Friday, 10 November 2017

ಎಲ್ಲಿ ಮರೆಯಾದೆ, ನೀನು ಏಕೆ ದೂರಾದೆ?
 500, 1 ಸಾವಿರ ರೂ. ನೋಟನ್ನು ಮರೆಯಲಿ ಹ್ಯಾಂಗ?



ನೀವಿಬ್ಬರೂ ನಮ್ಮನ್ನಗಲಿ ಇಂದಿಗೆ ಒಂದು ವರ್ಷ ತುಂಬಿತು. ಸದಾ ನಿಮ್ಮದೇ ನೆನಪು ಕಾಡುತ್ತಿದೆ. ನಮ್ಮಿಂದ ಅಗಲಿದರೂ ನಿಮ್ಮ ಬಗ್ಗೆ ಚರ್ಚೆಯೇನೂ ಇನ್ನೂ ನಿಂತಿಲ್ಲ. ಅಷ್ಟೊಂದು ಗಾಢವಾಗಿ ನಮ್ಮ ಬದುಕಿನಲ್ಲಿ ಬೇರೂರಿದ್ದ ನಿಮ್ಮನ್ನು ಮರೆಯಲಿ ಹ್ಯಾಂಗ ಎಂದು ಕೇಳಬೇಕಾಗುತ್ತದೆ.
ಈಗ ನಿಮ್ಮ ಜಾಗವನ್ನು ಬೇರೆಯವರು ಆಕ್ರಮಿಸಿದ್ದಾರೆ. ಆದರೆ ಅವರ ಬಗ್ಗೆ ಜನರಿಗೆ ಅಷ್ಟೊಂದು ಆಸಕ್ತಿ ಇಲ್ಲ. ಏಕೆಂದರೆ ನೀವು ಅಷ್ಟೊಂದು ಹಾಸುಹೊಕ್ಕಾಗಿದ್ದಿರಿ ನಮ್ಮ ಜೀವನದಲ್ಲಿ. ಹಳಬರನ್ನು ಮರೆಯುವುದು ತೀರಾ ಕಷ್ಟವಾಗುತ್ತದೆ ಅಲ್ಲವೇ? ನಾವು ಹುಟ್ಟಿದಾಗಿನಿಂದ ನಿಮ್ಮನ್ನು ನೋಡುತ್ತಲೇ ಬೆಳೆದೆವು. ನಿಮ್ಮನ್ನು ಅಪ್ಪಿಕೊಂಡೆವು, ಒಪ್ಪಿಕೊಂಡೆವು. ಆದರೆ ಒಂದು ವರ್ಷದ ಹಿಂದೆ ರಾತ್ರಿ ಬೆಳಗಾಗುವುದರೊಳಗೆ ನೀವು ಹೊರಟುಹೋದಿರಿ. ನೀವು ಹೋದ ನಂತರ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಿಮ್ಮ ಜಾಗದಲ್ಲಿ ಬೇರೆ ಯಾರನ್ನು ಕಾಣಲಿ ಅಥವಾ ಹುಡುಕಲಿ? ನೀವಿದ್ದಾಗ ನಿಮ್ಮನ್ನು ಇಟ್ಟು ಆರಾಧಿಸಿದ್ದವರು ಯಾವಾಗ ನಿಮ್ಮನ್ನು ಕೈಬಿಡಲಾಯಿತೋ ಆ ಕ್ಷಣದಿಂದ ನಿಮ್ಮನ್ನು ಹೊರಗಟ್ಟಲಾರಂಭಿಸಿದ್ದು ನಿಮಗೆ ನೆನೆಪಿರಬಹುದು.
ಎಷ್ಟೋ ಜನರು ಇಂದಿಗೂ ನಿಮ್ಮನ್ನು ಇಟ್ಟುಕೊಂಡು ಏನೂ ಮಾಡಲಾಗದೆ ದೇವರ ಕಾಣಿಕೆ ಡಬ್ಬಿಗಳಿಗೆ ತುರುಕುತ್ತಿದ್ದಾರೆ. ಕೆಲವರಂತೂ ನಿಮ್ಮನ್ನು ಹೊರಕಳುಹಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ನಿಮಗೆ ಇನ್ನು ಜೀವವಿಲ್ಲ, ಕಿಮ್ಮತ್ತಿಲ್ಲ ಎಂದು ಗೊತ್ತಾದೊಡನೆಯೇ ಎಷ್ಟೋ ಜನರು ಬ್ಯಾಂಕ್ ಖಾತೆಗೆ ನಿಮ್ಮನ್ನು ಕಳುಹಿಸಿದರು. ಕೆಲವೆಡೆ ನಿಮ್ಮನ್ನು ಸುಟ್ಟು ಹಾಕಿದ್ದೂ ಇದೆ. ಮತ್ತೆ ಕೆಲವೆಡೆ ಕಸದ ರಾಶಿಯಲ್ಲಿ ಗಂಟು ಕಟ್ಟಿ ಬಿಸಾಡಿದ್ದರು. ನಮ್ಮ ಮಕ್ಕಳು ಅದನ್ನು ಹೆಕ್ಕಿಕೊಂಡು ಬಂದಿದ್ದರು. ಪಾಪ ಅವರಿಗೇನು ಗೊತ್ತು, ಆನಂತರ ಪಾಲಕರು ಬೈದರೆಂದು ತಮ್ಮೊಂದಿಗೆ ಆಟವಾಡಲು ಬಳಸಿಕೊಂಡರು. ಇನ್ನೂ ಹಲವರ ಮನೆಯಲ್ಲಿ ನಿಮಗೆ ಭದ್ರ ಸ್ಥಾನ ಇದೆ ಎಂಬ ಮಾಹಿತಿ ಇದೆ. ಅವರು ನಿಮ್ಮನ್ನು ಹೇಗೆ ಹೊರಕಳುಹಿಸಲಿ ಎಂದು ಚಿಂತಿಸುತ್ತಿದ್ದಾರೆ ನೆನೆಪಿರಲಿ.
  ಸದ್ಯ ನಿಮ್ಮ ಬಗ್ಗೆ ಆಲೋಚನೆ ಕಡಿಮೆ ಆಗಿದೆ. ಏಕೆಂದರೆ ವರ್ಷವಾಯಿತಲ್ಲ. ದಿನಗಳೆದಂತೆ ನೆನೆಪಿನಿಂದ ಮಾಸುವುದು ಜಾಸ್ತಿ ಅಲ್ಲವೇ? ಅದರಲ್ಲೂ ನಮ್ಮ ಜನರ ಬಗ್ಗೆ ನಿನಗೆ ಗೊತ್ತೇ ಇದೆಯಲ್ಲ, ನಾಳೆ ಹೊಸ ವಿಚಾರ ಬಂತೆಂದರೆ ಇಂದಿನದನ್ನು ಮರೆತೇ ಬಿಡುತ್ತಾರೆ.
ಆದರೆ ಅತಿ ಹೆಚ್ಚು ದಿನ ನೆನೆಪಿನಲ್ಲಿ ಉಳಿವವರು ನೀವಿಬ್ಬರಾಗಿದ್ದೀರಿ. ನೀವು ಹೋದ ಬಗ್ಗೆ ಇಲ್ಲೆಲ್ಲಾ ವಾದ, ವಿವಾದ, ಚರ್ಚೆ, ಸಂವಾದ ಎಲ್ಲ ನಡೆದವು. ಕೆಲವರು ನೀವು ಹೋದರೂ ಏನೂ ತೊಂದರೆಯಾಗಿಲ್ಲ ಎಂದರೆ ಇನ್ನೂ ಕೆಲವರು ಹೋಗಬಾರದಿತ್ತು ಎನ್ನುತ್ತ ಸ್ಮರಿಸಿದರು. ನಿಮ್ಮನ್ನು ಕಳಕೊಂಡ ನಮ್ಮಂತವರು ಮಾತ್ರ ಅನುಭವಿಸಿದ ಪಾಡು ಮರೆಯಲಾಗದ್ದು.
ಏನೇ ಇರಲಿ, ಅಂತೂ ನಮ್ಮನ್ನಗಲಿ ಒಂದು ವರ್ಷವಾಗಿಯೇ ಬಿಟ್ಟಿತು. ಅದಕ್ಕಾಗಿಯೇ ಹೇಳಿದೆ, ಮರೆಯಲಿ ಹ್ಯಾಂಗ ಎಂದು. ಇನ್ನೊಂದು ಹಾಡಿನ ಸಾಲು ನಿನ್ನ ಬಗ್ಗೆ  ನೆನಪಾಗುತ್ತಿದೆ. ಕೊನೆಯದಾಗಿ ಹೇಳಿ ವಿರಮಿಸ್ತೀನಿ ಕೇಳಿಸಿಕೊ.
 ಎಲ್ಲಿ ಮರೆಯಾದೆ...., ನೀನು ಏಕೆ ದೂರಾದೆ...?
..................................
    
ಹೊಗೆಮಂಜಿನಲ್ಲಿ ಮುಳುಗಿದೆ ದೆಹಲಿ



  ದೆಹಲಿ ನಾಲ್ಕು ದಿನದಿಂದ ಕತ್ತಲಲ್ಲಿ ಮುಳುಗಿದೆ. ವಿಪರೀತ ಹೊಗೆ, ದಟ್ಟಮಂಜು, ಎಡೆಬಿಡದೆ ಬೀಳುತ್ತಿದೆ. 18 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಮಾರಕವಾದ ಹೊಗೆಮಂಜಿನ ಸಮಸ್ಯೆ ಎದುರಾಗಿದೆ. ಇದರಿಂದ ಅಸ್ತಮಾ, ಉಸಿರಾಟದ ಸಮಸ್ಯೆ, ಶ್ವಾಸಕೋಶಗಳ ಊತ ಮೊದಲಾದ ತೀವ್ರ ಸ್ವರೂಪದ ಕಾಯಿಲೆ ಹೆಚ್ಚಾಗಿದೆ. ಹೆಚ್ಚುತ್ತಿರುವ ವಾಹನಗಳು  ವಾತಾವರಣವನ್ನು ನಾಶ ಮಾಡುತ್ತಿದೆ. ದೆಹಲಿಯ ಸದ್ಯದ ಪರಿಸ್ಥಿತಿ ದೇಶದ ಇತರ ಮಹಾನಗರಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.  ದೆಹಲಿಯ ಜನ ಈ ನಗರದ ಬದುಕೇ ಬೇಡ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

* ದತ್ತಾತ್ರೇಯ ಹೆಗಡೆ

 ದೇಶದ ರಾಜಧಾನಿ ನಾಲ್ಕು ದಿನಗಳಿಂದ ಹೊಗೆ, ಧೂಳು ಮತ್ತು ಮಂಜಿನಿಂದ  ಸಂಪೂರ್ಣವಾಗಿ ಆವರಿಸಿದ್ದು, ಜನರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಉಸಿರಾಡುವುದೇ ದೊಡ್ಡ ಸಮಸ್ಯೆಯಾಗಿದೆ.  ದೆಹಲಿಯನ್ನು ಗ್ಯಾಸ್ ಚೇಂಬರ್ ಆಗಿ ಮಾಡಲಾಗಿದೆ ಎಂದು ಸ್ವತಃ ನ್ಯಾಯಾಲಯವೇ ತರಾಟೆಗೆ ತೆಗೆದುಕೊಂಡಿದೆ.
  ಇದರಿಂದ ವಾಹನಗಳ ಸಂಚಾರ ದುಸ್ತರವಾಗಿದೆ. ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಾಹನಗಳು ದಾರಿ ಕಾಣದೆ ಪರಸ್ಪರ ಡಿಕ್ಕಿ ಹೊಡೆದುಕೊಳ್ಳುತ್ತಿವೆ. ಜನರು ಸಹ ಓಡಾಡುವುದು ಅಷ್ಟೇ ಕಷ್ಟವಾಗಿದೆ. ಪರಿಸ್ಥಿತಿ ಎಷ್ಟೊಂದು ಗಂಭೀರ ಮತ್ತು ಚಿಂತಾಜನಕವಾಗಿದೆ ಎಂದರೆ ಪ್ರತಿ ವರ್ಷ ನವೆಂಬರ್‌ನಲ್ಲಿ ಇದೇ ಸ್ಥಿತಿ ಎದುರಾಗುವ ಸಂಭವವಿದೆ. ಕಳೆದ ನವೆಂಬರ್ ನಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು.
ಬೆಳಿಗ್ಗೆಯಿಂದ ಸಂಜೆಯವರೆಗೆ ಎಲ್ಲಿ ನೋಡಿದರೂ ಹೊಗೆ, ಮಂಜು ಮುಸುಕಿದ ವಾತಾವರಣ, ಸೂರ್ಯನ ದರ್ಶನವೇ ಇಲ್ಲ. ಹೊಗೆ ಬಿಟ್ಟರೆ ಮತ್ತೇನೂ ಕಾಣಿಸುತ್ತಿಲ್ಲ. ಯಾರೂ ಮನೆಯಿಂದ ಹೊರಕ್ಕೆ ಬಾರದಂತಾಗಿದೆ. ಮನೆ ಒಳಕ್ಕೆ ಇದ್ದರೂ ಉಸಿರಾಡಲು ಶುಭ್ರ ಗಾಳಿ ಇಲ್ಲ.  ಇಲ್ಲಿರುವ ಸುಮಾರು 6 ಸಾವಿರ ಶಾಲೆಗೆ ಒಂದು ವಾರ ರಜೆ ಘೋಷಿಸಲಾಗಿದೆ. ಆದಷ್ಟು ಮನೆಯ ಒಳಗೇ ಇರುವಂತೆ ಜನರಿಗೆ ಸೂಚಿಸಲಾಗುತ್ತಿದೆ.
ದೈನಂದಿನ ಚಟುವಟಿಕೆ ನಡೆಯಲೇಬೇಕಿದೆ. ಆದರೆ ಇದೂ ಸಾಧ್ಯವಾಗುತ್ತಿಲ್ಲ. ಸಾಕಷ್ಟು ಜನ ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಇದು ಸ್ವಲ್ಪ ಸುರಕ್ಷಿತವೆನಿಸಿದೆ. ಜನರು ತಮ್ಮ ಭವಿಷ್ಯದ ಆರೋಗ್ಯದ ಬಗ್ಗೆ ಈಗ ಚಿಂತಿತರಾಗುವಂತಾಗಿದೆ. ಏಕೆಂದರೆ ದಿನೇ ದಿನೇ ಹೊಗೆ, ಮಂಜಿನ ಪ್ರಮಾಣ ಹೆಚ್ಚಿದರೆ ಆರೋಗ್ಯ ಏುರುಪೇರಾಗುವುದು ನಿಶ್ಚಿತ ಎನ್ನುತ್ತಾರೆ ವೈದ್ಯರು.
ದೆಹಲಿಯ ಹಿರಿಯ ವೈದ್ಯ  ಅರವಿಂದ್‌ಕುಮಾರ್ ಎನ್ನುವವರು, 35 ವರ್ಷದಿಂದ ತಾನು ವೈದ್ಯ ವೃತ್ತಿಯಲ್ಲಿದ್ದು, ಇಂತಹ ಗಂಭೀರ ಸ್ಥಿತಿ ನೋಡಿರಲಿಲ್ಲ. ಇದು ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಆರೋಗ್ಯಕ್ಕೆ ತೀವ್ರ ಮಾರಕವಾಗಿದೆ. ಜನರು ಮೊದಲು ತಮ್ಮ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಆದಷ್ಟು ಮನೆಯೊಳಗೆ ಇರುವುದು ಒಳ್ಳೆಯದು. ಸರ್ಕಾರಿ ಕಚೇರಿಗಳನ್ನು ಕೆಲವು ದಿನಗಳ ಮಟ್ಟಿಗಾದರೂ ಮುಚ್ಚಬೇಕು. ಹೊರಗೆ ಜನರು ಅವಶ್ಯಕ ಕೆಲಸದ ಹೊರತಾಗಿ ತಿರುಗಾಡದಂತೆ ಮನವಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಸ್ವಚ್ಛ ಉಸಿರಿಗಾಗಿ ಜನರು ಪರದಾಡುವುದು ಕಂಡುಬರುತ್ತಿದೆ. ತಲೆನೋವು, ಕಣ್ಣು ಉರಿ ಮತ್ತು ಅಸ್ತಮಾ ಸಂಖ್ಯೆ ಹೆಚ್ಚುತ್ತಿದೆ. ದಿನೇ ದಿನೇ ಆಸ್ಪತ್ರೆಗೆ ಹೊರರೋಗಿಳಾಗಿ ಬರುತ್ತಿರುವವರ ಸಂಖ್ಯೆ ಏರುತ್ತಿದೆ. ಈ ಎಲ್ಲವೂ ಮಾನಸಿಕ ಖಿನ್ನತೆಗೆ ದಾರಿ ಮಾಡಿಕೊಡಲಿವೆ ಎನ್ನುತ್ತವೆ ವೈದ್ಯಕೀಯ ಸಂಸ್ಥೆಗಳು. 
ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನೀಡಿರುವ ಮಾಹಿತಿ ಪ್ರಕಾರ, ಈ ಹಿಂದೆ ಶೇ. 15ರಿಂದ 20ರಷ್ಟು ಮಾತ್ರ ಪರಿಸರ ಮಾಲಿನ್ಯ ಪ್ರಭಾವದಿಂದ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಸದ್ಯ ಇದು ಶೇ. 60ಕ್ಕೇರಿದೆ. ಅತಿ ದೊಡ್ಡ  ಸಮಸ್ಯೆ ಎದುರಾಗಿರುವುದು ಶ್ವಾಸೋಚ್ಛಾಸದ ಮೇಲೆ. ಈ ವರ್ಷ ಉಸಿರಾಟದ ಸಮಸ್ಯೆ ಎನ್ನುತ್ತ ಬರುವವರೇ ಜಾಸ್ತಿಯಾಗಿದ್ದಾರೆ, ಇದರೊಂದಿಗೆ ಕೆಮ್ಮು, ಕಫ ಮತ್ತು ಸೀನುವಿಕೆ ಸಹ ಹೆಚ್ಚಾಗಿದೆ.  ಶ್ವಾಸನಾಳಗಳ ಊತದ ಬಗ್ಗೆಯೂ ವರದಿಯಾಗುತ್ತಿದೆ. ಇದಕ್ಕೆಲ್ಲ ಇತ್ತೀಚೆಗೆ ಕಾಣಿಸಿಕೊಂಡಿರುವ ಹೊಗೆ ಮತ್ತು ಮಂಜಿನ ಮಿಶ್ರಣದ ವಾತಾವರಣ (ಹೊಗೆಮಂಜು) ಎನ್ನುತ್ತಾರೆ ಅಲ್ಲಿನ ವೈದ್ಯರು.
ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಮಾಲಕರು ಸಹ ಅತಿ ಕಡಿಮೆ ದರದ ಇಂಧನವನ್ನೇ ಬಯಸುತ್ತಾರೆ. ಅದರಲ್ಲೂ ಡೀಸೆಲ್ ಬಳಕೆಯೇ ಹೆಚ್ಚುತ್ತಿದೆ. ಪ್ರತಿವರ್ಷ ಮಾರಾಟವಾಗುವ ಕಾರುಗಳಲ್ಲಿ ಶೇ. 50ರಷ್ಟು ಕಾರುಗಳು ಡೀಸೆಲ್ ಬಳಸುವಂತಹವಾಗಿವೆ. ಡೀಸೆಲ್ ಹೊಗೆಯಿಂದ ಶ್ವಾಸಕೋಶದ ಕ್ಯಾನ್ಸರ್ ಎದುರಾಗುತ್ತದೆ. ಈಗ ಲಾರಿಗಳಿಗೆ ದೆಹಲಿ ಪ್ರವೇಶಿಸದಂತೆ ಸೂಚಿಸಲಾಗಿದೆ. 15 ವರ್ಷಗಳ ಹಿಂದಿನ ವಾಹ ಮತ್ತು ಡೀಸೆಲ್ ವಾಹನ ಬಳಸಬಾರದು. ಕಟ್ಟಡಗಳನ್ನು ಒಡೆಯಬಾರದು ಮತ್ತು ನಿರ್ಮಿಸಬಾರದು ಮುಂತಾದ ಎಚ್ಚರಿಕೆಯನ್ನು ಕೊಡಲಾಗಿದೆ.
ಇದೇನೇ ಇದ್ದರೂ, ದೆಹಲಿ ಜನ ಭವಿಷ್ಯತ್ತಿನಲ್ಲಿ ಇನ್ನೂ ಹೆಚ್ಚಿನ ಆಪತ್ತಿನಲ್ಲಿ ಸಿಕ್ಕಿಬೀಳುವುದು ನಿಶ್ಚಿತ ಎನ್ನಲಾಗುತ್ತಿದೆ. ಇದರ ಪರಿಣಾಮ ಪಕ್ಕದ ರಾಜ್ಯ, ನಗರಗಳ ಮೇಲೂ ಬೀರಬಹುದು ಎಂಬ ಎಚ್ಚರಿಕೆಯನ್ನೂ ಕೊಡಲಾಗುತ್ತಿದೆ. 

ಈಗ ನಿರ್ಮಾಣವಾಗಿರುವ ಉಸಿರಾಟದ ತುರ್ತು ಪರಿಸ್ಥಿತಿ ಜನರನ್ನು ಕಂಗಾಲಾಗಿಸಿದೆ. ಅತಿ ಹೆಚ್ಚು ಮಾಲಿನ್ಯ ನಗರವಾದ ಬೀಜಿಂಗ್‌ನ್ನು ದೆಹಲಿ ಮೀರಿಸುತ್ತಿದೆ. ಆದ್ದರಿಂದ ದೆಹಲಿಯನ್ನು ಖಾಲಿ ಮಾಡಬೇಕಾದ ಸ್ಥಿತಿ ಬರಬಹುದು. ಆದರೆ ಇದು ಸಾಧ್ಯವಿಲ್ಲದ ಮಾತು. ಜನರೇ ದೆಹಲಿಯನ್ನು ಖಾಲಿ ಮಾಡುವ ದಿನ ದೂರವಿಲ್ಲ. ಇದು ಸಂಭವಿಸಿದರೆ ದೆಹಲಿಯನ್ನು ಕೇವಲ ಕಟ್ಟಡಗಳ ರಾಜಧಾನಿ ಎಂದು ಕರೆಯಬೇಕಾಗುತ್ತದೆ. ಜನರೇ ಮುಂಜಾಗ್ರತೆಯಾಗಿ ಪರಿಸರ ಕಾಪಾಡುವ ಕೆಲಸ ಮಾಡಿಕೊಳ್ಳಬೇಕು. ವಾಹನ ಸಂಚಾರ ತೀವ್ರವಾಗಿ ಇಳಿಮುಖವಾಗಲೇಬೇಕು. ಅಕ್ಕಪಕ್ಕದ ರಾಜ್ಯ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಪ್ರಾಂತ್ಯಗಳಲ್ಲಿ ಹೊಲದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತ್ಯಾಜ್ಯಗಳನ್ನು ಸುಡುತ್ತಿದ್ದಾರೆ. ಇವೆರಡೂ ದೆಹಲಿಯ ಇಂದಿನ ದುರಂತ ಜೀವನಕ್ಕೆ ಪ್ರಮುಖ ಕಾರಣ.
-ಏಮ್ಸ್ ವೈದ್ಯರ ತಂಡ.

* (ಮಾಹಿತಿ-ವಿವಿಧ ಮೂಲಗಳಿಂದ)
.........................................................

Friday, 27 October 2017

 ಸರ್ಕಾರಿ ಬಸ್‌ಗೆ ಖಾಸಗಿಯವರ ಅಡ್ಡಗಾಲು
  ಶಿವಮೊಗ್ಗ - ಉಡುಪಿ 5 ಬಸ್‌ಗಳ ಪರವಾನಿಗೆ ರದ್ದುಗೊಳಿಸಿದ
 ಉಡುಪಿ ಅರ್‌ಟಿಎ ಅಧಿಕಾರಿ





ಸಾರ್ವಜನಿಕ ಪ್ರಯಾಣಿಕರ ಸೇವೆ ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತಗೊಳ್ಳಬಾರದೆನ್ನುವ ಮೂಲ ಉದ್ದೇಶದಿಂದ ಹೊಸ ಸಮಗ್ರ ಪ್ರದೇಶ ಯೋಜನೆ ಎಂಬ ಸಾರಿಗೆ ನೀತಿಯನ್ನು ಸರ್ಕಾರ ಸದ್ಯದಲ್ಲೇ ಜಾರಿಗೊಳಿಸಲಿದೆ. ಪ್ರಜಾಪ್ರಭುತ್ವದಲ್ಲಿ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯ ಹೊಂದಿರುವ ಎರಡೂ ವ್ಯವಸ್ಥೆ ಕಲ್ಪಿಸಿದಲ್ಲಿ ಮಾತ್ರ ಆರೋಗ್ಯಕರವಾದ ಪೈಪೋಟಿಗೆ ಅವಕಾಶವಾಗುವುದಲ್ಲದೇ ಸಾರ್ವಜನಿಕರಿಗೆ ಉತ್ಕೃಷ್ಟವಾದ ಸಾರಿಗೆ ಸೌಲಭ್ಯದ ಸೇವೆ ಒದಗಿಸಿದಂತಾಗುತ್ತದೆ. ಆದರೆ ಇದನ್ನೊಪ್ಪದ ಉಡುಪಿ- ಶಿವಮೊಗ್ಗ ಮಾರ್ಗದ ಖಾಸಗಿ ಬಸ್ ಮಾಲಕರು ಈಗ ಸರ್ಕಾರಿ ಬಸ್ ಸೇವೆಯನ್ನೇ ಸ್ಥಗಿತಗೊಳಿಸುವ ಯತ್ನಕ್ಕೆ ಕೈ ಹಾಕಿದ್ದಾರೆ.  



  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದ ಉಡುಪಿ ಘಟಕದಿಂದ ಶಿವಮೊಗ್ಗಕ್ಕೆ ಬಿಡಲಾಗುತ್ತಿದ್ದ  10 ಬಸ್‌ಗಳಲ್ಲಿ 5 ಬಸ್‌ಗಳ ಪರವಾನಿಗೆಯನ್ನು ಉಡುಪಿಯ ಖಾಸಗಿ ಬಸ್ ಸಂಸ್ಥೆಯೊಂದರ ದೂರಿನ ಹಿನ್ನೆಲೆಯಲ್ಲಿ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ರದ್ದುಪಡಿಸಿದ್ದಾರೆ. ಈ ಮೂಲಕ ಖಾಸಗಿ ಬಸ್ ಲಾಬಿ ತನ್ನ ಪ್ರಾಬಲ್ಯವನ್ನು ತೋರ್ಪಡಿಸಿದೆ.
ಈ ವರ್ಷದ ಮೇ 2 ರಿಂದ ಉಡುಪಿ-ಶಿವಮೊಗ್ಗ ಮಿನಿ ಬಸ್‌ನ್ನು ಕೆಎಸ್ಸಾರ್ಟಿಸಿಯವರು ಮಣಿಪಾಲ, ಹೆಬ್ರಿ, ಅಗುಂಬೆ, ತೀರ್ಥಹಳ್ಳಿ ಮಾರ್ಗದಲ್ಲಿ ಬಸ್ ಸಂಚಾರ ಪ್ರಾರಂಭಿಸಿದ್ದರು. ಪ್ರತಿ ಅರ್ಧ ಗಂಟೆಗೆ ಒಂದರಂತೆ ಉಡುಪಿಯಿಂದ ಶಿವಮೊಗ್ಗದ ಕಡೆಗೆ  ಬೆಳಗ್ಗೆ 6:30 ರಿಂದ 8:30 ರವರೆಗೆ ಹಾಗೂ ಮಧ್ಯಾಹ್ನ  3 ರಿಂದ  5:30ರವರೆಗೆ ಮತ್ತು ಅರ್ಧ ಗಂಟೆಗೆ ಒಂದರಂತೆ ಶಿವಮೊಗ್ಗದಿಂದ ಉಡುಪಿ ಕಡೆಗೆ ಬೆಳಿಗ್ಗೆ 5 ರಿಂದ 7:30ರ ವರೆಗೆ ಹಾಗೂ ಮಧ್ಯಾಹ್ನ 1:30 ರಿಂದ 6:30 ರವರೆಗೆ ಬಸ್ ವೇಳಾಪಟ್ಟಿಯನ್ನು ಕ.ರಾ.ರ.ಸಾ.ಸಂ ಮಂಗಳೂರು ವಿಭಾಗದ ಉಡುಪಿ ಘಟಕದವರು ಆರಂಭಿಸಿದ್ದರು.
ಸರ್ಕಾರಿ ಬಸ್ ಸಂಚರಿಸಲು ಆರಂಭಿಸಿದ ದಿನದಿಂದಲೇ ಅದರ ಓಡಾಟ ರದ್ದುಗೊಳಿಸಲು ಉಡುಪಿಯ ಈ ಖಾಸಗಿ ಬಸ್ ಸಂಸ್ಥೆ ಯತ್ನ ಆರಂಭಿಸಿತ್ತು. ಆದರೂ ಕೆಎಸ್ಸಾರ್ಟಿಸಿ ತಾತ್ಕಾಲಿಕ ಪರವಾನಿಗೆ ಪರವಾನಿಗೆ ಆಧಾರದಲ್ಲಿ ಬಸ್ ಸಂಚಾರ ಆರಂಭಿಸಿತ್ತು. ಮೊದಲು 5 ಬಸ್ ಇದ್ದುದು ನಂತರ 10ಕ್ಕೇರಿತ್ತು. ಇದರಿಂದ ಇನ್ನಷ್ಟು ಆತಂಕಕ್ಕೆ ಸಿಲುಕಿದ ಈ ಕಂಪನಿ ಹೇಗಾದರೂ ಕೆಎಸ್ಸಾರ್ಟಿಸಿ ಬಸ್ ನಿಲ್ಲಿಸಲೇಬೇಕೆಂದು ಇನ್ನಿಲ್ಲದ ಯತ್ನ ನಡೆಸಿ ಉಡುಪಿ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳ ಮೂಲಕ 15 ದಿನದ ಹಿಂದೆಯೇ ಪರವಾನಿಗೆ ರದ್ದುಗೊಳಿಸಿದೆ. ಈ ಮಧ್ಯೆ ಮಂಗಳೂರು ವಿಭಾಗದ ಕೆಎಸ್ಸಾರ್ಟಿಸಿ ಅಧಿಕಾರಿಗಳು ಪರವಾನಿಗೆ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಇದಕ್ಕೆ ಬೆಂಗಳೂರಿನಲ್ಲಿರುವ ಇಲಾಖೆಯ ಸಚಿವರು, ಅಧಿಕಾರಿಗಳು ಕೈಜೋಡಿಸಬೇಕಿದೆ.
ಸದ್ಯ 5 ಬಸ್ ಸಂಚಾರ ಸ್ಥಗಿತಗೊಂಡಿದೆ. ಅ. 28ಕ್ಕೆ ಉಡುಪಿ ಆರ್‌ಟಿಎ ಸಭೆ ನಡೆಯಲಿದ್ದು, ಅಲ್ಲಿ ತನ್ನ ವಾದ ಮಂಡಿಸಲು ಕೆಎಸ್ಸಾರ್ಟಿಸಿ ಸಜ್ಜಾಗಿದೆ. ಉಡುಪಿ- ಶಿವಮೊಗ್ಗ ಮಾರ್ಗ ಇಲ್ಲಿಯವರೆಗೆ ಖಾಸಗಿಯವರ ಏಕಸ್ವಾಮ್ಯವಾಗಿತ್ತು. ಆದರೆ ಸರ್ಕಾರ ಕರ್ನಾಟಕ ರಾಜ್ಯಾದ್ಯಂತ ಕೆ.ಎಸ್.ಆರ್.ಟಿ.ಸಿ ಮತ್ತು ಇತರೇ ಸಾರಿಗೆ ಸಂಸ್ಥೆಯನ್ನು ಏಕಸ್ವಾಮ್ಯಕ್ಕೊಳಪಟ್ಟು ರಾಷ್ಟ್ರೀಕರಣ ಮಾಡಲು ಹೊರಡಿಸಿದ ಕರಡು ಯೋಜನೆ ನೋಡಿ ಖಾಸಗಿ ಬಸ್ ಮಾಲಕರ ಸಂಘ ಆಘಾತಕ್ಕೊಳಗಾಗಿದೆ.  ಜನಹಿತ ದೃಷ್ಟಿಯಿಂದ ಈ ರಾಷ್ಟ್ರೀಕರಣ ಮಾಡುವ ವಿಚಾರವನ್ನು ಕೈಬಿಡಬೇಕು. ತಮಗೆ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ಇದು ಆಗ್ರಹಿಸಿತ್ತು.
ರಾಜ್ಯಾದ್ಯಂತ ಹೊಸ ಸಮಗ್ರ ಪ್ರದೇಶ ಯೋಜನೆ (ಓತಿ ಅಠಿಡಿಟಿ ಂಡಿಚಿ ಛಿ ಜಿಡಿ ಇಟಿಣಡಿ ಣಚಿಣ ಜಿ ಏಚಿಡಿಟಿಚಿಣಚಿಞಚಿ) ಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ  ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿನ ಅಧಿಸೂಚನೆ ಸಂಖ್ಯೆ:ಸಾರಿಇ174 ಸಾಇಪ 2015 ಬೆಂಗಳೂರು ದಿ.10-06-2016 ರಂದು  ಹೊರಡಿಸಲಾಗಿದೆ. ಇದರಿಂದ ಲಕ್ಷಲಕ್ಷ ಕಾರ್ಮಿಕರು ಹಾಗೂ ಇವರನ್ನು ಅವಲಂಬಿಸಿದ ಕುಟುಂಬಸ್ಥರು ಬೀದಿಪಾಲಾಗಲಿದ್ದಾರೆ ಎಂದು ಬೊಬ್ಬೆ ಹೊಡೆದ ಖಾಸಗಿ ಬಸ್ ಮಾಲಕರು ತಮ್ಮ ನೌಕರರು ಮತ್ತು ಕಾರ್ಮಿಕರನ್ನು ಇದರ ವಿರುದ್ದ ಎತ್ತಿಕಟ್ಟಲು ಇನ್ನಿಲ್ಲದ ಯತ್ನ ನಡೆಸಿದರು.
   ಇಷ್ಟೇ ಅಲ್ಲ, ಶಿವಮೊಗ್ಗ ಮಾರ್ಗದ ಸರಿಯಾದ ಸಮೀಕ್ಷೆಯನ್ನು ನಿಗಮದವರು ಮಾಡಿಲ್ಲ. ಇಷ್ಟೊಂದು ಬಸ್‌ನ ಅವಶ್ಯಕತೆ ಇಲ್ಲ. ಈಗ ಅನಗತ್ಯವಾಗಿ ಪೈಪೋಟಿ ಎದುರಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ. ಸರ್ಕಾರಿ ಬಸ್ ಆರಂಭವಾದಂದಿನಿಂದ ಖಾಸಗಿ ಬಸ್‌ನ ಆದಾಯಕ್ಕೆ ತೀವ್ರ ಪೆಟ್ಟು ಬಿದ್ದಿರುವುದು ಸುಳ್ಳಲ್ಲ. ಕುರಿಮಂದೆಯಂತೆ ಉಡುಪಿ- ಹೆಬ್ರಿಯಿಂದ ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿದ್ದರು. ಇದು ಪ್ರಯಾಣಿಕರಿಗೂ ಅನಿವಾರ್ಯ ಎನ್ನುವಂತಾಗಿತ್ತು. ಎಂದಿನಿಂದ ಸರ್ಕಾರಿ ಬಸ್ ಆರಂಭವಾಯಿತೋ ಸಹಸ್ರಾರು ಪ್ರಯಾಣಿಕರು ಖುಷಿಪಟ್ಟಿದ್ದರು. ಅದರಂತೆ ಅದರಲ್ಲೇ ಸಂಚಾರ ಆರಂಭಿಸಿದ್ದರು. ಇದು ಖಾಸಗಿಯವರ ಕಣ್ಣು ಕೆಂಪಾಗಲು ಕಾರಣವಾಯಿತು. ತಮ್ಮ ಆದಾಯಕ್ಕೆ ಕತ್ತರಿ ಬೀಳಲಾರಂಭಿಸಿದ್ದರಿಂದ ಅಧಿಕಾರಿಗಳ ಮೂಲಕ ಸಂಚಾರ ಸ್ಥಗಿತಗೊಳಿಸುವ ಯತ್ನಕ್ಕೆ ಕೈ ಹಾಕಿದ್ದಾರೆ.


ಕಳೆದ ವಾರ ತೀರ್ಥಹಳ್ಳಿ , ಮೇಗರವಳ್ಳಿ, ನಾಲೂರು ಮತ್ತು ಆಗುಂಬೆ ಭಾಗದ ಪ್ರಯಾಣಿಕರು ಶಿವಮೊಗ್ಗ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದೇವೆ.ಸರ್ಕಾರಿ ಬಸ್‌ನಿಂದ ಸಾಕಷ್ಟು ಅನುಕೂಲವಾಗುತ್ತಿದ್ದು, ಯಾವ ಕಾರಣಕ್ಕೂ ಸ್ಥಗಿತಗೊಳ್ಳದಂತೆ ಮಾಡಬೇಕೆಂದು ಮನವಿ ಮಾಡಲಾಗಿದೆ. ಶಾಸಕ ಕಿಮ್ಮನೆ ರತ್ನಾಕರ್ ಅವರಿಂದ ಕೆಎಸ್ಸಾರ್ಟಿಸಿ ಮತ್ತು ಸಾರಿಗೆ ಅಧಿಕಾರಿಗಳಿಗೆ ಈ ಸಂಬಂಧ ಪತ್ರ ಬರೆಯಿಸಲಾಗಿದೆ. ಆದರೆ ಉಡುಪಿ ಆರ್‌ಟಿಎ ಅಧಿಕಾರಿಗಳು ಕೆಎಸ್ಸಾರ್ಟಿಸಿಯವರ ಮನವಿಯನ್ನು ಪುರಸ್ಕರಿಸದೆ ಖಾಸಗಿಯವರ ಪರ ನಿಂತಂತೆ ಕಾಣುತ್ತಿದೆ. ಅವರ ಸೂಚನೆಯನ್ನು ಮಾತ್ರ ಪಾಲಿಸುತ್ತಾ ನಿಜಕ್ಕೂ ಸರ್ಕಾರಕ್ಕೆ ದ್ರೋಹ ಎಸಗುತ್ತಿದ್ದಾರೆ. 
ರಮೇಶ್ ಹೆಗಡೆ, ಮುಖಂಡರು, ಮೇಗರವಳ್ಳಿ
............................................... 




 

Thursday, 26 October 2017

  ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೇಕೆ ನಿರ್ಲಕ್ಷ್ಯ

ಜಿಲ್ಲೆಯ ಪ್ರತಿಯೊಂದು ತಾಲೂಕು ಹತ್ತು ಹಲವು ಐತಿಹಾಸಿ, ಪಾರಂಪರಿಕ, ಪ್ರಾಕೃತಿಕ ಪ್ರವಾಸಿ ತಾಣಗಳನ್ನೊಳಗೊಂಡಿದೆ. ಪ್ರತಿ ತಾಲೂಕಿನಲ್ಲಿರುವ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ದಿಗೊಳಿಸಬೇಕು. ಸೂಕ್ತ ಮೂಲಸೌಕರ್ಯ, ಭದ್ರತೆ ಕಲ್ಪಿಸಬೇಕು. ತಾಲೂಕುವಾರು ಪ್ರವಾಸಿ ಪ್ಯಾಕೇಜ್‌ಗಳನ್ನು ರೂಪಿಸಬೇಕು. ದೇಶ - ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಸಮರ್ಪಕವಾಗಿ ಮಾಹಿತಿ ನೀಡುವ ಕೆಲಸ ಮಾಡಬೇಕು. ಪ್ರವಾಸಿ ತಾಣಗಳ ಅಭಿವೃದ್ದಿಗೆ ಶ್ರಮಿಸುತ್ತಿರುವ ಸಂಘಸಂಸ್ಥೆಗಳ ನೆರವು ಪಡೆದುಕೊಳ್ಳಬೇಕು. ಇಲ್ಲವೇ ಸಹಭಾಗಿತ್ವದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಸಾಧ್ಯವಾಗಲಿದೆ.


  ಮಲೆನಾಡ ಹೆಬ್ಬಾಗಿಲು ಬಿರುದಾಂಕಿತ ಶಿವಮೊಗ್ಗ ಜಿಲ್ಲೆಯು ವಿಶ್ವ ಭೂಪಟಣದಲ್ಲಿ ತನ್ನದೆ ಆದ ಸ್ಥಾನವನ್ನು ಪಡೆದುಕೊಂಡಿದೆ. ಹಲವು ಐತಿಹಾಸಿಕ, ಪಾರಂಪರಿಕ, ಸಾಂಪ್ರದಾಯಿಕ, ವಿಶಿಷ್ಟ ಕಲಾ ಪ್ರಕಾರ, ಪ್ರಾಕೃತಿಕ ಸ್ಥಳ ಸೇರಿದಂತೆ ಹಲವು ವೈವಿಧ್ಯತೆಯನ್ನು ಒಳಗೊಂಡಿರುವ ಜಿಲ್ಲೆಯು ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿದೆ.
ಆದರೆ ಜಿಲ್ಲೆಯಲ್ಲಿರುವ ಅದೆಷ್ಟೊ ಮಹತ್ವದ ಪ್ರವಾಸಿ ತಾಣಗಳು ಪ್ರಚಾರದ ಕೊರತೆ, ಮೂಲಸೌಲಭ್ಯದ ಅಲಭ್ಯತೆ, ಅಭಿವೃದ್ದಿಗೆ ಅನುದಾನದ ಕೊರತೆ ಸೇರಿದಂತೆ ಮತ್ತಿತರ ಹಲವು ಕಾರಣಗಳಿಂದ ಪ್ರವಾಸಿಗರಿಂದ ದೂರವೇ ಉಳಿಯುತ್ತಿವೆ. ಶಿವಮೊಗ್ಗವೆಂದರೇ ಕೇವಲ ಜೋಗ ಜಲಪಾತ ಎಂಬ ಹಣೆಪಟ್ಟಿಗೆ ಸೀಮಿತವಾಗುವಂತಾಗಿದೆ. ಜಿಲ್ಲೆಯ ಹತ್ತು ಹಲವು ಪ್ರವಾಸಿ ತಾಣಗಳು ಮೂಲೆಗುಂಪಾಗುವಂತಾಗಿದೆ.
ದೇಶ - ವಿದೇಶಿ ಪ್ರವಾಸಿಗರನ್ನು ಸೆಳೆಯುವಂತಹ ಹಲವು ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ಆದರೆ ಈ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಕನಿಷ್ಠ ಮೂಲಸೌಕರ್ಯಗಳ ವ್ಯವಸ್ಥೆಯೂ ಇಲ್ಲ. ಕೆಲವೆಡೆ ಕುಡಿಯುವ ನೀರು, ಶೌಚಾಲಯದ ಸೌಲಭ್ಯವೂ ಇಲ್ಲ. ಇದರಿಂದ ಈ ಪ್ರವಾಸಿ ತಾಣಗಳು ದೇಶ - ವಿದೇಶಿ ಪ್ರವಾಸಿಗರಿಂದ ದೂರವೇ ಉಳಿಯುವಂತಾಗಿದೆ.
ಜಿಲ್ಲೆಯ ಪ್ರವಾಸಿ ತಾಣಗಳ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಪ್ರಸ್ತಾವಗಳು ಈ ಹಿಂದಿನಿಂದಲೂ ಕೇಂದ್ರ - ರಾಜ್ಯ ಸರ್ಕಾರಗಳ ಮುಂಭಾಗ ಸಲ್ಲಿಕೆಯಾಗುತ್ತಾ ಬಂದಿವೆ. ಹಲವು ಪ್ರಸ್ತಾವಗಳ ಬಗ್ಗೆ ನಾಗರೀಕರಲ್ಲಿ ಚರ್ಚೆಯಾಗುತ್ತಿವೆ. ಆದರೆ ಇವ್ಯಾವು ಇಲ್ಲಿಯವರೆಗೂ ಕಾರ್ಯಗತಕ್ಕೆ ಬಂದಿಲ್ಲವಾಗಿದೆ. ಸೂಕ್ತ ಅನುದಾನವು ಲಭ್ಯವಾಗುತ್ತಿಲ್ಲ.
ಶಿವಮೊಗ್ಗ ತಾಲೂಕಿನ ಗಾಜನೂರು ಗ್ರಾಮದಲ್ಲಿರುವ ತುಂಗಾ ಜಲಾಶಯದ ಬಳಿ ಮೈಸೂರಿನ ಬೃಂದಾವನ ಮಾದರಿಯಲ್ಲಿ ಅಭಿವೃದ್ದಿಗೊಳಿಸುವ ಪ್ರಸ್ತಾಪವಿತ್ತು. ಆದರೆ ಇಲ್ಲಿಯವರೆಗೂ ಇದಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹಾಗೆಯೇ ಥೀಮ್ ಪಾರ್ಕ್ ನಿರ್ಮಾಣ, ದೋಣಿ ವಿಹಾರ ಸೌಲಭ್ಯ, ಲೇಸರ್ ಶೋ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆಯೂ ಇದೆ.
ಈ ಡ್ಯಾಂಗೆ ಸಮೀಪದಲ್ಲಿಯೇ ಇರುವ ಸಕ್ರೆಬೈಲು ಆನೆ ಬಿಡಾರದಲ್ಲಿ ಮೂಲಸೌಕರ್ಯ ಕಲ್ಪಿಸಿ, ಡಾರ್ಮೆಂಟರಿ ನಿರ್ಮಾಣ ಮಾಡಬೇಕು. ಬಿಡಾರಕ್ಕೆ ಹೊಂದಿಕೊಂಡಂತಿರುವ ತುಂಗಾ ಡ್ಯಾಂ ಹಿನ್ನೀರಿನಲ್ಲಿ ಬೋಟಿಂಗ್, ಜಲ ಸಾಹಸ ಕ್ರೀಡೆಗಳಿಗೆ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಜಿಲ್ಲೆಯ ಪ್ರವಾಸಿಗರದ್ದಾಗಿದೆ. ತುಂಗಾಭದ್ರಾ ನದಿಗಳ ಸಂಗಮ ಸ್ಥಳವಾದ ಭದ್ರಾವತಿ ತಾಲೂಕಿನ ಕೂಡ್ಲಿಯಲ್ಲಿ ಎರಡು ನದಿ ಸಂಗಮ ಸ್ಥಳಕ್ಕೆ ತೆರಳಲು ರೋಪ್ ವೇ ನಿರ್ಮಿಸಿ, ಸಂಗಮೇಶ್ವರ ದೇವಾಲಯವನ್ನು ಕೂಡಲಸಂಗಮದ ರೀತಿಯಲ್ಲಿ ಅಭಿವೃದ್ಧಿಗೊಳಿಸಬೇಕು.
ಶಿಕಾರಿಪುರ ತಾಲೂಕಿನ ಅಂಜನಾಪುರ ಡ್ಯಾಂ ಸಮೀಪ ಜಲಕ್ರೀಡೆಗಳಿಗೆ ಪ್ರೋತ್ಸಾಹಿಸುವ ವ್ಯವಸ್ಥೆ ಆರಂಭಿಸಬೇಕು. ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥ, ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಗಳನ್ನು ಪಾರಂಪರಿಕ ಪ್ರವಾಸಿ ತಾಣಗಳಾಗಿ ಘೋಷಿಸಿ ಈ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣ ರೂಪಿಸಬೇಕು.
ಶಿವಮೊಗ್ಗ ನಗರದಲ್ಲಿರುವ ಶಿವಪ್ಪನಾಯಕ ಅರಮನೆಯ ಆವರಣದಲ್ಲಿ ’ಲೈಟ್ಸ್ ಅಂಡ್ ಸೌಂಡ್ಸ್ ಸಿಸ್ಟಮ್’ ಅನುಷ್ಠಾನ, ಅರಮನೆಯಿಂದ ಪಕ್ಕದಲ್ಲಿಯೇ ಹೋದು ಹೋಗಿರುವ ತುಂಗಾ ನದಿಯ ಮಧ್ಯದಲ್ಲಿ ನಿಂತು ನದಿ ವೀಕ್ಷಣೆ ಮಾಡಲು ತೂಗು ಸೇತುವೆ ನಿರ್ಮಿಸಬೇಕು. ಆಗುಂಬೆ ದಟ್ಟ ಅರಣ್ಯದಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಿಗೆ ಚಾರಣ ವ್ಯವಸ್ಥೆ ಮಾಡಬೇಕು. ಅಲ್ಲಿರುವ ಜಲಪಾತ, ರಮ್ಯ ತಾಣಗಳ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಬೇಕು. ಸಾಗರ ಹಾಗೂ ಸೊರಬ ತಾಲೂಕುಗಳನ್ನು ಕರಕುಶಲ ಕೇಂದ್ರಗಳೆಂದು ಘೋಷಿಸುವುದು.
ಹೊಸನಗರ, ಸಾಗರ, ಶಿಕಾರಿಪುರ ತಾಲೂಕಿನಲ್ಲಿರುವ ಹತ್ತು ಹಲವು ಐತಿಹಾಸಿಕ, ಪಾರಂಪರಿಕ, ಪ್ರಾಕೃತಿಕ ಪ್ರವಾಸಿ ತಾಣಗಳ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂಬುವುದು ಸ್ಥಳೀಯ ಪ್ರವಾಸಿ ತಾಣಗಳ ಅಭಿವೃದ್ದಿಗೆ ಆಸಕ್ತಿವಹಿಸಿರುವ ಮುಖಂಡರ ಆಗ್ರಹವಾಗಿದೆ.
----------------------------------
ಮತ್ತೆ ತೇಲಿಬರುತ್ತಿದೆ ಗಾಂಜಾ ಘಾಟು



ಒಂದು ಕಾಲದಲ್ಲಿ ಅತಿ ಹೆಚ್ಚು ಶ್ರೀಗಂಧ ಮರಗಳನ್ನು ಬೆಳೆಯುತ್ತಿದ್ದ ಜಿಲ್ಲೆ ನಂತರ ಅದರ ಕಳ್ಳಸಾಗಾಣಿಕೆಗೂ ಹೆಸರಾಗಿ, ತನ್ನೆಲ್ಲ ಶ್ರೀಗಂಧವನ್ನು ದಂಧೆಕೋರರಿಂದ ಬರಿದುಮಾಡಿಕೊಂಡಿತು. ಈಗ ಪಶ್ಚಿಮಘಟ್ಟದಲ್ಲಿರುವ ಅಪೂರ್ವ ಔಷಧಿ ಸಸ್ಯಗಳ ನಾಶ ಮತು ವನ್ಯ ಜೀವಿಗಳ ಸಂತತಿಯ ಹನನವೂ ಸಾಗಿದೆ. ಇದೇ ವೇಳೆ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಗಾಂಜಾವನ್ನು ಬೆಳೆಯುವ ಮೂಲಕ ಗಾಂಜಾ ಕಾರ್ಖಾನೆ ಎಂಬ ಹೆಸರಿಗೂ ಕಾರಣವಾಗುತ್ತಿದೆ.



  ಶಿವಮೊಗ್ಗ ತನ್ನ ಪರಿಸರ ಸಂಪತ್ತಿನಿಂದ ಒಂದೆಡೆ ಹೆಸರಾದರೆ, ಇನ್ನೊಂದೆಡೆ ಇದೇ ಹಸಿರಿನ ಒಡಲಲ್ಲಿ ಗಾಂಜಾ ದಂಧೆಯ ನಡೆಸುವ ಮೂಲಕ ಕುಖ್ಯಾತಿಯನ್ನೂ ಪಡೆಯುತ್ತಿದೆ. ಪ್ರತಿವರ್ಷ ಈ ದಂಧೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಈ ವರ್ಷವಂತೂ ಈಗಾಗಲೇ ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಸುಮಾರು 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ದಾಳಿ ನಡೆಸಿ ಗಾಂಜಾ ವಶಪಡಿಸಕೊಂಡು ಹಲವರ ವಿರುದ್ದ ಕೇಸು ದಾಖಲಿಸಿದ್ದಾರೆ. ಯಾರೋ ಕೆಲವರು ಮಾಡುತ್ತಿರುವ ಈ ಅಕ್ರಮ ದಂಧೆಯಿಂದ ಜಿಲ್ಲೆಯ ಹೆಸರು ಈಗ ಗಾಂಜಾದಿಂದ ಕಳಂಕಿತವಾಗುವಂತಾಗಿದೆ.
ಯಾವ ಬಂಡವಾಳವಿಲ್ಲದೆ ನೋಟು ಎಣಿಸುವ ದಂಧೆಯಾಗಿದೆ ಗಾಂಜಾ. ಇದನ್ನು ಬೆಳೆಯದಂತೆ
 ಸುಮಾರು ಮೂರ್ನಾಲ್ಕು ತಿಂಗಳ ಹಿಂದೆಯೇ ಪೊಲೀಸರು ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಿದ್ದರು. ಕರಪತ್ರಗಳನ್ನೂ ಸಹ ವಿತರಿಸಿದ್ದರು. ಜೊತೆಗೆ ಬೆಳೆದು ಸಿಕ್ಕಿಬಿದ್ದರೆ ಜೈಲು ಶಿಕ್ಷೆ ನಿಶ್ಚಿತ ಎನ್ನುವುದನ್ನೂ ಮನದಟ್ಟು ಮಾಡಿಕೊಟ್ಟಿದ್ದರು. ಆದರೆ ಇದರಿಂದ ಯಾವ ಪ್ರಯೋಜನವೂ ಆದಂತೆ ಕಂಡುಬರುತ್ತಿಲ್ಲ. ಏಕೆಂದರೆ ಈಗ ಗಾಂಜಾ ಹೂವು ಬಿಡುವ ಸಮಯ ಆರಂಭವಾಗಿರುವುದರಿಂದ ಪೊಲೀಸರ ಬಲೆಗೆ ಬೀಳುತ್ತಿರುವವರು ಜಾಸ್ತಿಯಾಗಿದ್ದಾರೆ. ಅದರಲ್ಲೂ ಗ್ರಾಮಾಂತರ ಭಾಗದಲ್ಲಿರುವ ಠಾಣೆಯವರಿಗೆ ಗಾಂಜಾ ಹುಡುಕುವುದೇ ಕೆಲಸವಾಗಿದೆ.
ಈಗ ಗಾಂಜಾ ಹೂವು ಬಿಡುತ್ತಿರುವುದರಿಂದ ತನ್ನಿಂತಾನೆ ಅದರ ಸುವಾಸನೆ ಸುತ್ತಮುತ್ತಲ ಪ್ರದೇಶದಲ್ಲಿ ಬೀರುವುದರಿಂದ ಸುಲಭದಲ್ಲಿ ಅದನ್ನು ಪತ್ತೆ ಹಚ್ಚಲಾಗುತ್ತಿದೆ. ಶಿಕಾರಿಪುರ, ಸೊರಬ ಭಾಗದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಗಾಂಜಾ ಬೆಳೆಯುತ್ತಿರುವುದು ಬೆಳಕಿಗೆ ಬಂದಿದೆ. ಹೊಸನಗರ ಮತ್ತು ಶಿವಮೊಗ್ಗ ಗ್ರಾಮಾಂತರದಲ್ಲೂ ಇದರ ಪ್ರಮಾಣ ಕಡಿಮೆ ಏನಿಲ್ಲ. ಜೋಳದ ಹೊಲದ ಮಧ್ಯೆ ಇದನ್ನು ಬೆಳೆಯುತ್ತಾರೆ. ಆದ್ದರಿಂದ ಹೂವು ಬಿಡುವವರೆಗೆ ಇದರ ಸುಳಿವು ಸಹ ಸಿಗುವುದಿಲ್ಲ. ಚೆಂಡು ಹೂವಿನ ಮಧ್ಯೆ ಇದನ್ನು ಬೆಳೆದರೆ ಯಾರಿಗೂ ಗೊತ್ತ್ತಾಗುವುದೇ ಇಲ್ಲ. ಏಕೆಂದರೆ ಚೆಂಡು ಹೂವಿನ ಎಲೆ ಮತ್ತು ಗಾಂಜಾ ಎಲೆ ಒಂದೇ ರೀತಿಯಾಗಿರುತ್ತದೆ. 
ರೈತರು ಬೆಳೆ ಮಧ್ಯೆ ಗಾಂಜಾ ಬೆಳೆದು ಹೊರರಾಜ್ಯ ಮತ್ತು ಜಿಲ್ಲೆಗೆ ಕಳುಹಿಸುತ್ತಿರುವುದು ಈಗ ಹೆಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಇದರ ಬೆಳೆ ಏರಿಕೆಯಾಗುತ್ತಿರುವುದು ಆತಂಕವನ್ನು ಹುಟ್ಟುಹಾಕಿದೆ. ಶುಂಠಿ ಬೆಳೆಯುವ ನೆಪದಲ್ಲಿ ಜಿಲ್ಲೆಗೆ ಕಾಲಿಟ್ಟ ಕೇರಳಿಗರು ಬರುವಾಗ ಗಾಂಜಾ ದಂಧೆಯನ್ನು ತಂದರು. ರೈತರಿಗೆ ಇದರ ರುಚಿ ತೋರಿದರು. ಇದರಿಂದ ಮಲೆನಾಡಿನಲ್ಲಿ ಗಾಂಜಾ ಗುಂಗು ಹೆಚ್ಚುವಂತೆ ಮಾಡಿದ್ದಾರೆ. ರೈತರ ಬದುಕು ಯಾವತ್ತೂ  ಹಣದ ಅಮಿಷಕ್ಕೆ ಬಲಿಯಾಗಬಾರದು. ಆದರೇನು ಮಾಡುವುದು, ನಾರ್ಕೊಟಿಕ್ ಆಕ್ಟ್ ಬಗ್ಗೆ ಗೊತ್ತಿಲ್ಲದೆ ಗಾಂಜಾ ಬೆಳೆದು ಮೈಮೇಲೆ ಕೇಸು ಎಳೆದುಕೊಂಡು ಜೈಲು ಸೇರುತ್ತಿದ್ದಾರೆ.
ಹವಾಮಾನ ವೈಪರಿತ್ಯ, ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರನ್ನು ದಾರಿ ತಪ್ಪಿಸಿದ್ದೇ ಈ ಗಾಂಜಾ ದಂಧೆ. ಮೂಲ ಕೃಷಿ ಮತ್ತು ಸಾಂಪ್ರದಾಯಿಕವಾಗಿ ಬಂದ ಕೃಷಿಯನ್ನು ಬಿಟ್ಟು ಆರ್ಥಿಕವಾಗಿ ಹೆಚ್ಚು ಲಾಭವನ್ನು ಕೆಲವೇ ತಿಂಗಳಲ್ಲಿ ಗಳಿಸಿಕೊಡಬಲ್ಲ ಗಾಂಜಾ ಬೆಳೆಯಲಾರಂಭಿಸಿದ್ದಾರೆ. ಗಾಂಜಾ ಬೀಜವನ್ನು ನೀಡಿ ಬೆಳೆಯಲು ಪ್ರೇರೇಪಿಸಿದವರೇ ಖರೀದಿಯ ಜವಾಬ್ದಾರಿಯನ್ನೂ ಹೊರುತ್ತಾರೆ. ನೀರು, ಗೊಬ್ಬರ, ಔಷಧ ಯಾವುದೂ ಇದಕ್ಕೆ ಬೇಡ. ಕೇವಲ ಮೂರು ತಿಂಗಳಲ್ಲಿ ಹೂವು ಬಿಡುವ ಸಸ್ಯ. ಯಾವ ಚಿಂತೆಯೂ ಇಲ್ಲದೆ ಹಣ ಗಳಿಸಬಹುದೆಂಬ ಆಸೆ ತೋರಿಸಿ ರೈತರು ಈಗ ಜೈಲು ಕಾಣಬೇಕಾದ ಸ್ಥಿತಿಯನ್ನು ಈ ದಂಧೆಕೋರರು ತಂದೊಡ್ಡಿದ್ದಾರೆ.
ಒಂದು ಗಾಂಜಾ ಗಿಡ 250ರಿಂದ 300 ಗ್ರಾಂ ಗಾಂಜಾವನ್ನು ಕೊಡುತ್ತದೆ. ಒಂದು ಎಕ್ರೆಯಲ್ಲಿ 30ರಿಂದ 40 ಗಿಡವನ್ನು ಬೆಳೆಯಬಹುದು. 3 ತಿಂಗಳಲ್ಲಿ ಇದರ ಬೆಳೆ ಸಿಗುವುದರಿಂದ ರೈತನಿಗೆ ಕನಿಷ್ಟ 10 ಸಾವಿರ ರೂ. ತಿಂಗಳಿಗೆ ಲಾಭ ಬರಲಿದೆ. ಹಸಿ ಗಾಂಜಾ ಒಂದು ಕೆಜಿಗೆ 2 ಸಾವಿರ ರೂ. ಒಣ ಗಾಂಜಾ ಕೆಜಿಗೆ 10 ಸಾವಿರ ರೂ. ಅದರಲ್ಲೂ ಮಲೆನಾಡಿನ ಗಾಂಜಾಕ್ಕೆ ವಿಶೇಷ ಬೇಡಿಕೆ ಇದೆಯಂತೆ. ಇದರಲ್ಲಿರುವ ಕಿಕ್ ಅಥವಾ ರುಚಿಯೇ ಉಳಿದ ಗಾಂಜಾಕ್ಕಿಂತ ಶ್ರೇಷ್ಠವಾದುದು ಎಂದು ತಜ್ಞರು ಹೇಳುತ್ತಾರೆ. ಈಗ ವರ್ಷವಿಡೀ ದುಡಿದರೂ ಇಷ್ಟು ಲಾಭ ರೈತನಿಗೆ ಸಿಗದಿರುವ ಕಾರಣ ಸುಲಭದಲ್ಲಿ ಆಕರ್ಷಿತನಾಗುತ್ತಿದ್ದಾನೆ. ಒಂದು ರೀತಿಯಲ್ಲಿ ಪರ್ಯಾಯ ಬೆಳೆ ಎನ್ನುವಂತಾಗಿದೆ.
 ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಹುಹಿಂದಿನಿಂದಲೂ ಕಾಫಿ ತೋಟದಲ್ಲಿ ಜೊತೆಗೆ ದಟ್ಟಾರಣ್ಯದಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು. ಇದೂ ಸಹ ಕೇರಳಿಗರ ಕೊಡುಗೆಯೇ ಆಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟಿರುವುದು ಮತ್ತು  ಇಲ್ಲಿನ ಯುವಕರನ್ನು  ಗಾಂಜಾ ಗುಂಗಿಗೆ ನೂಕಿರುವುದು ಪ್ರಜ್ಞಾವಂತರ ಜಿಲ್ಲೆಯ ಜನ ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ಇದರಿಂದಾಗಿ ಗಾಂಜಾ ಜಾಲ ಹಬ್ಬುತ್ತಿದೆ. ಎಷ್ಟೇ ಕೇಸು ಹಾಕುತ್ತಿದ್ದರೂ ಅವರ ಕಣ್ತಪ್ಪಿಸಿಯೇ ಬೆಳೆ ಬೆಳೆಯಲಾಗುತ್ತಿದೆ. ಇದು ಜಿಲ್ಲೆಯಲ್ಲಿ ಕಳವಳವನ್ನುಂಟು ಮಾಡಿದೆ. 
 


  ಗಾಂಜಾ ಬೆಳೆದವರು ಅಧಿಕಾರಿಗಳ ದಾಳಿಗೆ ಒಳಗಾದರೆ ಜಮೀನು ಕಳೆದುಕೊಳ್ಳುವುದರ ಜೊತೆಗೆ ಕೇಸು ಹಾಕಿಸಿಕೊಂಡು ಜೈಲು ಸೇರಬೇಕಾಗುತ್ತದೆ. ಈ ಕೇಸಿನಲ್ಲಿ ಜಾಮೀನೂ ಸಹ ಸಿಗುವುದಿಲ್ಲ. 3 ವರ್ಷ ಶಿಕ್ಷೆ ಖಚಿತ. ಹಲವು ವರ್ಷದಿಂದ ನೂರಾರು ರೈತರು ಈ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಪರದಾಡುತ್ತಿದ್ದಾರೆ. ನಾರ್ಕೊಟಿಕ್ ಆಕ್ಟ್‌ನ ತೀವ್ರತೆಯನ್ನು ಅರಿತು ರೈತರು ಗಾಂಜಾದಿಂದ ದೂರ ಸರಿಯಬೇಕು. ಅಬಕಾರಿ ಪೊಲೀಸ್ ಇಲಾಖೆಯವರು ಸಂಶಯಬಂದ ಕಡೆಯೆಲ್ಲ ಪರಿಶೀಲಿಸುವ ಕೆಲಸವನ್ನು ಈಗ ಮಾಡುತ್ತಿದ್ದಾರೆ. ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಳ್ಳಬೇಡಿ.
-ವೈ.ಆರ್. ಮೋಹನ್, ಜಿಲ್ಲಾ ಅಬಕಾರಿ ವರಿಷ್ಠಾಧಿಕಾರಿ    

Monday, 9 October 2017

ಸಮಯ ನಿಗದಿಯಲ್ಲಿ ಜೆನರ್ಮ್ ಬಸ್‌ಗಳಿಗೆ ಅನ್ಯಾಯ
 ಸಾರಿಗೆ ಪ್ರಾಧಿಕಾರದ ಉಚಿತವಲ್ಲದ, ಅವೈಜ್ಞಾನಿಕ ನೀತಿ 


 ಖಾಸಗಿ ಬಸ್ 1 ಕಿ.ಮೀ. ಕ್ರಮಿಸಲು 4 ನಿಮಿಷ ಹಾಗೂ ಸರ್ಕಾರಿ ಸಿಟಿ ಬಸ್‌ಗಳಿಗೆ 2.5 ನಿಮಿಷದಂತೆ ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಗೋಪಾಳ- ಕಾಶಿಪುರ ಮಾರ್ಗದಲ್ಲಿ  ಸಂಚರಿಸುವ ಖಾಸಗಿ ನಗರ ಸಾರಿಗೆ ಬಸ್‌ಗಳಿಗೆ 48 ನಿಮಿಷ ನಿಗದಿಪಡಿಸಿದ್ದರೆ, ಇದೇ ಮಾರ್ಗದಲ್ಲಿ ಸಂಚರಿಸುವ ಜೆನರ್ಮ್ ನಗರ ಸಾರಿಗೆ ಬಸ್‌ಗಳಿಗೆ ಕೇವಲ 25 ನಿಮಿಷ ಸಮಯ ನಿಗದಿಪಡಿಸಲಾಗಿದೆ. ಗೋಪಾಳ ರಾಗಿಗುಡ್ಡ ಮಾರ್ಗಕ್ಕೆ ಖಾಸಗಿ ಬಸ್‌ಗಳಿಗೆ 39 ನಿಮಿಷ, ಸರ್ಕಾರಿ ಬಸ್‌ಗೆ 25 ನಿಮಿಷ. ಮಲವಗೊಪ್ಪ ಕಾಶಿಪುರ ಮಾರ್ಗದಲ್ಲಿ ಸಂಚರಿಸುವ ಖಾಸಗಿಗೆ 60 ನಿಮಿಷ, ಸರ್ಕಾರಿ  ಬಸ್‌ಗೆ 40 ನಿಮಿಷ ನಿಗದಿಪಡಿಸಲಾಗಿದೆ.





 ಶಿವಮೊಗ್ಗ ನಗರದಲ್ಲಿ ಸಂಚರಿಸುತ್ತಿರುವ ಸರ್ಕಾರಿ ಸಿಟಿ ಬಸ್‌ಗಳಿಗೆ ಸಂಬಂಧಿಸಿದಂತೆ ಅಧಿಕಾರಿಶಾಹಿಯ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ. ಖಾಸಗಿ ಸಿಟಿ ಬಸ್ ಹಾಗೂ ಸರ್ಕಾರಿ ಸಿಟಿ ಬಸ್‌ಗಳಿಗೆ ನೀಡಿರುವ ಪರವಾನಗಿಯಲ್ಲಿ ಪ್ರತಿ ಕಿ.ಮೀ.ಗೆ ನಿಗದಿಪಡಿಸಿರುವ ಸಮಯದಲ್ಲಿ ತಾರತಮ್ಯ ಮಾಡಲಾಗಿದೆ. ಸರ್ಕಾರಿ ಸಿಟಿ ಬಸ್‌ಗಳಿಗೆ ವ್ಯತಿರಿಕ್ತ ಸಮಯ ನಿಗದಿ ಮಾಡಲಾಗಿದೆ.

ಪಾಲನೆಯಾಗದ ನಿರ್ಣಯಗಳು
 2017 ರ ಫೆಬ್ರವರಿಯಲ್ಲಿ ನಡೆದ ನಗರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜೆನರ್ಮ್ ನಗರ ಸಾರಿಗೆ ಬಸ್‌ಗಳಿಗೂ  1 ಮೀ ಕ್ರಮಿಸಲು 4 ನಿಮಿಷ ಸಮಯ ನಿಗದಿಪಡಿಸಬೇಕು ಎಂದು ತೀರ್ಮಾನಿಸಲಾಗಿತ್ತು. ಸಂಘರ್ಷ ಉಂಟಾಗುವ ಇರುವ ವೇಳಾಪಟ್ಟಿ ಪರಿಷ್ಕರಿಸಿ ಹೊಸ ವೇಳಾಪಟ್ಟಿ ನೀಡಬೇಕು ಎಂದು ತೀರ್ಮಾನಿಸಲಾಗಿತ್ತು. 2014ರಲ್ಲಿ ನಡೆದ ಸಭೆಯಲ್ಲಿ ಯಾವುದೇ ಸಂದರ್ಭದಲ್ಲೂ  ನಗರ ಸಾರಿಗೆ ಬಸ್‌ಗಳು ಒಂದನ್ನೊಂದು ಓವರ್‌ಟೇಕ್ ಮಾಡಬಾರದು ಎಂದು  ತೀರ್ಮಾನಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ನಿರ್ಣಯಗಳು ಪಾಲನೆಯಾಗಿಲ್ಲ. ಜಿಲ್ಲಾ ಸಾರಿಗೆ ಪ್ರಾಧಿಕಾರ ಇದ್ದು ಏನು ಪ್ರಯೋಜನ ಎನ್ನುವುದು ಪ್ರಯಾಣಿಕರಿಗೆ ತಿಳಿಯಬೇಕಿದೆ.

ನಗರಕ್ಕೆ ಜೆನರ್ಮ್ ಬಸ್ ಬರಲು ಯತ್ನಿಸಿದ ಜನಪ್ರತಿನಿಧಿಗಳು ಈಗಿರುವ ಸಮಸ್ಯೆಯನ್ನು ಅರ್ಥೈಸಿಕೊಳ್ಳಬೇಕು. ಸಮಯ ನೀಡುವಲ್ಲಿ ಆದ ಲೋಪವನ್ನು ಸರಿಪಡಿಸಬೇಕು. ಪ್ರಯಾಣಿಕರಿಗೆ ಉತ್ತಮ ಸೌಲಭ್ಯವೇನೋ ದೊರೆಯುತ್ತಿದೆ, ಆದರೆ ಖಾಸಗಿಯವರ ಕಿರುಕುಳ ಸಾರಿಗೆ ಬಸ್‌ನವರಿಗೆ ತಪ್ಪುವಂತೆ ಮಾಡಬೇಕು. ಹಾದಿ-ಬೀದಿಯಲ್ಲಿ ಬಸ್ ನಿಲ್ಲಿಸಿಕೊಂಡು ಸರ್ಕಾರಿ ಬಸ್‌ನವರೊಡನೆ ಜಗಳ ಕಾಯುವ ಸನ್ನಿವೇಶ ನಡೆಯುತ್ತಿದೆ. ಇದನ್ನು ತಪ್ಪಿಸಲು ಕ್ರಮ ಜರುಗಿಸಬೇಕು. ಯಾವ ಕಾರಣಕ್ಕೂ ಜೆನರ್ಮ್ ಬಸ್ ಪ್ರಯಾಣಿಕರಿಗೆ ಅನ್ಯಾಯವಾಗದಂತೆ, ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ.

ಸರ್ಕಾರಿ ಸಿಟಿ ಬಸ್‌ಗಳಿಗೆ ಸಮಯ ನಿಗದಿಯಲ್ಲಾಗಿರುವ ಲೋಪ ಸರಿಪಡಿಸಬೇಕೆಂದು ಆರು ತಿಂಗಳ ಹಿಂದೆ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿಯೂ ನಿರ್ಧಾರವಾಗಿದ್ದರೂ ಇಲ್ಲಿಯವರೆಗೂ ಈ ಲೋಪ ಸರಿಪಡಿಸಲು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಮುಂದಾಗದಿರುವುದು ನಾನಾ ರೀತಿಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.
 ಪ್ರಸ್ತುತ ಶಿವಮೊಗ್ಗ ನಗರದಲ್ಲಿ ಸರ್ಕಾರಿ ಹಾಗೂ ಖಾಸಗಿ ಸಿಟಿ ಬಸ್‌ಗಳು ಸಂಚರಿಸುತ್ತಿವೆ. ಈ ಬಸ್‌ಗಳ ಪ್ರತಿ ಕಿ.ಮೀ. ಸಂಚಾರಕ್ಕೆ ಸಮಯ ನಿಗದಿ ಮಾಡಲಾಗಿದೆ. ಖಾಸಗಿ ಬಸ್ 1 ಕಿ.ಮೀ. ಕ್ರಮಿಸಲು 4 ನಿಮಿಷ ಹಾಗೂ ಸರ್ಕಾರಿ ಸಿಟಿ ಬಸ್‌ಗಳಿಗೆ 2.5 ನಿಮಿಷದಂತೆ ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಉದಾಹರಣೆಗೆಂಬಂತೆ ಗೋಪಾಳ ಕಾಶಿಪುರ ಮಾರ್ಗದಲ್ಲಿ  ಸಂಚರಿಸುವ ಖಾಸಗಿ ನಗರ ಸಾರಿಗೆ ಬಸ್‌ಗಳಿಗೆ 48 ನಿಮಿಷ ನಿಗದಿಪಡಿಸಿದ್ದರೆ, ಇದೇ ಮಾರ್ಗದಲ್ಲಿ ಸಂಚರಿಸುವ ಜೆನರ್ಮ್ ನಗರ ಸಾರಿಗೆ ಬಸ್‌ಗಳಿಗೆ ಕೇವಲ 25 ನಿಮಿಷ ಸಮಯ ನಿಗದಿಪಡಿಸಲಾಗಿದೆ. ಗೋಪಾಳ ರಾಗಿಗುಡ್ಡ ಮಾರ್ಗಕ್ಕೆ ಖಾಸಗಿ ಬಸ್‌ಗಳಿಗೆ 39 ನಿಮಿಷ, ಸರ್ಕಾರಿ ಬಸ್‌ಗೆ 25 ನಿಮಿಷ. ಮಲವಗೊಪ್ಪ ಕಾಶಿಪುರ ಮಾರ್ಗದಲ್ಲಿ ಸಂಚರಿಸುವ ಖಾಸಗಿಗೆ 60 ನಿಮಿಷ, ಸರ್ಕಾರಿ  ಬಸ್‌ಗೆ 40 ನಿಮಿಷ ನಿಗದಿಪಡಿಸಲಾಗಿದೆ.
ಅಂದರೆ ಸರ್ಕಾರಿ ಬಸ್‌ನ್ನು ಅಧಿಕಾರಿಗಳೇ ನಿರ್ಲಕ್ಷಿಸುತ್ತಿರುವುದು ತಿಳಿಯುತ್ತದೆ. ಅವರೇಕೆ ಖಾಸಗಿ ಬಸ್ ಮಾಲಕರ ಪರ ನಿಂತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಸರ್ಕಾರದಿಂದ ಸಂಬಳ ಪಡೆಯುವವರೇ ಸರ್ಕಾರದ ವಿರುದ್ದ ನಿಂತ ಬಗೆ ಇದು. ಸರ್ಕಾರಿ ಬಸ್‌ಗಳು ಎಲ್ಲಾ ಬಸ್ ಸ್ಟಾಪ್‌ನಲ್ಲಿ ಒಂದು ನಿಮಿಷವೂ ನಿಲ್ಲದ ಸ್ಥಿತಿ ಎದುರಾಗಿದೆ. ಆದರೆ ಖಾಸಗಿಯವರು ಐದು ನಿಮಿಷ ನಿಂತು ಹೋಗುತ್ತಾರೆ. ಇದರರ್ಥ ಏನೆಂದರೆ ಸರ್ಕಾರಿ ಬಸ್ ನೆಪಮಾತ್ರಕ್ಕೆ ಚಾಲನೆಯಲ್ಲಿರಲಿ ಎನ್ನುವುದು.
ಪ್ರಸ್ತುತ 19 ಬಸ್‌ಗಳು ನಗರ ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ.  ಇಲ್ಲಿಯವರೆಗೂ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭಿಸಿಲ್ಲ. ಇದು ಒಂದು ದೃಷ್ಟಿಯಲ್ಲಿ ಒಳ್ಳೆಯದೇ ಎಂದೆನಿಸುತ್ತದೆ. ಅಧಿಕಾರಿಗಳ ಈ ಧೋರಣೆಯಿಂದ ಬಸ್‌ಗಳು ನಷ್ಟದಲ್ಲಿ ಸಂಚರಿಸುವುದು ತಪ್ಪಿದಂತಾಗಿದೆ.  ಈ ನಡುವೆಯೇ ಸರ್ಕಾರಿ ಹಾಗೂ ಖಾಸಗಿ ಸಿಟಿ ಬಸ್‌ಗಳಿಗೆ ಸಮಯ ನಿಗದಿಯಲ್ಲಿ ತಾರತಮ್ಯ ಧೋರಣೆ ಮಾಡಿರುವುದು ನಿಜಕ್ಕೂ ಖಂಡನಾರ್ಹವಾದುದಾಗಿದೆ. ಬೇಕೆಂದೇ ಸರ್ಕಾರಿ ಸಿಟಿ ಬಸ್‌ಗಳಿಗೆ ಕಡಿಮೆ ಸಮಯ ನಿಗದಿ ಮಾಡಿ, ಒತ್ತಡ ಸೃಷ್ಟಿಸುವ ಹಾಗೂ ಸಮರ್ಪಕವಾಗಿ ಕಲೆಕ್ಷನ್ ಆಗದಂತೆ ಮಾಡುವ ಹುನ್ನಾರ ಅಡಗಿರುವ ಅನುಮಾನಗಳು ವ್ಯಕ್ತವಾಗುತ್ತಿವೆ’ ಎಂದು  ಪ್ರಯಾಣಿಕರು ಹೇಳುತ್ತಿದ್ದಾರೆ.
  ಪ್ರತಿ ಕಿ.ಮೀ.ಗೆ ಸಂಚರಿಸುವ ವೇಳಾಪಟ್ಟಿಯಲ್ಲಿ ಕಡಿಮೆ ಸಮಯ ನಿಗದಿ ಪಡಿಸುವ ಮೂಲಕ, ಸರ್ಕಾರಿ ಸಿಟಿ ಬಸ್ ಚಾಲಕರ ಮೇಲೆ ಅನಗತ್ಯ ಒತ್ತಡ ಸೃಷ್ಟಿಸಲಾಗುತ್ತಿದೆ. ಕಡಿಮೆ ಸಮಯದಲ್ಲಿ ನಿಗದಿತ ಸಮಯ ತಲುಪಬೇಕಾದ ಅನಿವಾರ್ಯತೆಯನ್ನು ಚಾಲಕರ ಮೇಲೆ ಹೇರಲಾಗುತ್ತಿದೆ. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಇಂತಹ ಅನಗತ್ಯ ಪೈಪೋಟಿಗೆ ಪ್ರಾದೇಶಿಕ ಸಾರಿಗೆ ಇಲಾಖೆಯೇ ಕುಮ್ಮಕ್ಕು ನೀಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
 ಶಿವಮೊಗ್ಗದಲ್ಲಿ ಸಂಚರಿಸುತ್ತಿರುವ ಸರ್ಕಾರಿ ಸಿಟಿ ಬಸ್‌ಗಳು ನಾನಾ ಕಾರಣಗಳಿಂದ ನಷ್ಟದಲ್ಲಿ ಸಂಚರಿಸುತ್ತಿವೆ. ಲಾಭದ ಲೆಕ್ಕವೇ ಇಲ್ಲದಂತಾಗಿದೆ. ಸ್ಥಳೀಯ ಕೆ.ಎಸ್.ಆರ್.ಟಿ.ಸಿ. ಮೂಲಗಳು ಹೇಳುವ ಪ್ರಕಾರ, ಪ್ರತಿದಿನ ಒಂದು ಬಸ್ ಸರಾಸರಿ 150 ಕಿ.ಮೀ. ಸಂಚರಿಸುತ್ತಿದ್ದು, ಪ್ರತಿದಿನ ಸಂಚರಿಸುವ 19 ಸರ್ಕಾರಿ ಸಿಟಿ ಬಸ್‌ಗಳು ಒಟ್ಟಾರೆ ಅಂದಾಜು 2,500 ಕಿ.ಮೀ. ಸಂಚರಿಸುತ್ತವೆ.
ಡಿಸೇಲ್ ಸೇರಿದಂತೆ ಬಸ್‌ನ ಇತರೆ ನಿರ್ವಹಣೆ ಲೆಕ್ಕ ಹಾಕಿದರೆ ಪ್ರತಿ ಕಿ.ಮೀ.ಗೆ ಕನಿಷ್ಠ 25-30 ರೂ. ಲಾಭ ಬರಬೇಕು. ಈಗ ಕೆಎಸ್‌ಆರ್‌ಟಿಸಿ ಬಸ್‌ಗಳು ಪ್ರತಿದಿನ 1 ಕಿ.ಮೀ.ಗೆ 16 ರಿಂದ 17 ರೂ. ಲಾಭ ಗಳಿಸುತ್ತಿವೆ. ಇದರಿಂದ ಪ್ರತಿದಿನ ಅಂದಾಜು 30 ಸಾವಿರ ರೂ. ನಷ್ಟವಾಗುತ್ತಿದೆ. ಇದೇ ಪರಿಸ್ಥಿತಿ ಖಾಸಗಿ ನಗರ ಸಾರಿಗೆ ಬಸ್‌ಗಳದ್ದು ಆಗಿದೆ ಎಂದು ಖಾಸಗಿ ಮೂಲಗಳು ಹೇಳುತ್ತವೆ.
.............................

Thursday, 5 October 2017




ಚಿಟ್ಟಾಣಿ - ಯಕ್ಷಗಾನದ ಕಟ್ಟಾಣಿ

 ಚಿಟ್ಟಾಣಿಯವರ ವೈಶಿಷ್ಟ್ಯವಿರುವುದೇ ಕುಣಿತದಲ್ಲಿ; ಕುಣಿತದ ವೈವಿಧ್ಯದಲ್ಲಿ;  ಇದನ್ನು ಮೀರಿನಿಂತ ಅದ್ಭುತ ಲಯಸಿದ್ಧಿಯಲ್ಲಿ!   ಹೀಗಾಗಿಯೇ ಎಲ್ಲಾ ಹಿಮ್ಮೇಳದವರೊಂದಿಗೂ  ತಮ್ಮತನವನ್ನು ತೋರಲು ಸಾಧ್ಯವಾಯಿತು. ಇವರ ಕುಣಿತದ ಸಾಮರ್ಥ್ಯವನ್ನು ಗುರುತಿಸಿದವರು ಕಡತೋಕ ಮಂಜುನಾಥ ಭಾಗವತರು.  ಭೋಜ- ಕಾಳಿದಾಸ ಪ್ರಸಂಗದ ಕಲಾಧರ ಪಾತ್ರವನ್ನು ಚಿಟ್ಟಾಣಿಯವರು ಒಲ್ಲೆನೆಂದರೂ ಅವರಲ್ಲಿ ಧೈರ್ಯ ತುಂಬಿ ಅ ಪಾತ್ರವನ್ನು ಮಾಡಿಸಿದರು. ಕಲಾಧರನಿಗಿರುವ ಮೂರೇ ಮೂರು ಪದ್ಯಗಳಲ್ಲಿ ಚಿಟ್ಟಾಣಿಯವರು ಜನಪ್ರಿಯರಾದರು. ಈ ಕಲಾಧರನಿಗಾಗಿಯೇ ಆ ಪ್ರಸಂಗ ಹೆಚ್ಚೆಚ್ಚು ಪ್ರದರ್ಶನ ಕಂಡಿತು. ಕಲಾಧರ ಚಿಟ್ಟಾಣಿ ಎಂದೇ ಖ್ಯಾತರಾದರು.


 ಚಿಟ್ಟಾಣಿ ಎಂಬ ಮೂರಕ್ಷರದ ಪದ ತ್ರಿವಿಕ್ರಮನ ಹಜ್ಜೆ ಗುರುತಿನಂತೆ ಯಕ್ಷಗಾನ ಲೋಕದಲ್ಲಿ ಅಪೂರ್ವವಾದುದು, ಅನನ್ಯವಾದುದು. ಚಿಟ್ಟಾಣಿ ರಾಮಚಂದ್ರ ಹೆಗಡೆ ಎಂದರೆ ಗೊತ್ತಿರದ ಜನರಿರಬಹುದು; ಆದರೆ ಚಿಟ್ಟಾಣಿ ಎಂಬ ಹೆಸರನ್ನು ಕೇಳದವರು, ಅವರ ವೇಷವನ್ನು ನೋಡದವರು  ಯಾರೂ ಕಲಾಲೋಕದಲ್ಲಿ ಇಲ್ಲವೆನ್ನಬಹುದು.
ಯಕ್ಷಗಾನದಲ್ಲಿ ಜನಮಾನ್ಯತೆ ಪಡೆದು ಕೀರ್ತಿಶಾಲಿಯಾದವರು ಕೆಲವರಾದರೆ, ಜನಪ್ರಿಯತೆಯನ್ನು ಪಡೆದವರು ಹಲವರು. ಜನಮಾನ್ಯತೆ ಪಡೆದವರೆಲ್ಲ ಜನಪ್ರಿಯರಾಗಲಿಲ್ಲ; ಜನಪ್ರಿಯರಾದವರೆಲ್ಲ ಜನಮಾನ್ಯರಾಗಲಿಲ್ಲ. ಜನಮಾನ್ಯತೆ ಕಲಾಭಿಜ್ಞರಿಂದ ಬಂದುದು; ಜನಪ್ರಿಯತೆ ಕಲಾರಸಿಕರಿಂದ ಬಂದುದು.  ಚಿಟ್ಟಾಣಿಯವರು ಜನಪ್ರಿಯತೆಯೊಂದಿಗೆ  ಜನಮಾನ್ಯತೆ ಪಡೆದವರಲ್ಲಿ ಅಗ್ರಗಣ್ಯರು.
ಕಲೆಯೆಂಬುದು ಪ್ರತಿಭೆ ಮತ್ತು ಪಾಂಡಿತ್ಯಗಳಿಂದ ವಿಜೃಂಭಿಸುವುದು ಒಂದು ಬಗೆ; ಬುದ್ಧಿ -ಭಾವಗಳಿಂದ ಪ್ರಕಟವಾಗುವುದು ಇನ್ನೊಂದು ಬಗೆ. ಚಿಟ್ಟಾಣಿಯವರಲ್ಲಿ ಇದ್ದುದು ಪ್ರತಿಭಾವಿದ್ಯುಲ್ಲಹರಿ. ಅವರು ರಂಗಪ್ರವೇಶಿಸಿದರೆ ಕೋಲ್ಮಿಂಚು ಕಣ್‌ಕೋರೈಸಿದಂತೆ! ಈ ಕೋಲ್ಮಿಂಚು ಆಕಾರವನ್ನು ತಳೆದು ನಿರ್ಗಮನದವರೆಗೆ ಬಗೆಬಗೆಯ ಭಾವ, ವಿನ್ಯಾಸ, ವೈಭವವನ್ನು  ಉಂಟುಮಾಡಿದಂತೆ! ಹಾಗಾಗಿಯೇ ಚಿಟ್ಟಾಣಿ ಎಷ್ಟು ಹೊತ್ತಿಗೆ ರಂಗಪ್ರವೇಶಿಸುತ್ತಾರೆಂಬ ಕುತೂಹಲ ಪ್ರೇಕ್ಷಕರಲ್ಲಿರುತ್ತಿತ್ತು.
ಕೆಲವರು ಕಲೆಯನ್ನು ಆಶ್ರಯಿಸುವುದು ತಾವು ಬದುಕುವುದಕ್ಕಾಗಿ; ಎಲ್ಲೋ ಕೆಲವರಿಗೆ ಕಲೆ ಒಲಿಯುತ್ತದೆ- ತಾನು ಬದುಕುವುದಕ್ಕಾಗಿ. ಚಿಟ್ಟಾಣಿ ಕಲೆ ಒಲಿದ ಕಲಾವಿದ! ಚಿಟ್ಟಾಣಿ ಬಗೆಗೆೆ ಬಹುಶ್ರುತವಾದ  ಮಾತೊಂದಿದೆ-ಚಿಟ್ಟಾಣಿ ಹುಟ್ಟಿದ್ದೇ ಯಕ್ಷಗಾನಕ್ಕಾಗಿ ಎಂದು.  ಅವರ ವೈವಿಧ್ಯಮಯವಾದ ವೇಷವನ್ನು  ಕಂಡವರಿಗೆ,  ಪಾತ್ರ ತಾದಾತ್ಮ್ಯವನ್ನು ಗ್ರಹಿಸಿದವರಿಗೆ ಈ ಮಾತು ಅತಿಶಯೋಕ್ತಿ ಎನಿಸುವುದಿಲ್ಲ.
ಚಿಟ್ಟಾಣಿ ಓದಿದ್ದು ಎರಡನೆಯ ತರಗತಿಯವರೆಗೆ. ಆ ಹರೆಯದಲ್ಲೇ ಮನೆಯವರ ಕಣ್ತಪ್ಪಿಸಿ ಆಟ (ಯಕ್ಷಗಾನ)ಕ್ಕೆ ಹೋಗಿ  ಅಲ್ಲಿನ ಪಾತ್ರಗಳನ್ನು ಮೈ-ಮನಸ್ಸುಗಳನ್ನು ತುಂಬಿಕೊಂಡರು;  ಮರುದಿನ ಗೇರುಗುಡ್ಡೆಯನ್ನೇರಿ ಕುಣಿದರು; ಕುಣಿದು ತಣಿದರು. ಈ ಚಿಟ್ಟಾಣಿ ಮುಂದೆ ಗುಡ್ಡಗಳ  ಗುಡ್ಡ, ಬೆಟ್ಟವನ್ನೇರಿ  ಕೀರ್ತಿಶಿಖರವನ್ನೇರಿ ಕುಣಿದು ತಣಿದರು; ರಸಿಕಜನ ಸಂದೋಹವನ್ನು ನಿರಂತರ ತಣಿಸಿದರು. ಚಿಟ್ಟಾಣಿ ಎಂದೂ ಕುಣಿದು ದಣಿದವರಲ್ಲ; ಮೈ-ಮನಗಳ  ದಣಿವನ್ನು ವೇಷಕಟ್ಟಿ  ಕುಣಿದೇ ತಣಿಸಿಕೊಂಡವರು.
ಚಿಟ್ಟಾಣಿಯವರಿಗೆ ಪರಂಪರೆಯ ಬಳುವಳಿ ಇರಲಿಲ್ಲ. ಅವರು ನೋಡಿಯೇ  ಕಲಿತವರು. ಕರ್ಕಿ ಪರಮಯ್ಯ ಹಾಸ್ಯಗಾರರು,  ಕೆರೆಮನೆ ಶಿವರಾಮ ಹೆಗಡೆ, ದೇವುರು ನಾರಾಯಣ ಹೆಗಡೆ,  ಕೊಂಡದಕುಳಿ ಹೆಗಡೆ ಬಂಧುಗಳು- ಇವರೆಲ್ಲರ ದಟ್ಟ ಪ್ರಭಾವ ಚಿಟ್ಟಾಣಿಯವರ ಮೇಲಾಗಿದೆ.  ಆದರೂ ಚಿಟ್ಟಾಣಿ ಅನುಕರಣೆಯನ್ನು ಮೀರಿ ನಿಂತವರು.  ಮೂಡ್ಕಣಿ ಹೆಗಡೆಯವರ ಹಸ್ತಾಭಿನಯದ ಅನುಕರಣೆಯನ್ನು  ಚಿಟ್ಟಾಣಿ ಮಾಡುತ್ತಿದ್ದರು.  ಯಾವುದೇ ಪರಂಪರೆಯಿಲ್ಲದ ಚಿಟ್ಟಾಣಿ ತಾವೇ ‘ಚಿಟ್ಟಾಣಿ ಪರಂಪರೆ’ಯನ್ನು ನಿರ್ಮಿಸಿದರು. ಅವರ  ಮಕ್ಕಳಲ್ಲದೆ ಅನೇಕ ತರುಣ ಕಲಾವಿದರೂ ಸಹ  ಚಿಟ್ಟಾಣಿ ನೆನಪು ಮಾಡುತ್ತಿದ್ದಾರೆ.
ಚಿಟ್ಟಾಣಿಯವರ ವೈಶಿಷ್ಟ್ಯವಿರುವುದೇ ಕುಣಿತದಲ್ಲಿ; ಕುಣಿತದ ವೈವಿಧ್ಯದಲ್ಲಿ;  ಇದನ್ನು ಮೀರಿನಿಂತ ಅದ್ಭುತ ಲಯಸಿದ್ಧಿಯಲ್ಲಿ!   ಹೀಗಾಗಿಯೇ ಎಲ್ಲಾ ಹಿಮ್ಮೇಳದವರೊಂದಿಗೂ  ತಮ್ಮತನವನ್ನು ತೋರಲು ಸಾಧ್ಯವಾಯಿತು. ಇವರ ಕುಣಿತದ ಸಾಮರ್ಥ್ಯವನ್ನು ಗುರುತಿಸಿದವರು ಕಡತೋಕ ಮಂಜುನಾಥ ಭಾಗವತರು.  ಭೋಜ- ಕಾಳಿದಾಸ ಪ್ರಸಂಗದ ಕಲಾಧರ ಪಾತ್ರವನ್ನು ಚಿಟ್ಟಾಣಿಯವರು ಒಲ್ಲೆನೆಂದರೂ ಅವರಲ್ಲಿ ಧೈರ್ಯ ತುಂಬಿ ಅ ಪಾತ್ರವನ್ನು ಮಾಡಿಸಿದರು. ಕಲಾಧರನಿಗಿರುವ ಮೂರೇ ಮೂರು ಪದ್ಯಗಳಲ್ಲಿ ಚಿಟ್ಟಾಣಿಯವರು ಜನಪ್ರಿಯರಾದರು. ಈ ಕಲಾಧರನಿಗಾಗಿಯೇ ಆ ಪ್ರಸಂಗ ಹೆಚ್ಚೆಚ್ಚು ಪ್ರದರ್ಶನ ಕಂಡಿತು. ಕಲಾಧರ ಚಿಟ್ಟಾಣಿ ಎಂದೇ ಖ್ಯಾತರಾದರು.  

ಚಿಟ್ಟಾಣಿ ಅವರ ಅಭಿಮಾನಿ ಬಳಗ ಬಹುದೊಡ್ಡದು. ಅವಿದ್ಯಾವಂತರು, ಜನಸಾಮಾನ್ಯರು, ಜನಮಾನ್ಯ ವಿದ್ಯಾವಂತರು- ಹೀಗೆ ಎಲ್ಲ ವರ್ಗದವರು ಇವರ ಅಭಿಮಾನಿಗಳು. ಚಿಟ್ಟಾಣಿ ಒಬ್ಬ ತಾರಾಮೌಲ್ಯವುಳ್ಳ ಕಲಾವಿದ. ಚಿಟ್ಟಾಣಿಯವರ ವೇಶ ನೋಡಬೇಕೆಂದೇ ಜನ ಮುಗಿಬೀಳುತ್ತಿದ್ದರು. ಕರಪತ್ರದಲ್ಲಿ ಅವರ ಹೆಸರಿದ್ದೂ ಅವರಿಲ್ಲವೆಂದರೆ ಗಲಾಟೆ ಮಾಡುತ್ತಿದ್ದರು. ಟಿಕೆಟ್ ಹಣ ವಾಪಸ್ ಕೇಳುತ್ತಿದ್ದರು.
ಕಲಾಧರನೆಂದರೆ  ಚಂದ್ರನನ್ನು ಹೊತ್ತ ನಟರಾಜನಾದ ಶಿವ. ಮುಂದೆ ಚಿಟ್ಟಾಣಿಯವರು ಯಕ್ಷಗಾನದ ಕ್ಷೇತ್ರದ ನಟರಾಜನಾಗಿಯೇ ಮೆರೆದರು. ಚಿಟ್ಟಾಣಿ ಹತ್ತಾರು ಮೇಳಗಳಲ್ಲಿ ತಿರುಗಾಟ ನಡೆಸಿದರು. ಅಮೃತೇಶ್ವರೀ ಮೇಳ ಚಿಟ್ಟಾಣಿ ಬದುಕಿನ ಅಮೃತಪರ್ವ! ಸುದೀರ್ಘ ಕಾಲ ಅವರ ಸಾಮರ್ಥ್ಯದ ವಿಯದ್ ವಿಜೃಂಭಣೆಗೆ ಕಾರಣರಾದವರು ಭಾಗವತ ನಾರಾಯಣ ಉಪ್ಪೂರರವರು. ಆ ನಂತರ ಕಾಳಿಂಗ ನಾವುಡರು. ಜೊತೆಯಲ್ಲಿ ಮದ್ದಲೆಗಾರರಾದ ಬೇಳಂಜೆ ತಿಮ್ಮಪ್ಪ ನಾಯ್ಕ ಮತ್ತು ದುರ್ಗಪ್ಪ ಗುಡಿಗಾರರು.
ಚಿಟ್ಟಾಣಿ ವೀರಾದ್ಭುತ, ರೌದ್ರ ರಸಗಳಲ್ಲಿ ರಸಲೀನರಾಗುತ್ತಿದ್ದರು. ಶೃಂಗಾರ ಅವರಿಗೆ ಪ್ರಿಯವಾದ ರಸ. ಕರುಣರಸದಲ್ಲಿ ಅವರು ಕರಗುತ್ತಿದ್ದರು. ಆದರೂ ಅವರಿಗೆ ಅದು ಪ್ರಿಯವಾದ ರಸವಾಗಿರಲಿಲ್ಲ. ಯಾವುದೇ ಪಾತ್ರವನ್ನು ವಹಿಸಿದರೂ ಪಾತ್ರತಾದಾತ್ಮ್ಯ ಚಿಟ್ಟಾಣಿ ಮನೋಧರ್ಮವಾಗಿತ್ತು.
ಚಿಟ್ಟಾಣಿ ನಿರ್ವಹಿಸಿದ ಯಾವುದೇ ಪಾತ್ರವೂ ಎಂದೂ ಸಪ್ಪೆ ಎನಿಸುತ್ತಿರಲಿಲ್ಲ.  ಯಾವುದೇ ಒಬ್ಬ ಕಲಾವಿದನಿಗೆ ತನ್ನ ಭಾವ ಪ್ರಕಟಣೆಗೆ ಬೇಕಾದುದು ಕಣ್ಣಿನ ಅಭಿನಯ. ಸಾವಿರ ಮಾತು ಹೇಳದ್ದನ್ನು ಚಿಟ್ಟಾಣಿಯವರ ಒಂದು ಕಣ್‌ನೋಟ ಹೇಳುತ್ತಿತ್ತು. ಚಿಟ್ಟಾಣಿ ಅವರಿಗೆ ನೇತ್ರಾಭಿನಯ ಕರತಲಾಮಲಕ. ಚಿಟ್ಟಾಣಿ ಹೆಚ್ಚು ಮಾತುಗಾರರಲ್ಲ. ಆದರೆ ಪಾತ್ರೋಚಿತವಾದ ಅವರ ಮಾತು ಪರಿಣಾಮಕಾರಿಯಾಗಿರುತ್ತಿತ್ತು.
ಯಕ್ಷಗಾನದಲ್ಲಿ ಜೋಡಿ ಪಾತ್ರಗಳ ಪ್ರದರ್ಶನ ಉತ್ತರ ಕನ್ನಡ ಜಿಲ್ಲೆಯ ವಿಶೇಷ ಆಕರ್ಷಣೆ. ಕೆರೆಮನೆ ಶಿವರಾಮ ಹೆಗಡೆ- ಚಿಟ್ಟಾಣಿ, ಕೆರೆಮನೆ ಮಹಾಬಲ ಹೆಗಡೆ- ಚಿಟ್ಟಾಣಿ, ಮೂರೂರು ದೇವುರು ಹೆಗಡೆ-ಚಿಟ್ಟಾಣಿ, ಜಲವಳ್ಳಿ ವೆಂಕಟೇಶ- ಚಿಟ್ಟಾಣಿ, ಅಪೂರ್ವ ಜೋಡಿಯಾಗಿ ರಸಿಕ ಜನರ ಕಣ್ಮನಗಳಿಗೆ ಹಬ್ಬವಾಗುತ್ತಿತ್ತು. ಕಲಾರಸಿಕರ ಪಾಲಿಗೆ ಇದೊಂದು ಸ್ಪರ್ಧೆಯಂತೆ ಕಾಣುತ್ತಿತ್ತು. ಇಲ್ಲಿಯೂ ಚಿಟ್ಟಾಣಿ ಸೈ ಎನಿಸಿಕೊಂಡವರು.
ಅನೇಕ ಕಲಾವಿರದಲ್ಲಿ ಒಂದು ದೌರ್ಬಲ್ಯವಿದೆ. ಸಭೆ ತುಂಬಿದ್ದರೆ, ತಮಗೆ ಬೇಕಾದವರು ಮುಂದೆ ಆಸೀನರಾಗಿದ್ದರೆ ಅವರು ಕಸುಬು ಮಾಡುತ್ತಾರೆ; ಮೆರೆಯುತ್ತಾರೆ. ಆದರೆ ಚಿಟ್ಟಾಣಿ ಹಾಗಲ್ಲ, ಅವರೆಂದೂ ಪ್ರೇಕ್ಷಕರನ್ನು ನಿರಾಸೆಗೊಳಿಸಿದವರಲ್ಲ. ಇದು ಚಿಟ್ಟಾಣಿಯವರ ಕಲಾಧೋರಣೆ!
ಚಿಟ್ಟಾಣಿ ಅದೃಷ್ಟವಂತ ಕಲಾವಿದ. ಅವರಿಗೆ ಸಂದ ಪ್ರಶಸ್ತಿಗಳು ಐವತ್ತು ದಾಟಿತ್ತು. ಪಡೆದ ಸನ್ಮಾನ ಸಾವಿರ ಮೀರಿತ್ತು.  ಅವರ ಜೀವನ ವೃತ್ತಾಂತ - ‘ನಿಮ್ಮ ಚಿಟ್ಟಾಣಿ’ ಪ್ರಕಟವಾಗಿದೆ. ಧಾರವಾಡದ ಕಾವೆಂಶ್ರೀ ಅವರು ಚಿಟ್ಟಾಣಿ ಕುರಿತು ಮಹಾಪ್ರಬಂಧ ಮಂಡಿಸಿ ಹಂಪಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಕೇಂದ್ರ ಸಂಗೀತ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ರಾಜ್ಯ ಸರ್ಕಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ರಾಷ್ಟ್ರದ ಅತ್ಯುನ್ನತ ಗೌರವವಾಗಿರುವ ಪದ್ಮಶ್ರೀ  ಪ್ರಶಸ್ತಿ ಪಡೆದ ಮುಮ್ಮೊದಲ ಯಕ್ಷಗಾನ ಕಲಾವಿದ ಚಿಟ್ಟಾಣಿ. ನಿಜಕ್ಕೂ ಚಿಟ್ಟಾಣಿ ಯಕ್ಷಗಾನದ ದಂತಕಥೆ: ಚಿಟ್ಟಾಣಿ-ಯಕ್ಷಗಾನದ ಕಟ್ಟಾಣಿ!

ಚಿಟ್ಟಾಣಿಯವರಿಗೆ ಕಲಾಧರ, ಭಸ್ಮಾಸುರ, ದುಷ್ಟಬುದ್ಧಿ, ಕೀಚಕ, ಕಾರ್ತವೀರ್ಯ, ಉಗ್ರಸೇನ, ಸುಧನ್ವ, ಅರ್ಜುನ, ಪರಶುರಾಮ, ರಾಜಾ ಬೃಹದೃಥ ಪಾತ್ರಗಳು ಕೀರ್ತಿ ತಂದುಕೊಟ್ಟವುಗಳು. ಯಾವತ್ತೂ ತನ್ನ ಸಹಕಲಾವಿದರನ್ನು , ಇದಿರು ಪಾತ್ರಗಳನ್ನು ಕಡೆಗಣಿಸಿದವರಲ್ಲ: ಕೆಣಕಿದವರಲ್ಲ.   ರಂಗದ ಒಳಗೂ ಅಷ್ಟೇ, ಹೊರಗೂ ಅಷ್ಟೇ. ಅವರಿಗೆ ಕಿರಿಯರನ್ನು ಕಂಡರೆ ಪ್ರೀತಿ, ಹಿರಿಯರನ್ನು ಕಂಡರೆ ಗೌರವ.