Thursday, 30 June 2016

ನೆನೆಗುದಿಗೆ ಬಿದ್ದಿರುವ  ಯೋಜನೆಗಳಿಗೆ ಕಾಗೋಡು ಅವಧಿಯಲ್ಲಿ ಸಿಕ್ಕೀತೇ ಕಾಯಕಲ್ಪ?


 ಕಾಗೋಡು ತಿಮ್ಮಪ್ಪ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದಾರೆ. ಸಚಿವರಾದ ನಂತರ ನಾಳೆ ಪ್ರಥಮ ಬಾರಿಗೆ ಜಿಲ್ಲೆಗೆ ಬರಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಕೆಲವು ಪ್ರಮುಖ ಯೋಜನೆಗಳ ಬಗ್ಗೆ ನೆನಪು ಮಾಡಿಕೊಡುವ ಒಂದು ಯತ್ನ. ಕಾಗೋಡು ಜಿಲ್ಲೆಯವರೇ ಆಗಿರುವುದರಿಂದ ಮತ್ತು ಈ ಹಿಂದೆಯೂ ಉಸ್ತುವಾರಿ ಸಚಿವರಾಗಿರುವುದರಿಂದ ಜಿಲ್ಲೆಯ ಎಲ್ಲ ಸಮಸ್ಯೆಗಳ ಬಗ್ಗೆ ಅರಿವಿದೆ.  ಕೆಲವು ಯೋಜನೆಗಳು ಅನುಷ್ಠಾನಗೊಂಡು ಅರ್ಧಕ್ಕೆ ಸ್ಥಗಿತಗೊಂಡಿದ್ದರೆ, ಮತ್ತೆ ಕೆಲವು ಘೋಷಿತ ಯೋಜನೆಗಳು ಇಲ್ಲಿಯವರೆಗೂ ಕಾರ್ಯಗತವೇ ಗೊಂಡಿಲ್ಲ. ನಗರಕ್ಕೆ ಸಂಬಂಧಿಸಿದ ಮಹತ್ವದ ಯೋಜನೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಆಸಕ್ತಿ ವಹಿಸಬೇಕು. ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಕಲೆ ಹಾಕಬೇಕು. ಮುಖ್ಯಮಂತ್ರಿಗಳು ಸೇರಿದಂತೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ, ತಮ್ಮ ಅವಧಿಯಲ್ಲಿ ಈ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂಬುವುದು ಜಿಲ್ಲೆಯ ನಾಗರಿಕರ ಆಗ್ರಹ.


  ಕೇಂದ್ರ ಸರ್ಕಾರದ ಪ್ರತಿಷ್ಠಿತ ’ಸ್ಮಾರ್ಟ್ ಸಿಟಿ’ ಹಾಗೂ ’ಅಮೃತ್’ ಯೋಜನೆಗಳಡಿ ಸ್ಥಾನ ಪಡೆದುಕೊಳ್ಳುವ ಮೂಲಕ ಶಿವಮೊಗ್ಗ ನಗರ ಇಡೀ ದೇಶದ ಗಮನ ಸೆಳೆದಿದೆ. ಆದರೆ ನಗರಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ, ಜನೋಪಯೋಗಿ ಯೋಜನೆಗಳು ನಾನಾ ಕಾರಣಗಳಿಂದ ನೆನೆಗುದಿಗೆ ಬಿದ್ದಿವೆ. ಇದು ನಗರದ ಬೆಳವಣಿಗೆ ಹಾಗೂ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿದ್ದು, ನೂತನ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಈ ಯೋಜನೆಗಳ ಅನುಷ್ಠಾನಕ್ಕೆ ಚಿತ್ತ ಹರಿಸಬೇಕಾಗಿದೆ.
ವಿಮಾನ ನಿಲ್ದಾಣ:
ಹೊರವಲಯ ಸೋಗಾನೆ ಬಳಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯು ಅಕ್ಷರಶಃ ಹಳ್ಳ ಹಿಡಿದಿದೆ ಎಂದರೇ ತಪ್ಪಾಗಲಾರದು. ಈಗಾಗಲೇ ಕಾಮಗಾರಿಗೆ ನೂರಾರು ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರಸ್ತುತ ತಾಂತ್ರಿಕ ಕಾರಣ, ಸರ್ಕಾರದ ನಿರ್ಲಕ್ಷ್ಯದಿಂದ ಕಾಮಗಾರಿ ಸ್ಥಗಿತಗೊಂಡಿದೆ. ಪ್ರಸ್ತುತ ನಡೆಸಲಾಗಿರುವ ಕೆಲಸ ಕೂಡ ಹಾಳಾಗುತ್ತಿದೆ. ಸದ್ಯದ ಸ್ಥಿತಿಗತಿ ಗಮನಿಸಿದರೆ ಯೋಜನೆ ಟೇಕಾಫ್ ಆಗುವ ಯಾವುದೇ ಲಕ್ಷಣಗಳು ಗೋಚರವಾಗುತ್ತಿಲ್ಲವಾಗಿದೆ.
ಈ ಹಿಂದೆ ಕೇಂದ್ರ ವಿಮಾನಯಾನ ಪ್ರಾಧಿಕಾರಕ್ಕೆ ಕಾಮಗಾರಿ ಹಸ್ತಾಂತರಿಸುವ ಚರ್ಚೆಯಿತ್ತು. ಕೇಂದ್ರ ವಿಮಾನಯಾನ ರಾಜ್ಯ ಸಚಿವರು ಕೂಡ ಶಿವಮೊಗ್ಗಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದರು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸುಪರ್ದಿಗೆವಹಿಸಿದರೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದರು. ಆದರೆ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಇಲ್ಲಿಯವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮತ್ತೊಂದೆಡೆ ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳುವ ಚಿಂತನೆ ಕೂಡ ಸರ್ಕಾರ ನಡೆಸುತ್ತಿದೆ.
ಹೊರವರ್ತುಲ ರಸ್ತೆ:
 ನಗರದ ಭವಿಷ್ಯದ ಬೆಳವಣಿಗೆ, ವಾಹನ ಸಂಚಾರ ಗಮನದಲ್ಲಿಟ್ಟುಕೊಂಡು ಗುಜರಾತ್ ರಾಜ್ಯದ ಅಹಮದಬಾದ್ ಮಾದರಿಯಲ್ಲಿ 200 ಅಡಿ ಹೊರವರ್ತುಲ ರಸ್ತೆ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ 400 ಕೋಟಿ ರೂ. ಅನುದಾನ ಕೂಡ ಮೀಸಲಿರಿಸಲಾಗಿತ್ತು. ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ರಸ್ತೆ ಹಾದು ಹೋಗುವ ಸ್ಥಳಗಳ ಸರ್ವೇ ಪೂರ್ಣಗೊಳಿಸಿದೆ. ನಗರಾಭಿವೃದ್ದಿ ಪ್ರಾಧಿಕಾರದ ಮಹಾಯೋಜನೆಯಲ್ಲಿಯೂ ಅನುಮೋದಿಸಲಾಗಿದೆ.
ಆದರೆ ಇಲ್ಲಿಯವರೆಗೂ ಹೊರವರ್ತುಲ ರಸ್ತೆ ನಿರ್ಮಾಣ ಯೋಜನೆ ಕಾರ್ಯಗತಗೊಂಡಿಲ್ಲ. ಪ್ರಸ್ತುತ ಈ ಯೋಜನೆಯ ಅಂದಾಜು ವೆಚ್ಚ 1000 ಕೋಟಿ ರೂ.ಗಳ ಗಡಿ ದಾಟುವುದರಿಂದ ಸರ್ಕಾರ ಈ ಯೋಜನೆಯ ಅನುಷ್ಠಾನದತ್ತ ಗಮನಹರಿಸುವ ಗೋಜಿಗೆ ಹೋಗುತ್ತಿಲ್ಲ. ಮತ್ತೊಂದೆಡೆ ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪರವರು ಈ ಯೋಜನೆಯನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಅನುಷ್ಠಾನಗೊಳಿಸುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೂ ಈ ಪ್ರಕ್ರಿಯೆಯೇ ಆರಂಭವಾಗಿಲ್ಲ.
ಸರ್ಕಾರಿ ಸಿಟಿ ಬಸ್:
ಈ ಹಿಂದಿನ ಕೇಂದ್ರ ಯುಪಿಎ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ ನಗರದಲ್ಲಿ 65 ಸರ್ಕಾರಿ ಸಿಟಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಸ್‌ಗಳ ಖರೀದಿಗೆ, ಪ್ರತ್ಯೇಕ ಬಸ್ ಟರ್ಮಿನಲ್, ಡಿಪೋ, ವರ್ಕ್‌ಶಾಪ್‌ಗೆ ಅಗತ್ಯವಾದ ಅನುದಾನ ಕೂಡ ಬಿಡುಗಡೆ ಮಾಡಿದೆ. ಆದರೆ ಜಿಲ್ಲಾಡಳಿತ ಹಾಗೂ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ನಿರ್ಲಕ್ಷ್ಯದಿಂದ ಇಲ್ಲಿಯವರೆಗೂ ನಗರದಲ್ಲಿ ಸರ್ಕಾರಿ ಸಿಟಿ ಬಸ್‌ಗಳ ಸಂಚಾರ ಆರಂಭವಾಗಿಲ್ಲ.
ಈಗಾಗಲೇ ಈ ಯೋಜನೆಯಡಿ ಭದ್ರಾವತಿಯಲ್ಲಿ ಬಸ್ ಟರ್ಮಿನಲ್, ಡಿಪೋ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಆದರೆ ಶಿವಮೊಗ್ಗ ನಗರದಲ್ಲಿ ಡಿಪೋ ನಿರ್ಮಾಣಕ್ಕೆ ಜಿಲ್ಲಾಡಳಿತ ಗುರುತು ಮಾಡಿರುವ ಜಾಗವನ್ನು ಇಲ್ಲಿಯವರೆಗೂ ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ತನ್ನ ಸುಪರ್ದಿಗೆ ತೆಗೆದುಕೊಂಡಿಲ್ಲ. ಪ್ರತ್ಯೇಕ ಬಸ್ ಟರ್ಮಿನಲ್, ಡಿಪೋ ಕಟ್ಟಡ ನಿರ್ಮಾಣ ಕಾಮಗಾರಿ ಇಲ್ಲಿಯವರೆಗೂ ಆರಂಭವಾಗಿಲ್ಲ. ಲಕ್ಷಾಂತರ ನಾಗರಿಕರಿಗೆ ಅನುಕೂಲವಾಗುವ ಯೋಜನೆ ನೆನೆಗುದಿ ಬೀಳುವ ಹಂತದಲ್ಲಿದೆ.
ರಸ್ತೆ ಅಗಲೀಕರಣ:
ದಿನದಿಂದ ದಿನಕ್ಕೆ ನಗರದಲ್ಲಿ ಜನ-ವಾಹನ ಸಂಚಾರ ಹೆಚ್ಚಾಗುತ್ತಿದೆ. ಪ್ರಮುಖ ರಸ್ತೆಗಳ ಅಗಲೀಕರಣ, ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆಸುವುದು ತುರ್ತು ಅಗತ್ಯವಾಗಿದೆ. ಆದರೆ ಅನುದಾನದ ಕೊರತೆಯಿಂದ ರಸ್ತೆಗಳ ಅಗಲೀಕರಣ-ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಕೆಲ ರಸ್ತೆಗಳ ಅಗಲೀಕರಣಕ್ಕೆ ಸೂಕ್ತ ಅನುದಾನ ಕೋರಿ ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಮಾಹಿತಿಯಿದ್ದು, ಸಂಬಂಧಿಸಿದ ಇಲಾಖಾ ಸಚಿವರು ಮಾತ್ರ ಇತ್ತ ಗಮನಹರಿಸಿಲ್ಲ.
  ಇನ್ನೂ ಎರಡು ಹೊಸ ಪೊಲೀಸ್ ಠಾಣೆಗಳ ಮಂಜೂರು, ಕೃಷಿ ವಿಶ್ವ ವಿದ್ಯಾಲಯ ಹಾಗೂ ಪಶು ವೈದ್ಯಕೀಯ ವಿದ್ಯಾಲಯಕ್ಕೆ ಅನುದಾನ, ರೈಲ್ವೆ ನಿಲ್ದಾಣದ ಬಳಿಯ ಹೊರವರ್ತುಲ ರಸ್ತೆ ವಿವಾದ ಪರಿಹಾರ, ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ ನಿರ್ಮಾಣ ಮತ್ತು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಪಾಲಿನೆ ಅನುದಾನ ದೊರಕಿಸಿಕೊಡುವುದು, ಆಶ್ರಯ ಯೋಜನೆಯಡಿ ನಿವೇಶನ ಕಲ್ಪಿಸುವುದು ಸೇರಿದಂತೆ ಹತ್ತು ಹಲವು ಮಹತ್ವದ ಯೋಜನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಿ ಪರಿಹಾರ ಕಲ್ಪಿಸಲಿದ್ದಾರೆಯೇ ಎಂಬುವುದನ್ನು  ಕಾದು ನೋಡಬೇಕಾಗಿದೆ. 

Tuesday, 28 June 2016


ಮೂರೂ ಪಕ್ಷಗಳಿಗೂ ಭಿನ್ನಮತದ ರೋಗ


ಜೆಡಿಎಸ್, ಕಾಂಗ್ರೆಸ್, ಬಿಜೆಪಿಗೆ ಮುಂಗಾರಿನಲ್ಲಿ ಬರುವ ಅಂಟುಜಾಢ್ಯ ತಗುಲಿದೆ. ಆ ಪಕ್ಷದ ಮುಖಂಡರನ್ನು ಅದು ಬಲಿತೆಗೆದುಕೊಳ್ಳಲು ಹೊಂಚು ಹಾಕಿರುವಂತೆ ಒಂದು ಹಂತದಲ್ಲಿ ಕಂಡುಬಂತಾದರೂ ಅದು ಸಾಧ್ಯವಾಗಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಈಗ ಈವೈರಸ್ ದಾಳಿ ಹಿಮ್ಮೆಟ್ಟಿದಂತೆ ಕಂಡುಬರುತ್ತಿದೆ. ಬಿಜೆಪಿಯಲ್ಲಿ ಜಾಢ್ಯವೆಂಬ ಸಣ್ಣ ಬಿರುಕು ಮಾತ್ರ ಕಂಡುಬಂದಿದೆ. 



  ರಾಜ್ಯದಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ಡೆಂಗ್ಯೂ ಜ್ವರ ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ. ಇದೇ ರೀತಿ ಭಿನ್ನಮತ ಎಂಬ ರೋಗವೂ ಮೂರು ಪ್ರಮುಖ ಪಕ್ಷಗಳಿಗೂ ತಗುಲಿದೆ. ಸದ್ಯ ರಾಜ್ಯದಲ್ಲಿ ಪ್ರಮುಖ ಸುದ್ದಿಯಲ್ಲಿರುವ ಈ ಭಿನ್ನಮತ ಎಂಬ ರೋಗ ತೊಲಗುವ ನಿರೀಕ್ಷೆ ಕಂಡುಬರುತ್ತಿಲ್ಲ. ಏಕೆಂದರೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಸಾಂಕ್ರಾಮಿಕವಾದಂತೆ ಕಂಡುಬರುತ್ತಿದೆ. ಜೆಡಿಎಸ್‌ನಲ್ಲಿ ಇದು ಉಲ್ಬಣಿಸಿ ವಿಕೋಪಕ್ಕೆ ಹೋಗಿ 8 ಶಾಸಕರನ್ನು ಅಮಾನತುಗೊಳಿಸಲಾಯಿತು. ಕಾಂಗ್ರೆಸ್‌ನಲ್ಲಿ ಕಳೆದ ವಾರದಿಂದ ಆರಂಭವಾಗಿದ್ದು, ಶಸ್ತ್ರಚಿಕಿತೆ ಇಲ್ಲದೆ ಗುಣಮುಖರನ್ನಾಗಿಸುವ ವೈದ್ಯರನ್ನು ಕಣಕ್ಕೆ ತರಲಾಗಿದೆ. ಇದರಿಂದ ಮತ್ತೆ ಚಿಗುರುವ ಲಕ್ಷಣ ಕಂಡುಬರುತ್ತಿಲ್ಲ. ಇನ್ನು ಬಿಜೆಪಿಯಲ್ಲಿ ಮೊನ್ನೆಯಷ್ಟೇ ಈ ರೋಗ ಲಕ್ಷಣ ಕಂಡುಬಂದಿದೆ. ಚಿಕ್ಕ ಪ್ರಮಾಣದಲ್ಲಿ ಕಂಡುಬಂದಿರುವುದರಿಂದ ಅದು ಅಲ್ಲಿಗೇ ಗುಣವಾಗುವುದೊ ಅಥವಾ ಉಲ್ಬಣಿಸುವುದೋ ಎನ್ನುವುದನ್ನು ಕಾದು ನೋಡಬೇಕಿದೆ.
ಜೆಡಿಎಸ್‌ನಲ್ಲಿ ವಿಧಾನಪರಿಷತ್ ಚುನಾವಣೆ, ರಾಜ್ಯಸಭಾ ಚುನಾವಣೆ ರೋಗ ಉಲ್ಬಣಿಸಲು ಕಾರಣವಾಯಿತು. ಅಡ್ಡಮತವನ್ನು ಹಾಕಿದವರು ದೇವೇಗೌಡ- ಕುಮಾರಸ್ವಾಮಿ ವಿರುದ್ದ ತೊಡೆತಟ್ಟಿ ಅಬ್ಬರಿಸಿದ್ದರು. ಮಾರನೆಯ ದಿನವೇ ಆ 8 ಶಾಸಕರನ್ನು ಅಮಾನತುಗೊಳಿಸಿ ಅದು ಸದ್ಯ ಗುಣವಾಗದಂತೆ ಮಾಡಿಕೊಂಡಿದ್ದಾರೆ. ಇದು ಹುಣ್ಣಾಗಿದೆ, ಆಗಾಗ ತುರಿಕೆಯಾಗುತ್ತ, ಅತ್ತ ಗುಣವಾಗದೆ, ಇತ್ತ ಹೆಚ್ಚಾಗದೆ ಕಾಡತೊಡಗಿದೆ.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಜೂನ್ 19ರಂದು ಸಚಿವ ಸಂಪುಟ ವಿಸ್ತರಿಸಿದಾಕ್ಷಣದಿಂದ ಈ ರೋಗ ಅಂಟಿಕೊಂಡಿದೆ. ಕಳೆದ ವಾರವಿಡೀ ಸುದ್ದಿಮಾಡಿದ ರೋಗ ಕಳೆದ 2-3 ದಿನದಿಂದ ಸದ್ದಡಗುವಂತೆ ಕಂಡುಬರುತ್ತಿದೆ. ಸಚಿವ ಸ್ಥಾನದಿಂದ ಹೊರದಬ್ಬಲ್ಪಟ್ಟ ನಾಲ್ಕಾರು ಮುಖಂಡರು ಈ ರೋಗ ಉಲ್ಬಣಿಸುವಂತೆ ಮಾಡಲು ಸಾಕಷ್ಟು ಯತ್ನ ನಡೆಸಿದರು. ಆದರೆ ಇದು ಪಸರಿಸಲೇ ಇಲ್ಲ. ಆಪರೇಶನ್ ಅಗತ್ಯವಾಗಬಹುದೇನೋ ಎಂದು ಒಂದು ಹಂತದಲ್ಲಿ ಊಹಿಸಲಾಗಿತ್ತಾದರೂ ಹಾಗಾಗಲಿಲ್ಲ. ಪಕ್ಷದೊಳಗಿರುವ ಕೆಲವು ನಾಯಕರೆಂಬ ತಜ್ಞವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡಿ ರೋಗ ಬಾಧೆ ಕಡಿಮೆಯಾಗುವಂತೆ ಮಾಡಿದ್ದಾರೆ. ಹಾಗಂತ ಪೂರ್ತಿ ವಾಸಿಯಾಗಿಲ್ಲ. ಸದ್ಯದ ಮಟ್ಟಿಗೆ ಆಪರೇಶನ್ ಇಲ್ಲದೆ ಕಡಿಮೆ ಆಗಬಹುದೇನೋ ಎಂದೆನಿಸುತ್ತಿದೆ.
ಕಾಂಗ್ರೆಸ್‌ಗೆ ಬಂದ ರೋಗ ಕಡಿಮೆಯಾಗುವ ಹಂತ ಕಂಡುಬರುತ್ತಿರುವಂತೆ ಬಿಜೆಪಿಯಲ್ಲಿ ರೋಗದ ಲಕ್ಷಣಗಳು ಕಂಡುಬರತೊಡಗಿವೆ. ಯಡಿಯೂರಪ್ಪ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿಸಿದ ನಂತರ ಈ ರೋಗದ ವೈರಸ್ ಹುಟ್ಟಿಕೊಂಡಿತ್ತಾದರೂ ಒಳಗೊಳಗೇ ಕೆಲಸ ಮಾಡಲಾರಂಭಿಸಿತ್ತು. ಬಹುತೇಕ ಜನರು ಆಗಲೇ ಇದನ್ನು ಊಹಿಸಿದ್ದರು. ಅದು ಈಗ ನಿಜವಾಗತೊಡಗಿದೆ. ಯಡಿಯೂರಪ್ಪ ಯಾವತ್ತೂ ಜಾತೀಯತೆ ಮತ್ತು ಸ್ವಜನಪಕ್ಷಪಾತವನ್ನು ಮಾಡಿಕೊಂಡೇ ಬಂದವರು. ವೀರಶೈವರನ್ನು ಮಾತ್ರ ಓಲೈಸಿಕೊಳ್ಳಲು ಇನ್ನಿಲ್ಲದ ಕೆಲಸ ಮಾಡಿದರು. ತಾನಿಲ್ಲದೆ ಪಕ್ಷವೇ ಇಲ್ಲ ಎನ್ನುವ ವಾತಾವರಣವನ್ನು ಸೃಷ್ಟಿಸಿ, ಅದರ ಲಾಭ ಪಡೆಯುವವರು.
ಈಗ ಸಹ ರಾಜ್ಯ ಮತ್ತು ಜಿಲ್ಲಾ ಘಟಕವನ್ನು ಪುನರ‌್ರಚಿಸಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ.  ಇದು ಹಲವು ನಾಯಕರನ್ನು ರೊಚ್ಚಿಗೆಬ್ಬಿಸಿದೆ.
ಈಗ ಮತ್ತೆ ತನ್ನ ಜಾತಿ ಬಾಂಧವರನ್ನೇ ಮುಂದುಮಾಡಿಕೊಂಡು ಪಕ್ಷ ಕಟ್ಟಹೊರಟಿದ್ದಾರೆ. ಇಲ್ಲಿಯವರೆಗೆ ಪಕ್ಷಕ್ಕಾಗಿ ಶ್ರಮಿಸಿದವರನ್ನು, ಪಕ್ಷ ಕಟ್ಟಿದ ಹಿರಿಯರನ್ನು ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಹೊತ್ತುಕೊಂಡಿದ್ದಾರೆ. ಇದರಿಂದ ಆಕ್ರೋಶದ ಕಟ್ಟೆ ಸಣ್ಣದಾಗಿ ಒಡೆದಿದೆ, ಅಥವಾ ಬಿರುಕು ಕಂಡುಬಂದಿದೆ ಎನ್ನಬಹುದು. ಮೊನ್ನೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಇದನ್ನು ತೋಡಿಕೊಂಡಿದ್ದಾರೆ. ಈ ಮೂಲಕ ಮತ್ತೆ ಬಿಜೆಪಿಯಲ್ಲಿ ಭಿನ್ನಮತ ಕಾಣಿಸಿಕೊಳ್ಳಬಹುದು ಎಂಬ ಸೂಕ್ಷ್ಮ ಎಚ್ಚರಿಕೆಯನ್ನು ನೀಡಿದ್ದಾರೆ.
ಒಟ್ಟಾರೆ, ಭಿನ್ನಮತ ಎಂಬ ರೋಗ ಜೂನ್ ತಿಂಗಳಲ್ಲಿ ಒಂದರ ನಂತರ ಒಂದು ಪಕ್ಷಕ್ಕೆ ಈ ರೋಗ ತಗುಲಿದ್ದು ಮಾತ್ರ ವಿಶೇಷವೇ ಸರಿ. ಈ ಮೂರೂ ಪಕ್ಷಗಳಲ್ಲಿ ಭಿನ್ನಮತದ ವೈರಸ್ ಇನ್ನೂ ಇದೆ. ಅದು ಉಲ್ಬಣಿಸುವುದೋ, ಕಡಿಮೆಯಾಗುವುದೋ ಗೊತ್ತಿಲ್ಲ. ಆಯಾಯ ಪಕ್ಷದ ನಾಯಕರು ಆದಷ್ಟು ಶೀಘ್ರ ವೈರಸ್ ಓಡಿಸದಿದ್ದರೆ ಇಡೀ ಪಕ್ಷಕ್ಕೆ ಅದು ತಗುಲಿ ಇನ್ನಷ್ಟು ಅನಾಹುತ ಮಾಡುವ ಸಂಭವವಿದೆ.
ರೋಗ ಲಕ್ಷಣ ಕಂಡುಬಂದ ನಂತರ ಅದನ್ನು ಗುಣಪಡಿಸುವ ಕೆಲಸವನ್ನು ಸಂಬಂಧಿತರು ಮಾಡಬೇಕಿದೆ. ರೋಗ ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಒಳ್ಳೆಯದು ಎಂಬ ಗಾದೆಮಾತಿದೆ. ಅದನ್ನು ಬಿಜೆಪಿ ಹಿರಿಯರು ಅರ್ಥಮಾಡಿಕೊಂಡು ಕಾರ್ಯತತ್ಪರರಾದರೆ ರೋಗದಿಂದ ಪಕ್ಷವನ್ನು ಪಾರುಮಾಡಬಹುದು. ಈಗಷ್ಟೇ ದಾಳಿ ಇಟ್ಟಿರುವ ಭಿನ್ನಮತದ ವೈರಸ್ ಬಿಜೆಪಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.



Monday, 27 June 2016

ಸ್ಮಾರ್ಟ್ ಸಿಟಿ ಯೋಜನೆ ಸಿದ್ಧತೆಗೆ ಐಡೆಕ್ ಸಂಸ್ಥೆಯ ನೆರವು


* ಎರಡನೆ ಹಂತದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪಾಲ್ಗೊಳ್ಳಲು ಭರದ ಸಿದ್ಧತೆ
*ಯೋಜನೆ ರೂಪಿಸಲು  ಐಡೆಕ್ ಸಂಸ್ಥೆಯ ಸೇವೆ
* ಹಿಂದಿನ ಬಾರಿ ಪ್ರಸ್ತಾಪಿಸಲಾಗಿದ್ದ ಮೆಡಿಟೂರಿಸಂಗೆ ಖೊಕ್
* ಗುಂಡಪ್ಪ ಶೆಡ್ ಬಳಿ ಪರ್ಯಾಯ ನೈಸರ್ಗಿಕ ಚಿಕಿತ್ಸಾ ತಾಣ ಸ್ಥಾಪನೆ
* ತುಂಗಾ ಎಡದಂಡೆ ಕಾಲುವೆಯವರೆಗಿನ  ಅಂದಾಜು 1500 ಎಕ್ರೆ ಪ್ರದೇಶ ಅಭಿವೃದ್ಧಿಗೆ ನಿರ್ಧಾರ
* ರಿವರ್ ಫ್ರಂಟ್ ಡೆವಲಪ್‌ಮೆಂಟ್ ಯೋಜನೆ ಅಳವಡಿಕೆ
* ಕೆನಾಲ್ ಸೌರ ವಿದ್ಯುತ್ ಉತ್ಪದನಾ ಘಟಕ ಈ ಬಾರಿಯೂ ಪ್ರಸ್ತಾವ



ಶಿವಮೊಗ್ಗ: ಕೇಂದ್ರ ಸರಕಾರವು ಸ್ಮಾರ್ಟ್ ಸಿಟಿ ಯೋಜನೆಗಾಗಿ ನಡೆಸಿದ ಮೊದಲ ಹಂತದ ಸ್ಪರ್ಧೆಯಲ್ಲಿ ಆಯ್ಕೆಯಾಗಿರದ ಶಿವಮೊಗ್ಗ ಪಾಲಿಕೆ ಎರಡನೆಯ ಹಂತದ ಯೋಜನೆಯಲ್ಲಿ ಆಯ್ಕೆಯಾಗಲು ಸರ್ವಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ಐಡೆಕ್ ಸಂಸ್ಥೆಯ ಸೇವೆ ಪಡೆಯಲಾಗುತ್ತಿದೆ.
2015ರ ನವೆಂಬರ್ 13ರಂದು ಮೊದಲ ಹಂತದ ಯೋಜನೆಗೆ ಅಂತಿಮ ರೂಪುರೇಶೆ ತಯಾರಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿತ್ತು. ಈಗ ಅದೇ ಅಂಕಿ-ಅಂಶಗಳನ್ನೊಳಗೊಡಂತೆ ಪೂರಕ ದಾಖಲಾತಿಯೊಂದಿಗೆ, ಕೆಲವು ಮಾರ್ಪಾಡುಗಳನ್ನು ಮಾಡಿ ಯೋಜನೆ  ಸಿದ್ಧಗೊಳಿಸಲಾಗುತ್ತಿದೆ.
ಈ ಬಾರಿ ಸಾರ್ವಜನಿಕ ವಲಯ, ವಾಣಿಜ್ಯ ವಲಯ ಮತ್ತು ವಸತಿ ಪ್ರದೇಶವನ್ನೊಳಗೊಂಡ ನಗರದ ಹೃದಯ ಭಾಗವನ್ನು ಪ್ರದೇಶಾಧಾರಿತ ಪ್ರಸ್ತಾವನೆಯಲ್ಲಿ ಆಯ್ದುಕೊಳ್ಳಲಾಗಿದೆ. ಇದು ಉತ್ತರದಲ್ಲಿ ರೈಲ್ವೆ ಹಳಿ, ದಕ್ಷಿಣದಲ್ಲಿ ಬಿ.ಎಚ್.ರಸ್ತೆ, ಪೂರ್ವದಲ್ಲಿ ತುಂಗಾನದಿಯ ಎಡ ಮತ್ತು ಬಲ ದಂಡೆಗಳನ್ನು ಒಳಗೊಂಡಿದೆ. ಪಶ್ಚಿಮದಲ್ಲಿ ತುಂಗಾ ಎಡದಂಡೆ ಕಾಲುವೆಯವರೆಗಿನ ಒಟ್ಟು ವಿಸ್ತಿರ್ಣ ಅಂದಾಜು 1500 ಎಕ್ರೆ ಪ್ರದೇಶವನ್ನು ಅಳವಡಿಸಿಕೊಳ್ಳಲಾಗಿದೆ. ಮೊದಲ ಹಂತದ ಯೋಜನೆಯಲ್ಲೂ ಇದೇ ವಿಸ್ತೀರ್ಣವನ್ನು ಅಳವಡಿಸಿಕೊಳ್ಳಲಾಗಿತ್ತು.
ಈ ಪ್ರದೇಶದೊಳಗೆ ಪುನರ್ನಿರ್ಮಾಣ ಯೋಜನೆಯಲ್ಲಿ ರಿವರ್ ಫ್ರಂಟ್ ಡೆವಲಪ್‌ಮೆಂಟ್‌ನ್ನು ಪ್ರಾಥಮಿಕವಾಗಿ ಆಯ್ಕೆಮಾಡಿಕೊಳ್ಳಲಾಗಿದೆ. ಕಳೆದ ಬಾರಿಯೂ ಇದನ್ನು ಪ್ರಸ್ತಾಪಿಸಲಾಗಿತ್ತು. ಆದರೆ ಈ ಹಂತಹಂತವಾಗಿ ಇದನ್ನು ಅಭಿವೃದ್ಧಿಪಡಿಸುವ ಬಗ್ಗೆ ಈ ಬಾರಿ ವಿವರಿಸಲಾಗಿದೆ.
ಇದರ ಜೊತೆಗೆ ಹಿಂದಿನ ಪ್ರಸ್ತಾವನೆಯಲ್ಲಿದ್ದ ಶಿವಪ್ಪ ನಾಯಕ ಅರಮನೆ ಅಭಿವೃದ್ಧಿ, ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿ, ಇನರ್ ಕೆನಾಲ್ ಡೆವಲಪ್‌ಮೆಂಟ್, ಹೊರವಲಯದ ಕೆನಾಲ್ ಸೌರ ವಿದ್ಯುತ್ ಉತ್ಪದನಾ ಘಟಕ, ಬಸ್ ನಿಲ್ದಾಣಗಳಲ್ಲಿ ಪೂರಕ ಅಭಿವೃದ್ಧಿಯ ಕಾಮಗಾರಿಗಳು ಮತ್ತು ಸಹಭಾಗಿ ಇಲಾಖೆಗಳ ಸಹಯೋಗದಲ್ಲಿ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪ್ರಸ್ತಾವನೆಯನ್ನು ಮಂಡಿಸಲು ಯೋಜಿಸಲಾಗಿದೆ.
ಹಿಂದಿನ ಬಾರಿ ಪ್ರಸ್ತಾಪಿಸಲಾಗಿದ್ದ ಮೆಡಿಟೂರಿಸಂನ್ನು ಕೈಬಿಡಲಾಗಿದೆ. ಅದರ ಬದಲು ಪರ್ಯಾಯ ನೈಸರ್ಗಿಕ ಚಿಕಿತ್ಸಾ ತಾಣವನ್ನು ಗುಂಡಪ್ಪ ಶೆಡ್‌ನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಇಲ್ಲಿ ಕರ್ನಾಟಕ ನಗರ ನೀರು ಪೂರೈಕೆ ಮಂಡಳಿ ಮತ್ತು ಒಳಚರಂಡಿ ನಿಗಮದ ಮೂಲಕ ಯುಜಿಡಿ ಘಟಕವನ್ನು ಸ್ಥಾಪಿಸಲು ಚಿಂತಿಸಿದಾಗ ಸುತ್ತಮುತ್ತಲ ನಾಗರಿಕರು ವಿರೋಧಿಸಿದ್ದರು. ಇಲ್ಲಿ ಸುಮಾರು 5 ಎಕ್ರೆ ಜಾಗವಿದೆ. ಇದನ್ನು 5 ಎಂಎಲ್‌ಡಿ ಸಾಮರ್ಥ್ಯದ ಎಸ್‌ಬಿಆರ್ ಟೆಕ್ನಾಲಜಿ ಶುದ್ಧೀಕರಣ ಘಟಕವನ್ನು ಸ್ಥಾಪಿಸಲು ಮಂಡಳಿ ಪ್ರಸ್ತಾಪಿಸಿದೆ. 14 ಎಕ್ರೆ ಜಾಗದಲ್ಲಿ ಪರ್ಯಾಯ ನೈಸರ್ಗಿಕ ಚಿಕಿತ್ಸಾ ತಾಣ ಸ್ಥಾಪಿಸಲಾಗುವುದು.
ಇನ್ನು ಪಾನ್‌ಸಿಟಿ ಯೋಜನೆಯಡಿಯಲ್ಲಿ ಈ ಹಿಂದೆ ಪಿಪಿಪಿ ಮಾದರಿಯಲ್ಲಿ ಎಲ್‌ಇಡಿ ಲೈಟಿಂಗ್ ಮತ್ತು ಸ್ಮಾರ್ಟ್ ಸರ್ವೈಲೆನ್ಸ್ ಮತ್ತು ಜಿ-ಗವರ್ನೆನ್ಸ್ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ನಗರಕ್ಕೆ ಪ್ರಸ್ತಾಪಿಸಲಾಗಿರುವ ಶುದ್ಧ ಗಂಗಾ ಕುಡಿಯುವ ನೀರಿನ ಯೋಜನೆ (24*7)ಯಲ್ಲಿ ಸ್ಮಾರ್ಟ್  ಮೀಟರ್ ಅಳವಡಿಕೆ ಇಲ್ಲದಿರುವ ಕಾರಣ ಅದನ್ನು ಅಳವಡಿಸಲು ಯೋಜಿಸಲಾಗಿದೆ.
ನಗರದ ಜನತೆಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ನಿಟ್ಟಿನಲ್ಲಿ ಅವಕಾಶವಿದ್ದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕೆಲವು ಯೋಜನೆಗಳನ್ನೂ ಸಹ ತೆಗೆದುಕೊಳ್ಳಲು ಯೋಜಿಸಲಾಗಿದೆ.
ಕಳೆದ ಬಾರಿ ಸಾರ್ವಜನಿಕರೊಂದಿಗೆ ಸಂವಾದ, ಪ್ರತಿ ವಾರ್ಡುಗಳಲ್ಲಿ ಜಾಗೃತಿ ಮೂಡಿಸಿ, ಅಭಿಪ್ರಾಯ ಸಂಗ್ರಹಣೆ ಮೂಲಕ ಯೋಜನೆಯನ್ನು ತಜ್ಞ ಸಂಸ್ಥೆಯ ಮೂಲಕ ರೂಪಿಸಲಾಗಿತ್ತು,. ಅಂದಿನ ಆಯುಕ್ತ ರವಿ ಅವರು ಇದಕ್ಕಾಗಿಯೇ ವಿಶೇಷ ಕಾಳಜಿ ವಹಿಸಿದ್ದರು. ಅವರನ್ನು ಇದೇ ಕಾರ್ಯಕ್ಕಾಗಿ ನಿಯೋಜಿಸಲಾಗಿತ್ತು. ಸಾಕಷ್ಟು ವಿಶೇಷ ಪ್ರಯತ್ನ ಮಾಡಿದ್ದರೂ ಕೆಲವೇ ಅಂಕಗಳಲ್ಲಿ ಈ ಯೋಜನೆ ಕೈತಪ್ಪಿತ್ತು. ಆದ್ದರಿಂದ ಈ ಬಾರಿ ಅದೇ ಯೋಜನೆಯಲ್ಲಿ ಕೆಲವಷ್ಟೇ ಮಾರ್ಪಾಡು ಮಾಡಿ, ಕೆಲವೇ ಹೊಸ ಯೋಜನೆ ಸೇರಿಸಲು ನಿರ್ಧರಿಸಲಾಗಿದೆ. ಎರಡನೆಯ ಹಂತದ ಆಯ್ಕೆಯಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗುವುದು ನಿಶ್ಚಿತ ಎನ್ನುತ್ತವೆ  ಪಾಲಿಕೆಯ ಮೂಲಗಳು.

Friday, 24 June 2016

ಮೀಸಲಾತಿಯ ಲಾಭ ಪಡೆಯದ ಮಹಿಳಾ ಜನಪ್ರತಿನಿಧಿಗಳು

ತೊಟ್ಟಿಲು ತೂಗುವ ಕೈ ದೇಶವನ್ನಾಳಬೇಕೆಂಬ ಸರಕಾರದ ಕನಸನ್ನು ನನಸಾಗುವಂತೆ ಮಾಡುವುದು ಮಹಿಳೆಯರ ಕೈಯಲ್ಲೇ ಇದೆ. ಇದಕ್ಕೆ ಅವರ ಪತಿ ಮೊದಲ ಅವಕಾಶ ಕೊಡಬೇಕು. ಅವಕಾಶ ಕೊಡದಿದ್ದರೆ ಅದನ್ನು ಪಡೆಯುವುದನ್ನೂ ಆಕೆ ತಿಳಿದಿರಬೇಕು. ಕೇವಲ ಮಹಿಳಾ ಮೀಸಲಾತಿ ಬೇಕೆಂದು ಕೇಳಿ ಪಡೆಯುವುದಷ್ಟೇ ಕೆಲಸವಾಗಬಾರದು. ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು, ಆ ಅವಧಿಯಲ್ಲಿ ಏನೆಲ್ಲವನ್ನು ಸಾಧಿಸಬಹುದು ಎನ್ನುವುದನ್ನು ಈ ದೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ತೋರಿಸಿಕೊಟ್ಟ ದಿಟ್ಟ ಮಹಿಳಾ ನಾಯಕಿಯರಿದ್ದಾರೆ. ಅವರೆಲ್ಲರ ಮಾರ್ಗದಲ್ಲಿ ಜನಪ್ರತಿನಿಧಿಗಳಾದ ಮಹಿಳೆಯರು ಏಕೆ ಸಾಗಬಾರದು, ಹೆಸರುಗಳಿಸಬಾರದು? 



ಶಿವಮೊಗ್ಗ: ಜನಪ್ರತಿನಿಧಿಯಾಗುವುದು ಸುಲಭ. ಆದರೆ ಆ ಹುದ್ದೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದು ಕಷ್ಟ. ಏಕೆಂದರೆ ಅದಕ್ಕೆ ತಕ್ಕ ಸಾಮಾನ್ಯ ಜ್ಞಾನ ಜನಪ್ರತಿನಿಧಿಯಾದವರಲ್ಲಿರಬೇಕು. ಇಲ್ಲವಾದರೆ ಜನರು ಆಯ್ಕೆ ಮಾಡಿ ಕಳುಹಿಸಿದ್ದು ವ್ಯರ್ಥವಾಗುತ್ತದೆ. ಸೂಕ್ತ ತರಬೇತಿ ಇಲ್ಲವಾದರೆ ತಮಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ, ಸಾಮಾನ್ಯ ಕಾನೂನು ಜ್ಞಾನ, ಜನರ ಸೇವೆ ಮಾಡುವ ಬಗೆ, ವ್ಯವಹರಿಸುವ ರೀತಿ, ಜನರೊಂದಿಗೆ ಒಡನಾಡುವ ಬಗ್ಗೆ ತಿಳಿದಿರುವುದಿಲ್ಲ. ಇದರಿಂದ ಸಭೆಯಲ್ಲಿ ವಿಷಯ ಗೊತ್ತಿಲ್ಲದೆ ಸುಮ್ಮನಿರಬೇಕಾಗುತ್ತದೆ, ಅಥವಾ ಅಸಂಬದ್ಧ ಮಾತನಾಡಿ ಅಪಹಾಸ್ಯಕ್ಕೀಡಾಗಬೇಕಾಗುತ್ತದೆ. ಇದರಿಂದ ಜನಸೇವೆಗೂ ತೊಂದರೆಯಾಗುತ್ತದೆ. ಇಂತಹ ಸಂದರ್ಭವನ್ನು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ನಗರಪಾಲಿಕೆಯಲ್ಲಿ ಕಾಣಬಹುದು.
ಈಗ ಮೀಸಲಾತಿ ಮುಖ್ಯವಾಗಿರುವ ಕಾರಣ ಶೇ. 50ರಷ್ಟು ಮಹಿಳೆಯರು ಆಯ್ಕೆಯಾಗಿ ಬರುತ್ತಿದ್ದಾರೆ. ಪುರುಷರೂ ಹೆಚ್ಚು ಕಡಿಮೆ ಸಮ ಸಂಖ್ಯೆಯಲ್ಲಿರುವುದರಿಂದ ಇಬ್ಬರಿಗೂ ಸಂಬಂಧಿತ ಇಲಾಖೆಯವರು ಸೂಕ್ತ ತರಬೇತಿ ನೀಡಬೇಕಿದೆ. ವಿಷಯದ ಅರಿವಿಲ್ಲದೆ ಮಾತನಾಡುವುದು ಈಗ ಕಂಡುಬರುತ್ತಿದೆ. ಕೆಲವು ಸದಸ್ಯರು ಸದಾ ಮೌನಿಯಾಗಿರುತ್ತಾರೆ. ಇನ್ನೂ ಕೆಲವರಿಗೆ ತಾವು ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು, ವಿಷಯ ಮಂಡನೆ ಹೇಗಿರಬೇಕು,  ಪಾಲಿಕೆ, ಅಥವಾ ತಾಪಂ, ಜಿಪಂನ ಕಾನೂನುಗಳ ಬಗ್ಗೆ ಮಾಹಿತಿಯೂ ಇಲ್ಲ. ಇನ್ನೂ ಕೆಲವರಿಗೆ ಸಭೆಯ ಅಧ್ಯಕ್ಷರಿಗೆ ಗೌರವ ಕೊಡುವ ಬಗ್ಗೆ ಗೊತ್ತಿಲ್ಲ.  ಏರುಧ್ವನಿಯಲ್ಲಿ ಮಾತು ಆರಂಭಿಸುವುದು, ಇನ್ನೊಬ್ಬ ಸಸ್ಯರ ಮೇಲೆ ಏರಿಹೋಗುವುದು, ಮತ್ತೊಬ್ಬರು ಮಾತನಾಡುವಾಗಲೇ ತಾವೂ ಮಾತನಾಡುವುದು ಕಂಡುಬರುತ್ತಿದೆ.
ನಿನ್ನೆ ನಡೆದ ಪಾಲಿಕೆ ಸಬೆಯಲ್ಲಿ ಸದಸ್ಯೆಯೊಬ್ಬರು ಕಂದಾಯ ಇಲಾಖೆಯ 94 ಸಿಸಿ ಕಾಯ್ದೆ ಎಂದರೇನು, ಈ ಬಗ್ಗೆ  ಮಾಹಿತಿ ಕೊಡಿ ಎಂದು ಹೇಳಿದಾಗ ಸಭೆಯಲ್ಲಿದ್ದ ಬುತೇಕರು ನಕ್ಕರು. ಪಾಲಿಕೆ ಸದಸ್ಯೆಯಾಗಿ ಮೂರು ವರ್ಷ ಕಳೆದರೂ ಸಾಮಾನ್ಯ ಜ್ಞಾನವೂ ಇಲ್ಲದ ಬಗ್ಗೆ ಕೆಲವರು ಮಾತನಾಡಿಕೊಂಡರೆ, ಇನ್ನೂ ಕೆಲವರು ಇದರಂತಹ ತಮಾಷೆ ಇನ್ನೊಂದಿಲ್ಲ ಎಂದರು. ಇಲ್ಲಿ ಆ ಸದಸ್ಯೆ ಕೇಳಿದ್ದು ತಪ್ಪೇನಲ್ಲ. ತನಗೆ ಮಾಹಿತಿ ಇರದ ಬಗ್ಗೆ ಕೇಳಿದ್ದರು. ಆದರೆ ಎರಡು ವಾರದಿಂದ ಈ ಬಗ್ಗೆ ನಗರದಾದ್ಯಂತ ಚರ್ಚೆಯಾಗುತ್ತಿದೆ. ಆದ್ದರಿಂದ ಮಾಹಿತಿಯನ್ನು ಯಾರಿಂದಲಾದರೂ ಪಡೆಯಲು ಅವಕಾಶವಿತ್ತು. ಹಾಗೆ ಮಾಡದೆ ಚರ್ಚೆಯಾಗುವ ವೇಳೆ ಆ ಬಗ್ಗೆ ಕೇಳಿದ್ದು ಅಭಾಸವೆನಿಸಿತು. ಜನಪ್ರತಿನಿಧಿಯಾಗುವವರು ಎಷ್ಟೇ ವಿದ್ಯಾವಂತರಾದರೂ, ಶ್ರೀಮಂತರಾದರೂ ಸದಸ್ಯರಾದ ನಂತರ ತಮ್ಮ ವ್ಯಾಪ್ತಿಗೆ ಬರುವ ವಿಚಾರಗಳ ಬಗ್ಗೆ ಅಧ್ಯಯನ ನಡೆಸಬೇಕು, ಕೇಳಿ  ತಿಳಿಯಬೇಕು. ಸಭೆಗೆ ಬರುವಾಗ ಸಂಪೂರ್ಣ ಮಾಹಿತಿಯೊಂದಿಗೆ ಬರಬೇಕು. ಸದ್ಯ ಏನಾಗಿದೆ ಎಂದರೆ, ಸಭೆಗೆ ಬರುವುದು, ಒಂದಷ್ಟು ಕೂಗಾಡಿ ಹೋಗುವುದು, ಇಲ್ಲವಾದರೆ ಸುಮ್ಮನೆ ಕುಳಿತು ಹೋಗುವುದು ಸಾಮಾನ್ಯವಾಗಿದೆ. ಕೆಲವರಷ್ಟೇ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಉಳಿದವರು ಮೂಕಪ್ರೇಕ್ಷಕರು.
ಮಹಿಳಾ ಸದಸ್ಯರಾದವರು ತಮ್ಮ ಮನೆಯ ಕೆಲಸದ ಹೊರತಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟಾಗ ವಿಷಯಗಳ ಬಗ್ಗೆ ಅರಿವು ಹೊಂದಬೇಕು. ಜನರ ಸಮಸ್ಯೆ , ಅವುಗಳನ್ನು ಬಗೆಹರಿಸುವ ಬಗ್ಗೆ ಅರಿತುಕೊಳ್ಳಬೇಕು. ಕೆಲವು ಸದಸ್ಯೆಯರ ಪರಿಸ್ಥಿತಿ ಹೇಗಿದೆ ಎಂದರೆ, ವಾರ್ಡುಗಳಲ್ಲಿ ಓಡಾಡಿ, ಜನ ಸಮಸ್ಯೆ ಕೇಳುವವರು, ಕಾಮಗಾರಿ ಮಾಡಿಸುವವರು  ಅವರ ಯಜಮಾನರಾಗಿರುತ್ತಾರೆ. ವಾರ್ಡುಗಳಲ್ಲಿ ತಮ್ಮ ಸದಸ್ಯೆಯನ್ನು ಚುನಾವಣೆ ವೇಳೆ  ಹೆಸರು ಮಾತ್ರ ನೋಡಿರುತ್ತಾರೆ. ಆಯ್ಕೆಯಾದ ನಂತರ ಅವರ ಮುಖವನ್ನು ಮತದಾರರು ನೋಡಿರುವುದಿಲ್ಲ. ನಾಮಕಾವಾಸ್ತೆ ಸದಸ್ಯೆಯಾಗಿರುತ್ತಾರೆ. ಪತಿ ಅನಧಿಕೃತ ಮತ್ತು ಪತ್ನಿ ಅಧಿಕೃತ ಸದಸ್ಯರಾಗಿರುತ್ತಾರೆ. ಇಂತಹ ಮಹಿಳಾ ಸದಸ್ಯೆಯರಿಗೆ ತಮ್ಮ ವಾರ್ಡಿನ ನೈಜ ಚಿತ್ರಣವೇ ಗೊತ್ತಿರುವುದಿಲ್ಲ.  ಪಾಲಿಕೆ ಅಥವಾ ತಮಗೆ ಸಂಬಂಧಿಸಿದ ಸಂಸ್ಥೆಯ ಕಾಯ್ದೆ- ಕಾನೂನುಗಳ ಅರಿವಿರುವುದಿಲ್ಲ. ಅದಕ್ಕಾಗಿ ವಾರಕ್ಕೊಮ್ಮೆಯಾದರೂ ವಾರ್ಡಿನಲ್ಲಿ ಸಂಚರಿಸಿ, ಮತದಾರರೊಡನೆ ಒಡನಾಟವಿಟ್ಟುಕೊಂಡು ಸಂಸ್ಥೆಗೆ ಹೋಗಿ ಅಧಿಕಾರಿಗಳೊಂದಿಗೆ ಚರ್ಚಿಸುವ ಪರಿಪಾಠವಿಟ್ಟುಕೊಳ್ಳಬೇಕಿದೆ.
ಇದಕ್ಕೂ ಮುನ್ನ ಸಂಬಂಧಿತ ಸ್ಥಳೀಯಾಡಳಿತ ಸಂಸ್ಥೆ ಅವರಿಗೆ ಸೂಕ್ತ ತರಬೇತಿಯನ್ನು ಕೊಡಿಸುವ ವ್ಯವಸ್ಥೆ ಮಾಡಬೇಕು. ಸದಸ್ಯರೇ ಆಗ್ರಹಿಸಿ ತರಬೇತಿ ಏರ್ಪಡಿಸುವಂತೆಯೂ ಮಾಡಬಹುದು. ಆಗ ಮಾತ್ರ ಅವರಿಗೆ ಸ್ವಲ್ಪವಾದರೂ ಮಾಹಿತಿ ದೊರೆತು ಅವರು ಸಭೆಯಲ್ಲಿ ಪಾಲ್ಗೊಂಡು ಮುಕ್ತವಾಗಿ ಚರ್ಚಿಸಲು ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಐದು ವರ್ಷ ಸದಸ್ಯೆಯಾದರೂ ಏನು ಕಡಿದು ಕಟ್ಟೆ ಹಾಕಿದರು ಎಂದು ಪ್ರಶ್ನಿಸಬೇಕಾಗುತ್ತದೆ.
ಸರಕಾರ ಮೀಸಲಾತಿಯನ್ನು ಮಹಿಳೆಗೆ ಕೊಟ್ಟಿದ್ದು, ಅವಳ ಗಂಡ ಆ ಸ್ಥಾನದಲ್ಲಿ ಅಧಿಕಾರ ಚಲಾಯಿಸಲಿ ಎಂದಲ್ಲ.  ಮಹಿಳಾ ಸಬಲೀಕರಣ ಇದಕ್ಕೆ ಮೂಲ ಕಾರಣ. ಮಹಿಳೆ ಅಡುಗೆ ಮನೆ ಬಿಟ್ಟು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ಅವಳೂ ಸೇರಬೇಕು. ಸಮಾಜದ ಅಭಿವೃದ್ಧಿಯಲ್ಲಿ ಅವಳ ಪಾತ್ರವೂ ಪುರುಷನಷ್ಟೇ ಇರಬೇಕು ಎನ್ನುವ ದೃಷ್ಟಿಯಿಂದ ಮಾತ್ರ. ಆದರೆ ಇಂದೇನಾಗಿದೆ. ಮಹಿಳೆ ಇದನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಇದನ್ನು ಮಹಿಳೆಯರೇ ಅರಿಯದಿದ್ದರೆ ಮೀಸಲಾತಿಯ ಲಾಭವಾದರೂ ಏನು?
ಹಾಲಿ ಶಿವಮೊಗ್ಗದ ಜಿಪಂ, ತಾಪಂ ಅಥವಾ ಪಾಲಿಕೆಯಲ್ಲಿ ಇಂತಹವರೇ ಜಾಸ್ತಿ ಸಂಖ್ಯೆಯಲ್ಲಿದ್ದಾರೆ.  ಸದಸ್ಯೆಯರ ಪತಿಯೇ ಎಲ್ಲೆಡೆ ಠಳಾಯಿಸುತ್ತಾರೆ. ಸಭೆಗೆ ಮಾತ್ರ ಮಹಿಳಾ ಸದಸ್ಯೆ ಹಾಜರಿರುತ್ತಾರೆ. ಅನುಭವದ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆ ಇದಕ್ಕೆ ಕಾರಣವಾಗಿದ್ದರೂ, ಅವರಲ್ಲೂ ತಾವು ಅನುಭವ ಪಡೆಯಬೇಕೆಂಬ ಛಲ ಇರಬೇಕು. ಅದಕ್ಕಾಗಿ ಯತ್ನಿಸಬೇಕು. ತಾವೇ ಅಧಿಕಾರಿಗಳಿಗೆ ಒತ್ತಡ ಹೇರಿ ತರಬೇತಿ ಆಯೋಜಿಸುವಂತೆ ಸೂಚಿಸಬೇಕು. ಇಲ್ಲವಾದರೆ ಅವರನ್ನು ಆಯ್ಕೆ ಮಾಡಿ ಕಳುಹಿಸಿದವರ ಸಮಸ್ಯೆ ಬಗೆಹರಿಸುವುದಿಲ್ಲ. ಮೇಲಧಿಕಾರಿಗಳೊಂದಿಗೆ ವ್ಯವಹರಿಸುವುದು, ಯಾವ್ಯಾವ ಇಲಾಖೆಯಿಂದ ಎಷ್ಟು ಅನುದಾನ ಬರುತ್ತದೆ, ಕೆಲಸ ಮಾಡಿಸುವ ಬಗೆ ಎಲ್ಲವನ್ನೂ ಅರಿತಿರಬೇಕು.
...............................    

Wednesday, 22 June 2016

ಮಧು, ಕುಮಾರ್, ಹಾಲಪ್ಪ: ಗೆಲ್ಲುವವರಾರು?
 ಸೊರಬ ತಾಪಂ ಚುನಾವಣೆ






ಸೊರಬ ಅಂದರೆ ಬಂಗಾರಪ್ಪ ಕುಟುಂಬದ ರಾಜಕಾರಣ. ಅದನ್ನೇ ಅವರ ಮಕ್ಕಳಿಬ್ಬರೂ ಮುಂದುವರೆಸಿಕೊಂಡು ಬಂದಿದ್ದಾರೆ. ಇಬ್ಬರೂ ಅಧಿಕಾರ ಅನುಭವಿಸಿದ್ದಾರೆ. ಇನ್ನೂ ಪ್ರಭುತ್ವ ಸ್ಥಾಪನೆಗೆ ಕಾದಾಡುತ್ತಿದ್ದಾರೆ. ಇದಕ್ಕೆ ಈಗ ತಾಪಂ ಚುನಾವಣೆ ವೇದಿಕೆಯಾಗಿದೆ. ಪ್ರಚಾರಕ್ಕೆ ಉಳಿದಿರುವುದು ಕೇವಲ ನಾಲ್ಕೈದು ದಿನ ಮಾತ್ರ. ತುರುಸಿನ ಪೈಪೋಟಿ (ತ್ರಿಕೋನ, ಚತುಷ್ಕೋನ)ಯಂತೂ ಏರ್ಪಟ್ಟಿದೆ. ಪಕ್ಷೇತರರೂ ಸಹ ಕಣದಲ್ಲಿದ್ದಾರೆ. ಇವರೊಟ್ಟಿಗೆ ರೈತ ಸಂಘದವರೂ ಎರಡು ಕ್ಷೇತ್ರಗಳಲ್ಲಿ ಉಮೇದುವಾರರಾಗಿದ್ದಾರೆ. ಇವರೇನಾದರೂ ಮತ ಒಡೆದರೆ ಕೆಲವು ಸ್ಥಾನಗಳಲ್ಲಿ ಫಲಿತಾಂಶ ಏರುಪೇರಾಗಬಹುದು. ಅಷ್ಟೇನೂ ಮಹತ್ವದ ಚುನಾವಣೆ ಅಲ್ಲದಿದ್ದರೂ ತಾಪಂ ಅಧಿಕಾರದ ಗದ್ದುಗೆ ಪಡೆಯಲು ಮೂರೂ ಪಕ್ಷದವರು ಹೋರಾಟ ನಡೆಸಿರುವುದಂತೂ ಸತ್ಯ. ಅದರಲ್ಲೂ ಅಣ್ಣ-ತಮ್ಮ ತೊಡೆತಟ್ಟಿರುವುದು ಇಲ್ಲಿ ವಿಶೇಷ.


ಶಿವಮೊಗ್ಗ: ಒಂದೆಡೆ ಸಹೋದರರ ಸವಾಲು, ಇನ್ನೊಂದೆಡೆ ಸಹೋದರರಿಗೇ ಸವಾಲು ಹಾಕುತ್ತಿರುವವರು, ಮಗದೊಂದೆಡೆ ಈ ಮೂವರನ್ನೂ ಬದಿಗಿಟ್ಟು ಕಣಕ್ಕಿಳಿದಿರುವವರು.....ಇದು  ಸೊರಬ ತಾಲೂಕು ಪಂಚಾಯತ್ ಚುನಾವಣಾ ಪ್ರಚಾರದಲ್ಲಿ ಕಂಡುಬರುತ್ತಿರುವ ಪ್ರಮುಖ ಅಂಶಗಳು.
 ಮುಂದಿನವಾರ ಚುನಾವಣೆ ನಿಗದಿಯಾಗಿದೆ. 19 ಸ್ಥಾನಗಳಿಗೆ ನಡೆಯುವ ಈ ಚುನಾವಣೆಗೆ ಈಗಾಗಲೇ ಭರ್ಜರಿ ಪ್ರಚಾರವನ್ನು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಆರಂಭಿಸಿವೆ. ತಾ
ಲೂಕಿನಲ್ಲಿ ಈ ಬಾರಿ ಚುನಾವಣಾ ರಂಗದ ಕಾವು ತಾರಕಕ್ಕೇರಿದೆ. ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಮಧು ಬಂಗಾರಪ್ಪ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ಆರಂಭಿಸಿದ್ದಾರೆ. ಬಹುತೇಕ ಕ್ಷೇತ್ರಗಳನ್ನು ತಮ್ಮದನ್ನಾಗಿ ಮಾಡಿಕೊಳ್ಳಬೇಕೆಂದು ಪಣತೊಟ್ಟಂತೆ ಕಂಡುಬರುತ್ತಿದೆ.
  ಶಾಸಕನಾಗಿರುವುದರಿಂದ  ಮಧು ಬಂಗಾರಪ್ಪ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇರುವುದರಿಂದ ಅವರ ಸಹೋದರ ಮತ್ತು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಇಬ್ಬರೂ ತೆರೆಮರೆಯ ರಾಜಕಾರಣ ನಡೆಸುತ್ತಾ ಅಧಿಕಾರಿ ವರ್ಗವನ್ನು ತಮ್ಮ ಹಿಡಿತಕ್ಕೆ ತಗೆದುಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿವೆ. ಈಗ ಚುನಾವಣಾ ಪ್ರಚಾರದ ಅಬ್ಬರದಲ್ಲಿ ಪರಸ್ಪರರ ಕಾಲೆಳೆಯುವ ಕೆಲಸ  ಆರಂಭವಾಗಿದೆ.
ಅಶ್ವಮೇಧ ಯಾಗದ ಕುದುರೆಯ ಕಾಲು ಮುರಿದಿದೆ ಎನ್ನುವ ಮೂಲಕ ಕುಮಾರ್ ರಾಜಕೀಯ ಕುಂಠಿತಗೊಂಡಿದೆ ಎಂದು ಶಾಸಕ ಮಧು ಟೀಕಿಸಿದ್ದಾಗಿದೆ. ಅದಕ್ಕೆ ತಿರುಗೇಟು ನೀಡಿರುವ ಕುಮಾರ್, ದೇವಿ ಇನ್ನೂ ಡಬ್ಬದಿಂದ ಹೊರಬಾರದೆ ದೆವ್ವವಾಗಿ ಕುಳಿತಿದೆ  ಎಂದಿದ್ದಾರೆ. ಅಶ್ವಮೇಧ ಕುಮಾರ್‌ಗೆ ತಿರುವು ಕೊಟ್ಟ ಸಿನಿಮಾವಾದರೆ, ದೇವಿ ಮಧು ಅವರ ಸಿನಿಮಾವಾಗಿದೆ. ಇನ್ನೊಂದೆಡೆ ಅದೇ ರಾಗ ಅದೇ ಹಾಡು ಎನ್ನುವಂತೆ ಮಧು, ಈ ಹಿಂದಿನಂತೆಯೇ ತಂದೆ ಬಂಗಾರಪ್ಪ ಅವರ ಹೆಸರು ಹೇಳಿಕೊಂಡು ಮತಯಾಚನೆ ಆರಂಭಿಸಿದ್ದಾರೆ. ಕುಟುಂಬದ ಜಗಳವನ್ನು ಮತ್ತೆ ಅಣ್ಣ-ತಮ್ಮ ಬೀದಿಗೆ ತಂದಿದ್ದಾರೆ. ಮಧು ಜೊತೆ ಯಾವ ಜೆಡಿಎಸ್ ನಾಯಕರೂ (ನಾಲ್ವರು ಜಿಪಂ ಸದಸ್ಯರನ್ನು ಹೊರತುಪಡಿಸಿ) ಪ್ರಚಾರಕ್ಕೆ   ಕಣಕ್ಕಿಳಿದಿಲ್ಲ. ಜಿಲ್ಲಾ ಮಟ್ಟದಲ್ಲಿ ಆ ಪಕ್ಷದ  ಅಡ್ರೆಸ್ಸೇ ಇಲ್ಲದಿರುವುದರಿಂದ ಅವರೂ ಸಹ ಬರುವುದು ಸಂಶಯವಾಗಿದೆ. ಸೊರಬ ಜೆಡಿಎಸ್‌ನಲ್ಲಿ ಮಧು ಅವರೇ ಹೈಕಮಾಂಡ್. ಜೊತೆಗೆ, ಈ ಬಾರಿ ಜಿಪಂನಲ್ಲಿ 5ರಲ್ಲಿ ನಾಲ್ಕು ಸ್ಥಾನ ಪಡೆದಿರುವುದರಿಂದ ಹೆಚ್ಚಿನ ಉತ್ಸಾಹವೂ ಅವರಲ್ಲಿದೆ. ತಾನು ಮಾಡಿದ ಕೆಲಸಕ್ಕಿಂತ ಅಪ್ಪನ ಹೆಸರನ್ನೇ ಹೋದಲ್ಲೆಲ್ಲ ಜಪಿಸುತ್ತ, ಅಣ್ಣನನ್ನು  ಟೀಕಿಸುತ್ತ ಪ್ರಚಾರ ಮಾಡುತ್ತಿರುವುದು ಕಂಡುಬರುತ್ತಿದೆ. ಗೆಲ್ಲುವವರು ತಮ್ಮವರೇ ಎಂಬ ಅಪರಿಮಿತ ವಿಶ್ವಾಸ ಅವರಲ್ಲಿದೆ.
ಕಾಂಗ್ರೆಸ್ ಪರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿ. ನಾ. ಶ್ರೀನಿವಾಸ್, ಕಾಡಾ ಅಧ್ಯಕ್ಷ ನಗರದ ಮಹದೇವಪ್ಪ ಸೇರಿದಂತೆ ಜಿಲ್ಲಾ ಸಮಿತಿ ನೇಮಿಸಿರುವ ವೀಕ್ಷಕರ ಸಮಿತಿ ಪ್ರಚಾರದಲ್ಲಿ ಧುಮುಕಿದೆ. ಹೇಗಾದರೂ ಮಾಡಿ ಮಧುಗೆ ಪಾಠ ಕಲಿಸಲೇಬೇಕೆಂದು ಕಾಂಗ್ರೆಸ್ ಹಠ ತೊಟ್ಟಿದೆ. ಕುಮಾರ್ ಅವರ ವರ್ಚಸ್ಸು ತೀರಾ ಇಲ್ಲದಿದ್ದರೂ ಹೆಚ್ಚಿನ ಸ್ಥಾನ ಗಳಿಸಲೇಬೇಕು, ತಮ್ಮನಿಗೆ ಎದುರೇಟು ಕೊಡಲೇಬೆಕು. ಈ ಮೂಲಕ ಮತ್ತೆ ಪಕ್ಷದ ಸಂಘಟನೆ ಬೆಳೆಸಲೇಬೇಕೆಂದು ಪಣ ತೊಟ್ಟಂತಿದೆ.
ಇವರಿಬ್ಬರ ಮಧ್ಯೆ ಬಿಜೆಪಿ  ನಾಯಕರೂ ಮುನ್ನುಗ್ಗುತ್ತಿದ್ದಾರೆ. ಮಾಜಿ ಸಚಿವ ಹಾಲಪ್ಪ ತಾನು ಮತ್ತು ಯಡಿಯೂರಪ್ಪ ಮಾಡಿದ ಕೆಲಸವನ್ನೆ ಜಪಿಸುತ್ತಿದ್ದಾರೆ. ಜಿಲ್ಲಾಧ್ಯಕ್ಷ ರುದ್ರೇಗೌಡ, ಮಾಜಿ ಅಧ್ಯಕ್ಷ ದತ್ತಾತ್ರಿ ಮೊದಲಾದವರು ಒಂದು ಸುತ್ತು ಹೋಗಿಬಂದಿದ್ದಾರೆ. ಇಲ್ಲಿ ಈಡಿಗರು, ಲಿಂಗಾಯಿತರು, ಬ್ರಾಹ್ಮಣರು, ಲಂಬಾಣಿ, ಮತ್ತು ಎಸ್‌ಸಿ, ಎಸ್ಟಿ ಮತದಾರರೇ ಹೆಚ್ಚಿದ್ದಾರೆ. ಜಾತಿಯೂ ಕೆಲವು ಸ್ಥಾನಗಳಲ್ಲಿ ಕೆಲಸ ಮಾಡುವ ಸಂಭವವಿರುವುದರಿಂದ ಅದರ ಲಾಭಕ್ಕೆ ಎಲ್ಲರೂ ಸನ್ನದ್ಧರಾಗಿದ್ದಾರೆ. ಸದ್ಯ ಜೆಡಿಎಸ್ ಶಾಸಕರನ್ನು, ಜಿಪಂನ ನಾಲ್ವರು ಸದಸ್ಯರನ್ನು ಹೊಂದಿರುವುದರಿಂದ ಆ ಪಕ್ಷಕ್ಕೇ ಬಹುಮತ ಬಂದರೂ ಆಶ್ಚರ್ಯವೇನಿಲ್ಲ.    
.................................

Monday, 20 June 2016

ಕಾಗೋಡು ಮತ್ತೆ ಸಚಿವ: ನಿರೀಕ್ಷೆ ಅಪಾರ



ಕಾಗೋಡು ತಿಮ್ಮಪ್ಪ ಮತ್ತೆ ಸಚಿವರಾಗಿದ್ದಾರೆ. ನೇರ, ನಿಷ್ಠುರ ಮತ್ತು ನಿಷ್ಕಳಂಕರೆನಿಸಿಕೊಂಡವರು.  5 ಬಾರಿ ಶಾಸಕರಾಗಿ, ಒಮ್ಮೆ ಎಂಎಲ್‌ಸಿಯಾಗಿ,  4 ಬಾರಿ ಸಚಿವರಾದ ಹೆಗ್ಗಳಿಕೆ ಇವರದ್ದು, ಜೊತೆಗೆ ವಿಧಾನಸಭಾಧ್ಯಕ್ಷ ಸ್ಥಾನ ಅಲಂಕರಿಸಿದ  ಜಿಲ್ಲೆಯ ಏಕೈಕ ರಾಜಕಾರಣಿ. 82ರ ಹರಯದ ಕಾಗೋಡು ಸಚಿವರಾಗಿದ್ದರಿಂದ ಬಗರ್‌ಹುಕುಂ ಸಾಗುವಳಿದಾರರಲ್ಲಿ ಮತ್ತು ಶರಾವತಿ ಮುಳುಗಡೆ ಸಂತ್ರಸ್ಥರಲ್ಲಿ ಹೊಸ ಆಶಾಕಿರಣ ಮೂಡಿದೆ. ಸಮಸ್ಯೆಗಳ ಕೂಪದಲ್ಲಿ ಮುಳುಗಿರುವ ಮುಳುಗಡೆ ಸಂತ್ರಸ್ಥರು ಇನ್ನಾದರೂ ಬೆಳಕಿಗೆ ಬರಬಹುದೆಂಬ ಆಶಾವಾದ ಹೊಂದುವಂತಾಗಿದೆ.  


 ರಾಜ್ಯ ಸಚಿವ ಸಂಪುಟದ ವಿಸ್ತರಣೆಯ ಮೂಲಕ ಜಿಲ್ಲೆಯಲ್ಲೂ ಮಂತ್ರಿಸ್ಥಾನ ಬದಲಾಗಿದೆ. ಈವರೆಗೆ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಬದಲಿಗೆ ಕಾಗೋಡು ತಿಮ್ಮಪ್ಪ ಅವರಿಗೆ ಸ್ಥಾನ ಕೊಡಲಾಗಿದೆ.  ಒಬ್ಬರನ್ನು ಬಿಟ್ಟು ಮತ್ತೊಬ್ಬರಿಗೆ ಅವಕಾಶ ಕೊಟ್ಟಂತಾಗಿದೆ. ಹಾಗೆ ನೋಡಿದರೆ ಒಂದು ಸ್ಥಾನ ಕೈತಪ್ಪಿದಂತಾಗಿದೆ. ಕಾಗೋಡು ವಿಧಾನಸಭಾಧ್ಯಕ್ಷ ಸ್ಥಾನದಿಂದ ಸಚಿವರಾದರೆ, ಕಿಮ್ಮನೆ ಮಂತ್ರಿಸ್ಥಾನದಿಂದ ಮತ್ತೆ ಶಾಸಕರಾಗಿ ಉಳಿಯುವಂತಾಗಿದೆ.
ಕಿಮ್ಮನೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದರು. ತಾನು ಸಚಿವನಾಗಿದ್ದೇ ಆಕಸ್ಮಿಕ, ಮಂತ್ರಿಗಿರಿಗೆ ಯಾವ ಲಾಬಿಯನ್ನೂ ಮಾಡಿರಲಿಲ್ಲ, ಸಿಕ್ಕ ಅವಕಾಶವನ್ನು ಜನತೆಯ ಸೇವೆಗೆ ಬಳಸಿದ್ದೇನೆ. ಇನ್ನೂ ಸಹ ಜನಸೇವಕನಾಗಿಯೇ ಇರುತ್ತೇನೆ. ಗೂಟದ ಕಾರಿನಲ್ಲಿ ಮಾತ್ರ ಅಧಿಕಾರವಿದೆ ಎಂದು ನಂಬಿದವ ತಾನಲ್ಲ ಎಂದಿದ್ದಾರೆ. ಮಂತ್ರಿಮಂಡಲದಲ್ಲಿ ಪ್ರಾಮಾಣಿಕ ಮತ್ತು ನಿಷ್ಕಳಂಕ ಸಚಿವರೆಂದೇ ಹೆಸರಾಗಿದ್ದ ಕಿಮ್ಮನೆಯವರನ್ನು ಕೈಬಿಟ್ಟಿದ್ದು ಜಿಲ್ಲೆಯ ಹಲವರಲ್ಲಿ ಬೇಸರ ಮೂಡಿಸಿದೆ. ಅವರು ಯಾವತ್ತೂ ಅಧಿಕಾರಿಗಳನ್ನು ಹೆದರಿಸಿ, ಬೆದರಿಸಿ ಸಚಿವ ಸ್ಥಾನದ ದರ್ಪ ತೋರಿಸಿದವರಲ್ಲ. ಕೆಲವೊಮ್ಮೆ ಖಡಕ್ ಆಗಿ ಮಾತನಾಡಿದ್ದಾರೆ. ಅದು ಆ ಸಂದರ್ಭದಲ್ಲಿ ಅನಿವಾರ್ಯವೂ ಆಗಿತ್ತು.
ಈಗ ಕಾಗೋಡು ಸಚಿವರಾಗಿದ್ದಾರೆ. ಜಿಲ್ಲೆಯಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಕೊಡಿಸುವುದು, ಶರಾವತಿ ಸಂತ್ರಸ್ಥರ ಸಮಸ್ಯೆ ಹಾಗೆಯೇ ಕೊಳೆಯುತ್ತಿರುವುದರ ಬಗ್ಗೆ ಅವರು ಹೋರಾಟ ನಡೆಸಿಕೊಂಡೇ ಬಂದಿದ್ದಾರೆ. ಇದಕ್ಕೆ ಈಗ ಒಂದು ತಾರ್ಕಿಕ ಅಂತ್ಯ ಸಿಗುವ ನಿರೀಕ್ಷೆ ಹೊಂದಲಾಗಿದೆ. ವಿಧಾನಸಭೆಯ ಅಧ್ಯಕ್ಷರಾಗಿದ್ದುಕೊಂಡೇ ಸರಕಾರವನ್ನು ತರಾಟೆಗೆ ತೆಗದುಕೊಳ್ಳುತ್ತಿದ್ದ ಕಾಗೋಡು, ಸಚಿವರಾಗಿ ಯಾವ ರೀತಿ ಹೆಜ್ಜೆ ಇಡುತ್ತಾರೆ ಎನ್ನುವುದು ಮಹತ್ವದ್ದಾಗಿದೆ. ಆದರೆ,  ಸದಾ ಖಡಕ್ ಮನುಷ್ಯ ಎಂದೇ ಖ್ಯಾತಿ ಪಡೆದವರು. 84ರ ಹರಯದ ಕಾಗೋಡು ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಹಿಂದೆಯೇ ಸಚಿವರಾಗಬೇಕಿತ್ತು. ಆದರೆ ಆಗಿನ ಕೆಲವು ಬೆಳವಣಿಗೆಗಳು ಅನಿವಾರ್ಯವಾಗಿ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಅವರನ್ನು ತಂದು ಕೂಡ್ರಿಸಿದ್ದವು.
ಸದ್ಯದ ಪರಿಸ್ಥಿತಿಯಲ್ಲಿ ಕಾಗೋಡು ಅವರಿಂದ ಜಿಲ್ಲೆಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಅನುಭವಿ ಸಚಿವರಾಗಿರುವುದರಿಂದ, ಕ್ಯಾಬಿನೆಟ್ ಹುದ್ದೆಯಲ್ಲಿರುವುದರಿಂದ, ಸಿಎಂ ಅವರನ ಮನವೊಲಿಸುವ ತಾಕತ್ತಿರುವುದರಿಂದ ಹಾಗೂ ಮುಲಾಜಿಲ್ಲದೆ ಅಧಿಕಾರಿಗಳಿಗೆ ಚಾಟಿ ಬೀಸುವ ಪ್ರವೃತ್ತಿಯವರಾಗಿರುವುದರಿಂದ ನೆನೆಗುದಿಗೆ ಬಿದ್ದಿರುವ ಅನೇಕ ಯೋಜನೆಗಳಿಗೆ ಮತ್ತೆ ಹಣ ತರುವ ನಿರೀಕ್ಷೆ ಹೊಂದಲಾಗಿದೆ.
ಚಳವಳಿಯ ಮೂಲಕವೇ ರಾಜಕಿಯಕ್ಕೆ ಕಾಲಿಟ್ಟಿರುವ ಕಾಗೋಡು, ಯಾವುದೇ ವಿಚಾರವನ್ನು ಬಗೆಹರಿಸದೆ ಹಾಗೆಯೇ ಬಿಡುವವರಲ್ಲ. ಹೋರಾಟವೇ ಅವರ ಹುಟ್ಟುಗುಣ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಜಾಗೃತಿಗೊಳಿಸುವ ಮೂಲಕ ಜಿಲ್ಲೆಯಲ್ಲಿ ಒಂದಷ್ಟು ಕೆಲಸ ಆಗುವಂತೆ ಮಾಡಬಲ್ಲ ಶಕ್ತಿ ಹೊಂದಿದ್ದಾರೆ. ಜೊತೆಗೆ ಜಿಲ್ಲಾ ಕಾಂಗ್ರೆಸ್‌ನಲ್ಲೂ ಇನ್ನಷ್ಟು ಕ್ರಿಯಾಶೀಲತೆಯನ್ನು ತರಬಲ್ಲರು. ಪಕ್ಷವನ್ನು ಸಂಘಟಿಸುವ ಶಕ್ತಿ ಮತ್ತು ಕಾರ್ಯಕರ್ತರ ನೇರ ಸಂಪರ್ಕ ಹೊಂದಿರುವುದು ಅವರ ಪ್ಲಸ್ ಪಾಯಿಂಟ್.  ಜನಸಾಮಾನ್ಯರನ್ನೂ ಸಹ ಸೌಜನ್ಯದಿಂದ ಕಂಡು ಮಾತನಾಡುವ ವಿಶೇಷ ಗುಣ ಅವರಲ್ಲಿದೆ. ಇವೆಲ್ಲವೂ ಸಹ ಕಾಗೋಡು ಮತ್ತೆ ಸಚಿವರಾಗುವಂತೆ ಮಾಡಿದೆ. ಈ ಮೂಲಕ ಜಿಲ್ಲೆಯಲ್ಲಿ ಒಂದಷ್ಟು ಬದಲಾವಣೆ, ಜನೋಪಯೋಗಿ, ವಿಶೇಷವಾಗಿ ಅರಣ್ಯ ಜಮೀನು ಒತ್ತುವರಿ ವಿಚಾರ ಬಗೆಹರಿಸುವ ಆಶಾವಾದವನ್ನು ಮತದಾರಾರರು, ಬಗರ್‌ಹುಕುಂ ಸಾಗುವಳಿದಾರರು ಹೊಂದಿದ್ದಾರೆ. 

Saturday, 18 June 2016

ಶರವೇಗದಿ ಏರುತ್ತಿದೆ ಕಾಳುಬೇಳೆಗಳ ದರ
* ಗ್ರಾಹಕರು ಕಂಗಾಲು* ದರ ಇಳಿಸಲು ಸರಕಾರಗಳ ಕಸರತ್ತು


ಕಾಳುಬೇಳೆಗಳ ದರ ರಾಕೆಟ್‌ನಂತೆ ಏರಿಕೆಯಾಗುತ್ತಿದೆ. ದೈನಂದಿನ ಆಹಾರ, ತಿಂಡಿ, ಪದಾರ್ಥಗಳ ತಯಾರಿಕೆಗೆ ಬೇಳೆ ಬೇಕೇ ಬೇಕು. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆಯಾದರೆ ಅವನ ಪರಿಸ್ಥಿತಿ ಶೋಚನೀಯವಾಗುತ್ತದೆ. ಈಗ ಮಾರುಕಟ್ಟೆಗೆ ಖರೀದಿಗೆ ಹೋದರೆ ಯಾವುದನ್ನು, ಎಷ್ಟು ಪ್ರಮಾಣದಲ್ಲಿ  ಖರೀದಿಸಬೇಕು ಎಂದು ಯೋಚಿಸುವಂತಾಗಿದೆ. ಏಕೆಂದರೆ ಬೇಳೆಗಳ ದರ 200ರ ಗಡಿಯಲ್ಲಿದೆ. 
ಪ್ರತಿ ಮನೆಯಲ್ಲಿ ಇದರದ್ದೇ ಚರ್ಚೆ. ಕೇವಲ ತರಕಾರಿ ದರ ಏರಿಕೆಯಾಗುತ್ತ, ಇಳಿಕೆಯಾಗುವುದನ್ನು ಜನಸಾಮಾನ್ಯರು ಈವರೆಗೆ ಅನುಭವಿಸಿದ್ದರು. ಆದರೆ ಕಲೆದೊಂದು ವರ್ಷದಿಂದ ಬೇಳೆಕಾಳುಗಳ ದರ ಗಗನಮುಖಿಯಾಗುತ್ತಿದೆ. ಜನಸಾಮಾನ್ಯರ ಅದರಲ್ಲೂ ಮಧ್ಯಮ ಮತ್ತು ಬಡವರ್ಗದವರು ತತ್ತರಿಸಿ ಹೋಗಿದ್ದಾರೆ. ಕೆಜಿಗಟ್ಟಲೆ ತರುತ್ತಿದ್ದವರು ಈಗ ಗ್ರಾಮ್ ಲೆೆಕ್ಕದಲ್ಲಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಬೇಳೆಗಳಿಲ್ಲದೆ ಸಾರು, ತಿಂಡಿ ಮಾಡುವಂತಿಲ್ಲ.
 ಇಡೀ ದೇಶದಲ್ಲೇ ಈಗ ದರ ಏರಿಕೆ ಬಗ್ಗೆ ಚಿಂತನೆ ನಡೆಯುತ್ತಿದೆ. ಒಂದೆಡೆ ಕೆಟ್ಟ ಹವಾಮಾನ ಅಥವಾ ಕೈಕೊಟ್ಟ ಮುಂಗಾರು ಎಂದು ಕೆಲವರು ಹೇಳುತ್ತಿದ್ದಾರೆ. ಜೊತೆಗೆ ದೇಶದ ಬೆನ್ನೆಲುಬಾಗಿರುವ ಕೃಷಿ ಇಳಿಮುಖವಾಗುತ್ತಿರುವುದು, ರೈತನಿಗೆ ಅತಿಯಾದ ಖರ್ಚು, ಮಾರುಕಟ್ಟೆ ಕೊರತೆ, ನ್ಯಾಯಯುತ, ಸಮರ್ಪಕ ಬೆಲೆ ಸಿಗದಿರುವುದು, ಕೂಲಿ ಮತ್ತು ರೋಗದ ಸಮಸ್ಯೆಗಳಿಂದ ಕಂಗಾಲಾಗಿ  ಕೃಷಿಯೇ ಬೇಡ ಎನ್ನುವ ಹಂತ ತಲುಪಿದ್ದಾನೆ. ಇದರಿಂದ ಉತ್ಪಾದನೆ ಕುಂಠಿತವಾಗಿದೆ. ಆದರೆ ಇದರ ಹೊರತಾಗಿಯೂ ಕೆಲವು ಕಾರಣಗಳಿವೆ. ಅವೆಂದರೆ,  ಜಾಗತಿಕ ಹಣದುಬ್ಬರ, ಹೆಚ್ಚುತ್ತಿರುವ ಬೇಡಿಕೆ, ಕೃಷಿ ಇಳಿಮುಖ, ದ್ವಿದಳ ಧಾನ್ಯಗಳ ಬೆಳೆ ಕಡಿಮೆಯಾಗಿರುವುದು,  ಅಸಮರ್ಪಕ ನಿರ್ವಹಣೆ ಮತ್ತು ವಿತರಣೆ, ದಲ್ಲಾಳಿಗಳಿಂದ ಅನಧಿಕೃತ ದಾಸ್ತಾನು, ಸಾರಿಗೆ ದರ, ಪೆಟೊ್ರೀೀಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮೊದಲಾದವು ಕಾರಣವಾಗಿವೆ.
ಸದ್ಯ ಮಾರುಕಟ್ಟೆಯಲ್ಲಿ ಉದ್ದಿನಬೇಳೆ 196 ರೂ, ತೊಗರಿ 166 ರೂ, ಹೆಸರು 120 ರೂ.ನಲ್ಲಿ ಮಾರಾಟವಾಗುತ್ತಿದೆ. ಕೇಂದ್ರ ಸರಕಾರ ಬೆಲೆ ಇಳಿಕೆಯಾಗಿ ಎಲ್ಲ ದ್ವಿದಳ ಧಾನ್ಯಗಳು 120 ರೂ.ನಲ್ಲಿ ಲಭ್ಯವಾಗುವಂತೆ ಮಾಡಬೇಕೆಂದು ರಾಜ್ಯ ಸರಕಾರಗಳಿಗೆ ಸೂಚಿಸಿದೆ. ಜೊತೆಗೆ ಕಾಪು ದಾಸ್ತಾನು ಮಾಡುವವರ ವಿರುದ್ಧ ದಾಳಿ ನಡೆಸಿ ವಶಪಡಿಸಿಕೊಳ್ಳಲು ಸೂಚಿಸಿದೆ. ಇದರ ಫಲವಾಗಿ ಮೂರು ತಿಂಗಳ ಹಿಂದೆ ಕರ್ನಾಟಕದಲ್ಲಿ  (ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ) ಅತ್ಯಧಿಕ ಪ್ರಮಾಣದಲ್ಲಿ ಕಾಪು ದಾಸ್ತಾನು ಪತ್ತೆ ಮಾಡಲಾಗಿದೆ. ತೊಗರಿಯ ಕಣಜ ಎಂದೇ ಕರೆಯಲ್ಪಡುವ ಈ ಜಿಲ್ಲೆಗಳಲ್ಲಿ ಈ ವರ್ಷ ಇಳುವರಿ ಕಡಿಮೆಯಾಗಿದೆ. ಜೊತೆಗೆ ಬೆಳೆಯುವ ಪ್ರಮಾಣವೂ ಸಾಕಷ್ಟು ಕುಂಠಿತಗೊಂಡಿದೆ.
ಇವುಗಳನ್ನು ವಿಶ್ಲೇಷಿಸಿದರೆ, ಇತ್ತೀಚೆಗೆ ರೈತರು ಅಸಮರ್ಪಕ ಮಾರುಕಟ್ಟೆ ಮತ್ತು ನ್ಯಾಯಯುತ ಬೆಲೆ ಸಿಗದ ಕಾರಣ ಕೃಷಿಯಿಂದ ಬಹುತೇಕ ವಿಮುಖರಾಗಿದ್ದಾರೆ. ಆಧುನಿಕ ತಂತ್ರಜ್ಞಾನ ಕೃಷಿಯಲ್ಲಿ ಅಳವಡಿಕೆಯಾಗುತ್ತಿರುವುದರಿಂದ ಹೆಚ್ಚು ಪ್ರಮಾಣದಲ್ಲಿ ದ್ವಿದಳ ಧಾನ್ಯ ಬೆಳೆಯುವ ಕ್ರಾಂತಿಯನ್ನು ಮಾಡಬೇಕಿದೆ. ಈ ವರ್ಷವನ್ನು ಅಂತಾರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷವೆಂದು ಆಚರಿಸಲಾಗುತ್ತಿದೆ. ರೈತರಲ್ಲಿ ಈ ಬಗ್ಗೆ ಆಸಕ್ತಿ ಹುಟ್ಟಿಸಿ ಹೆಚ್ಚು ಇಳುವರಿಯ ಬೀಜ ನೀಡಿ, ಸೌಲಭ್ಯಗಳನ್ನು ಒದಗಿಸಬೇಕಿದೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಬರಗಾಲ ಈ ವರ್ಷ ಎದುರಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲೂ ಇದರ ಪರಿಣಾಮವಾಗಿ ಳೆೆ ಸಿಗಲೇ ಇಲ್ಲ. ಸಕಾಲದಲ್ಲಿ ಮಳೆಯಾಗದೆ ಬೆಳೆಗಳೆಲ್ಲ ಒಣಗಿಹೋದವು.  ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುವ ತಳಿಯ ಸಂಶೋಧನೆಯಾಗಬೇಕು. ಭಾರತ ದ್ವಿದಳ ಧಾನ್ಯಗಳನ್ನು ಅತ್ಯಧಿಕ ಪ್ರಮಾಣದಲ್ಲಿ (ಶೇ. 39ರಷ್ಟು)ಬೆಳೆಯುವ ದೇಶವಾದರೂ ಪ್ರತಿವರ್ಷ ಸುಮಾರು 3.5 ಮಿಲಿಯನ್ ಟನ್‌ನಷ್ಟು ಆಮದು ಮಾಡಿಕೊಳ್ಳುತ್ತಿದೆ. ಇದರಲ್ಲಿ ತಾಂಜಾನಿಯಾದಿಂದ ತೊಗರಿಬೇಳೆಯನ್ನು, ಟರ್ಕಿಯಿಂದ ಉದ್ದಿನಬೇಳೆಯನ್ನು ಮತ್ತು ಮ್ಯಾನ್ಮಾರ್‌ನಿಂದ ವಿವಿಧ ಧಾನ್ಯಗಳನ್ನು ತರಿಸಿಕೊಳ್ಳುತ್ತಿದೆ. ದೇಶಕ್ಕೆ ವರ್ಷಕ್ಕೆ ಸುಮಾರು 22 ಮಿಲಿಯನ್ ಟನ್‌ನಷ್ಟು ದ್ವಿದಳ ಧಾನ್ಯ ಬೇಕಾಗಿದೆ.
ದೇಶದಲ್ಲಿ ಕನಿಷ್ಟ ಬೆಂಬಲ ಬೆಲೆ ಸಂಪೂರ್ಣ ವಿಫಲವಾಗಿದೆ. ಏಕೆಂದರೆ ಸರಕಾರ ಕೊಡುವ ಬೆಲೆ ರೈತರಿಗೆ ಯಾತಕ್ಕೂ ಸಾಲದಂತಾಗಿದೆ. ಇದೇ ವೇಳೆ ಖಾಸಗಿಯವರು ಬೆಂಬಲಬೆಲೆಯ ದುಪ್ಪಟ್ಟು ಬೆಲೆಯನ್ನು ಕೊಟ್ಟು ಮನೆ ಬಾಗಿಲಲ್ಲೇ ಖರೀದಿಸುತ್ತಾರೆ. ರೈತರು ಇದರಿಂದ ಖಾಸಗಿಯವರಿಗೇ ಕೊಡುವ ಸ್ಥಿತಿಯನ್ನು ಸರಕಾರವೇ ನಿರ್ಮಿಸಿದೆ.
 ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ. ಬೆಲೆ ಕಡಿಮೆ ಇದ್ದಾಗ ಸಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಟ್ಟುಕೊಂಡು ಸಾಮಾನ್ಯ ಜನರಿಗೆ ಸಿಗದಂತೆ ಮಾಡುತ್ತಾರೆ. ಸರಬರಾಜು ತನ್ನಿಂತಾನೆ ಕಡಿಮೆಯಾಗುವಂತೆ ಮಾಡಿ ಬೆಲೆ ಏರಿಸುತ್ತಾರೆ. ನಂತರ ತಮ್ಮ ಕಾಪು ದಾಸ್ತಾನನ್ನು ಮಾರುಕಟ್ಟೆಗೆ ಬಿಡುತ್ತಾರೆ. ಆಗ ಅತಿ ಹೆಚ್ಚಿನ ಬೆಲೆಯ ಲಾಭ ಪಡೆಯುತ್ತಾರೆ. ಸರಕಾರ ಇಂತಹ ಕಾಪು ದಾಸ್ತಾನಿಗರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು.
ಜೊತೆಗೆ ಹೆಚ್ಚು ಹೆಚ್ಚು ಬೆಳೆಯಲು ರೈತರನ್ನು ಉತ್ತೇಜಿಸುವ, ಆ ದಿಸೆಯಲ್ಲಿ ಆಂದೋಲನವನ್ನೇ ಅಂತಾರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷದಲ್ಲಿ ಮಾಡಬೇಕಿದೆ. ರೈತರಿಗೆ ಬೇಕಾದ ತಂತ್ರಜ್ಞಾನ ಸಿಗುವಂತೆ ಮಾಡಬೇಕಿದೆ. ಬೆಳೆ ವಿಮೆಯನ್ನು ಕೊಡಬೇಕಿದೆ. ಮರಳಿ ರೈತ ಕೃಷಿಯತ್ತ ಬರುವಂತೆ ಮಾಡುವುದೊಂದೇ ಬೆಳೆ ಹೆಚ್ಚು ಮಾಡಲು ಇರುವ ದಾರಿ. ಸರಕಾರಗಳು ಈ ದಿಸೆಯಲ್ಲಿ ಯತ್ನಿಸಬೇಕಿದೆ. ಆಗ ಮಾತ್ರ ಸುಲಭ ಬೆಲೆಯಲ್ಲಿ ಎಲ್ಲ ಬೆಳೆಗಳು ಸಿಗುವಂತಾಗಲಿವೆ. ಆ ದಿನಗಳಿಗಾಗಿ ಭಾರತದ ಜನರು ಕಾಯುತ್ತಿದ್ದಾರೆ.