Wednesday, 26 April 2017


ಜಗದ ಕುರುಡಿಗೆ ಸಾಕ್ಷಿಯಾದ ‘ಅಂಧಯುಗ’



ಅಂಧಯುಗ ಮರಳಿ ಮರಳಿ ಬರುತಲಿದೆ, ಅಂಧಯುಗ ನಿರಂತರ ಎನ್ನುವ ಸಂದೇಶ ಸಾರುವ ಮಹಾಭಾರತದ ಕೆಲವು ಘಟನೆಗಳನ್ನು ಆಧರಿಸಿ ಪ್ರದರ್ಶಿಸಲ್ಪಟ್ಟ ಅಂಧಯುಗ ಕನ್ನಡ  ರೂಪಾಂತರದ ನಾಟಕ ಒಂದು ಹೊಸತನವನ್ನು ಬಿಂಬಿಸಲು ಯತ್ನಿಸಿದೆ. ನಗರದ ಕಮಲಾ ನೆಹರು ಕಾಲೇಜಿನ ಒಳಾಂಗಣದಲ್ಲಿ ಸೊಂಪಾಗಿ ಬೆಳೆದ ಗಿಡಮರಗಳ ಮಧ್ಯೆ, ಬಯಲು ರಂಗಮಂದಿರದಲ್ಲಿ ನಡೆದ ಈ ಪ್ರದರ್ಶನ ವಿಶೇಷವಾಗಿ ಆಧುನಿಕ ತಾಂತ್ರ್ರಿಕತೆಗೆ ಒತ್ತು ನೀಡಿತು. ಇದಕ್ಕಾಗಿ ಪರದೆ ಮತ್ತು ವೇದಿಕೆ ಎರಡನ್ನೂ ರಚಿಸಲಾಗಿತ್ತು. 80 ಅಡಿ ಉದ್ದದ ಮೂರು ವೇದಿಕೆಯನ್ನು ಅಷ್ಟೊಂದು ಪರಿಣಾಮಕಾರಿಯಾಗಿ ನಾಟಕ ಬಳಸಿಕೊಳ್ಳಲಿಲ್ಲ. ಹೊಸತನ ಮತ್ತು ತಾಂತ್ರಿಕತೆ ಜನರಿಗೆ ಇನ್ನೂ ಹತ್ತಿರವಾಗಬೇಕಿದೆ. ಆ ನಿಟ್ಟಿನಲ್ಲಿ ನಿರ್ದೇಶಕರು ಯತ್ನ ಮಾಡಬೇಕಿದೆ.


ಕಣ್ಣಿದ್ದೂ ಕುರುಡರಾಗುವುದು, ಕಿವಿಯಿದ್ದೂ ಕಿವುಡರಾಗುವುದು, ಬಾಯಿಯಿದ್ದೂ ಮೂಗರಾಗುವುದು ನಮ್ಮ ಜನರ ಹಾಡು-ಪಾಡು. ಕೆಲವರು ಕಣ್ಗುರುಡರಾದರೆ, ಮತ್ತೆ ಕೆಲವರು ಬಗೆಗುರುಡರಾಗಿರುವುದು ಈ ಜಗತ್ತಿನ ವಿಪರ್ಯಾಸವೇ ಸರಿ. ಮಹಾಭಾರತದ ಕಥೆ ನಮಗೆ ಹತ್ತಿರವಾಗುವುದೇ ಅಲ್ಲಿಯ ಪಾತ್ರಗಳ ಗುಣ ನಮ್ಮಲ್ಲಿಯೂ ಹುದುಗಿರುವುದರಿಂದಲೇ. ದಾಯಾದಿ ಕಲಹ, ವಾರಗಿತ್ತಿಯರ ಅಸೂಯೆ, ರಾಜಕೀಯ ಪಕ್ಷಪಾತಿತನ, ಸ್ವಾಮಿನಿಷ್ಠೆಯ ಅತಿರೇಕ, ಹೆಣ್ಣು ಕಾಲುಜಾರುವುದು ಇವೆಲ್ಲ ಅಂದೂ- ಇಂದೂ, ಮುಂದೂ ಇರುತ್ತದೆ ಎನ್ನುವುದಕ್ಕೆ ಮಹಾಭಾರತದ ಕಥೆ ಒಂದು ಜ್ವಲಂತ ಸಾಕ್ಷಿ. ಅಲ್ಲಿಯ ಕಣ್ಗುರುಡುತನ, ಬಗೆಗುರುಡುತನದ ದುಷ್ಪರಿಣಾಮಗಳೇನು ಎನ್ನುವುದನ್ನು ಎಳೆಎಳೆಯಾಗಿ ತೆರೆದಿಡುವ ವಿನೂತನ ಪ್ರಯತ್ನವೇ ಶಿವಮೊಗ್ಗ್ಗದ ‘ನಮ್ ಟೀಮ್’ ಎಪ್ರಿಲ್ 22 ಮತ್ತು 23ರಂದು ರಂಗದಲ್ಲಿ ಅಭಿನಯಿಸಿದ ‘ಅಂಧಯುಗ’ ನಾಟಕ!
ನಮ್ಮದು ಅಂಧ ಪರಂಪರೆ ಎನ್ನುವುದನ್ನು  ಮತ್ತೆ ಮತ್ತೆ ಪುನರುಚ್ಛರಿಸುವುದೇ ಈ ನಾಟಕ ತಿರುಳು. ನುರಿತ ಕಲಾವಿದರಿಂದಲೇ ಪ್ರದರ್ಶನಗೊಂಡ ಈ ನಾಟಕ ಬಹುತೇಕ ಸಹೃದಯರ ಮೆಚ್ಚುಗೆಗೆ ಪಾತ್ರವಾಯಿತು. ನಾಟಕದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಒಂದೊಂದು ರೀತಿಯ ಅಂಧತ್ವದಿಂದ ವ್ಯವಹರಿಸುವುದು ನಾಟಕದ ವಿಶೇಷತೆ. ಹುಟ್ಟು ಕುರುಡನಾದ ಧೃತರಾಷ್ಟ್ರ ಒಂದೆಡೆಯಾದರೆ, ಗಂಡನಿಗಿಲ್ಲದ ಭಾಗ್ಯ ತನಗೇಕೆ ಎಂದು ಮೂಢಳಾಗಿ ಅಂಧತ್ವ ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಗಾಂಧಾರಿ, ತನ್ನ ಸ್ವಾಮಿಯ ಸಾವಿನ ಸೇಡಿನಿಂದ ಕೃದ್ಧನಾದ ಅಶ್ವತ್ಥಾಮನ ಬಗೆಗುರುಡುತನ, ಸಂಶಯದ ಮೊಟ್ಟೆಗೆ ಕಾವು ಕೊಡುತ್ತಲೇ ಹೋಗುವ ಸಂಜಯನ ಅಂಧತ್ವ ರಂಗದಲ್ಲಿ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ.
ಧರ್ಮವೀರ್ ಭಾರತಿ ಅವರ  ‘ಅಂಧಯುಗ್’ ಹಿಂದಿ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದವರು ಪ್ರೊ. ಸಿದ್ದಲಿಂಗ ಪಟ್ಟಣಶೆಟ್ಟಿ. ಈ ಕಥೆಯನ್ನು ರಂಗಭೂಮಿಗೆ ತಕ್ಕಂತೆ ಮಾರ್ಪಾಟು ಬೇರ್ಪಾಟುಗಳನ್ನು ಮಾಡಿ ರಂಗಕ್ಕೆ ತಂದ ಹಿರಿಮೆ ಬೆಳ್ಳಿಮಂಡಲದ ಸಂಚಾಲಕ ವೈದ್ಯ ಅವರದ್ದು. ರಂಗಕಲಾವಿದ ಡಿ.ಎಂ ರಾಜಕುಮಾರ ಅವರು ಅಶ್ವತ್ಥಾಮನ ಪಾತ್ರದೊಳಕ್ಕೆ ಪರಕಾಯ ಪ್ರವೇಶ ಮಾಡಿದರೋ ಎನ್ನುವಂತೆ ಅಭಿನಯಿಸಿದ ಸಿಟ್ಟು, ಸೆಡವು, ಅಸಹನೆ, ವೀರಾವೇಶ ಆ ಪಾತ್ರ ಕಳೆಗಟ್ಟುವಂತೆ ಮಾಡಿತು. ಧ್ವನಿಯ ಏರಿಳಿತದೊಂದಿಗೆ, ಸ್ಫುಟವಾದ ಮಾತಿನೊಂದಿಗೆ ಸಂಜಯನ ಪಾತ್ರಕ್ಕೆ ಜೀವ ತುಂಬಿದವರು ಪ್ರಾಧ್ಯಾಪಕ ಎಚ್,ಎಸ್, ನಾಗಭೂಷಣ ಅವರು. ಈ ನಾಟಕದ ಮತ್ತೊಂದು ಮುಖ್ಯಪಾತ್ರವಾಗಿ ಎಲ್ಲರ ಗಮನ ಸೆಳೆದವರು ಗಾಂಧಾರಿಯ ಪಾತ್ರಧಾರಿ ಡಾ. ಪ್ರಕೃತಿ ಮಂಚಾಲೆ ಅವರು. ತನ್ನ ಮಕ್ಕಳ ಸಾವಿನಿಂದ ದುಃಖಿಸುವ ಆಕೆಯಲ್ಲಿ ಕೃಷ್ಣನ ಕುರಿತಾಗಿ ಮೂಡುವ ರೋಷ, ಕೃಷ್ಣನಿಗೆ ಶಾಪ ನೀಡುವ ಆಕೆಯ ದ್ವೇಷ, ಅಸಹಾಯಕಳಾದ ಆಕೆ ಅಸಹನೆಯಿಂದ ಕೊತಕೊತ ಕುದಿಯುವ ಪರಿಯನ್ನು ಮನೋಜ್ಞ ಅಭಿನಯದಿಂದ ತೋರಿಕೊಟ್ಟರು ಪ್ರಕೃತಿ ಅವರು.
ಕೃಪಾಚಾರ್ಯ ಪಾತ್ರದಲ್ಲಿ  ಜಿಲ್ಲಾ ವಾರ್ತಾಧಿಕಾರಿ ಜಿ. ಹಿಮಂತರಾಜು, ವಿದುರನಾಗಿ ಸುಧೀಂದ್ರರಾವ್ ತಮ್ಮ ತಾತ್ವಿಕ, ಸಾತ್ವಿಕ ಮಾತುಗಳಿಂದ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾದರು. ಉಪನ್ಯಾಸಕ ಜಿ.ಆರ್. ಲವ, ಆರ್.ಎಸ್. ದಿನೇಶ್, ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್, ನಾಗರಾಜ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದರು. ತೆರೆಯ ಮೇಲೆ ನಾಟ್ಯವಿದೂಷಿಯರಾದ ಡಾ. ಪವಿತ್ರಾ, ಡಾ. ಶುಭ್ರತಾ ಅವರ ನೃತ್ಯ ಅಳವಡಿಕೆ ನಾಟಕ ಇನ್ನಷ್ಟು ಕಳೆಗಟ್ಟುವಂತೆ ಮಾಡಿತು. ಇಲ್ಲಿ ಛಾಯಾಗ್ರಾಹಕ ಶಿವಮೊಗ್ಗ ನಂದನ್  ಅವರ ಛಾಯಾಗ್ರಹಣದ ಛಾಯೆ ಛಾಪು ಒತ್ತಿತ್ತು. ವಿಶೇಷ ಪಾತ್ರದಲ್ಲಿ (ವ್ಯಾಸ) ಕಾಣಿಸಿಕೊಂಡವರು ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಅವರು.
  ಮೂರು ಅರ್ಥದ ವಿಶೇಷ ವೇದಿಕೆಯ ನಿರ್ಮಾಣ ಈ ನಾಟಕದ ಮತ್ತೊಂದು ವಿಶೇಷತೆ ಹೌದಾದರೂ ಅದನ್ನು ಸಮರ್ಥವಾಗಿ ಬಳಸದೇ ಇರುವುದು ನಿಜಕ್ಕೂ ನ್ಯೂನತೆ ಎಂದೇ ಹೇಳಬೇಕು. ಧ್ವನಿವರ್ಧಕದ ಸಣ್ಣಪುಟ್ಟ ಲೋಪಗಳು, ಬೆಳಕಿನ ಅಸಮರ್ಪಕ ನಿರ್ವಹಣೆ, ಕೆಲವು ಸಂದರ್ಭದ ನೀರಸ ರಂಗಗೀತೆಗಳು, ರಂಗಪರಿಕರಗಳನ್ನು ಬಳಸುವಾಗ ಅಲ್ಲಿನ ಸೂಕ್ಷ್ಮತೆಗೆ ಒತ್ತುಕೊಡದಿರುವುದು ನಾಟಕದ ಮೈನಸ್ ಪಾಯಿಂಟ್‌ಗಳು.
ವಿನೂತನ ಮಾದರಿಯಲ್ಲಿ 80 ಅಡಿ ಉದ್ದದ ವೇದಿಕೆ ರಚಿಸಲಾಗಿತ್ತಾದರೂ ಅದರ ಸಮರ್ಪಕ ಬಳಕೆ ಆಗಲಿಲ್ಲ. ಒಂದೊಂದು ದೃಶ್ಯವನ್ನು ಒಂದೊಂದು ವೇದಿಕೆಯಲ್ಲಿ ಅಭಿನಯಿಸಲಾಯಿತು. ಆದರೆ ಅದೇಕೋ ಪ್ರೇಕ್ಷಕರಿಗೆ ಇಷ್ಟವಾದಂತೆ ಕಂಡುಬರಲಿಲ್ಲ. ಹೊಸತನವನ್ನು ಅಳವಡಿಸುವಾಗ ಅದರ ಪರಿಣಾಮವನ್ನೂ ಗಮನಿಸಬೇಕು. ಒಂದೇ ದೊಡ್ಡ ವೇದಿಕೆಯನ್ನು ಅಂದರೆ ಎರಡನೆಯ ವೇದಿಕೆಯನ್ನೇ ಇನ್ನಷ್ಟು ಉತ್ತಮವಾಗಿ ಬಳಸಿಕೊಂಡು ನಾಟಕಕ್ಕೆ  ಮೆರುಗು ಸಿಗುವಂತೆ ಮಾಡಬಹುದಿತ್ತೇನೋ. ಪ್ರಾಕೃತಿಕ ಸನ್ನಿವೇಶವುಳ್ಳ  ಕಮಲಾ ನೆಹರೂ ಕಾಲೇಜಿನ ಒಳಾಂಗಣದಲ್ಲಿ ನಾಟಕವನ್ನು ತೆರೆದ ಬಯಲುರಂಗಮಂದಿರದಲ್ಲಿ ಅಭಿನಯಿಸಿದ್ದು ಎಲ್ಲರಿಗೂ ಖುಷಿ ಕೊಟ್ಟಿತು.
 ಇನ್ನೊಂದು ಮಹತ್ವದ ಅಂಶವೆಂದರೆ, ಪರದೆಯ ಮೇಲೆ ಕೆಲವು ಸನ್ನಿವೇಶಗಳನ್ನು ಮತ್ತು ಪಾತ್ರಗಳನ್ನು ತರುವ ಮೂಲಕ ಡಿಜಿಟಲೈಸೇಶನ್‌ಗೆ ನಾಟಕ ಮೊರೆ ಹೋದಂತೆ ಕಂಡುಬಂದಿತು. ಆದರೆ ಇದು ಹೆಚ್ಚು ರುಚಿಸಲಿಲ್ಲ. ಇದೇ ಪಾತ್ರವನ್ನು ರಂಗದ ಮೇಲೆ ತಂದಿದ್ದರೆ ಚೆನ್ನಾಗಿರುತ್ತಿತ್ತು. ಪರದೆಯ ಮೇಲೆ ಪಾತ್ರಗಳು ಮಾತನಾಡುವಾಗ ಕಲಾವಿದರು ರಂಗವೇದಿಕೆಯಲ್ಲಿ ಸುಮ್ಮನೆ ನಿಂತುಕೊಳ್ಳುವಂತಹ ಸನ್ನಿವೇಶ ಸೃಷ್ಟಿಯಾಯಿತು. ಇದು, ಅಷ್ಟೊಂದು ದೊಡ್ಡ ವೇದಿಕೆ ಸೃಜಿಸಿ ಅದಕ್ಕೆ ತಕ್ಕ ನ್ಯಾಯ ಕೊಡಲಿಲಲ್ಲ ಎನ್ನುವುದಕ್ಕೆ ಸಾಕ್ಷಿಯಾಯಿತು.
ಹೊಸತನವನ್ನು ಪ್ರಯೋಗ ಮಾಡುವುದು ಇಂದಿನ ಬಹುತೇಕ ನಿರ್ದೇಶಕರ ಕನಸು. ಈ ಸಂದರ್ದಲ್ಲಿ ಅವರು ಪ್ರೇಕ್ಷಕನನ್ನು ಮತ್ತು ಕಥೆಯ ಸೂಕ್ಷ್ಮತೆಯನ್ನೂ ಮರೆಯಬಾರದು.  ಅದು ಪ್ರೇಕ್ಷಕನನ್ನು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ತಲುಪಬಹುದು, ಅವರು ಅದನ್ನು ಹೇಗೆ ಸ್ವೀಕರಿಸಬಹುದು ಎನ್ನುವುದನ್ನು ಮೊದಲೇ ಚಿಂತನೆ ನಡೆಸಿ ಇಂತಹ ಸಾಹಸಕ್ಕೆ ಇಳಿದರೆ ಒಳ್ಳೆಯದು. ಇಲ್ಲದಿದ್ದರೆ ಹೊಸತನದ ಹೆಸರಿನಲ್ಲಿ ಉತ್ತಮ ನಾಟಕವೂ ಪ್ರದರ್ಶನದಲ್ಲಿ ಅಚ್ಚೊತ್ತದಂತಾಗಬಹುದು.
.......................................  

Friday, 21 April 2017

ಇದು ಬರಿ ಕಾಲೇಜಲ್ಲ, 
ಬದುಕು ರೂಪಿ(ಸಿದ)ಸುವ ವಿದ್ಯಾಮಂದಿರ



ಮಲೆನಾಡು ಮೊದಲಿನಿಂದಲೂ ವಿದ್ಯೆಯ ತವರೂರು. ಈ ವ್ಯಾಪ್ತಿಯಲ್ಲಿ ಬರುವ ನಾಲ್ಕಾರು ಜಿಲ್ಲೆಯ ಜನರು ಬುದ್ಧಿವಂತರೆಂದು ಗುರುತಿಸಲ್ಪಟ್ಟವರು. ಏಕೆಂದರೆ ಬಹುಹಿಂದಿನಿಂದಲೂ ಇಲ್ಲಿ ಉತ್ತಮ ಶಿಕ್ಷಣ ಕೇಂದ್ರಗಳಿವೆ. ಎಷ್ಟೇ ಕಷ್ಟವಾದರೂ, ಎಷ್ಟೇ ದೂರವಿದ್ದರೂ ಕಾಲ್ನಡಿಗೆಯಲ್ಲೇ ಹತ್ತಾರಿ ಕಿಲೋಮೀಟರ್ ನಡೆದು ಕಾಲೇಜು ಕಲಿಕೆಗೆ ಮುಂದಾಗುತ್ತಿದ್ದರು. ತಾಲೂಕಿಗೊಂದು ಕಾಲೇಜು ಆಗಿಲ್ಲದಿದ್ದರೂ ಜಿಲ್ಲಾ ಕೇಂದ್ರದಲ್ಲಿ ಹೆಸರಾಂತ ಸರ್ಕಾರಿ ಅಥವಾ ಖಾಸಗಿ ವಿದ್ಯಾಕೇಂದ್ರಗಳು ಇದ್ದು, ಅಕ್ಷರಜ್ಞಾನ ನೀಡುತ್ತಿದ್ದವು. ಅಂದಿನಿಂದ ಇಂದಿನವರೆಗೂ ಅವು ತಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುತ, ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ ಹೆಸರನ್ನು ಬೆಳಗುತ್ತ ್ತ ಬಂದಿವೆ. ಇಂತಹ ಕಾಲೇಜುಗಳೆಲ್ಲ ಬಹುತೇಕ ಶತಮಾನೋತ್ಸವ ಆಚರಿಸುತ್ತಿವೆ. ಆ ಪೈಕಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಸಹ ಒಂದಾಗಿದ್ದು, ಸಾವಿರಾರು ಶಿಕ್ಷನತಜ್ಞರನ್ನು, ವಿಜ್ಞಾನಿ, ನ್ಯಾಯವಾದಿಗಳನ್ನು ,ವಿಚಾರವಂತರನ್ನು, ಸಾಹಿತಿಗಳನ್ನು, ಕಲಾವಿದರನ್ನು, ಚಿಂತಕರನ್ನು ನಾಡಿಗೆ ನೀಡಿದ ಕೀರ್ತಿ ಇದರದ್ದು. ಅದು ಈಗ ಸುವರ್ಣಮಹೋತ್ಸವದ ಹೊಸ್ತಿಲಲ್ಲಿದೆ.  


‘ಸಹ್ಯಾದ್ರಿ ಕಾಲೇಜು’ ಎಂಬ ಹೆಸರು ಹೇಳಿದರೆ ಮೈ ಪುಳಕಗೊಳ್ಳುತ್ತದೆ. ಏಕೆಂದರೆ ಇದು ಕೇವಲ ಕಾಲೇಜಲ್ಲ, ಇದೊಂದು ಚಿಂತನೆಯ, ಶೈಕ್ಷಣಿಕ, ಸಾಂಸ್ಕೃತಿಕ, ನೆಲೆವೀಡು. ಅನೇಕ ಹೋರಾಟಗಳಿಗೆ ಕಾರಣವಾದ, ಸ್ಫೂರ್ತಿ ನೀಡಿದ, ಚೈತನ್ಯ ಚಿಲುಮೆಯ ಸ್ಥಳ. ಅನೇಕರ ಜೀವನಕ್ಕೆ ಬೆಳಕು ಚೆಲ್ಲಿದ, ದಾರಿದೀಪವಾದ ರಾಜ್ಯದ ಅತ್ಯಂತ ಪ್ರತಿಷ್ಠಿತ ಕಾಲೇಜಾಗಿ ಸಾವಿರಾರು ಮಕ್ಕಳು ಪ್ರತಿವರ್ಷ ಪದವಿ ಪಡೆದು ಸದಾ ಸ್ಮರಣೆ ಮಾಡುವ ವಿದ್ಯಾ ಕ್ಷೇತ್ರ.
ನೂರಾರು ಎಕರೆ ವಿಸ್ತೀರ್ಣದಲ್ಲಿ ನಗರದ ಹೊರಭಾಗದಲ್ಲಿ ಮೈದಳೆದು ನಿಂತಿರುವ, ಅತ್ಯಾಧುನಿಕ ಬೃಹತ್ ಕಟ್ಟಡಗಳಿಂದ ಆಕರ್ಷಿಸುತ್ತಿರುವ, ಸಹ್ಯಾದ್ರಿ ಎಂಬ ಹೆಸರಿಗೆ ಮೆರುಗು ತಂದುಕೊಡುವಂತೆ ಸುತ್ತಮುತ್ತ ಹಸಿರಿನಿಂದ, ಉದ್ಯಾನವನದಿಂದ ಶಿಕ್ಷಣಪ್ರಿಯರನ್ನು ಕೈಬೀಸಿ ಕರೆಯುತ್ತಿದೆ ಈ ಜ್ಞಾನದೇಗುಲ. ಅನೇಕ ಬಡವರಿಗೆ ಆಶಾಕಿರಣವಾಗಿ, ಮಲೆನಾಡಿನ ಹಿರಿಮೆಯನ್ನು ಹೆಚ್ಚಿಸಿದ ಈ ವಿದ್ಯಾಮಂದಿರ ಮುಕುಟಪ್ರ್ರಾಯವಾಗಿ ಶೋಭಿಸುತ್ತಿದೆ. ರಾಷ್ಟ್ರಕವಿ ಕುವೆಂಪು ಆಗಾಗ ಭೇಟಿಕೊಡುತ್ತಿದ್ದ ಅಕ್ಷರಮಂದಿರ ಇದಾಗಿದೆ, ಇದರ ಪ್ರತಿಷ್ಠೆ, ಘನತೆ, ಜ್ಞಾನವೈಭವವನ್ನು ನಾವು ಗಮನಿಸಬಹುದಾಗಿದೆ.
  ಸಹ್ಯಾದ್ರಿ ಕಾಲೇಜು 75ರ ಹರಯದಲ್ಲಿದೆ. ಮಲೆನಾಡಿನ ಮಡಿಲಲ್ಲಿ ತಲೆಎತ್ತಿ ನಿಂತಿರುವ ಈ ಕಾಲೇಜಿಗೆ ರಾಜ್ಯದಲ್ಲಿ ವಿಶೇಷ ಸ್ಥಾನಮಾನವಿದೆ. ಕರ್ನಾಟಕದ ಯಾವ ಮೂಲೆಗೆ ಹೋಗಿ ಇದರ ಹೆಸರು ಹೇಳಿದರೂ ಪರಿಚಿತವಿದೆ. ಕರ್ನಾಟಕದ ನಾಲ್ಕಾರು ಎ ಗ್ರೇಡ್ ಕಾಲೇಜುಗಳಲ್ಲಿ ಇದೂ ಸಹ ಒಂದು ಎನ್ನುವುದು ಹೆಮ್ಮೆಯ ವಿಷಯ.
  1941ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಇಂಟರ್‌ಮೀಡಿಯೆಟ್ ಕಾಲೇಜಾಗಿ ಸ್ಥಾಪನೆಗೊಂಡು ಹಂತಹಂತವಾಗಿ ಬೆಳೆಯುತ್ತ 1956ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಗಿ ಉನ್ನತೀಕರಣಗೊಂಡಿದೆ. ಈ ಕಾಲೇಜಿನ ಭವ್ಯತೆಯನ್ನು ಕಂಡು ರಾಷ್ಟ್ರಕವಿ ಕುವೆಂಪು 1962ರಲ್ಲಿ ತಾವು ಮೈಸೂರು ವಿವಿಯ ಕುಲಪತಿಯಾಗಿದಾಗ ಅರ್ಥಪೂರ್ಣವಾಗಿ ಸಹ್ಯಾದ್ರಿ ಕಾಲೇಜು ಎಂದು ಮರು ನಾಮಕರಣ ಮಾಡಿದ್ದಾರೆ.
ಅಲ್ಲಿಂದ ಇನ್ನೂ ಎತ್ತರಕ್ಕೆ ಬೆಳೆದು ಸಹ್ಯಾದ್ರಿ ಕಾಲೇಜು ತನ್ನ ಶೈಕ್ಷಣಿಕ ಮತ್ತು ಪ್ರಾಕೃತಿಕ ಸೆಳೆತದಿಂದ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ, ಸುತ್ತಮುತ್ತಲಿನ ಅನೇಕ ಜಿಲ್ಲೆಗಳ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆದು ಬೃಹತ್ ಮತ್ತು ಮಹತ್ ಎರಡರಲ್ಲೂ  ರಾಜ್ಯದ ಆಕರ್ಷಕ ಕಾಲೇಜೆನಿಸಿದೆ. 1984ರಲ್ಲಿ ಸಹ್ಯಾದ್ರಿ ಕಲಾ ಕಾಲೇಜು ಮತ್ತು ವಿಜ್ಞಾನ ಕಾಲೇಜು ಬೇರ್ಪಟ್ಟು 1992ರಲ್ಲಿ ಕುವೆಂಪು ವಿವಿಯ ಘಟಕ ಕಾಲೇಜಾಗಿ ಪರಿವರ್ತನೆಯಾಯಿತು. ಇದರಿಂದ ಇನ್ನಷು ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಾಯಿತು. ಇಂತಹ ಮಹತ್ವದ ಸಹ್ಯಾದ್ರಿ ಕಾಲೇಜು ಪ್ರಸ್ತುತ 75ನೆಯ ವರ್ಷದಲ್ಲಿದೆ.
ಸಹ್ಯಾದ್ರಿ ಕಾಲೇಜು ಎಂದರೆ ಅಲ್ಲಿನ ವಿಚಾರಸಂಕಿರಣಗಳು, ಕಾರ್ಯಾಗಾರಗಳು ಇಂದಿಗೂ ಹೆಸರುವಾಸಿಯಾಗಿವೆ. ಈ ವಿಚಾರಸಂಕಿರಣಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ ಪ್ರಾಧ್ಯಾಪಕರು, ಸಂಪನ್ಮೂಲ ವ್ಯಕ್ತಿಗಳು ಆಗಮಿಸುತ್ತಾರೆ. ಗ್ರಾಮ್ಷಿಯಂತಹ ಇಟಲಿಯ ವಿಚಾರವಾದಿಯ ಬಗ್ಗೆ ಇಲ್ಲಿ ಚಿಂತನೆ ನಡೆಯುತ್ತದೆ. ಕಲಿಯಲು ಆಸಕ್ತಿ ಉಳ್ಳವರಿಗೆ ಇದೊಂದು ಜ್ಞಾನದ ಆಗರ. ಇಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳೂ ಒಂದಿಲ್ಲೊಂದು ಹೊಸ ವಿಚಾರದ ಮೇಲೆ ಬೆಳಕು ಚೆಲ್ಲುವಂತಹವಾಗಿವೆ. ಜಿಲ್ಲೆಯ ಮತ್ತು ಅಕ್ಕಪಕ್ಕದ ಎಷ್ಟೋ ವಿಚಾರವಂತರು ಇಂತಹ ಕಾರ್ಯಾಗಾರಗಳಿಗೆ ತಪ್ಪದೇ ಬರುತ್ತಾರೆ. ಎಂದೂ ಮರೆಯಲಾಗದ ಜ್ಞಾನದ ಬುತ್ತಿಯನ್ನು ಇವು ನೀಡುತ್ತಿವೆ. ಜೊತೆಗೆ ಇಲ್ಲಿನ ಅಧ್ಯಾಪಕ ವೃಂದ ಸಹ ಅಪಾರ ಅನುಭವದಿಂದ ಕೂಡಿದೆ. ಬಹುತೇಕ ಹಿರಿಯ ಪ್ರಾಧ್ಯಾಪಕರೆಲ್ಲ ತಮ್ಮ ಜ್ಞಾನದ ಬಲದಿಂದಲೇ ಹೆಸರುವಾಸಿಯಾಗಿದ್ದಾರೆ. ಅಷ್ಟೇ ಏಕೆ, ನಾಡಿನ ಮೂಲೆಮೂಲೆಗೂ ಸಂಪನ್ಮೂಲ ವ್ಯಕ್ತಿಗಳಾಗಿ ತೆರಳುತ್ತಾರೆ.
ಇಂದಿಗೂ ಗುಣಮಟ್ಟದಲ್ಲಿ ಸಾಕಷ್ಟು ಬೆಳೆದು ಕೇವಲ ರಾಜ್ಯಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರಿಯ, ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಸರಾಗಿದೆ. ಕುವೆಂಪು ವಿವಿಗೆ ಸೇರಿದ ನಂತರ ತನ್ನ ಬೆಳವಣಿಗೆಯ ವೇಗವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಇಂತಹ ದೀರ್ಘ ಪರಂಪರೆಯ ಕಾಲೇಜು ಶ್ರೇಷ್ಠ ಸಾಧನೆಯನ್ನೂ ಮಾಡಿದೆ. ಶ್ರೇಷ್ಠ ಸಾಧಕರನ್ನು ಈ ನಾಡಿಗೆ ನೀಡಿದೆ. ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಹಲವರನ್ನು ಸೃಜಿಸಿದ ಕೀರ್ತಿ ಇದರದದ್ದು.
 ಅವರಲ್ಲಿ ಕೆಲವರೆಂದರೆ-ವಿಜ್ಞಾನ ಕ್ಷೇತ್ರದಲ್ಲಿ ಭಾರತ ರತ್ನ ಪಡೆದ ಪ್ರೊ. ಸಿಎನ್‌ಆರ್ ರಾವ್, ಡಾ. ಕೆ.ಎ. ಅಶೋಕ್ ಪೈ, ಪದ್ಮಶ್ರೀ ಡಾ. ಬಿ.ಎನ್. ಸುರೇಶ್, ಪ್ರಸಿದ್ಧ ಸಾಹಿತಿಗಳಾದ ಪ್ರೊ. ಯು.ಆರ್. ಅನಂತಮೂರ್ತಿ, ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ ಪಿ. ಲಂಕೇಶ್,  ಹಾ.ಮಾ. ನಾಯಕ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ,  ಗಿರೀಶ್ ಕಾಸರವಳ್ಳಿ, ಚಿಂತಕ ಪ್ರೊ. ರಾಮದಾಸ್, ಮ್ಯಾಗ್ಸೆಸ್ಸೆ ಪುರಸ್ಕೃತ ಕೆ.ವಿ.ಸುಬ್ಬಣ್ಣ, ನಾಡಿನ ಹೆಸರಾಂತ ಗಾಯಕಿ ಬಿ.ಕೆ. ಸುಮಿತ್ರಾ, ರೈತ ಹೋರಾಟಗಾರ ಕಡಿದಾಳು ಶಾಮಣ್ಣ, ರಾಜಕೀಯ ಮುತ್ಸದ್ದಗಳಾದ ಶಾಂತವೇರಿ ಗೋಪಾಲಗೌಡ, ಎಚ್.ಜಿ. ಗೋವಿಂದೇಗೌಡ, ನಾಯಕರಾದ ಡಿ.ಎಚ್.ಶಂಕರಮೂರ್ತಿ, ಆಯನೂರು ಮಂಜುನಾಥ, ಕೊಣಂದೂರು ಲಿಂಗಪ್ಪ, ನ್ಯಾಯಾಂಗ ಕ್ಷೇತ್ರದಲ್ಲಿ ಹೆಸರು ಮಾಡಿದ ನ್ಯಾಯಮೂರ್ತಿ ರಾಮಾ ಜೋಯಿಸ್, ಇತ್ತೀಚೆಗಷ್ಟೇ ನಿಧನರಾದ ನ್ಯಾಯಮೂರ್ತಿ ಎನ್.ಡಿ. ವೆಂಕಟೇಶ್, ಉದ್ಯಮ ಕ್ಷೇತ್ರದ ಸಾಧಕರಾದ ಕೆ.ಜಿ. ಸುಬ್ರಹ್ಮಣ್ಯ,  ಬಿ.ಆರ್.ಅಶ್ವತ್ಥನಾರಾಯಣ ಶ್ರೇಷ್ಠಿ, ಗಿರಿಮಾಜಿ ಗೋಪಾಲ್, ಟಿ.ವಿ. ನಾರಾಯಣ ಶಾಸ್ತ್ರಿ,  ಕ್ರೀಡಾ ಕ್ಷೇತ್ರದ  ಸಾಧಕರಾದ ಎಂ.ಸಿ. ಮುತ್ತಯ್ಯ, ಮ್ಯಾಥ್ಯೂ ಗಿಬ್ಸನ್ ಮುಂತಾದವರು ತಾವು ಬೆಳೆದು ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ತಾವು ಓದಿದ ಕಾಲೇಜಿನ ಗೌರವವನ್ನೂ ಹೆಚ್ಚಿಸಿದ್ದಾರೆ.  
ಇಲ್ಲಿ ಪಾಠ ಮಾಡಿದ ಪ್ರಮುಖ ಅಧ್ಯಾಪಕರು:
ಕವಿ ಕೆ.ಎಸ್. ನಿಸಾರ್ ಅಹಮದ್, ದೇ. ಜವರೇಗೌಡ, ಪಿ. ಲಂಕೇಶ್,  ಜಿ. ಬ್ರಹ್ಮಪ್ಪ,  ಓ. ಎಲ್. ನಾಗಭೂಷಣಸ್ವಾಮಿ, ರಾಜೇಂದ್ರ ಚೆನ್ನಿ, ರಹಮತ್ ತರಿಕೆರೆ, ಹೂವಯ್ಯ ಗೌಡ ಮೊದಲಾದವರು.


ಸುವಣ ಮಹೋತ್ಸವದ ನಿಮಿತ್ತ ವರ್ಷವಿಡೀ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಇದಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಅಮೃತ ಮಹೋತ್ಸವ ಭವನ ನಿರ್ಮಾಣ, ಬಯಲು ರಂಗಮಂದಿರ ನಿರ್ಮಾಣ, ಅಮೃತ ಮಹೋತ್ಸವ ದ್ವಾರ ಮತ್ತು ರಸ್ತೆಯ ವಿಸ್ತರಣೆ ಅತಿಥಿ ಗೃಹ ನಿರ್ಮಾಣ, ಜ್ಞಾನ ಕೇಂದ್ರದ ಮಾನ್ಯತೆ ಪಡೆಯುವುದು, ಹೆರಿಟೇಜ್ ಕಾಲೇಜು ಎಂಬ ಮಾನ್ಯತೆ ಪಡೆಯುವುದು, ಕ್ಯಾಂಪಸ್‌ಗೆ ವೈ-ಫೈ ಸೌಲಭ್ಯ ಒದಗಿಸುವುದು ಮುಂದಿನ ಗುರಿಯಾಗಿದೆ.
 - ಪ್ರೊ. ಬಿ.ಸಿ. ಗೌಡರ ಶಿವಣ್ಣನವರ್, ಪ್ರಾಚಾರ್ಯ


ಅಮೃತ ಮಹೋತ್ಸವವನ್ನು ಎ.22ರ ಬೆಳಗ್ಗೆ 10:30ಕ್ಕೆ ಕಾಲೇಜು ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಉನ್ನತ ಶಿಕ್ಷಣ ಸಚಿವ ಬಸರಾಜ ರಾಯರೆಡ್ಡಿ ವಹಿಸುವರು. ವಿಧಾನಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ, ಗೃಹ ಸಚಿವ ಪರಮೇಶ್ವರ, ಸ್ಥಳೀಯ ಶಾಸಕರು ಅತಿಥಿಯಾಗಿರುತ್ತಾರೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಅತಿಥಿಯಾಗಿರುವರು. ಅಂದು ಬೆಳಗ್ಗೆ 9 ಗಂಟೆಯಿಂದ ಸುಗಮ ಸಂಗೀತ ಹಾಗೂ ಜನಪದ ಗೋಷ್ಠಿ ನಡೆಯಲಿದೆ. ಸಂಜೆ 5 ಗಂಟೆಗೆ ಕರ್ನಾಟಕದ ಜನಪದ ಕಲಾತಂಡಗಳ ವಿವಿಧ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ.
.......................----

Thursday, 20 April 2017

ಆರಕ್ಷಕರ ಪಾಲಿಗಿವರು ಭಗೀರಥರು


  ತನ್ನ ಪೂರ್ವಜರ ಮೋಕ್ಷಕ್ಕಾಗಿ ಭಗೀರಥ ಸ್ವರ್ಗದಿಂದ ದೇವಗಂಗೆಯನ್ನು ಹರಿಸಿದ ಕಥೆಯನ್ನು ಪುರಾಣದಲ್ಲಿ  ಕೇಳಿದ್ದೇವೆ. ಕಾಲ ಕೆಟ್ಟಿದೆ ಎನ್ನುವ ಈ ಕಲಿಗಾಲದಲ್ಲೂ ಪರೋಪಕಾರ, ಸಚ್ಚಾರಿತ್ರ್ಯ, ಎಲ್ಲಕ್ಕಿಂತ ಮಿಗಿಲಾಗಿ  ಮಾನವಿಯತೆಮತ್ತು ಇಚ್ಛಾಶಕ್ತಿ ಹೊಂದಿದ  ರಾಜಕಾರಣಿಗಳು, ಅಧಿಕಾರಿಗಳು ಕೆಲವು ಪ್ರಮಾಣದಲ್ಲಿ ಇದ್ದಾರೆ. ಮಾಳೂರು ಪೊಲೀಸರು ನೀರಿಲ್ಲದೆ ಪರಿತಪಿಸುವಾಗ ಅವರ ನೆರವಿಗೆ ಬಂದವರು ಒಬ್ಬ ಜನಪ್ರತಿನಿಧಿ, ಮತ್ತೊಬ್ಬ ಅವರದೇ ಇಲಾಖೆಯ ಹಿರಿಯ ಅಧಿಕಾರಿ.  ಶಾಸಕ ಕಿಮ್ಮನೆ ರತ್ನಾಕರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ್ ಖರೆ ಅವರೇ ಈ ಪೊಲೀಸರ ಪಾಲಿಗೆ ಭಗೀರಥರು. ಇವರನ್ನೆಂದೂ ತಮ್ಮ ಸೇವಾವಧಿಯಲ್ಲಿ ಮರೆಯಲಾಗದು ಎನ್ನುತ್ತಾರೆ ಅಲ್ಲಿನ ಪೊಲಿಸ್ ಸಿಬ್ಬಂದಿಗಳು ಮತ್ತು ಅವರ ಕುಟುಂಬದವರು.  





ಪೊಲೀಸ್ ವಸತಿಗೃಹಗಳಿಗೆ  ಕೆಲವು ವರ್ಷಗಳಿಂದ ಸಮರ್ಪಕ ನೀರಿಲ್ಲದೆ ಪರಿತಪಿಸುತ್ತಿದ್ದುದನ್ನು ಪೊಲೀಸರ ಮೂಲಕ ಅರಿತ ಶಾಸಕರು ಮತ್ತು  ಜಿಲ್ಲಾ ಪೊಲೀಸ್ ವರಿಷ್ಠರು ಮುಂದಾಗಿ ಸಂಪೂರ್ಣ ಸಮಸ್ಯೆಯಿಂದ ಮುಕ್ತರಾಗುವಂತೆ ಮಾಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿ ಪೊಲೀಸ್ ಠಾಣೆಯಿದೆ. ಇದಕ್ಕೆ ಸಂಬಂಧಿಸಿ 25 ವಸತಿಗೃಹ ಸಹ ಇದೆ. ಸುಮಾರು 9 ವರ್ಷದ ಹಿಂದೆ ಇಲ್ಲಿ ಸುಸಜ್ಜಿತ ಕಟ್ಟಡವಾಗಿದೆ. ಆದರೆ ಠಾಣೆಗೆ ಮತು ವಸತಿಗೃಹಕ್ಕೆ ನೀರಿನ ತೊಂದರೆ ಎದುರಾಗಿತ್ತು. ಇದರಿಂದಾಗಿ ಎಸ್‌ಐ ಮತ್ತು ಅನೇಕ ಸಿಬ್ಬಂದಿಗಳು ಈ ಠಾಣೆಗೆ ವರ್ಗವಾಗಿ ಬರಲು ಹಿಂಜರಿಯುತ್ತಿದ್ದರು. ಎರಡು- ಮೂರು ದಿನಕ್ಕೊಮ್ಮೆ ನೀರು ಬರುವ ಸ್ಥಿತಿ ಕಳೆದೆರಡು ವರ್ಷಗಳಿಂದ ಇತ್ತು.
ಸ್ಥಳೀಯ ಗ್ರಾಪಂನವರು ಠಾಣೆ ಮತ್ತು ವಸತಿಗೃಹಕ್ಕೆ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಗ್ರಾಪಂನವರು ಬಿಡುವ ನೀರನ್ನೇ ಸಂಪ್ ಮೂಲಕ ಸಂಗ್ರಹಿಸಿಟ್ಟುಕೊಂಡು ಬಳಸುವ ಸ್ಥಿತಿ ಇತ್ತು. ಆದರೆ ಇದು ಅಲ್ಲಿರುವ 25 ವಸತಿಗೃಹ ಮತ್ತು ಠಾಣೆಗೆ ಯಾತಕ್ಕೂ ಸಾಲುತ್ತಿರಲಿಲ್ಲ. ಇದರಿಂದ ಬೇಸತ್ತಿದ್ದ ಪೊಲೀಸರು ಶಾಶ್ವತ ಪರಿಹಾರ ಕಂಡುಹಿಡಿಯಲು ನಿರ್ಧರಿಸಿದರು. ಇದಕ್ಕಾಗಿ ಸಬ್ ಇನ್ಸ್‌ಪೆಕ್ಟರ್ ಗುರುರಾಜ, ಎಎಸ್‌ಐ ಶಂಕರಮೂರ್ತಿ ಮತ್ತು ದಫೇದಾರ್ ವೆಂಕಟೇಶ್ ಈ ಮೂವರು ಸ್ಥಳೀಯ ಶಾಸಕ ಕಿಮ್ಮನೆ ರತ್ನಾಕರ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಕೊಳವೆ ಬಾವಿಯನ್ನು ಕೊರೆಯಿಸಿಕೊಡುವ ಆಶ್ವಾಸನೆಯನ್ನು ಸ್ಥಳದಲ್ಲಿಯೇ  ನೀಡಿದ್ದರು. ಆ ಪ್ರಕಾರ ಅದನ್ನು ಅತಿ ಶೀಘ್ರದಲ್ಲೇ ಕೊರೆಯಿಸಿಕೊಟ್ಟಿದ್ದರು. ವಿಶೇಷವೆಂದರೆ, ಈ ಕೊಳವೆಬಾವಿಯಲ್ಲಿ ಸರಾಗವಾಗಿ  ಐದೂವರೆ ಇಂಚಿನಷ್ಟು ನೀರು ಬಿದ್ದಿದ್ದು, ಇದು ಎಲ್ಲ ಸಿಬ್ಬಂದಿಗಳ ಸಂತೋಷಕ್ಕೆ ಕಾರಣವಾಗಿತ್ತು.
ಇದಾದ ಬಳಿಕ ಇನ್ನೊಂದು ಸಮಸ್ಯೆ ಎದುರಾಯಿತು. ಅದೇನೆಂದರೆ ಪಂಪ್ ಅಳವಡಿಸುವುದು. ಮಾಳೂರು ಗ್ರಾಪಂನ ರಾಜಕೀಯದಿಂದಾಗಿ  ಪಂಪ್ ಅಳವಡಿಸಲು ಎನ್‌ಒಸಿ ಕೊಡಲು ನಿರಾಕರಿಸಲಾಯಿತು. ಆಗ ಮತ್ತೆ ಚಿಂತೆಗೀಡಾದ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠರನ್ನು ಕಂಡು ಸಮಸ್ಯೆಯನ್ನು ಅರುಹಿದರು. ಪರಿಹಾರ ಹುಡುಕಿಕೊಡುವಂತೆ ಕೋರಿದರು. ತಮ್ಮ ಇಲಾಖೆಯ ಸಿಬ್ಬಂದಿಗಳು ನೀರಿಗಾಗಿ ಪಡುತ್ತಿರುವ ಕಷ್ಟ ಕೇಳಿ ಬೇಸರಗೊಂಡ ಎಸ್‌ಪಿ ಸ್ಥಳದಲ್ಲೇ ಮನವಿಗೆ ಸ್ಪಂದಿಸಿದರು. ಮೋಟಾರ್ ಹಾಗೂ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ತಾನೇ ಸ್ವತಃ ನೀಡುವುದಾಗಿ ಭರವಸೆ ನೀಡಿ ಆ ಪ್ರಕಾರ ಕೊಡುಗೆಯಾಗಿ ನೀಡಿದರು. ಇದರಿಂದಾಗಿ ಈಗ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿದಿದ್ದು, ಸಾಕಷ್ಟು ನೀರು ಲಭ್ಯವಾಗುತ್ತಿದೆ.
  ಈಗ  ಮಾಳೂರಿನ ಪೊಲೀಸ್ ಸಿಬ್ಬಂದಿಗಳು ನೆಮ್ಮದಿಯಿಂದಿರುವಂತಾಗಿದೆ. ಮುಂದೆ ಇಲ್ಲಿಗೆ ಬರಲು ಯಾವ ಪೊಲೀಸರೂ ಚಿಂತೆಪಡಬೇಕಾಗಿಲ್ಲ ಎಂದು ಖುಷಿಯಿಂದ ಹೇಳುತ್ತಾರೆ ಅಲ್ಲಿನ ಸಿಬ್ಬಂದಿಗಳು. ಜೊತೆಗೆ ಸ್ಥಳೀಯ ಗ್ರಾಪಂ ಸದಸ್ಯರಾದ ಉದಯ್ ಮತ್ತು ಉಮೇಶ್ ಅವರೂ ಸಹ ಈ ಕಾರ್ಯದಲ್ಲಿ ನೆರವಾಗಿದ್ದನ್ನು ಸ್ಮರಿಸುತ್ತಾರೆ.
ಒಟ್ಟಿನಲ್ಲಿ ಎಲ್ಲರೂ ಸೇರಿ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ಶಾಸಕರು ಮತ್ತು ಅಧಿಕಾರಿಗಳು ಮನಸ್ಸು ಮಾಡಿದರೆ ಎಂತಹ ಸಮಸ್ಯೆಯನ್ನಾದರೂ ಅತಿ ಶೀಘ್ರದಲ್ಲಿ ಬಗೆಹರಿಸಲು ಸಾಧ್ಯವಿದೆ. ಜನಪ್ರತಿನಿಧಿಗಳಲ್ಲಿ ಜನಪರ ಕಾಳಜಿ ಮತ್ತು ಅಧಿಕಾರಿಗಳಲ್ಲಿ ಸಹೃದಯತೆ, ಮಾನವೀಯತೆ ಇದ್ದರೆ ಜೊತೆಗೆ ಅವರೆಲ್ಲ ಹೇಗೆ ಸ್ಮರಣೀಯರಾಗುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ.
................................

Wednesday, 12 April 2017

 ಬಿಪಿಎಲ್ ಕಾರ್ಡಿಗೆ ಡಿಮಾಂಡಪ್ಪೋ ಡಿಮಾಂಡು 
   ಬಿಪಿಎಲ್‌ಗೆ 32 ಸಾವಿರ ಅರ್ಜಿಗಳು ಸಲ್ಲಿಕೆ * 
ಎಪಿಎಲ್ ಕಾರ್ಡಿಗೆ  ಕೇವಲ 2553 ಅರ್ಜಿ *



ಇತ್ತೀಚೆಗೆ ರಾಜ್ಯ ಸರ್ಕಾರ ಹೊಸದೊಂದು ಆದೇಶ ಹೊರಡಿಸಿ, ಬಿಪಿಎಲ್ ಕಾರ್ಡ್ ಪಡೆಯಲು 1.20 ಲಕ್ಷ ರೂ. ಆದಾಯ ಮಿತಿ ನಿಗದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆ ಹಾಗೂ ತಮ್ಮ ಇಲಾಖೆಯ ದತ್ತಾಂಶಗಳ ಜೋಡಣೆ ಕಾರ್ಯನವನ್ನು ಭರದಿಂದ ನಡೆಸುತ್ತಿದ್ದಾರೆ. ಇದರಿಂದ ಈಗಾಗಲೇ ಕಾರ್ಡ್ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. 
-- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ  ಜಿಲ್ಲಾ ಉಪ ನಿರ್ದೇಶಕ ಟಿ.ಕೆ.ಲಕ್ಷ್ಮೀನಾರಾಯಣ ರೆಡ್ಡಿ. 

ಶಿವಮೊಗ್ಗ,  : ಜಿಲ್ಲೆಯಲ್ಲಿ ಜನರ ಆದಾಯ ಕಡಿಮೆಯಾಗುತ್ತಿದೆಯೇ, ಅಥವಾ ಜನರು ಬಡವರಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಈಗ ಆಹಾರ  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ  ಅಧಿಕಾರಿಗಳಿಗೆ ಕಾಡತೊಡಗಿದೆ. ಕಾರಣವೇನೆಂದರೆ ಬಿಪಿಎಲ್ ಕಾರ್ಡು ಬೇಕೆಂದು 32 ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ಇದು ಅಧಿಕಾರಿಗಳ ತಲೆತಿನ್ನತೊಡಗಿದೆ. ಬಿಪಿಎಲ್ ಕಾರ್ಡು ಪಡೆಯಲಿಷ್ಟು ಡಿಮಾಂಡ್ ಏಕೆ ಎಂಬ ಪ್ರಶ್ನೆಯೂ ಎದುರಾಗಿದೆ.
ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಈ ಕಾರ್ಡು ಅನುಕೂಲವಾಗುತ್ತದೆ. ಜೊತೆಗ ಅನ್ನಭಾಗ್ಯದ ಲಾಭ, ಪಡಿತರದಲ್ಲಿ ಏರಿಕೆ ಎಲ್ಲವೂ ಲಭ್ಯವಾಗಲಿದೆ. ಇದರಿಂದಾಗಿ ಅರ್ಜಿ ಸಲ್ಲಿಸುವವರು ಹೆಚ್ಚತೊಡಗಿದ್ದಾರೆ. ಆದರೆ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡುವ ಜವಾಬ್ದಾರಿ ಎದುರಾಗಿದೆ. ಕಂಡಕಂಡವರೆಲ್ಲ ಬಿಪಿಎಲ್ ಕಾರ್ಡು ಪಡೆದರೆ ನೈಜ ಬಡವರು ಇದರಿಂದ ವಂಚನೆಗೊಳಗಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು  ಸೂಕ್ಷ್ಮವಾಗಿ ಪರಿಶೀಲಿಸತೊಡಗಿದ್ದಾರೆ.
ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಹಾಗೂ ಬಡತನ ರೇಖೆಗಿಂತ ಮೇಲ್ಪಟ್ಟ (ಎಪಿಎಲ್) ಪಡಿತರ ಚೀಟಿ ವಿತರಣೆಗೆ ನಿಗದಿಪಡಿಸಲಾಗಿದ್ದ ಮಾನದಂಡಗಳನ್ನು ರಾಜ್ಯ ಸರ್ಕಾರ ಸರಳೀಕರಣಗೊಳಿಸಿದೆ. ಈ ಪ್ರಕಾರ ಬಿ.ಪಿ.ಎಲ್. ಪಡಿತರ ಚೀಟಿ ಪಡೆಯಲು 1.20 ಲಕ್ಷ ರೂ. ಆದಾಯ ಮಿತಿ ನಿಗದಿಗೊಳಿಸಲಾಗಿದೆ. ಜೊತೆಗೆ ಫೆಬ್ರವರಿ ತಿಂಗಳಿನಿಂದ ಹೊಸದಾಗಿ ಪಡಿತರ ಚೀಟಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕೂಡ ಕಲ್ಪಿಸಿದೆ.
 ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ ದಿನದಿಂದ ಎ. 10 ರವರೆಗೆ ಬಿಪಿಎಲ್ ಕಾರ್ಡ್ ಕೋರಿ ಆನ್‌ಲೈನ್ ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ 32,141 ಆಗಿದೆ! ಆದರೆ ಎಪಿಎಲ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಕೇವಲ 2553 ಆಗಿದೆ ಎಂದು ಸ್ಥಳೀಯ ಆಹಾರ ಇಲಾಖೆ ತಿಳಿಸಿದೆ.  ಬಿಪಿಎಲ್ ಕಾರ್ಡ್‌ಗೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ಜಿಲ್ಲೆಯಲ್ಲಿ ಸ್ವೀಕತವಾಗಿರುವ 32,141 ಅರ್ಜಿಗಳಲ್ಲಿ ಶಿವಮೊಗ್ಗ ತಾಲೂಕಿನಲ್ಲಿ ಅತ್ಯದಿಕ 8544 ಅರ್ಜಿಗಳು ಸಲ್ಲಿಕೆಯಾಗಿವೆ. ಉಳಿದಂತೆ ಭದ್ರಾವತಿಯಲ್ಲಿ 6075, ಹೊಸನಗರದಲ್ಲಿ 2703, ಸಾಗರದಲ್ಲಿ 3635, ಶಿಕಾರಿಪುರದಲ್ಲಿ 5028, ಸೊರಬದಲ್ಲಿ 4606 ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ 1550 ಅರ್ಜಿಗಳು ಸಲ್ಲಿಕೆಯಾಗಿವೆ.
ಇದರಲ್ಲಿ 86 ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿದ್ದಾರೆ. 73 ಅರ್ಜಿಗಳಿಗೆ ಕಾರ್ಡ್ ನೀಡಲು ಅನುಮೋದನೆ ಕೂಡ ದೊರಕಿದ್ದು, 4 ಅರ್ಜಿಗಳು ತಿರಸ್ಕೃತವಾಗಿವೆ. 691 ಜನ ಸಲ್ಲಿಸಿದ್ದ ಅರ್ಜಿ ವಾಪಾಸ್ ಪಡೆದುಕೊಂಡಿದ್ದಾರೆ. 31,373 ಅರ್ಜಿಗಳ ವಿಲೇವಾರಿ ಬಾಕಿಯಿದೆ. ಬಿಪಿಎಲ್‌ಗೆ ಹೋಲಿಕೆ ಮಾಡಿದರೆ ಎಪಿಎಲ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಕಡಿಮೆಯಿದ್ದು, 2553 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ಶಿವಮೊಗ್ಗ ತಾಲೂಕಿನಲ್ಲಿಯೇ ಅತ್ಯಧಿಕ 1212 ಅರ್ಜಿಗಳು ಸಲ್ಲಿಕೆಯಾಗಿವೆ.
ಉಳಿದಂತೆ ಭದ್ರಾವತಿಯಲ್ಲಿ 444, ಹೊಸನಗರದಲ್ಲಿ 206, ಸಾಗರದಲ್ಲಿ 293, ಶಿಕಾರಿಪುರದಲ್ಲಿ 194, ಸೊರಬದಲ್ಲಿ 73 ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ 131 ಅರ್ಜಿಗಳು ಸಲ್ಲಿಕೆಯಾಗಿವೆ. 31 ಅರ್ಜಿಗಳು ತಿರಸ್ಕೃತಗೊಂಡಿದ್ದು, 156 ಅರ್ಜಿದಾರರು ವಾಪಾಸ್ ಪಡೆದುಕೊಂಡಿದ್ದಾರೆ. 2268 ಅರ್ಜಿಗಳು ವಿಲೇವಾರಿ ಬಾಕಿಯಿದೆ.  ಆಹಾರ ಇಲಾಖೆ ಸಚಿವ ಯು.ಟಿ.ಖಾದರ್ ಹಾಗೂ ಆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಬಿಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಅನರ್ಹರಿಗೆ ಕಾರ್ಡ್ ಲಭ್ಯವಾಗದಂತೆ ಮಾಡುವ ನಿಟ್ಟಿನಲ್ಲಿ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಹಿಂದೆ ನಿಗದಿ ಮಾಡಿದ್ದ ಮಾನದಂಡಗಳಲ್ಲಿ ಬದಲಾವಣೆ ತಂದಿದ್ದಾರೆ.


Saturday, 8 April 2017



  ’ಟ್ರಯಲ್ ಮಾನಿಟರಿಂಗ್’ ವ್ಯವಸ್ಥೆ ಜಾರಿ
 * ನ್ಯಾಯಾಲಯದಲ್ಲಿನ ಕೇಸುಗಳಲ್ಲಿ ಇಲಾಖೆಗೆ ಜಯ* 
 ಕೊಲೆ, ರೌಡಿಸಂಗೆ ಜೀವಾವಧಿ* ಎಸ್‌ಪಿಯ ಹೊಸ ಹೆಜ್ಜೆಯ ಯಶಸ್ಸು



ಶಿವಮೊಗ್ಗ, ಎ. 8: ಜಿಲ್ಲೆಯಲ್ಲಿ  ಕೊಲೆ, ಡಕಾಯಿತಿ ಸೇರಿದಂತೆ ಕೆಲವು ಗಂಭೀರ ಸ್ವರೂಪದ ಅಪರಾಧ  ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಈಗ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆಯಾಗುತ್ತಿದೆ. ಈ ಸುದ್ದಿಯಲ್ಲೇನು ವಿಶೇಷ ಎಂದು ಕೇಳಬಹುದು. ಪೊಲೀಸ್ ಇಲಾಖೆ ದಾಖಲಿಸಿದ ಬಹುತೇಕ ಪ್ರಕರಣಗಳೆಲ್ಲ ನ್ಯಾಯಾಲಯದಲ್ಲಿ ಪುರಾವೆ ಇಲ್ಲದೆ ಬಿದ್ದುಹೋಗುವುದು ಸಾಮಾನ್ಯ ಎಂಬ ಭಾವನೆ ಈವರೆಗೆ ಎಲ್ಲರಲ್ಲೂ ಇತ್ತು. ಏಕೆಂದರೆ, ಆರೋಪಿಗಳ ವಿರುದ್ದ ಯಾರೂ ಸಾಕ್ಷಿ ಹೇಳಲು ಬರುವುದಿಲ್ಲ. ಸಾಕ್ಷಿದಾರರಿಗೆ ಬೆದರಿಕೆ, ಅಂಜಿಕೆ, ಆಮಿಷ ಒಡ್ಡುವುದು ಸಾಮಾನ್ಯ ಎನ್ನುವುದು ಎಲ್ಲರಿಗೂ ತಿಳಿದೇ ಇದೆ.
ಆದರೆ ಜಿಲ್ಲೆಯ ಮಟ್ಟಿಗೆ, ನ್ಯಾಯಾಲಯದಲ್ಲಿರುವ ಪೊಲೀಸ್ ಪ್ರಕರಣಗಳಲ್ಲಿ ಈಗ ಶಿಕ್ಷೆಯಾಗುತ್ತಿವೆ. ಇದಕ್ಕೆ ಕಾರಣ  ಜಿಲ್ಲಾ ಪೊಲೀಸ್ ವರಿಷ್ಠರ ವಿಶೇಷ ಕಾಳಜಿ. ಅವರು ಜಾರಿಗೊಳಿಸಿರುವ ’ಟ್ರಯಲ್ ಮಾನಿಟರಿಂಗ್’ ವ್ಯವಸ್ಥೆ. ಇದು ಜಿಲ್ಲೆಯ ಪಾತಕಿಗಳ ವಲಯದಲ್ಲಿ ನಡುಕ ಹುಟ್ಟುವಂತೆ ಮಾಡಿದೆ. ನಾಗರಿಕ ವಲಯದಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ವಿಶ್ವಾಸ ಮೂಡುವಂತೆ ಮಾಡಿದೆ.
ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಪ್ರಮುಖ ಪ್ರಕರಣಗಳ ವಿಚಾರಣೆಯ ಬಗ್ಗೆ ನಿಗಾವಹಿಸಿ, ಸಾಕ್ಷಿಗಳಿಗೆ ಸೂಕ್ತ ಭದ್ರತೆ ಕಲ್ಪಿಸುವ ಹಾಗೂ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮೂಲಕ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ’ಟ್ರಯಲ್ ಮಾನಿಟರಿಂಗ್’ ಎಂಬ ವ್ಯವಸ್ಥೆ ಆರಂಭಿಸಿದ್ದಾರೆ. ಈ ವ್ಯವಸ್ಥೆ ಆರಂಭಿಸಿ ಹಲವು ದಿನಗಳೇ ಕಳೆದಿವೆ. ಕೆಲವು ಮಹತ್ವದ ಪ್ರಕರಣಗಳ ವಿಚಾರಣೆಯ ವೇಳೆ ಸ್ವತಃ ಎಸ್‌ಪಿ ನ್ಯಾಯಾಲಯಕ್ಕೆ ತೆರಳಿ ಸಾಕ್ಷಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಪ್ರಕರಣಗಳು ನ್ಯಾಯಾಲಯದಲ್ಲಿ ವಿಫಲವಾಗುತ್ತಿರುವ ಬಗ್ಗೆ ಚಿಂತನೆ ನಡೆಸಿದಾಗ ಸಾಕ್ಷಿಗಳ ಕೊರತೆ ಮತ್ತು ಅದಕ್ಕೆ ತಕ್ಕ ಪೂರ್ವತಯಾರಿ ಇಲ್ಲದಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಠಾಣೆಗಳಿಂದಲೂ ವಿಚಾರಣೆಯಲ್ಲಿರುವ ಪ್ರಕರಣಗಳ ಮಾಹಿತಿ ತರಿಸಿಕೊಂಡು ಸೂಕ್ತ ದಾಖಲಾತಿ ಪಡೆದು ಅಧ್ಯಯನ ಮಾಡಿದೆ. ಸಾಕ್ಷಿಗಳು  ಮುಂದೆ ಬರಬೇಕೆನ್ನುವ ದೃಷ್ಟಿಯಿಂದ ಅವರಲ್ಲಿಯೂ ಮಾತನಾಡಿ, ಹೆದರದೆ ಸಾಕ್ಷಿ ನುಡಿಯಲು ಪ್ರೇರೇಪಣೆ ನೀಡಿದ್ದರಿಂದ ಮತ್ತು ದಾಖಲೆ ಹಾಗೂ ಮಾಹಿತಿಯನ್ನು ಸಕಾಲದಲ್ಲಿ ಸರ್ಕಾರಿ ಅಭಿಯೋಜಕರಿಗೆ ನೀಡಿದ್ದರಿಂದ ಪ್ರಕರಣ ಗೆಲ್ಲಲು ಸಾಧ್ಯವಾಗುತ್ತಿದೆ. ಪೊಲೀಸ್ ಕೇಸುಗಳು ಗೆಲ್ಲುವುದು ನೂರಕ್ಕೆ ಒಂದು ಎನ್ನುವ ಅಪವಾದವನ್ನು ತೊಡೆದು ಹಾಕಲು ಹೆಜ್ಜೆ ಇಡಲಾಗಿದೆ,  ಯಶಸ್ವಿಯಾಗುತ್ತಿದ್ದೇವೆ.
-ಎಸ್‌ಪಿ ಅಭಿನವ್ ಖರೆ

 ಅಪಾಯಕಾರಿ ಕ್ರಿಮಿನಲ್ಸ್‌ಗಳು, ಕುಖ್ಯಾತ ಪಾತಕಿಗಳು, ವಂಚಕರು ನಡೆಸುವ ಕೃತ್ಯಗಳನ್ನು ಪೊಲೀಸರು ಬಯಲಿಗೆಳೆದು ಅವರನ್ನು ಬಂಧಿಸುತ್ತಾರೆ. ಸೂಕ್ತ ಸಾಕ್ಷ್ಯಾಧಾರ ಕಲೆ ಹಾಕಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಕೂಡ ಸಲ್ಲಿಸುತ್ತಾರೆ. ಆದರೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯಗಳಲ್ಲಿ ಆರೋಪಿಗಳ ವಿರುದ್ದದ ಆರೋಪ ಸಾಬೀತಾಗುವುದಿಲ್ಲ.
ಏಕೆಂದರೆ, ಇಲ್ಲಿ ಪ್ರಕರಣಗಳಲ್ಲಿ ಮುಖ್ಯ ಸಾಕ್ಷಿದಾರರಾಗಿದ್ದವರೇ ನಾನಾ ಕಾರಣಗಳಿಂದ ವಿಚಾರಣೆಯ ವೇಳೆ ಉಲ್ಟಾ ಸಾಕ್ಷಿ ಹೇಳಿ ಕೇಸನ್ನು ವಿಫಲಗೊಳಿಸುತ್ತಾರೆ. ಮತ್ತೆ ಕೆಲವೊಮ್ಮೆ,ಪಾತಕಿಗಳು ತಮ್ಮ ವಿರುದ್ದ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳದಂತೆ ಸಾಕ್ಷಿದಾರರಿಗೆ ಬೆದರಿಕೆ ಹಾಕುವ, ಒತ್ತಡ ಸೃಷ್ಟಿಸುವುದರ ಜೊತೆಗೆ ನಾನಾ ರೀತಿಯ ತಂತ್ರಗಳಿಗೂ ಮೊರೆ ಹೋಗುತ್ತಾರೆ.
ಇದರಿಂದ ಕೆಲವು ಗುರುತರ, ಮಹತ್ತರ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದವರು ಶಿಕ್ಷೆಯಿಂದ ಬಚಾವಾಗುತ್ತಾರೆ. ಹೊರಬಂದು ಮತ್ತದೇ ಕ್ರಿಮಿನಲ್ ಮೂಲಕ ಬಾಲಬಿಚ್ಚುತ್ತಾರೆ. ಅಲ್ಲಿಗೆ ಅವರಿಗೆ ನ್ಯಾಯಾಲಯದಲ್ಲಿ ಹೇಗೆ ಸಾಕ್ಷಿಯನ್ನು ಬುಡಮೇಲೆ ಮಾಡಬೇಕೆಂಬ ವಿದ್ಯೆ ಕರಗತವಾಗುತ್ತದೆ. ಈ ರೀತಿಯ ಪ್ರಕ್ರಿಯೆಗಳು ಸಮಾಜದ ವ್ಯವಸ್ಥೆಯ ಬಗ್ಗೆ ಭ್ರಮನಿರಸನ ಉಂಟು ಮಾಡುತ್ತವೆ. ಮತ್ತೊಂದೆಡೆ, ಕೆಲವು ಕ್ರಿಮಿನಲ್ಸ್‌ಗಳಿಗೆ ಕಾನೂನಿನ ಭಯ ಎನ್ನುವುದೇ ಇಲ್ಲ ಎನ್ನುವ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ಸಮಾಜಬಾಹಿರ ಕೃತ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಪರೋಕ್ಷ ಪ್ರೋತ್ಸಾಹ ನೀಡಿದಂತಾಗುತ್ತದೆ.
ಟ್ರಯಲ್ ಮಾನಿಟರಿಂಗ್’ ವ್ಯವಸ್ಥೆ ಎಂದರೇನು?:
 ಕೊಲೆ, ಡಕಾಯಿತಿ, ರೌಡಿಸಂ ಸೇರಿದಂತೆ ಪ್ರಮುಖ ಪ್ರಕರಣಗಳ ಬಗ್ಗೆ ನ್ಯಾಯಾಲಯಗಳಲ್ಲಿ ನಡೆಯುವ ಪ್ರಕರಣಗಳ ವಿಚಾರಣೆಯ ಬಗ್ಗೆ ನಿಗಾ ವಹಿಸುವ ಟ್ರಯಲ್ ಮಾನಿಟರಿಂಗ್’ ವ್ಯವಸ್ಥೆಯನ್ನು ಖರೆ ಆರಂಭಿಸಿದ್ದಾರೆ.  ಇದರಲ್ಲಿ ಆಯಾ ಪೊಲೀಸ್ ಠಾಣೆಗಳ ಸಬ್ ಇನ್ಸ್‌ಪೆಕ್ಟರ್ ತಮ್ಮ ಠಾಣಾ ವ್ಯಾಪ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಪ್ರಮುಖ ಪ್ರಕರಣಗಳ ವಿಚಾರಣೆಯ ಪಟ್ಟಿಯನ್ನು ಸಿದ್ದಪಡಿಸಿಕೊಂಡು, ಆ ಪ್ರಕರಣಗಳ ವಿಚಾರಣೆ ನಡೆಯುವ ದಿನದಂದು ನ್ಯಾಯಾಲಯಕ್ಕೆ ತೆರಳಬೇಕು. ಪ್ರಕರಣಗಳಲ್ಲಿ ಸಾಕ್ಷ್ಯಗಳಾಗಿರುವವರು ನ್ಯಾಯಾಲಯಕ್ಕೆ ತಪ್ಪದೇ ಬರುವಂತೆ ಮಾಡಬೇಕು. ಭೇಟಿಯಾಗಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಆರೋಪಿಗಳಿಂದ ಏನಾದರೂ ಕಿರುಕುಳವಾಗುತ್ತಿದೆಯೇ ಎನ್ನುವುದರ ಮಾಹಿತಿ ಕಲೆ ಹಾಕಬೇಕು. ಸೂಕ್ತ ಭದ್ರತೆ ನೀಡಬೇಕು.
  ಎಸ್‌ಪಿ ಠಾಣಾಧಿಕಾರಿಗಳಿಗೆ ಈ ಕಟ್ಟುನಿಟ್ಟಿನ ಸೂಚನೆ ರವಾನಿಸಿ ಬಿಟ್ಟಿದ್ದಾರೆ. ಇದರಿಂದಾಗಿ ಕೆಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಅನುಗುಣವಾಗಿಯೇ ವರ್ತಿಸುತ್ತಿದ್ದ ಕೆಲವು ಪೊಲೀಸ್ ಅಧಿಕಾರಿಗಳಿಗೆ ತೊಂದರೆ ಆಗಿದೆ. ಠಾಣಾಧಿಕಾರಿಗಳು ಪ್ರಮುಖ ಪ್ರಕರಣಗಳ ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿದ್ದು ಸಾಕ್ಷಿದಾರರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಇದು ಎಲ್ಲಿಯವರೆಗೆ ತಲುಪಿದೆ ಎಂದರೆ ಸ್ವತಃ ಎಸ್‌ಪಿ ಅವರೇ ಕೆಲವು ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಬಂದು ಕುಳಿತಿರುತ್ತಾರೆ. ಇದರಿಂದಾಗಿ ಅಧಿಕಾರಿಗಳು ಈಗ ಕೈ ಕೈ ಹಿಸುಕಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಎಸ್‌ಪಿ ಖರೆ ನ್ಯಾಯಾಲಯಕ್ಕೆ ತೆರಳಿ ಸಾಕ್ಷಿದಾರರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ವಿವಿಧ ಪ್ರಕರಣಗಳ ಬಗ್ಗೆ ವಾದ ಮಂಡಿಸುವ ಸರ್ಕಾರಿ ಅಭಿಯೋಜಕರಿಗೆ ಸಕಾಲದಲ್ಲಿ ಸೂಕ್ತ ಮಾಹಿತಿಯನ್ನು ಸಂಬಂಧಿಸಿದ ಠಾಣೆಯಿಂದ  ದೊರಕುವ ವ್ಯವಸ್ಥೆಯನ್ನು ಮಾಡಿದ್ದಾರೆ. ಇದರಿಂದಾಗಿ ಎಸ್‌ಐ, ಸಿಪಿಐ ಮತ್ತು ಡಿಎಸ್‌ಪಿ  ಪ್ರತಿಯೊಂದು ಕೇಸನ್ನೂ ಸೂಕ್ಷ್ಮವಾಗಿ ಅವಲೋಕನ ಮಾಡುವಂತಾಗಿದೆ. ಕೇಸ್ ಸ್ಟಡಿ ಇಲ್ಲದೆ ನ್ಯಾಯಾಲಯಕ್ಕೆ ಹೋಗುವಂತಿಲ್ಲ. ಜೊತೆಗೆ ಎಸ್‌ಪಿ ಕೇಳಿದ ಮಾಹಿತಿ ಮತ್ತು ದಾಖಲೆಯನ್ನು ಒದಗಿಸಲೇಬೇಕಿದೆ.
 ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯಾದವರು ಕೇವಲ ಕಾನೂನು, ಸುವ್ಯವಸ್ಥೆ, ದಾಖಲೆ ಪತ್ರಕ್ಕೆ ಸಹಿ ಹಾಕುವುದು, ಬಂದೋಬಸ್ತ್, ಮೀಟಿಂಗ್ ಮಾಡುತ್ತ ಕುಳಿತುಕೊಳ್ಳದೆ ತನ್ನ ವ್ಯಾಪ್ತಿಯ ಇತರ ಕರ್ತವ್ಯಗಳ ಬಗ್ಗೆ ಗಮನಹರಿಸಿದರೆ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿದೆ ಎನ್ನುವುದಕ್ಕೆ ಇದು ಉದಾಹರಣೆ. ಜೊತೆಗೆ ಕಿರಿಯ ಅಧಿಕಾರಿಗಳಿಗೆ ಇದರ ಬಗ್ಗೆ   ಸೂಚನೆ ಕೊಡುತ್ತ ಅವರನ್ನೂ ಹುರಿದುಂಬಿಸುತ್ತ ಸಾಗಿದರೆ ಸಮಾಜಕ್ಕೆ ಉತ್ತಮ ಸಂದೇಶ ಕೊಡಬಹುದೆನ್ನುವುದಕ್ಕೂ ಇದು ನಿದರ್ಶನವಾಗಿದೆ.  


ಈ ಹೊಸ ವ್ಯವಸ್ಥೆಯಿಂದಾಗಿ ಜಿಲ್ಲೆಯಲ್ಲಿ ಅತಿ ಪ್ರಮುಖವಾದ ಎರಡು ಪ್ರಕರಣಗಳಲ್ಲಿ (ಒಂದು ತಿಂಗಳೊಳಗೆಯೇ) ಕುಖ್ಯಾತರಿಗೆ, ರೌಡಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ. 
ಪ್ರಕರಣ 1: ಶಿವಮೊಗ್ಗದ ಮಟನ್‌ಸ್ಟಾಲ್ ಮಾಲಕರನ್ನು ವ್ಯವಹಾರದ ದ್ವೇಷದ ಹಿನ್ನೆಲೆಯಲ್ಲಿ ಕೊಚ್ಚಿ ಹಾಕಿದ್ದ ಪ್ರಕರಣದಲ್ಲಿ  ರೌಡಿ ಸಹಿತ ಆರೆಂಟು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಜಿಲ್ಲಾ ನ್ಯಾಯಾಲಯ ಘೋಷಿಸಿದೆ.    
ಪ್ರಕರಣ 2:  ಸಾಗರದ ಬಿಎಚ್ ರಸ್ತೆಯ ಶರಾವತಿ ಕೋಲ್ಡ್ ಡ್ರಿಂಕ್ಸ್ ಬಳಿ 2014ರ ಅಕ್ಟೊಬರ್ 20ರಂದು ನಡೆದಿದ್ದ ಮಲಬಾರಿ ಬಾಬು ಎನ್ನುವವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಸಾಗರದ 5ನೆಯ ಹೆಚ್ಚುವರಿ ನ್ಯಾಯಾಲಯ ಎ. 6ರಂದು ಘೋಷಿಸಿದೆ.


---------------------------------

Wednesday, 5 April 2017

ಜಿಲ್ಲೆಯಲ್ಲಿ 194 ಮದ್ಯದಂಗಡಿಗಳ ಸ್ಥಳಾಂತರ ಅನಿವಾರ್ಯ
  ಸುಪ್ರೀಂಕೋರ್ಟ್ ಆದೇಶದ  ಪರಿಣಾಮ

* ಒಟ್ಟಾರೆ 228 ಮದ್ಯ ಮಾರಾಟ ಕೇಂದ್ರಗಳಿವೆ.
್ಲ *ಶಿವಮೊಗ್ಗ ತಾಲೂಕಿನಲ್ಲಿ 92, ಭದ್ರಾವತಿಯಲ್ಲಿ 48, ಶಿಕಾರಿಪುರ 19 ಅಂಗಡಿಗಳಿವೆ.
*, ಸಾಗರ 24, ಸೊರಬ 14, ತೀರ್ಥಹಳ್ಳಿಯಲ್ಲಿ 18 ಹಾಗೂ ಹೊಸನಗರ ತಾಲೂಕಿನಲ್ಲಿ 13 ಮದ್ಯ ಮಾರಾಟ ಅಂಗಡಿಗಲಿವೆ. 
* ಇದರಲ್ಲಿ 111 ವೈನ್‌ಶಾಪ್, 7 ಕ್ಲಬ್, 7 ಹೋಟೆಲ್-ಲಾಡ್ಜಿಂಗ್ ಸೇರಿವೆ.
* 58 ಬಾರ್ ಅಂಡ್ ರೆಸ್ಟೋರೆಂಟ್, 9 ಎಂಎಸ್‌ಐಎಲ್ ಹಾಗೂ ಇತರೆ 2 ಮದ್ಯ ಮಾರಾಟ ಕೇಂದ್ರಗಳು ಸ್ಥಳಾಂತರಗೊಳ್ಳಲಿವೆ.

ಶಿವಮೊಗ್ಗ  ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ 500 ಮೀಟರ್ ವ್ಯಾಪ್ತಿಯೊಳಗಿರುವ ಎಲ್ಲ ಮದ್ಯದಂಗಡಿಗಳನ್ನು ಮುಚ್ಚುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ  ಜಿಲ್ಲೆಯಲ್ಲಿ 194 ಮದ್ಯದಂಗಡಿಗಳನ್ನು ಸ್ಥಳಾಂತರ ಮಾಡುವುದು ಅನಿವಾರ್ಯವಾಗಿದೆ. ಇದು ಮದ್ಯ ವ್ಯಾಪಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮದ್ಯ ಮಾರಾಟ ಕ್ಷೇತ್ರದಲ್ಲಿ ಭಾರೀ ದೊಡ್ಡ ಗೊಂದಲವೇ ಸೃಷ್ಟಿಯಾಗುವಂತೆ ಮಾಡಿದೆ.
ಜಿಲ್ಲೆಯಲ್ಲಿ ಒಟ್ಟಾರೆ 228 ಮದ್ಯ ಮಾರಾಟ ಕೇಂದ್ರಗಳಿವೆ. ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮದಿಂದ 194 ಕೇಂದ್ರಗಳನ್ನು ಸ್ಥಳಾಂತರ ಮಾಡಲೇಬೇಕಾಗಿದೆ. ಸುಪ್ರೀಂ ತೀರ್ಪಿನಂತೆ ಅಬಕಾರಿ ಇಲಾಖೆಯು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳ ತೆರವಿಗೆ ಕ್ರಮಕೈಗೊಳ್ಳಲು ಮುಂದಾಗಿದೆ. ಈ ನಡುವೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ 20 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯಿರುವ ಪಟ್ಟಣ ಪ್ರದೇಶಗಳಲ್ಲಿ 500 ಮೀಟರ್‌ಗೆ ಬದಲಾಗಿ 220 ಮೀಟರ್ ಪರಿಮಿತಿಯನ್ನು ನಿಗದಿಪಡಿಸಿದೆ. ಈ ನಿಯಮ ಜಿಲ್ಲೆಗೆ ಅನ್ವಯವಾಗದಿರುವುದರಿಂದ ಮದ್ಯದಂಗಡಿಗಳಿಗೂ ರಿಯಾಯ್ತಿ ಲಭಿಸದಂತಾಗಿದೆ.
 ಈ ಮೊದಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದ ವೇಳೆಯೇ ಜಿಲ್ಲಾ ಅಬಕಾರಿ ಇಲಾಖೆಯು ಜಿಲ್ಲೆಯಲ್ಲಿ ಎಲ್ಲೆಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಹಾದು ಹೋಗಿವೆ ಎಂಬುವುದರ ಮಾಹಿತಿಯನ್ನು ಪಿಡಬ್ಲ್ಯೂಡಿ ಇಲಾಖೆಯಿಂದ ಪಡೆದುಕೊಂಡಿತ್ತು. ಈ ಮಾಹಿತಿಯ ಅನುಸಾರ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಅಂಗಡಿಗಳ ಸರ್ವೇ ಕಾರ್ಯ ನಡೆಸಿತ್ತು. ತೆರವುಗೊಳಿಸಬೇಕಾದ ಮದ್ಯದಂಗಡಿಗಳ ಪಟ್ಟಿ ಸಿದ್ದಪಡಿಸಿ ನೋಟೀಸ್ ಕೂಡ ನೀಡಿತ್ತು.
ಈ ನಡುವೆ ರಾಜ್ಯ ಸರ್ಕಾರವು ಸುತ್ತೊಲೆಯೊಂದನ್ನು ಹೊರಡಿಸಿ, ವೈನ್‌ಶಾಪ್ ಹಾಗೂ ಎಂಎಸ್‌ಐಎಲ್ ಮಾರಾಟ ಮಳಿಗೆಗಳನ್ನು ಮಾತ್ರ ಸ್ಥಳಾಂತರಿಸಬೇಕು ಎಂದು ಬೇರ‌್ಯಾವುದೇ ಸನ್ನದ್ದು ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬಾರದು ಎಂದು ತಿಳಿಸಿತ್ತು. ಇದು ಅಬಕಾರಿ ಇಲಾಖೆ ಅಧಿಕಾರಿಗಳಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ಮತ್ತೊಂದೆಡೆ ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್, ಲಾಡ್ಜ್ - ಬೋರ್ಡಿಂಗ್‌ಗಳ ಮಾಲೀಕರು ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಆದರೆ ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್ ಹೊರಡಿಸಿರುವ ಹೊಸ ಆದೇಶವು ಎಲ್ಲ ಮದ್ಯ ಮಾರಾಟ ಸನ್ನದ್ದುಗಳನ್ನು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ನಿಗದಿತ ಅಂತರದಿಂದ ತೆರವುಗೊಳಿಸಬೇಕಾಗಿರುವುದು ಅನಿವಾರ್ಯವಾಗಿದೆ.
ಒಟ್ಟಾರೆ ಸುಪ್ರೀಂ ಕೋರ್ಟ್ ಆದೇಶ ಜಿಲ್ಲೆಯ ಮದ್ಯ ಮಾರಾಟ ವಲಯದಲ್ಲಿ ತಲ್ಲಣ ಉಂಟುಮಾಡಿದೆ. ಬೇರೆಡೆ ಅಂಗಡಿಗಳ ಸ್ಥಳಾಂತರ ಮಾಡಲೇಬೇಕಾದ ಮದ್ಯದಂಗಡಿಗಳ ಮಾಲೀಕರು ಪರಿತಪಿಸುವಂತಾಗಿದೆ. ಅಂಗಡಿ ಸ್ಥಾಪನೆಗೆ ಸೂಕ್ತ ಸ್ಥಳಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
-------------------------------------

Tuesday, 4 April 2017

ಶಿವಮೊಗ್ಗದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ 
 ಬಿಸಿಲ ಧಗೆಗೆ ನಾಗರಿಕರು ತತ್ತರ* ಜೂಸ್ ಅಂಗಡಿಗಳಿಗೆ ಡಿಮಾಂಡ್ 


ಒಂದೆಡೆ ಬಿಸಿಲ ಬೇಗೆ ಏರುತ್ತಿದ್ದಂತೆ ಮತ್ತೊಂದೆಡೆ ತಂಪು ಪಾನೀಯ, ಹಣ್ಣುಗಳಿಗೆ ಅಪಾರ ಡಿಮಾಂಡ್ ಕಂಡುಬಂದಿದೆ. ತಂಪು ಪಾನೀಯ - ಐಸ್ ಕ್ರೀಂ ಮಾರಾಟ ಸ್ಥಳಗಳು ಜನರಿಂದ ತುಂಬಿ ತುಳುಕುತ್ತಿವೆ. ಕಲ್ಲಂಗಡಿ, ಖರಬೂಜದಂತಹ ಹಣ್ಣುಗಳಿಗೆ ನಾಗರಿಕ ವಲಯದಲ್ಲಿ ಭಾರೀ ಬೇಡಿಕೆ ಕಂಡುಬರುತ್ತಿದೆ. ಕಬ್ಬಿನಹಾಲು ಅಂಗಡಿಗಳಿಗೆ ಭರಪೂರ ವ್ಯಾಪಾರ ನಡೆಯುತ್ತಿದ್ದು, ಎಲ್ಲ ವೃತ್ತ ಮತ್ತು ರಸ್ತೆಗಳಂಚಿನಲ್ಲಿ ಹೆಚ್ಚೆಚ್ಚು ಇಂತಹ ಅಂಗಡಿ ಕಂಡುಬರಲಾಂಭಿಸಿದೆ. ಕೆಲವು ಸಣ್ಣ-ಪುಟ್ಟ ಹೊಟೆಲ್‌ಗಳಲ್ಲಿ ಮಜ್ಜಿಗೆ- ಶರಬತ್ತನ್ನು ಮಾರಾಟ ಮಾಡುತ್ತಿದ್ದು. ಇವು ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಸಿಗುತ್ತಿರುವುದರಿಂದ ಇವುಗಳಿಗೆ ಮಾರುಹೋಗುತ್ತಿದ್ದಾರೆ. ಇನ್ನು ಎಳನೀರು ದರವೂ ಬೇಸಿಗೆಯ ಬಿಸಿಲಿನಂತೆಯೇ ಏರಲಾರಂಭಿಸಿದೆ. ಆದ್ದರಿಂದ ಇದಕ್ಕೆ ಮೊರೆ ಹೋಗುವವರ ಸಂಖ್ಯೆ ಇಳಿಮುಖವಾಗುತ್ತಿದೆ.

ಶಿವಮೊಗ್ಗ, : ಶಿವಮೊಗ್ಗ ನಗರದಲ್ಲಿ ತಾಪಮಾನದ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ದಾಖಲಾಗುತ್ತಿರುವ ಗರಿಷ್ಠ ಉಷ್ಣಾಂಶದ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಬಿಸಿಲ ಧಗೆಗೆ ನಾಗರಿಕರು ತತ್ತರಿಸಿದ್ದಾರೆ. ಬಿಸಿಲಿನಲ್ಲಿ ತಿರುಗಾಡಲಾಗದೆ ಮನೆಯಲ್ಲೇ ಕುಳಿತುಕೊಳ್ಳುವ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಕಳೆದ ಶನಿವಾರವೇ ನಗರದಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶದ ಪ್ರಮಾಣ 41 ಡಿಗ್ರಿ ಸೆಲ್ಸಿಯಸ್ ಆಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ದಾಖಲಾದ ಅತ್ಯಧಿಕ ಉಷ್ಣಾಂಶ ಇದಾಗಿದೆ ಎಂದು ಹವಮಾನ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಸದ್ಯದ ಸ್ಥಿತಿ ಗಮನಿಸಿದರೆ ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ತಾಪಮಾನದ ಪ್ರಮಾಣದಲ್ಲಿ ಮತ್ತಷ್ಟು ಅಧಿಕವಾಗುವ ಸಾಧ್ಯತೆಯಿದ್ದು, ಇದು ನಾಗರಿಕರ ನಿದ್ದೆಗೆಡಿಸಿದೆ. ಮಲೆನಾಡ ನಗರಿಯಲ್ಲಿನ ಬೇಸಿಗೆ ವಾತಾವರಣ ಬಯಲು ಸೀಮೆಯ ಅನುಭವ ಉಂಟು ಮಾಡುತ್ತಿದೆ.
ಬೇಸಿಗೆಯ ಅವಧಿಯಲ್ಲಿಯೂ ತಣ್ಣನೆಯ ವಾತಾವರಣಕ್ಕೆ ಹೆಸರುವಾಸಿಯಾಗಿದ್ದ ನಗರದಲ್ಲೀಗ ಎಲ್ಲೆಲ್ಲೂ ಬಿಸಿಗಾಳಿ ಬೀಸುತ್ತಿರುವುದು ಕಂಡುಬರುತ್ತಿದೆ. ನಾಗರಿಕರು ತಣ್ಣನೆಯ ಸ್ಥಳಗಳನ್ನರಿಸಿ ಹೋಗುವಂತಾಗಿದೆ. ಮಧ್ಯಾಹ್ನದ ವೇಳೆಯಲ್ಲಿ ರಸ್ತೆಗಳಲ್ಲಿ ತಿರುಗಾಡಲಾಗದ ಮಟ್ಟಕ್ಕೆ ರಸ್ತೆಗಳು ಬಿಸಿಲಿಗೆ ಕಾದಿರುತ್ತವೆ.
 ಬೆಳಿಗ್ಗೆ 10 ಗಂಟೆಯ ವೇಳೆಗಾಗಲೇ  ಮನೆ ಬಿಟ್ಟು ಹೊರಗಡೆ ಬರಲು ಆಗದ ಮಟ್ಟಕ್ಕೆ ಬಿಸಿಲು ಬೀಳುತ್ತಿದೆ. ಮಧ್ಯಾಹ್ನದ ವೇಳೆಯಂತೂ ನಗರದ ಪ್ರಮುಖ ರಸ್ತೆಗಳೆಲ್ಲ ಕಾದ ಕಾವಲಿಗಳಾಗಿರುತ್ತವೆ. ಜನ - ವಾಹನ ಸಂಚಾರ ದಟ್ಟಣೆ ಕಡಿಮೆಯಿರುವುದು ಕಂಡುಬರುತ್ತಿದೆ. ಫ್ಯಾನ್, ಎಸಿ, ಏರ್ ಕೂಲರ್ ಇಲ್ಲದೆ ಮನೆ - ಕಚೇರಿಯೊಳಗಿರಲು ಅಸಾಧ್ಯವಾಗಿದೆ. ಈ ವೇಳೆ ಜನಸಂಚಾರವೂ ಕಡಿಮೆ ಇರುತ್ತದೆ. ಸಂಜೆ 4:30 ಅಥವಾ 5ರ ನಂತರವೇ ಹೆಚ್ಚಿನ ಜನ ಪೇಟೆಯಲ್ಲಿ ಕಂಡುಬರುವಂತಾಗಿದೆ.
ಕಾಡುಗಳ ಮತ್ತು ನಗರದಲ್ಲಿ ಗಿಡಮರಗಳ ಕಣ್ಮರೆಯಿಂದ ಬಿಸಿಲಿನ ತಾಪಮಾನ ಒಂದೇ ಸಮನೆ ಏರುತ್ತಿದೆ. ಹೆಚ್ಚುತ್ತಿರುವ ಕಾಂಕ್ರೀಟ್ ರಸ್ತೆ ಮತ್ತು ಕಟ್ಟಡಗಳಿಂದ ಬಿಸಿಲಿನ ಶಾಖ ಪ್ರಖರವಾಗಿ ಜನರ ಮೇಲೆ ಪರಿಣಾಮ ಬೀರಲಾರಂಭಿಸಿದೆ. ತಂಪುಗಾಳಿ ಬೀಸಬೇಕಾಗಿದ್ದ ಮಲೆನಾಡಿನಲ್ಲಿ ಬಿಸಿಗಾಳಿ ಎದುರಾಗಿದೆ, ನಗರದಲ್ಲಂತೂ ಈ ವರ್ಷದ ಬೇಸಿಗೆ ಕಳೆಯುವುದು ಹೇಗೆಂಬ ಮಾತು ಸಾಧಾರಣವಾಗಿ ಕೇಳಿಬರಲಾಂಭಿಸಿದೆ. ಸಂಜೆಯಾಯಿತೆಂದರೆ ಎಲ್ಲ ಮನೆಯವರು ಮನೆಯ ಹೊರಾಂಗಣದಲ್ಲಿ ತಂಪುಗಾಲಿ ಅರಸುತ್ತ ಕುಳಿತುಕೊಳ್ಳುವಂತಾಗಿದೆ.
ಮೇಲಂತಸ್ತಿನ ಮನೆಯಲ್ಲಿ ವಾಸಿಸುತ್ತಿರುವವರ ಪಾಡು ಯಾರಿಗೂ ಬೇಡವಾಗಿದೆ. ಮನೆಗಳ ಮೇಲೆ ಶೀಟ್‌ಗಳನ್ನು ಹೊದಿಸಿ ಆದಷ್ಟು ತಂಪು ಮಾಡಿಕೊಳ್ಳುವ ಕೆಲಸ ಭರದಿಂದ ಸಾಗಿದೆ. ಹೇಗಾದರೂ ಸೆಕೆಯಿಂದ ಪಾರಾದರೆ ಸಾಕೆಂಬ ಮನೋಭಾವ ಜನರಲ್ಲಿದೆ.  
ಕಳೆದೊಂದು ದಶಕದ ಅವಧಿಯಲ್ಲಿ ಅಭಿವೃದ್ದಿಯ ನೆಪದಲ್ಲಿ ನಗರದಲ್ಲಿ ಸಾವಿರಾರು ಮರಗಳ ಮಾರಣ ಹೋಮ ನಡೆಸಲಾಗಿದೆ. ಭಾರೀ ಪ್ರಮಾಣದ ಕೆರೆಕಟ್ಟೆಗಳು ಕಣ್ಮರೆಯಾಗಿವೆ. ಪರಿಸರ ಸಂರಕ್ಷಣೆಯತ್ತ ಜನರಿಗೆ ಕಾಳಜಿಇಲ್ಲವಾಗಿದೆ. ಇದೆಲ್ಲದರ ಪರಿಣಾಮದಿಂದ ನಗರದ ಪರಿಸರದಲ್ಲಿ ಭಾರೀ ಪ್ರಮಾಣದ ವೈಪರೀತ್ಯ ಕಂಡುಬರುತ್ತಿದೆ. ತಾಪಮಾನ ಹೆಚ್ಚಳಕ್ಕೆ ಇದು ಕಾರಣವಾಗಿದೆ ಎಂಬ ವಿಶ್ಲೇಷಣೆ ನಡೆಯುತ್ತಲೇ ಇದೆ.

----------------------------------------