ಶಿಕ್ಷಣ ಸಾಗುತ್ತಿರುವ ದಾರಿ ನಿಜಕ್ಕೂ ಭಯಾನಕ
ಜಗತ್ತಿನಲ್ಲಿ ಬದುಕುವ ದಾರಿಯನ್ನು ಕಂಡುಕೊಳ್ಳಲು, ಹೇಗೆ ಬದುಕಬೇಕು ಎಂದು ತಿಳಿದುಕೊಳ್ಳಲು ಜ್ಞಾನ ಬೇಕು. ಜ್ಞಾನ ಎಂಬುದು ಸಮುದ್ರವಿದ್ದಂತೆ. ಶಿಕ್ಷಣ ಎಂಬ ಸಮುದ್ರದಲ್ಲಿ ಜ್ಞಾನವೆನ್ನುವುದು ಒಂದು ಅರಿವಿನ ದಾರಿ. ದುರದೃಷ್ಟವಶಾತ್ ಇಂದು ಜ್ಞಾನ ಎನ್ನುವುದು ಕಳೆದುಹೋಗಿದೆ. ಆ ಜಾಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಂದಿದೆ. ಆ ಹಾದಿಯಲ್ಲಿ ನಮ್ಮನ್ನು ಕೊಂಡೊಯ್ಯುತ್ತಿದೆ ಈ ವ್ಯಾಪಾರೀಕರಣದ ಶಿಕ್ಷಣ.
ಮಲೆನಾಡಿನ ಒಂದು ಹಳ್ಳಿ. ಸುಮಾರು 6 ಎಕ್ರೆಯಷ್ಟು ಅಡಿಕೆ ತೋಟವಿದೆ. ಈ ದಂಪತಿಗೆ ಇರುವವರು ಇಬ್ಬರೇ ಗಂಡು ಮಕ್ಕಳು. ಅವರಲ್ಲೊಬ್ಬ ಈಗಾಗಲೇ ಓದಿ ಬೆಂಗಳೂರು ಸೇರಿದ್ದರೆ, ಇನ್ನೊಬ್ಬ ಇಲ್ಲಿಯೇ ಕಲಿಯುತ್ತಿದ್ದು, ಆತನೂ ಬೆಂಗಳೂರಿನ ಧಾವಂತದ ಕನಸು ಕಾಣುತ್ತಿದ್ದಾನೆ.
ಈ ಘಟನೆ ಎದುರಾದಾಗ ಟಿ.ಎನ್. ಸೀತಾರಾಮ್ ಅವರ ‘ಮುಕ್ತ’ ಧಾರಾವಾಹಿಯ ನೆನೆಪು ಬರುತ್ತದೆ. ಜಾಗತೀಕರಣ, ಇದರಿಂದ ಹಳ್ಳಿಗಳೆಲ್ಲ ನಶಿಸುತ್ತಿರುವುದು, ಉದ್ಯಮಿಗಳು ಹಳ್ಳಿಗರ ಜಮೀನುಗಳನ್ನು ವಶಕ್ಕೆ ಪಡೆಯಲೆತ್ನಿಸುವುದು, ಅದರ ವಿರುದ್ಧ ಹೋರಾಡಿದರೂ ಹಳ್ಳಿಗರಿಗೆ ಜಯ ಸಿಗದಿರುವುದು....ಇತ್ಯಾದಿ ಘಟನೆಗಳು ಮನಃಪಟಲದಲ್ಲಿ ಹಾದುಹೋಗುತ್ತವೆ.
ಕನ್ನಡ ಚಾನೆಲ್ ಒಂದರಲ್ಲಿ ಎಲ್‌ಕೆಜಿಗೆ ಹೋಗುವ ಹುಡುಗರಿಂದ 7ನೆಯ ತರಗತಿವರೆಗೆ ಹೋಗುವ ಮಕ್ಕಳು ಅಭಿನಯ ಮಾಡುವ ಒಂದು ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಅದರ ಹೆಸರು-ಡ್ರಾಮಾ ಜೂನಿಯರ್ಸ್. ಇದರಲ್ಲಿ ಕಳೆದ ವಾರ 7ನೆಯ ತರಗತಿಯ ಬಾಲಕಿ ಒಂದು ಅಭಿನಯ ಮಾಡಿದಳು. ಅದೇನೆಂದರೆ, ಮಗ್ಗದ ಕೆಲಸ ಮಾಡುವ ಹುಡುಗಿಯ ಪಾತ್ರ.. ಕೊನೆಯ ಹಂತದಲ್ಲಿ ಅವಳಿಗೊಬ್ಬ ಮಗ. ನಾನು ಮಗನನ್ನಾದರೂ ಬಿಟ್ಟೇನು, ಮಗ್ಗವನ್ನು ಬಿಡಲ್ಲ ಎಂಬ ಒಂದು ಸಂಭಾಷಣೆ. ಕಾರಣ ಕೇಳಿದರೆ ಇದು ನನಗೆ ಅನ್ನ ಕೊಟ್ಟ ಉದ್ಯೋಗ. ಅಲ್ಲದೆ, ನಮ್ಮ ದೇಶದ ಸಂಸ್ಕೃತಿ ಎಂದಳು. ಅದಕ್ಕೆ ಸೀತಾರಾಮ್ ಹೇಳಿದರು- ಇಂದಿನ ಜಾಗತೀಕರಣದಲ್ಲಿ ನೀನು ನಮ್ಮನ್ನು ಎಚ್ಚರಿಸಿ ನಮ್ಮತನವನ್ನು ಬಿಂಬಿಸಿದ ರೀತಿ ಇದು ಎಂದು.
ಜಾಗತೀಕರಣದ ಭರದಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಇಂದಿನ ಶಿಕ್ಷಣವೂ ಇದನ್ನೇ ಕಲಿಸುತ್ತಿದೆ. ಯಾವುದೇ ಮಕ್ಕಳನ್ನು ಕೇಳಿ, ಮುಂದೆ ಏನಾಗುತ್ತಿಯೇ ಎಂದು. ಅವರಲ್ಲಿ ಸಿದ್ಧವಿರುವ ಉತ್ತರ- ಒಂದೋ ವೈದ್ಯನಾಗುವುದು, ಇಲ್ಲವೇ ಇಂಜಿನೀಯರ್ ಆಗುವುದು, ವಿದೇಶದಲ್ಲಿ ಅಥವಾ ಕಾರ್ಪೊರೇಟ್ ಸಿಟಿಯಲ್ಲಿ ಕೆಲಸ ಮಾಡುವುದು. ಯಾವ ಮಕ್ಕಳೂ ತಂದೆಯಂತೆ, ಅಜ್ಜನಂತೆ ಅಥವಾ ವಂಶಪಾರಂಪರ್ಯವಾಗಿ ಬಂದಿರುವ ತೋಟ, ಹೊಲವನ್ನು ಆಧುನಿಕ ಕೃಷಿಗೆ ಮಾರ್ಪಡಿಸಿ ವೈಜ್ಞಾನಿಕವಾಗಿ ಬೆಳೆ ತೆಗೆದು ಮಾದರಿ ಕೃಷಿಕನಾಗುತ್ತೇನೆ ಎನ್ನುವುದಿಲ್ಲ. ಕೋಟ್ಯಂತರ ರೂ. ಬೆಲೆಬಾಳುವ ಬಂಗಾರದಂತಹ ಭೂಮಿಯನ್ನು ಇನ್ನೊಬ್ಬರಿಗೆ ಮಾರಾಟ ಮಾಡಿ ಸಿಟಿಗೆ ತೆರಳಲು ಸನ್ನದ್ಧರಾಗುತ್ತಿದ್ದಾರೆ.
ಇಂದು ಯಾವ ಜವಾಬ್ದಾರಿಯನ್ನೂ ನಾವು ಹೊರಲು ಸಿದ್ಧರಿಲ್ಲ. ನಮಗೆ ಬೇಕಿರುವುದು ಹಣ ಮಾತ್ರ. ಹಣ ಗಳಿಸಲು ದೇಶ- ವಿದೇಶಕ್ಕೆ ತೆರಳುತ್ತೇವೆ. ಆದರೆ, ಮನೆಯಲ್ಲೇ ಅದಕ್ಕೆ ದಾರಿ ಇದ್ದರೂ ಅದು ನಮ್ಮ ಕಣ್ಣಿಗೆ ಬೀಳುವುದಿಲ್ಲ. ಬಿದ್ದರೂ ಅದರ ಬಗ್ಗೆ ಆಸಕ್ತಿ ಇಲ್ಲ. ಎಲ್ಲರೂ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಅಮೆರಿಕ, ಆಸ್ಟ್ರೇಲಿಯಾ ಎನ್ನುತ್ತ ಹೋಗುವವರೇ ಆಗಿದ್ದಾರೆ. ಐಟಿ ಕಂಪನಿಯಲ್ಲಿ ಕೆಲಸ ಮಾಡಬೇಕು. ಒಳ್ಳೆಯ ಜೀವನ ನಡೆಸಬೇಕು. ಜಗತ್ತಿನಲ್ಲಿ ನಮಗೆ ಬೇರೆ ಯಾವ ಜವಾಬ್ದಾರಿಯೂ ಬೇಡ ಎನ್ನುವ ಇಂತಹ ಶಿಕ್ಷಣ, ಇಂತಹವರನ್ನು ಸೃಷ್ಟಿ ಮಾಡುವ ಶಿಕ್ಷಣ ನಮಗೆ ಬೇಕೇ?
ನಮ್ಮ ಸಂಸ್ಕೃತಿ, ಪರಂಪರೆಯನ್ನು ಪ್ರೀತಿಸುವ, ಪೋಷಿಸುವುದನ್ನು ಕಲಿಸದೆ ಕೇವಲ ಹಣ ಗಳಿಸುವ ಮಾರ್ಗವನ್ನು ಮಾತ್ರ ಶಿಕ್ಷಣ ಹೇಳಿಕೊಡುತ್ತಿದೆ. ಏನೂ ಕಲಿಯದ ನಮ್ಮ ಅಜ್ಜ-ಮುತ್ತಜ್ಜಂದಿರು ಕೃಷಿಯನ್ನು ಮಾ ಹೆಸರು ಗಳಿಸಿದರು. ಆದರೆ ಸುಶಿಕ್ಷಿತರೆನಿಸಿಕೊಂಡ, ಆಧುನಿಕ ವಿದ್ಯಾಭ್ಯಾಸಿಗಳಾದ ನಮಗೆ ಕೃಷಿ ಎಂದರೆ ಯಾರಿಗೆ ಬೇಕು, ಇದರಲ್ಲೇನಿದೆ ಲಾಭ, ಕೂಲಿಗಳು ಸಿಗುವುದಿಲ್ಲ, ಖರ್ಚು ಅಧಿಕ, ಲಾಭ ಕಡಿಮೆ ಎಂಬ ಮನೋಭಾವ ಬಂದುಬಿಟ್ಟಿದೆ.
ನಮ್ಮತನವನ್ನು ನಾವು ಉಳಿಸಿಕೊಂಡು ಬಂದಿದ್ದೇ ಆದಲ್ಲಿ, ಎಲ್ಲದರಲ್ಲೂ ಲಾಭವಿದೆ. ಆದರೆ ಆ ಮಾರ್ಗದತ್ತ ಹೆಜ್ಜೆ ಇಡುವ ಮನಸ್ಸು ಮೊದಲಿರಬೇಕು. ಇಂದಿನ ಶಿಕ್ಷಣ ಇದನ್ನು ಕಲಿಸದೇ ಇರುವುದು, ಇನ್ನೊಬ್ಬನನ್ನು ನೋಡಿ ನಾನು ಅವನಂತೆಯೇ ಆಗಬೇಕೆಂಬ ಹಪಾಹಪಿತನ ಇದಕ್ಕೆ ಕಾರಣ. ನಮ್ಮಲ್ಲಿರುವ ವೈಶಿಷ್ಟ್ಯತೆಯನ್ನು, ಪ್ರತಿಭೆಯನ್ನು ನಾವು ಇಲ್ಲಿ ತೋರಬೇಕೇ ವಿನ ಇನ್ನೊಬ್ಬರನ್ನು ಅನುಸರಿಲಸು ಹೋಗಿ ನಮ್ಮತನವನ್ನು ಹಾಳುಮಾಡಿಕೊಳ್ಳಬಾರದು.
ಟಿವಿ ಕಾರ್ಯಕ್ರಮದ ಆ ಬಾಲಕಿ ಹೇಳಿದ ಹಾಗೆ ಮಗ್ಗವನ್ನು ನಂಬಿಕೊಂಡು ಇಂದು ಸಾವಿರಾರು ಜನ ಕೆಲಸ ಮಾಡುತ್ತಿರುವ ಚರಕ ಸಂಸ್ಥೆ ನಮ್ಮದೇ ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆಯಲ್ಲಿಲ್ಲವೇ? ಗ್ರಾಮೋದ್ಯೋಗದಿಂದ ಜೀವನ ಸಾಗಿಸಲು ಸಾಧ್ಯ ಎನ್ನುವುದನ್ನು ಅದರ ರೂವಾರಿ ಪ್ರಸನ್ನ ತೋರಿಸಿಕೊಟ್ಟಿಲ್ಲವೇ? ಇದನ್ನು ನಾವ್ಯಾರೂ ಅನುಕರಿಸುತ್ತಿಲ್ಲ. ಅನುಸರಿಸುತ್ತಿಲ್ಲ, ಬೆಳೆಸಲು ಯತ್ನಿಸುತ್ತಿಲ್ಲ. ಮೆಡಿಕಲ್, ಇಂಜಿನೀಯರಿಂಗ್ ಸೀಟಿಗೆ ಹತ್ತಿಪ್ಪತ್ತು ಲಕ್ಷ ತೆತ್ತು ಓದಲು ಕಳುಹಿಸುತ್ತೇವೆ. ಆದರೆ ಅದೇ ಲಕ್ಷವನ್ನು ಆತನ ಕೈಗಿತ್ತು ಚೆನ್ನಾಗಿ ವ್ಯವಸಾಯ ಮಾಡಿಕೊಂಡು ಹೋಗು ಎಂದರೂ ಆತ ಪಾಲಕರ ಮಾತು ಕೇಳದ ಸ್ಥಿತಿ ಇಂದು ನೆಲೆಸಿದೆ.
ಈ ಪರಿಸ್ಥಿತಿ ಏಕೆ ನಿರ್ಮಾಣವಾಗುತ್ತಿದೆ. ಟಿ.ಎನ್.ಸೀತಾರಾಂ ಹೇಳಿದ ಹಾಗೆ, ಶಿಕ್ಷಣ ಯಾವ ದಾರಿಯಲ್ಲಿ ಹೋಗುತ್ತಿದೆ, ಹಳ್ಳಿಗಳ ಪರಿಸ್ಥಿತಿ ಏನಾಗಬಹುದು ಎನ್ನುವುದನ್ನು ಯೋಚಿಸಿದರೆ ನಿಜಕ್ಕೂ ಭಯಾನಕವೆನಿಸುತ್ತಿದೆ.
.....................................



