Friday, 6 May 2016




ಶಿವಮೊಗ್ಗ ಜಿಪಂ: ಬಿಜೆಪಿಗೆ ಮತ್ತದೇ ನಿರಾಸೆ
ಸಾಂಸದ ಬಿ.ಎಸ್. ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಜಿಲ್ಲೆಯಲ್ಲೇ ಬಿಜೆಪಿಗೆ ಹಿನ್ನಡೆಯಾದುದು ಗಂಭೀರವಾದ ವಿಷಯ ಎನ್ನಬಹುದು. ಬಿಜೆಪಿ ಅದಿಕಾರ ಹಿಡಿಯುವ ಸಂಬಂಧ ಕಾರ್ಯತಂತ್ರ ರೂಪಿಸಲು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಅವರನ್ನು ನೇಮಿಸಲಾಗಿತ್ತು. ಆದರೂ ಅದು ಯಶಸ್ವಿಯಾಗಲಿಲ್ಲ. ಒಂದು ಹಂತದಲ್ಲಿ ಭದ್ರಾವತಿ ಶಾಸಕ ಅಪ್ಪಾಜಿ ಗೌಡ ಬಿಜೆಪಿ ಜೊತೆ ಮೈತ್ರಿಗೆ ಆಸಕ್ತಿ ತೋರಿದ್ದರೆಂಬ ಮಾತು ಕೇಳಿಬಂದಿತ್ತು. ಆದರೆ ಇದಕ್ಕೆ ಶಾಸಕಿ ಶಾರದಾ ಪೂರ‌್ಯಾ ನಾಯ್ಕ್ ಮತ್ತು ಶಾಸಕ ಮಧು ಬಂಗಾರಪ್ಪ ಒಪ್ಪದ ಕಾರಣ ಮತ್ತೆ ಅದು ಅಲ್ಲಿಗೇ ಕೈಬಿಡಲ್ಪಟ್ಟಿತು ಎಂದು ಹೇಳಲಾಗುತ್ತಿದೆ. ಒಟಿನಲ್ಲಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಆಸೆಯನ್ನು ಮತ್ತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಜೆಡಿಎಸ್-ಕಾಂಗ್ರೆಸ್ ಈಡೇರಿಸಿಕೊಂಡಿವೆ.


  ಜಿಪಂ ಅಧಿಕಾರ  ಮತ್ತೊಮ್ಮೆ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಪಾಲಾಗಿದೆ. ಜೆಡಿಎಸ್ ಸದಸ್ಯೆ ಜ್ಯೋತಿ ಎಸ್. ಕುಮಾರ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಯಾವುದೇ ಪ್ರಹಸನ, ಹೈಡ್ರಾಮಾಕ್ಕೆ ಸಾಕ್ಷಿಯಾಗದೆ ಆಯ್ಕೆ ಪ್ರಕ್ರಿಯೆ ಸುರಳೀತವಾಗಿ ನಡೆದಿದೆ.
ಜಿಪಂ ಚುನಾವಣೆಯಾದಾಗಿನಿಂದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಹುದ್ದೆ ಮೇಲೆ ಬಹುತೇಕ ಸದಸ್ಯರ ಕಣ್ಣಿತ್ತು. ಅದರಲ್ಲೂ ಈ ಹುದ್ದೆಯ ಮೀಸಲಾತಿ ಪ್ರಕಟವಾದ ನಂತರ ಕೆಲವರ ಆಸೆ ಕಮರಿತ್ತು. ಅಲ್ಲಿಂದ ಹುದ್ದೆಗೆ ಮೀಸಲಾತಿಯ ಪ್ರಕಾರ  ಅರ್ಹರಾದವರು ಮಾತ್ರ ಹೋರಾಟ ಶುರುವಿಟ್ಟುಕೊಂಡಿದ್ದರು. ಯಾವ ಪಕ್ಷಕ್ಕೂ ಸರಳ ಬಹುಮತವಿಲ್ಲದ ಕಾರಣ ಯಾರು  ಅಧಿಕಾರ ಹಿಡಿಯುತ್ತಾರೆ ಎನ್ನುವುದರತ್ತ ಎಲ್ಲರ ಲಕ್ಷ್ಯವಿತ್ತು. ಅದರಲ್ಲೂ ಪಕ್ಷೇತರ ಸದಸ್ಯೆ (ವೇದಾ ವಿಜಯಕುಮಾರ್) ಆಯ್ಕೆಯಾಗಿದ್ದು ಇನ್ನಷ್ಟು ವಿಶೇಷತೆಗೆ ಕಾರಣವಾಗಿತ್ತು.
 ಏಕೆಂದರೆ, ಬಿಜೆಪಿಗೂ ಅಧಿಕಾರ ಹಿಡಿಯಲು ಜೆಡಿಎಸ್ ಅಥವಾ ಈ ಸದಸ್ಯೆಯ ಅವಶ್ಯಕತೆ ಇತ್ತು. ಕಾಂಗ್ರೆಸ್‌ಗೂ ಜೆಡಿಎಸ್‌ನೊಂದಿಗೆ ಮೈತ್ರಿಯ ಮತ್ತು ಪಕ್ಷೇತರ ಸದಸ್ಯೆಯ ಬೆಂಬಲ ಅನಿವಾರ್ಯವಾಗಿತ್ತು. ಹೀಗಾಗಿ ಈ ಸದಸ್ಯೆಯ ಮೇಲೆ ಅವಲಂಬನೆ ಇತ್ತು. ಆದರೆ, ಈ ಸದಸ್ಯೆ ತನಗೆ ಅಧ್ಯಕ್ಷ ಹುದ್ದೆ ಕೊಟ್ಟರೆ ಮಾತ್ರ ಬೆಂಬಲ ಎಂದು ಪಟ್ಟು ಹಿಡಿದು ಕುಳಿತಿದ್ದರಿಂದ ಬಿಜೆಪಿ ದೂರ ಸರಿದು ಜೆಡಿಎಸ್ ನಾಯಕರೊಂದಿಗೆ ಚರ್ಚೆ ಆರಂಭಿಸಿತ್ತು. ಈ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಜಿಲ್ಲಾ ನಾಯಕರಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅಧಿಕಾರ ಕೊಟ್ಟಿದ್ದರು. ಜಿಲ್ಲೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ನಡೆಯದೆಂದು ಎಲ್ಲರಿಗೂ ಮೊದಲೇ ಗೊತ್ತಿತ್ತು.
 ಈ ಮಧ್ಯೆ ಜಿಲ್ಲಾ ಜೆಡಿಎಸ್ ಅಧ್ಯಕ್ಷರು ಬಿಜೆಪಿಗೆ ಬೆಂಬಲವಿಲ್ಲ ಎಂದು ಈ ವೇಳೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಬೆಂಗಳೂರಿನಲ್ಲೇ ಮಾತುಕತೆ ನಡೆಸಿದರು. ಆದರೆ ಜಿಲ್ಲೆಯ ನಾಯಕರು ತಮ್ಮ ಪಟ್ಟು ಸಡಿಲಿಸಲಿಲ್ಲ. ಈ ವೇಳೆಗೆ ಜಿಲ್ಲೆಯ ಮೂವರು ಜೆಡಿಎಸ್ ಶಾಸಕರು ಮತ್ತು ಕಾಂಗ್ರೆಸ್ ನಾಯಕರು ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯಲು ಎಲ್ಲ ತಯಾರಿ ನಡೆಸಿದ್ದರು. ಪಕ್ಷೇತರ ಸದಸ್ಯೆಯನ್ನು ಸೆಳೆದುಕೊಂಡು ಅಧ್ಯಕ್ಷ ಸ್ಥಾನವನ್ನು ಅವರಿಗೆ ನೀಡಿ ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಪಡೆಯಲು ಮಾತುಕತೆ ನಡೆದಿತ್ತು.
 ಆದರೆ, ಕೊನೆಗಳಿಗೆಯಲ್ಲಿ ಅಂದರೆ ಚುನಾವಣೆಯ ಮುನ್ನಾದಿನ ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನವನ್ನು ಮೈತ್ರಿಕೂಟ ನಿರ್ಧರಿಸಿತು.  ಏಕೆಂದರೆ ಕಳೆದ ಜಿಪಂ ಅಧಿಕಾರಾವಧಿಯ ಕೊನೆಯ ಹಂತದಲ್ಲಿ  ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ಗೆ  ಅಧ್ಯಕ್ಷ ಹುದ್ದೆ ಕೊಡಲಾಗಿತ್ತು.  ಎರಡನೆಯದಾಗಿ, ಶಿವಮೊಗ್ಗ ಪಾಲಿಕೆಯಲ್ಲೂ ಇದೇ ಮೈತ್ರಿಕೂಟ ಅಧಿಕಾ ಹಿಡಿದಿದೆ. ಇಲ್ಲಿ ಕಳೆದ ಎರಡು ಬಾರಿ ಕಾಂಗ್ರೆಸ್ ಮೇಯರ್ ಪದವಿ ಅಲಂಕರಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕ ಮಧು ಬಂಗಾರಪ್ಪ ಕೊನೆಗಳಿಗೆಯಲ್ಲಿ ತಮ್ಮ ಚಾಣಾಕ್ಷ ನಡೆಯನ್ನು ಪ್ರದರ್ಶಿಸಿ ಜೆಡಿಎಸ್‌ಗೆ ಅಧ್ಯಕ್ಷ ಪದವಿ ಸಿಗುವಂತೆ ಮಾಡಿದ್ದಾರೆ.
ವೇದಾ ಅವರು ಕಾಂಗ್ರೆಸ್‌ನಿಂದ ಬಂಡಾಯವಾಗಿ ಗೆದ್ದಿರುವುದರಿಂದ ಈಗ ಹೆಚ್ಚು ಕಡಿಮೆ ಮತ್ತೆ ಕಾಂಗ್ರೆಸ್‌ಗೆ ಮರಳುವುದು ನಿಶ್ಚಿತ. ಇದರಿಂದ ಉಪಾಧ್ಯಕ್ಷ ಹುದ್ದೆ ಕಾಂಗ್ರೆಸ್ ಪಾಲಾದಂತಾಗುತ್ತದೆ. ಈ ಮಧ್ಯೆ ಮೈತ್ರಿಕೂಟದ ಉದ್ದೇಶವೇನಿತ್ತೆಂದರೆ, ಬಿಜೆಪಿಗೆ ಯಾವ ಕಾರಣಕ್ಕೂ ಅಧಿಕಾರ ಸಿಗದಂತೆ ನೋಡಿಕೊಳ್ಳುವುದು, ಜಾತ್ಯತೀತ ಶಕ್ತಿಗಳನ್ನು ಒಟ್ಟುಗೂಡಿಸುವುದು ಆಗಿತ್ತು. ಈ ಹಿನ್ನೆಲೆಯಲ್ಲಿ ಮೈತ್ರಿ ಯಶಸ್ವಿಯಾಗಿ ಅಧಿಕಾರ ದಕ್ಕಿದೆ.
ಸಾಂಸದ ಬಿ.ಎಸ್. ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಜಿಲ್ಲೆಯಲ್ಲೇ ಬಿಜೆಪಿಗೆ ಹಿನ್ನಡೆಯಾದುದು ಗಂಭೀರವಾದ ವಿಷಯ ಎನ್ನಬಹುದು. ಬಿಜೆಪಿ ಅದಿಕಾರ ಹಿಡಿಯುವ ಸಂಬಂಧ ಕಾರ್ಯತಂತ್ರ ರೂಪಿಸಲು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಅವರನ್ನು ನೇಮಿಸಲಾಗಿತ್ತು. ಆದರೂ ಅದು ಯಶಸ್ವಿಯಾಗಲಿಲ್ಲ. ಒಂದು ಹಂತದಲ್ಲಿ ಭದ್ರಾವತಿ ಶಾಸಕ ಅಪ್ಪಾಜಿ ಗೌಡ ಬಿಜೆಪಿ ಜೊತೆ ಮೈತ್ರಿಗೆ ಆಸಕ್ತಿ ತೋರಿದ್ದರೆಂಬ ಮಾತು ಕೇಳಿಬಂದಿತ್ತು. ಆದರೆ ಇದಕ್ಕೆ ಶಾಸಕಿ ಶಾರದಾ ಪೂರ‌್ಯಾ ನಾಯ್ಕ್ ಮತ್ತು ಶಾಸಕ ಮಧು ಬಂಗಾರಪ್ಪ ಒಪ್ಪದ ಕಾರಣ ಮತ್ತೆ ಅದು ಅಲ್ಲಿಗೇ ಕೈಬಿಡಲ್ಪಟ್ಟಿತು ಎಂದು ಹೇಳಲಾಗುತ್ತಿದೆ.
ಒಟಿನಲ್ಲಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಆಸೆಯನ್ನು ಮತ್ತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಜೆಡಿಎಸ್-ಕಾಂಗ್ರೆಸ್ ಈಡೇರಿಸಿಕೊಂಡಿವೆ. ಮುಂದಿನ 5 ವರ್ಷದವರೆಗೆ ಈ ಮೈತ್ರಿಕೂಟದ ಅಧಿಕಾರ ಮುಂದುವರೆಯಲಿದೆ ಎಂದೂ ಸಹ ಘೋಷಿಸಲಾಗಿದೆ. ಅಧಿಕಾರವನ್ನು ತಲಾ 30 ತಿಂಗಳು ಹಂಚಿಕೊಳ್ಳುವ ಒಪ್ಪಂದವೂ ಆಗಿದೆ ಎನ್ನುವ ಮಾತು ಕೇಳಿಬಂದಿದೆ.
......................................  

Wednesday, 4 May 2016





  ಭೂದಾಹದ ದುರಾಸೆಗೆ  ಸಮಾಧಿಯಾಗುತ್ತಿರುವ ಕೆರೆಗಳು

ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಅನೇಕ ರಾಜ-ಮಹಾರಾಜರು, ಸಾಮಂತ - ಮಾಂಡಲೀಕರು, ಊರ ಗೌಡ -ಪಟೇಲರು, ದಾನ ಚಿಂತಾಮಣಿಗಳೆಲ್ಲ ಕೆರೆ-ಬಾವಿಗಳನ್ನು ನಿರ್ಮಿಸಿದ ಉಲ್ಲೇಖ  ತಿಳಿದುಬರುತ್ತದೆ.   ಜೀವಜಲಧಾರೆಯಾಗಿರುವ ಇಂತಹ ಕೆರೆ-ಬಾವಿಗಳು  ನಿಸರ್ಗದ ಬಹುಮುಖ್ಯ ಸಂಪತ್ತಾಗಿದ್ದವು; ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಜ್ಞೆಯ ಸಂಕೇತಗಳಾಗಿದ್ದವು. ಆದರೆ ಈಗ ಹೊಸ ಕೆರೆಗಳಂತೂ ನಿರ್ಮಾಣವಾಗುತ್ತಿಲ್ಲ ಬಿಡಿ, ಹಳೆಯ ಕೆರೆಗಳನ್ನು ಸುಸ್ಥಿತಿಯಲ್ಲಿ ಇರಿಸುವ ಪ್ರಯತ್ನವೂ ಆಗುತ್ತಿಲ್ಲ ಎನ್ನುವುದನ್ನು ಅತ್ಯಂತ ವಿಷಾದದಿಂದ ಹೇಳಬೇಕಾಗಿದೆ. ಕೆರೆಯ   ಕಥೆಯ  ಹಿಂದೆ ಮಾನವನ ಎಲ್ಲ ದುಷ್ಟತನಗಳನ್ನು, ನಿಸರ್ಗದ ಮೇಲಿನ ಅವನ ಎಗ್ಗಿಲ್ಲದ ಆಕ್ರಮಣವನ್ನು ನಾವು ಕಾಣಬಹುದು. ಸಮೃದ್ಧತೆಯಿಂದ ಕೂಡಿದ್ದ, ಜೀವಸತ್ವದೊಂದಿಗೆ  ಪಾವಿತ್ರ್ಯಕ್ಕೆ ಹೆಸರಾಗಿದ್ದ  ಕೆರೆಗಳ ದುಸ್ಥಿತಿಗೆ ನಾವೇ ಕಾರಣರು ಎಂಬ ನಾಚಿಕೆ ನಮ್ಮನ್ನು ಕಾಡುತ್ತದೆ. ಕಾಲದ ನಡಿಗೆಯಲ್ಲಿ ನಿಸರ್ಗದ ಮೇಲಿನ ಮನುಷ್ಯನ ಕ್ರೌರ್ಯ ಪರಮಾವಧಿಯನ್ನು ತಲುಪುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉತ್ತಮ ಉದಾಹರಣೆ ಬೇಕಾಗಿಲ್ಲ ಅಲ್ಲವೇ....?

ಮನುಷ್ಯನ  ಭೂದಾಹ ಮಿತಿಮೀರಿ ಕೆರೆಗಳೆಲ್ಲ ಒತ್ತುವರಿ ಆಗುತ್ತಿವೆ; ಕೆರೆಯ ಸಮಾಧಿಯ ಮೇಲೆ ಲೇ ಔಟ್‌ಗಳು ವಿಜೃಂಭಿಸುತ್ತಿವೆ. ಮನುಷ್ಯನ ದುಷ್ಟತನ, ನಿಸರ್ಗದ ಮೇಲಿನ ಅವನ ಆಕ್ರಮಣ ನಿತ್ಯನಿರಂತರವಾಗಿ ನಡೆಯುತ್ತಿದೆ. ನಮ್ಮ ಕೆರೆ- ಸರೋವರ-ನದಿಗಳೆಲ್ಲ ಜೀವಜಲಧಾರೆಯಾಗುವ ಬದಲು ಕಲುಷಿತಗೊಂಡಿವೆ; ಪಾಚಿಗಟ್ಟಿವೆ; ನುಸಿ- ಕ್ರಿಮಿ-ಕೀಟಗಳ ಆವಾಸಸ್ಥಾನವಾಗಿದೆ. ಸದ್ಯದ ಸ್ಥಿತಿಯಲ್ಲಿ ದನಕರುಗಳು, ಕಾಡುಪ್ರಾಣಿಗಳು ಕುಡಿಯಲೂ ಆ ನೀರು ಅಯೋಗ್ಯವಾಗಿದೆ.
ಜಿಲ್ಲಾಡಳಿತ ನೀಡಿರುವ ಮಾಹಿತಿಯ ಪ್ರಕಾರ, ಶಿವಮೊಗ್ಗ ನಗರದಲ್ಲಿ  ಒಟ್ಟಾರೆ 109 ಕೆರೆಗಳಿರಬೇಕಾಗಿತ್ತು. ಆದರೆ ಈಗ 77 ಕೆರೆಗಳಿವೆ. ನಮ್ಮ ಆಡಳಿತ ವ್ಯವಸ್ಥೆಯೇ ವಿವಿಧ ಕಾರಣಗಳಿಗಾಗಿ ಕೆರೆಯ ಜಾಗವನ್ನೇ ಮಂಜೂರು ಮಾಡಿರುವುದರಿಂದ ಉಳಿದ 32 ಕೆರೆಗಳೇ ನಾಪತ್ತೆಯಾಗಿವೆ. ಬಿಟ್ಟಿದೆ. ಇದು  ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ ನೀಡಿರುವ ಕಡತದಲ್ಲಿರುವ ಮಾಹಿತಿ.  ವಾಸ್ತವಾಂಶವೇನೆಂದರೆ, 77 ಕೆರೆಗಳಲ್ಲಿ ಪ್ರಸ್ತುತ ಉಳಿದುಕೊಂಡಿರುವುದು ಸುಮಾರು 20 ರಿಂದ 25 ಕೆರೆಗಳು ಮಾತ್ರ. ಉಳಿದ ಕೆರೆಗಳು ಬಡಾವಣೆಗಳಾಗಿ, ಕಟ್ಟಡಗಳಾಗಿ, ನಿವೇಶನಗಳಾಗಿ ಪರಿವರ್ತಿತವಾಗಿವೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಈಗಿರುವ ಕೆರೆಗಳೂ ಕಣ್ಮರೆಯಾಗಿ ಹೋಗಲಿವೆ .
ಜಿಲ್ಲಾಡಳಿತದವರು ಗಾಡಿಕೊಪ್ಪದಲ್ಲಿ ಐದು ಕೆರೆಗಳಿವೆ ಎಂದು ಮಾಹಿತಿ ನೀಡುತ್ತಾರೆ. ಹೇಳುತ್ತಾರೆ. ಆದರೆ ಪ್ರಸ್ತುತ ಒಂದೂ ಕೆರೆಯೂ ಅಲ್ಲಿ ಕಾಣ ಸಿಗುವುದಿಲ್ಲ. ಅಲ್ಲಿರುವ ಕೆರೆಯೊಂದನ್ನು ಜಿಲ್ಲಾಡಳಿತವೇ ಖಾಸಗಿ ಸಿಟಿ ಕ್ಲಬ್‌ಗೆ ಲೀಸ್ ಆಧಾರದ ಮೇಲೆ ಕೊಟ್ಟಿದೆ. ಮತ್ತೊಂದು ಕೆರೆಯಲ್ಲಿ ಸರ್ಕಾರಿ ಸಂಸ್ಥೆಯ ಕಟ್ಟಡಗಳು ನಿರ್ಮಾಣವಾಗಿವೆ.
  ಜಿಲ್ಲಾಡಳಿತ ನೀಡುವ ಮಾಹಿತಿಯನುಸಾರ 77 ಕೆರೆಯನ್ನು  ಕೆರೆ ಹುಡುಕಿಕೊಂಡು ಹೋದರೆ, ಕೆರೆ ಜಾಗದಲ್ಲಿ ದೊಡ್ಡ ದೊಡ್ಡ ಬಡಾವಣೆ - ಕಟ್ಟಡಗಳು ನಿರ್ಮಾಣವಾಗಿರುವುದು ಕಂಡುಬರುತ್ತದೆ. ಅಧಿಕಾರಿಗಳು ಬರೀ ಕಡತದಲ್ಲಿರುವ ಮಾಹಿತಿ ಕೊಡುತ್ತಾರೆ. ಆದರೆ ಕೆರೆಗಳ ವಾಸ್ತವ ಸ್ಥಿತಿಗತಿ ಅರಿಯುವ ಪ್ರಯತ್ನ ಮಾಡುತ್ತಿಲ್ಲ. ಪ್ರಸ್ತುತ ನಗರದಲ್ಲಿ 20 ರಿಂದ 25 ಕೆರೆಗಳು ಮಾತ್ರ ಇದೆ. ಇದರಲ್ಲಿ ಹಲವು ಕೆರೆಗಳು ಒತ್ತುವರಿಯಾಗಿವೆ ಎನ್ನುವುದು ಹೋರಾಟಗಾರರ ಅಭಿಮತ.
ಒಂದು ಉದಾಹರಣೆ ಗಮನಿಸಿ: ಗೋಪಿಶೆಟ್ಟಿಕೊಪ್ಪ ಗ್ರಾಮದ ಸ.ನಂ 95ರಲ್ಲಿ ಇತಿಹಾಸ ಪ್ರಸಿದ್ಧ ದೊಡ್ಡಕೆರೆ ಇದೆ. 1965 ರಿಂದ ಇದು ಸಣ್ಣ ನೀರಾವರಿ ಇಲಾಖೆಯ ವಶದಲ್ಲಿದೆ. ದಾಖಲಾತಿಯ ಪ್ರಕಾರ, 32 ಹೆಕ್ಟೇರ್ (79.07 ಎಕರೆ) ವಿಸ್ತೀರ್ಣದಕೆರೆಯಿದು. ಈ ಕೆರೆಗೆ ಕೆಲವು ವರ್ಷಗಳ ಹಿಂದೆ ಒಂದು ಕೋಟಿ ರೂ ಮೊತ್ತಗಳ ಕಾಮಗಾರಿ ನಡೆದಿದೆ. ಪ್ರಸ್ತುತ ಈ ಕೆರೆಗೆ ಎರಡು ಯೋಜನೆ ಅಡಿಯಲ್ಲಿ ಎರಡು ಕೋಟಿ ರೂಪಾಯಿಗಳ ಕಾಮಗಾರಿ ಚಾಲ್ತಿಯಲ್ಲಿದೆ.  ಆದರೆ ಕೆರೆಯ ಸರ್ವೆ ಮಾಡದೆ, ಅದು ನಿಜಕ್ಕೂ ತನ್ನ ವಿಸ್ತೀರ್ಣವನ್ನು ಉಳಿಸಿಕೊಂಡಿದೆಯೇ, ಅತಿಕ್ರಮಣವಾಗಿದೆಯೇ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇಲಾಖೆ ಕಾಮಗಾರಿ ನಡೆಸುತ್ತಿದೆ.  79.07 ವಿಸ್ತೀರ್ಣದ ಕೆರೆಯ ಸರ್ವೆ ಮಾಡಿಸಿ ವ್ಯತ್ಯಾಸ ಕಂಡುಬಂದಲ್ಲಿ ಅದನ್ನು ತೆರವುಗೊಳಿಸುವ ಕೆಲಸವನ್ನು ಮಾಡಿ, ನಂತರ ಕಾಮಗಾರಿಯನ್ನು ಮುಂದುವರೆಸಬೇಕಿತ್ತು. ಕೆರೆಯ  ಒತ್ತುವರಿದಾರರು ಹಾಗೂ ಕೆರೆಗೆ ಗಲೀಜು, ಕೊಳಚೆ ನೀರನ್ನು ಬಿಡುವವರ ಮತ್ತು ಕಸ, ಮಣ್ಣು ಹಾಕುವವರ ವಿರುದ್ಧ ಪ್ರಕರಣ ದಾಖಲಿಸಿ  ಕ್ರಮ ಕೈಗೊಳ್ಳಬೇಕು.
  ಒಂದು ಕಾಲದಲ್ಲಿ  ಕೆರೆ ಪವಿತ್ರ ಉದ್ದೇಶಕ್ಕೆ ಸುಂದರವಾಗಿ ನಿರ್ಮಾಣ ಮಾಡಲಾಗುತ್ತಿತ್ತು. ಮೆಟ್ಟಿಲುಗಳು, ಕಲ್ಲಿನ ಹಾಸುಗಳು, ಸುತ್ತ ಮರಗಳ ನೆರಳು ಇತ್ತು. ಋಷಿಗಳು, ದೇವಸ್ಥಾನದವರು  ನಿತ್ಯಕರ್ಮಗಳಿಗಾಗಿ, ದೇವತಾಪೂಜೆಗಳಿಗಾಗಿ ಕೆರೆಯನ್ನು ಬಳಸುತ್ತಿದ್ದರು. ಕಾಲ ಬದಲಾದಂತೆ ಸಾರ್ವಜನಿಕ ಸ್ವತ್ತಾಗಿ ಋಷಿ-ಮುನಿಗಳಿಗಾಗಿ ಜನ್ಮ ತಳೆದ ಅದು, ಆಮೇಲೆ ಕೃಷಿಗಾಗಿ ಬಳಕೆಯಾಗಿ, ಈಗ ನುಸಿಗಳ ಆವಾಸಸ್ಥಾನವಾಗಿ ರೋಗ-ರುಜಿನಗಳ ಬೀಡಾಗಿದೆ. ಇನ್ನೊಂದೆಡೆ, ಕೆರೆ ಸಣ್ಣ ನೀರಾವರಿ ಇಲಾಖೆಯದ್ದಾದರೆ, ಅದರ ಹೂಳನ್ನು ನಾವೇಕೆ ಎತ್ತಬೇಕು ಎಂದು ಗ್ರಾಮಸ್ಥರು ಹಲವೆಡೆ ಸುಮ್ಮನಾದರು. ಹೀಗೆ ಕೆರೆಯ ನೀರೆಲ್ಲ ಬತ್ತಿ ಕೆರೆಗೆ ಹೂಳು ತುಂಬಿಕೊಂಡಿತು. ಸಾಲದೆಂಬಂತೆ, ಹಿರಿಕಿರಿಯರೆನ್ನದೆ ಜಾತಿಬೇಧ ಮರೆತು ಎಲ್ಲರೂ ಕೆರೆಯ ಸೋಪಾನದ ಕಲ್ಲುಗಳನ್ನು ತಮ್ಮ ಮನೆಗಳಿಗೆ ಹೊತ್ತು ಸಾಗಿಸಿದರು.  ಆ ಕಲ್ಲುಗಳು ಕೆಲವರ ಮನೆಯ ಕೊಟ್ಟಿಗೆಗೆ ಹಾಸುಗಲ್ಲಾದರೆ, ಮತ್ತೆ ಕೆಲವರಿಗೆ ಬಟ್ಟೆ ತೊಳೆಯುವ ಚಪ್ಪಡಿ ಕಲ್ಲಾಯಿತು; ಇನ್ನೂ ಕೆಲವರಿಗೆ ಸಣ್ಣ ಕಾಲುವೆ ದಾಟುವ ಹಾಸುಗಲ್ಲಾಯಿತು. ಕೆರೆಯ ಸೋಪಾನ ಕಲ್ಲುಗಳೆಲ್ಲ ಕಳಚಿದ್ದರಿಂದ, ಮನುಷ್ಯರಷ್ಟೇ ಏಕೆ ಈ ಕೆರೆಯನ್ನು ಬಳಸಿಕೊಳ್ಳಬೇಕು?- ನಾವೂ ನಮ್ಮ ಸಾಮ್ರಾಜ್ಯವನ್ನು ಇಲ್ಲಿಯೇ ಸ್ಥಾಪಿಸೋಣ ಎಂದು ಪಣ ತೊಟ್ಟಂತೆ ಎಮ್ಮೆ-ಕೋಣಗಳೂ ಈ ಕೆರೆಯನ್ನು ಅತಿಕ್ರಮಿಸಿದವು. ಕಪ್ಪೆಗಳೂ ಇಲ್ಲಿ ಬೀಡುಬಿಟ್ಟವು. ಹಾವುಗಳಿಗೂ ಇದುವೇ ಆವಾಸಸ್ಥಾನವಾಯಿತು. ಪಾಚಿಗಟ್ಟಿ ರಾಡಿಯಾದ ನೀರಿನಲ್ಲಿ ಕ್ರಿಮಿ-ಕೀಟಗಳು, ಬ್ಯಾಕ್ಟೀರಿಯಾಗಳು, ನುಸಿಗಳು ಹುಟ್ಟಿಕೊಂಡವು. ಇಂತಹ ದುರವಸ್ಥೆಯ ನೂರಾರು ಕೆರೆಗಳನ್ನು ಜಿಲ್ಲೆಯಲ್ಲಿ ಕಾಣಬಹುದು. ಇಂತಹ ಕೆರೆಯ ದಡದಲ್ಲಿ ನಿಂತರೆ ಅದರ ಮೂಕರೋದನ ಯಾರಿಗೆ ಕೇಳಿಸದೆ ಹೋದರೂ, ಪರಿಸರ ಪ್ರೇಮಿಗಳಿಗೆ ಕೇಳಿಸದಿರದು.
ಕೆರೆಯ   ಕಥೆಯ  ಹಿಂದೆ ಮಾನವನ ಎಲ್ಲ ದುಷ್ಟತನಗಳನ್ನು, ನಿಸರ್ಗದ ಮೇಲಿನ ಅವನ ಎಗ್ಗಿಲ್ಲದ ಆಕ್ರಮಣವನ್ನು ನಾವು ಕಾಣಬಹುದು. ಸಮೃದ್ಧತೆಯಿಂದ ಕೂಡಿದ್ದ, ಜೀವಸತ್ವದೊಂದಿಗೆ  ಪಾವಿತ್ರ್ಯಕ್ಕೆ ಹೆಸರಾಗಿದ್ದ  ಕೆರೆಗಳ ದುಸ್ಥಿತಿಗೆ ನಾವೇ ಕಾರಣರು ಎಂಬ ನಾಚಿಕೆ ನಮ್ಮನ್ನು ಕಾಡುತ್ತದೆ. ಕಾಲದ ನಡಿಗೆಯಲ್ಲಿ ನಿಸರ್ಗದ ಮೇಲಿನ ಮನುಷ್ಯನ ಕ್ರೌರ್ಯ ಪರಮಾವಧಿಯನ್ನು ತಲುಪುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉತ್ತಮ ಉದಾಹರಣೆ ಬೇಕಾಗಿಲ್ಲ ಅಲ್ಲವೇ....?
...............................

Thursday, 28 April 2016

ಮಾನವೀಯ ಮೌಲ್ಯ ಮೆರೆದ ಜಾಲತಾಣ
  ಕ್ಯಾನ್ಸರ್‌ಪೀಡಿತ ಯುವಕನ ನೆರವಿಗೆ ಬಂದ ಸಾರ್ವಜನಿಕರು 

ಶಿವಮೊಗ್ಗ: ರೇವಂತ್ 19ರ ಹರಯದವನು. ಐಟಿಐ ಮುಗಿಸಿದ್ದಾನೆ. ಆದರೆ ಇತ್ತೀಚೆಗೆ ಇದ್ದಕ್ಕಿದ್ದಂತೆ ಮೂಳೆಗಳೆಲ್ಲ ತುಂಬಾ ನೋವು ಕೊಡಲಾರಂಭಿಸಿದವು. ಬೆಳಗಾದರೆ ಏಳುವುದೇ ಬೇಡ ಎನ್ನುವಷ್ಟರ ಮಟ್ಟಿಗೆ ಜೀವತಿನ್ನತೊಡಗಿದ್ದವು. ಇದೇನೋ ಸಮಸ್ಯೆ ಇದೆ ಎಂದರಿತು ಶಿವಮೊಗ್ಗದಲ್ಲಿ ತಜ್ಞರಿಗೆ ತೋರಿಸಿ ಅವರ ಪ್ರಕಾರ ಎಲ್ಲ ರೀತಿಯ  ಸ್ಕ್ಯಾನಿಂಗ್ ಮಾಡಿಸಲಾಯಿತು. ಆಗ ಬೆಳಕಿಗೆ ಬಂದಿದ್ದು ಮೂಳೆ ಕ್ಯಾನ್ಸರ್ ಎಂಬ ಮಹಾಮಾರಿ ತಗುಲಿದೆ ಎನ್ನುವುದು. ಇದನ್ನು ಕೇಳಿದ ಕುಟುಂಬ ಹೌಹಾರಿತು. ಮುಂದೇನು ಎಂಬ ದಾರಿ ತೋಚದೆ ಕುಸಿದುಬಿದ್ದರು.
ಮೆಟಾಸ್ಟೆಟಿಕ್ ಆಸ್ಟಿಯೋಸರ್ಕೊಮಾ ಅರ್ಥಾತ್ ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆ. ಚಿಕಿತ್ಸೆಗೆ ಸುಮಾರು 10 ಲಕ್ಷಕ್ಕೂ ಅಧಿಕ ಮೊತ್ತದ ಹಣ ಬೇಕೆಂದು ವೈದ್ಯರು ಹೇಳಿದಾಗ ಆತನ ತಂದೆ ಆಟೊ ಚಾಲಕ ಗಿರೀಶ್‌ಕುಮಾರ್ ಹೌಹಾರಿ ಹೋದರು. ಏಕೆಂದರೆ ಅಷ್ಟೊಂದು ಮೊತ್ತವನ್ನು ಅವರು ಜೀವಮಾನದಲ್ಲಿ ಕಂಡಿರಲಿಲ್ಲ, ಮಗ ಗುಣಮುಖನಾಗಿ ಬರಬೇಕು. ಆದರೆ ಹಣವಿಲ್ಲ. ಹಣ ಹೊಂದಿಸುವುದು ಹೇಗೆಂಬ ಚಿಂತೆ ಅವರನ್ನು ಕಾಡುತ್ತಿತ್ತು.
   ನಿಧಾನವಾಗಿ ಸಾವರಿಸಿಕೊಂಡ ರೇವಂತ್ ತಂದೆ ಗಿರೀಶ್ ಬಂಧು, ಮಿತ್ರರೆದುರು ಇದನ್ನು ಬಿಚ್ಚಿಟ್ಟರು. ಆಗ ನೆರವಿಗೆ ಸಹಾಯಹಸ್ತ ನೀಡಲು ಮಿತ್ರಸಂಕುಲವೇ ಮುಂದೆ ಬಂದಿತು. ಮಿತ್ರರೊಬ್ಬರು ಮಿತ್ರರೊಬ್ಬರು ವ್ಯಾಟ್ಸಾಪ್ ಮೂಲಕ ಅದನ್ನು ಪ್ರಸಾರ ಮಾಡಿ ಸಾರ್ವಜನಿಕರ ನೆರವಿಗೆ ಮನವಿ ಮಾಡಿದರು.  ಸಾಮಾಜಿಕ ಜಾಲತಾಣದ ಪ್ರಭಾವ ಎಷ್ಟಿದೆ ಎನ್ನುವುದು, ಮಾನವೀಯ ಮೌಲ್ಯಗಳಿಗೆ ತನ್ನದೇ ಆದ ರೀತಿಯಲ್ಲಿ ಅದು ಯಾವ ರೀತಿಯಲ್ಲಿ ಕೊಡುಗೆ ನೀಡಬಹುದೆನ್ನುವುದನ್ನು ಇದು ಸಾಬೀತುಪಡಿಸಿತು. ಜಾಲತಾಣದ  ನೂರಾರು ಸದಸ್ಯರು ಈ ಬಡ ಕುಟುಂಬಕ್ಕೆ ಮಾನವೀಯತೆಯಿಂದ ನೆರವಾದರು. ಸುಮಾರು 1,87,010 ರೂ. ನಷ್ಟು ಹಣ ಸಂಗ್ರಹಿಸಿಕೊಟ್ಟರು.
 ಇಷ್ಟೊಂದು ಹಣ ಕೇವಲ ಜಾಲತಾಣದಿಂದ ಸಂಗ್ರಹವಾಗಿದ್ದನ್ನು ಕಂಡು ಎಲ್ಲರೂ ಮೂಕವಿಸ್ಮಿತರಾದರು. ಆದರೆ ಚಿಕಿತ್ಸೆಗೆ ಇನ್ನೂ ಸುಮಾರು 8 ಲಕ್ಷ ರೂ. ಬೇಕಿದೆ. ಇದಕ್ಕಾಗಿ ದಾನಿಗಳತ್ತ ಸಹಾಯಹಸ್ತ ಯಾಚಿಸಲಾಗುತ್ತಿದೆ. ರೇವಂತ್ ಈಗ ಬೆಂಗಳೂರಿನ ಹೆಲ್ತ್ ಕೇರ್ ಗ್ರೂಪ್ (ಎಚ್‌ಸಿಜಿ) ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ. ಸುಮಾರು ಒಂದು ವರ್ಷದ ಕಾಲ ಚಿಕಿತ್ಸೆಯನ್ನು ಆತ ಅಲ್ಲೇ ಇದ್ದು ಪಡೆಯಬೇಕಿದೆ. ಮೊದಲು ಸರ್ಜರಿ ಮಾಡಿ ನಂತರ ನಿಯೊ ಅಡ್ಜುಮೆಂಟ್ ಕೆಮೊಥೆರಪಿ ನಡೆಯಬೇಕಿದೆ ಎಂದಿದ್ದಾರೆ ತಜ್ಞರಾದ ಡಾ. ಇಂತೆಜಾರ್ ಮೆಹದಿ ಮತ್ತು ಡಾ. ಪಿ. ರಶ್ಮಿ .
ದುಡಿದು ತಿನ್ನುವ ಆಟೋ ಚಾಲಕ ಗಿರೀಶ್‌ಕುಮಾರ್ ಇಲ್ಲಿನ ಶರಾವತಿನಗರದ ವಾಸಿ. ಬಡತನದ ಕುಟುಂಬ. ಅವರಿಗೆ ಮೂವರು ಮಕ್ಕಳು. ರೇವಂತ್ ಮೂರನೆಯ ಮಗ. ಗಿರೀಶ್ ಪತ್ನಿ ಹೇಮಲತಾ ಗೃಹಿಣಿ. ಕುಟುಂಬ ನಿರ್ವಹಣೆಯ ಜೊತೆಗೆ ಮಗನ ಚಿಕಿತ್ಸೆಯ ವೆಚ್ಚವನ್ನೂ ಭರಿಸಬೇಕಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವ ಕುಟುಂಬ ಹೇಗಾದರೂ ಮಾಡಿ ಮಗನ್ನು ಉಳಿಸಿಕೊಳ್ಳಬೇಕೆಂಬ ಹಂಬಲದಲ್ಲಿದೆ. ಅದಕ್ಕಾಗಿ ಇನ್ನಿಲ್ಲದ ಯತ್ನ ನಡೆಸುತ್ತಿದೆ. ಸಾರ್ವಜನಿಕರು, ದಾನಿಗಳು ನೆರವಾಗುವ ಮೂಲಕ ಯುವಕನ ಜೀವ ಉಳಿಸಲು ಮುಂದಾಗಬೇಕಿದೆ.
ಈ ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ಅವರವರ ಸಿದ್ಧಾಂತ, ವಿಚಾರಧಾರೆಗಳು ಏನೇ ಇರಲಿ, ಅದನ್ನೆಲ್ಲ ಮೀರಿ ನಿಲ್ಲುವ  ಮಾನವೀಯ ಮೌಲ್ಯ ಮತ್ತು ಸಾಮಾಜಿಕ ಜವಾಬ್ದಾರಿ  ಎಲ್ಲರಿಗೂ ಇದೆ ಎನ್ನುವುದನ್ನು ಈ ನೆರವು ಮತ್ತೊಮ್ಮೆ ಸಾಬೀತುಪಡಿಸಿದೆ. ಒಂದು ವಿಚಾರವನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಮಹತ್ತರ ಕಾಣಿಕೆ ನೀಡುವ ಈ ಜಾಲತಾಣದ ಬಗ್ಗೆ ಎಷ್ಟು ಕೆಟ್ಟ ಅಭಿಪ್ರಾಯಗಳಿವೆಯೋ ಅಷ್ಟೇ ಅಥವಾ ಅದಕ್ಕೂ ಮಿಗಿಲಾಗಿ ಉತ್ತಮ ಅಭಿಪ್ರಾಯಗಳೂ ಇವೆ. ಇಂತಹ ಉತ್ತಮ ಸಂಪರ್ಕದಲ್ಲಿರುವವರು ಒಟ್ಟಾಗಿ  ಒಳ್ಳೆಯ ಕೆಲಸವನ್ನು ಮಾಡಲು ಇದು ನೆರವಾಗಿದೆ.  
ಬಿದನೂರು ಮಾತಿನ ಮಂಟಪ ಎಂಬ ವ್ಯಾಟ್ಸಾಪ್ ಗ್ರೂಪ್ ಈ ಅವಿಸ್ಮರಣೀಯ ಕೆಲಸ ಮಾಡಿದೆ. ಇದರಲ್ಲಿ ಸುಮಾರು 100ರಷ್ಟು ಸದಸ್ಯರಿದ್ದಾರೆ. ದಿನನಿತ್ಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಮೊದಲಾದ ಎಲ್ಲಾ ಚರ್ಚೆಗಳೂ ಇಲ್ಲಿ ಬಿಸಿಬಿಸಿಯಾಗಿ ನಡೆಯುತ್ತಿವೆ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಅವರು ಈ ಗ್ರೂಪಿನಲ್ಲಿ ಯುವಕನ ಕ್ಯಾನ್ಸರ್ ವಿಷಯವನ್ನು ಪ್ರಸ್ತಾಪಿಸಿದ್ದರು. ಅದು ಇಷ್ಟೊಂದು ನೆರವಿಗೆ ಕಾರಣವಾಗಿದೆ.

ರೇವಂತ್‌ಗೆ ಸಹಾಯ ಮಾಡಲಿಚ್ಛಿಸುವವರು 
ಸಿ.ಎಸ್. ಗಿರೀಶ್‌ಕುಮಾರ್, ಎಸ್‌ಬಿ ಅಕೌಂಟ್, ಐಎಫ್‌ಎಸ್‌ಸಿ ನಂ. ವಿಐಜೆಬಿ (ವಿಜಯಾ ಬ್ಯಾಂಕ್)-0001299 ಈ ಖಾತೆಗೆ ನಗದು, ಚೆಕ್, ಡಿಡಿ ಮೂಲಕ ನೆರವಾಗಬಹುದು.  

Wednesday, 27 April 2016

ಪಾಲಿಕೆಯ ಮಾನ ಕಳೆದ ಅಧಿಕಾರಿಗಳು 
 DATTATREYA HEGDE

  ಜವಾಬ್ದಾರಿಯುತ ಆಡಳಿತ, ದಕ್ಷ ಅಧಿಕಾರಿಗಳು ಮತ್ತು ಕರ್ತವ್ಯ ಪ್ರಜ್ಞೆ  ಇರುವ ಜನಪ್ರತಿನಿಧಿಗಳು, ಜವಾಬ್ದಾರಿ ಧೋರಣೆಯ ನೌಕರರು, ಸಿಬ್ಬಂದಿಗಳು ಒಂದು ಸಂಸ್ಥೆಯಲ್ಲಿ ಇಲ್ಲದಿದ್ದರೆ ಅಲ್ಲಿನ ಆಡಳಿತ ಎಷ್ಟೊಂದು ಜಡ್ಡುಗಟ್ಟಿರುತ್ತದೆ, ಭ್ರಷ್ಟತನ ಹೇಗೆ ವ್ಯಾಪಿಸಿರುತ್ತದೆ  ಎನ್ನುವುದಕ್ಕೆ ಶಿವಮೊಗ್ಗ ಪಾಲಿಕೆಯಲ್ಲಿ ಒಂದು ವಾರದಲ್ಲಿ ನಡೆದ    ಎರಡು ಜಫ್ತಿ ಪ್ರಕರಣಗಳೇ ಸಾಕ್ಷಿ. 
2011ರ ಪರಿಹಾರ ಪ್ರಕರಣವೊಂದು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಈಗಿನ ಪಾಲಿಕೆಯವರು ಮುಖಭಂಗ ಅನುಭವಿಸುವ ಪರಿಸ್ಥಿತಿ ಎದುರಿಸುವಂತಾಗಿದೆ. ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎನ್ನುವಂತಾಗಿದೆ. ಅಂದಿನ ಅಧಿಕಾರಿಗಳು ಮತ್ತು ಆಡಳಿತದ ಸೂತ್ರಧಾರರು ಈ ಪರಿಹಾರ ವಿಷಯವನ್ನು ರಾಜಿ ಸೂತ್ರದ ಮೂಲಕ ಪರಿಹರಿಸಬಹುದಿತ್ತು. ಒಂದಲ್ಲ, ನಾಲ್ಕು ಬರಿ ಚರ್ಚೆ ನಡೆಸಿ ಮುಗಿಸಬಹುದಿತ್ತು. ಆದರೆ ಅವರಲ್ಲಿನ ದೂರದೃಷ್ಟಿಯ ಕೊರತೆ, ಮತ್ತು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂಬ ಕಾಳಜಿ ಇಲ್ಲದಿರುವುದು ಇಷ್ಟೆಲ್ಲ ರಾದ್ಧಾಂತಗಳಿಗೆ ಕಾರಣವಾಗಿದೆ ಎಂದೇ ಹೇಳಬೇಕಾಗುತ್ತದೆ.
ವಿಜಯನಗರ ಬಡಾವಣೆಯ ನಿವಾಸಿ ತಮ್ಮಯ್ಯ ಎನ್ನುವವರಿಗೆ ಸೇರಿದ ನಿವೇಶನದಲ್ಲಿ 2011 ರಲ್ಲಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಕುಡಿಯುವ ನೀರಿನ ಪೈಪ್ ಅಳವಡಿಕೆ ಮಾಡಲಾಗಿತ್ತು. ರಸ್ತೆ ನಿರ್ಮಾಣಕ್ಕೆ ನಿವೇಶನದ ಮಾಲಕರ ಅನುಮತಿ ಕೂಡ ಪಡೆದಿರಲಿಲ್ಲ. ಅಂದರೆ ಅಂದಿನ ನಗರಸಭೆ ತನ್ನ ವ್ಯಾಪ್ತಿ ಮೀರಿ, ಕನಿಷ್ಟ ಸೌಜನ್ಯಕ್ಕೂ ಮಾಲಕರನ್ನು ಗಮನಕ್ಕೆ ತೆಗೆದುಕೊಳ್ಳದೆ ದರ್ಪದಿಂದ ಅಥವಾ ತಾನು ಏನು ಮಾಡಿದರೂ ನಡೆಯುತ್ತದೆ ಎನ್ನುವ ಅಹಂಕಾರದಲ್ಲಿ ಹೇಗೆ ವರ್ತಿಸಿರಬಹುದೆನ್ನುವುದನ್ನು ಊಹಿಸಬಹುದು. ನಗರಸಭೆಯ ಈ ಕ್ರಮದ ವಿರುದ್ದ ತಮ್ಮಯ್ಯ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ, ಅರ್ಜಿದಾರರಿಗೆ ಸೂಕ್ತ ನ್ಯಾಯ ಕಲ್ಪಿಸುವಂತೆ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಆದೇಶದ ಹೊರತಾಗಿಯೂ ಅಧಿಕಾರಿಗಳು ಅರ್ಜಿದಾರರಿಗೆ ನ್ಯಾಯ ಕಲ್ಪಿಸುವ ವ್ಯವಸ್ಥೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಮಹಾನಗರ ಪಾಲಿಕೆಯ ಚರಾಸ್ತಿ ಜಪ್ತಿ ಮಾಡುವಂತೆ ಆದೇಶ ಹೊರಡಿಸಿತ್ತು. 
ಮಾರ್ಚ್ 22 ರಂದು ಕೋರ್ಟ್ ಅಮೀನರ ತಂಡ ಪಾಲಿಕೆಗೆ ಆಗಮಿಸಿ ಸ್ಥಿರಾಸ್ತಿ ಜಪ್ತಿಗೆ ಮುಂದಾಗಿದ್ದರು. ಮೇಯರ್ ಮಧ್ಯಪ್ರವೇಶಿಸಿ ಸಂಬಂಧಿಸಿದ ಅರ್ಜಿದಾರರ ಸಮಸ್ಯೆ ಇತ್ಯರ್ಥಪಡಿಸುವ ಭರವಸೆಯಿತ್ತಿದ್ದರು. ಆದರೆ ಅರ್ಜಿದಾರರ ಸಮಸ್ಯೆಯನ್ನು ಮತ್ತೆ  ಪರಿಹಾರ ಮಾಡುವ ಗೋಜಿಗೆ ಮೇಯರ್ ಮತ್ತು ಅಧಿಕಾರಿಗಳು ಮುಂದಾಗಲಿಲ್ಲ. ಪಾಲಿಕೆ ಆಡಳಿತ ಕೊಟ್ಟ ಭರವಸೆಯಂತೆ ನಡೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ (ನಿನ್ನೆ) ಅರ್ಜಿದಾರರೊಂದಿಗೆ ಮತ್ತೆ ಪಾಲಿಕೆ ಕಚೇರಿಗೆ ಆಗಮಿಸಿದ ಕೋರ್ಟ್ ಅಮೀನರು ಚರಾಸ್ತಿ ಜಪ್ತಿಗೆ ಮುಂದಾದರು. ಇದರಿಂದ ಎಚ್ಚೆತ್ತುಕೊಂಡ ಆಯುಕ್ತರು ಅರ್ಜಿದಾರರೊಂದಿಗೆ ವಿವಾದಿತ ನಿವೇಶನದ ಖುದ್ದು ಪರಿಶೀಲನೆ ನಡೆಸಿದರು. ಪಾಲಿಕೆ ಕಚೇರಿಯಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದವು. ಅರ್ಜಿದಾರರಿಗೆ ಪಾಲಿಕೆ ವತಿಯಿಂದ ಅಗತ್ಯ ನೆರವು ಕಲ್ಪಿಸುವ ಭರವಸೆಯಿತ್ತ ಹಿನ್ನೆಲೆಯಲ್ಲಿ ಅಮೀನರು ಜಪ್ತಿ ಕಾರ್ಯವನ್ನು ಮತ್ತೆ ಅರ್ಧಕ್ಕೆ ಸ್ಥಗಿತಗೊಳಿಸಿದರು. 
ಈ ರೀತಿ ಘಟನೆಗಳು ನಗರಸಭೆ ಅಥವಾ ಪಾಲಿಕೆಗೆ ಹೊಸತೇನಲ್ಲ. ಇಂತಹ ಹತ್ತಾರು ಘಟನೆಗಳು ಕಳೆದ ನಾಲ್ಕಾರು ವರ್ಷಗಳಲ್ಲಿ ನಡೆದುಹೋಗಿವೆ. ಆದರೂ ಬುದ್ದಿ ಕಲಿಯದ ಅಧಿಕಾರಿಗಳು, ಭ್ರಷ್ಟಾಚಾರದಲ್ಲೇ ಮುಳುಗಿ ಇಲ್ಲಿಯೇ ತಳವೂರಿರುವ ಕೆಲವು ನೌಕರರು ಪಾಠ ಕಲಿತಿಲ್ಲ. ಜಾಗದ ಮಾಲಕನನ್ನು ಕಮಿಷನ್‌ಗಾಗಿಯೋ ಅಥವಾ ಇನ್ನಿತರ ಯಾವ ಉದ್ದೇಶಕ್ಕೋ ಗೋಳುಹೊಯ್ದುಕೊಂಡಷ್ಟು, ಆಟವಾಡಿಸಿದಷ್ಟು ತಮಗೇ ಲಾಭಎಂದುಕೊಂಡಿದ್ದಾರೆ. ಆ ಹಣವನ್ನು ಕೆಲಸ ನಿರ್ವಹಿಸುವವ ಮೊದಲೇ ಕೊಟ್ಟಿದ್ದರೆ ಇಷ್ಟೊಂದು ರಗಳೆಯನ್ನು ಮೈಮೇಲೆ ಎಳೆದುಕೊಳ್ಳುವುದು ನಡೆಯುತ್ತಿರಲಿಲ್ಲ. ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸುವ ಹಿರಿಯ ಅಧಿಕಾರಿಗಳು, ತಾವು ಹೇಳಿದಂತೆಯೇ ನಡೆಯಬೇಕೆಂಬ ಅಹಂನ ಕೆಲವು ಆಡಳಿತಗಾರರಿಂದಾಗಿ ಇಂತಹ ಅವಮಾನವನ್ನು ಪಾಲಿಕೆ ಎದುರಿಸಬೇಕಾಗಿದೆ.
 ಮಾಲಕನಿಗೆ ಪರಿಹಾರವನ್ನು ಒಂದಲ್ಲ ಒಂದು ದಿನ ಕೊಡಲೇಬೇಕೆಂಬ ಕನಿಷ್ಟ ವ್ಯವಹಾರಿಕ ಜ್ಞಾನವೂ ನೌಕರರಿಗೆ ಇಲ್ಲ. ಇಷ್ಟೆಲ್ಲ ಮಾಡಿದ್ದರಿಂದ ಆದ ಲಾಭವೇನು ಗೊತ್ತೇ? ಬಡ್ಡಿ ರಹಿತ ಪಾಲಿಕೆ ಅದನ್ನು ಈಗ ಪಾಲಿಸಬೇಕಿದೆ. ಎಷ್ಟೋ ಲಕ್ಷ ರೂ. ವನ್ನು ಈಗ ಕೊಡಲೇಬೇಕಿದೆ. ಮೂರನೆಯ ಬಾರಿ ಯಾವ ಕಾರಣಕ್ಕೂ ಅಮೀನರು  ಸುಮ್ಮನೆ ಹೋಗುವುದಿಲ್ಲ ಎನ್ನುವುದನ್ನು ಅರಿಯಬೇಕಿದೆ. ತನ್ನ ದಿವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆಗೆ ಮತ್ತೊಮ್ಮೆ ಪಾಲಿಕೆ ಆಡಳಿತ ಸಾರ್ವಜನಿಕ ವಲಯದಲ್ಲಿ ಮುಜುಗುರಕ್ಕೀಡಾಗುವಂತಾಯಿತು. 
ಅಧಿಕಾರಿಗಳು  ಇಂತಹ ನಿರ್ಧಾರ ಕೈಗೊಳ್ಳುವ ಮುನ್ನ ಮುಂದೇನಾಗಬಹುದೆನ್ನುವ ಬಗ್ಗೆ ಯೋಚಿಸುವುದಿಲ್ಲ. ಜೊತೆಗೆ ಮುಂದೆ ನೋಡಿಕೊಂಡರಾಯಿತು. ಆ ವೇಳೆಗೆ ಬೇರೆ ಯಾರೋ ಆಯುಕ್ತರಾಗಿರುತ್ತಾರೆ, ಅಧ್ಯಕ್ಷರಾಗಿರುತ್ತಾರೆ ಅಥವಾ ಇಂಜಿನೀಯರ್ ಆಗಿರುತ್ತಾರೆ. ಅವರೇ ಅದನ್ನು ಬಗೆಹರಿಸಿಕೊಳ್ಳಲಿ, ಈಗ ಮುಂದೂಡಿಬಿಡೋಣ ಎನ್ನುವ ಮನೋಭಾವ ಇದಕ್ಕೆ ಕಾರಣ. 
ಇನ್ನಾದರೂ ಪಾಲಿಕೆ ಅಧಿಕಾರಿಗಳು ಮತ್ತು ಆಡಳಿತ ಬಾಕಿ ಉಳಿಸಿಕೊಂಡಿರುವ ಪರಿಹಾರವನ್ನು ಕೂಡಲೇ ಪಾವತಿಸುವ ಕೆಲಸ ಮಾಡಬೇಕಿದೆ. ವಿವಿಧೆಡೆ ರಸ್ತೆ, ಚರಂಡಿ ನಿರ್ಮಾಣ ಮಾಡುವಾಗ ಇಂತಹ ಘಟನೆ ಎದುರಾಗುತ್ತದೆ. ಅದನ್ನೆಲ್ಲ ಆಗಲೇ ಪರಿಹರಿಸಿ ಸೂಕ್ತ ಪರಿಹಾರ ಕೊಟ್ಟು ಮುಗಿಸಿಬಿಡಬೇಕು. ಇಲ್ಲವಾದಲ್ಲಿ ಬೆಳೆದು ಪಾಲಿಕೆಯ ಮಾನದ ಜೊತೆಗೆ ಆಡಳಿತ ನಡೆಸುವವರ ಮತ್ತು ಅಧಿಕಾರಿಗಳ ಮಾನವೂ ಹರಜಾಗುತ್ತದೆ  ಎನ್ನುವುದನ್ನು ಅರಿಯಬೇಕಿದೆ

Thursday, 21 April 2016

ಕ್ಯಾನ್ಸರ್‌ಪೀಡಿತ ಪತ್ನಿಯ ಸೇವೆ: ಸಮಾಜಕ್ಕೆ ಮಾದರಿಯಾದ ಪತಿ
 ಆರೈಕೆಗಾಗಿ ನೌಕರಿ ಬಿಟ್ಟು ಮಾನವೀಯತೆ, ಪ್ರೀತಿಯ ಹೊಳೆ ಹರಿಸಿದ


ದತ್ತಾತ್ರೇಯ ಹೆಗಡೆ


ರಾಜ್‌ಕುಮಾರ್-ಮಾಧವಿ ಅಭಿನಯದ ’ಹಾಲುಜೇನು’ ಕನ್ನಡ ಚಲನಚಿತ್ರವನ್ನು ನೀವು  ನೋಡಿರಬಹುದು. ಅದರಲ್ಲಿ ಕ್ಯಾನ್ಸರ್‌ಪೀಡಿತ  ಪತ್ನಿಯನ್ನು ನಾಯಕನಟ ಪ್ರೀತ್ಯಾದರದಿಂದ ತಾನೇ ಆರೈಕೆ ಮಾಡುತ್ತಾನೆ, ಜೊತೆಗೆ ಮನೆಯ ಎಲ್ಲಾ ಕೆಲಸವನ್ನೂ ನಿಭಾಯಿಸುತ್ತಾನೆ. ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ, ಆಯಾಸ ಪಡದಿರು ನೀನು’  ಎಂದು ಹಾಡುತ್ತ್ತಾ ಎಲ್ಲ ಕೆಲಸವನ್ನು ತಾನೇ ಮಾಡುತ್ತೇನೆ ಎನ್ನುತ್ತಾನೆ. ಜೊತೆಗೆ, ‘ಏನೇ ಆದರೂ ನಿನ್ನ, ಸೇವೆಯ ಮಾಡುವೆ ಚಿನ್ನಾ .....’ ಎಂದು ಹಾಡುತ್ತಾರೆ. ಈ ದೃಶ್ಯವನ್ನು ಮತ್ತೆ ನೆನಪಿಸುವಂತಹ ನೈಜ ಘಟನೆಯೊಂದು ಇಲ್ಲಿದೆ:


ಅವರೋರ್ವ ಗೌರವಾನ್ವಿತ  ಶಿಕ್ಷಕಿ; ಅನುಪಮ ಸೌಂದರ್ಯದ ಖನಿ.  ದೃಷ್ಟಿ ತಾಗೀತೇನೋ ಅನ್ನುವಂತಹ ಸುಮಧುರ ದಾಂಪತ್ಯದ ಸುಂದರ ಸುಖೀ  ಕುಟುಂಬ. ಆ ಕುಟುಂಬದಲ್ಲಿ ಪ್ರೀತಿ- ಪ್ರೇಮದ, ಹಾಲು-ಜೇನಿನ ಹೊಳೆಯೇ ಹರಿದಿತ್ತು. ಇಂತಹ ಸುಖೀಸಂಸಾರವನ್ನು ಸುಮ್ಮನೆ ಬಿಡಲು ವಿಧಿಗೆ ಮನಸ್ಸಾಗಲಿಲ್ಲವೇನೋ.....?. ನೆಮ್ಮದಿ ಕಸಿದುಕೊಳ್ಳಲು ಹೊಂಚು ಹಾಕಿ ಕುಳಿತಿದ್ದ ವಿಧಿ, ಕ್ಯಾನ್ಸರ್ ಎಂಬ ಮಹಾಮಾರಿಯ ರೂಪದಲ್ಲಿ ವಕ್ಕರಿಸಿಯೇ ಬಿಟ್ಟ.
ಶಿಕ್ಷಕಿ ವಿಜಯಲಕ್ಷ್ಮೀ ಅವರನ್ನು ಕ್ಯಾನ್ಸರ್ ಸುದೀರ್ಘ ಏಳು ವರ್ಷಗಳ ಕಾಲ ಬಾಧಿಸಿತು. ಈ ಅವಧಿಯಲ್ಲಿ ಪತಿ ಜ್ಞಾನೇಶ್ ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು, ಪ್ರೀತಿಯಲ್ಲಿ, ಆರೈಕೆಯಲ್ಲಿ ಸ್ವಲ್ಪವೂ ಕುಂದುಂಟಾಗದಂತೆ ನೋಡಿಕೊಂಡರು. ಇದು ಇಡೀ ಸಮಾಜಕ್ಕೆ ಮಾದರಿಯಾಗುವಂತಹುದು. ಏಕೆಂದರೆ, ಕ್ಯಾನ್ಸರ್ ರೋಗಿ ಎಂದಾಕ್ಷಣ ಹೆತ್ತ ತಂದೆ-ತಾಯಿಯರನ್ನೇ ಆಶ್ರಮಕ್ಕೋ, ಸಂಘ-ಸಂಸ್ಥೆಗಳ ವಶಕ್ಕೋ ಬಿಟ್ಟು ಬರುವ ಅಮಾನವೀಯ ಗುಣಗಳೇ ಬಹುತೇಕ ಕಂಡುಬರುವ ಈ ದಿನಮಾನಗಳಲ್ಲಿ ಅಥವಾ  ಮನೆಯಲ್ಲಿ ಕೆಲಸದಾಳುಗಳ ಮೂಲಕ ಅವರ ಸೇವೆ ಮಾಡಿಸುವುದನ್ನೋ ಕಾಣುತ್ತೇವೆ. ಆದರೆ ಇಲ್ಲಿ ಪಾಲಕರ ಮೇಲಿರುವ ಪ್ರೀತಿಗಿಂತಲೂ ಮಿಗಿಲಾಗಿ ಪತ್ನಿಯನ್ನು ನೋಡಿಕೊಂಡಿದ್ದು  ಎಲ್ಲರಿಗೂ ಮಾದರಿಯಾಗುವಂತಹುದು.
 ಪತ್ನಿ ಅಸಾಧಾರಣ ಬುದ್ಧಿವಂತೆ. ಸ್ತನ ಕ್ಯಾನ್ಸರ್ ಆಕೆಗೆ ಬಾಧಿಸಿದೆ ಎನ್ನುವ ವಿಚಾರ ಎಂದಿಗೂ ಬಾರದಿರುವಂತೆ, ಇದರಿಂದ ಧೈರ್ಯಗುಂದದಂತೆ ನೋಡಿಕೊಳ್ಳುವುದು ಸುಲಭದ ಮಾತಲ್ಲ. ರೋಗ ಇದೆ ಎಂದಾಕ್ಷಣವೇ ತಮಗೆ ಸಾವು ಖಚಿತ ಎಂದು ಹೆದರಿಯೇ ಇನ್ನಷ್ಟು ದಿನ ಬದುಕುವ ಅವಕಾಶವಿದ್ದರೂ ಅನೇಕರು ಅದನ್ನು ಕೈಚೆಲ್ಲುತ್ತಾರೆ. ಆದರೆ, ಇಲ್ಲಿ ವಿಜಯಲಕ್ಷ್ಮಿಗೆ ಪತಿ ತುಂಬಿದ ಮಾನಸಿಕ ಧೈರ್ಯ ಎಷ್ಟಿತ್ತೆಂದರೆ, ಉನ್ನತ ವಿದ್ಯಾಭ್ಯಾಸದ ಆಸೆ ದಿನೇ ದಿನೇ ಹೆಚ್ಚುತ್ತಿತ್ತು. ಒಂದೆಡೆ ಕ್ಯಾನ್ಸರ್ ಎಂಬ ರಕ್ಕಸ  ತನ್ನೊಡನೆ ಆಟವಾಡುತ್ತಿದ್ದರೂ, ಇನ್ನೊಂದೆಡೆ ಎಂ.ಎ  ಮತ್ತು ಬಿ.ಇಡಿ ಎರಡನ್ನೂ ಓದಿದರು. ಎಂ.ಎ ಯಲ್ಲಿ 2013-14ರ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ 8ನೆಯ ರ‌್ಯಾಂಕ್ ಗಳಿಸಿದರು. 2014ರಲ್ಲಿ ರೆಗ್ಯುಲರ್ ಆಗಿ ಬಿ.ಇಡಿ ತರಗತಿಗೆ ಹೋಗಿ ಓದಿ ಅಲ್ಲಿಯೂ  ಕಾಲೇಜಿಗೆ ಮೊದಲಿಗರಾದರು. ದೇಹದ  ಆ ಭಾಗವನ್ನು ನೋವು ದಿನೇದಿನೇ ಗೋಳುಹೊಯ್ದುಕೊಳ್ಳುತ್ತಲೇ ಇತ್ತು. ಪತ್ನಿಯ ಎಲ್ಲ ಸೇವೆಯನ್ನು  ಅನವರತ ಮಾಡಿ ಆಕೆಗೆ ಕ್ಯಾನ್ಸರ್‌ನ ನೋವು  ಮನಸ್ಸಿಗೆ ಬಾರದಂತೆ ಸಲಹಿದರು. ಆದರೂ ಏರುತ್ತಲೇ ಇದ್ದ ಕ್ಯಾನ್ಸರ್ ಬಾಧೆ ವಿಧಿಯಾಟದ ಮುಂದೆ ಯಾರ ಆಟವೂ ನಡೆಯುವುದಿಲ್ಲ ಎನ್ನುತ್ತಾರಲ್ಲ, ಅದೇ ರೀತಿ ವಿಜಯಲಕ್ಷ್ಮೀ ಇತ್ತೀಚೆಗೆ ತನ್ನ ಏಕಮಾತ್ರ ಪುತ್ರಿ ವಿಭಾಮಯಿ ಮತ್ತು ಪ್ರೀತಿಯನ್ನೇ ಹರಿಸಿದ ಪತಿಯನ್ನು ಬಿಟ್ಟು, ಇಹಲೋಕದ ಯಾತ್ರೆ ಮುಗಿಸಿದ್ದಾರೆ.
ಇದು ಸಾಮಾನ್ಯ ಘಟನೆಯಲ್ಲ.  ಏಕೆ ಗೊತ್ತೆ? ಹಾಲುಜೇನಿನಂತಹ ಕುಟುಂಬದಲ್ಲಿ ಕ್ಯಾನ್ಸರ್ ಬಿರುಗಾಳಿ ಎಬ್ಬಿಸಿದಾಗ ಇನ್ಸೂರೆನ್ಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ದೊಡ್ಡ ಮೊತ್ತದ ಸಂಬಳ  ಪಡೆಯುತ್ತಿದ್ದ ಪತಿ ಜ್ಞಾನೇಶ್ ತನ್ನ ಸಂಬಳಕ್ಕಿಂತ ಪತ್ನಿಗೆ ಇನ್ನಷ್ಟು ಪ್ರೀತಿಯ ಮಳೆ ಸುರಿಸಿ ಆಕೆಯನ್ನು ಬದುಕಿಸಲು ಟೊಂಕಕಟ್ಟಿ ನಿಂತರು. ಶತಾಯಗತಾಯ ಪತ್ನಿಯನ್ನು ಉಳಿಸಿಕೊಳ್ಳಲೇಬೇಕೆಂಬ ಏಕೈಕ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ಕೂಡ ನೀಡಿದರು.
ಜ್ಞಾನೇಶ್ ಭದ್ರಾವತಿಯ ಹಾಲಪ್ಪ ವೃತ್ತದ ಬಳಿಯ ವಾಸಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ. ಸರಕಾರಿ ನೌಕರಿಯಲ್ಲಿದ್ದ ತಂದೆ-ತಾಯಿ ಹುಡುಕಿದವಳನ್ನೇ ಮದುವೆಯಾದರು. ಮದುವೆಯಾಗುವ ಹುಡುಗಿಗೆ ಕಷ್ಟ-ಸುಖ ಗೊತ್ತಿರಬೇಕೆನ್ನುವುದು ಅವರ ನಿರ್ಧಾರವಾಗಿತ್ತು. ಅಂತೆಯೇ ವಿಜಯಲಕ್ಷ್ಮೀ ಎಂಬ ಸರ್ಕಾರಿ ಕನ್ನಡ ಶಾಲೆಯ ಶಿಕ್ಷಕಿ ಈತನ ಕೈ ಹಿಡಿದಿದ್ದಳು. ಇವರಿಗೊಂದು ಮುದ್ದಾದ ಹೆಣ್ಣು ಮಗು. ಇಂತಹ ಕುಟುಂಬ ಹಾಲು ಜೇನಿನಲ್ಲಿ ಕೈತೊಳೆಯುತ್ತಿತ್ತು. ಆದರೆ ಸ್ತನ ಕ್ಯಾನ್ಸರ್ ಯಾವಾಗ ಅವರನ್ನು ಆವರಿಸಿತೋ ಜ್ಞಾನೇಶ್ ಕಂಗಾಲಾದರು.  ಪತ್ನಿಯ ಯೋಗಕ್ಷೇಮವೇ ಹಣ, ಉದ್ಯೋಗಕ್ಕಿಂತ ಮುಖ್ಯವೆಂದು  ಅರಿತು ತನ್ನ ಜೀವನವನ್ನೇ ಮುಡಿಪಾಗಿಟ್ಟರು. ಹೊಸನಗರದಲ್ಲಿ ಶಿಕ್ಷಕಿಯಾಗಿದ್ದ ಪತ್ನಿಯನ್ನು ಭದ್ರಾವತಿಗೆ ವರ್ಗಾವಣೆ ಮಾಡಿಸಿಕೊಂಡರು.
ಮಗಳಿಗೆ ಪಾಠ ಹೇಳಿಕೊಡುವುದು, ಪತ್ನಿಯನ್ನು ಶಾಲೆಗೆ ಬಿಡುವುದು, ಕರೆದುಕೊಂಡು ಬರುವುದು, ಮನೆಯ ಎಲ್ಲ ಕೆಲಸಗಳನ್ನು ಸ್ವಲ್ಪವೂ ಬೇಸರಿಸದೆ ನಿರ್ವಹಿಸುವುದು ಜ್ಞಾನೇಶ್ ಅವರ ನಿತ್ಯದ ಕಾಯಕವಾಯಿತು. ಮೂರು ತಿಂಗಳಿಗೊಮ್ಮೆ  ಮಣಿಪಾಲಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸುವುದು ನಡೆದೇ ಇತ್ತು. ಇದಕ್ಕ್ಕಾಗಿ ಸಾಕಷ್ಟು ಹಣವನ್ನೂ ಖರ್ಚು ಮಾಡಿದರು. ಪತ್ನಿ ಸರ್ಕಾರಿ ನೌಕರಿಯಲ್ಲಿದ್ದುದರಿಂದ  ಹತ್ತಾರು ಓಡಾಟ ಮಾಡಿ ಜ್ಯೋತಿ ಸಂಜಿವಿನಿ ಯೋಜನೆಯಡಿ  ನೆರವನ್ನೂ ಪಡೆದುಕೊಂಡರು. ಪಾಲಕರು, ಕೆಲವು ಸಂಬಂಧಿಕರು, ಮಿತ್ರರೂ ಸಹ ನೆರವಾಗಿದ್ದನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತಾರೆ ಜ್ಞಾನೇಶ್.  
ಮಡದಿಯ ಕಾಯಿಲೆ ಉಲ್ಬಣವಾಗುತ್ತಿದ್ದರೂ, ಪತ್ನಿಗೆ, ಹತ್ತಿರದವರಿಗೆ, ಅಕ್ಕಪಕ್ಕದವರಿಗೆ  ಕ್ಯಾನ್ಸರ್‌ನ ಭೀಕರತೆ ಬಗ್ಗೆ ಹೇಳಿರಲಿಲ್ಲ. ಜತನದಿಂದ ಪತ್ನಿಯನ್ನು ಕಾಪಾಡಿಕೊಳ್ಳುವುದು   ಮತ್ತು  ಪತ್ನಿ ಬದುಕುಳಿದರೆ ಸಾಕು ಎನ್ನುವುದೊಂದೇ ಉದ್ದೇಶವಾಗಿತ್ತು.  
ಆದರೆ, ಪತ್ನಿಯ ಕೊನೆದಿನ ಸಮೀಪಿಸುತ್ತಿರುವುದು ಪತಿಗೆ ಅರಿವಾಗುತ್ತಲೇ ಇತ್ತು. ಇಷ್ಟಾದರೂ ಪತ್ನಿಗೆ ಸತತ ಧೈರ್ಯ ತುಂಬುತ್ತಲೇ ಇದ್ದರು. ನೋಡುಗರ ಪಾಲಿಗೆ ನರಕಸದೃಶ ಪರಿಸ್ಥಿತಿ ಇದ್ದರೂ ದೇವತೆಯಂತೆ ಪೂಜಿಸುತ್ತಿದ್ದರು. ಸ್ನಾನದಿಂದ ಹಿಡಿದು ಶೌಚಾಲಯದವರೆಗಿನ ಎಲ್ಲ ಸೇವೆಯನ್ನು ತಾನೇ ಮಾಡಿ, ಪತ್ನಿಗೆ ಊರುಗೋಲಾಗಿದ್ದರು. ಶಾಲಾ ಆಡಳಿತ ಮಂಡಳಿಯವರೂ, ಸಹಶಿಕ್ಷಕರೂ ಸಹ ವಿಜಯಲಕ್ಷ್ಮಿಯ ಪರಿಸ್ಥಿತಿ ಅರಿತಿದ್ದರಿಂದ ಅವರು ಪಾಠ ಮಾಡುವ ವೇಳೆ ಸಹಕರಿಸುತ್ತಿದ್ದರು. ಪತಿ ಸೇವೆ ಮಾಡುವುದನ್ನು ಕಂಡು ಎಲ್ಲರೂ ಬೆಕ್ಕಸಬೆರಗಾಗಿದ್ದರು.
ಪತ್ನಿಗೆ ಎಷ್ಟೇ ಧೈರ್ಯ ತುಂಬಿ, ಸಾವು ಬಾರದ ರೀತಿಯಲ್ಲಿ ನೋಡಿಕೊಂಡರೂ  ವಿಧಿಯಾಟವೇ ಮೇಲಾಗಿತ್ತು. ಎಪ್ರಿಲ್ 11ರಂದು ಪತಿಯ ತೊಡೆಯ ಮೇಲೆ ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದರು ವಿಜಯಲಕ್ಷ್ಮೀ. ಸುಮಾರು 7 ವರ್ಷಗಳ ಕಾಲ ಪತಿ ತೋರಿದ  ಪ್ರೀತಿಯೇ, ಎಂದೋ ಸಾಯಬೇಕಿದ್ದ ಆಕೆಯ ಸಾವಿನ ದಿನವನ್ನು ಮುಂದೂಡಿತ್ತು. ಜ್ಞಾನೇಶ್ ಪತ್ನಿಯನ್ನು ಆರೈಕೆ ಮಾಡಿದ ರೀತಿ ಮಾತ್ರ  ನಿಜಕ್ಕೂ ನಮ್ಮ ಸಮಾಜಕ್ಕೊಂದು ಮಾದರಿಯೇ ಸರಿ.
....................................   

Wednesday, 20 April 2016

ನಾಟಕ ವಿಮರ್ಶೆ

ಡೈಲಾಗ್, ಪಂಚ್‌ಗಳ ನಗೆನಾಟಕ  ‘ಚಿಗುರು ಮೀಸೆ ಪ್ರಣಯ’

* ದತ್ತಾತ್ರೇಯ ಹೆಗಡೆ


‘ಕಾವ್ಯೇಷು ನಾಟಕಂ ರಮ್ಯಂ’  ಎನ್ನುತ್ತಾನೆ ಕಾಳಿದಾಸ.  ಕಲೆಯ ಎಲ್ಲ ಪ್ರಕಾರಗಳಿಗಿಂತ ನಾಟಕ ಪ್ರಕಾರ ಹೆಚ್ಚು ಪರಿಣಾಮಕಾರಿ. ದೃಶ್ಯ ಮಾಧ್ಯಮವಾಗಿರುವ ಈ ಕಲಾಪ್ರಕಾರಕೆ ಪ್ರೇಕ್ಷಕರನ್ನು ಹಿಡಿದಿಡುವುದು  ಒಂದು ಸವಾಲಿನ ಕೆಲಸವೇ ಸರಿ. ಆದರೆ, ಎ. 16ರಂದು ಕುವೆಂಪು ರಂಗಮಂದಿರದಲ್ಲಿ ಮೊತ್ತಮೊದಲ ಪ್ರದರ್ಶನ ಕಂಡ ಹೊ.ನ. ಸತ್ಯ ಅವರ ‘ಚಿಗುರು ಮೀಸೆ ಪ್ರಣಯ, ಎಲ್ಲ ಕೋನಗಳಿಂದಲೂ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿದೆ.
ಪತ್ರಕರ್ತ ರವಿ ಬೆಳಗೆರೆಯವರ ‘ಪಾವೆಂ ಹೇಳಿದ ಕಥೆಗಳು’ ಕಥಾ ಸಂಕಲನದ ಕಥೆಯೊಂದನ್ನಾಧರಿಸಿ ಅತ್ಯಂತ ನವೀರಾಗಿ, ಹಾಸ್ಯನಾಟಕವಾಗಿ ಹೆಣೆದು ಪ್ರದರ್ಶಿಸಿದ ಕೀರ್ತಿ ಸತ್ಯ ಅವರದ್ದು.
ಗುಂಡಿನ ಗಮ್ಮತ್ತಿನಲ್ಲೇ ತೇಲುತ್ತ ಕತೆ ಹೆಣೆಯುವ ಕಥೆಗಾರ ರವಿ ಬೆಳಗೆರೆ,  ಎದುರು ಮನೆಯ ಹುಡುಗಿಯ ಪ್ರೇಮಪಾಶಕ್ಕೆ ಬಿದ್ದು, ಗುಂಡಿನ ನಶೆಗಿಂತ ಹೆಣ್ಣಿನ ನಶೆ ತೀವ್ರವಾದದ್ದು ಎನ್ನುವ ಸತ್ಯವನ್ನು ಮೂಡಿಸುತ್ತಾನೆ. ಆಧುನಿಕ ಕನ್ನಡ ಕವಿಯೊಬ್ಬ ಹಳೆಯ ಚಿತ್ರಗೀತೆಗಳ ಪಲುಕು ಮೆಲುಕುಗಳ ಜೊತೆಯಲ್ಲೆ ಡುಂಢಿರಾಜರ ಚುಟುಕುಗಳನ್ನು ನೆನಪಿಸುವಲ್ಲಿ, ಬಿಯರ್, ವೈನ್‌ಗಳ ಕುರಿತಾಗಿ ಕವನ ರಚಿಸುವುದು ಸತ್ಯ ಅವರ ಆಶುಕವಿತ್ವದ ಪ್ರತಿಭೆಗೆ ಸಾಕ್ಷಿಯಾಗುತ್ತದೆ. ಇನ್ನು, ಕಥಾನಾಯಕಿಯಾಗಿ ಕಾಣಿಸಿಕೊಳ್ಳುವ ಜೊಸೆಫಿನ್ ಪಾತ್ರಧಾರಿಗೂ ಸಹ ಕಥೆಗಾರನ ಕುರಿತಾಗಿ ಇರುವ ಆಸಕ್ತಿ, ಆಕರ್ಷಣೆಗಳು ಅವರ ಹಾವಭಾವಗಳ ಭಂಗಿಯಿಂದಲೇ  ಮಾಸದ ಮಾದಕ ನಗುವಿನಿಂದಲೇ ವೇದ್ಯವಾಗುತ್ತದೆ. ಕಥೆಗಾರನ ಗೆಳೆಯನಾಗಿ ರಂಗಪ್ರವೇಶ ಮಾಡುವ ಪಾಟೀಲ ಕತೆಗಾರನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡು ಡೈಲಾಗ್ ಪಂಚ್‌ಗಳನ್ನು ಎಸೆಯುವುದು, ಕಥಾನಾಯಕಿಯನ್ನು ತಾನೇ  ಲಪಟಾಯಿಸುವಂತೆ ನಟಿಸುವುದು, ಎಂಟಕ್ಷರದ  ‘ಐ ಲವ್ ಯೂ’ ಹೇಳಲು ವಿಫಲನಾದ, ಕಥೆಗಾರನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಒಂಭತ್ತನೆಯ ಲವರ್‌ನ್ನು ಪಟಾಯಿಸುವವನಂತೆ ನಟಿಸುವುದು ನಿಜಕ್ಕೂ ಪತ್ತೆದಾರಿ ಕಾದಂಬರಿಯನ್ನು ನೆನಪಿಸಿಸುತ್ತದೆ.
ತನ್ನವಳಾಗಬೇಕಿದ್ದ ಜೊಸೆಫಿನ್ ತನ್ನ ಮಿತ್ರನ ಪಾಲಾದಳೆಂದು, ಮಿತ್ರದ್ರೋಹಿಯಾದಳೆಂದು ಪರಿತಪಿಸ ಮನೆ ಖಾಲಿಮಾಡುವ ಕಥೆಗಾರನ ಮುಂದೆ ಪಾಟೀಲ ಮತ್ತೆ ಪ್ರತ್ಯಕ್ಷನಾಗಿ ನಿಜಸ್ಥಿತಿಯನ್ನು ತಿಳಿಸಿ ಇಬ್ಬರನ್ನೂ ಒಂದು ಮಾಡುವಲ್ಲಿ ಕಥೆ ಸುಖಾಂತ್ಯಗೊಳ್ಳುತ್ತದೆ. ಇವರ ಮಧ್ಯೆ ಈ ಹಾಸ್ಯ ನಾಟಕದ ಜೀವಾಳವಾಗಿ  ಮಿಂಚಿದ ಪಾತ್ರವೆಂದರೆ ಹಾಲು ಹಾಕುವವನದು.
ಕಥೆಗಾರನಾಗಿ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕ ಡಾ. ಧನಂಜಯ ಅವರು ಕನಸುಗಾರ, ನಟ ರವಿಚಂದ್ರನ್ ಅವರನ್ನು ನೆನೆಪಿಸುವಂತೆ ಗಿಟಾರ್ ಹಿಡಿದು ‘‘ನನ್ನ ಮನಸು ಅರಮನೆ, ನನ್ನ ಮನಸು ಸೆರೆಮನೆ’’ ಎಂದು ಗುನುಗುನಿಸಿದ್ದು, ಯುವ ಪ್ರೇಮಿಗಳ ಹೃದಯಕ್ಕೆ ಕಚಗುಳಿ ಇಡುವಂತಿತ್ತು. ತನ್ನ ಪ್ರೇಮಿಕಾಳಿಗಾಗಿ ಗುಂಡಿನ ಚಟ ಬಿಟ್ಟು, ಮುಂಜಾನೆ ಎದ್ದು ಜಾಗಿಂಗ್ ಮಾಡುವ ಯುವಕನಾಗಿ, ಪರಿವರ್ತನೆಗೊಳ್ಳುವುದು ಹೆಣ್ಣುಮಕ್ಕಳನ್ನು ಸೆಳೆಯುವ ಇಂದಿನ ಯುವಕರ ಫಿಜಿಕಲ್ ಫಿಟ್‌ನೆಸ್‌ನ ಪ್ರಜ್ಞೆಯಂತಿತ್ತು. ಧನಂಜಯ ಅವರ ಆಕರ್ಷಕ ವ್ಯಕ್ತಿತ್ವ, ಅವರ ಮಾತಿನ ಧಾಟಿಯ ಏರಿಳಿತ, ಕಥೆಗಾರನ ಪಾತ್ರಕ್ಕೆ ನಿಜಕ್ಕೂ ನ್ಯಾಯ ಒದಗಿಸಿತ್ತು. ಆದರೆ, ಚಿಗುರು ಮೀಸೆಯ ಪ್ರಣಯ ಎನ್ನುವ ಶೀರ್ಷಿಕೆ ನಿರ್ದೇಶಕರ ಆಯ್ಕೆಯ ಕುರಿತು ಒಂದು ಕ್ಷಣ ಚಿಂತಿಸುವಂತಾಯಿತು. ಕವಿಯ ಪಾತ್ರದಲ್ಲಿ ಮಿಂಚಿದ, ಪಾದರಸ ಓಡಾಟದ ಸುಧೀಂದ್ರ ಅವರ ಡೈಲಾಗ್ ಪಂಚ್‌ಗಳಂತೂ ಹೊಟ್ಟೆ ಹುಣ್ಣಾಗಿಸುವಂತಿತ್ತು.  ಬಿಯರ್ ಬಾಟಲಿಯನ್ನು ಹಿಡಿದುಕೊಂಡು ‘ನಾನಿರುವುದೆ ನಿನಗಾಗಿ, ನೀನಿರುವುದೆ ನನಗಾಗಿ’  ‘ಒಂದೇ ನಾಡಿನ ಕುಡುಕರು ನಾವು ಸೋದರರಂತೆ ನಾವೆಲ್ಲ’ ಎಂದು ಹಾಡುವುದು, ಟೈಟ್ ಟಾನಿಕ್ ಎನ್ನುವುದು, ನಾಲಿಗೆ ತುದಿಯಲ್ಲಿ ಚಪ್ಪರಿಸುವ ಉಪ್ಪಿನಕಾಯಿ, ಬಿಯರ್ ಬಾಟಲ್ ಓಪನ್ ಮಾಡುವ ಪರಿ, ಬಾಟಲನ್ನೇ ಗಂಟಲಿಗಿಳಿಸುವುದು ಒಬ್ಬ ವೃತ್ತಿಪರ ಕುಡುಕನನ್ನು ನೆನೆಪಿಸುವುದರೊಂದಿಗೆ ನಾಟಕದ ಆ ಪಾತ್ರಕ್ಕೆ ಜೀವ ತುಂಬಿತ್ತು.
ಜೊಸೆಫಿನ್ ಪಾತ್ರದಲ್ಲಿ  ಶ್ರೀದೇವಿಯ ನಟನೆ ಪರವಾಗಿಲ್ಲ ಅಂದುಕೊಳ್ಳಬಹುದಾದರೂ ಇನ್ನಷ್ಟು ಆಕರ್ಷಕವಾಗಿ ಕಾಣಿಸಿಕೊಳ್ಳುವ ಮೂಲಕ ಸರಸ ಸಂಭಾಷಣೆಯಲ್ಲಿ ತಲ್ಲೀನರಾಗಬಹುದಿತ್ತು. ಕೆಲವೊಂದು ಸಂದರ್ಭಗಳಲ್ಲಿ ತೀರಾ ಸಪ್ಪೆಯಾಗಿ ಪ್ರೇಕ್ಷಕರನ್ನು ನಿರಾಸೆಗೊಳಿಸಿದ್ದು ಸುಳ್ಳಲ್ಲ. ಜೊಸೆಫಿನ್ ಇನ್ನಷ್ಟು ಮಾದಕವಾಗಿ, ಮೋಹಕವಾಗಿ ಅತ್ಯಾಕರ್ಷಕ ದಿರಿಸು ಧರಿಸಿದ್ದರೆ ಚೆನ್ನಾಗಿತ್ತೇನೋ? ಅರ್ಧ ನಾಟಕದ ಬಳಿಕ ಪಾಟೀಲನ ರಂಗಪ್ರವೇಶವೂ ಉತ್ತರ ಕರ್ನಾಟಕ ಗಂಡು ಭಾಷೆಯ ಸೊಗಡಿನೊಂದಿಗೆ ನಾಟಕಕ್ಕೆ ಕಳೆ ನೀಡಿತು. ಅಜಾನುಬಾಹು ವಕ್ತಿತ್ವ, ಮೊಳಗುವ ಕಂಚಿನ ಕಂಠ, ಶ್ರೀಮಂತಿಕೆ ಪ್ರತೀಕವಾದ ಆತನ ವೇಷಭೂಷಣ, ಅಲ್ಲಿಯ ಜೊಳದ ರೊಟ್ಟಿ- ಎಲ್ಲವನ್ನು ಏಕಕಾಲಕ್ಕೆ ಕಟ್ಟಿಕೊಡುವ ಈ ಪಾತ್ರವನ್ನು  ಅವರು ಈ ಪಾತ್ರದ ಪರಕಾಯ ಪ್ರವೇಶ ಮಾಡಿ ನಟಿಸಿದ ರಾಜಕುಮಾರ್ ತಾನೊಬ್ಬ ಪರಿಪಕ್ವ ನಟ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಹಾಲುಹಾಕುವ ಹುಡುಗನ ಪಾತ್ರದಲ್ಲಿ ‘ಲವ’ಲವಿಕೆಯಿಂದ ಮಿಂಚಿದ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ಜಿ.ಆರ್. ಲವ ನಿಜಕ್ಕೂ ನಾಟಕದ ಹೈಲೈಟ್. ನಾಟಕದ ಆರಂಭದಲ್ಲಿ ತನ್ನ ಶಿಷ್ಯ ಸಮುದಾಯದೊಂದಿಗೆೆ ‘ಜೋಕ್ ನಾಟ್ಕಾ... ಟೂ ಟೂ ಟೂ...’ ಎಂದು ರಂಗದ ಮೇಲೆಲ್ಲ ನರ್ತಿಸಿ ಪ್ರೇಕಕರ ಮನೊಭೂಮಿಕೆಯನ್ನು ನಾಟಕಕ್ಕೆ  ಸಜ್ಜುಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸೈಕಲ್ ತುಳಿದುಕೊಂಡು ಪೇಪರ್ ಮತ್ತು ಹಾಲು ಹಾಕುತ್ತ, ಕತೆಗಾರನನ್ನು ಕಿಚಾಯಿಸುತ್ತಾ ಖುಷಿ ಪಡುವ, ಖುಷಿ ಕೊಡುವ ಪಾತ್ರಧಾರಿಯಾಗಿ ಮಿಂಚಿನ ಸಂಚಲನ ಮೂಡಿಸುತ್ತಾರೆ.
ವಿಶೇಷ ಪಾತ್ರದಲ್ಲಿ ಕಮಲಾ ನೆಹರು ಕಾಲೇಜಿನ ಪ್ರಾಧ್ಯಾಪಕ ಎಚ್.ಎಸ್. ನಾಗಭೂಷಣ್ ಮಂಗಳೂರು ಕನ್ನಡದ ಸೊಗಡನ್ನು ಬಿಂಬಿಸುತ್ತಾರೆ. ಪಾಟೀಲನ ತಾಯಿಯ ಪಾತ್ರದಲ್ಲಿ ಎರಡು ಬಾರಿ ಮಾತ್ರ ಮಿಂಚಿ ಮರೆಯಾಗುವ ವಿಜಯಲಕ್ಷ್ಮೀ ಅವರದು ಹಿತಮಿತವಾದ ಪಾತ್ರ ನಿರ್ವಹಣೆ, ವಿಧೇಯ ಜವಾನ ಬಸಪ್ಪನಾಗಿ ಸಿದ್ರಾಮಪ್ಪ ಮಿಂಚಿದ್ದಾರೆ.
ನಾಟಕದ ಕೊನೆಯಲ್ಲಿ ಆಲ್ಕೋಹಾಲ್ ತ್ಯಜಿಸಿ, ನಂದಿನಿ ಹಾಲು ಬಳಸಿ ಅತ್ಯುತ್ತಮ ಜಾಹೀರಾತು ಪ್ರಕಟಣೆಯಾಗಿ ಎಲ್ಲರನ್ನೂ ನಗೆಗಡಲಿನಲ್ಲಿ ಮುಳುಗಿಸಿತು.
ಮಂಜುನಾಥ ಕುದುವಳ್ಳಿ ಅವರ ಬೆಳಕಿನ ವಿನ್ಯಾಸ, ಅತ್ಯಾಕರ್ಷಕ ಮತ್ತು ಸಾದಾಸೀದ ರಂಗಸಜ್ಜಿಕೆ, ಎಸ್.ಆರ್. ಗಿರೀಶ್ ಅವರ ಪ್ರಸಾಧನ ನಾಟಕ ಕಳೆಗಟ್ಟುವಂತೆ ಮಾಡಿತ್ತು. ನಾಟಕ, ರಚನೆ, ನಿರ್ದೇಶನ, ನಿರ್ವಹಣೆ ನಾಟಕದ ಸಂಪೂರ್ಣ ಯಶಸ್ಸು ಹೊ. ನ. ಸತ್ಯ ಅವರಿಗೆ ಸಲ್ಲಬೇಕು. ಮೊದಲ ಪ್ರದರ್ಶನ ಎನ್ನುವುದನ್ನು ಮರೆಸುವಂತಹ ಪರಿಪಕ್ವ ನಾಟಕ.    
,,,,,,,,,,,,,,,,,,,,,,,,,
ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ
  ಜಿಲ್ಲಾ ಕಸಾಪದಲ್ಲಿ ಜಾತಿ ವಾಸನೆ* ಆರಂಭವಾಗಿದೆ ಅಸಮಾಧಾನದ ಅಲೆ

* ದತ್ತಾತ್ರೇಯ ಹೆಗಡೆ

ಇಂಟ್ರೊ- ಪಕ್ಷಾತೀತ ಜಾತ್ಯತೀತವಾಗಿ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಸಾಪ ಮಾಡಬೇಕಿದೆ. ಆದರೆ, ಭಾಷಾಭಿವೃದ್ಧಿಗೆ ಶ್ರಮಿಸಬೇಕಾದ ಲ್ಲಾ ಕಸಾಪದಲ್ಲಿ ಜಾತಿ ಸಂಕೋಲೆಯ ವಾಸನೆ ವಿಪರೀತವಾಗತೊಡಗಿದೆ. ಜಾತ್ಯತೀತ ವೇದಿಕೆಯಾಗಬೇಕಿದ್ದ ಕಸಾಪಕ್ಕೆ ಇಂದು ಸಾಹಿತ್ಯದ ಗಂಧಗಾಳಿ ಇಲ್ಲದವರನ್ನೂ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗುತ್ತಿದೆ. ಜಾತಿಯ ಮೂಲಕ ವ್ಯಕ್ತಿಯ ಪ್ರತಿಭೆ ಗುರುತಿಸುವುದು ಅನಾಗರಿಕವಾದದ್ದು. ವ್ಯಕ್ತಿಯ ಪ್ರತಿಭೆ ಮೂಲಕ ಜಾತಿ ಗುರುತಿಸುವಂತಾಗಬೇಕು. ಆದರೆ ಹಾಲಿ ಜಿಲ್ಲಾಧ್ಯಕ್ಷರು ಈಗ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಕಸಾಪಕ್ಕೆ ವ್ಯಕ್ತಿ ಮುಖ್ಯವೋ ಅಥವಾ ಜಾತಿ ಮುಖ್ಯವೋ ಎನ್ನುವುದನ್ನು ಸಾರ್ವಜನಿಕರೆದುರು ತೆರೆದಿಡಬೇಕಿದೆ.


ಶಿವಮೊಗ್ಗ: ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಡಿ.ಬಿ. ಶಂಕರಪ್ಪ ಆಯ್ಕೆಯಾದ ನಂತರ ಇತ್ತೀಚೆಗೆ ಜಿಲ್ಲಾ ಸಮಿತಿ ರಚನೆಯಾಗಿದೆ. ಆದರೆ ಸಮಿತಿಯು ಇನ್ನೂ ಕಾರ್ಯಚಟುವಟಿಕೆಗಳನ್ನು ಆರಂಭಿಸಿಲ್ಲ. ಈ ಮಧ್ಯೆ ಸ್ವಜಾತಿ ಬಾಂಧವರಿಗೆ ಶಂಕರಪ್ಪ  ಮಣೆ ಹಾಕುತ್ತಿದ್ದಾರೆಂಬ ಆರೋಪ ಬಲವಾಗಿ ಕೇಳಿಬರತೊಡಗಿದೆ. ಈ ಮೂಲಕ ಆರಂಭದಲ್ಲೇ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸೊರಬ ಮತ್ತು ಶಿಕಾರಿಪುರದಲ್ಲಿ ಈ ವಿವಾದ ಭುಗಿಲೆದ್ದು, ಕಸಾಪದಲ್ಲಿ ಸಕ್ರಿಯರಾಗಿರುವವರು  ಆಕ್ರೋಶಗೊಂಡಿದ್ದಾರೆ. ಇದರಿಂದ  ಕಸಾಪ ಜಾತಿಯ ವಾಸನೆಯಿಂದ ನಲುಗುವಂತಾಗಿದೆ.
ಈ ಮಧ್ಯೆ ಶಂಕರಪ್ಪ ಅಧ್ಯಕ್ಷರಾಗಿದ್ದರೂ ಸಹ ಅವರ ಹಿಂದೆ ಕಾಣದ ಕೈಯೊಂದು ಎಲ್ಲ ತಾಲೂಕು ಮತ್ತು ಜಿಲ್ಲಾ ಸಮಿತಿಯ ಆಯ್ಕೆಯಲ್ಲಿ ಕೆಲಸ ನಡೆಸುತ್ತಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಜಾತಿ ವ್ಯಾಮೋಹಕ್ಕೆ ಸಿಲುಕಿರುವ ಈ ಕಾಣದ ಕೈ ಪ್ರತಿಭಾನ್ವಿತರನ್ನು ದೂರ ಮಾಡಿದೆ. ಇದು ಎಲ್ಲ ಸಾಹಿತ್ಯಾಸಕ್ತರನ್ನೂ ಚಿಂತೆಗೀಡುಮಾಡಿದೆ, ಅಷ್ಟೇ ಅಲ್ಲ, ಇನ್ನೂ ಚಟುವಟಿಕೆ ಆರಂಭವಾಗದ  ವೇಳೆಯೇ ಇಷ್ಟೊಂದು ಜಾತಿ ವಾಸನೆ ಢಾಳಾಗಿ ಬರಲಾರಂಭಿಸಿದರೆ ಅವಧಿ ಮುಗಿಯುವವರೆಗೆ ಪರಿಸ್ಥಿತಿ ಏನಾಗಬಹುದು, ಕೇವಲ ಆ ಒಂದು ಸಮುದಾಯಕ್ಕೆ ಮಾತ್ರ ಜಿಲ್ಲಾ ಕಸಾಪ ಎಂದಾದರೂ ಆಶ್ಚರ್ಯವಿಲ್ಲ ಎನ್ನುವ ಮಾತು ಸ್ವತಃ ಸದಸ್ಯರಿಂದಲೇ ಕೇಳಿಬರತೊಡಗಿದೆ.
ಶಂಕರಪ್ಪ ನಿವೃತ್ತ ಪ್ರಾಧ್ಯಾಪಕರು. ಸಭ್ಯ ಮತ್ತು ಪ್ರಾಮಾಣಿಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಸಾಹಿತಿ ಹಾಗೂ ಬರೆಹಗಾರರು. ಅಧ್ಯಕ್ಷ ಪದವಿಗೆ ನಿಜಕ್ಕೂ ಅರ್ಹರು.   ಕಸಾಪಕ್ಕೆ ಹೊಸ ಮುಖ ಬರಬೇಕು, ಗುಂಪುಗಾರಿಕೆ ನಿಲ್ಲಬೇಕೆಂಬ ದೃಷ್ಟಿಯಿಂದ ಅವರ ಆಯ್ಕೆಯಾಯಿತು. ಆದರೆ, ಅಧಿಕಾರಕ್ಕೇರಿದ ನಂತರ ಕೆಲವರು ಅಂದರೆ ಅವರ ಸುತ್ತ ಠಳಾಯಿಸುವವರು ಅದೆಲ್ಲವನ್ನೂ ದುರುಪಯೋಗಪಡಿಸಿಕೊಳ್ಳುತ್ತ, ಮೂಗುತೂರಿಸಲಾರಂಭಿಸಿರುವುದು ಕಂಡುಬರುತ್ತಿದೆ. ಶಂಕರಪ್ಪ ಅವರನ್ನು ಗೆಲ್ಲಿಸಿದ್ದೇ ತಾವೆಂಬ ಮನೋಭಾವ ಹೊಂದಿರುವ ಇಂತಹ ಜಾತಿವಾದಿಗಳಿಂದ ಜಿಲ್ಲಾ ಕಸಾಪ ಕುಲಗೆಟ್ಟು ಹೋಗುವುದರಲ್ಲಿ ಅನುಮಾನವಿಲ್ಲ. ಕೂಡಲೇ ಅವರನ್ನು ದೂರವಿಡದಿದ್ದರೆ ಇಲ್ಲಿಯವರೆಗೆ ಇದ್ದ ಅವರ ಕಳಂಕರಹಿತ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದರಲ್ಲಿ ಅನುಮಾನವಿಲ್ಲ.  
ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಜಾತಿ, ಶ್ರೀಮಂತಿಕೆ, ಅಧಿಕಾರ ನೋಡಬಾರದು. ಇತರ ಸಾಹಿತಿಗಳ  ಅಭಿಪ್ರ್ರಾಯ ಪಡೆಯಬೇಕಿತ್ತು. ತಾಲೂಕು ಮಟ್ಟದಲ್ಲಿ ಸಭೆ ನಡೆಸಿದ್ದರೂ ಅರ್ಹರನ್ನು ಆಯ್ಕೆ ಮಾಡದೆ ಜಾತಿಬಾಂಧವರಿಗೆ ಮಣೆ ಹಾಕಿದ್ದು ಶಂಕರಪ್ಪ ಅವರಿಗೆ ಈಗ ಸಂಕಟ ತಂದೊಡ್ಡಿದೆ. ಸೊರಬದಲ್ಲೇ ಹಿರಿಯ ಬರೆಹಗಾರರು, ವೈದ್ಯರೂ, ಸಂಘಟಕರೂ, ಸಾಹಿತ್ಯಾಭಿಮಾನಿಯೂ ಆದ  ಎಂ. ಕೆ. ಭಟ್ ಅವರಂತಹವರು ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ಹೆಚ್ಚು ಕಡಿಮೆ ನಿರ್ಧರಿಸಲಾಗಿದ್ದರೂ ಶಿವಮೊಗ್ಗಕ್ಕೆ ಹೋದ ನಂತರ ಮತ್ತೊಬ್ಬರನ್ನು ನೇಮಿಸಿದ್ದೇಕೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರವಾದರೂ ಅದನ್ನು ಸರಿಪಡಿಸಿಕೊಳ್ಳಬಹುದಿತ್ತು.  ಇದಾದ ಎರಡೇ ದಿನಕ್ಕೆ  ಶಿಕಾರಿಪುರದಲ್ಲಿಯೂ ಇದು ಮರುಕಳಿಸಿದೆ.
ಸಾಹಿತಿ ಮಾತ್ರ ತಾಲೂಕು ಅಧ್ಯಕ್ಷನಾಗಬೇಕೆಂಬ ನಿಯಮವವಿದೆ. ಅದನ್ನೀಗ ಮುರಿಯಲಾಗಿದೆ. ಇದು ಹಿಂದಿನಿಂದಲೂ ನಡೆದ ಬಂದ ಪದ್ದತಿ ಎಂದು ಶಂಕರಪ್ಪ ಮತ್ತು ಬೆಂಬಲಿಗರು ಹೇಳಬಹುದು. ಹಿಂದಿನ ಪದ್ದತಿಯನ್ನೇ ತಾವು ಪಾಲಿಸುವುದಾದರೆ, ತಮ್ಮ ಹೊಸ ಚಿಂತನೆ ಎಲ್ಲಿಗೆ ಹೋಯಿತೆಂದು ಪ್ರಶ್ನಿಸಬೇಕಾಗುತ್ತದೆ. ಹಿಂದಿನ ಅಧ್ಯಕ್ಷರಿಗೂ, ತಮಗೂ ಏನೂ ವ್ಯತ್ಯಾಸವಿಲ್ಲ ಎಂದು ಹೇಳಬಹುದಲ್ಲವೇ? ಸಾಹಿತಿಗಳು ಮತ್ತು ಸದಸ್ಯರು ಒಗ್ಗೂಡಿ ಕೆಲಸ ಮಾಡುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕೇ ಹೊರತು ಭಿನ್ನಾಭಿಪ್ರಾಯ ಉಂಟಾಗುವಂತೆ ಮಾಡಬಾರದು. ಸರ್ವಸಮ್ಮತ ವ್ಯಕ್ತಿಯ ಆಯ್ಕೆಯಾಗಬೇಕು. ಆಗ ಮಾತ್ರ ಕಸಾಪದ ಉತ್ತಮ ಬೆಳವಣಿಗೆ ಹಾಗೂ ಕಾರ್ಯಕ್ರಮವನ್ನು ನಿರೀಕ್ಷಿಸಬಹುದು.
  ಈಗ ಆಗಿರುವ ಘಟನೆಗಳಿಂದ ಶಂಕರಪ್ಪ ಪಾಠ ಕಲಿಯಬೇಕಿದೆ. ತಮ್ಮ ಸುತ್ತಮುತ್ತ ಇರುವ ಪಟಾಲಂಗಳನ್ನು ನಿಗ್ರಹಿಸಿ, ಕಸಾಪದ ಬಗ್ಗೆ ಕಿಂಚಿತ್ತ್ತೂ ಅರಿವಿಲ್ಲದಿರುವವರನ್ನು ದೂರವಿಟ್ಟು ನಿರ್ಣಯ ಕೈಗೊಳ್ಳುವ ಮನೋಭಾವವನ್ನು ಅಧ್ಯಕ್ಷರು ಪ್ರದರ್ಶಿಸಬೇಕಿದೆ. ಇಲ್ಲವಾದಲ್ಲಿ ಜಾತಿವಾದಿಗಳಿಂದಲೇ ಜಿಲ್ಲಾ ಕಸಾಪಕ್ಕೆ ಅಪಾಯ ಒದಗಬಹುದು.