ಸರ್ಕಾರಿ ಶಾಲೆಗಳು ಸೋತಿರುವುದೆಲ್ಲಿ?
ಎಲ್ಲರಿಗೂ ಸರ್ಕಾರಿ ನೌಕರಿ ಬೇಕು. ಆದರೆ ಸರ್ಕಾರಿ ಶಾಲೆಯಲ್ಲಿ ಕಲಿಯುವುದು ಮಾತ್ರ ಬೇಡ ಎನ್ನುವ ಮನಃಸ್ಥಿತಿ ಇದೆ. ಇದಕ್ಕೆ ಮುಖ್ಯ ಕಾರಣ ಉತ್ತಮ ಗುಣಮಟ್ಟದ ಶಿಕ್ಷಣ ಅಲ್ಲಿ ದೊರೆಯುತ್ತಿಲ್ಲ ಎನ್ನುವುದು. ಈ ರೀತಿ ಶಿಕ್ಷಣ ದೊರೆಯದೇ ಇರಲು ಕಾರಣರು ಯಾರು, ಸಾರ್ವಜನಿಕರೋ ಅಥವಾ ಸರ್ಕಾರವೋ, ಶಿಕ್ಷಕರೋ ಎನ್ನುವುದನ್ನು ನಾವು ಪತ್ತೆಮಾಡದೆ ಸುಮ್ಮನಿದ್ದೇವೆ. ರೋಗಕ್ಕೆ ಮದ್ದು ಕಂಡುಹಿಡಿಯದಿದ್ದರೆ ಆ ರೋಗ ವ್ಯಾಪಿಸುತ್ತದೆ. ಇಲ್ಲಿಯೂ ಸಹ ಗುಣಾತ್ಮಕ ಶಿಕ್ಷಣಕ್ಕ್ಕೆ ಏನು ವ್ಯವಸ್ಥೆ ಬೇಕೋ ಅದನ್ನು ಕೊಡುವ ಕೆಲಸವನ್ನು ಮಾಡಬೇಕು. ಇಲ್ಲಿ ಎಲ್ಲವನ್ನೂ ಸರ್ಕಾರ ಮಾಡಲಿ ಎಂದು ಪಾಲಕರು ಕೈಕಟ್ಟಿ ಕುಳಿತುಕೊಳ್ಳಬಾರದು. ಸಾರ್ವಜನಿಕ ಸಹಭಾಗಿತ್ವ, ಸಾಮುದಾಯಿಕ ಪಾಲುದಾರಿಕೆಯಿಂದ ಏನನ್ನಾದರೂ ಸಾಧಿಸಬಹುದೆನ್ನುವ ಮಾತಿದೆ. ಇದನ್ನು ಕೆಲವು ಶಾಲೆಗಳು ಸಾಧಿಸಿ ತೋರಿಸಿ ಮಾದರಿಯಾಗಿ ನಿಂತಿವೆ. ಉಳಿದ ಶಾಲೆಗಳೂ ಕೂಡ ಆ ಸಾಲಿಗೆ ಸೇರಬೇಕಿದೆ.
ರಾಜ್ಯದಲ್ಲಿ ಉತ್ತಮ ಗುಣಾತ್ಮಕ ಶಿಕ್ಷಣ ಕೊಡುವಲ್ಲಿ ಸರ್ಕಾರಿ ಶಾಲೆಗಳು ಸಂಪೂರ್ಣ ಸೋತಿವೆ ಎನ್ನುವ ಮಾತಿನಲ್ಲಿ ಸ್ವಲ್ಪವೂ ಸುಳ್ಳಿಲ್ಲ. ಸಮರ್ಥ ಶಿಕ್ಷಕರಿದ್ದರೂ, ಬಹುತೇಕ ಶಾಲೆಗಳಲ್ಲಿ ಮೂಲಸೌಕರ್ಯವಿದ್ದರೂ, ಮಕ್ಕಳ ಸಂಖ್ಯೆ ಗಣನೀಯ ಕುಸಿತ ಕಾಣುತ್ತಿದೆ. ಎಲ್ಲಿಯವರೆಗೆ ನಮ್ಮ ಶಾಲೆಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಭರವಸೆ ಕೊಡುವುದಿಲ್ಲವೋ ಅಲ್ಲಿಯವರೆಗೆ ಪಾಲಕರು ಈ ಶಾಲೆಗೆ ಮಕ್ಕಳನ್ನು ಕಳುಹಿಸುವುದಿಲ್ಲ. ಜೊತೆಗೆ ಖಾಸಗಿ ಶಾಲೆಗಳ ದರ್ಬಾರು ಹೆಚ್ಚುತ್ತದೆ.
ಖಾಸಗಿ ಶಾಲೆಗಳತ್ತ ಗಮನ ಹರಿಯಲು ಮುಖ್ಯ ಕಾರಣ ಇದೇ ಆಗಿದೆ. ಸರ್ಕಾರ ಎಲ್ಲಾ ಸೌಕರ್ಯವನ್ನು ಕಲ್ಪಿಸಿದರೂ ಅದು ಶಾಲೆಗಳಿಗೆ ತಲುಪುತ್ತಿಲ್ಲ. ಮಲೆನಾಡಿನ ಶಾಲೆಗಳ ದುಃಸ್ಥಿತಿಯನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಬೀಳಲು ಸಿದ್ಧವಾಗಿರುವ 50 ವರ್ಷಕ್ಕೂ ಹೆಚ್ಚಿನ ಕಟ್ಟಡಗಳು, ಆವರಣ ಗೋಡೆ ಮತ್ತು ಗೇಟು ಇಲ್ಲದ ಶಾಲೆಗಳೇ ಹೆಚ್ಚಿವೆ. ಅದರಲ್ಲೂ ಗ್ರಾಮಾಂತರ ಶಾಲೆಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಸಮರ್ಥ ಎಂದು ಕಂಡುಬಂದ ಶಿಕ್ಷಕರನ್ನೇ ಸರ್ಕಾರ ನೇಮಿಸಿಕೊಳ್ಳುತ್ತಿದೆ. ಆದರೆ ಈ ಶಿಕ್ಷಕರು ಮಕ್ಕಳನ್ನು ಸವಾಂಗೀಣವಾಗಿ ತಯಾರು ಮಾಡುವಲ್ಲಿ ಸೋತಿದ್ದಾರೆ. ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿಯುತ್ತಿದೆ.
ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ನಾವೇಕೆ ಸೋತಿದ್ದೇವೆ ಎನ್ನುವುದನ್ನು ಅವಲೋಕಿಸಿದಾಗ, ಕೆಲವು ಪ್ರಮುಖ ಅಂಶಗಳು ಕಂಡುಬರುತ್ತವೆ. ಕರ್ನಾಟಕ ಸ್ಕೂಲ್ ಕ್ವಾಲಿಟಿ ಅಸೆಸ್‌ಮೆಂಟ್ ಮತ್ತು ಅಕ್ರೆಡೇಶನ್ ಕಮಿಟಿಯು ಈ ಬಗ್ಗೆ ವರದಿ ಸಿದ್ಧಪಡಿಸಿದೆ. ಅದರಲ್ಲಿ ಕಲಿಕಾ ಗುಣಮಟ್ಟ , ಮೂಲಸೌಕರ್ಯ, ಶಾಲಾ ವಾತಾವರಣ, ಕ್ರಿಯಾಶೀಲ ಚಟುವಟಿಕೆ ಮತ್ತು ನಾಯಕತ್ವ ಹಾಗೂ ಸಾಮುದಾಯಿಕ ಪಾಲುಗೊಳ್ಳುವಿಕೆಯಲ್ಲಿ ಸಂಪೂರ್ಣ ವಿಫಲರಾಗಿರುವುದಾಗಿ ಹೇಳಿದೆ. ಈ ನಿಟ್ಟನಿಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಉತ್ತಮ ಶಿಕ್ಷಣ ಕೊಟ್ಟು ಅವರನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಕೊಡಲಾಗುತ್ತಿದೆ, ಜೊತೆಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ, ಬಿಸಿಯೂಟ ಇದೆ. ಶಿಕ್ಷಕರಿಗೂ ಉತ್ತಮ ಸಂಬಳವಿದೆ, ಸಕಲ ಸೌಲಭ್ಯವಿದೆ. ಆದರೂ ಮಕ್ಕಳು ಬರುತ್ತಿಲ್ಲ ಎಂದರೆ ಅಲ್ಲಿ ಸರಿಯಾದ ಶಿಕ್ಷಣ ಲಭ್ಯವಿಲ್ಲ ಎಂದೇ ಅರ್ಥ.
ಮೊದಲನೆಯದಾಗಿ, ಪಾಲಕರಲ್ಲಿ ಶಾಲೆಯ ಬಗ್ಗೆ ಅಭಿಮಾನ ಮೂಡಬೇಕಿದೆ. ನನ್ನೂರಿನ ಶಾಲೆ ಎಂದರೆ ನಮ್ಮ ಶಾಲೆ ಎಂಬ ಭಾವನೆ ಬರಬೇಕು. ಊರಿನಲ್ಲಿ ಖಾಸಗಿ ಶಾಲೆ ಇದ್ದರೂ ಅಲ್ಲಿಗೆ ಮಕ್ಕಳನ್ನು ಕಳುಹಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಓದುವವರೆಲ್ಲ ದಡ್ಡರು ಮತ್ತು ಬಡವರ ಮಕ್ಕಳು ಎಂಬ ಮನೋಭಾವ ತೊಲಗಬೇಕು. ಶಾಲೆಗೆ ಬೇಕಾದ ಮೂಲಸೌಕರ್ಯಗಳ ಕೊರತೆಯನ್ನು ಶಾಲಾ ಆಡಳಿತ ಮಂಡಳಿ, ಹಳೆಯ ವಿದ್ಯಾರ್ಥಿ ಸಂಘ ಮತ್ತು ಪಾಲಕರು, ಶಿಕ್ಷಕರೊಂದಿಗೆ ಸೇರಿ ಕಲ್ಪಿಸುವ ಕೆಲಸವನ್ನು ಮಾಡಬೇಕು. ಸಣ್ಣ ಸಮಸ್ಯೆಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದು, ಶಿಕ್ಷಣ ಮತ್ತಿತರ ಅಧಿಕಾರಿಗಳ ಕಚೇರಿಗೆ ಅಲೆದಾಡುವುದನ್ನು ಬಿಟ್ಟು ಸಮಸ್ಯೆ ಪರಿಹರಿಸುವ ಮನಸ್ಸು ಮಾಡಿದರೆ ಆ ಶಾಲೆಯನ್ನು ಮಾದರಿಯನ್ನಾಗಿ ಮಾಡಲು ಸಾಧ್ಯವಿದೆ.
ಎರಡನೆಯದಾಗಿ, ಶಿಕ್ಷಕರಿಗೂ ತಮ್ಮ ಜವಾಬ್ದಾರಿ ಏನೆನ್ನುವದುರ ಅರಿವು ಅಗತ್ಯ. ಒಬ್ಬ ವಿದ್ಯಾರ್ಥಿಯನ್ನು ದೇಶದ ಸತ್ಪ್ರಜೆಯನ್ನಾಗಿ ಹೇಗೆ ರೂಪಿಸಬೇಕು. ಇಂದಿನ ಮಕ್ಕಳಿಗೆ ಯಾವ ರೀತಿಯ ಶಿಕ್ಷಣನ ಬೇಕು. ಕಲಿಯುವವನ ಮನಃಸ್ಥಿತಿ ಎಂತಹುದು ಎನ್ನುವದುನ್ನು ಅರಿತು ಕೇವಲ ಪಠ್ಯಕ್ರಮಕ್ಕೆ ಮಾತ್ರ ಜೋತುಬೀಳದೇ ಅವರನ್ನು ಅದರಾಚೆಯೂ ಕರೆತರುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಪಠ್ಯದ ಹುಳುವಾಗಿ ಬಿಡುವ ಅಪಾಯವಿದೆ. ಆಧುನಿಕ ಜಗತ್ತಿನ ಹೊಸ ವಿಚಾರಗಳನ್ನು ಅವರಲ್ಲಿ ತುಂಬುವ ಕೆಲಸ ನಡೆಯಬೇಕು. ಇಂದಿನ ಬಹುತೇಕ ಶಿಕ್ಷಕರಿಗೆ ಇದರ ಬಗ್ಗೆ ಪರಿಕಲ್ಪನೆ ಇಲ್ಲ. ಪಠ್ಯದ ಹೊರತಾಗಿ ಏನನ್ನೂ ಕಲಿಸದ ಶಾಲೆಗಳೇ ಹೆಚ್ಚು. ಮಕ್ಕಳಿಗೆ ಸಾಮಾನ್ಯ ಜ್ಞಾನ, ಕ್ರೀಡೆ, ಕಲೆ, ಸಾಹಿತ್ಯ, ಸಂಸಕ್ರತಿಯಲ್ಲಿ ಆಸಕ್ತಿ ಹುಟ್ಟಿಸುವ ಕೆಲಸವಾಗಬೇಕು. ಮಕ್ಕಳಿಗೆ ಯಾವ ವಿಷಯದ ಬಗ್ಗೆ ಆಸಕ್ತ್ತಿ ಇದೆ ಎನ್ನುವದನ್ನರಿತು ಅದನ್ನು ಕೊಟ್ಟು ನೀರೆರೆಯುವ ಕೆಲಸ ಮಾಡಬೇಕು. ವಿವಿಧ ಸ್ಪರ್ಧೆಗಳಿಗೆ ಮಕ್ಕಳನ್ನು ಕರೆದೊಯ್ಯಬೇಕು. ನಾಲ್ಕಾರು ಮಕ್ಕಳು ಪ್ರತಿಭಾವಂತರಿದ್ದರೂ ಅವರಿಂದ ಇತರೇ ಮಕ್ಕಳು ಪ್ರೇರಿತರಾಗಿ ಹೆಚ್ಚಿನ ಸಾಧನೆ ಸಾಧ್ಯವಾಗಬಹುದು.
ಗ್ರಾಮಾಂತರ ಪ್ರದೇಶದ ಮಕ್ಕಳು ಬಡವರಿರಬಹುದು, ಆದರೆ ದಡ್ಡರಲ್ಲ, ಅವರಲ್ಲಿರುವಷ್ಟು ಪ್ರತಿಭೆ, ಕ್ರಿಯಾಶಿಲತೆ ನಗರ ಪ್ರದೇಶದವರಲ್ಲಿ ಇಲ್ಲ ಎಂದು ಎದೆ ತಟ್ಟಿ ಹೇಳಬಹುದು. ಪಾಲಕರೂ ಕೂಡ ತಮ್ಮ ಮಕ್ಕಳ ಕಲಿಕಾ ಆಸಕ್ತಿಯನ್ನು ಗುರುತಿಸಿ ಅದಕ್ಕೆ ಶಾಲೆಯಿಂದ ಏನಾಗಬೇಕು ಎನ್ನುವುದನ್ನು ತಿಳಿದು ಶಿಕ್ಷಕರಿಗೆ ಮಾಹಿತಿ ನೀಡಿದರೆ ಅದು ಸಿಗುವಂತೆ ಮಾಡಬಹುದು. ಶಾಲೆಗೆ ಮೂಲಸೌಕರ್ಯ ಇಲ್ಲವೆನ್ನುತ್ತಾ ಅದಕ್ಕೆ ಅರ್ಜಿ ಬರೆಯುವ ಕೆಲಸ ಮಾಡುತ್ತಾ ಶಿಕ್ಷಕರು ಕುಳಿತುಕೊಳ್ಳಬಾರದು. ಅದನ್ನು ಗ್ರಾಮಸ್ಥರ ನೆರವಿನಿಂದ ಪಡೆದು ಮಾದರಿ ಶಾಲೆೆಯನ್ನಾಗಿ ಮಾರ್ಪಡಿಸಬಹುದು. ಶಿವಮೊಗ್ಗ ಜಿಲ್ಲೆಯಲ್ಲೇ ಇಂತಹ ಹತ್ತಾರು ಮಾದರಿ ಶಾಲೆಗಳಿವೆ. ಅವುಗಳನ್ನು ಒಮ್ಮೆ ನೋಡಿಕೊಂಡು ಬಂದು ಆ ಮಾರ್ಗದಲ್ಲಿ ಸಾಗುವಂತಾಗಬೇಕು.
ಇಲ್ಲ ಎನ್ನುವ ಸಮಸ್ಯೆಗಳ ಪಟ್ಟಿ ಮಾಡುವುದೇ ಶಿಕ್ಷಕರ ಕೆಲಸವಾಗಬಾರದು. ಮಕ್ಕಳಲ್ಲಿ ಹೊಸ ವೈಜ್ಞಾನಿಕ ಚಿಂತನೆ, ಸಾಹಿತ್ಯಿಕ, ಸಾಂಸ್ಕೃತಿಕ, ಮನೋಭಾವ ಬೆಳೆಯುವಂತೆ ಮಾಡಬೇಕು. ಈ ರೀತಿ ಮಹತ್ತರ ಸಮಸ್ಯೆ ಹೊರತಾಗಿ ಉಳಿದೆಲ್ಲವನ್ನೂ ಪರಿಹರಿಸುವ ಚಾಣಾಕ್ಷತನವನ್ನು ಶಿಕ್ಷಕರು ಅರಿತರೆ ಆ ಶಾಲೆಗೆ ಹೆಚ್ಚೆಚ್ಚು ಮಕ್ಕಳು ತನ್ನಿಂತಾನೇ ಬರುತ್ತಾರೆ. ಇಂತಹ ಶಾಲೆಗಳು ಹೆಚ್ಚಿದಲ್ಲಿ ಯಾವ ಖಾಸಗಿ ಶಾಲೆಗೂ ಮಕ್ಕಳು ತೆರಳದ ಸ್ಥಿತಿ ನಿರ್ಮಾಣವಾಗುತ್ತದೆ. ಕಡಿಮೆ ಮಕ್ಕಳಿದ್ದರೆ ಯಾವ ಖಾಸಗಿ ಶಾಲೆ ನಡೆಸಲು ಸಾಧ್ಯವಿದೆ? ಇಂತಹ ಸೂಕ್ಷ್ಮ ವಿಚಾರವನ್ನು ಶಿಕ್ಷಕರು, ಪಾಲಕರು ಅರಿಯಬೇಕು. ಶಿಕ್ಷಕರೂ ಸಹ ಆಧುನಿಕತೆಗೆ ತೆರೆದುಕೊಂಡಿರುವವರಾಗಿರಬೇಕು. ಸತತ ಅಧ್ಯಯನ, ಕ್ರಿಯಾಶೀಲತೆಯಿಂದ ಕೂಡಿರುವವರಾಗಿರಬೇಕು. ಹೊಸತನ ಹುಡುಕುವವರಾಗಬೇಕು. ವಿದ್ಯಾರ್ಥಿಗಳಲ್ಲಿ ಜ್ಞಾನದ ಬುತ್ತಿಯನ್ನು ತುಂಬುವವರಾಗಬೇಕು.
ಸರ್ಕಾರ ಶಾಲೆಗಳ ಅಭಿವೃದ್ಧಿ, ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಡುವ ಕೆಲಸವಾಗಬೇಕು. ಇವಿದ್ದರೆ ಮಾತ್ರ ಹೆಚ್ಚು ಮಕ್ಕಳು ಸರ್ಕಾರಿ ಶಾಲೆ ಸೇರಲು ಸಾಧ್ಯ. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಡಾ. ಲೋಕೇಶ್ ಹೇಳಿದಂತೆ, ಮುಂದೊಂದು ದಿನ ಸರ್ಕಾರಿ ಶಾಲೆಗಳು ಕೇವಲ ಚುನಾವಣಾ ಬೂತ್ ಕೆಲಸಕ್ಕೆ ಮಾತ್ರ ಸೀಮಿತವಾಗಬಹುದು. ಖಾಸಗಿ ಶಾಲೆಗಳ ಮಕ್ಕಳ ರೀತಿಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಕಲಿಕೆಯಲ್ಲಿ ಪ್ರಗತಿ ಸಾಧಿಸುವಂತಾಗಬೇಕು ಸರ್ಕಾರಿ ಶಾಲೆಗಳಿಗೆ ಬರುವವರು ಬಹುತೇಕ ಬಡ ಮಕ್ಕಳು. ಆದ್ದರಿಂದ ಅವರನ್ನು ಈ ಶಾಲೆ ಆಕರ್ಷಿಸುವಂತಾಗಬೇಕು. ಈ ಮಕ್ಕಳ ಕಲಿಕೆಯ ಮಟ್ಟ ಹೆಚ್ಚಾಗಬೇಕು. ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚು ಗಮನಹರಿಸಬೇಕು.
ಇದರೊಟ್ಟಿಗೆ ಶಿಕ್ಷಕರಿಗೂ ಸಹ ಇತರೇ ಕೆಲಸದ ಭಾರವನ್ನು ತಗ್ಗಿಸುವ ಕೆಲಸ ನಡೆಯಬೇಕಿದೆ. ಬೆಳಿಗ್ಗೆ ಮನೆಯಿಂದ ಶಾಲೆಗೆ ಬರುವಾಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದಲೇ ಶಾಲೆಗೆ ಸರ್ಕಾರಿ ಶಾಲೆಯ ಶಿಕ್ಷಕರು ಬರುತ್ತಾರೆ. ಆದರೆ ಶಾಲೆಗೆ ಬರುತ್ತಿದ್ದಂತೆ ಹತ್ತು ಹಲವು ಕಾರ್ಯಭಾರದಿಂದ ಕುಗ್ಗಿ ಹೋಗುತ್ತಿದ್ದಾರೆ. ಇದು ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ.
ಇನ್ನು ಜಿಲ್ಲೆಯ ವಿಚಾರ ಗಮನಿಸುವುದಾದರೆ, ಈ ವರ್ಷ ಜಿಲ್ಲೆಯಲ್ಲಿ 8500 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳಿರುವ, ಶೇ. 80ರಷ್ಟು ವಿದ್ಯಾವಂತರೇ ಇರುವ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಹೋರಾಟದ ನೆಲೆವೀಡಾದ ಶಿವಮೊಗ್ಗ ಜಿಲ್ಲೆಯಲ್ಲಿ ಈ ಪರಿಸ್ಥಿತಿ ಬಂದೊದಗಿರುವುದು ಆತಂಕದ ವಿಚಾರವಾಗಿದೆ. ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯವಿಲ್ಲ, ಅಥವಾ ಹತ್ತಿರದಲ್ಲಿ ಇಲ್ಲ ಎನ್ನುವ ಕಾರಣಕ್ಕೆ ತ್ಯಜಿಸಿದರೆ, ಖಾಸಗಿ ಶಾಲೆಗೆ ಶುಲ್ಕ ಕಟ್ಟಲು ಅಷ್ಟೊಂದು ಹಣವಿಲ್ಲ ಎನ್ನುವ ಮಾತೂ ಕೂಡ ಕೇಳಿಬರುತ್ತಿದೆ. ಹಾಗಾದರೆ ಇಂತಹ ಸಮಸ್ಯೆಯನ್ನು ಯಾರು, ಹೇಗೆ ಪರಿಹರಿಸಬೇಕೆನ್ನುವ ಪ್ರಶ್ನೆಗೆ ಉತ್ತರವಿಲ್ಲ. ಶಿಕ್ಷಣಾಧಿಕಾರಿಗಳು ಇದನ್ನು ಪರಿಹರಿಸುವ ಗೋಜಿಗೆ ಹೋಗುತ್ತಿಲ್ಲ. ಬ್ಲಾಕ್ ಮತ್ತು ಕ್ಲಸ್ಟರ್ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಸತತವಾಗಿ ಭೇಟಿ ನೀಡಿ ಅವುಗಳ ಗುಣಮಟ್ಟ, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಾಜರಾತಿ, ಸಿಗುವ ಸೌಲಭ್ಯ, ಇನ್ನಿತರ ಕುಂದುಕೊರತೆಗಳ ಬಗ್ಗೆ ನಿಗಾ ಇಟ್ಟಲ್ಲಿ ಗ್ರಾಮಾಂತರ ಶಾಲೆಗಳನ್ನು ಮುಂದೆ ತರಲು ಸಾಧ್ಯವಿದೆ.
ದತ್ತು ಯೋಜನೆಯಡಿ ಶಾಲಾಭಿವೃದ್ಧಿಗೆ ಅವಕಾಶವಿದೆ. ಇದರ ಲಾಭ ಸಿಗುವಂತೆ ಮಾಡಬೇಕು. ಅಧಿಕಾರಿಗಳು ವಿವಿಧ ಸಂಘ- ಸಂಸ್ಥೆ ಅಥವಾ ಖಾಸಗಿ ವ್ಯಕ್ತಿಗಳಿಗೆ ದತ್ತು ನೀಡು ಮೂಲಕ ಶಾಲಾಭಿವೃದ್ಧಿಗೆ ಮುಂದಾಗಬೇಕು. ಮೂರು ವರ್ಷಗಳ ಹಿಂದೆ ಜಿಪಂ ವತಿಯಿಂದ ಸುಮಾರು ಹತ್ತಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ದತ್ತು ಕೊಡಲಾಗಿದೆ. ಅವು ಈಗ ಅಭಿವೃಧಿ ಹೊಂದುತ್ತಿವೆ. ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ. ಕಲಿಕೆಯ ಗುಣಮಟ್ಟವೂ ಹೆಚ್ಚುತ್ತಿದೆ.
ಇಂತಹ ಅನೇಕ ಪರಿಹಾರಗಳ ಮೂಲಕ ಕುಸಿದುಬಿದ್ದಿರುವ ಪ್ರಾಥಮಿಕ ಶಾಲೆಗಳ ಗುಣಮಟ್ಟವನ್ನು ಏರಿಸಬಹುದಾಗಿದೆ. ಇದಕ್ಕೆ ಸಾರ್ವಜನಿಕರಲ್ಲಿ ಇಚ್ಛಾಶಕ್ತಿ ಬೇಕಿದೆ. ಸರ್ಕಾರವನ್ನು ಪ್ರತಿಯೊಂದಕ್ಕೂ ಟೀಕಿಸುವ ಅಥವಾ ಬೇಡುವ ಮನೋಭಾವ ಬದಲಾಗಬೇಕು. ನಮಗೆ ಕರ್ತವ್ಯ ಮತ್ತು ಜವಾಬ್ದಾರಿಯ ಅರಿವಿದ್ದರೆ ಗುಣಾಣಾತ್ಮಕ ಶಿಕ್ಷಣ ಜಾರಿರುವಲ್ಲಿ ಮಹತ್ತರ ಯಶಸ್ಸನ್ನು ಕಾಣಬಹುದು.
.............................