ಜನಹಿತ, ಸಮಸ್ಯೆ, ಅಭಿವೃದ್ಧಿ ಮರೆತ ಅಧಿಕಾರಿಗಳು
ಕಿವಿ ಹಿಂಡಿ ಕೆಲಸದ ನೆನೆಪು ಮಾಡಿಕೊಟ್ಟ ಸಿಇಓ
ಶಿವಮೊಗ್ಗದಲ್ಲಿ ಪಾದರಸದಂತೆ ಚಲನಶೀಲ, ಕೆಲಸ ಮಾಡುವ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಜಿಪಂ ಸಿಇಓ ರಾಕೇಶ್‌ಕುಮಾರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪವಿಭಾಗಾಧಿಕಾರಿ ಎಚ್. ಕೆ. ಕೃಷ್ಣಮೂರ್ತಿಯವರಂತಹ ದಕ್ಷ ಅಧಿಕಾರಿಗಳಿದ್ದಾರೆ. ಅವರೆಲ್ಲ ಕೆಲಸ ಮಾಡುವ ರೀತಿ, ಪರಿಸ್ಥಿತಿಯನ್ನು ನಿಭಾಯಿಸುವ ಕಲೆ, ಹೊತ್ತು ಮೀರಿದರೂ ಕೆಲಸ ಮುಗಿಸಿಯೇ ಮನೆಗೆ ಮರಳುವುದು ಎಂತಹವರನ್ನೂ ಆಕರ್ಷಿಸುತ್ತದೆ. ಇವರೆಲ್ಲ ಎಷ್ಟು ಕ್ರಿಯಾಶೀಲರೆಂದರೆ, ಸದಾ ಜನಸಮಾನ್ಯರ ಸಮಸ್ಯೆ ಪರಿಹರಿಸಲು, ಅಹವಾಲು ಕೇಳಲು ಸಿದ್ಧವಾಗಿರುತ್ತಾರೆ. ಸಾಮಾನ್ಯ ವ್ಯಕ್ತಿಯೂ ಇವರನ್ನು ಭೇಟಿ ಮಾಡಿ ಮಾತನಾಡಲು ಅವಕಾಶ ಕಲ್ಪಿಸಿದ್ದಾರೆ. ಇಷ್ಟೊಂದು ಉತ್ತಮ ಅಧಿಕಾರಿ ವೃಂದ ಕಾಣುವುದು ದುರ್ಲಭ. ನಿಜಕ್ಕೂ ಜಿಲ್ಲೆಯ ಎಲ್ಲಾ ಇಲಾಖಾ ಅಧಿಕಾರಿಗಳು ಇವರನ್ನು ನೋಡಿ ಪಾಠ ಕಲಿಯಬೇಕಿದೆ. ಇವರ ಮಾದರಿಯಲ್ಲಿ ಕೆಲಸ ಮಾಡುವ ಛಲ ಬೆಳೆಸಿಕೊಳ್ಳಬೇಕಿದೆ.
ಸಮಸ್ಯೆಗಳ ಸ್ವರೂಪವನ್ನೇ ಸರಿಯಾಗಿ ಅರ್ಥೈಸಿಕೊಳ್ಳದ ಜಿಲ್ಲಾ ಮಟ್ಟದ ಬಹುತೇಕ ಅಧಿಕಾರಿಗಳು ಅಭಿವೃದ್ಧಿಯನ್ನು ಹೇಗೆ ಮಾಡಿಯಾರು, ಅಥವಾ ಸಮಸ್ಯೆಯನ್ನು ಹೇಗೆ ಬಗೆಹರಿಸಿಯಾರು. ತಪ್ಪು ಮಾಹಿತಿಯನ್ನು ಸರಿಯಾಗಿ, ಸರಿಯಾದ ಮಾಹಿತಿಯನ್ನು ತಪ್ಪಾಗಿ ಕೊಡುವ ಮೂಲಕ ಮೇಲಧಿಕಾರಿಗಳ ಕೆಂಗಣ್ಣಿಗೆ ತುತ್ತಾಗುತ್ತಿದ್ದಾರೆ. ನೈಜ ಸ್ಥಿತಿ ಹೇಳುವ ಸಾಮರ್ಥ್ಯ ಇಲ್ಲವೇ ಇಲ್ಲ. ಸಮಸ್ಯೆಯನ್ನು ಅರ್ಥೈಕೊಳ್ಳಬೇಕಾಗಿತ್ತಾದರೂ ನಗರದಲ್ಲಿ ನೆಲೆಸಿರುವುದರಿಂದ ಗ್ರಾಮೀಣ ಸಮಸ್ಯೆಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇವರಿಂದ ಯಾವ ಅಭಿವೃದ್ಧಿ ಅಥವಾ ಜನರ ಹಿತವನ್ನು ನಿರೀಕ್ಷಿಸಬಹುದು?
ಇವರೆಲ್ಲ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು. ಬಹುತೇಕರು ಹಲವರು ವರ್ಷಗಳಿಂದ ಇಲ್ಲಿಯೇ ತಳವೂರಿದ್ದಾರೆ. ಆದರೂ ಅವರಿಗೆ ಕೆಲಸ ಮಾಡುವುದೆಂದರೆ ಏಕೋ ಅಲರ್ಜಿ. ಇಲಾಖೆಯ ಕೆಲಸ, ಜನರಿಗೆ ದೊರಕಿಸಿಕೊಡಬಹುದಾದ ಸೌಲಭ್ಯಗಳು, ಜನಪ್ರತಿನಿಧಿಗಳು ಸಮಸ್ಯೆ ಹೇಳಿದಾಗ ಅದನ್ನು ಪರಿಹರಿಸುವುದು, ಜನರು ತಮ್ಮ ಬಳಿ ಬಂದಾಗ ಅವರನ್ನು ಸೌಜನ್ಯದಿಂದ ಕಾಣುವುದು ಇವ್ಯಾವುದನ್ನೂ ಮಾಡುವುದಿಲ್ಲ. ಬದಲಿಗೆ ಜಿಲ್ಲಾ ಮಟ್ಟದ ಇಪ್ಪತ್ತಂಶಗಳ ಸಭೆ ಕರೆದಾಗ ಬರುತ್ತಾರೆ. ಹಿಂದಿನ ಸಭೆಯಲ್ಲಿ ಹೇಳಿದ್ದನ್ನೇ ಹೇಳುತ್ತಾರೆ. ಜನಪ್ರತಿನಿಧಿಗಳಿಂದ ಅಥವಾ ಹಿರಿಯ ಅಧಿಕಾರಿಗಳಿಂದ ಒಂದಷ್ಟು ಉಗಿಸಿಕೊಳ್ಳುತ್ತಾರೆ, ಮರಳುತ್ತಾರೆ.
ಹೀಗೇಕೆ ಇವರು ಮಾಡುತ್ತಾರೆ ಎಂದು ಯೋಚಿಸಿದಾಗ ಇವರಲ್ಲಿ ಕೆಲಸ ಮಾಡುವ ಮನೋಭಾವವೇ ಇಲ್ಲದಿರುವುದು ವೇದ್ಯವಾಗುತ್ತದೆ. ಎರಡನೆಯದಾಗಿ, ಸಭೆಗೆ ತಯಾರಿ ನಡೆಸುವುದಿಲ್ಲ. ಅಂದರೆ ಕೆಲಸದಲ್ಲಿ ನಿಪುಣತೆ, ಚಾಕಚಕ್ಯತನ ಇಲ್ಲ. ಅಂದಿನ ಕೆಲಸವನ್ನು ಅಂದೇ ಮುಗಿಸುವುದಿಲ್ಲ. ಮೇಲಧಿಕಾರಿಗಳಿಗೆ ಹೇಗೆ ವರದಿ ಕಳಿಸಬೇಕೆಂಬ ಕಲೆ ಗೊತ್ತಿಲ್ಲ. ಸಭೆಗೆ ಸಮಯಕ್ಕೆ ಸರಿಯಾಗಿ ಹಾಜರಾಗುವುದೂ ಇಲ್ಲ. ಸಮಯಪ್ರಜ್ಞೆ ಗೊತ್ತೇ ಇಲ್ಲ. ನೀಟಾಗಿ ಡ್ರೆಸ್ ಮಾಡಿ, ಶಿಸ್ತಿನಿಂದ ಆಗಮಿಸಬೇಕೆನ್ನುವುದೂ ಕೆಲವರಿಗೆ ಗೊತ್ತಿಲ್ಲ.
ಇದು ಜಿಲ್ಲೆಯ ಬಹುತೇಕ ಹಿರಿಯ ಅಧಿಕಾರಿಗಳು ಮಾಡುತ್ತಿರುವ ಕೆಲಸ. ಇದನ್ನೆಲ್ಲ ಆರೆಂಟು ತಿಂಗಳಿನಿಂದ ಗಮನಿಸಿಕೊಂಡು ಬಂದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇನ್ನು ಈ ಅಶಿಸ್ತನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಹಂತ ತಲುಪಿದಾಗ ಚೆನ್ನಾಗಿ ಬುದ್ಧಿ ಹೇಳಿದ್ದಾರೆ.
ಜಿಲೆಯಲ್ಲಿ ಈ ವರ್ಷ ಬಹುತೇಕ ಬರಗಾಲ ಬಂದಿದೆ. ಬೆಳೆೆ ನಾಶವಾಗಿದೆ. ಶಿಕ್ಷಕರ ಕೊರತೆ ಇನ್ನೂ ಸಾಕಷ್ಟಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಇನ್ನೂ ಮೂರ್ನಾಲ್ಕು ವರ್ಷದ ಹಿಂದಿನ ಗುರಿಯೇ ಬಾಕಿ ಇದೆ. ಕಾರ್ಮಿಕರಿಗೆ ದೊರಕಬೇಕಾದ ವಿಮೆ ಇನ್ನಿತರ ಸೌಲಭ್ಯ ಸಿಕ್ಕಿಲ್ಲ. ಕುಡಿಯುವ ನೀರಿನ ಯೋಜನೆ ನಾಲ್ಕಾರು ವರ್ಷವಾದರೂ ಮುಗಿದಿಲ್ಲ. ಇವುಗಳ ಬಗ್ಗೆ ಪ್ರಶ್ನಿಸಿದರೆ ಈ ಅಧಿಕಾರಿಗಳು ಯಥಾ ಪ್ರಕಾರ ಅನುಪಾಲನಾ ವರದಿಯಲ್ಲಿ ಇದ್ದುದನ್ನೇ ಓದಿ ಸಭೆ ಮುಗಿಸುವ ತಂತ್ರ ಹೂಡುತ್ತಾರೆ. ಒಂದು ಇಲಾಖೆಯ ಹಿರಿಯ ಅಧಿಕಾರಿಯಾದ ಮೇಲೆ ಅವರಿಗೆ ತಮ್ಮದೇ ಆದ ಜವಾಬ್ದಾರಿ ಇರುತ್ತದೆ. ಇಡೀ ಜಿಲ್ಲೆಯ ವ್ಯವಹಾರ ಸಂಬಂಧಿಸುತ್ತದೆ. ಕೆಲವರು ಜಿಲ್ಲಾ ಕೇಂದ್ರ ಬಿಟ್ಟು ತಾಲೂಕಿಗೆ ತೆರಳುವುದೇ ಇಲ್ಲ. ಓಡಾಡಲೊಂದು ವಾಹನ, ಕೈಲೊಂದು ಫೈಲು ಹಿಡಿದು ಸದಾ ಮಿಂಚುತ್ತಾರೆ. ಹೊಸ ಯೋಜನೆ ಯಾವುದು ಜಾರಿಯಾಗಿದೆ, ತಮ್ಮ ಇಲಾಖೆಯ ಅನುದಾನದಲ್ಲಿ ಯಾವ್ಯಾವ ಕೆಲಸ ನಡೆಸಬಹುದು, ಜನರಿಗೆ ತುರ್ತಾಗಿ ನೀಡಬಹುದಾದ ಸೌಲಭ್ಯಗಳೇನು ಎನ್ನುವುದನ್ನು ಯೋಚಿಸುತ್ತಿಲ್ಲ.
ಕೆಲವು ಅಧಿಕಾರಿಗಳು ಎಷ್ಟು ಚಾಲಾಕಿಗಳಿದ್ದಾರೆ ಎಂದರೆ ಕೆಡಿಪಿ, ಜಿಪಂನಂತಹ ಮಹತ್ವದ ಸಭೆ ಇದ್ದ ದಿನವೇ ರಜೆ ಹಾಕುತ್ತಾರೆ. ಕಿರಿಯ ಅಧಿಕಾರಿಗಳನ್ನು ಸಭೆಗೆ ಕಳುಹಿಸಿ ಅವರು ಉಗಿಸಿಕೊಳ್ಳುವಂತೆ ಮಾಡಿ ತಾವು ಬಚಾವಾಗುತ್ತಾರೆ.
ಇದನ್ನೆಲ್ಲ ಗಮನಿಸಿದ್ದ ಸಿಇಓ ರಾಕೇಶ್‌ಕುಮಾರ್ ಬಹುತೇಕ ಇಲಾಖಾಧಿಕಾರಿಗಳಿಗೆ ಮೊನ್ನೆ ಕಿವಿ ಹಿಂಡಿದ್ದಾರೆ. ಸಭೆಗೆ ಏಕೆ ಮತ್ತು ಹೇಗೆ ಬರಬೇಕು ಎಂಬ ಪಾಠ ಮಾಡಿದ್ದಾರೆ. ಜೊತೆಗೆ ಅವರ ಸೇವಾ ವೈಖರಿಯ ಬಗ್ಗೆ ಇಲಾಖೆಯ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿಗೆ ಬರೆಯುವುದಾಗಿ ಎಚ್ಚರಿಸಿದ್ದಾರೆ. ಕೆಲಸವನ್ನೇ ಮಾಡದ, ಸೋಂಬೇರಿಗಳಾದ ಇಂತಹ ಅಧಿಕಾರಿಗಳು ಜಿಲ್ಲೆಯಲ್ಲಿ ಇದ್ದರೆ ಏನು ಲಾಭ ಎನ್ನುವ ಪ್ರಶ್ನೆ ಸಿಇಓ ಅವರದ್ದು.
ಇತ್ತೀಚೆಗೆ ಶಿಕಾರಿಪುರದಲ್ಲಿ ಇಬ್ಬರು ಅಧಿಕಾರಿಗಳು ಬೆಳೆ ಹಾನಿಯನ್ನು ರೈತರ ಹೋಲಕ್ಕೆ ಹೋಗಿ ಪರಿಶೀಲಿಸದೆ ಕಚೇರಿಯಲ್ಲೇ ಕುಳಿತು ವರದಿ ತಯಾರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂತಹವರಿಂದ ಯಾವ ರೈತನಿಗೂ ಎಳ್ಳಷ್ಟೂ ಲಾಭವಿಲ್ಲ. ಸರ್ಕಾರದ ಆದೇಶ ಬಂದಿದ್ದರೂ ಅದನ್ನು ಕಾರ್ಯಗತಗೊಳಿಸಬೇಕೆಂಬ ಕನಿಷ್ಟ ತಿಳುವಳಿಕೆಯೂ ಇಲ್ಲ. ಇಲಾಖೆಯಲ್ಲಿ ಹಣವಿಲ್ಲ, ಸಿಬ್ಬಂದಿಗಳಿಲ್ಲ, ಫಲಾನುಭವಿಗಳೇ ಇಲ್ಲ, ತಾಂತ್ರಿಕ ತೊಂದರೆ ಇದೆ, ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಕೆಲಸ ಮಾಡಿಕೊಡುತ್ತಿಲ್ಲ ಎಂಬ ನೆಪ ಹೇಳುವ ಅಧಿಕಾರಿಗಳು, ಇವರೆಲ್ಲರಿಂದ ಕೆಲಸ ಮಾಡಿಸಿ, ವೀಕ್ಷಿಸಿ ವರದಿ ಕೊಡಲೆಂದೇ ತಾವಿದ್ದೇವೆ ಎನ್ನುವುದನ್ನು ಮರೆತುಬಿಟ್ಟಿದ್ದಾರೆ.
ಕೆಲವು ಅಧಿಕಾರಿಗಳಂತೂ ಎಷ್ಟು ಜಡ್ಡುಗಟ್ಟಿ ಹೋಗಿದ್ದಾರೆಂದರೆ, ಅವರನ್ನು ಎಬ್ಬಿಸುವುದೇ ಕಷ್ಟ ಎನ್ನುವಂತಾಗಿದೆ. ಯಾವ ಆದೇಶ ಬರಲಿ, ಹೋಗಲಿ, ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ಅವರು ಮಾಡಿದ್ದೆ ಕೆಲಸ, ಬಿಟ್ಟಿದ್ದೇ ಕೆಲಸ. ಇಡೀ ದಿನವನ್ನು ವ್ಯರ್ಥ ಮಾಡುತ್ತ ಕಾಲಕಳೆಯುತ್ತಾರೆ. ಇನ್ನೂ ಕೆಲವು ಅಧಿಕಾರಿಗಳ ಮುಖದರ್ಶನವೇ ಸಾರ್ವಜನಿಕರಿಗಿಲ್ಲ. ಇವರು ಬಹಿರಂಗದಲ್ಲಿ ಕಾಣಿಸಿಕೊಳ್ಳದೆ ಕೆಲಸ ಮಾಡುವವರು!
ಸಭೆಯಲ್ಲಿ ಬೇಜವಾಬ್ದರಿ ಉತ್ತರ ಕೊಡುವುದು, ವಿಷಯ ಜ್ಞಾನ ಇಲ್ಲದಂತೆ ವರ್ತಿಸುವುದು, ಪ್ರಶ್ನೆಗೆ ಯಾವುದೋ ಉತ್ತರ ಕೊಡುವುದು, ಸಂಬಂಧಿಸಿದ ದಾಖಲೆ ತರದಿರುವುದು, ಆಮೇಲೆ ಕಳಿಸಿಕೊಡುತ್ತೇನೆ ಎನ್ನುವುದು, ಪಕ್ಕದಲ್ಲಿ ಕುಳಿತವರೊಂದಿಗೆ ಮಾತನಾಡುವುದು, ಮೊಬೈಲ್ ಚಾಟಿಂಗ್ ನಡೆಸುತ್ತ ಸಭೆಗೂ ತಮಗೂ ಸಂಬಂಧವಿಲ್ಲದಂತೆ ಇರುವುದು, ಆಕಳಿಸುತ್ತ ಕಾಲಕಳೆಯುವುದು... ಇತ್ಯಾದಿ ಸಾಮಾನ್ಯವಾಗಿ ಅಧಿಕಾರಿಗಳಲ್ಲಿ ಕಂಡುಬರುತ್ತದೆ. ಕೆಲಸದಲ್ಲಿ ನಿಷ್ಠೆ, ಶ್ರದ್ಧೆ, ಆಸಕ್ತಿ, ಕಾಳಜಿ ಇಲ್ಲದಿರುವವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?
ಇಂತಹವರ ಹೊರತಾಗಿಯೂ ಕೆಲವು ಅಧಿಕಾರಿಗಳು ಅತ್ಯುತ್ತಮ ರೀತಿಯಲ್ಲಿ ಅಂದರೆ ಮಾದರಿ ಎನಿಸುವಂತೆ ಕೆಲಸ ಮಾಡುತ್ತಿದ್ದಾರೆ. ಅವರು ಉತ್ತರ ಕೊಡುವ ಕೌಶಲ್ಯ, ಕೆಲಸ ಮಾಡುವ ರೀತಿ, ಸಂವಹನ ಕಲೆ ಮೆಚ್ಚುಗೆಯಾಗುತ್ತದೆ.
ಸಿಇಒ ರಾಕೇಶ್‌ಕುಮಾರ್ ಸರಳ ಮತ್ತು ಅಷ್ಟೇ ಕಟ್ಟುನಿಟ್ಟಿನ ಯುವ ಅಧಿಕಾರಿ. ಹತ್ತಾರು ಸಭೆಯಲ್ಲಿ ಕೆಲಸ ಮಾಡದ ಅಧಿಕಾರಿಗಳ ವರ್ತನೆ, ಅಸಡ್ಡೆತನ ಕಂಡು ರೋಸಿ ಹೋಗಿ ಮೊನ್ನೆ ಸರಿಯಾಗಿ ಚಾಟಿ ಬೀಸಿದ್ದಾರೆ. ಅಧಿಕಾರಿಗಳು ಸಿಇಒ ಮಾತು ಕೇಳಿ ಬೆವೆತುಹೋಗಿದ್ದಾರೆ. ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಹೇಳಿ, ರಿಲೀವ್ ಮಾಡುತ್ತೇನೆಂಬ ಮಾತನ್ನೂ ಆಡಿದ್ದಾರೆ.
ಜಿಲ್ಲಾಧಿಕಾರಿ ವಿ. ಪಿ. ಇಕ್ಕೇರಿ ಐದಾರು ತಿಂಗಳ ಹಿಂದೆ ಕುಡಿಯುವ ನೀರಿನ ಸಮಸ್ಯೆ ಗ್ರಾಮಗಳಲ್ಲಿ ಎದುರಾಗಿದ್ದ ಬಗ್ಗೆ ಮಾಹಿತಿ ಪಡೆಯಲು ಪಿಡಿಓಗಳ ಸಭೆ ಕರೆದಿದ್ದರು. ಆಗ ಕೇಳಿದ ಪ್ರಶ್ನೆಗಳಿಗೆ ಪಿಡಿಓಗಳಿಂದ ಬಂದ ಉತ್ತರ ಗಮನಿಸಿ ಚೆನ್ನಾಗಿ ಝಾಡಿಸಿದ್ದರು. ಕೆಲಸ ಮಾಡುತ್ತಿರುವ ಸ್ಥಳದ ಬಗ್ಗೆ ಸಾಮಾನ್ಯ ಜ್ಞಾನವನ್ನೂ ಹೊಂದಿಲ್ಲದ್ದರ ಬಗ್ಗೆ ತೀವ್ರವಾಗಿ ಕಿಡಿಕಾರಿದ್ದರು. ಅಲ್ಲಿಂದ ಡಿಸಿ ಎಂದರೆ ಪಿಡಿಓಗಳು ಬೆವರುತ್ತಾರೆ.
ಮೊನ್ನೆ ಸಿಇಒ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡಾಗ ಡಿಸಿಯವರು ಪಿಡಿಓಗಳಿಗೆ ಪಾಠ ಮಾಡಿದ ಸಭೆಯ ನೆನೆಪಾಯಿತು. ಈಗ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಸಿಇಓ ಬಿಸಿಮುಟ್ಟಿಸಿದ ಮೇಲೆ ಎಚ್ಚೆತ್ತುಕೊಳ್ಳುವಂತಾಗಿದೆ. ಬಿಸಿ ತಾಗಿದರೆ ಮಾತ್ರ ಬೆಣ್ಣೆ ಕರಗುತ್ತದೆ ಅಲ್ಲವೇ? ಈಗ ಬಿಸಿ ತಾಗಿದೆ. ಇನ್ನಾದರೂ ಜಾಗೃತರಾಗಿ ಇಲಾಖೆಯ ಕೆಲಸ ಮತ್ತು ತಮ್ಮ ಕರ್ತವ್ಯವನ್ನು ಅಧಿಕಾರಿಗಳು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕಿದೆ.
............................


