Thursday, 28 April 2016

ಮಾನವೀಯ ಮೌಲ್ಯ ಮೆರೆದ ಜಾಲತಾಣ
  ಕ್ಯಾನ್ಸರ್‌ಪೀಡಿತ ಯುವಕನ ನೆರವಿಗೆ ಬಂದ ಸಾರ್ವಜನಿಕರು 

ಶಿವಮೊಗ್ಗ: ರೇವಂತ್ 19ರ ಹರಯದವನು. ಐಟಿಐ ಮುಗಿಸಿದ್ದಾನೆ. ಆದರೆ ಇತ್ತೀಚೆಗೆ ಇದ್ದಕ್ಕಿದ್ದಂತೆ ಮೂಳೆಗಳೆಲ್ಲ ತುಂಬಾ ನೋವು ಕೊಡಲಾರಂಭಿಸಿದವು. ಬೆಳಗಾದರೆ ಏಳುವುದೇ ಬೇಡ ಎನ್ನುವಷ್ಟರ ಮಟ್ಟಿಗೆ ಜೀವತಿನ್ನತೊಡಗಿದ್ದವು. ಇದೇನೋ ಸಮಸ್ಯೆ ಇದೆ ಎಂದರಿತು ಶಿವಮೊಗ್ಗದಲ್ಲಿ ತಜ್ಞರಿಗೆ ತೋರಿಸಿ ಅವರ ಪ್ರಕಾರ ಎಲ್ಲ ರೀತಿಯ  ಸ್ಕ್ಯಾನಿಂಗ್ ಮಾಡಿಸಲಾಯಿತು. ಆಗ ಬೆಳಕಿಗೆ ಬಂದಿದ್ದು ಮೂಳೆ ಕ್ಯಾನ್ಸರ್ ಎಂಬ ಮಹಾಮಾರಿ ತಗುಲಿದೆ ಎನ್ನುವುದು. ಇದನ್ನು ಕೇಳಿದ ಕುಟುಂಬ ಹೌಹಾರಿತು. ಮುಂದೇನು ಎಂಬ ದಾರಿ ತೋಚದೆ ಕುಸಿದುಬಿದ್ದರು.
ಮೆಟಾಸ್ಟೆಟಿಕ್ ಆಸ್ಟಿಯೋಸರ್ಕೊಮಾ ಅರ್ಥಾತ್ ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆ. ಚಿಕಿತ್ಸೆಗೆ ಸುಮಾರು 10 ಲಕ್ಷಕ್ಕೂ ಅಧಿಕ ಮೊತ್ತದ ಹಣ ಬೇಕೆಂದು ವೈದ್ಯರು ಹೇಳಿದಾಗ ಆತನ ತಂದೆ ಆಟೊ ಚಾಲಕ ಗಿರೀಶ್‌ಕುಮಾರ್ ಹೌಹಾರಿ ಹೋದರು. ಏಕೆಂದರೆ ಅಷ್ಟೊಂದು ಮೊತ್ತವನ್ನು ಅವರು ಜೀವಮಾನದಲ್ಲಿ ಕಂಡಿರಲಿಲ್ಲ, ಮಗ ಗುಣಮುಖನಾಗಿ ಬರಬೇಕು. ಆದರೆ ಹಣವಿಲ್ಲ. ಹಣ ಹೊಂದಿಸುವುದು ಹೇಗೆಂಬ ಚಿಂತೆ ಅವರನ್ನು ಕಾಡುತ್ತಿತ್ತು.
   ನಿಧಾನವಾಗಿ ಸಾವರಿಸಿಕೊಂಡ ರೇವಂತ್ ತಂದೆ ಗಿರೀಶ್ ಬಂಧು, ಮಿತ್ರರೆದುರು ಇದನ್ನು ಬಿಚ್ಚಿಟ್ಟರು. ಆಗ ನೆರವಿಗೆ ಸಹಾಯಹಸ್ತ ನೀಡಲು ಮಿತ್ರಸಂಕುಲವೇ ಮುಂದೆ ಬಂದಿತು. ಮಿತ್ರರೊಬ್ಬರು ಮಿತ್ರರೊಬ್ಬರು ವ್ಯಾಟ್ಸಾಪ್ ಮೂಲಕ ಅದನ್ನು ಪ್ರಸಾರ ಮಾಡಿ ಸಾರ್ವಜನಿಕರ ನೆರವಿಗೆ ಮನವಿ ಮಾಡಿದರು.  ಸಾಮಾಜಿಕ ಜಾಲತಾಣದ ಪ್ರಭಾವ ಎಷ್ಟಿದೆ ಎನ್ನುವುದು, ಮಾನವೀಯ ಮೌಲ್ಯಗಳಿಗೆ ತನ್ನದೇ ಆದ ರೀತಿಯಲ್ಲಿ ಅದು ಯಾವ ರೀತಿಯಲ್ಲಿ ಕೊಡುಗೆ ನೀಡಬಹುದೆನ್ನುವುದನ್ನು ಇದು ಸಾಬೀತುಪಡಿಸಿತು. ಜಾಲತಾಣದ  ನೂರಾರು ಸದಸ್ಯರು ಈ ಬಡ ಕುಟುಂಬಕ್ಕೆ ಮಾನವೀಯತೆಯಿಂದ ನೆರವಾದರು. ಸುಮಾರು 1,87,010 ರೂ. ನಷ್ಟು ಹಣ ಸಂಗ್ರಹಿಸಿಕೊಟ್ಟರು.
 ಇಷ್ಟೊಂದು ಹಣ ಕೇವಲ ಜಾಲತಾಣದಿಂದ ಸಂಗ್ರಹವಾಗಿದ್ದನ್ನು ಕಂಡು ಎಲ್ಲರೂ ಮೂಕವಿಸ್ಮಿತರಾದರು. ಆದರೆ ಚಿಕಿತ್ಸೆಗೆ ಇನ್ನೂ ಸುಮಾರು 8 ಲಕ್ಷ ರೂ. ಬೇಕಿದೆ. ಇದಕ್ಕಾಗಿ ದಾನಿಗಳತ್ತ ಸಹಾಯಹಸ್ತ ಯಾಚಿಸಲಾಗುತ್ತಿದೆ. ರೇವಂತ್ ಈಗ ಬೆಂಗಳೂರಿನ ಹೆಲ್ತ್ ಕೇರ್ ಗ್ರೂಪ್ (ಎಚ್‌ಸಿಜಿ) ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ. ಸುಮಾರು ಒಂದು ವರ್ಷದ ಕಾಲ ಚಿಕಿತ್ಸೆಯನ್ನು ಆತ ಅಲ್ಲೇ ಇದ್ದು ಪಡೆಯಬೇಕಿದೆ. ಮೊದಲು ಸರ್ಜರಿ ಮಾಡಿ ನಂತರ ನಿಯೊ ಅಡ್ಜುಮೆಂಟ್ ಕೆಮೊಥೆರಪಿ ನಡೆಯಬೇಕಿದೆ ಎಂದಿದ್ದಾರೆ ತಜ್ಞರಾದ ಡಾ. ಇಂತೆಜಾರ್ ಮೆಹದಿ ಮತ್ತು ಡಾ. ಪಿ. ರಶ್ಮಿ .
ದುಡಿದು ತಿನ್ನುವ ಆಟೋ ಚಾಲಕ ಗಿರೀಶ್‌ಕುಮಾರ್ ಇಲ್ಲಿನ ಶರಾವತಿನಗರದ ವಾಸಿ. ಬಡತನದ ಕುಟುಂಬ. ಅವರಿಗೆ ಮೂವರು ಮಕ್ಕಳು. ರೇವಂತ್ ಮೂರನೆಯ ಮಗ. ಗಿರೀಶ್ ಪತ್ನಿ ಹೇಮಲತಾ ಗೃಹಿಣಿ. ಕುಟುಂಬ ನಿರ್ವಹಣೆಯ ಜೊತೆಗೆ ಮಗನ ಚಿಕಿತ್ಸೆಯ ವೆಚ್ಚವನ್ನೂ ಭರಿಸಬೇಕಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವ ಕುಟುಂಬ ಹೇಗಾದರೂ ಮಾಡಿ ಮಗನ್ನು ಉಳಿಸಿಕೊಳ್ಳಬೇಕೆಂಬ ಹಂಬಲದಲ್ಲಿದೆ. ಅದಕ್ಕಾಗಿ ಇನ್ನಿಲ್ಲದ ಯತ್ನ ನಡೆಸುತ್ತಿದೆ. ಸಾರ್ವಜನಿಕರು, ದಾನಿಗಳು ನೆರವಾಗುವ ಮೂಲಕ ಯುವಕನ ಜೀವ ಉಳಿಸಲು ಮುಂದಾಗಬೇಕಿದೆ.
ಈ ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ಅವರವರ ಸಿದ್ಧಾಂತ, ವಿಚಾರಧಾರೆಗಳು ಏನೇ ಇರಲಿ, ಅದನ್ನೆಲ್ಲ ಮೀರಿ ನಿಲ್ಲುವ  ಮಾನವೀಯ ಮೌಲ್ಯ ಮತ್ತು ಸಾಮಾಜಿಕ ಜವಾಬ್ದಾರಿ  ಎಲ್ಲರಿಗೂ ಇದೆ ಎನ್ನುವುದನ್ನು ಈ ನೆರವು ಮತ್ತೊಮ್ಮೆ ಸಾಬೀತುಪಡಿಸಿದೆ. ಒಂದು ವಿಚಾರವನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಮಹತ್ತರ ಕಾಣಿಕೆ ನೀಡುವ ಈ ಜಾಲತಾಣದ ಬಗ್ಗೆ ಎಷ್ಟು ಕೆಟ್ಟ ಅಭಿಪ್ರಾಯಗಳಿವೆಯೋ ಅಷ್ಟೇ ಅಥವಾ ಅದಕ್ಕೂ ಮಿಗಿಲಾಗಿ ಉತ್ತಮ ಅಭಿಪ್ರಾಯಗಳೂ ಇವೆ. ಇಂತಹ ಉತ್ತಮ ಸಂಪರ್ಕದಲ್ಲಿರುವವರು ಒಟ್ಟಾಗಿ  ಒಳ್ಳೆಯ ಕೆಲಸವನ್ನು ಮಾಡಲು ಇದು ನೆರವಾಗಿದೆ.  
ಬಿದನೂರು ಮಾತಿನ ಮಂಟಪ ಎಂಬ ವ್ಯಾಟ್ಸಾಪ್ ಗ್ರೂಪ್ ಈ ಅವಿಸ್ಮರಣೀಯ ಕೆಲಸ ಮಾಡಿದೆ. ಇದರಲ್ಲಿ ಸುಮಾರು 100ರಷ್ಟು ಸದಸ್ಯರಿದ್ದಾರೆ. ದಿನನಿತ್ಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಮೊದಲಾದ ಎಲ್ಲಾ ಚರ್ಚೆಗಳೂ ಇಲ್ಲಿ ಬಿಸಿಬಿಸಿಯಾಗಿ ನಡೆಯುತ್ತಿವೆ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಅವರು ಈ ಗ್ರೂಪಿನಲ್ಲಿ ಯುವಕನ ಕ್ಯಾನ್ಸರ್ ವಿಷಯವನ್ನು ಪ್ರಸ್ತಾಪಿಸಿದ್ದರು. ಅದು ಇಷ್ಟೊಂದು ನೆರವಿಗೆ ಕಾರಣವಾಗಿದೆ.

ರೇವಂತ್‌ಗೆ ಸಹಾಯ ಮಾಡಲಿಚ್ಛಿಸುವವರು 
ಸಿ.ಎಸ್. ಗಿರೀಶ್‌ಕುಮಾರ್, ಎಸ್‌ಬಿ ಅಕೌಂಟ್, ಐಎಫ್‌ಎಸ್‌ಸಿ ನಂ. ವಿಐಜೆಬಿ (ವಿಜಯಾ ಬ್ಯಾಂಕ್)-0001299 ಈ ಖಾತೆಗೆ ನಗದು, ಚೆಕ್, ಡಿಡಿ ಮೂಲಕ ನೆರವಾಗಬಹುದು.  

Wednesday, 27 April 2016

ಪಾಲಿಕೆಯ ಮಾನ ಕಳೆದ ಅಧಿಕಾರಿಗಳು 
 DATTATREYA HEGDE

  ಜವಾಬ್ದಾರಿಯುತ ಆಡಳಿತ, ದಕ್ಷ ಅಧಿಕಾರಿಗಳು ಮತ್ತು ಕರ್ತವ್ಯ ಪ್ರಜ್ಞೆ  ಇರುವ ಜನಪ್ರತಿನಿಧಿಗಳು, ಜವಾಬ್ದಾರಿ ಧೋರಣೆಯ ನೌಕರರು, ಸಿಬ್ಬಂದಿಗಳು ಒಂದು ಸಂಸ್ಥೆಯಲ್ಲಿ ಇಲ್ಲದಿದ್ದರೆ ಅಲ್ಲಿನ ಆಡಳಿತ ಎಷ್ಟೊಂದು ಜಡ್ಡುಗಟ್ಟಿರುತ್ತದೆ, ಭ್ರಷ್ಟತನ ಹೇಗೆ ವ್ಯಾಪಿಸಿರುತ್ತದೆ  ಎನ್ನುವುದಕ್ಕೆ ಶಿವಮೊಗ್ಗ ಪಾಲಿಕೆಯಲ್ಲಿ ಒಂದು ವಾರದಲ್ಲಿ ನಡೆದ    ಎರಡು ಜಫ್ತಿ ಪ್ರಕರಣಗಳೇ ಸಾಕ್ಷಿ. 
2011ರ ಪರಿಹಾರ ಪ್ರಕರಣವೊಂದು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಈಗಿನ ಪಾಲಿಕೆಯವರು ಮುಖಭಂಗ ಅನುಭವಿಸುವ ಪರಿಸ್ಥಿತಿ ಎದುರಿಸುವಂತಾಗಿದೆ. ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎನ್ನುವಂತಾಗಿದೆ. ಅಂದಿನ ಅಧಿಕಾರಿಗಳು ಮತ್ತು ಆಡಳಿತದ ಸೂತ್ರಧಾರರು ಈ ಪರಿಹಾರ ವಿಷಯವನ್ನು ರಾಜಿ ಸೂತ್ರದ ಮೂಲಕ ಪರಿಹರಿಸಬಹುದಿತ್ತು. ಒಂದಲ್ಲ, ನಾಲ್ಕು ಬರಿ ಚರ್ಚೆ ನಡೆಸಿ ಮುಗಿಸಬಹುದಿತ್ತು. ಆದರೆ ಅವರಲ್ಲಿನ ದೂರದೃಷ್ಟಿಯ ಕೊರತೆ, ಮತ್ತು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂಬ ಕಾಳಜಿ ಇಲ್ಲದಿರುವುದು ಇಷ್ಟೆಲ್ಲ ರಾದ್ಧಾಂತಗಳಿಗೆ ಕಾರಣವಾಗಿದೆ ಎಂದೇ ಹೇಳಬೇಕಾಗುತ್ತದೆ.
ವಿಜಯನಗರ ಬಡಾವಣೆಯ ನಿವಾಸಿ ತಮ್ಮಯ್ಯ ಎನ್ನುವವರಿಗೆ ಸೇರಿದ ನಿವೇಶನದಲ್ಲಿ 2011 ರಲ್ಲಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಕುಡಿಯುವ ನೀರಿನ ಪೈಪ್ ಅಳವಡಿಕೆ ಮಾಡಲಾಗಿತ್ತು. ರಸ್ತೆ ನಿರ್ಮಾಣಕ್ಕೆ ನಿವೇಶನದ ಮಾಲಕರ ಅನುಮತಿ ಕೂಡ ಪಡೆದಿರಲಿಲ್ಲ. ಅಂದರೆ ಅಂದಿನ ನಗರಸಭೆ ತನ್ನ ವ್ಯಾಪ್ತಿ ಮೀರಿ, ಕನಿಷ್ಟ ಸೌಜನ್ಯಕ್ಕೂ ಮಾಲಕರನ್ನು ಗಮನಕ್ಕೆ ತೆಗೆದುಕೊಳ್ಳದೆ ದರ್ಪದಿಂದ ಅಥವಾ ತಾನು ಏನು ಮಾಡಿದರೂ ನಡೆಯುತ್ತದೆ ಎನ್ನುವ ಅಹಂಕಾರದಲ್ಲಿ ಹೇಗೆ ವರ್ತಿಸಿರಬಹುದೆನ್ನುವುದನ್ನು ಊಹಿಸಬಹುದು. ನಗರಸಭೆಯ ಈ ಕ್ರಮದ ವಿರುದ್ದ ತಮ್ಮಯ್ಯ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ, ಅರ್ಜಿದಾರರಿಗೆ ಸೂಕ್ತ ನ್ಯಾಯ ಕಲ್ಪಿಸುವಂತೆ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಆದೇಶದ ಹೊರತಾಗಿಯೂ ಅಧಿಕಾರಿಗಳು ಅರ್ಜಿದಾರರಿಗೆ ನ್ಯಾಯ ಕಲ್ಪಿಸುವ ವ್ಯವಸ್ಥೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಮಹಾನಗರ ಪಾಲಿಕೆಯ ಚರಾಸ್ತಿ ಜಪ್ತಿ ಮಾಡುವಂತೆ ಆದೇಶ ಹೊರಡಿಸಿತ್ತು. 
ಮಾರ್ಚ್ 22 ರಂದು ಕೋರ್ಟ್ ಅಮೀನರ ತಂಡ ಪಾಲಿಕೆಗೆ ಆಗಮಿಸಿ ಸ್ಥಿರಾಸ್ತಿ ಜಪ್ತಿಗೆ ಮುಂದಾಗಿದ್ದರು. ಮೇಯರ್ ಮಧ್ಯಪ್ರವೇಶಿಸಿ ಸಂಬಂಧಿಸಿದ ಅರ್ಜಿದಾರರ ಸಮಸ್ಯೆ ಇತ್ಯರ್ಥಪಡಿಸುವ ಭರವಸೆಯಿತ್ತಿದ್ದರು. ಆದರೆ ಅರ್ಜಿದಾರರ ಸಮಸ್ಯೆಯನ್ನು ಮತ್ತೆ  ಪರಿಹಾರ ಮಾಡುವ ಗೋಜಿಗೆ ಮೇಯರ್ ಮತ್ತು ಅಧಿಕಾರಿಗಳು ಮುಂದಾಗಲಿಲ್ಲ. ಪಾಲಿಕೆ ಆಡಳಿತ ಕೊಟ್ಟ ಭರವಸೆಯಂತೆ ನಡೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ (ನಿನ್ನೆ) ಅರ್ಜಿದಾರರೊಂದಿಗೆ ಮತ್ತೆ ಪಾಲಿಕೆ ಕಚೇರಿಗೆ ಆಗಮಿಸಿದ ಕೋರ್ಟ್ ಅಮೀನರು ಚರಾಸ್ತಿ ಜಪ್ತಿಗೆ ಮುಂದಾದರು. ಇದರಿಂದ ಎಚ್ಚೆತ್ತುಕೊಂಡ ಆಯುಕ್ತರು ಅರ್ಜಿದಾರರೊಂದಿಗೆ ವಿವಾದಿತ ನಿವೇಶನದ ಖುದ್ದು ಪರಿಶೀಲನೆ ನಡೆಸಿದರು. ಪಾಲಿಕೆ ಕಚೇರಿಯಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದವು. ಅರ್ಜಿದಾರರಿಗೆ ಪಾಲಿಕೆ ವತಿಯಿಂದ ಅಗತ್ಯ ನೆರವು ಕಲ್ಪಿಸುವ ಭರವಸೆಯಿತ್ತ ಹಿನ್ನೆಲೆಯಲ್ಲಿ ಅಮೀನರು ಜಪ್ತಿ ಕಾರ್ಯವನ್ನು ಮತ್ತೆ ಅರ್ಧಕ್ಕೆ ಸ್ಥಗಿತಗೊಳಿಸಿದರು. 
ಈ ರೀತಿ ಘಟನೆಗಳು ನಗರಸಭೆ ಅಥವಾ ಪಾಲಿಕೆಗೆ ಹೊಸತೇನಲ್ಲ. ಇಂತಹ ಹತ್ತಾರು ಘಟನೆಗಳು ಕಳೆದ ನಾಲ್ಕಾರು ವರ್ಷಗಳಲ್ಲಿ ನಡೆದುಹೋಗಿವೆ. ಆದರೂ ಬುದ್ದಿ ಕಲಿಯದ ಅಧಿಕಾರಿಗಳು, ಭ್ರಷ್ಟಾಚಾರದಲ್ಲೇ ಮುಳುಗಿ ಇಲ್ಲಿಯೇ ತಳವೂರಿರುವ ಕೆಲವು ನೌಕರರು ಪಾಠ ಕಲಿತಿಲ್ಲ. ಜಾಗದ ಮಾಲಕನನ್ನು ಕಮಿಷನ್‌ಗಾಗಿಯೋ ಅಥವಾ ಇನ್ನಿತರ ಯಾವ ಉದ್ದೇಶಕ್ಕೋ ಗೋಳುಹೊಯ್ದುಕೊಂಡಷ್ಟು, ಆಟವಾಡಿಸಿದಷ್ಟು ತಮಗೇ ಲಾಭಎಂದುಕೊಂಡಿದ್ದಾರೆ. ಆ ಹಣವನ್ನು ಕೆಲಸ ನಿರ್ವಹಿಸುವವ ಮೊದಲೇ ಕೊಟ್ಟಿದ್ದರೆ ಇಷ್ಟೊಂದು ರಗಳೆಯನ್ನು ಮೈಮೇಲೆ ಎಳೆದುಕೊಳ್ಳುವುದು ನಡೆಯುತ್ತಿರಲಿಲ್ಲ. ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸುವ ಹಿರಿಯ ಅಧಿಕಾರಿಗಳು, ತಾವು ಹೇಳಿದಂತೆಯೇ ನಡೆಯಬೇಕೆಂಬ ಅಹಂನ ಕೆಲವು ಆಡಳಿತಗಾರರಿಂದಾಗಿ ಇಂತಹ ಅವಮಾನವನ್ನು ಪಾಲಿಕೆ ಎದುರಿಸಬೇಕಾಗಿದೆ.
 ಮಾಲಕನಿಗೆ ಪರಿಹಾರವನ್ನು ಒಂದಲ್ಲ ಒಂದು ದಿನ ಕೊಡಲೇಬೇಕೆಂಬ ಕನಿಷ್ಟ ವ್ಯವಹಾರಿಕ ಜ್ಞಾನವೂ ನೌಕರರಿಗೆ ಇಲ್ಲ. ಇಷ್ಟೆಲ್ಲ ಮಾಡಿದ್ದರಿಂದ ಆದ ಲಾಭವೇನು ಗೊತ್ತೇ? ಬಡ್ಡಿ ರಹಿತ ಪಾಲಿಕೆ ಅದನ್ನು ಈಗ ಪಾಲಿಸಬೇಕಿದೆ. ಎಷ್ಟೋ ಲಕ್ಷ ರೂ. ವನ್ನು ಈಗ ಕೊಡಲೇಬೇಕಿದೆ. ಮೂರನೆಯ ಬಾರಿ ಯಾವ ಕಾರಣಕ್ಕೂ ಅಮೀನರು  ಸುಮ್ಮನೆ ಹೋಗುವುದಿಲ್ಲ ಎನ್ನುವುದನ್ನು ಅರಿಯಬೇಕಿದೆ. ತನ್ನ ದಿವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆಗೆ ಮತ್ತೊಮ್ಮೆ ಪಾಲಿಕೆ ಆಡಳಿತ ಸಾರ್ವಜನಿಕ ವಲಯದಲ್ಲಿ ಮುಜುಗುರಕ್ಕೀಡಾಗುವಂತಾಯಿತು. 
ಅಧಿಕಾರಿಗಳು  ಇಂತಹ ನಿರ್ಧಾರ ಕೈಗೊಳ್ಳುವ ಮುನ್ನ ಮುಂದೇನಾಗಬಹುದೆನ್ನುವ ಬಗ್ಗೆ ಯೋಚಿಸುವುದಿಲ್ಲ. ಜೊತೆಗೆ ಮುಂದೆ ನೋಡಿಕೊಂಡರಾಯಿತು. ಆ ವೇಳೆಗೆ ಬೇರೆ ಯಾರೋ ಆಯುಕ್ತರಾಗಿರುತ್ತಾರೆ, ಅಧ್ಯಕ್ಷರಾಗಿರುತ್ತಾರೆ ಅಥವಾ ಇಂಜಿನೀಯರ್ ಆಗಿರುತ್ತಾರೆ. ಅವರೇ ಅದನ್ನು ಬಗೆಹರಿಸಿಕೊಳ್ಳಲಿ, ಈಗ ಮುಂದೂಡಿಬಿಡೋಣ ಎನ್ನುವ ಮನೋಭಾವ ಇದಕ್ಕೆ ಕಾರಣ. 
ಇನ್ನಾದರೂ ಪಾಲಿಕೆ ಅಧಿಕಾರಿಗಳು ಮತ್ತು ಆಡಳಿತ ಬಾಕಿ ಉಳಿಸಿಕೊಂಡಿರುವ ಪರಿಹಾರವನ್ನು ಕೂಡಲೇ ಪಾವತಿಸುವ ಕೆಲಸ ಮಾಡಬೇಕಿದೆ. ವಿವಿಧೆಡೆ ರಸ್ತೆ, ಚರಂಡಿ ನಿರ್ಮಾಣ ಮಾಡುವಾಗ ಇಂತಹ ಘಟನೆ ಎದುರಾಗುತ್ತದೆ. ಅದನ್ನೆಲ್ಲ ಆಗಲೇ ಪರಿಹರಿಸಿ ಸೂಕ್ತ ಪರಿಹಾರ ಕೊಟ್ಟು ಮುಗಿಸಿಬಿಡಬೇಕು. ಇಲ್ಲವಾದಲ್ಲಿ ಬೆಳೆದು ಪಾಲಿಕೆಯ ಮಾನದ ಜೊತೆಗೆ ಆಡಳಿತ ನಡೆಸುವವರ ಮತ್ತು ಅಧಿಕಾರಿಗಳ ಮಾನವೂ ಹರಜಾಗುತ್ತದೆ  ಎನ್ನುವುದನ್ನು ಅರಿಯಬೇಕಿದೆ

Thursday, 21 April 2016

ಕ್ಯಾನ್ಸರ್‌ಪೀಡಿತ ಪತ್ನಿಯ ಸೇವೆ: ಸಮಾಜಕ್ಕೆ ಮಾದರಿಯಾದ ಪತಿ
 ಆರೈಕೆಗಾಗಿ ನೌಕರಿ ಬಿಟ್ಟು ಮಾನವೀಯತೆ, ಪ್ರೀತಿಯ ಹೊಳೆ ಹರಿಸಿದ


ದತ್ತಾತ್ರೇಯ ಹೆಗಡೆ


ರಾಜ್‌ಕುಮಾರ್-ಮಾಧವಿ ಅಭಿನಯದ ’ಹಾಲುಜೇನು’ ಕನ್ನಡ ಚಲನಚಿತ್ರವನ್ನು ನೀವು  ನೋಡಿರಬಹುದು. ಅದರಲ್ಲಿ ಕ್ಯಾನ್ಸರ್‌ಪೀಡಿತ  ಪತ್ನಿಯನ್ನು ನಾಯಕನಟ ಪ್ರೀತ್ಯಾದರದಿಂದ ತಾನೇ ಆರೈಕೆ ಮಾಡುತ್ತಾನೆ, ಜೊತೆಗೆ ಮನೆಯ ಎಲ್ಲಾ ಕೆಲಸವನ್ನೂ ನಿಭಾಯಿಸುತ್ತಾನೆ. ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ, ಆಯಾಸ ಪಡದಿರು ನೀನು’  ಎಂದು ಹಾಡುತ್ತ್ತಾ ಎಲ್ಲ ಕೆಲಸವನ್ನು ತಾನೇ ಮಾಡುತ್ತೇನೆ ಎನ್ನುತ್ತಾನೆ. ಜೊತೆಗೆ, ‘ಏನೇ ಆದರೂ ನಿನ್ನ, ಸೇವೆಯ ಮಾಡುವೆ ಚಿನ್ನಾ .....’ ಎಂದು ಹಾಡುತ್ತಾರೆ. ಈ ದೃಶ್ಯವನ್ನು ಮತ್ತೆ ನೆನಪಿಸುವಂತಹ ನೈಜ ಘಟನೆಯೊಂದು ಇಲ್ಲಿದೆ:


ಅವರೋರ್ವ ಗೌರವಾನ್ವಿತ  ಶಿಕ್ಷಕಿ; ಅನುಪಮ ಸೌಂದರ್ಯದ ಖನಿ.  ದೃಷ್ಟಿ ತಾಗೀತೇನೋ ಅನ್ನುವಂತಹ ಸುಮಧುರ ದಾಂಪತ್ಯದ ಸುಂದರ ಸುಖೀ  ಕುಟುಂಬ. ಆ ಕುಟುಂಬದಲ್ಲಿ ಪ್ರೀತಿ- ಪ್ರೇಮದ, ಹಾಲು-ಜೇನಿನ ಹೊಳೆಯೇ ಹರಿದಿತ್ತು. ಇಂತಹ ಸುಖೀಸಂಸಾರವನ್ನು ಸುಮ್ಮನೆ ಬಿಡಲು ವಿಧಿಗೆ ಮನಸ್ಸಾಗಲಿಲ್ಲವೇನೋ.....?. ನೆಮ್ಮದಿ ಕಸಿದುಕೊಳ್ಳಲು ಹೊಂಚು ಹಾಕಿ ಕುಳಿತಿದ್ದ ವಿಧಿ, ಕ್ಯಾನ್ಸರ್ ಎಂಬ ಮಹಾಮಾರಿಯ ರೂಪದಲ್ಲಿ ವಕ್ಕರಿಸಿಯೇ ಬಿಟ್ಟ.
ಶಿಕ್ಷಕಿ ವಿಜಯಲಕ್ಷ್ಮೀ ಅವರನ್ನು ಕ್ಯಾನ್ಸರ್ ಸುದೀರ್ಘ ಏಳು ವರ್ಷಗಳ ಕಾಲ ಬಾಧಿಸಿತು. ಈ ಅವಧಿಯಲ್ಲಿ ಪತಿ ಜ್ಞಾನೇಶ್ ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು, ಪ್ರೀತಿಯಲ್ಲಿ, ಆರೈಕೆಯಲ್ಲಿ ಸ್ವಲ್ಪವೂ ಕುಂದುಂಟಾಗದಂತೆ ನೋಡಿಕೊಂಡರು. ಇದು ಇಡೀ ಸಮಾಜಕ್ಕೆ ಮಾದರಿಯಾಗುವಂತಹುದು. ಏಕೆಂದರೆ, ಕ್ಯಾನ್ಸರ್ ರೋಗಿ ಎಂದಾಕ್ಷಣ ಹೆತ್ತ ತಂದೆ-ತಾಯಿಯರನ್ನೇ ಆಶ್ರಮಕ್ಕೋ, ಸಂಘ-ಸಂಸ್ಥೆಗಳ ವಶಕ್ಕೋ ಬಿಟ್ಟು ಬರುವ ಅಮಾನವೀಯ ಗುಣಗಳೇ ಬಹುತೇಕ ಕಂಡುಬರುವ ಈ ದಿನಮಾನಗಳಲ್ಲಿ ಅಥವಾ  ಮನೆಯಲ್ಲಿ ಕೆಲಸದಾಳುಗಳ ಮೂಲಕ ಅವರ ಸೇವೆ ಮಾಡಿಸುವುದನ್ನೋ ಕಾಣುತ್ತೇವೆ. ಆದರೆ ಇಲ್ಲಿ ಪಾಲಕರ ಮೇಲಿರುವ ಪ್ರೀತಿಗಿಂತಲೂ ಮಿಗಿಲಾಗಿ ಪತ್ನಿಯನ್ನು ನೋಡಿಕೊಂಡಿದ್ದು  ಎಲ್ಲರಿಗೂ ಮಾದರಿಯಾಗುವಂತಹುದು.
 ಪತ್ನಿ ಅಸಾಧಾರಣ ಬುದ್ಧಿವಂತೆ. ಸ್ತನ ಕ್ಯಾನ್ಸರ್ ಆಕೆಗೆ ಬಾಧಿಸಿದೆ ಎನ್ನುವ ವಿಚಾರ ಎಂದಿಗೂ ಬಾರದಿರುವಂತೆ, ಇದರಿಂದ ಧೈರ್ಯಗುಂದದಂತೆ ನೋಡಿಕೊಳ್ಳುವುದು ಸುಲಭದ ಮಾತಲ್ಲ. ರೋಗ ಇದೆ ಎಂದಾಕ್ಷಣವೇ ತಮಗೆ ಸಾವು ಖಚಿತ ಎಂದು ಹೆದರಿಯೇ ಇನ್ನಷ್ಟು ದಿನ ಬದುಕುವ ಅವಕಾಶವಿದ್ದರೂ ಅನೇಕರು ಅದನ್ನು ಕೈಚೆಲ್ಲುತ್ತಾರೆ. ಆದರೆ, ಇಲ್ಲಿ ವಿಜಯಲಕ್ಷ್ಮಿಗೆ ಪತಿ ತುಂಬಿದ ಮಾನಸಿಕ ಧೈರ್ಯ ಎಷ್ಟಿತ್ತೆಂದರೆ, ಉನ್ನತ ವಿದ್ಯಾಭ್ಯಾಸದ ಆಸೆ ದಿನೇ ದಿನೇ ಹೆಚ್ಚುತ್ತಿತ್ತು. ಒಂದೆಡೆ ಕ್ಯಾನ್ಸರ್ ಎಂಬ ರಕ್ಕಸ  ತನ್ನೊಡನೆ ಆಟವಾಡುತ್ತಿದ್ದರೂ, ಇನ್ನೊಂದೆಡೆ ಎಂ.ಎ  ಮತ್ತು ಬಿ.ಇಡಿ ಎರಡನ್ನೂ ಓದಿದರು. ಎಂ.ಎ ಯಲ್ಲಿ 2013-14ರ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ 8ನೆಯ ರ‌್ಯಾಂಕ್ ಗಳಿಸಿದರು. 2014ರಲ್ಲಿ ರೆಗ್ಯುಲರ್ ಆಗಿ ಬಿ.ಇಡಿ ತರಗತಿಗೆ ಹೋಗಿ ಓದಿ ಅಲ್ಲಿಯೂ  ಕಾಲೇಜಿಗೆ ಮೊದಲಿಗರಾದರು. ದೇಹದ  ಆ ಭಾಗವನ್ನು ನೋವು ದಿನೇದಿನೇ ಗೋಳುಹೊಯ್ದುಕೊಳ್ಳುತ್ತಲೇ ಇತ್ತು. ಪತ್ನಿಯ ಎಲ್ಲ ಸೇವೆಯನ್ನು  ಅನವರತ ಮಾಡಿ ಆಕೆಗೆ ಕ್ಯಾನ್ಸರ್‌ನ ನೋವು  ಮನಸ್ಸಿಗೆ ಬಾರದಂತೆ ಸಲಹಿದರು. ಆದರೂ ಏರುತ್ತಲೇ ಇದ್ದ ಕ್ಯಾನ್ಸರ್ ಬಾಧೆ ವಿಧಿಯಾಟದ ಮುಂದೆ ಯಾರ ಆಟವೂ ನಡೆಯುವುದಿಲ್ಲ ಎನ್ನುತ್ತಾರಲ್ಲ, ಅದೇ ರೀತಿ ವಿಜಯಲಕ್ಷ್ಮೀ ಇತ್ತೀಚೆಗೆ ತನ್ನ ಏಕಮಾತ್ರ ಪುತ್ರಿ ವಿಭಾಮಯಿ ಮತ್ತು ಪ್ರೀತಿಯನ್ನೇ ಹರಿಸಿದ ಪತಿಯನ್ನು ಬಿಟ್ಟು, ಇಹಲೋಕದ ಯಾತ್ರೆ ಮುಗಿಸಿದ್ದಾರೆ.
ಇದು ಸಾಮಾನ್ಯ ಘಟನೆಯಲ್ಲ.  ಏಕೆ ಗೊತ್ತೆ? ಹಾಲುಜೇನಿನಂತಹ ಕುಟುಂಬದಲ್ಲಿ ಕ್ಯಾನ್ಸರ್ ಬಿರುಗಾಳಿ ಎಬ್ಬಿಸಿದಾಗ ಇನ್ಸೂರೆನ್ಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ದೊಡ್ಡ ಮೊತ್ತದ ಸಂಬಳ  ಪಡೆಯುತ್ತಿದ್ದ ಪತಿ ಜ್ಞಾನೇಶ್ ತನ್ನ ಸಂಬಳಕ್ಕಿಂತ ಪತ್ನಿಗೆ ಇನ್ನಷ್ಟು ಪ್ರೀತಿಯ ಮಳೆ ಸುರಿಸಿ ಆಕೆಯನ್ನು ಬದುಕಿಸಲು ಟೊಂಕಕಟ್ಟಿ ನಿಂತರು. ಶತಾಯಗತಾಯ ಪತ್ನಿಯನ್ನು ಉಳಿಸಿಕೊಳ್ಳಲೇಬೇಕೆಂಬ ಏಕೈಕ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ಕೂಡ ನೀಡಿದರು.
ಜ್ಞಾನೇಶ್ ಭದ್ರಾವತಿಯ ಹಾಲಪ್ಪ ವೃತ್ತದ ಬಳಿಯ ವಾಸಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ. ಸರಕಾರಿ ನೌಕರಿಯಲ್ಲಿದ್ದ ತಂದೆ-ತಾಯಿ ಹುಡುಕಿದವಳನ್ನೇ ಮದುವೆಯಾದರು. ಮದುವೆಯಾಗುವ ಹುಡುಗಿಗೆ ಕಷ್ಟ-ಸುಖ ಗೊತ್ತಿರಬೇಕೆನ್ನುವುದು ಅವರ ನಿರ್ಧಾರವಾಗಿತ್ತು. ಅಂತೆಯೇ ವಿಜಯಲಕ್ಷ್ಮೀ ಎಂಬ ಸರ್ಕಾರಿ ಕನ್ನಡ ಶಾಲೆಯ ಶಿಕ್ಷಕಿ ಈತನ ಕೈ ಹಿಡಿದಿದ್ದಳು. ಇವರಿಗೊಂದು ಮುದ್ದಾದ ಹೆಣ್ಣು ಮಗು. ಇಂತಹ ಕುಟುಂಬ ಹಾಲು ಜೇನಿನಲ್ಲಿ ಕೈತೊಳೆಯುತ್ತಿತ್ತು. ಆದರೆ ಸ್ತನ ಕ್ಯಾನ್ಸರ್ ಯಾವಾಗ ಅವರನ್ನು ಆವರಿಸಿತೋ ಜ್ಞಾನೇಶ್ ಕಂಗಾಲಾದರು.  ಪತ್ನಿಯ ಯೋಗಕ್ಷೇಮವೇ ಹಣ, ಉದ್ಯೋಗಕ್ಕಿಂತ ಮುಖ್ಯವೆಂದು  ಅರಿತು ತನ್ನ ಜೀವನವನ್ನೇ ಮುಡಿಪಾಗಿಟ್ಟರು. ಹೊಸನಗರದಲ್ಲಿ ಶಿಕ್ಷಕಿಯಾಗಿದ್ದ ಪತ್ನಿಯನ್ನು ಭದ್ರಾವತಿಗೆ ವರ್ಗಾವಣೆ ಮಾಡಿಸಿಕೊಂಡರು.
ಮಗಳಿಗೆ ಪಾಠ ಹೇಳಿಕೊಡುವುದು, ಪತ್ನಿಯನ್ನು ಶಾಲೆಗೆ ಬಿಡುವುದು, ಕರೆದುಕೊಂಡು ಬರುವುದು, ಮನೆಯ ಎಲ್ಲ ಕೆಲಸಗಳನ್ನು ಸ್ವಲ್ಪವೂ ಬೇಸರಿಸದೆ ನಿರ್ವಹಿಸುವುದು ಜ್ಞಾನೇಶ್ ಅವರ ನಿತ್ಯದ ಕಾಯಕವಾಯಿತು. ಮೂರು ತಿಂಗಳಿಗೊಮ್ಮೆ  ಮಣಿಪಾಲಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸುವುದು ನಡೆದೇ ಇತ್ತು. ಇದಕ್ಕ್ಕಾಗಿ ಸಾಕಷ್ಟು ಹಣವನ್ನೂ ಖರ್ಚು ಮಾಡಿದರು. ಪತ್ನಿ ಸರ್ಕಾರಿ ನೌಕರಿಯಲ್ಲಿದ್ದುದರಿಂದ  ಹತ್ತಾರು ಓಡಾಟ ಮಾಡಿ ಜ್ಯೋತಿ ಸಂಜಿವಿನಿ ಯೋಜನೆಯಡಿ  ನೆರವನ್ನೂ ಪಡೆದುಕೊಂಡರು. ಪಾಲಕರು, ಕೆಲವು ಸಂಬಂಧಿಕರು, ಮಿತ್ರರೂ ಸಹ ನೆರವಾಗಿದ್ದನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತಾರೆ ಜ್ಞಾನೇಶ್.  
ಮಡದಿಯ ಕಾಯಿಲೆ ಉಲ್ಬಣವಾಗುತ್ತಿದ್ದರೂ, ಪತ್ನಿಗೆ, ಹತ್ತಿರದವರಿಗೆ, ಅಕ್ಕಪಕ್ಕದವರಿಗೆ  ಕ್ಯಾನ್ಸರ್‌ನ ಭೀಕರತೆ ಬಗ್ಗೆ ಹೇಳಿರಲಿಲ್ಲ. ಜತನದಿಂದ ಪತ್ನಿಯನ್ನು ಕಾಪಾಡಿಕೊಳ್ಳುವುದು   ಮತ್ತು  ಪತ್ನಿ ಬದುಕುಳಿದರೆ ಸಾಕು ಎನ್ನುವುದೊಂದೇ ಉದ್ದೇಶವಾಗಿತ್ತು.  
ಆದರೆ, ಪತ್ನಿಯ ಕೊನೆದಿನ ಸಮೀಪಿಸುತ್ತಿರುವುದು ಪತಿಗೆ ಅರಿವಾಗುತ್ತಲೇ ಇತ್ತು. ಇಷ್ಟಾದರೂ ಪತ್ನಿಗೆ ಸತತ ಧೈರ್ಯ ತುಂಬುತ್ತಲೇ ಇದ್ದರು. ನೋಡುಗರ ಪಾಲಿಗೆ ನರಕಸದೃಶ ಪರಿಸ್ಥಿತಿ ಇದ್ದರೂ ದೇವತೆಯಂತೆ ಪೂಜಿಸುತ್ತಿದ್ದರು. ಸ್ನಾನದಿಂದ ಹಿಡಿದು ಶೌಚಾಲಯದವರೆಗಿನ ಎಲ್ಲ ಸೇವೆಯನ್ನು ತಾನೇ ಮಾಡಿ, ಪತ್ನಿಗೆ ಊರುಗೋಲಾಗಿದ್ದರು. ಶಾಲಾ ಆಡಳಿತ ಮಂಡಳಿಯವರೂ, ಸಹಶಿಕ್ಷಕರೂ ಸಹ ವಿಜಯಲಕ್ಷ್ಮಿಯ ಪರಿಸ್ಥಿತಿ ಅರಿತಿದ್ದರಿಂದ ಅವರು ಪಾಠ ಮಾಡುವ ವೇಳೆ ಸಹಕರಿಸುತ್ತಿದ್ದರು. ಪತಿ ಸೇವೆ ಮಾಡುವುದನ್ನು ಕಂಡು ಎಲ್ಲರೂ ಬೆಕ್ಕಸಬೆರಗಾಗಿದ್ದರು.
ಪತ್ನಿಗೆ ಎಷ್ಟೇ ಧೈರ್ಯ ತುಂಬಿ, ಸಾವು ಬಾರದ ರೀತಿಯಲ್ಲಿ ನೋಡಿಕೊಂಡರೂ  ವಿಧಿಯಾಟವೇ ಮೇಲಾಗಿತ್ತು. ಎಪ್ರಿಲ್ 11ರಂದು ಪತಿಯ ತೊಡೆಯ ಮೇಲೆ ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದರು ವಿಜಯಲಕ್ಷ್ಮೀ. ಸುಮಾರು 7 ವರ್ಷಗಳ ಕಾಲ ಪತಿ ತೋರಿದ  ಪ್ರೀತಿಯೇ, ಎಂದೋ ಸಾಯಬೇಕಿದ್ದ ಆಕೆಯ ಸಾವಿನ ದಿನವನ್ನು ಮುಂದೂಡಿತ್ತು. ಜ್ಞಾನೇಶ್ ಪತ್ನಿಯನ್ನು ಆರೈಕೆ ಮಾಡಿದ ರೀತಿ ಮಾತ್ರ  ನಿಜಕ್ಕೂ ನಮ್ಮ ಸಮಾಜಕ್ಕೊಂದು ಮಾದರಿಯೇ ಸರಿ.
....................................   

Wednesday, 20 April 2016

ನಾಟಕ ವಿಮರ್ಶೆ

ಡೈಲಾಗ್, ಪಂಚ್‌ಗಳ ನಗೆನಾಟಕ  ‘ಚಿಗುರು ಮೀಸೆ ಪ್ರಣಯ’

* ದತ್ತಾತ್ರೇಯ ಹೆಗಡೆ


‘ಕಾವ್ಯೇಷು ನಾಟಕಂ ರಮ್ಯಂ’  ಎನ್ನುತ್ತಾನೆ ಕಾಳಿದಾಸ.  ಕಲೆಯ ಎಲ್ಲ ಪ್ರಕಾರಗಳಿಗಿಂತ ನಾಟಕ ಪ್ರಕಾರ ಹೆಚ್ಚು ಪರಿಣಾಮಕಾರಿ. ದೃಶ್ಯ ಮಾಧ್ಯಮವಾಗಿರುವ ಈ ಕಲಾಪ್ರಕಾರಕೆ ಪ್ರೇಕ್ಷಕರನ್ನು ಹಿಡಿದಿಡುವುದು  ಒಂದು ಸವಾಲಿನ ಕೆಲಸವೇ ಸರಿ. ಆದರೆ, ಎ. 16ರಂದು ಕುವೆಂಪು ರಂಗಮಂದಿರದಲ್ಲಿ ಮೊತ್ತಮೊದಲ ಪ್ರದರ್ಶನ ಕಂಡ ಹೊ.ನ. ಸತ್ಯ ಅವರ ‘ಚಿಗುರು ಮೀಸೆ ಪ್ರಣಯ, ಎಲ್ಲ ಕೋನಗಳಿಂದಲೂ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿದೆ.
ಪತ್ರಕರ್ತ ರವಿ ಬೆಳಗೆರೆಯವರ ‘ಪಾವೆಂ ಹೇಳಿದ ಕಥೆಗಳು’ ಕಥಾ ಸಂಕಲನದ ಕಥೆಯೊಂದನ್ನಾಧರಿಸಿ ಅತ್ಯಂತ ನವೀರಾಗಿ, ಹಾಸ್ಯನಾಟಕವಾಗಿ ಹೆಣೆದು ಪ್ರದರ್ಶಿಸಿದ ಕೀರ್ತಿ ಸತ್ಯ ಅವರದ್ದು.
ಗುಂಡಿನ ಗಮ್ಮತ್ತಿನಲ್ಲೇ ತೇಲುತ್ತ ಕತೆ ಹೆಣೆಯುವ ಕಥೆಗಾರ ರವಿ ಬೆಳಗೆರೆ,  ಎದುರು ಮನೆಯ ಹುಡುಗಿಯ ಪ್ರೇಮಪಾಶಕ್ಕೆ ಬಿದ್ದು, ಗುಂಡಿನ ನಶೆಗಿಂತ ಹೆಣ್ಣಿನ ನಶೆ ತೀವ್ರವಾದದ್ದು ಎನ್ನುವ ಸತ್ಯವನ್ನು ಮೂಡಿಸುತ್ತಾನೆ. ಆಧುನಿಕ ಕನ್ನಡ ಕವಿಯೊಬ್ಬ ಹಳೆಯ ಚಿತ್ರಗೀತೆಗಳ ಪಲುಕು ಮೆಲುಕುಗಳ ಜೊತೆಯಲ್ಲೆ ಡುಂಢಿರಾಜರ ಚುಟುಕುಗಳನ್ನು ನೆನಪಿಸುವಲ್ಲಿ, ಬಿಯರ್, ವೈನ್‌ಗಳ ಕುರಿತಾಗಿ ಕವನ ರಚಿಸುವುದು ಸತ್ಯ ಅವರ ಆಶುಕವಿತ್ವದ ಪ್ರತಿಭೆಗೆ ಸಾಕ್ಷಿಯಾಗುತ್ತದೆ. ಇನ್ನು, ಕಥಾನಾಯಕಿಯಾಗಿ ಕಾಣಿಸಿಕೊಳ್ಳುವ ಜೊಸೆಫಿನ್ ಪಾತ್ರಧಾರಿಗೂ ಸಹ ಕಥೆಗಾರನ ಕುರಿತಾಗಿ ಇರುವ ಆಸಕ್ತಿ, ಆಕರ್ಷಣೆಗಳು ಅವರ ಹಾವಭಾವಗಳ ಭಂಗಿಯಿಂದಲೇ  ಮಾಸದ ಮಾದಕ ನಗುವಿನಿಂದಲೇ ವೇದ್ಯವಾಗುತ್ತದೆ. ಕಥೆಗಾರನ ಗೆಳೆಯನಾಗಿ ರಂಗಪ್ರವೇಶ ಮಾಡುವ ಪಾಟೀಲ ಕತೆಗಾರನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡು ಡೈಲಾಗ್ ಪಂಚ್‌ಗಳನ್ನು ಎಸೆಯುವುದು, ಕಥಾನಾಯಕಿಯನ್ನು ತಾನೇ  ಲಪಟಾಯಿಸುವಂತೆ ನಟಿಸುವುದು, ಎಂಟಕ್ಷರದ  ‘ಐ ಲವ್ ಯೂ’ ಹೇಳಲು ವಿಫಲನಾದ, ಕಥೆಗಾರನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಒಂಭತ್ತನೆಯ ಲವರ್‌ನ್ನು ಪಟಾಯಿಸುವವನಂತೆ ನಟಿಸುವುದು ನಿಜಕ್ಕೂ ಪತ್ತೆದಾರಿ ಕಾದಂಬರಿಯನ್ನು ನೆನಪಿಸಿಸುತ್ತದೆ.
ತನ್ನವಳಾಗಬೇಕಿದ್ದ ಜೊಸೆಫಿನ್ ತನ್ನ ಮಿತ್ರನ ಪಾಲಾದಳೆಂದು, ಮಿತ್ರದ್ರೋಹಿಯಾದಳೆಂದು ಪರಿತಪಿಸ ಮನೆ ಖಾಲಿಮಾಡುವ ಕಥೆಗಾರನ ಮುಂದೆ ಪಾಟೀಲ ಮತ್ತೆ ಪ್ರತ್ಯಕ್ಷನಾಗಿ ನಿಜಸ್ಥಿತಿಯನ್ನು ತಿಳಿಸಿ ಇಬ್ಬರನ್ನೂ ಒಂದು ಮಾಡುವಲ್ಲಿ ಕಥೆ ಸುಖಾಂತ್ಯಗೊಳ್ಳುತ್ತದೆ. ಇವರ ಮಧ್ಯೆ ಈ ಹಾಸ್ಯ ನಾಟಕದ ಜೀವಾಳವಾಗಿ  ಮಿಂಚಿದ ಪಾತ್ರವೆಂದರೆ ಹಾಲು ಹಾಕುವವನದು.
ಕಥೆಗಾರನಾಗಿ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕ ಡಾ. ಧನಂಜಯ ಅವರು ಕನಸುಗಾರ, ನಟ ರವಿಚಂದ್ರನ್ ಅವರನ್ನು ನೆನೆಪಿಸುವಂತೆ ಗಿಟಾರ್ ಹಿಡಿದು ‘‘ನನ್ನ ಮನಸು ಅರಮನೆ, ನನ್ನ ಮನಸು ಸೆರೆಮನೆ’’ ಎಂದು ಗುನುಗುನಿಸಿದ್ದು, ಯುವ ಪ್ರೇಮಿಗಳ ಹೃದಯಕ್ಕೆ ಕಚಗುಳಿ ಇಡುವಂತಿತ್ತು. ತನ್ನ ಪ್ರೇಮಿಕಾಳಿಗಾಗಿ ಗುಂಡಿನ ಚಟ ಬಿಟ್ಟು, ಮುಂಜಾನೆ ಎದ್ದು ಜಾಗಿಂಗ್ ಮಾಡುವ ಯುವಕನಾಗಿ, ಪರಿವರ್ತನೆಗೊಳ್ಳುವುದು ಹೆಣ್ಣುಮಕ್ಕಳನ್ನು ಸೆಳೆಯುವ ಇಂದಿನ ಯುವಕರ ಫಿಜಿಕಲ್ ಫಿಟ್‌ನೆಸ್‌ನ ಪ್ರಜ್ಞೆಯಂತಿತ್ತು. ಧನಂಜಯ ಅವರ ಆಕರ್ಷಕ ವ್ಯಕ್ತಿತ್ವ, ಅವರ ಮಾತಿನ ಧಾಟಿಯ ಏರಿಳಿತ, ಕಥೆಗಾರನ ಪಾತ್ರಕ್ಕೆ ನಿಜಕ್ಕೂ ನ್ಯಾಯ ಒದಗಿಸಿತ್ತು. ಆದರೆ, ಚಿಗುರು ಮೀಸೆಯ ಪ್ರಣಯ ಎನ್ನುವ ಶೀರ್ಷಿಕೆ ನಿರ್ದೇಶಕರ ಆಯ್ಕೆಯ ಕುರಿತು ಒಂದು ಕ್ಷಣ ಚಿಂತಿಸುವಂತಾಯಿತು. ಕವಿಯ ಪಾತ್ರದಲ್ಲಿ ಮಿಂಚಿದ, ಪಾದರಸ ಓಡಾಟದ ಸುಧೀಂದ್ರ ಅವರ ಡೈಲಾಗ್ ಪಂಚ್‌ಗಳಂತೂ ಹೊಟ್ಟೆ ಹುಣ್ಣಾಗಿಸುವಂತಿತ್ತು.  ಬಿಯರ್ ಬಾಟಲಿಯನ್ನು ಹಿಡಿದುಕೊಂಡು ‘ನಾನಿರುವುದೆ ನಿನಗಾಗಿ, ನೀನಿರುವುದೆ ನನಗಾಗಿ’  ‘ಒಂದೇ ನಾಡಿನ ಕುಡುಕರು ನಾವು ಸೋದರರಂತೆ ನಾವೆಲ್ಲ’ ಎಂದು ಹಾಡುವುದು, ಟೈಟ್ ಟಾನಿಕ್ ಎನ್ನುವುದು, ನಾಲಿಗೆ ತುದಿಯಲ್ಲಿ ಚಪ್ಪರಿಸುವ ಉಪ್ಪಿನಕಾಯಿ, ಬಿಯರ್ ಬಾಟಲ್ ಓಪನ್ ಮಾಡುವ ಪರಿ, ಬಾಟಲನ್ನೇ ಗಂಟಲಿಗಿಳಿಸುವುದು ಒಬ್ಬ ವೃತ್ತಿಪರ ಕುಡುಕನನ್ನು ನೆನೆಪಿಸುವುದರೊಂದಿಗೆ ನಾಟಕದ ಆ ಪಾತ್ರಕ್ಕೆ ಜೀವ ತುಂಬಿತ್ತು.
ಜೊಸೆಫಿನ್ ಪಾತ್ರದಲ್ಲಿ  ಶ್ರೀದೇವಿಯ ನಟನೆ ಪರವಾಗಿಲ್ಲ ಅಂದುಕೊಳ್ಳಬಹುದಾದರೂ ಇನ್ನಷ್ಟು ಆಕರ್ಷಕವಾಗಿ ಕಾಣಿಸಿಕೊಳ್ಳುವ ಮೂಲಕ ಸರಸ ಸಂಭಾಷಣೆಯಲ್ಲಿ ತಲ್ಲೀನರಾಗಬಹುದಿತ್ತು. ಕೆಲವೊಂದು ಸಂದರ್ಭಗಳಲ್ಲಿ ತೀರಾ ಸಪ್ಪೆಯಾಗಿ ಪ್ರೇಕ್ಷಕರನ್ನು ನಿರಾಸೆಗೊಳಿಸಿದ್ದು ಸುಳ್ಳಲ್ಲ. ಜೊಸೆಫಿನ್ ಇನ್ನಷ್ಟು ಮಾದಕವಾಗಿ, ಮೋಹಕವಾಗಿ ಅತ್ಯಾಕರ್ಷಕ ದಿರಿಸು ಧರಿಸಿದ್ದರೆ ಚೆನ್ನಾಗಿತ್ತೇನೋ? ಅರ್ಧ ನಾಟಕದ ಬಳಿಕ ಪಾಟೀಲನ ರಂಗಪ್ರವೇಶವೂ ಉತ್ತರ ಕರ್ನಾಟಕ ಗಂಡು ಭಾಷೆಯ ಸೊಗಡಿನೊಂದಿಗೆ ನಾಟಕಕ್ಕೆ ಕಳೆ ನೀಡಿತು. ಅಜಾನುಬಾಹು ವಕ್ತಿತ್ವ, ಮೊಳಗುವ ಕಂಚಿನ ಕಂಠ, ಶ್ರೀಮಂತಿಕೆ ಪ್ರತೀಕವಾದ ಆತನ ವೇಷಭೂಷಣ, ಅಲ್ಲಿಯ ಜೊಳದ ರೊಟ್ಟಿ- ಎಲ್ಲವನ್ನು ಏಕಕಾಲಕ್ಕೆ ಕಟ್ಟಿಕೊಡುವ ಈ ಪಾತ್ರವನ್ನು  ಅವರು ಈ ಪಾತ್ರದ ಪರಕಾಯ ಪ್ರವೇಶ ಮಾಡಿ ನಟಿಸಿದ ರಾಜಕುಮಾರ್ ತಾನೊಬ್ಬ ಪರಿಪಕ್ವ ನಟ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಹಾಲುಹಾಕುವ ಹುಡುಗನ ಪಾತ್ರದಲ್ಲಿ ‘ಲವ’ಲವಿಕೆಯಿಂದ ಮಿಂಚಿದ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ಜಿ.ಆರ್. ಲವ ನಿಜಕ್ಕೂ ನಾಟಕದ ಹೈಲೈಟ್. ನಾಟಕದ ಆರಂಭದಲ್ಲಿ ತನ್ನ ಶಿಷ್ಯ ಸಮುದಾಯದೊಂದಿಗೆೆ ‘ಜೋಕ್ ನಾಟ್ಕಾ... ಟೂ ಟೂ ಟೂ...’ ಎಂದು ರಂಗದ ಮೇಲೆಲ್ಲ ನರ್ತಿಸಿ ಪ್ರೇಕಕರ ಮನೊಭೂಮಿಕೆಯನ್ನು ನಾಟಕಕ್ಕೆ  ಸಜ್ಜುಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸೈಕಲ್ ತುಳಿದುಕೊಂಡು ಪೇಪರ್ ಮತ್ತು ಹಾಲು ಹಾಕುತ್ತ, ಕತೆಗಾರನನ್ನು ಕಿಚಾಯಿಸುತ್ತಾ ಖುಷಿ ಪಡುವ, ಖುಷಿ ಕೊಡುವ ಪಾತ್ರಧಾರಿಯಾಗಿ ಮಿಂಚಿನ ಸಂಚಲನ ಮೂಡಿಸುತ್ತಾರೆ.
ವಿಶೇಷ ಪಾತ್ರದಲ್ಲಿ ಕಮಲಾ ನೆಹರು ಕಾಲೇಜಿನ ಪ್ರಾಧ್ಯಾಪಕ ಎಚ್.ಎಸ್. ನಾಗಭೂಷಣ್ ಮಂಗಳೂರು ಕನ್ನಡದ ಸೊಗಡನ್ನು ಬಿಂಬಿಸುತ್ತಾರೆ. ಪಾಟೀಲನ ತಾಯಿಯ ಪಾತ್ರದಲ್ಲಿ ಎರಡು ಬಾರಿ ಮಾತ್ರ ಮಿಂಚಿ ಮರೆಯಾಗುವ ವಿಜಯಲಕ್ಷ್ಮೀ ಅವರದು ಹಿತಮಿತವಾದ ಪಾತ್ರ ನಿರ್ವಹಣೆ, ವಿಧೇಯ ಜವಾನ ಬಸಪ್ಪನಾಗಿ ಸಿದ್ರಾಮಪ್ಪ ಮಿಂಚಿದ್ದಾರೆ.
ನಾಟಕದ ಕೊನೆಯಲ್ಲಿ ಆಲ್ಕೋಹಾಲ್ ತ್ಯಜಿಸಿ, ನಂದಿನಿ ಹಾಲು ಬಳಸಿ ಅತ್ಯುತ್ತಮ ಜಾಹೀರಾತು ಪ್ರಕಟಣೆಯಾಗಿ ಎಲ್ಲರನ್ನೂ ನಗೆಗಡಲಿನಲ್ಲಿ ಮುಳುಗಿಸಿತು.
ಮಂಜುನಾಥ ಕುದುವಳ್ಳಿ ಅವರ ಬೆಳಕಿನ ವಿನ್ಯಾಸ, ಅತ್ಯಾಕರ್ಷಕ ಮತ್ತು ಸಾದಾಸೀದ ರಂಗಸಜ್ಜಿಕೆ, ಎಸ್.ಆರ್. ಗಿರೀಶ್ ಅವರ ಪ್ರಸಾಧನ ನಾಟಕ ಕಳೆಗಟ್ಟುವಂತೆ ಮಾಡಿತ್ತು. ನಾಟಕ, ರಚನೆ, ನಿರ್ದೇಶನ, ನಿರ್ವಹಣೆ ನಾಟಕದ ಸಂಪೂರ್ಣ ಯಶಸ್ಸು ಹೊ. ನ. ಸತ್ಯ ಅವರಿಗೆ ಸಲ್ಲಬೇಕು. ಮೊದಲ ಪ್ರದರ್ಶನ ಎನ್ನುವುದನ್ನು ಮರೆಸುವಂತಹ ಪರಿಪಕ್ವ ನಾಟಕ.    
,,,,,,,,,,,,,,,,,,,,,,,,,
ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ
  ಜಿಲ್ಲಾ ಕಸಾಪದಲ್ಲಿ ಜಾತಿ ವಾಸನೆ* ಆರಂಭವಾಗಿದೆ ಅಸಮಾಧಾನದ ಅಲೆ

* ದತ್ತಾತ್ರೇಯ ಹೆಗಡೆ

ಇಂಟ್ರೊ- ಪಕ್ಷಾತೀತ ಜಾತ್ಯತೀತವಾಗಿ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಸಾಪ ಮಾಡಬೇಕಿದೆ. ಆದರೆ, ಭಾಷಾಭಿವೃದ್ಧಿಗೆ ಶ್ರಮಿಸಬೇಕಾದ ಲ್ಲಾ ಕಸಾಪದಲ್ಲಿ ಜಾತಿ ಸಂಕೋಲೆಯ ವಾಸನೆ ವಿಪರೀತವಾಗತೊಡಗಿದೆ. ಜಾತ್ಯತೀತ ವೇದಿಕೆಯಾಗಬೇಕಿದ್ದ ಕಸಾಪಕ್ಕೆ ಇಂದು ಸಾಹಿತ್ಯದ ಗಂಧಗಾಳಿ ಇಲ್ಲದವರನ್ನೂ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗುತ್ತಿದೆ. ಜಾತಿಯ ಮೂಲಕ ವ್ಯಕ್ತಿಯ ಪ್ರತಿಭೆ ಗುರುತಿಸುವುದು ಅನಾಗರಿಕವಾದದ್ದು. ವ್ಯಕ್ತಿಯ ಪ್ರತಿಭೆ ಮೂಲಕ ಜಾತಿ ಗುರುತಿಸುವಂತಾಗಬೇಕು. ಆದರೆ ಹಾಲಿ ಜಿಲ್ಲಾಧ್ಯಕ್ಷರು ಈಗ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಕಸಾಪಕ್ಕೆ ವ್ಯಕ್ತಿ ಮುಖ್ಯವೋ ಅಥವಾ ಜಾತಿ ಮುಖ್ಯವೋ ಎನ್ನುವುದನ್ನು ಸಾರ್ವಜನಿಕರೆದುರು ತೆರೆದಿಡಬೇಕಿದೆ.


ಶಿವಮೊಗ್ಗ: ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಡಿ.ಬಿ. ಶಂಕರಪ್ಪ ಆಯ್ಕೆಯಾದ ನಂತರ ಇತ್ತೀಚೆಗೆ ಜಿಲ್ಲಾ ಸಮಿತಿ ರಚನೆಯಾಗಿದೆ. ಆದರೆ ಸಮಿತಿಯು ಇನ್ನೂ ಕಾರ್ಯಚಟುವಟಿಕೆಗಳನ್ನು ಆರಂಭಿಸಿಲ್ಲ. ಈ ಮಧ್ಯೆ ಸ್ವಜಾತಿ ಬಾಂಧವರಿಗೆ ಶಂಕರಪ್ಪ  ಮಣೆ ಹಾಕುತ್ತಿದ್ದಾರೆಂಬ ಆರೋಪ ಬಲವಾಗಿ ಕೇಳಿಬರತೊಡಗಿದೆ. ಈ ಮೂಲಕ ಆರಂಭದಲ್ಲೇ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸೊರಬ ಮತ್ತು ಶಿಕಾರಿಪುರದಲ್ಲಿ ಈ ವಿವಾದ ಭುಗಿಲೆದ್ದು, ಕಸಾಪದಲ್ಲಿ ಸಕ್ರಿಯರಾಗಿರುವವರು  ಆಕ್ರೋಶಗೊಂಡಿದ್ದಾರೆ. ಇದರಿಂದ  ಕಸಾಪ ಜಾತಿಯ ವಾಸನೆಯಿಂದ ನಲುಗುವಂತಾಗಿದೆ.
ಈ ಮಧ್ಯೆ ಶಂಕರಪ್ಪ ಅಧ್ಯಕ್ಷರಾಗಿದ್ದರೂ ಸಹ ಅವರ ಹಿಂದೆ ಕಾಣದ ಕೈಯೊಂದು ಎಲ್ಲ ತಾಲೂಕು ಮತ್ತು ಜಿಲ್ಲಾ ಸಮಿತಿಯ ಆಯ್ಕೆಯಲ್ಲಿ ಕೆಲಸ ನಡೆಸುತ್ತಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಜಾತಿ ವ್ಯಾಮೋಹಕ್ಕೆ ಸಿಲುಕಿರುವ ಈ ಕಾಣದ ಕೈ ಪ್ರತಿಭಾನ್ವಿತರನ್ನು ದೂರ ಮಾಡಿದೆ. ಇದು ಎಲ್ಲ ಸಾಹಿತ್ಯಾಸಕ್ತರನ್ನೂ ಚಿಂತೆಗೀಡುಮಾಡಿದೆ, ಅಷ್ಟೇ ಅಲ್ಲ, ಇನ್ನೂ ಚಟುವಟಿಕೆ ಆರಂಭವಾಗದ  ವೇಳೆಯೇ ಇಷ್ಟೊಂದು ಜಾತಿ ವಾಸನೆ ಢಾಳಾಗಿ ಬರಲಾರಂಭಿಸಿದರೆ ಅವಧಿ ಮುಗಿಯುವವರೆಗೆ ಪರಿಸ್ಥಿತಿ ಏನಾಗಬಹುದು, ಕೇವಲ ಆ ಒಂದು ಸಮುದಾಯಕ್ಕೆ ಮಾತ್ರ ಜಿಲ್ಲಾ ಕಸಾಪ ಎಂದಾದರೂ ಆಶ್ಚರ್ಯವಿಲ್ಲ ಎನ್ನುವ ಮಾತು ಸ್ವತಃ ಸದಸ್ಯರಿಂದಲೇ ಕೇಳಿಬರತೊಡಗಿದೆ.
ಶಂಕರಪ್ಪ ನಿವೃತ್ತ ಪ್ರಾಧ್ಯಾಪಕರು. ಸಭ್ಯ ಮತ್ತು ಪ್ರಾಮಾಣಿಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಸಾಹಿತಿ ಹಾಗೂ ಬರೆಹಗಾರರು. ಅಧ್ಯಕ್ಷ ಪದವಿಗೆ ನಿಜಕ್ಕೂ ಅರ್ಹರು.   ಕಸಾಪಕ್ಕೆ ಹೊಸ ಮುಖ ಬರಬೇಕು, ಗುಂಪುಗಾರಿಕೆ ನಿಲ್ಲಬೇಕೆಂಬ ದೃಷ್ಟಿಯಿಂದ ಅವರ ಆಯ್ಕೆಯಾಯಿತು. ಆದರೆ, ಅಧಿಕಾರಕ್ಕೇರಿದ ನಂತರ ಕೆಲವರು ಅಂದರೆ ಅವರ ಸುತ್ತ ಠಳಾಯಿಸುವವರು ಅದೆಲ್ಲವನ್ನೂ ದುರುಪಯೋಗಪಡಿಸಿಕೊಳ್ಳುತ್ತ, ಮೂಗುತೂರಿಸಲಾರಂಭಿಸಿರುವುದು ಕಂಡುಬರುತ್ತಿದೆ. ಶಂಕರಪ್ಪ ಅವರನ್ನು ಗೆಲ್ಲಿಸಿದ್ದೇ ತಾವೆಂಬ ಮನೋಭಾವ ಹೊಂದಿರುವ ಇಂತಹ ಜಾತಿವಾದಿಗಳಿಂದ ಜಿಲ್ಲಾ ಕಸಾಪ ಕುಲಗೆಟ್ಟು ಹೋಗುವುದರಲ್ಲಿ ಅನುಮಾನವಿಲ್ಲ. ಕೂಡಲೇ ಅವರನ್ನು ದೂರವಿಡದಿದ್ದರೆ ಇಲ್ಲಿಯವರೆಗೆ ಇದ್ದ ಅವರ ಕಳಂಕರಹಿತ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದರಲ್ಲಿ ಅನುಮಾನವಿಲ್ಲ.  
ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಜಾತಿ, ಶ್ರೀಮಂತಿಕೆ, ಅಧಿಕಾರ ನೋಡಬಾರದು. ಇತರ ಸಾಹಿತಿಗಳ  ಅಭಿಪ್ರ್ರಾಯ ಪಡೆಯಬೇಕಿತ್ತು. ತಾಲೂಕು ಮಟ್ಟದಲ್ಲಿ ಸಭೆ ನಡೆಸಿದ್ದರೂ ಅರ್ಹರನ್ನು ಆಯ್ಕೆ ಮಾಡದೆ ಜಾತಿಬಾಂಧವರಿಗೆ ಮಣೆ ಹಾಕಿದ್ದು ಶಂಕರಪ್ಪ ಅವರಿಗೆ ಈಗ ಸಂಕಟ ತಂದೊಡ್ಡಿದೆ. ಸೊರಬದಲ್ಲೇ ಹಿರಿಯ ಬರೆಹಗಾರರು, ವೈದ್ಯರೂ, ಸಂಘಟಕರೂ, ಸಾಹಿತ್ಯಾಭಿಮಾನಿಯೂ ಆದ  ಎಂ. ಕೆ. ಭಟ್ ಅವರಂತಹವರು ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ಹೆಚ್ಚು ಕಡಿಮೆ ನಿರ್ಧರಿಸಲಾಗಿದ್ದರೂ ಶಿವಮೊಗ್ಗಕ್ಕೆ ಹೋದ ನಂತರ ಮತ್ತೊಬ್ಬರನ್ನು ನೇಮಿಸಿದ್ದೇಕೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರವಾದರೂ ಅದನ್ನು ಸರಿಪಡಿಸಿಕೊಳ್ಳಬಹುದಿತ್ತು.  ಇದಾದ ಎರಡೇ ದಿನಕ್ಕೆ  ಶಿಕಾರಿಪುರದಲ್ಲಿಯೂ ಇದು ಮರುಕಳಿಸಿದೆ.
ಸಾಹಿತಿ ಮಾತ್ರ ತಾಲೂಕು ಅಧ್ಯಕ್ಷನಾಗಬೇಕೆಂಬ ನಿಯಮವವಿದೆ. ಅದನ್ನೀಗ ಮುರಿಯಲಾಗಿದೆ. ಇದು ಹಿಂದಿನಿಂದಲೂ ನಡೆದ ಬಂದ ಪದ್ದತಿ ಎಂದು ಶಂಕರಪ್ಪ ಮತ್ತು ಬೆಂಬಲಿಗರು ಹೇಳಬಹುದು. ಹಿಂದಿನ ಪದ್ದತಿಯನ್ನೇ ತಾವು ಪಾಲಿಸುವುದಾದರೆ, ತಮ್ಮ ಹೊಸ ಚಿಂತನೆ ಎಲ್ಲಿಗೆ ಹೋಯಿತೆಂದು ಪ್ರಶ್ನಿಸಬೇಕಾಗುತ್ತದೆ. ಹಿಂದಿನ ಅಧ್ಯಕ್ಷರಿಗೂ, ತಮಗೂ ಏನೂ ವ್ಯತ್ಯಾಸವಿಲ್ಲ ಎಂದು ಹೇಳಬಹುದಲ್ಲವೇ? ಸಾಹಿತಿಗಳು ಮತ್ತು ಸದಸ್ಯರು ಒಗ್ಗೂಡಿ ಕೆಲಸ ಮಾಡುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕೇ ಹೊರತು ಭಿನ್ನಾಭಿಪ್ರಾಯ ಉಂಟಾಗುವಂತೆ ಮಾಡಬಾರದು. ಸರ್ವಸಮ್ಮತ ವ್ಯಕ್ತಿಯ ಆಯ್ಕೆಯಾಗಬೇಕು. ಆಗ ಮಾತ್ರ ಕಸಾಪದ ಉತ್ತಮ ಬೆಳವಣಿಗೆ ಹಾಗೂ ಕಾರ್ಯಕ್ರಮವನ್ನು ನಿರೀಕ್ಷಿಸಬಹುದು.
  ಈಗ ಆಗಿರುವ ಘಟನೆಗಳಿಂದ ಶಂಕರಪ್ಪ ಪಾಠ ಕಲಿಯಬೇಕಿದೆ. ತಮ್ಮ ಸುತ್ತಮುತ್ತ ಇರುವ ಪಟಾಲಂಗಳನ್ನು ನಿಗ್ರಹಿಸಿ, ಕಸಾಪದ ಬಗ್ಗೆ ಕಿಂಚಿತ್ತ್ತೂ ಅರಿವಿಲ್ಲದಿರುವವರನ್ನು ದೂರವಿಟ್ಟು ನಿರ್ಣಯ ಕೈಗೊಳ್ಳುವ ಮನೋಭಾವವನ್ನು ಅಧ್ಯಕ್ಷರು ಪ್ರದರ್ಶಿಸಬೇಕಿದೆ. ಇಲ್ಲವಾದಲ್ಲಿ ಜಾತಿವಾದಿಗಳಿಂದಲೇ ಜಿಲ್ಲಾ ಕಸಾಪಕ್ಕೆ ಅಪಾಯ ಒದಗಬಹುದು.  

Thursday, 31 March 2016




ಮೌಲ್ಯಮಾಪನ ಬಹಿಷ್ಕಾರ-’ಗುರು’ ಲಘುವಾಗದಿರಲಿ 

ಯಾವುದೇ ಕಾರಣಕ್ಕೂ ಉಪನ್ಯಾಸಕರು ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕುವುದು ಸಲ್ಲದು. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನವನ್ನು ಬೇರೆ ರೀತಿಯಿಂದ  ಸೆಳೆಯಬೇಕೇ ಹೊರತು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಸರ್ವಥಾ ಸಲ್ಲದು. ಆದರೆ ಕೆಲವು ವರ್ಷಗಳಿಂದೀಚೆಗೆ ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕುವುದು ಉಪನ್ಯಾಸಕರ ಚಾಳಿಯಾಗಿ ಬಿಟ್ಟಿದೆ. ಖಂಡಿತವಾಗಿಯೂ ಉಪನ್ಯಾಸಕರ ಬೇಡಿಕೆಗೆ ಎಲ್ಲರ ಸಹಮತವೂ ಇದೆ. ಆದರೆ ಉತ್ತರ ಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಿಯಾಗುವಂತೆ ಮಾಡುವುದು ಸರಿಯಾದ ಕ್ರಮವಲ್ಲ ಅನ್ನುವುದಷ್ಟೇ ನಮ್ಮೆಲ್ಲರ ಆಕ್ಷೇಪ. ಏಕೆಂದರೆ ಈ ಬಹಿಷ್ಕಾರದಿಂದಾಗಿ ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪ್ರತಿಬಾರಿ ಮೌಲ್ಯಮಾಪನದ ವೇಳೆ ಬಹಿಷ್ಕಾರ ಹಾಕುವ ಉಪನ್ಯಾಸಕರ ವಿರುದ್ದ ಸರ್ಕಾರವೂ ಕ್ರಮ ಜರುಗಿಸಬೇಕು. ಇದನ್ನು ಉಪನ್ಯಾಸಕರು ಅರಿತುಕೊಳ್ಳಬೇಕು. ತಮ್ಮ ‘ಮೌಲ್ಯ’ವೇ ಮಾಪನವಾಗುವಂತಹ ತಪ್ಪುಹೆಜ್ಜೆಯನ್ನು ಇಡಬಾರದು. ಈ ಬಾರಿ ವಿದ್ಯಾರ್ಥಿಗಳ ಪೋಷಕರು ಕೂಡ ಉಪನ್ಯಾಸಕರ ಈ ಚಾಳಿಯ ವಿರುದ್ದ ಗರಂ ಆಗಿದ್ದಾರೆ. ಉಪನ್ಯಾಸಕರ ಧರಣಿಗೆ ಪ್ರತಿಧರಣಿ ನಡೆಸಲು  ಕೆಲವು ಸಂಘಟನೆಗಳೂ ಸನ್ನದ್ಧವಾಗಿವೆ. ಸಕಾಲದಲ್ಲಿ ಮೌಲ್ಯಮಾಪನ ಮಾಡಿ, ಸಿಇಟಿ ಮೊದಲಾದ ಪರೀಕ್ಷೆ ಬರೆಯುವವರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲವಾದಲ್ಲಿ ಉಪನ್ಯಾಸಕರ ನಿಲುವಿನ ವಿರುದ್ಧ ಆಕ್ರೋಶ ಭುಗಿಲೇಳುವುದು ಖಚಿತ.


  ಇಂದು ಉಪನ್ಯಾಸಕ ವರ್ಗಕ್ಕೆ ಗೌರವಯುತ ವೇತನವಿದೆ. ಸಮಾಜದಲ್ಲಿ ಅತ್ಯಂತ ಪೂಜನೀಯ ಸ್ಥಾನಮಾನವಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತಹ ಬಹುದೊಡ್ಡ ಜವಾಬ್ದಾರಿಯಿರುವ ಇವರನ್ನು ಜನರು ಗೌರವದಿಂದ ಕಾಣುತ್ತಾರೆ. ಇವರಿಂದ ಕಲಿತುಹೋದವರು ಸೆಲ್ಯೂಟ್ ಹೊಡೆಯುತ್ತಾರೆ, ಸದಾ ಸ್ಮರಿಸಿಕೊಳ್ಳುತ್ತಾರೆ.  ಆದರೆ ತಮ್ಮದೇ ವಿದ್ಯಾರ್ಥಿಗಳ ಉತ್ತರ ಪತ್ರಿಕೆ  ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕುವ ನಮ್ಮ ಉಪನ್ಯಾಸಕ ಬಂಧುಗಳಿಗೆ ಏನೆನ್ನೋಣ? ಇದು ಪಿಯು ಕಾಲೇಜು ಉಪನ್ಯಾಸಕರ ‘ಮೌಲ್ಯ’ ಮಾಪನ!
1998ರಿಂದ ಬಹುತೇಕ ಪ್ರತಿ ವರ್ಷ ಎಪ್ರಿಲ್ ಬಂತೆಂದರೆ ಸಾಕು-ಪಿಯು ಉಪನ್ಯಾಸಕರ ಬಹಿಷ್ಕಾರದ ಸುದ್ದಿ ರಾಜ್ಯಮಟ್ಟದಲ್ಲಿ ಮೊಳಗುತ್ತದೆ. ಇದರಿಂದ ಅತಿ ಹೆಚ್ಚು ಆತಂಕಿತರಾಗುವವರು ವಿದ್ಯಾರ್ಥಿಗಳ ಪಾಲಕರು, ನಂತರ ವಿದ್ಯಾರ್ಥಿಗಳು. ಏಕೆಂದರೆ, ಅವರು ತಮ್ಮ ಮಕ್ಕಳ ಭವ್ಯ ಭವಿಷ್ಯದ ಕನಸು ಹೊತ್ತಿರುತ್ತಾರೆ. ಎಷ್ಟೋ ಪಾಲಕರು ತಾವು ಕಲಿಯದಿದ್ದರೂ, ಮಕ್ಕಳಾದರೂ ಚೆನ್ನಾಗಿ ಓದಿ ಉನ್ನತ ಸ್ಥಾನಮಾನ ಪಡೆಯಲಿ ಎಂಬ ಮಹದಾಸೆ ಹೊಂದಿರುತ್ತಾರೆ. ವರ್ಷಗಟ್ಟಲೆ ಕಲಿತು ಪರೀಕ್ಷ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುವ ವೇಳೆ ಉಪನ್ಯಾಸಕರ ಬಹಿಷ್ಕಾರ, ಬೆದರಿಕೆ ಕೇಳಿಬರಲಾರಂಭಿಸುತ್ತದೆ. ಹಾಗಂತ ಇವರ ಬೇಡಿಕೆಯ ಪಟ್ಟಿ ದೊಡ್ಡದೇನಿಲ್ಲ.  ಒಂದೇ, ಅದು ವೇತನ ಪರಿಷ್ಕರಣೆ.
ಸಮಾಜದಲ್ಲಿ ಅತ್ಯಂತ ದಟ್ಟ ದರಿದ್ರರಿದ್ದಾರೆ, ಅವತ್ತಿನ ದುಡಿತದಿಂದಲೇ ತಿನ್ನುವ ಜನರಿದ್ದಾರೆ. ಎಷ್ಟೋ ಕಡಿಮೆ ಸಂಬಳ ಪಡೆದು ಬದುಕಿನ ಗಾಡಿ ಓಡಿಸುವ ನೌಕರರಿದ್ದಾರೆ. ಅವರನ್ನು ನೋಡಿಯಾದರೂ ತಮಗೆ ಸಿಗುವ ವೇತನದಿಂದ ಇವರು ತೃಪ್ತಿಪಡಬೇಕಿತ್ತು. ತಾವೇ ಎಷ್ಟೋ ಧನ್ಯರು ಎಂದುಕೊಳ್ಳಬೇಕಿತ್ತು. ಇದರರ್ಥ, ಇವರ ವೇತನ ಪರಿಷ್ಕರಣೆ ಸಲ್ಲದೆಂದಲ್ಲ. ಖಂಡಿತ ಕೇಳಲಿ, ಹೋರಾಡಲಿ. ಇದನ್ನು ಕೇಳಲೂ ವೇಳೆಯಿದೆ; ಹೋರಾಟ ಮಾಡಲೂ ದಾರಿ ಬೇರೆ ಇದೆ. ಪಾಠ ಮಾಡುವಾಗ ಪಾಠ ಮಾಡಬೇಕು, ಅದನ್ನು ಬಿಟ್ಟು ಪಾಠ ಮಾಡದೆ, ತರಗತಿಗೆ ಹಾಜರಾಗದೆ ಬಹಿಷ್ಕರಿಸುವುದು, ಪರೀಕ್ಷೆ ನಡೆಸದೇ ಇರುವುದು, ಮೌಲ್ಯಮಾಪನಕ್ಕೆ ತಡೆಮಾಡುವುದು ಇವೆಲ್ಲ ಖಂಡಿತವಾಗಿ ಈ ಸ್ಥಾನದಲ್ಲಿರುವವರಿಗೆ ಶೋಭೆ ತರುವಂಥದ್ದಲ್ಲ.
 ಒಂದು ಕಾಲಕ್ಕೆ ವಿದ್ಯೆ ಕೂಡ ದಾನವಾಗಿತ್ತು. ಆದರೆ ಯಾವಾಗ ಶಿಕ್ಷಣವೂ ಒಂದು ವೃತ್ತಿಯೆಂದು ಪರಿಗಣಿತವಾಯಿತೋ ಅಂದೇ ಗುರು ಲಘುವಾದ; ಆಚಾರ್ಯ ಆಚೆಗಾದ. ಗುರುವಿನ ಸ್ಥಾನದಲ್ಲಿರುವವರನ್ನು ನಮಿಸುವ ಪರಂಪರೆ ನಮ್ಮದು. ಅದನ್ನು ಉಳಿಸಿಕೊಳ್ಳುವುದು ಅವರ ಕೆಲಸ. ಆದರೆ, ಕಳೆದ ಕೆಲವು ವರ್ಷಗಳಿಂದ ಪಾಠಕ್ಕಿಂತ, ಪರೀಕ್ಷೆಗಿಂತ ವೇತನವೇ ಪ್ರಮುಖವಾಗಿರುವುದು ಆ ವೃತ್ತಿಘನತೆಯ ದುರಂತವೇ ಸರಿ. ಲಘುವಾಗುತ್ತಿರುವ ಗುರುವನ್ನು  ಜನರು ಲೇವಡಿಮಾಡುವ ಸ್ಥಿತಿಗೆ ಶಿಕ್ಷಕರು ಇಳಿಯುತ್ತಿದ್ದಾರೆ.
ಸರ್ಕಾರ ಸಕಾಲದಲ್ಲಿ ವೇತನ ಏರಿಸಲೇಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ, ಅದಕ್ಕಾಗಿ ಹೋರಾಟದ ಮಾರ್ಗ ಬದಲಾಗಬೇಕು. ಪಾಠ ಪ್ರವಚನದ ಕಾಲದಲ್ಲಿ ಬೆಂಗಳೂರಿಗೆ  ಹೋಗಿ ಸರಣಿ ಪ್ರಕಾರ ಧರಣಿ ಮಾಡಲಿ. ಜಿಲ್ಲಾ ಕೇಂದ್ರದಲ್ಲೂ ಇದನ್ನು ಮಾಡಲಿ. ಆದರೆ ತಮ್ಮ ಧರಣಿ, ಹೋರಾಟದಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಷ್ಟವಾದಲ್ಲಿ ತಮ್ಮ ಕರ್ತವ್ಯದಲ್ಲಿ ವಿಫಲರಾದಂತಾಗುತ್ತದೆ. ವೇತನಕ್ಕಿಂತ ಕಲಿಸುವುದು ಮುಖ್ಯ ಎನ್ನುವುದನ್ನು ಮೊದಲು ಅರಿಯಬೇಕಿದೆ. ನೀವು ಕಲಿಸಿದರೆ ಮಾತ್ರ ವೇತನವಲ್ಲವೆ? ಕಾಲೇಜಿಗೆ ಬೀಗ ಹಾಕುವಂತೆ ಎಲ್ಲರೂ ಧರಣಿ, ಮುಷ್ಕರ, ಬಹಿಷ್ಕಾರ ಎನ್ನುತ್ತ ಹೋದರೆ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಯಾವ ಪರಿಣಾಮವಾದೀತೆನ್ನುವ ಪರಿಕಲ್ಪನೆಯಾದರೂ ಇದೆಯೇ.  ಜೊತೆಗೆ, ತಾವು ಕಲಿಸುವ ವಿದ್ಯಾರ್ಥಿಗಳಿಗೆ ಅನ್ಯಾಯವನ್ನುಂಟು ಮಾಡಿದಂತಾಗಲಿಲ್ಲವೇ? ಗುರುವನ್ನು ಪೂಜ್ಯರೆಂದು ಕಾಣುವ ಮನೋಭಾವ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಲು ಇಂತಹ ವರ್ತನೆಗಳೂ ಕಾರಣ ಎಂದೆನಿಸುವುದಿಲ್ಲವೇ? ವೇತನ ಆಯೋಗದ ಶಿಫಾರಸ್ಸಿನಂತೆ, ಕುಮಾರ್ ನಾಯ್ಕ  ಸಮಿತಿ ನೀಡಿದ ವರದಿಯಂತೆ ಸರ್ಕಾರ ನಿರ್ಧಾರ ಕೈಗೊಳ್ಳಲು ಇವರು ಒತ್ತ್ತಡ ಹೇರಲಿ. ಅದಕ್ಕೆ ಯಾವ ಸಾರ್ವಜನಿಕರ ಆಕ್ಷೇಪವೂ ಖಂಡಿತ ಇಲ್ಲ.
ಮಾರ್ಚ್  22ರಂದು ಶಿವಮೊಗ್ಗಕ್ಕೆ ಪಿಯು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ಆಗಮಿಸಿದ್ದರು. ಅವರು ಪತ್ರಿಕಾಗೋಷ್ಠಿಯಲ್ಲಿ  ಬರೇ ವಿದ್ಯಾರ್ಥಿಗಳ ಪಾಠ, ಪ್ರವಚನ, ಭವಿಷ್ಯ ಎಂದು ಕುಳಿತರೆ ನಮ್ಮ ಸಮಸ್ಯೆ ಕೇಳುವವರಾರು ಎಂದರು. ಒಬ್ಬ ರಾಜ್ಯಾಧ್ಯಕ್ಷರಿಂದ ಈ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ್ಲ. ಅಂದರೆ ಇವರಿಗೆ ವೇತನ ಸಮಸ್ಯೆ ಯೊಂದೇ ಅತಿಯಾಗಿ ಕಾಡುತ್ತಿದೆ. ಹಾಗಾಗಿ ಮೌಲ್ಯಮಾಪನದಂತಹ ಜವಾಬ್ದಾರಿಯುತ ಕೆಲಸ ಮುಖ್ಯವಲ್ಲ ಎನ್ನುವುದು ಸಾಬೀತಾಯಿತು. ಹಕ್ಕನ್ನು ಕೇಳುವವನಿಗೆ ಅದಕ್ಕಿಂತ ಮೊದಲು ಹೊಣೆಗಾರಿಕೆಯ ಅರಿವಿರಬೇಕು. ಹೊಣೆಗಾರಿಕೆ ಪೂರೈಸಿದ ಬಳಿಕವೇ ಹಕ್ಕಿನ ನೆನಪಾಗಬೇಕು. ಈ ಎಚ್ಚರದ ಅರಿವು ’ಅರಿವೇ ಗುರು’ ಎಂದು ಪಾಠ ಹೇಳಿದ ಶಿಕ್ಷಕ ಬಂಧುಗಳಿಗೆ ಮರೆತುಹೋದರೆ ಹೇಗೆ? ಅದರಂತೆ ಉಪನ್ಯಾಸಕರಿಗೆ ಕಾರ್ಯಭಾರದ  ಬಗ್ಗೆ ಕೇಳಿದಾಗ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ ಎಂದರು.  ದಿನಕ್ಕೆರಡು- ಮೂರು ತಾಸು ಪಾಠ ಮಾಡುತ್ತಾರೆ.  ಸರಿಯಾಗಿ ಕಾಲೇಜಿಗೆ ಬರುವುದಿಲ್ಲ. ಬಂದರೂ ಪಾಠ ಮಾಡುವುದಿಲ್ಲ ಎಂಬ ಆರೋಪ ಬಹುತೇಕ ಉಪನ್ಯಾಸಕರ ಮೇಲಿದೆ. ಇದನ್ನು ಸರಿಪಡಿಸುವ ವಿಚಾರ ಇವರ ಸಂಘದಲ್ಲಿಲ್ಲ.
ಕಡೇಪಕ್ಷ  ದಕ್ಷಿಣೆಗೆ ಸರಿಯಾಗಿಯಾದರೂ ಪ್ರದಕ್ಷಿಣೆ ಬರಬೇಕು ತಾನೇ?
 ಹಾಗೆ ನೋಡಿದರೆ ಇತ್ತೀಚೆಗೆ ಈ ವೃತ್ತಿಯನ್ನು ಪ್ರೀತಿಸಿ ಬರುವವರಿಗಿಂತ ಸಾಕಷ್ಟು ರಜೆ ಸಿಗುತ್ತದೆ ಎಂಬ ಕಾರಣಕ್ಕಾಗಿ, ಸರ್ಕಾರದ ಸೌಲಭ್ಯಗಳೆಲ್ಲ ದೊರೆಯುತ್ತವೆ ಎನ್ನುವುದಕ್ಕಾಗಿ ಈ ವೃತ್ತಿಗೆ ಬರುವವರ ಸಂಖ್ಯೆಯೇ ಜಾಸ್ತಿ ಎನ್ನುವುದು ಅಪ್ರಿಯವಾದ ಸತ್ಯ.
ನಿಮ್ಮ ಬೇಡಿಕೆಗಾಗಿ ಸರ್ಕಾರದ ಮೇಲೆ ಒತ್ತಡ ತರಬೇಕೋ ಮೌಲ್ಯಮಾಪನದ ನಂತರ ರಜೆ ಆರಂಭವಾಗುತ್ತದೆ. ಆಗ ಧರಣಿ, ಸತ್ಯಾಗ್ರಹ ಆರಂಭಿಸಿರಿ. ಏಕೆಂದರೆ, ಸುಮಾರು 2 ತಿಂಗಳ ಕಾಲ ವಿವಿಧ ರೀತಿಯ ಪ್ರತಿಭಟನೆಯನ್ನು ನಡೆಸಬಹುದು. ಇದರಿಂದ ವಿದ್ಯಾರ್ಥಿಗಳಿಗೂ ನಷ್ಟವಿಲ್ಲ. ಪಾಲಕರಿಗೂ ಚಿಂತೆ ಇರುವುದಿಲ್ಲ. ಮಾತ್ರವಲ್ಲ, ಆಗ ನಿಮ್ಮ ಜೊತೆಗೆವಿದ್ಯಾರ್ಥಿಗಳು, ಅವರ ಪಾಲಕರು ಮತ್ತು ಸಾರ್ವಜನಿಕರು ನಿಮ್ಮನ್ನು ಬೆಂಬಲಿಸುತ್ತಾರೆ; ನಿಮ್ಮ ಬಲ ಕೂಡ ಸಂವರ್ಧನೆಗೊಳ್ಳುತ್ತದೆ.
..................................


Monday, 28 March 2016

DATTATREYA HEGDE: ಕರುಣೆ ತೋರಿದ ಕಾರುಣ್ಯಾ  ಸೂಪರ್ ಮಿನಿಟ್ ಮೂಲಕ  ರೈತ ಮಹಿಳ...

DATTATREYA HEGDE: ಕರುಣೆ ತೋರಿದ ಕಾರುಣ್ಯಾ
  ಸೂಪರ್ ಮಿನಿಟ್ ಮೂಲಕ  ರೈತ ಮಹಿಳ...
: ಕರುಣೆ ತೋರಿದ ಕಾರುಣ್ಯಾ   ಸೂಪರ್ ಮಿನಿಟ್ ಮೂಲಕ  ರೈತ ಮಹಿಳೆಯ ಸಾಲ ತೀರಿಸಿದ ಚಿತ್ರನಟಿ ರೈತರ ಬಗ್ಗೆ ಉದ್ದುದ್ದ ಮಾತನಾಡುವ, ಆತ್ಮಹತ್ಯೆ ಮಾಡಿಕೊಂಡಾಕ್ಷಣ ರಾಜಕಾರಣ...