Saturday, 8 April 2017



  ’ಟ್ರಯಲ್ ಮಾನಿಟರಿಂಗ್’ ವ್ಯವಸ್ಥೆ ಜಾರಿ
 * ನ್ಯಾಯಾಲಯದಲ್ಲಿನ ಕೇಸುಗಳಲ್ಲಿ ಇಲಾಖೆಗೆ ಜಯ* 
 ಕೊಲೆ, ರೌಡಿಸಂಗೆ ಜೀವಾವಧಿ* ಎಸ್‌ಪಿಯ ಹೊಸ ಹೆಜ್ಜೆಯ ಯಶಸ್ಸು



ಶಿವಮೊಗ್ಗ, ಎ. 8: ಜಿಲ್ಲೆಯಲ್ಲಿ  ಕೊಲೆ, ಡಕಾಯಿತಿ ಸೇರಿದಂತೆ ಕೆಲವು ಗಂಭೀರ ಸ್ವರೂಪದ ಅಪರಾಧ  ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಈಗ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆಯಾಗುತ್ತಿದೆ. ಈ ಸುದ್ದಿಯಲ್ಲೇನು ವಿಶೇಷ ಎಂದು ಕೇಳಬಹುದು. ಪೊಲೀಸ್ ಇಲಾಖೆ ದಾಖಲಿಸಿದ ಬಹುತೇಕ ಪ್ರಕರಣಗಳೆಲ್ಲ ನ್ಯಾಯಾಲಯದಲ್ಲಿ ಪುರಾವೆ ಇಲ್ಲದೆ ಬಿದ್ದುಹೋಗುವುದು ಸಾಮಾನ್ಯ ಎಂಬ ಭಾವನೆ ಈವರೆಗೆ ಎಲ್ಲರಲ್ಲೂ ಇತ್ತು. ಏಕೆಂದರೆ, ಆರೋಪಿಗಳ ವಿರುದ್ದ ಯಾರೂ ಸಾಕ್ಷಿ ಹೇಳಲು ಬರುವುದಿಲ್ಲ. ಸಾಕ್ಷಿದಾರರಿಗೆ ಬೆದರಿಕೆ, ಅಂಜಿಕೆ, ಆಮಿಷ ಒಡ್ಡುವುದು ಸಾಮಾನ್ಯ ಎನ್ನುವುದು ಎಲ್ಲರಿಗೂ ತಿಳಿದೇ ಇದೆ.
ಆದರೆ ಜಿಲ್ಲೆಯ ಮಟ್ಟಿಗೆ, ನ್ಯಾಯಾಲಯದಲ್ಲಿರುವ ಪೊಲೀಸ್ ಪ್ರಕರಣಗಳಲ್ಲಿ ಈಗ ಶಿಕ್ಷೆಯಾಗುತ್ತಿವೆ. ಇದಕ್ಕೆ ಕಾರಣ  ಜಿಲ್ಲಾ ಪೊಲೀಸ್ ವರಿಷ್ಠರ ವಿಶೇಷ ಕಾಳಜಿ. ಅವರು ಜಾರಿಗೊಳಿಸಿರುವ ’ಟ್ರಯಲ್ ಮಾನಿಟರಿಂಗ್’ ವ್ಯವಸ್ಥೆ. ಇದು ಜಿಲ್ಲೆಯ ಪಾತಕಿಗಳ ವಲಯದಲ್ಲಿ ನಡುಕ ಹುಟ್ಟುವಂತೆ ಮಾಡಿದೆ. ನಾಗರಿಕ ವಲಯದಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ವಿಶ್ವಾಸ ಮೂಡುವಂತೆ ಮಾಡಿದೆ.
ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಪ್ರಮುಖ ಪ್ರಕರಣಗಳ ವಿಚಾರಣೆಯ ಬಗ್ಗೆ ನಿಗಾವಹಿಸಿ, ಸಾಕ್ಷಿಗಳಿಗೆ ಸೂಕ್ತ ಭದ್ರತೆ ಕಲ್ಪಿಸುವ ಹಾಗೂ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮೂಲಕ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ’ಟ್ರಯಲ್ ಮಾನಿಟರಿಂಗ್’ ಎಂಬ ವ್ಯವಸ್ಥೆ ಆರಂಭಿಸಿದ್ದಾರೆ. ಈ ವ್ಯವಸ್ಥೆ ಆರಂಭಿಸಿ ಹಲವು ದಿನಗಳೇ ಕಳೆದಿವೆ. ಕೆಲವು ಮಹತ್ವದ ಪ್ರಕರಣಗಳ ವಿಚಾರಣೆಯ ವೇಳೆ ಸ್ವತಃ ಎಸ್‌ಪಿ ನ್ಯಾಯಾಲಯಕ್ಕೆ ತೆರಳಿ ಸಾಕ್ಷಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಪ್ರಕರಣಗಳು ನ್ಯಾಯಾಲಯದಲ್ಲಿ ವಿಫಲವಾಗುತ್ತಿರುವ ಬಗ್ಗೆ ಚಿಂತನೆ ನಡೆಸಿದಾಗ ಸಾಕ್ಷಿಗಳ ಕೊರತೆ ಮತ್ತು ಅದಕ್ಕೆ ತಕ್ಕ ಪೂರ್ವತಯಾರಿ ಇಲ್ಲದಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಠಾಣೆಗಳಿಂದಲೂ ವಿಚಾರಣೆಯಲ್ಲಿರುವ ಪ್ರಕರಣಗಳ ಮಾಹಿತಿ ತರಿಸಿಕೊಂಡು ಸೂಕ್ತ ದಾಖಲಾತಿ ಪಡೆದು ಅಧ್ಯಯನ ಮಾಡಿದೆ. ಸಾಕ್ಷಿಗಳು  ಮುಂದೆ ಬರಬೇಕೆನ್ನುವ ದೃಷ್ಟಿಯಿಂದ ಅವರಲ್ಲಿಯೂ ಮಾತನಾಡಿ, ಹೆದರದೆ ಸಾಕ್ಷಿ ನುಡಿಯಲು ಪ್ರೇರೇಪಣೆ ನೀಡಿದ್ದರಿಂದ ಮತ್ತು ದಾಖಲೆ ಹಾಗೂ ಮಾಹಿತಿಯನ್ನು ಸಕಾಲದಲ್ಲಿ ಸರ್ಕಾರಿ ಅಭಿಯೋಜಕರಿಗೆ ನೀಡಿದ್ದರಿಂದ ಪ್ರಕರಣ ಗೆಲ್ಲಲು ಸಾಧ್ಯವಾಗುತ್ತಿದೆ. ಪೊಲೀಸ್ ಕೇಸುಗಳು ಗೆಲ್ಲುವುದು ನೂರಕ್ಕೆ ಒಂದು ಎನ್ನುವ ಅಪವಾದವನ್ನು ತೊಡೆದು ಹಾಕಲು ಹೆಜ್ಜೆ ಇಡಲಾಗಿದೆ,  ಯಶಸ್ವಿಯಾಗುತ್ತಿದ್ದೇವೆ.
-ಎಸ್‌ಪಿ ಅಭಿನವ್ ಖರೆ

 ಅಪಾಯಕಾರಿ ಕ್ರಿಮಿನಲ್ಸ್‌ಗಳು, ಕುಖ್ಯಾತ ಪಾತಕಿಗಳು, ವಂಚಕರು ನಡೆಸುವ ಕೃತ್ಯಗಳನ್ನು ಪೊಲೀಸರು ಬಯಲಿಗೆಳೆದು ಅವರನ್ನು ಬಂಧಿಸುತ್ತಾರೆ. ಸೂಕ್ತ ಸಾಕ್ಷ್ಯಾಧಾರ ಕಲೆ ಹಾಕಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಕೂಡ ಸಲ್ಲಿಸುತ್ತಾರೆ. ಆದರೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯಗಳಲ್ಲಿ ಆರೋಪಿಗಳ ವಿರುದ್ದದ ಆರೋಪ ಸಾಬೀತಾಗುವುದಿಲ್ಲ.
ಏಕೆಂದರೆ, ಇಲ್ಲಿ ಪ್ರಕರಣಗಳಲ್ಲಿ ಮುಖ್ಯ ಸಾಕ್ಷಿದಾರರಾಗಿದ್ದವರೇ ನಾನಾ ಕಾರಣಗಳಿಂದ ವಿಚಾರಣೆಯ ವೇಳೆ ಉಲ್ಟಾ ಸಾಕ್ಷಿ ಹೇಳಿ ಕೇಸನ್ನು ವಿಫಲಗೊಳಿಸುತ್ತಾರೆ. ಮತ್ತೆ ಕೆಲವೊಮ್ಮೆ,ಪಾತಕಿಗಳು ತಮ್ಮ ವಿರುದ್ದ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳದಂತೆ ಸಾಕ್ಷಿದಾರರಿಗೆ ಬೆದರಿಕೆ ಹಾಕುವ, ಒತ್ತಡ ಸೃಷ್ಟಿಸುವುದರ ಜೊತೆಗೆ ನಾನಾ ರೀತಿಯ ತಂತ್ರಗಳಿಗೂ ಮೊರೆ ಹೋಗುತ್ತಾರೆ.
ಇದರಿಂದ ಕೆಲವು ಗುರುತರ, ಮಹತ್ತರ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದವರು ಶಿಕ್ಷೆಯಿಂದ ಬಚಾವಾಗುತ್ತಾರೆ. ಹೊರಬಂದು ಮತ್ತದೇ ಕ್ರಿಮಿನಲ್ ಮೂಲಕ ಬಾಲಬಿಚ್ಚುತ್ತಾರೆ. ಅಲ್ಲಿಗೆ ಅವರಿಗೆ ನ್ಯಾಯಾಲಯದಲ್ಲಿ ಹೇಗೆ ಸಾಕ್ಷಿಯನ್ನು ಬುಡಮೇಲೆ ಮಾಡಬೇಕೆಂಬ ವಿದ್ಯೆ ಕರಗತವಾಗುತ್ತದೆ. ಈ ರೀತಿಯ ಪ್ರಕ್ರಿಯೆಗಳು ಸಮಾಜದ ವ್ಯವಸ್ಥೆಯ ಬಗ್ಗೆ ಭ್ರಮನಿರಸನ ಉಂಟು ಮಾಡುತ್ತವೆ. ಮತ್ತೊಂದೆಡೆ, ಕೆಲವು ಕ್ರಿಮಿನಲ್ಸ್‌ಗಳಿಗೆ ಕಾನೂನಿನ ಭಯ ಎನ್ನುವುದೇ ಇಲ್ಲ ಎನ್ನುವ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ಸಮಾಜಬಾಹಿರ ಕೃತ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಪರೋಕ್ಷ ಪ್ರೋತ್ಸಾಹ ನೀಡಿದಂತಾಗುತ್ತದೆ.
ಟ್ರಯಲ್ ಮಾನಿಟರಿಂಗ್’ ವ್ಯವಸ್ಥೆ ಎಂದರೇನು?:
 ಕೊಲೆ, ಡಕಾಯಿತಿ, ರೌಡಿಸಂ ಸೇರಿದಂತೆ ಪ್ರಮುಖ ಪ್ರಕರಣಗಳ ಬಗ್ಗೆ ನ್ಯಾಯಾಲಯಗಳಲ್ಲಿ ನಡೆಯುವ ಪ್ರಕರಣಗಳ ವಿಚಾರಣೆಯ ಬಗ್ಗೆ ನಿಗಾ ವಹಿಸುವ ಟ್ರಯಲ್ ಮಾನಿಟರಿಂಗ್’ ವ್ಯವಸ್ಥೆಯನ್ನು ಖರೆ ಆರಂಭಿಸಿದ್ದಾರೆ.  ಇದರಲ್ಲಿ ಆಯಾ ಪೊಲೀಸ್ ಠಾಣೆಗಳ ಸಬ್ ಇನ್ಸ್‌ಪೆಕ್ಟರ್ ತಮ್ಮ ಠಾಣಾ ವ್ಯಾಪ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಪ್ರಮುಖ ಪ್ರಕರಣಗಳ ವಿಚಾರಣೆಯ ಪಟ್ಟಿಯನ್ನು ಸಿದ್ದಪಡಿಸಿಕೊಂಡು, ಆ ಪ್ರಕರಣಗಳ ವಿಚಾರಣೆ ನಡೆಯುವ ದಿನದಂದು ನ್ಯಾಯಾಲಯಕ್ಕೆ ತೆರಳಬೇಕು. ಪ್ರಕರಣಗಳಲ್ಲಿ ಸಾಕ್ಷ್ಯಗಳಾಗಿರುವವರು ನ್ಯಾಯಾಲಯಕ್ಕೆ ತಪ್ಪದೇ ಬರುವಂತೆ ಮಾಡಬೇಕು. ಭೇಟಿಯಾಗಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಆರೋಪಿಗಳಿಂದ ಏನಾದರೂ ಕಿರುಕುಳವಾಗುತ್ತಿದೆಯೇ ಎನ್ನುವುದರ ಮಾಹಿತಿ ಕಲೆ ಹಾಕಬೇಕು. ಸೂಕ್ತ ಭದ್ರತೆ ನೀಡಬೇಕು.
  ಎಸ್‌ಪಿ ಠಾಣಾಧಿಕಾರಿಗಳಿಗೆ ಈ ಕಟ್ಟುನಿಟ್ಟಿನ ಸೂಚನೆ ರವಾನಿಸಿ ಬಿಟ್ಟಿದ್ದಾರೆ. ಇದರಿಂದಾಗಿ ಕೆಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಅನುಗುಣವಾಗಿಯೇ ವರ್ತಿಸುತ್ತಿದ್ದ ಕೆಲವು ಪೊಲೀಸ್ ಅಧಿಕಾರಿಗಳಿಗೆ ತೊಂದರೆ ಆಗಿದೆ. ಠಾಣಾಧಿಕಾರಿಗಳು ಪ್ರಮುಖ ಪ್ರಕರಣಗಳ ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿದ್ದು ಸಾಕ್ಷಿದಾರರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಇದು ಎಲ್ಲಿಯವರೆಗೆ ತಲುಪಿದೆ ಎಂದರೆ ಸ್ವತಃ ಎಸ್‌ಪಿ ಅವರೇ ಕೆಲವು ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಬಂದು ಕುಳಿತಿರುತ್ತಾರೆ. ಇದರಿಂದಾಗಿ ಅಧಿಕಾರಿಗಳು ಈಗ ಕೈ ಕೈ ಹಿಸುಕಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಎಸ್‌ಪಿ ಖರೆ ನ್ಯಾಯಾಲಯಕ್ಕೆ ತೆರಳಿ ಸಾಕ್ಷಿದಾರರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ವಿವಿಧ ಪ್ರಕರಣಗಳ ಬಗ್ಗೆ ವಾದ ಮಂಡಿಸುವ ಸರ್ಕಾರಿ ಅಭಿಯೋಜಕರಿಗೆ ಸಕಾಲದಲ್ಲಿ ಸೂಕ್ತ ಮಾಹಿತಿಯನ್ನು ಸಂಬಂಧಿಸಿದ ಠಾಣೆಯಿಂದ  ದೊರಕುವ ವ್ಯವಸ್ಥೆಯನ್ನು ಮಾಡಿದ್ದಾರೆ. ಇದರಿಂದಾಗಿ ಎಸ್‌ಐ, ಸಿಪಿಐ ಮತ್ತು ಡಿಎಸ್‌ಪಿ  ಪ್ರತಿಯೊಂದು ಕೇಸನ್ನೂ ಸೂಕ್ಷ್ಮವಾಗಿ ಅವಲೋಕನ ಮಾಡುವಂತಾಗಿದೆ. ಕೇಸ್ ಸ್ಟಡಿ ಇಲ್ಲದೆ ನ್ಯಾಯಾಲಯಕ್ಕೆ ಹೋಗುವಂತಿಲ್ಲ. ಜೊತೆಗೆ ಎಸ್‌ಪಿ ಕೇಳಿದ ಮಾಹಿತಿ ಮತ್ತು ದಾಖಲೆಯನ್ನು ಒದಗಿಸಲೇಬೇಕಿದೆ.
 ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯಾದವರು ಕೇವಲ ಕಾನೂನು, ಸುವ್ಯವಸ್ಥೆ, ದಾಖಲೆ ಪತ್ರಕ್ಕೆ ಸಹಿ ಹಾಕುವುದು, ಬಂದೋಬಸ್ತ್, ಮೀಟಿಂಗ್ ಮಾಡುತ್ತ ಕುಳಿತುಕೊಳ್ಳದೆ ತನ್ನ ವ್ಯಾಪ್ತಿಯ ಇತರ ಕರ್ತವ್ಯಗಳ ಬಗ್ಗೆ ಗಮನಹರಿಸಿದರೆ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿದೆ ಎನ್ನುವುದಕ್ಕೆ ಇದು ಉದಾಹರಣೆ. ಜೊತೆಗೆ ಕಿರಿಯ ಅಧಿಕಾರಿಗಳಿಗೆ ಇದರ ಬಗ್ಗೆ   ಸೂಚನೆ ಕೊಡುತ್ತ ಅವರನ್ನೂ ಹುರಿದುಂಬಿಸುತ್ತ ಸಾಗಿದರೆ ಸಮಾಜಕ್ಕೆ ಉತ್ತಮ ಸಂದೇಶ ಕೊಡಬಹುದೆನ್ನುವುದಕ್ಕೂ ಇದು ನಿದರ್ಶನವಾಗಿದೆ.  


ಈ ಹೊಸ ವ್ಯವಸ್ಥೆಯಿಂದಾಗಿ ಜಿಲ್ಲೆಯಲ್ಲಿ ಅತಿ ಪ್ರಮುಖವಾದ ಎರಡು ಪ್ರಕರಣಗಳಲ್ಲಿ (ಒಂದು ತಿಂಗಳೊಳಗೆಯೇ) ಕುಖ್ಯಾತರಿಗೆ, ರೌಡಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ. 
ಪ್ರಕರಣ 1: ಶಿವಮೊಗ್ಗದ ಮಟನ್‌ಸ್ಟಾಲ್ ಮಾಲಕರನ್ನು ವ್ಯವಹಾರದ ದ್ವೇಷದ ಹಿನ್ನೆಲೆಯಲ್ಲಿ ಕೊಚ್ಚಿ ಹಾಕಿದ್ದ ಪ್ರಕರಣದಲ್ಲಿ  ರೌಡಿ ಸಹಿತ ಆರೆಂಟು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಜಿಲ್ಲಾ ನ್ಯಾಯಾಲಯ ಘೋಷಿಸಿದೆ.    
ಪ್ರಕರಣ 2:  ಸಾಗರದ ಬಿಎಚ್ ರಸ್ತೆಯ ಶರಾವತಿ ಕೋಲ್ಡ್ ಡ್ರಿಂಕ್ಸ್ ಬಳಿ 2014ರ ಅಕ್ಟೊಬರ್ 20ರಂದು ನಡೆದಿದ್ದ ಮಲಬಾರಿ ಬಾಬು ಎನ್ನುವವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಸಾಗರದ 5ನೆಯ ಹೆಚ್ಚುವರಿ ನ್ಯಾಯಾಲಯ ಎ. 6ರಂದು ಘೋಷಿಸಿದೆ.


---------------------------------

Wednesday, 5 April 2017

ಜಿಲ್ಲೆಯಲ್ಲಿ 194 ಮದ್ಯದಂಗಡಿಗಳ ಸ್ಥಳಾಂತರ ಅನಿವಾರ್ಯ
  ಸುಪ್ರೀಂಕೋರ್ಟ್ ಆದೇಶದ  ಪರಿಣಾಮ

* ಒಟ್ಟಾರೆ 228 ಮದ್ಯ ಮಾರಾಟ ಕೇಂದ್ರಗಳಿವೆ.
್ಲ *ಶಿವಮೊಗ್ಗ ತಾಲೂಕಿನಲ್ಲಿ 92, ಭದ್ರಾವತಿಯಲ್ಲಿ 48, ಶಿಕಾರಿಪುರ 19 ಅಂಗಡಿಗಳಿವೆ.
*, ಸಾಗರ 24, ಸೊರಬ 14, ತೀರ್ಥಹಳ್ಳಿಯಲ್ಲಿ 18 ಹಾಗೂ ಹೊಸನಗರ ತಾಲೂಕಿನಲ್ಲಿ 13 ಮದ್ಯ ಮಾರಾಟ ಅಂಗಡಿಗಲಿವೆ. 
* ಇದರಲ್ಲಿ 111 ವೈನ್‌ಶಾಪ್, 7 ಕ್ಲಬ್, 7 ಹೋಟೆಲ್-ಲಾಡ್ಜಿಂಗ್ ಸೇರಿವೆ.
* 58 ಬಾರ್ ಅಂಡ್ ರೆಸ್ಟೋರೆಂಟ್, 9 ಎಂಎಸ್‌ಐಎಲ್ ಹಾಗೂ ಇತರೆ 2 ಮದ್ಯ ಮಾರಾಟ ಕೇಂದ್ರಗಳು ಸ್ಥಳಾಂತರಗೊಳ್ಳಲಿವೆ.

ಶಿವಮೊಗ್ಗ  ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ 500 ಮೀಟರ್ ವ್ಯಾಪ್ತಿಯೊಳಗಿರುವ ಎಲ್ಲ ಮದ್ಯದಂಗಡಿಗಳನ್ನು ಮುಚ್ಚುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ  ಜಿಲ್ಲೆಯಲ್ಲಿ 194 ಮದ್ಯದಂಗಡಿಗಳನ್ನು ಸ್ಥಳಾಂತರ ಮಾಡುವುದು ಅನಿವಾರ್ಯವಾಗಿದೆ. ಇದು ಮದ್ಯ ವ್ಯಾಪಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮದ್ಯ ಮಾರಾಟ ಕ್ಷೇತ್ರದಲ್ಲಿ ಭಾರೀ ದೊಡ್ಡ ಗೊಂದಲವೇ ಸೃಷ್ಟಿಯಾಗುವಂತೆ ಮಾಡಿದೆ.
ಜಿಲ್ಲೆಯಲ್ಲಿ ಒಟ್ಟಾರೆ 228 ಮದ್ಯ ಮಾರಾಟ ಕೇಂದ್ರಗಳಿವೆ. ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮದಿಂದ 194 ಕೇಂದ್ರಗಳನ್ನು ಸ್ಥಳಾಂತರ ಮಾಡಲೇಬೇಕಾಗಿದೆ. ಸುಪ್ರೀಂ ತೀರ್ಪಿನಂತೆ ಅಬಕಾರಿ ಇಲಾಖೆಯು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳ ತೆರವಿಗೆ ಕ್ರಮಕೈಗೊಳ್ಳಲು ಮುಂದಾಗಿದೆ. ಈ ನಡುವೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ 20 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯಿರುವ ಪಟ್ಟಣ ಪ್ರದೇಶಗಳಲ್ಲಿ 500 ಮೀಟರ್‌ಗೆ ಬದಲಾಗಿ 220 ಮೀಟರ್ ಪರಿಮಿತಿಯನ್ನು ನಿಗದಿಪಡಿಸಿದೆ. ಈ ನಿಯಮ ಜಿಲ್ಲೆಗೆ ಅನ್ವಯವಾಗದಿರುವುದರಿಂದ ಮದ್ಯದಂಗಡಿಗಳಿಗೂ ರಿಯಾಯ್ತಿ ಲಭಿಸದಂತಾಗಿದೆ.
 ಈ ಮೊದಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದ ವೇಳೆಯೇ ಜಿಲ್ಲಾ ಅಬಕಾರಿ ಇಲಾಖೆಯು ಜಿಲ್ಲೆಯಲ್ಲಿ ಎಲ್ಲೆಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಹಾದು ಹೋಗಿವೆ ಎಂಬುವುದರ ಮಾಹಿತಿಯನ್ನು ಪಿಡಬ್ಲ್ಯೂಡಿ ಇಲಾಖೆಯಿಂದ ಪಡೆದುಕೊಂಡಿತ್ತು. ಈ ಮಾಹಿತಿಯ ಅನುಸಾರ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಅಂಗಡಿಗಳ ಸರ್ವೇ ಕಾರ್ಯ ನಡೆಸಿತ್ತು. ತೆರವುಗೊಳಿಸಬೇಕಾದ ಮದ್ಯದಂಗಡಿಗಳ ಪಟ್ಟಿ ಸಿದ್ದಪಡಿಸಿ ನೋಟೀಸ್ ಕೂಡ ನೀಡಿತ್ತು.
ಈ ನಡುವೆ ರಾಜ್ಯ ಸರ್ಕಾರವು ಸುತ್ತೊಲೆಯೊಂದನ್ನು ಹೊರಡಿಸಿ, ವೈನ್‌ಶಾಪ್ ಹಾಗೂ ಎಂಎಸ್‌ಐಎಲ್ ಮಾರಾಟ ಮಳಿಗೆಗಳನ್ನು ಮಾತ್ರ ಸ್ಥಳಾಂತರಿಸಬೇಕು ಎಂದು ಬೇರ‌್ಯಾವುದೇ ಸನ್ನದ್ದು ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬಾರದು ಎಂದು ತಿಳಿಸಿತ್ತು. ಇದು ಅಬಕಾರಿ ಇಲಾಖೆ ಅಧಿಕಾರಿಗಳಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ಮತ್ತೊಂದೆಡೆ ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್, ಲಾಡ್ಜ್ - ಬೋರ್ಡಿಂಗ್‌ಗಳ ಮಾಲೀಕರು ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಆದರೆ ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್ ಹೊರಡಿಸಿರುವ ಹೊಸ ಆದೇಶವು ಎಲ್ಲ ಮದ್ಯ ಮಾರಾಟ ಸನ್ನದ್ದುಗಳನ್ನು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ನಿಗದಿತ ಅಂತರದಿಂದ ತೆರವುಗೊಳಿಸಬೇಕಾಗಿರುವುದು ಅನಿವಾರ್ಯವಾಗಿದೆ.
ಒಟ್ಟಾರೆ ಸುಪ್ರೀಂ ಕೋರ್ಟ್ ಆದೇಶ ಜಿಲ್ಲೆಯ ಮದ್ಯ ಮಾರಾಟ ವಲಯದಲ್ಲಿ ತಲ್ಲಣ ಉಂಟುಮಾಡಿದೆ. ಬೇರೆಡೆ ಅಂಗಡಿಗಳ ಸ್ಥಳಾಂತರ ಮಾಡಲೇಬೇಕಾದ ಮದ್ಯದಂಗಡಿಗಳ ಮಾಲೀಕರು ಪರಿತಪಿಸುವಂತಾಗಿದೆ. ಅಂಗಡಿ ಸ್ಥಾಪನೆಗೆ ಸೂಕ್ತ ಸ್ಥಳಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
-------------------------------------

Tuesday, 4 April 2017

ಶಿವಮೊಗ್ಗದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ 
 ಬಿಸಿಲ ಧಗೆಗೆ ನಾಗರಿಕರು ತತ್ತರ* ಜೂಸ್ ಅಂಗಡಿಗಳಿಗೆ ಡಿಮಾಂಡ್ 


ಒಂದೆಡೆ ಬಿಸಿಲ ಬೇಗೆ ಏರುತ್ತಿದ್ದಂತೆ ಮತ್ತೊಂದೆಡೆ ತಂಪು ಪಾನೀಯ, ಹಣ್ಣುಗಳಿಗೆ ಅಪಾರ ಡಿಮಾಂಡ್ ಕಂಡುಬಂದಿದೆ. ತಂಪು ಪಾನೀಯ - ಐಸ್ ಕ್ರೀಂ ಮಾರಾಟ ಸ್ಥಳಗಳು ಜನರಿಂದ ತುಂಬಿ ತುಳುಕುತ್ತಿವೆ. ಕಲ್ಲಂಗಡಿ, ಖರಬೂಜದಂತಹ ಹಣ್ಣುಗಳಿಗೆ ನಾಗರಿಕ ವಲಯದಲ್ಲಿ ಭಾರೀ ಬೇಡಿಕೆ ಕಂಡುಬರುತ್ತಿದೆ. ಕಬ್ಬಿನಹಾಲು ಅಂಗಡಿಗಳಿಗೆ ಭರಪೂರ ವ್ಯಾಪಾರ ನಡೆಯುತ್ತಿದ್ದು, ಎಲ್ಲ ವೃತ್ತ ಮತ್ತು ರಸ್ತೆಗಳಂಚಿನಲ್ಲಿ ಹೆಚ್ಚೆಚ್ಚು ಇಂತಹ ಅಂಗಡಿ ಕಂಡುಬರಲಾಂಭಿಸಿದೆ. ಕೆಲವು ಸಣ್ಣ-ಪುಟ್ಟ ಹೊಟೆಲ್‌ಗಳಲ್ಲಿ ಮಜ್ಜಿಗೆ- ಶರಬತ್ತನ್ನು ಮಾರಾಟ ಮಾಡುತ್ತಿದ್ದು. ಇವು ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಸಿಗುತ್ತಿರುವುದರಿಂದ ಇವುಗಳಿಗೆ ಮಾರುಹೋಗುತ್ತಿದ್ದಾರೆ. ಇನ್ನು ಎಳನೀರು ದರವೂ ಬೇಸಿಗೆಯ ಬಿಸಿಲಿನಂತೆಯೇ ಏರಲಾರಂಭಿಸಿದೆ. ಆದ್ದರಿಂದ ಇದಕ್ಕೆ ಮೊರೆ ಹೋಗುವವರ ಸಂಖ್ಯೆ ಇಳಿಮುಖವಾಗುತ್ತಿದೆ.

ಶಿವಮೊಗ್ಗ, : ಶಿವಮೊಗ್ಗ ನಗರದಲ್ಲಿ ತಾಪಮಾನದ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ದಾಖಲಾಗುತ್ತಿರುವ ಗರಿಷ್ಠ ಉಷ್ಣಾಂಶದ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಬಿಸಿಲ ಧಗೆಗೆ ನಾಗರಿಕರು ತತ್ತರಿಸಿದ್ದಾರೆ. ಬಿಸಿಲಿನಲ್ಲಿ ತಿರುಗಾಡಲಾಗದೆ ಮನೆಯಲ್ಲೇ ಕುಳಿತುಕೊಳ್ಳುವ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಕಳೆದ ಶನಿವಾರವೇ ನಗರದಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶದ ಪ್ರಮಾಣ 41 ಡಿಗ್ರಿ ಸೆಲ್ಸಿಯಸ್ ಆಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ದಾಖಲಾದ ಅತ್ಯಧಿಕ ಉಷ್ಣಾಂಶ ಇದಾಗಿದೆ ಎಂದು ಹವಮಾನ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಸದ್ಯದ ಸ್ಥಿತಿ ಗಮನಿಸಿದರೆ ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ತಾಪಮಾನದ ಪ್ರಮಾಣದಲ್ಲಿ ಮತ್ತಷ್ಟು ಅಧಿಕವಾಗುವ ಸಾಧ್ಯತೆಯಿದ್ದು, ಇದು ನಾಗರಿಕರ ನಿದ್ದೆಗೆಡಿಸಿದೆ. ಮಲೆನಾಡ ನಗರಿಯಲ್ಲಿನ ಬೇಸಿಗೆ ವಾತಾವರಣ ಬಯಲು ಸೀಮೆಯ ಅನುಭವ ಉಂಟು ಮಾಡುತ್ತಿದೆ.
ಬೇಸಿಗೆಯ ಅವಧಿಯಲ್ಲಿಯೂ ತಣ್ಣನೆಯ ವಾತಾವರಣಕ್ಕೆ ಹೆಸರುವಾಸಿಯಾಗಿದ್ದ ನಗರದಲ್ಲೀಗ ಎಲ್ಲೆಲ್ಲೂ ಬಿಸಿಗಾಳಿ ಬೀಸುತ್ತಿರುವುದು ಕಂಡುಬರುತ್ತಿದೆ. ನಾಗರಿಕರು ತಣ್ಣನೆಯ ಸ್ಥಳಗಳನ್ನರಿಸಿ ಹೋಗುವಂತಾಗಿದೆ. ಮಧ್ಯಾಹ್ನದ ವೇಳೆಯಲ್ಲಿ ರಸ್ತೆಗಳಲ್ಲಿ ತಿರುಗಾಡಲಾಗದ ಮಟ್ಟಕ್ಕೆ ರಸ್ತೆಗಳು ಬಿಸಿಲಿಗೆ ಕಾದಿರುತ್ತವೆ.
 ಬೆಳಿಗ್ಗೆ 10 ಗಂಟೆಯ ವೇಳೆಗಾಗಲೇ  ಮನೆ ಬಿಟ್ಟು ಹೊರಗಡೆ ಬರಲು ಆಗದ ಮಟ್ಟಕ್ಕೆ ಬಿಸಿಲು ಬೀಳುತ್ತಿದೆ. ಮಧ್ಯಾಹ್ನದ ವೇಳೆಯಂತೂ ನಗರದ ಪ್ರಮುಖ ರಸ್ತೆಗಳೆಲ್ಲ ಕಾದ ಕಾವಲಿಗಳಾಗಿರುತ್ತವೆ. ಜನ - ವಾಹನ ಸಂಚಾರ ದಟ್ಟಣೆ ಕಡಿಮೆಯಿರುವುದು ಕಂಡುಬರುತ್ತಿದೆ. ಫ್ಯಾನ್, ಎಸಿ, ಏರ್ ಕೂಲರ್ ಇಲ್ಲದೆ ಮನೆ - ಕಚೇರಿಯೊಳಗಿರಲು ಅಸಾಧ್ಯವಾಗಿದೆ. ಈ ವೇಳೆ ಜನಸಂಚಾರವೂ ಕಡಿಮೆ ಇರುತ್ತದೆ. ಸಂಜೆ 4:30 ಅಥವಾ 5ರ ನಂತರವೇ ಹೆಚ್ಚಿನ ಜನ ಪೇಟೆಯಲ್ಲಿ ಕಂಡುಬರುವಂತಾಗಿದೆ.
ಕಾಡುಗಳ ಮತ್ತು ನಗರದಲ್ಲಿ ಗಿಡಮರಗಳ ಕಣ್ಮರೆಯಿಂದ ಬಿಸಿಲಿನ ತಾಪಮಾನ ಒಂದೇ ಸಮನೆ ಏರುತ್ತಿದೆ. ಹೆಚ್ಚುತ್ತಿರುವ ಕಾಂಕ್ರೀಟ್ ರಸ್ತೆ ಮತ್ತು ಕಟ್ಟಡಗಳಿಂದ ಬಿಸಿಲಿನ ಶಾಖ ಪ್ರಖರವಾಗಿ ಜನರ ಮೇಲೆ ಪರಿಣಾಮ ಬೀರಲಾರಂಭಿಸಿದೆ. ತಂಪುಗಾಳಿ ಬೀಸಬೇಕಾಗಿದ್ದ ಮಲೆನಾಡಿನಲ್ಲಿ ಬಿಸಿಗಾಳಿ ಎದುರಾಗಿದೆ, ನಗರದಲ್ಲಂತೂ ಈ ವರ್ಷದ ಬೇಸಿಗೆ ಕಳೆಯುವುದು ಹೇಗೆಂಬ ಮಾತು ಸಾಧಾರಣವಾಗಿ ಕೇಳಿಬರಲಾಂಭಿಸಿದೆ. ಸಂಜೆಯಾಯಿತೆಂದರೆ ಎಲ್ಲ ಮನೆಯವರು ಮನೆಯ ಹೊರಾಂಗಣದಲ್ಲಿ ತಂಪುಗಾಲಿ ಅರಸುತ್ತ ಕುಳಿತುಕೊಳ್ಳುವಂತಾಗಿದೆ.
ಮೇಲಂತಸ್ತಿನ ಮನೆಯಲ್ಲಿ ವಾಸಿಸುತ್ತಿರುವವರ ಪಾಡು ಯಾರಿಗೂ ಬೇಡವಾಗಿದೆ. ಮನೆಗಳ ಮೇಲೆ ಶೀಟ್‌ಗಳನ್ನು ಹೊದಿಸಿ ಆದಷ್ಟು ತಂಪು ಮಾಡಿಕೊಳ್ಳುವ ಕೆಲಸ ಭರದಿಂದ ಸಾಗಿದೆ. ಹೇಗಾದರೂ ಸೆಕೆಯಿಂದ ಪಾರಾದರೆ ಸಾಕೆಂಬ ಮನೋಭಾವ ಜನರಲ್ಲಿದೆ.  
ಕಳೆದೊಂದು ದಶಕದ ಅವಧಿಯಲ್ಲಿ ಅಭಿವೃದ್ದಿಯ ನೆಪದಲ್ಲಿ ನಗರದಲ್ಲಿ ಸಾವಿರಾರು ಮರಗಳ ಮಾರಣ ಹೋಮ ನಡೆಸಲಾಗಿದೆ. ಭಾರೀ ಪ್ರಮಾಣದ ಕೆರೆಕಟ್ಟೆಗಳು ಕಣ್ಮರೆಯಾಗಿವೆ. ಪರಿಸರ ಸಂರಕ್ಷಣೆಯತ್ತ ಜನರಿಗೆ ಕಾಳಜಿಇಲ್ಲವಾಗಿದೆ. ಇದೆಲ್ಲದರ ಪರಿಣಾಮದಿಂದ ನಗರದ ಪರಿಸರದಲ್ಲಿ ಭಾರೀ ಪ್ರಮಾಣದ ವೈಪರೀತ್ಯ ಕಂಡುಬರುತ್ತಿದೆ. ತಾಪಮಾನ ಹೆಚ್ಚಳಕ್ಕೆ ಇದು ಕಾರಣವಾಗಿದೆ ಎಂಬ ವಿಶ್ಲೇಷಣೆ ನಡೆಯುತ್ತಲೇ ಇದೆ.

----------------------------------------

Monday, 3 April 2017

 ಜೋಗ ಜಲಪಾತ ನೀರಿಲ್ಲದೆ ಬರಿದು


ಶಿವಮೊಗ್ಗ, ಏ. 3: ಮಳೆಗಾಲದಲ್ಲಿ ನೀರಿನಿಂದ ಧುಮ್ಮಿಕ್ಕುತ್ತಾ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುವ ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಪ್ರಸ್ತುತ  ಕಲ್ಲು ಬಂಡೆಗಳು ಗೋಚರವಾಗುತ್ತಿವೆ. ಇದರಿಂದ ಪ್ರವಾಸಿಗರು ನಿರಾಸೆಯಿಂದ ಹಿಂದಿರುಗುವಂತಾಗಿದೆ.
ಬಿಸಿಲಿನ ಬೇಗೆಗೆ ’ರಾಜ’, ’ರಾಣಿ’ ಜಲಪಾತ ಸಂಪೂರ್ಣ ಬತ್ತಿ ಹೋಗಿದ್ದರೆ, ’ರೋರರ್’ ಆರ್ಭಟ ಇಲ್ಲವಾಗಿದೆ. ’ರಾಕೆಟ್’ ಜಲಪಾತದಲ್ಲಿ ಮಾತ್ರ ಪ್ರಸ್ತುತ ಸಣ್ಣ ಪ್ರಮಾಣದ ನೀರು ಧುಮ್ಮಿಕ್ಕುತ್ತಿರುವುದು ಕಂಡುಬರುತ್ತಿದೆ.
ಮಳೆಗಾಲದಲ್ಲಿ ಜಲಪಾತದ ರುದ್ರರಮಣೀಯ ವೈಭೋಗ ಕಣ್ತುಂಬಿಕೊಂಡವರು ಅದೇ ನಿರೀಕ್ಷೆಯಲ್ಲಿ ಪ್ರಸ್ತುತ ಜೋಗಕ್ಕೆ ತೆರಳಿದರೆ ನಿರಾಸೆ ಕಟ್ಟಿಟ್ಟ ಬುತ್ತಿಯಾಗಿದೆ. ಆ ಮಟ್ಟಕ್ಕೆ ಜಲಪಾತ ನೀರಿಲ್ಲದೆ ಸೊರಗಿ ಹೋಗಿದೆ. ಜಲಪಾತದ ಸುತ್ತಮುತ್ತ ಕಂಡುಬರುತ್ತಿದ್ದ ಹಸಿರ ಹೊದಿಕೆಯೂ ಈಗ ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
  ಡಿಸೆಂಬರ್‌ವರೆಗೂ ಜೋಗಕ್ಕೆ ದೇಶ-ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರಸ್ತುತ ಜೋಗಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಸಂಪೂರ್ಣವಾಗಿ ಕ್ಷೀಣಿಸಿದ್ದು, ಬೆರಳೆಣಿಕೆಯ ಪ್ರವಾಸಿಗರು ಬರುತ್ತಿದ್ದಾರೆ. ಅವರು ಕೂಡ ಕಳೆಗುಂದಿದ ಜಲಪಾತ ನೋಡಿ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ’ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡುತ್ತಾರೆ.
ವ್ಯವಹಾರಕ್ಕೆ ಧಕ್ಕೆ: 
ಜೋಗ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರನ್ನೇ ನಂಬಿ ವ್ಯಾಪಾರ-ವಹಿವಾಟು ನಡೆಸುವವರ ಪಾಡಂತೂ ಹೇಳತೀರದಾಗಿದೆ. ಹೋಟೆಲ್, ಲಾಡ್ಜ್, ಹೋಂ ಸ್ಟೇಗಳು ಬಣಗುಡುತ್ತಿವೆ. ವರ್ತಕರು ವ್ಯಾಪಾರವಿಲ್ಲದೆ ತೀವ್ರ ನಷ್ಟ ಅನುಭವಿಸುವಂತಾಗಿದೆ.  ಜೋಗಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಕುಸಿದಿದೆ. ಇದರಿಂದ ಹೋಟೆಲ್, ಲಾಡ್ಜ್, ಹೋಂ ಸ್ಟೇಗಳ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕೆಲವು ದಿನಗಳವರೆಗೆ ವ್ಯವಹಾರ ಮುಚ್ಚುವುದು ಅನಿವಾರ್ಯವಾಗಿದೆ ಎಂದು ಸ್ಥಳೀಯ ಹೋಟೆಲ್‌ನ ಮಾಲಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
 ಜೋಗ ಜಲಪಾತವನ್ನು ಸರ್ವಋತು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಕ್ರಮಕೈಗೊಂಡಿತ್ತು. ಬೇಸಿಗೆಯ ಅವಧಿಯಲ್ಲಿಯೂ ಮಳೆಗಾಲದ ರೀತಿಯಲ್ಲಿ ಜಲಪಾತದಲ್ಲಿ ನೀರು ಧುಮ್ಮಿಕ್ಕುವಂತೆ ಮಾಡುವುದು ಹಾಗೂ ಜೋಗ ಸುತ್ತಮುತ್ತಲು ನಾನಾ ಅಭಿವೃದ್ದಿ ಕಾರ್ಯ ಕೈಗೆತ್ತಿಕೊಳ್ಳುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಈ ಯೋಜನೆ ಇದಾಗಿದೆ.  ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಜಾಗತಿಕ ಟೆಂಡರ್ ಕೂಡ ಆಹ್ವಾನಿಸಿತ್ತು. ಕಳೆದ ವರ್ಷ ಖಾಸಗಿ ವ್ಯಕ್ತಿಯೋರ್ವರಿಗೆ ಯೋಜನೆ ಅನುಷ್ಠಾನದ ಜವಾಬ್ದಾರಿ ಹಸ್ತಾಂತರಿಸಲು ಸರ್ಕಾರ ಅನುಮತಿ ಕೂಡ ನೀಡಿತ್ತು.
-----------------------------

Tuesday, 21 March 2017

ಕೆಐಡಿಬಿಗೆ ಬೇಡವಾಗಿದೆ ಅದರ ಕೂಸು 
  ಅವ್ಯವಸ್ಥೆಯ ಆಗರವಾಗಿದೆ ಆಟೋ ಕಾಂಪ್ಲೆಕ್ಸ್ ಆವರಣ





ಶಿವಮೊಗ್ಗ  : ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ... ಹಂದಿಗಳ ಹಾವಳಿ... ಯಾವುದೇ ರಸ್ತೆಗೆ ಕಾಲಿಟ್ಟರೂ ಮೈ, ಕೈಗೆ ಮೆತ್ತಿಕೊಳ್ಳುವ ಧೂಳು... ಚರಂಡಿ, ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳು... ರಸ್ತೆಯ ಫುಟ್‌ಪಾತ್ ಅತಿಕ್ರಮಿಸಿ ನಿಂತಿರುವ ಹಳೇಯ ವಾಹನಗಳು...!’
ಇದು ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ಕೆಐಡಿಬಿ ಸಂಸ್ಥೆಗೆ ಸೇರಿದ ಕೈಗಾರಿಕಾ ವಸಾಹತು (ಆಟೋ ಕಾಂಪ್ಲೆಕ್ಸ್) ಆವರಣದಲ್ಲಿ ಕಂಡುಬರುವ ಅವ್ಯವಸ್ಥೆಯ ಪ್ರಮುಖ ಅಂಶಗಳು.
 ಅಸಮರ್ಪಕ ನಿರ್ವಹಣೆ, ಮೇಲ್ವಿಚಾರಣೆಯ ಕೊರತೆ, ಯರ‌್ರಾಬಿರ‌್ರಿಯಾಗಿ ನಡೆಯುತ್ತಿರುವ ಒತ್ತುವರಿಯಿಂದ ಇಡೀ ಆಟೋ ಕಾಂಪ್ಲೆಕ್ಸ್ ಪ್ರದೇಶ ಕಿಷ್ಕ್ಕಿಂಧೆಯಂತಾಗಿದೆ. ಗಲೀಜಿನ ತಾಣವಾಗಿ ಪರಿವರ್ತಿತವಾಗಿದ್ದು, ನಾಗರಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.  ಇಲ್ಲಿ ಹೇಳುವವರು, ಕೇಳುವವರ‌್ಯಾರೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ದಿನದಿಂದ ದಿನಕ್ಕೆ ಕೈಗಾರಿಕಾ ಪ್ರದೇಶದ ಸ್ಥಿತಿ ಮತ್ತಷ್ಟು ಅಧೋಗತಿಗಿಳಿಯುತ್ತಿದೆ. ಇನ್ನಾದರೂ ಸಂಬಂಧಿಸಿದವರು ಎಚ್ಚೆತ್ತುಕೊಂಡು ಇಲ್ಲಿರುವ ಅವ್ಯವಸ್ಥೆ ಸರಿಪಡಿಸಲು ಮುಂದಾಗಬೇಕಿದೆ.
 ನಗರದ ಹೃದಯ ಭಾಗದಲ್ಲಿರುವ ಆಟೋ ಕಾಂಪ್ಲೆಕ್ಸ್ ಆವರಣದಲ್ಲಿ ಮಾತ್ರ ಸ್ವಚ್ಛತಾ ಅಭಿಯಾನ ನಡೆಯುತ್ತಿಲ್ಲ. ಅಭಿಯಾನಕ್ಕೂ ಈ ಪ್ರದೇಶಕ್ಕೂ ಸಂಬಂಧವೇ ಇಲ್ಲವೇನೋ ಎಂಬ ಸ್ಥಿತಿ ಆ ಪ್ರದೇಶಕ್ಕೆ ಕಾಲಿಟ್ಟರೆ ಭಾಸವಾಗುತ್ತದೆ. ಎಲ್ಲೆಂದರಲ್ಲಿ ಘನತ್ಯಾಜ್ಯದ ರಾಶಿ ಕಂಡುಬರುತ್ತದೆ. ಹಂದಿಗಳ ಹಾವಳಿಯಂತೂ ವಿಪರೀತ ಮಟ್ಟಕ್ಕೆ ತಲುಪಿದೆ. ರಾಜಕಾಲುವೆ, ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿಕೊಂಡಿದ್ದು ದುರ್ನಾತ ಬೀರುತ್ತಿವೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ ಶುರುವಾಗುತ್ತದೆ. ಮತ್ತೊಂದೆಡೆ ಸಂಕೀರ್ಣದ ಯಾವುದೇ ರಸ್ತೆಗೆ ಕಾಲಿಟ್ಟರೂ ಧೂಳು ಮೈ, ಕೈಗೆ ಮೆತ್ತಿಕೊಳ್ಳುತ್ತದೆ. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ.
ಕೆಲವು ಅಂಗಡಿಗಳ ಮಾಲಕರು ಚರಂಡಿ, ರಾಜಕಾಲುವೆ, ಪುಟ್‌ಪಾತ್ ಒತ್ತುವರಿ ಮಾಡಿ ಕಟ್ಟಡ ಕಟ್ಟಿದ್ದಾರೆ. ಮತ್ತೆ ಕೆಲವರು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಮಳೆಗಾಲದ ವೇಳೆ ಮಳೆಯ ನೀರು ಸರಾಗವಾಗಿ ಹರಿಯದೆ ಅಂಗಡಿಗಳಿಗೆ ನುಗ್ಗುತ್ತಿದೆ ಎಂಬ ಆರೋಪ ಇದೆ. ಇನ್ನೊಂದೆಡೆ, ಕೆಲವು ಅಂಗಡಿಗಳ ಮಾಲೀಕರು ರಿಪೇರಿಗೆ ಆಗಮಿಸುವ ಹಳೇಯ ವಾಹನಗಳು, ಮತ್ತಿತರ ಕಬ್ಬಿಣದ ವಸ್ತುಗಳನ್ನು ಪುಟ್‌ಪಾತ್ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ದಾಸ್ತಾನು ಮಾಡುತ್ತಿದ್ದಾರೆ. ಇದರಿಂದ ಜನ - ವಾಹನ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಕೆಲ ಅಂಗಡಿ ಮಾಲೀಕರು ಜಗಳಕ್ಕಿಳಿಯುತ್ತಾರೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಸದ್ಯ ಈ ಜಾಗ  ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಶದಲ್ಲಿದೆ. ಇದರ ಕಚೇರಿ ಇರುವುದು ದಾವಣಗೆರೆಯಲ್ಲಿ. ಆದ್ದರಿಂದ ಅಧಿಕಾರಿಗಳು ಇಲ್ಲಿಗೆ ಬರುವುದೇ ತೀರಾವಿರಳ. ಬಂದರೂ ಸಮಸ್ಯೆ ಆಲಿಸಿ ಹೋಗಿದ್ದಾರೆಯೇ ವಿನಾ ಪರಿಹಾರದತ್ತ ತಲೆಕೆಡಿಸಿಕೊಂಡಿಲ್ಲ. ಉಳಿದ ಸಂಸ್ಥೆಗಳಾರೂ ಅಭಿವೃದ್ಧಿಗೆ ಬರುವಂತಿಲ್ಲದ ಕಾರಣ ಇಲ್ಲಿನ ಪ್ರಗತಿ ಬಗ್ಗೆ ಚಿಂತಿಸುತ್ತಿಲ್ಲ. ಯಾರಿಗೂ ಬೇಡವಾದ ಸ್ಥಳವಾಗಿದೆ.  
ಕೆಐಡಿಬಿಯವರು ಮನಸ್ಸು ಮಾಡಿದ್ದರೆ ಎಷ್ಟೋ ಉತ್ತಮವಾಗಿ ಬೆಳೆಸಬಹುದಿತ್ತು. ಈಗ ಮೂಲಸೌಕರ್ಯವೂ ಇಲ್ಲ. ಇಲ್ಲಿ ಗ್ಯಾರೇಜು, ಅಂಗಡಿ ಮಾಡಿಕೊಂಡವರು ಪರದಾಡುವಂತಾಗಿದೆ. ಸ್ಥಳೀಯ ಅಂಗಡಿ, ವರ್ಕ್‌ಶಾಪ್ ಸಂಘಟನೆಯವರು ಹಲವು ಬಾರಿ ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಸಿದ್ದಾರೆ. ಕೆಲವು ಸಲ ಕೆಐಡಿಬಿ ದಾವಣಗೆರೆ ಕಚೇರಿಗೂ ಹೋಗಿ ಗಮನ ಸೆಳೆದಿದ್ದಾರೆ. ಆದರೆ ಅಧಿಕಾರಿಗಳು ಇಲ್ಲಿಗೆ ಬಂದು ಸಮಸ್ಯೆ ಅರಿಯುವ ಕೆಲಸವನ್ನೇ ಮಾಡುತ್ತಿಲ್ಲ.
ಮಾಲಿನ್ಯ ಕಚೇರಿ ಸುತ್ತಮುತ್ತಲೇ ಪರಿಸರ ಮಾಲಿನ್ಯ.:
 ಆಟೋ ಕಾಂಪ್ಲೆಕ್ಸ್ ಪ್ರದೇಶದಲ್ಲಿಯೇ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯಿದೆ. ಆದರೆ ಕಚೇರಿ ಸುತ್ತಮುತ್ತಲೇ ಭಾರೀ ದೊಡ್ಡ ಪ್ರಮಾಣದಲ್ಲಿ ವಾಯು, ಭೂ ಮಾಲಿನ್ಯ ವಾಗುತ್ತಿದೆ. ಅಸ್ವಚ್ಚತೆ ಆವರಿಸಿದೆ. ಪರಿಸರ ಹಾಗೂ ಜನಸಾಮಾನ್ಯರ ಮೇಲೆ ಮಾರಣಾಂತಿಕ ಪರಿಣಾಮ ಬೀರುತ್ತಿದೆ. ಆದರೆ ಇಲ್ಲಿಯವರೆಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾತ್ರ ಮಾಲಿನ್ಯ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಸಂಬಂಧಿಸಿದವರಿಗೆ ನೋಟೀಸ್ ನೀಡಿ ಎಚ್ಚರಿಸುವ ಕೆಲಸ ಮಾಡಿಲ್ಲ.


 ಪಾಲಿಕೆಗೆ ಹಸ್ತಾಂತರವಾಗಿಲ್ಲ
 ಸಾಗರ ರಸ್ತೆಯಲ್ಲಿರುವ ಕೈಗಾರಿಕಾ ವಸಾಹತು ಸ್ಥಾಪನೆಯಾಗಿ ಹಲವು ವರ್ಷಗಳೇ ಕಳೆದಿವೆ. ಪ್ರಸ್ತುತ ನೂರಾರು ಶಾಪ್‌ಗಳಿವೆ. ಪ್ರತಿನಿತ್ಯ ಸಾವಿರಾರು ಜನರು ಇಲ್ಲಿಗೆ ಬಂದು ಹೋಗುತ್ತಾರೆ. ನಗರದ ಹೃದಯಭಾಗವಾಗಿ ಪರಿವರ್ತಿತವಾಗಿದೆ. ಆದರೆ ಇಲ್ಲಿಯವರೆಗೂ ಈ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿಲ್ಲ. ಈ ಪ್ರದೇಶದಲ್ಲಿ ಕುಡಿಯುವ ನೀರು ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳ ವ್ಯವಸ್ಥೆ ಇಲ್ಲಿಯವರೆಗೂ ಕಲ್ಪಿಸಿಲ್ಲ. ತತಕ್ಷಣವೇ ಈ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ.
- ಆಟೊ ಕಾಂಪ್ಲೆಕ್ಸ್ ಅಂಗಡಿ, ವರ್ಕ್‌ಶಾಪ್ ಮಾಲಕರು
---------------------------------------

Monday, 20 March 2017

ಇಂತಹ ಡಿಸಿ ಎಲ್ಲ ಜಿಲ್ಲೆಗೂ ಬೇಕು




ಜಿಲ್ಲಾಧಿಕಾರಿ ಡಾ. ಲೋಕೇಶ್ ಸಮಯ ವ್ಯರ್ಥ ಮಾಡದ ಅಧಿಕಾರಿ. ಕೆಲವೊಮ್ಮೆ ರಜೆ ದಿನಗಳಂದು ಕರ್ತವ್ಯ ನಿರ್ವಹಣೆ ಮಾಡುತ್ತಾರೆ. ಎಲ್ಲಿಯೇ ಸಮಸ್ಯೆ ಕಂಡುಬರಲಿ, ಅಲ್ಲಿಗೆ ತತಕ್ಷಣವೇ ದೌಡಾಯಿಸುತ್ತಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಓಡಾಡುತ್ತಾರೆ. ಪತ್ರಿಕೆಗಳಲ್ಲಿ ಬರುವ ದೂರು-ದುಮ್ಮಾನಗಳನ್ನು ಓದಿ, ಸಾಧ್ಯವಾದರೆ ತಾವೇ ಆ ಸ್ಥಳಕ್ಕೆ ತೆರಳುತ್ತಾರೆ. ನಾಗರಿಕರು ನೀಡುವ ದೂರಿನನ್ವಯ ಗ್ರಾಮ ಸಂದರ್ಶಿಸಿ ಸಮಸ್ಯೆ ಪರಿಹರಿಸುತ್ತಿದ್ದಾರೆ. ಇತ್ತೀಚೆಗೆ ನವುಲೆ ಕೆರೆಯಲ್ಲಿ ರಸ್ತೆ ಮಾಡುತ್ತಿರುವ ಬಗ್ಗೆ ಎದ್ದ ವಿವಾದವನ್ನೂ ಬಹು ಜಾಣ್ಮೆಯಿಂದ ಬಗೆಹರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಐಎಎಸ್ ಅಧಿಕಾರಿ ಜಿಲ್ಲೆಗೆ ಬಂದಿರಲಿಲ್ಲ. ಕಚೇರಿ, ಮನೆ, ಮೀಟಿಂಗ್, ಭಾಷಣ ಬಿಗಿಯುವುದಕ್ಕೇ ಹಿಂದಿನ ಕೆಲವು ಜಿಲ್ಲಾಧಿಕಾರಿಗಳು ಮೀಸಲಾದಂತಿದ್ದರು. ಆದರೆ ಲೋಕೇಶ್ ಇವೆಲ್ಲವುಗಳನ್ನು ಎಷ್ಟು ಬೇಕೋ ಅಷ್ಟಕ್ಕೇ ಸೀಮಿತಗೊಳಿಸಿದ್ದಾರೆ. ಇವರು ತಮ್ಮ ಮೊಟ್ಟಮೊದಲ ಮೀಟ್ ದಿ ಪ್ರೆಸ್‌ನಲ್ಲಿ ಕೆರೆ ಒತ್ತುವರಿ ತೆರವು ಮತ್ತು ಗ್ರಾಮೀಣ ಜನರ ಸಮಸ್ಯೆ ಬಗೆಹರಿಸಲು ಅಲ್ಲಿಗೇ ತೆರಳುವ ಬಗ್ಗೆ ಹೇಳಿದ್ದರು. ಅದನ್ನು ಚಾಚೂತಪ್ಪದೆ ನಡೆಸಿಕೊಂಡು ಬಂದಿದ್ದಾರೆ.  

* ದತ್ತಾತೇಯ ಹೆಗಡೆ

ಶಿವಮೊಗ್ಗ, ಮಾ. 20: ಜಿಲ್ಲಾ ಆಡಳಿತದ ಶಕ್ತಿ ಕೇಂದ್ರವೆಂದೇ ಬಿಂಬಿತವಾಗಿರುವ ಜಿಲ್ಲಾಧಿಕಾರಿ ಕಚೇರಿಯು, ಇತ್ತೀಚಿನ ವರ್ಷಗಳಲ್ಲಿ  ನಿಸ್ತೇಜವಾಗಿದ್ದ ಅನುಭವ ನಾಗರಿಕರಲ್ಲಿತ್ತು. ಯಾವುದೇ ಕೆಲಸ ಕಾರ್ಯಗಳಿಗೂ ವೇಗವೇ ಸಿಗದಂತಹ ಸ್ಥಿತಿಯಿತ್ತು. ಕಡತಗಳ ವಿಲೇವಾರಿ ಹಳ್ಳ ಹಿಡಿದಿತ್ತು. ಕೆಲವು ಅಧಿಕಾರಿ, ನೌಕರರು ತಮ್ಮ ಕೆಲಸವೇನೆನ್ನುವುದನ್ನೇ ಮರೆತಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ ’ಪ್ರಭಾವಿ ರಾಜಕಾರಣಿ’ಗಳ ಬೆಂಬಲದೊಂದಿಗೆ ತಾಲೂಕು ಆಡಳಿತ ಹಾಗೂ ಇಲಾಖೆಯ ಕೆಲವು ಅಧಿಕಾರಿಗಳು ದರ್ಬಾರು ನಡೆಸಲಾರಂಭಿಸಿದ್ದವು. ಸರ್ಕಾರಿ ಕಚೇರಿಗಳಲ್ಲಂತೂ ’ಹಣ’, ’ಪ್ರಭಾವ’ ವಿಲ್ಲದೆ ಯಾವುದೇ ಕೆಲಸವಾಗುವುದಿಲ್ಲವೆಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿತ್ತು. ಇದರಿಂದ ನಾಗರಿಕರು ಜಿಲ್ಲಾಡಳಿತ ಹಾಗೂ ಅಧಿಕಾರಿಶಾಹಿ ವ್ಯವಸ್ಥೆಯ ಮೇಲೆಯೇ ವಿಶ್ವಾಸ ಕಳೆದುಕೊಳ್ಳುವಂತಹ ಸ್ಥಿತಿಗೆ ಬಂದಿದ್ದರು. ವಿಶೇಷವಾಗಿ ಗ್ರಾಮೀಣ ಭಾಗದ ಹತ್ತು ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗುವ ಲಕ್ಷಣವೇ ಇಲ್ಲವಾಗಿತ್ತು.
ಇವರು  ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ ನಂತರ,  ಆಡಳಿತ ವ್ಯವಸ್ಥೆ ದಿಢೀರ್ ಆಗಿ ಚುರುಕುಗೊಂಡಿದೆ. ಕೆಲವು ಅಧಿಕಾರಿ, ಸಿಬ್ಬಂದಿಗಳು ಮೈಚಳಿ ಬಿಟ್ಟವರ ರೀತಿಯಲ್ಲಿ ಕೆಲಸ ಮಾಡಲಾರಂಭಿಸಿದ್ದಾರೆ. ಅಂಕೆಗೆ ಸಿಗದೆ ವರ್ತಿಸುತ್ತಿದ್ದ ಕೆಲವು ತಾಲೂಕು ಆಡಳಿತಗಳೂ ಸಹ ಸರಿದಾರಿಗೆ ಬರಲಾರಂಭಿಸಿವೆ. ಜಾತಿ ವ್ಯವಸ್ಥೆಯ ಮೇಲೆ ತಳವೂರಿರುವ ಕೆಲವು ಅಧಿಕಾರಿಗಳ ಮೆರೆದಾಟ ಮೇರೆ ಮೀರಿತ್ತು.
್ಲ ಡಾ. ಲೋಕೇಶ್ ನೇರ, ನಿರ್ಭಿಡೆಯ ವ್ಯಕ್ತಿತ್ವದವರು. ಕೆಲಸವಾಗುತ್ತದೆಯೇ ಇಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಿಬಿಡುತ್ತಾರೆ. ದಕ್ಷ, ಪ್ರಾಮಾಣಿಕ ಕಾರ್ಯನಿರ್ವಹಣೆಯ ಮೂಲಕ ಜನರ ವಿಶ್ವಾಸಗಳಿಸಿದ್ದಾರೆ. ಓರ್ವ ಡಿ.ಸಿ. ಮನಸ್ಸು ಮಾಡಿದರೆ ಒಂದು ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ತರಬಹುದು ಎನ್ನುವುದನ್ನು ಲೋಕೇಶ್ ಜಿಲ್ಲೆಗೆ ಆಗಮಿಸಿದ ಕೆಲವೇ ತಿಂಗಳಲ್ಲಿ ಮಾಡಿ ತೋರಿಸಿದ್ದಾರೆ. ಇತರರಿಗೆ ಮಾದರಿಯಾಗಿ ನಿಂತುಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ಡಿಸಿ ಕಚೇರಿ ಬಗ್ಗೆ ವಿಶ್ವಾಸ ಮೂಡುವಂತೆ ಮಾಡಿದ್ದಾರೆ.
  ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆಯ ಎಲ್ಲ ತಾಲೂಕು, ಹೋಬಳಿ ಕೇಂದ್ರದ ಸರ್ಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆ, ಗ್ರಾಪಂ ಕಚೇರಿಗೆ ದಿಢೀರ್ ಭೇಟಿಯಿತ್ತು ಪರಿಶೀಲಿಸುವ ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಕಲೆ ಹಾಕುವ ಕೆಲಸವನ್ನು ಡಿಸಿ ನಿರಂತರವಾಗಿ ಮಾಡುತ್ತಿದ್ದಾರೆ. ದಿಢೀರ್ ಭೇಟಿಯ ವೇಳೆ ಹಲವು ಲೋಪಗಳನ್ನು ಪತ್ತೆ ಹಚ್ಚಿ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕರ್ತವ್ಯ ಲೋಪ ಎಸಗುವವರನ್ನು ಸಸ್ಪೆಂಡ್‌ಗೊಳಿಸುವ, ನೋಟೀಸ್ ಜಾರಿಗೊಳಿಸುವ ನಿರ್ದಾಕ್ಷಿಣ್ಯ ಕ್ರಮಗಳನ್ನು ಜರುಗಿಸುತ್ತಿದ್ದಾರೆ.
ಇದು ನೌಕರರ ವಲಯದಲ್ಲಿ ಸಂಚಲನ ಮೂಡಿಸಿದೆ. ಡಿ.ಸಿ.ಯವರು ಯಾವಾಗ ಭೇಟಿ ನೀಡುತ್ತಾರೋ ಎಂಬ ಭಯದಿಂದ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಕಚೇರಿ ಒಳ, ಹೊರಗಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಹಿಡಿದು ಕಡತಗಳ ವಿಲೇವಾರಿಯವರೆಗೆ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಡಿ.ಸಿ.ಯವರು ನಡೆಸುವ ಪ್ರತಿಯೊಂದು ಸಭೆಗೂ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಹಾಜರಾಗುತ್ತಿದ್ದಾರೆ.
ಡಾ. ಎಂ. ಲೋಕೇಶ್ ಜಿಲ್ಲೆಗೆ ಆಗಮಿಸುತ್ತಿದ್ದಂತೆ ಗ್ರಾಮೀಣ ಭಾಗದ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಿದ್ದರು. ಕೆರೆಗಳ ಒತ್ತುವರಿ ತೆರವಿಗೆ ಕ್ರಮಕೈಗೊಂಡಿದ್ದರು. ತಾಲೂಕು ಆಡತಳಿಗಳಿಗೆ ತಮ್ಮ ವ್ಯಾಪ್ತಿಯಲ್ಲಾಗಿರುವ ಕೆರೆಗಳ ಒತ್ತುವರಿ ತೆರವಿಗೆ ಗುರಿ ನಿಗದಿ ಮಾಡಿದ್ದರು. ಈ ವಿಷಯದಲ್ಲಿ ಯಾವುದೇ ಒತ್ತಡ, ಪ್ರಭಾವಕ್ಕೆ ಮಣಿಯದೆ ಕಾರ್ಯನಿರ್ವಹಿಸುತ್ತಿರುವುದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.


ಬರ ಪೀಡಿತ ಗ್ರಾಮಗಳಿಗೂ ದಿಢೀರ್ ಭೇಟಿ
 ಪ್ರಸ್ತುತ ಜಿಲ್ಲೆಯಲ್ಲಿ ತೀವ್ರ ಸ್ವರೂಪದ ಬರಗಾಲ ಆವರಿಸಿದೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಸಮಸ್ಯಾತ್ಮಕ ಗ್ರಾಮಗಳಿಗೆ ಜಿಲ್ಲಾಧಿಕಾರಿ ಸ್ಥಳೀಯ ಅಧಿಕಾರಿಗಳ ತಂಡದೊಂದಿಗೆ ದಿಢೀರ್ ಭೇಟಿಯಿತ್ತು ಪರಿಶೀಲನೆ ನಡೆಸುವ ಕೆಲಸ ಆರಂಭಿಸಿದ್ದಾರೆ. ಗ್ರಾಮಸ್ಥರ ಅಹವಾಲು ಆಲಿಸುತ್ತಿದ್ದಾರೆ. ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುತ್ತಿದ್ದಾರೆ.  ಇದು ತಾಲೂಕು ಆಡಳಿತಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಕಂಡುಬರುವ ಸಮಸ್ಯೆ ಪರಿಹಾರಕ್ಕೆ ಕಾರ್ಯೋನ್ಮುಖವಾಗುವಂತೆ ಮಾಡಿದೆ. ಮತ್ತೊಂದೆಡೆ ಜಿಲ್ಲಾಧಿಕಾರಿ ಭೇಟಿಗೆ ಜಿಲ್ಲೆಯ ಹಲವು ಗ್ರಾಮಸ್ಥರು ಕಾದು ಕುಳಿತುಕೊಂಡಿದ್ದಾರೆ.


ನಾಗರಿಕರ ಮೆಚ್ಚುಗೆ
ತಮ್ಮ ಗ್ರಾಮಕ್ಕೆ ದಿಢೀರ್ ಭೇಟಿಯಿತ್ತು ಇಲ್ಲಿನ ಸಮಸ್ಯೆಗಳ ಖುದ್ದು ಪರಿಶೀಲನೆ ನಡೆಸಿ, ಸಾರ್ವಜನಿಕರ ಅಹವಾಲು ಆಲಿಸಿ, ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಅವರ ಕ್ರಮಕ್ಕೆ ತಟ್ಟೆಹಳ್ಳಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ’ಅದೆಷ್ಟೋ ಬಾರಿ ನಾವೇ ಖುದ್ದಾಗಿ ಅಧಿಕಾರಿಗಳನ್ನು ಗ್ರಾಮಕ್ಕೆ ಆಹ್ವಾನಿಸಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಆಗಮಿಸುವುದಿಲ್ಲ. ಆದರೆ ಡಾ. ಲೋಕೇಶ್ ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಅರಿತು ಅವರೇ ಖುದ್ದಾಗಿ ಅಧಿಕಾರಿಗಳ ತಂಡದೊಂದಿಗೆ ಗ್ರಾಮಕ್ಕೆ ದಿಢೀರ್ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದ್ದಾರೆ.
- ತಟ್ಟೆಹಳ್ಳಿ ಗ್ರಾಮಸ್ಥರು.
...............................

Tuesday, 14 March 2017

ಶರ್ಮಿಳಾಗೆ ಏಕೆ ಹೀಗಾಯ್ತು?




ಮತದಾರರ ಪ್ರಜ್ಞೆ ಯಾವ ವಿಷಯದತ್ತ ಇರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಾರದ ಇಂದಿನ ರಾಜಕೀಯದ ಸಂದರ್ಭದಲ್ಲಿ ಮಣಿಪುರದ  ಸಾತ್ವಿಕ ಹೋರಾಟಗಾರ್ತಿ ಐರೋಮ್ ಶರ್ಮಿಳಾ ಚುನಾವಣೆ ಕಣಕ್ಕಿಳಿದು ಹೀನಾಯವಾಗಿ ಪರಾಭವಗೊಂಡಿದ್ದಾರೆ. ಜನರ ಹಿತಕ್ಕೋಸ್ಕರ ಹೋರಾಟ ಮಾಡಿದರೂ ಅವರಿಗೆ ಬೆಂಬಲ ನೀಡಿ ಗೆಲ್ಲಿಸಲಾಗದ ಸ್ಥಿತಿ ಇಂದಿದೆ. ಚುನಾವಣೆಯಲ್ಲಿ ಅವರು ಪ್ರಚಾರ ಮಾಡಿದ್ದು ಮಾನವ ಹಕ್ಕುಗಳ ವಿಚಾರ, ಭ್ರಷ್ಟಾಚಾರ, ಜನರು ಎದುರಿಸುತ್ತಿರುವ ಶೋಷಣೆ, ತಾರತಮ್ಯ ಮೊದಲಾದ ವಿಚಾರಗಳೇ ವಿನಾ ಯಾವ ವ್ಯಕ್ತಿ, ಪಕ್ಷವನ್ನೂ ತೆಗಳಲಿಲ್ಲ. ಆದರೆ ಹಣ-ಹೆಂಡ ಹಂಚಿ, ಆಮಿಷ ಒಡ್ಡಿಯೇ ಗೆಲ್ಲಬೇಕಾದ ಇಂದಿನ ವ್ಯವಸ್ಥೆಯಲ್ಲಿ ಅವರು ಖರ್ಚು ಮಾಡಿದ್ದು ಕೇವಲ 3 ಲಕ್ಷ ರೂ ಮಾತ್ರ. ಮತದಾರರು ವ್ಯಕ್ತಿಯ ಹಿನ್ನೆಲೆ, ಹೋರಾಟ, ಸಾಧನೆ, ನೋಡಿ ಮತ ಹಾಕುವ ಕಾಲ ಮುಗಿದಿದೆ. ಇದರಿಂದ ಹೋರಾಟಗಾರರು, ಕಲಾವಿದರು, ಸಾಹಿತಿಗಳು ಚುನಾವಣೆಗೆ ಸ್ಪರ್ಧಿಸಿ ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಕನಸು ಹೊತ್ತು ಬರುವುದು ದುರ್ಭರವಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತ ಅವರನ್ನೇ ಸೋಲಿಸಿದ ಕೀರ್ತಿ ಕನ್ನಡಿಗರದ್ದು. ಶರ್ಮಿಳಾ  ಸಹ ಈಗ ಇನ್ನೊಂದು ಉದಾಹರಣೆಯಾಗಿದ್ದಾರೆ.      



ಹೋರಾಟ ಬೇರೆ, ರಾಜಕೀಯ ಬೇರೆ. ಹೋರಾಟದ ದಾರಿಯನ್ನು ಬಿಟ್ಟು ರಾಜಕಿಯಕ್ಕಿಳಿಯುವಾಗ  ಅವರಿಗಿರುವ ಜನಪ್ರಿಯತೆಯೂ ಕೈ ಹಿಡಿಯುವುದಿಲ್ಲ. ಒಬ್ಬ ಹೋರಾಟಗಾರನನ್ನು ರಾಜಕೀಯ ನಾಯಕನನ್ನಾಗಿ ಅವರು ನೋಡಲು ಇಚ್ಛಿಸುವುದಿಲ್ಲ.  ಇತ್ತೀಚಿನ ದಿನಗಳಲ್ಲಿ ಹೋರಾಟಗಾರರು ಕಡಿಮೆಯಾಗುತ್ತಿದ್ದಾರೆ. ಆದರೆ ರಾಜಕೀಯ ನಾಯಕರು ಹೆಚ್ಚುತ್ತಿದ್ದಾರೆ. ಎಲ್ಲರಿಗೂ ರಾಜಕೀಯದ ಆಕರ್ಷಣೆ ಹೆಚ್ಚುತ್ತಾ ಹೋಗುತ್ತಿದೆ. ಹೋರಾಟಗಾರರೂ ಸಹ ರಾಜಕೀಯದ ಮೂಲಕ ಬದಲಾವಣೆ ತರಲು ಯೋಚಿಸಿ ರಾಜಕೀಯಕ್ಕೆ ಕಾಲಿಡುವ ಯತ್ನ ಮಾಡುತ್ತಿದ್ದಾರೆ. ಇದಕ್ಕೊಂದು ಉದಾಹರಣೆ ಮಣಿಪುರದ ಐರೋಮ್ ಶರ್ಮಿಳಾ.
ಶರ್ಮಿಳಾ ಮೊನ್ನೆ ಮಣಿಪುರದಲ್ಲಿ ಮುಕ್ತಾಯವಾದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ 90 ಮತ ಗಳಿಸಲಷ್ಟೇ ಶಕ್ತರಾದರು. ಮಾನವ ಹಕ್ಕುಗಳ ಹೋರಾಟದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರಿಯ ಮಟ್ಟದಲ್ಲಿ  ಹೆಸರು ಮಾಡಿದ ಶರ್ಮಿಳಾ ಏಕೆ ವಿಫಲರಾದರು ಎನ್ನುವ ಪ್ರಶ್ನೆ ಎಲ್ಲೆಡೆ ಚಿಂತಕರನ್ನು ವಿಶ್ಲೇಷಣೆಗೆ ನೂಕಿದೆ. 16 ವರ್ಷಗಳ ಕಾಲ ಮಣಿಪುರದಲ್ಲಿ ಸಶಸ್ತ್ರ ದಳಗಳ ಕಾಯ್ದೆ (ವಿಶೇಷ ಅಧಿಕಾರ) ವಿರುದ್ದ ಹೋರಾಡಿ ಸತ್ಯಾಗ್ರಹ ಕುಳಿತವರು ಶರ್ಮಿಳಾ. ಕಳೆದ ವರ್ಷ ಸತ್ಯಾಗ್ರಹವನ್ನು ಹಿಂದೆಗೆದುಕೊಂಡು ಪೀಪಲ್ಸ್ ರಿಸರ್ಜೆನ್ಸ್ ಆಂಡ್ ಜಸ್ಟೀಸ್ ಅಲೈಯೆನ್ಸ್ (ಪಿಆರ್‌ಜೆಎ) ಎಂಬ ಪಕ್ಷವನ್ನು ಕಟ್ಟಿದರು. ಇದಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರಚಾರ ಸಿಕ್ಕಿತ್ತು. ಅವರ ಉದ್ದೇಶ ಸಶಸ್ತ್ರ ದಳಗಳ ಅಧಿಕಾರವನ್ನು ರಾಜಕೀಯದ ಮೂಲಕ ಹಿಮ್ಮೆಟ್ಟಿಸುವುದಾಗಿತ್ತು. ಆದರೆ ಮತದಾರ ಅವರ ಕೈ ಹಿಡಿಯಲಿಲ್ಲ.
ಅವರ ಸೋಲಿಗೆ ಈಗ ಮೂರು ಪ್ರಮುಖ ಕಾರಣಗಳನ್ನು ಕೊಡಲಾಗುತ್ತಿದೆ. ಮೊದಲನೆಯದಾಗಿ, ತನ್ನ ದೀರ್ಘಾವಧಿಯ ಉಪವಾಸವನ್ನು ಅಂತ್ಯಗೊಳಿಸುವ ಮೂಲಕ ಜನರ ಬೆಂಬಲವನ್ನು ಕಳೆದುಕೊಂಡರು. ಮಣಿಪುರದಲ್ಲಿ ಸುಮಾರು 1500ರಷ್ಟು ಪ್ರಕರಣಗಳು ಸಶಸ್ತ್ರದಳಗಳ ದೌರ್ಜನ್ಯದ ವಿರುದ್ದ ಇವೆ. ಅವುಗಳ ವಿರುದ್ಧ ಹೋರಾಡುವುದನ್ನು ಅರ್ಧದಲ್ಲೇ ಬಿಟ್ಟು ರಾಜಕೀಯಕ್ಕೆ ಬರುವುದನ್ನು ಜನರು ಒಪ್ಪಲಿಲ್ಲ.
ಎರಡನೆಯದಾಗಿ, ವಿವಾಹ ಬಂಧನಕ್ಕೆ ಸಿಲುಕಿದ್ದು, 44ರ ಹರಯದ ಶರ್ಮಿಳಾ ಗೋವಾ ಮೂಲದ ವ್ಯಕ್ತಿಯನ್ನು ವರಿಸಿದರು. ಇಲ್ಲಿ ಹೋರಾಟವನ್ನು ಅವರ ಬೆಂಬಲಿಗರು ದಾರಿತಪ್ಪಿಸಿದರೆಂಬ ಆರೋಪ ಕೇಳಿಬರುತ್ತಿದೆ. ಮೂರನೆಯದಾಗಿ, ರಾಜಕೀಯದ ಆಳ, ಅರಿವಿಲ್ಲದೆ ಕಾಲಿಟ್ಟಿದ್ದು. ಅದರಲ್ಲೂ ಶರ್ಮಿಳಾ ಸ್ಪರ್ಧಿಸಿದ್ದು ಮೂರು ಬಾರಿ  ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಓಕ್ರಮ್ ಇಬೊಬಿ ಸಿಂಗ್ ವಿರುದ್ಧ. ತನ್ನ ಪಕ್ಷವನ್ನು ರಾಜ್ಯಮಟ್ಟದಲ್ಲಿ ಸ್ಥಾಪಿಸಿ ಅದಕ್ಕೆ ತಕ್ಕ ಪ್ರಚಾರ ಕೊಡಲಿಲ್ಲ. ಚುನಾವಣೆಗೆ ಅವರು ಕೇವಲ ಮೂವರು ಅಭ್ಯರ್ಥಿಗಳನ್ನು ಮಾತ್ರ ಪಕ್ಷದಿಂದ ಕಣಕ್ಕಿಳಿಸಿದ್ದರು. ಇಂದಿನ ಹಣ, ಹೆಂಡದ ರಾಜಕೀಯದ ಕಾಲದಲ್ಲಿ ಶರ್ಮಿಳಾ ಅವರು ಖರ್ಚು ಮಾಡಿದ್ದು 3 ಲಕ್ಷ ರೂ. ಮಾತ್ರ. ಸಾಂಕೇತಿಕವಾಗಿ ಚುನಾವಣೆ ಕಣಕ್ಕೆ ಅವರು ಇಳಿದಿದ್ದರೇ ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ.
ಚುನಾವಣೆಯಲ್ಲಿ ಅವರು ಪ್ರಚಾರ ಮಾಡಿದ್ದು ಮಾನವ ಹಕ್ಕುಗಳ ವಿಚಾರ, ಮತ್ತು ಭ್ರಷ್ಟಾಚಾರ, ಜನರು ಎದುರಿಸುತ್ತಿರುವ ಶೋಷಣೆ, ತಾರತಮ್ಯ ಮೊದಲಾದ ವಿಚಾರಗಳು. ರಾಷ್ಟ್ರೀಯ ಪಕ್ಷಲಾದ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಕ್ಕಾಗಿ ಎಲ್ಲ ಯತ್ನ ಮಾಡುತ್ತಿರುವಾಗ ರಾಜಕಿಯದ ಯಾವುದೇ ಹಿನ್ನೆಲೆ, ಯೋಜನೆ, ತಂತ್ರಗಾರಿಕೆ ಇಲ್ಲದೆ ಆ ಪಕ್ಷಗಳ ವಿರುದ್ದ ಸ್ಪರ್ಧಿಸುವುದು ಹುಡುಗಾಟಿಕೆಯಲ್ಲ. ಚುನಾವಣೆ ಸಂದರ್ಭದಲ್ಲೇ ಶರ್ಮಿಳಾ ತಾನು ಹೋರಾಟದ ಮೂಲಕ ಗಳಿಸಿದ ಸ್ಥಳೀಯ ಮತ್ತು ಅಂತಾರಾಷ್ಟ್ರಿಯ ಜನಪ್ರಿಯತೆಯನ್ನು ರಾಜಕೀಯವಾಗಿ ಲಾಭಮಾಡಿಕೊಳ್ಳುವಲ್ಲಿ ಎಡವಿದರು.
ಈ ಚುನಾವಣೆಯಿಂದ ಶರ್ಮಿಳಾ ರಾಜಕೀಯವಾಗಿ ಕಲಿಯುವುದು ಬಹಳಷ್ಟಿದೆ ಎನ್ನಬಹುದು. ಮಣಿಪುರದ ರಾಜಕೀಯದಲ್ಲಿ ಗಂಭೀರವಾಗಿ ಮುಂದುವರೆಯಬೇಕೆಂದಿದ್ದರೆ  ಒಂದು ಯೋಜನಾಬದ್ಧ ರಾಜಕೀಯ ತಂತ್ರಗಾರಿಕೆಯನ್ನು ಹೊಂದಿರಬೇಕಿತ್ತು. ಚುನಾವಣೆಯನ್ನು ಎದುರಿಸುವುದು ಹೇಗೆನ್ನುವ ಪರಿಕಲ್ಪನೆ ಅವರಲ್ಲಿರಬೇಕಿತ್ತು.  ಕೆಲವು ಅನುಭವಿ ರಾಜಕರಣಿಗಳನ್ನು ತಮ್ಮೊಂದಿಗೆ ಸೇರಿಸಿಕೊಳ್ಳಬೇಕಿತ್ತು.  ಇವರ ಪಕ್ಷ ಹಲವು ಯುವಕರನ್ನು ಸೆಳೆದಿತ್ತಾದರೂ  ಬಿಜೆಪಿ- ಕಾಂಗ್ರೆಸ್ ಹಣಾಹಣಿಯ ಮಧ್ಯೆ ಇವರ ಹೋರಾಟ ಏನೂ ಆಗಿರಲಿಲ್ಲ.
ಮೊನ್ನೆಯ ಚುನಾವಣೆಯಲ್ಲಿ ಶರ್ಮಿಳಾ ಪಕ್ಷಕ್ಕೆ ಆಶಾದಾಯಕ ಸ್ಥಿತಿ ಕಂಡುಬರಲಿಲ್ಲ. ರಾಜಕೀಯಕ್ಕೆ ಬಂದು ಹೋರಾಟ ಮಾಡಿ ಸಶಸತ್ರದಳದ ಅಧಿಕಾರದ ವಿರುದ್ದ ಹೋರಾಟ ಮಾಡುವ ಕನಸನ್ನು ಅವರು ಕಂಡಿದ್ದರು. ಆದರೆ ಈ ಚುನಾವಣೆ ತಾನು ಅಂದುಕೊಡಂತೆ ನಡೆಯುವುದಿಲ್ಲ ಎನ್ನುವುದು ಅವರಿಗೆ ತಿಳಿದಿರಲಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ. ಕೊನೆಯದಾಗಿ, ಮಿಲಿಯನ್‌ಗಟ್ಟಲೆ ಮಹಿಳಾ ಮತದಾರರಿರುವ ರಾಜ್ಯದಲ್ಲಿ ಕೇವಲ 90 ಮತವನ್ನು ಮಹಿಳಾ ಹೋರಾಟಗಾರ್ತಿಯೊಬ್ಬಳು ಪಡೆಯುತ್ತ್ತಾರೆಂದರೆ ನಿಜಕ್ಕೂ ಜನರ ಪ್ರಜ್ಞೆ ಯಾವುದರತ್ತ, ಜನರಿಗೆ ಬೇಕಾದ ವಿಷಯಗಳು ಯಾವುವು ಎನ್ನುವುದನ್ನು ಯೋಚಿಸಬೇಕಾಗುತ್ತದೆ. ಆದರೆ ಒಂದಂತೂ ಸತ್ಯ, ಸೋತಿದ್ದು ಶರ್ಮಿಳಾ ಅಲ್ಲ, ಪ್ರಜಾಸತ್ತೆ.