Wednesday, 5 July 2017



ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು





ಶಿವಮೊಗ್ಗ: ನಮಗೆ ವಸತಿಗೆ ಜಾಗ ಕೊಡಿ. ಎಲ್ಲಿ ವಸತಿ ಹೂಡಿದರೂ ಅಲ್ಲಿಂದ ಒಕ್ಕಲೆಬ್ಬಿಸುವ ಇತ್ತೀಚೆಗೆ ಪರಿಪಾಠ ಬೆಳೆದಿದೆ. ನಾವು ಎಲ್ಲಿಯೂ ಒತ್ತುವರಿ ಮಾಡಿಕೊಂಡಿಲ್ಲ ಎನ್ನುವುದನ್ನು ಮೊದಲೇ ತಿಳಿಯಬಯಸುತ್ತೇವೆ. ಇತ್ತೀಚೆಗೆ ಕನ್ಸರ್ವೆನ್ಸಿಗಳನ್ನೆಲ್ಲಾ ರಸ್ತೆಯಂತೆ ಕಾಂಕ್ರಿಟ್ ಮಾಡಿ, ಚರಂಡಿಯನ್ನೆಲ್ಲ ಶುಚಿಗೊಳಿಸುತ್ತಿರುವುದರಿಂದ ನಮಗೆ ಆವಾಸ ಸ್ಥಾನ ಇಲ್ಲದೆ ಪರದಾಡುತ್ತಿದ್ದೇವೆ. ದಯವಿಟ್ಟು ನಮಗೊಂದಷ್ಟು ಜಾಗ ಕೊಟ್ಟು ಬದುಕಲು ಬಿಡಿ.
ಬಡಾವಣೆಗಳಲ್ಲಿ ಕೊಂಪೆ, ಗಿಡಗಂಟಿಗಳ ಪೊದೆಗಳಲ್ಲಿ ಬದುಕಿ ಅಲೆಮಾರಿಗಳ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಆದರೆ ಅಲ್ಲಿಯೂ ಈಗ ಮನೆ ಕಟ್ಟುವ ನೆಪದಲ್ಲಿ ನಮ್ಮನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಇದು ಜೀವನದ ಪ್ರಶ್ನೆಯಾಗಿರುವುದರಿಂದ ನಾವು ಅನಿವಾರ್ಯವಾಗಿ ವಸತಿ ವ್ಯವಸ್ಥೆ ಮಾಡಿಕೊಳ್ಳಲೇಬೇಕಿದೆ. ನಮ್ಮ ಪಾಡು ಯಾರಿಗೆ ಹೇಳಲಿ, ಕೇಳಿಸಿಕೊಳ್ಳುವವರೂ ಇಲ್ಲ. ಕನಿಷ್ಠ ಅನುಕಂಪವೂ ಇಲ್ಲವಲ್ಲ ಎಂಬ ಬೇಸರ ನಮಗಿದೆ.
ನಮ್ಮದು ಹೇಳಿಕೇಳಿ, ದೊಡ್ಡ ಸಂಸಾರ. ವರ್ಷಕ್ಕೆ 3ರಿಂದ 4 ಬಾರಿ ಹೆರಿಗೆ ಭಾಗ್ಯವನ್ನು (ನಿಮಗಿಲ್ಲ) ದೇವರು ಕರುಣಿಸಿದ್ದಾನೆ. ಇದರಿಂದ ಸಂತತಿ ಹೆಚ್ಚುತ್ತಲೇ ಇದೆ. ನಾವು ನಿಮ್ಮ ಹಾಗೆ ಒಂದೋ, ಅಪರೂಪಕ್ಕೆ ಎರಡೋ ಹೆರುವವರಲ್ಲ. ಕನಿಷ್ಠ ಆರೆಂಟು ಮಕ್ಕಳಾದರೂ ಜನಿಸುತ್ತವೆ. ಇವರನ್ನೆಲ್ಲ ಕಾಪಾಡಲು ವಸತಿ ವ್ಯವಸ್ಥೆಯ ಅಗತ್ಯತೆ ಇದೆ. ಆಹಾರ ವ್ಯವಸ್ಥೆಯನ್ನು ಹೇಗಾದರೂ ಮಾಡಿಕೊಳ್ಳುತ್ತೇವೆ. ದಯವಿಟ್ಟು ಎಲ್ಲ ಕನ್ಸರ್ವೆನ್ಸಿಗಳನ್ನೆಲ್ಲ ಸುಂದರಗೊಳಿಸುವ ಮತ್ತು ಸ್ಮಾರ್ಟ್ ಸಿಟಿ ಕೆಲಸಕ್ಕೆ ಕೈ ಹಾಕಿ ನಮಗೆ ಅನಗತ್ಯ ತೊಂದರೆ ಕೊಡಬೇಡಿ. ನಿಮಗೆ ಪಾರ್ಕಿಂಗ್ ಪ್ರಾಬ್ಲಂ ಆದರೆ ನಾವು ಜವಾಬ್ದಾರರಲ್ಲ. ಅದಕ್ಕೆ ನಮ್ಮ ವಸತಿ ಹಕ್ಕನ್ನು ಕಸಿದುಕೊಳ್ಳಬೇಡಿ. ಬಿಲ್ಡಿಂಗ್ ಕಟ್ಟುವವರಿಗೆ ಜಾಗ ಬಿಡಲು ಹೇಳಿ. ಇನ್ನು ಮುಂದಾದರೂ ನಮ್ಮ ಮನವಿಗೆ ಸ್ಪಂದಿಸಿ ಬದುಕಲು ಬಿಡಿ. ಬದುಕುವ ಹಕ್ಕು ನಮಗೂ ನಿಮ್ಮಂತೆ ಇದೆ, ತಿಳಿದಿರಲಿ. ನೀವು ಬದುಕಿ, ನಮ್ಮನ್ನೂ ಬದುಕಬಿಡಿ.

ನಮ್ಮ  ಬಗ್ಗೆ ತಿಳಿದಿರಲಿ

* ನಾವು ಹಕ್ಕುಪತ್ರ ಕೇಳುತ್ತಿಲ್ಲ.
 * 94 ಸಿಸಿ ಕಾಯ್ದೆ ಪ್ರಕಾರ ಬದುಕುತ್ತಿರುವ ಜಾಗ ನಮ್ಮ ಹೆಸರಿಗೆ ಮಾಡಿಕೊಡಿ ಎಂದು ಕೇಳೋದಿಲ್ಲ.
* ಒಂದು ವೇಳೆ ಒಕ್ಕಲೆಬ್ಬಿಸಿದರೂ ನಾವು ಡಿಸಿ ಕಚೇರಿ ಎದುರು ಕುಳಿತು ಕೂಗಾಡೋದಿಲ್ಲ.
* ಪತ್ರಕರ್ತರಿಗೆ ಮಾಹಿತಿ ಕೊಟ್ಟು ಪುಕ್ಕಟೆ ಪ್ರಚಾರ ತಗೊಳ್ಳಲ್ಲ.
*  ಪೇಪರ್‌ನಲ್ಲಿ ನಮ್ಮ ಫೋಟೊ ಬರೋದು ಇಷ್ಟವಿಲ್ಲ.
* ಅಲೆಮಾರಿಗಳಂತೆ ತಿರುಗಾಡಿ ಬದುಕುವುದು ಗೊತ್ತು.
* ತಿರುಗಾಡುವಾಗ, ರಸ್ತೆ ಕ್ರಾಸ್ ಮಾಡುವಾಗ ಮಕ್ಕಳೂ ಸಹ ನಮ್ಮ ಸಂಗಡ ಬರುವುದರಿಂದ ಕೆಲವೊಮ್ಮೆ ಟ್ರಾಫಿಕ್ ಜಾಮ್ ಆಗಬಹುದು.
* ಇದಕ್ಕಾಗಿ ನಮಗೆ ಬಾಯಿಗೆ ಬಂದಂತೆ ಬಂದು ಬೈಯ್ದು ದೂಷಿಸುವಂತಿಲ್ಲ. 
...................................

Saturday, 1 July 2017

 ಇಂದಿನಿಂದ ಜಿಲ್ಲೆಯಲ್ಲಿ ಬಾಗಿಲು ಮುಚ್ಚಲಿವೆ 
ಸುಮಾರು 100 ಮದ್ಯದಂಗಡಿಗಳು
  ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮ * 
ನಿರುದ್ಯೋಗಿಗಳಾಗುವ ಆತಂಕದಲ್ಲಿ ಕೆಲಸಗಾರರು




 ಈ ಮೊದಲು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯಂಚಿನ 500 ಮೀಟರ್ ಒಳಗಡೆಯಿರುವ ಮದ್ಯ ಮಾರಾಟ ಕೇಂದ್ರಗಳನ್ನು ಸ್ಥಳಾಂತರಗೊಳಿಸಬೇಕಾಗಿತ್ತು. ತದನಂತರ ಸುಪ್ರೀಂ ಕೋರ್ಟ್ ಮತ್ತೊಂದು ಆದೇಶ ಹೊರಡಿಸಿ 20 ಸಾವಿರ ಜನಸಂಖ್ಯೆಯೊಳಗಿರುವ ನಗರ, ಪಟ್ಟಣ ಪ್ರದೇಶದೊಳಗೆ 220 ಮೀಟರ್ ಒಳಗಡೆ ಹಾಗೂ 20 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಪ್ರದೇಶಗಳಲ್ಲಿ 500 ಮೀಟರ್ ಒಳಗಡೆಯಿರುವ ಮದ್ಯ ಮಾರಾಟ ಕೇಂದ್ರಗಳನ್ನು ಮುಚ್ಚುವಂತೆ ಆದೇಶಿಸಿದೆ. ಪ್ರಸ್ತುತ ರಾಜ್ಯ ಸರ್ಕಾರವು ಮದ್ಯ ಮಾರಾಟ ಮಳಿಗೆಗಳನ್ನು ಉಳಿಸುವ ಉದ್ದೇಶದಿಂದ ನಗರ - ಪಟ್ಟಣ ಪ್ರದೇಶಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ - ರಾಜ್ಯ ಹೆದ್ದಾರಿಗಳನ್ನು ಡಿನೋಟೀಫೈ ಮಾಡಿ ಇವುಗಳನ್ನು ಸ್ಥಳೀಯ ಆಡಳಿತಕ್ಕೆ ಒಪ್ಪಿಸುವ ತೀರ್ಮಾನ ಕೈಗೊಂಡಿದೆ. ಇದರಿಂದ ರಾಜ್ಯ ಹೆದ್ದಾರಿಯಂಚಿನಲ್ಲಿರುವ ಮದ್ಯದಂಗಡಿಗಳು ಸುಪ್ರೀಂಕೋರ್ಟ್ ಆದೇಶದಿಂದ ತಪ್ಪಿಸಿಕೊಳ್ಳುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿರುವ ಮಾರಾಟ ಕೇಂದ್ರಗಳಿಗೆ ಸದ್ಯಕ್ಕೆ ಸಂಕಟ ತಪ್ಪದಂತಾಗಿದೆ.

ಶಿವಮೊಗ್ಗ, ಜುಲೈ 1: ಸುಪ್ರೀಂ ಕೋರ್ಟ್ ತೀರ್ಪಿನಂತೆ ಜುಲೈ 1 ರಿಂದ (ಇಂದಿನಿಂದ) ರಾಷ್ಟ್ರೀಯ ಹೆದ್ದಾರಿಯಂಚಿನಿಂದ ನಿರ್ದಿಷ್ಟ ಅಂತರದಲ್ಲಿರುವ ಮದ್ಯದಂಗಡಿಗಳ ಬಾಗಿಲು ಮುಚ್ಚಲಿವೆ.  ಜಿಲ್ಲೆಯಲ್ಲಿ ನೂರಾರು ಮದ್ಯದಂಗಡಿಗಳು ಬಾಗಿಲು ಮುಚ್ಚಲಿದ್ದು, ಶುಕ್ರವಾರ ಮಧ್ಯರಾತ್ರಿಯಿಂದಲೇ ವಹಿವಾಟು ಸ್ಥಬ್ಧಗೊಳಿಸಬೇಕಿದೆ.
ಮತ್ತೊಂದೆಡೆ ಅಬಕಾರಿ ಇಲಾಖೆಯು ಸುಪ್ರೀಂ ಕೋರ್ಟ್ ತೀರ್ಪಿನ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಮುಂದಾಗಿದೆ. ಈಗಾಗಲೇ ಸಂಬಂಧಿಸಿದ ಮದ್ಯದಂಗಡಿಗಳಿಗೆ ನೋಟೀಸ್ ಜಾರಿಗೊಳಿಸಿರುವ ಇಲಾಖೆಯು, ಜುಲೈ 1 ರಿಂದ ಯಾವುದೇ ಕಾರಣಕ್ಕೂ ವಹಿವಾಟು ನಡೆಸಬಾರದು. ನಿಯಮ ಉಲ್ಲಂಘಿಸಿ ವಹಿವಾಟು ನಡೆಸುವುದು ಕಂಡುಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ಜಿಲ್ಲೆಯ ಇತರೆ ನಗರ ಪಟ್ಟಣಗಳಿಗೆ ಹೋಲಿಕೆ ಮಾಡಿದರೆ ಶಿವಮೊಗ್ಗ ನಗರದಲ್ಲಿಯೇ ಅತ್ಯದಿಕ ಮದ್ಯದಂಗಡಿಗಳು ಬಾಗಿಲು ಮುಚ್ಚಲಿವೆ. ನಗರದ ಮೂಲಕ ರಾಷ್ಟ್ರೀಯ ಹೆದ್ದಾರಿ 206 ಹಾಗೂ 13 ಹಾದು ಹೋಗಿದೆ. ಈ ಎರಡು ಹೆದ್ದಾರಿಯಂಚಿನಲ್ಲಿ ಹಲವು ವೈನ್‌ಶಾಪ್, ಬಾರ್, ಮದ್ಯ ಮಾರಾಟ ವ್ಯವಸ್ಥೆಯಿರುವ ಹೋಟೆಲ್-ಲಾಡ್ಜ್, ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆಗಳು ವಹಿವಾಟು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ.
 ತೆರವುಗೊಳ್ಳುವ ಭೀತಿಯಲ್ಲಿದ್ದ ಸುಮಾರು ಆರು ಮದ್ಯದಂಗಡಿಗಳು ಈಗಾಗಲೇ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡು ವಹಿವಾಟು ನಡೆಸುತ್ತಿವೆ. ಉಳಿದ ಕೆಲವು ಅಂಗಡಿಗಳು ಸ್ಥಳಾಂತರ ಪ್ರಕ್ರಿಯೆಯಲ್ಲಿವೆ. ಉಳಿದಂತೆ ಹಲವು ಮದ್ಯ ಮಾರಾಟ ಕೇಂದ್ರಗಳು ನಾನಾ ಕಾರಣಗಳಿಂದ ಇವ್ಯಾವ ಪ್ರಕ್ರಿಯೆ ಆರಂಭಿಸಿಲ್ಲ. ಈ ಮಾರಾಟ ಕೇಂದ್ರಗಳು ಜುಲೈ 1 ರಿಂದ ತಮ್ಮ ವಹಿವಾಟು ಸ್ಥಗಿತಗೊಳಿಸಲೇಬೇಕು.
 ಮದ್ಯ ಮಾರಾಟ ಕೇಂದ್ರಗಳ ಬಾಗಿಲು ಮುಚ್ಚಲೇಬೇಕಾದ ಸ್ಥಿತಿಯಲ್ಲಿರುವ ವರ್ತಕರು ಪಾಡಂತೂ ಹೇಳತೀರದಾಗಿದೆ. ತಮ್ಮ ಅಂಗಡಿಯಲ್ಲಿ ಮಾರಾಟವಾಗದೆ ಬಾಕಿ ಉಳಿದಿರುವ ಮದ್ಯವನ್ನು ನಿಯಮಾನುಸಾರ ಬೇರೇಡೆ ವಿಲೇವಾರಿ ಮಾಡಲು ಹರಸಾಹಸ ಪಡುತ್ತಿದ್ದಾರೆ. ಬೇರೇಡೆ ಸ್ಥಳಾಂತರಗೊಳ್ಳಲು ಜಾಗ ಹುಡುಕಾಡುತ್ತಿದ್ದು, ಸೂಕ್ತ ಸ್ಥಳಾವಕಾಶ ದೊರಕದೆ ಪರದಾಡುವಂತಾಗಿದೆ. ಮತ್ತೊಂದೆಡೆ ಈ ಅಂಗಡಿಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಕೆಲಸಗಾರರು ನಿರುದ್ಯೋಗಿಗಳಾಗುವ ಆತಂಕದಲ್ಲಿದ್ದಾರೆ.
ಜಿಲ್ಲೆಯಲ್ಲಿವೆ 230 ಲೈಸೈನ್ಸ್ ಮದ್ಯದಂಗಡಿಗಳು:
 ಜಿಲ್ಲೆಯ ಏಳು ತಾಲೂಕು ವ್ಯಾಪ್ತಿಯಲ್ಲಿ ವೈನ್‌ಶಾಪ್, ಬಾರ್-ರೆಸ್ಟೋರೆಂಟ್, ಎಂಎಸ್‌ಐಎಲ್, ಹೋಟೆಲ್ - ಲಾಡ್ಜ್‌ಗಳು, ಕ್ಲಬ್‌ಗಳು ಸೇರಿದಂತೆ ಒಟ್ಟಾರೆ 230 ಲೈಸೈನ್ಸ್ ಮದ್ಯ ಮಾರಾಟ ಕೇಂದ್ರಗಳಿವೆ. ಇದರಲ್ಲಿ 126 ಮದ್ಯ ಮಾರಾಟ ಕೇಂದ್ರಗಳ ಕಾರ್ಯನಿರ್ವಹಣೆಗೆ ಯಾವುದೇ ಅಡೆತಡೆಯಿಲ್ಲವಾಗಿದೆ. ಉಳಿದ ಮದ್ಯ ಮಾರಾಟ ಕೇಂದ್ರಗಳು ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿವೆ. ಇದರಲ್ಲಿ ಹಲವು ಮದ್ಯದಂಗಡಿಗಳು ಮಾರ್ಪಡಿಸಿಕೊಂಡಿದ್ದು, ಸುಪ್ರೀಂ ಕೋರ್ಟ್ ಆದೇಶದ ತೂಗುಕತ್ತಿಯಿಂದ ತಪ್ಪಿಸಿಕೊಂಡಿವೆ. ಉಳಿದಂತೆ 100 ಮದ್ಯದಂಡಿಗಳು ಸಂಕಷ್ಟದಲ್ಲಿವೆ ಎಂದು ಅಬಕಾರಿ ಇಲಾಖೆಯ ಮೂಲಗಳು ಹೇಳುತ್ತವೆ.





’ -----------------------------------

Friday, 16 June 2017


ಗಾಂಜಾ  ಅಮಲಿನಲ್ಲಿ ಮಿಂದೇಳುತ್ತಿರುವ ಯುವಕರು 

  ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ನಗರದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚುತ್ತಿರುವುದರಿಂದ ಮತ್ತು ಉನ್ನತ ಶಿಕ್ಷಣವೂ ಲಭ್ಯವಿರುವುದರಿಂದ ವಿದ್ಯಾಭ್ಯಾಸಕ್ಕೆ ಹೊರ ಜಿಲ್ಲೆ, ತಾಲೂಕಿನಿಂದ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ಅಮಾಯಕರನ್ನು ಗಾಂಜಾ ದಂಧೆಕೋರರು ಬುಟ್ಟಿಗೆ ಹಾಕಿಕೊಂಡು ಎಗ್ಗಿಲ್ಲದೆ ಮಾರಾಟ ನಡೆಸುತ್ತಿದ್ದಾರೆ. ಒಮ್ಮೆ ಇಂತಹ ಚಟಕ್ಕೆ ಮಾರುಹೋದ ಯುವಕರು ತಮ್ಮ ಸುಂದರ ಯೌವ್ವನವನ್ನು ಕಳೆದುಕೊಳ್ಳುತ್ತಾರೆ. ಇಡೀ ಜೀವನವನ್ನು ಹಾಳುಮಾಡಿಕೊಂಡು, ವಿದ್ಯಾಭ್ಯಾಸಕ್ಕೂ ತಿಲಾಂಜಲಿ ಇತ್ತು ಚಟದ ದಾಸರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ವಿದ್ಯಾಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಮತ್ತು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಚಲನವಲನದ ಬಗ್ಗೆ ಗಮನ ಇಡುವ ಜವಾಬ್ದಾರಿಯನ್ನು ಹೊರಬೇಕಿದೆ.




ಶಿವಮೊಗ್ಗ:  ಇವರೆಲ್ಲ 18ರಿಂದ 40ರ ಒಳಗಿನ ವಯೋಮಾನದವರು. ಇವರದ್ದು ಗಾರೆ ಕೆಲಸ, ವಾಹನ ಚಾಲನೆ, ಗುಜರಿ ಅಂಗಡಿಯಲ್ಲಿ , ರಸ್ತೆ ಬದಿ ಮಾರಾಟ. ಹಲವರು ವಿದ್ಯಾರ್ಥಿಗಳು. ಇವರೆಲ್ಲ ತಮ್ಮ ವೃತ್ತಿಯ ಜೊತೆಗೇ ಗಾಂಜಾದ ಅಮಲಿಗೂ ತುತ್ತಾಗಿದ್ದಾರೆ. ಕೇವಲ ಅಮಲಿಗೆ ತಾವೊಬ್ಬರೇ ತುತ್ತಾಗಿದ್ದರೆ ಸುಮ್ಮನಿರಬಹುದಿತ್ತು, ಪೊಟ್ಟಣಗಳಲ್ಲಿ ಮಾರಾಟವನ್ನೂ ಮಾಡುತ್ತಿದ್ದಾರೆ. ಯುವಕರನ್ನು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅಮಲಿಗೆ ತಳ್ಳುತ್ತಿದ್ದಾರೆ.
ಇದು ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಘಟನೆ. ಕಲೆ, ಸಂಸ್ಕೃತಿ ಮೇಳೈಸಿದ, ಹೋರಾಟಗಾರರ ನೆಲೆವೀಡಾದ ಶಿವಮೊಗ್ಗ ಈಗ ಗಾಂಜಾದ ಅಮಲಿನಲ್ಲಿ ತೇಲಾಡುತ್ತಿದೆ.
 ನಗರದ ಕೆಲವು ಶಿಕ್ಷಣ ಸಂಸ್ಥೆಯ ಆಸುಪಾಸಿನಲ್ಲಿ ಈ ದಂಧೆ ಯಾವುದೇ ಅಳುಕಿಲ್ಲದೆ ನಡೆಯುತ್ತಿದೆ. ಈ ದಂಧೆಯ ಹಿಂದೆ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದು, ದಂಧೆಕೋರರು ತಮ್ಮದೇ ಆದ ಕಾರ್ಯವ್ಯಾಾಪ್ತಿ ರೂಪಿಸಿಕೊಂಡು ಗಾಂಜಾ ಮಾರಾಟ ನಡೆಸುತ್ತಿದ್ದಾರೆ. ಗಾಂಜಾ ಸೊಪ್ಪು ತರುವುದರಿಂದ ಹಿಡಿದು ಅವುಗಳನ್ನು ಪೊಟ್ಟಣಗಳಲ್ಲಿ ತುಂಬಿ, ಮಾರಾಟ ಅಡ್ಡೆಗಳಿಗೆ ರವಾನಿಸುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ.
ದೇಶದ ಭವ್ಯ ಭವಿಷ್ಯತ್ತಿನ ಪ್ರಜೆಯಾಗಬೇಕಾದವರು ಗಾಂಜಾ ನಿಶೆಯಲ್ಲಿ ತೂರಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಿವಿಧ ಆಮಿಶ ಒಡ್ಡಿ, ಅದರ ನಿಶೆ, ನಂತರದ ಸ್ಥಿತಿಯನ್ನು ವಿವರಿಸಿ  ಹಾಸ್ಟೆಲ್ ಬಳಿ ಇವುಗಳ ಮಾರಾಟ, ಪೂರೈಕೆ ಮಾಡಲಾಗುತ್ತಿದೆ. ಮೊದಮೊದಲು ಹೊರರಾಜ್ಯದ ವಿದ್ಯಾರ್ಥಿಗಳನ್ನು ಮಾತ್ರ ಆಕರ್ಷಿಸುತ್ತಿದ್ದ ಮಾದಕ ವಸ್ತು ಈಗ ಸ್ಥಳೀಯರನ್ನೂ ಬಲಿತೆಗೆದುಕೊಳ್ಳುತ್ತಿದೆ. ಇದರ ನಿಗ್ರಹಕ್ಕೆ ಪೊಲೀಸ್ ಇಲಾಖೆ ಈಗ ಮುಂದಾಗಿದೆ.
  ಕೇರಳದ ಮಾಫಿಯಾ ಸಹಾಯದಿಂದ ಕೆಲವರು ಗಾಂಜಾ ಬೆಳೆ, ಮಾರಾಟ, ಪೂರೈಕೆ ಮಾಡುವುದರ ಜೊತೆಗೆ ಇಲ್ಲಿನ ರೈತರನ್ನೂ ಪುಸಲಾಯಿಸಿ, ಹೆಚ್ಚಿನ ಲಾಭದ ಆಮಿಷ ಒಡ್ಡಿ ಗಾಂಜಾ ಹೆಚ್ಚಲು ಕಾರಣರಾಗಿದ್ದಾರೆನ್ನುವ ಅಂಶ ಪೊಲೀಸ್ ಇಲಾಖೆಗೆ ಗೊತ್ತಿದೆ. ಇದರ ಕಠಿಣ ನಿಗ್ರಹಕ್ಕೆ ಈಗ ಅಗತ್ಯ ಕ್ರಮವನ್ನು ಜರುಗಿಸಲು ಸಕಾಲವಾಗಿದೆ.  
ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು ಭಾರೀ ದೊಡ್ಡ ಪ್ರಮಾಣದಲ್ಲಿ ಬಲಿಯಾಗುತ್ತಿದ್ದಾರೆ. ಜೊತೆಗೆ ದಂಧೆಕೋರರೇ ನೇರವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಬೀಡುಬಿಟ್ಟು ವಿದ್ಯಾರ್ಥಿಗಳನ್ನು ಗಾಂಜಾ ಬಲೆಗೆ ಬೀಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಗಾಂಜಾ ಚಟಕ್ಕೆ ದಾಸರಾಗಿರುವ ಕೆಲವು ವಿದ್ಯಾರ್ಥಿಗಳನ್ನು ಇವರು ತಮ್ಮ ದಂಧೆಗೆ ಏಜೆಂಟ್‌ಗಳನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.
  ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಾತ್ರವಲ್ಲ, ಕೆಲವು ಸಣ್ಣಪುಟ್ಟ ಓಣಿಗಳಲ್ಲಿ, ಹೊಡೆಲ್‌ಗಳಲ್ಲಿ, ಬೀಡಾ ಅಂಗಡಿಗಳಲ್ಲಿ, ಯುವಕರ ಗುಂಪು ಸೇರಿ ಹರಟೆ ಹೊಡೆಯುವ, ಕಾಲ ಕಳೆಯುವ ಸ್ಥಳದಲ್ಲಿ,  ನಿರ್ಜನ ಪ್ರದೇಶದಲ್ಲಿರುವ ಶಾಲಾ-ಕಾಲೇಜು ಮೈದಾನಗಳಲ್ಲಿ ಗಾಂಜಾ ದಂಧೆಕೋರರು ವ್ಯವಹಾರ ನಡೆಸುತ್ತಿರುವ ಮಾಹಿತಿಗಳಿವೆ. ಕುತೂಹಲಕ್ಕಾಗಿ ಗಾಂಜಾ ಸೇವನೆಗೆ ಮುಂದಾಗುವ ವಿದ್ಯಾರ್ಥಿಗಳು ಇದರ ದಾಸರಾಗಿ ಪರಿವರ್ತಿತರಾಗುತ್ತಿದ್ದಾರೆ. ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಈ ದಂಧೆ ನಡೆಯುತ್ತಿದ್ದರೂ ಪೊಲೀಸರು ಈವರೆಗೆ ಸುಮ್ಮನಿದ್ದುದೇಕೆ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರತೊಡಗಿದೆ.
ಮಾದಕ ವಸ್ತುಗಳ ಪಟ್ಟಿಯಲ್ಲಿ ಸೇರುವ ಗಾಂಜಾ ನಿಷೇಧಿತ ಬೆಳೆ. ಇದನ್ನು ಬೆಳೆಯುವುದು ಮತ್ತು ಮಾರಾಟ ಮಾಡುವುದು ಎರಡೂ ಅಪರಾಧ. ಆದರೂ ಈ ದಂಧೆ ನಡೆಯುತ್ತಿದೆ ಎಂದರೆ ಇದನ್ನು ಪೋಷಿಸಿಕೊಂಡು ಬರಲಾಗುತ್ತಿದೆ ಎಂದೇ ಅರ್ಥ. ಯುವಕರನ್ನು ದಾರಿತಪ್ಪಿಸುವ ಈ ದಂಧೆಕೋರರನ್ನು ಪೊಲೀಸರು ಪತ್ತೆ ಮಾಡಬೇಕು. ಚಟಕ್ಕೆ ಒಮ್ಮೆ ಅಂಟಿಕೊಂಡು ಇಡೀ ಜೀವನವನ್ನೇ ಹಾಳುಮಾಡಿಕೊಳ್ಳುವ ಯುವಕರ ಬಗ್ಗೆ ಗಮನಹರಿಸಬೇಕಿದೆ. ವಿಶೇಷವಾಗಿ ವಿದ್ಯಾಭ್ಯಾಸ, ಕೆಲಸದ ನಿಮಿತ್ತ ಮನೆಯಿಂದ ದೂರ ಇರುವ ಮಕ್ಕಳಲ್ಲಿ ಇಂತಹ ಚಟಗಳು ಮಿತ್ರರಿಂದ ಅಂಟುವುದು ಬಹು ಬೇಗ. ಅಂತಹವರನ್ನು ಹುಡುಕಿಯೇ ಈ ದಂಧೆಕೋರರು ತಮ್ಮ ಕೆಲಸ ನಿರ್ವಹಿಸುತ್ತಾರೆ.
ಚಟಕ್ಕೆ ಅಂಟಿಕೊಂಡವರನ್ನು ಹೊರತರುವ ಜೊತೆಗೆ ಮಾರಾಟ ಮಾಡುವವರನ್ನು ಬಂಧಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮುಂದುವರೆಸಬೇಕಿದೆ.  
.................................

Wednesday, 14 June 2017

ಗೀತಾ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಸಂಭವ



ಜಿಲ್ಲೆಯ ರಾಜಕೀಯದಲ್ಲಿ ಇನ್ನೊಂದು ಮಹತ್ತರ ಬದಲಾವಣೆಯಾಗುವ ನಿರೀಕ್ಷೆ ಇದೆ. ಅದೆಂದರೆ, ಗೀತಾ ಶಿವರಾಜಕುಮಾರ್ ಕಾಂಗ್ರೆಸ್ ಸೇರುವ ವಿಷಯ ಕೇಳಿಬಂದಿದೆ. ಬೆಂಗಳೂರಿನಲ್ಲಿ ಈ ಬಗ್ಗೆ ಕಾರ್ಯತಂತ್ರ ಜೋರಾಗಿ ನಡೆದಿದೆಯಾದರೂ ಜಿಲ್ಲೆಯಲ್ಲಿ ಅದರ ಬಗ್ಗೆ ಸುದ್ದಿ ಇರಲಿಲ್ಲ. ಗೀತಾ ಅವರನ್ನು ಕಾಂಗ್ರೆಸ್ ಲೋಕಸಭೆ ಉಮೇದುವಾರನನ್ನಾಗಿ ಮಾಡುವ ಸನ್ನಾಹದಲ್ಲಿದೆ. ಇದರ ಜೊತೆಗೆ ಸೊರಬದಲ್ಲಿ ಕಾಂಗ್ರೆಸ್‌ಗೆ ಚೈತನ್ಯ ನೀಡುವ ಕೆಲಸವೂ ನಡೆಯಲಿದೆ.



ಶಿವಮೊಗ್ಗ:  ಕಳೆದ  ಲೋಕಸಭಾ ಚುನಾವಣೆಗೆ ಜೆಡಿಎಸ್‌ನಿಂದ ಶಿವಮೊಗ್ಗ  ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಗೀತಾ ಶಿವರಾಜಕುಮಾರ್ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಮತ್ತೆ  ಕಣಕ್ಕಿಳಿಸುವ ಯತ್ನ ಭರದಿಂದ ಸಾಗಿದೆ.
ಮೊನ್ನೆ ಎಐಸಿಸಿ ಕಾರ್ಯಾಧ್ಯಕ್ಷ ರಾಹುಲ್ ಗಾಂಧಿ ದಿವಂಗತ ಪಾರ್ವತಮ್ಮ ರಾಜಕುಮಾರ್ ಅವರ ಮನೆಗೆ ಭೇಟಿ ನೀಡಿ ಅವರ ಮಕ್ಕಳಿಗೆ ಸಾಂತ್ವನ ಹೇಳಲು ಬಂದ ವೇಳೆ ಸಚಿವ ಡಿ ಕೆ ಶಿವಕುಮಾರ್ ಈ ವಿಷಯವನ್ನು ಹೊರಗೆಡಹುವ ಮೂಲಕ ಜಿಲ್ಲೆಯ ರಾಜಕೀಯದಲ್ಲಿ ಬದಲಾವಣೆಯಾಗುವ ಸಾಧ್ಯತೆಯನ್ನು ಹೊರಗೆಡವಿದ್ದಾರೆ.
ಮಾಜಿ ಮುಖ್ಯಮಂತ್ರಿ  ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರಿಯಾಗಿರುವ ಗೀತಾ, ನಟ ಶಿವರಾಜ್‌ಕುಮಾರ್ ಅವರ ಪತ್ನಿ. ತಂದೆಯ ರಾಜಕೀಯದ ಗಾಳಿಯಲ್ಲೇ ಬೆಳೆದರೂ ಅದರಿಂದ ಗಾವುದ ದೂರ ಉಳಿದಿದ್ದರು. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರ ಸಹೋದರ, ಸೊರಬ ಶಾಸಕ ಮಧು ಬಂಗಾರಪ್ಪ ಅವರ ಒತ್ತಾಸೆಯ ಮೇರೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿ 2.70 ಲಕ್ಷ ಮತ ಪಡೆದು ಗಮನಸೆಳೆದಿದ್ದಾರೆ. ನಂತರ ರಾಜಕೀಯದಿಂದ ಮತ್ತೆ ದೂರವಾದ ಗೀತಾ ಶಿವಮೊಗ್ಗದತ್ತ ಮುಖ ಮಾಡಿದ್ದು ಬೆರಳೆಣಿಕೆಯಷ್ಟು ಬಾರಿ.
ಇತ್ತೀಚಿನ ಬೆಳವಣಿಗೆಯಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಬಂಗಾರಪ್ಪ ಕುಟುಂಬದವರಾರೂ ಕಾಂಗ್ರೆಸ್‌ನಲ್ಲಿ ಇಲ್ಲವಾಗಿತ್ತು. ಮೂಲತಃ ಸಮಾಜವಾದಿಯಾದರೂ ನಂತರ ಕಾಂಗ್ರೆಸ್ಸಿಗರಾದ ಬಂಗಾರಪ್ಪ ಅವರ ಹೆಸರಲ್ಲಿ ಇಂದಿಗೂ ಸೊರಬ, ಸಾಗರ, ಶಿವಮೊಗ್ಗದಲ್ಲಿ ಪಕ್ಷಕ್ಕೆ ಬರಬಹುದಾದ ಮತಗಳಿವೆ. ಅವರ ಕುಟುಂಬದವರಿಗೆ ನಿಷ್ಠರಿದ್ದಾರೆ. ಇದರ ಲಾಭ ಪಡೆಯಲು ಮತ್ತು ಜೆಡಿಎಸ್‌ಗೆ ಟಾಂಗ್ ಕೊಡಲು ಡಿಕೆಶಿ, ಗೀತಾ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಯತ್ನ ನಡೆಸಿದ್ದಾರೆನ್ನಲಾಗುತ್ತಿದೆ. ಆದರೆ ಈ ಬಗ್ಗೆ ಜಿಲ್ಲೆಯಲ್ಲಿ ಯಾರಿಗೂ ಗೊತ್ತಿಲ್ಲ. ಏಕೆಂದರೆ ಈ ಬೆಳವಣಿಗೆ ನಡೆದಿದ್ದು ಬೆಂಗಳೂರು ಮಟ್ಟದಲ್ಲಿ.
ಮೊನ್ನೆ ಈ ವಿಷಯ ಬೆಳಕಿಗೆ ಬಂದ ನಂತರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಂಚಲನ ಉಂಟಾಗಿದೆ. ಏಕೆಂದರೆ, ಕಳೆದ ಬಾರಿ ಪಕ್ಷದಿಂದ ಸ್ಪರ್ಧಿಸಿದ್ದ ಮಂಜುನಾಥ ಭಂಡಾರಿ ಅವರೇ ಮುಂದಿನ ಲೋಕಸಭೆಯ ಉಮೇದುವಾರ ಎಂಬ ವಿಚಾರ ಎಲ್ಲರಲ್ಲಿತ್ತು. ಭಂಡಾರಿ ಸಹ ಇದನ್ನೇ ಕಾಯ್ದುಕೊಂಡು ಬಂದಿದ್ದರು. ಡಿಕೆಶಿ ಅವರ ಯತ್ನ ಎಷ್ಟರ ಮಟ್ಟಿಗೆ ಫಲಿಸಲಿದೆ ಎನ್ನುವುದರ ಮೇಲೆ ಮುಂದಿನ ಬೆಳವಣಿಗೆ ನಡೆಯಲಿದೆ. ಆದರೆ ಸುಖಾಸುಮ್ಮನೆ ಈ ವಿಷಯವನ್ನು ರಾಹುಲ್ ಗಾಂಧಿಗೆ ಹೇಳಿರಲಿಕ್ಕಿಲ್ಲ. ಇದಕ್ಕೆಲ್ಲ ಪೂರ್ವತಯಾರಿ ನಡೆದಿರಬಹುದೆಂಬ ವಿಶ್ಲೇಷಣೆ ಪಕ್ಷದ ವಲಯದಿಂದ ಕೇಳಿಬರುತ್ತಿದೆ.
 ಸಮಯ ಸಂದರ್ಭ ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಯೋಚನೆಯೂ ಇರಬಹುದು. ಆದರೆ ಒಂದಂತೂ ಸತ್ಯ. ಬಂಗಾರಪ್ಪ ಅವರ ಹೆಸರಿನಲ್ಲಿ ಜಿಲ್ಲೆಯಲ್ಲಿ ಇನ್ನೂ ರಾಜಕೀಯ ಶಕ್ತಿ ಇದೆ ಎನ್ನುವುದನ್ನು ಅರಿತೇ ಈ ಬೆಳವಣಿಗೆ ನಡೆದಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇಲ್ಲಿ ಗಮನಿಸಬೇಕಾದ ಇನ್ನೊಂದು ಮಹತ್ವದ ಅಂಶವೆಂದರೆ, ಡಿಕೆಶಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ ಬಳಸಿದಂತೆ ಕಂಡುಬರುತ್ತಿದೆ.
 ಸೊರಬದಲ್ಲಿ ಕಾಂಗ್ರೆಸ್‌ಗೆ ಚುನಾವಣೆಗೆ ಸ್ಪರ್ಧಿಸಲು ಸಮರ್ಥ ಉಮೇದುವಾರರಿರಲಿಲ್ಲ. ಕುಮಾರ್ ಅವರಿಂದ ತೆರವಾದ ಸ್ಥಾನಕ್ಕೆ ಅರ್ಹರಿಲ್ಲ. ಒಂದು ವೇಳೆ ಮಧು ಕಾಂಗ್ರೆಸ್ ಸೇರದಿದ್ದರೂ ಗೀತಾ ಮೂಲಕ ಕಾಂಗ್ರೆಸ್‌ಗೆ ಬಲಕೊಡುವ ಕೆಲಸ ಅಥವಾ ಗೆಲ್ಲಿಸಲು ಇದು ಅನುಕೂಲವಾಗಲಿದೆ. ಕುಮಾರ್ ಕಾಂಗ್ರೆಸ್ ತ್ಯಜಿಸಿದ ನಂತರ ಶಾಸಕ  ಮಧು ಅವರನ್ನು ಕರೆತರುವ ಯತ್ನ ನಡೆದಿತ್ತು. ಆದರೆ ಅದೇಕೋ ನಂತರ ಅಲ್ಲಿಗೇ ನಿಂತಿದೆ. ಚುನಾವಣೆ ಹತ್ತಿರ ಬಂದಂತೆ ಇದು ಫಲಿಸಲೂಬಹುದು. ಅದರ ಮುನ್ನೆಲೆಯಾಗಿ ಗೀತಾ ಅವರಿಗೂ ಟಿಕೆಟ್ ಕೊಡಬೇಕೆಂಬ ಬೇಡಿಕೆಯನ್ನು ಮಧು ಇಟ್ಟಿರಬಹುದು ಎಂಬ ಮಾತು ಕೇಳಿಬರಲಾರಂಭಿಸಿದೆ.
ಕೆಪಿಸಿಸಿಯಲ್ಲಿ ಡಿ ಕೆ ಶಿವಕುಮಾರ್ ಅವರ ನಿರ್ಧಾರಗಳಿಗೆ ಸದಾ ಮನ್ನಣೆ ಇರುವುದರಿಂದ ಈ ಹೇಳಿಕೆಗೆ ಇನ್ನಷು ಮಹತ್ವ ಬಂದಿದೆ. ಜಿಲ್ಲಾ ಕಾಂಗ್ರೆಸ್ ನಾಯಕರು ಗೀತಾ ಕಾಂಗ್ರೆಸ್‌ಗೆ ಬಂದರೆ ಸ್ವಾಗತ, ಕೆಪಿಸಿಸಿ  ನಿರ್ಧಾರಕ್ಕೆ ನಾವು ಬದ್ಧ ಎನ್ನುತ್ತಿದ್ದಾರೆ. ಈ ಮಧ್ಯೆ ಮಂಜುನಾಥ ಭಂಡಾರಿ ಅವರಿಗೆ ಯಾವ ಹುದ್ದೆ ಅಥವಾ ಸ್ಥಾನದ ಭರವಸೆ ನೀಡಲಾಗಿದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
          ..............................

Thursday, 1 June 2017

ಎರಡನೆಯ ಹಂತದಲ್ಲಿ  ಆಗಮಿಸಿದ್ದು 
ಕೇವಲ 6 ಸರ್ಕಾರಿ ಸಿಟಿ ಬಸ್‌ಗಳು ! 

ಪಾಸ್ ಸೌಲಭ್ಯ ಕಲ್ಪಿಸಿಲ್ಲ
ಇಲ್ಲಿಯವರೆಗೂ ವಿದ್ಯಾರ್ಥಿಗಳಿಗಾಗಲಿ, ನಾಗರಿಕರಿಗಾಗಲಿ ಪಾಸ್ ಸೌಲಭ್ಯವನ್ನು ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ಕಲ್ಪಿಸಿಲ್ಲ. ಪೂರ್ಣ ಪ್ರಮಾಣದಲ್ಲಿ ಬಸ್‌ಗಳು ರಸ್ತೆಗಿಳಿದ ನಂತರ ಪಾಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ. ಮೂಲಗಳು ಹೇಳುತ್ತ್ತಿವೆ. ಸರ್ಕಾರಿ ಸಿಟಿ ಬಸ್‌ಗಳ ಸೇವೆ ಕಲ್ಪಿಸಿ, ಪಾಸ್ ಸೌಲಭ್ಯ ನೀಡಿ ಎಂದು ನಾಗರಿಕರೇ ಆಗ್ರಹಿಸುತ್ತಿದ್ದಾರೆ. ಆದರೆ ಕೆ.ಎಸ್.ಆರ್.ಟಿ.ಸಿ. ಹಾಗೂ ಜಿಲ್ಲಾಡಳಿತಕ್ಕೆ ಈ ಬಗ್ಗೆ ಯಾವುದೇ ಆಸಕ್ತಿಯಿಲ್ಲದಂತೆ ಕಾಣುತ್ತಿದೆ. ಬಸ್ ಓಡಿಸಿ ಎಂದರೂ ಕೆಲವು ಬಡಾವಣೆಗೆ ಓಡಿಸುತ್ತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಿವಮೊಗ್ಗ,  : ಎರಡನೇ ಹಂತದಲ್ಲಿ ಜೆನರ್ಮ್ ಯೋಜನೆಯಡಿ  ಶಿವಮೊಗ್ಗ ನಗರಕ್ಕೆ ಮತ್ತೆ 20 ಬಸ್‌ಗಳು ಮಂಜೂರಾಗಲಿವೆ ಎಂದು ಸಾರಿಗೆ ಇಲಾಖೆಯ ಮೂಲಗಳು ಈ ಹಿಂದೆ ಹೇಳಿದ್ದವಾದರೂ ಪ್ರಸ್ತುತ ನಗರಕ್ಕೆ ಆಗಮಿಸಿರುವ ಬಸ್‌ಗಳ ಸಂಖ್ಯೆ ಕೇವಲ ಆರು ಮಾತ್ರ. ಇದನ್ನು ಕೆ.ಎಸ್.ಆರ್.ಟಿ.ಸಿ. ಮೂಲಗಳು ಕೂಡ ಖಚಿತಪಡಿಸಿವೆ.
ಹೊಸದಾಗಿ ಆಗಮಿಸಿರುವ ಬಸ್‌ಗಳಿಗೆ ಚಾಲಕ ಹಾಗೂ ನಿರ್ವಾಹಕರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಹೊಸ ಬಸ್‌ಗಳನ್ನು ಸಂಚಾರಕ್ಕೆ ಬಿಡಲಾಗುವುದು ಎಂದು ಮೂಲಗಳು ಹೇಳುತ್ತವೆ.
ಸರ್ಕಾರಿ ಸಿಟಿ ಬಸ್‌ಗಳ ಸಂಚಾರ ಕೂಡ ಆರಂಭವಾಗಿದೆ. ಶಿವಮೊಗ್ಗಕ್ಕೆ ಮಂಜೂರಾಗಿದ್ದ 65 ಸಿಟಿ ಬಸ್‌ಗಳಲ್ಲಿ ಪ್ರಥಮ ಹಂತದಲ್ಲಿ 20 ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ಕೂಡ ತೋರಿಸಲಾಗಿದೆ.  ಕೇವಲ 10 ಬಸ್‌ಗಳು ಮಾತ್ರ ನಗರದ ವಿವಿಧ ಬಡಾವಣೆಯಲ್ಲಿ ಸಂಚರಿಸುತ್ತಿವೆ.  ಬಸ್‌ಗಳ ಚಾಸ್ಸಿ ಉದ್ದವಿದೆ ಎಂಬ ಕಾರಣಕ್ಕೆ ಉಳಿದ 10 ಬಸ್‌ಗಳನ್ನು ಶಿವಮೊಗ್ಗ-ಭದ್ರಾವತಿ ನಗರಗಳ ನಡುವೆ ಓಡಿಸಲಾಗುತ್ತಿದೆ.
   ನಗರಕ್ಕೆ ಸರ್ಕಾರಿ ಸಿಟಿ ಬಸ್ ಮಂಜೂರು ಆದ ನಂತರ  ಸರ್ಕಾರದ ಹಂತದಲ್ಲಿ ಲಾಬಿ ನಡೆಸಿ, ಶತಾಯಗತಾಯ ಸರ್ಕಾರಿ ಸಿಟಿ ಬಸ್‌ಗಳು ಓಡದಂತೆ ಮಾಡುವ ಹುನ್ನಾರ ನಡೆಸಿದ್ದ ಆರೋಪಗಳು ಈ ಹಿಂದೆ ಕೇಳಿಬಂದಿದ್ದವು. ಇದು ನಿಜವೆಂಬಂತೆ ಸರ್ಕಾರಿ ಸಿಟಿ ಬಸ್ ಓಡಿಸಲು ಆಡಳಿತ ವ್ಯವಸ್ಥೆ ಯಾವುದೇ ಕ್ರಮಕೈಗೊಳ್ಳದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿತ್ತು. ಸರ್ಕಾರಿ ಸಿಟಿ ಬಸ್‌ಗೆ ಪ್ರತ್ಯೇಕ ಬಸ್ ಟರ್ಮಿನಲ್, ವರ್ಕ್‌ಶಾಪ್ ಹಾಗೂ ಡಿಪೋ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾದರೂ ಅಧಿಕಾರಿಗಳು ಅನುದಾನದ ಸದ್ಬಳಕೆಗೆ ಮುಂದಾಗಿರಲಿಲ್ಲ. ಇದರಿಂದ ಅನುದಾನ ವಾಪಾಸ್ ಹೋಗುವಂತಾಗಿತ್ತು. ಮತ್ತೊಂದೆಡೆ ಸಂತೆಕಡೂರು ಗ್ರಾಮದಲ್ಲಿ ಸರ್ಕಾರಿ ಸಿಟಿ ಬಸ್‌ಗೆ 8 ಎಕರೆ ಸರ್ಕಾರಿ ಭೂಮಿಯನ್ನು ಜಿಲ್ಲಾಡಳಿತ ರಿಯಾಯ್ತಿ ಮೊತ್ತದಲ್ಲಿ ಮಂಜೂರು ಮಾಡಿತ್ತು.
ಜಿಲ್ಲಾಡಳಿತ ನಿಗದಿ ಮಾಡಿದ್ದ ಅತ್ಯಲ್ಪ ಮೊತ್ತ ಪಾವತಿಸಿ ಜಮೀನು ವಶಕ್ಕೆ ಪಡೆಯಲು ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಮುಂದಾಗಿರಲಿಲ್ಲ. ಯೋಜನೆ ಹಳ್ಳ ಹಿಡಿಯುತ್ತಿರುವುದರ ಮಾಹಿತಿ ಅರಿತ ಕೆಲ ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸಿದ್ದವು. ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ್ಯವಹಿಸುತ್ತಿರುವ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ನಾಗರಿಕರ ಒತ್ತಡಕ್ಕೆ ಮಣಿದ ಸರ್ಕಾರವು ಕೊನೆಗೂ ಶಿವಮೊಗ್ಗ ನಗರದಲ್ಲಿ ಸರ್ಕಾರಿ ಸಿಟಿ ಬಸ್ ಸಂಚಾರಕ್ಕೆ ಆದೇಶ ಹೊರಡಿಸಿತ್ತು. ಪ್ರಥಮ ಹಂತವಾಗಿ 20 ಬಸ್ ಸಂಚಾರಕ್ಕೆ ಅನುಮತಿ ನೀಡಿತ್ತು.
ಖಾಸಗಿ ಲಾಬಿಗೆ ಮಣಿದರೇ?
  ಪ್ರಸ್ತುತ ಸರ್ಕಾರಿ ಸಿಟಿ ಬಸ್‌ಗಳ ಸ್ಥಿತಿಗತಿ ಗಮನಿಸಿದರೆ ಇಡೀ ಯೋಜನೆ ಹಳ್ಳ ಹಿಡಿಯುವಂತೆ ಮಾಡುವ ವ್ಯವಸ್ಥಿತ ಹುನ್ನಾರಗಳು ನಡೆಯುತ್ತಿರುವ ಅನುಮಾನಗಳು ನಾಗರಿಕ ವಲಯದಲ್ಲಿ ವ್ಯಕ್ತವಾಗಲಾರಂಭಿಸಿವೆ. 65 ಬಸ್‌ಗಳು ಶಿವಮೊಗ್ಗಕ್ಕೆ ಬಿಡುಗಡೆಯಾಗಲು ಎರಡು ವರ್ಷವಾದರೂ ಸರಿ, ಅವು ಬರಲೇಬೇಕು. ಆದರೆ ಈಗ ಮಂಜೂರಾಗಿ ಎರಡು ವರ್ಷ ಕಳೆದಿದೆ.  ನಾಲ್ಕಾರು ತಿಂಗಳಿಗೆ 8-10 ಬಸ್ ಬರುತ್ತಿವೆ. ಇದು ಖಾಸಗಿ ಲಾಬಿಯ ಪ್ರಭಾವವನ್ನು ಎತ್ತಿತೋರಿಸುತ್ತಿದೆ. ಖಾಸಗಿ ಬಸ್ ಮಾಲಕರು ಎಷ್ಟು ಪ್ರಭಾವಿಗಳೆಂದರೆ ಈ ಯೋಜನೆ ಮಂಜೂರಾದ ಕ್ಷಣವೇ ಅದನ್ನು ಸ್ಥಗಿತಗೊಳಿಸಲು ಯತ್ನಿಸಿದರು. ಅದು ಸಾಧ್ಯವಾಗದಾದಾಗ ಬಸ್‌ಗಳು ಬಾರದಂತೆ ವಿಳಂಬ ಮಾಡಿಸುವಲ್ಲಿ ಕೈಚಳಕ  ತೋರಿಸಿದ್ದಾರೆ.
ಇದಕ್ಕೆಲ್ಲಾ ಜನಪ್ರತಿನಿಧಿಗಳ, ಅಧಿಕಾರಿಗಳ ಸಹಭಾಗಿತ್ವ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಖಾಸಗಿಯವರು ನಗರ ಸಾರಿಗೆ ತಮ್ಮ ಕೈಯಲ್ಲಿ ಇರಬೇಕೆಂದು ಬಯಸುತ್ತಿದ್ದಾರೆ. ಇಲ್ಲಿ  ಪ್ರಯಾಣಿಕರು ಈ ಬಸ್‌ನಲ್ಲಿ  ಮತ್ತು ಬಸ್‌ನಿಂದ ಅನುಭವಿಸುತ್ತಿರುವ ಕಿರುಕುಳ, ತೊಂದರೆ, ಸಿಬ್ಬಂದಿಗಳ ಬೇಜವಾಬ್ದಾರಿ ಮತ್ತು ಉಡಾಫೆ ವರ್ತನೆ ಗಮನಿಸಿದರೆ ಯಾರಿಗೂ ಈ ಖಾಸಗಿ ಬಸ್ ಬೇಡ ಎಂದೆನಿಸದೆ ಇರಲಾರದು. ಕಾನೂನು ಇರುವುದೇ ಗಾಳಿಗೆ ತೂರಲು ಎನ್ನುವುದು ಇವರ ನಿಲುವು. ಇವನ್ನೆಲ್ಲ ಮಟ್ಟ ಹಾಕಬೇಕಾದರೆ ಶಾಸಕರು ಮೊದಲು ಜೆನರ್ಮ್ ಸಂಚಾರಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಬೇಕಿತ್ತು ಎನ್ನುವುದು ಪ್ರಯಾಣಿಕರ ವಾದ. ಎಷ್ಟೋ ಬಡಾವಣೆಗಳು ತಮ್ಮಲ್ಲಿಗೆ ಜೆನರ್ಮ್ ಬಸ್  ಬಿಡಿ ಎಂದು ಡಿಸಿಗೆ, ಶಾಸಕರಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಅವರ‌್ಯಾರೂ ಇದನ್ನು ಗಮನಿಸುತ್ತಿಲ್ಲ.
ತಾವು ಕಳೆದುಕೊಳ್ಳುವುದು ಏನೂ ಇಲ್ಲವಾದರೂ ಸರ್ಕಾರಿ ಸವಲತ್ತನ್ನು ಜನರಿಗೆ ನೀಡಲು ಹಿಂದೇಟು ಏಕೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಶಾಸಕರು ಕೊಡಬೆಕಿದೆ. ಇಲ್ಲವಾದಲ್ಲಿ   ಖಾಸಗಿಯವರ ಲಾಬಿಗೆ ಮಣಿದಿದ್ದಾರೆಂಬ ಬಲವಾದ ಆರೋಪವನ್ನು ಹೊರಬೇಕಾಗುತ್ತದೆ. . ಮತದಾರರ ನಿರೀಕ್ಷೆ ಹುಸಿ ಮಾಡದೆ ಲಾಬಿಗೆ ಮಣಿಯದೆ  ಅವಶ್ಯ ಇರುವ ಮತ್ತು ನಗರದಿಂದ ಹೊರಭಾಗದಲ್ಲಿರುವ ಬಡಾವಣೆಗಳಿಗೆ ಜೆನರ್ಮ್ ಬಸ್ ಸೌಕರ್ಯ ಕಲ್ಪಿಸಬೇಕೆನ್ನುವುದು ಜನರ ಆಗ್ರಹ.
  
-------------------------------

Tuesday, 30 May 2017

ಪೊಲೀಸರಿಂದ ಲರ್ಕಿಂಗ್ ಬೀಟ್, ಗುಡ್ ಮಾರ್ನಿಂಗ್ ಬೀಟ್ 
 ಅಪರಾಧ ಕೃತ್ಯ ತಡೆಗೆ ಪೊಲೀಸ್ ಇಲಾಖೆಯಿಂದ ವಿನೂತನ ಹೆಜ್ಜೆ



ಶಿವಮೊಗ್ಗ : ರಾತ್ರಿ ಮತ್ತು ಬೆಳಗಿನ ಜಾವ ನಡೆಯುವ ಅಪರಾಧ ಕೃತ್ಯಗಳನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆಯು ನಗರದಲ್ಲಿ ’ಲರ್ಕಿಂಗ್ ಬೀಟ್’ ವ್ಯವಸ್ಥೆಯನ್ನು ಈಗಾಗಲೆ ಜಾರಿಗೊಳಿಸಿದ್ದು, ಇನ್ನಷ್ಟು  ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಿದೆ.
 ಪೊಲೀಸ್ ಇಲಾಖೆಯಲ್ಲಿರುವ ಗಸ್ತು ವ್ಯವಸ್ಥೆಗಳಲ್ಲಿ ’ಲರ್ಕಿಂಗ್ ಬೀಟ್’ ಕೂಡ ಒಂದಾಗಿದೆ. ಈ ಬೀಟ್ ವ್ಯವಸ್ಥೆಯಲ್ಲಿ ಪೊಲೀಸರು ರಾತ್ರಿ 12 ಗಂಟೆಯಿಂದ ಮುಂಜಾನೆಯವರೆಗೂ ಆಯಕಟ್ಟಿನ ಪ್ರದೇಶಗಳಲ್ಲಿ ಮಫ್ತಿ ಬಟ್ಟೆ ತೊಟ್ಟು ಕಾರ್ಯನಿರ್ವಹಣೆ ಮಾಡುತ್ತಾರೆ. ಕಳ್ಳಕಾಕರಿಗೆ ಇವರು ಪೊಲೀಸರೆಂಬ ಅನುಮಾನಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಾರೆ. ಇದನ್ನು ಇಂಗ್ಲಿಷ್‌ನಲ್ಲಿ ’ಲರ್ಕಿಂಗ್ ಬೀಟ್’ ಎಂದು ಕರೆಯಲಾಗುತ್ತದೆ.
’ಪೊಲೀಸರು ಸಮವಸ್ತ್ರ ತೊಟ್ಟು ಓಡಾಡುವುದನ್ನು ಕಳ್ಳಕಾಕರು-ಕಿಡಿಗೇಡಿಗಳು ಗಮನಿಸುತ್ತಾರೆ. ಪೊಲೀಸರು ಹೋಗುವವರಗೆ ಕಾದು ನಂತರ ದುಷ್ಕೃತ್ಯ ನಡೆಸಿದ ಉದಾಹರಣೆಗಳು ಸಾಕಷ್ಟಿವೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಬೀಟ್‌ಗಳಲ್ಲಿ ’ಲರ್ಕಿಂಗ್ ಬೀಟ್’ ಅತ್ಯಂತ ಮಹತ್ವದ್ದಾಗಿದೆ. ಪೊಲೀಸರಿಲ್ಲವೆಂಬ ಕಾರಣದಿಂದ ಕಳ್ಳಕಾಕರು, ದುಷ್ಕರ್ಮಿಗಳು ದುಷ್ಕೃತ್ಯ ನಡೆಸಲು ಮುಂದಾಗುತ್ತಾರೆ. ಇಂತಹ ವೇಳೆ ಮಫ್ತಿ ಬಟ್ಟೆ ತೊಟ್ಟು, ಪೊಲೀಸರೆಂಬ ಅನುಮಾನ ಬಾರದ ರೀತಿಯಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ತಕ್ಷಣವೇ ಕಿಡಿಗೇಡಿಗಳ ದುಷ್ಕೃತ್ಯ ಪತ್ತೆ ಹಚ್ಚಿ ತಡೆಗಟ್ಟುತ್ತಾರೆ. ಜೊತೆಗೆ ದುಷ್ಕರ್ಮಿಗಳನ್ನು ಸುಲಭವಾಗಿ ಸೆರೆ ಹಿಡಿಯುತ್ತಾರೆ.
ಇದರಿಂದ ಕಿಡಿಗೇಡಿಗಳು ಭಯಭೀತರಾಗಿ ದುಷ್ಕೃತ್ಯ ನಡೆಸಲು ಹಿಂಜರಿಯುತ್ತಾರೆ. ರಾತ್ರಿ ವೇಳೆ ರಸ್ತೆಗಿಳಿಯಲು ಅಂಜುತ್ತಾರೆ. ಇದರಿಂದ ಸಾಮಾನ್ಯವಾಗಿ ರಾತ್ರಿ ವೇಳೆ ನಡೆಯುವ ಅಪರಾಧ ಕೃತ್ಯಗಳು ಇಳಿಮುಖವಾಗುತ್ತವೆ’ ಎಂದು ಹಿರಿಯ  ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತ್ತಾರೆ.
’ಶಿವಮೊಗ್ಗ ನಗರದ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ’ಲರ್ಕಿಂಗ್ ಬೀಟ್’ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದೆ. ಸಿಬ್ಬಂದಿಗಳ ಕೊರತೆಯ ಹಿನ್ನೆಲೆಯಲ್ಲಿ ಕೆಲವು ಠಾಣೆಗಳಲ್ಲಿ ಈ ಬೀಟ್ ವ್ಯವಸ್ಥೆಗೆ ನಿಯೋಜನೆ ಮಾಡಿರುವ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಿದೆ. ಉಳಿದಂತೆ ಪ್ರಮುಖ ಠಾಣಾ ವ್ಯಾಪ್ತಿಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಈ ಬೀಟ್ ವ್ಯವಸ್ಥೆಗೆ ತೊಡಗಿಸಲಾಗಿದೆ’ ಎಂದು ಅವರು ವಿವರಿಸುತ್ತಾರೆ.
ಇಳಿಮುಖ: ಈ ಬೀಟ್ ವ್ಯವಸ್ಥೆಯಿಂದ ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ತಡರಾತ್ರಿಯ ನಂತರ ನಡೆಯುತ್ತಿದ್ದ ಅಪರಾಧ ಚಟುವಟಿಕೆಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ. ಯಾವ ರೂಪದಲ್ಲಿ, ಎಲ್ಲಿ ಪೊಲೀಸರು ಬರುತ್ತಾರೋ ಎಂಬ ಆತಂಕದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ದುಷ್ಕೃತ್ಯ ನಡೆಸಲು ಹಿಂಜರಿಯುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ಹೇಳುತ್ತವೆ.
’ಗುಡ್ ಮಾರ್ನಿಂಗ್ ಬೀಟ್:
  ಮುಂಜಾನೆಯ ವೇಳೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯದಲ್ಲಿರುವುದಿಲ್ಲ ಎಂಬುವುದನ್ನರಿತು  ಕಳ್ಳರುಮ ಕಿಡಿಗೇಡಿಗಳು ತಮ್ಮ ದುಷ್ಕೃತ್ಯಗಳಿಗೆ ಮುಂಜಾನೆಯ ಸಮಯವನ್ನೇ ಆಯ್ದುಕೊಳ್ಳುತ್ತಿದ್ದರು. ಮುಂಜಾನೆಯ ವೇಳೆಯೇ ಕೆಲವೊಮ್ಮೆ ಹೆಚ್ಚಿನ ಅಪರಾಧ ಕೃತ್ಯಗಳು ವರದಿಯಾಗುತ್ತಿದ್ದವು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆಯು ’ಗುಡ್ ಮಾರ್ನಿಂಗ್’ ಬೀಟ್ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಿದೆ. ಮುಂಜಾನೆ 4 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಪೊಲೀಸರು ನಗರಾದ್ಯಂತ ಗಸ್ತು ನಡೆಸುತ್ತಾರೆ. ಪೊಲೀಸರ ಗಸ್ತು ಹಿನ್ನೆಲೆಯಲ್ಲಿ ಮುಂಜಾನೆಯ ವೇಳೆ ನಡೆಯುತ್ತಿದ್ದ ಅಪರಾಧ ಕೃತ್ಯಗಳ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ.

’ಪೊಲೀಸ್ ಇಲಾಖೆಯಲ್ಲಿ ನಾನಾ ರೀತಿಯ ಗಸ್ತು ವ್ಯವಸ್ಥೆಗಳಿದ್ದು, ಇದರಲ್ಲಿ ’ಲರ್ಕಿಂಗ್ ಬೀಟ್’ ಕೂಡ ಒಂದಾಗಿದೆ. ಈ ಬೀಟ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ತಡರಾತ್ರಿಯ ನಿರ್ದಿಷ್ಟ ಸಮಯಗಳಂದು ಪೊಲೀಸರು ಮಫ್ತಿ ಬಟ್ಟೆಯಲ್ಲಿ ಬೀಡುಬಿಟ್ಟು ಕಿಡಿಗೇಡಿಗಳ ಚಲನವಲನಗಳ ಮೇಲೆ ನಿಗಾ ಇಡಲಿದ್ದಾರೆ. ಈ ಬೀಟ್ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಡರಾತ್ರಿಯ ನಂತರ ನಡೆಯುತ್ತಿದ್ದ ಅಪರಾಧ ಕೃತ್ಯಗಳಲ್ಲಿ ಗಣನೀಯ ಇಳಿಮುಖ ಕಂಡುಬಂದಿದೆ.
-ಡಿವೈಎಸ್‌ಪಿ ಮಂಜುನಾಥ್ ಶೆಟ್ಟಿ.
------------------------------

Friday, 26 May 2017



 ಸ್ವಂತ ವೆಚ್ಚದಲ್ಲಿ ಸಿಮೆಂಟ್ ರಿಂಗ್ ನೀಡಿದ ಪರಿಸರ ಹೋರಾಟಗಾರ



ಶಿವಮೊಗ್ಗ,  : ಪರಿಸರ ಸಂರಕ್ಷಣೆಯ ಪರವಾಗಿ ಹೋರಾಟ ನಡೆಸುವ ಶಿವಮೊಗ್ಗ ನಗರದ ಪರಿಸರ ಹೋರಾಟಗಾರರೊಬ್ಬರು, ಗಿಡ ಬೆಳೆಸಲು ಹಾಗೂ ಸಂರಕ್ಷಿಸಲು ತಮ್ಮ ಸ್ವಂತ ವೆಚ್ಚದಲ್ಲಿಯೇ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರೋರ್ವರಿಗೆ ಸಿಮೆಂಟ್ ರಿಂಗ್‌ಗಳನ್ನು ಖರೀದಿಸಿಕೊಟ್ಟಿದ್ದಾರೆ. ಈ ಮೂಲಕ ಪರಿಸರ ಕಾಳಜಿ ಮೆರೆದು, ಇತರರಿಗೆ ಮಾದರಿಯಾಗಿದ್ದಾರೆ. ಜೊತೆಗೆ ಆಡಳಿತ ವ್ಯವಸ್ಥೆಯ ಕಣ್ತೆರೆಸುವ ಕೆಲಸ ಕೂಡ ಮಾಡಿದ್ದಾರೆ.
 ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಲಕ್ಷಾಂತರ ರೂ. ವೆಚ್ಚದಲ್ಲಿ ಫುಟ್‌ಪಾತ್ ಅಭಿವೃದ್ದಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ಆದರೆ ಗಿಡ ನೆಡಲು ಜಾಗ ಬಿಡದೆ, ಸಂಪೂರ್ಣವಾಗಿ ಫುಟ್‌ಪಾತ್‌ಗೆ ಇಂಟರ್‌ಲಾಕ್ ಟೈಲ್ಸ್ ಅಳವಡಿಸುವ ಕಾರ್ಯವನ್ನು ಗುತ್ತಿಗೆದಾರರು ನಡೆಸುತ್ತಿದ್ದರು. ಇದನ್ನು ಗಮನಿಸಿದ ಪರಿಸರ ಹೋರಾಟಗಾರ ಪರಿಸರ ರಮೇಶ್, ಕಾಮಗಾರಿ ನಿರ್ವಹಣೆ ಮಾಡುತ್ತಿದ್ದ ಗುತ್ತಿಗೆದಾರರ ಕಡೆಯವರೊಂದಿಗೆ ಮಾತನಾಡಿದ್ದಾರೆ. ಈ ಸ್ಥಳದಲ್ಲಿ ಇಂಟರ್‌ಲಾಕ್ ಟೈಲ್ಸ್ ಅಳವಡಿಸುವುದಕ್ಕೂ ಮುನ್ನ, ಗಿಡ ನೆಡಲು ಸಿಮೆಂಟ್ ರಿಂಗ್‌ಗಳನ್ನು ಅಳವಡಿಸಿ ಎಂದು ಮನವಿ ಮಾಡಿದ್ದಾರೆ.
ಆದರೆ ಇದಕ್ಕೆ ಗುತ್ತಿಗೆದಾರನ ಕಡೆಯವರು ಈ ಕುರಿತಂತೆ ತಮಗೆ ಅಧಿಕಾರಿಗಳಿಂದ ಯಾವುದೇ ಸೂಚನೆಯಿಲ್ಲ. ಹಾಗೆಯೇ ತಮ್ಮ ಬಳಿ ಸಿಮೆಂಟ್ ರಿಂಗ್‌ಗಳೂ ಇಲ್ಲವೆಂದು ಹೇಳಿದ್ದಾರೆ. ತತಕ್ಷಣವೇ ಪರಿಸರ ರಮೇಶ್ ಸಾವಿರಾರು ರೂ. ವೆಚ್ಚ ಮಾಡಿ, ಸಿಮೆಂಟ್ ರಿಂಗ್‌ಗಳನ್ನು ಖರೀದಿಸಿ ವಾಹನವೊಂದರಲ್ಲಿ ಕೆಲಸದ ಸ್ಥಳಕ್ಕೆ ತಂದಿದ್ದಾರೆ. ತದನಂತರ ಉಲ್ಟಾ ಹೊಡೆದ ಗುತ್ತಿಗೆದಾರನ ಕಡೆಯವರು, ಈ ರಿಂಗ್ ಅಳವಡಿಸಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳ ಅನುಮತಿ ಬೇಕೆಂದು ಮಾರುತ್ತರ ನೀಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಪರಿಸರ ರಮೇಶ್ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಅಮ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇವರ ಕಾಳಜಿಗೆ ಅಪರ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿ ಕೂಡಲೇ ಪಿಡಬ್ಲ್ಯೂಡಿ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಸಿಮೆಂಟ್ ರಿಂಗ್ ಅಳವಡಿಸಿದ ನಂತರ ಇಂಟರ್‌ಲಾಕ್ ಟೈಲ್ಸ್ ಅಳವಡಿಕೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದರಂತೆ ಗುತ್ತಿಗೆದಾರನು ಸಿಮೆಂಟ್ ರಿಂಗ್ ಅಳವಡಿಕೆ ಮಾಡಿದ್ದಾರೆ.
’ನಗರದ ಫುಟ್‌ಪಾತ್‌ಗಳ ಅಭಿವೃದ್ಧಿ ವೇಳೆ ಕಡ್ಡಾಯವಾಗಿ ಗಿಡಗಳನ್ನು ನೆಡಲು ಸಿಮೆಂಟ್ ರಿಂಗ್‌ಗಳನ್ನು ಅಳವಡಿಸಬೇಕು. ಇದರಿಂದ ಗಿಡಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ. ಗಿಡ ಬೆಳೆಸಲು ಫುಟ್‌ಪಾತ್‌ಗಳನ್ನು ಹಾಳಾಗದಂತೆ ನೋಡಿಕೊಳ್ಳಲು ಸಾಧ್ಯವಾಗಲಿದೆ. ಈ ರೀತಿಯ ಅಭಿವೃದ್ದಿ ಯೋಜನೆಗಳ ಅನುಷ್ಠಾನಕ್ಕೂ ಮುನ್ನ ಸಂಬಂಧಿಸಿದ ಇಲಾಖೆಗಳು ಗಿಡ-ಮರಗಳ ಸಂರಕ್ಷಣೆಗೆ ಟೆಂಡರ್‌ನಲ್ಲಿಯೇ ಪ್ರತ್ಯೇಕ ಅನುದಾನ ಮೀಸಲಿಡಬೇಕು. ಪರಿಸರ ಕಾಳಜಿ ಮೆರೆಯಬೇಕು ಎನ್ನುವುದು ಗೊತ್ತಿದ್ದರೂ ಪಿಡಬ್ಲೂಡಿ ಇಲಾಖೆಯವರು ನಿರ್ಲಕ್ಷ್ಯ ವಹಿಸಿದ್ದರು.


ರಸ್ತೆ, ಫುಟ್‌ಪಾತ್ ಅಭಿವೃದ್ಧಿ ವೇಳೆ ಗಿಡ-ಮರಗಳ ಸಂರಕ್ಷಣೆಗೆಂದೇ ಟೆಂಡರ್ ಮೊತ್ತದಲ್ಲಿ ಸೂಕ್ತ ಅನುದಾನವನ್ನು ಮೀಸಲಿಡಬೇಕು. ಇದನ್ನು ಕಡ್ಡಾಯಗೊಳಿಸಬೇಕು. ಅಭಿವೃದ್ದಿಯ ಜೊತೆ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕು. ಇದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂಬುವುದನ್ನು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಬಂಧಿಸಿದ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ಮಾಡಬೇಕು.
- ಪರಿಸರ ರಮೇಶ್ 
---------------------------------------