Tuesday, 15 August 2017

ಉಪ್ಪಿ ಪರಿಕಲ್ಪನೆ ಒಳ್ಳೆಯದು, ಆದರೆ.....


  ರಾಜಕೀಯ ಸೇರಲು ಅಧಿಕಾರಿಗಳು, ನಿವೃತ್ತರು ಮುಂದಾಗುತ್ತಿದ್ದಾರೆ. ಸಿನಿಮಾನಟರೂ ಸಹ ಈಗ ತುದಿಗಾಲಲ್ಲಿ ನಿಂತಿದ್ದಾರೆ. ದಕ್ಷಿಣ ಭಾರತದ ರಾಜಕಾರಣದಲ್ಲಿ ಆಂದ್ರ, ತಮಿಳುನಾಡಿನಲ್ಲಿ ಸಿನಿಮಾಕ್ಕೆ ಬಣ್ಣ ಹಚ್ಚಿದವರು ರಾಜ್ಯವನ್ನೂ ಆಳಿದ ಉದಾಹರಣೆ ಕಣ್ಮುಂದಿದೆ. ಆದರೆ ಕರ್ನಾಟಕದಲ್ಲಿ ನಟರು ರಾಜಕೀಯವಾಗಿ ಪ್ರಕಾಶಮಾನರಾದ ಉದಾಹರಣೆ ಇಲ್ಲ. ಆದರೂ ಅನೇಕ ನಟರು ರಾಜಕೀಯ ಚಟಕ್ಕೆ ಬೀಳುತ್ತಿದ್ದಾರೆ. ನಟ ಉಪೇಂದ್ರ. ಪ್ರಜಾಕೀಯ ಎಂಬ ಸಂಘಟನೆ ಮೂಲಕ ರಾಜಕೀಯ ಪಕ್ಷ ಕಟ್ಟಲು ಸಿದ್ಧರಾಗಿದ್ದಾರೆ. ತಮ್ಮ ರಾಜಕೀಯ ನಿಲುವು ಎನು, ರಾಜಕೀಯ ಎಂದರೆ ಹೇಗಿರಬೇಕೆಂಬ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ದಾರೆ. ಆದರೆ ಇವುಗಳನ್ನೆಲ್ಲ ಜಾರಿಗೊಳಿಸುವುದು ಅಷ್ಟು ಸುಲಭವೇ ಎಂಬ ಪ್ರಶ್ನೆ ನಮ್ಮ ಮುಂದಿದೆ. ಆ ಬಗ್ಗೆ ಒಂದಷ್ಟು ವಿಚಾರ. 



 ತಮಿಳುನಾಡಿನ ಹಿರಿಯನಟರಿಬ್ಬರಾದ ಕಮಲ್‌ಹಾಸನ್ ಮತ್ತು ರಜನಿಕಾಂತ್ ತಾವಿಬ್ಬರೂ ರಾಜಕೀಯಕ್ಕೆ ಪದಾರ್ಪಣೆ ಮಾಡುವ ವಿಚಾರವನ್ನು ಕೆಲವು ತಿಂಗಳಿನಿಂದ ಹೇಳುತ್ತಿದ್ದರೂ ಯಾವಾಗ ಕಾಲಿಡುವೆವು ಎನ್ನುವ ಗುಟ್ಟನ್ನು ಬಿಟ್ಟುಕೊಡದೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿದ್ದಾರೆ. ಈ ಮಧ್ಯೆ ಕನ್ನಡದ ನಟ ‘ರಿಯಲ್ ಸ್ಟಾರ್’ ಉಪೇಂದ್ರ ತಾನು ‘ಪ್ರಜಾಕೀಯ’ ಎಂಬ ರಾಜಕೀಯ ಸಂಘಟನೆಯನ್ನು ಸ್ಥಾಪಿಸುವುದಾಗಿ ಆಗಸ್ಟ್ 12ರಂದು ಘೋಷಿಸಿದ್ದಾರೆ.
ಉಪೇಂದ್ರ ಬಿಡುಗಡೆಗೊಳಿಸಿರುವ ರಾಜಕೀಯ ಪರಿಕಲ್ಪನೆಗಳು ಉತ್ತಮ ಉದ್ದೇಶವನ್ನು ಹೊಂದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.  ಇಂತಹ ಪರಿಕಲ್ಪನೆಗಳನ್ನು ಇಟ್ಟುಕೊಂಡೇ ಎಲ್ಲರೂ ರಾಜಕೀಯಕ್ಕೆ ಬರುತ್ತಾರೆ. ಆದರೆ ಯಾವಾಗ ತನ್ನಿಂದ ಈಗಿನ ಹದಗೆಟ್ಟ ರಾಜಕೀಯ ವಾತಾವರಣವನ್ನು ಬದಲಿಸಲು ಸಾಧ್ಯವಿಲ್ಲ ಎನ್ನುವುದು ತಿಳಿಯುತ್ತದೆಯೋ ಆಗ ಅದಕ್ಕೇ ಶರಣಾಗುತ್ತಾರೆ. ಇಲ್ಲವೇ ಅದರಲ್ಲೇ ಲೀನವಾಗಿಬಿಡುತ್ತ್ತಾರೆ. ಇದು ನಮ್ಮ ವ್ಯವಸ್ಥೆಯಲ್ಲಿ ಆಗಾಗ ಕಂಡುಬರುವ ದೃಶ್ಯ.
ಉಪೇಂದ್ರ ಹೇಳಿದ ಕೆಲವು ಪ್ರಮುಖ ಅಂಶಗಳನ್ನು ಗಮನಿಸಿ. ತಮ್ಮ ಸಂಘಟನೆ ಸಂಪೂರ್ಣ  ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಿಂತಿರುತ್ತದೆ.  ಹಣ ಮತ್ತು ಜಾತಿಯ ಹೊರತಾಗಿಯೂ ರಾಜಕೀಯ ಸಾಧ್ಯವಿದೆ ಎನ್ನುವುದನ್ನು ತೋರಿಸಿಕೊಡಬೇಕಿದೆ. ಪ್ರಜಾಪ್ರಭುತ್ವದಲ್ಲಿ ಜನರೇ ರಾಜರಾಗಿರುವಾಗ  ಬಹಿರಂಗ ಸಮಾವೇಶದ ಮೂಲಕವೇ ಎಲ್ಲರನ್ನೂ ಏಕೆ ಸೇರಿಸಬೇಕು,  ಜನರಿಗಾಗಿ ನಾವು ಏನನ್ನಾದರೂ ಮಾಡಬೇಕು. ಅನುಯಾಯಿಗಳು ಬೇಡ, ಕಾರ್ಯಕರ್ತರು ಬೇಕು.  ತಮಗೆ ನೀಡುವ ಗುರಿಯನ್ನು ಸಮರ್ಪಕವಾಗಿ ಮಾಡುವವರು ಬೇಕು. ಶಾಲೆಯಿಂದ ಹಿಡಿದು ನೌಕರಿ ಸೇರುವವರೆಗೆ ಪರಿಕ್ಷೆ ಎದುರಿಸುವ ಈ ಕಾಲದಲ್ಲಿ ಜನಪ್ರತಿನಿಧಿಯಾಗುವವರಿಗೆ ಪರೀಕ್ಷೆಯನ್ನೇಕೆ ಮಾಡಬಾರದು ಮುಂತಾದುವು.
ಇವೆಲ್ಲ ಕೇಳಲು ಬಲು ಚೆನ್ನ. ಆದರೆ ಅನುಷ್ಠಾನಕ್ಕೆ ತರುವುದು ಸುಲಭದ ಮಾತಲ್ಲ. ರಾಜಕೀಯ ಎನ್ನುವುದು ಬಣ್ಣದ ಮಾತುಗಳಿಂದ ಜನರನ್ನು ಸೆಳೆಯುವುದಲ್ಲ. ಅಥವಾ ಬಣ್ಣ ಹಚ್ಚಿಕೊಂಡು ತೆರೆಯ ಮೆಲೆ ಹತ್ತಾರು ಜನರನ್ನು  ಹೊಡೆದುರುಳಿಸಿ ಸೀಟಿ ಹೊಡೆಯಿಸಿಕೊಳ್ಳುವುದಲ್ಲ, ಸಿನಿಮಾ ಬಿಡುಗಡೆ ದಿನ ದೊಡ್ಡ ಕಟೌಟ್ ಹಾಕಿಸಿ  ಹಾಲೆರೆಸಿಕೊಂಡು ಪೂಜೆ ಮಾಡಿಸಿಕೊಳ್ಳುವಂತದ್ದಲ್ಲ. ಹೊಸದಾಗಿ ರಾಜಕೀಯಕ್ಕೆ ಬರುವವರಿಗೆ ಬಹುದೊಡ್ಡ ಕನಸುಗಳಿರುತ್ತವೆ. ನಿಜ, ಆದರೆ ಕಾಣುವ ಕನಸು ನನಸಾಗಲು ಯೋಗ್ಯತೆಯನ್ನು ಹೊಂದಿದೆಯೇ ಎನ್ನುವುದನ್ನೂ ಯೋಚಿಸಬೇಕು.
ಹಣವಿದೆ ಎಂದು ರಾಜಕೀಯ ಮಾಡಲಿಳಿದರೆ ಹಣವಿರುವವರೆಗೆ ಜನರು ಹಿಂದೆ-ಮುಂದೆ ಇರುತ್ತಾರೆ. ಅಥವಾ ರಾಜಕೀಯ ಹಣವಂತರಿಗೆ ಮಾತ್ರ ಎಂದಾಗಿದ್ದರೂ ಅಂಬಾನಿಯಂತ ಬಿಲಿಯಾಧೀಶರು ಎಂದೋ ಪ್ರಧಾನಿಯೋ ಇನ್ನೇನೇನೊ ಆಗಿಬಿಡುತ್ತಿದ್ದರು. ಆದರೆ ಇದು ಹಾಗಲ್ಲ, ತತ್ವ ಸಿದ್ಧಾಂತದ ಆಧಾರದ ಮೇಲೆ ವಿಚಾರಧಾರೆಗಳು  ರೂಪಿತವಾಗಿರಬೆಕು. ಜನರನ್ನು ನಂಬಿಉಸವುದು ಸುಲಭದ ಮಾತಲ್ಲ. ಹೊಸ ಪಕ್ಷ ಕಟ್ಟುವವರನ್ನು ಜನ ಅನುಮಾನದಿಂದಲೇ ಕಾಣುತ್ತಾರೆ. ಏಕೆಂದರೆ, ರಾಜಕೀಯ ಎನ್ನುವುದು ದಂಧೆಯಾಗಿದೆ. ಹಣ ಚೆಲ್ಲಿ ಹಣ ಪಡೆಯುವುದು ಎಂಬಂತಾಗಿದೆ.
 ರಾಷ್ಟ್ರೀಯ ಪಕ್ಷಗಳೇ ಚುನಾವಣೆಯಲ್ಲಿ ಎಷ್ಟೇ ಹಣ ಜಾತಿ,  ರಾಜಕೀಯ ಮಾಡಿದರೂ ಸೋಲುವುದನ್ನು ಕಾಣುತ್ತೇವೆ. ಹೀಗಿರುವಾಗ ಕೇವಲ ಬಣ್ಣದ ಮಾತಿನಿಂದ ಜನರನ್ನು ಮರುಳುಗೊಳಿಸಲು ಸಾಧ್ಯವಿಲ್ಲ ಎನ್ನುವುದು ಉಪೇಂದ್ರ ಅವರಿಗೆ ಗೊತ್ತಿಲ್ಲದೇ ಇಲ್ಲ. ಆದರೂ ಇದರಲ್ಲೇನೋ ವಿಶೇಷತೆ ಇದೆ ಎಂದೆನಿಸದಿರದು. ತಮ್ಮ ಹಲವು ಸಿನಿಮಾಗಳಲ್ಲಿ ರಾಜಕೀಯದ ವ್ಯಂಗ್ಯೋಕ್ತಿಯನ್ನು ಮತ್ತು ಕನಸಿನ ಸಾಮ್ರಾಜ್ಯವನ್ನು ತೋರಿಸುತ್ತಲೇ ಬಂದಿರುವ ಉಪೇಂದ್ರ ಅವರಿಗೆ ಬಹು ದಿನಗಳ ಹಿಂದೆಯೇ ರಾಜಕೀಯ ಸೇರುವ ಆಸಕ್ತಿ ಉದ್ಭವಿಸಿತ್ತು. ಬಿಜೆಪಿ ಸೇರುವರೆಂಬ ಚರ್ಚೆಯೂ ನಡೆದಿತ್ತು. ಆದರೆ ಇದಕ್ಕೆ ಅಷ್ಟೊಂದು ಮನ್ನಣೆ ಸಿಗಲೇ ಇಲ್ಲ. ರಾಜ್ಯಕ್ಕೆ ಒಂದೆಡೆ ಎಐಸಿಸಿ ಉಪಾಧ್ಯಕ್ಷ  ರಾಹುಲ್ ಗಾಂಧಿ, ಇನ್ನೊಂದೆಡೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಂದ ದಿನವನ್ನೇ ತಮ್ಮ ಭವಿಷ್ಯತ್ತಿನ ರಾಜಕೀಯ ಸಂಘಟನೆಯ ಬಗ್ಗೆ ಮಾಹಿತಿ ಹೊರಗೆಡವಿ ಹೊಸ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ.
 ವಿಶೇಷವೆಂದರೆ, ಉಪೇಂದ್ರ ಅವರ ಈ ಘೋಷಣೆಯಿಂದ ಯಾರಲ್ಲೂ ಸಂಚಲನವಾಗಿಲ್ಲ. ಎಲ್ಲ ಪಕ್ಷದ ಮುಖಂಡರು ರಾಜಕೀಯ ಶುದ್ಧೀಕರಣವಾಗಬೇಕೆನ್ನುವ ಉಪೇಂದ್ರ ಅವರ ಮಾತನ್ನು ಸ್ವಾಗತಿಸಿದ್ದಾರೆ.  ಅಂದರೆ ರಾಜಕೀಯ ವ್ಯವಸ್ಥೆ  ಸರಿ ಇಲ್ಲ ಎನ್ನುವುದನ್ನು ಒಪ್ಪಿಕೊಂಡಂತಾಗಿದೆ. ದುರಂತವೆಂದರೆ, ಇದನ್ನು ಶುದ್ಧೀಕರಿಸಲು ರಾಜಕೀಯ ಪಕ್ಷದವರು ಏಕೆ ಮುಂದಾಗುತ್ತಿಲ್ಲ. ಹೊಸಬರು ರಾಜಕೀಯಕ್ಕೆ ಬಂದರೆ ಅವರು ಬೆಳೆಯುವುದು ಕನಸಿನ ಮಾತು. ರಜದ್ದಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೇ ಪಕ್ಷಗಳು ಸದಾ ಕಾದಾಡುತ್ತವೆ. ಆದರೆ ಯಾರಲ್ಲೂ ಹೊಸತನದ ರಾಜಕೀಯ ಚಿಂತನೆ ಮೂಡಿಸಿಕೊಳ್ಳಬೇಕೆಂಬ ಇಚ್ಛಾಶಕ್ತಿಯೇ ಇಲ್ಲ. ತಮ್ಮದೇ ಆದ ಭ್ರಷ್ಟಾಚಾರ, ಹಗರಣಗಳ ಮಧ್ಯೆಯೂ ಮತ್ತೆ ಮತ್ತೆ ಆಡಳಿತಕ್ಕೆ ಬರುತ್ತ ರಾಜ್ಯವನ್ನಾಳುತ್ತಿವೆ. ಹಾಗಾದರೆ ಜನರಿಗೇಕೆ ಹೊಸತನ ತರಬೇಕೆಂಬ ಆಸೆಯಿಲ್ಲ ಎಂಬ ಪ್ರಶ್ನೆ ಉದ್ಭವವಾಗುತ್ತದೆ.
 ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಎಲ್ಲರೂ ಹೇಳುತ್ತೇವೆ. ಆದರೆ ಅದು ಮತ ಚಲಾಯಿಸುವವರೆಗೆ ಮಾತ್ರ. ಆನಂತರ ಆಯ್ಕೆಯಾದವರೇ ಪ್ರಭುಗಳಾಗಿ ಬಿಡುತ್ತಿದ್ದಾರೆ. ಇದು ಇಂದಿನ ಪ್ರಜಾಪ್ರಭುತ್ವದ ದುರಂತ. ಇದೇನೆ ಇರಲಿ, ಉಪೇಂದ್ರ ಅವರ ಮುಂದಿನ ಹೆಜ್ಜೆಯ ಮೇಲೆ ಅವರ ಪಕ್ಷದ ಅಥವಾ ಸಂಘಟನೆಯ ಭವಿಷ್ಯ ನಿಂತಿರುತ್ತದೆ. ಬಿಸಿರಕ್ತದ ಯುವಕರು ಮತ್ತು ಉಪ್ಪಿ ಅಭಿಮಾನಿಗಳ ದಂಡು ಇದನ್ನು ಬೆಂಬಲಿಸಬಹುದು. ಆದರೆ ಇಲ್ಲೂ ಒಂದು ಸಮಸ್ಯೆಯಿದೆ ಅದೆಂದರೆ, ಉಪ್ಪಿ ಹೇಳಿದಂತೆ ಪರೀಕ್ಷೆ ಬರೆದು ರಾಜಕೀಯ ಸೇರುವ ಪರಿಸ್ಥಿತಿಯನ್ನು ಯಾರೂ ಒಪ್ಪುವುದಿಲ್ಲ. ಉಪ್ಪಿ ಪರೀಕ್ಷೆ ಬರೆದು ಬನ್ನಿ ಎಂದರೆ ನಾವು ಬೇರೆ ಪಕ್ಷಕ್ಕೆ ಹೋಗುತ್ತೇವೆ. ಅಲ್ಲಿ ಸದಾ ತೆರೆದ ಬಾಗಿಲ ಸ್ವಾಗತವಿದೆ ಎಂದು ಹೇಳಬಹುದಲ್ಲವೆ?  ಇಂತಹ  ಪರಿಕಲ್ಪನೆ ಕೇಳಲಷ್ಟೇ ಚೆಂದ.
ಕರ್ನಾಟಕದಲ್ಲಿ ಸಿನಿಮಾ ನಟರು ರಾಜಕೀಯಕ್ಕಿಳಿದ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಕೆಲವರು ಸಚಿವರೂ, ಶಾಸಕರೂ, ಕೇಂದ್ರ ಸಚಿವರೂ  ಆದರು. ಆದರೆ ಮುಂದೇನಾದರು, ಯಾವ ಸುಧಾರಣೆ ತಂದರು. ಉತ್ತಮ ಹೆಸರುಗಳಿಸಿದರೇ ಎಂಬೆಲ್ಲ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಹೊಸ ಸಾಧನೆಗೆ ಕಾಲಿಡುವಾಗ ಸಾಧಿಸುವ ಕನಸನ್ನೇನೋ ಕಾಣುತ್ತೇವೆ. ಆದರೆ ಆನಂತರ ಹಣದ ಮದ ನಮ್ಮನ್ನು ದಾರಿತಪ್ಪಿಸಿ, ನಾವು ಬಂದ ಉದ್ದೇಶವನ್ನೆ ಮರೆಯಿಸಿಬಿಡುತ್ತದೆ. ಕೊನೆಗೆ ನಮ್ಮನ್ನೂ ಆ ಕ್ಷೇತ್ರದಿಂದ ಮತದಾರ ದೂರವಿಡುವಂತೆ ಮಾಡುತ್ತದೆ.  
ರಿಯಲ್ ಸ್ಟಾರ್ ಅವರ ಯೋಚನೆಗಳು ಇನ್ನು ರಿಯಲ್ ವರ್ಲ್ಡ್‌ಗೆ ಕಾಲಿಡಬೇಕಿದೆ. ಉತ್ತಮ ಮತ್ತು ನಿಜಕ್ಕೂ ರಾಜಕೀಯದಲ್ಲಿ ಆಗಲೇಬೇಕಾದ ಯೋಚನಾಲಹರಿಯನ್ನು ಹರಿಯಬಿಟ್ಟಿದ್ದಾರೆ. ಇದನ್ನು ಮತದಾರ ಬೆಂಬಲಿಸುತ್ತಾನೋ, ತಿರಸ್ಕರಿಸುತ್ತಾನೋ ಕಾದು ನೊಡೋಣ.
ಕೊನೆಯದಾಗಿ,  ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಪಕ್ಷ ಕಟ್ಟಿ ಯಶಸ್ಸು ಕಂಡವರು ದೇವರಾಜ ಅರಸು ಒಬ್ಬರೇ. ಅದೂ ಅವರೂ ಸಹ ಕೊನೆಗೆ ಒಂಟಿಯಾಗಿ ಇರುವಂತಾಯಿತು. ಬಂಗಾರಪ್ಪ, ಯಡಿಯೂರಪ್ಪ ಮೊದಲಾದವರು ತಮ್ಮ ಯತ್ನ ನಡೆಸಿ ಮತ್ತೆ ತವರಿಗೆ ಮರಳಿದ್ದಾರೆ. ಆದರೆ, ಅಂದಿನದಕ್ಕೂ ಇಂದಿನದಕ್ಕ್ಕೂ ಒಂದು ವ್ಯತ್ಯಾಸವಿದೆ. ಅದೆಂದರೆ, ಈವರೆಗೆ ಪಕ್ಷ ಕಟ್ಟಿದವರಲ್ಲಿ ಬಹುತೇಕರು ರಾಜಕೀಯ ಅನುಭವಿಗಳೇ ಆಗಿದ್ದರು. ಉಪ್ಪಿ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ಏಕ ವ್ಯಕ್ತಿಯಾಗಿ ಕಾರ್ಯಕರ್ತರೊಂದಿಗೆ ಹೊರಟಿದ್ದಾರೆ. ಸಾಧನೆ ಮಾಡಿದರೆ ಹೊಸ ಇತಿಹಾಸ ಬರೆದಂತಾಗುತ್ತದೆ. ಇಲ್ಲವಾದಲ್ಲಿ ಮತ್ತೆ ಇತಿಹಾಸ ಮರುಕಳಿಸಿದಂತಾಗುತ್ತದೆ.
.............................

Tuesday, 8 August 2017

’ಸ್ಮಾರ್ಟ್ ಸಿಟಿ’ಯಲ್ಲಿ ಗರಿಷ್ಠಮಟ್ಟದ  ’ಪಾರ್ಕಿಂಗ್ ಸಮಸ್ಯೆ 


  

 ಶಿವಮೊಗ್ಗ ನಗರದ ರಸ್ತೆಗಳ ಅಂಚಿನಲ್ಲಿ  ವಾಹನಗಳ ನಿಲುಗಡೆ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಸಮರ್ಪಕ ಟ್ರಾಫಿಕ್ ವ್ಯವಸ್ಥೆ ಹಾಗೂ ವಾಹನ ಮಾಲಕರೂ ಕಂಡಕಂಡಲ್ಲಿ  ನಿಲ್ಲಿಸುವುದರಿಂದ ಸಮಸ್ಯೆ ಒಂದೆಡೆ ಹೆಚುತ್ತಿದ್ದರೆ, ಇನ್ನೊಂದೆಡೆ ಒತ್ತುವರಿ ಮೂಲಕ ಬಹುಮಹಡಿ ಕಟ್ಟಡ ಕಟ್ಟುವವರೂ ತಮ್ಮ ಕಾಣಿಕೆ ನೀಡುತ್ತಿದ್ದಾರೆ. ಇದನ್ನು ನಿಗ್ರಹಿಸಬೇಕಾದ  ಪಾಲಿಕೆ ಮತ್ತು ಸ್ಬುಡಾ ಮೌನಿಯಾಗಿವೆ. ಪ್ರತಿಯೊಂದರಲ್ಲೂ ಪ್ರಭಾವಿಗಳೇ ಮೇಲುಗೈ ಸಾಧಿಸುವುದರಿಂದ, ಲಂಚಾವತಾರ ಮಿತಿಮೀರಿರುವುದರಿಂದ ಕಟ್ಟಡಗಳು ಹೇಗೆ ಬೇಕೋ ಹಾಗೆ ತಲೆಎತ್ತುತ್ತಿವೆ. ಸಾಮಾನ್ಯ ನಾಗರಿಕರು ಪ್ರಶ್ನಿಸುವ ಧ್ವನಿಯನ್ನು ಕಳೆದುಕೊಂಡಿದ್ದಾರೆ. ಕೆಲವು ಹೋರಾಟಗಾರರು ಅಲ್ಲೊಮ್ಮೆ, ಇಲ್ಲೊಮ್ಮೆ ಮನವಿ ಸಲ್ಲಿಸಿ, ಹೇಳಿಕೆ ನೀಡಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವರಾದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ.  

 ಸ್ಮಾರ್ಟ್ ಸಿಟಿಯಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ ಪಾರ್ಕಿಂಗ್ ಪ್ರಾಬ್ಲಂ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ, ವಿಸ್ತಾರವಾಗುತ್ತಿರುವ ನಗರ ವ್ಯಾಪ್ತಿ, ದಿನೆ ದಿನೇ ಹೆಚ್ಚುತ್ತಿರುವ ವಾಹನಗಳು, ಅವೈಜ್ಞಾನಿಕವಾಗಿ ನಿರ್ಮಾಣಗೊಳ್ಳುತ್ತಿರುವ ರಸ್ತೆಗಳು... ಇದರಿಂದ ವಾಹನಗಳ ನಿಲುಗಡೆ (ಪಾರ್ಕಿಂಗ್) ಗೆ ಸ್ಥಳಾವಕಾಶವೇ ಇಲ್ಲದಂತಹ ಪರಿಸ್ಥಿತಿ.
ಇದು ಪ್ರಸ್ತುತ ಶಿವಮೊಗ್ಗ ನಗರದಲ್ಲಿರುವ ದುಃಸ್ಥಿತಿ. ನಗರದಲ್ಲಿ ಸುಗಮ ವಾಹನ ಸಂಚಾರ ದಿನೆ ದಿನೇ ದುಸ್ತರವಾಗಿ ಪರಿಣಮಿಸುತ್ತಿದೆ. ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಸೂಕ್ತ ಸ್ಥಳವಾಕಾಶದ ಕೊರತೆಯಿಂದ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವಂತಾಗಿದೆ. ಇದರಿಂದ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದರ ಜೊತೆಗೆ, ಸಾಕಷ್ಟು ಕಿರಿಕಿರಿಗೂ ಕಾರಣವಾಗುತ್ತಿದೆ.
 ಕೆಲವು ವರ್ಷಗಳಿಂದ ನಗರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆಗಳು ಮೇಲ್ದರ್ಜೆಗೇರುತ್ತಿವೆ. ಆದರೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ, ಯಾವುದೇ ವೈಜ್ಞಾನಿಕ ಕ್ರಮ ಪಾಲನೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಯಾವುದೇ ಮುಂದಾಲೋಚನೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದ ನಗರದ ಮುಖ್ಯ ರಸ್ತೆಗಳು ಮಾತ್ರವಲ್ಲ, ಅವುಗಳಿಗೆ ಹೊಂದಿಕೊಂಡಂತಿರುವ ಸಮಾನಾಂತರ ರಸ್ತೆಗಳಲ್ಲಿ ಸಮರ್ಪಕವಾದ ವಾಹನಗಳ ನಿಲುಗಡೆ ವ್ಯವಸ್ಥೆಯೇ ಇಲ್ಲದಂತಾಗಿದೆ.
 ವಾಹನ ಮಾಲಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವಂತಾಗಿದೆ. ಕೆಲವೊಮ್ಮೆ ಪಾರ್ಕಿಂಗ್ ವಿಷಯದಲ್ಲಿಯೇ ವಾಹನ ಮಾಲೀಕರ ನಡುವೆಯೇ ಗಲಾಟೆಗಳಾಗುತ್ತಿವೆ. ಮತ್ತೆ ಕೆಲವು ರಸ್ತೆಗಳಲ್ಲಿ ವ್ಯಾಪಾರ-ವ್ಯವಹಾರಕ್ಕೆ ಅಡ್ಡಿಯಾಗುತ್ತದೆ ಎಂದು ಆರೋಪಿಸಿ, ತಮ್ಮ ಅಂಗಡಿ-ಮುಂಗ್ಗಟ್ಟುಗಳ ಮುಂಭಾಗ ವಾಹನಗಳ ನಿಲುಗಡೆಗೆ ಕೆಲವು ವರ್ತಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಕೆಲವೊಮ್ಮೆ ವರ್ತಕರು - ವಾಹನ ಮಾಲೀಕರ ನಡುವೆ ವಾಗ್ವಾದ, ಮಾತಿನ ಚಕಮಕಿಯೂ ಸರ್ವೇಸಮಾನ್ಯ ಎಂಬಂತಾಗಿದೆ.
ಅವೈಜ್ಞಾನಿಕ ಬೆಳವಣಿಗೆ:
 ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆಯಲ್ಲಿ ಅನುಮೋದಿತವಾಗುವ ನಕ್ಷೆಗೆ ಅನುಗುಣವಾಗಿ ನಗರದಲ್ಲಿ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಕಟ್ಟಡ ನಕ್ಷೆಯನ್ನು ಅನುಮೋದಿಸಿಕೊಳ್ಳುವ ವೇಳೆ ಕೆಳ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ತೋರಿಸುತ್ತವೆ. ಆದರೆ ತದನಂತರ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಗರದ ಹೃದಯ ಭಾಗಗಳಲ್ಲಿ ವಾಣಿಜ್ಯ, ವಸತಿ ಪ್ರದೇಶಗಳ ನಡುವೆ ಅಂತರವೇ ಕಡಿಮೆಯಾಗುತ್ತಿದೆ. ವಸತಿ ಪ್ರದೇಶಗಳಲ್ಲಿಯೂ ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗುತ್ತಿವೆ. ಇದರಿಂದಲೂ ನಗರದ ಸಣ್ಣಪುಟ್ಟ ರಸ್ತೆಗಳಲ್ಲಿಯೂ ಸಂಚಾರ ದಟ್ಟಣೆ ವಿಪರೀತ ಮಟ್ಟಕ್ಕೆ ತಲುಪುವಂತಾಗಿದೆ.
ನಗರದಲ್ಲಿ ನಿರ್ಮಾಣವಾಗುವ ಬಹುಮಹಡಿ ವಾಣಿಜ್ಯ ಸಂಕೀರ್ಣಗಳು ಕನಿಷ್ಠ ನೀತಿ-ನಿಯಮಗಳನ್ನು ಪಾಲಿಸುತ್ತಿಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರುತ್ತಿವೆ. ಬಹುತೇಕ ಬೃಹತ್ ವಾಣಿಜ್ಯ ಸಂಕೀರ್ಣ ಕಟ್ಟಡಗಳ ನಿರ್ಮಾಣದಲ್ಲಿ ಸೆಟ್‌ಬ್ಯಾಕ್ ನಿಯಮಗಳ ಉಲ್ಲಂಘನೆ ಮಾಡಲಾಗುತ್ತಿದೆ. ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಾಕಾಶವನ್ನೇ ಮೀಸಲಿಡುತ್ತಿಲ್ಲವಾಗಿದೆ.
ಅವೈಜ್ಞಾನಿಕ ನಿರ್ಮಾಣ:
ಏಳೆಂಟು ವರ್ಷಗಳ ಅವಧಿಯಲ್ಲಿ ಶಿವಮೊಗ್ಗದ ರಸ್ತೆಗಳ ಅಭಿವೃದ್ಧಿಗೆ ನೂರಾರು ಕೋಟಿ ರೂ. ಮೊತ್ತ ವಿನಿಯೋಗಿಸಲಾಗಿದೆ. ಆದರೆ ಒಂದೇ ಒಂದು ರಸ್ತೆ ಯೋಜನಾಬದ್ದವಾಗಿ ನಿರ್ಮಾಣವಾಗಿಲ್ಲ. ಯಾವೊಂದು ರಸ್ತೆಯೂ ವೈಜ್ಞಾನಿಕವಾಗಿಲ್ಲ. ಇದಕ್ಕೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆ ಸಾಕ್ಷಿಯಾಗಿದೆ. ರಸ್ತೆಗಳ ವಿಸ್ತರಣೆ ವೇಳೆ ಸಂಬಂಧಪಟ್ಟ ಅಧಿಕಾರಿಗಳು ವಾಹನ ನಿಲುಗಡೆಗೆ ಯಾವುದೇ ಕ್ರಮಬದ್ದ ಯೋಜನೆ ರೂಪಿಸುತ್ತಿಲ್ಲ. ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬೇಕಾಬಿಟ್ಟಿಯಾಗಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ.
  ಜೊತೆಗೆ ಪರ್ಯಾಯ ಮಾರ್ಗವನ್ನೂ ಕಂಡುಹಿಡಿಯುತ್ತಿಲ್ಲ. ಇನ್ನಾದರೂ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಸ್ಥಳೀಯ ಜನಪ್ರತಿನಿಧಿಗಳು, ಯೋಜನೆಗಳ ನೀತಿನಿರೂಪಕರು ಎಚ್ಚೆತ್ತುಕೊಳ್ಳಬೇಕಾಗಿದೆ. ನಗರದ ಭವಿಷ್ಯದ ಬೆಳವಣಿಗೆಯ ದೃಷ್ಟಿಯನ್ನಿಟ್ಟುಕೊಂಡು ಯೋಜನೆ ರೂಪಿಸಬೇಕಾಗಿದೆ. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವುದು ನಿಜ.


 ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ನಗರದ ಕೆಲವು ಬಹು ಮಹಡಿ ವಾಣಿಜ್ಯ ಸಂಕೀರ್ಣಗಳು ವಾಹನಗಳ ನಿಲುಗಡೆಗೆ ಮೀಸಲಿಟ್ಟ ಜಾಗವನ್ನು ರಾಜಾರೋಷವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿವೆ. ಇಂತಹ ವಾಣಿಜ್ಯ ಮಳಿಗೆಗಳನ್ನು ಪ್ರಶ್ನಿಸುವ ಗೋಜಿಗೆ ಆಡಳಿತ ವ್ಯವಸ್ಥೆ ಹೋಗದಿರುವುದು, ಜಾಣ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಇನ್ನಾದರೂ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು. ಒತ್ತಡ, ಪ್ರಭಾವಕ್ಕೆ ಮಣಿಯದೆ ಕಾರ್ಯನಿರ್ವಹಣೆ ಮಾಡಬೇಕಿದೆ.
- ಕಲ್ಲೂರು ಮೇಘರಾಜ, ಹೋರಾಟಗಾರ
------------------------------

Monday, 7 August 2017

ಸಾವಿನ ರಹದಾರಿ ಸಾಗರ ರಸ್ತೆ


 ಆಗಬೇಕಾದದ್ದು ಏನು?
..................................
* ಖಾಸಗಿ ಬಸ್‌ಗಳಿಗೆ ವೇಗದ ಮೇಲೆ ನಿಯಂತ್ರಣ ಹೇರಬೇಕು.
*  ಅಶಿಸ್ತಿನಿಂದ, ಮಿತಿಮೀರಿದ ವೇಗದಲ್ಲಿ ಚಾಲನೆ ಮಾಡುವ ಚಾಲಕರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. 
* ಚಾಲನಾ ಪರವಾನಿಗೆ ಇಲ್ಲದವರು ಮತ್ತು ಸಮವಸ್ತ್ರ ಇಲ್ಲದ ಚಾಲಕ, ಕಂಡಕ್ಟರ್ ಬಸ್‌ನಲ್ಲಿ ಕೆಲಸದಲ್ಲಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಬೇಕು. 
*  ವಿಶೇಷವಾಗಿ ಸಾಗರ ರಸ್ತೆಯಲ್ಲಿ ಪೊಲೀಸ್ ಹಾಗೂ ಆರ್‌ಟಿಓದವರು ನಿಯಮಿತವಾಗಿ ಸಂಚರಿಸಿ, ನಿಯಮ ಉಲ್ಲಂಘಿಸುವ ಚಾಲಕರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು. 
* ಒಮ್ಮೆ ಎಚ್ಚರಿಕೆ ಕೊಟ್ಟ ನಂತರವೂ ಕೆಟ್ಟ ಚಾಳಿಯನ್ನೇ ಮುಂದುವರೆಸಿದರೆ ಮಾಲಕರನ್ನು ಕರೆದು ತಿಳಿಹೇಳಬೇಕು. ಆಗಾಗ ಮಾಲಕರ ಜೊತೆ ಸಭೆ ನಡೆಸಿ ಮಾಹಿತಿ ಪಡೆಯುತ್ತಿರಬೇಕು. 
*  ರಸ್ತೆಯ ಇಕ್ಕೆಲಗಳಲ್ಲಿ ವೇಗ ಮಿತಿಯ ಇನ್ನಷ್ಟು ಎಚ್ಚರಿಕೆಯ ಫಲಕಗಳನ್ನು ಹಾಕಬೇಕು.
* ಸಾರ್ವಜನಿಕರು ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. 
* ವಿದ್ಯಾರ್ಥಿಗಳು ಕೇವಲ ಬಸ್‌ಪಾಸ್‌ಗಾಗಿ ಮಾತ್ರ ಹೋರಾಟ ಮಾಡದೆ ತಮ್ಮ ಗ್ರಾಮದ ಮೂಲಕ ಸಂಚರಿಸುವ ಬಸ್‌ನಲ್ಲಿ ಪ್ರಯಾಣಿಸುವ ಮನೋಭಾವ ಬೆಳೆಸಿಕೊಳ್ಳಬೇಕು. 
* ಸರ್ಕಾರಿ ಬಸ್ ನಿಲ್ದಾಣದ ಅಧಿಕಾರಿಗಳು ನಿದ್ದೆ ಬಿಟ್ಟು ಎದ್ದೇಳಬೇಕು. ಮಾರ್ಗ ಸಂಚಾರ ಮಾಡಿ ಆಗುತ್ತಿರುವ ತೊಂದರೆ ಗಮನಿಸಿ ಪರಿಹರಿಸುವ ಕ್ರಮ ಜರುಗಿಸಬೇಕು. 



 ಸರ್ಕಾರಿ ಬಸ್ ಬೇಡ, ಶಾಲೆ ಬೇಡ, ಆಸ್ಪತ್ರೆ ಬೇಡ, ಆದರೆ ನೌಕರಿ ಮಾತ್ರ ಸರ್ಕಾರಿಯದ್ದಾಗಿರಬೇಕು.
ಇದು ಸಾರ್ವಜನಿಕರ ಮನೋಭಾವ. ಇದರಿಂದಾಗಿ ಸರ್ಕಾರಿ ಸ್ವಾಮ್ಯದಲ್ಲಿರುವ ಶಾಲೆ ಮುಚ್ಚುತ್ತಿದೆ, ಬಸ್ ನಿಲುಗಡೆ ಆಗುತ್ತಿದೆ, ಆಸ್ಪತ್ರೆಗಳಿಗೆ ಬರುವವರೇ ಕಡಿಮೆಯಾಗುತ್ತಿದ್ದಾರೆ. ಆದರೆ ಉತ್ತಮ ಮತ್ತು ಕಡಿಮೆ ದರದಲ್ಲಿ ವಿದ್ಯಾಭ್ಯಾಸ, ಸಂಚಾರ, ಚಿಕಿತ್ಸೆ ದೊರೆತರೂ ಅದೂ ಬೇಡ. ಈ  ಮಾತನ್ನು ಹೇಳಲೇಕಾದ ಸಂದರ್ಭ ಎದುರಾಗಿದೆ.
ಶಿವಮೊಗ್ಗದಿಂದ ಸಾಗರಕ್ಕೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸದಂತಹ ಭೀಕರ ಅನುಭವ ಪ್ರಯಾಣಿಕರಿಗಾಗುತ್ತಿದೆ. ಬೆಂಗಳೂರು- ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206  ಸಂಭವಿಸುತ್ತಿರುವ ರಸ್ತೆ ಅಪಘಾತದ ಅವಲೋಕನ ಮಾಡಿದರೆ ಈ ರಸ್ತೆಯಲ್ಲಿ ಸಂಚರಿಸುವುದೇ ಬೇಡ ಎನ್ನುವಂತಾಗುತ್ತಿದೆ.  ಸಾಗರ- ಶಿವಮೊಗ್ಗ ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗಳ ರೌದ್ರನರ್ತನ ಹೆಚ್ಚುತ್ತಿದೆ. ಇದರಿಂದ ಹೆಚ್ಚು ಹೆಚ್ಚು ಸಾವು ಘಟಿಸುತ್ತಿದೆ. ಯಮದೂತನ ರೀತಿಯ ಬಸ್‌ಗಳು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಲೇ ಈ ರಸ್ತೆಯನ್ನು ತಮ್ಮ ಆಡುಂಬೊಲವನ್ನಾಗಿ ಮಾಡಿಕೊಡಂತಿದೆ.
ಶನಿವಾರ ಮಧ್ಯಾಹ್ನ ಸಾಗರ ತಾಲೂಕಿನ ಆನಂದಪುರ ಸಮೀಪದ  ಆಚಾಪುರ ಗ್ರಾಮದಲ್ಲಿ ನಡೆದ ಅಪಘಾದಲ್ಲಿ ಏಳು ಜನರು ಸಾವಿಗೀಡಾಗಿದ್ದಾರೆ. ಎಂತಹವರನ್ನೂ ಬೆಚ್ಚಿಬೀಳಿಸುವ ಘಟನೆ ಇದು. ಖಾಸಗಿ ಬಸ್‌ಗಳ ಮಿತಿಮೀರಿದ ವೇಗ ಮತ್ತು ಬೇಜವಾಬ್ದಾರಿತನದ ಚಾಲನೆಯಿಂದಾಗಿ ಈ ಹೆದ್ದಾರಿಯಲ್ಲಿ ಸಂಚರಿಸುವವರು ಜೀವವನ್ನು ಕೈಯಲ್ಲಿ ಹಿಡಿದುಕೊಳ್ಳುವಂತೆ ಮಾಡಿವೆ. ಶಿವಮೊಗ್ಗ ಮೂಲದ ಖಾಸಗಿ ಬಸ್ ಕಂಪನಿಯೊಂದರ ಬಸ್‌ಗಳೇ ತಿಂಗಳಿಗೆ ಸರಾಸರಿ 3ರಿಂದ 4 ಅಪಘಾತ ಎಸಗಿ ಹತ್ತಾರು ಜನರನ್ನು ಬಲಿಹಾಕುತ್ತಿವೆ. ಆದರೂ ಅಧಿಕಾರಿಗಳು ಕಂಪನಿ ವಿರುದ್ಧ ಕ್ರಮ ಜರುಗಿಸಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ಅಪಘಾತ ಮತ್ತು ಸಾವಿನ ಪ್ರಮಾಣ ಏರುಗತಿಯಲ್ಲೇ ಇದೆ.
ಖಾಸಗಿ ಬಸ್‌ಗಳಿಗೆ ಕಡಿವಾಣ ಹಾಕದಿರುವ ಸಂಬಂಧಿತ ಇಲಾಖೆಯ ವರ್ತನೆ ಈಗ ಸಿಡಿದೇಳುವ ಮಟ್ಟಕ್ಕೆ ಬಂದಿದೆ. ಅಮಾಯಕರು ಎಲ್ಲಿಂದಲೋ ಯಾತ್ರೆ, ಪ್ರವಾಸ, ಮದುವೆ ಮೊದಲಾದ ಕಾರ್ಯಕ್ಕೆ ಬಂದು ಬಲಿಯಾಗುತ್ತಿರುವ ಬಗ್ಗೆ ಗ್ರ್ರಾಮಸ್ಥರು ಕೆಂಡಕಾರುತ್ತಿದ್ದಾರೆ. ಇವೆಲ್ಲಕ್ಕೂ ಮುನ್ನ ಉದ್ಭವಿಸುವ ಪ್ರಶ್ನೆ ಎಂದರೆ ಒಂದೇ ಕಂಪನಿಯ ಬಸ್ ಪದೇ ಪದೇ ಅಪಘಾತ ಎಸಗುವುದೇಕೆ ಎನ್ನುವುದು. ಚಾಲಕನ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿ, ಅನನುಭವ, ಇನ್ನೊಂದು ಬಸ್‌ಗೆ ಪ್ರಯಾಣಿಕರು ಸಿಗಬಾರದೆಂದು ಮಿತಿಮೀರಿದ ವೇಗದಲ್ಲಿ ಚಾಲನೆ ಮಾಡುವುದು ಇವೆಲ್ಲ ಕಾರಣವಾಗಿವೆ ಎನ್ನುವುದು ಈ ರಸ್ತೆಯಲ್ಲಿ ಸಂಚರಿಸುವಾಗ ಕಂಡುಬರುತ್ತದೆ. ಹೀಗಿದ್ದರೂ ಅದೇ ಬಸ್‌ನ್ನು ಕಾದು ಕುಳಿತು ಏರುವ ಪ್ರಯಾಣಿಕರು ಸಾಕಷ್ಟಿದ್ದಾರೆ.
ಸಂಬಂಧಿತ ಕಂಪನಿ ಸತ್ತ ಪ್ರಯಾಣಿಕರಿಗೆ ಪೈಸೆಯಷ್ಟೂ ಪರಿಹಾರವನ್ನೂ ಕೊಡುವುದಿಲ್ಲ. ಖಾಸಗಿಯವರ ಇತಿಹಾಸವೇ ಇದು. ನಿಗದಿತ ವೇಳೆಗಿಂತ ಸ್ವಲ್ಪ ತಡವಾಗಿ ಹೊರಡುತ್ತಾರೆ. ಆನಂತರ ಹೆದ್ದಾರಿಯಲ್ಲಿ ಯಮವೇಗದಲ್ಲಿ ಸಾಗಿ ಹಲವರ ಜೀವ ತೆಗೆಯುತ್ತಾರೆ. ಇಷ್ಟೆಲ್ಲ ಆದರೂ ಸಂಬಂಧಿತ ಬಸ್ ಮಾಲಕರ ಸಭೆ ಕರೆದು ಕ್ರಮ ಕೈಗೊಳ್ಳದೆ ಅಧಿಕಾರಿಗಳು ಮೌನವಹಿಸಿರುವುದು ಹಲವು ಪ್ರಶ್ನೆಯನ್ನುಂಟು ಮಾಡುತ್ತಿದೆ.
ಕೆಲವು ಬಸ್ ಚಾಲಕರು ಗ್ರಾಮಗಳ ಭಾಗಗಳಲ್ಲಿಯೂ ಅತಿವೇಗವಾಗಿಯೇ ಬಸ್ ಚಾಲನೆ ಮಾಡುತ್ತಾರೆ. ವೇಗ ನಿಯಂತ್ರಣಗೊಳಿಸಲು ಮುಂದಾಗುವುದಿಲ್ಲ. ಕಿವಿಗಡಚಕ್ಕುವ ರೀತಿಯಲ್ಲಿ ಹಾರನ್ ಮಾಡುತ್ತಾರೆ. ಖಾಸಗಿ ಬಸ್‌ಗಳು ಆಗಮಿಸುವ ವೇಳೆ ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟಬೇಕಾದಂತಹ, ವಾಹನ ಚಾಲನೆ ಮಾಡಬೇಕಾದ ಸ್ಥಿತಿಯಿದೆ. ಆ ಮಟ್ಟಿಗೆ ಅಜಾಗರೂಕವಾಗಿ ಬಸ್ ಚಲಾಯಿಸುತ್ತಾರೆ. ಇವರನ್ನು ಹೇಳುವವರು ಕೇಳುವವರ‌್ಯಾರೂ  ಇಲ್ಲ ಎಂದು ದೂರುವವವರೇ ಮಾರನೆಯ ದಿನ ಅದೇ ಬಸ್‌ಗೆ ತೆರಳುತ್ತಾರೆ.
ಕೆಲವು ಖಾಸಗಿ ಬಸ್ ಚಾಲಕರು ಚಾಲನೆಯ ವೇಳೆಯಲ್ಲಿಯೇ ಮೊಬೈಲ್ ಪೋನ್ ಬಳಕೆ ಮಾಡುವ ಆರೋಪವೂ ಇದೆ. ಎದುರು ಅಥವಾ ಅಕ್ಕಪಕ್ಕದ ಆಸನದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಅಥವಾ ಯುವತಿಯರನ್ನು ಕೂಡ್ರಿಸಿಕೊಂಡು ಅವರೊಂದಿಗೆ ಚೆಲ್ಲಾಟವಾಡುವವರೂ ಇದ್ದಾರೆ. ಟಿಕೆಟ್ ಕೊಡುವವರಂತೂ ಹರಿಹಾಯುವುದನ್ನೇ ರೂಢಿಸಿಕೊಂಡಿದ್ದಾರೆ. ಸೌಜನ್ಯ, ತಾಳ್ಮೆ, ಗೌರವ ಕೊಡುವುದು ಇವರಲ್ಲಿಲ್ಲ. ಆದರೂ ನಮ್ಮವರಿಗೆ ಖಾಸಗಿ ಬಸ್ ಅಂದರೆ ಸರ್ಕಾರಿ ಕೆಲಸದಷ್ಟೇ ಜೀವ!.
ಈ ಮಾರ್ಗದಲ್ಲಿ ಸರ್ಕಾರಿ ಬಸ್  ಸಂಚಾರ ಆರಂಭವಾಗಿ ಬಹಳೇ ತಿಂಗಳು ಕಳೆದಿದೆ. ಸಾರ್ವಜನಿಕರು ಇದಕ್ಕೆ ಮಹತ್ವವವನ್ನೇ ಕೊಡುವುದಿಲ್ಲ. ಸುರಕ್ಷಿತ ಪ್ರಯಾಣವನ್ನು, ವಿಮೆಯನ್ನು ಇದರಲ್ಲಿ ಪಡೆಯಬಹುದಾದರೂ, ತಮಗೆ ಬೇಕಾದಲ್ಲಿ, ತಮ್ಮ ಮನೆ ಮುಂದೆ ನಿಲ್ಲಿಸುವುದಿಲ್ಲ. ಆಪ್ತರಿಗೆ ಕಡಿಮೆ ದರ ಅಥವಾ ಪುಕ್ಕಟೆಯಾಗಿ ಕರದೊಯ್ಯುವುದಿಲ್ಲ ಎಂಬ ಚಿಂತನೆ ಅವರದ್ದು.  ಇದನ್ನೇ ಬಂಡವಾಳ ಮಾಡಿಕೊಂಡ ಹಲವರು ತಮ್ಮ ದಿನನಿತ್ಯದ ಕೆಲಸ, ವ್ಯಾಪಾರ, ವಹಿವಾಟುಗಳಿಗೆ ಬರುವವರು ಅದೇ ಖಾಸಗಿ ಬಸ್‌ಗೆ ಆಸನ ಭರ್ತಿಯಾಗಿದ್ದರೂ ನಿಂತುಕೊಂಡಾದರೂ ಬರುತ್ತಾರೆ.
 ಖಾಸಗಿಯವರಂತೂ ಸರ್ಕಾರಿ ಬಸ್ ಕಂಡರೆ ಅದು ಸ್ಟಾಪ್‌ನಲ್ಲಿ ನಿಲ್ಲಲೂ ಬಿಡುವುದಿಲ್ಲ. ಸಾಗರದ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ತುಂಬಿಸಿಕೊಳ್ಳಲೂ ಅವಕಾಶ ಕೊಡುವುದಿಲ್ಲ. ಇದೇಕೆ ನಮ್ಮ ಅಧಿಕಾರಿಗಳಿಗೆ ಗೊತ್ತಾಗುವುದಿಲ್ಲ. ಇಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳೂ ಜಡ್ಡುಗಟ್ಟಿದ ವಾತಾವರದಿಂದ ಎಚ್ಚರಗೊಳ್ಳುವ ಅವಶ್ಯಕತೆ ಇದೆ. ಪೈಪೋಟಿಯನ್ನು ಎದುರಿಸಲು ಸನ್ನದ್ಧವಾಗಬೇಕಿದೆ. ಸರ್ಕಾರಿ ಕೆಲಸ ಎಂದು ಮೈಮರೆತರೆ ನಷ್ಟ ಜನರಿಗೆ ಮತ್ತು ಇಲಾಖೆಗೆ. ಇನ್ನೊಂದು ಡಿಪೊ ಬಸ್ ಬಂದರೆ ಅದಕ್ಕೆ ಸ್ವಲ್ಪ ಹೊತ್ತು ಕಾಯಲೂ ಅವಕಾಶ ಕೊಡದ ಸಾಗರ ಬಸ್‌ನಿಲ್ದಾಣದ ಅಧಿಕಾರಿಗಳಿಗೇಕೆ ಇದು ಅರ್ಥವಾಗುವುದಿಲ್ಲ? ತಮ್ಮದೇ ಡಿಪೊ ಬಸ್‌ಗಳಿಗೆ ಆಗುತ್ತಿರುವ ತೊಂದರೆಯನ್ನು ಇವರಿಗೇಕೆ ಪರಿಹರಿಸಲು ಆಗುವುದಿಲ್ಲ?
 ಸರ್ಕಾರಿ ಬಸ್‌ನಲ್ಲಿ ಅತಿ ಕಡಿಮೆ ದರವಿದೆ (43 ರೂ.) ಬೆಂಗಳೂರು, ಮೈಸೂರು, ಧರ್ಮಸ್ಥಳ ಇನ್ನಿತರೆಡೆ ಸಾಗುವ ಸುಮಾರು 25ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ಬಸ್‌ಗಳಿಗೆ  60 ಮತ್ತು 65 ರೂ ದರವಿದೆ. ಈ ಬಸ್ ಸಹ ಒಂದೂವರೆ ಗಂಟೆೆಗೆ ಸಾಗರದಿಂದ ಶಿವಮೊಗ್ಗಕ್ಕೆ ಅಂದರೆ ಖಾಸಗಿ ಬಸ್‌ನಷ್ಟೇ ವೇಳೆಯಲ್ಲಿ ಬರುತ್ತವೆ. ಆದರೆ ನಮ್ಮ ಜನರಿಗೆ ಸರ್ಕಾರಿ ಬಸ್ ಬೇಡ. ಹಲವು ಗ್ರಾಮಸ್ಥರು ತಮ್ಮ ಊರಿನ ಮೂಲಕ ಸರ್ಕಾರಿ ಬಸ್ ಬಿಡಿ ಎಂದು ಆಗ್ರಹಿಸುತ್ತಾರೆ. ಆದರೆ ಬಸ್ ಸಂಚಾರ ಆರಂಭಿಸಿದ ನಂತರ ಅದರಲ್ಲಿ  ಪ್ರಯಾಣಿಸುವುದೇ ಇಲ್ಲ. ಇದು ನಮ್ಮ ಜನರ ನೀತಿ.

ಬಾಕ್ಸ್

ಆಗಬೇಕಾದದ್ದು ಏನು?
..................................
* ಖಾಸಗಿ ಬಸ್‌ಗಳಿಗೆ ವೇಗದ ಮೇಲೆ ನಿಯಂತ್ರಣ ಹೇರಬೇಕು.
*  ಅಶಿಸ್ತಿನಿಂದ, ಮಿತಿಮೀರಿದ ವೇಗದಲ್ಲಿ ಚಾಲನೆ ಮಾಡುವ ಚಾಲಕರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು.
* ಚಾಲನಾ ಪರವಾನಿಗೆ ಇಲ್ಲದವರು ಮತ್ತು ಸಮವಸ್ತ್ರ ಇಲ್ಲದ ಚಾಲಕ, ಕಂಡಕ್ಟರ್ ಬಸ್‌ನಲ್ಲಿ ಕೆಲಸದಲ್ಲಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಬೇಕು.
*  ವಿಶೇಷವಾಗಿ ಸಾಗರ ರಸ್ತೆಯಲ್ಲಿ ಪೊಲೀಸ್ ಹಾಗೂ ಆರ್‌ಟಿಓದವರು ನಿಯಮಿತವಾಗಿ ಸಂಚರಿಸಿ, ನಿಯಮ ಉಲ್ಲಂಘಿಸುವ ಚಾಲಕರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು.
* ಒಮ್ಮೆ ಎಚ್ಚರಿಕೆ ಕೊಟ್ಟ ನಂತರವೂ ಕೆಟ್ಟ ಚಾಳಿಯನ್ನೇ ಮುಂದುವರೆಸಿದರೆ ಮಾಲಕರನ್ನು ಕರೆದು ತಿಳಿಹೇಳಬೇಕು. ಆಗಾಗ ಮಾಲಕರ ಜೊತೆ ಸಭೆ ನಡೆಸಿ ಮಾಹಿತಿ ಪಡೆಯುತ್ತಿರಬೇಕು.
*  ರಸ್ತೆಯ ಇಕ್ಕೆಲಗಳಲ್ಲಿ ವೇಗ ಮಿತಿಯ ಇನ್ನಷ್ಟು ಎಚ್ಚರಿಕೆಯ ಫಲಕಗಳನ್ನು ಹಾಕಬೇಕು.
* ಸಾರ್ವಜನಿಕರು ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.
* ವಿದ್ಯಾರ್ಥಿಗಳು ಕೇವಲ ಬಸ್‌ಪಾಸ್‌ಗಾಗಿ ಮಾತ್ರ ಹೋರಾಟ ಮಾಡದೆ ತಮ್ಮ ಗ್ರಾಮದ ಮೂಲಕ ಸಂಚರಿಸುವ ಬಸ್‌ನಲ್ಲಿ ಪ್ರಯಾಣಿಸುವ ಮನೋಭಾವ ಬೆಳೆಸಿಕೊಳ್ಳಬೇಕು.
* ಸರ್ಕಾರಿ ಬಸ್ ನಿಲ್ದಾಣದ ಅಧಿಕಾರಿಗಳು ನಿದ್ದೆ ಬಿಟ್ಟು ಎದ್ದೇಳಬೇಕು. ಮಾರ್ಗ ಸಂಚಾರ ಮಾಡಿ ಆಗುತ್ತಿರುವ ತೊಂದರೆ ಗಮನಿಸಿ ಪರಿಹರಿಸುವ ಕ್ರಮ ಜರುಗಿಸಬೇಕು.
---------------------------------

Friday, 4 August 2017

’ಸ್ಮಾರ್ಟ್ ಸಿಟಿ’ಯಲ್ಲಿ ಗರಿಷ್ಠಮಟ್ಟದ  ’ಪಾರ್ಕಿಂಗ್ ಸಮಸ್ಯೆ 


 
 ಶಿವಮೊಗ್ಗ ನಗರದ ರಸ್ತೆಗಳ ಅಂಚಿನಲ್ಲಿ  ವಾಹನಗಳ ನಿಲುಗಡೆ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಸಮರ್ಪಕ ಟ್ರಾಫಿಕ್ ವ್ಯವಸ್ಥೆ ಹಾಗೂ ವಾಹನ ಮಾಲಕರೂ ಕಂಡಕಂಡಲ್ಲಿ  ನಿಲ್ಲಿಸುವುದರಿಂದ ಸಮಸ್ಯೆ ಒಂದೆಡೆ ಹೆಚುತ್ತಿದ್ದರೆ, ಇನ್ನೊಂದೆಡೆ ಒತ್ತುವರಿ ಮೂಲಕ ಬಹುಮಹಡಿ ಕಟ್ಟಡ ಕಟ್ಟುವವರೂ ತಮ್ಮ ಕಾಣಿಕೆ ನೀಡುತ್ತಿದ್ದಾರೆ. ಇದನ್ನು ನಿಗ್ರಹಿಸಬೇಕಾದ  ಪಾಲಿಕೆ ಮತ್ತು ಸ್ಬುಡಾ ಮೌನಿಯಾಗಿವೆ. ಪ್ರತಿಯೊಂದರಲ್ಲೂ ಪ್ರಭಾವಿಗಳೇ ಮೇಲುಗೈ ಸಾಧಿಸುವುದರಿಂದ, ಲಂಚಾವತಾರ ಮಿತಿಮೀರಿರುವುದರಿಂದ ಕಟ್ಟಡಗಳು ಹೇಗೆ ಬೇಕೋ ಹಾಗೆ ತಲೆಎತ್ತುತ್ತಿವೆ. ಸಾಮಾನ್ಯ ನಾಗರಿಕರು ಪ್ರಶ್ನಿಸುವ ಧ್ವನಿಯನ್ನು ಕಳೆದುಕೊಂಡಿದ್ದಾರೆ. ಕೆಲವು ಹೋರಾಟಗಾರರು ಅಲ್ಲೊಮ್ಮೆ, ಇಲ್ಲೊಮ್ಮೆ ಮನವಿ ಸಲ್ಲಿಸಿ, ಹೇಳಿಕೆ ನೀಡಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವರಾದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ.  

* ದತ್ತಾತ್ರೇಯ ಹೆಗಡೆ


 ಸ್ಮಾರ್ಟ್ ಸಿಟಿಯಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ ಪಾರ್ಕಿಂಗ್ ಪ್ರಾಬ್ಲಂ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ, ವಿಸ್ತಾರವಾಗುತ್ತಿರುವ ನಗರ ವ್ಯಾಪ್ತಿ, ದಿನೆ ದಿನೇ ಹೆಚ್ಚುತ್ತಿರುವ ವಾಹನಗಳು, ಅವೈಜ್ಞಾನಿಕವಾಗಿ ನಿರ್ಮಾಣಗೊಳ್ಳುತ್ತಿರುವ ರಸ್ತೆಗಳು... ಇದರಿಂದ ವಾಹನಗಳ ನಿಲುಗಡೆ (ಪಾರ್ಕಿಂಗ್) ಗೆ ಸ್ಥಳಾವಕಾಶವೇ ಇಲ್ಲದಂತಹ ಪರಿಸ್ಥಿತಿ.
ಇದು ಪ್ರಸ್ತುತ ಶಿವಮೊಗ್ಗ ನಗರದಲ್ಲಿರುವ ದುಃಸ್ಥಿತಿ. ನಗರದಲ್ಲಿ ಸುಗಮ ವಾಹನ ಸಂಚಾರ ದಿನೆ ದಿನೇ ದುಸ್ತರವಾಗಿ ಪರಿಣಮಿಸುತ್ತಿದೆ. ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಸೂಕ್ತ ಸ್ಥಳವಾಕಾಶದ ಕೊರತೆಯಿಂದ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವಂತಾಗಿದೆ. ಇದರಿಂದ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದರ ಜೊತೆಗೆ, ಸಾಕಷ್ಟು ಕಿರಿಕಿರಿಗೂ ಕಾರಣವಾಗುತ್ತಿದೆ.
 ಕೆಲವು ವರ್ಷಗಳಿಂದ ನಗರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆಗಳು ಮೇಲ್ದರ್ಜೆಗೇರುತ್ತಿವೆ. ಆದರೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ, ಯಾವುದೇ ವೈಜ್ಞಾನಿಕ ಕ್ರಮ ಪಾಲನೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಯಾವುದೇ ಮುಂದಾಲೋಚನೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದ ನಗರದ ಮುಖ್ಯ ರಸ್ತೆಗಳು ಮಾತ್ರವಲ್ಲ, ಅವುಗಳಿಗೆ ಹೊಂದಿಕೊಂಡಂತಿರುವ ಸಮಾನಾಂತರ ರಸ್ತೆಗಳಲ್ಲಿ ಸಮರ್ಪಕವಾದ ವಾಹನಗಳ ನಿಲುಗಡೆ ವ್ಯವಸ್ಥೆಯೇ ಇಲ್ಲದಂತಾಗಿದೆ.
 ವಾಹನ ಮಾಲಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವಂತಾಗಿದೆ. ಕೆಲವೊಮ್ಮೆ ಪಾರ್ಕಿಂಗ್ ವಿಷಯದಲ್ಲಿಯೇ ವಾಹನ ಮಾಲೀಕರ ನಡುವೆಯೇ ಗಲಾಟೆಗಳಾಗುತ್ತಿವೆ. ಮತ್ತೆ ಕೆಲವು ರಸ್ತೆಗಳಲ್ಲಿ ವ್ಯಾಪಾರ-ವ್ಯವಹಾರಕ್ಕೆ ಅಡ್ಡಿಯಾಗುತ್ತದೆ ಎಂದು ಆರೋಪಿಸಿ, ತಮ್ಮ ಅಂಗಡಿ-ಮುಂಗ್ಗಟ್ಟುಗಳ ಮುಂಭಾಗ ವಾಹನಗಳ ನಿಲುಗಡೆಗೆ ಕೆಲವು ವರ್ತಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಕೆಲವೊಮ್ಮೆ ವರ್ತಕರು - ವಾಹನ ಮಾಲೀಕರ ನಡುವೆ ವಾಗ್ವಾದ, ಮಾತಿನ ಚಕಮಕಿಯೂ ಸರ್ವೇಸಮಾನ್ಯ ಎಂಬಂತಾಗಿದೆ.
ಅವೈಜ್ಞಾನಿಕ ಬೆಳವಣಿಗೆ:
 ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆಯಲ್ಲಿ ಅನುಮೋದಿತವಾಗುವ ನಕ್ಷೆಗೆ ಅನುಗುಣವಾಗಿ ನಗರದಲ್ಲಿ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಕಟ್ಟಡ ನಕ್ಷೆಯನ್ನು ಅನುಮೋದಿಸಿಕೊಳ್ಳುವ ವೇಳೆ ಕೆಳ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ತೋರಿಸುತ್ತವೆ. ಆದರೆ ತದನಂತರ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಗರದ ಹೃದಯ ಭಾಗಗಳಲ್ಲಿ ವಾಣಿಜ್ಯ, ವಸತಿ ಪ್ರದೇಶಗಳ ನಡುವೆ ಅಂತರವೇ ಕಡಿಮೆಯಾಗುತ್ತಿದೆ. ವಸತಿ ಪ್ರದೇಶಗಳಲ್ಲಿಯೂ ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗುತ್ತಿವೆ. ಇದರಿಂದಲೂ ನಗರದ ಸಣ್ಣಪುಟ್ಟ ರಸ್ತೆಗಳಲ್ಲಿಯೂ ಸಂಚಾರ ದಟ್ಟಣೆ ವಿಪರೀತ ಮಟ್ಟಕ್ಕೆ ತಲುಪುವಂತಾಗಿದೆ.
ನಗರದಲ್ಲಿ ನಿರ್ಮಾಣವಾಗುವ ಬಹುಮಹಡಿ ವಾಣಿಜ್ಯ ಸಂಕೀರ್ಣಗಳು ಕನಿಷ್ಠ ನೀತಿ-ನಿಯಮಗಳನ್ನು ಪಾಲಿಸುತ್ತಿಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರುತ್ತಿವೆ. ಬಹುತೇಕ ಬೃಹತ್ ವಾಣಿಜ್ಯ ಸಂಕೀರ್ಣ ಕಟ್ಟಡಗಳ ನಿರ್ಮಾಣದಲ್ಲಿ ಸೆಟ್‌ಬ್ಯಾಕ್ ನಿಯಮಗಳ ಉಲ್ಲಂಘನೆ ಮಾಡಲಾಗುತ್ತಿದೆ. ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಾಕಾಶವನ್ನೇ ಮೀಸಲಿಡುತ್ತಿಲ್ಲವಾಗಿದೆ.
ಅವೈಜ್ಞಾನಿಕ ನಿರ್ಮಾಣ:
ಏಳೆಂಟು ವರ್ಷಗಳ ಅವಧಿಯಲ್ಲಿ ಶಿವಮೊಗ್ಗದ ರಸ್ತೆಗಳ ಅಭಿವೃದ್ಧಿಗೆ ನೂರಾರು ಕೋಟಿ ರೂ. ಮೊತ್ತ ವಿನಿಯೋಗಿಸಲಾಗಿದೆ. ಆದರೆ ಒಂದೇ ಒಂದು ರಸ್ತೆ ಯೋಜನಾಬದ್ದವಾಗಿ ನಿರ್ಮಾಣವಾಗಿಲ್ಲ. ಯಾವೊಂದು ರಸ್ತೆಯೂ ವೈಜ್ಞಾನಿಕವಾಗಿಲ್ಲ. ಇದಕ್ಕೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆ ಸಾಕ್ಷಿಯಾಗಿದೆ. ರಸ್ತೆಗಳ ವಿಸ್ತರಣೆ ವೇಳೆ ಸಂಬಂಧಪಟ್ಟ ಅಧಿಕಾರಿಗಳು ವಾಹನ ನಿಲುಗಡೆಗೆ ಯಾವುದೇ ಕ್ರಮಬದ್ದ ಯೋಜನೆ ರೂಪಿಸುತ್ತಿಲ್ಲ. ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬೇಕಾಬಿಟ್ಟಿಯಾಗಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ.
  ಜೊತೆಗೆ ಪರ್ಯಾಯ ಮಾರ್ಗವನ್ನೂ ಕಂಡುಹಿಡಿಯುತ್ತಿಲ್ಲ. ಇನ್ನಾದರೂ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಸ್ಥಳೀಯ ಜನಪ್ರತಿನಿಧಿಗಳು, ಯೋಜನೆಗಳ ನೀತಿನಿರೂಪಕರು ಎಚ್ಚೆತ್ತುಕೊಳ್ಳಬೇಕಾಗಿದೆ. ನಗರದ ಭವಿಷ್ಯದ ಬೆಳವಣಿಗೆಯ ದೃಷ್ಟಿಯನ್ನಿಟ್ಟುಕೊಂಡು ಯೋಜನೆ ರೂಪಿಸಬೇಕಾಗಿದೆ. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವುದು ನಿಜ.


 ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ನಗರದ ಕೆಲವು ಬಹು ಮಹಡಿ ವಾಣಿಜ್ಯ ಸಂಕೀರ್ಣಗಳು ವಾಹನಗಳ ನಿಲುಗಡೆಗೆ ಮೀಸಲಿಟ್ಟ ಜಾಗವನ್ನು ರಾಜಾರೋಷವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿವೆ. ಇಂತಹ ವಾಣಿಜ್ಯ ಮಳಿಗೆಗಳನ್ನು ಪ್ರಶ್ನಿಸುವ ಗೋಜಿಗೆ ಆಡಳಿತ ವ್ಯವಸ್ಥೆ ಹೋಗದಿರುವುದು, ಜಾಣ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಇನ್ನಾದರೂ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು. ಒತ್ತಡ, ಪ್ರಭಾವಕ್ಕೆ ಮಣಿಯದೆ ಕಾರ್ಯನಿರ್ವಹಣೆ ಮಾಡಬೇಕಿದೆ.
- ಕಲ್ಲೂರು ಮೇಘರಾಜ, ಹೋರಾಟಗಾರ
------------------------------

Thursday, 3 August 2017

ನಕಲಿ  ಕಲಾವಿದರು ಪಟ್ಟಿ ಸೇರದಿರಲಿ 


ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಯೋಜನೆ ಇರಲಿ, ಅದು ವಿಫಲವಾಗುವುದು ಒಂದೋ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಲ್ಲವೇ ನಕಲಿ ಫಲಾನುಭವಿಗಳಿಂದ. 
ಈಗ ಕೇಂದ್ರ ಸರ್ಕಾರವು ದೇಶದಾದ್ಯಂತದ ಕಲಾವಿದರ ಪಟ್ಟಿ ಮಾಡುವ ಯೋಜನೆಗೆ ಚಾಲನೆ ನೀಡಿದೆ. ಶಿವಮೊಗ್ಗ ಮೊದಲ ಹಂತದಲ್ಲೇ ಈ ಯೋಜನೆಗೆ ಆಯ್ಕೆಯಾಗಿ ಕೆಲಸ ಮುಗಿಸಿದೆ. ಈ ಪಟ್ಟಿಯಲ್ಲಿ ಕೆಲವು ನಕಲಿ ಕಲಾವಿದರು ನುಸುಳಿಕೊಂಡಿದ್ದಾರೆಂಬ ಆರೋಪ ಕೇಳಿಬರತೊಡಗಿದೆ. ಕಸಾಪದಲ್ಲಿ ಮುಂಚೂಣಿಯಲ್ಲಿದ್ದ  ಕೆಲವರು ಈ ಪಟ್ಟಿ ತಯಾರಿಗೆ ನಿಯುಕ್ತರಾಗಿದ್ದರಿಂದ  ದಾಖಲೆಯ ಪ್ರಮಾಣದ ಕಲಾವಿದರು ಶಿವಮೊಗ್ಗದಲ್ಲಿ ಕಂಡುಬಂದರೂ ಅಚ್ಚರಿಪಡಬೇಕಿಲ್ಲ. ದಾಖಲೆ ನಿರ್ಮಿಸಲು ಹೋಗಿ ನೈಜ ಕಲಾವಿದರಿಗೆ ಅನ್ಯಾಯವಾಗದಂತೆ ಇವರು ಪಟ್ಟಿ ರಚಿಸುವ ಕೆಲಸ ಮಾಡಿದ್ದರೆ ಸಾಕಿತ್ತು. 


ಕೇಂದ್ರ ಸಂಸ್ಕೃತಿ ಸಚಿವಾಲಯ ಒಂದು ಮಹತ್ವದ ಯೋಜನೆ ರೂಪಿಸಿದೆ. ಅದೆಂದರೆ, ದೇಶದಲ್ಲಿರುವ ಎಲ್ಲ ಕಲಾವಿದರ ಹೆಸರು, ವಿಳಾಸ, ಮತ್ತು ಅವರ ಕಲಾಕ್ಷೇತ್ರ  ಇವುಗಳನ್ನು ಪಟ್ಟಿ ಮಾಡಿ, ದೇಶದ ಸಾಂಸ್ಕೃತಿಕ ನಕ್ಷೆಯನ್ನು (ಕಲ್ಚರಲ್ ಮ್ಯಾಪಿಂಗ್ ಆಫ್ ಇಂಡಿಯಾ) ರೂಪಿಸಬೇಕೆನ್ನುವುದೇ ಈ ಯೋಜನೆ.
ಎಲ್ಲ ಪ್ರಕಾರದ ಜಾನಪದ ಕಲೆಗಳು, ಚಿತ್ರಕಲೆ, ಶಿಲ್ಪಕಲೆ,  ಸಾಹಿತ್ಯ, ನಾಟಕ, ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ವಾದನ, ಸುಗಮ ಸಂಗೀತ, ಹರಿಕಥೆ, ಗಮಕ, ಜಾದೂ, ರಂಗೋಲಿ, ಯಕ್ಷಗಾನ, ಬಯಲಾಟ, ಬೊಂಬೆಯಾಟ, ಛಾಯಾಗ್ರಹಣ, ಕರಕುಶಲ ಕಲೆ, ಬುಡಕಟ್ಟು ಕಲೆ- ಹೀಗೆ ಎಲ್ಲ ವಿಭಾಗಗಳನ್ನು ಒಳಗೊಳ್ಳುವ ಯೋಜನೆ ಇದಾಗಿದೆ. ದೇಶದ  7 ಜಿಲ್ಲೆಗಳಲ್ಲಿ ಇದನ್ನು ಪ್ರಪ್ರಥವಾಗಿ ಆರಂಭಿಸಲಾಗಿದೆ. ದಕ್ಷಿಣ ಭಾರತದಲ್ಲಿ ಶಿವಮೊಗ್ಗ ಜಿಲ್ಲೆ ಮಾತ್ರ ಆಯ್ಕೆಯಾಗಿದೆ. ಜಿಲ್ಲೆಯ ಎಲ್ಲ 7 ತಾಲೂಕಿನಲ್ಲಿ ವಿವಿಧ ಪ್ರಕಾರದ ಕಲಾವಿದರನ್ನು ನೊಂದಾಯಿಸಲು ಕಾರ್ಯಕರ್ತರನ್ನು ನೇಮಿಸಿ ಅವರಿಂದ ಪಟ್ಟಿ ಪಡೆಯಲಾಗಿದೆ. ಕಲಾವಿದರ ಹೆಸರು, ತಾಲೂಕು, ಸಂಪರ್ಕದ ದೂರವಾಣಿ, ಹೆಸರು ಮಾಡಿದ ಕಲಾಕ್ಷೇತ್ರ ಇತ್ಯಾದಿಗಳ ವಿವರನ್ನು ಅವರಿಂದಲೇ ಭರ್ತಿ ಮಾಡಿಸಿಕೊಳ್ಳಲಾಗಿದೆ.  ಕಾರ್ಯಕರ್ತರೂ ಹೆಚ್ಚು ಶ್ರಮ ವಹಿಸಿ ಈ ಪಟ್ಟಿ ತಯಾರಿಸಿದ್ದಾರೆ. ವಿಶೇಷವಾಗಿ, ಗ್ರಾಮಾಂತರ ಪ್ರದೇಶದಲ್ಲಿರುವ ಕಲಾವಿದರನ್ನು ಸಂಪರ್ಕಿಸಿ ಅವರಿಗೆ ಇದರ ಬಗ್ಗೆ ಮಾಹಿತಿ ಕೊಟ್ಟು ಅವರನ್ನು ನೊಂದಾಯಿಸುವ ಕೆಲಸ ಮಾಡಲಾಗಿದೆ.
ಆದರೆ ಈಗ ಉದ್ಭವಿಸಿರುವ ಶಂಕೆ ಏನೆಂದರೆ, ಈ ಯೋಜನೆಯ ದುರ್ಲಾಭ ಪಡೆಯಲು ನಕಲಿ ಕಲಾವಿದರು ಸೇರ್ಪಡೆಯಾಗಿರಬಹುದು ಎನ್ನುವುದು. ಅನೇಕ ಕಲಾವಿದರೇ ಈ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ತಾಲೂಕಿಗೂ ಕಲಾವಿದರ ನೊಂದಣಿ ಮತ್ತು ಮಾಹಿತಿಗಾಗಿ ಕಾರ್ಯಕರ್ತರನ್ನು ನೇಮಿಸಲಾಗಿತ್ತು. ಕೆಲವು ತಾಲೂಕಿಗೆ ಮೂರು, ನಾಲ್ಕು ಕಾರ್ಯಕರ್ತರಿದ್ದರು. ಸರ್ಕಾರದ ಸಹಾಯಧನ, ಅನುದಾನ, ಕಾರ್ಯಕ್ರಮ ನೀಡಲು ಅವಕಾಶ ಸಿಗುತ್ತದೆ ಎಂಬ ದೃಷ್ಟಿಯಲ್ಲಿ ಸೇರ್ಪಡೆಯಾಗಿರಬಹುದೆಂಬ ಅನುಮಾನ ಕಾಡತೊಡಗಿದೆ. ಏಕೆಂದರೆ ಸರ್ಕಾರದ ಬಹುತೇಕ ಯೋಜನೆಗಳನ್ನು ಹಳ್ಳ ಹಿಡಿಸುತ್ತಿರುವವರು ಮತ್ತು ದುರ್ಲಾಭ ಪಡೆಯುತ್ತಿರುವವರು ನಕಲಿಗಳು.
 ಎಲ್ಲೋ ಒಂದೆರಡು ಕಡೆ ಹಾಡಿರುವುದು, ನಾಟಕದಲ್ಲಿ ಅಭಿನಯಿಸಿರುವುದು, ಚಿತ್ರ ಬಿಡಿಸಿರುವುದು ಮೊದಲಾದವುಗಳ ಫೋಟೋ ತೋರಿಸಿ ತಾವೂ ಸಹ ಕಲಾವಿದರೆಂದು ಬಿಂಬಿಸಿ, ಹೆಸರು ಸೇರಿಸಿಕೊಂಡಿರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಇಂತಹವರೇನಾದರೂ ಸೇರ್ಪಡೆಯಾದಲ್ಲಿ ನೈಜ ಕಲಾವಿದರಿಗೆ ಸಿಗಬೇಕಾದ ಸೌಕರ್ಯಗಳೆಲ್ಲವನ್ನು ಇವರು ಪಡೆದುಕೊಳ್ಳಲು ಪ್ರಭಾವ ಬೀರಬಹುದು. ಇದರಿಂದ ಈ ಲಿಸ್ಟ್ ಮಾಡುವ ಯೋಜನೆಗೆ ಕಪ್ಪು ಚುಕ್ಕೆ ಅಂಟಿದಂತಾಗುತ್ತದೆ.
ಆದ್ದರಿಂದ ಕಾರ್ಯಕರ್ತರು ಯಾವ ವಶೀಲಿ, ಪ್ರಭಾವ, ಪ್ರಲೋಭನೆಗೂ ಒಳಗಾಗದೆ ಪಟ್ಟಿ ತಯಾರಿಸುವ ಬಹುದೊಡ್ಡ ಜವಾಬ್ದಾರಿ ಇತ್ತು. ಜಾತಿ, ಧರ್ಮ, ಪಕ್ಷ, ಸಂಬಂಧ ಮೊದಲಾದವೇ ಹೆಚ್ಚು ಕೆಲಸವನ್ನು ಇಲ್ಲಿ ಮಾಡುತ್ತವೆ. ಯಾವ ಕ್ಷೇತ್ರವನ್ನೂ ಬಿಡದ  ಸ್ವಜನಪಕ್ಷಪಾತ, ಜಾತೀಯತೆ ಮತ್ತು ರಾಜಕೀಯ ಇಲ್ಲಿಯೂ ತೂರಿಕೊಳ್ಳದೆ ನ್ಯಾಯಯುತವಾಗಿ ಕಲಾವಿದರಿಗೆ ಸರ್ಕಾರದಿಂದ ದಕ್ಕಬೇಕಾದ ಸವಲತ್ತುಗಳು ಅಥವಾ ಇನ್ನಿತರೆ ನೆರವು ಸಿಗುವಂತಾದರೆ ಮಾತ್ರ ಈ ಯೋಜನೆ ಯಶಸ್ವಿಯಾಗಲು ಸಾಧ್ಯವಿದೆ. ಇಲ್ಲವಾದಲ್ಲಿ ಇಲ್ಲಿಯವರೆಗೆ ಜಾರಿಯಾದ ಬಹುತೇಕ ಯೋಜನೆಗಳಂತೆಯೇ ಇದೂ ಸಹ ಹತ್ತರ ಸಂಗಡ ಹನ್ನೊಂದು ಎಂಬಂತಾಗುವುದರಲ್ಲಿ ಅನುಮಾನವಿಲ್ಲ.
ಸರ್ಕಾರಿ ಸವಲತ್ತನ್ನು ಪಡೆಯಲು ಫಲಾನುಭವಿಗಳು ಅರ್ಹರು ಕಡಿಮೆ ಇದ್ದರೂ ಹೆಚ್ಚು ಜನರು ಆಸಕ್ತರಿರುತ್ತಾರೆ.  ಅದರಲ್ಲೂ ಪುಕ್ಕಟೆ ದೊರೆಯುವುದಾದರೆ ತನಗೂ ಒಂದಿರಲಿ, ತನ್ನ ಅಪ್ಪನಿಗೂ ಒಂದಿರಲಿ ಎನ್ನುವ ಮನೋಭಾವ ತೋರುವವರೇ ಅಧಿಕ. ಶಿವಮೊಗ್ಗದ ಕಲಾವಿದರ ಪಟ್ಟಿಯ (ಒಂದು ಬಣದ್ದು) ಜಾನಪದ ವಿಭಾಗದ ಮಾಹಿತಿ ದೊರೆತಿದ್ದು, ಇನ್ನೊಂದು ಬಣದ ಪಟ್ಟಿ ಲಭ್ಯವಾಗಬೇಕಿದೆ. ಎರಡೂ ಬಣದ ಪ್ರತಿಷ್ಠೆಯಲ್ಲಿ ಕಲಾವಿದರ ಸಂಖ್ಯೆ ಹೆಚ್ಚುವುದು ನಿಶ್ಚಿತ. ಕೆಲವರು ಅನಾಯಾಸವಾಗಿ ಸ್ಥಾನ ಪಡೆಯುವಂತಾದರೂ ಆಶ್ಚರ್ಯವೇನಿಲ್ಲ.
ಆದರೆ ಈ ನಕಲಿ ಕಲಾವಿದರ ಬಗ್ಗೆ ಸಾಂಸ್ಕೃತಿಕ ನಕ್ಷೆ ನಿರೂಪಣಾ ರಾಷ್ಟ್ರೀಯ ಮಿಷನ್‌ನ ರಾಜ್ಯ ಸದಸ್ಯ ಬಿ. ವಿ. ರಾಜಾರಾಮ ಹೇಳುವುದೇನೆಂದರೆ, ಕಾರ್ಯಕರ್ತರಿಗೆ ಸ್ಥಳೀಯ ಕಲಾವಿದರ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಹಾಗಾಗಿಯೇ ಪ್ರತಿ ತಾಲೂಕಿಗೆ ಆಯಾಯ ತಾಲೂಕಿನವರನ್ನೇ ನೇಮಿಸಲಾಗಿದೆ. ಇಲ್ಲಿ ನಕಲಿಗಳು ಕಾಣಿಸಿಕೊಳ್ಳುವ ಸಾಧ್ಯತೆಯೇ ಇಲ್ಲ ಎನ್ನುತ್ತಾರೆ.
 ಏನೇ ಇದ್ದರೂ, ಪಟ್ಟಿ ಬಿಡುಗಡೆಯಾದ ನಂತರವೇ ಅಸಲಿ, ನಕಲಿಗಳ ಮಾಹಿತಿ ದೊರೆಯಲು ಸಾಧ್ಯ. ಕಲಾವಿದರ ಪಟ್ಟಿ ಮಾಡಿದ ಕಾರ್ಯಕರ್ತರು ಕೈಚಳಕ ತೋರಿದ್ದಾರೆಯೇ ಇಲ್ಲವೇ ಎನ್ನುವುದೂ ಸಹ ಆನಂತರವೇ ಗೊತ್ತಾಗಬೇಕಿದೆ. ಸರ್ಕಾರದ ಇಂತಹ ಯೋಜನೆ ಯಶಸ್ವಿಯಾಗುವುದೇ ಅದು ಅರ್ಹ ಫಲಾನುಭವಿಗಳಿಗೆ ತಲುಪಿದಾಗ. ಈ ನಿಟ್ಟಿನಲ್ಲಿ ಕಲಾವಿದರ ಆಯ್ಕೆ ಪಾರದರ್ಶಕವಾಗಿ ನಡೆದಿದೆ ಎಂದು  ಸದ್ಯ ಹೇಳಿಕೊಳ್ಳಬಹುದು. ಒಮ್ಮೆ ಪಟ್ಟಿಮಾಡಿದ ನಂತರ ನಕಲಿಗಳಿದ್ದರೆ, ಅವರನ್ನು ತೆಗೆದುಹಾಕುವುದು ಅಷ್ಟು ಸುಲಭದ ಕೆಲಸವಲ್ಲ. ಪಟ್ಟಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲ್ಪಡುವುದರಿಂದ ರಚನೆಯ ವೇಳೆಯೇ ಅಥವಾ ಜಿಲ್ಲಾ ಮಟ್ಟದಲ್ಲಿ ಪರಿಷ್ಕರಣೆ ಮಾಡುವಾಗಲೇ ವಿಚಕ್ಷಣೆ ಮಾಡುವುದು ಅಗತ್ಯವಾಗಿತ್ತು.
ಜಿಲ್ಲೆಯಲ್ಲಿ  ಕೇವಲ  ಜನಪದ ಕಲಾವಿದರ ನೋಂದಣಿಯೇ 1640ರಷ್ಟಾಗಿದೆ. ಶಿವಮೊಗ್ಗದಿಂದ 150 ಕ್ಕೂ ಹೆಚ್ಚು, ಭದ್ರಾವತಿಯಿಂದ 160, ಶಿಕಾರಿಪುರದಿಂದ  380 ಕ್ಕೂ ಹೆಚು,  ಸಾಗರದಿಂದ 200 ಕ್ಕೂ ಹೆಚ್ಚು, ಹೊಸನಗರ, ತೀರ್ಥಹಳ್ಳಿ ಮತ್ತು ಸೊರಬದಿಂದ ತಲಾ  250 ಕ್ಕೂ ಹೆಚ್ಚು  ಕಲಾವಿದರನ್ನು ನೋಂದಾಯಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇನ್ನುಳಿದ ಕಲಾವಿದರನ್ನು ಸೇರಿಸಿದರೆ ಸುಮಾರು 5 ಸಾವಿರದ ಗಡಿ ದಾಟಬಹುದೇನೊ.  ಜಿಲ್ಲೆಯಲ್ಲಿ ಜನಪದ ಕಲಾವಿದರು ಹೆಚ್ಚು ಪ್ರಮಾಣದಲ್ಲಿದ್ದಾರೆನ್ನುವುದು ಒಪ್ಪತಕ್ಕದ್ದಾದರೂ ಇಷ್ಟೊಂದು ಪ್ರಮಾಣದಲ್ಲಿದ್ದಾರೆಂದರೆ ಆಶ್ಚರ್ಯವಾಗುತ್ತದೆ. ಇಲ್ಲಿ ಕಲಾವಿದರನ್ನು ಆಯ್ಕೆ ಮಾಡಲು ಗುರಿ ಕೊಟ್ಟಂತೆ ಕಾಣುತ್ತಿದೆ. ಅಥವಾ ಮೇಲಾಟದ ಮೂಲಕ ನೊಂದಾಯಿಸಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಕಲಾವಿದರ ಆಯ್ಕೆಗೆ ಮಾನದಂಡ ವಿಶೇಷವಾಗಿ ಹೇಳಿಕೊಳ್ಳುವಂತಹದ್ದು ಇಲ್ಲದ ಕಾರಣ ಮೇಲೆ ಹೇಳಿದಂತೆ ಒಮ್ಮೆ ಆ ಕ್ಷೇತ್ರದಲ್ಲಿ ಕಾಣಿಸಿಕೊಂಡವರೆಲ್ಲ ಕಲಾವಿದರಾಗಿ ನುಸುಳಿರಬಹುದು. ಇದೇನೇ ಇರಲಿ, ಪಟ್ಟಿ ತಯಾರಿಗೆ ನಿಯುಕ್ತರಾದವರು ಬಹಳ ಶ್ರಮಪಟ್ಟು, ನಿಷ್ಠೆಯಿಂದ ಮಾಡಿದ ‘‘ಹೆಚ್ಚು’’ ಕೆಲಸವನ್ನು ಮೆಚ್ಚಲೇಬೇಕು!
............................................

Thursday, 27 July 2017




ಮೌನತಪಸ್ವಿ ಕೂಡಲಿ ಜಗನ್ನಾಥ ಶಾಸ್ತ್ರಿ  



ಮಲೆನಾಡಿನ ಜ್ಞಾನದ ಖನಿ, ಧಾರ್ಮಿಕ, ಸಾಹಿತ್ಯಿಕ, ಅಧ್ಯಾತ್ಮ, ಕಲಾ ಮಾರ್ಗದರ್ಶಕರಾಗಿದ್ದ ಹಿರಿಯ ಚೇತನ ಕೂಡಲಿ ಜಗನ್ನಾಥ ಶಾಸ್ತ್ರಿಗಳು ನಿನ್ನೆ ಪರಮಪದ ಸೇರಿದ್ದಾರೆ. ಸ್ನೇಹಜೀವಿಯಾಗಿದ್ದ ಈ ಮಹಾನ್ ಹಿರಿಯ ಚೇತನಕ್ಕೆ  ನುಡಿನಮನ


ಶಿವಮೊಗ್ಗ: ನೋಡಲು ಸಣಕಲು ಹಾಗೂ ಎತ್ತರದ ದೇಹ. ಆದರೆ ಅವರ ಮನಸು ಮಾತ್ರ ತುಂಬಿದ ಮನೆಯಂತಿತ್ತು. ಯಾರನ್ನೂ ನೋಯಿಸದ, ತಮ್ಮನ್ನು ಕಾಣಲು ಬಂದವರೊಂದಿಗೆ ವಿಚಾರ ವಿನಿಮಯ ಮಾಡುತ್ತಿದ್ದ ಅವರು ಸ್ಫೂರ್ತಿಯ ಸೆಲೆಯಾಗಿದ್ದ ಚೇತನ. ಅಂತಹ ಮಹಾನ್ ಚೇತನವೇ ಕೂಡಲಿ ಜಗನ್ನಾಥ ಶಾಸ್ತ್ರಿಗಳು.
ಅಧ್ಯಾತ್ಮ, ಸಾಹಿತ್ಯ, ಕಲೆ ಮಾರ್ಗದರ್ಶನ ಹಾಗೂ ತಮ್ಮ ಚಿಂತನೆಯ ಮೂಲಕ ಸಾಕಷ್ಟು ಧರ್ಮಕಾರ್ಯಗಳನ್ನು ಮಾಡುತ್ತ, ಜನಮನದಲ್ಲಿ ಹೊಸ ವಿಚಾರಗಳನ್ನು ಬರೆವಣಿಗೆ ಮೂಲಕ ಬಿತ್ತುತ್ತಾ ಅಚ್ಚಳಿಯದೆ ನಿಂತ ಸಾಧಕರಲ್ಲಿ ಶಾಸ್ತ್ರಿಯವರು ಒಬ್ಬರು.
ತುರಂಗ ಭಾರತ, ಕವಿ ಪರಮದೇವ ಕೃತಿಯ ಬಗ್ಗೆ ಸಾಹಿತ್ಯ ಮತ್ತು ಧಾರ್ಮಿಕ ವಲಯದಲ್ಲಿ ಕೇಳದವರಿಲ್ಲ. ಕೇವಲ ಕೃತಿಯೊಂದೇ ಕೆಲವರಿಗೆ ಹೆಸರನ್ನು ತಂದು ಕೊಡುತ್ತದೆ. ಇನ್ನೂ ಕೆಲವರಿಗೆ ಅವರ ಕೃತಿಯ ಜೊತೆ ಸಾಧನೆಯೂ ಗರಿಮೆಗೆ, ಜನಮನ್ನಣೆಗೆ ಕಾರಣವಾಗುತ್ತದೆ. ಇಂತಹ ಮನ್ನಣೆ ಪಡೆದವರಲ್ಲಿ ಕೂಡಲಿ ಜಗನ್ನಾಥ ಶಾಸ್ತ್ರಿಗಳು ಪ್ರಮುಖರು.
ಶಾಸ್ತ್ರಿಯವರು 89ರ ಹರಯದಲ್ಲಿ ನಿನ್ನೆ ಅಸೌಖ್ಯದಿಂದ ನಿಧನರಾಗಿದ್ದಾರೆ. ವಿದ್ವಾಂಸರಾಗಿ,  ಉಪನ್ಯಾಸಕರಾಗಿ, ಧಾರ್ಮಿಕ ಮತ್ತು ಅಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಸರು ಮಾಡಿದವರು ಅವರು. ಹೆಸರಿಗಾಗಿ ಎಂದೂ ಹೋರಾಟ ಮಾಡಿದವರಲ್ಲ. ಮೌನತಪಸ್ವಿಯಂತಿದ್ದ ಅವರ ಬರೆಹ ಮತ್ತು ಅಪೂರ್ವ ಬುದ್ಧಿವಂತಿಯೇ ಅವರ ಹೆಸರನ್ನು ಮೇಲಕ್ಕೇರಿಸಿದೆ.
ಇಳಿವಯಸ್ಸಿನಲ್ಲೂ ಅವರು ಬರೆಹ ಮತ್ತು ಓದಿನಲ್ಲೇ ಹೆಚ್ಚು ಕಾಲ ವ್ಯಯಿಸುತ್ತಿದ್ದರು. ನಗರದಲ್ಲಿ ಯಾವುದೇ ಪ್ರಮುಖ ಧಾರ್ಮಿಕ ಕಾರ್ಯಕ್ರಮವಿರಲಿ, ಅದಕ್ಕೆ ಅವರಿಗೆ ತಪ್ಪದೇ ಆಹ್ವಾನವಿರುತ್ತಿತ್ತು. ಅದರಂತೆ ಅವರ ಉಪಸ್ಥಿತಿಯೂ ಇರುತ್ತಿತ್ತು. ಅಷ್ಟರ ಮಟ್ಟಿಗೆ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಅನೇಕ ಸಂಶೋಧನಾ ಪ್ರಬಂಧಗಳನ್ನು ಬರೆಯುವ ಮೂಲಕ ತಮ್ಮಲ್ಲಿರುವ ಅಪಾರ ಜ್ಞಾನವನ್ನು ಹೊರ ಜಗತ್ತಿಗೆ ನೀಡಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಪಂಡಿತರಾಗಿದ್ದಲ್ಲದೆ, ಸಂಸ್ಕೃತದಲ್ಲೂ ಅಗಾಧ ಪಾರಮ್ಯ ಮೆರೆದಿದ್ದರು.
ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದರೂ ತಮ್ಮ ಯಾವುದೇ ಕೆಲಸದಿಂದ ಅವರು ವಿಮುಖರಾಗಿರಲಿಲ್ಲ. ಸದಾ ಓದುವುದು, ಬರೆಯುವುದು ಅವರ  ಕೆಲಸವಾಗಿತ್ತು. ವಿಶೇಷವಾಗಿ ಧಾರ್ಮಿಕ ಗ್ರಂಥಗಳ ಬಗ್ಗೆ ಆಸಕ್ತಿ ಹೊಂದಿದ್ದರು.
ಶಬರಿ ದರ್ಶನ, ಪರಮದೇವ, ಶ್ರೀ ಜಗದ್ಗುರು ಪರಂಪರೆಯ ದರ್ಶನ ಮುಂತಾದ ಕೃತಿಗಳ ಮೂಲಕವೇ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿದ್ದ ಅವರು, ಶಿವಮೊಗ್ಗದ ಕೆಲವು ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದರು. ವಾಗ್ಮಿ, ಲೇಖಕ, ಚಿಂತಕ, ಸಂಶೋಧಕರಾಗಿ ಮನ್ನಣೆ ಗಳಿಸಿದ್ದರು.
ಮೂಲತಃ ತಾಲೂಕಿನ ಗಡಿಭಾಗದಲ್ಲಿರುವ ಚಿಕ್ಕಕೂಡ್ಲಿಯವರಾದ ಶಾಸ್ತ್ರಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಪದೋನ್ನತಿ ಮೂಲಕ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದರು. ಬೋಧನಾ ವೃತ್ತಿಯ ಜೊತೆಗೆ ಐತಿಹಾಸಿಕ ಕವಲೇದುರ್ಗ, ಹೊಸನಗರ ತಾಲೂಕು ದರ್ಶನ ಮುಂತಾದ ಗೃಂಥಗಳನ್ನೂ ಸಹ ರಚಿಸಿದ್ದಾರೆ. ಹೊಳೆಹೊನ್ನೂರು ನಾಡು, ಹೊಂಬುಜ ನಾಡಿನ ಅರಸರ ಪರಂಪರೆ ಎಂಬ ಕೃತಿಯನ್ನೂ ರಚಿಸಿದ್ದಾರೆ. ಹೊಸನಗರ ತಾಲೂಕಿನಲ್ಲಿ ಅವರು ಕೆಲಸ ಮಾಡಿದ್ದರಿಂದ ವಿಶೇಷವಾಗಿ ಆ ತಾಲೂಕಿನ ಐತಿಹಾಸಿಕ ಕ್ಷೇತ್ರಗಳ ಅಧ್ಯಯನ ಮಾಡಿ ಸಂಶೋಧನೆ ನಡೆಸಿದ್ದರು.
ಇಂತಹ ಅಪೂರ್ವ ಪ್ರತಿಭೆಯ ಶಾಸ್ತ್ರಿ ಅವರು ಶಿವಮೊಗ್ಗದ ಜ್ಞಾನದ ಆಸ್ತಿ ಎಂಬಂತಿದ್ದರು. ಎಷ್ಟೋ  ವಿಷಯಗಳಿಗೆ ಅವರು ಮಾರ್ಗದರ್ಶಕರಾಗಿದ್ದರು. ಅನೇಕ ಧಾರ್ಮಿಕ ಮತ್ತು ಸಾಹಿತ್ಯಿಕ ವರ್ಗದವರು ಯಾವುದೇ ಸಂಶಯಗಳಿದ್ದರೂ ಅವರಲ್ಲಿಗೆ ತೆರಳಿ ಚರ್ಚಿಸುತ್ತಿದ್ದರು. ಇಂತಹವರಿಗೆ ಸದಾ ಮಾರ್ಗದರ್ಶನ ಮಾಡುತ್ತಿದ್ದರು.
ಜ್ಞಾನದ ಖನಿಯಂತಿದ್ದ ಅವರು ಸ್ವಲ್ಪವೂ ಅಹಮಿಕೆಯನ್ನು ಹೊಂದಿರಲಿಲ್ಲ. ಅವರ ಸಾಧನೆಗಳನ್ನು ಗಮನಿಸಿ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅವರಿಗೆ ಸಂದ ಪ್ರಶಸ್ತಿಗಳು ಹತ್ತು ಹಲವು. ಕೂಡಲಿ ಶೃಂಗೇರಿ ಮಠದ ಪರಮಭಕ್ತರಾದ ಇವರಿಗೆ ಮಹಾಸಂಸ್ಥಾನದಿಂದ ವಿದ್ಯಾಶಂಕರ ಪ್ರಶಸ್ತಿ ನೀಡಲ್ಪಟ್ಟಿದೆ. ಪರಮದೇವ ಪ್ರಶಸ್ತಿ, ಸಾಹಿತ್ಯ ವಿದ್ಯಾರತ್ನ ಪ್ರಶಸ್ತಿ, ಶಿವಮೊಗ್ಗ ದಸರಾ ಮತ್ತು ನಗರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸಮರ್ಪಿಸಲಾಗಿದೆ.
ವಿಶೇಷವೆಂದರೆ, ಕೂಡಲಿ ಮಹಾಸಂಸ್ಥಾನದ ವಿದ್ಯಾಭಿನವ ವಿದ್ಯಾರಣ್ಯ ಸ್ವಾಮೀಜಿ ಅಧ್ಯಯನ ಮಾಡಿದ ಸಂಸ್ಕೃತ ಎಂಎ ಮತ್ತು ಪಿಎಚ್‌ಡಿ ಅಧ್ಯಯನಕ್ಕೆ ಕೂಡಲಿ ಜಗನ್ನಾಥ ಶಾಸ್ತ್ರಿಯವರು ಖಾಸಗಿಯಾಗಿ ಮಾರ್ಗದರ್ಶನ ಮಾಡಿದ್ದರು. ಇಂತಹ ಅಪ್ರತಿಮ ಪ್ರತಿಭೆ ಮತ್ತು ಜನಮನ್ನಣೆ ಗಳಿಸಿದ್ದ ಶಾಸ್ತ್ರಿಯವರು ಇನ್ನು ನೆನೆಪು ಮಾತ್ರ.
,,,,,,,,,,,,,,,,,,,,,,,,
ಎದೆ ನಡುಗಿಸುವ, ಕರ್ಣ ಕಠೋರ ಶಬ್ದದ ಸೈಲೆನ್ಸರ್
 ಕರ್ಕಶ ಸದ್ದಿಗೆ ಬ್ರೇಕ್ ಹಾಕುವ ಕೆಲಸ ಎಂದು?


’ಬೈಕ್ ಅಥವಾ ಇತರೆ ಯಾವುದೇ ವಾಹನವಾಗಿರಲಿ ಶಬ್ದ ಮಾಲಿನ್ಯ ಉಂಟು ಮಾಡುವಂತಿಲ್ಲ. ಮೋಟಾರು ವಾಹನ ಕಾಯ್ದೆಯನುಸಾರ ನಿಗದಿತ ಡೆಸಿಬಲ್‌ಗಿಂತ ಹೆಚ್ಚು ಶಬ್ದ ಹೊರಹೊಮ್ಮುವ ವಾಹನಗಳ ಮಾಲೀಕರ ವಿರುದ್ದ ಕ್ರಮ ಜರುಗಿಸಬಹುದಾಗಿದೆ.  ಕಂಪೆನಿ ನಿಗದಿಪಡಿಸಿದ ಸೈಲೈನ್ಸರ್‌ಗಳನ್ನೇ ಬಳಕೆ ಮಾಡಬೇಕು. ಇದನ್ನು ಮಾರ್ಪಡಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ. ಇಂತಹ ವಾಹನಗಳ ನೊಂದಣಿ ಕೂಡ ತಡೆಹಿಡಿಯಬಹುದಾಗಿದೆ. ನಾಗರೀಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರ್ಕಶ ಶಬ್ದ ಹೊರಹೊಮ್ಮುವ ವಾಹನಗಳು ಕಂಡುಬಂದರೆ ತಮ್ಮ ಮೊಬೈಲ್ ಸಂಖ್ಯೆ : 94498-64014 ಗೆ ಮಾಹಿತಿ ರವಾನಿಸಬಹುದಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಸಂಬಂಧಿಸಿದ ವಾಹನಗಳ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಕ್ರಮ ಜರುಗಿಸಲಾಗುವುದು.
-ಶಿವರಾಜ್ ಪಾಟೀಲ್, ಪ್ರಾದೇಶಿಕ ಸಾರಿಗೆ ಇಲಾಖೆಯ ಜಂಟಿ ಆಯುಕ್ತ

ಶಿವಮೊಗ್ಗ:   ನಗರದಲ್ಲಿ  ಕೆಲವರು ದ್ವಿಚಕ್ರ ವಾಹನಗಳಿಗೆ ದೊಡ್ಡ ಪ್ರಮಾಣದಲ್ಲಿ ಶಬ್ದ ಬರುವ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ಶಬ್ದ ಮಾಲಿನ್ಯ ಮಾಡುವುದರ ಜೊತೆಗೆ ಸಾರ್ವಜನಿಕರಿಗೂ ತೊಂದರೆ ಕೊಡುತ್ತಿರುವ ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದೆ.  ಇದರಿಂದ ನಾಗರಿಕರು ನೆಮ್ಮದಿಯಿಲ್ಲದಂತಾಗುವ ಪರಿಸ್ಥಿತಿ ಎದುರಾಗಿದೆ.
ಇತ್ತೀಚೆಗೆ ಮೋಟಾರ್ ಬೈಕ್‌ಗಳ ಶಬ್ದ ಮಾಲಿನ್ಯ ವಿಪರೀತ ಮಟ್ಟಕ್ಕೆ ತಲುಪಿದೆ. ಭಾರೀ ಶಬ್ದ ಮಾಡುತ್ತ ಹೋಗುವ ಕೆಲವು ಬೈಕ್‌ಗಳು ನಾಗರಿಕರ ಎದೆ ನಡುಗಿಸುತ್ತಿವೆ. ಕರ್ಣ ಕಠೋರವಾದ ಈ ಶಬ್ದ   ಚಾಲನೆಯಲ್ಲಿರುವವರು ಮತ್ತು ಪಾದಚಾರಿಗಳೂ ಸಹ ಭಯಗೊಳ್ಳುವಂತೆ ಮಾಡುತ್ತಿದೆ.
ಏಕಾಏಕಿ ಕೇಳಿಬರುವ ಈ ಕರ್ಕಶ ಸದ್ದಿನಿಂದ ಕೆಲ ಬೈಕ್ ಸವಾರರು ಚಾಲನೆಯ ನಿಯಂತ್ರಣ ಕಳೆದುಕೊಂಡು ಸಣ್ಣಪುಟ್ಟ ಅಪಘಾತಕ್ಕೀಡಾಗುತ್ತಿರುವ ಘಟನೆಗಳು ಕೂಡ ನಡೆಯುತ್ತಿವೆ. ಈ ಕರ್ಕಶ ಸದ್ದು ನಾಗರಿಕ ವಲಯದಲ್ಲಿ ನಾನಾ ರೀತಿಯ ಅವಾಂತರ ಸೃಷ್ಟಿಸುತ್ತಿದೆ.
’ಭಾರತ ಮೋಟಾರು ಕಾಯ್ದೆ’ಯ ಪ್ರಕಾರ ಮೋಟಾರ್ ಬೈಕ್ ಸೇರಿದಂತೆ ಇತರೆ ವಾಹನಗಳಲ್ಲಿ ಕರ್ಕಶ ಸದ್ದು ಮಾಡುವಂತಿಲ್ಲ. ಬೈಕ್, ಬಸ್, ಲಾರಿ ಮತ್ತಿತರ ವಾಹನಗಳಿಂದ ಹೊರಹೊಮ್ಮಬಹುದಾದ ಶಬ್ದದ ಪ್ರಮಾಣ ನಿಗದಿತ ಪ್ರಮಾಣದಲ್ಲಿ ಇರಬೇಕೆಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಿಗದಿತ ’ಡೆಸಿಬಲ್’ಗಿಂತ ಹೆಚ್ಚಿನ ಶಬ್ದ ಹೊರಸೂಸುವ ವಾಹನಗಳ ಮಾಲಿಕರ ಮೇಲೆ ಪೊಲೀಸ್ ಇಲಾಖೆ ಹಾಗೂ ಆರ್‌ಟಿಓ ಕೇಸ್ ದಾಖಲಿಸಬಹುದು. ದಂಡ ಹಾಕಬಹುದು. ಜೊತೆಗೆ ವಾಹನ ಕೂಡ ಮುಟ್ಟುಗೋಲು ಹಾಕಿಕೊಳ್ಳಬಹುದು. ತಾತ್ಕಾಲಿಕ ಅವಧಿಗೆ ನೊಂದಣಿ ರದ್ದುಗೊಳಿಸಲು ಅವಕಾಶವಿದೆ.
ಇಷ್ಟೆಲ್ಲದರ ಹೊರತಾಗಿಯೂ ಶಿವಮೊಗ್ಗ ನಗರದಲ್ಲಿ ಈ ಕರ್ಕಶ ಸದ್ದಿಗೆ ಬ್ರೇಕ್ ಹಾಕುವ ಕೆಲಸಗಳು ಪೊಲೀಸ್ ಇಲಾಖೆ ಹಾಗೂ ಆರ್‌ಟಿಓದಿಂದ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಇದರಿಂದ ದಿನದಿಂದ ದಿನಕ್ಕೆ ಶಬ್ದ ಮಾಲಿನ್ಯ ಉಂಟು ಮಾಡುವ ಬೈಕ್ ಇತರೆ ವಾಹನಗಳ ಹಾವಳಿ ವಿಪರೀತ ಮಟ್ಟಕ್ಕೆ ತಲುಪಿದೆ. ಹೇಳುವವರು ಕೇಳುವವರು ಇಲ್ಲದಂತಾಗಿದೆ.
  80 ಡೆಸಿಬಲ್ ಮೀರಬಾರದು:
  ವಾಹನ ತಯಾರಿಸುವ ಕಂಪೆನಿಗಳು ಮೋಟಾರು ಕಾಯ್ದೆಯನುಸಾರ ವಾಹನಗಳ ಶಬ್ದ ನಿಗದಿಪಡಿಸಿರುತ್ತವೆ. ಆದರೆ ಕೆಲವು ಮಾಲಿಕರು ಶೋಕಿಗಾಗಿ ಅಥವಾ ಜನರ ಗಮನಸೆಳೆಯಲು ವಾಹನಗಳ ಶಬ್ದ ಹೆಚ್ಚಿಸಿಕೊಳ್ಳುತ್ತಾರೆ. ಇದಕ್ಕಾಗಿ ಸೈಲೈನ್ಸರ್‌ಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಹೆಚ್ಚು ಶಬ್ದ ಹೊರಹೊಮ್ಮುವ ಸೈಲೈನ್ಸರ್‌ಗಳನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದ ಈ ವಾಹನಗಳು ರಸ್ತೆಗಿಳಿದ ವೇಳೆ ಭಾರೀ ಪ್ರಮಾಣದ ಸದ್ದು ಮಾಡಿಕೊಂಡು ಹೋಗುತ್ತವೆ. ಈ ರೀತಿಯ ಮಾರ್ಪಾಡು ಮಾಡುವುದು ಕಾನೂನುಬಾಹಿರವಾಗಿದೆ. ಸಂಬಂಧಿಸಿದ ಮಾಲೀಕರ ವಿರುದ್ದ ಕ್ರಮ ಜರುಗಿಸಬಹುದಾಗಿದೆ.  ಶಬ್ದ ಮಾಲಿನ್ಯ ಉಂಟು ಮಾಡುವ ವಾಹನಗಳ ಪತ್ತೆಗೆ ಇಲಾಖೆಯಲ್ಲಿ ಡೆಸಿಬಲ್ ಮೀಟರ್‌ನಂತಹ ಅತ್ಯಾಧುನಿಕ ಉಪಕರಣಗಳಿವೆ.
 ಇತ್ತೀಚೆಗೆ ಪೊಲೀಸರು ಸಾಲುಸಾಲಾಗಿ ಹೆಲ್ಮೆಟ್ ಕೇಸ್ ಹಾಕುತ್ತಿದ್ದಾರೆ. ಅದೇ ರೀತಿಯಲ್ಲಿ ಕರ್ಕಶ ಶಬ್ದ ಹೊರಹೊಮ್ಮಿಸುವ ವಾಹನಗಳ ಮಾಲಿಕರ ವಿರುದ್ದವು ಕಾನೂನು ರೀತ್ಯ ಕ್ರಮ ಜರುಗಿಸಬೇಕು.  ಈ ಮೂಲಕ ಶಬ್ದ ಮಾಲಿನ್ಯ ತಡೆಗಟ್ಟು, ನಾಗರಿಕರ ಆರೋಗ್ಯ ಸಂರಕ್ಷಣೆಯತ್ತ ಗಮನಹರಿಸಬೇಕಾಗಿದೆ. ಹಾಗೆಯೇ ಆರ್‌ಟಿಓ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ, ಸಂಘಸಂಸ್ಥೆಗಳ ನೆರವಿನೊಂದಿಗೆ ಶಬ್ದ ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ವಾಹನ ಮಾಲಿಕರು, ಚಾಲಕರು, ನಾಗರಿಕರಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು.  
 ...............................