Monday, 13 June 2016



 ಮಾದರಿ ಶಾಲೆ ‘ಪೊಲೀಸ್ ಬಾಲಭವನ’






ಪೊಲೀಸ್ ಸಿಬ್ಬಂದಿ ಮಕ್ಕಳಿಗಾಗಿಯೇ ತೆರೆದ ರಾಜ್ಯದ ಮೊದಲ ಶಾಲೆ ಈ ಬಾಲಭವನ. ಎಸ್ ಪಿ ರವಿ ಚನ್ನಣ್ಣನವರ್ ಅವರ ಕನಸಿನ ಫಲ. ಇಲ್ಲಿ ಪಠ್ಯಪುಸ್ತಕವಿಲ್ಲ, ಕೇವಲ ಆಟೋಪಕರಣಗಳೇ ಪಠ್ಯಗಳು. ಹತ್ತಾರು ಸಾವಿರ ರೂ. ಡೊನೇಶನ್ ತೆತ್ತು ಪ್ಲೇ ಹೋಂ, ಎಲ್‌ಕೆಜಿ, ಯುಕೆಜಿಗೆ ತಮ್ಮ ಪುಟಾಣಿಗಳನ್ನು ಪೊಲೀಸರು ಸೇರಿಸಲು ಇನ್ನು ಹೋರಾಟ ಮಾಡಬೇಕಿಲ್ಲ. ಬದಲಾಗಿ ಇಲ್ಲಿಯೇ ಸೇರಿಸಿದರೆ ಆಧುನಿಕ ಮಾದರಿಯ, ಮುಂದೆ ಉತ್ತಮ ಜೀವನವನ್ನು ಕಟ್ಟಿಕೊಡಬಲ್ಲ  ಶಿಕ್ಷಣ ಸಿಗಲಿದೆ. ಓಪನ್ ಮೈಂಡ್ಸ್ ನೆರವಿನಿಂದ ಎಸ್ ಪಿಯವರು ನಿಜಕ್ಕೂ ಸ್ಮರಣಿಯ ಕಾರ್ಯ ಮಾಡಿದ್ದಾರೆ.  

ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವವವನ್ನು ರೂಪಿಸುತ್ತದೆ. ಶಿಕ್ಷಣವನ್ನು ಕಲಿತರೆ  ಭವಿಷ್ಯ ನಿರ್ಮಾಣವಾಗುತ್ತದೆ. ದೇಶದ ಅಭಿವೃದ್ಧಿಗೆ ಶಿಕ್ಷಣ ಅವಶ್ಯ ಎಂಬೆಲ್ಲ ಮಾತಿದೆ. ಈ ಹಿನ್ನೆಲೆಯಲ್ಲಿ ಇಂದು ಮಕ್ಕಳನ್ನು ತಪ್ಪದೇ ಪಾಲಕರು ಶಾಲೆಗೆ ಕಳುಹಿಸುತ್ತಾರೆ. ಖಾಸಗಿ ಶಾಲೆಗಳಾಗಿರಬಹುದು, ಸರಕಾರಿ ಶಾಲೆಗಳಾಗಿರಬಹುದು, ತಮ್ಮ ಮಗು ಉತ್ತಮ ಪ್ರಜೆಯಾಗಬೇಕು, ವಿದ್ಯಾವಂತನಾಗಬೇಕೆಂಬ ಹಂಬಲ ಪಾಲಕರದ್ದಾಗಿರುತ್ತದೆ.
ತಾನು ವಿದ್ಯಾಭ್ಯಾಸ ಕಲಿಯುವ ಹಂತದಲ್ಲೇ ಮುಂದೊಂದು ದಿನ ಶಾಲೆಯನ್ನು ತೆರೆಯಬೇಕು, ತನ್ನಂತೆ ನೂರಾರು ಜನರಿಗೆ ಅನುಕೂಲ ಕಲ್ಪಿಪಿಕೊಡಬೇಕೆಂಬ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡು ಓದಿ, ಐಪಿಎಸ್ ಪಾಸಾಗಿ ಸದ್ಯ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ರವಿ ಡಿ. ಚನ್ನಣ್ಣನವರ್ ತಮ್ಮ ಕನಸನ್ನು ನನಸಾಗಿಸಿದ್ದಾರೆ ವಿಶಿಷ್ಟ ಮಾದರಿಯ ಶಾಲೆಯನ್ನು ಪೊಲಿಸ್ ಸಿಬ್ಬಂದಿಗಳ ಮಕ್ಕಳಿಗೆ ತೆರೆಯುವ ಮೂಲಕ.  ಇದು ಸಾಧಾರಣ ಶಾಲೆಯಲ್ಲ. ಓಪನ್ ಮೈಂಡ್ಸ್ ಶಾಲೆಯ ಸಹಕಾರದೊಂದಿಗೆ ಆರಂಭಿಸಲಾದ ಅದೇ ಮಾದರಿಯ ಶಾಲೆ. ಇಲ್ಲಿ ಪಠ್ಯ ಪುಸ್ತಕವಿಲ್ಲ. ಪ್ಲೇ ಹೋಂ ಮಾತ್ರ ಇದೆ. ಮಕ್ಕಳಿಗೆ ಕಲಿಸಲು ಯಾವ್ಯಾವ ಆಟಿಕೆ, ವಸ್ತುಗಳು ಬೇಕೋ ಅವುಗಳನ್ನು  ಇಟ್ಟು ಕಲಿಸಲಾಗುತ್ತಿದೆ.
ರಾಜ್ಯದಲ್ಲೆಲ್ಲೂ ಇಲ್ಲದ ಅತ್ಯಾಧುನಿಕ ಮಾದರಿಯ ಶಾಲೆ ಇದು. ಇದರ ಹೆಸರು ‘ಪೊಲೀಸ್ ಬಾಲಭವನ’. ಪೊಲೀಸ್ ಇಲಾಖೆ ವತಿಯಿಂದ ಸ್ಥಾಪಿಸಲಾದ ಅವರ ಸಿಬ್ಬಂದಿ ಮಕ್ಕಳಿಗೆ ಮೀಸಲಾದ ಶಾಲೆ ಇದು. ಶಿವಮೊಗ್ಗದ ಹೆಲಿಪ್ಯಾಡ್ ಪಕ್ಕದಲ್ಲಿರುವ ಹಳೆತುಂಗಾನಗರ ಪೊಲೀಸ್ ಠಾಣೆಯ ಕಟ್ಟಡದಲ್ಲಿ ಈ ಶಾಲೆ ಜೂನ್ 11ರಂದು ಉದ್ಘಾಟನೆಗೊಂಡಿದೆ. ಮಕ್ಕಳ ದಾಖಲಾತಿಯೂ ಆರಂಭವಾಗಿದೆ.
ಎಸ್‌ಪಿ ರವಿ ಚನ್ನಣ್ಣನವರ್ ಅವರ ಕನಸಿನ ಕೂಸು ಇದು. ತನ್ನ ಮಗುವನ್ನು ಓಪನ್ ಮೈಂಡ್ಸ್ ಶಾಲೆಗೆ ಸೇರಿಸಿದ್ದ ಎಸ್‌ಪಿ ಅವರಿಗೆ, ಇದೇ ಮಾದರಿಯ ಶಿಕ್ಷಣವನ್ನು ತಮ್ಮ ಇಲಾಖೆ ಸಿಬ್ಬಂದಿಗಳ ಮಕ್ಕಳಿಗೆ ಸಿಗುವಂತೆ ಏಕೆ ಮಾಡಬಾರದು ಎನ್ನುವ ಯೋಚನೆಯೊಂದಿಗೆ ಆರಂಭಿಸಿದ್ದಾರೆ. ಈ ಶಾಲೆ ಸ್ಥಾಪನೆಗಾಗಿ ಸತತ ಒಂದು ತಿಂಗಳ ಕಾಲ ಎಲ್ಲ ಸಿದ್ಧತೆ ಮಾಡಿ, ಸೂಕ್ತ ಶಿಕ್ಷಕಿ ಗುರುತಿಸಿ, ಬೇಕಾದ ಪೀಠೋಪಕರಣ ತಂದು, ಕಟ್ಟಡಕ್ಕೆ ಸುಣ್ಣ-ಬಣ್ಣ ಮಾಡಿಸಿ, ಎಲ್ಲ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿದ್ದಾರೆ. ಇದಕ್ಕೆ ಓಪನ್ ಮೈಂಡ್ಸ್ ಶಾಲೆಯ ಮುಖ್ಯಸ್ಥ ಕಿರಣ್‌ಕುಮಾರ್ ಶೈಕ್ಷಣಿಕ ಸಹಕಾರ ನೀಡಿದ್ದಾರೆ.
  ಮೊದಲ ಆರು ವರ್ಷದಲ್ಲಿ ಮಗುವಿನ ವ್ಯಕ್ತಿತ್ವ ನಿರ್ಧಾರವಾಗುತ್ತದ ಎನ್ನುತ್ತಾರೆ ಮನೋವಿಜ್ಞಾನಿಗಳು. ಆದ್ದರಿಂದ ಈ ವೇಳೆ ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸುವುದು ಒಳ್ಳೆಯದು.
ಈ ಹಿಂದೆ ಅವಿಭಕ್ತ  ಕುಟುಂಬದಲ್ಲಿ ಇರುತ್ತಿದ್ದ ಮಕ್ಕಳು ಕುಟುಂಬದ ಒಳಗಡೆಯೇ ಅರಿವಿಲ್ಲದಂತೆ ಉತ್ತಮ ಸಂಸ್ಕಾರ ಮತ್ತು ವ್ಯಕ್ತಿತ್ವವನ್ನು ಪಡೆಯುತ್ತಿದ್ದರು. ಆದರೆ, ಇಂದು ಅವಿಭಕ್ತ ಕುಟುಂಬಗಳು ಮರೆಯಾಗುತ್ತಿವೆ. ತಂದೆ, ತಾಯಿ ಮತ್ತು ಮಗು ಪದ್ಧತಿ ಬೆಳೆದಿರುವುದರಿಂದ ಹಾಗೂ ನಗರ ಜೀವನಕ್ಕೆ ಮಾರುಹೋಗಿರುವುದರಿಂದ ಮಗುವನ್ನು ಮನೆಯಿಂದ ಹೊರಗಡೆ ಬಿಡುತ್ತಿಲ್ಲ. ಪರಿಸ್ಥಿತಿಯೂ ಸಹಾ ಅದೇ ರೀತಿ ಎದುರಾಗಿದೆ. ಮನೆಯೊಳಗಡೆಯೇ ಟಿವಿ, ಮೊಬೈಲ್ ಮೊದಲಾದ ಮಾಧ್ಯಮಗಳತ್ತ ಮಗು ಚಿತ್ತ ಹರಿಸಿ ಆಧುನಿಕತೆಯನ್ನು ರೂಪಿಸಿಕೊಳ್ಳುವಂತಾಗಿದೆ.
 ಈ ಶಾಲೆಯಲ್ಲಿ ಮಗುವನ್ನು ವಿವಿಧ ಕೌಶಲ್ಯಗಳ ಮೂಲಕ ಬೆಳೆಸಲಾಗುತ್ತದೆ. ಇದಕ್ಕಾಗಿ ವಿಶೇಷ ಆಟೋಪಕರಣಗಳಿವೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ತರಗತಿಗಳು ನಡೆಯುತ್ತವೆ. ಪ್ರತಿ ಶನಿವಾರ ಶಿಕ್ಷಕರೊಂದಿಗೆ ಓಪನ್ ಮೈಂಡ್ಸ್ ಶಾಲೆಯಲ್ಲಿ ಚರ್ಚೆ, ಮುಂದಿನ ವಾರ ಮಕ್ಕಳಿಗೆ ಕಲಿಸಬೇಕಾದ  ಕೌಶಲ್ಯಗಳ ತರಬೇತಿ ನೀಡಲಾಗುತ್ತದೆ. ಒಟ್ಟಿನಲ್ಲಿ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಇಲ್ಲಿ ಆದ್ಯತೆ.
ಇನ್ನೊಂದು ವಿಶೇಷತೆ ಎಂದರೆ, ಕಂಪ್ಯೂಟರ್ ಮೂಲಕ ಪ್ರತಿದಿನ ಮಕ್ಕಳ ಚಟುವಟಿಕೆ. ಬೆಳವಣಿಗೆಯನ್ನು, ಅಗತ್ಯವಿರುವ ಸಲಹೆಯನ್ನು ಸಾಫ್ಟ್‌ವೇರ್‌ಗೆ ಅಳವಡಿಸಲಾಗುತ್ತದೆ.
ಈ ಶಾಲೆಯಲ್ಲಿ ಯಾವುದೇ ರೀತಿಯ ತಾರತಮ್ಯವನ್ನು ಮಕ್ಕಳಲ್ಲಿ ಸೃಷ್ಠಿಸಲಾಗುವುದಿಲ್ಲ. ಸ್ಪರ್ಧಾತ್ಮಕ ಮನೋಭಾವವನ್ನು ಸೃಷ್ಟಿಸಲಾಗುತ್ತದೆ. ಮತ್ತು ಅವಕಾಶಗಳನ್ನು ಬಳಸಿಕೊಳ್ಳುವುದನ್ನು ಕಲಿಸಲಾಗುವುದು. ಅತ್ಯುನ್ನತ ಮಟ್ಟದಲ್ಲಿ ಮಗು ಬೆಳೆಯುವ ವಾತಾವರಣ ಕಲಿಸಲಾಗಿದೆ. ಮಗು ದೊಡ್ಡದಾದ ನಂತರ ಆತನಲ್ಲಿ ಹೊಸದಾಗಿ ಏನನ್ನಾದರೂ ಸೃಷ್ಟಿಸಲು (ಆವಿಷ್ಕಾರ) ಆಸಕ್ತಿ ಬರುವಂತಹ ಶಿಕ್ಷಣ ಇಲ್ಲಿದೆ.
ಮಕ್ಕಳ ಮನಸ್ಸನ್ನು ಅರ್ಥೈಸಿಕೊಂಡು ಅವರೊಂದಿಗೇ ಇದ್ದು ಕಲಿಸುವುದು, ಶಿಕ್ಷಕರ ಮೇಲೆ ಪೀತಿ, ಗೌರವ  ಇರುವಂತೆ ಮಾಡುವ ಮೂಲಕ  ಅವರಲ್ಲಿ ಕುತೂಹಲ ಸೃಷ್ಟಿಸುವ ಕೆಲಸ ಇಲ್ಲಿ ನಡೆಯಲಿದೆ. ಜ್ಞಾನವೇ ಪರಮಶಕ್ತಿ ಎನ್ನುವುದು ಶಾಲೆಯ ಮೂಲಮಂತ್ರವಾಗಿದೆ.    



 ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಗಳ ಮಕ್ಕಳಿಗೆ ಶಾಲೆ ತೆರೆಯಬೇಕೆಂಬ ನನ್ನ  ಕನಸು ನನಸಾಗಿದೆ. 32 ಮಕ್ಕಳಿಗೆ ಅವಕಾಶವಿರುವ ಈ ಶಾಲೆಯಲ್ಲಿ ಯಾವ ಆಸ್ತಿ, ಅಂತಸ್ತಿನ ಬೇಧಬಾವ ಮಾಡದೇ ಕಲಿಸಲಾಗುವುದು. ಮಗು ತನ್ನಿಂದ ತಾನೇ ಬೆಳೆಯಲು ಏನು ಬೇಕೋ ಅದನ್ನು ಒದಗಿಸಲಾಗುವುದು. ಪೊಲೀಸ್ ಸಿಬ್ಬಂದಿಗಳ ಮಕ್ಕಳು ಮುಂದೆ ಅಧಿಕಾರಿಗಳಾಗಬೇಕು. ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಯಬೇಕೆಂಬ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಶಾಲೆಯನ್ನು ಆರಂಭಿಸಲಾಗಿದೆ. ಕಲಿಕೆಯ ವೇಳೆ ಮಕ್ಕಳಿಗೆ ಬೈಯುವುದು, ತಾರತಮ್ಯ ಮಾಡುವುದು, ಇನ್ನೊಬ್ಬರ ಜೊತೆ ಹೋಲಿಕೆ ಮಾಡುವುದು ಇಲ್ಲಿಲ್ಲ. ಸಿಸಿ ಕ್ಯಾಮರಾವನ್ನೂ ಸಹ ಸದ್ಯದಲ್ಲೇ ಅಳವಡಿಸಲಾಗುವುದು.
-ಜಿಲ್ಲಾ ಪೊಲೀಸ್ ವರಿಷ್ಠ ರವಿ ಡಿ. ಚನ್ನಣ್ಣನವರ್  
,,,,,,,,,,,,,,,,,,,,,,,,,,,,,,,,,,,,,,,

Friday, 10 June 2016



 ಕಾಂಗ್ರೆಸ್ ಮುಕ್ತ  ಎಂಬ ಧಿಮಾಕಿನ, ಅಹಂಕಾರದ ಮಾತು



ರಾಜಕಿಯದಲ್ಲಿ ಬಹುತೇಕ ನಾಯಕರು ತಿಳುವಳಿಕೆ ಇಲ್ಲದವರೇ ಆಗಿರುವುದು, ಅಂತಹವರನ್ನೇ ನಾವು ಆಯ್ಕೆ ಮಾಡಿ ಕಳುಹಿಸುತ್ತಿರುವುದು  ಅನಾಹುತಕಾರಿ ಹೇಳಿಕೆಗಳು ಬರಲು ಕಾರಣವಾಗಿದೆ. ಯಾವುದೋ ಬಲದಿಂದ ಅಥವಾ ಗಾಳಿಯಲ್ಲಿ, ಅಲೆಯಲ್ಲಿ ಗೆದ್ದು ಬಂದು ಸಿಂಹಾಸನಾಧೀಶ್ವರರಾದರೆ ಲಂಗುಲಗಾಮಿಲ್ಲದ ಮಾತುಗಳೇ ಬರುತ್ತವೆ. ನಮ್ಮ ಎಲ್ಲ ಪಕ್ಷದ ರಾಜಕಾರಣಿಗಳು ಸರಿಯಾಗಿ, ಅವಶ್ಯವಿರುವಷ್ಟೇ ಮಾತನಾಡುವುದನ್ನು ಕಲಿಯಬೇಕಿದೆ. ಇಲ್ಲವಾದರೆ ಅವರೇ ‘ಮುಕ್ತರಾಗುವ’ ದಿನವೂ ಎದುರಾಗಬಹುದು


ಇತ್ತೀಚೆಗೆ ಯಾವ ಪತ್ರಿಕೆ ಗಮನಿಸಿದರೂ ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಬಗ್ಗೆ ಹೆಚ್ಚಿನ ಬರಹ ಪ್ರಕಟವಾಗುತ್ತಿದೆ. ಬಹುತೇಕ ವಿಮರ್ಶಕರು, ಪತ್ರಕರ್ತರು ಈ ಬಗ್ಗೆ ಬರೆದಿದ್ದಾರೆ, ಬರೆಯುತ್ತಿದ್ದಾರೆ. ವಿಶೇಷವಾಗಿ, ಕಳೆದ ತಿಂಗಳು ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಂತರ ಈ ವಿಷಯಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವುದು ಕಂಡುಬರುತ್ತಿದೆ.
ನಮ್ಮದು ಪ್ರಜಾತಂತ್ರ ದೇಶ. ಅದನ್ನು ನಾವು ಒಪ್ಪಿಕೊಂಡಿದ್ದೇವೆ, ಅಪ್ಪಿಕೊಂಡಿದ್ದೇವೆ. ಇಂತಹ ದೇಶದಲ್ಲಿ ಆಳ್ವಿಕೆ ನಡೆಸಲು ಬಹುಮತ ಹೊಂದಿರುವ ಪಕ್ಷ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪ್ರಬಲವಾದ ಪ್ರತಿಪಕ್ಷ ಸಹ ಹೌದು. ಆದರೆ ಇದೇ ಬಹುಮತವೇ  ರಾಜಕಾರಣಿಗಳ ತಲೆತಿರುಗಿಸುತ್ತಿರುವುದೂ ದುರ್ದೈವೇ ಸರಿ. ಕೆಲವೊಮ್ಮ ಆಳ್ವಿಕೆ ನಡೆಸುವ ಪಕ್ಷ ತೀರಾ ಪ್ರಬಲವಾಗಿ ಪ್ರತಿಪಕ್ಷದ ಬಲಾಬಲ ಕುಗ್ಗಬಹುದು. ಜೊತೆಗೆ ರಾಜಕೀಯ ಪಕ್ಷಗಳಿಗ ಏಳು-ಬೀಳು ಸಹಜ. ಇದನ್ನೇ ದಾಳವಾಗಿಟ್ಟುಕೊಂಡು ಯಾವುದೇ ರಾಜಕೀಯ ಪಕ್ಷವಿರಲಿ, ಮತ್ತೊಂದು ಪಕ್ಷವನ್ನು ಮುಕ್ತವಾಗಿಸುತ್ತೇವೆ ಎನ್ನುವುದು ಸಲ್ಲದು. ಏಕೆಂದರೆ, ಪಕ್ಷವೊಂದನ್ನು ಮುಕ್ತವಾಗಿಸುವುದು ಮತ್ತೊಂದು ರಾಜಕೀಯ ಪಕ್ಷದ ಕೆಲಸವಲ್ಲ ಎನ್ನುವುದನ್ನು ಮೊದಲು ನೆನೆಪಿಡಬೇಕು.
 ಚುನಾವಣೆಯಲ್ಲಿ ಮತದಾರ ಕೊಡುವ ತೀರ್ಪನ್ನು ಎಲ್ಲರೂ ಒಪ್ಪಲೇಬೇಕು. ಒಮ್ಮೆ ಮೇಲೇರಿದವನು ಮತ್ತೆ ಕೆಳಗಿಳಿಯಲೇಬೇಕು ಎನ್ನುವುದು ಸೃಷ್ಟಿಯ ನಿಯಮ. ಸೂರ್ಯನೂ ಸಹ ಮೇಲೇರಿದಂತೆ ಚಿಕ್ಕವನಾಗುತ್ತಾನೆ. ಆದರೆ ಮಾರನೆ ದಿನ ಮತ್ತೆ ದೊಡ್ಡದಾಗಿ ಬರುತ್ತಾನೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.
ಪ್ರಸ್ತುತ ಬಿಜೆಪಿ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಕಾಂಗ್ರೆಸ್ ಬೆರಳೆಣಿಕೆಯಷ್ಟು ರಾಜ್ಯದಲ್ಲಿ ಉಳಿದುಕೊಂಡಿದೆ. 131 ವರ್ಷಗಳ ಇತಿಹಾಸ ಹೊಂದಿರುವ ಪಕ್ಷವನ್ನು ಮುಕ್ತಗೊಳಿಸಬೇಕೊ ಬಿಡಬೇಕೋ ಎನ್ನುವುದನ್ನು ಮತದಾರ ನಿರ್ಧರಿಸಬೇಕೇ ವಿನಾ ಮತ್ತೊಂದು ಪಕ್ಷವಲ್ಲ. ಭ್ರಷ್ಟಾಚಾರ, ಹಗರಣ ಮಾಡಿಕೊಂಡವರು ಅದಕ್ಕೆ ತಕ್ಕ ಪ್ರತಿಫಲ ಅನುಭವಿಸುತ್ತಾರೆ. ಅದಕ್ಕೇ ಹೇಳುವುದು, ಮತದಾರ ತಕ್ಕ ಶಿಕ್ಷೆ ಕೊಡುತ್ತಾನೆ ಎಂದು. ಆದರೆ ಉಳಿದ ಪಕ್ಷಗಳು ಮತ್ತು ಅದರ ನಾಯಕರು ಪ್ರತಿಪಕ್ಷವನ್ನು ಮುಕ್ತಗೊಳಿಸುತ್ತೇವೆ ಎಂದರೆ ಅದು ಅಹಂಕಾರದ ಮಾತಾಗುತ್ತದೆ. ಯಾವುದೇ ಪಕ್ಷ ಸ್ವಯಂಕೃತ ಅಪರಾಧದಿಂದ,  ಎಡವಟ್ಟಿನಿಂದ ಸೋತರೆ ಮೂಲೆಗುಂಪಾದರೆ  ಯಾರೂ ಪಶ್ಚಾತ್ತಾಪಡಬೇಕಿಲ್ಲ. ಅಥವಾ ಗೆದ್ದ ಪಕ್ಷ ಬೀಗಬೇಕಾದ ಅವಶ್ಯಕತೆಯೂ ಇಲ್ಲ.
ರಾಜಕೀಯ ನಾಯಕರಿಗೆ ಅಧಿಕಾರ ಮತ್ತು ಪಟ್ಟ ಎರಡೂ ದೊರಕಿದ ಮೇಲೆ ಅದರ ಅಮಲೇರುತ್ತದೆ ಎನ್ನುವುದು ಒಂದು ಪ್ರಚಲಿತ ಮಾತು. ಈ ಅಮಲು ಏರದಂತೆ ನೋಡಿಕೊಳ್ಳುವುದು ಅಧಿಕಾರಸ್ಥರ ಕೆಲಸವಾಗಬೇಕು. ಒಂದು ವೇಳೆೆ ಅಮಲೇರಿದರೆ ಅದರಿಂದಲೇ ಅವರ ನಾಶವಾಗುತ್ತದೆ. ಇದಕ್ಕೆ ನಾವು ಕೆಲವು ವಿಧಾನಸಭೆ, ಲೋಕಸಭೆ  ಚುನಾವಣೆಗಳನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳಬಹುದು. ಅಧಿಕಾರ ಸಿಕ್ಕಾಕ್ಷಣ ಮಾಡಬಾರದ್ದನ್ನೆಲ್ಲ  ಮಾಡಿದರೆ ಆಗಬಾರದ್ದೆಲ್ಲ ಆಗುತ್ತದೆ ಎನ್ನುವುದಕ್ಕೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕೇಂದ್ರದಲ್ಲಿ ಯುಪಿಎಯ ಉದಾಹರಣೆ ನಮ್ಮ ಕಣ್ಮುಂದೆ ಇದೆ.
ಅಧಿಕಾರ ಯಾವತ್ತ್ತೂ ಶಾಶ್ವತವಲ್ಲ ಎಂದು ಪದೇ ಪದೇ ಹೇಳುವವರೇ ಮುಕ್ತ, ಮುಕ್ತ ಎನ್ನುತ್ತಿರುವುದು ವಿಚಿತ್ರವೆನಿಸುತ್ತದೆ. ಒಂದು ಪಕ್ಷ ಹತ್ತಾರು ವರ್ಷ ಆಳಬಹುದು, ಮತ್ತೊಂದು ಪಕ್ಷ ನಾಲ್ಕೇ ವರ್ಷಕ್ಕೆ ಕೆಳಗಿಳಿಯಬಹುದು. ಅದು ಅವರವರು ನಡೆಸುವ ಅಧಿಕಾರದ ಒಳಿತು- ಕೆಡಕುಗಳ ಮೇಲೆ ನಿರ್ಧರಿತವಾಗುತ್ತದೆ. ಹಾಗಂತ ಪರಾಜಿತ ಪಕ್ಷ ಕಡಿಮೆ ಸ್ಥಾನ ಪಡೆದುಕೊಂಡಿದೆ ಎಂದು ಅದನ್ನು ಮುಕ್ತ ಮಾಡುತ್ತೇವೆ ಎನ್ನುವುದು ಧಿಮಾಕಿನ ಮಾತಾಗುತ್ತದೆ. ಪಕ್ಷವನ್ನು ಮೇಲೇರಿಸುವುದು, ಕೆಳಗಿಳಿಸುವುದು ಮತದಾರರ ಕೆಲಸವೇ ವಿನಾ ಬೇರೆಯಾರದ್ದ್ದೂ ಅಲ್ಲ. ಇನ್ನೊಂದು ಪಕ್ಷವನ್ನು ಮುಕ್ತ ಮಾಡುವುದಕ್ಕಿಂತ ತಾವು ಹೇಗೆ ಇನ್ನಷ್ಟು ಬಲಶಾಲಿಯಾಗಬೇಕು ಎಂದಷ್ಟೇ ಯೋಚಿಸಬೇಕು, ಪ್ರತಿ ಪಕ್ಷದಲ್ಲೂ ಒಳ್ಳೆಯ ವಿಚಾರ, ಉತ್ತಮ ನಾಯಕರು, ಸಂಘಟನಾ ಚತುರರು, ಮುಂದಿನ ರೂಪುರೇಶೆ ತಯಾರಿಸುವ ಚಿಂತಕರು ಇದ್ದೇ ಇರುತ್ತಾರೆ. ಅದರಂತೆ ಕೆಟ್ಟವರೂ ಇರುತ್ತಾರೆ. ಅದನ್ನೆಲ್ಲ ಆಯಾಯ ಪಕ್ಷದ ವಿಚಾರ ಎಂದಷ್ಟೇ ಗಮನಿಸಬೇಕು. ಸೋತ ಪಕ್ಷದ ವಿಷಯದ ಬಗ್ಗೆ ಮಾತನಾಡುವುದು, ಹಿಯಾಳಿಸುವುದು ಕ್ಷುಲ್ಲಕ ರಾಜಕಾರಣವೆನಿಸುತ್ತದೆ.
ಯಾವತ್ತೂ ಒಂದಿಲ್ಲೊಂದು ಚಟುವಟಿಕೆಯಲ್ಲಿರುವವನಿಗೆ ಇನ್ನೊಬ್ಬರ ಬಗ್ಗೆ ಚಿಂತಿಸಲು ವೇಳೆ ಇರುವುದಿಲ್ಲ. ಆದರೆ ನಮ್ಮ ರಾಜಕಾರಣಿಗಳಿಗೆ ಇನ್ನೊಬ್ಬರ ಕಾಲೆಳೆಯುವುದು ಹೇಗೆ ಎನ್ನುವುದರ ಬಗ್ಗೆಯೇ ಸದಾ ಚಿಂತೆ. ಇದು ಈ ದೇಶದ ದುರಂತ. ಸಿಕ್ಕ ಅವಕಾಶವನ್ನು ಹೇಗೆ ಸಮರ್ಥವಾಗಿ ಬಳಸಿಕೊಂಡು ಉತ್ತಮ, ಆಳ್ವಿಕೆಯನ್ನು ಕೊಡಬಹುದು, ಜನರಿಗೆ ಉತ್ತಮವಾದದ್ದೇನನ್ನು ಮಾಡಬಹುದು ಎನ್ನುವುದನ್ನಷ್ಟೇ ಉತ್ತಮ ರಾಜಕಾರಣಿ ಯೋಚಿಸುತ್ತಾನೆ. ಕೆಲಸವಿಲ್ಲದವರು ಪಾಪ, ಇನ್ನೇನು ಮಾಡಿಯಾರು, ಇನ್ನೊಬ್ಬರನ್ನು ಹಳಿಯುತ್ತ ಕಾಲಕಳೆಯಬೇಕಾಗುತ್ತದೆ. ಮಾತನಾಡುವ ಮುನ್ನ ಚಿಂತನೆ ಇರಬೇಕು, ಅದು ತೂಕದ್ದಾಗಿರಬೇಕು. ಅದನ್ನು ನಾಲ್ಕಾರು ಜನ ಮೆಚ್ಚಿ ಅಹುದಹುದೆನ್ನಬೇಕು. ತಾನಾಡುವ ಒಂದು ಮಾತು ಇಡೀ ಪಕ್ಷದ ವರ್ಚಸ್ಸನ್ನು ಹಾಳು ಮಾಡಬಹುದು, ಅದರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಬಹುದು ಎನ್ನುವ ಪರಿಜ್ಞಾನವೂ ಇಲ್ಲದಿರುವುದು ವಿಷಾದವೇ ಸರಿ.


 

Thursday, 9 June 2016

ದಿಟ್ಟ ಅಧಿಕಾರಿಣಿ ಈ ರೀತಿ ವರ್ತಿಸುತ್ತಿರುವುದೇಕೇ?


ಸಚಿವ ಪರಮೇಶ್ವರ್ ನಾಯ್ಕ  ಅನುಪಮಾ ರಾಜಿನಾಮೆಗೂ ತಮಗೂ ಸಂಬಂಧವಿಲ್ಲ ಎಂದಿದ್ದಾರೆ. ಅನುಪಮಾ ಅವರ ವರ್ಗಾವಣೆ ಪ್ರಕರಣದ ನಂತರ ಎಲ್ಲೂ ಸಚಿವರ ಹೆಸರು ಈ ವಿಚಾರದಲ್ಲಿ ಕೇಳಿಬಂದಿಲ್ಲ. ಕೆಲಸ ಮಾಡಲು ಕೂಡ್ಲಿಗಿಯಲ್ಲಿ ತಮಗೆ ಸಾಧ್ಯವಿಲ್ಲ ಎಂದಾದಲ್ಲಿ ಹಿರಿಯ ಅಧಿಕಾರಿಗಳಿಗೆ ಮನದಟ್ಟು ಮಾಡಿ ಬೇರೆಡೆಗೆ ವರ್ಗಾಯಿಸಿಕೊಳ್ಳಬಹುದಿತ್ತು.  
 ಈ ಪ್ರಕರಣದಲ್ಲಿ ಸಚಿವರ ತಪ್ಪಿದ್ದರೆ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಅವರ ರಾಜಿನಾಮೆ ಪಡೆಯಬೇಕು ಅಥವಾ ವಜಾ ಮಾಡಬೇಕು. ಅನುಪಮಾ ಅವರಿಗೆ ಅನ್ಯಾಯವಾಗಿದ್ದರೆ ನ್ಯಾಯ ಕೊಡಿಸಬೇಕು. ಆದರೆ, ಅನಗತ್ಯವಾಗಿ ರಾಜ್ಯದಾದ್ಯಂತ, ರಾಷ್ಟ್ರದಾದ್ಯಂತ ಹಬ್ಬಿಸುವುದು ಸರಿಯಲ್ಲ. ಜನರೂ ಸಹ ಜಾತಿ-ಮತ ಬಿಟ್ಟು ವಿವೇಕಯುತವಾಗಿ ಯೋಚಿಸಬೇಕು.  ಒಂದು ವೇಳೆ ಸಚಿವರದ್ದೇ ತಪ್ಪಿದೆ ಎಂದಾದಲ್ಲಿ ಅವರ ವಿರುದ್ದ  ಹೋರಾಡಲ 


ಅನುಪಮಾ ಶೆಣೈ ದಿಟ್ಟ ಮಹಿಳಾ ಪೊಲೀಸ್ ಅಧಿಕಾರಿಯಾಗಿದ್ದುಕೊಂಡು ಹೆಸರಾದವರು. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಉಪವಿಭಾಗದಲ್ಲಿ ಡಿವೈಎಸ್‌ಪಿಯಾಗಿ, ಅಲ್ಲಿನ ಲಿಕ್ಕರ್ ಲಾಬಿಯನ್ನು ಮಟ್ಟಹಾಕಲು ಯತ್ನಿಸಿದವರು. ಈ ದೇಶದಲ್ಲಿ ಅತಿ ಬಲಿಷ್ಠ ಮಾಫಿಯಾ ಅಗಿರುವ ಲಿಕ್ಕರ್ ಲಾಬಿ ಎಂದಿಗೂ, ಯಾರಿಗೂ ಮಣಿಯುವುದಿಲ್ಲ. ಇಲ್ಲಿ ಆಗಿದ್ದು ಅದೇ. ಪರಿಣಾಮವಾಗಿ, ಅನುಪಮಾ ಬೇಸತ್ತು ರಾಜಿನಾಮೆ ಕೊಟ್ಟು, ಅಜ್ಞಾತ ಸ್ಥಳದಿಂದ ಫೇಸ್‌ಬುಕ್ ಮೂಲಕ ಮಾತನಾಡುತ್ತಿದ್ದಾರೆ.  ಸ್ವತಃ ಸಿಎಂ ಸಿದ್ದರಾಮಯ್ಯ ಈ ರಾಜಿನಾಮೆ ಅಂಗೀಕರಿಸದಂತೆ ಗೃಹ ಇಲಾಖೆಗೆ ಸೂಚಿಸಿದ್ದಾರೆ.
 ಮೂರ್ನಾಲ್ಕು ತಿಂಗಳ ಹಿಂದೆ ಬಳ್ಳಾರಿ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಅವರ ಮೊಬೈಲ್ ಕರೆಯನ್ನು ಸ್ವೀಕರಿಸದೇ ಇದ್ದ ಕಾರಣಕ್ಕೆ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಇದೂ ಸಹ ಒಂದಷ್ಟು ದಿನ ರಾದ್ಧಾಂತಕ್ಕೆ ಕಾರಣವಾಯಿತು. ನಂತರ ಮತ್ತೆ ಕೂಡ್ಲಿಗಿಯಲ್ಲೇ ಅವರನ್ನು ಮುಂದುವರೆಸಲಾಯಿತು. ಈಗ ಅನುಪಮಾ ಮತ್ತೆ ಪರಮೇಶ್ವರ್ ನಾಯ್ಕ ವಿರುದ್ದ ತಿರುಗಿಬಿದ್ದಿದ್ದಾರೆ. ಫೇಸ್‌ಬುಕ್‌ನಲ್ಲಿ ಅವರ ವಿರುದ್ದ ಹರಿಹಾಯುತ್ತಿದ್ದಾರೆ.
ಅನುಪಮಾ ವೈಯಕ್ತಿಕ ಕಾರಣಕ್ಕೆ ರಾಜಿನಾಮೆ ಸಲ್ಲಿಸುತ್ತಿರುವುದಾಗಿ ಪತ್ರ ಬರೆದಿರುವುದು ಮಾಧ್ಯಮದ ಮೂಲಕ ಬೆಳಕಿಗೆ ಬಂದಿದೆ. ವೈಯಕ್ತಿಕ ಎಂಬ ಪದದ ಅರ್ಥವೇ ಗೊತ್ತಿಲ್ಲದಂತೆ ಈಗ ಅವರು ವರ್ತಿಸುತ್ತಿರುವುದೂ ಸಹ ವಿಚಿತ್ರವೆನಿಸುತ್ತಿದೆ. ಎಷ್ಟೇ ಒಳ್ಳೆಯ ಅಧಿಕಾರಿಯಾದರೂ  ತಮ್ಮ ಇತಿಮಿತಿಯಲ್ಲೇ ವರ್ತಿಸಬೇಕು.  ರಮ್ ರಾಜ್ಯ ಎನ್ನುವ ಮೂಲಕ ಸರ್ಕಾರದ ವಿರುದ್ದವೇ ತಿರುಗಿಬಿದ್ದಂತಿದೆ. ಸರ್ಕಾರಿ ಅಧಿಕಾರಿಗೆ ಸೇವಾ ನಿಯಮಾವಳಿಗಳ ಶರತ್ತಿರುತ್ತದೆ. ಎಲ್ಲರಂತೆ ಅನಿಸಿಕೆ ಹಂಚಿಕೊಳ್ಳು, ಟೀಕಿಸಲು ಸಾಧ್ಯವಿಲ್ಲ. ಇದನ್ನು ಉಲ್ಲಂಘಿಸುವ ಮೂಲಕ ಕರ್ತವ್ಯಚ್ಯುತಿ ಎಸಗುತ್ತಿದ್ದಾರೆ. ಇದೆಲ್ಲ ಗೊತ್ತಿದ್ದೂ ರಾಜ್ಯದಲ್ಲಿ ರಾದ್ಧಾಂತವನ್ನಾಗಿಸಿ ಅನೇಕ ಜನರ ಬೆಂಬಲವನ್ನು ಅವರು ಪಡೆಯುತ್ತಿದ್ದಾರೆ. ಜೊತೆಗೆ  ರಾಜೀನಾಮೆ ಕೊಟ್ಟ ನಂತರ  ಈ ವಿಷಯಕ್ಕೆ ಅಲ್ಲಿಗೆ ಪೂರ್ಣವಿರಾಮ ಬಿದ್ದಂತೆ. ಆದರೆ, ರಾಜೀನಾಮೆ ನಂತರವೇ ಈಗ ವಿವಾದ ಭುಗಿಲೆದ್ದಿದೆ.
ರಾಜೀನಾಮೆಯಲ್ಲಿ ಸಚಿವರ ಹೆಸರನ್ನೇನೂ ಅವರು ಉಲ್ಲೇಖಿಸಿಲ್ಲ. ಹೀಗಿರುವಾಗ ಅನಗತ್ಯವಾಗಿ ತಮ್ಮ ಘನತೆಗೇ ಅವರು ಮಸಿ ಬಳಿದುಕೊಳ್ಳುತ್ತಿದ್ದಾರೆ ಎನ್ನಬಹುದು. ರಾಜಿನಾಮೆ ಪ್ರಕರಣದ ನಂತರ ಸಚಿವರು ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾರೆ. ಪೊಲೀಸ್ ಇಲಾಖೆಯ ತಮ್ಮ ಕೆಳಹಂತದ ಅಧಿಕಾರಿ ಮತ್ತು  ಸಿಬ್ಬಂದಿಗಳ ಮೂಲಕವೂ ಕಿರುಕುಳ ಕೊಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಸಚಿವರ ರಾಸಲೀಲೆ ಬಯಲು ಮಾಡುತ್ತೇನೆ, ಸಿ.ಡಿ. ಬಿಡುಗಡೆ ಮಾಡುತ್ತೇನೆ ಎಂದೆಲ್ಲ ಪ್ರಲಾಪಿಸುತ್ತಿರುವುದು ಹಾಸ್ಯಾಸ್ಪದ ಎನಿಸುತ್ತಿದೆ.  ಯಾವುದೇ ಇಲಾಖೆಯ ಅಧಿಕಾರಿ ಇರಲಿ, ರಾಜಕೀಯ ಒತ್ತಡ ಇದ್ದೇ ಇರುತ್ತದೆ. ಅದು ಎಲ್ಲರಿಗೂ ತಿಳಿದ ಸತ್ಯ.  ಇದು ಕೇವಲ ಅನುಪಮಾ ಅವರಿಗೆ ಮಾತ್ರ ಎದುರಾದ ಒತ್ತಡವಲ್ಲ. ಇದನ್ನು ಸಮಾಧಾನ ಚಿತ್ತದಿಂದ ತೆಗೆದುಕೊಳ್ಳುವ ಮೂಲಕ ಪರಿಹರಿಸಿಕೊಳ್ಳಬೇಕೇ ವಿನಾ ವಿವಾದ ಎಬ್ಬಿಸುವುದರ ಮೂಲಕವಲ್ಲ. ಪ್ರಾಮಾಣಿಕ ಅಧಿಕಾರಿಯಾದ ಅನುಪಮಾ ಈ ರೀತಿ ವರ್ತಿಸುತ್ತಿರುವುದೇಕೆ ಎನ್ನುವುದೇ ಯಾರಿಗೂ ಅರ್ಥವಾಗುತ್ತಿಲ್ಲ. ರಾಜೀನಾಮೆ ಕೊಟ್ಟ ನಂತರ ತಮ್ಮ ಮುಂದಿನ ದಾರಿಯನ್ನು ನೋಡಿಕೊಳ್ಳಬೇಕೇ ವಿನಾ ಅನಗತ್ಯ ವಿವಾದ ಸೃಷ್ಟಿಸುವುದು ಯಾರಿಗೂ ಶೋಭೆ ತರದು.
ಪರಿಣಾಮವಾಗಿ ಇದಕ್ಕಾಗಿಯೇ ಕಾದು ಕುಳಿತ ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಸತ್ಯಾಸತ್ಯತೆಯನ್ನರಿಯದ ಫೇಸ್‌ಬುಕ್ ಪ್ರಿಯರು ಲೈಕ್ ಬಟನ್ ಒತ್ತುತ್ತ, ಕಮೆಂಟ್ಸ್ ಬರೆಯುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಅನುಪಮಾ ಮನವೊಲಿಕೆಗೆ ಯತ್ನ ನಡೆಸಲು ಸಿದ್ಧವಾಗಿದ್ದಾರೆ. ಈ ಮಧ್ಯೆ ಅವರ ಸಮಾಜದವರೂ ಸಹ ಅನುಪಮಾಗೆ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಅನುಪಮಾ ಕೇಸಿಗೂ ಅವರ ಜಾತಿಗೂ ಏನು ಸಂಬಂಧವೋ ಗೊತ್ತಿಲ್ಲ. ಅನುಪಮಾ ಎಂದೂ ತಮ್ಮ ಕರ್ತವ್ಯದಲ್ಲಿ ಜಾತಿಯನ್ನು ತಂದಿಲ್ಲ, ಅಧಿಕಾರಿ ಅಥವಾ ನೌಕರ ಯಾವ ಮತ-ಧರ್ಮ- ಜಾತಿ- ಪಕ್ಷವನ್ನೂ ನೋಡದೆ ಸಮಾನತೆಯಿಂದ ಕೆಲಸ ಮಾಡುತ್ತಾನೆ. ಮೆಚ್ಚುಗೆ ಗಳಿಸುತ್ತಾನೆ. ಅನುಪಮಾ ಸಹ ಇದನ್ನೇ ಮಾಡಿದ್ದಾರೆ. ಹೀಗಿರುವಾಗ ಜಾತಿಯತೆ ತರುವ ಮೂಲಕ ಇನ್ನಷ್ಟು ದಿನ ಈ ವಿಚಾರವನ್ನು ಜೀವಂತವಾಗಿಡಲು ಕೆಲವರು ಯತ್ನಿಸುತ್ತಿರುವುದು ನಿಜಕ್ಕ್ಕೂ ವಿಷಾದನೀಯ. ಐಎಎಸ್ ಅಧಿಕಾರಿಯಾಗಿದ್ದ ಡಿ. ಕೆ. ರವಿ ಆತ್ಮಹತ್ಯೆ ಪ್ರಕರಣದಲ್ಲೂ ಇದೇ ರೀತಿ ಜಾತೀಯತೆ ನುಸುಳಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
 ಎಷ್ಟೇ ಸವಾಲೆದುರಾದರೂ ಅದನ್ನು ಎದುರಿಸುವ ತಾಕತ್ತು ತೋರಬೇಕು. ಕಿರಣ್ ಬೇಡಿ, ಸೋನಿಯಾ ನಾರಂಗ್ ಸಹ ಇದನ್ನೆಲ್ಲ ಎದುರಿಸಿಯೇ ಖ್ಯಾತಿ ಗಳಿಸಿದವರು. ರಾಜಿನಾಮೆ ನೀಡಿ ಎಲ್ಲೋ ಕುಳಿತು ಮಾತನಾಡಿದರೆ, ‘ಕೊಟ್ಟ ಕುದುರೆಯನೇರಲರಿಯದವ ವೀರನೂ ಅಲ್ಲ, ಧೀರನೂ ಅಲ್ಲ’ ಎಂಬ ಮಾತು ಜನರ ಬಾಯಲ್ಲಿ ಬರುತ್ತದೆ.



Wednesday, 8 June 2016

  ರಘುರಾಮ್ ರಾಜನ್ ಆರ್‌ಬಿಐನಲ್ಲೇ ಮುಂದುವರೆಯುವರೇ?





 
ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಗವರ್ನರ್ ಎಂಬ ಪ್ರಶಂಸೆಗೆ ಪಾತ್ರರಾಗಿರುವ ರಘುರಾಮ್ ರಾಜನ್,  2013ರಲ್ಲಿ ಆರ್‌ಬಿಐ ಗವರ್ನರ್ ಆಗಿ ನೇಮಕಗೊಳ್ಳುವ ಮುನ್ನ 2012ರಲ್ಲಿ ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. 2003ರಿಂದ 2007ರವರೆಗೆ ಐಎಂಎಫ್‌ನ  ಮುಖ್ಯ ಆರ್ಥಿಕ ತಜ್ಞರಾಗಿದ್ದರು. ಶಿಕಾಗೊ ವಿವಿಯಿಂದ  ಪಿಎಚ್‌ಡಿ ಪಡೆದಿರುವ ಭೋಪಾಲ್ ಮೂಲದ  ತಮಿಳು ಬ್ರಾಹ್ಮಣ  ರಾಜನ್, ಪ್ರಖರ ವಿದ್ವತ್‌ಗೆ, ವಿಶಿಷ್ಟ ವ್ಯಕ್ತಿತ್ವಕ್ಕೆ ಹೆಸರಾದವರು.  ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದ ಮತ್ತು ಪಕ್ಷದ ಕೆಲವು ರಾಜಕಾರಣಿಗಳು ರಾಜನ್ ಬಗ್ಗೆ ಸಹಮತ ಹೊಂದಿಲ್ಲ. ಅವರನ್ನು ಮರಳಿ ಶಿಕಾಗೊಗೆ ಕಳುಹಿಸಲು ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಸಾಂಸದ ಸುಬ್ರಮಣಿಯಂ ಸ್ವಾಮಿ ರಾಜನ್ ಅವರನ್ನು ವಜಾ ಮಾಡಬೇಕೆಂಬ ಆಗ್ರಹ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು


ಕೆಲವು ದಿನಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಗವರ್ನರ್  ರಘುರಾಮ್ ರಾಜನ್ ಹೆಸರು ಪದೇ ಪದೆ ಚರ್ಚೆಗೀಡಾಗುತ್ತಿದೆ. ಮತ್ತೆ ಅವರು ಆರ್‌ಬಿಐ ಗವರ್ನರ್ ಆಗಿ ಮುಂದುವರೆಯುವರೇ, ಕೇಂದ್ರ ಸರಕಾರ ಅವರನ್ನು ಮುಂದುವರೆಸುವುದೇ ಮುಂತಾದ ಪ್ರಶ್ನೆಗಳು ಕೇಳಿಬರುತ್ತಿವೆ.
ರಾಜನ್  ಬಗ್ಗೆ ಒಳ್ಳೆಯ ಮಾತುಗಳೇ ಹೆಚ್ಚು ಕೇಳಿಬರುತ್ತಿವೆ. ಕೆಲವು  ಪ್ರಮಾಣದಲ್ಲಿ ಅಪಸ್ವರವೂ ಇದೆ. ಆದರೆ, ಭಾರತದ ಆರ್ಥಿಕ ವ್ಯವಸ್ಥೆ ಇಷ್ಟೊಂದು ವೇಗವಾಗಿ  ಬೆಳೆಯಲು ಅವರ ಸಮಯೋಚಿತ ನಿರ್ಧಾರ ಮತ್ತು ದೂರದೃಷ್ಟಿಯೇ ಕಾರಣ ಎನ್ನುವುದನ್ನು ವಿಶ್ವದ ಹಲವು ದೇಶಗಳ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ನಿನ್ನೆಯಷ್ಟೇ ಆರ್‌ಬಿಐ ನ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿ, ಅದರಲ್ಲಿ ಬ್ಯಾಂಕ್ ಬಡ್ಡಿದರವನ್ನು ಯಥಾಸ್ಥಿಯತಿಯಲ್ಲಿ ಮುಂದುವರೆಯುವಂತೆ ಮಾಡಿದ್ದಾರೆ.
ರಾಜನ್ ಅವರ ಮೂರು ವರ್ಷಗಳ ಸೇವಾವಧಿ ಸೆಪ್ಟೆಂಬರ್ 4ಕ್ಕೆ ಅಂತ್ಯವಾಗಲಿದೆ. ಅವರ ಮುಂದುವರಿಕೆ ವಿಚಾರದ ಚರ್ಚೆಗೆ ಕಾರಣವಾದ ಅಂಶವೆಂದರೆ, ರಾಜನ್ ತೆಗೆದುಕೊಂಡ ಕೆಲವು ನಿರ್ಧಾರಗಳು. ಹಣದುಬ್ಬರ ಮತ್ತು ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ರಾಜನ್ ವಹಿಸಿದ್ದ ಪಾತ್ರ ಮಹತ್ತರವಾದದ್ದು. ದೇಶದ ಅರ್ಥ ವ್ಯವಸ್ಥೆ ಯನ್ನು ಸರಿದಾರಿಗೆ ತರಲು  ದಿಟ್ಟ ನಿರ್ಧಾರ ಕೈಗೊಳ್ಳುತ್ತಿರುವ  ರಾಜನ್ ಅವರ ಅನುಭವ ಮತ್ತು ದಾಖಲೆಯ ಸಾಧನೆಗಳು ಇಡೀ ವಿಶ್ವದ ಹೂಡಿಕೆ ಅದರಲ್ಲೂ ಪ್ರಶಂಸೆಗೆ ಒಳಗಾಗಿದೆ. ಒಂದು ವೇಳೆ ಅವರೇನಾದರೂ ಆರ್‌ಬಿಐ ತ್ಯಜಿಸಿದರೆ, ಭಾರತೀಯ ಶೇರು ಮಾರುಕಟ್ಟೆಯ ಮೇಲೆ ತಕ್ಷಣದ ಪರಿಣಾಮ ಬೀರಲಿದೆ  ಮತ್ತು ಕರೆನ್ಸಿ ಇನ್ನಷ್ಟು ದುರ್ಬಲವಾಗಲಿದೆ ಎನ್ನುತ್ತಾರೆ ಅಲೈಯಂಜಾ ಎಸ್‌ಇ ಕಂಪನಿಯ ಸಲಹೆಗಾರ ಎ. ಮೊಹಮದ್.
ಈಗ ರಾಜನ್ ಅವರನ್ನು ಮುಂದುವರೆಸಬೇಕೆಂದು ಚಳವಳಿಯೇ ಆರಂಭವಾಗಿದೆ. ಆನ್‌ಲೈನ್‌ನಲ್ಲಿ ಈ ಬಗ್ಗೆ ನಡೆದ ಸಹಿ ಸಂಗ್ರಹಣೆಯಲ್ಲಿ ಸುಮಾರು 60 ಸಾವಿರ ಜನ ರಾಜನ್ ಪರ ಸಹಿ ಹಾಕಿದ್ದಾರೆ. ದಿನಪತ್ರಿಕೆಗಳು, ಮ್ಯಾಗಜಿನ್‌ಗಳೂ ಸಹ ರಾಜನ್ ಪರವೇ ನಿಂತಿವೆ. ಇಷ್ಟಾದರೂ ರಾಜನ್ ಅವರನ್ನು ಕೇಂದ್ರ ಸರಕಾರ ಮುಂದುವರೆಸದಿದ್ದರೆೆ ರಾಜನ್ ಅವರೇನೂ ಕಳೆದುಕೊಳ್ಳುವುದಿಲ್ಲ. ದೇಶೀಯ ಅರ್ಥವ್ಯವಸ್ಥೆಗೆ ಮಾತ್ರ ಸಮರ್ಥ ತಜ್ಞನ  ಮಾರ್ಗದರ್ಶನ ಎರವಾಗಬಹುದು. ಇದರಿಂದ ಜಾಗತಿಕವಾಗಿ ದೇಶಕ್ಕೆ ಕೆಟ್ಟ ಹೆಸರು ಬರಬಹುದು.
ತಮ್ಮ ಲಾಭ ಹೆಚ್ಚಿಸಿಕೊಳ್ಳಲು ಬ್ಯಾಂಕ್ ಬಡ್ಡಿ ದರ ಕಡಿತಗೊಳಿಸಬೇಕೆಂದು ಬಡಬಡಿಸುತ್ತಿದ್ದ  ಕಾರ್ಪೊರೇಟ್ ಸಂಸ್ಥೆಗಳ ಒತ್ತಡಕ್ಕೆ ಮಣಿಯದ ರಾಜನ್, ಹಂತಹಂತವಾಗಿ ಬಡ್ಡಿದರ ಇಳಿಸುವ ಮೂಲಕ ಉದ್ಯಮಿಗಳ ಕೆಂಗಣ್ಣಿಗೆ ತುತ್ತ್ತಾಗಿದ್ದಾರೆ. ಇವರೆಲ್ಲ ಸೇರಿ ರಾಜನ್ ಮುಂದುವರೆಯದಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದಾರೆ.  ಆದರೆ ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ, ಬಡ್ಡಿದರಗಳ ತೀವ್ರ ಸ್ವರೂಪದ ಕಡಿತ ಮಾಡಿದ್ದ ರಾಜನ್, ಸ್ಥಿರ ಠೇವಣಿದಾರರಿಗೆ ಮತ್ತು ಸಣ್ಣ ಉಳಿತಾಯದವರ ಆದಾಯಕ್ಕೆ ಖೋತಾ ಆಗುವುದನ್ನು ತಪ್ಪಿಸಿದ್ದಾರೆ. ಹಣದುಬ್ಬರಕ್ಕೆ ಕಡಿವಾಣ ಹಾಕಿ, ಭಾರತದ ಅರ್ಥವ್ಯವಸ್ಥೆ ಬಗ್ಗೆ ವಿಶ್ವ ಹೂಡಿಕೆದಾರರಿಗೆ ವಿಶ್ವಾಸ ಮೂಡುವಂತೆ ಮಾಡಿದ್ದಾರೆ.
ವಿಶೇಷವೆಂದರೆ, ಪ್ರಧಾನಿ ಮೋದಿಯಾಗಲಿ, ಹಣಕಾಸು ಸಚಿವ ಅರುಣ್ ಜೇಟ್ಲಿಯಾಗಲಿ ಈ ಬಗ್ಗೆ ತುಟಿಪಿಟಕ್ಕೆಂದಿಲ್ಲ. ಏಕೆಂದರೆ, ಕೈಗಾರಿಕೋದ್ಯಮಿಗಳು, ಅರ್ಥಶಾಸ್ತ್ರಜ್ಞರು ಮತ್ತು ಸಾರ್ವಜನಿಕರು ರಾಜನ್ ಪರ ನಿಂತಿದ್ದಾರೆ. ಅವರನ್ನೇ ಎರಡನೆ ಅವಧಿಗೆ ಮುಂದುವರೆಸುವಂತೆ ಆಗ್ರಹಿಸುತ್ತಿದ್ದಾರೆ.
53ರ ಹರಯದ ರಾಜನ್, ಕಠಿಣ ಸ್ವರೂಪದ ವಿತ್ತೀಯ ನೀತಿ ಅನುಸರಿಸುವಂತೆ ಕೇಂದ್ರವನ್ನು ಆಗ್ರಹಿಸುತ್ತಲೇ ಇದ್ದಾರೆ. ಏಕೆಂದರೆ, ಅವರಿಗೆೆ ಜಾಗತಿಕ ಅರ್ಥ ವ್ಯವಸ್ಥೆಯ ಮುನ್ನೋಟವಿದೆ.  2008ರಲ್ಲಿ ಅವರು ಅಮೆರಿಕದ ಹಣಕಾಸು ಬಿಕ್ಕಟ್ಟಿನ ಬಗ್ಗೆ ಮೊದಲೇ ನುಡಿದಿದ್ದರು. ಬ್ಯಾಂಕಿಂಗ್ ಸುಧಾರಣಾ ಕ್ರಮಗಳು, ಹಣದುಬ್ಬರ ನಿಯಂತ್ರಣ, ಉಳಿತಾಯ ಹೆಚ್ಚಳ, ಮುಕ್ತ ಮಾರುಕಟ್ಟೆ  ವ್ಯವಸ್ಥೆ ಜಾರಿಗೊಳಿಸುವುದು ರಾಜನ್ ಆದ್ಯತೆಗಳಾಗಿವೆ.  ಇಂತಹ ದೂರದೃಷ್ಟಿಯ ರಾಜನ್ ಮತ್ತೆ ಮುಂದುವರೆಯುವಂತೆ ರಾಜಕಾರಣಿಗಳೇ ಸರಕಾರದ ಮೇಲೆ ಒತ್ತಡ ಹೇರಬೇಕಿತ್ತು. ಆದರೆ ಇಲ್ಲಿಯೂ ವಿವಾದ ಎದ್ದಿರುವುದು ದುರಾದೃಷ್ಟವೇ ಸರಿ. 

Tuesday, 7 June 2016




ಶಿಕ್ಷಣ ಸಾಗುತ್ತಿರುವ ದಾರಿ ನಿಜಕ್ಕೂ ಭಯಾನಕ

   ಜಗತ್ತಿನಲ್ಲಿ ಬದುಕುವ ದಾರಿಯನ್ನು ಕಂಡುಕೊಳ್ಳಲು, ಹೇಗೆ ಬದುಕಬೇಕು ಎಂದು ತಿಳಿದುಕೊಳ್ಳಲು ಜ್ಞಾನ ಬೇಕು. ಜ್ಞಾನ ಎಂಬುದು ಸಮುದ್ರವಿದ್ದಂತೆ. ಶಿಕ್ಷಣ ಎಂಬ ಸಮುದ್ರದಲ್ಲಿ  ಜ್ಞಾನವೆನ್ನುವುದು ಒಂದು ಅರಿವಿನ ದಾರಿ. ದುರದೃಷ್ಟವಶಾತ್ ಇಂದು ಜ್ಞಾನ ಎನ್ನುವುದು ಕಳೆದುಹೋಗಿದೆ. ಆ ಜಾಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಂದಿದೆ. ಆ ಹಾದಿಯಲ್ಲಿ ನಮ್ಮನ್ನು ಕೊಂಡೊಯ್ಯುತ್ತಿದೆ ಈ ವ್ಯಾಪಾರೀಕರಣದ ಶಿಕ್ಷಣ. 

ಮಲೆನಾಡಿನ ಒಂದು ಹಳ್ಳಿ. ಸುಮಾರು 6 ಎಕ್ರೆಯಷ್ಟು ಅಡಿಕೆ ತೋಟವಿದೆ. ಈ ದಂಪತಿಗೆ ಇರುವವರು ಇಬ್ಬರೇ ಗಂಡು ಮಕ್ಕಳು. ಅವರಲ್ಲೊಬ್ಬ ಈಗಾಗಲೇ ಓದಿ ಬೆಂಗಳೂರು ಸೇರಿದ್ದರೆ, ಇನ್ನೊಬ್ಬ ಇಲ್ಲಿಯೇ ಕಲಿಯುತ್ತಿದ್ದು, ಆತನೂ ಬೆಂಗಳೂರಿನ ಧಾವಂತದ ಕನಸು ಕಾಣುತ್ತಿದ್ದಾನೆ.
ಈ ಘಟನೆ ಎದುರಾದಾಗ ಟಿ.ಎನ್. ಸೀತಾರಾಮ್ ಅವರ ‘ಮುಕ್ತ’ ಧಾರಾವಾಹಿಯ ನೆನೆಪು ಬರುತ್ತದೆ. ಜಾಗತೀಕರಣ, ಇದರಿಂದ ಹಳ್ಳಿಗಳೆಲ್ಲ ನಶಿಸುತ್ತಿರುವುದು, ಉದ್ಯಮಿಗಳು ಹಳ್ಳಿಗರ ಜಮೀನುಗಳನ್ನು ವಶಕ್ಕೆ ಪಡೆಯಲೆತ್ನಿಸುವುದು, ಅದರ ವಿರುದ್ಧ ಹೋರಾಡಿದರೂ ಹಳ್ಳಿಗರಿಗೆ ಜಯ ಸಿಗದಿರುವುದು....ಇತ್ಯಾದಿ ಘಟನೆಗಳು ಮನಃಪಟಲದಲ್ಲಿ ಹಾದುಹೋಗುತ್ತವೆ.
  ಕನ್ನಡ ಚಾನೆಲ್ ಒಂದರಲ್ಲಿ ಎಲ್‌ಕೆಜಿಗೆ ಹೋಗುವ ಹುಡುಗರಿಂದ 7ನೆಯ ತರಗತಿವರೆಗೆ ಹೋಗುವ ಮಕ್ಕಳು ಅಭಿನಯ ಮಾಡುವ ಒಂದು ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಅದರ ಹೆಸರು-ಡ್ರಾಮಾ ಜೂನಿಯರ್ಸ್. ಇದರಲ್ಲಿ ಕಳೆದ ವಾರ 7ನೆಯ ತರಗತಿಯ ಬಾಲಕಿ ಒಂದು ಅಭಿನಯ ಮಾಡಿದಳು. ಅದೇನೆಂದರೆ, ಮಗ್ಗದ ಕೆಲಸ ಮಾಡುವ ಹುಡುಗಿಯ ಪಾತ್ರ.. ಕೊನೆಯ ಹಂತದಲ್ಲಿ ಅವಳಿಗೊಬ್ಬ ಮಗ. ನಾನು ಮಗನನ್ನಾದರೂ ಬಿಟ್ಟೇನು, ಮಗ್ಗವನ್ನು ಬಿಡಲ್ಲ ಎಂಬ ಒಂದು ಸಂಭಾಷಣೆ. ಕಾರಣ ಕೇಳಿದರೆ ಇದು ನನಗೆ ಅನ್ನ ಕೊಟ್ಟ ಉದ್ಯೋಗ. ಅಲ್ಲದೆ, ನಮ್ಮ ದೇಶದ ಸಂಸ್ಕೃತಿ ಎಂದಳು. ಅದಕ್ಕೆ ಸೀತಾರಾಮ್ ಹೇಳಿದರು- ಇಂದಿನ ಜಾಗತೀಕರಣದಲ್ಲಿ ನೀನು ನಮ್ಮನ್ನು ಎಚ್ಚರಿಸಿ ನಮ್ಮತನವನ್ನು ಬಿಂಬಿಸಿದ ರೀತಿ ಇದು ಎಂದು.
ಜಾಗತೀಕರಣದ ಭರದಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಇಂದಿನ ಶಿಕ್ಷಣವೂ ಇದನ್ನೇ ಕಲಿಸುತ್ತಿದೆ. ಯಾವುದೇ ಮಕ್ಕಳನ್ನು ಕೇಳಿ, ಮುಂದೆ ಏನಾಗುತ್ತಿಯೇ ಎಂದು. ಅವರಲ್ಲಿ ಸಿದ್ಧವಿರುವ ಉತ್ತರ- ಒಂದೋ ವೈದ್ಯನಾಗುವುದು, ಇಲ್ಲವೇ ಇಂಜಿನೀಯರ್  ಆಗುವುದು, ವಿದೇಶದಲ್ಲಿ ಅಥವಾ ಕಾರ್ಪೊರೇಟ್ ಸಿಟಿಯಲ್ಲಿ ಕೆಲಸ ಮಾಡುವುದು. ಯಾವ ಮಕ್ಕಳೂ ತಂದೆಯಂತೆ, ಅಜ್ಜನಂತೆ ಅಥವಾ ವಂಶಪಾರಂಪರ್ಯವಾಗಿ ಬಂದಿರುವ ತೋಟ, ಹೊಲವನ್ನು ಆಧುನಿಕ ಕೃಷಿಗೆ ಮಾರ್ಪಡಿಸಿ ವೈಜ್ಞಾನಿಕವಾಗಿ ಬೆಳೆ ತೆಗೆದು ಮಾದರಿ ಕೃಷಿಕನಾಗುತ್ತೇನೆ ಎನ್ನುವುದಿಲ್ಲ. ಕೋಟ್ಯಂತರ ರೂ. ಬೆಲೆಬಾಳುವ ಬಂಗಾರದಂತಹ ಭೂಮಿಯನ್ನು ಇನ್ನೊಬ್ಬರಿಗೆ ಮಾರಾಟ ಮಾಡಿ ಸಿಟಿಗೆ ತೆರಳಲು ಸನ್ನದ್ಧರಾಗುತ್ತಿದ್ದಾರೆ.
ಇಂದು ಯಾವ ಜವಾಬ್ದಾರಿಯನ್ನೂ ನಾವು ಹೊರಲು ಸಿದ್ಧರಿಲ್ಲ. ನಮಗೆ ಬೇಕಿರುವುದು ಹಣ ಮಾತ್ರ. ಹಣ ಗಳಿಸಲು ದೇಶ- ವಿದೇಶಕ್ಕೆ ತೆರಳುತ್ತೇವೆ. ಆದರೆ, ಮನೆಯಲ್ಲೇ ಅದಕ್ಕೆ ದಾರಿ ಇದ್ದರೂ ಅದು ನಮ್ಮ ಕಣ್ಣಿಗೆ ಬೀಳುವುದಿಲ್ಲ. ಬಿದ್ದರೂ ಅದರ ಬಗ್ಗೆ ಆಸಕ್ತಿ ಇಲ್ಲ. ಎಲ್ಲರೂ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಅಮೆರಿಕ, ಆಸ್ಟ್ರೇಲಿಯಾ ಎನ್ನುತ್ತ ಹೋಗುವವರೇ ಆಗಿದ್ದಾರೆ. ಐಟಿ ಕಂಪನಿಯಲ್ಲಿ ಕೆಲಸ ಮಾಡಬೇಕು. ಒಳ್ಳೆಯ ಜೀವನ ನಡೆಸಬೇಕು. ಜಗತ್ತಿನಲ್ಲಿ ನಮಗೆ ಬೇರೆ ಯಾವ ಜವಾಬ್ದಾರಿಯೂ ಬೇಡ ಎನ್ನುವ  ಇಂತಹ ಶಿಕ್ಷಣ, ಇಂತಹವರನ್ನು ಸೃಷ್ಟಿ ಮಾಡುವ ಶಿಕ್ಷಣ ನಮಗೆ ಬೇಕೇ?
ನಮ್ಮ ಸಂಸ್ಕೃತಿ, ಪರಂಪರೆಯನ್ನು ಪ್ರೀತಿಸುವ, ಪೋಷಿಸುವುದನ್ನು ಕಲಿಸದೆ ಕೇವಲ ಹಣ ಗಳಿಸುವ ಮಾರ್ಗವನ್ನು ಮಾತ್ರ ಶಿಕ್ಷಣ ಹೇಳಿಕೊಡುತ್ತಿದೆ. ಏನೂ ಕಲಿಯದ ನಮ್ಮ ಅಜ್ಜ-ಮುತ್ತಜ್ಜಂದಿರು ಕೃಷಿಯನ್ನು ಮಾ ಹೆಸರು ಗಳಿಸಿದರು. ಆದರೆ ಸುಶಿಕ್ಷಿತರೆನಿಸಿಕೊಂಡ, ಆಧುನಿಕ ವಿದ್ಯಾಭ್ಯಾಸಿಗಳಾದ ನಮಗೆ  ಕೃಷಿ ಎಂದರೆ ಯಾರಿಗೆ ಬೇಕು, ಇದರಲ್ಲೇನಿದೆ ಲಾಭ, ಕೂಲಿಗಳು ಸಿಗುವುದಿಲ್ಲ, ಖರ್ಚು ಅಧಿಕ, ಲಾಭ ಕಡಿಮೆ ಎಂಬ ಮನೋಭಾವ ಬಂದುಬಿಟ್ಟಿದೆ.
ನಮ್ಮತನವನ್ನು ನಾವು ಉಳಿಸಿಕೊಂಡು ಬಂದಿದ್ದೇ ಆದಲ್ಲಿ, ಎಲ್ಲದರಲ್ಲೂ ಲಾಭವಿದೆ. ಆದರೆ ಆ ಮಾರ್ಗದತ್ತ ಹೆಜ್ಜೆ ಇಡುವ ಮನಸ್ಸು ಮೊದಲಿರಬೇಕು. ಇಂದಿನ ಶಿಕ್ಷಣ ಇದನ್ನು ಕಲಿಸದೇ ಇರುವುದು, ಇನ್ನೊಬ್ಬನನ್ನು ನೋಡಿ ನಾನು ಅವನಂತೆಯೇ ಆಗಬೇಕೆಂಬ ಹಪಾಹಪಿತನ ಇದಕ್ಕೆ ಕಾರಣ. ನಮ್ಮಲ್ಲಿರುವ ವೈಶಿಷ್ಟ್ಯತೆಯನ್ನು, ಪ್ರತಿಭೆಯನ್ನು ನಾವು ಇಲ್ಲಿ ತೋರಬೇಕೇ ವಿನ ಇನ್ನೊಬ್ಬರನ್ನು ಅನುಸರಿಲಸು ಹೋಗಿ ನಮ್ಮತನವನ್ನು ಹಾಳುಮಾಡಿಕೊಳ್ಳಬಾರದು.
ಟಿವಿ ಕಾರ್ಯಕ್ರಮದ ಆ ಬಾಲಕಿ ಹೇಳಿದ ಹಾಗೆ ಮಗ್ಗವನ್ನು ನಂಬಿಕೊಂಡು ಇಂದು ಸಾವಿರಾರು ಜನ ಕೆಲಸ ಮಾಡುತ್ತಿರುವ ಚರಕ ಸಂಸ್ಥೆ ನಮ್ಮದೇ ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆಯಲ್ಲಿಲ್ಲವೇ? ಗ್ರಾಮೋದ್ಯೋಗದಿಂದ ಜೀವನ ಸಾಗಿಸಲು ಸಾಧ್ಯ ಎನ್ನುವುದನ್ನು ಅದರ ರೂವಾರಿ ಪ್ರಸನ್ನ ತೋರಿಸಿಕೊಟ್ಟಿಲ್ಲವೇ? ಇದನ್ನು ನಾವ್ಯಾರೂ ಅನುಕರಿಸುತ್ತಿಲ್ಲ. ಅನುಸರಿಸುತ್ತಿಲ್ಲ, ಬೆಳೆಸಲು ಯತ್ನಿಸುತ್ತಿಲ್ಲ. ಮೆಡಿಕಲ್, ಇಂಜಿನೀಯರಿಂಗ್ ಸೀಟಿಗೆ ಹತ್ತಿಪ್ಪತ್ತು ಲಕ್ಷ ತೆತ್ತು ಓದಲು ಕಳುಹಿಸುತ್ತೇವೆ. ಆದರೆ ಅದೇ ಲಕ್ಷವನ್ನು ಆತನ ಕೈಗಿತ್ತು ಚೆನ್ನಾಗಿ ವ್ಯವಸಾಯ ಮಾಡಿಕೊಂಡು ಹೋಗು ಎಂದರೂ ಆತ ಪಾಲಕರ ಮಾತು ಕೇಳದ  ಸ್ಥಿತಿ ಇಂದು ನೆಲೆಸಿದೆ.
ಈ ಪರಿಸ್ಥಿತಿ ಏಕೆ ನಿರ್ಮಾಣವಾಗುತ್ತಿದೆ. ಟಿ.ಎನ್.ಸೀತಾರಾಂ ಹೇಳಿದ ಹಾಗೆ, ಶಿಕ್ಷಣ ಯಾವ ದಾರಿಯಲ್ಲಿ ಹೋಗುತ್ತಿದೆ, ಹಳ್ಳಿಗಳ ಪರಿಸ್ಥಿತಿ ಏನಾಗಬಹುದು ಎನ್ನುವುದನ್ನು ಯೋಚಿಸಿದರೆ ನಿಜಕ್ಕೂ ಭಯಾನಕವೆನಿಸುತ್ತಿದೆ.
..................................... 

Friday, 3 June 2016

ನೀರು ಕಂಡರೆ ಅದೆಂತಹ ಖುಷಿ!


ಶಿವಮೊಗ್ಗ: ಒಂದೆಡೆ ಬಿರುಬಿಸಿಲು,  ಇನ್ನೊಂದೆಡೆ ಮಳೆಯೇ ನಾಪತ್ತೆ. ವರುಣನ ಆಗಮನಕ್ಕಾಗಿ ಹೋಮ, ಹವನಗಳು ನಡೆಯುತ್ತಲೇ ಇವೆ. ಆದರೂ ಆತ ನಾಪತ್ತೆಯಾಗಿದ್ದಾನೆ. ಆತನ ಬರುವಿಕೆಗಾಗಿ ಆಗಸ ನೋಡುತ್ತಲೇ ನಿಟ್ಟುಸಿರು ಬಿಡುತ್ತ ದಿನದೂಡುತ್ತಿದ್ದೇವೆ.
ಇನ್ನೊಂದೆಡೆ, ಕುಡಿಯಲು ನೀರಿಲ್ಲದ ಸ್ಥಿತಿ, ಕೆರೆ-ಕಟ್ಟೆಗಳೆಲ್ಲ ಒಣಗಿ ಬರಿದಾಗಿ ಬಿರುಕುಬಿಟ್ಟಿವೆ. ಮನುಷ್ಯರಂತೆ ಪ್ರಾಣಿ-ಪಕ್ಷಿಗಳೂ ಸಹ ನೀರಿಗಾಗಿ ಚಡಪಡಿಸುತ್ತಿವೆ. ಆಗೊಮ್ಮೆ, ಈಗೊಮ್ಮೆ ಮೋಡವಾಗುತ್ತಿದೆ. ಇದರಿಂದ ಇದ್ದ ನೀರೂ ಬತ್ತುತ್ತಿದೆ.
ರಜೆ ಮುಗಿದು ಶಾಲೆ ಆರಂಭವಾಗಿದೆ. ಬೇಸಿಗೆಯ ರಜೆಯ ದಿನಗಳಲ್ಲಿ ಕೆರೆಗೆ ಹಾರುತ್ತ, ಈಜುತ್ತ, ತೇಲುತ್ತ, ಮುಳುಗುತ್ತ ಆನಂದಿಸುತ್ತಿದ್ದ ಮಕ್ಕಳು ಮಗದೊಂದೆಡೆಯಾದರೆ, ನೀರಿರುವ ಜಾಗವನ್ನೇ ಕೆರೆಯನ್ನಾಗಿ ಮಾಡಿ, ಅಲ್ಲಿಯೇ ಹೊರಳುತ್ತ, ಮಲಗುತ್ತ, ಬಾಲಬಡಿಯುತ್ತ ಸಂಜೆ ಕಳೆಯುವ ಎಮ್ಮೆಗಳು. ಎಂತಹ ಆನಂದ. ಮಕ್ಕಳು ಕೆರೆಯನ್ನು ಈಜಿಗಾಗಿ ಬಳಸಿಕೊಂಡು ಖುಷಿಪಟ್ಟರೆ, ಎಮ್ಮೆಗಳು ಲೋಕದ ಯಾವ ಜಂಜಡವೂ ಇಲ್ಲದೆ ನಿಶ್ಚಿಂತೆಯಿಂದ ತಮ್ಮದೇ ಲೋಕದಲ್ಲಿ ಹಾಯಾಗಿ ಮಲಗಿ ಕಾಲಕಳೆಯುತ್ತಿವೆ.
ಮನುಷ್ಯರು ಒಳ್ಳೆಯ ನೀರಿರುವ ಕೆರೆಗಳಲ್ಲಿ ಮಾತ್ರ ಈಜುತ್ತಾರೆ. ಅಲ್ಲಿನ ನೀರನ್ನೂ ಕುಲಗೆಡಿಸುತ್ತಾರೆ. ಆದರೆ ಎಮ್ಮೆಗಳಿಗೆ ಯಾವ ನೀರಾದರೂ ಒಂದೇ. ಅದರಲ್ಲಿ ಉರುಳಾಡಿದ್ದೇ ಉರುಳಾಡಿದ್ದು. ಅಲ್ಲಿ ಅವುಗಳಿಗೆ ಸಿಗುವ ಖುಷಿಯೇ ಬೇರೆ.  ನಿಜಕ್ಕೂ ಸಿಕ್ಕಿದ್ದೇ ಸೀರುಂಡೆ ಎನ್ನುವ ಮನೋಭಾವ ಎಮ್ಮೆಗಳದ್ದು. ಹುಡುಗರು ಉರಿ ಬಿಸಿಲಿನಲ್ಲಿ ಈಜಿ ಮನ-ಮೈಯನ್ನು ಹಗುರ, ಮುದಗೊಳಿಸಿ, ಶುಚಿಗೊಳಿಸಿಕೊಂಡು ಜಿಗಿದಾಡುತ್ತ ಮನೆ ಸೇರುತ್ತಾರೆ. ಆದರೆ ಎಮ್ಮೆಗಳು ಮೈಯನ್ನು ಕೆಸರು ಮಾಡಿಕೊಂಡೇ ಮನೆ ದಾರಿ ಹಿಡಿಯುತ್ತವೆ. ಇಬ್ಬರಲ್ಲೂ ಒಂದೇ ಗುಣ, ಅದೇನೆಂದರೆ, ಒಬ್ಬಂಟಿಯಾಗಿ ಇಬ್ಬರೂ ಹೋಗುವುದಿಲ್ಲ. ಜೊತೆಗೆ ಸಂಗಡಿಗರು ಜಾಸ್ತಿ ಇದ್ದಂತೆ ಉತ್ಸಾಹ ಉನ್ಮಾದಕ್ಕೇರುತ್ತದೆ. ನೀರು ಕಂಡರೆ ಇಬ್ಬರಿಗೂ ಎಂತಹ ಖುಷಿ ಅಲ್ಲವೇ?  
    ........................................................
ಹಾಸ್ಟೆಲ್‌ಗಳಿಗೆ  ಅಡುಗೆ, ಅಡುಗೆ ಸಹಾಯಕರ  ಕೊರತೆ
  ಜಿಲ್ಲಾ  ಹಿಂದುಳಿದ ವರ್ಗಗಳ ಇಲಾಖೆಯ ದುಸ್ಥಿತಿ* 799 ಹುದ್ದೆಯಲ್ಲಿ 522 ಹುದ್ದೆ ಖಾಲಿ 



ಶಿವಮೊಗ್ಗ; ಜಿಲ್ಲೆಯ ಬಹುತೇಕ ಸರ್ಕಾರಿ ಇಲಾಖೆಯಲ್ಲಿ ಖಾಲಿ ಹುದ್ದೆಗಳೇ ಅಧಿಕವಾಗಿವೆ, ಜವಾನ, ರಾತ್ರಿ ಕಾವಲುಗಾರ, ಗುಮಾಸ್ತ ಹುದ್ದೆ, ಹೆಚ್ಚು ಖಾಲಿ ಇರುವವಾಗಿವೆ. ಸರಕಾರ ಖಾಲಿ ಹುದ್ದೆ ತುಂಬುವ ಪ್ರಕ್ರಿಯೆಯನ್ನು ಕಳೆದ ಸುಮಾರು ಆರೆಂಟು ವರ್ಷದಿಂದ ಮಾಡಿಲ್ಲ. ಪ್ರತಿ ವರ್ಷ ಸಾಕಷ್ಟು ನೌಕರರು ನಿವೃತ್ತರಾಗುತ್ತ ಹುದ್ದೆ ಖಾಲಿಯಾಗುತ್ತಿದೆ. ನಿವೃತ್ತರಾದಂತೆ ಅಧಿಕಾರಿಗಳ ಹುದ್ದೆಯನ್ನು ಮಾತ್ರ ತುಂಬುವ ಕಾಂರ್ ನಡೆಯುತ್ತಿದೆ. ಆದರೆ ಗುಮಾಸ್ತರಿಂದ ಹಿಡಿದು ಜವಾನರ ಖಾಲಿ ಹುದ್ದೆ ದಿನಗಳೆದಂತೆ ಹೆಚ್ಚುತ್ತಲೇ ಇದೆ. 
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಟ್ಟೂ 799 ಹುದ್ದೆಗಳಿವೆ. ಈ ಪೈಕಿ 522 ಹುದ್ದೆಗಳು ಖಾಲಿ ಇವೆ. 277 ಹುದ್ದೆ ಮಾತ್ರ ಭರ್ತಿಯಾಗಿದೆ. ಇಲ್ಲಿ ಪ್ರಮುಖವಾಗಿ ಇರಬೇಕಾಗಿರುವ ಜಿಲ್ಲಾ ಪತ್ರಾಂಕಿತ ಅಧಿಕಾರಿಯೇ ಇಲ್ಲ. ತಾಲೂಕುಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳೇ ಇಲ್ಲ. ಎಲ್ಲ 7 ಹುದ್ದೆಗಳು ಖಾಲಿ ಉಳಿದಿವೆ. ಎಫ್‌ಡಿಸಿ 10 ಹುದ್ದೆ ಇದ್ದು, 6 ಖಾಲಿ, ಎಸ್‌ಡಿಸಿ 11 ಹುದ್ದೆ ಇದ್ದು, ಇಲ್ಲಿಯೂ 6 ಖಾಲಿ. ಡಾಟಾ ಎಂಟ್ರಿ ಆಪರೇಟರ್ಸ್‌ಗೆ 7 ಹುದ್ದೆ ಇದೆ. ಅದನ್ನು ತುಂಬಿಯೇ ಇಲ್ಲ. ಹಾಸ್ಟೆಲ್ ಪಾಲಕರ 27 ಹುದ್ದೆ ಇದ್ದು, 19 ಖಾಲಿ, ಮೇಲ್ವಿಚಾರಕರಿಗೆ 105 ಹುದ್ದೆ ಇದ್ದು, 32 ಖಾಲಿ. 
ಈ  ಇಲಾಖೆಯಡಿ ಬರುವ ಹಾಸ್ಟೆಲ್‌ಗಳ ಸಂಖ್ಯೆ 139. ಈ  ಹಾಸ್ಟೆಲ್‌ಗೆ ಅಡುಗೆಯವರ ಹುದ್ದೆಯನ್ನು ಪರಿಶೀಲಿಸಿದಾಗ ಕಂಡುಬಂದ ಸಂಗತಿ ಎಂದರೆ ಒಟ್ಟೂ ಅಡುಗೆಯವರು 322 ಮತ್ತು ಸಹಾಯಕ ಅಡುಗೆಯವರು 210 ಜನರು ಇರಬೇಕಿತ್ತು. ಆದರೆ ಅಡುಗೆಯವರ 190 ಹುದ್ದೆ ಮತ್ತು ಸಹಾಯಕ ಅಡುಗೆಯವರ  201 ಹುದ್ದೆ ಖಾಲಿ ಇದೆ. ರಾತ್ರಿ ಕಾವಲುಗಾರರ ಸಂಖ್ಯೆ ಒಟ್ಟೂ 60 ಇರಬೇಕಿತ್ತು. ಆದರೆ ಇರುವುದು 9 ಮಾತ್ರ. 51 ಈ ಹುದ್ದೆ ಖಾಲಿ ಉಳಿದಿದೆ.
ಹಾಗಾದರೆ ಹಾಸ್ಟೆಲ್ ವಾಸಿ ಮಕ್ಕಳಿಗೆ ಅಡುಗೆಯನ್ನು ಯಾರು ಮಾಡುತ್ತಾರೆಂಬ ಪ್ರಶ್ನೆ ಎದುರಾಗುತ್ತದೆ. ಈ ವಿಚಾರ ಸರ್ಕಾರದ ಗಮನಕ್ಕೂ ಹೋಗಿದೆ. ಆದರೆ ಇದು ಕೇವಲ ಶಿವಮೊಗ್ಗ ಜಿಲ್ಲೆಯ ವಿಚಾರ ಮಾತ್ರವಲ್ಲ ರಾಜ್ಯಕ್ಕೆ ಸಂಬಂಧಿಸಿದ್ದು. ಎಷ್ಟೋ ಸಾವಿರ ಈ ಹುದ್ದೆಗಳು ರಾಜ್ಯದಲ್ಲಿ ಖಾಲಿಯಾಗುವ ಮೂಲಕ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸರಾಸರಿ ಒಂದು ಹಾಸ್ಟೆಲ್‌ಗೆ 3ರಿಂದ 4 ಜನ ಅಡುಗೆಯವರಿರುತ್ತಾರೆ. ಅಡುಗೆ ಸಹಾಯಕರಾಗಿ ಇಬ್ಬರಿರುತ್ತಾರೆ. ಅಂದರೆ ಒಂದು ಹಾಸ್ಟೆಲ್‌ಗೆ ಸರಾಸರಿ 6 ಅಡುಗೆಯವರಿರುತ್ತಾರೆ. ಈಗ ಹುದ್ದೆ ಖಾಲಿಯಾಗಿರುವಲ್ಲಿಗೆ ಇವರನ್ನೆಲ್ಲ ನಿಯೋಜಿಸಲಾಗುತ್ತಿದೆ.   ಹಾಸ್ಟೆಲ್‌ಗಳಲ್ಲಿ ನೂರಕ್ಕೂ ಹೆಚ್ಚು ಮಕ್ಕಳಿರುವುದು ಸಾಮಾನ್ಯ. ಆ ಎಲ್ಲ ಮಕ್ಕಳಿಗೆ ಒಬ್ಬನೇ ಅಡುಗೆ ಮಾಡಬೇಕಾದ ಸಂದರ್ಭ ಎದುರಾಗಿದೆ.   
 ಸರ್ಕಾರ ಈ ಹುದ್ದೆಗಳನ್ನೆಲ್ಲ ತುಂಬದಿದ್ದಲ್ಲಿ, ಕೆಲವೇ ದಿನದಲ್ಲಿ ಇವರು ನಿವೃತ್ತರಾದರೆ ಗುತ್ತಿಗೆ ಆಧಾರದಲ್ಲಿ ಅಡುಗೆಯವರನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಹಾಸ್ಟೆಲ್ ಪರಿಸ್ಥಿತಿ.  ಖಾಸಗಿ ಏಜೆನ್ಸಿಗಳ ಮೂಲಕ ವಾಚ್‌ಮನ್‌ಗಳ ಹುದ್ದೆಯನ್ನು ನಿಭಾಯಿಸಬಹುದಾಗಿತ್ತಾದರೂ ಸರ್ಕಾರ ಆ ಬಗ್ಗೆ ಯೋಚಿಸಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಮಕ್ಕಳೇ ಅಡುಗೆ ಮಾಡಿಕೊಂಡು ಕಾಲಕಳೆಯಬೇಕಾಗುತ್ತದೆ. ವಾಚ್‌ಮನ್ ಹುದ್ದೆ ರದ್ದಾದರೂ ಆಶ್ಚರ್ಯವೇನಿಲ್ಲ. ಆ ಕೆಲಸ ಮಕ್ಕಳೇ ಮಾಡಿಕೊಳ್ಳಲಿ ಎಂದು ಸರಕಾರ ಯೋಚಿಸಬಹುದು. 
    ಹಾಸ್ಟೆಲ್‌ಗಳಿಗೆ ಮಕ್ಕಳನ್ನು ಸೇರಿಸುವ ಉದ್ದೇಶವನ್ನೇ ಸರಕಾರಗಳು ಮರೆತಂತಿದೆ. ಹಳ್ಳಿಯಿಂದ ದಿನನಿತ್ಯ ಬಂದು ವಾಪಸ್ ಹೋಗಲು ಸಾಧ್ಯವಿಲ್ಲ ಎಂದೋ, ಆರ್ಥಿಕ ತೊಂದರೆ ಇದೆ ಎಂದೋ, ಅವರ ವಿದ್ಯಾಭ್ಯಾಸ ಕುಂಠಿತವಾಗದಿರಲಿ ಎಂದೋ ಸೇರಿರುತ್ತಾರೆ. ಆದರೆ ಅಲ್ಲಿ ಅವರಿಗೆ ಅಡುಗೆ-ಊಟವೇ ಇಲ್ಲದೆ ಹೋದರೆ ಅವರೇನು ಮಾಡಿಯಾರು. ಉತ್ತಮ ಕಟ್ಟಡ ಕೊಟ್ಟು ಅಡುಗೆಯವರನ್ನೇ ಕೊಡದೆ ಇದ್ದರೆ ಅಥವಾ ವಾಚ್‌ಮನ್‌ಗಳನ್ನೇ ನೀಡದಿದ್ದರೆ ಹಾಸ್ಟೆಲ್‌ನ್ನು ಕಾಯುವವರಾರು, ಅಡುಗೆ ಮಾಡಿ ಬಡಿಸುವವರಾರು ಎಂಬ ಪ್ರಶ್ನೆ ಪಾಲಕರದ್ದು. 
  


ಜಿಲ್ಲೆಯಲ್ಲಿ ಇಲಾಖೆಯಡಿ ಡಿ ದರ್ಜೆ ಹುದ್ದೆಗಳಾದ ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರ ಸಾಕಷ್ಟು ಹುದ್ದೆಗಳು ಖಾಲಿ ಇರುವುದು ನಿಜ. ಈ ಬಗ್ಗೆ ಹಲವಾರು ಬಾರಿ ಮೇಲಧಿಕಾರಿಗಳ ಗಮನ ಸೆಳೆಯಲಾಗಿದೆ. ಪತ್ರ ಮುಖೇನ ಇಲಾಖೆಯ ಆಯುಕ್ತರಿಗೂ ಬರೆಯಲಾಗಿದೆ. ಹೊರ ಸಂಪನ್ಮೂಲ ಏಜೆನ್ಸಿಯಿಂದ ಮಾನವ ಸೇವೆ ಪಡೆದು  ವಿದ್ಯಾರ್ಥಿ ನಿಲಯಗಳನ್ನು ನಿರ್ವಹಿಸುವ ಸಂದರ್ಭ ಎದುರಾಗಿದೆ. ಡಿ ದರ್ಜೆ ಹುದ್ದೆ ನೇಮಕಾತಿಗೆ ಜಿಲ್ಲಾಧಿಕಾರಿಯವರಿಗೆ ಅಧಿಕಾರವಿದೆ. ಇದಕ್ಕೆ ಸರಕಾರದಿಂದ ಅವಕಾಶ ದೊರೆತಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸುಸೂತ್ರವಾಗಿ ನಿರ್ವಹಿಸಬಹುದಾಗಿದೆ.
- ಧರ್ಮಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ
...................................................