Monday, 27 June 2016

ಸ್ಮಾರ್ಟ್ ಸಿಟಿ ಯೋಜನೆ ಸಿದ್ಧತೆಗೆ ಐಡೆಕ್ ಸಂಸ್ಥೆಯ ನೆರವು


* ಎರಡನೆ ಹಂತದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪಾಲ್ಗೊಳ್ಳಲು ಭರದ ಸಿದ್ಧತೆ
*ಯೋಜನೆ ರೂಪಿಸಲು  ಐಡೆಕ್ ಸಂಸ್ಥೆಯ ಸೇವೆ
* ಹಿಂದಿನ ಬಾರಿ ಪ್ರಸ್ತಾಪಿಸಲಾಗಿದ್ದ ಮೆಡಿಟೂರಿಸಂಗೆ ಖೊಕ್
* ಗುಂಡಪ್ಪ ಶೆಡ್ ಬಳಿ ಪರ್ಯಾಯ ನೈಸರ್ಗಿಕ ಚಿಕಿತ್ಸಾ ತಾಣ ಸ್ಥಾಪನೆ
* ತುಂಗಾ ಎಡದಂಡೆ ಕಾಲುವೆಯವರೆಗಿನ  ಅಂದಾಜು 1500 ಎಕ್ರೆ ಪ್ರದೇಶ ಅಭಿವೃದ್ಧಿಗೆ ನಿರ್ಧಾರ
* ರಿವರ್ ಫ್ರಂಟ್ ಡೆವಲಪ್‌ಮೆಂಟ್ ಯೋಜನೆ ಅಳವಡಿಕೆ
* ಕೆನಾಲ್ ಸೌರ ವಿದ್ಯುತ್ ಉತ್ಪದನಾ ಘಟಕ ಈ ಬಾರಿಯೂ ಪ್ರಸ್ತಾವ



ಶಿವಮೊಗ್ಗ: ಕೇಂದ್ರ ಸರಕಾರವು ಸ್ಮಾರ್ಟ್ ಸಿಟಿ ಯೋಜನೆಗಾಗಿ ನಡೆಸಿದ ಮೊದಲ ಹಂತದ ಸ್ಪರ್ಧೆಯಲ್ಲಿ ಆಯ್ಕೆಯಾಗಿರದ ಶಿವಮೊಗ್ಗ ಪಾಲಿಕೆ ಎರಡನೆಯ ಹಂತದ ಯೋಜನೆಯಲ್ಲಿ ಆಯ್ಕೆಯಾಗಲು ಸರ್ವಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ಐಡೆಕ್ ಸಂಸ್ಥೆಯ ಸೇವೆ ಪಡೆಯಲಾಗುತ್ತಿದೆ.
2015ರ ನವೆಂಬರ್ 13ರಂದು ಮೊದಲ ಹಂತದ ಯೋಜನೆಗೆ ಅಂತಿಮ ರೂಪುರೇಶೆ ತಯಾರಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿತ್ತು. ಈಗ ಅದೇ ಅಂಕಿ-ಅಂಶಗಳನ್ನೊಳಗೊಡಂತೆ ಪೂರಕ ದಾಖಲಾತಿಯೊಂದಿಗೆ, ಕೆಲವು ಮಾರ್ಪಾಡುಗಳನ್ನು ಮಾಡಿ ಯೋಜನೆ  ಸಿದ್ಧಗೊಳಿಸಲಾಗುತ್ತಿದೆ.
ಈ ಬಾರಿ ಸಾರ್ವಜನಿಕ ವಲಯ, ವಾಣಿಜ್ಯ ವಲಯ ಮತ್ತು ವಸತಿ ಪ್ರದೇಶವನ್ನೊಳಗೊಂಡ ನಗರದ ಹೃದಯ ಭಾಗವನ್ನು ಪ್ರದೇಶಾಧಾರಿತ ಪ್ರಸ್ತಾವನೆಯಲ್ಲಿ ಆಯ್ದುಕೊಳ್ಳಲಾಗಿದೆ. ಇದು ಉತ್ತರದಲ್ಲಿ ರೈಲ್ವೆ ಹಳಿ, ದಕ್ಷಿಣದಲ್ಲಿ ಬಿ.ಎಚ್.ರಸ್ತೆ, ಪೂರ್ವದಲ್ಲಿ ತುಂಗಾನದಿಯ ಎಡ ಮತ್ತು ಬಲ ದಂಡೆಗಳನ್ನು ಒಳಗೊಂಡಿದೆ. ಪಶ್ಚಿಮದಲ್ಲಿ ತುಂಗಾ ಎಡದಂಡೆ ಕಾಲುವೆಯವರೆಗಿನ ಒಟ್ಟು ವಿಸ್ತಿರ್ಣ ಅಂದಾಜು 1500 ಎಕ್ರೆ ಪ್ರದೇಶವನ್ನು ಅಳವಡಿಸಿಕೊಳ್ಳಲಾಗಿದೆ. ಮೊದಲ ಹಂತದ ಯೋಜನೆಯಲ್ಲೂ ಇದೇ ವಿಸ್ತೀರ್ಣವನ್ನು ಅಳವಡಿಸಿಕೊಳ್ಳಲಾಗಿತ್ತು.
ಈ ಪ್ರದೇಶದೊಳಗೆ ಪುನರ್ನಿರ್ಮಾಣ ಯೋಜನೆಯಲ್ಲಿ ರಿವರ್ ಫ್ರಂಟ್ ಡೆವಲಪ್‌ಮೆಂಟ್‌ನ್ನು ಪ್ರಾಥಮಿಕವಾಗಿ ಆಯ್ಕೆಮಾಡಿಕೊಳ್ಳಲಾಗಿದೆ. ಕಳೆದ ಬಾರಿಯೂ ಇದನ್ನು ಪ್ರಸ್ತಾಪಿಸಲಾಗಿತ್ತು. ಆದರೆ ಈ ಹಂತಹಂತವಾಗಿ ಇದನ್ನು ಅಭಿವೃದ್ಧಿಪಡಿಸುವ ಬಗ್ಗೆ ಈ ಬಾರಿ ವಿವರಿಸಲಾಗಿದೆ.
ಇದರ ಜೊತೆಗೆ ಹಿಂದಿನ ಪ್ರಸ್ತಾವನೆಯಲ್ಲಿದ್ದ ಶಿವಪ್ಪ ನಾಯಕ ಅರಮನೆ ಅಭಿವೃದ್ಧಿ, ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿ, ಇನರ್ ಕೆನಾಲ್ ಡೆವಲಪ್‌ಮೆಂಟ್, ಹೊರವಲಯದ ಕೆನಾಲ್ ಸೌರ ವಿದ್ಯುತ್ ಉತ್ಪದನಾ ಘಟಕ, ಬಸ್ ನಿಲ್ದಾಣಗಳಲ್ಲಿ ಪೂರಕ ಅಭಿವೃದ್ಧಿಯ ಕಾಮಗಾರಿಗಳು ಮತ್ತು ಸಹಭಾಗಿ ಇಲಾಖೆಗಳ ಸಹಯೋಗದಲ್ಲಿ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪ್ರಸ್ತಾವನೆಯನ್ನು ಮಂಡಿಸಲು ಯೋಜಿಸಲಾಗಿದೆ.
ಹಿಂದಿನ ಬಾರಿ ಪ್ರಸ್ತಾಪಿಸಲಾಗಿದ್ದ ಮೆಡಿಟೂರಿಸಂನ್ನು ಕೈಬಿಡಲಾಗಿದೆ. ಅದರ ಬದಲು ಪರ್ಯಾಯ ನೈಸರ್ಗಿಕ ಚಿಕಿತ್ಸಾ ತಾಣವನ್ನು ಗುಂಡಪ್ಪ ಶೆಡ್‌ನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಇಲ್ಲಿ ಕರ್ನಾಟಕ ನಗರ ನೀರು ಪೂರೈಕೆ ಮಂಡಳಿ ಮತ್ತು ಒಳಚರಂಡಿ ನಿಗಮದ ಮೂಲಕ ಯುಜಿಡಿ ಘಟಕವನ್ನು ಸ್ಥಾಪಿಸಲು ಚಿಂತಿಸಿದಾಗ ಸುತ್ತಮುತ್ತಲ ನಾಗರಿಕರು ವಿರೋಧಿಸಿದ್ದರು. ಇಲ್ಲಿ ಸುಮಾರು 5 ಎಕ್ರೆ ಜಾಗವಿದೆ. ಇದನ್ನು 5 ಎಂಎಲ್‌ಡಿ ಸಾಮರ್ಥ್ಯದ ಎಸ್‌ಬಿಆರ್ ಟೆಕ್ನಾಲಜಿ ಶುದ್ಧೀಕರಣ ಘಟಕವನ್ನು ಸ್ಥಾಪಿಸಲು ಮಂಡಳಿ ಪ್ರಸ್ತಾಪಿಸಿದೆ. 14 ಎಕ್ರೆ ಜಾಗದಲ್ಲಿ ಪರ್ಯಾಯ ನೈಸರ್ಗಿಕ ಚಿಕಿತ್ಸಾ ತಾಣ ಸ್ಥಾಪಿಸಲಾಗುವುದು.
ಇನ್ನು ಪಾನ್‌ಸಿಟಿ ಯೋಜನೆಯಡಿಯಲ್ಲಿ ಈ ಹಿಂದೆ ಪಿಪಿಪಿ ಮಾದರಿಯಲ್ಲಿ ಎಲ್‌ಇಡಿ ಲೈಟಿಂಗ್ ಮತ್ತು ಸ್ಮಾರ್ಟ್ ಸರ್ವೈಲೆನ್ಸ್ ಮತ್ತು ಜಿ-ಗವರ್ನೆನ್ಸ್ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ನಗರಕ್ಕೆ ಪ್ರಸ್ತಾಪಿಸಲಾಗಿರುವ ಶುದ್ಧ ಗಂಗಾ ಕುಡಿಯುವ ನೀರಿನ ಯೋಜನೆ (24*7)ಯಲ್ಲಿ ಸ್ಮಾರ್ಟ್  ಮೀಟರ್ ಅಳವಡಿಕೆ ಇಲ್ಲದಿರುವ ಕಾರಣ ಅದನ್ನು ಅಳವಡಿಸಲು ಯೋಜಿಸಲಾಗಿದೆ.
ನಗರದ ಜನತೆಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ನಿಟ್ಟಿನಲ್ಲಿ ಅವಕಾಶವಿದ್ದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕೆಲವು ಯೋಜನೆಗಳನ್ನೂ ಸಹ ತೆಗೆದುಕೊಳ್ಳಲು ಯೋಜಿಸಲಾಗಿದೆ.
ಕಳೆದ ಬಾರಿ ಸಾರ್ವಜನಿಕರೊಂದಿಗೆ ಸಂವಾದ, ಪ್ರತಿ ವಾರ್ಡುಗಳಲ್ಲಿ ಜಾಗೃತಿ ಮೂಡಿಸಿ, ಅಭಿಪ್ರಾಯ ಸಂಗ್ರಹಣೆ ಮೂಲಕ ಯೋಜನೆಯನ್ನು ತಜ್ಞ ಸಂಸ್ಥೆಯ ಮೂಲಕ ರೂಪಿಸಲಾಗಿತ್ತು,. ಅಂದಿನ ಆಯುಕ್ತ ರವಿ ಅವರು ಇದಕ್ಕಾಗಿಯೇ ವಿಶೇಷ ಕಾಳಜಿ ವಹಿಸಿದ್ದರು. ಅವರನ್ನು ಇದೇ ಕಾರ್ಯಕ್ಕಾಗಿ ನಿಯೋಜಿಸಲಾಗಿತ್ತು. ಸಾಕಷ್ಟು ವಿಶೇಷ ಪ್ರಯತ್ನ ಮಾಡಿದ್ದರೂ ಕೆಲವೇ ಅಂಕಗಳಲ್ಲಿ ಈ ಯೋಜನೆ ಕೈತಪ್ಪಿತ್ತು. ಆದ್ದರಿಂದ ಈ ಬಾರಿ ಅದೇ ಯೋಜನೆಯಲ್ಲಿ ಕೆಲವಷ್ಟೇ ಮಾರ್ಪಾಡು ಮಾಡಿ, ಕೆಲವೇ ಹೊಸ ಯೋಜನೆ ಸೇರಿಸಲು ನಿರ್ಧರಿಸಲಾಗಿದೆ. ಎರಡನೆಯ ಹಂತದ ಆಯ್ಕೆಯಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗುವುದು ನಿಶ್ಚಿತ ಎನ್ನುತ್ತವೆ  ಪಾಲಿಕೆಯ ಮೂಲಗಳು.

Friday, 24 June 2016

ಮೀಸಲಾತಿಯ ಲಾಭ ಪಡೆಯದ ಮಹಿಳಾ ಜನಪ್ರತಿನಿಧಿಗಳು

ತೊಟ್ಟಿಲು ತೂಗುವ ಕೈ ದೇಶವನ್ನಾಳಬೇಕೆಂಬ ಸರಕಾರದ ಕನಸನ್ನು ನನಸಾಗುವಂತೆ ಮಾಡುವುದು ಮಹಿಳೆಯರ ಕೈಯಲ್ಲೇ ಇದೆ. ಇದಕ್ಕೆ ಅವರ ಪತಿ ಮೊದಲ ಅವಕಾಶ ಕೊಡಬೇಕು. ಅವಕಾಶ ಕೊಡದಿದ್ದರೆ ಅದನ್ನು ಪಡೆಯುವುದನ್ನೂ ಆಕೆ ತಿಳಿದಿರಬೇಕು. ಕೇವಲ ಮಹಿಳಾ ಮೀಸಲಾತಿ ಬೇಕೆಂದು ಕೇಳಿ ಪಡೆಯುವುದಷ್ಟೇ ಕೆಲಸವಾಗಬಾರದು. ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು, ಆ ಅವಧಿಯಲ್ಲಿ ಏನೆಲ್ಲವನ್ನು ಸಾಧಿಸಬಹುದು ಎನ್ನುವುದನ್ನು ಈ ದೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ತೋರಿಸಿಕೊಟ್ಟ ದಿಟ್ಟ ಮಹಿಳಾ ನಾಯಕಿಯರಿದ್ದಾರೆ. ಅವರೆಲ್ಲರ ಮಾರ್ಗದಲ್ಲಿ ಜನಪ್ರತಿನಿಧಿಗಳಾದ ಮಹಿಳೆಯರು ಏಕೆ ಸಾಗಬಾರದು, ಹೆಸರುಗಳಿಸಬಾರದು? 



ಶಿವಮೊಗ್ಗ: ಜನಪ್ರತಿನಿಧಿಯಾಗುವುದು ಸುಲಭ. ಆದರೆ ಆ ಹುದ್ದೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದು ಕಷ್ಟ. ಏಕೆಂದರೆ ಅದಕ್ಕೆ ತಕ್ಕ ಸಾಮಾನ್ಯ ಜ್ಞಾನ ಜನಪ್ರತಿನಿಧಿಯಾದವರಲ್ಲಿರಬೇಕು. ಇಲ್ಲವಾದರೆ ಜನರು ಆಯ್ಕೆ ಮಾಡಿ ಕಳುಹಿಸಿದ್ದು ವ್ಯರ್ಥವಾಗುತ್ತದೆ. ಸೂಕ್ತ ತರಬೇತಿ ಇಲ್ಲವಾದರೆ ತಮಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ, ಸಾಮಾನ್ಯ ಕಾನೂನು ಜ್ಞಾನ, ಜನರ ಸೇವೆ ಮಾಡುವ ಬಗೆ, ವ್ಯವಹರಿಸುವ ರೀತಿ, ಜನರೊಂದಿಗೆ ಒಡನಾಡುವ ಬಗ್ಗೆ ತಿಳಿದಿರುವುದಿಲ್ಲ. ಇದರಿಂದ ಸಭೆಯಲ್ಲಿ ವಿಷಯ ಗೊತ್ತಿಲ್ಲದೆ ಸುಮ್ಮನಿರಬೇಕಾಗುತ್ತದೆ, ಅಥವಾ ಅಸಂಬದ್ಧ ಮಾತನಾಡಿ ಅಪಹಾಸ್ಯಕ್ಕೀಡಾಗಬೇಕಾಗುತ್ತದೆ. ಇದರಿಂದ ಜನಸೇವೆಗೂ ತೊಂದರೆಯಾಗುತ್ತದೆ. ಇಂತಹ ಸಂದರ್ಭವನ್ನು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ನಗರಪಾಲಿಕೆಯಲ್ಲಿ ಕಾಣಬಹುದು.
ಈಗ ಮೀಸಲಾತಿ ಮುಖ್ಯವಾಗಿರುವ ಕಾರಣ ಶೇ. 50ರಷ್ಟು ಮಹಿಳೆಯರು ಆಯ್ಕೆಯಾಗಿ ಬರುತ್ತಿದ್ದಾರೆ. ಪುರುಷರೂ ಹೆಚ್ಚು ಕಡಿಮೆ ಸಮ ಸಂಖ್ಯೆಯಲ್ಲಿರುವುದರಿಂದ ಇಬ್ಬರಿಗೂ ಸಂಬಂಧಿತ ಇಲಾಖೆಯವರು ಸೂಕ್ತ ತರಬೇತಿ ನೀಡಬೇಕಿದೆ. ವಿಷಯದ ಅರಿವಿಲ್ಲದೆ ಮಾತನಾಡುವುದು ಈಗ ಕಂಡುಬರುತ್ತಿದೆ. ಕೆಲವು ಸದಸ್ಯರು ಸದಾ ಮೌನಿಯಾಗಿರುತ್ತಾರೆ. ಇನ್ನೂ ಕೆಲವರಿಗೆ ತಾವು ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು, ವಿಷಯ ಮಂಡನೆ ಹೇಗಿರಬೇಕು,  ಪಾಲಿಕೆ, ಅಥವಾ ತಾಪಂ, ಜಿಪಂನ ಕಾನೂನುಗಳ ಬಗ್ಗೆ ಮಾಹಿತಿಯೂ ಇಲ್ಲ. ಇನ್ನೂ ಕೆಲವರಿಗೆ ಸಭೆಯ ಅಧ್ಯಕ್ಷರಿಗೆ ಗೌರವ ಕೊಡುವ ಬಗ್ಗೆ ಗೊತ್ತಿಲ್ಲ.  ಏರುಧ್ವನಿಯಲ್ಲಿ ಮಾತು ಆರಂಭಿಸುವುದು, ಇನ್ನೊಬ್ಬ ಸಸ್ಯರ ಮೇಲೆ ಏರಿಹೋಗುವುದು, ಮತ್ತೊಬ್ಬರು ಮಾತನಾಡುವಾಗಲೇ ತಾವೂ ಮಾತನಾಡುವುದು ಕಂಡುಬರುತ್ತಿದೆ.
ನಿನ್ನೆ ನಡೆದ ಪಾಲಿಕೆ ಸಬೆಯಲ್ಲಿ ಸದಸ್ಯೆಯೊಬ್ಬರು ಕಂದಾಯ ಇಲಾಖೆಯ 94 ಸಿಸಿ ಕಾಯ್ದೆ ಎಂದರೇನು, ಈ ಬಗ್ಗೆ  ಮಾಹಿತಿ ಕೊಡಿ ಎಂದು ಹೇಳಿದಾಗ ಸಭೆಯಲ್ಲಿದ್ದ ಬುತೇಕರು ನಕ್ಕರು. ಪಾಲಿಕೆ ಸದಸ್ಯೆಯಾಗಿ ಮೂರು ವರ್ಷ ಕಳೆದರೂ ಸಾಮಾನ್ಯ ಜ್ಞಾನವೂ ಇಲ್ಲದ ಬಗ್ಗೆ ಕೆಲವರು ಮಾತನಾಡಿಕೊಂಡರೆ, ಇನ್ನೂ ಕೆಲವರು ಇದರಂತಹ ತಮಾಷೆ ಇನ್ನೊಂದಿಲ್ಲ ಎಂದರು. ಇಲ್ಲಿ ಆ ಸದಸ್ಯೆ ಕೇಳಿದ್ದು ತಪ್ಪೇನಲ್ಲ. ತನಗೆ ಮಾಹಿತಿ ಇರದ ಬಗ್ಗೆ ಕೇಳಿದ್ದರು. ಆದರೆ ಎರಡು ವಾರದಿಂದ ಈ ಬಗ್ಗೆ ನಗರದಾದ್ಯಂತ ಚರ್ಚೆಯಾಗುತ್ತಿದೆ. ಆದ್ದರಿಂದ ಮಾಹಿತಿಯನ್ನು ಯಾರಿಂದಲಾದರೂ ಪಡೆಯಲು ಅವಕಾಶವಿತ್ತು. ಹಾಗೆ ಮಾಡದೆ ಚರ್ಚೆಯಾಗುವ ವೇಳೆ ಆ ಬಗ್ಗೆ ಕೇಳಿದ್ದು ಅಭಾಸವೆನಿಸಿತು. ಜನಪ್ರತಿನಿಧಿಯಾಗುವವರು ಎಷ್ಟೇ ವಿದ್ಯಾವಂತರಾದರೂ, ಶ್ರೀಮಂತರಾದರೂ ಸದಸ್ಯರಾದ ನಂತರ ತಮ್ಮ ವ್ಯಾಪ್ತಿಗೆ ಬರುವ ವಿಚಾರಗಳ ಬಗ್ಗೆ ಅಧ್ಯಯನ ನಡೆಸಬೇಕು, ಕೇಳಿ  ತಿಳಿಯಬೇಕು. ಸಭೆಗೆ ಬರುವಾಗ ಸಂಪೂರ್ಣ ಮಾಹಿತಿಯೊಂದಿಗೆ ಬರಬೇಕು. ಸದ್ಯ ಏನಾಗಿದೆ ಎಂದರೆ, ಸಭೆಗೆ ಬರುವುದು, ಒಂದಷ್ಟು ಕೂಗಾಡಿ ಹೋಗುವುದು, ಇಲ್ಲವಾದರೆ ಸುಮ್ಮನೆ ಕುಳಿತು ಹೋಗುವುದು ಸಾಮಾನ್ಯವಾಗಿದೆ. ಕೆಲವರಷ್ಟೇ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಉಳಿದವರು ಮೂಕಪ್ರೇಕ್ಷಕರು.
ಮಹಿಳಾ ಸದಸ್ಯರಾದವರು ತಮ್ಮ ಮನೆಯ ಕೆಲಸದ ಹೊರತಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟಾಗ ವಿಷಯಗಳ ಬಗ್ಗೆ ಅರಿವು ಹೊಂದಬೇಕು. ಜನರ ಸಮಸ್ಯೆ , ಅವುಗಳನ್ನು ಬಗೆಹರಿಸುವ ಬಗ್ಗೆ ಅರಿತುಕೊಳ್ಳಬೇಕು. ಕೆಲವು ಸದಸ್ಯೆಯರ ಪರಿಸ್ಥಿತಿ ಹೇಗಿದೆ ಎಂದರೆ, ವಾರ್ಡುಗಳಲ್ಲಿ ಓಡಾಡಿ, ಜನ ಸಮಸ್ಯೆ ಕೇಳುವವರು, ಕಾಮಗಾರಿ ಮಾಡಿಸುವವರು  ಅವರ ಯಜಮಾನರಾಗಿರುತ್ತಾರೆ. ವಾರ್ಡುಗಳಲ್ಲಿ ತಮ್ಮ ಸದಸ್ಯೆಯನ್ನು ಚುನಾವಣೆ ವೇಳೆ  ಹೆಸರು ಮಾತ್ರ ನೋಡಿರುತ್ತಾರೆ. ಆಯ್ಕೆಯಾದ ನಂತರ ಅವರ ಮುಖವನ್ನು ಮತದಾರರು ನೋಡಿರುವುದಿಲ್ಲ. ನಾಮಕಾವಾಸ್ತೆ ಸದಸ್ಯೆಯಾಗಿರುತ್ತಾರೆ. ಪತಿ ಅನಧಿಕೃತ ಮತ್ತು ಪತ್ನಿ ಅಧಿಕೃತ ಸದಸ್ಯರಾಗಿರುತ್ತಾರೆ. ಇಂತಹ ಮಹಿಳಾ ಸದಸ್ಯೆಯರಿಗೆ ತಮ್ಮ ವಾರ್ಡಿನ ನೈಜ ಚಿತ್ರಣವೇ ಗೊತ್ತಿರುವುದಿಲ್ಲ.  ಪಾಲಿಕೆ ಅಥವಾ ತಮಗೆ ಸಂಬಂಧಿಸಿದ ಸಂಸ್ಥೆಯ ಕಾಯ್ದೆ- ಕಾನೂನುಗಳ ಅರಿವಿರುವುದಿಲ್ಲ. ಅದಕ್ಕಾಗಿ ವಾರಕ್ಕೊಮ್ಮೆಯಾದರೂ ವಾರ್ಡಿನಲ್ಲಿ ಸಂಚರಿಸಿ, ಮತದಾರರೊಡನೆ ಒಡನಾಟವಿಟ್ಟುಕೊಂಡು ಸಂಸ್ಥೆಗೆ ಹೋಗಿ ಅಧಿಕಾರಿಗಳೊಂದಿಗೆ ಚರ್ಚಿಸುವ ಪರಿಪಾಠವಿಟ್ಟುಕೊಳ್ಳಬೇಕಿದೆ.
ಇದಕ್ಕೂ ಮುನ್ನ ಸಂಬಂಧಿತ ಸ್ಥಳೀಯಾಡಳಿತ ಸಂಸ್ಥೆ ಅವರಿಗೆ ಸೂಕ್ತ ತರಬೇತಿಯನ್ನು ಕೊಡಿಸುವ ವ್ಯವಸ್ಥೆ ಮಾಡಬೇಕು. ಸದಸ್ಯರೇ ಆಗ್ರಹಿಸಿ ತರಬೇತಿ ಏರ್ಪಡಿಸುವಂತೆಯೂ ಮಾಡಬಹುದು. ಆಗ ಮಾತ್ರ ಅವರಿಗೆ ಸ್ವಲ್ಪವಾದರೂ ಮಾಹಿತಿ ದೊರೆತು ಅವರು ಸಭೆಯಲ್ಲಿ ಪಾಲ್ಗೊಂಡು ಮುಕ್ತವಾಗಿ ಚರ್ಚಿಸಲು ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಐದು ವರ್ಷ ಸದಸ್ಯೆಯಾದರೂ ಏನು ಕಡಿದು ಕಟ್ಟೆ ಹಾಕಿದರು ಎಂದು ಪ್ರಶ್ನಿಸಬೇಕಾಗುತ್ತದೆ.
ಸರಕಾರ ಮೀಸಲಾತಿಯನ್ನು ಮಹಿಳೆಗೆ ಕೊಟ್ಟಿದ್ದು, ಅವಳ ಗಂಡ ಆ ಸ್ಥಾನದಲ್ಲಿ ಅಧಿಕಾರ ಚಲಾಯಿಸಲಿ ಎಂದಲ್ಲ.  ಮಹಿಳಾ ಸಬಲೀಕರಣ ಇದಕ್ಕೆ ಮೂಲ ಕಾರಣ. ಮಹಿಳೆ ಅಡುಗೆ ಮನೆ ಬಿಟ್ಟು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ಅವಳೂ ಸೇರಬೇಕು. ಸಮಾಜದ ಅಭಿವೃದ್ಧಿಯಲ್ಲಿ ಅವಳ ಪಾತ್ರವೂ ಪುರುಷನಷ್ಟೇ ಇರಬೇಕು ಎನ್ನುವ ದೃಷ್ಟಿಯಿಂದ ಮಾತ್ರ. ಆದರೆ ಇಂದೇನಾಗಿದೆ. ಮಹಿಳೆ ಇದನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಇದನ್ನು ಮಹಿಳೆಯರೇ ಅರಿಯದಿದ್ದರೆ ಮೀಸಲಾತಿಯ ಲಾಭವಾದರೂ ಏನು?
ಹಾಲಿ ಶಿವಮೊಗ್ಗದ ಜಿಪಂ, ತಾಪಂ ಅಥವಾ ಪಾಲಿಕೆಯಲ್ಲಿ ಇಂತಹವರೇ ಜಾಸ್ತಿ ಸಂಖ್ಯೆಯಲ್ಲಿದ್ದಾರೆ.  ಸದಸ್ಯೆಯರ ಪತಿಯೇ ಎಲ್ಲೆಡೆ ಠಳಾಯಿಸುತ್ತಾರೆ. ಸಭೆಗೆ ಮಾತ್ರ ಮಹಿಳಾ ಸದಸ್ಯೆ ಹಾಜರಿರುತ್ತಾರೆ. ಅನುಭವದ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆ ಇದಕ್ಕೆ ಕಾರಣವಾಗಿದ್ದರೂ, ಅವರಲ್ಲೂ ತಾವು ಅನುಭವ ಪಡೆಯಬೇಕೆಂಬ ಛಲ ಇರಬೇಕು. ಅದಕ್ಕಾಗಿ ಯತ್ನಿಸಬೇಕು. ತಾವೇ ಅಧಿಕಾರಿಗಳಿಗೆ ಒತ್ತಡ ಹೇರಿ ತರಬೇತಿ ಆಯೋಜಿಸುವಂತೆ ಸೂಚಿಸಬೇಕು. ಇಲ್ಲವಾದರೆ ಅವರನ್ನು ಆಯ್ಕೆ ಮಾಡಿ ಕಳುಹಿಸಿದವರ ಸಮಸ್ಯೆ ಬಗೆಹರಿಸುವುದಿಲ್ಲ. ಮೇಲಧಿಕಾರಿಗಳೊಂದಿಗೆ ವ್ಯವಹರಿಸುವುದು, ಯಾವ್ಯಾವ ಇಲಾಖೆಯಿಂದ ಎಷ್ಟು ಅನುದಾನ ಬರುತ್ತದೆ, ಕೆಲಸ ಮಾಡಿಸುವ ಬಗೆ ಎಲ್ಲವನ್ನೂ ಅರಿತಿರಬೇಕು.
...............................    

Wednesday, 22 June 2016

ಮಧು, ಕುಮಾರ್, ಹಾಲಪ್ಪ: ಗೆಲ್ಲುವವರಾರು?
 ಸೊರಬ ತಾಪಂ ಚುನಾವಣೆ






ಸೊರಬ ಅಂದರೆ ಬಂಗಾರಪ್ಪ ಕುಟುಂಬದ ರಾಜಕಾರಣ. ಅದನ್ನೇ ಅವರ ಮಕ್ಕಳಿಬ್ಬರೂ ಮುಂದುವರೆಸಿಕೊಂಡು ಬಂದಿದ್ದಾರೆ. ಇಬ್ಬರೂ ಅಧಿಕಾರ ಅನುಭವಿಸಿದ್ದಾರೆ. ಇನ್ನೂ ಪ್ರಭುತ್ವ ಸ್ಥಾಪನೆಗೆ ಕಾದಾಡುತ್ತಿದ್ದಾರೆ. ಇದಕ್ಕೆ ಈಗ ತಾಪಂ ಚುನಾವಣೆ ವೇದಿಕೆಯಾಗಿದೆ. ಪ್ರಚಾರಕ್ಕೆ ಉಳಿದಿರುವುದು ಕೇವಲ ನಾಲ್ಕೈದು ದಿನ ಮಾತ್ರ. ತುರುಸಿನ ಪೈಪೋಟಿ (ತ್ರಿಕೋನ, ಚತುಷ್ಕೋನ)ಯಂತೂ ಏರ್ಪಟ್ಟಿದೆ. ಪಕ್ಷೇತರರೂ ಸಹ ಕಣದಲ್ಲಿದ್ದಾರೆ. ಇವರೊಟ್ಟಿಗೆ ರೈತ ಸಂಘದವರೂ ಎರಡು ಕ್ಷೇತ್ರಗಳಲ್ಲಿ ಉಮೇದುವಾರರಾಗಿದ್ದಾರೆ. ಇವರೇನಾದರೂ ಮತ ಒಡೆದರೆ ಕೆಲವು ಸ್ಥಾನಗಳಲ್ಲಿ ಫಲಿತಾಂಶ ಏರುಪೇರಾಗಬಹುದು. ಅಷ್ಟೇನೂ ಮಹತ್ವದ ಚುನಾವಣೆ ಅಲ್ಲದಿದ್ದರೂ ತಾಪಂ ಅಧಿಕಾರದ ಗದ್ದುಗೆ ಪಡೆಯಲು ಮೂರೂ ಪಕ್ಷದವರು ಹೋರಾಟ ನಡೆಸಿರುವುದಂತೂ ಸತ್ಯ. ಅದರಲ್ಲೂ ಅಣ್ಣ-ತಮ್ಮ ತೊಡೆತಟ್ಟಿರುವುದು ಇಲ್ಲಿ ವಿಶೇಷ.


ಶಿವಮೊಗ್ಗ: ಒಂದೆಡೆ ಸಹೋದರರ ಸವಾಲು, ಇನ್ನೊಂದೆಡೆ ಸಹೋದರರಿಗೇ ಸವಾಲು ಹಾಕುತ್ತಿರುವವರು, ಮಗದೊಂದೆಡೆ ಈ ಮೂವರನ್ನೂ ಬದಿಗಿಟ್ಟು ಕಣಕ್ಕಿಳಿದಿರುವವರು.....ಇದು  ಸೊರಬ ತಾಲೂಕು ಪಂಚಾಯತ್ ಚುನಾವಣಾ ಪ್ರಚಾರದಲ್ಲಿ ಕಂಡುಬರುತ್ತಿರುವ ಪ್ರಮುಖ ಅಂಶಗಳು.
 ಮುಂದಿನವಾರ ಚುನಾವಣೆ ನಿಗದಿಯಾಗಿದೆ. 19 ಸ್ಥಾನಗಳಿಗೆ ನಡೆಯುವ ಈ ಚುನಾವಣೆಗೆ ಈಗಾಗಲೇ ಭರ್ಜರಿ ಪ್ರಚಾರವನ್ನು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಆರಂಭಿಸಿವೆ. ತಾ
ಲೂಕಿನಲ್ಲಿ ಈ ಬಾರಿ ಚುನಾವಣಾ ರಂಗದ ಕಾವು ತಾರಕಕ್ಕೇರಿದೆ. ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಮಧು ಬಂಗಾರಪ್ಪ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ಆರಂಭಿಸಿದ್ದಾರೆ. ಬಹುತೇಕ ಕ್ಷೇತ್ರಗಳನ್ನು ತಮ್ಮದನ್ನಾಗಿ ಮಾಡಿಕೊಳ್ಳಬೇಕೆಂದು ಪಣತೊಟ್ಟಂತೆ ಕಂಡುಬರುತ್ತಿದೆ.
  ಶಾಸಕನಾಗಿರುವುದರಿಂದ  ಮಧು ಬಂಗಾರಪ್ಪ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇರುವುದರಿಂದ ಅವರ ಸಹೋದರ ಮತ್ತು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಇಬ್ಬರೂ ತೆರೆಮರೆಯ ರಾಜಕಾರಣ ನಡೆಸುತ್ತಾ ಅಧಿಕಾರಿ ವರ್ಗವನ್ನು ತಮ್ಮ ಹಿಡಿತಕ್ಕೆ ತಗೆದುಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿವೆ. ಈಗ ಚುನಾವಣಾ ಪ್ರಚಾರದ ಅಬ್ಬರದಲ್ಲಿ ಪರಸ್ಪರರ ಕಾಲೆಳೆಯುವ ಕೆಲಸ  ಆರಂಭವಾಗಿದೆ.
ಅಶ್ವಮೇಧ ಯಾಗದ ಕುದುರೆಯ ಕಾಲು ಮುರಿದಿದೆ ಎನ್ನುವ ಮೂಲಕ ಕುಮಾರ್ ರಾಜಕೀಯ ಕುಂಠಿತಗೊಂಡಿದೆ ಎಂದು ಶಾಸಕ ಮಧು ಟೀಕಿಸಿದ್ದಾಗಿದೆ. ಅದಕ್ಕೆ ತಿರುಗೇಟು ನೀಡಿರುವ ಕುಮಾರ್, ದೇವಿ ಇನ್ನೂ ಡಬ್ಬದಿಂದ ಹೊರಬಾರದೆ ದೆವ್ವವಾಗಿ ಕುಳಿತಿದೆ  ಎಂದಿದ್ದಾರೆ. ಅಶ್ವಮೇಧ ಕುಮಾರ್‌ಗೆ ತಿರುವು ಕೊಟ್ಟ ಸಿನಿಮಾವಾದರೆ, ದೇವಿ ಮಧು ಅವರ ಸಿನಿಮಾವಾಗಿದೆ. ಇನ್ನೊಂದೆಡೆ ಅದೇ ರಾಗ ಅದೇ ಹಾಡು ಎನ್ನುವಂತೆ ಮಧು, ಈ ಹಿಂದಿನಂತೆಯೇ ತಂದೆ ಬಂಗಾರಪ್ಪ ಅವರ ಹೆಸರು ಹೇಳಿಕೊಂಡು ಮತಯಾಚನೆ ಆರಂಭಿಸಿದ್ದಾರೆ. ಕುಟುಂಬದ ಜಗಳವನ್ನು ಮತ್ತೆ ಅಣ್ಣ-ತಮ್ಮ ಬೀದಿಗೆ ತಂದಿದ್ದಾರೆ. ಮಧು ಜೊತೆ ಯಾವ ಜೆಡಿಎಸ್ ನಾಯಕರೂ (ನಾಲ್ವರು ಜಿಪಂ ಸದಸ್ಯರನ್ನು ಹೊರತುಪಡಿಸಿ) ಪ್ರಚಾರಕ್ಕೆ   ಕಣಕ್ಕಿಳಿದಿಲ್ಲ. ಜಿಲ್ಲಾ ಮಟ್ಟದಲ್ಲಿ ಆ ಪಕ್ಷದ  ಅಡ್ರೆಸ್ಸೇ ಇಲ್ಲದಿರುವುದರಿಂದ ಅವರೂ ಸಹ ಬರುವುದು ಸಂಶಯವಾಗಿದೆ. ಸೊರಬ ಜೆಡಿಎಸ್‌ನಲ್ಲಿ ಮಧು ಅವರೇ ಹೈಕಮಾಂಡ್. ಜೊತೆಗೆ, ಈ ಬಾರಿ ಜಿಪಂನಲ್ಲಿ 5ರಲ್ಲಿ ನಾಲ್ಕು ಸ್ಥಾನ ಪಡೆದಿರುವುದರಿಂದ ಹೆಚ್ಚಿನ ಉತ್ಸಾಹವೂ ಅವರಲ್ಲಿದೆ. ತಾನು ಮಾಡಿದ ಕೆಲಸಕ್ಕಿಂತ ಅಪ್ಪನ ಹೆಸರನ್ನೇ ಹೋದಲ್ಲೆಲ್ಲ ಜಪಿಸುತ್ತ, ಅಣ್ಣನನ್ನು  ಟೀಕಿಸುತ್ತ ಪ್ರಚಾರ ಮಾಡುತ್ತಿರುವುದು ಕಂಡುಬರುತ್ತಿದೆ. ಗೆಲ್ಲುವವರು ತಮ್ಮವರೇ ಎಂಬ ಅಪರಿಮಿತ ವಿಶ್ವಾಸ ಅವರಲ್ಲಿದೆ.
ಕಾಂಗ್ರೆಸ್ ಪರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿ. ನಾ. ಶ್ರೀನಿವಾಸ್, ಕಾಡಾ ಅಧ್ಯಕ್ಷ ನಗರದ ಮಹದೇವಪ್ಪ ಸೇರಿದಂತೆ ಜಿಲ್ಲಾ ಸಮಿತಿ ನೇಮಿಸಿರುವ ವೀಕ್ಷಕರ ಸಮಿತಿ ಪ್ರಚಾರದಲ್ಲಿ ಧುಮುಕಿದೆ. ಹೇಗಾದರೂ ಮಾಡಿ ಮಧುಗೆ ಪಾಠ ಕಲಿಸಲೇಬೇಕೆಂದು ಕಾಂಗ್ರೆಸ್ ಹಠ ತೊಟ್ಟಿದೆ. ಕುಮಾರ್ ಅವರ ವರ್ಚಸ್ಸು ತೀರಾ ಇಲ್ಲದಿದ್ದರೂ ಹೆಚ್ಚಿನ ಸ್ಥಾನ ಗಳಿಸಲೇಬೇಕು, ತಮ್ಮನಿಗೆ ಎದುರೇಟು ಕೊಡಲೇಬೆಕು. ಈ ಮೂಲಕ ಮತ್ತೆ ಪಕ್ಷದ ಸಂಘಟನೆ ಬೆಳೆಸಲೇಬೇಕೆಂದು ಪಣ ತೊಟ್ಟಂತಿದೆ.
ಇವರಿಬ್ಬರ ಮಧ್ಯೆ ಬಿಜೆಪಿ  ನಾಯಕರೂ ಮುನ್ನುಗ್ಗುತ್ತಿದ್ದಾರೆ. ಮಾಜಿ ಸಚಿವ ಹಾಲಪ್ಪ ತಾನು ಮತ್ತು ಯಡಿಯೂರಪ್ಪ ಮಾಡಿದ ಕೆಲಸವನ್ನೆ ಜಪಿಸುತ್ತಿದ್ದಾರೆ. ಜಿಲ್ಲಾಧ್ಯಕ್ಷ ರುದ್ರೇಗೌಡ, ಮಾಜಿ ಅಧ್ಯಕ್ಷ ದತ್ತಾತ್ರಿ ಮೊದಲಾದವರು ಒಂದು ಸುತ್ತು ಹೋಗಿಬಂದಿದ್ದಾರೆ. ಇಲ್ಲಿ ಈಡಿಗರು, ಲಿಂಗಾಯಿತರು, ಬ್ರಾಹ್ಮಣರು, ಲಂಬಾಣಿ, ಮತ್ತು ಎಸ್‌ಸಿ, ಎಸ್ಟಿ ಮತದಾರರೇ ಹೆಚ್ಚಿದ್ದಾರೆ. ಜಾತಿಯೂ ಕೆಲವು ಸ್ಥಾನಗಳಲ್ಲಿ ಕೆಲಸ ಮಾಡುವ ಸಂಭವವಿರುವುದರಿಂದ ಅದರ ಲಾಭಕ್ಕೆ ಎಲ್ಲರೂ ಸನ್ನದ್ಧರಾಗಿದ್ದಾರೆ. ಸದ್ಯ ಜೆಡಿಎಸ್ ಶಾಸಕರನ್ನು, ಜಿಪಂನ ನಾಲ್ವರು ಸದಸ್ಯರನ್ನು ಹೊಂದಿರುವುದರಿಂದ ಆ ಪಕ್ಷಕ್ಕೇ ಬಹುಮತ ಬಂದರೂ ಆಶ್ಚರ್ಯವೇನಿಲ್ಲ.    
.................................

Monday, 20 June 2016

ಕಾಗೋಡು ಮತ್ತೆ ಸಚಿವ: ನಿರೀಕ್ಷೆ ಅಪಾರ



ಕಾಗೋಡು ತಿಮ್ಮಪ್ಪ ಮತ್ತೆ ಸಚಿವರಾಗಿದ್ದಾರೆ. ನೇರ, ನಿಷ್ಠುರ ಮತ್ತು ನಿಷ್ಕಳಂಕರೆನಿಸಿಕೊಂಡವರು.  5 ಬಾರಿ ಶಾಸಕರಾಗಿ, ಒಮ್ಮೆ ಎಂಎಲ್‌ಸಿಯಾಗಿ,  4 ಬಾರಿ ಸಚಿವರಾದ ಹೆಗ್ಗಳಿಕೆ ಇವರದ್ದು, ಜೊತೆಗೆ ವಿಧಾನಸಭಾಧ್ಯಕ್ಷ ಸ್ಥಾನ ಅಲಂಕರಿಸಿದ  ಜಿಲ್ಲೆಯ ಏಕೈಕ ರಾಜಕಾರಣಿ. 82ರ ಹರಯದ ಕಾಗೋಡು ಸಚಿವರಾಗಿದ್ದರಿಂದ ಬಗರ್‌ಹುಕುಂ ಸಾಗುವಳಿದಾರರಲ್ಲಿ ಮತ್ತು ಶರಾವತಿ ಮುಳುಗಡೆ ಸಂತ್ರಸ್ಥರಲ್ಲಿ ಹೊಸ ಆಶಾಕಿರಣ ಮೂಡಿದೆ. ಸಮಸ್ಯೆಗಳ ಕೂಪದಲ್ಲಿ ಮುಳುಗಿರುವ ಮುಳುಗಡೆ ಸಂತ್ರಸ್ಥರು ಇನ್ನಾದರೂ ಬೆಳಕಿಗೆ ಬರಬಹುದೆಂಬ ಆಶಾವಾದ ಹೊಂದುವಂತಾಗಿದೆ.  


 ರಾಜ್ಯ ಸಚಿವ ಸಂಪುಟದ ವಿಸ್ತರಣೆಯ ಮೂಲಕ ಜಿಲ್ಲೆಯಲ್ಲೂ ಮಂತ್ರಿಸ್ಥಾನ ಬದಲಾಗಿದೆ. ಈವರೆಗೆ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಬದಲಿಗೆ ಕಾಗೋಡು ತಿಮ್ಮಪ್ಪ ಅವರಿಗೆ ಸ್ಥಾನ ಕೊಡಲಾಗಿದೆ.  ಒಬ್ಬರನ್ನು ಬಿಟ್ಟು ಮತ್ತೊಬ್ಬರಿಗೆ ಅವಕಾಶ ಕೊಟ್ಟಂತಾಗಿದೆ. ಹಾಗೆ ನೋಡಿದರೆ ಒಂದು ಸ್ಥಾನ ಕೈತಪ್ಪಿದಂತಾಗಿದೆ. ಕಾಗೋಡು ವಿಧಾನಸಭಾಧ್ಯಕ್ಷ ಸ್ಥಾನದಿಂದ ಸಚಿವರಾದರೆ, ಕಿಮ್ಮನೆ ಮಂತ್ರಿಸ್ಥಾನದಿಂದ ಮತ್ತೆ ಶಾಸಕರಾಗಿ ಉಳಿಯುವಂತಾಗಿದೆ.
ಕಿಮ್ಮನೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದರು. ತಾನು ಸಚಿವನಾಗಿದ್ದೇ ಆಕಸ್ಮಿಕ, ಮಂತ್ರಿಗಿರಿಗೆ ಯಾವ ಲಾಬಿಯನ್ನೂ ಮಾಡಿರಲಿಲ್ಲ, ಸಿಕ್ಕ ಅವಕಾಶವನ್ನು ಜನತೆಯ ಸೇವೆಗೆ ಬಳಸಿದ್ದೇನೆ. ಇನ್ನೂ ಸಹ ಜನಸೇವಕನಾಗಿಯೇ ಇರುತ್ತೇನೆ. ಗೂಟದ ಕಾರಿನಲ್ಲಿ ಮಾತ್ರ ಅಧಿಕಾರವಿದೆ ಎಂದು ನಂಬಿದವ ತಾನಲ್ಲ ಎಂದಿದ್ದಾರೆ. ಮಂತ್ರಿಮಂಡಲದಲ್ಲಿ ಪ್ರಾಮಾಣಿಕ ಮತ್ತು ನಿಷ್ಕಳಂಕ ಸಚಿವರೆಂದೇ ಹೆಸರಾಗಿದ್ದ ಕಿಮ್ಮನೆಯವರನ್ನು ಕೈಬಿಟ್ಟಿದ್ದು ಜಿಲ್ಲೆಯ ಹಲವರಲ್ಲಿ ಬೇಸರ ಮೂಡಿಸಿದೆ. ಅವರು ಯಾವತ್ತೂ ಅಧಿಕಾರಿಗಳನ್ನು ಹೆದರಿಸಿ, ಬೆದರಿಸಿ ಸಚಿವ ಸ್ಥಾನದ ದರ್ಪ ತೋರಿಸಿದವರಲ್ಲ. ಕೆಲವೊಮ್ಮೆ ಖಡಕ್ ಆಗಿ ಮಾತನಾಡಿದ್ದಾರೆ. ಅದು ಆ ಸಂದರ್ಭದಲ್ಲಿ ಅನಿವಾರ್ಯವೂ ಆಗಿತ್ತು.
ಈಗ ಕಾಗೋಡು ಸಚಿವರಾಗಿದ್ದಾರೆ. ಜಿಲ್ಲೆಯಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಕೊಡಿಸುವುದು, ಶರಾವತಿ ಸಂತ್ರಸ್ಥರ ಸಮಸ್ಯೆ ಹಾಗೆಯೇ ಕೊಳೆಯುತ್ತಿರುವುದರ ಬಗ್ಗೆ ಅವರು ಹೋರಾಟ ನಡೆಸಿಕೊಂಡೇ ಬಂದಿದ್ದಾರೆ. ಇದಕ್ಕೆ ಈಗ ಒಂದು ತಾರ್ಕಿಕ ಅಂತ್ಯ ಸಿಗುವ ನಿರೀಕ್ಷೆ ಹೊಂದಲಾಗಿದೆ. ವಿಧಾನಸಭೆಯ ಅಧ್ಯಕ್ಷರಾಗಿದ್ದುಕೊಂಡೇ ಸರಕಾರವನ್ನು ತರಾಟೆಗೆ ತೆಗದುಕೊಳ್ಳುತ್ತಿದ್ದ ಕಾಗೋಡು, ಸಚಿವರಾಗಿ ಯಾವ ರೀತಿ ಹೆಜ್ಜೆ ಇಡುತ್ತಾರೆ ಎನ್ನುವುದು ಮಹತ್ವದ್ದಾಗಿದೆ. ಆದರೆ,  ಸದಾ ಖಡಕ್ ಮನುಷ್ಯ ಎಂದೇ ಖ್ಯಾತಿ ಪಡೆದವರು. 84ರ ಹರಯದ ಕಾಗೋಡು ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಹಿಂದೆಯೇ ಸಚಿವರಾಗಬೇಕಿತ್ತು. ಆದರೆ ಆಗಿನ ಕೆಲವು ಬೆಳವಣಿಗೆಗಳು ಅನಿವಾರ್ಯವಾಗಿ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಅವರನ್ನು ತಂದು ಕೂಡ್ರಿಸಿದ್ದವು.
ಸದ್ಯದ ಪರಿಸ್ಥಿತಿಯಲ್ಲಿ ಕಾಗೋಡು ಅವರಿಂದ ಜಿಲ್ಲೆಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಅನುಭವಿ ಸಚಿವರಾಗಿರುವುದರಿಂದ, ಕ್ಯಾಬಿನೆಟ್ ಹುದ್ದೆಯಲ್ಲಿರುವುದರಿಂದ, ಸಿಎಂ ಅವರನ ಮನವೊಲಿಸುವ ತಾಕತ್ತಿರುವುದರಿಂದ ಹಾಗೂ ಮುಲಾಜಿಲ್ಲದೆ ಅಧಿಕಾರಿಗಳಿಗೆ ಚಾಟಿ ಬೀಸುವ ಪ್ರವೃತ್ತಿಯವರಾಗಿರುವುದರಿಂದ ನೆನೆಗುದಿಗೆ ಬಿದ್ದಿರುವ ಅನೇಕ ಯೋಜನೆಗಳಿಗೆ ಮತ್ತೆ ಹಣ ತರುವ ನಿರೀಕ್ಷೆ ಹೊಂದಲಾಗಿದೆ.
ಚಳವಳಿಯ ಮೂಲಕವೇ ರಾಜಕಿಯಕ್ಕೆ ಕಾಲಿಟ್ಟಿರುವ ಕಾಗೋಡು, ಯಾವುದೇ ವಿಚಾರವನ್ನು ಬಗೆಹರಿಸದೆ ಹಾಗೆಯೇ ಬಿಡುವವರಲ್ಲ. ಹೋರಾಟವೇ ಅವರ ಹುಟ್ಟುಗುಣ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಜಾಗೃತಿಗೊಳಿಸುವ ಮೂಲಕ ಜಿಲ್ಲೆಯಲ್ಲಿ ಒಂದಷ್ಟು ಕೆಲಸ ಆಗುವಂತೆ ಮಾಡಬಲ್ಲ ಶಕ್ತಿ ಹೊಂದಿದ್ದಾರೆ. ಜೊತೆಗೆ ಜಿಲ್ಲಾ ಕಾಂಗ್ರೆಸ್‌ನಲ್ಲೂ ಇನ್ನಷ್ಟು ಕ್ರಿಯಾಶೀಲತೆಯನ್ನು ತರಬಲ್ಲರು. ಪಕ್ಷವನ್ನು ಸಂಘಟಿಸುವ ಶಕ್ತಿ ಮತ್ತು ಕಾರ್ಯಕರ್ತರ ನೇರ ಸಂಪರ್ಕ ಹೊಂದಿರುವುದು ಅವರ ಪ್ಲಸ್ ಪಾಯಿಂಟ್.  ಜನಸಾಮಾನ್ಯರನ್ನೂ ಸಹ ಸೌಜನ್ಯದಿಂದ ಕಂಡು ಮಾತನಾಡುವ ವಿಶೇಷ ಗುಣ ಅವರಲ್ಲಿದೆ. ಇವೆಲ್ಲವೂ ಸಹ ಕಾಗೋಡು ಮತ್ತೆ ಸಚಿವರಾಗುವಂತೆ ಮಾಡಿದೆ. ಈ ಮೂಲಕ ಜಿಲ್ಲೆಯಲ್ಲಿ ಒಂದಷ್ಟು ಬದಲಾವಣೆ, ಜನೋಪಯೋಗಿ, ವಿಶೇಷವಾಗಿ ಅರಣ್ಯ ಜಮೀನು ಒತ್ತುವರಿ ವಿಚಾರ ಬಗೆಹರಿಸುವ ಆಶಾವಾದವನ್ನು ಮತದಾರಾರರು, ಬಗರ್‌ಹುಕುಂ ಸಾಗುವಳಿದಾರರು ಹೊಂದಿದ್ದಾರೆ. 

Saturday, 18 June 2016

ಶರವೇಗದಿ ಏರುತ್ತಿದೆ ಕಾಳುಬೇಳೆಗಳ ದರ
* ಗ್ರಾಹಕರು ಕಂಗಾಲು* ದರ ಇಳಿಸಲು ಸರಕಾರಗಳ ಕಸರತ್ತು


ಕಾಳುಬೇಳೆಗಳ ದರ ರಾಕೆಟ್‌ನಂತೆ ಏರಿಕೆಯಾಗುತ್ತಿದೆ. ದೈನಂದಿನ ಆಹಾರ, ತಿಂಡಿ, ಪದಾರ್ಥಗಳ ತಯಾರಿಕೆಗೆ ಬೇಳೆ ಬೇಕೇ ಬೇಕು. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆಯಾದರೆ ಅವನ ಪರಿಸ್ಥಿತಿ ಶೋಚನೀಯವಾಗುತ್ತದೆ. ಈಗ ಮಾರುಕಟ್ಟೆಗೆ ಖರೀದಿಗೆ ಹೋದರೆ ಯಾವುದನ್ನು, ಎಷ್ಟು ಪ್ರಮಾಣದಲ್ಲಿ  ಖರೀದಿಸಬೇಕು ಎಂದು ಯೋಚಿಸುವಂತಾಗಿದೆ. ಏಕೆಂದರೆ ಬೇಳೆಗಳ ದರ 200ರ ಗಡಿಯಲ್ಲಿದೆ. 
ಪ್ರತಿ ಮನೆಯಲ್ಲಿ ಇದರದ್ದೇ ಚರ್ಚೆ. ಕೇವಲ ತರಕಾರಿ ದರ ಏರಿಕೆಯಾಗುತ್ತ, ಇಳಿಕೆಯಾಗುವುದನ್ನು ಜನಸಾಮಾನ್ಯರು ಈವರೆಗೆ ಅನುಭವಿಸಿದ್ದರು. ಆದರೆ ಕಲೆದೊಂದು ವರ್ಷದಿಂದ ಬೇಳೆಕಾಳುಗಳ ದರ ಗಗನಮುಖಿಯಾಗುತ್ತಿದೆ. ಜನಸಾಮಾನ್ಯರ ಅದರಲ್ಲೂ ಮಧ್ಯಮ ಮತ್ತು ಬಡವರ್ಗದವರು ತತ್ತರಿಸಿ ಹೋಗಿದ್ದಾರೆ. ಕೆಜಿಗಟ್ಟಲೆ ತರುತ್ತಿದ್ದವರು ಈಗ ಗ್ರಾಮ್ ಲೆೆಕ್ಕದಲ್ಲಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಬೇಳೆಗಳಿಲ್ಲದೆ ಸಾರು, ತಿಂಡಿ ಮಾಡುವಂತಿಲ್ಲ.
 ಇಡೀ ದೇಶದಲ್ಲೇ ಈಗ ದರ ಏರಿಕೆ ಬಗ್ಗೆ ಚಿಂತನೆ ನಡೆಯುತ್ತಿದೆ. ಒಂದೆಡೆ ಕೆಟ್ಟ ಹವಾಮಾನ ಅಥವಾ ಕೈಕೊಟ್ಟ ಮುಂಗಾರು ಎಂದು ಕೆಲವರು ಹೇಳುತ್ತಿದ್ದಾರೆ. ಜೊತೆಗೆ ದೇಶದ ಬೆನ್ನೆಲುಬಾಗಿರುವ ಕೃಷಿ ಇಳಿಮುಖವಾಗುತ್ತಿರುವುದು, ರೈತನಿಗೆ ಅತಿಯಾದ ಖರ್ಚು, ಮಾರುಕಟ್ಟೆ ಕೊರತೆ, ನ್ಯಾಯಯುತ, ಸಮರ್ಪಕ ಬೆಲೆ ಸಿಗದಿರುವುದು, ಕೂಲಿ ಮತ್ತು ರೋಗದ ಸಮಸ್ಯೆಗಳಿಂದ ಕಂಗಾಲಾಗಿ  ಕೃಷಿಯೇ ಬೇಡ ಎನ್ನುವ ಹಂತ ತಲುಪಿದ್ದಾನೆ. ಇದರಿಂದ ಉತ್ಪಾದನೆ ಕುಂಠಿತವಾಗಿದೆ. ಆದರೆ ಇದರ ಹೊರತಾಗಿಯೂ ಕೆಲವು ಕಾರಣಗಳಿವೆ. ಅವೆಂದರೆ,  ಜಾಗತಿಕ ಹಣದುಬ್ಬರ, ಹೆಚ್ಚುತ್ತಿರುವ ಬೇಡಿಕೆ, ಕೃಷಿ ಇಳಿಮುಖ, ದ್ವಿದಳ ಧಾನ್ಯಗಳ ಬೆಳೆ ಕಡಿಮೆಯಾಗಿರುವುದು,  ಅಸಮರ್ಪಕ ನಿರ್ವಹಣೆ ಮತ್ತು ವಿತರಣೆ, ದಲ್ಲಾಳಿಗಳಿಂದ ಅನಧಿಕೃತ ದಾಸ್ತಾನು, ಸಾರಿಗೆ ದರ, ಪೆಟೊ್ರೀೀಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮೊದಲಾದವು ಕಾರಣವಾಗಿವೆ.
ಸದ್ಯ ಮಾರುಕಟ್ಟೆಯಲ್ಲಿ ಉದ್ದಿನಬೇಳೆ 196 ರೂ, ತೊಗರಿ 166 ರೂ, ಹೆಸರು 120 ರೂ.ನಲ್ಲಿ ಮಾರಾಟವಾಗುತ್ತಿದೆ. ಕೇಂದ್ರ ಸರಕಾರ ಬೆಲೆ ಇಳಿಕೆಯಾಗಿ ಎಲ್ಲ ದ್ವಿದಳ ಧಾನ್ಯಗಳು 120 ರೂ.ನಲ್ಲಿ ಲಭ್ಯವಾಗುವಂತೆ ಮಾಡಬೇಕೆಂದು ರಾಜ್ಯ ಸರಕಾರಗಳಿಗೆ ಸೂಚಿಸಿದೆ. ಜೊತೆಗೆ ಕಾಪು ದಾಸ್ತಾನು ಮಾಡುವವರ ವಿರುದ್ಧ ದಾಳಿ ನಡೆಸಿ ವಶಪಡಿಸಿಕೊಳ್ಳಲು ಸೂಚಿಸಿದೆ. ಇದರ ಫಲವಾಗಿ ಮೂರು ತಿಂಗಳ ಹಿಂದೆ ಕರ್ನಾಟಕದಲ್ಲಿ  (ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ) ಅತ್ಯಧಿಕ ಪ್ರಮಾಣದಲ್ಲಿ ಕಾಪು ದಾಸ್ತಾನು ಪತ್ತೆ ಮಾಡಲಾಗಿದೆ. ತೊಗರಿಯ ಕಣಜ ಎಂದೇ ಕರೆಯಲ್ಪಡುವ ಈ ಜಿಲ್ಲೆಗಳಲ್ಲಿ ಈ ವರ್ಷ ಇಳುವರಿ ಕಡಿಮೆಯಾಗಿದೆ. ಜೊತೆಗೆ ಬೆಳೆಯುವ ಪ್ರಮಾಣವೂ ಸಾಕಷ್ಟು ಕುಂಠಿತಗೊಂಡಿದೆ.
ಇವುಗಳನ್ನು ವಿಶ್ಲೇಷಿಸಿದರೆ, ಇತ್ತೀಚೆಗೆ ರೈತರು ಅಸಮರ್ಪಕ ಮಾರುಕಟ್ಟೆ ಮತ್ತು ನ್ಯಾಯಯುತ ಬೆಲೆ ಸಿಗದ ಕಾರಣ ಕೃಷಿಯಿಂದ ಬಹುತೇಕ ವಿಮುಖರಾಗಿದ್ದಾರೆ. ಆಧುನಿಕ ತಂತ್ರಜ್ಞಾನ ಕೃಷಿಯಲ್ಲಿ ಅಳವಡಿಕೆಯಾಗುತ್ತಿರುವುದರಿಂದ ಹೆಚ್ಚು ಪ್ರಮಾಣದಲ್ಲಿ ದ್ವಿದಳ ಧಾನ್ಯ ಬೆಳೆಯುವ ಕ್ರಾಂತಿಯನ್ನು ಮಾಡಬೇಕಿದೆ. ಈ ವರ್ಷವನ್ನು ಅಂತಾರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷವೆಂದು ಆಚರಿಸಲಾಗುತ್ತಿದೆ. ರೈತರಲ್ಲಿ ಈ ಬಗ್ಗೆ ಆಸಕ್ತಿ ಹುಟ್ಟಿಸಿ ಹೆಚ್ಚು ಇಳುವರಿಯ ಬೀಜ ನೀಡಿ, ಸೌಲಭ್ಯಗಳನ್ನು ಒದಗಿಸಬೇಕಿದೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಬರಗಾಲ ಈ ವರ್ಷ ಎದುರಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲೂ ಇದರ ಪರಿಣಾಮವಾಗಿ ಳೆೆ ಸಿಗಲೇ ಇಲ್ಲ. ಸಕಾಲದಲ್ಲಿ ಮಳೆಯಾಗದೆ ಬೆಳೆಗಳೆಲ್ಲ ಒಣಗಿಹೋದವು.  ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುವ ತಳಿಯ ಸಂಶೋಧನೆಯಾಗಬೇಕು. ಭಾರತ ದ್ವಿದಳ ಧಾನ್ಯಗಳನ್ನು ಅತ್ಯಧಿಕ ಪ್ರಮಾಣದಲ್ಲಿ (ಶೇ. 39ರಷ್ಟು)ಬೆಳೆಯುವ ದೇಶವಾದರೂ ಪ್ರತಿವರ್ಷ ಸುಮಾರು 3.5 ಮಿಲಿಯನ್ ಟನ್‌ನಷ್ಟು ಆಮದು ಮಾಡಿಕೊಳ್ಳುತ್ತಿದೆ. ಇದರಲ್ಲಿ ತಾಂಜಾನಿಯಾದಿಂದ ತೊಗರಿಬೇಳೆಯನ್ನು, ಟರ್ಕಿಯಿಂದ ಉದ್ದಿನಬೇಳೆಯನ್ನು ಮತ್ತು ಮ್ಯಾನ್ಮಾರ್‌ನಿಂದ ವಿವಿಧ ಧಾನ್ಯಗಳನ್ನು ತರಿಸಿಕೊಳ್ಳುತ್ತಿದೆ. ದೇಶಕ್ಕೆ ವರ್ಷಕ್ಕೆ ಸುಮಾರು 22 ಮಿಲಿಯನ್ ಟನ್‌ನಷ್ಟು ದ್ವಿದಳ ಧಾನ್ಯ ಬೇಕಾಗಿದೆ.
ದೇಶದಲ್ಲಿ ಕನಿಷ್ಟ ಬೆಂಬಲ ಬೆಲೆ ಸಂಪೂರ್ಣ ವಿಫಲವಾಗಿದೆ. ಏಕೆಂದರೆ ಸರಕಾರ ಕೊಡುವ ಬೆಲೆ ರೈತರಿಗೆ ಯಾತಕ್ಕೂ ಸಾಲದಂತಾಗಿದೆ. ಇದೇ ವೇಳೆ ಖಾಸಗಿಯವರು ಬೆಂಬಲಬೆಲೆಯ ದುಪ್ಪಟ್ಟು ಬೆಲೆಯನ್ನು ಕೊಟ್ಟು ಮನೆ ಬಾಗಿಲಲ್ಲೇ ಖರೀದಿಸುತ್ತಾರೆ. ರೈತರು ಇದರಿಂದ ಖಾಸಗಿಯವರಿಗೇ ಕೊಡುವ ಸ್ಥಿತಿಯನ್ನು ಸರಕಾರವೇ ನಿರ್ಮಿಸಿದೆ.
 ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ. ಬೆಲೆ ಕಡಿಮೆ ಇದ್ದಾಗ ಸಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಟ್ಟುಕೊಂಡು ಸಾಮಾನ್ಯ ಜನರಿಗೆ ಸಿಗದಂತೆ ಮಾಡುತ್ತಾರೆ. ಸರಬರಾಜು ತನ್ನಿಂತಾನೆ ಕಡಿಮೆಯಾಗುವಂತೆ ಮಾಡಿ ಬೆಲೆ ಏರಿಸುತ್ತಾರೆ. ನಂತರ ತಮ್ಮ ಕಾಪು ದಾಸ್ತಾನನ್ನು ಮಾರುಕಟ್ಟೆಗೆ ಬಿಡುತ್ತಾರೆ. ಆಗ ಅತಿ ಹೆಚ್ಚಿನ ಬೆಲೆಯ ಲಾಭ ಪಡೆಯುತ್ತಾರೆ. ಸರಕಾರ ಇಂತಹ ಕಾಪು ದಾಸ್ತಾನಿಗರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು.
ಜೊತೆಗೆ ಹೆಚ್ಚು ಹೆಚ್ಚು ಬೆಳೆಯಲು ರೈತರನ್ನು ಉತ್ತೇಜಿಸುವ, ಆ ದಿಸೆಯಲ್ಲಿ ಆಂದೋಲನವನ್ನೇ ಅಂತಾರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷದಲ್ಲಿ ಮಾಡಬೇಕಿದೆ. ರೈತರಿಗೆ ಬೇಕಾದ ತಂತ್ರಜ್ಞಾನ ಸಿಗುವಂತೆ ಮಾಡಬೇಕಿದೆ. ಬೆಳೆ ವಿಮೆಯನ್ನು ಕೊಡಬೇಕಿದೆ. ಮರಳಿ ರೈತ ಕೃಷಿಯತ್ತ ಬರುವಂತೆ ಮಾಡುವುದೊಂದೇ ಬೆಳೆ ಹೆಚ್ಚು ಮಾಡಲು ಇರುವ ದಾರಿ. ಸರಕಾರಗಳು ಈ ದಿಸೆಯಲ್ಲಿ ಯತ್ನಿಸಬೇಕಿದೆ. ಆಗ ಮಾತ್ರ ಸುಲಭ ಬೆಲೆಯಲ್ಲಿ ಎಲ್ಲ ಬೆಳೆಗಳು ಸಿಗುವಂತಾಗಲಿವೆ. ಆ ದಿನಗಳಿಗಾಗಿ ಭಾರತದ ಜನರು ಕಾಯುತ್ತಿದ್ದಾರೆ.  

Wednesday, 15 June 2016

ಭಿನ್ನಮತೀಯರ ಅಮಾನತು: ಜೆಡಿಎಸ್ ಮುಂದಿನ ದಾರಿ ಏನು?






ಜೆಡಿಎಸ್ ಚಿಂತನೆ ಬದಲಾಗಬೇಕಿದೆ. ಪಕ್ಷಕ್ಕೇ ಆರ್ಥಿಕ ಸಂಪನ್ಮೂಲವಿರುವವರೇ ಬೇಕಿಲ್ಲ. ಸಂಘಟನಾ ಚತುರರೂ ಬೇಕು. ತೂಕದ ಮಾತನಾಡುವವರೂ,  ಮೋಡಿ ಮಾಡುವವರೂ ಬೇಕು. ಅಂತಹವರನ್ನು ಗುರುತಿಸುವ ಕೆಲಸ ಮಾಡಬೇಕಿತ್ತು. ಜೆಡಿಎಸ್‌ನ 40 ಶಾಸಕರಲ್ಲಿ ಭಿನ್ನಮತೀಯ 6-8 ಶಾಸಕರನ್ನು ಬಿಟ್ಟರೆ ಉಳಿದವರೆಲ್ಲಾ ಕುಮಾರಸ್ವಾಮಿಗೆ ಜೈ ಎನ್ನುವವರೇ ಇದ್ದಾರೆ. ಅವರೊಂದಿಗೆ ನಾಯಕತ್ವ  ಬೆಳೆಸಬೇಕೆನ್ನುವ ಬಗ್ಗೆ ಚಿಂತನೆ, ಚರ್ಚೆ ನಡೆಸಿದವರಿಲ್ಲ. ನಾಯಕತ್ವದ ಗಟ್ಟಿತನ ಎಲ್ಲಿರುವುದಿಲ್ಲವೋ ಅಲ್ಲಿ ಟೊಳ್ಳುತನ ಎದುರಾಗುತ್ತದೆ, ಪಕ್ಷ ಬಲಹೀನವಾಗುತ್ತದೆ.


ಜಾತ್ಯತೀತ ಜನತಾ ದಳ (ಜೆಡಿಎಸ್) ಬಿಕ್ಕಟ್ಟಿನ ಮೇಲೆ, ಬಿಕ್ಕಟ್ಟು ಎದುರಿಸುತ್ತಿದ. ಮೊನ್ನೆ ನಡೆದ ಎಂಎಲ್‌ಸಿ ಚುನಾವಣೆಯಲ್ಲೂ ಅದರ ಕೆಲವು ಶಾಸಕರು  ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿ ತಮ್ಮ ಪಕ್ಷದ ಅಧಿಕೃತ ಎರಡನೆಯ ಅಭ್ಯರ್ಥಿ  ಸೋಲುವಂತೆ ಮಾಡಿದ್ದಾರೆ. ಇದಾದ ಬಳಿಕ ಮಾರನೆಯ ದಿನ ಜರುಗಿದ ರಾಜ್ಯಸಭೆ ಅಭ್ಯರ್ಥಿಯ ಚುನಾವಣೆಯಲ್ಲೂ ಇದೇ ಮರುಕಳಿಸಿದೆ.  ಭಿನ್ನಮತೀಯರೆನಿಸಿಕೊಂಡ 8 ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸುವ ಧೈರ್ಯವನ್ನು ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿಯೂ, ಜೆಡಿಎಸ್ ರಾಷ್ಟ್ರೀಯ ಅದ್ಯಕ್ಷರೂ ಆದ ಎಚ್. ಡಿ. ದೇವೇಗೌಡರು ತೋರಿಸಿದ್ದಾರೆ.
ಜೆಡಿಎಸ್ ಬಿಕ್ಕಟ್ಟು ಇಂದು-ನಿನ್ನೆಯದಲ್ಲ. ಆರೆಂಟು ತಿಂಗಳಿಂದ ಮುದುವರೆದುಕೊಂಡೇ ಬಂದಿದೆ. ಶಾಸಕ ಚೆಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್ ಮತ್ತು ಎಚ್. ಸಿ. ಬಾಲಕೃಷ್ಣ  ಮಾಜಿ ಮುಖ್ಯಮಂತ್ರಿ ಮತ್ತು  ಪಕ್ಷದ ರಾಜ್ಯ ಅದ್ಯಕ್ಷ ಎಚ್ ಡಿ ಕುಮಾರಸ್ವಾಮಿ  ವಿರುದ್ಧ ಮುನಿಸಿಕೊಂಡೇ ಬಂದಿದ್ದಾರೆ. ಆಗಾಗ್ಗೆ ಇದು ಜ್ವಲಿಸುತ್ತಾ, ಕೆಲವೊಮ್ಮೆ ತಣ್ಣಗಾಗುತ್ತ ಇದ್ದಿತ್ತು. ಆದರೆ ಯಾವಾಗಲಾದರೊಮ್ಮೆ ಭುಗಿಲೇಳುವುದು ನಿಶ್ಚಿತವಾಗಿತ್ತು. ಅದು ಈಗ ನಿಜವಾಗಿದೆ. ಪರಿಣಾಮವಾಗಿ 8 ಶಾಸಕರನ್ನು ಪಕ್ಷದಿಂದ ಹೊರಹಾಕಲಾಗಿದೆ.
ಯಾವುದೇ ಪಕ್ಷದಲ್ಲಿರಲಿ, ಯಾವಾಗ ಪಕ್ಷದ ಹೈಕಮಾಂಡ್  ಬಲಿಷ್ಠವಿರುತ್ತದೆಯೋ  ಪಕ್ಷ ಬಲಿಷ್ಠವಿರುತ್ತದೆ. ಯಾವಾಗ ಸ್ಥಳಿಯ ನಾಯಕರೇ ಬಲಿಷ್ಠರಾಗುತ್ತಾರೋ ಆಗ ಹೈಕಮಾಂಡ್ ಬಲಹೀನವಾಗುತ್ತದೆ. ಜೆಡಿಎಸ್ ಉದಾಹರಣೆಯನ್ನು ಇಲ್ಲಿ ಗಮನಿಸಬಹುದು. ಹೈಕಮಾಂಡ್ ದೇವೇಗೌಡರು ಮತ್ತು ಅವರ ಪುತ್ರರಾದ ಕುಮಾರಸ್ವಾಮಿ , ರೇವಣ್ಣ ಎಲ್ಲ ಅಧಿಕಾರ ಚಲಾಯಿಸುತ್ತ ಇಲ್ಲಿಯವರೆಗೆ ನಿಯಂತ್ರಿಸುತ್ತಿದ್ದರು. ಆದರೆ ಭಿನ್ನಮತೀಯ  ಐವರು ಹಿರಿಯ ನಾಯಕರು ತೊಡೆತಟ್ಟಿದಂದಿನಿಂದ ಯಾವ ಕ್ರಮವನನೂ ತೆಗೆದುಕೊಳ್ಳದೆ ಭಿನ್ನಮತ ಬೆಳೆಯಲು ಅವಕಾಶ ಕಲ್ಪಿಸಿದ್ದರು. ಮೊದಲೇ ಚಿವುಟಿ ಹಾಕಿದ್ದರೆ ಪಕ್ಷಕ್ಕೆ ಈ ಕ್ಯಾನ್ಸರ್ ಅಂಟುತ್ತಿರಲಿಲ್ಲ.  ಈಗ ಅದು ವ್ಯಾಪಿಸುತ್ತಿರುವುದನ್ನು ಅರಿತು ಕ್ರಮ ಜರುಗಿಸಿದ್ದಾರೆ.
ಹಾಗಾದರೆ ಇದಕ್ಕೆಲ್ಲ ಕಾರಣ ಹೈಕಮಾಂಡೇ ಅಥವಾ ಭಿನ್ನಮತಿಯರೇ ಎನ್ನುವುದನ್ನು ವಿಶ್ಲೇಷಿಸಿದರೆ, ಒಂದು ಹಂತದಲ್ಲಿ ಅಪ್ಪ-ಮಕ್ಕಳೇ ಕಾರಣ ಎನ್ನಬಹುದು. ಏಕೆಂದರೆ, ದೇವೇಗೌಡ ಮತ್ತು ಕುಮಾರಸ್ವಾಮಿ ಪಕ್ಷದ ಮೇಲೆ ಹಿಡಿತ ಹೊಂದಿರುವವರಾದರೂ ಪಕ್ಷ ಸಂಘಟಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ಎರಡನೆಯ ತಲೆಮಾರಿನ ನಾಯಕರನ್ನು ಬೆಳೆಸಲೇ ಇಲ್ಲ. ಬೆಳೆಸಿದರೆ ತಮ್ಮ ಬುಡಕ್ಕೇ ಇವರು ಕೊಡಲಿ ಹಾಕುತ್ತಾರೆಂಬ ಭಯ ಇವರಲ್ಲಿರಬಹುದು. ಅತವ ತಮ್ಮ ಕುಟುಂಬದ ಆಸ್ತಿಯಾಗಿರುವ ಪಕ್ಷ ಬೇರೆಯವರ ಕೈವಶವಾಗಬಹುದೆನ್ನುವ ಭಯವೂ ಆಗಿರಬಹುದು.
  ಅದಕ್ಕಾಗಿಯೇ ದೇವೇಗೌಡರು ತಮ್ಮ ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಬೆಳೆಸಲಾರಂಭಿಸಿದ್ದರು. ಕುಟುಂಬ ರಾಜಕಾರಣ ಮತ್ತು ಜಾತಿ ರಾಜಕಾರಣ ಎಂದೂ ಯಶಸ್ವಿಯಾಗದು. ಎಲ್ಲೋ ಆಗೊಮ್ಮೆ, ಈಗೊಮ್ಮೆ ಇದು ಸಾಧನೆ ಮಾಡಿರಬಹುದು. ಇದು ದೇವೇಗೌಡ ಮತ್ತು ಅವರ ಮಕ್ಕಳಿಗೆ ಗೊತ್ತಿರದ ವಿಷಯವೇನಲ್ಲ. ಇಡೀ ದಿನ ರಾಜಕೀಯದಲ್ಲೇ ಮುಳುಗಿರುವ, ತಂತ್ರಗಾರಿಕೆಯಲ್ಲೇ ಕಾಲಕಳೆಯುವ ಇವರಿಗೆ ಇದು ಅರ್ಥವಾಗದ ವಿಚಾರವಂತೂ ಅಲ್ಲ. ಇಷ್ಟಾದರೂ  ಇದರಲ್ಲೇ ಮುಂದುವರೆಯುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.
ಸಿದ್ಧಾಂತವಿಲ್ಲದವರು:
 ಮೊದಲನೆಯದಾಗಿ, ಭಿನ್ನಮತೀಯ ಕೆಲಸಕ್ಕೆ ಕೈ ಹಾಕಿದವರನ್ನು ಮಾತುಕತೆ ಮೂಲಕ ಸರಿದಾರಿಗೆ ತರುವ ಕೆಲಸ ಮಾಡಲಿಲ್ಲ. ಎರಡನೆಯದಾಗಿ, ದುಡ್ಡಿದ್ದವರಿಗೆ, ರಿಯಲ್ ಎಸ್ಟೇಟ್‌ನವರಿಗೆ  ಟಿಕೆಟ್ ಕೊಡುತ್ತ ಚುನಾವಣೆ ನಡೆಸಿದ್ದನ್ನು (ಮಲ್ಯ, ಫಾರೂಕ್ ಮೊದಲಾದವರು) ಕುಮಾರಸ್ವಾಮಿ ಮುಂದಾದ ಹಲವರು ನಿದರ್ಶನ ಕಾಣಬಹುದು. ಆದರೆ, ದೇವೇಗೌಡರಿಗೆ ಶಾಸಕ ವೈಎಸ್‌ವಿ ದತ್ತ್ತಾ ಅವರಂತಹ ಕೆಲವು ಚಿಂತಕರು ಹೇಳಿದ ಮಾತು ಹಿಡಿಸುತ್ತಿತ್ತು. ಹಾಗಾಗಿ, ಅವರು ದುಡ್ಡಿದ್ದವರಿಗೆ ಟಿಕೆಟ್ ಕೊಡಲು ಒಪ್ಪುತ್ತಿರಲಿಲ್ಲ. ಆದರೆ, ಎಚ್‌ಡಿಕೆ ಮಾತ್ರ ಹಣದ ಹಿಂದೆ ಬಿದ್ದವರಾಗಿದ್ದರು. ಮೂರನೆಯದಾಗಿ, ಜಾತ್ಯತೀತ ಹೆಸರನ್ನು ಇಟ್ಟುಕೊಂಡಾಕ್ಷಣ ಆ ಪಕ್ಷ ಅದೇ ಸಿದ್ಧಾಂತಕ್ಕೆ ಅಂಟಿಕೊಂಡಿರಬೇಕಿಲ್ಲ ಎನ್ನುವುದು ಅಪ್ಪ-ಮಕ್ಕಳ ನಿಲುವು. ಇದನ್ನು ಪದೇ ಪದೇ ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಸಿದ್ಧಾಂತವಿಲ್ಲದ ಪಕ್ಷ ಇದಾಗಿದೆ.
ಇನ್ನಾದರೂ ಜೆಡಿಎಸ್ ಚಿಂತನೆ ಬದಲಾಗಬೇಕಿದೆ. ಪಕ್ಷಕ್ಕೇ ಆರ್ಥಿಕ ಸಂಪನ್ಮೂಲವಿರುವವರೇ ಬೇಕಿಲ್ಲ. ಸಂಘಟನಾ ಚತುರರೂ ಬೇಕು. ತೂಕದ ಮಾತನಾಡುವವರೂ,  ಮೋಡಿ ಮಾಡುವವರೂ ಬೇಕು. ಅಂತಹವರನ್ನು ಗುರುತಿಸುವ ಕೆಲಸ ಮಾಡಬೇಕಿತ್ತು. ಜೆಡಿಎಸ್‌ನ 40 ಶಾಸಕರಲ್ಲಿ ಭಿನ್ನಮತೀಯ 6-8 ಶಾಸಕರನ್ನು ಬಿಟ್ಟರೆ ಉಳಿದವರೆಲ್ಲಾ ಕುಮಾರಸ್ವಾಮಿಗೆ ಜೈ ಎನ್ನುವವರೇ ಇದ್ದಾರೆ. ಅವರೊಂದಿಗೆ ನಾಯಕತ್ವ  ಬೆಳೆಸಬೇಕೆನ್ನುವ ಬಗ್ಗೆ ಚಿಂತನೆ, ಚರ್ಚೆ ನಡೆಸಿದವರಿಲ್ಲ. ನಾಯಕತ್ವದ ಗಟ್ಟಿತನ ಎಲ್ಲಿರುವುದಿಲ್ಲವೋ ಅಲ್ಲಿ ಟೊಳ್ಳುತನ ಎದುರಾಗುತ್ತದೆ, ಪಕ್ಷ ಬಲಹೀನವಾಗುತ್ತದೆ. ಈ ರೀತಿಯಾದರೆ, ತಮ್ಮ ನಂತರ ಪಕ್ಷದ ಗತಿ ಏನಾದೀತೆಂಬ ಕಲ್ಪನೆಯೇ ಅಪ್ಪ-ಮಕ್ಕಳಿಗಿಲ್ಲ. ಕುಮಾರಸ್ವಾಮಿ ಹೇಳುವುದು ಒಂದು, ಮಾಡುವುದು ಒಂದು. ಏಕೆಂದರೆ ಇನ್ನೊಬ್ಬರ ಚಾಡಿಮಾತಿಗೆ ಬೆಲೆ ಕೊಡುವುದೇ ಹೆಚ್ಚು. ಸ್ವಂತ ನಿಲುವಿಲ್ಲ.
ಕೌಟುಂಬಿಕ ಪಕ್ಷವಾಗಿರುವ ಜೆಡಿಎಸ್‌ನಲ್ಲಿರುವ ಶಾಸಕರಿಗೆ ಈಗ ಅಸ್ತಿತ್ವದ ಪ್ರಶ್ನೆ ಎದ್ದಿದೆ. ಯಾವಾಗ ವ್ಯಕ್ತಿಗೆ ಈ ರೀತಿ ಸಂಭವಿಸುತ್ತದೆಯೋ ಆಗ ಅವಕಾಶವಿರುವಲ್ಲಿ ಆತ ಹೋಗುತ್ತಾನೆ.
ಭಿನ್ನಮತೀಯರ ಆಟ:
ಇನ್ನು, ಭಿನ್ನಮತೀಯರೇನೂ ಸುಭಗರಲ್ಲ. ಜಮೀರ್ ಅಹಮದ್ ಖಾನ್ ಮೊದಲಿನಿಂದಲೂ ಕುಮಾರಸ್ವಾಮಿಯನ್ನು  ಹೆದರಿಸುತ್ತಲೇ ಬಂದವರು. ಇವರ ಬಗ್ಗೆ ಎಚ್ಚರವಹಿಸಿ ನಿಯಂತ್ರಿಬೇಕಿತ್ತು. ಆದರೆ ಮುಸ್ಲಿಮ್ ನಾಯಕನೆಂಬ ಕಾರಣಕ್ಕೆ ಮತ್ತು ಇಬ್ಬರೂ ಒಂದು ಕಾಲದಲ್ಲಿ ಜಿಗ್ರಿ ದೋಸ್ತ್ ಆಗಿದ್ದರಿಂದ  ಸುಮ್ಮನಾದರು. ಇದನ್ನೇ ಜಮೀರ್ ಸಹ ದುರುಪಯೋಗಪಡಿಸಿಕೊಂಡರು. ಬೆಂಗಳೂರು ನಗರದಲ್ಲಿ ಪ್ರಮುಖ ಜೆಡಿಎಸ್ ನಾಯಕನಾದರು. ತನ್ನನ್ನು ಎದುರು ಹಾಕಿಕೊಂಡರೆ ಕಷ್ಟ ಎಂಬ ಪರಿಸ್ಥಿತಿ ನಿರ್ಮಿಸಿದರು. ಪರಿಣಾಮ ಈಗ ಎದುರಿಸುವಂತಾಗಿದೆ.
ಚೆಲುವರಾಯಸ್ವಾಮಿ ಮಂಡ್ಯ ಸಾಂಸದನಾಗಿದ್ದಾಗಲೇ ಭಿನ್ನಮತೀಯ ಚಟುವಟಿಕೆಗೆ ನಾಂದಿ ಹಾಡಿದವರು. ನಂತರ ಶಾಸಕರಾದರು. ಮಂಡ್ಯದಲ್ಲಿ ತಮ್ಮದೇ ಹಠ ನಡೆಯಬೇಕೆಂದು ಕುಳಿತರು. ಮೊನ್ನೆ ಶಿಕ್ಷಕರ ಕ್ಷೇತ್ರದ ಚುನಾವಣೆಯ ಟಿಕೆಟ್ ಕೊಡುವ ವೇಳೆ ತಾನು ಹೇಳಿದವರಿಗೆ ಟಿಕೆಟ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಜಿದ್ದಾಜಿದ್ದಿಗೆ ಬಿದ್ದವರಂತೆ ಅಡ್ಡಮತ ಹಾಕಿ ಮುಯ್ಯಿ ತೀರಿಸಿಕೊಂಡಿದ್ದಾರೆ. ನಿನ್ನೆ ಅಮಾನತಾಗಿದ್ದಾರೆ.
ಮಾಗಡಿ ಶಾಸಕ ಎಚ್. ಸಿ ಬಾಲಕೃಷ್ಣ ಈ ಹಿಂದೆಯೇ ಜಮೀರ್‌ರಂತೆ ಸಿಡಿದೆದ್ದವರು. ಒಂದು ಹಂತದಲ್ಲಿ ಬಿಜೆಪಿ ಸೇರುತ್ತಾರೆಂಬ ವದಂತಿ ಹಬ್ಬಿತ್ತು. ಇದನ್ನು ಈಗ ಅವರೇ ಹೇಳಿಕೊಂಡಿದ್ದಾರೆ. ಅದರೆ ಜಮೀರ್, ಚೆಲುವರಾಯಸ್ವಾಮಿಯಿಂದಾಗಿ ಇಲ್ಲೇ ಉಳಿದು ಅವರ ಜೊತೆ ಸೇರಿ ಅಪ್ಪ-ಮಕ್ಕಳಿಗೆ ಬುದ್ಧಿ ಕಲಿಸಲು ಮುಂದಾಗಿದ್ದರು. ಇವರ ಜೊತೆ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ. ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸಹ ಸೇರಿದ್ದಾರೆ. ಇವರೆಲ್ಲರ ಮುಖಂಡತ್ವದಲ್ಲಿ ಹಲವು ತಿಂಗಳಿಂದ ನಡೆದಿದ್ದ ಭಿನ್ನಮತೀಯ ಚಟುವಟಿಕೆ ನಿನ್ನೆ ಒಂದು ಹಂತಕ್ಕೆ ಬಂದಿದೆ.
ಜೆಡಿಎಸ್ ಸಮಸ್ಯೆ:
  ಜೆಡಿಎಸ್‌ಗೆ ಮೊದಲಿನಿಂದಲೂ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದೇ  ಸವಾಲಿನ ಕೆಲಸವಾಗಿತ್ತು. ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ ವೇಳೆ ಇವರ ಜಗಳ ತಾರಕಕ್ಕೇರಿದ್ದರಿಂದ ಅಭ್ಯರ್ಥಿಯ ಗೆಲುವು ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಅದರಂತೆ ಹಠ ಸಾಧಿಸಿ ತೋರಿಸಿದ್ದಾರೆ ಭಿನ್ನಮತೀಯ ನಾಯಕರು. ಬಂಡಾಯ ಉಪಶಮನ ಮಾಡಲು ಕುಮಾರಸ್ವಾಮಿ ಮುಂದಾಗದೇ ಇದ್ದುದು, ಅನಗತ್ಯ ಹೇಳಿಕೆ ಕೊಟ್ಟು ಪರಿಸ್ಥಿತಿ ವಿಷಮಿಸುವಂತೆ ಮಾಡಿದ್ದು ಇನ್ನಷ್ಟು ಅದು ಬೆಳೆಯಲು ಕಾರಣ ಎನ್ನಲೇಬೇಕು. ಕನಿಷ್ಟ ಮಾತುಕತೆ ಮೂಲಕವಾದರೂ ಇದನ್ನು ಪರಿಹರಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ಬದಲಾಗಿ ಈ ಭಿನ್ನಮತೀಯರ ಕ್ಷೇತ್ರದಲ್ಲಿ ಬದಲೀ ನಾಯಕರನ್ನು ಬೆಳೆಸಲು ಎಚ್‌ಡಿಕೆ ಯತ್ನಸಿದ್ದೂ ಸಹ ಇವರ ಹೆಚ್ಚಿನ ಆಕ್ರೋಶಕ್ಕೆ ಕಾರಣವಾಗಿತ್ತು.
ಅಪ್ಪ-ಮಗ ಬದಲಾಗದಿದ್ದರೆ ಜೆಡಿಎಸ್‌ಗೆ ಖಂಡಿತ ಭವಿಷ್ಯವಿಲ್ಲ. 40 ಶಾಸಕರನ್ನು ಹೊಂದಿರುವುದರಿಂದ  ಆರ್ಭಟಿಸುತ್ತಿರುವ  ದೇವೇಗೌಡ ಮತ್ತು ಎಚ್‌ಡಿಕೆ  ಶಾಸಕರನ್ನು ಕನಿಷ್ಠ  ನಂಬಿಕೆಯಲ್ಲಿಟ್ಟುಕೊಳ್ಳುವಲ್ಲಿಯೂ ವಿಫಲರಾದರು. ಅವರು ಸಿಟ್ಟಿಗೆದ್ದಾಗ ಅವರನ್ನು ಒಲೈಸುವ  ಕೆಲಸವನ್ನೂ ಮಾಡಲಿಲ್ಲ. ಪರಿಣಾಮವಾಗಿ, ಬೆಂಗಳೂರು ನಗರದಲ್ಲಿ ಇದ್ದ ತನ್ನ ಮೂವರೂ ಶಾಸಕರನ್ನೂ ಈಗ ಕಳೆದುಕೊಳ್ಳುವ ಹಂತದಲ್ಲಿದೆ. ಶಾಸಕರಾದ ಗೋಪಾಲಯ್ಯ ಮತ್ತು ಅಖಂಡ ಶ್ರೀನಿವಾಸ್ ಸಹ ಅಮಾನತಾಗಿದ್ದಾರೆ. ಬಿಜೆಪಿ ಜೊತೆ ಸೇರಿ ಬಿಬಿಎಂಪಿ ಅಡಳಿತ ಮಾಡಲು ಮುಂದಾಗಿದ್ದ ಜೆಡಿಎಸ್‌ಗೆ ಇದೂ ಸಹ ಮುಳ್ಳಾಗಲಿದೆ. ಏಕೆಂದರೆ, ಅಲ್ಲಿರುವ ಜೆಡಿಎಸ್‌ನ 14 ಬಿಬಿಎಂಪಿ ಸದಸ್ಯರಲ್ಲಿ 12  ಸದಸ್ಯರು ಈ ಶಾಸಕತ್ರಯರ ಶಿಷ್ಯರಾಗಿದ್ದಾರೆ.

Tuesday, 14 June 2016


 ಬೆಂಬಲಿಗನಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ ಕಟ್ಟಿದ ಬಿಎಸ್‌ವೈ




 ರುದ್ರೇಗೌಡರ ಬಗ್ಗೆ ಗಮನಿಸುವುದಾದರೆ,  ಕೈಗಾರಿಕೋದ್ಯಮಿಯಾಗಿ ಹೆಸರು ಸಂಪಾದನೆ ಮಾಡಿದ್ದ ಎಸ್.ರುದ್ರೇಗೌಡರವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಬಿ.ಎಸ್.ವೈ. ಕೆಜೆಪಿ ಕಟ್ಟಿದ ವೇಳೆ ರುದ್ರೇಗೌಡರು ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದರು. ಜಿಲ್ಲಾ ಅಧ್ಯಕ್ಷ ಸ್ಥಾನ ದೊರೆತಿರುವುದರಿಂದ ಬಹುದೊಡ್ಡ ಜವಾಬ್ದಾರಿ ಅವರ ಹೆಗಲೇರಿದೆ. ಇದನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ. ಅದರಲ್ಲೂ ಪಕ್ಷ ಸಂಘಟನೆ ಸವಾಲಿನದ್ದು. ಪಕ್ಷದ ಅಧಿಕಾರದಲ್ಲಿ ಇರದ ವೇಳೆ ಈ ಕೆಲಸ ಬಹಳ ಕಠಿಣ. ಜಿಲ್ಲೆಯಾದ್ಯಂತ, ಗ್ರಾಮದಾದ್ಯಂತ ಸಂಚರಿಸಿ ಪಕ್ಷ ಕಟ್ಟಬೇಕಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಇರುವ ಎರಡು ಬಣವನ್ನು ಒಂದುಗೂಡಿಸಬೇಕಿದೆ. ಕಾರ್ಯಕರ್ತರನ್ನು, ನಾಯಕರನ್ನು ಒಂದೇ ಸೂರಿನಡಿ ತರಬೇಕಿದೆ. ಆದರೆ, ಇನ್ನೆರಡು ವರ್ಷ ಯಾವುದೇ ಚುನಾವಣೆ ಇಲ್ಲ. ಇದರಿಂದ ತಮ್ಮ ಛಾಪು ಮೂಡಿಸಿಕೊಳ್ಳಲು ಉತ್ತಮ ಕಾಲಾವಕಾಶವಿದೆ. ಇದನ್ನು ರುದ್ರೇಗೌಡರು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವರ ಯಶಸ್ಸು ನಿರ್ಧಾರವಾಗಲಿದೆ.  

ಜಿಲ್ಲಾ ಬಿಜೆಪಿ ವಲಯದಲ್ಲಿ ಕೆಲವು ದಿನಗಳಿಂದ  ಕೇಳಿ ಬರುತ್ತಿದ್ದ ಮಾತು ಈಗ ನಿಜವಾಗಿದೆ. ಅದೆಂದರೆ, ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗ ಎಸ್.ರುದ್ರೇಗೌಡರನ್ನು ನಿಯೋಜಿಸಲಿದ್ದಾರೆ ಎನ್ನುವುದಾಗಿತ್ತು. ಸಜ್ಜನ, ಪ್ರಾಮಾಣಿಕ ರುದ್ರೇಗೌಡರು ಖಂಡಿತ ಈ ಹುದ್ದೆಯ ಆಕಾಂಕ್ಷಿಯಾಗಿರಲಿಲ್ಲ. ಬಿಎಸ್‌ವೈ ಅವರ ಆಪ್ತರೆಂದೇ ಗುರುತಿಸಿಕೊಂಡು, ಅವರು ಶಿವಮೊಗ್ಗಕ್ಕೆ ಬಂದಾಗಲೆಲ್ಲ ಜೊತೆಯಲ್ಲಿರುತ್ತಿದ್ದರು. ಬಿಎಸ್‌ವೈ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ಯನ್ನು ಕಟ್ಟಿದಾಗ ಅದರ ಜಿಲ್ಲಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಅಷ್ಟೇ ಏಕೆ, ಶಿವಮೊಗ್ಗ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ 270 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ನಂತರ ಮತ್ತೆ ರಾಜಕೀಯದಿಂದ ದೂರವಾಗಿದ್ದರು. ಯಾವಾಗ ಬಿಎಸ್‌ವೈ ಬಿಜೆಪಿಗೆ ಮರುಪ್ರವೇಶ ಪಡೆದರೋ ಅಲ್ಲಿಂದ ಮತ್ತೆ ಕಾಣಿಸಿಕೊಳ್ಳಲಾರಂಭಿಸಿದರು. ಆದರೆ ಯಾವುದೇ ಪ್ರಮುಖ ಹುದ್ದೆ ಅವರಿಗಿರಲಿಲ್ಲ. ಬಿಜೆಪಿಯ ಇನ್ನೊಂದು ಬಣದವರ ಕೈಯಲ್ಲಿ ಜಿಲ್ಲಾ ಅಧಿಕಾರ ಇದ್ದುದರಿಂದ ಸಹಜವಾಗಿಯೇ ಬಿಎಸ್‌ವೈ ಜೊತೆ ಬಂದವರಿಗೆ ಅಧಿಕಾರ ತೀರ ಅತ್ಯಲ್ಪ ಪ್ರಮಾಣದಲ್ಲಿತ್ತು. ಇದು ಬಿಎಸ್‌ವೈಗೂ ಗೊತ್ತಿತ್ತು. ಇದರಿಂದ ರೋಸಿ ಹೋಗಿದ್ದ ಹಲವು ಬೆಂಬಲಿಗರು ಪಕ್ಷದ ಚಟುವಟಿಕೆಗಳಿಂದಲೇ ದೂರ ಉಳಿದಿದ್ದರು. ಸ್ವತಃ ಬಿ.ಎಸ್.ವೈ.ಅವರೇ, ’ಪಕ್ಷದಲ್ಲಿ ತಮ್ಮ ಮಾತನ್ನು ಯಾರೂ ಕೇಳುತ್ತಿಲ್ಲ. ಸ್ವಲ್ಪ ದಿನ ಕಾಯಿರಿ ಎಲ್ಲವೂ ಸರಿ ಹೋಗುತ್ತದೆ...’ ಎಂದು  ಬೆಂಬಲಿಗರನ್ನು ಸಮಾಧಾನಗೊಳಿಸುತ್ತಿದ್ದರು.
ಈಗ ಇನ್ನೊಂದು ಇನ್ನಿಂಗ್ಸ್ ಆರಂಭವಾಗಿದೆ. ಅದೆಂದರೆ, ಮತ್ತೆ ಬಿಎಸ್‌ವೈ ರಾಜ್ಯಾಧ್ಯಕ್ಷರಾಗಿದ್ದಾರೆ, ಜಿಲ್ಲಾಧ್ಯಕ್ಷ ಸ್ಥಾನವೂ ಅವರ ಕಟ್ಟಾ ಬೆಂಬಲಿಗ, ಉದ್ಯಮಿಯ ಕೈಗೆ ಬಂದಿದೆ.   ಯಡಿಯೂರಪ್ಪ ಬೆಂಬಲಿಗರಿಗೆ ಶುಕ್ರದೆಸೆ ಶುರುವಾಗಿದೆ ಎನ್ನಬಹುದು. ಬಿ.ಎಸ್.ವೈ. ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಮೂಲೆಗುಂಪಾಗಿದ್ದ ಬೆಂಬಲಿಗರೀಗ ಮುನ್ನೆಲೆಗೆ ಆಗಮಿಸುತ್ತಿದ್ದಾರೆ. ಇದು ಮತ್ತೊಂದು ಬಣದಲ್ಲಿ ತಳಮಳ ಸೃಷ್ಟಿಸಿರುವುದು ಸತ್ಯ.
ಜಿಲ್ಲಾ ಬಿಜೆಪಿ ಘಟಕದಲ್ಲಿ ಈ ಹಿಂದಿದ್ದ ಪ್ರಾಬಲ್ಯ ಮರುಸಂಪಾದನೆಗೆ ಬಿ.ಎಸ್.ವೈ. ಯತ್ನಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮುಂದಿನ ದಿನಗಳಲ್ಲಿ ಪಕ್ಷದ ತಾಲೂಕು ಹಾಗೂ ಜಿಲ್ಲಾ ಘಟಕಗಳಲ್ಲಿಯೂ ತಮ್ಮ ಬೆಂಬಲಿಗರಿಗೆ ಮಣೆ ಹಾಕುವುದು ಖಚಿತವಾಗಿದೆ. ಬಿಎಸ್ ವೈ ರಾಜಕೀಯ ಗೊತ್ತಿದ್ದವರಾರೂ ಇದನ್ನು ಅಲ್ಲಗಳೆಯುವುದಿಲ್ಲ.
 ಹಾಲಿ ಜಿಲ್ಲಾಧ್ಯಕ್ಷ ಎಸ್.ದತ್ತಾತ್ರಿಯವರನ್ನೇ ಮುಂದುವರೆಸಲು ಇನ್ನೊಂದೆಡೆ ಭಾರೀ ಯತ್ನ ನಡೆದಿತ್ತು. ಸಂಘಪರಿವಾರ ಹಾಗೂ ಪಕ್ಷದ ವರಿಷ್ಠರ ಮೂಲಕ ಬಿ.ಎಸ್.ವೈ. ಮೇಲೆ ಒತ್ತಡ ಹಾಕಿಸುವ ಕೆಲಸ ಕೂಡ ಮಾಡಿತ್ತು. ಆದರೆ ಇವ್ಯಾವ ಒತ್ತಡಕ್ಕೂ ಬಗ್ಗದ ಬಿ.ಎಸ್.ವೈ. ಬೆಂಬಲಿಗನಿಗೆ ಪಟ್ಟ ಕಟ್ಟಿದ್ದಾರೆ.
ಈ ಹಿಂದೆ ಜಿಲ್ಲಾ ಬಿಜೆಪಿಯಲ್ಲಿ ಬಿ.ಎಸ್.ವೈ. ನಿರ್ಣಾಯಕ ಸ್ಥಾನದಲ್ಲಿದ್ದರು. ಅವರ ಅಣತಿಯಿಲ್ಲದೆ ಪಕ್ಷದಲ್ಲಿ ಹುಲ್ಲು ಕಡ್ಡಿ ಕೂಡ ಅಲುಗಾಡುವುದಿಲ್ಲವೆಂಬ ಸ್ಥಿತಿಯಿತ್ತು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿ.ಎಸ್.ವೈ. ಬಿಜೆಪಿ ತೊರೆದಾಗ ಹಲವು ಮುಖಂಡರು, ಕಾರ್ಯಕರ್ತರು ಅವರನ್ನು ಹಿಂಬಾಲಿಸಿದ್ದು ಈಗ ಇತಿಹಾಸ.  ಬಿ.ಎಸ್.ವೈ. ಮತ್ತೆ ಬಿಜೆಪಿಗೆ ಮರಳಿದ್ದರು. ಅವರೊಂದಿಗೆ ಬಿಜೆಪಿಗೆ ಆಗಮಿಸಿದ್ದ ಬೆಂಬಲಿಗರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರಕಿರಲಿಲ್ಲ. ಉದ್ದೇಶಪೂರ್ವಕವಾಗಿಯೇ ಅವರನ್ನು ಕಡೆಗಣನೆ ಮಾಡಿಕೊಂಡು ಬರಲಾಗಿತ್ತು. ಬಿ.ಎಸ್.ವೈ. ಮಾತಿಗೆ ಸ್ಥಳೀಯ ಮುಖಂಡರೂ ಕೂಡ ಮನ್ನಣೆ ನೀಡುತ್ತಿರಲಿಲ್ಲ ಎಂಬ ಮಾತು ಕೂಡ ಕೇಳಿಬಂದಿತ್ತು.