Saturday, 7 January 2017

 ಪಾಲಿಕೆ ಗದ್ದುಗೆ ಭಾಗ್ಯ ಯಾರಿಗೆ?  
  ಕಾಂಗ್ರೆಸ್-ಬಿಜೆಪಿ-ಜೆಡಿಎಸ್‌ನಿಂದ ಶುರುವಾಗಿದೆ ಕಾರ್ಯತಂತ್ರ






ಬಲಾಬಲ ವಿವರ:
 ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಸಂಸದರು, ನಗರ ವ್ಯಾಪ್ತಿಯ ಶಾಸಕರು, ವಿಧಾನಪರಿಷತ್ ಸದಸ್ಯರಿಗೂ ಮತದಾನ ಮಾಡುವ ಹಕ್ಕಿದೆ. ಕಾಂಗ್ರೆಸ್‌ನಲ್ಲಿ 12 ಸದಸ್ಯರಿದ್ದು, ತಲಾ ಓರ್ವ ಶಾಸಕ - ವಿಧಾನಪರಿಷತ್ ಸದಸ್ಯರಿದ್ದಾರೆ. ಆದರೆ ಶಾಸಕ ಪ್ರಸನ್ನಕುಮಾರ್ ಪಾಲಿಕೆಯ ಸದಸ್ಯರೂ ಆಗಿರುವುದರಿಂದ ಒಂದೇ ಮತದ ಪರಿಗಣನೆ ಬರಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಬಲ 13 ಆಗಲಿದೆ. 
ಉಳಿದಂತೆ ಬಿಜೆಪಿಯಲ್ಲಿ 11 ಸದಸ್ಯರಿದ್ದಾರೆ. ಓರ್ವ ಸಂಸದ, ಮೂವರು ವಿಧಾನಪರಿಷತ್ ಸದಸ್ಯರಿದ್ದಾರೆ. ಒಟ್ಟಾರೆ ಆ ಪಕ್ಷದ ಬಲ 15 ಆಗಲಿದೆ. ಜೆಡಿಎಸ್‌ನಲ್ಲಿ 5 ಸದಸ್ಯರಿದ್ದು, ಓರ್ವ ಶಾಸಕರಿದ್ದು ಆ ಪಕ್ಷದ ಬಲಾಬಲ ಆರು ಆಗಲಿದೆ. ಉಳಿದಂತೆ ಇತರೆ ಸದಸ್ಯರು ಏಳು ಜನರಿದ್ದಾರೆ. ಒಟ್ಟಾರೆ ಸದಸ್ಯರ ಬಲಾಬಲ 41 ಆಗಲಿದ್ದು, ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಗದ್ದುಗೆಯೇರಲು ಯಾವುದೇ ಪಕ್ಷದ ಮೈತ್ರಿಕೂಟಕ್ಕೆ 21 ಸದಸ್ಯರ ಬಹುಮತ ಬೇಕಾಗುತ್ತದೆ.

ಶಿವಮೊಗ್ಗ,  : ಶಿವಮೊಗ್ಗ ಮಹಾನಗರ ಪಾಲಿಕೆಯ ನಾಲ್ಕನೆಯ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಈಗಾಗಲೇ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಮೇಯರ್ ಹುದ್ದೆ ಪರಿಶಿಷ್ಟ ಜಾತಿಗೆ ಹಾಗೂ ಉಪ ಮೇಯರ್ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಿರಿಸಿದೆ. ಹಾಲಿ ಮೇಯರ್ - ಉಪ ಮೇಯರ್ ಅಧಿಕಾರಾವಧಿ ಫೆಬ್ರವರಿ 4 ಕ್ಕೆ ಅಂತ್ಯಗೊಳ್ಳಲಿದ್ದು, ಈ ತಿಂಗಳಾಂತ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ.
ಮೀಸಲಾತಿ ಕಾರಣದಿಂದ ಕಳೆದ ಬಾರಿ ಉಪ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಮಂಗಳಾ ಅಣ್ಣಪ್ಪ ಹೊರತುಪಡಿಸಿ, ಇತರೆ ಪಕ್ಷಗಳಲ್ಲಿ ಆ ವರ್ಗಕ್ಕೆ ಸೇರಿದ ಸದಸ್ಯೆಯರಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳಾ ಅಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರು.
ಈ ಬಾರಿಯೂ ಕೂಡ ಮೀಸಲಾತಿ ಕಾರಣದಿಂದಲೇ ಉಪ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯುವುದು ಬಹುತೇಕ ಖಚಿತವಾಗಿದೆ. ಪರಿಶಿಷ್ಟ ಪಂಗಡ ಮಹಿಳಾ ವರ್ಗಕ್ಕೆ ಉಪ ಮೇಯರ್ ಸ್ಥಾನ ನಿಗದಿಯಾಗಿದ್ದು, ಬಿಜೆಪಿಯಲ್ಲಿ ಮಾತ್ರ ಈ ವರ್ಗಕ್ಕೆ ಸೇರಿದ ಸದಸ್ಯೆಯಿದ್ದಾರೆ. ಆ ಪಕ್ಷದ ರೂಪಾ ಲಕ್ಷ್ಮಣ್ ಉಪ ಮೇಯರ್ ಆಗುವುದು ನಿಶ್ಚಿತ.
ಈ ಹಿಂದಿನಂತೆ ಈ ಬಾರಿಯೂ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಅಧಿಕಾರ ತನ್ನದಾಗಿಸಿಕೊಳ್ಳಲು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತೀವ್ರ ಹಣಾಹಣಿ ಏರ್ಪಡಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ಮೂರು ಪಕ್ಷಗಳು ಸದ್ದಿಲ್ಲದೆ ಕಾರ್ಯತಂತ್ರ ರೂಪಿಸಲಾರಂಭಿಸಿವೆ. ಶತಾಯಗತಾಯ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಪ್ರಯತ್ನ ಪ್ರಾರಂಭಿಸಿವೆ.
ಮೇಯರ್ ಸ್ಥಾನಕ್ಕೆ ಮೀಸಲಿರಿಸಿರುವ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಸದಸ್ಯರು ಮೂರು ಪಕ್ಷಗಳಲ್ಲಿಯೂ ತಲಾ ಓರ್ವರಿರುವುದು ವಿಶೇಷವಾಗಿದೆ. ಕಾಂಗ್ರೆಸ್‌ನಲ್ಲಿ ಹೊಸಮನೆಯ ಲಕ್ಷ್ಮಣ್, ಬಿಜೆಪಿಯಲ್ಲಿ ನಿದಿಗೆಯ ವೆಂಕ್ಯಾ ನಾಯ್ಕ್ ಹಾಗೂ ಜೆಡಿಎಸ್‌ನಲ್ಲಿ ಮಿಳಘಟ್ಟ ವಾರ್ಡಿನ ಕೇಬಲ್ ಬಾಬು ಇದ್ದಾರೆ. ಈ ಮೂವರಲ್ಲಿ ಓರ್ವರು ಮೇಯರ್ ಗದ್ದುಗೆ ಅಲಂಕರಿಸುವುದು ಖಚಿತ.
ಯಾರಿಗೆ ಗದ್ದುಗೆ ಭಾಗ್ಯ:
ಮಹಾನಗರ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಮೂರು ಅವಧಿಯಿಂದಲೂ ಮೈತ್ರಿ ಆಳ್ವಿಕೆಗೆ ಪಾಲಿಕೆ ಆಡಳಿತ ಸಾಕ್ಷಿಯಾಗಿದೆ. ಸತತ ಮೂರು ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಇತರೆ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದುಕೊಂಡು ಬರುತ್ತಿದೆ. ಆದರೆ ಈ ಬಾರಿ ಮೈತ್ರಿಕೂಟದ ಸ್ನೇಹದ ಓಟ ಮುಂದುವರೆಯಲಿದೆಯೇ ಎನ್ನುವುದು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ.
ಸತತ ಮೂರು ಬಾರಿ ಮೇಯರ್ ಸ್ಥಾನವು ಕಾಂಗ್ರೆಸ್‌ಗೆ ಲಭಿಸಿದ್ದು, ಈ ಬಾರಿ ತನಗೆ ಮೇಯರ್ ಸ್ಥಾನ ಬಿಟ್ಟುಕೊಡಬೇಕು ಎಂಬುವುದು ಜೆಡಿಎಸ್ ಪಕ್ಷದ ಒತ್ತಾಯವಾಗಿದೆ. ಹಿಂದೆ ಮಾಡಿಕೊಂಡಿದ್ದ ಒಪ್ಪಂದದಂತೆ ಮೇಯರ್ ಗದ್ದುಗೆಯನ್ನು ಜೆಡಿಎಸ್‌ಗೆ ಕಾಂಗ್ರೆಸ್ ಬಿಟ್ಟು ಕೊಡಬೇಕು. ಕಾಂಗ್ರೆಸ್  ಮುಖಂಡರು ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎನ್ನುವುದು ಜೆಡಿಎಸ್ ಮುಖಂಡರ ವಾದವಾಗಿದೆ.
 ಚುನಾವಣೆ ಇನ್ನೂ ಒಂದು ತಿಂಗಳು ಇರುವುದರಿಂದ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳದಿರಲು ನಿರ್ಧರಿಸಿದ್ದು, ಕಾದು ನೋಡಲು ನಿರ್ಧರಿಸಿದ್ದಾರೆ. ಇನ್ನೊಂದೆಡೆ ಮೀಸಲಾತಿ ಕಾರಣದಿಂದ ಅನಾಯಾಸವಾಗಿ ಉಪ ಮೇಯರ್ ಗದ್ದುಗೆ ತನ್ನದಾಗಿಸಿಕೊಂಡಿರುವ ಬಿಜೆಪಿಯು ಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಕೂಡ ತನ್ನದಾಗಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ.


...............................

’ಓಬವ್ವ ಪಡೆ’ ಸದ್ದು ಮಾಡುತ್ತಿಲ್ಲವೇಕೆ?
 ಮತ್ತೆ ಶುರುವಾಗಿದೆ ಬೀದಿ ಕಾಮಣ್ಣರ ಅಟ್ಟಹಾಸ 


ಒಂದೆರಡು ತಿಂಗಳಿನಿಂದ  ಓಬವ್ವ ಪಡೆ ನಿಸ್ತೇಜವಾಗಿದೆ. ಕಾರ್ಯಚಟುವಟಿಕೆಯ ಮಾಹಿತಿಯೇ ಇಲ್ಲವಾಗಿದೆ. ಇದರ ಮಾಹಿತಿ ಅರಿತಿರುವ ಬೀದಿ ಕಾಮಣ್ಣರು ಮತ್ತೆ ತಮ್ಮ ವಿಕೃತ ಆಟಗಳನ್ನು ಶುರು ಮಾಡಲಾರಂಭಿಸಿದ್ದಾರೆ. ಯುವತಿಯರು, ಮಹಿಳೆಯರನ್ನು ಕಾಡಲಾರಂಭಿಸಿದ್ದಾರೆ.  ನಗರದ ಪ್ರಮುಖ ಬಸ್ ನಿಲ್ದಾಣ, ವಿವಿಧ ಬಸ್ ಸ್ಟಾಪ್, ಶಾಲಾ-ಕಾಲೇಜುಗಳ ರಸ್ತೆ, ಜನನಿಬಿಡ ಸ್ಥಳಗಳಲ್ಲಿ ಕೆಲ ಪುಂಡ-ಪೋಕರಿಗಳು ಯುವತಿಯರು-ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡುವ ಕೃತ್ಯಗಳಲ್ಲಿ ತೊಡಗುತ್ತಿರುವುದು ಇತ್ತೀಚಿಗೆ ಕಂಡುಬರುತ್ತಿದೆ. ಬೀದಿ ಕಾಮಣ್ಣರ ಕಿರುಕುಳವನ್ನು ಬಹಿರಂಗವಾಗಿ ಹೇಳಲಾಗದೆ ಕೆಲ ಯುವತಿಯರು ತೀವ್ರ ಮಾನಸಿಕ ತೊಂದರೆ ಅನುಭವಿಸುತ್ತಿದ್ದಾರೆ.

ಶಿವಮೊಗ್ಗ,  : ಮೊನ್ನೆ ಹೊಸ ವರ್ಷಾಚರಣೆಯ ವೇಳೆ ಬೆಂಗಳೂರಿನಲ್ಲಿ ಬೀದಿ ಕಾಮಣ್ಣರು ಯುವತಿಯರು, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ನಂತರ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆಯಾಗುತ್ತಿದೆ. ವಿಶೇಷ ಪೊಲೀಸ್ ಪಡೆ ಅಸ್ತಿತ್ವಕ್ಕೆ ತರುವ ಚರ್ಚೆಗಳು ಸರ್ಕಾರದ ಮಟ್ಟದಲ್ಲಿ ನಡೆಯಲಾರಂಭಿಸಿದೆ.  ಬೀದಿ ಕಾಮಣ್ಣರ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಓಬವ್ವ ಪಡೆಯನ್ನು ರಚನೆ ಮಾಡಿದ್ದರು. ಪೊಲೀಸ್ ಇಲಾಖೆಯ ಈ ಕ್ರಮವು ಇಡೀ ರಾಜ್ಯದ ಗಮನ ಸೆಳೆದಿತ್ತು. ವಿಶೇಷವಾಗಿ ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದರ ಜನಪ್ರಿಯತೆ ಗಮನಿಸಿ, ಕೆಲವು ಜಿಲ್ಲೆಗಳಲ್ಲಿಯೂ ಬೀದಿ ಕಾಮಣ್ಣರಿಗೆ ತಕ್ಕ ಶಾಸ್ತಿ ಮಾಡಲು ಪ್ರತ್ಯೇಕ ಪೊಲೀಸ್ ಪಡೆಗಳನ್ನು ಸ್ಥಳೀಯ ಪೊಲೀಸ್ ಇಲಾಖೆಗಳು ಆರಂಭಿಸಿದ್ದವು. ಈ ಪಡೆಗಳು ಬೀದಿ ಕಾಮಣ್ಣರಿಗೆ ತಕ್ಕ ಪಾಠ ಕಲಿಸುವಲ್ಲಿ ಯಶಸ್ವಿಯಾಗಿದ್ದವು. ಅದರಲ್ಲಿಯೂ ಶಿವಮೊಗ್ಗ ನಗರದಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದ ’ಓಬವ್ವ ಪಡೆ’ಯಂತೂ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು.
ಈ ಪಡೆಯ ಪೊಲೀಸರು ನಗರದ ವಿವಿಧ ರಸ್ತೆ, ಶಾಲಾ - ಕಾಲೇಜು, ಬಸ್ ನಿಲ್ದಾಣ, ಸಿಟಿ ಬಸ್‌ಗಳಲ್ಲಿ ಮಫ್ತಿ ಬಟ್ಟೆಯಲ್ಲಿ ಬೀಡುಬಿಟ್ಟು ಬೀದಿ ಕಾಮಣ್ಣರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿತ್ತು. ಸುಮಾರು 60 ಕ್ಕೂ ಅಧಿಕ ಬೀದಿ ಕಾಮಣ್ಣರನ್ನು ಈ ತಂಡ ವಶಕ್ಕೆ ಪಡೆದಿತ್ತು. ಇದರಿಂದ ಬೀದಿ ಕಾಮಣ್ಣರು ತಮ್ಮ ವಿಕೃತ ಆಟಕ್ಕೆ ಪೂರ್ಣ ಪ್ರಮಾಣದಲ್ಲಿ ಬ್ರೇಕ್ ಹಾಕಿದ್ದರು. ಯುವತಿಯರು, ಮಹಿಳೆಯರು ಕೂಡ ಶಿವಮೊಗ್ಗ ನಗರದ ರಸ್ತೆಗಳಲ್ಲಿ ನೆಮ್ಮದಿಯಾಗಿ ಓಡಾಡುವಂತಾಗಿತ್ತು.
 ಪೊಲೀಸರು ಪುಂಡರನ್ನು ಈಗ ಹಿಡಿದು ಕೊಂಡೊಯ್ಯುತ್ತಿಲ್ಲ. ಮತ್ತೆ ಬೀದಿ ಕಾಮಣ್ಣರು ಹಿಂದಿನ ಕಿಡಿಗೇಡಿ ಕೃತ್ಯಗಳನ್ನು ಪುನಾರಾರಂಭಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಈ ಪಡೆಗೆ ಮತ್ತೆ ಶಕ್ತಿ ತುಂಬಬೇಕಿದೆ. ಇದರ ಎಸ್ ಐ ಆಗಿದ್ದ ಅನಿತಾ ಅವರು ಪಡೆಯಿಂದ ವರ್ಗಾವಣೆಗೊಂಡಿದ್ದಾರೆ. ನೂತನ ಎಸ್‌ಐನ್ನು ಪಡೆಗೆ ನೇಮಿಸುವ ಮೂಲಕ  ಪುಂಡಪೋಕರಿಗಳಿಗೆ ಬುದ್ಧಿ ಕಲಿಸುವ ಕೆಲಸವಾಗಬೇಕಿದೆ.
ವಿಶೇಷವಾಗಿ ಓ. ಟಿ. ರಸ್ತೆಯಲ್ಲಿ ನಡೆದುಕೊಂಡು ಹೋಗುವ ವಿದ್ಯಾರ್ಥಿನಿಯರನ್ನು ಕೆಲವು ಪುಂಡರು ಕಿಚಾಯಿಸುತ್ತಾರೆ. ಅವರ ಹಿಂದೆಯೇ ಹೋಗುವುದು, ಅವರಿಗಾಗಿ ಅಂಗಡಿ ಎದುರು ಕಾದು ನಿಲ್ಲುವುದು, ಅವರನ್ನು ಬಲವಂತದಿಂದ ಮಾತನಾಡಲು ಯತ್ನಿಸುವುದು ಕಂಡುಬರುತ್ತಿದೆ. ನೆಹರು ರಸ್ತೆ ಬಸ್ ಸ್ಟಾಪ್‌ನಲ್ಲೂ ಇವರ ಕಾಟ ಮಿತಿಮೀರಿದೆ. ಇಲ್ಲಿಸ ಸದಾ ಬಸ್‌ಗಾಗಿ ಕಾಯುವವರಿರುತ್ತಾರೆ. ಆದರೂ ಧೈರ್ಯದಿಂದ ಅವರ ಪಕ್ಕಕ್ಕೆ ಕುಳಿತು ಚುಡಾಯಿಸುತ್ತಾರೆ.  ಕೆಲವು ಯುವತಿಯರು ಇವರಿಗೆ ಸಾಥ್ ಕೊಡುತ್ತಾ ಸಾರ್ವಜನಿಕವಾಗಿ ಅಸಹ್ಯವಾಗಿ ವರ್ತಿಸುತ್ತಿದ್ದಾರೆ. ಅಲ್ಲಿನ ಕುರ್ಚಿಯ ಮೇಲೆ ಕಾಲಿಡುವುದು, ಪ್ರಯಾಣಿಕರಿಗೆ ಖುರ್ಚಿ ಕೊಡದೆ ಕುಳಿತು ಹರಟುವುದು ಮಾಮೂಲಾಗಿದೆ.
ಈ ಹಿನ್ನೆಲೆಯಲ್ಲಿ ಓಬವ್ವ ಪಡೆ ಸಕ್ರಿಯಗೊಳಿಸಬೇಕಿದೆ. ಈ ಪಡೆಗೆ ಪ್ರತ್ಯೇಕ ಸಿಬ್ಬಂದಿ, ವಾಹನದ ವ್ಯವಸ್ಥೆ ಮಾಡಬೇಕು. ವರ್ಷದ ಎಲ್ಲ ದಿನಗಳಂದು ಈ ಪಡೆ ಕಾರ್ಯನಿರ್ವಹಣೆ ಮಾಡುವಂತಹ ವ್ಯವಸ್ಥೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಎಸ್.ಪಿ.ಯವರು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. ಈ ಪಡೆಯಿದ್ದರೆ ಯುವತಿಯರು, ವಿದ್ಯಾರ್ಥಿನಿಯರು, ಮಹಿಳೆಯರು ನಗರದ ರಸ್ತೆಗಳಲ್ಲಿ ನೆಮ್ಮದಿಯಿಂದ ಓಡಾಡುವಂತಾಗುತ್ತದೆ.


-----------------------------------------------

Friday, 6 January 2017


 ನೆನೆಗುದಿಗೆ ಬಿದ್ದ ಪ್ರಮುಖ ರಸ್ತೆಗಳ ಅಗಲೀಕರಣ ಎಂದು?


  ’ಶಿವಮೊಗ್ಗ ನಗರವು ಕೇಂದ್ರ ಸರ್ಕಾರದ ಪ್ರತಿಷ್ಠಿತ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿದೆ. ಆದರೆ ನಗರದ ಸದ್ಯದ ಟ್ರಾಫಿಕ್ ಸ್ಥಿತಿಗತಿ ಗಮನಿಸಿದರೆ ಇನ್ಯಾವ ರೀತಿಯಲ್ಲಿ ಸ್ಮಾರ್ಟ್ ಸಿಟಿಯಾಗಿ ನಗರ ಅಭಿವೃದ್ದಿಗೊಳ್ಳಲಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ನಿಜವಾಗಿಯೂ ನಗರವನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸುವ ಇಚ್ಛಾಶಕ್ತಿ ಆಡಳಿತಗಾರರಿಗಿದ್ದರೆ ಮೊದಲು ಜನಸಂಖ್ಯೆ - ವಾಹನಗಳಿಗೆ ಅನುಗುಣವಾಗಿ ಮೂಲಸೌಕರ್ಯ ಕಲ್ಪಿಸುವುದರತ್ತ ಗಮನಹರಿಸಬೇಕು. ಭವಿಷ್ಯದ ಜನಸಂಖ್ಯೆ, ವಾಹನಗಳಿಗೆ ಅನುಗುಣವಾಗಿ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡಲಿ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬದಿಗಿಟ್ಟು ನಗರದ ಸರ್ವಾಂಗೀಣ ಅಭಿವೃದ್ದಿಯತ್ತ ಜನನಾಯಕರು ಗಮನಹರಿಸಬೇಕು. ವ್ಯವಸ್ಥಿತವಾಗಿ ನಗರದ ಬೆಳವಣಿಗೆಗೆ ಗಮನಹರಿಸಬೇಕು.


ಶಿವಮೊಗ್ಗ, ಜ. 3: ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಎರಡನೆಥಿ ಹಂತದ ನಗರಗಳಲ್ಲಿ ಶಿವಮೊಗ್ಗವೂ ಕೂಡ ಒಂದಾಗಿದೆ. ನಗರದ ಜನಸಂಖ್ಯೆ, ವಾಹನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಅನುಗುಣವಾಗಿ ಮೂಲಸೌಕರ್ಯಗಳ ಅಭಿವೃದ್ದಿಯಾಗುತ್ತಿಲ್ಲ. ಅದರಲ್ಲಿಯೂ ವಿಶೇಷವಾಗಿ ರಸ್ತೆಗಳ ವಿಷಯದಲ್ಲಂತೂ ನಗರದ ಸ್ಥಿತಿ ಶೋಚನೀಯವಾಗಿದ್ದು, ಇದರಿಂದ ದಿನದಿಂದ ದಿನಕ್ಕೆ ಕೆಲ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯೇ ಅಸಾಧ್ಯವೆನ್ನುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ.
ನಗರದ ಜನಸಂಖ್ಯೆ ಹಾಗೂ ವಾಹನ ದಟ್ಟಣೆಗೆ ಅನುಗುಣವಾಗಿ, ಕೆಲ ಪ್ರಮುಖ ರಸ್ತೆಗಳ ಅಭಿವೃದ್ದಿಗೆ ಕಳೆದ ಹಲವು ವರ್ಷಗಳ ಹಿಂದೆಯೇ ಜಿಲ್ಲಾಡಳಿತ ರೂಪುರೇಷೆ ಸಿದ್ದಪಡಿಸಿತ್ತು. ಕೆಲ ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡುವುದರ ಜೊತೆಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಿತ್ತು. ಆದರೆ ಸ್ಥಳೀಯ ಜನಪ್ರತಿನಿಧಿಗಳ ಅಸಹಕಾರ, ಅನುದಾನದ ಕೊರತೆ, ರಾಜಕೀಯ ಮೇಲಾಟ ಮತ್ತೀತರ ಕಾರಣಗಳಿಂದ ಅಭಿವೃದ್ದಿ ಪ್ರಸ್ತಾಪ ಅಕ್ಷರಶಃ ನೆನೆಗುದಿಗೆ ಬೀಳುವಂತಾಗಿದೆ.
ಕೆಲ ಪ್ರಮುಖ ರಸ್ತೆಗಳಲ್ಲಿ ವಾಹನಗಳಿರಲಿ ಜನ ಕೂಡ ಓಡಾಡಲು ಸಾಧ್ಯವಾಗದ ಮಟ್ಟಕ್ಕಿವೆ. ಮತ್ತೆ ಕೆಲ ರಸ್ತೆಗಳಲ್ಲಿ ವಾಹನ ದಟ್ಟಣೆ ವಿಪರೀತ ಮಟ್ಟಕ್ಕೆ ತಲುಪಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇನ್ನೂ ಕೆಲ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲವಾಗಿವೆ. ಇದರಿಂದ ನಾಗರೀಕರು ರಸ್ತೆಯ ಮೇಲೆಯೇ ಓಡಾಡುವಂತಹ ದುಃಸ್ಥಿತಿಯಿದೆ.
 ಮಹಾನಗರ ಪಾಲಿಕೆ ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಅಥವಾ ಸಂಬಂಧಿಸಿದ ಇಲಾಖೆಗಳು ಪ್ರಮುಖ ರಸ್ತೆಗಳ ಅಗಲೀಕರಣದ ಬಗ್ಗೆ ಗಮನಹರಿಸುವ ಗೋಜಿಗೆ ಹೋಗುತ್ತಿಲ್ಲ. ಮತ್ತೊಂದೆಡೆ, ಎಲ್ಲಿ ನಾಗರಿಕರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆಯೋ ಎಂಬ ಕಾರಣದಿಂದ ಜನಪ್ರತಿನಿಧಿಗಳೂ ಕೂಡ ರಸ್ತೆ ಅಗಲೀಕರಣದ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಇದರಿಂದ ನಗರದ ಅದೆಷ್ಟೋ ರಸ್ತೆಗಳು ಇಂದಿಗೂ 20 - 3.0 ವರ್ಷಗಳ ಹಿಂದೆ ಹೇಗಿದ್ದವೋ ಈಗಲೂ ಅದೇ ಸ್ಥಿತಿಯಲ್ಲಿವೆ. ಆಗಾಗ ಡಾಂಬರು, ತೇಪೆ ಹಾಕುವ ಕೆಲಸವನ್ನಷ್ಟೇ ಮಾಡಲಾಗುತ್ತಿದೆ.
  ಕಳೆದ ವರ್ಷ ನಗರದ ಪ್ರಮುಖ ರಸ್ತೆಗಳಲ್ಲೊಂದಾದ, ಅತ್ಯಧಿಕ ಜನ-ವಾಹನ ದಟ್ಟಣೆಯಿರುವ ಕುವೆಂಪು ರಸ್ತೆಯ ಅಗಲೀಕರಣಗೊಳಿಸಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ಪಿಡಬ್ಲ್ಯೂಡಿ ಇಲಾಖೆಯಿಂದ ಪ್ರಸ್ತಾವನೆ ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಭೂ ಸ್ವಾದೀನ ಪ್ರಕ್ರಿಯೆ, ರಸ್ತೆ ಅಭಿವೃದ್ದಿಗೆ ಸರಿಸುಮಾರು 80 ಕೋಟಿ ರೂ. ಅನುದಾನ ಕೋರಲಾಗಿತ್ತು.  ಆದರೆ ಇಲ್ಲಿವರೆಗೂ ಈ ರಸ್ತೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಅನುಮತಿ ಸಿಗುವುದಿರಲಿ, ನಯಾಪೈಸೆ ಕೂಡ ಬಿಡುಗಡೆಯಾಗಿಲ್ಲ.
  ಈ ಬಗ್ಗೆ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ, ’ಈ ರಸ್ತೆ ನಮ್ಮ ಇಲಾಖೆಗೆ ಸೇರಿದ್ದಲ್ಲ. ಆದರೆ ಈ ರಸ್ತೆಯನ್ನು ತಮ್ಮ ಇಲಾಖೆಯ ಮೂಲಕ ಅಗಲೀಕರಣ ಹಾಗೂ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ನಡೆಸಲು  ಪಾಲಿಕೆ ಆಡಳಿತ ನಿರ್ಧರಿಸಿತ್ತು. ಈ ರಸ್ತೆಯಲ್ಲಿ ತೆರವಾಗುವ ಕಟ್ಟಡಗಳ ಮಾಹಿತಿ, ಭೂ ಸ್ವಾಧೀನಕ್ಕೆ ಅಗತ್ಯವಾದ ಅನುದಾನ, ದ್ವಿ ಪಥ ಮಾರ್ಗ ನಿರ್ಮಾಣಕ್ಕೆ ತಗಲುವ ವೆಚ್ಚದ ಬಗ್ಗೆ ವರದಿ ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ರಸ್ತೆ ಅಭಿವೃದ್ದಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದ್ದಂತೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ, ಕಾಮಗಾರಿ ಆರಂಭಿಸಲಾಗುವುದು’ ಎಂದು ಹೇಳುತ್ತಾರೆ.
ಆದರೆ ಕಿರಿದಾಗಿರುವ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅಸಾಧ್ಯ ಎಂಬಂತಾಗಿದೆ. ಪಾದಚಾರಿ ಮಾರ್ಗವಂತೂ ಇಲ್ಲವಾಗಿದ್ದು, ರಸ್ತೆಯೇ ಮೇಲೆಯೇ ಜನರು ಓಡಾಡುವಂತಾಗಿದೆ. ಹಲವೆಡೆ ರಸ್ತೆಯ ಜಾಗ ಒತ್ತುವರಿ ಮಾಡಿಕೊಂಡು ಬೃಹದಾಕಾರದ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ರಸ್ತೆ ಅಗಲೀಕರಣ ಮಾಡುವುದಾಗಿ ಹೇಳುತ್ತಲೇ ಬರಲಾಗುತ್ತಿದೆ. ಆದರೆ ಇಲ್ಲಿಯವರೆಗೂ ಈ ಪ್ರಕ್ರಿಯೆ ನಡೆಸಿಲ್ಲ.
ಗಮನಹರಿಸಲಿ:
 ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳ ಅಗಲೀಕರಣದ ಬಗ್ಗೆ ಗಮನಹರಿಸಬೇಕಾಗಿದೆ. ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿ, ಸರ್ಕಾರದಿಂದ ಸೂಕ್ತ ಅನುದಾನ ದೊರಕಿಸಿ ಕೊಡಬೇಕಾಗಿದೆ. ಇಲ್ಲದಿದ್ದರೆ ಭವಿಷ್ಯದ ದಿನಗಳಲ್ಲಿ ನಗರದ ಹಲವು ರಸ್ತೆಗಳಲ್ಲಿ ವಾಹನಗಳಿರಲಿ, ಜನರೇ ಓಡಾಡಲು ತೊಂದರೆ ಪಡುವಂತಹ ಸ್ಥಿತಿ ಸೃಷ್ಟಿಯಾಗಲಿದೆ ಎಂದು ನಾಗರಿಕರು ಹೇಳುತ್ತಿದ್ದಾರೆ.


  ಪೊನ್ನುರಾಜ್ ಜಿಲ್ಲಾಧಿಕಾರಿಯಾಗಿದ್ದ ವೇಳೆ ನಗರದ ಕುವೆಂಪು ರಸ್ತೆ, ಎನ್.ಟಿ.ರಸ್ತೆ, ದುರ್ಗಿಗುಡಿ ರಸ್ತೆ, ಜೈಲ್ ರಸ್ತೆ, ಸವಾರ್‌ಲೈನ್ ರಸ್ತೆ ಸೇರಿದಂತೆ ಅತ್ಯದಿಕ ಜನ-ವಾಹನ ಸಂಚಾರವಿದ್ದ ಏಳೆಂಟು ರಸ್ತೆ ಹಾಗೂ ಪ್ರಮುಖ ವೃತ್ತಗಳನ್ನು ಅಗಲೀಕರಣಗೊಳಿಸಿ, ಅಭಿವೃದ್ದಿಗೊಳಿಸುವ ಯೋಜನೆ ಸಿದ್ದಪಡಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಿದ್ದರು. ಡಿ.ಸಿ.ಯವರ ಪ್ರಸ್ತಾಪಕ್ಕೆ ಕೆಲವು ರಾಜಕಾರಣಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.  ನಂತರ ವಿ. ಪೊನ್ನುರಾಜ್ ಅವರನ್ನೂ ಕೂಡ ಶಿವಮೊಗ್ಗದಿಂದ ಎತ್ತಂಗಡಿ ಮಾಡಲಾಗಿತ್ತು.  
-----------------------------------------------

ಜೀವಹಾನಿಯಾಗುತ್ತಿದ್ದರೂ ಹೋರಿ ಸ್ಪರ್ಧೆಗೆ ಇಲ್ಲ ತಡೆ

 ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ನಡೆಯುವ ಅನಾಹುತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕಾಗಿದೆ. ಏಕೆಂದರೆ, ಈ ವರ್ಷ ಮೂವರು ಬಲಿ: 15ಕ್ಕೂ ಹೆಚ್ಚು ಜನರಿಗೆ ಇರಿತದಿಂದ ಗಾಯಗೊಂಡಿದ್ದಾರೆ. ಈ ಹಿಂದೆ ಜಿಲ್ಲಾಡಳಿತ ಸ್ಪರ್ಧೆ ಆಯೋಜಿಸುವವರಿಗೆ ವಿಧಿಸಿದ್ದ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕಾಗಿದೆ. ನಿಯಮ ಪಾಲನೆ ಮಾಡದವರ ವಿರುದ್ದ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಬೇಕಿದೆ. 


ಶಿವಮೊಗ್ಗ ಜಿಲ್ಲೆಯಲ್ಲಿ  ಹೋರಿ ಬೆದರಿಸುವ ಸ್ಪರ್ಧೆಯ ಕ್ರೇಜ್ ಹೆಚ್ಚುತ್ತಿದೆ. ಇದರೊಟ್ಟಿಗೆ ಅಲ್ಲಿ ಸಾವು-ನೋವು ಸಹ ಸಂಭವಿಸುತ್ತಿದೆ. ಇದು ಜಾನಪದರಿಂದ ಬೆಳೆದುಬಂದಿದ್ದರೂ  ಜೀವಹಾನಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿ. ಹಾಗಾಗಿ ನಿಷೇಧಿಸಬೇಕೆಂಬ ಕೂಗೆದ್ದಿದೆ. ಆದರೆ ಇನ್ನೂ ಅಧಿಕೃತವಾಗಿ ನಿಷೇಧಿಸಿಲ್ಲ. ಆದ್ದರಿಂದ ಈ ಕ್ರೀಡೆ ನಡೆಸುವವರು  ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ.
ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಎರಡು ಸಂದರ್ದಲ್ಲಿ ನಡೆಯುತ್ತದೆ. ದೀಪಾವಳಿ ಹಬ್ಬದ ನಂತರ ಜಿಲ್ಲೆಯ ವಿವಿಧೆಡೆ ಇದನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತದೆ.  ಎರಡನೆಯ ಬಾರಿ ಸಂಕ್ರಾಂತಿ ಹಬ್ಬದ ಸುತ್ತಮುತ್ತ ನಡೆಯುತ್ತದೆ. ಇದನ್ನು ಎರಡನೆಯ ಹಟ್ಟಿಹಬ್ಬ ಎಂದು ಕರೆಯಲಾಗುತ್ತದೆ. ಹೋರಿ ಬೆದರಿಸುವ ಸ್ಪರ್ಧೆಗಳು ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸುವವರ ಪ್ರಮಾಣ ಏರಿಕೆಯಾಗುತ್ತಿದೆ.  ಇಷ್ಟೇ ಏಕೆ, ಇದರ ಬಹುಮಾನವಾಗಿ ಕಾರು, ಬೈಕುಗಳನ್ನು ನೀಡಲಾಗುತ್ತದೆ.
ಇದರಿಂದ ಈ ಸ್ಪರ್ಧೆ ಅಂತರ್‌ಜಿಲ್ಲಾ ಮಟ್ಟದಲ್ಲಿ ನಡೆಯಲಾರಂಭಿಸಿದೆ. ಶಿವಮೊಗ್ಗ ಗ್ರಾಮಾಂತರ, ಸೊರಬ, ಶಿಕಾರಿಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇದಕ್ಕೆ ಅಕ್ಕಪಕ್ಕದ ಹಾವೇರಿ, ದಾವಣಗೆರೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯ ಹೋರಿಗಳನ್ನು ಸ್ಪರ್ಧೆಗೆ ತರಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಇದು ರಂಗೇರುತ್ತಿದೆ.
ಕಳೆದ ದೀಪಾವಳಿಯಿಂದೀಚೆ ಮೂವರು ಈ ಕ್ರೀಡೆಗೆ ಬಲಿಯಾಗಿದ್ದಾರೆ  ಶಿಕಾರಿಪುರದ ಚುರ್ಚುಗುಂಡಿಯಲ್ಲಿ ಹೋರಿಯಡಿ ವ್ಯಕ್ತಿಯೊಬ್ಬ ಸಿಲುಕಿ ಗಾಯಗೊಂಡ ಘಟನೆ ಸಹ ಸಂಭವಿಸಿದೆ. ಶಿವಮೊಗ್ಗ ತಾಲೂಕಿನ ಕುಂಸಿ ಹಾಗೂ ಹಾರ‌್ನಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿತದಿಂದ ಐದರಿಂದ ಆರು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಾಳುಗಳನ್ನು ಆಯನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.  ಶಿಕಾರಿಪುರ ಹಾಗೂ ಶಿವಮೊಗ್ಗ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಓರ್ವ ಮೃತಪಟ್ಟು, ಐದಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಜನವರಿ 2ರಂದು ಆನವಟ್ಟಿ ಸಮೀಪದ ತತ್ತೂರಿನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಒಬ್ಬ ಬಾಲಕ ಮತ್ತು ಒಬ್ಬ ಯುವಕ ಪ್ರಾಣ ತೆತ್ತಿದ್ದಾರೆ.  9 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಕೆಲವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕ್ರೀಡೆ ಆಯೋಜಿಸುವವರಿಗೆ ಪೊಲೀಸ್ ಇಲಾಖೆ ಅನುಮತಿ ಕೊಡುತ್ತಿಲ್ಲ. ಆದ್ದರಿಂದ ಹೇಳಕೇಳದೆಯೇ ಕ್ರೀಡೆ ನಡೆಸುತ್ತಾರೆ. ಪೊಲೀಸರು ನೋಟೀಸ್ ನೀಡಿದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ತತ್ತೂರು ಘಟನೆಯೇ ಇದಕ್ಕೆ ಸಾಕ್ಷಿ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು  ಆಯೋಜಕರು ಕೈಗೊಳ್ಳುತ್ತಿಲ್ಲ.
ಅನುಮತಿ ಕಡ್ಡಾಯ:
ಇತ್ತೀಚಿನ ವರ್ಷಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿರುವುದು ಹಾಗೂ ಸಾವು-ನೋವುಗಳು ಹೆಚ್ಚುತ್ತಿರುವುದನ್ನು ಮನಗಂಡಿದ್ದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು, ಸ್ಪರ್ಧೆ ಆಯೋಜನೆ ಮಾಡುವವರು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆದುಕೊಳ್ಳಬೇಕೆಂದು ಆದೇಶಿಸಿತ್ತು. ಹಾಗೆಯೇ ಅನಾಹುತಕ್ಕೆ ಆಸ್ಪದವಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಮಾಡುವಂತೆ ಆಯೋಜಕರಿಗೆ ಸೂಚಿಸಿತ್ತು. ಸ್ಪರ್ಧೆಗಳ ಬಗ್ಗೆ ಗಮನಹರಿಸುವಂತೆ ತಾಲೂಕು ಆಡಳಿತಗಳಿಗೂ ನಿರ್ದೇಶನ ನೀಡಲಾಗಿತ್ತು. ಮತ್ತೊಂದೆಡೆ, ಸ್ಥಳೀಯ ಪೊಲೀಸರಾಗಲಿ, ತಾಲೂಕು ಆಡಳಿತದ ಅಧಿಕಾರಿಗಳಾಗಲಿ ಅನುಮತಿ ಪಡೆಯದೆ ಆಯೋಜಿಸುವ ಸ್ಪರ್ಧೆಗಳನ್ನು ತಡೆಯುವ ಗೋಜಿಗೆ ಹೋಗುತ್ತಿಲ್ಲ. ಎಲ್ಲಿ ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆಯೋ ಎಂಬ ಆತಂಕದಿಂದ ಸುಮ್ಮನಾಗುತ್ತಿದ್ದಾರೆ.
ತಾವು ಹಲವು ದಶಕಗಳಿಂದ ಸ್ಪರ್ಧೆ ಆಯೋಜಿಸಿಕೊಂಡು ಬರುತ್ತಿದ್ದೇವೆ. ಈಗೇಕೆ ಪೊಲೀಸರ ಅನುಮತಿ ಪಡೆದುಕೊಳ್ಳಬೇಕು ಎನ್ನುವುದು ಆಯೋಜಕರ ಪ್ರಶ್ನೆ.
ನಿಷೇಧಿಸಲಿ:
ಹೋರಿಗಳು ಓಡುವಾಗ ಗಾಬರಿಯಿಂದ ಜನರ ಮೈಮೇಲೆ ನುಗ್ಗುವುದರಿಂದ ಸರ್ವೇಸಾಮಾನ್ಯವಾಗಿ ನೂಕುನುಗ್ಗಲು, ಕಾಲ್ತುಳಿತ, ಸಾವು ಉಂಟಾಗುತ್ತದೆ. ಸಾವು-ನೋವುಗಳು ಸಂಭವಿಸುತ್ತ್ತಿವೆ. ಇನ್ನೂ ಎಷ್ಟು ಸಾವು ಸಂಭವಿಸಬೇಕು ಇದನ್ನು ನಿಲ್ಲಿಸಲು? ಈ ಹಿನ್ನೆಲೆಯಲ್ಲಿ ಆಯೋಜಕರಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗುತ್ತದೆ. ಇದು ಅನಿವಾರ್ಯ ಕೂಡ.
ಜನರ ಜೀವದ ಜೊತೆ ಆಡುವ ಇಂತಹ ಸ್ಪರ್ಧೆ ನಿಷೇಧವಾಗಬೇಕಿದೆ. ಆಯೋಜಕರಿಗೆ ಯಾವ ಕಾರಣಕ್ಕೂ ಸ್ಪರ್ಧೆ ನಡೆಸದಂತೆ ಸೂಚಿಸಬೇಕು. ಜಿಲ್ಲೆಯ ಮಟ್ಟಿಗೆ ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಪ್ರತಿ ವರ್ಷ ಅಮಾಯಕರು ಇದಕ್ಕೆ ಬಲಿಯಾಗುತ್ತಿರುವುದರಿಂದ ನಿಲ್ಲಿಸುವತ್ತ ಕ್ರಮ ಜರುಗಿಸಲೇಬೇಕಿದೆ.

ಬಾಕ್ಸ್
ಎಷ್ಟೋ ಕಡೆ ಸ್ಪರ್ಧೆ ಆಯೋಜಕರು ಅನುಮತಿ ಪಡೆಯುವುದಿರಲಿ, ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆ ಕೂಡ ಮಾಡುತ್ತಿಲ್ಲವೆಂಬ ಮಾಹಿತಿ ಸ್ವತಃ ಅಧಿಕಾರಿಗಳ ವಲಯದಿಂದಲೇ ಕೇಳಿಬರುತ್ತ್ತಿದೆ. ಕೆಲವೊಮ್ಮೆ ಈ ಬಗ್ಗೆ ಸಂಬಂಧಿಸಿದವರಿಗೆ ತಿಳಿಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಲತಲಾಂತರದಿಂದ ಸ್ಪರ್ಧೆ ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಈಗೇಕೆ ಅನುಮತಿ ಪಡೆಯಬೇಕು ಎಂದು ಕೆಲವರು ಪ್ರಶ್ನಿಸುತ್ತಾರೆ.  ಅನುಮತಿ  ಕುರಿತಂತೆ ತಹಶೀಲ್ದಾರ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿ, ಸ್ಪರ್ಧೆಗಳಲ್ಲಿ ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳ ಪಾಲನೆ ಮಾಡುವಂತೆಯೂ ಜಿಲ್ಲಾಡಳಿತ ಆದೇಶಿಸಿದೆ. ನಿಯಮ ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆಯೂ ಸೂಚಿಸಿದೆ. ಆದರೂ ಇದು ಪಾಲನೆಯಾಗುತ್ತಿಲ್ಲ. ನಿಯಮ ಪಾಲನೆ ಮಾಡುವಂತೆ ಆಯೋಜಕರ ಮನವೊಲಿಸುವುದು ದೊಡ್ಡ ಸವಾಲಿನ ಕೆಲಸವಾಗಿದ್ದು, ಕಿರಿಕಿರಿಯಾಗಿ ಪರಿಣಮಿಸುತ್ತಿದೆ ಎನ್ನುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು.
---------------------------------------------
ಜೀವಬಲಿಗಾಗಿ ಕಾದಿವೆ ಕೆರೆ ಏರಿ ರಸ್ತೆಗಳು







ನಮ್ಮ ಇಂದಿನ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗಬೇಕಾದರೂ ಅದಕ್ಕೆ ಒಂದಿಷ್ಟು ಸಾವು-ನೋವುಗಳು ಸಂಭವಿಸಬೇಕು. ನಾಗರಿಕರು ಬೀದಿಗಿಳಿದು ಹೋರಾಟ ನಡೆಸಬೇಕು. ಇಲ್ಲವೇ ನ್ಯಾಯಾಲಯಗಳು ನಿರ್ದೇಶನ ನೀಡಬೇಕು. ಆಗ ಮಾತ್ರ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗುವಂತಹ ಸ್ಥಿತಿ ನೆಲೆಸಿದೆ. ಇಲ್ಲದಿದ್ದರೆ ನಮ್ಮ ಕಣ್ಮುಂದೆಯೇ ಅವ್ಯವಸ್ಥೆ ರಾರಾಜಿಸುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳುವ ಗೋಜಿಗೆ ಆಡಳಿತ ವ್ಯವಸ್ಥೆ ಹೋಗುತ್ತಿಲ್ಲ. ಇದಕ್ಕೆ ಇಚ್ಛಾಶಕ್ತಿಯ ಕೊರತೆ ಎನ್ನಬೇಕೋ, ಬೇಜವಾಬ್ದಾರಿತನ ಎನ್ನಬೇಕೋ ತಿಳಿಯುತ್ತಿಲ್ಲ.

ಇತ್ತೀಚೆಗೆ ಶಿವಮೊಗ್ಗ-ಹೊನ್ನಾಳಿ ರಸ್ತೆಯ ಗೊಂಧಿಚಟ್ನಳ್ಳಿ ಗ್ರಾಮದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‌ವೊಂದು ರಸ್ತೆ ಬದಿಯ ಕೆರೆಗೆ ಉರುಳಿ ಬಿದ್ದಿತ್ತು. ಕೆರೆಯಲ್ಲಿ ನೀರು ತುಂಬಿರದಿದ್ದ ಕಾರಣ ಪ್ರಯಾಣಿಕರೆಲ್ಲ ಅಪಾಯದಿಂ ಪಾರಾಗಿದ್ದರು. ಜ. 4ರಂದು ನಗರದ ಹೊರವಲಯ ಪುರಲೆ ಗ್ರಾಮದ ಬಳಿ ಕಾರೊಂದು ರಸ್ತೆ ಬದಿಯ ಕೆರೆಗೆ ಉರುಳಿ ಬಿದ್ದಿದೆ. ಇಲ್ಲೂ ಕೂಡ ಕೆರೆಯಲ್ಲಿ ನೀರಿನ ಸಂಗ್ರಹ ಸಾಕಷ್ಟು ಕಡಿಮೆಯಿತ್ತು. ಈ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದವರು ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಈ ಕೆರೆಯಲ್ಲಿ ವರ್ಷಕ್ಕೆರಡಾದರೂ ಇಂತಹ ಘಟನೆ ಸಂಭವಿಸುತ್ತಲೇ ಇರುತ್ತದೆ.
ಇವು ಎರಡು ಉದಾಹರಣೆಯಷ್ಟೆ. ಜಿಲ್ಲೆಯಲ್ಲಿ ಅಪಾರ ಸಂಖ್ಯೆಯ ಕೆರೆಗಳಿವೆ. ಯಾವ ಕೆರೆಗೂ ಸುರಕ್ಷಿತ ತಡೆಗೋಡೆಗಳಿಲ್ಲ. ಈ ಕೆರೆ ದಂಡೆಗಳ ಮೇಲೆಯೇ  ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಅಥವಾ ಗ್ರಾಮದ ಮುಖ್ಯ ರಸ್ತೆ ಇದೆ. ಆದರೆ ಇವುಗಳಿಗೆ ಸುರಕ್ಷಿತ ತಡೆಗೋಡೆಗಳಿಲ್ಲ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಹಲವು ಜನರು ಪ್ರಾಣ ಕಳೆದುಕೊಂಡಿದ್ದರೂ, ಬಿದ್ದೆದ್ದಿದ್ದರೂ ಸಂಬಂಧಿತ ಅಧಿಕಾರಿಗಳು ಇನ್ನೂ ಎಚ್ಚೆತ್ತಿಲ್ಲ.
ಶಿವಮೊಗ್ಗ ನಗರದೊಳಗೆ ನವುಲೆ ಕೆರೆ ಇದೆ. ಅಲ್ಲಿಯೂ ಯಾವುದೇ ತಡೆಗೋಡೆ ಇಲ್ಲ. ಇದರಂತೆ ಸಾಗರ ಮತ್ತು ಸೊರಬ ತಾಲೂಕಿನ ಅರ್ಧದಷ್ಟು ರಸ್ತಗೆಳು ಕೆರೆ ದಂಡೆಯಲ್ಲೇ ಇವೆ. ಏನಾದರೂ ಅನಾಹುತವಾಗಿ  ಜೀವಹಾನಿಯಾದಾಗ ಮಾತ್ರ  ಅಥವಾ  ದೊಡ್ಡ ಅನಾಹುತ ಸಂಭವಿಸಿದ ನಂತರವಷ್ಟೆ ಇಲಾಖೆಯವರು ಎಚ್ಚೆತ್ತುಕೊಳ್ಳಲು ಕಾದು ಕುಳಿತಿರುವಂತೆ ಭಾಸವಾಗುತ್ತಿದೆ. ಸಂಬಂಧಿಸಿದವರ ನಿರ್ಲಕ್ಷ್ಯ ಇದೇ ರೀತಿ ಮುಂದುವರೆದರೆ ಅನಾಹುತ ಕಟ್ಟಿಟ್ಟ ಬುತ್ತಿಯಾಗಿದ್ದು, ಅಮಾಯಕರು ಸಾವು-ನೋವಿಗೆ ತುತ್ತಾಗುವುದು ನಿಶ್ಚಿತ.
ಮೊನ್ನೆ ಸಂಭವಿಸಿದ ಎರಡು ಅನಾಹುತಗಳು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಬಹುತೇಕ ಸ್ಥಳಗಳು ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿವೆ.  ಚಾಲನೆಯಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ ವಾಹನಗಳು ನೇರವಾಗಿ ಕೆರೆಗೆ ಧುಮುಕುವಂತಹ ಸ್ಥಿತಿಯಲ್ಲಿವೆ. ಇಂತಹ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ, ತಡೆಗೋಡೆ ನಿರ್ಮಾಣ ಮಾಡಲು ಸಂಬಂಧಿಸಿದ ಇಲಾಖೆಗಳಿಗೆ ಆಗುತ್ತಿಲ್ಲ. ಇದಕ್ಕೆ ಅನುದಾನದ ಕೊರತೆಯ ನೆಪವೊಡ್ಡುತ್ತವೆ.  ಹಾಗಾದರೆ ಅಪಾಯ ಸಂಭವಿಸಿ ಅಮಾಯಕರು ಬಲಿಯಾಗಬೇಕೇ, ಸರ್ಕಾರಗಳೇಕೆ ಇಂತಹ ಕೆರೆ ಏರಿಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಜನರು ಪ್ರಶ್ನಿಸುತ್ತಾರೆ.
 ರಸ್ತೆಯಂಚಿನಿಂದ ಕೆರೆಗಳಿಗೆ ವಾಹನಗಳು ಉರುಳಿ ಬಿದ್ದು ಅಮಾಯಕರ ಸಾವು-ನೋವುಗಳು ಸಂಭವಿಸಿದಾಗ ಅಧಿಕಾರಸ್ಥರು ರಾಜ್ಯದಲ್ಲಿರುವ ಅಪಾಯಕಾರಿ ಕೆರೆ ಏರಿ ರಸ್ತೆಗಳ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು. ಕೆರೆಯ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಲಾಗುವುದು. ರಸ್ತೆಗಳ ವಿಸ್ತರಣೆ ಮಾಡಲಾಗುವುದು. ಸೂಚನಾ ಫಲಕ ಅಳವಡಿಸಲಾಗುವುದು ಸೇರಿದಂತೆ ಅನಾಹುತಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಲಾಗುವುದು ಎಂಬ ಭರವಸೆ ನೀಡುತ್ತಾರೆ. ಆದರೆ ಕ್ರಮೇಣ ಈ ಭರವಸೆಗಳು ಮರೆಯಾಗುತ್ತವೆ. ಮತ್ತೆ ಎಲ್ಲೋ ಕೆರೆಗಳಿಗೆ ವಾಹನಗಳು ಉರುಳಿಬಿದ್ದು ಅಮಾಯಕರು ಬಲಿಯಾದಾಗ ಮತ್ತೆ ಈ ಭರವಸೆಗಳು ನೆನಪಾಗುತ್ತವೆ. ಹಾಗೆಯೇ ಸಂಬಂಧಿಸಿದ ಇಲಾಖೆಗಳು ಕೂಡ ಇತ್ತ ಗಮನಹರಿಸುವುದಿಲ್ಲ.  
ಇನ್ನಾದರೂ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕು. ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ಅಪಾಯಕಾರಿ ಸ್ಥಿತಿಯಲ್ಲಿರುವ ಕೆರೆ ಏರಿ ರಸ್ತೆಗಳಿಗೆ ಕಾಯಕಲ್ಪ ಕಲ್ಪಿಸಲು ಮುಂದಾಗಬೇಕು. ತಡೆಗೋಡೆ ನಿರ್ಮಾಣ ಸೇರಿದಂತೆ ಕನಿಷ್ಠ ಸುರಕ್ಷಾ ಕ್ರಮಗಳನ್ನು ಅನುಸರಿಸುವ ಮೂಲಕ ಅಮಾಯಕರು ಬಲಿಯಾಗುವುದನ್ನು ತಪ್ಪಿಸಲು ಕಾರ್ಯೋನ್ಮುಖವಾಗಬೇಕಿದೆ.
--------------------------------------

Wednesday, 4 January 2017


ಜೀವಹಾನಿಯಾಗುತ್ತಿದ್ದರೂ ಹೋರಿ ಸ್ಪರ್ಧೆಗೆ ಇಲ್ಲ ತಡೆ  

 ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ನಡೆಯುವ ಅನಾಹುತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕಾಗಿದೆ. ಏಕೆಂದರೆ, ಈ ವರ್ಷ ಮೂವರು ಬಲಿ: 15ಕ್ಕೂ ಹೆಚ್ಚು ಜನರಿಗೆ ಇರಿತದಿಂದ ಗಾಯಗೊಂಡಿದ್ದಾರೆ. ಈ ಹಿಂದೆ ಜಿಲ್ಲಾಡಳಿತ ಸ್ಪರ್ಧೆ ಆಯೋಜಿಸುವವರಿಗೆ ವಿಧಿಸಿದ್ದ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕಾಗಿದೆ. ನಿಯಮ ಪಾಲನೆ ಮಾಡದವರ ವಿರುದ್ದ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಬೇಕಿದೆ. 




ಶಿವಮೊಗ್ಗ ಜಿಲ್ಲೆಯಲ್ಲಿ  ಹೋರಿ ಬೆದರಿಸುವ ಸ್ಪರ್ಧೆಯ ಕ್ರೇಜ್ ಹೆಚ್ಚುತ್ತಿದೆ. ಇದರೊಟ್ಟಿಗೆ ಅಲ್ಲಿ ಸಾವು-ನೋವು ಸಹ ಸಂಭವಿಸುತ್ತಿದೆ. ಇದು ಜಾನಪದರಿಂದ ಬೆಳೆದುಬಂದಿದ್ದರೂ  ಜೀವಹಾನಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿ. ಹಾಗಾಗಿ ನಿಷೇಧಿಸಬೇಕೆಂಬ ಕೂಗೆದ್ದಿದೆ. ಆದರೆ ಇನ್ನೂ ಅಧಿಕೃತವಾಗಿ ನಿಷೇಧಿಸಿಲ್ಲ. ಆದ್ದರಿಂದ ಈ ಕ್ರೀಡೆ ನಡೆಸುವವರು  ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ.
ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಎರಡು ಸಂದರ್ದಲ್ಲಿ ನಡೆಯುತ್ತದೆ. ದೀಪಾವಳಿ ಹಬ್ಬದ ನಂತರ ಜಿಲ್ಲೆಯ ವಿವಿಧೆಡೆ ಇದನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತದೆ.  ಎರಡನೆಯ ಬಾರಿ ಸಂಕ್ರಾಂತಿ ಹಬ್ಬದ ಸುತ್ತಮುತ್ತ ನಡೆಯುತ್ತದೆ. ಇದನ್ನು ಎರಡನೆಯ ಹಟ್ಟಿಹಬ್ಬ ಎಂದು ಕರೆಯಲಾಗುತ್ತದೆ. ಹೋರಿ ಬೆದರಿಸುವ ಸ್ಪರ್ಧೆಗಳು ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸುವವರ ಪ್ರಮಾಣ ಏರಿಕೆಯಾಗುತ್ತಿದೆ.  ಇಷ್ಟೇ ಏಕೆ, ಇದರ ಬಹುಮಾನವಾಗಿ ಕಾರು, ಬೈಕುಗಳನ್ನು ನೀಡಲಾಗುತ್ತದೆ.
ಇದರಿಂದ ಈ ಸ್ಪರ್ಧೆ ಅಂತರ್‌ಜಿಲ್ಲಾ ಮಟ್ಟದಲ್ಲಿ ನಡೆಯಲಾರಂಭಿಸಿದೆ. ಶಿವಮೊಗ್ಗ ಗ್ರಾಮಾಂತರ, ಸೊರಬ, ಶಿಕಾರಿಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇದಕ್ಕೆ ಅಕ್ಕಪಕ್ಕದ ಹಾವೇರಿ, ದಾವಣಗೆರೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯ ಹೋರಿಗಳನ್ನು ಸ್ಪರ್ಧೆಗೆ ತರಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಇದು ರಂಗೇರುತ್ತಿದೆ.
ಕಳೆದ ದೀಪಾವಳಿಯಿಂದೀಚೆ ಮೂವರು ಈ ಕ್ರೀಡೆಗೆ ಬಲಿಯಾಗಿದ್ದಾರೆ  ಶಿಕಾರಿಪುರದ ಚುರ್ಚುಗುಂಡಿಯಲ್ಲಿ ಹೋರಿಯಡಿ ವ್ಯಕ್ತಿಯೊಬ್ಬ ಸಿಲುಕಿ ಗಾಯಗೊಂಡ ಘಟನೆ ಸಹ ಸಂಭವಿಸಿದೆ. ಶಿವಮೊಗ್ಗ ತಾಲೂಕಿನ ಕುಂಸಿ ಹಾಗೂ ಹಾರ‌್ನಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿತದಿಂದ ಐದರಿಂದ ಆರು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಾಳುಗಳನ್ನು ಆಯನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.  ಶಿಕಾರಿಪುರ ಹಾಗೂ ಶಿವಮೊಗ್ಗ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಓರ್ವ ಮೃತಪಟ್ಟು, ಐದಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಜನವರಿ 2ರಂದು ಆನವಟ್ಟಿ ಸಮೀಪದ ತತ್ತೂರಿನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಒಬ್ಬ ಬಾಲಕ ಮತ್ತು ಒಬ್ಬ ಯುವಕ ಪ್ರಾಣ ತೆತ್ತಿದ್ದಾರೆ.  9 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಕೆಲವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕ್ರೀಡೆ ಆಯೋಜಿಸುವವರಿಗೆ ಪೊಲೀಸ್ ಇಲಾಖೆ ಅನುಮತಿ ಕೊಡುತ್ತಿಲ್ಲ. ಆದ್ದರಿಂದ ಹೇಳಕೇಳದೆಯೇ ಕ್ರೀಡೆ ನಡೆಸುತ್ತಾರೆ. ಪೊಲೀಸರು ನೋಟೀಸ್ ನೀಡಿದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ತತ್ತೂರು ಘಟನೆಯೇ ಇದಕ್ಕೆ ಸಾಕ್ಷಿ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು  ಆಯೋಜಕರು ಕೈಗೊಳ್ಳುತ್ತಿಲ್ಲ.
ಅನುಮತಿ ಕಡ್ಡಾಯ:
ಇತ್ತೀಚಿನ ವರ್ಷಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿರುವುದು ಹಾಗೂ ಸಾವು-ನೋವುಗಳು ಹೆಚ್ಚುತ್ತಿರುವುದನ್ನು ಮನಗಂಡಿದ್ದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು, ಸ್ಪರ್ಧೆ ಆಯೋಜನೆ ಮಾಡುವವರು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆದುಕೊಳ್ಳಬೇಕೆಂದು ಆದೇಶಿಸಿತ್ತು. ಹಾಗೆಯೇ ಅನಾಹುತಕ್ಕೆ ಆಸ್ಪದವಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಮಾಡುವಂತೆ ಆಯೋಜಕರಿಗೆ ಸೂಚಿಸಿತ್ತು. ಸ್ಪರ್ಧೆಗಳ ಬಗ್ಗೆ ಗಮನಹರಿಸುವಂತೆ ತಾಲೂಕು ಆಡಳಿತಗಳಿಗೂ ನಿರ್ದೇಶನ ನೀಡಲಾಗಿತ್ತು. ಮತ್ತೊಂದೆಡೆ, ಸ್ಥಳೀಯ ಪೊಲೀಸರಾಗಲಿ, ತಾಲೂಕು ಆಡಳಿತದ ಅಧಿಕಾರಿಗಳಾಗಲಿ ಅನುಮತಿ ಪಡೆಯದೆ ಆಯೋಜಿಸುವ ಸ್ಪರ್ಧೆಗಳನ್ನು ತಡೆಯುವ ಗೋಜಿಗೆ ಹೋಗುತ್ತಿಲ್ಲ. ಎಲ್ಲಿ ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆಯೋ ಎಂಬ ಆತಂಕದಿಂದ ಸುಮ್ಮನಾಗುತ್ತಿದ್ದಾರೆ.
ತಾವು ಹಲವು ದಶಕಗಳಿಂದ ಸ್ಪರ್ಧೆ ಆಯೋಜಿಸಿಕೊಂಡು ಬರುತ್ತಿದ್ದೇವೆ. ಈಗೇಕೆ ಪೊಲೀಸರ ಅನುಮತಿ ಪಡೆದುಕೊಳ್ಳಬೇಕು ಎನ್ನುವುದು ಆಯೋಜಕರ ಪ್ರಶ್ನೆ.
ನಿಷೇಧಿಸಲಿ:
ಹೋರಿಗಳು ಓಡುವಾಗ ಗಾಬರಿಯಿಂದ ಜನರ ಮೈಮೇಲೆ ನುಗ್ಗುವುದರಿಂದ ಸರ್ವೇಸಾಮಾನ್ಯವಾಗಿ ನೂಕುನುಗ್ಗಲು, ಕಾಲ್ತುಳಿತ, ಸಾವು ಉಂಟಾಗುತ್ತದೆ. ಸಾವು-ನೋವುಗಳು ಸಂಭವಿಸುತ್ತ್ತಿವೆ. ಇನ್ನೂ ಎಷ್ಟು ಸಾವು ಸಂಭವಿಸಬೇಕು ಇದನ್ನು ನಿಲ್ಲಿಸಲು? ಈ ಹಿನ್ನೆಲೆಯಲ್ಲಿ ಆಯೋಜಕರಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗುತ್ತದೆ. ಇದು ಅನಿವಾರ್ಯ ಕೂಡ.
ಜನರ ಜೀವದ ಜೊತೆ ಆಡುವ ಇಂತಹ ಸ್ಪರ್ಧೆ ನಿಷೇಧವಾಗಬೇಕಿದೆ. ಆಯೋಜಕರಿಗೆ ಯಾವ ಕಾರಣಕ್ಕೂ ಸ್ಪರ್ಧೆ ನಡೆಸದಂತೆ ಸೂಚಿಸಬೇಕು. ಜಿಲ್ಲೆಯ ಮಟ್ಟಿಗೆ ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಪ್ರತಿ ವರ್ಷ ಅಮಾಯಕರು ಇದಕ್ಕೆ ಬಲಿಯಾಗುತ್ತಿರುವುದರಿಂದ ನಿಲ್ಲಿಸುವತ್ತ ಕ್ರಮ ಜರುಗಿಸಲೇಬೇಕಿದೆ.
ಎಷ್ಟೋ ಕಡೆ ಸ್ಪರ್ಧೆ ಆಯೋಜಕರು ಅನುಮತಿ ಪಡೆಯುವುದಿರಲಿ, ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆ ಕೂಡ ಮಾಡುತ್ತಿಲ್ಲವೆಂಬ ಮಾಹಿತಿ ಸ್ವತಃ ಅಧಿಕಾರಿಗಳ ವಲಯದಿಂದಲೇ ಕೇಳಿಬರುತ್ತ್ತಿದೆ. ಕೆಲವೊಮ್ಮೆ ಈ ಬಗ್ಗೆ ಸಂಬಂಧಿಸಿದವರಿಗೆ ತಿಳಿಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಲತಲಾಂತರದಿಂದ ಸ್ಪರ್ಧೆ ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಈಗೇಕೆ ಅನುಮತಿ ಪಡೆಯಬೇಕು ಎಂದು ಕೆಲವರು ಪ್ರಶ್ನಿಸುತ್ತಾರೆ.  ಅನುಮತಿ  ಕುರಿತಂತೆ ತಹಶೀಲ್ದಾರ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿ, ಸ್ಪರ್ಧೆಗಳಲ್ಲಿ ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳ ಪಾಲನೆ ಮಾಡುವಂತೆಯೂ ಜಿಲ್ಲಾಡಳಿತ ಆದೇಶಿಸಿದೆ. ನಿಯಮ ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆಯೂ ಸೂಚಿಸಿದೆ. ಆದರೂ ಇದು ಪಾಲನೆಯಾಗುತ್ತಿಲ್ಲ. ನಿಯಮ ಪಾಲನೆ ಮಾಡುವಂತೆ ಆಯೋಜಕರ ಮನವೊಲಿಸುವುದು ದೊಡ್ಡ ಸವಾಲಿನ ಕೆಲಸವಾಗಿದ್ದು, ಕಿರಿಕಿರಿಯಾಗಿ ಪರಿಣಮಿಸುತ್ತಿದೆ ಎನ್ನುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು.
---------------------------------------------

Monday, 2 January 2017

ಕಾಲಚಕ್ರಕೆ ಶರಣು 



 -
ಕಳೆದ ಕಾಲ (ವರ್ಷ)ವನ್ನು ನೆನೆಪಿಸಿಕೊಂಡರೆ ಏನು ಬಂತು ಫಲ, ಆ ಕಾಲ ಬರುವುದಿಲ್ಲ. ಅದರ ಬದಲು ಹೊಸಕಾಲದಲ್ಲಿ ಏನು ಮಾಡಬಹುದು, ಎಷ್ಟು ಸಂತಸದಾಯಕವಾಗಿ, ಇರಬಹುದು ಎನ್ನುವುದರತ್ತ ಚಿಂತನೆ ನಡೆಸಬೇಕಿದೆ. ನಾವು ನಾಳೆಯ ನಿರೀಕ್ಷೆಯ ಕನಸಲ್ಲಿರುತ್ತೇವೆ. ಇದನ್ನು ಸಾಧಿಸುತ್ತೇನೆ, ಅದನ್ನು ಮಾಡಿತೋರಿಸುತ್ತೇನೆ ಎಂದೆಲ್ಲ ಮಾತನಾಡುತ್ತೇವೆ. ಆದರೆ ಇದರಲ್ಲೇ ಕಾಲಕಳೆಯುತ್ತೇವೆಯೇ ವಿನಾ  ನಾವು ಸ್ಪಂದಿಸಬೇಕಾಗಿರುವುದು ವರ್ತಮಾನಕ್ಕೆ, ಬದುಕಬೇಕಾಗಿರುವುದು ವರ್ತಮಾನದಲ್ಲಿ ಎನ್ನುವುದನ್ನು ಮರೆತುಬಿಡುತ್ತೇವೆ. ಇನ್ನಾದರೂ ಹೊಸ ವರ್ಷದಲ್ಲಿ ಬಾಳಿನ ಅರ್ಥ ಹುಡುಕುವ ಕೆಲಸ ಮಾಡಬೇಕಿದೆ.


ಕಾಲಕ್ರಮಿಸುತಲಿಹುದು
ಬಾಳಿದರ ಜತೆಗಿಹುದು
ಬಾಳಿನರ್ಥವ ಹುಡುಕು- ಕಾಲಕಾಲಕ್ಕೆ
2016 ಸರಿದಿದೆ. 2017 ಕಾಲಿಟ್ಟಿದೆ.  ಹೊಸ ಆಕಾಂಕ್ಷೆ, ನಿರೀಕ್ಷೆಗಳನ್ನು ಇಟ್ಟುಕೊಂಡೇ ಪ್ರತಿವರ್ಷ ಹೊಸ ವರ್ಷವನ್ನು ಅದ್ದೂರಿಯಿಂದಲೇ ಸ್ವಾಗತಿಸುತ್ತೇವೆ. ವರ್ಷ ಕಳೆದಂತೆ ನಿರಾಸೆಯನ್ನು ವ್ಯಕ್ತಪಡಿಸುತ್ತೇವೆ. ವರ್ಷದಲ್ಲಿ ನಡೆದ ಘಟನೆಗಳನ್ನೆಲ್ಲ ಅವಲೋಕಿಸುತ್ತೇವೆ. ಒಳ್ಳೆಯ ಘಟನೆ ಸಂಭವಿಸಿದ್ದರೆ ಅದನ್ನು ಇನ್ನಷ್ಟು ಬಾರಿ ಮೆಲುಕು ಹಾಕುತ್ತೇವೆ.  ಕೆಟ್ಟದ್ದು ಘಟಿಸಿದ್ದರೆ  ಆ ಪುಟವನ್ನು ನೆನೆಪಿನಾಳದಿಂದ ಕಿತ್ತೆಸೆಯಲು ಯತ್ನಿಸುತ್ತೇವೆ. ಈ ಕಾಲಚಕ್ರ ವರ್ಷಕ್ಕೊಮ್ಮೆ ಸುತ್ತುತ್ತ ಇದನ್ನೇ ಬಿತ್ತರಿಸುತ್ತಿದ್ದರೂ ಮತ್ತೆ ಹೊಸ ವರ್ಷವನ್ನು ಹರ್ಷದಿಂದ ಆಚರಿಸುತ್ತೇವೆ.
ಈ ಕಾಲದಾಟದ ಮಹಿಮಯೇ ಇಷ್ಟು. ಸುಖ-ಕಷ್ಟಗಳಿಂದ ಕೂಡಿದ ಬದುಕಿನ ಸೂಕ್ಷ್ಮಗಳೆಲ್ಲ ಕಾಲದಲ್ಲಿ ಅಡಗಿದೆ. ನಮ್ಮನ್ನು ಆವರಿಸಿರುವ ಕಾಲ ಹೊರಗಡೆಯೂ ಇದೆ, ಬಯಲು -ಆಲಯದ ಸಂಬಂಧ ಕಾಲಕ್ಕಿದೆ. ಕಾಲ ಕೆಲವೊಮ್ಮೆ ಸುಖವನ್ನು ತಂದಿತ್ತರೆ, ಮತ್ತೆ ಕೆಲವೊಮ್ಮೆ ಕೆಟ್ಟ ಅನುಭವವನ್ನು ನೀಡಿ ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತದೆ. ಕಾಲದ ಧಾರೆಯಲ್ಲಿ ಸಿಕ್ಕ ನಾವು ಕಾಲಚಕ್ರದಲ್ಲಿ ಉರುಳುತ್ತ ಅಸ್ಥಿರರಾಗಿದ್ದೇವೆ.
  ನಮ್ಮ ಹಿರಿಯರು ಕಾಲವನ್ನು ಕಾಲಪ್ರವಾಹ ಎಂದರು. ಪ್ರವಾಹವೆಂದರೆ ತುಂಬು ಹರಿಯುವುದು. ಹರಿಯುವುದು ನೀರಿನ ಸಹಜ ಸ್ವಭಾವ. ನೀರು ಹರಿಯದೆ ಮಡುಗಟ್ಟಿ ನಿಂತರೆ ಕಾಲಕ್ರಮೇಣ ಕೊಳೆ ತುಂಬಿಕೊಳ್ಳುತ್ತದೆ;ನಾರುತ್ತದೆ. ಯಾರಿಗೂ, ಯಾವುದಕ್ಕೂ ಬೇಡವಾಗುತ್ತದೆ. ನೀರು ತುಂಬಿ ಹರಿಯಬೇಕು. ಹರಿಯುತ್ತ ಕೊಳೆಯನ್ನು ಕೊಂಡೊಯ್ಯಬೇಕು. ಮತ್ತೆ ತಿಳಿಗೊಳ್ಳಬೇಕು. ತಿಳಿಗೊಂಡು ಹರಿಯುತ್ತಲೇ ಇರಬೇಕು. ಹೀಗೆ ಹರಿಯುತ್ತ ನೆಲದ ಹಸಿರಿಗೆ, ಜನರ ಉಸಿರಿಗೆ ಜೀವ ಚೈತನ್ಯ ತುಂಬಬೇಕು. ಕಾಲ ಪ್ರವಾಹದಲ್ಲಿ ನಾವೆಲ್ಲ ಕೊಚ್ಚಿಹೋಗುತ್ತೇವೆ; ಜೋಲಿ ಹೊಡೆಯುತ್ತೇವೆ; ಹೊಸಕಲ್ಪಡುತ್ತೇವೆ.
 ಕಾಲ ಸದಾ ಕ್ರಿಯಾಶೀಲವಾದುದು. ಕಾಲಕ್ಕೆ ತಕ್ಕಂತೆ ಮನುಷ್ಯನೂ ಮುಂದುವರೆಯುತ್ತಿದ್ದಾನೆ. ಬಸ್ಸು, ಕಾರು, ವಿಮಾನಗಳ ಮೂಲಕ ಕಾಲವನ್ನು ಹಿಡಿದಿಡುವ ಪ್ರಯತ್ನವನ್ನು ಮಾಡುತ್ತಿದ್ದಾನೆ. ಕಾಲವನ್ನು ಮೀರಿ ಬೆಳೆಯಲು ತವಕಿಸುತ್ತಾನೆ. ಆದರೆ ಅದು ಅಸಾಧ್ಯ ಎಂದು ತಿಳಿದಾಗ ಕೈಚೆಲ್ಲುತ್ತಾನೆ. ನಮಗೆ  ಹೊಸಕಾಲದ ಶೋಧಗಳು ಮತ್ತು ಹಳೆಯದರ ನಡುವೆ  ಸದಾ ಸಂಘರ್ಷ. ಹೊಸಕಾಲದ ಇಂದಿನ ಪೀಳಿಗೆಗೆ ಹಳೆಯದೆಲ್ಲ ನಿರರ್ಥಕ ಎನಿಸುತ್ತದೆ. ಹಳೆಯದನ್ನು ಬಿಡಲಾಗದೆ, ಹೊಸದನ್ನು ಪೂರ್ಣ ಸ್ವೀಕರಿಸಲೂ ಆಗದೆ, ಕಾಲದ ಅಡಕತ್ತರಿಯಲ್ಲಿ ಮನುಷ್ಯ ನಲುಗುತ್ತಿದ್ದಾನೆ.
ಕಾಲ ಬದಲಾದಂತೆ ನಾವು ಬದಲಾಗಬೇಕು. ಕಾಲದೊಂದಿಗೆ ಹೊಂದಿಕೊಂಡು ಸಾಗಬೇಕು. ಬದಲಾವಣೆ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಆಯಾಯ ಕಾಲದ ಅನುಭವಗಳನ್ನು ಹೀರಿ ಹದಗೊಳ್ಳಬೇಕು. ಕಾಲಕ್ಕೆ ತಕ್ಕಂತೆ ಪ್ರಕೃತಿ ಬದಲಾಗುತ್ತದೆ; ಪ್ರಪಂಚದಲ್ಲಿ ಪರಿವರ್ತನೆ ನಡೆಯುತ್ತದೆ. ಕಾಲ ಹಿಂದೆಯೂ ಇತ್ತು. ಇಂದೂ ಇದೆ. ನಾಳೆಯೂ ಇರುತ್ತದೆ. ಇದು ಆದಿ ಅಂತ್ಯವಿಲ್ಲದ್ದು. ಇದಕ್ಕಾಗಿಯೇ ಕಾಲಾಯ ತಸ್ಮೈ ನಮಃ ಎಂದು ಹೇಳುತ್ತೇವೆ. ಈ ಗತಿಶೀಲವಾದ ಕಾಲವೇ ಕಾಲಚಕ್ರ.
ಕಾಲದಲ್ಲಿ, ಕಾಲದೊಂದಿಗೆ ಬದುಕಬೇಕಾದ ನಾವು ಅದಕ್ಕೆ ಹೊಂದಿಕೊಂಡೇ ಬದುಕುವುದು ಜಗದ ನಿಯಮ.  ಈ ಬದುಕಿನಲ್ಲಿ ಹಸಿರುತನವಿರಬೇಕು. ಚೆಲುವಿರಬೇಕು. ಆ ಸೊಬಗನ್ನು ಅನುಭವಿಸುತ್ತಿರಬೇಕು.
ಬಂದುದನ್ನು ಅಪ್ಪಿಕೊಂಡ ನಾವು ಇದ್ದುದನ್ನು ಅಪ್ಪಿಕೊಳ್ಳೊಣ
ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ  ಚೆನ್ನಾಗಿ ಬದುಕೋಣ.