Wednesday, 27 September 2017

ಸಮಕಾಲೀನ ರಾಜಕಾರಣಕ್ಕೆ ಕನ್ನಡಿ
 ‘ವೀರ ಉತ್ತರಕುಮಾರ’ ನಾಟಕ






ಮಕ್ಕಳ ಮೇಲೆ ಪಾಲಕರಿಗೆ ಪ್ರೀತಿ, ವಾತ್ಸಲ್ಯ ಇರಬೇಕು. ಆದರೆ ಅವರಲ್ಲಿರುವ ಸೃಜನಶೀಲತೆಯನ್ನು ಕೊಂದುಹಾಕಬೇಡಿ ಎನ್ನುವ ಸಂದೇಶವನ್ನು ವೀರ ಉತ್ತರಕುಮಾರ ನಾಟಕದಲ್ಲಿ ಉತ್ತರಕುಮಾರ  ನೀಡುತ್ತಾನೆ. ತನ್ನ ಪಾಲಕರು ತನಗೆ ಸೃಜನಶೀಲತೆಯನ್ನು ಕೊಟ್ಟಿಲ್ಲ ಎನ್ನುವ ಮೂಲಕ ತಾನು  ಏಕೆ ಕೇವಲ ಪೌರುಷ ವ್ಯಕ್ತಿಯಾದೆ ಎನ್ನುವ ಪ್ರಶ್ನೆಗೆ ಉತ್ತರ ಸಿಗುವಂತೆ ಮಾಡುತ್ತಾನೆ. ಹಾಸ್ಯದ ಜೊತೆಗೆ ಉತ್ತಮ ಕಥಾಹಂದರ, ಆಕರ್ಷಕ ವೇಷಭೂಣ ಮತ್ತು ನಟನೆ, ಚಿಂತನೆಗೆ ಹಚ್ಚುವ  ವಿಚಾರಗಳನ್ನು ಸೂಕ್ಷ್ಮವಾಗಿ ನಮ್ಮ ಮುಂದಿಡುವಲ್ಲಿ ನಾಟಕ ಯಶಸ್ವಿಯಾಗುತ್ತದೆ.


 ಎದುರಾಳಿಗಳನ್ನು ಮನಸಾರೆ ನಿಂದಿಸುತ್ತ, ತನ್ನನ್ನು ತಾನೇ ಹೊಗಳಿಕೊಳ್ಳುವ ಉತ್ತರಕುಮಾರನ ವಂಶದವರು ನಮ್ಮಲ್ಲಿ ಇನ್ನೂ ಇದ್ದಾರೆ.  ಹಾಗಾಗಿಯೇ ಇಂತಹ ನಾಟಕಗಳ ಕಥೆ ನಮಗೆ ಹತ್ತಿರವಾಗುತ್ತವೆ. ಅಲ್ಲಿಯ ಪಾತ್ರಗಳ ಗುಣ ನಮ್ಮಲ್ಲಿಯೂ ಹುದುಗಿರುವುದರಿಂದ ಅಪ್ಯಾಯಮಾನವಾಗುತ್ತದೆ. ಇಂತಹವರ ಇನ್ನೊಂದು ಮುಖವನ್ನು  ನಾಟಕದ ಮೂಲಕ ಮತ್ತೆ ಮತ್ತೆ ತೆರೆದಿಡುವ ಕೆಲಸವನ್ನು ವೀರ ಉತ್ತರಕುಮಾರ ನಾಟಕದ ಮೂಲಕ ಮಾಡಲಾಗಿದೆ.
ತಾನೊಬ್ಬ ಪರಾಕ್ರಮಿ, ಸಮರವೀರ ಎಂದು  ಎಂದು ತನ್ನ ಸಖಿಯರ ಮುಂದೆ ಕೊಚ್ಚಿಕೊಳ್ಳುತ್ತ, ಯುದ್ಧ ಎದುರಾದೊಡನೆ ತನ್ನ ಇನ್ನೊಂದು ಮುಖ (ಪುಕ್ಕಲುತನ)ವನ್ನು ತೋರ್ಪಡಿಸುವ ಉತ್ತರಕುಮಾರ ಪ್ರಸ್ತುತ ರಾಜಕಾರಣದ ಹಲವರನ್ನು ನೆನೆಪಿಸುತ್ತಾನೆ. ಇಂತಹ ಒಂದು ಉತ್ತಮ ಕಥಾಹಂದರದ ಮೂಲಕ ನಮ್ಮ ಸುತ್ತಮುತ್ತಲೂ ಇರುವ  (ಗೋಮುಖವ್ಯಾಘ್ರಗಳ) ನೈಜ ಬಣ್ಣವನ್ನು ಬಿಚ್ಚಿಡುವ ಕೆಲಸವನ್ನು ನಾಟಕದ ರಚನೆ ಮತ್ತು ನಿರ್ದೇಶನ ಮಾಡಿರುವ ಸಾಸ್ವೆಹಳ್ಳಿ ಸತೀಶ್ ತೋರಿಸುವ ಯತ್ನವನ್ನು ಈ ನಾಟಕದಲ್ಲಿ ಮಾಡಿದ್ದಾರೆ.
ಶಿವಮೊಗ್ಗ ದಸರಾ ಅಂಗವಾಗಿ ನಡೆಯುತ್ತಿರುವ ರಂಗ ದಸರಾದಲ್ಲಿ ಮಂಗಳವಾರ ಸೆ. 26ರಂದು ಹೊಂಗಿರಣ ತಂಡದಿಂದ ಪ್ರದರ್ಶಿತವಾದ ವೀರ ಉತ್ತರಕುಮಾರ ಉತ್ತಮ ಅಭಿನಯ ಮತ್ತು ಸಂಭಾಷಣೆ ಹಾಗೂ ಸಾಮಾಜಿಕ ಸಂದೇಶದ ಮೂಲಕ ಪ್ರೇಕ್ಷಕರ ಮನಮುಟ್ಟುವಲ್ಲಿ ಸಫಲವಾಯಿತು.
ಉತ್ತರನ ಪಾತ್ರದಲ್ಲಿ ಮಿಂಚಿದ ಚಂದ್ರಶೇಖರ ಹಿರೆಗೋಣಿಗೆರೆ  ಧ್ವನಿಯ ಏರಿಳಿತದೊಂದಿಗೆ, ಸ್ಫುಟವಾದ ಮಾತಿನೊಂದಿಗೆ  ಪಾತ್ರಕ್ಕೆ ಜೀವ ತುಂಬಿದರು. ಜೊತೆಗೆ ಅದ್ಭುತ ಎನ್ನಬಹುದಾದ ಆಂಗಿಕ ಅಭಿನಯದೊಂದಿಗೆ ಮೆಚ್ಚುಗೆಗೆ ಕಾರಣನಾದರು. ಉತ್ತರಕುಮಾರನಂತಹ ಬಲಿಷ್ಠ ಪಾತ್ರಕ್ಕೆ ತಾನು ಸಮರ್ಥ ಎನ್ನುವುದನ್ನು ಸಾಬೀತುಪಡಿಸಿದರು. ಉತ್ತಮ ಸಂಭಾಷಣೆ, ವೇಷಭೂಷಣ, ಹಾವಭಾವ ಪ್ರೇಕ್ಷಕರ ಗಮನ ಸೆಳೆಯಿತು.ಸಖಿಯರ ಜೊತೆ ಆತನ ವಿಹಾರ, ಚೆಲ್ಲಾಟ ಆಡುವ ಪೌರುಷದ ಮಾತುಗಳಿಗೆ ತಕ್ಕಂತಹ ಅಭಿನಯ ಮನೋಜ್ಞವಾಗಿದೆ. ಗೋವುಗಳನ್ನು ಕಟ್ಟಿ ಹಾಕಿದ ವಾರ್ತೆಯನ್ನು ಪರಿಚಾಕರಕನ ಮೂಲಕ ತಿಳಿದೊಡನೆ ಮಾನಸಿಕ ಒತ್ತಡದಿಂದ ಆ ಕಡೆ ಈ ಕಡೆ ಅಬ್ಬರದಿಂದ ಹೆಜ್ಜೆ ಹಾಕುವಾಗ ನಿಜಕ್ಕ್ಕೂ ಆ ಪಾತ್ರಕ್ಕೆ ಆವೇಶವಾದಂತೆ ಕಂಡುಬರುತ್ತದೆ. ಆತನ ವಿಕಟ ನಗೆ ನಮ್ಮನ್ನು ಸೆರೆಹಿಡಿಯುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ವೀರಾವೇಶ ಹೆಚ್ಚಾದಂತೆ ಮತ್ತು ಆತನ ಭಾವಾಭಿನಯವೂ ಸ್ವಲ್ಪ ಅತಿರೇಕವಾದಂತೆ ಕಂಡುಬರುತ್ತದೆ.
ಇಡೀ ನಾಟಕದ ಪ್ರಮುಖ ಪಾತ್ರ ಉತ್ತರನಾಗಿರುವುದರಿಂದ ಹೆಚ್ಚಿನ ಒತ್ತನ್ನು ಕೊಟ್ಟಿರುವುದು ಸ್ಪಷ್ಟವಾಗಿದೆ. ಯುದ್ಧಕ್ಕೆ ಹೊರಡುವ ಸಂದರ್ಭ ಎದುರಾದಾಗ ತನ್ನ ಅಂಜುಬುರುಕತನವನ್ನು ಪ್ರದರ್ಶಿಸುವುದು, ಯುದ್ಧ ಮುಗಿದು ವಾಪಸಾದೊಡನೆ ಪಟ್ಟಾಭಿಷೇಕ ಮಾಡಬೇಕೆಂದು ಆತನ ತಂದೆ ವಿರಾಟ ಮತ್ತು ತಾಯಿ ಉತ್ಸುಕರಾಗಿರುವಾಗ ಈ ಯುದ್ಧ ಗೆದ್ದಿದ್ದು ತಾನಲ್ಲ ಎಂದು ಪ್ರ್ರಾಮಾಣಿಕವಾಗಿ ಒಪ್ಪಿಕೊಂಡು ಬೃಹನ್ನಳೆ ವೇಶದ ಅರ್ಜುನನನ್ನು ಶ್ಲಾಘಿಸುವುದು ಮನಸೆಳೆಯುತ್ತದೆ.
 ಅದರಲ್ಲೂ ಕೌರವರು ಗೋವುಗಳನ್ನು ಕಟ್ಟಿಹಾಕಿದ ಸಂದರ್ಭದಲ್ಲಿ ಕೌರವರಿಗೆ ಗೋವು ರಕ್ಷಣೆಯ ವ್ಯಾಖ್ಯಾನ ತಿಳಿದಿಲ್ಲ ಎನ್ನುತ್ತ ಉತ್ತರನು ಆಡುವ ಮಾತುಗಳು ಪ್ರಸ್ತುತ ಗೋರಕ್ಷಕರ ಹೆಸರಿನಲ್ಲಿ ರಾಜಕೀಯ ನಡೆಯುತ್ತಿರುವುದನ್ನು ಇಲ್ಲಿ ತೆರೆದಿಡಲಾಗಿದೆ.
 ನಾಟಕದಲ್ಲಿನ ಸಂಭಾಷಣೆಗಳು ಆಕರ್ಷಕವಾಗಿವೆ. ಕೆರಳಿದರೆ ಕೌರವನ ಕೀರ್ತಿಯನ್ನು ತೊಳೆದುಹಾಕುತ್ತೇನೆ, ಕೌರವನ ಸೇನೆಯನ್ನು ಆಪೋಶನ ತೆಗೆದುಕೊಳ್ಳುತ್ತೇನೆ ಎನ್ನುವ  ಅಹಂಕಾರದ ಮಾತುಗಳನ್ನಾಡುವಾಗ ಆತನ ನಟನೆ ರೋಷಾವೇಶ ನೋಡುಗರ ಮನದಲ್ಲಿ ಅಚ್ಚಳಿಯದೇ ಉಳಿಯುತ್ತದೆ.
ಯುದ್ಧಕ್ಕೆ ಹೊರಡುವ ಮುನ್ನ ತನಗೆ ಆರತಿ ಎತ್ತಿ ಬೀಳ್ಕೊಡಿ ಎನ್ನುವ ಬದಲಿಗೆ ನನ್ನ ಮುಖಕ್ಕೆ ಮಂಗಳಾರತಿ ಮಾಡಿ ಎನ್ನುತ್ತಾನೆ. ಈ ನಾಟಕದಲ್ಲಿ ಉತ್ತರನ ಇಂತಹ ಹಲವು ಮಾತುಗಳಿಗೆ ದ್ವಂದ್ವಾರ್ಥ ಕಲ್ಪಿಸಲಾಗಿದೆ. ಅಂದರೆ ಗಂಭೀರ ಅರ್ಥದ ಜೊತೆಗೆ ಹಾಸ್ಯದ ಲೇಪನವನ್ನು ಮಾಡಲಾಗಿದೆ. ಇದು ನಾಟಕ ರಚನಾಕಾರನ ಕೌಶಲ್ಯವನ್ನು ಎತ್ತಿತೋರಿಸುತ್ತದೆ.
  ಬೃಹನ್ನಳೆ ಪಾತ್ರಧಾರಿ ಚಂದ್ರಶೇಖರ್ ಶಾಸ್ತ್ರಿ ಅವರ ಅಭಿನಯವೂ ಮೆಚ್ಚುಗೆಗೆ ಪಾತ್ರವಾಗುತ್ತದೆ. ಆರಂಭದಲ್ಲಿ ಬೃಹನ್ನಳೆಯಾಗಿ ಮಾತಿನಲ್ಲಿ ಅಷ್ಟೇನೂ ಆಕರ್ಷಣೆ ಕಂಡುಬಾರದಿದ್ದರೂ ಯುದ್ಧಕ್ಕೆ ಹೊರಡುವಾಗ ಆಡುವ ಮನೋಬಲ ತುಂಬುವ ಮಾತುಗಳು, ಆನಂತರ ತಾನೇ ಯುದ್ಧ ಮಾಡುತ್ತೇನೆಂದು ಗಾಂಢೀವವನ್ನು ಕೈಗೆತ್ತಿಕೊಂಡ ಮುನ್ನುಗ್ಗುವ ಸಂದರ್ಭ ಅಮೋಘವೆನಿಸುತ್ತದೆ. ಈ ಸಂದರ್ಭದಲ್ಲಿ ಉತ್ತರ ಜೊತೆ ನಡೆಯುವ ಮಾತಿನ ಚಕಮಕಿಯನ್ನು ಸಂದರ್ಭೋಚಿತವಾಗಿ ತೋರಿಸಲಾಗಿದೆ. ಅರ್ಜುನನಾಗಿ ಹೆಚ್ಚು ಅವರು ಮೆಚ್ಚುಗೆಗೆ ಪಾತ್ರಾಗುತ್ತಾರೆ. ಇಡೀ ನಾಟಕದ ಜೀವಾಳವೇ ಉತ್ತರ ಮತ್ತು ಬೃಹನ್ನಳೆಯಾಗುತ್ತಾರೆ.  
ನಾಟಕದ ಉಳಿದ ಪಾತ್ರಗಳಲ್ಲಿ ಅರಮನೆಯ ಸೈನಿಕನ ಪಾತ್ರದಲ್ಲಿ ಮಿಂಚಿದ ಬಾಲಕ ಮಂಜುನಾಥ ತನ್ನ ಹಾಸ್ಯದ ಮೂಲಕ ಮೆಚ್ಚುಗೆಗೆ ಪಾತ್ರವಾಗುತ್ತಾನೆ. ಸಖಿಯರಾಗಿ ಕಾಣಿಸಿಕೊಂಡ ಸ್ಮತಿ ಮತ್ತು ಮಾನಸಾ ಹಾಗೂ ಸೈರಂಧ್ರಿಯ ಪಾತ್ರದಲ್ಲಿ  ಸುಪ್ರಿಯಾ ರಾವ್ ತಮ್ಮ ಅಭಿನಯ ಮತ್ತು ಮಾತಿನ ಮೂಲಕ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಉತ್ತರನ ತಂದೆ ವಿರಾಟನ ಪಾತ್ರ ಮಹತ್ವದ್ದಾದರೂ ವಿಶೇಷ ಆಕರ್ಷಕವೆನಿಸಲಿಲ್ಲ. ಉತ್ತರೆ, ಸುದೇಷ್ಣೆಯ ಪಾತ್ರವು ಸಾಂದರ್ಭಿಕವಾಗಿ  ಗಮನ ಸೆಳೆಯಿತು.
ನಾಟಕದಲ್ಲಿ ಹಾಸ್ಯವು ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಮನಃಪೂರ್ವಕವಾಗಿ ನಗಬಹುದು. ಗಂಭಿರ ವಿಚಾರಗಳನ್ನು ಹಾಸ್ಯದ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಸಾಹಸ ಮಾಡಿದ್ದು ಮೆಚ್ಚತಕ್ಕದ್ದು. ಉತ್ತರ ತನ್ನ ಸಖಿಯರಿಗೆ ಮುತ್ತು ಕೊಡುವುದು, ಸಖಿಯರು ಸಹ ಮುತ್ತು ಕೊಡುವುದನ್ನು ಮುಕ್ತವಾಗಿ ತೋರಿಸುವ ಅವಶ್ಯಕತೆ ಇರಲಿಲ್ಲವೇನೋ ಎನಿಸುತ್ತದೆ. ಉಳಿದಂತೆ ನಾಟಕ ಬಹುಕಾಲ ಮನದಲ್ಲಿ ಉಳಿಯುವಂತಹುದು ಎನ್ನಬಹುದು.
ನಾಟಕದಲ್ಲಿ ಬೆಳಕು ವಿಭಾಗದಲ್ಲಿ ಹರಿಗೆ ಗೋಪಾಲಸ್ವಾಮಿ, ಕೈಚಳಕ ಎದ್ದುಕಾಣುವಂತಹುದು. ಹಾಡುಗಳನ್ನು ರಂಗಗೀತೆಯ ಧಾಟಿಯಲ್ಲಿ  ಬಿ. ಚಂದ್ರೇಗೌಡ ಹಾಡಿದ್ದಾರೆ. ಇದು ಇನ್ನಷ್ಟು ಪಾರಂಪರಿಕವಾಗಿ ಮತ್ತು  ಶಕ್ತಿಯುತವಾಗಿರಬೇಕಿತ್ತು.  ಕೆಲವು ಹಾಡುಗಳನ್ನು ಸುಪ್ರಿಯಾ ರಾವ್ ಸುಶ್ರಾವ್ಯವಾಗಿ  ಹಾಡುವ ಮೂಲಕ ಇನ್ನಷ್ಟು ಕಳೆಕಟ್ಟುವಂತೆ ಮಾಡಿದ್ದಾರೆ.
............................... 

No comments:

Post a Comment