Friday, 14 October 2016

ಅತೃಪ್ತ ಕಾಂಗ್ರೆಸ್ಸಿಗರತ್ತ ದೇವೇಗೌಡರ ನೋಟ
.................................................................




 ದೇವೇಗೌಡರೇ ಹಾಗೆ. ಹೊಸಬರನ್ನು ಪಕ್ಷಕ್ಕೆ ಸೇರಿಸಿಕೊಂಡು ಪಕ್ಷ ಬಲಿಷ್ಠಗೊಳಿಸುವ ಜಾಯಮಾನದವರಲ್ಲ. ಏಕೆಂದರೆ ಪಕ್ಷದ ಅಧಿಕಾರದ ಚುಕ್ಕಾಣಿ ಕುಟುಂಬದಿಂದ ಕೈತಪ್ಪಬಾರದೆನ್ನುವ ನಿಲುವಿನವರು. ಇದಕ್ಕಾಗಿ ಮತ್ತೆ ಮತ್ತೆ ಪಕ್ಷ ಬಿಟ್ಟು ಹೋದವರನ್ನೇ ಕರೆತರುತ್ತಾರೆ. ಇಲ್ಲಿಗೆ ಬರುವ ಅತೃಪ್ತರು ಸಹ ಕೆಲವೇ ತಿಂಗಳಲ್ಲಿ ಮತ್ತೆ ಅತೃಪ್ತರಾಗಿ ಬೇರೊಂದು ಪಕ್ಷಕ್ಕೆ ಹೋಗುತ್ತಾರೆ. ಆಯಾರಾಂ ಗಯಾರಾಂ ಸಂಸ್ಕೃತಿಯನ್ನು ಮಟ್ಟ ಹಾಕಿ ಪಕ್ಷವನ್ನು ತಳಮಟ್ಟದಿಂದ ಕಟ್ಟಬೇಕೆನ್ನುವ ಸಂಕಲ್ಪ ಇಲ್ಲದೆ ಇರುವುದೇ ಜೆಡಿಎಸ್ ಬೆಳೆಯದಿರಲು ಮೂಲ ಕಾರಣ. ಅಧಿಕಾರ ಇದ್ದಲ್ಲಿಗೆ ಬಂದು ಮುತ್ತಿಕೊಳ್ಳುವ ಇಂತಹ ಅತೃಪ್ತ ಮನಸ್ಸುಗಳಿಗೆ ಸ್ಥಾನವಿಲ್ಲ ಎಂದು ಎದೆಸೆಟೆಸಿ ಹೇಳುವ ತಾಕತ್ತು ನಮ್ಮ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲದಿರುವುದು ದೊಡ್ಡ ದುರಂತ. ಹಳೆಯ ಗಂಡನ ಪಾದವೇ ಗತಿ ಎಂದು ಬರುವವರು ಹೊಸ ಗಂಡನತ್ತ ಹೋಗುವ ವೇಳೆ ಇದನ್ನೆಲ್ಲ ಯೋಚಿಸಿದರೆ ಇಂತಹ ಪರಿಸ್ಥಿತಿಯೇ ಎದುರಾಗುವುದಿಲ್ಲ.


 ತನ್ನ ಪಕ್ಷದ ಬಲಿಷ್ಠ 9 ಶಾಸಕರನ್ನು ನಾಲ್ಕಾರು ತಿಂಗಳ ಹಿಂದೆ ಹೊರ ಹಾಕಿದ ನಂತರ 2ನೆಯ ತಲೆಮಾರಿನ ನಾಯಕರಿಲ್ಲದೆ, ಸಂಘಟನೆಯೂ ಇಲ್ಲದೆ ನಿತ್ರಾಣಗೊಂಡಿರುವ ಜಾತ್ಯತೀತ ಜನತಾದಳ ಈಗ ಕಾಂಗ್ರೆಸ್ ಅತೃಪ್ತ ಶಾಸಕರನ್ನು ತನ್ನತ್ತ ಸೆಳೆಯುವ ತಂತ್ರ ಹೂಡಿದೆ. ಜೆಡಿಎಸ್‌ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಅಧಿಪತಿಯಾಗಿರುವುದರಿಂದ ಅವರ ಒಪ್ಪಿಗೆ ಪಡೆದೆಯೇ ಸೆಳೆಯುವ ಯತ್ನ ಸಾಗಿದೆ.
ಕಾಂಗ್ರೆಸ್‌ನಿಂದ ಇತ್ತೀಚೆಗಷ್ಟೇ ಸಚಿವ ಸ್ಥಾನ ಕಳೆದುಕೊಂಡಿರುವ ವಿ. ಶ್ರೀನಿವಾಸಪ್ರಸಾದ್, ಸತೀಶ್ ಜಾರಕಿಹೊಳಿ ಮತ್ತು ಹಾಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸದ್ಯ ಜೆಡಿಎಸ್ ಸೇರುವ ತವಕದಲ್ಲಿದ್ದಾರೆ. ವಿಶೇಷವೆಂದರೆ, ಈ ಮೂವರೂ ಮೊದಲು ಅದೇ ಪಕ್ಷದಿಂದ ಕಾಂಗ್ರೆಸ್‌ಗೆ ಬಂದವರು.
ಕಾವೇರಿ ವಿವಾದದಲ್ಲಿ ತಮ್ಮ ಚಾಣಾಕ್ಷತನ ಮತ್ತು ಮುತ್ಸದ್ದಿತನದಿಂದ ಸಿದ್ದರಾಮಯ್ಯ ಅವರಿಗೆ ದಾರಿತೋರಿದ ದೇವೇಗೌಡರು ಈಗ ಅದೇ ಸಿದ್ದರಾಮಯ್ಯ ಅವರ ಒಂದು ಕಾಲದ ಅತ್ಯಾಪ್ತರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ. ಮೈಸೂರು ಭಾಗದಲ್ಲಿ ಜೆಡಿಎಸ್‌ನ್ನು ಬಲಗೊಳಿಸಲು ಕಾವೇರಿ ವಿವಾದ ದೇವೇಗೌಡರಿಗೆ ಒಂದು ಸದವಕಾಶವನ್ನು
ಕಲ್ಪಿಸಿದೆ. ಆದರೆ ಉಳಿದ ಜಿಲ್ಲೆಗಳಲ್ಲಿ ನಿರ್ಜೀವವಾಗಿರುವ ಪಕ್ಷಕ್ಕೆ ಜೀವ ತುಂಬುವವರೇ ಇಲ್ಲದ ಬಗ್ಗೆ ತಲೆಮೇಲೆ ಕೈ ಹೊತ್ತಿದ್ದ ಗೌಡರಿಗೆ ಈಗ ಉತ್ತರ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಮುಸ್ಲೀಂ ಮತ ಸೆಳೆಯಲು ಸಿ.ಎಂ ಇಬ್ರಾಹಿಂ ಮತ್ತು ದಲಿತರ ಮತ ಸೆಳೆಯಲು ಶ್ರೀನಿವಾಸಪ್ರಸಾದ್ ಕಣ್ಣಿಗೆ ಬಿದ್ದಿದ್ದಾರೆ. ಹಾಗಾಗಿ ಅವರನ್ನು ಸೆಳೆಯಲು ತೆರೆಮರೆಯ ಯತ್ನ ನಡೆಸಿದ್ದಾರೆ.
 ಜೆಡಿಎಸ್‌ನಲ್ಲಿ ದಲಿತ ನಾಯಕರು ಮತ್ತು ಮುಸ್ಲಿಂ ನಾಯಕರೇ ಇಲ್ಲದೆ ಕಂಗೆಟ್ಟಿರುವ ಸಂದರ್ಭದಲ್ಲಿ ಇವರು ಸಿಕ್ಕಂತಾಗಿದೆ. ಆದರೆ ಇವರು ದಳ ಸೇರುವುದು ಇನ್ನೂ ನಿಗದಿಯಾಗಿಲ್ಲ. ಶ್ರೀನಿವಾಸಪ್ರಸಾದ್ ಇನ್ನಷ್ಟೇ ರಾಜೀನಾಮೆ ಕೊಡಬೇಕಿದೆ. ನಂತರ ಸಭೆ ನಡೆಸಿ ಮುಂದಿನ ಹೆಜ್ಜೆ ನಿರ್ಧರಿಸುವುದಾಗಿ ಹೇಳಿದ್ದಾರೆ. ಅವರಿಗೆ ತನ್ನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಿಂದ ತೆಗೆದುಹಾಕಿದ ಬಗ್ಗೆ ಆಕ್ರೋಶವಿದೆ. ತನ್ನನ್ನು ಕಿತ್ತುಹಾಕಲು ಕಾರಣವಾದ ಅಂಶಗಳೇನು ಎನ್ನುವುದು ಗೊತ್ತಿದ್ದರೂ ಅದನ್ನು ಬಾಯ್ಬಿಡುತ್ತಿಲ್ಲ. ಅನಾರೋಗ್ಯದಿಂದ ಬಳಲುತ್ತ, ಇಲಾಖೆಯ ಕೆಲಸವನ್ನು ಸಮರ್ಪಕವಾಗಿ ಮಾಡದೆ, ಕಂದಾಯ ಸಚಿವರಾಗಿಯೂ ವಿವಿಧ ಪ್ರಮುಖ ಸಮಸ್ಯೆಗಳಿಗೆ ಸ್ಪಂದಿಸದೆ, ರಾಜ್ಯ ಪ್ರವಾಸ ಮಾಡದೆ  ಸುಮ್ಮನಿದ್ದರು. ಪ್ರಮುಖ ಖಾತೆ ಹೊತ್ತವರೇ ಹೀಗೆ ಮಾಡಿದರೆ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ ಎಂದರಿತು ಹೈಕಮಾಂಡ್ ಮನವೊಲಿಸಿ ಪ್ರಸಾದ್‌ಗೆ ಗೇಟ್‌ಪಾಸ್ ಕೊಡಲಾಗಿತ್ತು. ಅಂದಿನಿಂದಲೂ ಸಿಎಂ ವಿರುದ್ದ ಬುಸುಗುಡುತ್ತಿರುವ ಇವರು ದಸರಾ ಮುಗಿದ ನಂತರ ರಾಜಿನಾಮೆ ಕೊಡಲು ಮುಂದಾಗಿದ್ದಾರೆ.
ದಲಿತರ ನಾಯಕ, ಸಜ್ಜನ ರಾಜಕಾರಣಿ ಚಾಮರಾಜನಗರದಿಂದ 5 ಬಾರಿ ಲೋಕಸಭೆ ಸದಸ್ಯನಾಗಿ ಆಯ್ಕೆ,  ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವಿದ್ದಾಗ ಮಂತ್ರಿಗಿರಿ ಅನುಭವಿಸಿ, ಕಾಂಗ್ರೆಸ್, ಲೋಕಶಕ್ತಿ, ಜೆಡಿಯು, ಸಮತಾ ಪಕ್ಷ, ಜೆಡಿಎಸ್ ಒಳಹೊಕ್ಕು ಎಲ್ಲಿಯೂ ನಿಲ್ಲಲಾಗದೆ ಮತ್ತೆ ಕಾಂಗ್ರೆಸ್ ಸೇರಿ ಕಳೆದ ವಿಧಾನಸಬೆ ಚುನಾವಣೆಯಲ್ಲಿ ನಂಜನಗೂಡು ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ಮಂತ್ರಿಯಾಗಿದ್ದರು. ಆದರೆ ಹೆಸರು ಉಳಿಸಿಕೊಳ್ಳುವಲ್ಲಿ  ಅವರು ಸಂಪೂರ್ಣ ವಿಫಲರಾದರು. ಇದೇ ಅವರಿಗೆ ಮುಳುವಾಯಿತು. ಸತತ ಅನಾರೋಗ್ಯವಿದ್ದರೂ ಇದಕ್ಕೆ  ಖುರ್ಚಿಗೆ ಅಂಟಿಕೊಂಟರು. ಇಂತಹವರನ್ನು ನಂಬಿಕೊಂಡು ದೇವೇಗೌಡರು ದಲಿತ ಮತ ಪಡೆಯು ಮುಂದಾಗಿದ್ದಾರೆ. ರಾಜ್ಯದಲ್ಲಿ 25 ದಲಿತ ಮೀಸಲು ಕ್ಷೇತ್ರಗಳಿವೆ. ಇದರ ಮೇಲೆ ಕಣ್ಣಿಟ್ಟು  ಪ್ರಸಾದ್‌ಗೆ ಮತ್ತೆ ಮಣೆ ಹಾಕಲಾಗುತ್ತಿದೆ ಎಂದು ಭಾವಿಸಲಾಗುತ್ತಿದೆ.
ಎರಡನೆಯದಾಗಿ ಸತಿಶ್ ಜಾರಕಿಹೊಳಿ. ಇವರೂ ಸಹ ದಳದಿಂದಲೇ ಎಂಎಲ್‌ಸಿಯಾಗಿ, ಸಚಿವರಾಗಿ ನಂತರ ಕಾಂಗ್ರೆಸ್ ಸೇರಿ ವಿಧಾನಸಭಾ ಸದಸ್ಯರಾಗಿ  ಮತ್ತೆ ಸಚಿವರಾಗಿ ಇತ್ತೀಚೆಗೆ ಸಹೋದರ ರಮೇಶ ಜಾರಕಿಹೊಳಿ ಅವರಿಗಾಗಿ ಸ್ಥಾನ ಬಿಡಬೇಕಾಯಿತು. ಸಚಿವರಾಗಿದ್ದಾಗ ಇವರು ಹೇಳಿಕೊಳ್ಳುವಂತಹ ಕೆಲಸ ಮಾಡಲಿಲ್ಲ. ಇವರು ಸಚಿವರು ಎನ್ನುವುದೇ ಎಷ್ಟೋ ಜನರಿಗೆ ಗೊತ್ತಿರಲಿಲ್ಲ. ತಾವಾಯಿತು, ತಮ್ಮ ಕೆಲಸವಾಯಿತು ಎನ್ನುವ ಸ್ವಭಾವದ ಸತೀಶ್, ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುಳಿಸಿಕೊಂಡರೂ, ಸಂಘಟನಾ ಶಕ್ತಿ ಇದೆಯಾದರೂ ಅದರ ಸದ್ಬಳಕೆ ಮಾಡಿಕೊಳ್ಳಲಿಲ್ಲ. ರಾಜ್ಯ ನಾಯಕರಾಗಿ ಬೆಳೆಯಲಿಲ್ಲ. ರಾಜ್ಯದಲ್ಲಿ ನಾಯಕ ಜನಾಂಗವು ನಿರ್ಣಾಯಕವಾಗುವ 10 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳಿಂದ ಒಂದಷ್ಟು ಲಾಭ ತಂದುಕೊಡಬಹುದಾದ ಸಾಮರ್ಥ್ಯ ಇದೆಯಾದರೂ ಜೆಡಿಎಸ್ ಗೆಲ್ಲಿಸುವ ತಾಕತ್ತಿಲ್ಲ. ಆದರೆ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ. ರಾಜಕೀಯ ತಂತ್ರ ಹೆಣೆಯುವುದರಲ್ಲಿ ನಿಸ್ಸಿಮ, ಮೌನವೇ ಇವರ ಕೆಲಸದ ಗುಟ್ಟು.
ಮೂರನೆಯದಾಗಿ ಸಿ.ಎಂ ಇಬ್ರಾಹಿಂ, ಬಾಯಿ ಬಿಟ್ಟರೆ ಕುರಾನ್, ಬೈಬಲ್, ಭಗವದ್ಗೀತೆಯನ್ನು ಹೇಳಬಲ್ಲ ತಾಕತ್ತಿರುವ ಇಬ್ರಾಹಿಂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭದ್ರಾವತಿಯಲ್ಲಿ ಪರಾಭವಗೊಂಡವರು. ಇವರು ಸಹ 1978ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಗುಂಡೂರಾವ್ ಸಂಪುಟಲ್ಲಿ ಸಚಿವರಾದವರು. 94ರಲ್ಲಿ ಜನತಾದಳ ಸೇರಿ ರಾಜ್ಯಸಭೆ ಸದಸ್ಯರಾಗಿ ದೇವೇಗೌಡ ಪ್ರಧಾನಿಯಾದಾಗ ಅಚಾನಕ್ ಮಂತ್ರಿಯೂ ಆಗಿ ಕೆಲಸ ಮಾಡಿದ್ದಾರೆ. ಮಾತಿನ ಮಲ್ಲ ಎಂದಷ್ಟೇ ಹೇಳಬಹುದೇ ವಿನಾ ಇವರ ಮಾತನ್ನು ನಂಬುವವರು ಒಬ್ಬರೂ ಇಲ್ಲ. ಸಂಘಟನೆ ಮಾಡುವ ತಾಕತ್ತಿಲ್ಲ. ಜನ ಸೇರಿಸುತ್ತಾರೆ, ಜನರು ಇವರ ವಾಗ್ಬಾಣಯುಕ್ತ, ವಚನ, ಮಂತ್ರ, ಸಂಸ್ಕೃತ, ಶಾಯಿರಿ ಸಹಿತ ರಸವತ್ತಾದ ಭಾಷಣಕ್ಕಷ್ಟೇ ಸೀಮಿತರಾಗಿಬಿಟ್ಟಿದ್ದಾರೆ.
ಜೆಡಿಎಸ್‌ನಲ್ಲಿ ಅಪ್ಪ-ಮಕ್ಕಳ ರಾಜಕೀಯವನ್ನೇ ಟೀಕಿಸಿ ಮತ್ತೆ ಸಿದ್ದರಾಮಯ್ಯ ಬೆನ್ನುಬಿದ್ದು ಟಿಕೆಟ್ ಪಡೆದು ಸ್ಪರ್ಧಿಸಿ ಸೋತರು. ಆದರೂ ಸಿದ್ದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಮಾಡಿದರು. ಆದರೆ ಕಾಂಗ್ರೆಸ್‌ನಲ್ಲಿ ತನ್ನನ್ನು ಕಡೆಗಣಿಸುತ್ತಿದ್ದಾರೆಂಬ ಭ್ರಮೆ ಇರುವುದರಿಂದ ಈಗ ಮತ್ತೆ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.
 ಈ ಮೂವರಲ್ಲಿ ಸತೀಶ್ ಹೊರತುಪಡಿಸಿ ಉಳಿದಿಬ್ಬರಿಗೆ ಪಕ್ಷ ಸಂಘಟನೆಯನ್ನು ಮಾಡುವ ತಾಕತ್ತಿಲ್ಲ, ಮೂವರೂ ಹಣವಂತರು, ಇಬ್ರಾಹಿಂ ಮಾತ್ರ ವಾಚಾಳಿ. ಜನರತ್ತ ಮುಖ ಮಾಡುವುದೇ ಅಪರೂಪವಾಗಿರುವ ಈ ರತ್ನತ್ರಯಗಳು ದೇವೇಗೌಡರಿಗೆ ಹೇಗೆ ಮತ್ತೆ ಜೊತೆಯಾಗಲಿವೆಯೋ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಅಧಿಕಾರ ಅನುಭವಿಸಿ  ಈಗ ಹೊರಗಿರುವುದರಿಂದ ಅಧಿಕಾರವಿಲ್ಲದ ಕಾಲಕಳೆಯುವುದು ಇವರಿಗೆ ಸಾಧ್ಯವಾಗುತ್ತಿಲ್ಲ. ಮತ್ತೆ ಹಳೆಮನೆಯತ್ತ ನೋಟ ಬೀರಿದ್ದಾರೆ. ಕಾಂಗ್ರೆಸ್ ಮನೆಗೆ ಬಾಗಿಲಿಲ್ಲದಿರುವುದರಿಂದ  ಆಯಾರಾಂ ಗಯಾರಂ ನಡೆಯುತ್ತಲೇ ಇರುತ್ತದೆ.
......................................

Thursday, 13 October 2016


 ಬಿಗ್‌ಬಾಸ್ ಆರಂಭ- ವಿವಾದ
............................................

ಕಲರ್ಸ್  ಕನ್ನಡ ಚಾನೆಲ್‌ನಲ್ಲಿ ಮತ್ತೆ ಬಿಗ್ ಬಾಸ್ ಸೀಸನ್ ಆರಂಭವಾಗಿದೆ. ಈ ಬಿಗ್‌ಬಾಸ್ ಆರಂಭಕ್ಕೂ ವಿವಾದಕ್ಕೂ ಅದೇನೋ ನಂಟೋ ಗೊತ್ತಿಲ್ಲ. ಕಳೆದ ಸೀಸನ್‌ನಲ್ಲೂ ಈ ಬಾರಿಯಂತೆ ಚಲನಚಿತ್ರ ವಾಣಿಜ್ಯ ಮಂಡಳಿಯವರು ವಿವಾದ ಎಬ್ಬಿಸಿದ್ದಾರೆ. ಅದೆಂದರೆ, ಪ್ರಮುುಖ ನಟರು ರಿಯಾಲಿಟಿ ಶೋ ನಲ್ಲಿ ಭಾಗವಹಿಸಬಾರದು. ಇದರಿಂದ ಸಿನಿಮಾರಂಗಕ್ಕೆ ನಷ್ಟವಾಗುತ್ತದೆ ಎಂದು. ಮೊನ್ನೆ ಸಹ ಬಿಗ್ ಬಾಸ್ ಶೂಟಿಂಗ್ ನಡೆಯುತ್ತಿರುವ ಸ್ಥಳದಲ್ಲಿ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ನೇತೃತ್ವದಲ್ಲಿ ಕೆಲವು ನಿರ್ಮಾಪಕರು ಧರಣಿ ನಡೆಸಿ ತಮಗೆ ಇರುವ ಅಸಹನೆಯನ್ನು ಪ್ರಕಟಿಸಿದ್ದಾರೆ. ಉಳಿದ ಶೋಗಳ ವೇಳೆ ಸುಮ್ಮನಿರುವ ಮಂಡಳಿ ಬಿಗ್ ಬಾಸ್ ವೇಳೆ ಮಾತ್ರ ಏಕೆ ಈ ಪ್ರತಿಭಟನೆ ನಡೆಸುತ್ತಾರೆ ಎನ್ನುವುದನ್ನು ಜನರಿಗೆ ಹೇಳಬೇಕಿದೆ.



ಟಿವಿ ರಿಯಾಲಿಟಿ ಶೋ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯೆ ಮತ್ತೆ  ವಿವಾದ ಆರಂಭವಾಗಿದೆ. ಕನ್ನಡ ಚಿತ್ರ ನಟ-ನಟಿಯರು ಯಾವುದೇ ರಿಯಾಲಿಟಿ ಶೋ ನಲ್ಲಿ ಪಾಲ್ಗೊಳ್ಳಬಾರದು. ಪಾಲ್ಗೊಳ್ಳುತ್ತಿರುವುದರಿಂದ ಚಲನಚಿತ್ರರಂಗಕ್ಕೆ ನಷ್ಟವಾಗುತ್ತಿದೆ ಎನ್ನುವುದು ಮಂಡಳಿಯ ವಾದ. ಈ ಸಂಬಂಧ ವಿಭಿನ್ನ ಅಭಿಪ್ರ್ರಾಯಗಳು ಕೇಳಿಬರುತ್ತಿವೆ. ಆದರೆ ಒಂದಂತೂ ಸತ್ಯ. ಅದೇನೆಂದರೆ, ರಿಯಾಲಿಟಿ ಶೋ ನಲ್ಲಿ ಪಾಲ್ಗೊಂಡರೆ ನಟರಿಗೆ ಅತ್ಯಧಿಕ ಸಂಭಾವನೆ, ಉತ್ತಮ ಪ್ರಚಾರ, ಜನಪ್ರಿಯತೆ, ನಂತರ ಹೆಚ್ಚೆಚ್ಚು ಅವಕಾಶ ಸಿಗುತ್ತಿದೆ. ಇದು ಅವರ ಮುಂದಿನ ಭವಿಷ್ಯ ನಿರ್ಮಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ.
ಆದರೆ ಮಂಡಳಿಯ ವಾದವೆಂದರೆ, ಈ ನಟರ ಸಿನಿಮಾಗಳು ಚಿತ್ರಮಂದಿರದಲ್ಲಿ ಹಣಗಳಿಸಿಕೊಡುತ್ತಿಲ್ಲ. ಯಾವ ಟಿವಿ ಚಾನೆಲ್‌ನವರೂ ಇಂತಹ ನಟನ ಸಿನಿಮಾದ ಸೆಟಲೈಟ್ ಪ್ರಸಾರದ ಹಕ್ಕನ್ನು ಖರೀದಿಸುತ್ತಿಲ್ಲ ಎನ್ನುವುದು. ಮಂಡಲಿಯ ಪದಾಧಿಕಾರಿಗಳು ಅಷ್ಟಕ್ಕೂ ನಟರ ಬಗ್ಗೆ ಉರಿದುಬಿದ್ದಿದ್ದೇಕೆ ಎಂಬ ಪ್ರಶ್ನೆ ಇಲ್ಲಿ ಪ್ರಮುಖವಾಗಿ ಕಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಾನೆಲ್‌ನವರು ಹೊಸ ಸಿನಿಮಾದ ಸೆಟಲೈಟ್ ಹಕ್ಕನ್ನು ಖರೀದಿಸುತ್ತಿರುವುದು ಇಳಿಮುಖವಾಗುತ್ತಿದೆ.  ಸಿನಿಮಾ ನಿರ್ಮಾಪಕರಿಗೆ ಅದರ ತಯಾರಿಕೆಯ ನಂತರ ಬಹುತೇಕ ಲಾಭ ಬರುವುದೇ ಈ ಖರೀದಿಯಿಂದ. ಇದರಿಂದಾಗಿ  ಕನ್ನಡ ಚಿತ್ರರಂಗದಲ್ಲಿ ವರ್ಷದಿಂದ ವರ್ಷಕ್ಕೆ ಸಿನಿಮಾ ನಿರ್ಮಾಣ ಹೆಚ್ಚುತ್ತಿದೆ. ಈ ವರ್ಷದ ಜನವರಿ 1ರಿಂದ  ಸೆ.30ರವರೆಗೆ ಸುಮಾರು 150 ಕನ್ನಡ ಸಿನಿಮಾ ಬಿಡುಗಡೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇಷ್ಟೊಂದು ಸಿನಿಮಾಕ್ಕೆ ಬೇಡಿಕೆ ಇದೆಯೇ ಎನ್ನುವುದು ಇಲ್ಲಿನ ಪ್ರಶ್ನೆ. ಮನಸ್ಸಿಗೆ ತೋಚಿದಂತೆ ಸಿಕ್ಕಿದ್ದೆಲ್ಲವನ್ನೂ ಕಥೆಯಾಗಿ ಹೆಣೆಯುತ್ತ ಸಿನಿಮಾ ಮಾಡುವವರು ಇದನ್ನು ಮೊದಲು ಗಮನಿಸಬೇಕು. ಬೇಡಿಕೆಯೇ ಇಲ್ಲದಿದ್ದರೆ, ಲಾಭವೇ ಸಿಗದಿದ್ದರೆ ಸಿನಿಮಾ ಏಕೆ ನಿರ್ಮಿಸುತ್ತಿದ್ದಾರೆ. ಅದನ್ನು ವೀಕ್ಷಿಸುವವರಾರು ಎನ್ನುವುದನ್ನು ಮಂಡಳಿ ವಿವರಿಸಬೇಕು.
ಸಿನಿಮಾ ನಟರಿಗೆ ಸ್ವಾತಂತ್ರ್ಯವಿದೆ. ಅವರೇನು ಮಾಡಬೇಕೆಂಬ ನಿರ್ಧಾರ ಕೈಗೊಳ್ಳುವ ಹಕ್ಕಿದೆ. ಮಂಡಳಿಯು ಎಲ್ಲ ನಟರೂ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದಾರೆಂದು ಭಾವಿಸಿದಂತಿದೆ. ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ನಟರು ಭಾಷಾ ಶುದ್ಧಿ, ವಿಷಯಜ್ಞಾನ ಮತ್ತು ಆಕರ್ಷಣೀಯ ಮಾತನಾಡುವ ಕೌಶಲ್ಯವನ್ನು ಹೊಂದಿರಬೇಕಾಗುತ್ತದೆ. ಇದನ್ನೆಲ್ಲ ಹೊಂದಿರುವ ಕನ್ನಡ ನಟರ ಸಂಖ್ಯೆ ತೀರ ಕಡಿಮೆ. ಸುಮಾರು  7-8 ನಟರು ಮಾತ್ರ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ನಟರ ಸಂಖ್ಯೆ ನೂರರಷ್ಟಿದೆ. ನಾಯಕರ ಸಂಖ್ಯೆಯೇ 30 ರಷ್ಟಿದೆ. ಇನ್ನೊಂದು ಮಹತ್ವದ ಸಂಗತಿ ಎಂದರೆ, ಟಿವಿ ವೀಕ್ಷಕರೇ ಬೇರೆ, ಸಿನಿಮಾ ವೀಕ್ಷಕರೇ ಬೇರೆ. ಸಿನಿಮಾ ವೀಕ್ಷಕರು ಸಿನಿಮಾವನ್ನೇ ನೋಡುತ್ತಾರೆ ವಿನಾ ರಿಯಾಲಿಟಿ ಶೋನತ್ತ ಗಮನಹರಿಸುವುದಿಲ್ಲ. ಒಬ್ಬ ನಟ ಸುಮಾರು 16 ದಿನ ಮಾತ್ರ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತಾನೆ. ಏಕೆಂದರೆ ರಿಯಾಲಿಟಿ ಶೋನಲ್ಲಿ ನಟ ಭಾಗವಹಿಸುವುದು  ವಾರಾಂತ್ಯದಲ್ಲಿ ಮಾತ್ರ. ಇಲ್ಲಿ ಸಣ್ಣ ನಟರು- ದೊಡ್ಡ ನಟರು ಇಬ್ಬರೂ ಇರುತ್ತಾರೆ. ಅವರಿಬ್ಬರಿಗೂ ವೀಕ್ಷಕರ ಮನಗೆಲ್ಲುವ ಆಸೆ ಇರುತ್ತದೆ.
ಹಿಂದಿಯಲ್ಲಿ ಅಮಿತಾಬ್ ಬಚ್ಚನ್, ಸಲ್ಮಾನ್ ಮತ್ತು ಅಮಿರ್ ಖಾನ್ ರಿಯಾಲಿಟಿ ಶೋ ನಡೆಸಿಕೊಟ್ಟಿದ್ದಾರೆ. ಹಾಗಿದ್ದೂ ಅವರ ಸಿನಿಮಾಗಳು ಗಲ್ಲಾ ಪೆಟ್ಟಿಗೆಯನ್ನು ದೋಚುತ್ತಿರುವುದೇಕೆ? ಉತ್ಕೃಷ್ಟ ಕಥೆಯುಳ್ಳ, ಜನಮನ ರಂಜಿಸಬಲ್ಲ, ಕೌಟುಂಬಿಕ ವಿಷಯವುಳ್ಳ ಕಥೆ ಮೂಲಕ ಸಿನಿಮಾ ನಿರ್ಮಿಸಿದರೆ ಟಾಕೀಸ್ ಭರ್ತಿಯಾಗುತ್ತದೆ. ಸದಭಿರುಚಿಯ ಚಿತ್ರಗಳೇ ಮಾಯವಾಗುತ್ತಿರುವಾಗ ವೀಕ್ಷಕರೇಕೆ ಟಾಕೀಸ್‌ಗೆ ಬರುತ್ತಾರೆ.
 ನಿರ್ಮಾಪಕರೊಬ್ಬರು, ಸೆಟಲೈಟ್ ಸಿನಿಮಾ ಹಕ್ಕನ್ನು ಚಾನೆಲ್‌ಗಳು ಖರೀದಿ ಮಾಡುತ್ತಿರುವುದು ಇಳಿಮುಖವಾಗಿದೆ. ಇದು ನಿರ್ಮಾಪಕರಿಗೆ ತೊಂದರೆ ಉಂಟುಮಾಡಿದೆ. ನಟರು ಚಾನೆಲ್‌ಗೆ ಹೋಗಿ ರಿಯಾಲಿಟಿ ಶೋ ಮಾಡುತ್ತಿದ್ದಾರೆ. ಆ ಚಾನೆಲ್‌ನವರು ಆ ನಟರ ಸಿನಿಮಾವನ್ನು ಖರೀದಿಸುತ್ತಿಲ್ಲ. ಚಾನೆಲ್ ಮತ್ತು ಸಿನಿಮಾ ಮಧ್ಯೆ ಅವಿನಾಭಾವ ಸಂಬಂಧವಿದೆ.ಕೊಡು-ಕೊಳ್ಳುವ ವ್ಯವಹಾರವಿದೆ. ದೊಡ್ಡ ನಟರ ಸಿನಿಮಾವೊಂದನ್ನೇ ಖರೀದಿಸದೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೊಳಗಾದ ಸಿನಿಮಾವನ್ನು ಖರೀದಿಸಬೇಕು. ಆಗ ಯುವ ಹಾಗೂ ಹೊಸ ನಿರ್ಮಾಪಕ ಬದುಕಲು ಸಾಧ್ಯವಾಗುತ್ತದೆ ಎನ್ನುತ್ತಾರೆ.
ರಿಯಾಲಿಟಿ ಶೋ ನಲ್ಲಿ ನಾಯಕ ನಟರು ಮತ್ತು ಸೆಲೆಬ್ರಿಟಿಗಳು ಪಾಲ್ಗೊಳ್ಳಬಾರದು. ಇದರಿಂದ ಸಿನಿಮಾರಂಗಕ್ಕೆ ನಷ್ಟವಾಗುತ್ತದೆ ಎಂದು ಹೇಳುವಂತಿಲ್ಲ.  ಅವಕಾಶಗಳ ಆಯ್ಕೆ ನಟರಿಗೆ ಬಿಟ್ಟಿದ್ದು. ಅವರಿಗೂ ಬದುಕುವ ಹಕ್ಕು ಇದೆ. ಅವಕಾಶ ಸಿಕ್ಕಿದ್ದನ್ನು ಬಳಸಿಕೊಳ್ಳುವ ಅಧಿಕಾರವಿದೆ. ಕೆಲವು ರಿಯಾಲಿಟಿ ಶೋ ಮಾಡುವವರು ವಿಶೇಷವಾಗಿ ಸಿನಿಮಾ ನಟರನ್ನೇ ಕರೆಯಿಸುತ್ತಿವೆ. ನಟರೇನು ರಿಯಾಲಿಟಿ ಶೋ ಆರಂಭಿಸಲ್ಲ. ಅವರು ಪಾತ್ರಧಾರಿಗಳಷ್ಟೆ. ಇದಕ್ಕೆ ತಮ್ಮ ವಿರೋಧವಿದೆ. ಇದನ್ನು ನಿಲ್ಲಿಸಬೇಕೆನ್ನುವ ಮಾತನ್ನು ಮಂಡಳಿ ಆಡುವುದು ತಪ್ಪು.  
ಸದ್ಯ  ಕನ್ನಡ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿರುವ ಪ್ರಮುಖ ಸ್ಟಾರ್‌ಗಳೆಂದರೆ, ಸುದೀಪ್, ಶಿವರಾಜಕುಮಾರ್, ರವಿಚಂದ್ರನ್, ಪ್ರಿಯಾಮಣಿ, ರಚಿತಾ ರಾಮ್, ರಮೇಶ್ ಅರವಿಂದ್,  ಗಣೇಶ್ ಮತ್ತು ವಿಜಯ ರಾಘವೇಂದ್ರ. ನಿರ್ಮಾಪಕ ಹರ್ಷ ಸಹ ಇದರಲ್ಲಿದ್ದಾರೆ. ಮಂಡಳಿಯು ಇತ್ತೀಚೆಗೆ ಸುತ್ತೋಲೆ ಹೊರಡಿಸಿ ಶೋನಲ್ಲಿ ಪಾಲ್ಗೊಳ್ಳದಂತೆ ಇವರಿಗೆ ಮನವಿ ಮಾಡಿದೆ. ಜೊತೆಗೆ ಕಳೆದ ವಾರಾಂತ್ಯದಲ್ಲಿ ಸುದೀಪ್ ನೇತೃತ್ವದ ಬಿಗ್ ಬಾಸ್ ಶೂಟಿಂಗ್ ನಡೆಯುತ್ತಿರುವ ಬಿಡದಿಯ ಇನೋವೇಟಿವ್ ಫಿಲ್ಮ್ಸ್ ಸಿಟಿಯ ಎದುರು ಧರಣಿ ನಡೆಸಲಾಗಿದೆ.    
ಕನ್ನಡ ಬಿಗ್ ಬಾಸ್ ಮುಂದಿನ ದಿನಗಳಲ್ಲಿ ಸಿನಿಮಾ ರಂಗಕ್ಕೆ ಭಾರೀ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ. ಏಕೆಂದರೆ ಇದರಲ್ಲಿ ಪಾಲ್ಗೊಳ್ಳುವವರಲ್ಲಿ ಅರ್ಧದಷ್ಟು ಸಿನಿಮಾರಂಗದವರು. ಎಂಟರ್‌ಟೇನ್‌ಮೆಂಟ್ ಚಾನೆಲ್‌ನ ಅಭಿಮಾನಿಗಳು ಸಂಜೆಯಾದೊಡನೆ ಅದರ ಎದುರು ಕುಳಿತರೆ ಅದರಲ್ಲಿ ಎಲ್ಲ ಖ್ಯಾತ ನಟರ ಶೋ ಗಳೇ ಬರುತ್ತವೆ. ಇದರಿಂದ ಸಿನಿಮಾದತ್ತ ಆಕರ್ಷಣೆ ಕಡಿಮೆಯಾಗುತ್ತದೆ, ಸಿನಿಮಾಮಂದಿರಕ್ಕೆ ಬರುವವವರ ಸಂಖ್ಯೆ ಇಳಿಮುಖವಾಗುತ್ತದೆ. ನಟರು ಚಿತ್ರರಂಗದ ಹಿತದೃಷ್ಟಿಯಿಂದ ರಿಯಾಲಿಟಿ ಶೋನಲ್ಲಿ ಭಾಗವಹಿಸಬಾರದೆನ್ನುತ್ತಾರೆ ಗೋವಿಂದು.
ಸಿನಿಮಾಗಳನ್ನು ಸಂಖ್ಯೆಯ ದೃಷ್ಟಿಯಿಂದ ನೋಡುವ ಬದಲು ಗುಣಮಟ್ಟದಿಂದ ನಿರ್ಮಿಸಿ ಎಂದು ಗೋವಿಂದು ನಿರ್ಮಾಪಕರಿಗೆ ಮೊದಲು ಸೂಚಿಸುವ ಕೆಲಸವಾಗಬೇಕು. ಇಂತಹ ಹೋರಾಟಗಳಿಂದ ನಟರಿಗೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ ಅಥವಾ ಸಿನಿಮಾ ಮಂಡಳಿಗೆ ಲಾಭವಿಲ್ಲ.  ಒಬ್ಬ ನಟನಾದವ ಸಾರ್ವಜನಿಕ ವ್ಯಕ್ತ್ತಿಯಾಗಿರುತ್ತಾನೆ. ಅವನು ತನಗೆಲ್ಲಿ ಅವಕಾಶ ಸಿಗುತ್ತದೆಯೋ ಅಲ್ಲಿಗೆ ಹೋಗಿ ನಟಿಸುತ್ತಾನೆ. ಕೆಲವು ನಟರಿಗೆ ಸಿನಿಮಾ ರಂಗದಲ್ಲಿ ಅವಕಾಶಗಳು ಕಡಿಮೆ ಇರುತ್ತವೆ. ಹಾಗಿರುವಾಗ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವುದು ತಪ್ಪೇನು, ಎಲ್ಲ ನಟರಿಗೂ ನಿರ್ಮಾಪಕರು ಅವಕಾಶ ಕೊಡುತ್ತಾರೆಯೇ. ಒಂದು ವೇಳೆ ಅವಕಾಶ ಹೆಚ್ಚಿದ್ದರೂ ಶೋ ನಲ್ಲಿ ಪಾಲ್ಗೊಳ್ಳುವುದು ನಟರಿಗೆ ಬಿಟ್ಟಿದ್ದು.  ಟಿ ವಿ ಶೋ ಗಳಿಂದಲೇ ಎಷ್ಟೋ ಕಿರುನಟರು ಬದುಕಿಕೊಂಡಿದ್ದನ್ನೂ ಸಹ ಮಂಡಲಿ ಗಮನಿಸಬೆಕು.
...............................

Wednesday, 12 October 2016

ಬ್ರಿಗೇಡ್ ಉದ್ದೇಶ:  ಉಲ್ಟಾ ಹೊಡೆದ ಈಶ್ವರಪ್ಪ


  ರಾಜ್ಯ ಬಿಜೆಪಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಜಾತಿ ವಿದ್ಯಮಾನಗಳ ಬಗ್ಗೆ ಹೈಕಮಾಂಡ್ ಮುಖಂಡರು ತೀವ್ರ ಅಸಮಾಧಾನಗೊಂಡಿದ್ದಾರೆ. ವಿಶೇಷವಾಗಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪರವರ ವರ್ತನೆಯ ಬಗ್ಗೆ ಆಕ್ರೋಶಗೊಂಡಿದ್ದಾರೆ. ಇಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದಾರೆ. ಬ್ರಿಗೇಡ್ ಕೈಬಿಡುವಂತೆ ಸೂಚಿಸಿದ್ದಾರೆ. ಆದರೆ ಈಶ್ವರಪ್ಪ ಒಪ್ಪಿಲ್ಲ. ಬದಲಾಗಿ ಹಿಂದುಳಿದ ಮಠಾಧೀಶರನ್ನು ಮುಂದಿಟ್ಟುಕೊಂಡು ಬ್ರಿಗೇಡ್ ಕಟ್ಟಲು ಮುಂದಾಗಿದ್ದರು.  ಬಿಎಸ್‌ವೈ  ಮತ್ತು ಬಿಜೆಪಿ ಹೆಸರಿದ್ದರೆ ತಾವು ಸಂಘಟನೆಯಲ್ಲಿ ಇರುವುದಿಲ್ಲ ಎಂದು ಹೇಳಿ ಈಶ್ವರಪ್ಪಗೆ ಚಾಟಿಯೇಟು ನೀಡಿದ್ದಾರೆ ಮಠಾಧೀಶರು. ಇದರ ಗೂಢಾರ್ಥವನ್ನು ಈಶ್ವರಪ್ಪ ತಿಳಿದುಕೊಳ್ಳಬೇಕಿದೆ.  



  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ಬಿರುಕು ಇನ್ನಷ್ಟು ಬಿಗಡಾಯಿಸಿದೆ. ಈವರೆಗೆ ರಾಯಣ್ಣ ಬ್ರಿಗೇಡ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಮತ್ತು ಬಿಜೆಪಿಯನ್ನು ಬಲಗೊಳಿಸುವ ಮೂಲಕ ಅಧಿಕಾರಕ್ಕೆ ತರುವ ಉದ್ದೇಶವನ್ನು ಹೊಂದಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಬ್ರಿಗೇಡ್ ಇವೆರಡೂ ಉದ್ದೇಶವನ್ನು ಕೈಬಿಟ್ಟಿದ್ದು, ಹಿಂದುಳಿದವರ ಮತ್ತು ದಲಿತರ ಸಂಘಟನೆ, ಅಭಿವೃದ್ಧಿಗೆ (ರಾಜಕೀಯೇತರವಾಗಿ) ಇಟ್ಟುಕೊಳ್ಳಲು ನಿರ್ಧರಿಸಿದೆ.
ಇದರಿಂದ ಬಿಜೆಪಿಗೆ ಹಿನ್ನಡೆಯಾಗುವುದು ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತಿದೆ. ಯಡಿಯೂರಪ್ಪ ವೀರಶೈವ ಮಠಾಧೀಶರನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು  ಕಟ್ಟಹೊರಟಿದ್ದಾರೆ. ಇದು ಅವರು ಮಾಡುತ್ತಿರುವ ಅತಿ ದೊಡ್ಡ ತಪ್ಪು. ಯಾವತ್ತೂ ಒಂದು ರಾಷ್ಟ್ರೀಯ ಪಕ್ಷ ಒಂದು ಸಮುದಾಯ, ಒಂದು ವರ್ಗದ ಪರ ಮಾತ್ರ ಇರಬಾರದು.  ಈಶ್ವರಪ್ಪ ಈಗ ಮಾಡುತ್ತಿರುವುದೂ ಇದನ್ನೇ. ಅವರಿಗೂ ಹಿಂದುಳಿದವರು ಮತ್ತು ದಲಿತರು ಮಾತ್ರ ಬೇಕು. ತಮ್ಮ ಕುರುಬ ಜನಾಂಗದವರು ಹಿಂದುಳಿದ ಸಮುದಾಯದವರಾಗಿರುವುದರಿಂದ ಅವರ ಉದ್ಧಾರದ ನೆಪದಲ್ಲಿ ಬ್ರಿಗೇಡ್ ಕಟ್ಟಿದ್ದಾರೆ. ಕಾಂಗ್ರೆಸ್‌ಗೆ ದಲಿತರು ವೋಟ್ ಬ್ಯಾಂಕ್ ಆಗಿರುವುದರಿಂದ ಅವರನ್ನು ಸೆಳೆದುಕೊಳ್ಳುವ ಯತ್ನ ನಡೆಸಿದ್ದಾರೆ.
 ಬಿಜೆಪಿಯ ಯಾವುದೇ ನಾಯಕರು ಮುಂದಾದರೂ ಸದ್ಯದ ವಾತಾವರಣದಲ್ಲಿ ದಲಿತರು ಬಿಜೆಪಿ ಕಡೆ ವಾಲುವ ಲಕ್ಷಣವಿಲ್ಲ. ಇತ್ತೀಚೆಗೆ ಬಿಜೆಪಿ ಅಧಿಕಾರದಲ್ಲಿರುವ ವಿವಿಧ ರಾಜ್ಯಗಳಲ್ಲಿ ಮತ್ತು ಅಧಿಕಾರದಲ್ಲಿರದಿದ್ದರೂ ಕೆಲವು ಸಂಘಟನೆಗಳು ನಡೆಸುತ್ತಿರುವ ಅವರ ಮೇಲಿನ ದೌರ್ಜನ್ಯ, ಹಲ್ಲೆ, ಅತ್ಯಾಚಾರ ಮೊದಲಾದವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇದು ಸಾಧ್ಯ ಎಂದೆನಿಸುವುದಿಲ್ಲ.
  ಆದರೆ ಹಿಂದ ಸಂಘಟನೆಗೆ ಬಿಜೆಪಿ ಹೈಕಮಾಂಡ್ ವಿರೋಧ ವ್ಯಕ್ತಪಡಿಸಿದ್ದರಿಂದ ಈಶ್ವರಪ್ಪ ಅನಿವಾಂರ್ವಾಗಿ ಅದನ್ನು ರಾಜಕೀಯೇತರವಾಗಿ ಮಾಡುವ ಸ್ಥಿತಿ ಬಂದಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಉದ್ದೇಶ ತಮ್ಮದೆಂದು ಹೇಳಿಕೊಂಡಿದ್ದರು. ಯಾವಾಗ ಹಿಂದುಳಿದ ಮಠಾಧೀಶರು ಇದನ್ನು ವಿರೋಧಿಸಿ ಸಂಘಟನೆ ಮತ್ತು ಅಭಿವೃದ್ಧಿ ಮಾಡುವುದಾರೆ ಮಾತ್ರ  ತಮ್ಮ ಪಾಲ್ಗೊಳ್ಳುವಿಕೆ ಇದೆ ಎಂದು ಖಡಾಖಂಡಿತವಾಗಿ ಈಶ್ವರಪ್ಪ ಅವರಿಗೆ ಹೇಳಿದರೋ ಅಲ್ಲಿಂದ ಮೆತ್ತಗಾದರು. ಏಕೆಂದರೆ ಈ ಮಠಾಧೀಶರಿಗೆ ಅರ್ಥಾತ್ ಹಿಂದುಳಿದವರಿಗೆ ಬಿಎಸ್‌ವೈ ಮುಖ್ಯಮಂತ್ರಿಯಾಗುವುದು, ಸಿದ್ದರಾಮಯ್ಯ ಅವರನ್ನು ವಿರೋಧಿಸುವುದು ಬೇಕಿಲ್ಲ ಎನ್ನುವುದು ಇದರಿಂದ ವೇದ್ಯವಾಗುತ್ತದೆ.
 ರಾಜಕೀಯದಲ್ಲಿರುವ  ನಾಯಕ ತನ್ನ ಜಾತಿಯನ್ನೇ ಮುಂದೆಮಾಡಿಕೊಂಡು ಸಂಘಟನೆ ಮಾಡುತ್ತಾನೋ, ಅಧಿಕಾರ ಹಿಡಿಯಲು ಮುಂದಾಗುತ್ತಾನೋ ಅದು ಅವನಿಗೂ, ಪಕ್ಷಕ್ಕೂ ಮುಳುವಾಗುತ್ತದೆ. ರಾಜಕೀಯದಲ್ಲಿ ಇದು ಹಲವಾರು ಬಾರಿ ಸಾಬೀತಾಗಿದೆ. ರಾಜ್ಯದಲ್ಲಿ ವೀರಶೈವರಿಂದಲೇ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದನ್ನು ಬಿಎಸ್‌ವೈ ಅರಿಯಬೇಕಿತ್ತು. ಮೇಲ್ವರ್ಗದವರನ್ನು ಓಲೈಸಲು ಮತ್ತು ಆ ಮೂಲಕ 150 ಸ್ಥಾನವನ್ನು ಪಡೆದು ಅಧಿಕಾರ ಹಿಡಿಯುವುದು ಅವರ ಕನಸಾಗಿದೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ  ಯಾರು ಎಷ್ಟೇ ಬಾಯಿ ಬಡಿದುಕೊಂಡರೂ ಇದು ಸಾಧ್ಯವಿಲ್ಲದ ಮಾತು.
ಈ ಕಾರಣದಿಂದ ಕೊನೆಗೂ ಹಿಂದುಳಿದ ಮಠಾಧೀಶರು ಎಚ್ಚೆತ್ತುಕೊಂಡಿರುವುದು ಒಳ್ಳೆಯ ಬೆಳವಣಿಗೆ ಎನ್ನಲೇಬೇಕು. ಇದನ್ನು ಜಾತಿ ರಾಜಕೀಯ ಮಾಡುವವರು ಅರ್ಥ ಮಾಡಿಕೊಳ್ಳಬೇಕು.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಅಹಿಂದ ಮೂಲಕ ಹೆಸರುಗಳಿಸಿದ್ದಾರೆ. ಹಾಗಾಗಿ ಹಿಂದ ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಎನ್ನುವುದನ್ನು ಕಾಲವೇ ಹೇಳಬೇಕು.
ಸಿದ್ದರಾಮಯ್ಯ ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಸೇರಿಸಿಕೊಂಡಿದ್ದರೆ ಈಶ್ವರಪ್ಪ ಅಲ್ಪಸಂಖ್ಯಾತರನ್ನು ಕೈಬಿಟ್ಟಿದ್ದಾರೆ. ಸದ್ಯದ ಮಟ್ಟಿಗೆ ಅಹಿಂದ ಸಾಕಷ್ಟು ಬಲಿಷ್ಠವಿದೆ. ಈ ಹಂತದಲ್ಲಿ ಈಶ್ವರಪ್ಪ ಅವರ ರಾಯಣ್ಣ ಬ್ರಿಗೇಡ್ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲಿದೆ ಎನ್ನುವುದನ್ನು ಕಾದು ನೋಡಬೇಕಷ್ಟೆ. ಸಿದ್ದರಾಮಯ್ಯ ಸಹ ಕುರುಬರೇ. ಅವರೂ ಹಿಂದುಳಿದವರೇ. ಅವರಿಂದ ಹಿಂದ ಮತವನ್ನು ಕಿತ್ತುಕೊಳ್ಳುವುದು ಸದ್ಯದ ಮಟ್ಟಿಗೆ ಸುಲಭದ ಕೆಲಸವಲ್ಲ. ಏಕೆಂದರೆ ಅವರು ಅಧಿಕಾರದಲ್ಲಿದ್ದಾರೆ. ಆಧಿಕಾರ ಇರುವಲ್ಲಿ ಬಹುತೇಕ ಜನರ ಬೆಂಬಲವಿರುತ್ತದೆ. ಹಿಂದುಳಿದ ಮತ್ತು ದಲಿತ ಸ್ವಾಮಿಜಿಗಳೂ  ಅವರ ವಿರುದ್ದ ಇರಲಾರರು. ಇದನ್ನೆಲ್ಲ ಈಶ್ವರಪ್ಪ ಅರ್ಥ ಮಾಡಿಕೊಳ್ಳಬೇಕು.
ಬಿಜೆಪಿಯಲ್ಲೇ ಹಿಂದುಳಿದ, ಅಲ್ಪಂಸಂಖ್ಯಾತ, ದಲಿತ, ಎಸ್ ಟಿ ಮೋರ್ಚಾ ಇದೆ. ಈಶ್ವರಪ್ಪ ಹಿಂದ ಸಂಘಟಿಸಿದರೆ ಈ ಮೋರ್ಛಾ ವಿರುದ್ಧವೇ ಕೆಲಸ ಮಾಡಿದಂತಾಗುತ್ತದೆ. ಕಾಂಗ್ರೆಸ್, ಜೆಡಿಎಸ್, ನಿವೃತ್ತ ಅಧಿಕಾರಿಗಳು ಹಿಂದ ಪರವಾಗಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರೂ ಅದು ಪ್ರತಿ ಜಿಲ್ಲೆಯಲ್ಲೂ ಬೆರಳೆಣಿಕೆಯಷ್ಟು ಮಾತ್ರ ಇರಬಹುದು. ಸಮಾವೇಶ ನಡೆಸಿ ಸಾವಿರಾರು, ಅಥವಾ ಲಕ್ಷಾಂತರ ಜನರನ್ನು ಸೇರಿಸಿದಾಕ್ಷಣ ಅವರೆಲ್ಲ ಸಂಘಟನೆ, ತನ್ನ ಬೆಂಬಲಕ್ಕೆ ಬಂದವರೆಂದು ಯಾರೂ ಭಾವಿಸಬಾರದು. ಈ ಹಿನ್ನೆಲೆಯಲ್ಲಿ  ಅವರ ಈ ಸಂಘಟನೆ ಯಾವ ದೃಷ್ಟಿಕೋನದಿಂದ ನೋಡಿದರೂ ಬಿಜೆಪಿಗೆ ಪೆಟ್ಟು ಕೊಡಲೆಂದೇ ಎನ್ನುವುದು ಅರ್ಥವಾಗುತ್ತದೆ.
 ಇದರಿಂದಲೇ ಬಿಎಸ್‌ವೈ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದು. ಬಿಎಸ್‌ವೈ ತಾನೇ ಮುಖ್ಯಮಂತ್ರಿ ಎಂಬ ಕನಸನ್ನು ಬಿಟ್ಟು, ಎಲ್ಲಿಯವರೆಗೆ ಎಲ್ಲ ಜಾತಿಯವರನ್ನು ಸಂಘಟಿಸುವ, ಎಲ್ಲ ವರ್ಗದವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇವರಿಬ್ಬರ ಕಲಹ ಮುಂದುವರೆಯುವುದು ನಿಶ್ಚಿತ.
..................................

Saturday, 8 October 2016

ಶಿವಮೊಗ್ಗದಲ್ಲಿ  ಸೈಟ್, ಮನೆ ಕೇಳುವವರೇ ಇಲ್ಲ !
 ರಿಯಲ್ ಎಸ್ಟೇಟ್ ದಂಧೆಗೆ ಹಿನ್ನಡೆ * ಇಳಿಕೆಯಾಗಿದೆ ಖರೀದಿದಾರರ ಸಂಖ್ಯೆ 

ವರ್ಷಗಳಲ್ಲಿ ನಗರ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಡಾವಣೆ ರಚನೆಗೆ ಅನುಮತಿ ಕೋರಿ ಆಗಮಿಸುತ್ತಿಇoದಿನ  ದ್ದವರ ಸಂಖ್ಯೆ ಹೆಚ್ಚಿತ್ತು. ಹಾಗೆಯೇ ಜಮೀನುಗಳ ಭೂ ಪರಿವರ್ತನೆ ಮಾಡಿಸುವ ಪ್ರಕ್ರಿಯೆ ಕೂಡ ಏರುಗತಿಯಲ್ಲಿತ್ತು. ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷ ಹೊಸ ಬಡಾವಣೆ ರಚನೆ ಪ್ರಕ್ರಿಯೆಗಳು ಕಡಿಮೆಯಾಗಿವೆ. 
ಹೊಸದಾಗಿ ಬಡಾವಣೆ ರಚನೆ ಮಾಡುವವರಿಗೆ ಈ ಹಿಂದೆ ಹಂತಹಂತವಾಗಿ ನಿವೇಶನ ನೊಂದಣಿ ಮಾಡಿಕೊಡಲು ಅವಕಾಶ ಕಲ್ಪಿಸಲಾಗುತ್ತಿತ್ತು. ಪ್ರಸ್ತುತ ನಿಯಮಕ್ಕೆ ತಿದ್ದುಪಡಿ ತರಲಾಗಿದ್ದು, ಲೇಔಟ್‌ಗಳ ರಚನೆ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಂಡು, ನಿಯಮಾನುಸಾರ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿದ ನಂತರವಷ್ಟೇ ಏಕಕಾಲಕ್ಕೆ ನಿವೇಶನ ನೊಂದಣಿ-ಪರಭಾರೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ .
 - ಸ್ಬುಡಾ ಆಯುಕ್ತ ಮೂಕಪ್ಪ ಕರಭೀಮಣ್ಣವರ್ :

 ನಗರದಲ್ಲಿ ಈಗ ಸೈಟ್, ಹೊಸ ಮನೆ ಖರೀದಿ ಕೇಳುವವರೇ ಇಲ್ಲ. ಸಾಕಷ್ಟು ಇಂತಹ ಮನೆ, ಸೈಟ್ ಮಾರಾಟಕ್ಕಿದೆ ಎಂದು ಕಂಡಕಂಡಲ್ಲೆಲ್ಲ ಬೋರ್ಡು, ಜಾಹೀರಾತು ಹಾಕಿದ್ದರೂ ಅದರತ್ತ ಗ್ರಾಹಕರು ಸುಳಿಯುತ್ತಿಲ್ಲ. ಒಂದರ್ಥದಲ್ಲಿ ರಿಯಲ್ ಎಸ್ಟೇಟ್ ದಂಧೆ ತೀವ್ರ ಇಳಿಮುಖದಲ್ಲಿದೆ ಎಂದೇ ಹೇಳಬಹುದು.
ಇದಕ್ಕೆ ಕಾರಣವಿಷ್ಟೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೊಲಗಳನ್ನೆಲ್ಲ  ಕೃಷಿ ಉದ್ದೇಶದಿಂದ ಕೈಬಿಡಲಾಗಿದೆ. ಭಾರೀ ಲಾಭದಾಸೆಗೆ ದೊಡ್ಡ ಸಂಖ್ಯೆಯಲ್ಲಿ ಲೇಔಟ್‌ಗಳ ನಿರ್ಮಾಣ ಮಾಡಲಾಗಿದೆ. ಇದರಿಂದ ನಗರದಿಂದ ಹತ್ತಿಪ್ಪತು ಕಿ. ಮೀ ಒಳಗೆ ಸಾವಿರಾರು ನಿವೇಶನಗಳು ಮಾರಾಟಕ್ಕಿವೆ. ಯಾವಾಗ ರೈತರಿಗೆ ಕೃಷಿ ದುಬಾರಿ ಎನಿಸಲಾರಂಭಿಸಿತೋ, ಅದೇ ವೇಳೆ ನಗರದಲ್ಲಿ ಭೂಮಿಗೆ ಬಂಗಾರದ ಬೆಲೆಯೂ ಇತ್ತು. ಆದರೆ ಇದೇ ದರ ನಿಲ್ಲುವುದಿಲ್ಲ ಎನ್ನುವುದನ್ನು ಅರ್ಥೈಸಿಕೊಳ್ಳದ ಕೆಲವು ಭೂ ದಂಧೆಕೋರರು ಕಂಡಲ್ಲೆಲ್ಲ ಹೊಲ ಖರೀದಿಸಿ ಲೇ ಔಟ್ ರಚಿಸಿ ನಿವೇಶನ ಮಾಡಿದರು. ಎಷ್ಟೋ ಜನರು, ಕೆಲವು ರಾಜಕೀಯ ಪುಢಾರಿಗಳು ಇದನ್ನೇ ದಂಧೆಯನ್ನಾಗಿಸಿಕೊಂಡರು. ಆದರೆ, ಇವರ ನಸೀಬು ಕೆಟ್ಟಿತ್ತು. ಅಷ್ಟರೊಳಗೆ ದರ ಕುಸಿಯಿತು. ಲೇಔಟ್‌ನ ನಿವೇಶನಗಳೆಲ್ಲ ಹಾಗೆಯೇ ಉಳಿದುಕೊಂಡವು.
ಸದ್ಯ ಖರೀದಿ ಡಿಮ್ಯಾಂಡ್ ಕಡಿಮೆಯಾಗುತ್ತಿದೆ. ಕೊಳ್ಳುವವರ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ. ಕೆಲವು ಗೃಹ ನಿರ್ಮಾಣ ಸಹಕಾರ ಸಂಘಗಳು, ನೌಕರರ ಸಂಘಗಳು ಬಡಾವಣೆ ರಚನೆ ಮಾಡಿ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲು ಮುಂದಾಗಿವೆ. ಇದೂ ಸಹ ಖಾಸಗಿ ನಿವೇಶನಗಳ ಬೇಡಿಕೆ ಇಳಿಕೆಯಾಗಲು ಪ್ರಮುಖ ಕಾರಣ. ಏಕೆಂದರೆ ಬಹುತೇಕವಾಗಿ ನೌಕರರು ಮತ್ತು ಅಧಿಕಾರಿಗಳು ಮನೆ ನಿರ್ಮಾಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮುಂದಾಗುತ್ತಿದ್ದರು. ಉಳಿದಂತೆ ಸ್ಥಳೀಯ ಜಮೀನ್ದಾರರೂ, ಹಣವಂತರೂ ಸಾಕಷ್ಟಿದ್ದಾರೆ.
  ಸ್ಮಾರ್ಟ್ ಸಿಟಿ’ ಯೋಜನೆಯ ಪಟ್ಟಿಯಲ್ಲಿ ಶಿವಮೊಗ್ಗ ನಗರ ಸ್ಥಾನ ಪಡೆದುಕೊಳ್ಳುತ್ತಿದ್ದಂತೆ ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿಯೇ ಹೊಸ ಹೊಸ ಬಡಾವಣೆಗಳ ರಚನೆ ಪ್ರಕ್ರಿಯೆ ಕೂಡ ನಗರದಲ್ಲಿ ಆರಂಭವಾಗಿತ್ತು. ನಾಗರಿಕ ವಲಯದಿಂದಲೂ ನಿವೇಶನ ಖರೀದಿಗೆ ಬೇಡಿಕೆ ಕಂಡುಬಂದಿತ್ತು.
ಆದರೆ ಪ್ರಸ್ತುತ ರಿಯಲ್ ಎಸ್ಟೇಟ್ ಉದ್ಯಮದ ಸ್ಥಿತಿಗತಿ ಗಮನಿಸಿದರೆ ಈ ಹಿಂದಿದ್ದ ಉತ್ಸಾಹ ಮಾಯವಾಗಿದೆ. ಮತ್ತೊಂದೆಡೆ, ಏಕಾಏಕಿ ನಾಗರಿಕ ವಲಯದಿಂದಲೂ ನಿವೇಶನಗಳ ಬೇಡಿಕೆ ಕಡಿಮೆಯಾಗತೊಡಗಿದೆ. ನಗರದ ಸುತ್ತಮುತ್ತಲು ಸ್ಥಿರಾಸ್ತಿ ಮೇಲೆ ಬಂಡವಾಳ ಹೂಡಲು ಪೈಪೋಟಿ ನಡೆಸುತ್ತಿದ್ದ ಹೊರ ಊರಿನ ಹೂಡಿಕೆದಾರರ ಸಂಖ್ಯೆ ಕೂಡ ಕಡಿಮೆಯಾಗಿದೆ.
 ಶಿವಮೊಗ್ಗ ನಗರ ’ಸ್ಮಾರ್ಟ್ ಸಿಟಿ’ಯಡಿ ಅಭಿವೃದ್ಧಿ ಪ್ರಕ್ರಿಯೆಗೆ ಆಯ್ಕೆಯಾದರೂ ರಿಯಲ್ ಎಸ್ಟೇಟ್ ವಲಯದಲ್ಲಿ ಈ ಹಿಂದೆ ಕಂಡುಬಂದಿದ್ದ ಉತ್ಸಾಹದ ವಾತಾವರಣ ಕಂಡುಬರುತ್ತಿಲ್ಲ. ತಣ್ಣನೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ’ಸ್ಮಾರ್ಟ್ ಸಿಟಿ’ಗೆ ಆಯ್ಕೆಯಾದರೆ ನಿವೇಶನ-ಮನೆಗಳ ದರದಲ್ಲಿ ಏರಿಕೆಯಾಗಲಿದೆ ಎಂಬ ಮಧ್ಯಮ ವರ್ಗದವರಲ್ಲಿ ಮನೆ ಮಾಡಿದ್ದ ನಿರೀಕ್ಷೆ-ಆತಂಕಗಳು ಕೂಡ ತಲೆಕೆಳಗಾಗುವಂತೆ ಮಾಡಿದೆ.
ಗಗನಮುಖಿಯಾಗಿದ್ದು ಹೀಗೆ:
ಕಳೆದ ಏಳೆಂಟು ವರ್ಷಗಳ ಹಿಂದೆ ಶಿವಮೊಗ್ಗ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೇಳಿಕೊಳ್ಳುವಂತಹ ಮಟ್ಟದಲ್ಲಿರಲಿಲ್ಲ. ನಿವೇಶನ-ಮನೆಗಳಿಗೆ ಹೇಳಿಕೊಳ್ಳುವಂತಹ ಮೌಲ್ಯವೂ ಇರಲಿಲ್ಲ. ಆದರೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಉದ್ಯಮದಲ್ಲಿ ಚೇತರಿಕೆ ಕಾಣಲಾರಂಭಿಸಿತು. ಬಿಜೆಪಿ ಸರ್ಕಾರದ ಅವಧಿಯಲ್ಲಂತೂ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು. ದಿಢೀರ್ ಆಗಿ ನಿವೇಶನ-ಮನೆಗಳ ಬೆಲೆಯಲ್ಲಿ ಏರಿಕೆ ಕಾಣಲಾರಂಭಿಸಿತು. ಅಕ್ಷರಶಃ ರಿಯಲ್ ಎಸ್ಟೇಟ್ ರೇಟು ಗಗನಮುಖಿಯಾಗಿ ಏರಲಾರಂಭಿಸಿತು. ಹೊರ ಜಿಲ್ಲೆ, ರಾಜ್ಯ, ವಿದೇಶದವರೂ ನಗರದಲ್ಲಿ ನಿವೇಶನ-ಮನೆ-ಆಸ್ತಿಯ ಮೇಲೆ ಬಂಡವಾಳ ಹೂಡಿಕೆ ಮಾಡಲಾರಂಭಿಸಿದರು. ನಗರ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಹೊಸ ಹೊಸ ಬಡಾವಣೆಗಳು ನಿರ್ಮಾಣವಾಗಲಾರಂಭಿಸಿದವು.
ಫಲವತ್ತಾದ ಬತ್ತದ ಗದ್ದೆ, ತೋಟಗಳು ಕೂಡ ಲೇಔಟ್‌ಗಳಾಗಿ ಪರಿವರ್ತಿತವಾಗಲಾರಂಭಿಸಿದವು. ಬೆಂಗಳೂರು, ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳು ನಗರದಲ್ಲಿ ಲೇಔಟ್, ಫ್ಲ್ಯಾಟ್‌ಗಳ ನಿರ್ಮಾಣ ಮಾಡಲಾರಂಭಿಸಿದರು. ಮಧ್ಯಮ - ಬಡ ವರ್ಗದವರು ಸ್ವಂತ ನಿವೇಶನ-ಮನೆ ಖರೀದಿಸುವುದು ಕನಸಿನ ಮಾತಾಗಿ ಪರಿಣಮಿಸಿತು. ಆ ಮಟ್ಟಕ್ಕೆ ರಿಯಲ್ ಎಸ್ಟೇಟ್ ಉದ್ಯಮ ಬೆಳೆದು ನಿಂತಿತ್ತು.
ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿಯುತ್ತಿದ್ದಂತೆ ಶಿವಮೊಗ್ಗ ರಿಯಲ್ ಎಸ್ಟೇಟ್ ಉದ್ಯಮದ ಚಟುವಟಿಕೆ ಇಳಿಮುಖವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಚಟುವಟಿಕೆ ಮಾತ್ರ ಇಳಿಕೆಯಾಗಿರಲಿಲ್ಲ. ನಿವೇಶನಗಳ ಬೆಲೆಯಲ್ಲಿಯೂ ತಗ್ಗಿರಲಿಲ್ಲ. ಹೊಸ ಹೊಸ ಬಡಾವಣೆ ರಚನೆ ಪ್ರಕ್ರಿಯೆ ವೇಗ ಈ ಹಿಂದಿನಂತೆಯೇ ಮುಂದುವರಿದಿತ್ತು.
ಈ ನಡುವೆ ನಗರವೂ ’ಸ್ಮಾರ್ಟ್ ಸಿಟಿ’ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತು. ಇದರಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮತ್ತಷ್ಟು ವೇಗ ದೊರಕುವ ಲಕ್ಷಣಗಳು ಗೋಚರವಾಗಿದ್ದವು. ಕೆಲವು ಲೇಔಟ್ ಮಾಲಕರು ’ಸ್ಮಾರ್ಟ್ ಸಿಟಿ’ಯಲ್ಲಿ ನಿವೇಶನ-ಮನೆ ನಿಮ್ಮದಾಗಿಸಿಕೊಳ್ಳಿ’ ಎಂಬ ರೀತಿಯಲ್ಲಿ ಪ್ರಚಾರ ಕೂಡ ನಡೆಸಿದರು. ಆದರೆ ಈಗ ಖರೀದಿಸುವವರು ಇಲ್ಲದೆ ಉದ್ಯಮ ಇಳಿಜಾರಿನಲ್ಲಿದೆ. ಎಷ್ಟೋ ಹಣವಂತರು, ಬಿಲ್ಡರ್‌ಗಳು ಅಪಾರ್ಟ್‌ಮೆಂಟ್ ಕಟ್ಟಿದ್ದರೂ ಅವು ಸಹ ಖಾಲಿ ಹೊಡೆಯುತ್ತಿವೆ. ನಗರದಲ್ಲಿ ಕರಾವಳಿ ಪ್ರದೇಶ ಅಥವಾ ಮೆಟ್ರೊ ಸಿಟಿಗಳಂತೆ ಅಪಾರ್ಟ್‌ಮೆಂಟ್ ದಂಧೆಯೂ ನಡೆಯುತ್ತಿಲ್ಲ. ಇದರಿಂದ ಬಿಲ್ಡರ್‌ಗಳು ಹೊಸ ಚಿಂತನೆ ಮಾಡುವಂತಾಗಿದೆ. ಸದ್ಯದ ಮಟ್ಟಿಗೆ ಭೂ ವಹಿವಾಟು ಅದರ ವ್ಯಾಪಾರಸ್ಥರಿಗೆ ಲಾಭವನ್ನು ತಂದುಕೊಡದ ಸ್ಥಿತಿಯಲ್ಲಿದೆ.  



Wednesday, 5 October 2016

ಪ್ರೀತಿ, ಪ್ರೇಮ, ಪ್ರಣಯ, ಜೈಲು

 ಸಾಮಾಜಿಕ ಜಾಲತಾಣದಲ್ಲಿಯೇ ಹುದುಗಿಹೋಗಿರುವ ಯುವಕ-ಯುವತಿಯರು ಪ್ರೀತಿ, ಪ್ರೇಮ, ಪ್ರಣಯದಲ್ಲಿ ಸಿಲುಕಿ ಎಷ್ಟೋ ಘಟನೆಗಳಲ್ಲಿ ಜೈಲು ಪಾಲಾಗಿದ್ದಾರೆ. ಕೆಲವು ಘಟನೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂತ್ರಜ್ಞಾನ ಮುಂದುವರೆದಂತೆ ಅದರ ದುರ್ಬಳಕೆಯು ಹೆಚ್ಚುತ್ತಿದೆ. ಯುವಜನತೆ ಅದರ ಹಿಂದೆ ಬಿದ್ದು ತಮ್ಮ ಬಾಳನ್ನು ಹಾಳುಮಾಡಿಕೊಳ್ಳುತ್ತ್ತಿದ್ದಾರೆ. ಕಾಲೇಜು ದಿನಗಳಲ್ಲಿ ಕಲಿಕೆಗೆ ಹೆಚ್ಚಿನ ಗಮನ ಕೊಡದೆ ಕೇವಲ ವಾಟ್ಸಾಪ್, ಫೇಸ್‌ಬುಕ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಯೌವ್ವನದ ದಿನಗಳಲ್ಲಿ ಇದೆಲ್ಲ ಸುಂದರವಾಗಿ ಕಾಣುತ್ತದೆಯಾದರೂ, ಇದನ್ನು ಬೆನ್ನುಹತ್ತಿ ಹೋದವರಾರೂ ಸುಖದ ಬಾಳ್ವೆ ಕಂಡಿಲ್ಲ. ಇಂತಹ ನೂರಾರು ಉದಾಹರಣೆ ನಮ್ಮ ಕಣ್ಮುಂದೆ ಇದ್ದರೂ ಇಂದಿನ ಯುವಜನತೆ ಪಾಠ ಕಲಿಯದೆ ‘ಹಗಲು ಕಂಡ ಬಾವಿಗೆ ರಾತ್ರಿ ಬಿದ್ದರು’ ಎನ್ನುವಂತೆ ವರ್ತಿಸುತ್ತಿದ್ದಾರೆ.


ರಿಪ್ಪನ್‌ಪೇಟೆಯ ನಾಲ್ವರು ಯುವಕರು ಯುವತಿಯ ಹಿಂದೆ ಬಿದ್ದು ಈಗ ಜೈಲುಕಂಬಿ ಎಣಿಸುತ್ತಿದ್ದಾರೆ. ಒಬ್ಬ ಕೇವಲ ಪ್ರೀತಿ ಮಾಡಿದರೆ, ಮತ್ತೊಬ್ಬ ಆಕೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಾನೆ, ಮೂರನೆಯವ ದುರ್ಬಳಕೆಯನ್ನೇ ಮಾಡಿಕೊಳ್ಳುತ್ತಾನೆ. ನಾಲ್ಕನೆಯ ಮೂರನೆಯವನಿಗೆ ಸಹಕರಿಸುತ್ತಾನೆ. ಒಟ್ಟಿನಲ್ಲಿ ನಾಲ್ವರೂ ಒಟ್ಟಿಗೆ ಜೈಲೊಳಗಡೆ ಪ್ರವೇಶಿಸುತ್ತಾರೆ.
ದಾವಣಗೆರೆಯ ಇಂಜಿನೀಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಸಿದ್ದಾರ್ಥ ಶಿವಮೊಗ್ಗದ ಕಾಲೇಜೊಂದರ ಅಂತಿಮ ಪದವಿಯಲ್ಲಿ ಓದುತ್ತಿದ್ದ ಯುವತಿಯನ್ನು ಫೇಸ್‌ಬುಕ್‌ನಲ್ಲಿ  ಪರಿಚಯ ಮಾಡಿಕೊಂಡಿದ್ದ. ಫೇಸ್‌ಬುಕ್ ಚಾಟಿಂಗ್, ವ್ಯಾಟ್ಸಾಪ್ ಚಾಟಿಂಗ್ ಮೂಲಕ ಮುಂದುವರೆದ ಪರಿಚಯ ಪರಸ್ಪರರು ಭೇಟಿಯಾಗುವವರೆಗೆ ಹೋಯಿತು. ಶಿವಮೊಗ್ಗದ ಬಸ್ ನಿಲ್ದಾಣ ಮತ್ತು ಕೆಲವು ಐಸ್‌ಕ್ರೀಮ್ ಪಾರ್ಲರ್‌ಗಳಲ್ಲಿ ಇಬ್ಬರೂ ಭೇಟಿಯಾಗಿ ಪ್ರೀತಿ-ಪ್ರೇಮ ಇನ್ನಷ್ಟು ಬೆಳೆಯುವಂತೆ ಪೋಷಿಸಿದರು. ಸಿದ್ದಾರ್ಥ್ ಈ ಯುವತಿ ಭೇಟಿಗಾಗಿ ದಾವಣಗೆರೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ.
ಪ್ರೀತಿ, ಆತ್ಮೀಯತೆ  ಗಾಢವಾದಂತೆ ಆಕೆಯ ಬಳಿ ಮೊದಲು ಫೋಟೋ ಪಡೆದುಕೊಂಡ ಸಿದ್ದಾರ್ಥ್ , ಬರಬರುತ್ತ ನಗ್ನ ಚಿತ್ರಕ್ಕಾಗಿ ಪೀಡಿಸುತ್ತಾನೆ. ಸುತರಾಂ ಇದನ್ನು ಕೊಡಲೊಪ್ಪದ ಯುವತಿ ಅದ್ಯಾವ ಘಳಿಗೆಯಲ್ಲಿ ಇದನ್ನು ಕೊಟ್ಟಳೋ ಗೊತ್ತಿಲ್ಲ. ಅಲ್ಲಿಂದ ಈ ನಾಲ್ವರು ಯುವಕರ ಕಥೆಗೆ ಹೊಸ ತಿರುವು ಸಿಗುತ್ತದೆ.  ಸಿದ್ದಾರ್ಥ ರಿಪ್ಪನ್‌ಪೇಟೆಗೆ ಹೋದಾಗ ತನ್ನಮಿತ್ರ ವಿನಯ್ ಎದುರು ಲವ್ ಸ್ಟೋರಿಯನ್ನು ಬಿಚ್ಚಿಡುತ್ತಾನೆ. ಜೊತೆಗೆ ತನ್ನಲ್ಲಿರುವ ಚಿತ್ರಗಳನ್ನು ತೋರಿಸುತ್ತಾನೆ. ಇದನ್ನು ಗಮನಿಸಿದ ವಿನಯ್ ತನ್ನ ಮೊಬೈಲ್‌ಗೆ ಶೇರ್ ಮಾಡುವಂತೆ ದುಂಬಾಲು ಬೀಳುತ್ತಾನೆ. ಹೇಗೋ ಆತನಿಂದ ಈ ಚಿತ್ರಗಳನ್ನು ಪಡೆದುಕೊಂಡುಬಿಡುತ್ತಾನೆ.  ನಂತರ ಯುವತಿಯನ್ನು ಸಂಪರ್ಕಿಸಲಾರಂಭಿಸುತ್ತಾನೆ. ಈ ವೇಳೆ ನೌಕರಿಗಾಗಿ ಸಿದ್ದಾರ್ಥ್ ಬೆಂಗಳೂರಿಗೆ ತೆರಳುತ್ತಾನೆ. ಇದನ್ನೇ ಲಾಭ ಮಾಡಿಕೊಂಡ ವಿನಯ್, ಪದೇ ಪದೇ ಕರೆ ಮಾಡಿ ಪ್ರೀತಿಸುವಂತೆ ಆಕೆಗೆ ಪ್ರೇಮ ನಿವೇದನೆ ಮಾಡುತ್ತಾನೆ. ನಗ್ನ ಚಿತ್ರ ಇರುವುದಾಗಿಯೂ ಬ್ಲಾಕ್‌ಮೇಲ್ ಮಾಡುತ್ತಾನೆ. ಇದರಿಂದ ಹೆದರಿದ ಯುವತಿ ಈತನ ಸ್ನೇಹಕ್ಕೆ ಬೀಳುತ್ತಾಳೆ. ಇವರ ಪ್ರೀತಿ- ಪ್ರೇಮ ಜಾಸ್ತಿಯಾಗುತ್ತಿರುವಂತೆ ದೈಹಿಕ ಸುಖಕ್ಕೆ ಒತ್ತ್ತಾಯಿಸುತ್ತಾನೆ. ಆದರೆ ಆಕೆ ತಿರಸ್ಕರಿಸುತ್ತಾಳೆೆ.
ಮೊಬೈಲ್‌ನಲ್ಲಿರುವ ನಗ್ನ ಚಿತ್ರ ತೆಗೆದುಹಾಕುವಂತೆ ಗೋಗರೆಯುತ್ತಾಳೆ. ಆಗ ತನ್ನ ಮಿತ್ರ ನಾಗರಾಜ್ ಎನ್ನುವವನು ಮಾಟ-ಮಂತ್ರ- ತಂತ್ರಗಳ ಮೂಲಕ ಮೊಬೈಲ್‌ನಿಂದ ಚಿತ್ರ ತೆಗೆದುಹಾಕುತ್ತಾನೆ  ಎಂದು ನಂಬಿಸಿ ಆತನ ಪರಿಚಯ ಮಾಡಿಕೊಡುತ್ತಾನೆ. ಈ ಯುವತಿ ಇದನ್ನು ನಿಜ ಎಂದು ನಂಬಿ ಆತನ ಬಲೆಗೆ ಬೀಳುತ್ತಾಳೆ. ಇಲ್ಲಿಂದ ಆಕೆಗೆ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವವಾಗುತ್ತದೆ.
ನಾಗರಾಜ್ ಐಟಿಐ ಮಾಡಿಕೊಂಡು ವೈರಿಂಗ್ ಕೆಲಸ ಮಾಡುತ್ತ ಬೆಂಗಳೂರಿನಲ್ಲಿ ಜೀವಿಸುತ್ತಿದ್ದಾನೆ. ಈತನಿಗೆ ಮದುವೆಯಾಗಿ ಮಗುವಿದೆ. ಆದರೆ ಯುವತಿಯ ನಗ್ನ ಚಿತ್ರ ನೋಡಿದ ನಂತರ ಆತನಲ್ಲೂ ಕಾಮತೃಷೆ ಹೆಡೆಬಿಚ್ಚಲಾರಂಭಿಸುತ್ತದೆ. ಸಿದ್ದಾರ್ಥ ಮತ್ತು ವಿನಯ್ ಅವರ ಕೈಜಾರಿದ ರೊಟ್ಟಿ ತನ್ನ ತಟ್ಟೆಗೆ ಬಿದ್ದಿತು ಎಂದು ಖುಷಿಪಡುತ್ತಾನೆ. ಯುವತಿ ಪರಿಚಯವಾದೊಡನೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹಲವಾರು ಸಲ ನಾಗರಾಜ್ ಬರುತ್ತಾನೆ. ಸುತ್ತಾಡುತ್ತಾರೆ, ಕೊನೆಗೆ ಮದುವೆಯಾಗಿ ಸುಖ ದಾಂಪತ್ಯ ಮಾಡುವ ಭರವಸೆ ಕೊಡುತ್ತಾನೆ. ಇದರ ಹಿಂದಿರುವ ಕಾಮದಾಹವನ್ನು ಅರಿಯದ ಮುಗ್ಧೆ ಯುವತಿ ನಾಗರಾಜ್ ಹೇಳಿದಂತೆ  ಮದುವೆಯಾಗಲು ಒಪ್ಪುತ್ತಾಳೆ.
ಉಬ್ಬಿ ಹೋದ ಆತ ಒಮ್ಮೆ ಧರ್ಮಸ್ಥಳಕ್ಕೆ ಈಕೆಯನ್ನು ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಾನೆ. ಆದರೆ ಮೊದಮೊದಲು ಒಪ್ಪದ ಆಕೆ ಕೊನೆಗೂ ಒತ್ತ್ತಾಯಕ್ಕೆ ಮಣಿಯುತ್ತಾಳೆ. ಇದಾದ ಕೆಲವು ದಿನಗಳ ನಂತರ ಕಾರವಾರ, ಗೋವಾಕ್ಕೆ ಹೋಗಿಬರುತ್ತಾರೆ. ಅಲ್ಲಿಯೂ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಸತತವಾಗಿ  ಬಳಸಿಕೊಳ್ಳುತ್ತಾನೆ.
 ಯುವತಿಯು ನಾಲ್ಕು ತಿಂಗಳ ಗರ್ಭಿಣಿಯಾಗುತ್ತಾಳೆ. ಈ ವಿಷಯ ಗೊತ್ತಾದೊಡನೆ ಬೆವರಿಹೋದ ನಾಗರಾಜ ತನ್ನ ಸಹಾಯಕ ಕೆಲಸಗಾರ ಕಿರಣ್‌ನಲ್ಲಿ ಸಲಹೆ ಕೇಳುತ್ತ್ತಾನೆ.
    ಕಿರಣ್ ಆಕೆಯನ್ನು ಉಪಾಯ ಮಾಡಿ ಶಿವಮೊಗ್ಗದಿಂದ ಬೆಂಗಳೂರಿಗೆ ಕರೆತರುತ್ತಾನೆ. ನಾಗರಾಜ್ ಜೊತೆ ಮದುವೆ ಮಾಡಿಸುವ ಭರವಸೆ ನೀಡುತ್ತಾನೆ. ಇದರಿಂದ ಸಂತಸಗೊಂಡ ಆಕೆ ಬೆಂಗಳೂರಿಗೆ ತೆರಳಿದರೆ ಅಲ್ಲಿ ನಡೆಯುವುದೇ ಬೇರೆ. ಯುವತಿಯನ್ನು ಮನೆಯೊಂದರಲ್ಲಿ ಕೂಡಿಹಾಕುತ್ತಾರೆ. ಈ ವೇಳೆ ಯುವತಿ ನಾಪತ್ತೆಯಾದ ವಿಚಾರ ಮನೆಯವರಿಗೆ ಗೊತ್ತ್ತಾದೊಡನೆ ಆಕೆಯ ಪಾಲಕರು ಶಿವಮೊಗ್ಗ ಮಹಿಳಾ ಠಾಣೆೆಗೆ ದೂರು ಕೊಡುತ್ತಾರೆ. ಆಕೆಯ ಮೊಬೈಲ್ ಸಹಾಯದಿಂದ ಬೆಂಗಳೂರಿನಲ್ಲಿರುವುದನ್ನು ಪೊಲೀಸರು ಪತ್ತೆ ಮಾಡುತ್ತ್ತಾರೆ. ಮತ್ತು ಆಕೆಯ ಜೊತೆ ಸತತ ಸಂಪರ್ಕದಲ್ಲಿರುವ ನಂಬರ್  ಪಡೆದು ನಾಗರಾಜನನ್ನು ಮೊದಲು ಬಂಧಿಸುತ್ತಾರೆ. ನಂತರ ಉಳಿದ ಮೂವರು ಬಲೆಗೆ ಬೀಳುತ್ತಾರೆ. ಅಲ್ಲಿಗೆ ನಾಲ್ಕೇ ದಿನದಲ್ಲಿ ಕಾರ್ಯಾಚರಣೆ ಮುಗಿಯುತ್ತದೆ
ನಾಲ್ವರು ಯುವಕರು ಪ್ರೀತಿ, ಪ್ರೇಮ, ಕಾಮ ಎನ್ನುತ್ತ ಜೈಲು ಪಾಲಾದರೆ ಯುವತಿಯನ್ನು ಹೆತ್ತ ಮನೆಯವರು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸುತ್ತಾರೆ. ನಂತರ ಮಹಿಳಾ ಪೊಲೀಸರ ಸಮ್ಮುಖದಲ್ಲಿ ಸಂಧಾನ ನಡೆದು ಯುವತಿ ಸುರಕ್ಷಿತ ನೆಲೆಗೆ ಸೇರುತ್ತಾಳೆ.
ಇದು ಸಿನಿಮಾ ಕತೆಯಂತೆ ಕಂಡರೂ ಜಾಲತಾಣದಲ್ಲಿ ಸಕ್ರಿಯರಾಗಿರುವವರು ಎಚ್ಚರಿಕೆಯಿಂದ ಇರಬೇಕೆನ್ನುವ ಸಂದೇಶವನ್ನು ನೀಡುತ್ತದೆ. ಅಪರಿಚಿತರಿಗೆ ಫೋಟೊ ಕೊಡುವುದು, ಸ್ನೇಹಿತರಿಗೆ ಕೊಡುವುದು ಎಷ್ಟು ದುಬಾರಿಯಾಗಿ  ಪರಿಣಮಿಸುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅದರಲ್ಲೂ ನಗ್ನ ಚಿತ್ರ ಕೇಳುವವರು ಹೆಚ್ಚು ಕಡಿಮೆ ಸೈಕೋಪಾತ್ ಗಳಾಗಿರುತ್ತಾರೆ ಎನ್ನುವುದನ್ನು ವೈಜ್ಞಾನಿಕ ಸಂಶೋಧನೆ ಹೇಳುತ್ತದೆ. ಹುಡುಗ ಅಥವಾ ಯಾರೋ ಅಪರಿಚಿತ ತನ್ನ ಫೇಸ್‌ಬುಕ್‌ನಲ್ಲಿ ಲೈಕ್ ಬಟನ್ ಒತ್ತಿದರೆ, ಕಾಮೆಂಟ್ ಮಾಡಿದರೆ ಅದರ ಮೂಲಕವೇ ಸಂಬಂಧ  ಬೆಳೆಸಿಕೊಂಡು, ಅವರ ಬೈಕ್-ಕಾರನ್ನೇರಿ ಸುತ್ತುತ್ತಾ,  ಹಿಂದೆ-ಮುಂದೆ ನೋಡದೆ ಮದುವೆಗೂ ಒಪ್ಪಿಕೊಳ್ಳುವ ಯುವತಿಯರಿಗೂ ಈ ಘಟನೆ ಒಂದು ಪಾಠವಾಗಬೇಕಿದೆ.
ಖಾಸಗಿ ಬದುಕು ಖಾಸಗಿಯಾಗಿಯೇ ಇರಬೇಕು. ಅದು ಬಹಿರಂಗವಾದರೆ ಏನಾಗುತ್ತದೆ ಎನ್ನುವುದಕ್ಕೆ ರಿಪ್ಪನ್‌ಪೇಟೆಯ ನಾಲ್ವರು ಯುವಕರ ಮತ್ತು ವಿದ್ಯಾರ್ಥಿನಿಯ ಈ ಘಟನೆ ಉದಾಹರಣೆಯಾಗಿ ನಮ್ಮೆದುರು ನಿಲ್ಲುತ್ತದೆ.
............................................... 

Monday, 3 October 2016

ಹೆಚ್ಚುತ್ತಿದೆ ಗಾಂಜಾ ಬೆಳೆ : ಬೀಳಬೇಕಿದೆ ಕಡಿವಾಣ

   -
 
ಕಳೆದ ಹಲವು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ಹಲವೆಡೆ ಬೆಳೆಗಳ ನಡುವೆ ಹಾಗೂ ಅರಣ್ಯ ಪ್ರದೇಶಗಳಲ್ಲಿ ಅತ್ಯಂತ ಗುಪ್ತವಾಗಿ ಕೆಲವರು ಗಾಂಜಾ ಬೆಳೆಯುತ್ತಿದ್ದಾರೆ. ಇದೊಂದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದ್ದು, ಕೋಟ್ಯಂತರ ರೂ. ವ್ಯವಹಾರ ನಡೆಯುತ್ತಿದೆ. ಇದರ ಹಿಂದೆ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿರುವ ಮಾಹಿತಿಯಿದೆ. ಆದರೆ ಗಾಂಜಾ ದಂಧೆಗೆ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣ ಹಾಕುವಲ್ಲಿ ಸಂಬಂಧಿಸಿದ ಇಲಾಖೆಗಳು ಸಂಪೂರ್ಣ ವಿಫಲವಾಗಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಗಾಂಜಾ ವ್ಯವಹಾರ ಜಿಲ್ಲೆಯಲ್ಲಿ ಏರುಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.


ಮಾದಕ ವಸ್ತುಗಳ ಪಟ್ಟಿಯಲ್ಲಿ ಸೇರುವ ಗಾಂಜಾ ನಿಷೇಧಿತ ಬೆಳೆ. ಆದರೂ ಮಲೆನಾಡಿನ ಹಲವೆಡೆ ಇದನ್ನು ಅಕ್ರಮವಾಗಿ ಬೆಳೆಯಲಾಗುತ್ತಿದೆ ಎನ್ನುವುದನ್ನು ಆಗಾಗ ದಾಳಿಗೊಳಗಾಗಿ ಸಿಗುತ್ತಿರುವ ಪುರಾವೆಗಳೇ  ಹೇಳುತ್ತವೆ. ಜಿಲ್ಲೆಯಲ್ಲಿ ಈ ಬೆಳೆಯನ್ನು ಅವ್ಯಾಹತವಾಗಿ ಮುಂದುವರೆಸಿಕೊಂಡು ಬಂದಿರುವುದು ಕಂಡುಬರುತ್ತಿದೆ. ವಿಶೇಷವಾಗಿ ಜೋಳದ ಬೆಳೆಯ ನಡುವೆ ಬೆಳೆಯಲಾಗುತ್ತಿದೆ.
 ಗ್ರಾಮಾಂತರ ಪ್ರದೇಶದ ಹಲವೆಡೆ ಈ ಸಂಬಂಧ ಪ್ರತಿ ವರ್ಷ ಸತತ ದಾಳಿಯನ್ನು ಪೊಲೀಸರು, ಅರಣ್ಯ ಇಲಾಖೆಯವರು ಮತ್ತು ಅಬಕಾರಿ ಇಲಖೆಯವರು ನಡೆಸುತ್ತಲೇ ಇದ್ದಾರೆ. ಅಪಾರ ಪ್ರಮಾಣದ ಗಾಂಜಾ ಗಿಡವನ್ನು ವಶಪಡಿಸಿಕೊಂಡು ಕೇಸು ಹಾಕುತ್ತಿದ್ದಾರೆ. ಆದರೂ ಇದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಕಾನೂನುಬಾಹೀರ ಎಂದು ಗೊತ್ತಿದ್ದರೂ ಹಲವು ಮುಗ್ಧ  ರೈತರು ಯಾರದ್ದೋ ಮತ್ತು ಯಾವುದೋ ಆಮಿಷಕ್ಕೆ ತುತ್ತಾಗಿ ಇದನ್ನು ಬೆಳೆಯುತ್ತಿದ್ದಾರೆ.
 ನಾಲ್ಕು ದಿನದ ಹಿಂದೆ ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ಗ್ರ್ರಾಮದಲ್ಲಿ ಅಪಾರ ಪ್ರಮಾಣದ ಗಾಂಜಾ ಗಿಡವನ್ನು ವಶಪಡಿಸಿಕೊಳ್ಳಲಾಗಿದೆ. ಜೋಳ ಎತ್ತರಕ್ಕೆ ಬೆಳೆಯುವುದರಿಂದ ಹೊಲದ ಮಧ್ಯೆ ಇದನ್ನು ಬೆಳೆದರೆ ಯಾರಿಗೂ ಗೊತ್ತಾಗುವುದಿಲ್ಲ. ನಿಗದಿತ ಸಮಯಕ್ಕೆ ಇದನ್ನು ಕಟಾವು ಮಾಡಿ ಬೇರೆಡೆ ಸಾಗಿಸಲಾಗುತ್ತಿದೆ. ಒಂದು ಮೂಲದ ಪ್ರಕಾರ ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಸಾಗಿಸಿ ಅಲ್ಲಿಂದ ಕೇರಳಕ್ಕೆ ತಲುಪಿಸಲಾಗುತ್ತಿದೆ ಎಂಬ ಮಾಹಿತಿ ಇದೆ.
ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ಸಾಗರ, ಭದ್ರಾವತಿ ಗ್ರಾಮಾಂತರ ಭಾಗದಲ್ಲಿ ಇದನ್ನು ಹೆಚ್ಚು ಬೆಳೆಯುಲಾಗುತ್ತಿರುವುದು ಹಲವು ದಾಳಿಗಳಿಂದ ಸಾಬೀತಾಗಿದೆ. ಹಳ್ಳಿಗಳಲ್ಲಿ ಬೆಳೆದರೆ ಇದು ಯಾರಿಗೂ ತಿಳಿಯುವುದಿಲ್ಲ. ಗದ್ದೆಯ ಮಧ್ಯದಲ್ಲಿದ್ದರಂತೂ ಕಾಣುವುದೇ ಇಲ್ಲ. ಅಕ್ಕಪಕ್ಕದವರಿಗೆ ತಿಳಿದು ಅಥವಾ ಸಂಶಯಬಂದರೆ ಮಾತ್ರ ಪೊಲೀಸರಿಗೆ ಮಾಹಿತಿ ಕೊಡಲಾಗುತ್ತದೆ. ಕುಂಸಿ, ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದರ ವ್ಯಾಪ್ತಿ ಅಧಿಕ ಪ್ರಮಾಣದಲ್ಲಿದೆ ಎನ್ನುವುದು ಸುಮಾರು ನಾಲ್ಕೈದು ವರ್ಷಗಳ ಹಿಂದೆ ನಡೆದ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿತ್ತು. ಕುಂಸಿ ಸಬ್ ಇನ್ಸ್‌ಪೆಕ್ಟರ್ ಮತ್ತು ಮಾಳೂರು ಠಾಣೆ ಸಬ್ ಇನ್ಸ್‌ಪೆಕ್ಟರ್ ಹಾಗೂ ಕೆಲವು ಸಿಬ್ಬಂದಿಗಳು ಇದೇ ಅಕ್ರಮದಿಂದ ಅಮಾನತಾಗಿದ್ದರು. ಆ ಭಾಗದಲ್ಲಿ ನಡೆಯುತ್ತಿರುವ ಇಂತಹ ಅಕ್ರಮ ಚಟುವಟಿಕೆಯ ಮಾಹಿತಿ ಪಡೆಯುವಲ್ಲಿ ವಿಫಲರಾಗಿದ್ದಾರೆಂದು ಅವರ ವಿರುದ್ದ ಆರೋಪಿಸಲಾಗಿತ್ತು.
ಇದೇ ರೀತಿ ಸಾಗರ ಮತ್ತು ಶಿಕಾರಿಪುರ ಗ್ರಾಮಾಂತರದಲ್ಲೂ  ವಿಪರೀತ ಪ್ರಮಾಣದಲ್ಲಿ ಇದು ಬೆಳೆಯಲ್ಪಡುತ್ತಿದೆ. ಆದರೆ ಬೆಳಕಿಗೆ ಬರುತ್ತಿಲ್ಲ. ಪೊಲೀಸರು ಇದನ್ನು ತಮ್ಮ ಗುಪ್ತ ಕಾರ್ಯಾಚರಣೆ ಮೂಲಕ ಬಹಿರಂಗಪಡಿಸಬೇಕಿದೆ. ಗ್ರಾಮಾಂತರ ಪೊಲೀಸರು ಹಳ್ಳಿಗಳಿಗೆ ಭೇಟಿ ನೀಡಿ, ಅಲ್ಲಿ ಕೆಲವರನ್ನು ವಿಶ್ವಾಸಿಗರನ್ನಾಗಿ ಮಾಡಿಕೊಂಡು ಇದರ ಬಗ್ಗೆ ನಿಗಾ ವಹಿಸುವ ಕೆಲಸ ಮಾಡಬೇಕಿದೆ. ಇಲ್ಲವಾದಲ್ಲಿ ವರ್ಷದಿಂದ ವರ್ಷಕ್ಕೆ ಇದನ್ನು ಬೆಳೆಯುವ ಪ್ರಮಾಣ ಹೆಚ್ಚುತ್ತದೆ.
ವಿಶೇಷವಾಗಿ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ದಟ್ಟಡವಿ ಪ್ರದೇಶದಲ್ಲಿ ಇದನ್ನು ಬೆಳೆಯುವ ಜಾಲ ಮಾಫಿಯಾ ತರಹ ಕೆಲಸ ಮಾಡುತ್ತಿದೆಎಂಬ ಸಂಶಯ ಇದೆ. ಅರಣ್ಯ ಇಲಾಖೆಯಿಂದಲೂ ಈ ಬಗ್ಗೆ ಮಾಹಿತಿ ಬೆಳಕಿಗೆ ಬಂದಿತ್ತು. ಆದರೆ ನಂತರ ಯಾವ ವಿಚಾರವೂ ಪ್ರಕಟವಾಗಿಲ್ಲ. ಸಿಬ್ಬಂದಿಗಳೂ ಸಹ ಇದರಲ್ಲಿ ಶಾಮೀಲಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿದೆ. ಹಿರಿಯ ಅಧಿಕಾರಿಗಳು ಇದನ್ನು ಪತ್ತೆ ಮಾಡಲು ಕ್ರಮ ಜರುಗಿಸಬೇಕಿದೆ.
ಮಲೆನಾಡಿನ ಈ ಗಾಂಜಾ ಬೆಳೆ ಸಂಸ್ಕರಣಗೊಂಡು ಈ ಭಾಗದಲ್ಲಿಯೇ ಮಾರಾಟವಾಗುತ್ತದೆ ಎನ್ನುವ ವಿಚಾರವೂ ಪ್ರಚಲಿತದಲ್ಲಿದೆ. ಶಿವಮೊಗ್ಗ ಸಹಿತ ನಗರ ಪ್ರದೇಶಗಳ  ಕಾಲೇಜು ವಿದ್ಯಾರ್ಥಿಗಳು  ಗಾಂಜಾ ಅಮಲಿನಲ್ಲಿ ತೇಲುತ್ತಿರುವುದು ಆಗಾಗ ಕೇಳಿಬರುತ್ತಿದೆ. ಹಾಸ್ಟೆಲ್ ಬಳಿ ಇವುಗಳ ಮಾರಾಟ, ಪೂರೈಕೆ ಹೆಚ್ಚಾಗುತ್ತಿದೆ. ಮೊದಮೊದಲು ಹೊರರಾಜ್ಯದ ವಿದ್ಯಾರ್ಥಿಗಳನ್ನು ಮಾತ್ರ ಆಕರ್ಷಿಸುತ್ತಿದ್ದ ಮಾದಕ ವಸ್ತು ಈಗ ಸ್ಥಳೀಯರನ್ನೂ ಬಲಿತೆಗೆದುಕೊಳ್ಳುತ್ತಿದೆ. ಇದರ ನಿಗ್ರಹಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕಿದೆ.
  ಕೇರಳದ ಮಾಫಿಯಾ ಸಹಾಯದಿಂದ ಕೆಲವರು ಗಾಂಜಾ ಬೆಳೆ, ಮಾರಾಟ, ಪೂರೈಕೆ ಮಾಡುವುದರ ಜೊತೆಗೆ ಇಲ್ಲಿನ ರೈತರನ್ನೂ ಪುಸಲಾಯಿಸಿ, ಹೆಚ್ಚಿನ ಲಾಭದ ಆಮಿಷ ಒಡ್ಡಿ ಗಾಂಜಾ ಹೆಚ್ಚಲು ಕಾರಣರಾಗಿದ್ದಾರೆನ್ನುವ ಅಂಶ ಪೊಲೀಸ್ ಇಲಾಖೆಗೆ ಗೊತ್ತಿದೆ. ಇದರ ಕಠಿಣ ನಿಗ್ರಹಕ್ಕೆ ಈಗ ಅಗತ್ಯ ಕ್ರಮವನ್ನು ಜರುಗಿಸಲು ಸಕಾಲವಾಗಿದೆ.   

Saturday, 1 October 2016

ಬರಪೀಡಿತ ತಾಲೂಕು ಆಯ್ಕೆಯಲ್ಲಿ ‘ಕೈ’ವಾಡ

 ನಿಜಕ್ಕೂ ಬರಪೀಡಿತ ತಾಲೂಕುಗಳ ಆಯ್ಕೆ ಸಮರ್ಪಕವಾಗಿ ನಡೆದಿಲ್ಲ. ಅಧಿಕಾರಿಗಳು ಸಲ್ಲಿಸಿದ ವರದಿ ತಪ್ಪಾಗಿದೆಯೋ ಅಥವಾ ರಾಜಕಾರಣಿಗಳ ಕೈ ಮೇಲಾಗಿದೆಯೋ ಗೊತ್ತಾಗುತ್ತಿಲ್ಲ. ಕಳೆದ ವರ್ಷ ಬರದಿಂದ ತತ್ತರಿಸಿದ್ದ ಸೊರಬವನ್ನೂ ಕೈ ಬಿಡಲಾಗಿದೆ.  ಶಿಕಾರಿಪುರವೂ ಹಿಂದಿನ ವರ್ಷವೇ ಆಯ್ಕೆಯಾಗಬೇಕಿತ್ತು. ಈ ವರ್ಷವೂ ಆಯ್ಕೆಯಾಗಿಲ್ಲ. ಬಪೀಡಿತ ತಾಲೂಕುಗಳ ಆಯ್ಕೆಯಲ್ಲಿಯೇ ತಾರತಮ್ಯ  ನಡೆದರೆ ಇನ್ನು ಬರ ಕಾಮಗಾರಿ, ಹಣಬಿಡುಗಡೆಯಲ್ಲಿ ಎಷ್ಟು ವ್ಯತಾಸವಾಗಬಹುದು?

ಬರ ಪೀಡಿತ ತಾಲೂಕುಗಳ ಆಯ್ಕೆ ಪ್ರಕ್ರಿಯೆಯನ್ನು ನ್ಯಾಯ ಸಮ್ಮತವಾಗಿ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಬೇಕು. ಆದರೆ ತಾಲೂಕುಗಳ ಆಯ್ಕೆಯಲ್ಲಿ ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿರುವುದು ಸರಿಯಲ್ಲ. ತಾರತಮ್ಯ ಧೋರಣೆ ಅನುಸರಿಸುತ್ತಿರುವುದು ಬೇಸರದ ಸಂಗತಿ.
- ಶಾಸಕಿ ಶಾರದಾ ಪೂರ‌್ಯನಾಯ್ಕ್

    ರಾಜ್ಯ ಸರ್ಕಾರ ಪ್ರಕಟಿಸಿರುವ ಬರ ಪೀಡಿತ ತಾಲೂಕು ಪಟ್ಟಿಯಲ್ಲಿ ಜಿಲ್ಲೆಯ ಮೂರು ತಾಲೂಕುಗಳು ಮಾತ್ರ ಸ್ಥಾನ ಪಡೆದುಕೊಂಡಿದ್ದು, ಉಳಿದ ನಾಲ್ಕು ತಾಲೂಕುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ಶಿವಮೊಗ್ಗ, ಭದ್ರಾವತಿ, ಸಾಗರ ಹಾಗೂ ಶಿಕಾರಿಪುರ ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಬೇಕು
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಕುಮಾರ್.

  ಜಿಲ್ಲೆಯ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಅಥವಾ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಯಾವುದೇ ಮಾಹಿತಿಯನ್ನು ಕಳುಹಿಸಿಲ್ಲ. ರಾಜ್ಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ  ಅಂಕಿಸಂಖ್ಯೆಗಳನ್ನು ಆಧರಿಸಿ ರಾಜ್ಯಸರ್ಕಾರವು ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಜಿಲ್ಲಾಡಳಿತದ ಯಾವುದೇ ಪಾತ್ರವಿಲ್ಲ.ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದು ಮಾಧ್ಯಮಗಳ ಮುಖಾಂತರ ಗೊತ್ತಾಗಿದೆ.
- ಚನ್ನಬಸಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ

 ಯಾವ ತಾಲೂಕು ನಿಜವಾಗಿ ಬರಗಾಲಪೀಡಿತ ಎಂದು ಘೋಷಿತವಾಗಬೇಕಿತ್ತೋ ಅದು ಘೋಷಿತವಾಗಿಲ್ಲ. ಯಾವುದನ್ನು ಘೋಷಣೆ ಮಾಡದಿದ್ದರೂ ತೊಂದರೆ ಇಲ್ಲವಾಗಿತ್ತೋ ಅವು ಬರಗಾಲಪೀಡಿತ ಎಂದು ಘೋಷಣೆಯಾಗಿವೆ. ಇದು ಜಿಲ್ಲೆಯ ಬರಗಾಲಪೀಡಿತ ತಾಲೂಕುಗಳ ಪಟ್ಟಿಯಲ್ಲಾದ ವಿಚಿತ್ರತೆ. ಮಲೆನಾಡಿನ ಸಾಗರ, ಹೊಸನಗರ, ತೀರ್ಥಹಳ್ಳಿ ಬರಗಾಲಪೀಡಿತವಂತೆ. ಅರೆಮಲೆನಾಡಿನ ಭದ್ರಾವತಿ, ಶಿಕಾರಿಪುರ ಮತ್ತು ಸೊರಬದಲ್ಲಿ ಬರವಿಲ್ಲವಂತೆ. ಯಾವ ಅಧಿಕಾರಿ ಈ ರೀತಿ ವರದಿ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ ಜನರಂತೂ ಜಿಲ್ಲೆಯವರೇ ಆದ ಕಂದಾಯ ಸಚಿವರನ್ನು ಕಾಂಗ್ರೆಸ್ ಶಾಸಕರಿರುವ ತಾಲೂಕಿನಲ್ಲಿ ಮಾತ್ರ ಬರ ಕಾಣಿಸಿಕೊಂಡಿದೆಯೇ ಎಂದು ಪ್ರಶ್ನಿಸಲಾರಂಭಿಸಿದ್ದಾರೆ.
ವಿಶೇಷವೆಂದರೆ, ಇತ್ತೀಚೆಗೆ ಜರುಗಿದ ಜಿಪಂ ಸಭೆಯಲ್ಲಿ  ಇಡಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ನಿರ್ಣಯ ಮಾಡಲಾಗಿತ್ತು. ಆದರೆ ಆಗಿದ್ದೇ ಬೇರೆ. ಕಳೆದ ವರ್ಷ ಬರಪೀಡಿತ ಎಂದು ಘೋಷಿತವಾಗಿದ್ದ ಸೊರಬವನ್ನೂ ಈ ಬಾರಿ ಕೈಬಿಡಲಾಗಿದೆ. ಇದರ ಜೊತೆ ಕಳೆದ ಸಲವೇ ಬರಪಟ್ಟಿ ಸೇರಬೇಕಿದ್ದ ಶಿಕಾರಿಪುರಕ್ಕೂ ಈ ಬಾರಿ ಸ್ಥಾನ ಕಲ್ಪಿಸಿಲ್ಲ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಕೊರತೆ ಕಂಡಿರುವ ತಾಲುಕುಗಳು ಇವೆರಡು. ಬರಪೀಡಿತವೆಂದು ಘೋಷಿಸಿರುವ ಸಾಗರ, ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕುಗಳಲ್ಲಿ ಬಿದ್ದಿರುವಷ್ಟು ಮಳೆಯು ಸೊರಬ, ಶಿಕಾರಿಪುರ, ಭದ್ರಾವತಿ ಹಾಗೂ ಶಿವಮೊಗ್ಗ ತಾಲೂಕುಗಳಲ್ಲಿ ಆಗಿಲ್ಲ. ರೈತರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೊದಲು ಈ ತಾಲೂಕುಗಳನ್ನು ಬರ ಪೀಡಿತವೆಂದು ಸರ್ಕಾರ ಘೋಷಿಸಬೇಕಾಗಿತ್ತು.
ಪ್ರಸ್ತುತ ಮುಂಗಾರು ಅವಧಿಯಲ್ಲಿ ಜಿಲ್ಲೆಯಾದ್ಯಂತ ಮಳೆಯ ತೀವ್ರ ಕೊರತೆ ಉಂಟಾಗಿದೆ. ಎಲ್ಲ ತಾಲೂಕುಗಳಲ್ಲಿಯೂ ವಾಡಿಕೆಯ ಮಳೆಯಾಗಿಲ್ಲ. ಪ್ರಮುಖ ಜಲಾಶಯ, ಕೆರೆಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಇದರಿಂದ ಕೃಷಿ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿದೆ. ಎಲ್ಲ ತಾಲೂಕುಗಳಲ್ಲಿಯೂ ಬರಗಾಲದ ಕರಿಛಾಯೆ ಆವರಿಸಿದೆ.  ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ಜಿಲ್ಲೆಯವರೇ ಆಗಿದ್ದರಿಂದ ಹಾಗೂ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಅವರಿಗೆ ಮಾಹಿತಿಯಿರುವುದರಿಂದ ಇಡೀ ಜಿಲ್ಲೆಯನ್ನೇ ಬರ ಪೀಡಿತವೆಂದು ಘೋಷಿಸುವ ನಿರೀಕ್ಷೆ ಜಿಲ್ಲೆಯ ಜನಪ್ರತಿನಿಧಿ, ನಾಗರಿಕ ವಲಯದಲ್ಲಿತ್ತು.
 ಬರಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆಯದ ನಾಲ್ಕು ತಾಲೂಕುಗಳ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಈಗ ಅಸಮಾಧಾನ ಮನೆ ಮಾಡಿದೆ. ಈ ತಾಲೂಕುಗಳ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕೆಲವು ಸ್ಥಳೀಯ ಜನಪ್ರತಿನಿಧಿಗಳು ಕೂಡ ತಮ್ಮ ತಾಲೂಕು ಬರಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆಯದಿರುವುದಕ್ಕೆ ಪರೋಕ್ಷ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಚಿವ ಕಾಗೋಡು ಅವರನ್ನು ಭೇಟಿಯಾಗಿ ಚೆರ್ಚೆ ನಡೆಸಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಇದೇ ವಿಷಯ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ದ ಹೋರಾಟ ನಡೆಸುವ ಚಿಂತನೆ ನಡೆಸುತ್ತಿವೆ. ಈಗಾಗಲೇ ಸೊರಬ ಶಾಸಕ ಮಧು ಬಂಗಾರಪ್ಪ ಅವರು ಸೊರಬ ತಾಲೂಕು ಕೈಬಿಟ್ಟಿರುವ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಹರಿಹಾಯ್ದಿದ್ದಾರೆ. ಮೊದಲ ಪಟ್ಟಿಯಲ್ಲಿ ಈ ಎರಡೂ ತಾಲೂಕಿಗೆ ಸ್ಥಾನ ಸಿಗಬೇಕಿತ್ತು. ಆದರೆ ಹೊಸ ತಾಲೂಕನ್ನು ಸೇರಿಸುವ ಮೂಲಕ ರಾಜ್ಯ ಸರ್ಕಾರ ಅಥವಾ ಸಂಬಂಧಿತ ಇಲಾಖೆ ರಾಜಕೀಯ ಮಾಡಿದ್ದಂತೂ ಸತ್ಯ. ಅಧಿಕಾರಿಗಳು ಯಾರ ಓಲೈಕೆಗಾಗಿ ಈ ರೀತಿ ಮಾಡಿದ್ದಾರೆ ಅಥವಾ ಯಾರದ್ದಾದರೂ ಪ್ರಭಾವ ಇದರಲ್ಲಿದೆಯೇ ಎ್ನುವುದು ಜನರ ಪ್ರಶ್ನೆಯಾಗಿದೆ.  
ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿರುವ ಮೂರು ತಾಲೂಕುಗಳು ಬರ ಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ತಾಲೂಕುಗಳ ಆಯ್ಕೆಯಲ್ಲಿಯೂ ರಾಜಕೀಯ ಮಾಡಲಾಗಿದೆ. ವಾಸ್ತವ ಸ್ಥಿತಿಗತಿಯ ಆಧಾರದ ಮೇಲೆ ತಾಲೂಕುಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಪಕ್ಷದವರು ಮಾತನಾಡಲಾರಂಭಿಸಿದ್ದಾರೆ.



----------------------------------