Tuesday, 31 May 2016

ಕುವೆಂಪು ಮಾನಸಪುತ್ರ ಇನ್ನಿಲ್ಲ



 ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಥಗರ್ಭಿತ ಕೊಡುಗೆ ನೀಡಿದ ನಾಡೋಜ ದೇ. ಜವರೇಗೌಡ ನಮ್ಮನ್ನಗಲಿದ್ದಾರೆ. ಕುವೆಂಪು ಅವರಿಂದ ಮಾನಸ ಪುತ್ರ ಎಂದೇ ಕರೆಸಿಕೊಂಡಿದ್ದ ದೇಜಗೌ, ನಾಡು ಕಂಡ ಶ್ರೇಷ್ಠ ಸಾಹಿತಿ. ಇವರ ಅಂತ್ಯದ ಮೂಲಕ ಕುವೆಂಪು ಶಿಷ್ಯರ ಕೊಂಡಿಯೊಂದು ಕಳಚಿದಂತಾಗಿದೆ. 98ರ ಹರದಯದಲ್ಲಿ ನಿನ್ನೆ ಸಾವನ್ನಪ್ಪಿದ ದೇಜಗೌ ಅವರಿಗೊಂದು ನುಡಿನಮನ.


  ದೇ. ಜವರೇಗೌಡರು ಕನ್ನಡದ ಆಧುನಿಕ ಸಂಸ್ಕೃತಿಯನ್ನು ಕಟ್ಟಿದವರಲ್ಲಿ ಒಬ್ಬರು. ಕೇವಲ ಸಾಹಿತಿಯಾಗಿ ಉಳಿಯದೆ ಭಾಷೆ, ಸಂಸ್ಕೃತಿಯ ಉಳಿವಿಗೆ ದುಡಿದವರು. ಸುಮಾರು ಏಳು ದಶಕಗಳಿಂದ ವಿದ್ವತ್ತು, ಆಡಳಿತ ಮತ್ತು ಚಳವಳಿಗಳೆಂಬ ಮೂರು ನೆಲೆಗಳಲ್ಲಿ ಮಾಡಿರುವ ಕೆಲಸಗಳು ಅವರ ಕೊಡುಗೆಯ ಸ್ವರೂಪವನ್ನು ನಿರ್ಧರಿಸಿವೆ.
 ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನು ದೊರಕಿಸಿಕೊಡುವ ಪ್ರಯತ್ನದಲ್ಲಿ ಇವರ ಪಾತ್ರ ಹಿರಿದಾದುದು. ಇದಕ್ಕಾಗಿ ಸುಮಾರು ಐದು ಬಾರಿ ಧರಣಿ ಕುಳಿತಿದ್ದರು. ಕನ್ನಡ ಆಡಳಿತ ಭಾಷೆಯಾಗಬೇಕು; ಕನ್ನಡ ಮಾಧ್ಯಮವಾಗಬೇಕು, ಕನ್ನಡ ಸಂಸ್ಕೃತಿ, ಇತಿಹಾಸ, ಕಾವ್ಯ ಪರಂಪರೆಯಿಂದ ಕನ್ನಡಿಗರು ಚೈತನ್ಯ ತುಂಬಿಕೊಂಡು ರಾಷ್ಟ್ರದಲ್ಲಿ ತಲೆಯೆತ್ತಿ ಮೆರೆಯಬೇಕು, ಕನ್ನಡಕ್ಕೆ ವಿಶ್ವಮಾನ್ಯತೆ ದೊರೆಯಬೇಕು ಎಂಬ ಹಂಬಲವನ್ನು ತುಂಬಿಕೊಂಡು ಅವಿರತವಾಗಿ ಶ್ರಮಿಸಿದ ಕೀರ್ತಿ ಇವರದು.
ದೇಜಗೌ ಅವರ ಮಾತು ಬರಹ ಎರಡೂ ಓತಪ್ರೋತ. 2-3 ಗಂಟೆಯವರೆಗೆ ನಿರರ್ಗಳವಾಗಿ ಮಾತನಾಡುವ ಕೌಶಲ್ಯ ಅವರಲ್ಲಿತ್ತು.  ಜಾನಪದ, ಗ್ರಂಥ ಸಂಪಾದನೆ, ಸಾಹಿತ್ಯ ವಿಮರ್ಶೆ, ಭಾಷಾಂತರ, ಜೀವನಚರಿತ್ರೆ, ಪ್ರವಾಸ ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ವ್ಯಾಪಕವಾದ ಕೆಲಸ ಮಾಡಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗಾಗಿ ಹತ್ತಾರು ಮಹತ್ವದ ಯೋಜನೆಗಳನ್ನು ರೂಪಿಸಿದ, ಸಂಪನ್ಮೂಲಗಳನ್ನು ಸೃಷ್ಟಿಸಿ, ಅವನ್ನು ಯಶಸ್ವಿಯಾಗಿ ನಿರ್ವಹಿಸಿದ ದೇಜಗೌ ಸಾಧನೆ ಅನುಪಮವಾದುದು.
‘ಕುವೆಂಪು ವಿದ್ಯಾವರ್ಧಕ ಟ್ರಸ್ಟ್’ ಇವರ ಕನಸಿನ ಕುಡಿ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳೆರಡರಲೂ ಪ್ರಗಲ್ಭ ಪಾಂಡಿತ್ಯ ಹೊಂದಿದ್ದ ಇವರು ಸುಮಾರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಇವರು, ಅನುವಾದಕರಾಗಿಯೂ ಹೆಸರು ಮಾಡಿದ್ದಾರೆ. ಕನ್ನಡಕ್ಕೆ ಎಲ್ಲೇ ಸಮಸ್ಯೆಗಳು ಉದ್ಭವಿಸಿದರೂ 98ರ ಇಳಿವಯಸ್ಸಿನಲ್ಲೂ ದೇಜಗೌ ಹಾಜರಿರುತ್ತಿದ್ದರು. ಅವರ ಕನ್ನಡ ಪ್ರೇಮ, ಪುಸ್ತಕ ಪ್ರೀತಿ ಅನನ್ಯ, ಅವರ್ಣನೀಯ.
ಅಧ್ಯಯನ, ಪರಿಶ್ರಮ, ದೊಡ್ಡವರ ಸಹವಾಸದಿಂದಲೇ ಮೇರುಸದೃಶ ವ್ಯಕ್ತಿತ್ವವನ್ನು ಅವರು ಹೊಂದಿದ್ದರು. ನಿರಂತರ ಅನ್ವೇಷಣೆಯೇ ಅವರ ಕೆಲಸವಾಗಿತ್ತು.
ಶೈಕ್ಷಣಿಕ ಸಾಧನೆ:
  ರಾಷ್ಟ್ರಕವಿ ಕುವೆಂಪು ಅವರಿಂದ ಪ್ರಭಾವಿತರಾಗಿ,ಮೈಸೂರಿನಲ್ಲಿ ಕನ್ನಡ ಎಂ.ಎ. ಪದವಿ ಪಡೆದು 1946ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ, ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು, ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪ್ರಕಟಣೆ ವಿಭಾಗದ ಕಾರ್ಯದರ್ಶಿ, ಸಹಾಯಕ ಪ್ರಾಧ್ಯಾಪಕ, ಪರೀಕ್ಷೆಗಳ ನಿಯಂತ್ರಣಾಧಿಕಾರಿ, ಪ್ರಾಧ್ಯಾಪಕರು, ವಿಭಾಗದ ಮುಖ್ಯಸ್ಥರು, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಮುಂತಾದವು ಅವುಗಳಲ್ಲಿ ಕೆಲವು. 1969ರಿಂದ 75ರವರೆಗೆ  ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ತಮ್ಮ ಕನ್ನಡಪರವಾದ ರಚನಾತ್ಮಕ ಚಟುವಟಿಕೆಗಳನ್ನು ಆರು ವರ್ಷಗಳ ಕಾಲ ಮುಂದುವರೆಸಿದವರು.
   ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬೆಳವಣಿಗೆಯಲ್ಲಿ ಇವರ ಪಾತ್ರ ತುಂಬಾ ಹಿರಿದಾದುದು. 1966ರಲ್ಲಿ ಜಾನಪದವನ್ನು ಕನ್ನಡ ತರಗತಿಗಳಲ್ಲಿ ವಿಶೇಷ ಅಧ್ಯಯನವಾಗಿ ಅಳವಡಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿನ ಜಾನಪದ ವಸ್ತು ಸಂಗ್ರಹಾಲಯದ ಅಭಿವೃದ್ದಿಗೆ ನೆರವಾದವರು. ಇವರ ಜಾನಪದ ಸೇವೆ ಗಮನಿಸಿ ಕರ್ನಾಟಕ ವಿಶ್ವವಿದ್ಯಾನಿಲಯದ ಮೂರನೆಯ ಜಾನಪದ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆರಿಸಿತು.
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕೆಲಸಗಳನ್ನು ಮಾಡಿದವರು; ನಿವೃತ್ತಿಯ ನಂತರವೂ ಅಂತಹುದೇ ಕೆಲಸಗಳಲ್ಲಿ ತೊಡಗಿಸಿಕೊಂಡವರು. ದೇಜಗೌ ಅವರೇ ಪ್ರಾರಂಭಿಸಿ, ಯಶಸ್ವಿಯಾಗಿ ನಿರ್ವಹಿಸಿದ ‘ಕನ್ನಡ ವಿಶ್ವಕೋಶ’, ‘ವಿಷಯ ವಿಶ್ವಕೋಶ-ಕರ್ನಾಟಕ’, ‘ಇಂಗ್ಲಿಷ್-ಕನ್ನಡ ನಿಘಂಟು’, ‘ಸಮಗ್ರ ಕನ್ನಡ ಸಾಹಿತ್ಯಚರಿತ್ರೆ ‘, ‘ಕನ್ನಡ ಛಂದಸ್ಸಿನ ಇತಿಹಾಸ’ ಮುಂತಾದ ಕೆಲವು ಮುಖ್ಯವಾದ ಯೋಜನೆಗಳು ಗಮನಾರ್ಹವಾದವುಗಳು. ಕರ್ನಾಟಕಲ್ಲೇ ಮೊದಲಬಾರಿಗೆ ‘ಜಾನಪದ ವಸ್ತುಸಂಗ್ರಹಾಲ’ಯವನ್ನು ಸ್ಥಾಪಿಸಿ ಜಾನಪದ ಅಧ್ಯಯನಕ್ಕೆ ತಳಹದಿಯನ್ನು ರೂಪಿಸಿಕೊಟ್ಟಿದ್ದು ಅವರ ಮುಖ್ಯವಾದ ಹೆಗ್ಗಳಿಕೆ.
 ಅವರು ವಿಶ್ವವಿದ್ಯಾಲಯದಲ್ಲಿ ಅನೇಕ ಹೊಸ ವಿಭಾಗಗಳನ್ನು ಪ್ರಾರಂಭಿಸಿದರು. ಬದುಕಿನ ಕೊನೆತನಕವೂ ‘ಕುವೆಂಪು ವಿದ್ಯಾವರ್ಧಕ ಟ್ರಸ್ಟ್’ ಮೂಲಕ ಕನ್ನಡಪರವಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ. ಜವರೇಗೌಡರು, ವಿವಿಧ ಪ್ರಕಾರಗಳಲ್ಲಿ 135 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.



ಗೌರವ, ಪುರಸ್ಕರಗಳ ಸರಮಾಲೆ

* 1975ರಲ್ಲಿ  ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್,
* ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ,
* ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ,
* ತಿರುವನಂತಪುರದ ‘ದ್ರಾವಿಡಿಯನ್ ಲಿಂಗ್ವಿಸ್ಟಿಕ್ಸ್ ಅಸೋಸಿಯೇಶನ್’ನ ಸೀನಿಯರ್ ಫೆಲೋ ಪ್ರಶಸ್ತಿ,
* 1998ರಲ್ಲಿ ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ 
* ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ,  ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ.
* 2008ರ ಕರ್ನಾಟಕ ರತ್ನ ಪ್ರಶಸ್ತಿ.
*  1970ರಲ್ಲಿ ಬೆಂಗಳೂರಿನಲ್ಲಿ ನಡೆದ 47ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
* ಹಂಪಿ ಕನ್ನಡ ವಿವಿಯಿಂದ ನಾಡೋಜ ಪುರಸ್ಕಾರ.
* ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಜಾರಿಯಾಗಲೇಬೇಕೆಂದು  ಸರಕಾರದ ಮೇಲೆ ಸಾಕಷ್ಟು ಒತ್ತಡ ಹಾಕಿದ ಮೊದಲಿಗರು. 
* ಸರೋಜಿನಿ ಮಹಿಷಿ ವರದಿ ಜಾರಿಗೆ ಹೋರಾಟ.
* ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 30 ನಿಮಿಷಗಳ ಸಾಕ್ಷ್ಯಚಿತ್ರ ನಿರ್ಮಾಣ
............................... 

Friday, 27 May 2016

ಶುದ್ದ ಕುಡಿಯುವ ನೀರಿಗೆ ಏರ್ ಫಿಲ್ಟರ್
ಕೆಸ್ಸಾರ್ಟಿಸಿ ಚಾಲಕರು ಕಂಡುಕೊಂಡ ಮಾದರಿ


ಶಿವಮೊಗ್ಗ: ಬಿರುಬೇಸಿಗೆಯಿಂದ ಮತ್ತು ಬರಗಾಲದಿಂದಾಗಿ ಬಯಲು ಸೀಮೆಯ ಜಿಲ್ಲೆಗಳಲ್ಲಿ ಕುಡಿಯಲು ನೀರೂ ಸಹ ಸಿಗುತ್ತಿಲ್ಲ. ಇಂತಹ ಸ್ಥಿತಿಯನ್ನು ಮಲೆನಾಡಿನಿಂದ ಆ ಜಿಲ್ಲೆಯಗಳತ್ತ ಹೋಗುವವರು ಹೇಗೆ  ಎದುರಿಸಬಹುದು ಎನ್ನುವುದನ್ನು ಕೆಎಸ್ಸಾರ್ಟಿಸಿ ಸಾಗರ ಡಿಪೋದವರು ಕಂಡುಹಿಡಿದಿದ್ದಾರೆ.
ಸಾಗರದಿಂದ ರಾಯಚೂರಿಗೆ ಬಸ್ ಸಂಚಾರವಿದೆ. ಬೆಳಿಗ್ಗೆ ಹೊರಡುವ ಬಸ್ ರಾತ್ರಿ ತಲುಪುತ್ತದೆ. ಅಲ್ಲಿ ಉಳಿದು ಮಾರನೆಯ ದಿನ ಮತ್ತೆ ವಾಪಸ್ ಹೊರಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಮತ್ತು ಚಾಲನೆ ಮಾಡುವ ವೇಳೆ ಕುಡಿಯಲು ನೀರು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಇದರ ಹೊರತಾಗಿ ಇತರೇ ಕೆಲಸಗಳಿಗೆ ನೀರಿನ ಅವಶ್ಯಕತೆ ಇದೆ. ಇದನ್ನೆಲ್ಲ ರಾಯಚೂರಿನಲ್ಲಿ ಹೇಗೆ ಎದುರಿಸಬೇಕೆಂಬ ವಿಚಾರ ಮೂಡಿದಾಗ ಹೊಳೆದಿದ್ದೇ ಏರ್ ಫಿಲ್ಟರ್.
ಏರ್ ಫಿಲ್ಟರ್‌ನ್ನು ಚಾಲಕನ ಆಸನದ ಪಕ್ಕದಲ್ಲಿ ಇಟ್ಟು ಅದರೊಳಕ್ಕೆ ಕುಡಿಯಲು ಬೇಕಾಗುವಷ್ಟು ಅಂದರೆ ಸುಮಾರು 6-7 ಬಾಟಲ್ ನೀರನ್ನು ಇಡುತ್ತಾರೆ. ನೀರು ತುಂಬುವಾಗ ಹೇಗಿರುತ್ತದೆಯೋ ಹಾಗೆಯೇ ಏರ್ ಫಿಲ್ಟರ್ ನೀರನ್ನು ಇಡುತ್ತದೆ. ಬಯಲುಸೀಮೆ ವಾತಾವರಣದಿಂದ ಬಿಸಿಯಾಗುವುದಿಲ್ಲ. ಇದನ್ನು ಕಂಡುಹಿಡಿದು ಈ ಬಸ್‌ಗೆ ಅಳವಡಿಸಿಕೊಳ್ಳಲಾಗಿದೆ.
 ಜೊತೆಗೆ ಬಸ್ ಪ್ರಯಾಣಿಕರಿಗೆ ಅವಶ್ಯವಿದ್ದರೆ ಈ ನೀರನ್ನು ಕೊಡುತ್ತಾರಂತೆ. ಒಟ್ಟಿನಲ್ಲಿ, ಶುದ್ಧ ಕುಡಿಯುವ ನೀರು ಹೊರ ಜಿಲ್ಲೆಗೆ ಹೋದಾಗಲೂ ಸಿಗಬೇಕೆಂದರೆ ಇಂತಹ ಪ್ಲಾನ್ ಮಾಡಬೇಕೆನ್ನುತ್ತಾರೆ ಆ ಬಸ್ ಚಾಲಕ ಮತ್ತು ನಿರ್ವಾಹಕ.

Tuesday, 24 May 2016

ಅಮ್ಮಾ ಎಂದರೆ ಏನೋ ದೈವವು




ಪ್ರಜಾಪ್ರಭುತ್ವದಲ್ಲಿ ರಾಜ್ಯ ಎನ್ನುವುದು ಒಂದು ವ್ಯವಸ್ಥೆ. ಅಲ್ಲಿ ಜನರೇ ಮುಖ್ಯ. ಅವರನ್ನು ಆರ್ಥಿಕವಾಗಿ ಬಲಗೊಳಿಸಲು ದುಡಿಯುವಂತೆ ಮಾಡುವುದು, ಅಥವಾ ಉದ್ಯೋಗಸ್ಥರನ್ನಾಗಿ ಮಾಡುವುದು ಮತ್ತು ಆ ಮೂಲಕ ಅವರನ್ನು ಸಬಲರನ್ನಾಗಿಸುವುದು ಸರಕಾರದ ಕೆಲಸವಾಗಬೇಕೇ ವಿನಾ ಅಗ್ಗದ ಮತ್ತು ಜನಪ್ರಿಯ ಯೋಜನೆಗಳನ್ನು ಘೋಷಿಸಿ ಮರುಳು ಮಾಡುವುದಲ್ಲ. ಅಷ್ಟಕ್ಕ್ಕೂ ಈ ಅಗ್ಗದ ಯೋಜನೆಗೆ ಹಣ ಬಳಕೆಯಾಗುವುದು ರಾಜ್ಯದ ಬೊಕ್ಕಸದಿಂದಲೇ. ಯಾವ ರಾಜಕಾರಣಿಯೂ ತನ್ನ ಮನೆಯಿಂದ ಹಣ ತಂದು ಈ ಅಗ್ಗದ ಯೋಜನೆ ಜಾರಿ ಮಾಡುವುದಿಲ್ಲ. ಇದನ್ನು ಅರಿಯದೆ, ತ. ನಾಡಿನ ಮತದಾರರು  ಅಮ್ಮಾ ಎಂದರೆ  ಅದೇನು ಭಯಭಕ್ತಿ ತೋರಿದರೋ ಗೊತ್ತಿಲ್ಲ. ಇದರಿಂದ ಕರುಣಾನಿಧಿಯೂ ಹೊರತಲ್ಲ. ಅವರೂ ಸಹ ಸಾಕಷ್ಟು ಅಗ್ಗದ ಜನಪ್ರಿಯ ಯೋಜನೆ ಘೋಷಿಸಿದ್ದರು.


ದ್ರಾವಿಡ ಪಕ್ಷಗಳದ್ದೇ ದರ್ಬಾರು ನಡೆದಿರುವ  ತಮಿಳುನಾಡಿನಲ್ಲಿ  ಮತ್ತೆ ಅಣ್ಣಾ ಡಿಎಂಕೆ ಜಯಭೇರಿ ಬಾರಿಸಿದೆ. ಮುಖ್ಯಮಂತ್ರಿಯಾಗಲು ಅದರ ನಾಯಕಿ ಜಯಲಲಿತಾ ಸಿದ್ಧತೆಯಲ್ಲಿದ್ದಾರೆ. 32 ವರ್ಷಗಳ ನಂತರ ಅದಿಕಾರದಲ್ಲಿದ್ದವರಿಗೇ ಮತ್ತೆ ಅಧಿಕಾರ ದೊರೆತಿರುವುದು ಆ ರಾಜ್ಯದಲ್ಲೊಂದು ಹೊಸ ಇತಿಹಾಸ ಸೃಷ್ಟಿಸಿದೆ.
 ‘ಅಮ್ಮಾ’ ಬ್ರಾಂಡ್ ಮೂಲಕ ಜನಪ್ರಿಯತೆ ಗಳಿಸಿರುವ ಜಯಾ 6ನೆಯ ಬಾರಿಗೆ ಸಿಎಂ ಆಗಲಿದ್ದಾರೆ. ದಿವಂಗತ ಎಂ. ಜಿ. ರಾಮಚಂದ್ರನ್ ನಂತರ ಆ ರಾಜ್ಯದಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ಇಬ್ಬರೇ  ಕಿಂಗ್‌ಗಳು. ಒಮ್ಮೆ ಅವರಿಗೆ, ಮತ್ತೊಮ್ಮೆ ಇವರಿಗೆ ಅಧಿಕಾರ ಬರುತ್ತಿದೆ. ಆದರೆ ಮತದಾರರೂ ಸಹ ಜನಪ್ರಿಯ ಮತ್ತು ಅಗ್ಗದ ಯೋಜನೆಗಳಿಗೆ ಮರುಳಾಗುತ್ತಿದ್ದಾರೆಯೇ ವಿನಾ ಅಭಿವೃದ್ಧಿಪರ ಆಡಳಿತದತ್ತ ಗನಹರಿಸುತ್ತಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ.
ಜನರಿಗೆ ಉಚಿತ ಉಡುಗೊರೆಗಳನ್ನು ಕೊಟ್ಟು ಮರುಳು ಮಾಡುತ್ತಲೇ ಬಂದಿರುವ ಜಯಾ ಮತ್ತು ಕರುಣಾನಿಧಿ  ಇದನ್ನೇ ಬಂಡವಾಳ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದಾರೆ. ಜನರೂ ಸಹ ಅಮ್ಮಾ ಬ್ರಾಂಡ್‌ಗೆ ಈ ವರ್ಷ ಮರುಳಾಗಿ ಮತ್ತೆ ಜಯಾ ಅವರನ್ನು ಆಯ್ಕೆ ಮಾಡಿದ್ದಾರೆ. ಕುಡಿಯುವ ನೀರಿನ ಬಾಟಲಿಯಿಂದ ಹಿಡಿದು, ಹೊಟೆಲ್ ತಿಂಡಿಯವರೆಗೆ ಅಮ್ಮ ಬ್ರಾಂಡ್  ಜನಪ್ರಿಯವಾಗಿದೆ. ಆದರೆ ರಾಜ್ಯದ ಅಭಿವೃದ್ಧಿ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಎಲ್ಲವೂ ಉಚಿತ ಎಂದಾದಲ್ಲಿ ಜನರು ಹಣ ಖರ್ಚು ಮಾಡುವ ಪ್ರಮೇಯವೇ ಬರುವುದಿಲ್ಲ. ಹಾಗಾಗಿ ಅಭಿವೃದ್ಧಿಯೇ ಬೇಡ, ಏನಾದರೂ ಆಗಲಿ, ನಮಗೆ ಉಚಿತ ಉಡುಗೊರೆ ಬರಲಿ ಎಂಬ ಮನಸ್ಥಿತಿ ಅಲ್ಲಿಯ ಮತದಾರರದ್ದು ಎನ್ನುವುದು ಮತ್ತೆ ಸಾಬೀತಾಗಿದೆ.
ತಮಿಳುನಾಡಿನ ರಾಜಕೀಯವೇ ಹಾಗೆ. ಅಲ್ಲಿ ಉಚಿತಗಳೇ ಹೆಚ್ಚು. ಇನ್ನೊಂದು ವಿಶೇಷವೆಂದರೆ,  ಅಲ್ಲಿ ಉಚಿತ ಎಂದು ಘೋಷಣೆ ಮಾಡಿದ್ದು ಕೇವಲ ಭರವಸೆಯಾಗಿರುವುದಿಲ್ಲ. ಅದು ಖಂಡಿತ ಜಾರಿಯಾಗುತ್ತದೆ.  ಜನರೂ ಸಹ ಬೆನ್ನತ್ತಿ ಆ ಯೋಜನೆ ಜಾರಿಗೊಳಿಸಿಕೊಳ್ಳುತ್ತಾರೆ. ಹಾಗೂ ಉಚಿತದ ರುಚಿ ಅಲ್ಲಿನ ಮತದಾರರಿಗೆ ಚೆನ್ನಾಗಿ ಗೊತ್ತಿದೆ. ಘೋಷಣೆ ಮಾಡಿ ಮರೆತುಬಿಡಲು ಮತದಾರರು ಬಿಡುತ್ತಿಲ್ಲ. ಇದೇ ಆ ರಾಜ್ಯಕ್ಕೂ ಇತರ ರಾಜ್ಯಕ್ಕೂ ಇರುವ ವ್ಯತ್ಯಾಸ.  ನಮ್ಮ ರಾಜ್ಯ ಸಹಿತ ಉಳಿದೆಡೆ ಭರವಸೆ ಭರವಸೆಯಾಗಿಯೇ ಉಳಿಯುತ್ತಿರುವುದನ್ನು ಕಾಣಬಹುದು. ಜನರ ಭಾವನೆಗಳ ಜೊತೆ ಅಲ್ಲಿನ ನಾಯಕರಿಬ್ಬರ ಇಮೇಜ್ ಬೆರೆತಿದೆ. ಹಾಗಾಗಿ ಅಲ್ಲಿ ರಾಜಕಾರಣವೇ ಬೇರೆ, ಜನರ ಮನಸ್ಥಿತಿಯೇ ಬೇರೆ. ಜಯಲಲಿತಾ ತನ್ನ ಪಕ್ಷದ ಹಲವು ಶಾಸಕರಿಗೆ ಈ ಬಾರಿ ಟಿಕೆಟ್ ಕೊಟ್ಟಿರಲಿಲ್ಲ. ಆದರೂ ಆ ಕ್ಷೇತ್ರಗಳಲ್ಲಿ ಅದೇ ಪಕ್ಷದ ಶಾಸಕರು (ಹೊಸಬರು) ಗೆದ್ದುಬಂದಿದ್ದಾರೆ.  ಇದು ಅಲ್ಲಿನ ಮತದಾರರು ಎಐಎಡಿಎಂಕೆ ಬಗ್ಗೆ ಹೊಂದಿರುವ ಮನೋಭಾವವನ್ನು ತೋರಿಸುತ್ತದೆ.  
ಜಯಲಲಿತಾ ಈ ಬಾರಿ ನೀಡಿದ್ದ ಕೆಲವು  ಭರವಸೆಗಳನ್ನು ಗಮನಿಸಿ- ಮನೆಗೊಬ್ಬರಿಗೆ ಸರಕಾರಿ ಕೆಲಸ, ಮದುವೆಯಾಗುವವರಿಗೆ 8 ಗ್ರಾಮ್‌ನ ಉಚಿತ ತಾಳಿ, ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ರೈತರಿಗೆ ಉಚಿತ ಮೊಬೈಲ್, ಅದಕ್ಕೆ ತಿಂಗಳಿಗೆ 500 ರೂ. ಕರೆನ್ಸಿ ಉಚಿತ ಮೊದಲಾದವು. 2011ರ ಚುನಾವಣೆಯಲ್ಲಿ  ಜಯಾ ನೀಡಿದ್ದ ಭರವಸೆಗಳಲ್ಲಿ ಶೇ. 90ರಷ್ಟು ಈಡೇರಿವೆಯಂತೆ. ಆ ಪಟ್ಟಿಯನ್ನೂ ಸಹ  ಅವರು ಚುನಾವಣಾಪೂರ್ವದಲ್ಲಿ ಬಿಡುಗಡೆ ಮಾಡಿ ಜನರನ್ನು ಮರುಳುಗೊಳಿಸಿದ್ದಾರೆ. ಇವೆಲ್ಲಾ ಏಕವ್ಯಕ್ತಿ ಕೇಂದ್ರಿತ ಎಐಎಡಿಎಂಕೆಯ ತಂತ್ರಗಳು.
ಇನ್ನು ಡಿಎಂಕೆ ಪಕ್ಷದ ಪರಿಸ್ಥಿತಿ ಗಮನಿಸಿ. ಕರ್ನಾಟಕದ ಜೆಡಿಎಸ್‌ಗೂ  ಡಿಎಂಕೆಗೂ ಸಾಕಷ್ಟು ಸಾಮ್ಯತೆ ಇದೆ. ಎಚ್. ಡಿ. ದೇವೇಗೌಡರಂತೆ ಎಂ. ಕರುಣಾನಿಧಿಯೇ ಆ ಪಕ್ಷದ ಸರ್ವಾಧ್ಯಕ್ಷ. ಅವರೇ ಸುಪ್ರೀಂ. ದೇವೇಗೌಡರಂತೆ 24*7 ರಾಜಕಿಯವೇ ಕರುಣಾನಿಧಿ ಕೆಲಸ. 84ರ ಗೌಡರು ರಾಜಕೀಯ ನಿವೃತ್ತಿ ಆಗುವುದಿಲ್ಲ ಎಂದು ಮೊನ್ನೆಯಷ್ಟೇ ಗುಡುಗಿದ್ದಾರೆ. 82ರ ಹರಯದ ಕರುಣಾ ಸಹ ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡು  ಅಧಿಕಾರ ಕಳಕೊಂಡಿದ್ದಾ. ಇಲ್ಲಿಯೂ ಕುಟುಂಬ ರಾಜಕಾರಣವೇ ಮೇಳೈಸಿದೆ. ಕುಟುಂಬದವರ ಹೊರತಾಗಿ ಬೇರೆ ಯಾರೂ ನಾಯಕರಿಲ್ಲ.
  ಕರುಣಾ ಮಗ ಸ್ಟಾಲಿನ್ ಆ ಪಕ್ಷದ ಯುವ ಮತ್ತು ಜನಪ್ರಿಯ ನಾಯಕನಾಗಿದ್ದಾರೆ. ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದರೆ ಗೆಲುವು ಸಾಧ್ಯವಾಗುತ್ತಿತ್ತೇನೋ. ಜೊತೆಗೆ ಟಿಕೆಟ್ ಹಂಚಿಕೆಯಲ್ಲಿ ಡಿಎಂಕೆಯಲ್ಲಿ ಎದ್ದ ಭಿನ್ನಮತವೂ ಸೋಲಿಗೆ ಕಾರಣ ಎಂದು ಈಗ ವಿಶ್ಲೇಷಿಸಲಾಗುತ್ತಿದೆ. ಡಿಎಂಕೆ ಆಡಳಿತಕ್ಕೆ ಬಂದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ಭೂಗತರ ದಬ್ಬಾಳಿಕೆ ಶುರುವಾಗುತ್ತದೆ ಎಂಬ ಮಾತಿದೆ. ಜಯಾ ಆಡಳಿತದಲ್ಲಿ ಯಾವ ರಾಜ್ಯದಲ್ಲೂ ಇಲ್ಲದಂತಹ ಶಾಂತಿ ಮತ್ತು ಸುವ್ಯವಸ್ಥೆ ಅಲ್ಲಿರುತ್ತದೆ. ಎಲ್ಲೋ ಕುಳಿತು ಯಾರಿಗೂ ಕಾಣಿಸಿಕೊಳ್ಳದೆ ಆಡಳಿತ ನಡೆಸುತ್ತಿದ್ದರೂ ಜಯಾ ಇಂದಿಗೂ ಮತದಾರರಿಗೆ ದೇವರು.
ಎಂಜಿಆರ್ ಹೊರತಾಗಿ ಯಾರೂ ಸತತ ಎರಡನೆಯ ಬಾರಿಗೆ ತ. ನಾಡಿನ ಮುಖ್ಯಮಂತ್ರಿಯಾಗಿರಲಿಲ್ಲ. ಈಗ ಜಯಾಗೆ ಆ ಭಾಗ್ಯ ಒದಗಿಬಂದಿದೆ. 1982ರಲ್ಲಿ ಜಯಾ ಮೊದಲ ಬಾರಿ ಎಐಎಡಿಎಂಕೆ ಮೂಲಕ ಶಾಸಕಿಯಾಗಿದ್ದರು. 84ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.  ಎಂಜಿಆರ್ ನಿಧನಾನಂತರ  ಮತ್ತೆ ಎಂಎಲ್‌ಎ ಆಗಿ ಆ ಪಕ್ಷದ ಚುಕ್ಕಾಣಿ ಹಿಡಿದರು, ಸಿಎಂ ಆದರು. ರಾಜೀವ್ ಗಾಂಧಿ ಹತ್ಯೆ ನಂತರ ನಡೆದ ಚುನಾವಣೆಯಲ್ಲಿ ತ. ನಾಡಿನಲ್ಲಿ ಎಲ್ಲ 234 ಸ್ಥಾನಗಳ ಪೈಕಿ 225 ಸ್ಥಾನ ಪಡೆದು ಪ್ರಚಂಡ ಜಯ ಸಾಧಿಸಿದ್ದರು. ಆಗ ಜಯಾ ಬೆನ್ನಿಗೆ ಕಾಂಗ್ರೆಸ್ ಇತ್ತು. ಡಿಎಂಕೆ ಧೂಳೀಪಟವಾಗಿತ್ತು. ಬದಲಾದ ರಾಜಕಿಯ ಸನ್ನಿವೇಶದಲ್ಲಿ ಕಾಂಗ್ರೆಸ್ ಡಿಎಂಕೆ ಜೊತೆ  ಮೈತ್ರಿ ಸಾಧಿಸಿದೆ.
64ರ ಹರಯದ ಜಯಾ  ಏಕಚಕ್ರಾಧಿಪತ್ಯಕ್ಕೆ ಮತ್ತೆ ಅನಭಿಷಿಕ್ತ ಸಾಮ್ರಾಜ್ಞಿಯಾಗಲಿದ್ದಾರೆ. ತ. ನಾಡಿನ ಜನರಿಗೆ ಇನ್ನೇನೇನು ಉಚಿತ ಬರಲಿದೆಯೋ ಕಾದುನೋಡಬೇಕು.
ತ. ನಾಡಿನ ಅಧಿಕಾರಸ್ಥರು 
 ಸ್ವಾತಂತ್ರ್ಯ ಪಡೆದಂದಿನಿಂದ ತ. ನಾಡಿನಲ್ಲಿ 1967ರವರೆಗೆ ಕಾಂಗ್ರೆಸ್‌ನದ್ದೇ ಏಕಚಕ್ರಾಧಿಪತ್ಯವಾಗಿತ್ತು.  1967ರಲ್ಲಿ ಅಣ್ಣಾದೊರೈ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧಿಕಾರದ ಗದ್ದುಗೆ ಏರಿತ್ತು. ದೊರೈ ಸಾವಿನ ಬಳಿಕ ಕರುಣಾನಿಧಿ ಸಿಎಂ ಆದರು. 1971ರಲ್ಲಿ ಮತ್ತೆ ಕರುಣಾ ಸಿಎಂ ಆದರು. 1977ರಲ್ಲಿ ಡಿಎಂಕೆ ತೊರೆದು ಎಐಎಡಿಎಂಕೆ ಪಕ್ಷ ಕಟ್ಟಿದ ಎಂಜಿಆರ್ ಅದೇ ವರ್ಷ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಯಾದರು. 1980, 1984, ಎರಡೂ ಬಾರಿ ಮತ್ತೆ ಆ ಪಕ್ಷವೇ ಗೆದ್ದಿತ್ತು. ಎಂಜಿಆರ್ ನಿಧನಾನಂತರ ಜಯಾ ಸಿಎಂ ಆದರು. ಅಲ್ಲಿಂದ ಯಾರೂ ಸತತ ಎರಡು ಬಾರಿ ಸಿಎಂ ಆಗಿರಲಿಲ್ಲ. 1989ರಲ್ಲಿ ಡಿಎಂಕೆ, 91ರಲ್ಲಿ ಎಐಎಡಿಎಂಕೆ, 96ರಲ್ಲಿ ಡಿಎಂಕೆ, 2001ರಲ್ಲಿ ಎಐಎಡಿಎಂಕೆ, 2006ರಲ್ಲಿ ಡಿಎಂಕೆ, 2011 ಮತ್ತು 2016ರಲ್ಲಿ ಎಐಎಡಿಎಂಕೆ ಅಧಿಕಾರ ಹಿಡಿದಿದೆ. 

Monday, 23 May 2016

ಕುಡುಕರ, ಭಿಕ್ಷುಕರ ತಾಣ ಖಾಸಗಿ ಬಸ್ ನಿಲ್ದಾಣ  



ನಗರದ ಹೊರವಲಯದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಬಳಿ ಭಿಕ್ಷುಕರ ಮತ್ತು ನಿರ್ಗತಿಕರ ಭವನ ಇದೆ. ಅಲ್ಲಿ ನೂರಾರು ಭಿಕ್ಷುಕರಿದ್ದಾರೆ. ಇವರನ್ನು ಚೆನ್ನಾಗಿ ಅಲ್ಲಿ ನೋಡಿಕೊಳ್ಳಲಾಗುತ್ತಿದೆ. ಊಟ- ತಿಂಡಿ ಜೊತೆಗೆ ಆರೋಗ್ಯ ತಪಾಸಣೆ ಸಹ ಸಕಾಲದಲ್ಲಿ ನಡೆಯುತ್ತಿದೆ.  ಇವರ ಹೊರತಾಗಿ ನಗರದೊಳಕ್ಕೆ ಮತ್ತೆ ನೂರರಷ್ಟು ನಿರ್ಗತಿಕರು ಸಿಗುತ್ತಾರೆ. ಪಾಲಿಕೆಯವರು ಇವರನ್ನು ಹಿಡಿದು ಸಾಗಿಸುವ ಜವಾಬ್ದಾರಿಯನ್ನು ಯಾವಾಗಲೋ ಒಮ್ಮೆ ಮಾಡುತ್ತಾರೆ. ಅದನ್ನು ಬಿಟ್ಟು ವಾರಕ್ಕೊಮ್ಮೆ  ಅಥವಾ ಎರಡು ಬಾರಿ ಇಂತಹವರನ್ನು ಪತ್ತೆ ಮಾಡಿ  ಅಲ್ಲಿಗೆ ಸಾಗಿಸಿದರೆ ಇಂತಹವರ ಕಾಟ ತಪ್ಪುತ್ತದೆ. ಅವರಿಗೂ ಒಂದು ಆಸರೆ ಸಿಗುತ್ತದೆ. ಈ ಮಧ್ಯೆ, ಸಾರ್ವಜನಿಕರು ದೂರು ನೀಡಿದರೂ ಸಹ ಪಾಲಿಕೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ. ಆದ್ದರಿಂದ ಪಾಲಿಕೆ ಆಯುಕ್ತರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕಿದೆ.

ಈ ಬಸ್ ನಿಲ್ದಾಣದಲ್ಲಿ ಕುಡಿದು ಬಂದು ಹಾಯಾಗಿ ಮಲಗಬಹುದು, ಭಿಕ್ಷುಕರು ಭಿಕ್ಷೆ ಬೇಡಬಹುದು, ಅಂಗಡಿ ಇಟ್ಟುಕೊಂಡು ಬಳೆ ವ್ಯಾಪಾರ ಮಾಡಬಹುದು, ಕರ್ಚೀಫ್, ರೋಲ್ಡ್‌ಗೋಲ್ಡ್ ಆಭರಣ, ಪರ್ಸ್, ಬೆಲ್ಟ್ ಮೊದಲಾದವುಗಳನ್ನು ಮಾರಬಹುದು. ಹೌದು, ಇದು ಶಿವಮೊಗ್ಗ ಖಾಸಗಿ ಸಬ್ ನಿಲ್ದಾಣದ ಕಥೆ. ಪಾಲಿಕೆಯ ಉಸ್ತುವಾರಿಯಲ್ಲಿ ಇದರ ನಿರ್ವಹಣೆ ನಡೆಯುತ್ತಿದ್ದರೂ ಇದಕ್ಕೆ ಅಪ್ಪ- ಅಮ್ಮ ಇಲ್ಲದಂತಾಗಿದೆ, ಹೇಳುವವರು, ಕೇಳುವವರಾರೂ ಇಲ್ಲ. ಸೆಕ್ಯೂರಿಟಿಗಳಿದ್ದರೂ  ಅವರು ಕೇವಲ ಲೆಕ್ಕಕ್ಕಷ್ಟೇ.
 ಈ ಬಸ್ ನಿಲ್ದಾಣದ ದುರ್ಗತಿ, ಕೊಳಕು, ಇಲ್ಲಸಲ್ಲದ ವ್ಯವಹಾರ, ಸಂಜೆಯಾದರೆ ಅನೈತಿಕ ವ್ಯವಹಾರ  ಇದನ್ನೆಲ್ಲ ನೋಡಿದವರು ಯಾರೂ ಇಲ್ಲಿಗೆ ಮರಳಿ ಬರುವುದಿಲ್ಲ.  ಕೆಲವರಿಗೆ ಅನಿವಾರ್ಯವಾಗಿ ಬಸ್ ಏರಲು ಬರಲೇಬೇಕಾದ ಸಂದರ್ಭವಿದೆ. ಎಷ್ಟೇ ದೂರಿದರೂ ಪಾಲಿಕೆಯವರು ತಲೆಕೆಡಿಸಿಕೊಳ್ಳುತ್ತಿಲ್ಲ. ನಗರದ ಮೂಲಸೌಕರ್ಯದ ಅಭಿವೃದ್ಧಿಗೆ ನೂರಾರು ಕೋಟಿ ರೂ. ಹಣ ಬಂದಿರುವುದುರಿಂದ ಅದರ ವಿನಿಯೋಗದತ್ತಲೇ ಹೆಚ್ಚು ಗಮನ ಕೊಟ್ಟಿರುವ ಪಾಲಿಕೆ, ಬಸ್ ನಿಲ್ದಾಣದ ಸಮಸ್ಯೆ ಬಗ್ಗೆ ಎಷ್ಟೇ ಬರೆದರೂ, ದೂರಿದರೂ  ತಲೆಹಾಕಿ ವಿಚಾರಿಸುತ್ತಿಲ್ಲ.
ನಗರದಲ್ಲಿ ಮಾನಸಿಕ ಅಸ್ವಸ್ಥರ ಕಾಟ ಹೆಚ್ಚುತ್ತಲೇ ಇದೆ.  ಇನ್ನೊಂದೆಡೆ ಭಿಕ್ಷಕರಂತೂ ದಿನಬೆಳಗಾದರೆ ಎಲ್ಲಿಂದ ಬರುತ್ತಾರೋ ಗೊತ್ತಾಗುತ್ತಿಲ್ಲ. ಇವರನ್ನು ನಿಯಂತ್ರಿಸುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಬಸ್ ನಿಲ್ದಾಣ ಸಾರ್ವಜನಿಕರಿಗೆ ಬಸ್ ಏರಲು ಮತ್ತು ಇಳಿಯುವ ಸ್ಥಳವಾಗಿ, ಬಸ್ ನಿರೀಕ್ಷೆ ಮಾಡುವ ಸ್ಥಳವಾಗಬೇಕಿತ್ತು. ಆದರೆ ಈಗ ಭಿಕ್ಷುಕರು, ಮಾನಸಿಕ ಅಸ್ವಸ್ಥರ, ಕುಡುಕರ  ತಾಣವಾಗಿ ಪರಿವರ್ತಿತವಾಗಿದೆ.
 ಬಸ್ ನಿಲ್ದಾಣದ ಒಳಹೊಕ್ಕರೆ ಕನಿಷ್ಠ 10 ಭಿಕ್ಷುಕರು, ಅಸ್ವಸ್ಥರು ಮತ್ತು ಬೀಡಾಡಿ, ಅಡ್ನಾಡಿ ಜನರು ಕಾಣಸಿಗುತ್ತಾರೆ. ಬಸ್  ನಿಲ್ದಾಣದ  ಗಲೀಜಿನಲ್ಲಿ  ಅರ್ಧದಷ್ಟು ಪಾಲು ಇವರದ್ದೇ ಇರುತ್ತದೆ. ಗಲೀಜು ಮಾಡುತ್ತಾ, ಬಂದು ಹೋಗುವವರಿಗೆ ಕಿರಿಕಿರಿಯುಂಟು ಮಾಡುತ್ತಿದ್ದಾರೆ. ಕೆಲವರು ಗಲಾಟೆ ಮಾಡುವುದು, ದಾರಿಹೋಕರಿಗೆ ಬಯ್ಯುವುದನ್ನೂ ರೂಢಿಮಾಡಿಕೊಂಡಿದ್ದಾರೆ. ತಮ್ಮತಮ್ಮಲ್ಲೇ ಕಚ್ಚಾಡಿಕೊಂಡು ಹೊಡೆದಾಡಿಕೊಂಡ ಘಟನೆಯೂ ಇಲ್ಲಿ ನಡೆಯುತ್ತಿದೆ. ವಿಶೇಷವೆಂದರೆ, ಸರಕಾರಿ ಬಸ್ ನಿಲ್ದಾಣದಲ್ಲಿ ಇಂತಹವರೊಬ್ಬರೂ ಕಾಣಸಿಗುವುದಿಲ್ಲ. ಅಲ್ಲಿನ ಶಿಸ್ತು, ಸ್ವಚ್ಛತೆ ಕಾಪಾಡುವವರು ಇವರಿಗೆ ಪ್ರವೇಶವನ್ನೇ ನೀಡುವುದಿಲ್ಲ. ಹಾಗಾಗಿ ಪಕ್ಕದಲ್ಲಿರುವ ಮತ್ತು ಮಲಗಲು, ತಿರುಗಾಡಲು ವಿಶಾಲವಾಗಿರುವ, ಏನು ಮಾಡಿದರೂ ಕೇಳುವವರು ಯಾರೂ ಇಲ್ಲದಿರುವ ಖಾಸಗಿ ಬಸ್ ನಿಲ್ದಾಣ ಇವರ ಪಾಲಿಗೆ ಆಶ್ರಯತಾಣವಾಗುತ್ತಿದೆ.
  ಪಾಲಿಕೆ ಇಂತಹವರನ್ನು ನಿರ್ಗತಿಕ ತಾಣಕ್ಕೆ ಅಥವಾ ಭಿಕ್ಷುಕರ ಕೇಂದ್ರಕ್ಕೆ ಕಳುಹಿಸುವಲ್ಲಿ ವಿಫಲವಾಗಿದೆ.  ಶಿವಮೊಗ್ಗದಲ್ಲಿ ತಿರುಗಾಡುತ್ತಾ, ಭಿಕ್ಷೆ ಬೇಡಿ ಜೀವಿಸುತ್ತ, ಬಸ್ ನಿಲ್ದಾಣದವನ್ನೇ ಮನೆಯನ್ನಾಗಿಮಾಡಿಕೊಂಡವರೂ ಇದ್ದಾರೆ. ಬಸ್ ನಿಲ್ದಾಣದ ಹೊರತಾಗಿ ಎಲ್ಲ ಪ್ರಮುಖ ರಸ್ತೆ, ಬಡಾವಣೆಯಲ್ಲೂ, ಫುಟ್‌ಪಾತ್‌ನಲ್ಲೂ ಅಂಡಲೆಯುತ್ತಾರೆ. ಭಿಕ್ಷುಕರಂತೂ ಫುಟ್‌ಪಾತ್‌ನಲ್ಲಿ ಓಡಾಡುವವರನ್ನು ಅಡ್ಡಗಟಿ, ಮೈಮುಟ್ಟ್ಟಿ ಭಿಕ್ಷೆ ಕೇಳುವುದು ಸಾಮಾನ್ಯವಾಗಿದೆ. ಬಸ್ ನಿಲ್ದಾಣದ ಪಹರೆಗೆ ದಿನವೂ ಪೊಲೀಸರನ್ನು ನೇಮಿಸಲಾಗುತ್ತಿದೆ. ಆದರೆ ಆ ಪೊಲೀಸರು ಎಲ್ಲಿರುತ್ತಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ.  ಪೊಲೀಸರ ಭಯವಿಲ್ಲದಿರುವುದರಿಂದ ಪುಂಡರು, ಚುಡಾಯಿಸುವವರು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಾರೆ.  
 ಪ್ರತಿ ತಿಂಗಳು ಸುಮಾರು 100ರಷ್ಟು ಭಿಕ್ಷುಕರು ಖಾಸಗಿ ಬಸ್ ನಿಲ್ದಾಣಕ್ಕೆ ಬರುತ್ತಾರೆ ಎಂದು ಅಲ್ಲಿನ ಬಸ್ ಏಜೆಂಟರೊಬ್ಬರು ಹೇಳುತ್ತಾರೆ. ಮಾನಸಿಕ ಅಸ್ವಸ್ಥರನ್ನು ಕೆಲವರು ಇಲ್ಲಿಗೆ ತಂದುಬಿಡುವುದೂ  ಇದೆ. ಕೆಲವು ವೃದ್ಧರನ್ನು ಅವರ ಕುಟುಂಬದವರು ತಂದು ಭಿಕ್ಷೆಗೆ ಇಳಿಸಿದ ಉದಾಹರಣೆಯೂ ಇದೆ. ಪಾಲಿಕೆ ಇದನ್ನೆಲ್ಲ ತಡೆಗಟ್ಟಿದಿದ್ದರೆ ಇದೇ ಭಿಕ್ಷುಕರ ಮತ್ತು ಮಾನಸಿಕ ಅಸ್ವಸ್ಥರೆ, ನಿರ್ಗತಿಕರ ಕೇಂದ್ರವಾದರೂ ಆಶ್ಚರ್ಯವೇನಿಲ್ಲ.


Wednesday, 18 May 2016

 ಮತ್ತೆ ಮೈಕೊಡವಿ ನಿಲ್ಲಿ 




ಎಸ್ಸೆಸೆಲ್ಸಿ  ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಫಲಿತಾಂಶ ನೋಡಿ ಮಕ್ಕಳು ಹತಾಶರಾಗಬಾರದು. ಜೀವನ ಇನ್ನೂ ಇದೆ ಎನ್ನುವುದನ್ನು ಅರಿತು ದಿಟ್ಟ ಹೆಜ್ಜೆ ಇಡಬೇಕಿದೆ. ಪರೀಕ್ಷೆಗಳೇ ಅಂತಿಮವಲ್ಲ. ನಮ್ಮ  ಜೀವನ ಎಂಬ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕು. ಇದನ್ನರಿತು ಹೆಜ್ಜೆ ಇಡಬೇಕು.



ಮಕ್ಕಳೇ, ಬೀಳುವುದು ಏಳುವುದಕ್ಕಾಗಿ; ಏಳುವುದು ಎದ್ದು ನಿಲ್ಲುವುದಕ್ಕಾಗಿ; ಎದ್ದು ನಿಲ್ಲುವುದು ಗಟ್ಟಿಗೊಂಂಡು ಬದುಕುವುದಕ್ಕಾಗಿ. ‘ಸೋಲೇ ಗೆಲುವಿನ ಸೋಪಾನ’ ಎಂದರು ನಮ್ಮ ಹಿರಿಯರು. ಪರೀಕ್ಷೆ ಮುಗಿದ ಬಳಿಕ ಎಷ್ಟೊಂದು ನಿರೀಕ್ಷೆಗಳೊಂದಿಗೆ ಫಲಿತಾಂಶಕ್ಕಾಗಿ ಕಾದು ಕೂತಿದ್ದ ನಿಮಗೆ ಬಹಳಷ್ಟು ನಿರಾಸೆಯಾಗಿದೆಯಲ್ಲವೇ? ವಿದ್ಯಾರ್ಥಿಗಳೇ, ಸೋಲು ನಮ್ಮ ಬದುಕಿಗೆ ಸ್ಫೂರ್ತಿಯಾಗಬೇಕೇ ಹೊರತು, ಸೋತು ಸುಣ್ಣವಾಗುವುದಲ್ಲ. ನಿಮ್ಮ ಸೋಲಿಗೆ ನೀವೊಬ್ಬರೇ ಕಾರಣರಲ್ಲ ಎನ್ನುವುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು. ಹೆತ್ತವರ ಅತಿಯಾದ ಒತ್ತಡ, ನಿರೀಕ್ಷೆಗಳಿಂದ ನೀವು ತತ್ತರಿಸಿರಬಹುದು; ನಿಮ್ಮ ಸಹಪಾಠಿಗಳೊಂದಿಗೆ ನಿಮ್ಮನ್ನು ತೂಗಿ ನೋಡುವ ನಿಮ್ಮ ಅಧ್ಯಾಪಕ ವರ್ಗ ನಿಮ್ಮ ಸೋಲಿಗೆ ಕಾರಣವಾಗಿರಬಹುದು; ಸ್ವಲ್ಪ ಮಟ್ಟಿನ ನಿಮ್ಮ ಹುಡುಗಾಟವೂ ಇದಕ್ಕೆ ಕಾರಣವಾಗಿರಬಹುದು. ಅದೇನೇ ಇರಲಿ, ಫಲಿತಾಂಶ ಈಗ ನಿಮ್ಮ ಮುಂದಿದೆ. ಅದನ್ನು ನೋಡುತ್ತ ನಿರಾಶರಾಗಿ ಆಕಾಶದತ್ತ ಮುಖಮಾಡಿ, ನಾವು ‘ನಾಲಾಯಕ್’ ಎಂದು ನಮ್ಮನ್ನು ನಾವೇ ಹಗುರವಾಗಿ ಕಾಣದೆ, ಮೈಕೊಡವಿ ನಿಲ್ಲಬೇಕಾಗಿದೆ.
ಎಸ್ಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟವಾದೊಡನೆ ಅದರಲ್ಲಿ ಫೇಲಾದವರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗುವುದನ್ನು ಕಾಣುತ್ತೇವೆ, ಕೇಳುತ್ತೇವೆ. ಅಥವಾ ಫಲಿತಾಂಶ ನೋಡಲು ತೆರಳಿದವರು ಕಾಣೆಯಾಗುತ್ತಾರೆ. ವಿದ್ಯಾರ್ಥಿಗಳಲ್ಲಿ ಇಂತಹ ಅಧೀರತ್ವವವನ್ನು ಪರೀಕ್ಷೆ ಮುನ್ನವೇ ಶಿಕ್ಷಕರಾದವರು ಹೊಡೆದೋಡಿಸಬೇಕು. ಜೀವನವೇ ಒಂದು ಪರೀಕ್ಷೆಯಾಗಿರುವಾಗ ಅದರಲ್ಲಿ ಏಳುಬೀಳುಗಳು ಸಹಜ. ಜೊತೆಗೆ  ಎಸ್ಸೆಸೆಲ್ಸಿ ಮತ್ತು ಪಿಯು ಪರೀಕ್ಷೆಗಳೇ ಅಂತಿಮವಲ್ಲ. ನಮ್ಮ  ಜೀವನ ಎಂಬ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕು. ಇದನ್ನರಿತು ಹೆಜ್ಜೆ ಇಡಬೇಕು.
ಈಸಬೇಕು ಇದ್ದು ಜಯಿಸಬೇಕೆಂದು ದಾಸರು ಹೇಳಿದ್ದಾರೆ. ಆ ಪ್ರಕಾರ ಯಾವುದೇ ಪರೀಕ್ಷೆ ಇರಲಿ, ಅದರಲ್ಲಿನ ಸೋಲನ್ನೇ ಮನಸ್ಸಿಗೆ ತೆಗೆದುಕೊಳ್ಳದೆ, ಜಯಿಸಲು ಏನು ಮಾಡಬೇಕೆನ್ನುವುದರ ಬಗ್ಗೆ ಚಿಂತನೆ ಮಾಡಬೇಕು. ಆಗ ಮುಂದಿನ ಹೆಜ್ಜೆ ಇಡಲು ಸರಿಯಾದ ಮಾರ್ಗ ಕಾಣುತ್ತದೆ.
ಎಸ್‌ಎಸ್‌ಎಲ್‌ಸಿ  ಫಲಿತಾಂಶ ಪ್ರಕಟವಾಗಿದೆ. ಈ ಫಲಿತಾಂಶ ನೋಡಿ ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಅಧೀರರಾಗಬಾರದು. ಒಂದು ವೇಳೆ ಫಲಿತಾಂಶ ಹೆಚ್ಚುಕಡಿಮೆ ಆಗಿದ್ದರೂ ತಮ್ಮನ್ನು ತಾವೇ ಸಂತೈಸಿಕೊಂಡು ಮುಂದಿನ ಹೆಜ್ಜೆ ಇಡಬೇಕು. ಅದನ್ನು ಬಿಟ್ಟು ಆತ್ಮಹತ್ಯೆಯಂತಹ ಕೃತ್ಯಕ್ಕೆ ಖಂಡಿತ ಇಳಿಯಬಾರದು.
ಹೋದ ಜೀವ ಮರಳಿಬಾರದು. ಆದರೆ ಫೇಲಾದವರು ಮತ್ತೆ ಪರೀಕ್ಷೆ ತೆಗೆದುಕೊಂಡರೆ ಚೆನ್ನಾಗಿ ಓದಿ ಪಾಸಾಗಬಹುದು, ಉನ್ನತ ಸಾಧನೆ ಮಾಡಲು ಅವಕಾಶವಿದೆ. ಇದನ್ನು ಮೊದಲು ಯೋಚನೆ ಮಾಡಬೇಕು. ಫಲಿತಾಂಶದಿಂದ ಹೆದರಿ, ಅಥವಾ ಬೇಸರಪಟ್ಟುಕೊಂಡು ಏನಾದರೂ ಅನಾಹುತ ಮಾಡಿಕೊಂಡರೆ ಲಾಭವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಫೇಲಾದರೂ ಮುಂದಿನ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಪಾಲಕರೂ ಸಹ ತಮ್ಮ ಮಕ್ಕಳು ಫೇಲಾಗಿದ್ದರೆ ಅಥವಾ ಕಡಿಮೆ ಅಂಕ ಗಳಿಸಿದ್ದರೆ ಬಯ್ಯುವುದು, ನಿಂದಿಸುವುದನ್ನು ಮಾಡಬಾರದು. ಇದೂ ಸಹ ಅವರ ಮನಸ್ಸಿಗೆ ನೋವನ್ನುಂಟು ಮಾಡುವುದರ ಜೊತೆಗೆ ಅಧೀರರನ್ನಾಗಿರಿಸುತ್ತದೆ. ಒಂದು ವೇಳೆ ಫೇಲಾಗಿದ್ದರೂ ಅವರಲ್ಲಿ ಸಾಂತ್ವನ ಹೇಳಿ ಮತ್ತೆ ಮತ್ತೆ ಓದಿ ಪಾಸಾಗುವಂತೆ ಹುರಿದುಂಬಿಸಬೇಕು. ಹಿನ್ನಡೆ ಕಂಡವರೂ  ಸಹ ಎದೆಗುಂದಬೇಕಿಲ್ಲ.  ಏಕೆಂದರೆ ಮತ್ತೆ ಅವಕಾಶಗಳಿರುತ್ತವೆ. ಪರೀಕ್ಷೆಯೊಂದೇ ಜೀವನವನ್ನು ಅಳೆಯುವ ಸಾಧನವಲ್ಲ ಎನ್ನುವುದನ್ನು ಮೊದಲು ಅರಿಯಬೇಕು. ಜೀವನದ ಕೊನೆ ಇದೇ ಎಂದು ತಿಳಿದುಕೊಳ್ಳಬಾರದು. ಒಂದು ವೇಳೆ ಮಕ್ಕಳಲ್ಲಿ ಓದುವ ಆಸಕ್ತಿ ಇಲ್ಲವಾದಲ್ಲಿ ಅವರಲ್ಲಿರುವ ಇನ್ನಿತರ ಪ್ರತಿಭೆಗಳನ್ನು ಬೆಳೆಸಿಕೊಳ್ಳಲು ಪಾಲಕರು ಅವಕಾಶ ಕೊಡಬೇಕು. ಒಟ್ಟಿನಲ್ಲಿ ವಿದ್ಯಾರ್ಥಿಗಳು ದುಡುಕದಂತೆ ಪಾಲಕರು ನಿಗಾ ವಹಿಸಬೇಕು.
ಮಕ್ಕಳೂ ಸಹ ಯಾವ ಕಾರಣಕ್ಕೂ ತಮ್ಮ ಭವಿಷ್ಯ ಇಲ್ಲಿಗೆ ಅಂತ್ಯವಾಯಿತು ಎಂದು ಭಾವಿಸಬಾರದು. ವಿದ್ಯಾಭ್ಯಾಸವಿರಲಿ, ಜೀವನವಿರಲಿ ಯಶಸ್ಸು ಸುಲಭದಲ್ಲಿ ಸಿಗದು. ಹೋರಾಟ ಮಾಡಿ ಮುನ್ನುಗ್ಗಿದರೆ ಮಾತ್ರ ಯಶಸ್ಸು ಕಟ್ಟಿಟ್ಟದ್ದು ಎನ್ನುವುದನ್ನು  ಮರೆಯಬಾರದು. ಅರಳುವ ಹೂವುಗಳು ಮೊಗ್ಗಿನಲ್ಲೇ  ಕಮರಬಾರದು. ಅವು ಹೂವಾಗಿ ಅರಳಿ ಇಡೀ ಸಮಾಜಕ್ಕೆ ಕಂಪನ್ನು ಬೀರಬೇಕು. ಅದಕ್ಕಾಗಿಯೇ ಹೇಳಿದ್ದು: ಬಾಳೊಂದು ಹೋರಾಟ ಎಂದು. ಹೋರಾಟ ಮಾಡಿ ಬೆಳೆದರೆ ಸಮಾಜದಲ್ಲಿ ಕಂಪು ಬೀರಲು ಸಾಧ್ಯ. ಅಂಜದೆ, ಅಳುಕದೆ ಮುನ್ನುಗ್ಗಿದರೆ ಯಶಸ್ಸು ಕಾಣಲು ಸಾಧ್ಯ.
  ..............................................

Monday, 16 May 2016



 ಕೆಮಿಕಲ್ ಮಿಶ್ರಿತ ಹಣ್ಣುಗಳ ದರ್ಬಾರು 



   ಈಗ ಮಾರಾಟವಾಗುತ್ತಿರುವ ಮಂಡಿಯ ಮಾವಿನ ಹಣ್ಣುಗಳಲ್ಲಿ ಕಾರ್ಬೈಡ್, ಎಥ್ರೇಲ್‌ನಂತಹ ಅಪಾಯಕಾರಿ ಕೆಮಿಕಲ್ ಕಂಡುಬಂದಿದೆ. ಈ ಹಣ್ಣುಗಳನ್ನು ಆಸೆಗಾಗಿ ತಿಂದರೆ ರೋಗ ಫ್ರೀ.  ಇದು ಅಂಗಡಿಯವರು ಕೊಡುವ ಉಚಿತ ಕೊಡುಗೆಯಂತೆ! ಆಯಾಯ ಸೀಸನ್‌ನಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೂ ಪಾಠ ಕಲಿಯದ ಹೋಲ್‌ಸೇಲ್ ವ್ಯಾಪಾರಸ್ಥರು, ದಂಡ ಕಟ್ಟಿ ಅಧಿಕಾರಿಗಳು ಅತ್ತ ಹೋದ ನಂತರ ಮತ್ತದೇ ಕೆಲಸವನ್ನು ಮಾಡುತ್ತಿದ್ದಾರೆ.  ಇನ್ನೊಂದೆಡೆ, ತನ್ನ ವ್ಯಾಪ್ತಿಯಲ್ಲೇ ಇಂತಹ ಕೃತ್ಯ ನಡೆಯುತ್ತಿದ್ದರೂ ಪಾಲಿಕೆಯ ಆರೋಗ್ಯಾಧಿಕಾರಿಗಳು ತಮಗೆ ಸಂಬಂಧವಿಲ್ಲ ಎಂಬಂತೆ ಗಾಢ ನಿದ್ದೆಯಲ್ಲಿದ್ದಾರೆ.

 ಬೇಸಿಗೆ ಕಾಲ, ವಿಪರೀತ ಸೆಕೆ, ತಂಪಾಗಿ ಹಣ್ಣು ತಿಂದು ನೆಮ್ಮದಿಪಡೋಣ ಎಂದರೂ ಸಂಚಕಾರ ತಪ್ಪಿದ್ದಲ್ಲ. ಯಾವ ಹಣ್ಣು ತಿನ್ನಬೇಕು, ಯಾವ ಹಣ್ಣು ಬಿಡಬೇಕು ಎಂದು ಹುಡುಕಾಡುತ್ತೇವೆ. ಈಗ ಮಾವಿನಹಣ್ಣು ಆಗಮಿಸುತ್ತಿದೆ. ತಳ್ಳುಗಾಡಿಯಲ್ಲೂ ಮಾವು ಅಗ್ಗದ ದರದಲ್ಲಿ (50-60 ರೂ. ಕೆಜಿಗೆ) ಸಿಗುತ್ತಿದೆ. ವರ್ಷಕ್ಕೆ ಒಂದೇ ಸೀಸನ್‌ನಲ್ಲಿ ಬರುವ ಈ ಹಣ್ಣಿನ ಮೇಲೆ ಪ್ರೀತಿ ಇದ್ದರಂತೂ ಖಂಡಿತ ಖರೀದಿಸುತ್ತೇವೆ. ಆದರೆ ಈ ಹಣ್ಣುಗಳು ತಾವಾಗಿ ಹಣ್ಣಾಗಿ, ಮಾಗಿದವಲ್ಲ, ಬದಲಾಗಿ ಕೆಮಿಕಲ್ ಹಾಕಿ ಅವಸರದಲ್ಲಿ ಹಣ್ಣನ್ನಾಗಿ ಮಾಡಲ್ಪಟ್ಟವು.
ಇದನ್ನು ಕೇಳಿ ಗಾಬರಿಯಾಗಿರಬಹುದು. ಏಕೆಂದರೆ ಇತ್ತೀಚೆಗೆ ಕಾಯಿಯಾಗಿ ಬಲಿತು ಕೊಯ್ದು ಹಣ್ಣು ಹಾಕಿದ ಮಾವು ಪೇಟೆಯಲ್ಲಿ ಸಿಗುವುದು ಶೇ 10ರಷ್ಟು ಸಂದರ್ಭದಲ್ಲಿ ಮಾತ್ರ. ಎಲ್ಲೋ ಗ್ರಾಮಾಂತರ ಪ್ರದೇಶದ ಬಡ ರೈತರು ತಮ್ಮ ಹೊಲದಲ್ಲಿ, ತೋಟದಲ್ಲಿ ಬೆಳೆದ ಇಂತಹ ಸತ್ವಭರಿತ ಹಣ್ಣನ್ನು ತಂದು ಮಾರಾಟ ಮಾಡಿದರೂ ಅದಕ್ಕೆ ದೊರೆಯುವುದು ಕಿಲುಬು ಕಾಸು ಮಾತ್ರ. ಆದರೆ ದೊಡ್ಡ ಮಳಿಗೆೆ, ಅಂಗಡಿ ಮತ್ತು ಹಣ್ಣಿನ ವ್ಯಾಪಾರಿಗಳ ಬಳಿ ನೂರು-ಇನ್ನೂರಾದರೂ ದರ ಕೊಟ್ಟು ಕೆಮಿಕಲ್‌ನಿಂದ ಆದ ಹಣ್ಣನ್ನೇ ತಂದು ತಿನ್ನುತ್ತೇವೆ. ಅಂದರೆ ರೈತ ಯಾವುದೇ ಅಪಾಯವಿಲ್ಲದ, ಸಾವಯವದ  ಹಣ್ಣನ್ನು ತಂದು ಮಾರಿದರೂ ಅದಕ್ಕೆ ಬೆಲೆ ಕೊಡದೆ ವಿಷ ಹಾಕಿ ಹಣ್ಣು ಮಾಡಿದವರ ಬಳಿಯೇ ಹಣ್ಣು ಖರೀದಿಸಿ ತಿನ್ನುತ್ತಿದ್ದೇವೆ.
ಇತ್ತೀಚೆಗೆ ನಗರದ ಹಣ್ಣಿನ ಹೋಲ್‌ಸೇಲ್ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮಾವಿನಹಣ್ಣು, ತೋತಾಪುರಿ, ನೀಲಂ, ರಸಪೂರಿ, ಬಾದಾಮಿ ಮೊದಲಾದ ಜಾತಿಗಳ ಹಣ್ಣುಗಳಲ್ಲಿ ಕೆಮಿಕಲ್ ಅಂಶ ಪತ್ತೆಯಾಗಿದೆ. ಜೊತೆಗೆ ಸಪೋಟಾ, ಮೂಸಂಬಿ ಮತ್ತು ಬಾಳೆಹಣ್ಣಿನಲ್ಲೂ  ವಿಷಕಾರಿ ರಾಸಾಯನಿಕ ಮಿಶ್ರಣ ಪತ್ತೆಯಾಗಿದೆ.
ನಗರದ 13 ಮಳಿಗೆ ಮತ್ತು 3 ಮಂಡಿಗಳ ಮೇಲೆ ಈ ದಾಳಿ ನಡೆದಿದೆ. ಈ ಎಲ್ಲ ಕಡೆ ಹಣ್ಣಿನ  ಭರ್ಜರಿ  ರಾಶಿಯೇ ಇತ್ತು.  ಈ ಹಣ್ಣುಗಳಲ್ಲಿ ಕಾರ್ಬೈಡ್, ಎಥ್ರೇಲ್‌ನಂತಹ ಅಪಾಯಕಾರಿ ಕೆಮಿಕಲ್ ಕಂಡುಬಂದಿದೆ. ಈ ಹಣ್ಣುಗಳನ್ನು ಆಸೆಗಾಗಿ ತಿಂದರೆ ರೋಗ ಫ್ರೀ.  ಇದು ಅಂಗಡಿಯವರು ಕೊಡುವ ಉಚಿತ ಕೊಡುಗೆಯಂತೆ!
ಹಣ್ಣುಗಳು ನೋಡಲು ಕೆಂಪಾಗಿ, ಆಕರ್ಷಕವಾಗಿದ್ದರಂತೂ ಎಲ್ಲರೂ ಅದಕ್ಕೆ ಮುಗಿಬಿದ್ದು ಖರೀದಿಸುತ್ತಾರೆ. ಮನೆಗೆ ಹೋಗಿ ಕೊಯ್ದಾಗ  ರುಚಿ ಹುಳಿಯಾಗಿರುತ್ತದೆ. ಈ ಹುಳಿ ಹಣ್ಣು ತಿಂದವರಿಗೆ ಹೊಟ್ಟೆಯುಬ್ಬರ ಬರುವುದು ನಿಶ್ಚಿತ. ಇದರೊಂದಿಗೆ ಕ್ಯಾನ್ಸರ್, ಮೆದುಳಿನ ಮೇಲೆ ದುಷ್ಪರಿಣಾಮದ ಅಪಾಯವೂ ಇದೆ. ಜೊತೆಗೆ ಚರ್ಮ ಉರಿತ, ಕೆರೆತ, ಗಂಟಲು ನೋವು ಮತ್ತು ಕೆರೆತವೂ ಬರಬಹುದಾಗಿದೆ.
ನಾವೆಲ್ಲ ತಿಳಿದೋ, ತಿಳಿಯದೆಯೋ ನಮ್ಮ ಪ್ರಾಣಕ್ಕೆ ನಾವೇ ಸಂಚಕಾರ ತಂದುಕೊಳ್ಳುತ್ತಿದ್ದೇವೆ. ಹಣ್ಣುಗಳ ದಲಾಲರೂ ಸಹ  ಇದು ಗೊತ್ತಿದ್ದೂ ಜನರ ಜೀವದೊಡನೆ ಆಟವಾಡುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಿಂದ ಸತತವಾಗಿ ಇಂತಹ ಅಂಗಡಿಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಆಯಾಯ ಸೀಸನ್‌ನಲ್ಲಿ ದಾಳಿ ನಡೆದಿದೆ. ಆದರೂ ಪಾಠ ಕಲಿಯದ ಹೋಲ್‌ಸೇಲ್ ವ್ಯಾಪಾರಸ್ಥರು ಅಧಿಕಾರಿಗಳು ಅತ್ತ ಹೋದ ನಂತರ ಮತ್ತದೇ ಕೆಲಸವನ್ನು ಮಾಡುತ್ತಿದ್ದಾರೆ.
ನಗರದ ಓಟಿ ರಸ್ತೆಯ ಆರಂಭದಲ್ಲಿ ಸುಮಾರು ಹತ್ತಾರು ಹಣ್ಣು ವ್ಯಾಪಾರಸ್ಥರು ಹೋಲ್‌ಸೇಲ್ ಮಾರಾಟ ಮಾಡುತ್ತಿದ್ದು, ಅಲ್ಲಿಯೇ ಕಾಯಿ ಹಣ್ಣುಮಾಡುತ್ತಿರುವುದು ಕಳೆದ ವರ್ಷ ದಾಳಿಯ ವೇಳೆ ಪತ್ತೆಯಾಗಿತ್ತು. ಇದರ ಹೊರತಾಗಿ ಬಾಳೆ ಹಣ್ಣುಗಳನ್ನೂ ಸಹ ನಗರದ ನೂರಾರು ಮಳಿಗೆಗಳಲ್ಲಿ ರಾಸಾಯನಿಕ ಭರಿಸಿ ರಾತ್ರಿ ಬೆಳಗಾಗುವುದರೊಳಗೆ ಹಣ್ಣು ಮಾಡುವ ಕಾಯಕ ನಿತ್ಯನಿರಂತರವಾಗಿದೆ. ಬಾಳೆಕಾಯಿಯನ್ನು ಹೋಲ್‌ಸೇಲ್ ದರದಲ್ಲಿ ತರುವ ಇವರು, ಮಳಿಗೆಯಲ್ಲೇ ಸಣ್ಣ ಕೊಠಡಿ ನಿರ್ಮಿಸಿ ಈ ದಂಧೆ ನಡೆಸುತ್ತಿದ್ದಾರೆ. ಇದನ್ನೆಲ್ಲ ತಡೆಗಟ್ಟುವ ಬಿಗಿಯಾದ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳಬೇಕಿದೆ.

Thursday, 12 May 2016

ಪಂಡಿತ, ಪ್ರವಚನಕಾರ, ಪುರೋಹಿತ ವಿ.ಎನ್. ಭಟ್ 

  ನಿನ್ನೆ ನಮ್ಮನ್ನಗಲಿದ ವಿದ್ವಾನ್ ವಿ.ಎನ್. ಭಟ್ ಅವರಿಗೊಂದು ನುಡಿನಮನ



ವಿ.ಎನ್. ಭಟ್ಟರು ಒಂದು ಸಂಸ್ಕೃತಿಯನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಸಮಾಜಮುಖಿಯಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಂಸ್ಕೃತ , ಕನ್ನಡ, ಹಿಂದಿಯಲ್ಲಿ ಪರಿಣಿತರಾಗಿ  ಪ್ರಗಲ್ಭ ಪ್ರವಚನಕಾರರಾಗಿ,  ಪ್ರಸಿದ್ಧ ಪುರೋಹಿತರಾಗಿ ಹೆಸರಾಗಿದ್ದರು. ಪೌರೋಹಿತ್ಯ ಕೆಲಸ ಮಾಡುವವರನ್ನೆಲ್ಲ ಒಂದೇ ಸೂರಿನಡಿ ತಂದು ವೈದಿಕ ಪರಿಷತ್ ಸ್ಥಾಪಿಸಿದ ಮಹತ್ಕೀರ್ತಿ ಅವರದ್ದು. ಸಹ್ಯಾದ್ರಿ ಕಾಲೇಜಿನಲ್ಲಿ 27 ವರ್ಷ ಪಾಠ-ಪ್ರವಚನ ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ, ಸಾವಿರಾರು ಶಿಷ್ಯಂದಿರನ್ನು ಪಡೆದಿದ್ದಾರೆ. ನಿವೃತ್ತ್ತಿ ಜೀವನವನ್ನು ಹೇಗೆ ಕಳೆಯಬೇಕೆನ್ನುವುದಕ್ಕೆ ಮಾದರಿಯಾಗಿದ್ದಾರೆ ಭಟ್ಟರು.  



  ‘ ವಿದ್ವಾನ್ ಸರ್ವತ್ರ ಪೂಜ್ಯತೆ’ ಎಂಬ ಮಾತಿದೆ. ವಿದ್ವಾಂಸರಿಗೆ ಎಲ್ಲೆಡೆಯೂ ಪೂಜ್ಯನೀಯ ಸ್ಥಾನವಿದೆ. ಗೌರವದಿಂದ, ಆದರದಿಂದ ಅವರನ್ನು ಕಾಣಲಾಗುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ನಿನ್ನೆಯಷ್ಟೇ ನಮ್ಮನ್ನಗಲಿದ ಅಸ್ಖಲಿತ ವಾಗ್ಮಿ ವಿ.ಎನ್. ಭಟ್ ಬೆತ್ತಗೇರಿ ಅವರು.
 ಭಟ್ಟರು ಬಹುದೊಡ್ಡ ವಿದ್ವಾಂಸರು. ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ಅಸಾಧಾರಣ ಪ್ರೌಢಿಮೆ ಹೊಂದಿದವರಾಗಿದ್ದರು. ಅವರ ಬಾಯಲ್ಲೇ ಶಬ್ದಕೋಶವಿರುತ್ತಿತ್ತು. ಯಾವುದದರೊಂದು ಶಬ್ದದ ಅರ್ಥ ಕೇಳಿದರೆ ಅದಕ್ಕೆ ಸಂಬಂಧಿಸಿ ಶ್ಲೋಕವನ್ನೇ ಹೇಳಿ ಕನ್ನಡದಲ್ಲಿ ಅರ್ಥ ವಿವರಿಸುತ್ತಿದ್ದರು. ಅಂತಹ ಒಂದು ವಿಶೇಷ ಜ್ಞಾನ ಅವರಲ್ಲಿತು.  ವಿಶೇಷವಾಗಿ ವಿದ್ವಾಂಸರೆನಿಸಿಕೊಂಡವರು ಜನಸಾಮಾನ್ಯರೊಂದಿಗೆ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ಭಟ್ಟರ ವಿಷಯದಲ್ಲಿ ಇದು ಸುಳ್ಳಾಗಿತ್ತು. ಏಕೆಂದರೆ ಅವರಿರುವುದೇ ಜನಸಾಮಾನ್ಯರ ಮಧ್ಯದಲ್ಲಾಗಿತ್ತು. ಅವರೊಡನೆ ಬೆರೆತು, ಸುಖ-ದುಃಖ ವಿಚಾರಿಸಿ, ಅದನ್ನು ಹಂಚಿಕೊಳ್ಳುವ ಸಹೃದಯತೆ ಅವರಲ್ಲಿತ್ತು. ಅವರೆಂದೂ ಜ್ಞಾನವನ್ನು ತಾವು ಮಾತ್ರ  ಇಟ್ಟುಕೊಂಡಿರಲಿಲ್ಲ.
ಸಂಸಕ್ರತ- ಕನ್ನಡ, ಹಿಂದಿ ಈ ಮೂರೂ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅಧ್ಯಯನ ಮತ್ತು ಅಧ್ಯಾಪನ ಮಾಡುತ್ತಲೇ ಅಪಾರ ಅನುಭವವನ್ನು ಕಲೆಹಾಕಿದ ಮೇಧಾವಿ ಇವರು. ಆಂಗ್ಲ ಭಾಷೆಯಲ್ಲೊಂದು ಮಾತಿದೆ ‘ಎ ವರ್ಧಿ ಲೈಫ್ ವಿತ್ ರೈಟ್ ನಾಲೆಜ್’ ಎಂದುದು. ಅಂದರೆ ಸಾರ್ಥಕ ಜೀವನ ಪ್ರಾರಂಭವಾಗುವುದು ಸರಿಯಾದ ಜ್ಞಾನದಿಂದ ಮಾತ್ರ. ಇದು ಭಟ್ಟರ ಮಟ್ಟಿಗೆ ನೂರರಷ್ಟು ಸತ್ಯವಾಗಿದೆ.
ಸಂಸ್ಕೃತ ವಿದ್ವಾಂಸರಾಗಿ, ಕನ್ನಡ ಪಂಡಿತರಾಗಿ, ಹಿಂದಿ ಪರಿಣಿತರಾಗಿ ಪ್ರಸಿದ್ಧ ಲೇಖಕರಾಗಿ, ಪ್ರಗಲ್ಭ ಪ್ರವಚನಕಾರರಾಗಿ ಆಪ್ತ ಪುರೋಹಿತರಾಗಿ, ವಧೂವರರನ್ನು ಸೇರಿಸುವ ಪುರುಷಕಾರರಾಗಿ, ನಂಬಿದವರ ಕೈ ಹಿಡಿದೆತ್ತುವ ಆಪದ್ಭಾಂಧವರಾಗಿ ಕಲಾವಿದರಾಗಿ, ಪ್ರಕಾಶಕರಾಗಿ, ಕಲಾಪ್ರೇಮಿಯಾಗಿ, ಸಂಘಟಕರಾಗಿ ಕೆಲಸ ಮಾಡಿದ್ದಾರೆ. ಸಹ್ಯಾದ್ರಿ ಕಾಲೇಜಿನಲ್ಲಿ 27 ವರ್ಷ ಪಾಠ-ಪ್ರವಚನ ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ನಿವೃತ್ತಿಯಾದ ನಂತರ ಕಾಲವನ್ನು ಹೇಗೆ ಕಳೆಯಬೇಕೆಂದು ಯೋಚಿಸುವವರೇ ಜಾಸ್ತಿ ಇರುವ ಇಂದಿನ ದಿನಗಳಲ್ಲಿ ಅವರಿಗೆ ಈ ಸಮಸ್ಯೆ ಕವಿಯಲಿಲ್ಲ. ನಂತರವೂ ಲೇಖನ ಬರೆಯುವುದು, ಪ್ರವಚನ ನೀಡುವುದು, ಪೌರೋಹಿತ್ಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ನೆಮ್ಮದಿಯ ವಾಸವನ್ನು ಅನುಭವಿಸುತ್ತಿದ್ದರು.
ಭಟ್ಟರ ಮೊಗದಲ್ಲಿ ಸದಾ ಮಗುವಿನ ನಗು, ಅರಳು ಮಲ್ಲಿಗೆಯ ಮಾತು, ನಾಲಿಗೆಯಲ್ಲಿ ನೋವಿಗೆ ಹಾಯೆನ್ನುವ ಮಾರ್ದವ, ಹೃದಯದಲ್ಲಿ ಅಂಟಿಕೊಳ್ಳುವ ನಂಟು , ಮನದಲ್ಲಿ ಸಹೃದಯಿತ್ವ ಇತ್ತು. ಅವರನ್ನು ಮೊದಲ ಬಾರಿ ನಾನು ನೋಡಿದಾಗಲೇ ಇದು ನನಗನ್ನಿಸಿದ್ದು. ಸುಮಾರು 10 ವರ್ಷಗಳ ಹಿಂದೆ ಅಂದು ನಾನು ಕೆಲಸ ಮಾಡುತ್ತಿದ್ದ ಪತ್ರಿಕಾಲಯಕ್ಕೆ ಬಂದಿದ್ದ ಅವರು ನನಗೆ ಬರಬರುತ್ತ ಸಂಬಂಧಿಯಂತಾದರು. ಸರ್ವದೃಷ್ಟಿಯಿಂದಲೂ ವಂದ್ಯರೆನ್ನುವುದನ್ನು ಆಗಲೇ ಕಂಡುಕೊಂಡಿದ್ದೆ.
ಸದ್ಯ ದೂರವಾಗುತ್ತಿರುವ ಭಾರತಿಯ ಸಂಪ್ರದಾಯದ ವಿದ್ವಾಂಸರ ಪರಂಪರೆಯ ಪ್ರತಿನಿಧಿ ಅವರಾಗಿದ್ದರು. ಅವರ ಕುಟುಂಬವೇ ಪೌರೋಹಿತ್ಯದ ಕೆಲಸ ಮಾಡುತ್ತಿತ್ತು. ಅದನ್ನು ಇವರೂ ಬಿಡದೆ ಕರಗತ ಮಾಡಿಕೊಳ್ಳುತ್ತಲೇ ತಮ್ಮ ಕರ್ಮಭೂಮಿ ಶಿವಮೊಗ್ಗದಲ್ಲಿ ಸಾಗಿದ್ದರು. ಆಧುನಿಕ ಬದುಕಿನ ಧಾರೆಗೂ ಸಲ್ಲುವಂತೆ ಜ್ಞಾನಗಳಿಸಿದ ಹಿರಿಮೆ ಅವರದ್ದು. ಅವರು ಮಾದರಿಯಾಗುವ ಬದುಕು ಬಾಳಿದ, ಸದ್ಗುಣಗಳ ಅಭಿನಂದನೀಯ ವ್ಯಕ್ತಿಯಾಗಿದ್ದರು. ಆದರಣೀಯ ವಿದ್ವಾಂಸರಾಗಿದ್ದರು. ಸಮಾಜದಲ್ಲಿ ಎಲ್ಲರಿಂದ ಮನ್ನಣೆಗೆ ಪಾತ್ರರಾಗಿದ್ದರು.  
ಸದಾ ಜ್ಞಾನಪಿಪಾಸುವಾಗಿದ್ದ ಅವರು ಯಾವುದಾದರೂ ಕೃತಿಯನ್ನು ಹಿದಿಡುಕೊಂಡೇ ಇರುತ್ತಿದ್ದರು. ಅವರಲ್ಲಿ ನಿಗರ್ವಿತನ, ಉದಾತ್ತತೆ, ಪರೋಪಕಾರದ ತುಡಿತ ಇರುವುದನ್ನು ಕಂಡು ಅವರಿಗೆ ತುಂಬಾ ಹತ್ತಿರನಾಗಿಬಿಟ್ಟೆ. ಸಾಂಪ್ರದಾಯಿಕವಾಗಿ ಕಲಿತುಬಂದ ವೇದವಿದ್ಯೆ, ವೇದ ಪ್ರೀತಿ, ವೇದ ಗೌರವದ ಪ್ರತೀಕವಾಗಿ  ತಮ್ಮ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆತ್ತಗೆರೆಯಲ್ಲಿ ತಮ್ಮದೇ ಹೆಸರಿನಲ್ಲಿ ಚಾರಿಟೆಬಲ್ ಸಂಸ್ಥೆಯನ್ನು ಸ್ಥಾಪಿಸಿ ಉಚಿತ ವೇದ, ಸಂಸ್ಕೃತ ಪಾಠಶಾಲೆ ತೆರೆದಿದ್ದರು. ಮಕ್ಕಳ ಶಿಕ್ಷಣಕ್ಕೆ  ಬಡತನ ಮಾರಕವಾಗಬಾರದೆನ್ನುವ ದೃಷ್ಟಿಯಿಂದ ಅಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಪಾಠ ಕಲಿಸುವ ವ್ಯವಸ್ಥೆ ಮಾಡಿದ್ದರು. ವ್ಯಕ್ತಿ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೇ ಸಲ್ಲಿಸಬೇಕು ಎನ್ನುವ ಮಾತಿಗೆ ಅವರು ಬದ್ಧರಾಗಿದ್ದನ್ನು ಇದು ತೋರಿಸುತ್ತದೆ. ಹುಟ್ಟೂರಲ್ಲಿ ವಾರ್ಷಿಕವಾಗಿ ವಿದ್ವಾಂಸರನ್ನು ಕರೆಯಿಸಿ ಸಾರ್ವಜನಿಕ ಸಮಾರಂಭ ಏರ್ಪಡಿಸಿ ಗೌರವಿಸುತ್ತಿದ್ದರು.
ಅವರೊಬ್ಬ ಅತ್ಯಪೂರ್ವ ವಾಗ್ಮಿ. ವಾಚಸ್ಪತಿ, ಅವರಿಗೆ ವಾಕ್‌ಸಿದ್ಧಿ ಇತ್ತು. ಮನೆ ಪ್ರವೇಶ, ಉಪನಯನ, ವಾರ್ಷಿಕ ದೇವತಾರಾಧನೆಗಳಲ್ಲಿ ಅವರಿಂದ ಉಪನ್ಯಾಸವನ್ನು ಸಾಕಷ್ಟು ಕಡೆ ಏರ್ಪಡಿಸಲಾಗುತ್ತಿತ್ತು. ಯಕ್ಷಗಾನ ಅರ್ಥಧಾರಿಯಾಗಿ, ಯಕ್ಷಗಾನ ವಿಮರ್ಶಕರಾಗಿಯೂ ಪ್ರಸಿದ್ಧರಾಗಿದ್ದರು.
ಒಟ್ಟಿನಲ್ಲಿ ಹೇಳಬೇಕೆಂದರೆ, ಅವರು ಒಂದು ಸಂಸ್ಕೃತಿಯನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಸಮಾಜಮುಖಿಯಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಖಿಲ ಭಾರತ ಹವ್ಯಕ ಮಹಾಸಭಾದ ನಿರ್ದೇಶಕರಾಗಿ, ತಮ್ಮ ಮೌಲ್ಯಯುತ ಸಲಹೆಗಳಿಂದ ಅದರ ಗೌರವವನ್ನು ಹೆಚ್ಚಿಸಿದ್ದಾರೆ. ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಭಟ್ಟರನ್ನು ಕಂಡರೆ ಅದೇನೋ, ಪ್ರೀತಿ. ವಿಶ್ವಾಸ. ಇತ್ತೀಚೆಗೆ ಮತ್ತೂರು ಸಮೀಪ ಸೋಮಯಾಗ ನಡೆದು ಅದು ವಿವಾದಕ್ಕೆ ತಿರುಗಿದಾಗ ನಾನು ಸೋಮಯಾಗದ ಬಗ್ಗೆ ಮಾಹಿತಿ ಪಡೆಯಲು ಅವರನ್ನು ಸಂಪರ್ಕಿಸಿದ್ದೆ. ಸುಮಾರು 10-15 ನಿಮಿಷ ಮಾತನಾಡಿದ್ದೆ. ಇದಾದ ಎರಡೇ ದಿನಕ್ಕೆ ಪತ್ರಿಕಾಗೋಷ್ಠಿ ಕರೆದು ಯಾಗದ ಬಗ್ಗೆ ಪುಸ್ತಕಗಳಲ್ಲಿರುವ ದಾಖಲೆ ಸಹಿತ ಮಾಹಿತಿ ನೀಡಿದ್ದರು. ಅಂದು ಬೆಳಿಗ್ಗೆ ಪ್ರೆಸ್‌ಕ್ಲಬ್ ಸಭಾಂಗಣಕ್ಕೆ ಬರಲು ಮೆಟ್ಟಿಲೇರುವ ಸಂದರ್ಭದಲ್ಲಿ ಅವರ ಕೈ ಮತ್ತು ಬ್ಯಾಗ್ ಹಿಡಿದುಕೊಂಡು ನೆರವಾಗಿದ್ದೆ. ಪತ್ರಿಕಾಗೋಷ್ಠಿಗೂ ಮುನ್ನ ಸುಮಾರು 10 ನಿಮಿಷ ನಾವಿಬ್ಬರೇ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದೆವು. ಹತ್ತಾರು ಬಾರಿ ತಮ್ಮ ಮನೆಗೆ ಬರುವಂತೆ ಆಹ್ವಾನಿಸಿದ್ದರು. ಆದರೆ ಒಮ್ಮೆಯೂ ಹೋಗಲು ಸಾಧ್ಯವಾಗಿರಲಿಲ್ಲ. ನಿನ್ನೆ ಬೆಳಿಗ್ಗೆ ಅವರು ಮೃತರಾದ ಸುದ್ದಿಯನ್ನು ತಿಳಿದು, ಮನೆಯ ವಿಳಾಸ ಪಡೆದು, ಮನೆಯಲ್ಲಿ ಅವರ ಪಾರ್ಥೀವ ಶರೀರವನ್ನು ನೋಡಿಬರುವಂತಾಯಿತಲ್ಲ ಎಂಬ ಬೇಸರ ನನ್ನನ್ನು ಸದಾ ಕಾಡುವಂತಾಯಿತು.