ಮುಂದಾಗಿರುವುದು  ಉತ್ತಮ ಬೆಳವಣಿಗೆ.



ಇವಿಎಂ ಕಾರ್ಯನಿರ್ವಹಣೆ 
 ಭಾರತದ ಇವಿಎಂ ಕಂಟ್ರೋಲ್ ಯುನಿಟ್ ಹೊಂದಿದೆ. ಇದು ಪೋಲಿಂಗ್ ಅಧಿಕಾರಿಯ ಕಂಟ್ರೋಲ್‌ನ್ನೂ ಹೊಂದಿರುತ್ತದೆ. ಮತ್ತು ಬ್ಯಾಲೆಟಿಂಗ್ ಯುನಿಟ್ ಸಹ ಇದ್ದು,  ಇವರೆಡೂ ಯುನಿಟ್‌ಗಳು ವೈರ್ ಮೂಲಕ ಸಂಪರ್ಕ ಹೊಂದಿವೆ. ಇವಿಎಂ 6 ವೋಲ್ಟ್‌ನ ಅಲ್ಕಾಲೈನ್ ಬ್ಯಾಟರಿ ಮೂಲಕ ಕೆಲಸ ಮಾಡುತ್ತದೆ.  ಇದಕ್ಕೆ ಇಂಟರ್ನೆಟ್ ಸಂಪರ್ಕದ ಅವಶ್ಯವಿಲ್ಲ.  ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮಗಳಲ್ಲೂ ಇದನ್ನು ಬಳಸಬಹುದು. ಒಂದು ಇವಿಎಂ 64 ಅಭ್ಯರ್ಥಿಗಳನ್ನು ನೊಂದಣಿ ಮಾಡಿಕೊಳ್ಳಬಲ್ಲದು ಮತ್ತು 3840 ಮತ ದಾಖಲಿಸಬಲ್ಲದು.   ಬ್ಯಾಲೆಟಿಂಗ್ ಯುನಿಟ್ ಪ್ರತ್ಯೇಕ ವಿಭಾಗವನ್ನು ಹೊಂದಿದ್ದು, ಮತದಾನದ ನಂತರ  ಅದನ್ನು ದಾಖಲಿಸಿಕೊಳ್ಳುತ್ತದೆ. ಮತ್ತು ಗುಟ್ಟಾಗಿಡುತ್ತದೆ. ಪೋಲಿಂಗ್ ಅಧಿಕಾರಿಯು ಕಂಟ್ರೋಲ್ ಯುನಿಟ್ ನಿರ್ವಹಿಸುವ ಅಧಿಕಾರ ಹೊಂದಿರುತ್ತಾನೆ. 
ಪ್ರತಿ ಇವಿಎಂಗೆ ಗುರುತಿನ ನಂಬರ್ ಕೊಡಲಾಗುತ್ತದೆ. ಮತಯಂತ್ರ ಯಾವುದೇ ಮತಕೇಂದ್ರದಲ್ಲಿದ್ದರೂ  ಆಯೋಗದ ಡಾಟಾಬೇಸ್‌ನಿಂದ ಮತಯಂತ್ರ ಪತ್ತೆಮಾಡಬಹುದಾಗಿದೆ.  ಈ ಮತಯಂತ್ರಕ್ಕೆ ಪೊಲೀಸರ ಅಥವಾ ಭದ್ರತಾ ಸಿಬ್ಬಂದಿಗಳ ರಕ್ಷಣೆ ಮತಕೇಂದ್ರದಲ್ಲಿರುತ್ತದೆ. ಚುನಾವಣೇಗೂ ಮುನ್ನ ರಾಜಕೀಯ ಪಕ್ಷದ ನಾಯಕರೆದುರು ಮತಯಂತ್ರ ತಯಾರಕ ಕಂಪನಿಯ ಇಂಜಿನಿಯರ್‌ಗಳು ಪರೀಕ್ಷಿಸಿ ತೋರಿಸುತ್ತಾರೆ. ಅಣಕು ಕಾರ್ಯಾಚರಣೆ ಮಾಡುತ್ತಾರೆ. ಮತದಾನದ ದಿನ ಆರಂಭದಲ್ಲಿ ಮತ್ತೆ ಅಣಕು ಪ್ರದರ್ಶನ ಮಾಡಲಾಗುತ್ತದೆ.  ಮತದಾನ ಮುಗಿದ ನಂತರ ರಾಜಕೀಯ ಪಕ್ಷದ ನಾಯಕರ ಸಮ್ಮುಖದಲ್ಲಿ ಮತಯಂತ್ರವನ್ನು ಸೀಲ್ ಮಾಡಲಾಗುತ್ತದೆ.  
...........................

Monday, 22 May 2017

ಶಿವಮೊಗ್ಗದಲ್ಲಿ ಹೆಚ್ಚುತ್ತಿವೆ ಬ್ಯಾಂಕ್ ಅವ್ಯವಹಾರಗಳು

ಶಿವಮೊಗ್ಗ: ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸಾಲುಸಾಲಾಗಿ ಬೆಳಕಿಗೆ ಬರುತ್ತಿರುವ ಬ್ಯಾಂಕ್ ಅವ್ಯಹಾರ ಪ್ರಕರಣಗಳು ನಾಗರಿಕ ವಲಯವೇ ಬೆಚ್ಚಿ ಬೀಳುವಂತೆ ಮಾಡಿದೆ. ಬ್ಯಾಂಕ್‌ನಲ್ಲಿರುವ ಕೆಲವು ಭ್ರಷ್ಟ, ಅಪ್ರಾಮಾಣಿಕ ಅಧಿಕಾರಿಗಳು ಮತ್ತು ನೌಕರರು ಸೇರಿ ಮಾಡುತ್ತಿರುವ ವಂಚನೆಯಿಂದಾಗಿ ಇಡೀ ಬ್ಯಾಂಕಿಂಗ್ ವಲಯವನ್ನು ಗ್ರಾಹಕರು ಅನುಮಾನ ದ ದೃಷ್ಟಿಯಿಂದ ನೋಡುವಂತಾಗಿದೆ.
ಜಿಲ್ಲೆಯ ಕೆಲವು ಪ್ರಮುಖ ಬ್ಯಾಂಕ್ ಅವ್ಯವಹಾರಗಳು:
 1. ಎರಡು ವರ್ಷಗಳ ಹಿಂದೆ ಡಿ.ಸಿ.ಸಿ. ಬ್ಯಾಂಕ್‌ನ ಶಿವಮೊಗ್ಗ ನಗರ ಶಾಖೆಯಲ್ಲಿ ಬೆಳಕಿಗೆ ಬಂದ ಸುಮಾರು 62 ಕೋಟಿ ರೂ. ಮೀರಿದ ಹಗರಣವು ರಾಷ್ಟ್ರ, ರಾಜ್ಯದ ಗಮನ ಸೆಳೆದಿತ್ತು. ಇಡೀ ಸಹಕಾರಿ ಬ್ಯಾಂಕಿಂಗ್ ವಲಯವನ್ನೇ ತಲ್ಲಣಗೊಳ್ಳುವಂತೆ ಮಾಡಿತ್ತು. ಈ ಹಗರಣದಲ್ಲಿ ಬ್ಯಾಂಕ್‌ನ ಮ್ಯಾನೇಜರ್ ಸೇರಿದಂತೆ ಹಲವು ಸಿಬ್ಬಂದಿಗಳು ಭಾಗಿಯಾಗಿದ್ದರು. ಗ್ರಾಹಕ ಖಾತೆಗಳಲ್ಲಿ ವಂಚನೆ ಮಾಡಲಾಗಿತ್ತು. ಗ್ರಾಹಕರು ಅಡಮಾನವಿಟ್ಟಿದ್ದ ಅಸಲಿ ಚಿನ್ನಾಭರಣವನ್ನು ತೆಗೆದುಕೊಂಡು ನಕಲಿ ಚಿನ್ನಾಭರಣ ಇಟ್ಟು ವಂಚಿಸಲಾಗಿತ್ತು. ಈ ಹಗರಣದ ಕುರಿತಂತೆ ಸಿಓಡಿ ತನಿಖೆ ಕೂಡ ನಡೆದಿತ್ತು. ಹಲವು ಪ್ರಭಾವಿಗಳ ಬಂಧನ ಕೂಡ ಆಗಿ, ಮುಖ್ಯ ಆರೋಪಿ ಎನ್ನಲಾಗಿದ್ದ ಮ್ಯಾನೇಜರ್  ಅವರಿಂದ ಅವ್ಯವಹಾರದ ಮೊತ್ತ ವಸೂಲು ಮಾಡಲಾಗಿದೆ.
 2.  ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಸಹಕಾರಿ ಬ್ಯಾಂಕ್‌ವೊಂದರಲ್ಲಿ ಗ್ರಾಹಕರ ಲಾಕರ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಅಪಹರಿಸಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ್ದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದರು. ಅಲ್ಲಿಯೂಸಹ ಅವರಿಂದಲೇ ಎಲ್ಲ ಅವ್ಯವಹಾರದ ಮೊತ್ತವನ್ನು ಭರಿಸಿಕೊಳ್ಳಲಾಯಿತು.
3.  ನಗರದ ರವೀಂದ್ರನಗರದ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯೊಂದರಲ್ಲಿ ಕೋಟ್ಯಂತರ ರೂ.ಗಳನ್ನು ವಂಚಿಸಲಾಗಿತ್ತು. ವಂಚನೆಯ ಆಧಾರದ ಮೇಲೆ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇಲ್ಲಿಯೂ ಕೂಡ ಗ್ರಾಹಕರ ಖಾತೆಗಳಿಗೆ ಕನ್ನ ಹಾಕಲಾಗಿತ್ತು. ಇದರ ತನಿಖೆ ಇನ್ನೂ ನಡೆಯುತ್ತಲೇ ಇದೆ.
4.  6 ತಿಂಗಳ ಹಿಂದೆ ತೀರ್ಥಹಳ್ಳಿ ತಾಲೂಕಿನ ಸಹಕಾರಿ ಸಂಘವೊಂದರಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿತ್ತು. ಬ್ಯಾಂಕ್‌ನ ಸಿಬ್ಬಂದಿಗಳು ಹಾಗೂ ಸಹಕಾರಿ ವಲಯದ ಕೆಲವರು ಈ ಹಗರಣದಲ್ಲಿ ಭಾಗಿಯಾಗಿದ್ದ ಅನುಮಾನಗಳು ವ್ಯಕ್ತವಾಗಿದ್ದವು. ಈ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬಂದಿತ್ತು. ಆದರೆ ಇಲ್ಲಿಯವರೆಗೂ ಈ ಹಗರಣದ ಸಮಗ್ರ ವಿವರ ಬೆಳಕಿಗೆ ಬಂದಿಲ್ಲ.
5. ನಗರದ ಕಾರ್ಪೋರೇಷನ್ ಬ್ಯಾಂಕ್ ಮುಖ್ಯ ಶಾಖೆಯಲ್ಲಿ ರೈತರ ಸಾಲ ಮಂಜೂರಾತಿಯಲ್ಲಿ ಹತ್ತಾರು ಕೋಟಿ ರೂ. ಗೋಲ್‌ಮಾಲ್ ನಡೆದಿದೆ. ಇದು ಈಗ ತನಿಖಾ ಹಂತದಲ್ಲಿದ್ದು, ನಂತರವಷ್ಟೇ ನೈಜ ಮೊತ್ತ ಎಷ್ಟೆನ್ನುವುದು ಬೆಳಕಿಗೆ ಬರಬೇಕಿದೆ.


ಇನ್ನೂ ಪತ್ತೆಯಾಗದ ಬ್ಯಾಂಕ್ ಲೂಟಿ
 ನಗರದ ಹೊರವಲಯ ಮಾಚೇನಹಳ್ಳಿ ಸಮೀಪ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯೊಂದರಲ್ಲಿ ಹಲವು ಕೋಟಿ ರೂ.ಗಳನ್ನು ರಾತ್ರೋರಾತ್ರಿ ಕಳ್ಳರ ತಂಡ ದೋಚಿ ಪರಾರಿಯಾಗಿತ್ತು. ಈ ವೇಳೆ ಗ್ರಾಹಕರು ಬ್ಯಾಂಕ್ ಲಾಕರ್ ಹಾಗೂ ಅಡಮಾನವಿಟ್ಟಿದ್ದ ಚಿನ್ನಾಭರಣಗಳನ್ನು ಕಳ್ಳರು ಹೊತ್ತೊಯ್ದಿದ್ದರು. ಬ್ಯಾಂಕಿನ ಹಿಂಭಾಗದ ಗೋಡೆಯನ್ನು ಕೊರೆದು ಒಳನುಗ್ಗಿದ್ದ ಕಳ್ಳರು ಲಾಕರ್‌ನ್ನು ಬ್ಯಾಂಕಿನಿಂದ ಸ್ವಲ್ಪ ದೂರ ಒಯ್ದು ಅಲ್ಲಿ ಒಡೆದು ಸುಮಾರು 9 ಕೆಜಿ ಚಿನ್ನಾಭರಣ ಮತ್ತು 36. 77 ಲಕ್ಷ ರೂ. ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಇವರ ಪತ್ತೆಗೆ ನಾಲ್ಕು ವಿಶೇಷ ತಂಡವನ್ನು ರಚಿಸಿ ಬೆಂಗಳೂರು, ಹೈದ್ರಾಬಾದ್, ತಮಿಳುನಾಡು, ಉತ್ತರ ಭಾರತದ ಹಲವೆಡೆ ಕಳುಹಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ. ಪ್ರಕರಣದ ಆರೋಪಿಗಳಾರೆನ್ನುವುದು ಇಂದಿಗೂ ಬಯಲಾಗಿಲ್ಲ.
-----------------------------------


ಹಿರಿಯ ಅಧಿಕಾರಿಗಳೇ ವಂಚನೆಗೆ ಇಳಿದರೆ........ 
  ಕಾರ್ಪೋರೇಷನ್ ಬ್ಯಾಂಕ್‌ನಲ್ಲಿ ಹಣ ದುರುಪಯೋಗ ಪ್ರಕರಣ 



ರೈತರನ್ನು ಮತ್ತು ಅಮಾಯಕ ಗ್ರಾಹಕರನ್ನು ಬ್ಯಾಂಕ್ ಅಧಿಕಾರಿಗಳು ಸುಲಭದಲ್ಲಿ ಸತಾಯಿಸುತ್ತಾರೆ. ಅಂತೆಯೇ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ. ರೈತರು ಸಾಲ ಕೇಳಿದರ ಕೊಡಲು ಹಿಂದೆ ಮುಂದೆ ನೋಡುತ್ತವೆ ಬ್ಯಾಂಕುಗಳು. ಇದನ್ನೇ ವಂಚಕ ಅಧಿಕಾರಿಗಳು ಲಾಭ ಮಾಡಿಕೊಳ್ಳುತ್ತಾರೆ. ಸುಲಭದಲ್ಲಿ ತಮ್ಮ ಬಲೆಗೆ ಬೀಳಿಸಿಕೊಂಡು ಸಾಲ ಕೊಡುವ ನಾಟಕವಾಡಿ ಮೋಸಗೊಳಿಸುತ್ತಾರೆ. ಇಂತಹ ಘಟನೆಗಳು ಒಂದಲ್ಲ ಒಂದು ಕಡೆ ನಡೆಯುತ್ತಲೇ ಇರುತ್ತವೆ. ಆದರೂ ಗ್ರ್ರಾಹಕರು ಮಾತ್ರ ಸಾಲ ಸಿಗುತ್ತದೆಯಲ್ಲ ಎಂಬ ಆಸೆಯಿಂದ ಇಂತಹವರ ಮಾತು ನಂಬಿ ಕೊನೆಗೆ ಪ್ರತಿಭಟನೆ, ಧರಣಿಯ ಹಾದಿ ಹಿಡಿಯುತ್ತಾರೆ. ಬ್ಯಾಂಕ್  ಶಾಖಾಧಿಕಾರಿ, ಹಿರಿಯ ಅಧಿಕಾರಿಗಳೇ ಈ ರೀತಿ ವಂಚನೆಗೆ ಇಳಿದರೆ ಯಾರನ್ನು ನಂಬಿ ವ್ಯವಹಾರ ಮಾಡಬೇಕೆಂಬ ಪ್ರಶ್ನೆ ಗ್ರಾಹರಕನ್ನು ಕಾಡುವಂತಾಗಿದೆ.



 ಶಿವಮೊಗ್ಗ : ಸಾಲಕ್ಕಾಗಿ ಅರ್ಜಿ ಹಾಕಿ ಬ್ಯಾಂಕಿಗೆ ಹತ್ತಾರು ಬಾರಿ ಅಲೆದಾಡಿದರೂ ಬ್ಯಾಂಕ್‌ನವರು ವಿವಿಧ ನೆಪ ಹೇಳಿ ಮಂಜೂರು ಮಾಡದೆ ಸತಾಯಿಸುವ ಈ ಕಾಲದಲ್ಲಿ ಕಾರ್ಪೋರೇಷನ್ ಬ್ಯಾಂಕಿನ ಕ್ಷೇತ್ರ ಸಹಾಯಕ ಅಧಿಕಾರಿ ರೈತರ ಮನೆಗೆ ತೆರಳಿ ಸಾಲ ಪಡೆಯಲು ಒತ್ತಾಯಿಸುತ್ತಿದ್ದ!
ಹಣ ದುರುಪಯೋಗದಡಿ ಈಗ ಸೇವೆಯಿಂದ ಅಮಾನತುಗೊಂಡಿರುವ  ಕ್ಷೇತ್ರ ಸಹಾಯಕ ಅಧಿಕಾರಿ ಮಧುಸೂದನ್ ರಾವ್ ನಡೆಸಿರುವ ವ್ಯವಹಾರದ ಕೈಚಳಕ ಇದು.
ರಾವ್ ಎಷ್ಟು ಚಾಣಾಕ್ಷರೆಂದರೆ, ಒಬ್ಬನೇ ಒಬ್ಬ ರೈತನಿಗೆ ಸ್ವಲ್ಪವೂ ಅನುಮಾನ ಮೂಡದಂತೆ ವ್ಯವಹಾರ ಮಾಡಿದ್ದಾರೆ. ತಾಲೂಕಿನ ಕೊಮ್ಮನಾಳು, ಹರಮಘಟ್ಟ, ಹಾಡೋನಹಳ್ಳಿ, ಬೀರನಹಳ್ಳಿ, ಚಿಕ್ಕಕೂಡ್ಲಿ, ಸೂಗೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ಅವರು ತೆರಳಿದ್ದರು. ಅಲ್ಲೆಲ್ಲ ಸಾಲ ಪಡೆಯುವಂತೆ ಅವರಿಗೆ ಬುದ್ಧಿ ಹೇಳುತ್ತಿದ್ದರು. ಮನೆ ಬಾಗಿಲಿಗೇ ಬಂದು ಸಾಲ ಕೊಡುತ್ತೇನೆ ಎನ್ನುವ ಅಧಿಕಾರಿಯನ್ನು ರೈತರು  ನಂಬಿದರು. ಬರಗಾಲದ ಈ ದಿನದಲ್ಲಿ ನೆರವಾದೀತೆಂದು ನಂಬಿದರು. ತಮ್ಮ ಜಮೀನಿಗೆ ಸಂಬಂಧಿಸಿದ ನಾನಾ ದಾಖಲಾತಿಗಳೊಂದಿಗೆ ಸಾಲಕ್ಕಾಗಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು.
  ಆದರೆ ಎಷ್ಟು ದಿನವಾದರೂ  ಸಲ ಮಂಜೂರಾಗಿರುವ ಬಗ್ಗೆ ಮಾಹಿತಿ ಇರಲಿಲ್ಲ. ರೈತರು ಬ್ಯಾಂಕ್‌ಗೆ ಎಡತಾಕಿದರೂ ಸಾಲ ಮಂಜೂರಾಗಿಲ್ಲವೆಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದರು. ಬ್ಯಾಂಕ್‌ನವರ ವರ್ತನೆಯಿಂದ ಅನುಮಾನಗೊಂಡ ಕೆಲವು ರೈತರು ಪಾಸ್ ಪುಸ್ತಕದಲ್ಲಿ ತಮ್ಮ ಖಾತೆಯ ವಹಿವಾಟು ದಾಖಲು ಮಾಡಿಕೊಡುವಂತೆ ಕೋರಿದ್ದರು. ಇದಕ್ಕೆ ಬ್ಯಾಂಕ್‌ನವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಸತಾಯಿಸಲಾರಂಭಿಸಿದ್ದರು. ಕೆಲವು ರೈತರು ಪಟ್ಟು ಹಿಡಿದು ಪಾಸ್ ಪುಸ್ತಕದಲ್ಲಿ ವಹಿವಾಟಿನ ದಾಖಲು ಪಡೆದುಕೊಂಡಾಗ, ತಮಗೆ ಹತ್ತಿಪ್ಪತ್ತು ಲಕ್ಷ ರೂ. ಸಾಲ ಮಂಜೂರಾಗಿ ಖಾತೆಗಳಿಂದ ಹಣ ಡ್ರಾ ಮಾಡಿಕೊಂಡಿರುವುದು ಬೆಳಕಿಗೆ ಬಂದಿತು.
ಈ ವಿಷಯ ಇತರೆ ರೈತರಿಗೂ ಗೊತ್ತಾಗಿ ಅವರು ಕೂಡ ಪಾಸ್ ಪುಸ್ತಕ ದಾಖಲು ಅಪ್‌ಡೇಟ್ ಮಾಡಿಸಿಕೊಂಡಾಗ ಹಣ ದುರುಪಯೋಗವಾಗಿರುವುದು ಬೆಳಕಿಗೆ ಬಂದಿತು. ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ವಂಕಟರಾಘವ ಅವರಿಗೆ ದೂರಲಾರಂಭಿಸಿದಾಗ ದಾಖಲೆಗಳಗಳ ಪರಿಶೀಲನೆ ನಡೆಸಲಾಯಿತು. ಮೊಟ್ಟಮೊದಲಿಗೆ ಒಂದು ಖಾತೆಗೆ ಯಾವುದೇ ದಾಖಲೆ ಇಲ್ಲದೆ ಸಾಲ ಕೊಟ್ಟಿದ್ದು ಪತ್ತೆಯಾಗಿತ್ತು. ಹಲವು ರೈತರಿಗೆ ಇದೇ ರೀತಿ ಮೋಸವಾಗಿರಬಹುದು ಎಂಬ ಅನುಮಾನಗೊಂಡ ಮ್ಯಾನೇಜರ್ ಈ ವಿಷಯವನ್ನು ಉಡುಪಿಯ ಕ್ಷೇತ್ರ ಕಚೇರಿಯ ಮುಖ್ಯಸ್ಥರಿಗೆ ಮಾಹಿತಿ ನೀಡಿದರು.
 ಮಾರನೆಯ ದಿನವೇ ಅಲ್ಲಿಂದ ಬಂದ ಅಧಿಕಾರಿಯೊಬ್ಬರು ಪರಿಶೀಲನೆ ನಡೆಸಿದಾಗ ಸುಮಾರು 43 ಖಾತೆಗಳಲ್ಲಿ ಈ ರೀತಿ ವ್ಯವಹಾರ ನಡೆದಿರುವುದು ಬಯಲಾಯಿತು. ಕೂಡಲೇ ಅವರು ಕೇಂದ್ರ ಕಚೇರಿಗೆ ಮನವಿ ಮಾಡಿ ಅಡಿಟ್ ಅಗತ್ಯತೆ ಇರುವುದನ್ನು ವಿವರಿಸಿದ್ದರು. ಆ ಪ್ರಕಾರ ಬ್ಯಾಂಕ್‌ನ ವಿಜಿಲೆನ್ಸ್ ಅಧಿಕಾರಿ ಮುರಳೀಧರ ಕಿಣಿ ನೇತೃತ್ವದಲ್ಲಿ ಬಂದ ತಂಡ ತಪಾಸಣೆ ನಡೆಸಿ ಆಡಿಟ್ ನಡೆಸಿದಾಗ ಹಣ ದುರುಪಯೋಗ ಬಯಲಿಗೆ ಬಂದಿತು. ಜೊತೆಗೆ ಕಿಣಿ ಅವರು ಕೊಮ್ಮನಾಳು ಮತ್ತು ಹರಮಘಟ್ಟದ ಕೆಲವು ರೈತರ ಮನೆಗೆ ಹೋಗಿ ಈ ಬಗ್ಗೆ ಮಾಹಿತಿ ಪಡೆದಿದ್ದರು. ಈ ರೈತರ ಹೆಸರಿನಲ್ಲಿ ಮಧುಸೂದನ್ ರಾವ್ ಸಾಲ ಎತ್ತಿದ್ದರು.  
ಆ ಸಂದಭ್ದಲ್ಲಿ  ಈ ವೇಳೆ ಸಾಲ ಮಂಜೂರಾಗಿ ಖಾತೆಗಳಿಂದ ಲಕ್ಷಾಂತರ ರೂ. ಡ್ರಾ ಆಗಿರುವುದು ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ಶುಕ್ರವಾರ ಸಂಜೆ ಬ್ಯಾಂಕ್ ಮುಂಭಾಗ ಜಮಾಯಿಸಿ, ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಈ ಪ್ರಕರಣ  ಬಯಲಾಗುವಂತಾಗಿದೆ.


ಗೊತ್ತೇ ಇಲ್ಲ!:
ರೈತರ ದಾಖಲೆಗಳ ಆಧಾರದ ಮೇಲೆ ಅಡಮಾನ ಸಾಲ, ಕೃಷಿ ಸಾಲ ಹಾಗೂ ಜಮೀನು ಅಭಿವೃದ್ದಿ ಸಾಲಗಳನ್ನು ಮಂಜೂರು ಮಾಡಲಾಗಿದೆ. ಕನಿಷ್ಠ 5 ಲಕ್ಷದಿಂದ ಗರಿಷ್ಠ 28 ಲಕ್ಷ ರೂ.ಗಳವರೆಗೂ ಸಾಲ ಮಂಜೂರಾಗಿದೆ. ಆದರೆ ಬಹುತೇಕ ರೈತರಿಗೆ ಸಾಲ ಮಂಜೂರಾಗಿರುವ ವಿಷಯವೇ ಗೊತ್ತಿಲ್ಲ.! ಆದರೆ ಅವರ ಖಾತೆಗೆ ಜಮಾ ಆಗಿದ್ದ ಹಣದಲ್ಲಿ ಒಂದಿಷ್ಟು ಹಣವು ಬೇರೊಬ್ಬರ ಖಾತೆಗೆ ವರ್ಗಾವಣೆಯಾಗಿದೆ. ಚಿಕ್ಕ ಕೂಡ್ಲಿ ಗ್ರಾಮದ ರೈತರೊಬ್ಬರು ತಮ್ಮ ಜಮೀನಿನ ಮೇಲೆ 6 ಲಕ್ಷ ರೂ. ಅಡಮಾನ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರಿಗೆ 16 ಲಕ್ಷ ರೂ. ಸಾಲ ಮಂಜೂರಾಗಿದೆ. ಹರಮಘಟ್ಟ ಗ್ರಾಮದ ರೈತರಿಬ್ಬರ ಜಂಟಿ ಖಾತೆಗೆ 28 ಲಕ್ಷ ರೂ. ಸಾಲ ಮಂಜೂರಾಗಿದ್ದು, ಆ ರೈತರು ಖಾತೆಯಿಂದ ಡ್ರಾ ಮಾಡಿಕೊಂಡಿದ್ದು ಕೇವಲ 8 ಲಕ್ಷ ರೂ. ಮಾತ್ರ. ಎಂದು ವಂಚನೆಗೊಳಗಾದ ರೈತರು ಮಾಹಿತಿ ನೀಡಿದ್ದಾರೆ.
 ............................................