Tuesday, 1 November 2016


  ಬೇಸಿಗೆ ಆರಂಭಕ್ಕೂ ಮುನ್ನವೇ ಬರಿದಾದ ಕೆರೆಗಳು

 ನೀರಿಲ್ಲದೆ ಖಾಲಿಯಾಗಿರುವ ಕೆರೆಗಳು (ಜಿ.ಪಂ. ವ್ಯಾಪ್ತಿ ಮಾತ್ರ) 
ತಾಲೂಕು - ಒಟ್ಟು ಕೆರೆಗಳು - ಖಾಲಿಯಾಗಿರುವವು
ಶಿವಮೊಗ್ಗ - 551 - 332
ಭದ್ರಾವತಿ - 44 - 25
ಸಾಗರ - 613 - 252
ಸೊರಬ - 1059 - 209
ತೀರ್ಥಹಳ್ಳಿ - 686 - 378
ಶಿಕಾರಿಪುರ - 931 - 408
ಹೊಸನಗರ - 958 - 351
  ಒಂದು ಕಾಲದಲ್ಲಿ ಮಳೆ ನಾಡು ಎಂದೇ ಖ್ಯಾತವಾಗಿದ್ದ ಮಲೆನಾಡಿನ ಶಿವಮೊಗ್ಗ ಬರದಿಂದ ತತ್ತರಿಸಲಾರಂಭಿಸಿದೆ. 6 ತಿಂಗಳು ಮಳೆ ಬೀಳುತ್ತಿದ್ದ ಜಿಲ್ಲೆಯಲ್ಲಿ ಈಗ ಒಂದು ತಿಂಗಳೂ ಸರಿಯಾಗಿ ಮಳೆಯಾಗುತ್ತಿಲ್ಲ. ನವೆಂಬರ್ ಆರಂಭಕ್ಕೆ ಮುನ್ನವೇ ಮತ್ತೆ ಸೆಕೆ ಕಾಣಿಸಿಕೊಂಡಿದೆ. ಉಷ್ಣಾಂಶದಲ್ಲಿ ತೀವ್ರ ಪ್ರಮಾಣದ ಏರಿಳಿತ ಕಂಡುಬರುತ್ತಿದೆ. ಇದರಿಂದ ಬೇಸಿಗೆ ಕಾಲ ಆರಂಭಕ್ಕೂ ಮುನ್ನವೇ ಜಿಲ್ಲೆಯ ನೂರಾರು ಕೆರೆಗಳು ಹನಿ ನೀರಿಲ್ಲದೆ ಬರಿದಾಗಿವೆ. ಪ್ರಸ್ತುತ ಜಿಲ್ಲೆಯಾದ್ಯಂತ ತಾಪಮಾನದ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬರುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಕೆರೆಗಳು ಬರಿದಾಗುವ ಹಂತದಲ್ಲಿವೆ.
ಜಿಲ್ಲೆಯ ಏಳು ತಾಲೂಕು ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯ್ತಿ ಆಡಳಿತದ ಉಸ್ತುವಾರಿಯಲ್ಲಿ ಸರಿಸುಮಾರು 2500 ಕ್ಕೂ ಅಧಿಕ ಕೆರೆಗಳಿವೆ. ಆದರೆ ಇದರಲ್ಲಿ ಯಾವೊಂದು ಕೆರೆಯು ಶೇ. 100 ರಷ್ಟು ಭರ್ತಿಯೇ ಆಗಿಲ್ಲ.ಇನ್ನಷ್ಟೇ ಭರ್ತಿಯಾಗಬೇಕಾಗಿದೆ. ಜಿಲ್ಲೆಯಲ್ಲಿ ಈ ವರ್ಷ ನೀರಿನ ಅಧಿಕ ಬವಣೆ ಎದುರಾಗುವ ಸಾಧ್ಯತೆಯ ಮುನ್ಸೂಚನೆ ಇದು ಎಂದೇ ಊಹಿಸಲಾಗಿದೆ.
ಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್ ’ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಜಿ.ಪಂ. ವ್ಯಾಪ್ತಿಯ ಯಾವೊಂದು ಕೆರೆಯಲ್ಲಿಯೂ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಡಿ ಬರುವ ಕೆರೆಗಳ ಬಗ್ಗೆ ತಮಗೆ ಮಾಹಿತಿಯಿಲ್ಲವಾಗಿದೆ’ ಎಂದು ತಿಳಿಸಿದ್ದಾರೆ.
ಅಕ್ಟೋಬರ್ ತಿಂಗಳ 14 ರ ದಿನದವರೆಗಿನ ಮಾಹಿತಿಯ ಪ್ರಕಾರ, ಈಗಾಗಲೇ ಜಿ.ಪಂ. ವ್ಯಾಪ್ತಿಯ ಹಲವು ಕೆರೆಗಳು ನೀರಿಲ್ಲದೆ ಬರಿದಾಗಿವೆ. ಮತ್ತೆ ಕೆಲ ಕೆರೆಗಳಲ್ಲಿ ಶೇ. 30 ರಷ್ಟು ಹಾಗೂ ಶೇ. 50 ರಷ್ಟು ನೀರು ಸಂಗ್ರಹವಾಗಿದೆ. ಹಿಂಗಾರು ಮಳೆ ಉತ್ತಮವಾಗಿ ಬಿದ್ದರೆ ಕೆರೆಗಳಲ್ಲಿ ನೀರು ಸಂಗ್ರಹಣೆಗೆ ಸಹಾಕಾರಿಯಾಗಲಿದೆ. ಇಲ್ಲದಿದ್ದರೆ ಕೆರೆಗಳಲ್ಲಿ ನೀರಿನ ಕೊರತೆಯಿಂದ ಬೇಸಿಗೆಯಲ್ಲಿ ಸಾಕಷ್ಟು ಸಮಸ್ಯೆ ಉದ್ಭವವಾಗುವ ಸಾಧ್ಯತೆಯಿದೆ’ ಎಂದು ಹರೀಶ್ ಹೇಳಿದ್ದಾರೆ.
 ಜಿ.ಪಂ. ವ್ಯಾಪ್ತಿಯ ಕೆರೆಗಳಲ್ಲಿನ ತಾಲೂಕುವಾರು ವಿವರ ಈ ಮುಂದಿನಂತಿದೆ. ಶಿವಮೊಗ್ಗ ತಾಲೂಕಿನಲ್ಲಿ ಜಿ.ಪಂ. ವ್ಯಾಪ್ತಿಯಲ್ಲಿ ಒಟ್ಟಾರೆ 551 ಕೆರೆಗಳಿದ್ದು ಇದರಲ್ಲಿ 332 ಕೆರಗಳು ನೀರಿಲ್ಲದೆ ಬರಿದಾಗಿವೆ. ಉಳಿದಂತೆ 137 ಕೆರೆಗಳಲ್ಲಿ ಶೇ. 30 ರಷ್ಟು ಹಾಗೂ 82 ರಲ್ಲಿ ಶೇ. 31 ರಿಂದ 50 ರಷ್ಟು ನೀರು ಸಂಗ್ರಹವಾಗಿದೆ.
ಭದ್ರಾವತಿ ತಾಲೂಕಿನಲ್ಲಿರುವ 44 ಕೆರೆಗಳಲ್ಲಿ 25 ಖಾಲಿಯಾಗಿದ್ದು, 12 ರಲ್ಲಿ ಶೇ. 30 ರಷ್ಟು ಹಾಗೂ 70 ಕೆರೆಗಳಲ್ಲಿ ಶೇ. 31 ರಿಂದ 50 ರಷ್ಟು ನೀರು ಸಂಗ್ರಹವಾಗಿದೆ. ತೀರ್ಥಹಳ್ಳಿಯ 686 ಕೆರೆಗಳಲ್ಲಿ 378 ನೀರಿಲ್ಲದೆ ಬರಿದಾಗಿದ್ದು, 171 ರಲ್ಲಿ ಶೇ. 30 ರಷ್ಟು ಹಾಗೂ 137 ರಲ್ಲಿ ಶೇ. 31 ರಿಂದ 50 ರಷ್ಟು ನೀರಿದೆ.
ಸಾಗರದ 613 ಕೆರೆಗಳಲ್ಲಿ 252 ಖಾಲಿಯಾಗಿದ್ದು, 182 ರಲ್ಲಿ ಶೇ. 30 ರಷ್ಟು ಹಾಗೂ 179 ಕೆರೆಗಳಲ್ಲಿ ಶೇ. 50 ರಷ್ಟು ನೀರು ಸಂಗ್ರಹವಾಗಿದೆ. ಶಿಕಾರಿಪುರದ 931 ಕೆರೆಗಳಲ್ಲಿ 408 ಖಾಲಿಯಾಗಿದ್ದು, 313 ರಲ್ಲಿ ಶೇ. 30 ರಷ್ಟು ಹಾಗೂ 210 ಕೆರೆಗಳಲ್ಲಿ ಶೇ. 31 ರಿಂದ 50 ರಷ್ಟು ನೀರಿದೆ. ಸೊರಬದ 1059 ಕೆರೆಗಳಲ್ಲಿ 740 ರಲ್ಲಿ ನೀರಿಲ್ಲದೆ ಬರಿದಾಗಿದ್ದು, 209 ರಲ್ಲಿ ಶೇ. 30 ರಷ್ಟು ಹಾಗೂ 110 ರಲ್ಲಿ ಶೇ. 31 ರಿಂದ 50 ರಷ್ಟು ನೀರು ಸಂಗ್ರಹವಾಗಿದೆ.
ಉಳಿದಂತೆ ಹೊಸನಗರ ತಾಲೂಕಿನಲ್ಲಿ ಒಟ್ಟಾರೆ ಜಿ.ಪಂ. ಅಧೀನದಲ್ಲಿ 958 ಕೆರೆಗಳಿವೆ. ಇದರಲ್ಲಿ
ಸಂಕಷ್ಟ ನಿಶ್ಚಿತ: ಕೆರೆಕಟ್ಟೆಗಳಲ್ಲಿ ನೀರಿನ ಕೊರತೆಯಿಂದ ಹಾಗೂ ಹೆಚ್ಚುತ್ತಿರುವ ತಾಪಮಾನದ ಪ್ರಮಾಣದಿಂದ ಈಗಾಗಲೇ ಹಲವು ಗ್ರಾಮಗಳಲ್ಲಿ ಬೋರ್‌ವೆಲ್-ಬಾವಿಗಳಲ್ಲಿ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಬೋರ್‌ವೆಲ್‌ಗಳು ನೀರಿಲ್ಲದೆ ಬರಿದಾಗಿದ್ದು, ಕುಡಿಯುವ ನೀರಿನ ಅಭಾವ ಕಾಣಿಸಿಕೊಂಡಿದೆ.
ಚಳಿಗಾಲದ ಪ್ರಾರಂಭದ ತಿಂಗಳಿನಲ್ಲಿಯೇ ಜಿಲ್ಲೆಯ ಹಲವೆಡೆ ಪರಿಸ್ಥಿತಿ ಹೇಳತೀರದಾಗಿದೆ. ಒಂದು ವೇಳೆ ಹಿಂಗಾರು ಮಳೆ ಚೆನ್ನಾಗಿ ಬಿದ್ದರೆ ಪರಿಸ್ಥಿತಿ ಸುಧಾರಿಸಲಿದೆ. ಇಲ್ಲದಿದ್ದರೆ ಬೇಸಿಗೆಯ ದಿನಗಳಲ್ಲಿ ಜಿಲ್ಲೆಯಾದ್ಯಂತ ಕುಡಿಯುವ ನೀರು ಹಾಗೂ ಜಾನುವಾರಿಗೆ ಮೇವಿನ ಕೊರತೆಯ ಸಂಕಷ್ಟ ತೀವ್ರಗತಿಯಲ್ಲಿ ತಲೆದೋರುವುದು ನಿಶ್ಚಿತವಾಗಿದೆ ಎಂದು ಜಿ.ಪಂ.ನ ಅಧಿಕಾರಿಯೋರ್ವರು ಹೇಳುತ್ತಾರೆ.
,,,,,,,,,,,,,,,,,,,,,,,,,,,,,,,,,,,,





Wednesday, 26 October 2016

ದುರ್ವರ್ತನೆಯ ಆಟೋ ಚಾಲಕರಿಗೆ ಕಡಿವಾಣ ಅಗತ್ಯ 

 ಇತ್ತೀಚೆಗೆ ಹೊಸದಾಗಿ ಆಟೋ ಚಾಲನೆಗೆ ಆಗಮಿಸುವ ಕೆಲವು ಯುವಕರು ಮನಸೋಇಚ್ಚೆ ನಡೆದುಕೊಳ್ಳುತ್ತಿದ್ದಾರೆ. ಹೇಳುವವರು, ಕೇಳುವವರು ಇಲ್ಲವಾಗಿದ್ದಾರೆ. ಇವರಿಗೆ ಮೊದಲು ಶಿಸ್ತಿನ ಪಾಠ ಹೇಳಿಕೊಡಬೇಕಾಗಿದೆ. ಚಾಲನಾ ಪರವಾನಿಗೆ ಇಲ್ಲದೆ, ಅಶಿಸ್ತಿನಿಂದ ವರ್ತಿಸುವವವರ ವಿರುದ್ದ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಎಲ್ಲಾ ಆಟೋ ಚಾಲಕರಿಗೂ ಇದು ಕೆಟ್ಟ ಹೆಸರನ್ನು ತರುತ್ತದೆ. 17 ವರ್ಷಕ್ಕಿಂತ ಕಡಿಮೆ ವಯೋಮಾನದವರು ಆಟೋ ಓಡಿಸುತ್ತಾರೆ. ಅಪ್ರಾಪ್ತ ವಯಸ್ಸಿನವರಿಗೆ ಆಟೋ ಓಡಿಸಲು ಅವಕಾಶ ಕೊಡುವ ಆಟೋ ಮಾಲೀಕರ ವಿರುದ್ಧವೂ ಕ್ರಮ ಜರುಗಿಸಬೇಕು. 
-ದಾದಾಪೀರ್, ಆಟೋ ಚಾಲಕ


 ಸಾಕಷ್ಟು ಆಟೋ ನಿಲ್ದಾಣಗಳಿಗೆ ಆಗಾಗ ತೆರಳಿ ಗಮನಿಸಲಾಗುತ್ತಿದೆ. ಜೊತೆಗೆ ಅಲ್ಲಿರುವವರಿಗೆ ಸೂಚನೆಯನ್ನು ಕೊಡಲಾಗುತ್ತಿದೆ. ಆದರೆ ನಿಲ್ದಾಣದಲ್ಲಿ ಖಾಯಂ ಆಗಿ ನಿಲ್ಲದ ಕೆಲವು ಆಟೋ ಚಾಲಕರ ಬಗ್ಗೆ ದುರ್ವರ್ತನೆಯ ದೂರು ಬರುತ್ತಿದೆ. ಇಂತಹವರ ಮೇಲೆ ಕ್ರಮ ಜರುಗಿಸಲಾಗುವುದು. ಹಲವೆಡೆ ಆಟೋ ಚಾಲಕರು ಅನಧಿಕೃತವಾಗಿ ಆಟೋಗಳ ನಿಲುಗಡೆ ಮಾಡುತ್ತಿದ್ದಾರೆ. ಈ ಕುರಿತು ಚಾಲಕರಿಗೆ ಸೂಚನೆ ಕೂಡ ನೀಡಲಾಗಿದೆ. ಅಗತ್ಯವಿರುವೆಡೆ ನಿಲ್ದಾಣಗಳನ್ನು ಅಧಿಕೃತಗೊಳಿಸುವ ಪ್ರಕ್ರಿಯೆ ನಡೆಯಬೇಕಾಗಿದೆ. 
- ಸಂತೋಷ್‌ಕುಮಾರ್, ಸಂಚಾರಿ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ


ಶಿವಮೊಗ್ಗ: ನಗರದಲ್ಲಿ ಆಟೋ ಚಾಲಕರ ಬಗ್ಗೆ ಬಹುಹಿಂದಿನಿಂದಲೂ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಅಭಿಪ್ರಾಯ ಕೇಳಿಬರುತ್ತಿಲ್ಲ. ಇದಕ್ಕೆ ಆಯಾಯ ಸಾಂದರ್ಭಿಕ ಘಟನೆಗಳೇ ಕಾರಣ. ಕೆಲವು ಚಾಲಕರು ಮಾಡುವ ದುಷ್ಕೃತ್ಯಗಳಿಂದ ನಾಗರಿಕರು ಇಡೀ ಆಟೋ ಚಾಲಕ ಸಮುದಾಯವನ್ನೇ ದೂಷಿಸುವುದರ ಜೊತೆಗೆ ಅನುಮಾನದಿಂದ ನೋಡುವಂತಾಗಿದೆ. ಈಗ ಮತ್ತೆ ಅದೇ ಸಂದರ್ಭ ಎದುರಾಗಿದೆ.
ಬೆಂಗಳೂರಿನಿಂದ ಮನೆ ಬಿಟ್ಟು ಬಂದಿದ್ದ ಅಪ್ರಾಪ್ತ ವಿದ್ಯಾರ್ಥಿನಿಗೆ ರಕ್ಷಣೆ ನೀಡುವ ನೆಪದಲ್ಲಿ ರೈಲು ನಿಲ್ದಾಣದಿಂದ ಕರೆದೊಯ್ದು ಆಟೊ ಚಾಲಕರಿಬ್ಬರು ಅತ್ಯಾಚಾರ ಮಾಡಿದ ಘಟನೆ ಈಗ ರಾಜ್ಯವ್ಯಾಪಿ ಸುದ್ದಿಯಾಗಿದೆ.  ಇದರಿಂದ ಶಿವಮೊಗ್ಗದ ಆಟೋ ಚಾಲಕರನ್ನು ಸ್ಥಳೀಯ ಪ್ರಯಾಣಿಕರೇ ನಂಬದ ಸ್ಥಿತಿ ಎದುರಾಗಿದೆ. ಇದು ಸಜ್ಜನ ಆಟೋ ಚಾಲಕರಿಗೂ ತೊಂದರೆ ಉಂಟುಮಾಡಿದೆ.
ಇದಕ್ಕೆಲ್ಲ ಕಾರಣವನ್ನು ವಿಶ್ಲೇಷಿಸುತ್ತ ಹೋದರೆ  ಕಂಡುಬರುವುದು, ಕಂಡಕಂಡವರೆಲ್ಲ ಆಟೋ ಚಾಲಕರಾಗುತ್ತಿರುವುದು. ಚಾಲನಾ ಪರವಾನಿಗೆ ಇಲ್ಲದವರೂ ಆಟೋ ಚಾಲನೆ ಮಾಡುತ್ತಿದ್ದಾರೆ. ಸರಿಯಾಗಿ ಮೀಸೆ ಮೂಡದವರೂ ಆಟೋ ಚಾಲಕರು. ಇವರಿಗೆಲ್ಲ ನಿಶ್ಚಿತ ಆಟೋ ನಿಲ್ದಾಣವಿಲ್ಲ. ನಿರಂತರ ಸಂಚಾರಿಗಳು. ರಸ್ತೆ ಮಧ್ಯೆ ಪ್ರಯಾಣಿಕರು ಎಲ್ಲಿ ಕೈ ಮಾಡಿ ಕರೆಯುತ್ತಾರೋ ಅಲ್ಲಿಯೇ ಹತ್ತಿಸಿಕೊಂಡು ಹೋಗುವವರು. ಶಿಸ್ತಿನ ಚಾಲನೆ. ವೃತ್ತಿಯ ಗೌರವ, ಸಜ್ಜನಿಕೆಯ ನಡೆವಳಿಕೆ, ಕಾನೂನು, ಟ್ರಾಫಿಕ್ ನಿಯಮ ಏನೂ ಗೊತ್ತಿಲ್ಲ. ಹುಡುಗಾಟಿಕೆಯ ಮನೋಭಾವದಲ್ಲೇ ಚಾಲನೆ ನಡಸುತ್ತಿರುವುದು ಕಂಡುಬರುತ್ತಿದೆ.
ಎರಡನೆಯದಾಗಿ,  ನಗರದಲ್ಲಿ ಸುಮಾರು 5 ಸಾವಿರದಷ್ಟು ಆಟೋ ನೊಂದಣಿಯಾಗಿದೆ.  ಇವರಿಗೆ ಒಂದೇ ಒಂದೇ ಸಂಘಟನೆ ಇಲ್ಲ. ಇದರರ್ಥ ಹೇಳುವವರು-ಕೇಳುವವರು ಯಾರೂ ಇಲ್ಲ. ಅವರು ಆಡಿದ್ದೇ ಆಟ. ಪ್ರಯಾಣಿಕರೇ ಪ್ರಶ್ನಿಸಬೇಕಾದ ಸ್ಥಿತಿ ಇದೆ. ಬೇರೆ ಬೇರೆ ನಗರಗಳಲ್ಲಿ 2-3 ಸಂಘಟನೆಗಳಿವೆ. ಆದರೆ ಇಲ್ಲಿ ಸಂಘಟನೆಯೇ ಇಲ್ಲ. ಒಳ್ಳೆಯ ನಾಯಕನ ನೇತೃತ್ವದಲ್ಲಿ ಸಂಘಟನೆ ಮೊದಲು ಆಗಬೇಕಿದೆ. ಈ ಸಂಘಟನೆ ಇಂತಹ ಪುಂಡ ಆಟೋ ಚಾಲಕರನ್ನು ಕಂಡುಹಿಡಿದು ಕಿವಿ ಹಿಂಡುವುದರ ಜೊತೆಗೆ ಉಳಿದ ಚಾಲಕರಿಗೆ ಕಷ್ಟಕಾಲ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ನೆರವಾಗಲು ಅನುಕೂಲವಾಗುತ್ತದೆ. ಇದರ ಸದಸ್ಯನಾದವನು ಆ ಸಂಘಟನೆಯಲ್ಲಿ ಗುರುತಿಸಿಕೊಳ್ಳುತ್ತಾನೆ. ಆತನ ಪರಿಚಯ ಉಳಿದ ಸದಸ್ಯರಿಗೂ ಇರುತ್ತದೆ. ಇದರಿಂದ ದುಷ್ಕೃತ್ಯಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಆತ ಸಂಘಕ್ಕೆ ಬಾಧ್ಯಸ್ಥನಾಗುತ್ತಾನೆ.
ಮೂರನೆಯದಾಗಿ, ಸುಸಜ್ಜಿತ  ಆಟೋ ನಿಲ್ದಾಣ ಮತ್ತು ನಿಗದಿತ ಆಟೋಗಳು ಅಲ್ಲಿ ಇಲ್ಲದಿರುವುದು. ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ, ಯಾರು ಯಾವ ನಿಲ್ದಾಣಕ್ಕೆ ಬೇಕಾದರೂ ಹೋಗಿ ನಿಲ್ಲಬಹುದು. ಶಿಸ್ತು ಎನ್ನುವುದು ಇಲ್ಲಿಲ್ಲ. ಉದಾಹರಣೆಗೆ ಬಸ್ ನಿಲ್ದಾಣದ ಎದುರು ಗಮನಿಸಬಹುದು. ಇಲ್ಲಿ ನಾಲ್ಕಾರು ಆಟೋ ನಿಲ್ದಾಣಗಳಿವೆ. ಒಂದು ಅಥವಾ ಎರಡು ಕಡೆ ನಿಲ್ದಾಣ ಇದ್ದರೆ ಪ್ರಯಾಣಿಕರೇ ಅಲ್ಲಿಗೆ ಹೋಗಿ ಆಟೋ ಏರಿ ಹೋಗಬಹುದು. ಇದರಿಂದ ಪ್ರಯಾಣಿಕರಿಗೂ ರಕ್ಷಣೆ ಇರುತ್ತದೆ. ಯಾವ ಚಾಕ ಎಲ್ಲಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಾನೆ ಎನ್ನುವುದು ಉಳಿದವರಿಗೆ ತಿಳಿದಿರುತ್ತದೆ. ಈ ನಿಲ್ದಾಣಗಳು ಶೇ. 90ರಷ್ಟು ಅನಧಿಕೃತ. ಅಂದರೆ ಚಾಲಕರೇ ಮಾಡಿಕೊಂಡಂತಹವು. ಆರ್‌ಟಿಓ, ಪಾಲಿಕೆ, ಪೊಲೀಸ್ ಇವರಿಂದ ಅನುಮತಿ ಪಡೆದು ನಿರ್ಮಿತವಾದುವಲ್ಲ.
 ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದ ಬಳಿ ಆಟೋ ಚಾಲಕರ  ದುರ್ವರ್ತನೆ ಹೆಚ್ಚು. ಸದಾ ಜಗಳವಾಡುವುದು, ಮಹಿಳೆ ಮತ್ತು ಯುವತಿಯರು ಹೋಗುತ್ತಿದ್ದರೆ ಅವರನ್ನು ವಿಚಿತ್ರ ರೀತಿಯಲ್ಲಿ ಗಮನಿಸುವುದು, ಸಾರ್ವಜನಿಕವಾಗಿಯೇ ಬೀಡಿ, ಸಿಗರೇಟು ಸೇದುವುದು, ಶಿಸ್ತಿನಿಂದ ವರ್ತಿಸದಿರುವುದು ದಿನನಿತ್ಯ ಕಂಡುಬರುತ್ತಿದೆ. ಇಂತಹ ದುರ್ವರ್ತನೆಯನ್ನು ಬಿಟ್ಟರೆ ಮಾತ್ರ ಅಂತಹ ಚಾಲಕರ ಬಗ್ಗೆ ಪ್ರಯಾಣಿಕರಿಗೆ ನಂಬಿಕೆ, ವಿಶ್ವಾಸ ಮೂಡುತ್ತದೆ.
ಪ್ರಿಪೇಯ್ಡ್ ಆಟೋ ನಿಲ್ದಾಣ ಬಸ್ ನಿಲ್ದಾಣ, ರೈಲು ನಿಲ್ದಾಣದಂತಹ ಅನೇಕ ಪ್ರಮುಖ ಸ್ಥಳಗಳಲ್ಲಿ ಅಗತ್ಯವಿದೆ. ಇದು ಜನರಲ್ಲಿ ಹೆಚ್ಚಿನ ವಿಶ್ವಾಸವನ್ನು ಮೂಡಿಸುತ್ತದೆ. ಇದಿಲ್ಲದಿರುವುದರಿಂದ ಆಟೋ ಮೀಟರ್ ಕಡ್ಡಾಯವಿದ್ದರೂ ಶೇ.  50ಕ್ಕೂ ಅಧಿಕ ಚಾಲಕರು ಮಿನಿಮಮ್ ದರಕ್ಕಿಂತಲೂ ಹೆಚ್ಚಿನ ದರವನ್ನೇ ಕೇಳುತ್ತಾರೆ. ಕೊಡದಿದ್ದಾಗ ಜಗಳಕ್ಕಿಳಿಯುತ್ತಾರೆ. ಇವೆಲ್ಲ ದಿನನಿತ್ಯದ ಬೆಳವಣಿಗೆ.    
ಇತ್ತೀಚೆಗೆ ಯುವ ಆಟೋ ಚಾಲಕರ ಪುಂಡಾಟ ಮಿತಿಮೀರುತ್ತಿರುವ ಮಾತು ಚಾಲಕ ವಲಯದಲ್ಲೇ ಕೇಳಿಬರುತ್ತಿದೆ. ಇನ್ನಾದರೂ ಉಳಿದ ಆಟೋ ಚಾಲಕರು ಇಂತಹ ಪುಂಡರನ್ನು ತಾವೇ ಮುಂದಾಗಿ ನಿಗ್ರಹಿಸುವ ಅಥವಾ ಪೊಲೀಸರಿಗೆ ಇವರ ದುರ್ವರ್ತನೆ ಬಗ್ಗೆ ಮಾಹಿತಿ ಕೊಡುವ ಮೂಲಕ ತಡೆಯಬೇಕಿದೆ. ಇಲ್ಲವಾದಲ್ಲಿ ಎಲ್ಲಾ ಆಟೋ ಚಾಲಕರು ಮತ್ತೆ ಮತ್ತೆ ಜನವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ.   ಪ್ರಯಾಣಿಕರೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳದಿದ್ದರೆ ನಾಗರಿಕರಲ್ಲಿ ಒಳ್ಳೆಯ ಅಭಿಪ್ರಾಯ ಮೂಡುವುದಿಲ್ಲ, ಗೌರವವೂ ಸಿಗುವುದಿಲ್ಲ. ಇದನ್ನು ಗಳಿಸುವ, ಮೂಡಿಸುವ ಕೆಲಸ ಚಾಲಕರಿಂದಲೇ ಆಗಬೇಕಿದೆ.

Monday, 24 October 2016

ಛಲ ಬಿಡದ ಸುಪ್ರೀಂ: ಸಂಕಷ್ಟದಲ್ಲಿ ಬಿಸಿಸಿಐ
 


 ಬಿಸಿಸಿಐ  ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಸಂಸ್ಥೆ. ಇಲ್ಲಿಯವರೆಗೆ ಅದನ್ನಾಳಿದವರು ಆಡಿದ್ದೇ ಆಟ ಎನ್ನುವಂತಾಗಿತ್ತು. ಪ್ರಶ್ನಿಸಿದವರ ವಿರುದ್ದ ಸೇಡು ಕಟ್ಟಿಟ್ಟದ್ದು ಎನ್ನುವಂತಾಗಿತ್ತು.   ಇಂತಹ ಸ್ವೇಚ್ಛಾರವನ್ನು ಬೆಳೆಸಿಕೊಂಡು ಬಂದಿತ್ತು. ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎನ್ನುವ ಮಾತಿನಂತೆ ಮಂಡಳಿಯನ್ನು ಕೊಳ್ಳೆ ಹೊಡೆದು ಶ್ರೀಮಂತರಾದವರು ಹಲವರು ಕೋರ್ಟು ಕಟಕಟೆ ಏರುವಂತಾಗಿದೆ. ಹಲವರು ತಪ್ಪಿಸಿಕೊಂಡಿದ್ದಾರೆ. ಇನ್ನು ಮುಂದಾದರೂ ಬಿಸಿಸಿಐ ಭಾರತಿಯ ಕ್ರಿಕೆಟ್ ನಿಯಂತ್ರಣ ಮಂಡಳಿಯಾಗಿರದೆ ತನ್ನನ್ನೂ ನಿಯಂತ್ರಿಸುವವರು ಇದ್ದಾರೆಂದು ತಿಳಿಯಬೇಕಿದೆ. ಇದನ್ನು ತಿಳಿಸುವತ್ತ ಸುಪ್ರೀಂ ಕೋರ್ಟು ದಿಟ್ಟ ಹೆಜ್ಜೆ ಇಟ್ಟಿದೆ. ಬಿಸಿಸಿಐನಲ್ಲಿ ಬೀಡುಬಿಟ್ಟಿರುವ ಅನೇಕ ರಾಜಕಾರಣಿಗಳು, ಅವರ ಹಿಂಬಾಲಕರಿಗೆ ಈಗ ಬೆವರಿಳಿಯಲಾರಂಭಿಸಿದೆ. ಅವರ ಆಸ್ತಿಪಾಸ್ತಿ ಲೆಕ್ಕಾಚಾರವನ್ನು ಸುಪ್ರೀಂ ಕೇಳಿದೆ. ಆದರೂ ತನ್ನ ಮೊಂಡುತನ ಬಿಡದೆ ಸುಪ್ರೀಂಗೆ ಸೆಡ್ಡು ಹೊಡೆಯುತ್ತಿರುವ ಬಿಸಿಸಿಐಗೆ ಮುಂದಾಗಿದೆ.

 ಲೋಧಾ ಸಮಿತಿಯ ಶಿಫಾರಸುಗಳು
* ಬಿಸಿಸಿಐ ಆರ್‌ಟಿಐ ಕಾಯ್ದೆಯಡಿ ಬರಬೇಕು
* ಬೆಟ್ಟಿಂಗ್ ವಿರುದ್ಧ ಹೊಸ ಕಾನೂನನ್ನು ಬಿಸಿಸಿಐ ಮುಂದಾಗಿ ತರಬೇಕು.
* ಕ್ರಿಕೆಟ್ ಆಟಗಾರರು ಮತ್ತು ಬಿಸಿಸಿಐ ಅಧಿಕಾರಿಗಳು ಪ್ರತಿ ವರ್ಷ ತಮ್ಮ ಆದಾಯವನ್ನು ಘೋಷಿಸಬೇಕು.
* ಒಂದು ರಾಜ್ಯಕ್ಕೆ ಒಂದು ಮತ ಜಾರಿಬರಬೇಕು. (ಉದಾಹರಣೆಗೆ, ಮಹಾರಾಷ್ಟ್ರದಲ್ಲಿ 3 ಕ್ರಿಕೆಟ್ ಮಂಡಳಿಗಳಿದ್ದು, ಅಲ್ಲಿ 3 ಮತಗಳಿವೆ)
* ಅಧ್ಯಕ್ಷ ಸಹಿತ ಬಿಸಿಸಿಐ ಪದಾಧಿಕಾರಿಯಾಗಿ ಯಾರೂ 2 ಬಾರಿಗಿಂತ ಹೆಚ್ಚು ಮುಂದುವರೆಯಬಾರದು.
*  ಬಿಸಿಸಿಐ ಪದಾಧಿಕಾರಿಯಾಗುವವರು  ಸಚಿವರು ಅಥವಾ ಸರಕಾರಿ ನೌಕರರಾಗಿರಬಾರದು.
* ಬಿಸಿಸಿಐಯು ಸಂಚಲನಾ ಸಮಿತಿಯನ್ನು ರಚಿಸಬೇಕು. ಇದರಲ್ಲಿ ನಿವೃತ್ತ ಐಎಎಸ್ ಅಥವಾ ಐಪಿಎಸ್ ಅಧಿಕಾರಿ, ಒಬ್ಬ ಮಾಜಿ ಹಿರಿಯ ಆಟಗಾರ, ಮಹಿಳಾ ಕ್ರಿಕೆಟ್ ಆಟಗಾರ್ತಿ ಮತ್ತು ಹಾಲಿ ಆಟಗಾರರೊಬ್ಬರಿರಬೇಕು.
* ಐಪಿಎಲ್ ಮತ್ತು ಬಿಸಿಸಿಐಗೆ ಪ್ರತ್ಯೇಕ ಆಡಳಿತ ಮಂಡಳಿ ಇರಬೇಕು.
* ರೈಲ್ವೇಸ್, ಸರ್ವೀಸಸ್ ಮತ್ತು ಯುನಿವರ್ಸಿಟಿ  ಕ್ರಿಕೆಟ್ ಸಂಸ್ಥೆಗಳನ್ನು ಸದಸ್ಯರೆಂದು ಪರಿಗಣಿಸಬಾರದು.
* ಐಪಿಎಲ್ ಮಾಜಿ ಸಿಇಓ ಸುಂದರರರಾಮನ್ ವಿರುದ್ದ  ಭ್ರಷ್ಟಾಚಾರದ ಪ್ರಕರಣದಡಿ ಸಾಕ್ಷಿಸ ಸಹಿತ ಕ್ರಮ ಜರುಗಿಸಬೇಕು.


ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಲ್ಲಿ ಸುಧಾರಣೆ ಮತ್ತು ಶಿಕ್ಷೆ ಎಂಬ ಪದಗಳಿಗೆ ಜಾಗವೇ ಇಲ್ಲ. ರಾಜಕಾರಣಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿರುವ ಸಂಸ್ಥೆಯಲ್ಲಿ ನಡೆಯುತ್ತಿರುವ ಆಟಾಟೋಪವನ್ನು ತಡೆಗಟ್ಟಲು, ಪಾರದರ್ಶಕ ಆಡಳಿತವನ್ನು ಜಾರಿಗೊಳಿಸಲು ಈವರೆಗೆ ಮಂಡಳಿಯ ಯಾವ ಅಧ್ಯಕ್ಷರೂ ಮುಂದಾಗಿಲ್ಲ. ಕುಬೇರನ ಖಜಾನೆಯಾಗಿರುವ ಇಲ್ಲಿ ಯಾರು ಎಷ್ಟು ಲೂಟಿ ಹೊಡೆದರೂ, ಯಾರು ಎಷ್ಟು ಹಗರಣ ನಡೆಸಿದರೂ ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಅದಕ್ಕೆ ಸರಕಾರದ ನಿಯಂತ್ರಣ ಇಲ್ಲದಿರುವುದು. ಸ್ವಯಂ ನಿಯಂತ್ರಿತ ಸಂಸ್ಥೆಯಾಗಿರುವುದು.
ಯಾವ ದೃಷ್ಟಿಯಿಂದ ನೋಡಿದರೂ ಅಲ್ಲಿ ಈವರೆಗೆ ಆಡಳಿತ ನಡೆಸಿದವರು (ಬಹುಪಾಲು ಅಧ್ಯಕ್ಷರು ರಾಜಕಾರಣಿಗಳು, ಅವರ ಮಕ್ಕಳು ಅಥವಾ ಸಂಬಂಧಿಗಳು) ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಎಂಬ ಶಬ್ದವನ್ನೇ ಮರೆತುಬಿಟ್ಟಿದ್ದರು. ಮಂಡಳಿ ಇರುವುದೇ ಹಣ ಗಳಿಸಲು, ಮೋಜು-ಮೇಜವಾನಿಗೆ, ಸದಾ ವಿದೇಶ ಪ್ರವಾಸ ಮಾಡಲು ಎಂಬಂತೆ ವರ್ತಿಸಿ, ತಾವೂ ಕುಬೇರನ ಮಕ್ಕಳಂತಾದರು. ಸದಾ ಒಂದಿಲ್ಲೊಂದು ವಿವಾದ, ಹಗರಣದಿಂದ ದೇಶದ ಅಷ್ಟೇ ಏಕೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಗಳಿಸಿದ್ದ ಬಿಸಿಸಿಐ ತಾನು ನಡೆಸುತ್ತಿದ್ದ ಐಪಿಎಲ್‌ನಲ್ಲಿ ಸಾಕಷ್ಟು  ಅವ್ಯವಹಾರ ನಡೆಸಿದ್ದ ಬಗ್ಗೆ  ನ್ಯಾಯಮೂರ್ತಿ ಮುದ್ಗಲ್ ಸಮಿತಿ  ವರದಿ ನೀಡಿತ್ತು. ಈ ಹಗರಣದ ಪರಿಶೀಲನೆಗೆ ಸುಪ್ರೀಂ ಕೋರ್ಟು ನ್ಯಾಯಮೂರ್ತಿ ಆರ್. ಎಸ್. ಲೋಧಾ ನೇತೃತ್ವದಲ್ಲಿ  ನ್ಯಾ. ಅಶೋಕ್ ಬಾನ್, ನ್ಯಾ. ಆರ್.ರವೀಂದ್ರನ್ ನೇತೃತ್ವದಲ್ಲಿ ಸಮಿತಿಯೊಂದನ್ನು 2015ರ ಜನವರಿಯಲ್ಲೇ ರಚಿಸಿದೆ. ಈ ಸಮಿತಿ ಬಿಸಿಸಿಐಗೆ ಅಕ್ಷರಶಃ ಚಳಿಜ್ವರ ಬಿಡಿಸುತ್ತಿದೆ.
ಲೋಧಾ ಅವರು 10 ಅಂಶಗಳ ಶಿಫಾರಸಿನ ಪಟ್ಟಿಯೊಂದನ್ನು ಬಿಸಿಸಿಐಗೆ ನೀಡಿ ಆ ಪ್ರಕಾರ ಬದಲಾವಣೆ ಮಾಡಿಕೊಂಡು ಆಡಳಿತ ನಡೆಸಲು ಸೂಚಿಸಿದ್ದರು. ಅಲ್ಲಿಂದ ಶುರುವಾಗಿದ್ದೇ ಈ ವಿವಾದ. ಬಿಸಿಸಿಐ ಈ ಶಿಫಾರಸನ್ನು ತಾನು ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎನ್ನುವ ಮೂಲಕ ಸುಪ್ರೀಂ ಕೋರ್ಟಿಗೆ ಸೆಡ್ಡು ಹೊಡೆದಿದೆ. ಲೋಧಾ ತಾನು ರೂಪಿಸಿರುವ ಶಿಫಾರಸುಗಳು ಮಂಡಳಿಯ ಕಿಡ್ನಿ, ಹೃದಯ ಮತ್ತು ಶ್ವಾಸಕೋಶವಿದ್ದಂತೆ ಎಂದು ತಿಳಿಯಪಡಿಸಿದ್ದರು.  ಜೊತೆಗೆ ಈ ಶೀಫಾರಸನ್ನು ಜಾರಿಗೊಳಿಸಲು ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಮತ್ತು ನ್ಯಾಯಮೂರ್ತಿ ಇಬ್ರಾಹಿಂ ಖಲೀಫುಲ್ಲಾ ಅವರನ್ನು ನೇಮಿಸಲಾಗಿದೆ.  ನಿಮಗೆ ಶಿಪಾರಸುಗಳನ್ನು ಅಳವಡಿಸಿಕೊಳ್ಳಲು ಕಷ್ಟವಾದರೆ ಹೇಳಿ, ನಾವೇ ಅಳವಡಿಸಿ ತೋರಿಸುತ್ತೇವೆ ಎಂಬ ಎಚ್ಚರಿಕೆಯನ್ನು ಈ ಸಮಿತಿ ನೀಡಿದೆ.
ಮುಖ್ಯವಾಗಿ ಶಿಫಾರಸಿನಲ್ಲಿ ಒಂದು ರಾಜ್ಯಕ್ಕೆ ಒಂದು ವೋಟು, 70 ವರ್ಷ ದಾಟಿದವರು ಪದಾಧಿಕಾರಿಗಳಾಗಿರಕೂಡದು, ಎರಡಕ್ಕಿಂತ ಹೆಚ್ಚು ಬಾರಿ ಒಬ್ಬ ಸದಸ್ಯನಾಗಬಾರದು, ಕ್ರಿಕೆಟ್ ಪಂದ್ಯದ ವೇಳೆ ಪ್ರಸಾರವಾಗುವ ಜಾಹೀರಾತಿನ ಮೇಲೆ ನಿರ್ಬಂಧ ವಿಧಿಸುವುದು ಮೊದಲಾದವು ಅತ್ಯಂತ ಪ್ರಮುಖವಾಗಿವೆ. ಈ ಬದಲಾವಣೆಯನ್ನು ಒಪ್ಪಿಕೊಳ್ಳದ ಬಿಸಿಸಿಐ ಮೇಲೆ ಮತ್ತೊಮ್ಮೆ ಸುಪ್ರೀಂ ಕೋರ್ಟು ಕೆಂಗಣ್ಣು ಬೀರಿತ್ತು. ಜೊತೆಗೆ 4 ರಿಂದ 6 ತಿಂಗಳಲ್ಲಿ ಇದನ್ನು ಅಳವಡಿಸಿಕೊಳ್ಳದಿದ್ದಲ್ಲಿ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿತ್ತು.
ಇದಾದ 2-3 ವಾರದ ಬಳಿಕ ಬಿಸಿಸಿಐ ನ್ಯಾಯಮೂರ್ತಿ ಮಾರ್ಕಾಂಡೇಯ ಕಾಟ್ಜು ಅವರನ್ನು  ಸುಪ್ರೀಂ ಕೋರ್ಟಿನಲ್ಲಿ ತನ್ನ ಪರ ವಾದಿಸಲು ನೇಮಿಸಿಕೊಂಡಿತು. ಕಾಟ್ಜು ಸುಪ್ರೀಂ  ಕೋರ್ಟಿನ  ರೂಲಿಂಗ್ ಕಾನೂನುಬಾಹಿರವಾದುದು ಎಂದು ವಾದಿಸಿದ್ದರು. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್  ಐಸಿಸಿ (ಇಂಟರ್‌ನ್ಯಾಶನಲ್ ಕ್ರಿಕೆಟ್ ಕಮಿಟಿ) ಅಧ್ಯಕ್ಷ ಶಶಾಂಕ್ ಮನೋಹರ್ (ಬಿಸಿಸಿಐ ಮಾಜಿ ಅಧ್ಯಕ್ಷರೂ ಹೌದು) ಅವರನ್ನು ಸಹಾಯಕ್ಕಾಗಿ ಸಂಪರ್ಕಿಸಿದ್ದರು. ಆದರೆ ನೆರವಿಗೆ ಬರಲು ಅವರು ನಿರಾಕರಿಸಿದ್ದರು.
 ಸದ್ಯ ಬಿಸಿಸಿಐನ ಕೈಕಾಲನ್ನು ಸುಪ್ರೀಂ ಕಟ್ಟಿ ಹಾಕಿದೆ. ಅಧ್ಯಕ್ಷ ಠಾಕೂರ್ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಶಿಫಾರಸು ಮಾಡಲಾಗಿದೆ ಎಂದು ಆರೋಪಿಸಿದ್ದರು. ಆದರೆ ನ್ಯಾಯಾಲಯವು ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಇದು ಅಂತರಾಷ್ಟ್ರಿಯ ಮಟ್ಟದಲ್ಲಿ ಸುದ್ದಿಯಾಗಿದೆ. ಇಡಿ ಜಗತ್ತಿಗೆ ಈ ಬಗ್ಗೆ ಗೊತ್ತಿದೆ. ಈಗ ನೀವು ಬಂದು ನನ್ನನ್ನು ಕೇಳದೆ ರೂಪಿಸಿದ್ದು ಸರಿಯಲ್ಲ ಎನ್ನುತ್ತಿದ್ದೀರಿ, ನಿಮಗೆ ನಾವು ಆಮಂತ್ರಣ ಪತ್ರಿಕೆ ಕೊಟ್ಟು ಶಿಫಾರಸು ರೂಪಿಸಬೇಕಿತ್ತೇ ಎಂದು ಖಾರವಾಗಿ ಪ್ರಶ್ನಿಸಿದೆ.
ವಿವಾದ ಅರಂಭವಾದಾಗ ಅಧ್ಯಕ್ಷರಾಗಿದ್ದ ಶಶಾಂಕ್ ಮನೋಹರ್ ಬಿಸಿಸಿಐ ಚುಕ್ಕಾಣಿಯನ್ನು ಬಿಟ್ಟು ಅನುರಾಗ್ ಠಾಕೂರ್ ಹೆಗಲಿಗೆ ಕಟ್ಟಿ ಹೋಗಿದ್ದಾರೆ. ಈಗ ಠಾಕೂರ್ ರಕ್ಷಿಸಬೇಕಿದೆ. ಆದರೆ ಠಾಕೂರ್ ತನ್ನ ಹಠವನ್ನು ಬಿಡದೆ ಸುಪ್ರೀಂ ಕೋರ್ಟಿಗೆ ಸವಾಲು ಹಾಕುತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದ  ಸುಪ್ರೀಂ, ಆಡಳಿತ ಮಂಡಳಿ ವಜಾ ಮಾಡಿ ಆಡಳಿತಾಧಿಕಾರಿ ನೇಮಿಸುವ ಅವಕಾಶವನ್ನು ನೀವೇ ಕಲ್ಪಿಸುತ್ತಿದ್ದೀರಿ ಎಂದು ಹೇಳಿದೆ. ಆದರೆ ತಾನೇ ಸುಪ್ರೀಂ ಎಂದು ತಿಳಿದ ಬಿಸಿಸಿಐ ಮತ್ತೆ ಜಗ್ಗದಿದ್ದಾಗ, ಒಂದೋ, ನೀವು ನಮ್ಮ ಶಿಫಾರಸು ಒಪ್ಪಿಕೊಳ್ಳಿ, ಇಲ್ಲವಾದಲ್ಲಿ ನಿಮ್ಮನ್ನು ಹೇಗೆ ದಾರಿಗೆ ತರಬೇಕೆಂದು ನಮಗೆ ಗೊತ್ತು ಎಂಬ ಗಂಭೀರ ಎಚ್ಚರಿಕೆಯನ್ನು ನೀಡಿತ್ತು. ಆದರೆ ಸೆ. 30ರೊಳಗೆ ಶಿಫಾರಸು ಅಳವಡಿಕೆಯನ್ನು ನಿರಾಕರಿಸಿದ್ದ ಬಿಸಿಐಐಗೆ ಶಾಕ್ ಕೊಟ್ಟಿದ್ದು, ಅದರ ಇಬ್ಬರು ಸದಸ್ಯರಾದ ತ್ರಿಪುರಾ ಮತ್ತು ವಿದರ್ಭಾ ಕ್ರಿಕೆಟ್ ಮಂಡಳಿಯ ಸದಸ್ಯರೇ ಸುಪ್ರೀಂ ಕೋರ್ಟ್ ಪರ ನಿಂತಾಗ.
ಈ ಹಂತದಲ್ಲಿ ಸ್ವಲ್ಪ ಮೆತ್ತಗಾದ ಬಿಸಿಸಿಐ ಮಹತ್ವದ ಶಿಫಾರಸನ್ನು ಅಳವಡಿಸಿಕೊಳ್ಳುವುದಾಗಿ ಅಕ್ಟೋಬರ್ 1ರಂದು ಕೋರ್ಟಿಗೆ ಹೇಳಿತ್ತು. ಆದರೆ 70 ವರ್ಷದ ಮೀರಿದವರು ಹೊರಹೋಗುವುದು, ಒಂದು ರಾಜ್ಯಕ್ಕೆ ಒಂದು ಮತವನ್ನು ಮಾತ್ರ ಕೈಬಿಡಬೇಕೆಂದು ಕೋರಿತ್ತು. ಇದಕ್ಕೊಪ್ಪದ ಕೋರ್ಟು ಬಿಸಿಸಿಐನ ಎಲ್ಲ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿತು ಮತ್ತು ಅ. 7ರೊಳಗೆ ಶರತ್ತುರಹಿತವಾಗಿ ಶಿಫಾರಸು ಒಪ್ಪಿಕೊಳ್ಳಲು ಎಚ್ಚರಿಸಿತ್ತು. ಮಧ್ಯಾಂತರ ಆದೇಶವೊಂದನ್ನು ಹೊರಡಿಸಿ ಶಿಫಾರಸು ಒಪ್ಪಿಕೊಳ್ಳದಿದ್ದರೆ ಯಾವ ರಾಜ್ಯ ಮಂಡಳಿಗೂ ಹಣ ಬಿಡುಗಡೆ ಮಾಡುವಂತಿಲ್ಲ ಎಂದೂ ಸಹ ಹೇಳಿ ಬಿಸಿಐಐಗೆ ಇನ್ನೊಂದು ಸಂಕಷ್ಟ ತಂದಿಟ್ಟಿತು.
 ಈ ಮಧ್ಯೆ ದೆಹಲಿಯಲ್ಲಿ ಸಭೆ ಸೇರಿದ ಬಿಸಿಸಿಐ ಆಡಳಿತ ಮಂಡಳಿ, ಶಿಫಾರಸು ಅಳವಡಿಕೆ ಪ್ರಾಯೋಗಿಕವಾಗಿ ಕಷ್ಟ ಎಂದು ಹೇಳಿತ್ತು. ಆದರೆ ಮೂರನೆಯ ಎರಡರಷ್ಟು ಸದಸ್ಯರು ಇದನ್ನು ಅನುಮೋದಿಸಿ ನಿರ್ಣಯ ಮಾಡಿರಲಿಲ್ಲ. ಅ. 17ರಂದು  ಠಾಕೂರ್ ಅಫಿಡವಿಟ್ ಸಲ್ಲಿಸಿ, ಲೋಧಾ ಶಿಫಾರಸು ಜಾರಿಗೊಳಿಸಿದರೆ ಸರ್ಕಾರವು ತನ್ನ ವ್ಯವಹಾರದಲ್ಲಿ ಮಧ್ಯಪ್ರವೇಶಿಸಲು ದಾರಿಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಈ ಬಗ್ಗೆ ವಿಚಾರಣೆ ನಡೆಯಬೇಕು ಎಂದಿದ್ದರು. ಇದರ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ಅ. 21ರಂದು ಕೋರ್ಟು ಬಿಸಿಸಿಐ ಅಧ್ಯಕ್ಷ ಠಾಕೂರ್ ಮತ್ತು  ಕಾರ್ಯದರ್ಶಿ ಅಜಯ್ ಶಿರ್ಕೆ ಅವರಿಗೆ ನೋಟೀಸ್ ಜಾರಿ ಮಾಡಿ ನ. 3ರೊಳಗೆ  ಲೋಧಾ ಸಮಿತಿ ಎದುರು ಹಾಜರಾಗುವಂತೆ ಆದೇಶಿಸಿದೆ.
ಒಟ್ಟಿನಲ್ಲಿ, ಎರಡು ತಿಂಗಳಿಂದ ಬಿಸಿಸಿಐ ದಿನನಿತ್ಯ ಸುದ್ದಿಯಲ್ಲಿದೆ. ನಿಯಂತ್ರಣವಿಲ್ಲದ ಅದರ ಅಧಿಕಾರಕ್ಕೆ ಕಡಿವಾಣ ಹಾಕಿ, ಆರ್ಥಿಕ ಶಿಸ್ತನ್ನು ಮತ್ತು ಮನಬಂದಂತೆ ಆಟವಾಡುವುದನ್ನು, ಯವುದೆ ಹೊಸ ನಿರ್ಣಯ ಕೈಗೊಳ್ಳುವುದಕ್ಕೆ ಲೋಧಾ ಸಮಿತಿ ಕಡಿವಾಣ ಹಾಕುತ್ತಿದೆ. ತಾನು ಯಾರಿಗೂ ಹೊಣೆಗಾರನಲ್ಲ ಎನ್ನುವ ಅದರ ಅಹಂಕಾರಕ್ಕೆ ಕಡಿವಾಣ ಬೀಳುವುದು ನಿಶ್ಚಿತ.  ಲೋಧಾ ಸಮಿತಿಯ ಶಿಫಾರಸುಗಳು ಜಾರಿಯಾದರೆ ಬಿಸಿಸಿಐನ ಅಧಿಕಾರ ಮೊಟಕುಗೊಳ್ಳಲಿ. ಪ್ರತಿ ವ್ಯವವಹಾರವನ್ನು ಪಾರದರ್ಶಕವಾಗಿ ನಡೆಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದು ಸಮಿತಿಗೆ ಮತ್ತು ಸದಸ್ಯರಿಗೆ ತೊಂದರೆಯನ್ನುಂಟು ಮಾಡಲಿದೆ. ಇದರಿಂದ ಬಚಾವಾಗಲು ಇನ್ನಿಲ್ಲದ ಹೋರಾಟವನ್ನು ಬಿಸಿಸಿಐ ನಡೆಸುತ್ತಿದೆ.  
.............................

Wednesday, 19 October 2016

 ಸಜ್ಜನ ರಾಜಕಾರಣಿಯ ಸದ್ವರ್ತನೆ ಇದಲ್ಲ



ಸಜ್ಜನ, ದಲಿತ ನಾಯಕ, ಪ್ರ್ರಾಮಾಣಿಕ ಎಂದೆಲ್ಲ ಎನಿಸಿಕೊಂಡಿದ್ದ ಶ್ರೀನಿವಾಸ್ ಪ್ರಸಾದ್ ಅಧಿಕಾರ ಕಳಕೊಂಡ ನಂತರ ಅದೇಕೋ ತಮ್ಮ ಸಾನಕ್ಕೆ ಶೋಭೆ ತರದ ರೀತಿ ವರ್ತಿಸುತ್ತಿದ್ದಾರೆ. ಮೊನ್ನೆ ರಾಜಿನಾಮೆ ಕೊಟ್ಟ ನಂತರವಂತೂ ಅವರಾಡಿದ ಮಾತು ಇವರು ನಿಜಕ್ಕೂ ಸಜ್ಜನರೇ ಎನ್ನುವುದನ್ನು ಪಶ್ನಿಸುವಂತಾಗಿದೆ. ಅಧಿಕಾರವೇ ಸರ್ವಸ್ವ ಎಂದು ತಿಳಿದುಕೊಂಡವರು ಮಾತ್ರ  ಈ ರೀತಿ ವರ್ತಿಸಲು ಸಾಧ್ಯ. ಆ ಗುಂಪಿನಿಂದ ಹೊರತಾಗಿದ್ದ ಪ್ರಸಾದ್ ತಾನೂ ಸಹ ಅಧಿಕಾರವಿಲ್ಲದೆ ನೀರಿನಿಂದ ಹೊರತೆಗೆದ ಮೀನಿನಂತೆ ಚಡಪಡಿಸುತ್ತಿದ್ದೇನೆ ಎನ್ನುವುದನ್ನು ಪ್ರಚುರಪಡಿಸಿಕೊಂಡಿದ್ದಾರೆ.




ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ರಾಜಿನಾಮೆ ವಿಚಾರ  ರಾಜ್ಯ ಕಾಂಗ್ರೆಸ್‌ನಲ್ಲಿ ಸಣ್ಣಮಟ್ಟಿನ ತಲ್ಲಣವನ್ನುಂಟು ಮಾಡಿದೆ. ದಲಿತ ನಾಯಕ, ಪ್ರಾಮಾಣಿಕ, ಸಜ್ಜನ, ಸಚ್ಚಾರಿತ್ರ್ಯ  ಹೊಂದಿದ ರಾಜಕಾರಣಿ ಎಂದೆಲ್ಲ ಹೆಸರುಗಳಿಸಿದ್ದರು. ರಾಜಿನಾಮೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವರು ತೊಡೆತಟ್ಟಿದ್ದಾರೆ. ಈ ಮೂಲಕ ತಮ್ಮ ರಾಜಿನಾಮೆಗೆ ಕಾರಣವಾದ ಸೇಡನ್ನು ತೀರಿಸಿಕೊಳ್ಳುವ ಸೂಚನೆ ನೀಡಿದ್ದಾರೆ.
ಮೇಲ್ನೋಟಕ್ಕೆ ಪ್ರಸಾದ್ ರಾಜಿನಾಮೆಗೆ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದು ಕಾರಣ ಎನ್ನುವುದು ಕಂಡುಬರುತ್ತದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ, ಕಂದಾಯ ಸಚಿವರಾಗಿದ್ದ ಅವರು ಅನಾರೋಗ್ಯದಿಂದ ಸಮರ್ಥವಾಗಿ ಇಲಾಖೆ ನಿಭಾಯಿಸಲಿಲ್ಲ ಎನ್ನುವುದು ಜನಜನಿತ. ಅದರಲ್ಲೂ ಕಂದಾಯದಂತಹ ಪ್ರಮುಖ ಖಾತೆಯನ್ನಿಟ್ಟುಕೊಂಡು ಬರಗಾಲದಂತಹ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿ ಅಧಿಕಾರಿಗಳನ್ನು ಎಚ್ಚರಿಸದಿದ್ದರೆ ರೈತರ ಸ್ಥಿತಿ ಇನ್ನಷ್ಟು ಕಷ್ಟಕ್ಕೆ ಸಿಲುಕುತ್ತದೆ ಎನ್ನುವುದೂ ಕಾರಣವಾಗಿರಬಹುದು.
ಪ್ರಸಾದ್ ಎಷ್ಟೇ ಉತ್ತಮ ಮನುಷ್ಯರಗಿದ್ದರೂ ಸದ್ಯದ ಅವರ ನಡವಳಿಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ, ಬಿ.ಎಸ್ ಯಡಿಯೂರಪ್ಪ ಅವರನ್ನು ನೆನಪಿಸುತ್ತದೆ. ಬಂಗಾರಪ್ಪ ಕಾಂಗ್ರೆಸ್‌ನಿಂದ ಹೊರಬರುವಾಗ ರಾಜೀವ್ ಗಾಂಧಿ, ಪಿ.ವಿ. ನರಸಿಂಹರಾವ್, ರಾಜ್ಯದ ನಾಯಕರನ್ನು ವಾಚಾಮಗೋಚರವಾಗಿ ಬಯ್ಯುತ್ತ ಹೊರಬಂದಿದ್ದರು. ಅದೆ ರೀತಿ ಬಿಜೆಪಿ ಸೇರಿ ಅಲ್ಲಿಂದ ಹೊರಬರುವಾಗಲೂ ಅವರು ಬಿಜೆಪಿ ನಾಯಕರನ್ನು ಬೈದಿದ್ದೇ ಬೈದಿದ್ದು. ಕಾಂಗ್ರೆಸ್‌ನ್ನು ನಿರ್ನಾಮ ಮಾಡುತ್ತೇನೆಂದು ಪಣತೊಟ್ಟಿದ್ದರು. ಅವರ ನಿರ್ಗಮನದಿಂದ ಕಾಂಗ್ರೆಸ್‌ಗೆ ಒಂದಷ್ಟು ಹಾನಿ ಸಂಭವಿಸಿತಾದರೂ ಪಕ್ಷವೇನೂ ನಿರ್ನಾಮವಾಗಲಿಲ್ಲ. ಅದೇ ರೀತಿ ಬಿಜೆಪಿಗೂ ಹೇಳಿದ್ದರು. ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗಲೂ ಬಿಜೆಪಿ ಸೋಲಿಸುವುದೇ ತನ್ನ ಗುರಿ ಎಂದು ತೊಡೆ ತಟ್ಟಿದ್ದರು. ರಾಜ್ಯದಾದ್ಯಂತ ಬಂಗಾರಪ್ಪ ಅವರಂತೆ ಪ್ರವಾಸ ಮಾಡಿ ಪ್ರಚಾರ ಮಾಡಿದ್ದರು. ಅಲ್ಲಿ ಅವರೂ ವಿಫಲರಾದರು, ಬಿಜೆಪಿಯನ್ನೂ ಸೋಲಿಸಿದರು.
ಇವರಂತೆ ರಾಜ್ಯದಲ್ಲಿ ಬೇರೆ ಬೇರೆ ಪಕ್ಷದ ಇನ್ನೂ ಹಲವು ನಾಯಕರು ಇದೇ ರೀತಿ ಆರ್ಭಟಿಸಿ, ಗುಡುಗಿ, ನಂತರ ಹೇಳಹೆಸರಿಲ್ಲದಂತಾಗಿದ್ದಾರೆ. ಇದೆಲ್ಲ ರಾಜ್ಯದ ಮತದಾರರಿಗೆ ಗೊತ್ತಿರುವ ವಿಚಾರ. ಸದ್ಯ ಪ್ರಸಾದ್ ಈ ಮೇಲಿನ ಇಬ್ಬರು ನಾಯಕರಷ್ಟು ಜನಪ್ರಿಯರಲ್ಲದಿದ್ದರೂ, ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿರುವುದು ಅವರು ಅಧಿಕಾರದ ಖುರ್ಚಿ ಕಳಕೊಂಡ ನಿರಾಸೆ, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ಬಗ್ಗೆ ಹತಾಶೆಯಲ್ಲಿದ್ದಂತೆ ತೋರುತ್ತದೆ.
ಸಾಂಸದರಾಗಿ, ಕೇಂದ್ರ ಸಚಿವರಾಗಿ, ಮೂರ್ನಾಲ್ಕು ಬಾರಿ ಪಕ್ಷಾಂತರ ಮಾಡಿಯೂ ಮತ್ತೆ ಕಾಂಗ್ರೆಸ್ ಸೇರಿದಾಗ ಅವರಿಗೆ ನಂಜನಗೂಡು ಮೀಸಲು ಕ್ಷೇತ್ರದಿಂದ ಟಿಕೆಟ್ ಕೊಡಲಾಗಿತ್ತು. ಅಲ್ಲಿ ಗೆದ್ದು ಬಂದು ದಲಿತ ಕೋಟಾದಲ್ಲಿ ಸಚಿವರೂ ಆದರು. ಕೈಕೊಟ್ಟ ಆರೋಗ್ಯ ಅವರು ಉತ್ತಮ ಕೆಲಸ ಮಾಡಲು ಬಿಡಲಿಲ್ಲ. ಆ ಕಾರಣದಿಂದ ಅಧಿಕಾರ ಕಳಕೊಂಡರೆಂದೇ ವಿಶ್ಲೇಷಿಸಲಾಗುತ್ತಿದೆ. ಪ್ರಸಾದ್ ಅವರಂತಹ ವ್ಯಕ್ತಿ ಈಗ ಈ ರೀತಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಕೆಲವು ನಾಯಕರ, ಹೈಕಮಾಂಡ್  ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವದನ್ನು ಗಮನಿಸಿದಾಗ ಅಧಿಕಾರದ ಚಟ ಎಂತಹವರನ್ನೂ ಬಿಡುವುದಿಲ್ಲ ಎನ್ನುವುದಕ್ಕೆ ಮತ್ತೆ ಸಾಕ್ಷಿಯಾಗುತ್ತಿದೆ. ಉತ್ತಮ ಕೆಲಸ ಮಾಡುತ್ತಿದ್ದ ವೇಳೆ ಕೈ ಬಿಟ್ಟಿದ್ದರೆ ಪ್ರಸಾದ್ ಅವರ ಮಾತನ್ನು ಒಪ್ಪಬಹುದಿತ್ತು. ಆದರೆ ಈಗ ಆಡುತ್ತಿರುವ ಅವರ ಮಾತು ಭ್ರಮನಿರಸನದ ಪ್ರತೀಕವಾಗಿದೆ.
ಸಾಯುವವರೆಗೆ ರಾಜಕಾರಣ ಮಾಡಬೇಕೆನ್ನುವುದೇ ರಾಜಕಾರಣಿಗಳ ಹಠ. ಮಧ್ಯದಲ್ಲಿ ಆರೋಗ್ಯ ಕೆಟ್ಟರೂ ತಾನೇ ಅಧಿಕಾರದಲ್ಲಿ ಇರಬೇಕು. ರಾಜಿನಾಮೆ ಕೊಡಬಾರದು, ಖುರ್ಚಿಗೆ ಅಂಟಿಕೊಂಡೇ ಇರಬೇಕೆಂಬ ನಿಲುವು ವಿಚಿತ್ರವಾಗಿ ಕಾಣುತ್ತಿದೆ. ಸದ್ಯ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆಸ್ಪತ್ರೆಯ ಐಸಿಯುನಲ್ಲಿ ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಅಧಿಕಾರದ ಚುಕ್ಕಾಣಿ ಬಿಟ್ಟುಕೊಡದಿರುವುದನ್ನು ಇಲ್ಲಿ ಗಮನಿಸಬಹುದು.
ಪ್ರಸ್ತುತ ಪ್ರಸಾದ್ ತಮ್ಮ ಅಧಿಕಾರದ ದುರಾಸೆಯಿಂದ ಈವರೆಗೆ ತಾನು ಸಂಪಾದಿಸಿದ್ದ ಹೆಸರಿಗೆ ಕಳಂಕ ತಂದುಕೊಳ್ಳುತ್ತಿದ್ದಾರೆ. ಅವರು ಮತ್ತೆ ಸ್ವತಂತ್ರವಾಗಿ ಚುನಾವಣೆಗೆ ನಿಲ್ಲಬಹುದು, ಇನ್ನಾವುದೇ ಪಕ್ಷ ಸೇರಬಹುದು. ಆದರೆ ಅವರ ಮಾತುಗಳು ಸಜ್ಜನ ರಾಜಕಾರಣಿ ಎನ್ನುವ ಅವರ ಇಲ್ಲಿಯವರೆಗಿನ ಗೌರವಕ್ಕೆ ಚ್ಯುತಿ ತಂದಿದ್ದಂತೂ ನಿಶ್ಚಿತ.  ಅವರ ರಾಜಿನಾಮೆಯಿಂದಾಗುವ ನಷ್ಟದ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತಿರಬಹುದು. ಇದೇ ವೇಳೆ ಇತರೇ ಪ್ರತಿಪಕ್ಷಗಳು ಅವರ ಸೇರ್ಪಡೆ ಮಾಡಿಕೊಂಡು ಲಾಭ ಪಡೆಯಲು ಹವಣಿಸುತ್ತಿರಲೂ ಇರಬಹುದು. ಏನಿದ್ದರೂ ಪ್ರಸಾದ್ ಅವರಿಂದ  ಮೈಸೂರು ಜಿಲ್ಲೆಯಷಲ್ಲಿ ಒಂದಷ್ಟು  ಲಾಭ, ಹಾನಿ ಆಗಬಹುದೇ ವಿನಾ ಇತರೆ ಜಿಲ್ಲೆಗಂತೂ ಅದರ ಪರಿಣಾಮ ತಟ್ಟುವುದಿಲ್ಲ.
ಸಜ್ಜನ ಎನ್ನುವುದನ್ನು ಬಿಟ್ಟರೆ ದಲಿತರ ಸಂಘಟನೆಯನ್ನು, ಉದ್ಧಾರವನ್ನು,  ಸರ್ಕಾರಿ ಯೋಜನೆಗಳ ಲಾಭವನ್ನು ರಾಜ್ಯದ ಎಲ್ಲೆಡೆ ದಲಿತರಿಗೆ ಸಿಗುವಂತೆ ಮಾಡುವಲ್ಲಿ ಅವರ ಪಾತ್ರ ಎಲ್ಲೂ ಕಂಡುಬರುತ್ತಿಲ್ಲ.  ಏಕೆಂದರೆ ರಾಜ್ಯನಾಯಕನಾಗಿ ಅವರು ಮಿಂಚಲೇ ಇಲ್ಲ.
............................................

Tuesday, 18 October 2016

ಶುಂಠಿ ಬೆಳೆಯಲು ಬಂದು ಗಾಂಜಾ ರುಚಿ ತೋರಿಸಿದರು


 ಬಗರ್‌ಹುಕುಂ ಮತ್ತು ಅರಣ್ಯ ಭೂಮಿಯಲ್ಲಿ ಇದನ್ನು ಬೆಳೆಯುವುದು ಜಾಸ್ತಿ. ಏಕೆ ಗೊತ್ತೆ, ಇಲ್ಲಿನ ಮಣ್ಣು ಫಲವತ್ತಾದುದರಿಂದ ಉತ್ತಮ ಗುಣಮಟ್ಟದ ಬೆಳೆ ಬರುತ್ತದೆ. ಜೊತೆಗೆ ಇದು ಯಾರಿಗೂ ಸುಲಭದಲ್ಲಿ ಗೊತ್ತಾಗುವುದಿಲ್ಲ.  ಯಾವ ಬಂಡವಾಳವಿಲ್ಲದೆ ನೋಟು ಎಣಿಸುವ ದಂಧೆಯಾಗಿದೆ. ಈ ಜಾಲದ ಹಿಂದೆ ಅರಣ್ಯಾಧಿಕಾರಿಗಳೂ ಶಾಮೀಲಾಗಿರುವ ಬಗ್ಗೆ ಗುಸುಗುಸು ವದಂತಿ ಕೇಳಿಬರುತ್ತಿದೆ.  ಖಾತೆ ಇಲ್ಲದ ಜಮೀನಿನಲ್ಲಿ  ಗಾಂಜಾ ಬೆಳೆಯುವುದು ಹೆಚ್ಚು. ಏಕೆಂದರೆ, ಇದನ್ನು ಅಧಿಕಾರಿಗಳು ಪತ್ತೆ ಮಾಡಿದರೂ ಏನೂ ಮಾಡಲಿಕ್ಕಾಗುವುದಿಲ್ಲ. ಜಮೀನಿಗೆ ದಾಖಲೆಯೇ ಇಲ್ಲದ ಮೇಲೆ ಯಾರ ಮೇಲೂ ಕೇಸು ಹಾಕುವಂತಿಲ್ಲ್ಲ. ಜಮೀನನ್ನೂ ಏನೂ ಮಾಡುವಂತಿಲ್ಲ


ಗಾಂಜಾವನ್ನು ಬಗರ್‌ಹುಕುಂ ಜಮೀನಿನಲ್ಲಿ ಬೆಳೆದರೆ ಹಕ್ಕುಪತ್ರ ಕೊಡುವುದಿಲ್ಲ. ಹಕ್ಕುಪತ್ರ ಕೊಡುವ ಕೆಲಸ ಈಗ ಸನಿಹವಿರುವುದರಿಂದ ಇದನ್ನು ಬೆಳೆದಿದ್ದರೆ ರೈತರೇ ಕಿತ್ತುಹಾಕಬೇಕು. ಅಧಿಕಾರಿಗಳ ದಾಳಿಗೆ ಒಳಗಾದರೆ ರೈತರು ಜಮೀನು ಕಳೆದುಕೊಳ್ಳುವುದರ ಜೊತೆಗೆ ಕೇಸು ಹಾಕಿಸಿಕೊಂಡು ಜೈಲು ಸೇರಬೇಕಾಗುತ್ತದೆ. ಗಾಂಜಾ ಕೇಸಿನಲ್ಲಿ ಜಾಮೀನೂ ಸಹ ಸಿಗುವುದಿಲ್ಲ. 3 ವರ್ಷ ಶಿಕ್ಷೆ ಖಚಿತ. ನೂರಾರು ರೈತರು ಈ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಪರದಾಡುತ್ತಿದ್ದಾರೆ. ನಾರ್ಕೊಟಿಕ್ ಆಕ್ಟ್‌ನ ತೀವ್ರತೆಯನ್ನು ಅರಿತು ರೈತರು ಗಾಂಜಾದಿಂದ ದೂರ ಸರಿಯಬೇಕು. ಅಬಕಾರಿ ಪೊಲೀಸ್ ಇಲಾಖೆಯವರು ಸಂಶಯಬಂದ ಕಡೆಯೆಲ್ಲ ಪರಿಶೀಲಿಸುವ ಕೆಲಸವನ್ನು ಈಗ ಮಾಡುತ್ತಿದ್ದಾರೆ. ಯಾವ ಕಾರಣಕ್ಕೂ ಪತ್ತೆ ಹಚ್ಚದೆ ಬಿಡುವುದಿಲ್ಲ. ರೈತರಲ್ಲಿ ಈ ಬಗ್ಗೆ ಜಾಗೃತಿ ಅಗತ್ಯ. ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಳ್ಳಬೇಡಿ. 
-ವೈ.ಆರ್. ಮೋಹನ್, ಜಿಲ್ಲಾ ಅಬಕಾರಿ ವರಿಷ್ಠಾಧಿಕಾರಿ   


ಪಶ್ಚಿಮಘಟ್ಟದ ತಪ್ಪಲಲ್ಲಿರುವ, ಹಸಿರಿನ ಸೆರಗನ್ನೇ ಹೊದ್ದಿರುವ, ಮಲೆನಾಡಿನ ಹೆಬ್ಬಾಗಿಲೆಂದೇ ಖ್ಯಾತವಾಗಿರುವ ಶಿವಮೊಗ್ಗ ಜಿಲ್ಲೆ ತನ್ನ ಪಾರಿಸಾರಿಕ ಸಂಪತ್ತಿನಿಂದ ಒಂದೆಡೆ ಹೆಸರಾದರೆ, ಇನ್ನೊಂದೆಡೆ ಇದೇ ಹಸಿರಿನ ಒಡಲಲ್ಲಿ ಗಾಂಜಾ ದಂಧೆಯ ನಡೆಸುವ ಮೂಲಕ ಕುಖ್ಯಾತಿಯನ್ನೂ ಪಡೆಯುತ್ತಿದೆ. ಯಾರೋ ಕೆಲವರು ಮಾಡುತ್ತಿರುವ ಈ ಅಕ್ರಮ ದಂಧೆಯಿಂದ ಜಿಲ್ಲೆಯ ಹೆಸರು ಈಗ ಗಾಂಜಾದಿಂದ ಕಳಂಕಿತವಾಗುವಂತಾಗಿದೆ.
ಒಂದು ಕಾಲದಲ್ಲಿ ಅತಿ ಹೆಚ್ಚು ಶ್ರೀಗಂಧ ಮರಗಳನ್ನು ಬೆಳೆಯುತ್ತಿದ್ದ ಜಿಲ್ಲೆ ನಂತರ ಅದರ ಕಳ್ಳಸಾಗಾಣಿಕೆಗೂ ಹೆಸರಾಗಿ, ತನ್ನೆಲ್ಲ ಶ್ರೀಗಂಧವನ್ನು ದಂಧೆಕೋರರಿಂದ ಬರಿದುಮಾಡಿಕೊಂಡಿತು. ಈಗ ಪಶ್ಚಿಮಘಟ್ಟದಲ್ಲಿರುವ ಅಪೂರ್ವ ಔಷಧಿ ಸಸ್ಯಗಳ ನಾಶ ಮತು ವನ್ಯ ಜೀವಿಗಳ ಸಂತತಿಯ ಹನನವೂ ಸಾಗಿದೆ. ಇದೇ ವೇಳೆ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಗಾಂಜಾವನ್ನು ಬೆಳೆಯುವ ಮೂಲಕ ಗಾಂಜಾ ಕಾರ್ಖಾನೆ ಎಂಬ ಹೆಸರಿಗೂ ಕಾರಣವಾಗುತ್ತಿದೆ.
ರೈತರು ಬೆಳೆ ಮಧ್ಯೆ ಗಾಂಜಾ ಬೆಳೆದು ಹೊರರಾಜ್ಯ ಮತ್ತು ಜಿಲ್ಲೆಗೆ ಕಳುಹಿಸುತ್ತಿರುವುದು ಈಗ ಹೆಚ್ಚುತ್ತಿದೆ. ಈ ವರ್ಷವಂತೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಬಕಾರಿ ಪೊಲೀಸರಿಂದ ದಾಳಿ ನಡೆಯುತ್ತಿದೆ. ಶುಂಠಿ ಬೆಳೆಯುವ ನೆಪದಲ್ಲಿ ಜಿಲ್ಲೆಗೆ ಕಾಲಿಟ್ಟ ಕೇರಳಿಗರು ಬರುವಾಗ ಗಾಂಜಾ ದಂಧೆಯನ್ನು ತಂದರು. ರೈತರಿಗೆ ಇದರ ರುಚಿ ತೋರಿದರು. ಇದರಿಂದ ಮಲೆನಾಡಿನಲ್ಲಿ ಗಾಂಜಾಗುಂಗು ಹೆಚ್ಚುವಂತೆ ಮಾಡಿದ್ದಾರೆ. ರೈತರ ಬದುಕು ಯಾವತ್ತೂ  ಹಣದ ಅಮಿಷಕ್ಕೆ ಬಲಿಯಾಗಬಾರದು. ಆದರೇನು ಮಾಡುವುದು, ನಾರ್ಕೊಟಿಕ್ ಆಕ್ಟ್ ಬಗ್ಗೆ ಗೊತ್ತಿಲ್ಲದೆ ಗಾಂಜಾ ಬೆಳೆದು ಮೈಮೇಲೆ ಕೇಸು ಎಳೆದುಕೊಂಡು ಜೈಲು ಸೇರುತ್ತಿದ್ದಾರೆ.
ಹವಾಮಾನ ವೈಪರಿತ್ಯ, ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರನ್ನು ದಾರಿ ತಪ್ಪಿಸಿದ್ದೇ ಈ ಗಾಂಜಾ ದಂಧೆ. ಮೂಲ ಕೃಷಿ ಮತ್ತು ಸಾಂಪ್ರದಾಯಿಕವಾಗಿ ಬಂದ ಕೃಷಿಯನ್ನು ಬಿಟ್ಟು ಆರ್ಥಿಕವಾಗಿ ಹೆಚ್ಚು ಲಾಭವನ್ನು ಕೆಲವೇ ತಿಂಗಳಲ್ಲಿ ಗಳಿಸಿಕೊಡಬಲ್ಲ ಗಾಂಜಾ ಬೆಳೆಯಲಾರಂಭಿಸಿದ್ದಾರೆ. ಇದಕ್ಕೆ ಕೇರಳಿಗರೇ ಕಾರಣ. ಗಾಂಜಾ ಬೀಜವನ್ನು ನೀಡಿ ಬೆಳೆಯಲು ಪ್ರೇರೇಪಿಸಿದರು. ನಂತರ ಖರೀದಿಯ ಜವಾಬ್ದಾರಿಯನ್ನೂ ಹೊತ್ತರು. ನೀರು, ಗೊಬ್ಬರ, ಔಷಧ ಯಾವುದೂ ಬೇಕಾಗದ ಗಾಂಜಾ ಕೇವಲ ಮೂರು ತಿಂಗಳಲ್ಲಿ ಹೂವು ಬಿಡುವ ಸಸ್ಯ. ಯಾವ ಚಿಂತೆಯೂ ಇಲ್ಲದೆ ಹಣ ಗಳಿಸಬಹುದೆಂಬ ಆಸೆ ತೋರಿಸಿ ರೈತರು ಈಗ ಜೈಲು ಕಾಣಬೇಕಾದ ಸ್ಥಿತಿಯನ್ನು ಈ ದಂಧೆಕೋರರು ತಂದೊಡ್ಡಿದ್ದಾರೆ.
ಒಂದು ಗಾಂಜಾ ಗಿಡ 250ರಿಂದ 300 ಗ್ರಾಂ ಗಾಂಜಾವನ್ನು ಕೊಡುತ್ತದೆ. ಒಂದು ಎಕ್ರೆಯಲ್ಲಿ 30ರಿಂದ 40 ಗಿಡವನ್ನು ಬೆಳೆಯಬಹುದು. 3 ತಿಂಗಳಲ್ಲಿ ಇದರ ಬೆಳೆ ಸಿಗುವುದರಿಂದ ರೈತನಿಗೆ ಕನಿಷ್ಟ 10 ಸಾವಿರ ರೂ. ತಿಂಗಳಿಗೆ ಲಾಭ ಬರಲಿದೆ. ಹಸಿ ಗಾಂಜಾ ಒಂದು ಕೆಜಿಗೆ 2 ಸಾವಿರ ರೂ. ಒಣ ಗಾಂಜಾ ಕೆಜಿಗೆ 10 ಸಾವಿರ ರೂ. ಅದರಲ್ಲೂ ಮಲೆನಾಡಿನ ಗಾಂಜಾಕ್ಕೆ ವಿಶೇಷ ಬೇಡಿಕೆ ಇದೆಯಂತೆ. ಇದರಲ್ಲಿರುವ ಕಿಕ್ ಅಥವಾ ರುಚಿಯೇ ಉಳಿದ ಗಾಂಜಾಕ್ಕಿಂತ ಶ್ರೇಷ್ಠವಾದುದು ಎಂದು ತಜ್ಞರು ಹೇಳುತ್ತಾರೆ. ಈಗ ವರ್ಷವಿಡೀ ದುಡಿದರೂ ಇಷ್ಟು ಲಾಭ ರೈತನಿಗೆ ಸಿಗದಿರುವ ಕಾರಣ ಸುಲಭದಲ್ಲಿ ಆಕರ್ಷಿತನಾಗುತ್ತಿದ್ದಾನೆ. ಒಂದು ರೀತಿಯಲ್ಲಿ ಪರ್ಯಾಯ ಬೆಳೆ ಎನ್ನುವಂತಾಗಿದೆ.
 ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಹುಹಿಂದಿನಿಂದಲೂ ಕಾಫಿ ತೋಟದಲ್ಲಿ ಜೊತೆಗೆ ದಟ್ಟಾರಣ್ಯದಲ್ಲಿ ಗಾಂಜಾ ಬೆಳೆೆಯಲಾಗುತ್ತಿತ್ತು. ಇದೂ ಸಹ ಕೇರಳಿಗರ ಕೊಡುಗೆಯೇ ಆಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟಿರುವುದು ಮತ್ತು  ಇಲ್ಲಿನ ಯುವಕರನ್ನು  ಗಾಂಜಾ ಗುಂಗಿಗೆ ನೂಕಿರುವುದು ಪ್ರಜ್ಞಾವಂತರ ಜಿಲ್ಲೆಯ ಜನ ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ಇದರಿಂದಾಗಿ ಗಾಂಜಾ ಜಾಲ ಹಬ್ಬುತ್ತಿದೆ. ಎಷ್ಟೇ ಕೇಸು ಹಾಕುತ್ತಿದ್ದರೂ ಅವರ ಕಣ್ತಪ್ಪಿಸಿಯೇ ಬೆಳೆ ಬೆಳೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಇದು ಹೆಚ್ಚುತ್ತಿರುವುದು ಜಿಲ್ಲೆಯಲ್ಲಿ ಕಳವಳವನ್ನುಂಟು ಮಾಡಿದೆ.
ಚೆಂಡು ಹೂವಿನ ಮಧ್ಯೆ ಇದನ್ನು ಬೆಳೆದರೆ ಯಾರಿಗೂ ಗೊತ್ತ್ತಾಗುವುದೇ ಇಲ್ಲ. ಏಕೆಂದರೆ ಚೆಂಡು ಹೂವಿನ ಎಲೆ ಮತ್ತು ಗಾಂಜಾ ಎಲೆ ಒಂದೇ ರೀತಿಯಾಗಿರುತ್ತದೆ. ಗಾಂಜಾ 3 ತಿಂಗಳಿಗೆ ಹೂವು ಬಿಟ್ಟ ನಂತರ ಸುವಾಸನೆ ಬರಲಾರಂಭಿಸುತ್ತದೆ. ಆಗ ಅಧಿಕಾರಿಗಳು ದಾಳಿ ಮಾಡುತ್ತಾರೆ. ಗಾಂಜಾ ಬೆಳೆದರೆ ಎದುರಿಸಬೇಕಾಗಬಹುದಾದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ಕೃಷಿ ಇಲಾಖೆ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.


.................................
ಸೊರಬದಲ್ಲಿ  ಕಾಂಗ್ರೆಸ್ ನಾಯಕರಿಂದಲೇ ಪಕ್ಷ ನಿರ್ನಾಮ!
....................................................................................



 -ಇದೊಂದು ವಿಚಿತ್ರ ಘಟನೆ. ಬಹುಶ; ಬೇರಾವ ಜಿಲ್ಲಾ ಕಾಂಗ್ರೆಸ್ ಈ ಕೆಲಸವನ್ನು ಮಾಡಲಿಕ್ಕಿಲ್ಲ. ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ, ಮುಂದಿನ ಚುನಾವಣೆಗೆ ಸನ್ನದ್ಧರಾಗಬೇಕಿದ್ದ ಕಾಲದಲ್ಲಿ  ಕಾಂಗ್ರೆಸ್ ಮುಖಂಡರು, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಸೊರಬದಲ್ಲಿ ಜೆಡಿಎಸ್‌ಗೆ ನೀರೆರೆಯುತ್ತಿದ್ದಾರೆ. ಮೊದಲೇ ಅಲ್ಲಿ ಪಕ್ಷ ಐಸಿಯುನಲ್ಲಿದೆ. ಅದನ್ನು ಬದುಕಿಸುವ ಕೆಲಸ ಮಾಡುವ ಬದಲು ಕಾಗೋಡು ಮಾಡಿದ ಎಡವಟ್ಟನ್ನೇ ಬೆಂಬಲಿಸುತ್ತಿದ್ದಾರೆ. ಇನ್ನೊಂದೆಡೆ, ಕುಮಾರ್ ಬಂಗಾರಪ್ಪ ತಮ್ಮ ಹಳೆ ಚಾಳಿಯನ್ನು ಬಿಡದೆ ಮುಂದುವರೆಸುತ್ತಿದ್ದಾರೆ. ಇಬ್ಬರ ಕದನ ಪಕ್ಷವನ್ನು ನಿರ್ನಾಮ ಮಾಡುತ್ತಿದೆ.

ಸೊರಬ ತಾಲೂಕು ಬಗರ್‌ಹುಕುಂ ಸಮಿತಿಗೆ ಸದಸ್ಯರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರ್ ಬಂಗಾರಪ್ಪ ಹಾಗೂ ಸೊರಬದ ಪಕ್ಷದ ಮುಖಂಡ ತಬಲಿ ಬಂಗಾರಪ್ಪ ತನ್ನ ಗಮನಕ್ಕೆ ತಂದಿದ್ದರು. ಈ ಬಗ್ಗೆ ತಾನು ಕಾಗೋಡು ತಿಮ್ಮಪ್ಪರೊಂದಿಗೆ ಚರ್ಚೆ ಕೂಡ ನಡೆಸಿದ್ದೆ. ಈ ಬಗ್ಗೆ ಸೂಕ್ತ ಗಮನಹರಿಸುವ ಭರವಸೆಯನ್ನು ಕಾಗೋಡು ನೀಡಿದ್ದರು. ಆದರೆ
ಇಂತಹ ಸಂದರ್ಭದಲ್ಲಿ ಕುಮಾರ್ ಕಾಗೊಡು ವಿರುದ್ಧ ಬಹಿರಂಗವಾಗಿ ಆರೋಪ ಮಾಡುತ್ತಿರುವುದು ಸರಿಯಲ್ಲ. ಕುಮಾರ್ ಪಕ್ಷದ ಹಿತಾಸಕ್ತಿ, ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಬಾರದು. ಏನೇ ಸಮಸ್ಯೆಯಿದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿಯೇ ಪರಿಹರಿಸಿಕೊಳ್ಳಬೇಕು.
- ತೀ.ನ. ಶ್ರೀನಿವಾಸ್ 

   ಸೊರಬ ತಾಲೂಕು ಬಗರ್‌ಹುಕುಂ ಸಮಿತಿಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬದಲಿಸಿ, ಆ ಸ್ಥಾನಕ್ಕೆ ಜೆಡಿಎಸ್ ಕಾರ್ಯಕರ್ತರನ್ನು ಜಿಲ್ಲಾ ಉಸ್ತುವಾರಿ ಸಚಿವ  ಕಾಗೋಡು ತಿಮ್ಮಪ್ಪ ನೇಮಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮತ್ತು ಕಾಗೋಡು ಮಧ್ಯೆ ಇದು ಪರಿಸ್ಥಿತಿ ವಿಷಮಿಸುವಂತೆ ಮಾಡಿದೆ.
ಕಾಗೋಡು ಈ ವಿಷಯದಲ್ಲಿ ಕೈಗೊಂಡ ನಿರ್ಧಾರ ವಿಚಿತ್ರವಾಗಿ ಕಾಣಿಸುತ್ತಿದೆ. ತನ್ನ ಪಕ್ಷದವರಿಗೆ ಅಧಿಕಾರ ನೀಡಬೇಕಾದ ಸಚಿವರೇ ಇನ್ನೊಂದು ಪಕ್ಷವನ್ನು ಪರೋಕ್ಷವಾಗಿ ಬೆಂಬಲಿಸುತ್ತಾರೆಂದರೆ ಇದರಲ್ಲಿ ಯಾವುದೋ ವಾಸನೆಯನ್ನು ಗ್ರಹಿಸಬಹುದಾಗಿದೆ. ಸೊರಬದಲ್ಲಿ ಶಾಸಕರಾಗಿ ಜೆಡಿಎಸ್‌ನ  ಮಧು ಬಂಗಾರಪ್ಪ್ಪ ಇದ್ದಾರೆ. ತಮ್ಮ ಪಕ್ಷದವರೇ ಆದ ಕುಮಾರ್ ಬಂಗಾರಪ್ಪ ಅವರನ್ನು ಹಣಿಯಬೇಕೆಂಬ ಉದ್ದೇಶದಿಂದ ಕಾಗೋಡು ಈ ನಿರ್ಧಾರ ಕೈಗೊಂಡರೇ ಎನ್ನುವ ಪ್ರಶ್ನೆ ಕಾಂಗ್ರೆಸಿಗರಲ್ಲೇ ಚರ್ಚೆಗೀಡಾಗಿದೆ.
ಈ ವಿಚಾರ ಈಗ ಶೀತಲಸಮರಕ್ಕೆ ಕಾರಣವಾಗಿದೆ. ಕಾಗೋಡು ನಿರ್ಧಾರವನ್ನು ಕುಮಾರ್ ಬಹಿರಂಗವಾಗಿ ವಿರೋಧಿಸಿ ಹೇಳಿಕೆ ಕೊಟ್ಟಿರುವುದು ಕಾಂಗ್ರೆಸ್‌ನಲ್ಲಿ ತಲ್ಲಣವನ್ನುಂಟುಮಾಡಿದೆ. ಕಾಂಗ್ರೆಸಿಗರು ಕಾಗೋಡು ಪರ ಹೇಳಿಕೆ ಕೊಡುತ್ತಿದ್ದಾರೆಯೇ ವಿನಾ ಕಾಗೋಡು ಮಾಡಿದ್ದು ಸರಿಯಲ್ಲ ಎಂದು ಯಾರೂ ಹೇಳದಿರುವ ಬಗ್ಗೆ ಆಶ್ಚರ್ಯ ಉಂಟಾಗುತ್ತಿದೆ. ಸಚಿವರಾದಾಕ್ಷಣ ಏನು ಮಾಡಿದರೂ ಸರಿ ಎಂದು ಕಾಂಗ್ರೆಸಿಗರು ಒಪ್ಪಿಕೊಂಡಂತಿದೆ. ಕಾಗೋಡು ಅವರಿಗೆ ತಮ್ಮ ಪಕ್ಷವರಾರು, ಬೇರೆ ಪಕ್ಷದವರಾರು ಎನ್ನುವ ಮಾಹಿತಿ ಇಲ್ಲವೇ, ಹಾಗಾದರೆ ಇದ್ದ ಕಾಂಗ್ರೆಸ್ ಸದಸ್ಯರನ್ನು ಕಿತ್ತೊಗೆಯಲು  ಅವರನ್ನು ದಾರಿ ತಪ್ಪಿಸಿದವರಾರು ಎನ್ನುವುದಕ್ಕೂ ಪಕ್ಷ ಉತ್ತರಿಸಬೇಕಿದೆ.
ಕುಮಾರ್ ಅವರು ಏಕಾಏಕಿ ಕಾಗೋಡು ವಿರುದ್ದ ಮಾತನಾಡುವುದಕ್ಕಿಂತ ಮೊದಲು ಅವರನ್ನು ಭೇಟಿ ಮಾಡಿ ನಡೆದಿರುವ ಅನಾಹುತದ ಬಗ್ಗೆ ವಿವರಿಸಬಹುದಿತ್ತು. ಪಕ್ಷದ ನಾಯಕರ ಬಗ್ಗೆ, ಅದರಲ್ಲೂ ಹಿರಿಯ ಕಾಗೋಡು ಬಗ್ಗೆ ಹೇಳಿಕೆ ಕೊಡುವ ಮುನ್ನ ಯೋಚನೆ ಮಾಡಬೇಕಿತ್ತು. ಪಕ್ಷದ ಶಿಸ್ತನ್ನು ಮೀರಿ ಬಹಿರಂಗವಾಗಿ ನಾಯಕರ ವಿರುದ್ದ ಹೇಳಿಕೆ ಕೊಡುವುದು ಸರಿಯಲ್ಲ ಎನ್ನುವುದನ್ನು ಅರಿಯಬೇಕಿತ್ತು. ತನ್ನ ಬೆಂಬಲಿಗರನ್ನು ಸಮಾಧಾನಿಸಲೋ ಅಥವಾ ಹಳೆಯ ವಿಷಯಗಳ ದ್ವೇಷದ ಹಿನ್ನೆಲೆಯಲ್ಲೋ ಟೀಕಿಸಿರಬಹುದೆಂದು ವಿಶ್ಲೇಷಿಸಲಾಗುತ್ತಿದೆ.ಇದು ಕುಮಾರ್ ಮಾಡಿದ ತಪ್ಪು. ಜಿಲ್ಲಾ ಕಾಂಗ್ರೆಸ್ ನಾಯಕರ ಗಮನಕ್ಕೆ ತಂದು ಸರಿ ಮಾಡಿಸುವಂತೆ ಕೋರಬಹುದಿತ್ತು.
ಸೊರಬದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಕಟ್ಟಲು ಜಿಲ್ಲಾ ಕಾಂಗ್ರೆಸ್ ಕ್ರಮ ಕೈಗೊಳ್ಳಬಹುದಿತ್ತು. ನೇಮಕಾತಿ ವಿಚಾರದಲ್ಲೇ ಈ ರೀತಿ ಎಡವಿದರೆ, ಕಾರ್ಯಕರ್ತರಿಗೆ ಅನ್ಯಾಯ ಮಾಡಿದರೆ ಸುಮ್ಮನಿರಲು ಸಾಧ್ಯವೇ, ಕಾಗೋಡು ಪರ ವಕಾಲತ್ತು ವಹಿಸುವ ಕಾಂಗ್ರೆಸ್ ಮುಖಂಡರು ಇದಕ್ಕೆ ಉತ್ತರ ಕೊಡಬೇಕು. ಸೊರಬದಲ್ಲಿ ಪಕ್ಷ ನಿರ್ನಾಮವಾಗುವ ಹಂತದಲ್ಲಿದೆ. ಅಲ್ಲಿ ನಾಯಕರನ್ನು ಬೆಳೆಸುತ್ತಿಲ್ಲ. ಕುಮಾರ್ ಕೆಲವೊಮ್ಮೆ ಆಡಿದ್ದೇ ಆಟ ಎನ್ನುವಂತಾಗಿದೆ. ತನಗಿಂತ ಬೇರೆ ಯಾರೂ ನಾಯಕರಿಲ್ಲ ಎನ್ನುವುದೂ ಇದಕ್ಕೆ ಕಾರಣವಾಗಿರಬಹುದು. ಇದನ್ನೆಲ್ಲ ನಿಗ್ರಹಿಸಲು ಜಿಲ್ಲಾ ಸಮಿತಿ ವಿಫಲವಾಗಿದೆ. ಇದು ಇಂದು- ನಿನ್ನೆಯ ವಿವಾದವಲ್ಲ. ಬಂಗಾರಪ್ಪ ಕಾಂಗ್ರೆಸ್ ಬಿಟ್ಟ ನಂತರ ಸೊರಬದಲ್ಲಿ ಕಾಂಗ್ರೆಸ್ ಮೂಲೆಗುಂಪಾಗಿದೆ ಎನ್ನುವುದು ಸೂರ್ಯನಷ್ಟೇ ಸತ್ಯ.
ಜೊತೆಗೆ ಪಕ್ಷವನ್ನು ಕಟ್ಟಬೇಕು, ಹೊಸಬರನ್ನು ಮುಂದೆ ತರಬೇಕೆನ್ನುವ ಛಾತಿಯಂತೂ ಮೊದಲಿಲ್ಲ. ಇರುವ ನಾಯಕರಿಗೂ ಪ್ರೋತ್ಸಾಹವಿಲ್ಲ. ಜಾತಿ ವಿಷಬೀಜವನ್ನು ಬಿತ್ತುತ್ತ ಸಾಗಿದರೆ ಪಕ್ಷ ಉದ್ಧಾರವಾಗದು. ಕುಮಾರ್ ಆಗಲಿ, ಜಿಲ್ಲಾ ಮುಂಡರಾಗಲಿ, ಸಚಿವರಾಗಲಿ ಇದನ್ನರಿಯಬೇಕಿದೆ. ಕಳೆದ ಜಿಪಂ ಚುನಾವಣೆಯಲ್ಲಿ ತಾಲೂಕಿನ 5 ಸ್ಥಾನವನ್ನೂ ಕೈಚೆಲ್ಲಿದೆ. ತಾಂನಲ್ಲೂ ಅಷ್ಟಕಷ್ಟೇ. ಇದರ ಬಗ್ಗೆ ಜವಾಬ್ದಾರಿ ಹೊತ್ತು ಕುಮಾರ್, ಇತರರು ಮಾತನಾಡಬೇಕಿತ್ತು.
ಮಧು ಸಲಹೆಯಂತೆ ಕಾಗೋಡು ತಿಮ್ಮಪ್ಪ ಕಾರ್ಯಕರ್ತರ ನೇಮಕ ಮಾಡಿದ್ದಾರೆ ಎನ್ನುವುದು ಕುಮಾರ್ ಬಂಗಾರಪ್ಪ ಬೆಂಬಲಿಗರ ಆರೋಪವಾಗಿದೆ. ದಿವಂಗತ ಮುಖ್ಯಮಂತ್ರಿ  ಎಸ್.ಬಂಗಾರಪ್ಪರ ಪುತ್ರರಾದ ಕುಮಾರ್ ಹಾಗೂ ಮಧು ನಡುವೆ ನಡೆಯುತ್ತಿರುವ ಕಲಹದಲ್ಲಿ ಕಾಗೋಡು ತಿಮ್ಮಪ್ಪ ಕೂಡ ಸೇರ್ಪಡೆಯಾಗುವಂತಾಗಿದೆ. ಇದರಿಂದ ’ಸಹೋದರರ ಫೈಟ್’ ಹೊಸ ತಿರುವು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ರಂಗುಪಡೆಯುವ ಸಾಧ್ಯತೆ ದಟ್ಟವಾಗಿದೆ.
  ಕಾಗೋಡು ತಿಮ್ಮಪ್ಪ ಹಾಗೂ ಸೊರಬ ಕ್ಷೇತ್ರದ ಜೆಡಿಎಸ್ ಶಾಸಕ ಮಧು ಬಂಗಾರಪ್ಪರ ನಡುವೆ ಸುಮಧುರ ಬಾಂಧವ್ಯವಿದೆ. ಸಾಕಷ್ಟು ಆತ್ಮೀಯತೆಯಿದೆ. ಕಾಗೋಡು ಬಗ್ಗೆ ಸಾಕಷ್ಟು ಗೌರವ ಭಾವನೆಯನ್ನು ಮಧು ಹೊಂದಿದ್ದಾರೆ. ಉಳಿದಂತೆ ಕಾಗೋಡು ಹಾಗೂ ಕುಮಾರ್ ಬಂಗಾರಪ್ಪ ಒಂದೇ ಪಕ್ಷದಲ್ಲಿದ್ದರೂ ಇಬ್ಬರ ನಡುವಿನ ಸಂಬಂಧ ಅಷ್ಟಕಷ್ಟೆ ಎಂಬಂತಿದೆ. ಈಗ ಬಗರ್‌ಹುಕುಂ ಸಮಿತಿ ಸದಸ್ಯರ ನೇಮಕದ ವಿಷಯಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಮತ್ತೆ ಕಲಹ ಆರಂಭವಾಗಿದೆ. ಈ ಜಗಳ ಉಳಿದ ಪಕ್ಷದವರಿಗೆ ಲಾಭವಾಗುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ.  







  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಮೇಲೆ ಹಲವರ ಕಣ್ಣು
 



  ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಹಾಲಿ ಅಧ್ಯಕ್ಷರ ಅಧಿಕಾರ ಮುಂದಿನ ತಿಂಗಳು 2ನೆಯ ವಾರ ಮುಕ್ತಾಯವಾಗಲಿದೆ. ಈ ಅಧ್ಯಕ್ಷ ಸ್ಥಾನಕ್ಕೇರಲು ನಗರದ ಹಲವು ಕಾಂಗ್ರೆಸ್ ಮುಖಂಡರು ತೀವ್ರ ಯತ್ನ ನಡೆಸಿದ್ದಾರೆ. ಪ್ರಭಾವಿ ರಾಜಕಾರಣಿಗಳ ಮೂಲಕ ಒತ್ತಡ ಹೇರಲಾರಂಭಿಸಿದ್ದಾರೆ. ಇದರಿಂದ ಮುಂದಿನ ಸ್ಬುಡಾ ಅಧ್ಯಕ್ಷರು ಯಾರು ಎನ್ನುವ ಬಗ್ಗೆ ಸಾರ್ವಜನಿಕರಲ್ಲೂ ತೀವ್ರ ಕುತೂಹಲ ಮನೆ ಮಾಡಿದೆ.
ಈ ಬಾರಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳೆಂದರೆ, ಇಮ್ತಿಯಾಜ್ ಖಾನ್, ಸಯ್ಯದ್ ವಾಹಿದ್ ಅಡ್ಡು, ಮುಕ್ತಿಯಾರ್ ಅಹಮದ್ ಮತ್ತು ಆರೀಫ್ ಖಾನ್.
ಇಮ್ತಿಯಾಜ್ ಖಾನ್ ಈ ಬಾರಿ ಕೂಡ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಯತ್ನ ಅವರಿಂದ ನಡೆದಿದೆ. ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ರಾಜ್ಯಾಧ್ಯಕ್ಷ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಸೇರಿದಂತೆ ಪಕ್ಷದ ಪ್ರಮುಖರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಬಾರಿ ತಮಗೆ ಸ್ಬುಡಾ ಅಧ್ಯಕ್ಷ ಸ್ಥಾನದ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.
ಇನ್ನೊಂದೆಡೆ, ಯೋಜನಾ ಆಯೋಗದ ರಾಜ್ಯ ಉಪಾಧ್ಯಕ್ಷರಾಗಿರುವ ಸಿಎಂ ಇಬ್ರಾಹಿಂ ಅವರ ಆಪ್ತರಾಗಿರುವುದರಿಂದ ಅವರ ಪ್ರಭಾವ ಬಳಸಿ  ಅಧ್ಯಕ್ಷರಾದರೂ ಆಗಬಹುದು. ಆದರೆ ಸದ್ಯ ಇಬ್ರಾಹಿಂ ಕಾಂಗ್ರೆಸ್‌ನಲ್ಲಿ ಸೈಲಂಟ್ ಆಗಿರುವುದರಿಂದ ಅವರ ಪ್ರಭಾವ ಎಷ್ಟರ ಮಟ್ಟಿಗೆ ನಡೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಷ್ಟೆ.
ಸಯ್ಯದ್ ವಾಹಿದ್ ಅಡ್ಡು ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದರು. ನಂತರ ಲೋಕಸಭೆ ಚುನಾವಣೆ ವೇಳೆ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಇತ್ತೀಚೆಗೆ ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಇವರು ಸಚಿವ ರೋಷನ್ ಬೇಗ್ ಅವರ ಆಪ್ತರಾಗಿದ್ದು, ಅವರ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೇಗ್ ಶಿವಮೊಗ್ಗಕ್ಕೆ ಬಂದರೆ ಅಡ್ಡು ಮನೆಗೆ ಭೇಟಿ ಕೊಡುತ್ತಾರೆ. ಅಡ್ಡು ಬೆಂಗಳೂರಿಗೆ ತೆರಳಿದರೆ ಬೇಗ್ ಮನೆಗೆ ಭೇಟಿ ಕೊಡುತ್ತಾರೆ. ಇಷ್ಟೊಂದು ಆಪ್ತತೆ ಇರುವ ಕಾರಣ ಅಡ್ಡು ಅಧ್ಯಕ್ಷರಾದರೂ ಆಶ್ಚರ್ಯವೇನಿಲ್ಲ.
 ಮುಕ್ತಿಯಾರ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಂದವರು. ಈ ಹಿಂದೆ ಅವರು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದವರು. ಪ್ರಭಾವಿ ಮುಖಂಡರೂ ಹೌದು.
ಆರೀಫ್ ಖಾನ್ ಅವರು ಶಾಸಕ ಕೆ. ಬಿ. ಪ್ರಸನ್ನಕುಮಾರ್ ಅವರ ಅತ್ಯಾಪ್ತರಾಗಿದ್ದು, ಅವರ ಮೂಲಕ ಒತ್ತಡ ಹಾಕಿಸಿ ಅಧ್ಯಕ್ಷರಾಗಲೂಬಹುದು. ಅಧ್ಯಕ್ಷ ರೇಸ್‌ನಲ್ಲಿ ತಾನಿರುವುದನ್ನು ಅವರು ಖಾತ್ರಿಪಡಿಸಿದ್ದಾರೆ. ಯುವ ಮುಖಂಡರಾಗಿರುವುದರಿಂದ, ಶಾಸಕರು ಮನಸ್ಸು ಮಾಡಿದರೆ ಖಾನ್ ಅಧ್ಯಕ್ಷರಾಗಬಹುದು. ಒಟ್ಟಿನಲ್ಲಿ, ತುರುಸಿನ ಹಣಾಹಣಿ ಇದೆಯಾದರೂ ಯಾರು ಅಧ್ಯಕ್ಷರಾದರೂ ಆಶ್ಚರ್ಯವೇನಿಲ್ಲ.
 ಈ ಮಧ್ಯೆ ಎನ್.ರಮೇಶ್ ಹಾಲಿ ಅಧ್ಯಕ್ಷರಾಗಿದ್ದು, ಉಳಿದ ಒಂದೂವರೆ ವರ್ಷದ ಅವಧಿಗೆ ತಾವೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಯತ್ನ ನಡೆಸುತ್ತಿದ್ದಾರೆನ್ನಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ರಮೇಶ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ಅವಕಾಶ ಕಡಿಮೆ ಎಂದು ಪಕ್ಷದ ಮೂಲಗಳು ಹೇಳುತ್ತವೆ. ಏಕೆಂದರೆ, ಹೊಸಬರಿಗೆ ಅದರಲ್ಲೂ ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ದುಡಿದ ಮುಂಡರಿದ್ದು, ಅವರಿಗೆ  ಹುದ್ದೆ ನೀಡುವ ಸಂಪ್ರದಾಯ ಇರುವುದರಿಂದ ಅವಕಾಶ ಕಲ್ಪಿಸಲು ಇದು ಉತ್ತಮ ವೇದಿಕೆಯಾಗಿದೆ. ಪಕ್ಷದಲ್ಲಿ ಈ ಬಾರಿ ಅಲ್ಪಸಂಖ್ಯಾತರಿಗೆ ಸುಡಾ ಅಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಈ ಹಿಂದೆಯೇ ತೀರ್ಮಾನ ಮಾಡಲಾಗಿತ್ತೆಂಬ ಮಾತು ಸಹ ಕೇಳಿಬರುತ್ತಿದೆ.
ರಮೇಶ್ ಅಧ್ಯಕ್ಷರಾಗುವ ವೇಳೆಯೇ ಅಲ್ಪಸಂಖ್ಯಾತ ನಾಯಕರು ತಮ್ಮ ಬೇಡಿಕೆ ಮುಂದಿಟ್ಟಿದ್ದರು. ಏಕೆಂದರೆ ಕಾಂಗ್ರೆಸ್ ಶಾಸಕರು ನಗರದಲ್ಲಿ ಆಯ್ಕೆಯಾಗಲು ಅಲ್ಪಸಂಖ್ಯಾತರೇ ಕಾರಣವಾಗಿದ್ದು.  ಮುಸ್ಲಿಂ ಮತದಾರರನ್ನು ಗಮನದಲ್ಲಿಟ್ಟುಕೊಂಡು ಆ ವರ್ಗಕ್ಕೆ ಸೇರಿದ ಪಕ್ಷದ ಮುಖಂಡರೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೇರಿಸುವ ಚಿಂತನೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರದ್ದಾಗಿದೆ ಎಂದು ತಿಳಿದುಬಂದಿದೆ.
 

ತಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸುಮಾರು 35 ವರ್ಷಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ. ಪಕ್ಷ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ವರಿಷ್ಠರು ಸ್ಬುಡಾ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ನಿರ್ವಹಣೆ ಮಾಡುತ್ತೇನೆ.
-ಇಮ್ತಿಯಾಜ್ ಖಾನ್ 
 ------------------------------------