ಕ್ಯಾನ್ಸರ್ಪೀಡಿತ ಪತ್ನಿಯ ಸೇವೆ: ಸಮಾಜಕ್ಕೆ ಮಾದರಿಯಾದ ಪತಿ
ಆರೈಕೆಗಾಗಿ ನೌಕರಿ ಬಿಟ್ಟು ಮಾನವೀಯತೆ, ಪ್ರೀತಿಯ ಹೊಳೆ ಹರಿಸಿದ
ದತ್ತಾತ್ರೇಯ ಹೆಗಡೆ
ರಾಜ್ಕುಮಾರ್-ಮಾಧವಿ ಅಭಿನಯದ ’ಹಾಲುಜೇನು’ ಕನ್ನಡ ಚಲನಚಿತ್ರವನ್ನು ನೀವು ನೋಡಿರಬಹುದು. ಅದರಲ್ಲಿ ಕ್ಯಾನ್ಸರ್ಪೀಡಿತ ಪತ್ನಿಯನ್ನು ನಾಯಕನಟ ಪ್ರೀತ್ಯಾದರದಿಂದ ತಾನೇ ಆರೈಕೆ ಮಾಡುತ್ತಾನೆ, ಜೊತೆಗೆ ಮನೆಯ ಎಲ್ಲಾ ಕೆಲಸವನ್ನೂ ನಿಭಾಯಿಸುತ್ತಾನೆ. ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ, ಆಯಾಸ ಪಡದಿರು ನೀನು’ ಎಂದು ಹಾಡುತ್ತ್ತಾ ಎಲ್ಲ ಕೆಲಸವನ್ನು ತಾನೇ ಮಾಡುತ್ತೇನೆ ಎನ್ನುತ್ತಾನೆ. ಜೊತೆಗೆ, ‘ಏನೇ ಆದರೂ ನಿನ್ನ, ಸೇವೆಯ ಮಾಡುವೆ ಚಿನ್ನಾ .....’ ಎಂದು ಹಾಡುತ್ತಾರೆ. ಈ ದೃಶ್ಯವನ್ನು ಮತ್ತೆ ನೆನಪಿಸುವಂತಹ ನೈಜ ಘಟನೆಯೊಂದು ಇಲ್ಲಿದೆ:
ಅವರೋರ್ವ ಗೌರವಾನ್ವಿತ ಶಿಕ್ಷಕಿ; ಅನುಪಮ ಸೌಂದರ್ಯದ ಖನಿ. ದೃಷ್ಟಿ ತಾಗೀತೇನೋ ಅನ್ನುವಂತಹ ಸುಮಧುರ ದಾಂಪತ್ಯದ ಸುಂದರ ಸುಖೀ ಕುಟುಂಬ. ಆ ಕುಟುಂಬದಲ್ಲಿ ಪ್ರೀತಿ- ಪ್ರೇಮದ, ಹಾಲು-ಜೇನಿನ ಹೊಳೆಯೇ ಹರಿದಿತ್ತು. ಇಂತಹ ಸುಖೀಸಂಸಾರವನ್ನು ಸುಮ್ಮನೆ ಬಿಡಲು ವಿಧಿಗೆ ಮನಸ್ಸಾಗಲಿಲ್ಲವೇನೋ.....?. ನೆಮ್ಮದಿ ಕಸಿದುಕೊಳ್ಳಲು ಹೊಂಚು ಹಾಕಿ ಕುಳಿತಿದ್ದ ವಿಧಿ, ಕ್ಯಾನ್ಸರ್ ಎಂಬ ಮಹಾಮಾರಿಯ ರೂಪದಲ್ಲಿ ವಕ್ಕರಿಸಿಯೇ ಬಿಟ್ಟ.
ಶಿಕ್ಷಕಿ ವಿಜಯಲಕ್ಷ್ಮೀ ಅವರನ್ನು ಕ್ಯಾನ್ಸರ್ ಸುದೀರ್ಘ ಏಳು ವರ್ಷಗಳ ಕಾಲ ಬಾಧಿಸಿತು. ಈ ಅವಧಿಯಲ್ಲಿ ಪತಿ ಜ್ಞಾನೇಶ್ ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು, ಪ್ರೀತಿಯಲ್ಲಿ, ಆರೈಕೆಯಲ್ಲಿ ಸ್ವಲ್ಪವೂ ಕುಂದುಂಟಾಗದಂತೆ ನೋಡಿಕೊಂಡರು. ಇದು ಇಡೀ ಸಮಾಜಕ್ಕೆ ಮಾದರಿಯಾಗುವಂತಹುದು. ಏಕೆಂದರೆ, ಕ್ಯಾನ್ಸರ್ ರೋಗಿ ಎಂದಾಕ್ಷಣ ಹೆತ್ತ ತಂದೆ-ತಾಯಿಯರನ್ನೇ ಆಶ್ರಮಕ್ಕೋ, ಸಂಘ-ಸಂಸ್ಥೆಗಳ ವಶಕ್ಕೋ ಬಿಟ್ಟು ಬರುವ ಅಮಾನವೀಯ ಗುಣಗಳೇ ಬಹುತೇಕ ಕಂಡುಬರುವ ಈ ದಿನಮಾನಗಳಲ್ಲಿ ಅಥವಾ ಮನೆಯಲ್ಲಿ ಕೆಲಸದಾಳುಗಳ ಮೂಲಕ ಅವರ ಸೇವೆ ಮಾಡಿಸುವುದನ್ನೋ ಕಾಣುತ್ತೇವೆ. ಆದರೆ ಇಲ್ಲಿ ಪಾಲಕರ ಮೇಲಿರುವ ಪ್ರೀತಿಗಿಂತಲೂ ಮಿಗಿಲಾಗಿ ಪತ್ನಿಯನ್ನು ನೋಡಿಕೊಂಡಿದ್ದು ಎಲ್ಲರಿಗೂ ಮಾದರಿಯಾಗುವಂತಹುದು.
ಪತ್ನಿ ಅಸಾಧಾರಣ ಬುದ್ಧಿವಂತೆ. ಸ್ತನ ಕ್ಯಾನ್ಸರ್ ಆಕೆಗೆ ಬಾಧಿಸಿದೆ ಎನ್ನುವ ವಿಚಾರ ಎಂದಿಗೂ ಬಾರದಿರುವಂತೆ, ಇದರಿಂದ ಧೈರ್ಯಗುಂದದಂತೆ ನೋಡಿಕೊಳ್ಳುವುದು ಸುಲಭದ ಮಾತಲ್ಲ. ರೋಗ ಇದೆ ಎಂದಾಕ್ಷಣವೇ ತಮಗೆ ಸಾವು ಖಚಿತ ಎಂದು ಹೆದರಿಯೇ ಇನ್ನಷ್ಟು ದಿನ ಬದುಕುವ ಅವಕಾಶವಿದ್ದರೂ ಅನೇಕರು ಅದನ್ನು ಕೈಚೆಲ್ಲುತ್ತಾರೆ. ಆದರೆ, ಇಲ್ಲಿ ವಿಜಯಲಕ್ಷ್ಮಿಗೆ ಪತಿ ತುಂಬಿದ ಮಾನಸಿಕ ಧೈರ್ಯ ಎಷ್ಟಿತ್ತೆಂದರೆ, ಉನ್ನತ ವಿದ್ಯಾಭ್ಯಾಸದ ಆಸೆ ದಿನೇ ದಿನೇ ಹೆಚ್ಚುತ್ತಿತ್ತು. ಒಂದೆಡೆ ಕ್ಯಾನ್ಸರ್ ಎಂಬ ರಕ್ಕಸ ತನ್ನೊಡನೆ ಆಟವಾಡುತ್ತಿದ್ದರೂ, ಇನ್ನೊಂದೆಡೆ ಎಂ.ಎ ಮತ್ತು ಬಿ.ಇಡಿ ಎರಡನ್ನೂ ಓದಿದರು. ಎಂ.ಎ ಯಲ್ಲಿ 2013-14ರ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ 8ನೆಯ ರ್ಯಾಂಕ್ ಗಳಿಸಿದರು. 2014ರಲ್ಲಿ ರೆಗ್ಯುಲರ್ ಆಗಿ ಬಿ.ಇಡಿ ತರಗತಿಗೆ ಹೋಗಿ ಓದಿ ಅಲ್ಲಿಯೂ ಕಾಲೇಜಿಗೆ ಮೊದಲಿಗರಾದರು. ದೇಹದ ಆ ಭಾಗವನ್ನು ನೋವು ದಿನೇದಿನೇ ಗೋಳುಹೊಯ್ದುಕೊಳ್ಳುತ್ತಲೇ ಇತ್ತು. ಪತ್ನಿಯ ಎಲ್ಲ ಸೇವೆಯನ್ನು ಅನವರತ ಮಾಡಿ ಆಕೆಗೆ ಕ್ಯಾನ್ಸರ್ನ ನೋವು ಮನಸ್ಸಿಗೆ ಬಾರದಂತೆ ಸಲಹಿದರು. ಆದರೂ ಏರುತ್ತಲೇ ಇದ್ದ ಕ್ಯಾನ್ಸರ್ ಬಾಧೆ ವಿಧಿಯಾಟದ ಮುಂದೆ ಯಾರ ಆಟವೂ ನಡೆಯುವುದಿಲ್ಲ ಎನ್ನುತ್ತಾರಲ್ಲ, ಅದೇ ರೀತಿ ವಿಜಯಲಕ್ಷ್ಮೀ ಇತ್ತೀಚೆಗೆ ತನ್ನ ಏಕಮಾತ್ರ ಪುತ್ರಿ ವಿಭಾಮಯಿ ಮತ್ತು ಪ್ರೀತಿಯನ್ನೇ ಹರಿಸಿದ ಪತಿಯನ್ನು ಬಿಟ್ಟು, ಇಹಲೋಕದ ಯಾತ್ರೆ ಮುಗಿಸಿದ್ದಾರೆ.
ಇದು ಸಾಮಾನ್ಯ ಘಟನೆಯಲ್ಲ. ಏಕೆ ಗೊತ್ತೆ? ಹಾಲುಜೇನಿನಂತಹ ಕುಟುಂಬದಲ್ಲಿ ಕ್ಯಾನ್ಸರ್ ಬಿರುಗಾಳಿ ಎಬ್ಬಿಸಿದಾಗ ಇನ್ಸೂರೆನ್ಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ದೊಡ್ಡ ಮೊತ್ತದ ಸಂಬಳ ಪಡೆಯುತ್ತಿದ್ದ ಪತಿ ಜ್ಞಾನೇಶ್ ತನ್ನ ಸಂಬಳಕ್ಕಿಂತ ಪತ್ನಿಗೆ ಇನ್ನಷ್ಟು ಪ್ರೀತಿಯ ಮಳೆ ಸುರಿಸಿ ಆಕೆಯನ್ನು ಬದುಕಿಸಲು ಟೊಂಕಕಟ್ಟಿ ನಿಂತರು. ಶತಾಯಗತಾಯ ಪತ್ನಿಯನ್ನು ಉಳಿಸಿಕೊಳ್ಳಲೇಬೇಕೆಂಬ ಏಕೈಕ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ಕೂಡ ನೀಡಿದರು.
ಜ್ಞಾನೇಶ್ ಭದ್ರಾವತಿಯ ಹಾಲಪ್ಪ ವೃತ್ತದ ಬಳಿಯ ವಾಸಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ. ಸರಕಾರಿ ನೌಕರಿಯಲ್ಲಿದ್ದ ತಂದೆ-ತಾಯಿ ಹುಡುಕಿದವಳನ್ನೇ ಮದುವೆಯಾದರು. ಮದುವೆಯಾಗುವ ಹುಡುಗಿಗೆ ಕಷ್ಟ-ಸುಖ ಗೊತ್ತಿರಬೇಕೆನ್ನುವುದು ಅವರ ನಿರ್ಧಾರವಾಗಿತ್ತು. ಅಂತೆಯೇ ವಿಜಯಲಕ್ಷ್ಮೀ ಎಂಬ ಸರ್ಕಾರಿ ಕನ್ನಡ ಶಾಲೆಯ ಶಿಕ್ಷಕಿ ಈತನ ಕೈ ಹಿಡಿದಿದ್ದಳು. ಇವರಿಗೊಂದು ಮುದ್ದಾದ ಹೆಣ್ಣು ಮಗು. ಇಂತಹ ಕುಟುಂಬ ಹಾಲು ಜೇನಿನಲ್ಲಿ ಕೈತೊಳೆಯುತ್ತಿತ್ತು. ಆದರೆ ಸ್ತನ ಕ್ಯಾನ್ಸರ್ ಯಾವಾಗ ಅವರನ್ನು ಆವರಿಸಿತೋ ಜ್ಞಾನೇಶ್ ಕಂಗಾಲಾದರು. ಪತ್ನಿಯ ಯೋಗಕ್ಷೇಮವೇ ಹಣ, ಉದ್ಯೋಗಕ್ಕಿಂತ ಮುಖ್ಯವೆಂದು ಅರಿತು ತನ್ನ ಜೀವನವನ್ನೇ ಮುಡಿಪಾಗಿಟ್ಟರು. ಹೊಸನಗರದಲ್ಲಿ ಶಿಕ್ಷಕಿಯಾಗಿದ್ದ ಪತ್ನಿಯನ್ನು ಭದ್ರಾವತಿಗೆ ವರ್ಗಾವಣೆ ಮಾಡಿಸಿಕೊಂಡರು.
ಮಗಳಿಗೆ ಪಾಠ ಹೇಳಿಕೊಡುವುದು, ಪತ್ನಿಯನ್ನು ಶಾಲೆಗೆ ಬಿಡುವುದು, ಕರೆದುಕೊಂಡು ಬರುವುದು, ಮನೆಯ ಎಲ್ಲ ಕೆಲಸಗಳನ್ನು ಸ್ವಲ್ಪವೂ ಬೇಸರಿಸದೆ ನಿರ್ವಹಿಸುವುದು ಜ್ಞಾನೇಶ್ ಅವರ ನಿತ್ಯದ ಕಾಯಕವಾಯಿತು. ಮೂರು ತಿಂಗಳಿಗೊಮ್ಮೆ ಮಣಿಪಾಲಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸುವುದು ನಡೆದೇ ಇತ್ತು. ಇದಕ್ಕ್ಕಾಗಿ ಸಾಕಷ್ಟು ಹಣವನ್ನೂ ಖರ್ಚು ಮಾಡಿದರು. ಪತ್ನಿ ಸರ್ಕಾರಿ ನೌಕರಿಯಲ್ಲಿದ್ದುದರಿಂದ ಹತ್ತಾರು ಓಡಾಟ ಮಾಡಿ ಜ್ಯೋತಿ ಸಂಜಿವಿನಿ ಯೋಜನೆಯಡಿ ನೆರವನ್ನೂ ಪಡೆದುಕೊಂಡರು. ಪಾಲಕರು, ಕೆಲವು ಸಂಬಂಧಿಕರು, ಮಿತ್ರರೂ ಸಹ ನೆರವಾಗಿದ್ದನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತಾರೆ ಜ್ಞಾನೇಶ್.
ಮಡದಿಯ ಕಾಯಿಲೆ ಉಲ್ಬಣವಾಗುತ್ತಿದ್ದರೂ, ಪತ್ನಿಗೆ, ಹತ್ತಿರದವರಿಗೆ, ಅಕ್ಕಪಕ್ಕದವರಿಗೆ ಕ್ಯಾನ್ಸರ್ನ ಭೀಕರತೆ ಬಗ್ಗೆ ಹೇಳಿರಲಿಲ್ಲ. ಜತನದಿಂದ ಪತ್ನಿಯನ್ನು ಕಾಪಾಡಿಕೊಳ್ಳುವುದು ಮತ್ತು ಪತ್ನಿ ಬದುಕುಳಿದರೆ ಸಾಕು ಎನ್ನುವುದೊಂದೇ ಉದ್ದೇಶವಾಗಿತ್ತು.
ಆದರೆ, ಪತ್ನಿಯ ಕೊನೆದಿನ ಸಮೀಪಿಸುತ್ತಿರುವುದು ಪತಿಗೆ ಅರಿವಾಗುತ್ತಲೇ ಇತ್ತು. ಇಷ್ಟಾದರೂ ಪತ್ನಿಗೆ ಸತತ ಧೈರ್ಯ ತುಂಬುತ್ತಲೇ ಇದ್ದರು. ನೋಡುಗರ ಪಾಲಿಗೆ ನರಕಸದೃಶ ಪರಿಸ್ಥಿತಿ ಇದ್ದರೂ ದೇವತೆಯಂತೆ ಪೂಜಿಸುತ್ತಿದ್ದರು. ಸ್ನಾನದಿಂದ ಹಿಡಿದು ಶೌಚಾಲಯದವರೆಗಿನ ಎಲ್ಲ ಸೇವೆಯನ್ನು ತಾನೇ ಮಾಡಿ, ಪತ್ನಿಗೆ ಊರುಗೋಲಾಗಿದ್ದರು. ಶಾಲಾ ಆಡಳಿತ ಮಂಡಳಿಯವರೂ, ಸಹಶಿಕ್ಷಕರೂ ಸಹ ವಿಜಯಲಕ್ಷ್ಮಿಯ ಪರಿಸ್ಥಿತಿ ಅರಿತಿದ್ದರಿಂದ ಅವರು ಪಾಠ ಮಾಡುವ ವೇಳೆ ಸಹಕರಿಸುತ್ತಿದ್ದರು. ಪತಿ ಸೇವೆ ಮಾಡುವುದನ್ನು ಕಂಡು ಎಲ್ಲರೂ ಬೆಕ್ಕಸಬೆರಗಾಗಿದ್ದರು.
ಪತ್ನಿಗೆ ಎಷ್ಟೇ ಧೈರ್ಯ ತುಂಬಿ, ಸಾವು ಬಾರದ ರೀತಿಯಲ್ಲಿ ನೋಡಿಕೊಂಡರೂ ವಿಧಿಯಾಟವೇ ಮೇಲಾಗಿತ್ತು. ಎಪ್ರಿಲ್ 11ರಂದು ಪತಿಯ ತೊಡೆಯ ಮೇಲೆ ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದರು ವಿಜಯಲಕ್ಷ್ಮೀ. ಸುಮಾರು 7 ವರ್ಷಗಳ ಕಾಲ ಪತಿ ತೋರಿದ ಪ್ರೀತಿಯೇ, ಎಂದೋ ಸಾಯಬೇಕಿದ್ದ ಆಕೆಯ ಸಾವಿನ ದಿನವನ್ನು ಮುಂದೂಡಿತ್ತು. ಜ್ಞಾನೇಶ್ ಪತ್ನಿಯನ್ನು ಆರೈಕೆ ಮಾಡಿದ ರೀತಿ ಮಾತ್ರ ನಿಜಕ್ಕೂ ನಮ್ಮ ಸಮಾಜಕ್ಕೊಂದು ಮಾದರಿಯೇ ಸರಿ.
....................................

No comments:
Post a Comment