ಗಾಂಜಾ ಅಮಲಿನಲ್ಲಿ ಮಿಂದೇಳುತ್ತಿರುವ ಯುವಕರು
ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ನಗರದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚುತ್ತಿರುವುದರಿಂದ ಮತ್ತು ಉನ್ನತ ಶಿಕ್ಷಣವೂ ಲಭ್ಯವಿರುವುದರಿಂದ ವಿದ್ಯಾಭ್ಯಾಸಕ್ಕೆ ಹೊರ ಜಿಲ್ಲೆ, ತಾಲೂಕಿನಿಂದ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ಅಮಾಯಕರನ್ನು ಗಾಂಜಾ ದಂಧೆಕೋರರು ಬುಟ್ಟಿಗೆ ಹಾಕಿಕೊಂಡು ಎಗ್ಗಿಲ್ಲದೆ ಮಾರಾಟ ನಡೆಸುತ್ತಿದ್ದಾರೆ. ಒಮ್ಮೆ ಇಂತಹ ಚಟಕ್ಕೆ ಮಾರುಹೋದ ಯುವಕರು ತಮ್ಮ ಸುಂದರ ಯೌವ್ವನವನ್ನು ಕಳೆದುಕೊಳ್ಳುತ್ತಾರೆ. ಇಡೀ ಜೀವನವನ್ನು ಹಾಳುಮಾಡಿಕೊಂಡು, ವಿದ್ಯಾಭ್ಯಾಸಕ್ಕೂ ತಿಲಾಂಜಲಿ ಇತ್ತು ಚಟದ ದಾಸರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ವಿದ್ಯಾಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಮತ್ತು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಚಲನವಲನದ ಬಗ್ಗೆ ಗಮನ ಇಡುವ ಜವಾಬ್ದಾರಿಯನ್ನು ಹೊರಬೇಕಿದೆ.
ಶಿವಮೊಗ್ಗ: ಇವರೆಲ್ಲ 18ರಿಂದ 40ರ ಒಳಗಿನ ವಯೋಮಾನದವರು. ಇವರದ್ದು ಗಾರೆ ಕೆಲಸ, ವಾಹನ ಚಾಲನೆ, ಗುಜರಿ ಅಂಗಡಿಯಲ್ಲಿ , ರಸ್ತೆ ಬದಿ ಮಾರಾಟ. ಹಲವರು ವಿದ್ಯಾರ್ಥಿಗಳು. ಇವರೆಲ್ಲ ತಮ್ಮ ವೃತ್ತಿಯ ಜೊತೆಗೇ ಗಾಂಜಾದ ಅಮಲಿಗೂ ತುತ್ತಾಗಿದ್ದಾರೆ. ಕೇವಲ ಅಮಲಿಗೆ ತಾವೊಬ್ಬರೇ ತುತ್ತಾಗಿದ್ದರೆ ಸುಮ್ಮನಿರಬಹುದಿತ್ತು, ಪೊಟ್ಟಣಗಳಲ್ಲಿ ಮಾರಾಟವನ್ನೂ ಮಾಡುತ್ತಿದ್ದಾರೆ. ಯುವಕರನ್ನು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅಮಲಿಗೆ ತಳ್ಳುತ್ತಿದ್ದಾರೆ.
ಇದು ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಘಟನೆ. ಕಲೆ, ಸಂಸ್ಕೃತಿ ಮೇಳೈಸಿದ, ಹೋರಾಟಗಾರರ ನೆಲೆವೀಡಾದ ಶಿವಮೊಗ್ಗ ಈಗ ಗಾಂಜಾದ ಅಮಲಿನಲ್ಲಿ ತೇಲಾಡುತ್ತಿದೆ.
ನಗರದ ಕೆಲವು ಶಿಕ್ಷಣ ಸಂಸ್ಥೆಯ ಆಸುಪಾಸಿನಲ್ಲಿ ಈ ದಂಧೆ ಯಾವುದೇ ಅಳುಕಿಲ್ಲದೆ ನಡೆಯುತ್ತಿದೆ. ಈ ದಂಧೆಯ ಹಿಂದೆ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದು, ದಂಧೆಕೋರರು ತಮ್ಮದೇ ಆದ ಕಾರ್ಯವ್ಯಾಾಪ್ತಿ ರೂಪಿಸಿಕೊಂಡು ಗಾಂಜಾ ಮಾರಾಟ ನಡೆಸುತ್ತಿದ್ದಾರೆ. ಗಾಂಜಾ ಸೊಪ್ಪು ತರುವುದರಿಂದ ಹಿಡಿದು ಅವುಗಳನ್ನು ಪೊಟ್ಟಣಗಳಲ್ಲಿ ತುಂಬಿ, ಮಾರಾಟ ಅಡ್ಡೆಗಳಿಗೆ ರವಾನಿಸುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ.
ದೇಶದ ಭವ್ಯ ಭವಿಷ್ಯತ್ತಿನ ಪ್ರಜೆಯಾಗಬೇಕಾದವರು ಗಾಂಜಾ ನಿಶೆಯಲ್ಲಿ ತೂರಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಿವಿಧ ಆಮಿಶ ಒಡ್ಡಿ, ಅದರ ನಿಶೆ, ನಂತರದ ಸ್ಥಿತಿಯನ್ನು ವಿವರಿಸಿ ಹಾಸ್ಟೆಲ್ ಬಳಿ ಇವುಗಳ ಮಾರಾಟ, ಪೂರೈಕೆ ಮಾಡಲಾಗುತ್ತಿದೆ. ಮೊದಮೊದಲು ಹೊರರಾಜ್ಯದ ವಿದ್ಯಾರ್ಥಿಗಳನ್ನು ಮಾತ್ರ ಆಕರ್ಷಿಸುತ್ತಿದ್ದ ಮಾದಕ ವಸ್ತು ಈಗ ಸ್ಥಳೀಯರನ್ನೂ ಬಲಿತೆಗೆದುಕೊಳ್ಳುತ್ತಿದೆ. ಇದರ ನಿಗ್ರಹಕ್ಕೆ ಪೊಲೀಸ್ ಇಲಾಖೆ ಈಗ ಮುಂದಾಗಿದೆ.
ಕೇರಳದ ಮಾಫಿಯಾ ಸಹಾಯದಿಂದ ಕೆಲವರು ಗಾಂಜಾ ಬೆಳೆ, ಮಾರಾಟ, ಪೂರೈಕೆ ಮಾಡುವುದರ ಜೊತೆಗೆ ಇಲ್ಲಿನ ರೈತರನ್ನೂ ಪುಸಲಾಯಿಸಿ, ಹೆಚ್ಚಿನ ಲಾಭದ ಆಮಿಷ ಒಡ್ಡಿ ಗಾಂಜಾ ಹೆಚ್ಚಲು ಕಾರಣರಾಗಿದ್ದಾರೆನ್ನುವ ಅಂಶ ಪೊಲೀಸ್ ಇಲಾಖೆಗೆ ಗೊತ್ತಿದೆ. ಇದರ ಕಠಿಣ ನಿಗ್ರಹಕ್ಕೆ ಈಗ ಅಗತ್ಯ ಕ್ರಮವನ್ನು ಜರುಗಿಸಲು ಸಕಾಲವಾಗಿದೆ.
ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು ಭಾರೀ ದೊಡ್ಡ ಪ್ರಮಾಣದಲ್ಲಿ ಬಲಿಯಾಗುತ್ತಿದ್ದಾರೆ. ಜೊತೆಗೆ ದಂಧೆಕೋರರೇ ನೇರವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಬೀಡುಬಿಟ್ಟು ವಿದ್ಯಾರ್ಥಿಗಳನ್ನು ಗಾಂಜಾ ಬಲೆಗೆ ಬೀಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಗಾಂಜಾ ಚಟಕ್ಕೆ ದಾಸರಾಗಿರುವ ಕೆಲವು ವಿದ್ಯಾರ್ಥಿಗಳನ್ನು ಇವರು ತಮ್ಮ ದಂಧೆಗೆ ಏಜೆಂಟ್ಗಳನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.
ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಾತ್ರವಲ್ಲ, ಕೆಲವು ಸಣ್ಣಪುಟ್ಟ ಓಣಿಗಳಲ್ಲಿ, ಹೊಡೆಲ್ಗಳಲ್ಲಿ, ಬೀಡಾ ಅಂಗಡಿಗಳಲ್ಲಿ, ಯುವಕರ ಗುಂಪು ಸೇರಿ ಹರಟೆ ಹೊಡೆಯುವ, ಕಾಲ ಕಳೆಯುವ ಸ್ಥಳದಲ್ಲಿ, ನಿರ್ಜನ ಪ್ರದೇಶದಲ್ಲಿರುವ ಶಾಲಾ-ಕಾಲೇಜು ಮೈದಾನಗಳಲ್ಲಿ ಗಾಂಜಾ ದಂಧೆಕೋರರು ವ್ಯವಹಾರ ನಡೆಸುತ್ತಿರುವ ಮಾಹಿತಿಗಳಿವೆ. ಕುತೂಹಲಕ್ಕಾಗಿ ಗಾಂಜಾ ಸೇವನೆಗೆ ಮುಂದಾಗುವ ವಿದ್ಯಾರ್ಥಿಗಳು ಇದರ ದಾಸರಾಗಿ ಪರಿವರ್ತಿತರಾಗುತ್ತಿದ್ದಾರೆ. ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಈ ದಂಧೆ ನಡೆಯುತ್ತಿದ್ದರೂ ಪೊಲೀಸರು ಈವರೆಗೆ ಸುಮ್ಮನಿದ್ದುದೇಕೆ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರತೊಡಗಿದೆ.
ಮಾದಕ ವಸ್ತುಗಳ ಪಟ್ಟಿಯಲ್ಲಿ ಸೇರುವ ಗಾಂಜಾ ನಿಷೇಧಿತ ಬೆಳೆ. ಇದನ್ನು ಬೆಳೆಯುವುದು ಮತ್ತು ಮಾರಾಟ ಮಾಡುವುದು ಎರಡೂ ಅಪರಾಧ. ಆದರೂ ಈ ದಂಧೆ ನಡೆಯುತ್ತಿದೆ ಎಂದರೆ ಇದನ್ನು ಪೋಷಿಸಿಕೊಂಡು ಬರಲಾಗುತ್ತಿದೆ ಎಂದೇ ಅರ್ಥ. ಯುವಕರನ್ನು ದಾರಿತಪ್ಪಿಸುವ ಈ ದಂಧೆಕೋರರನ್ನು ಪೊಲೀಸರು ಪತ್ತೆ ಮಾಡಬೇಕು. ಚಟಕ್ಕೆ ಒಮ್ಮೆ ಅಂಟಿಕೊಂಡು ಇಡೀ ಜೀವನವನ್ನೇ ಹಾಳುಮಾಡಿಕೊಳ್ಳುವ ಯುವಕರ ಬಗ್ಗೆ ಗಮನಹರಿಸಬೇಕಿದೆ. ವಿಶೇಷವಾಗಿ ವಿದ್ಯಾಭ್ಯಾಸ, ಕೆಲಸದ ನಿಮಿತ್ತ ಮನೆಯಿಂದ ದೂರ ಇರುವ ಮಕ್ಕಳಲ್ಲಿ ಇಂತಹ ಚಟಗಳು ಮಿತ್ರರಿಂದ ಅಂಟುವುದು ಬಹು ಬೇಗ. ಅಂತಹವರನ್ನು ಹುಡುಕಿಯೇ ಈ ದಂಧೆಕೋರರು ತಮ್ಮ ಕೆಲಸ ನಿರ್ವಹಿಸುತ್ತಾರೆ.
ಚಟಕ್ಕೆ ಅಂಟಿಕೊಂಡವರನ್ನು ಹೊರತರುವ ಜೊತೆಗೆ ಮಾರಾಟ ಮಾಡುವವರನ್ನು ಬಂಧಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮುಂದುವರೆಸಬೇಕಿದೆ.
.................................


No comments:
Post a Comment