Tuesday, 19 September 2017


 ಭಿಕ್ಷುಕರ ಪುನರ್ವಸತಿಗೆ ಇಲಾಖೆ ನಿರ್ಲಕ್ಷ್ಯ
 ಭಿಕ್ಷುಕರನ್ನು ಕಂಡರೆ ನಿರಾಶ್ರಿತರ ಪರಿಹಾರ ಕೇಂದ್ರ 82778 - 02660 ಗೆ 
ಕರೆ ಮಾಡಿ



 : ಭಿಕ್ಷುಕರ ತಾಣವಾಗಿ ಶಿವಮೊಗ್ಗ ನಗರ ಮಾರ್ಪಡುತ್ತಿದೆಯೇನೊ ಎಂಬ ಸಂಶಯ ಕಾಡುತ್ತಿದೆ.  ನಗರ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಭಿಕ್ಷುಕರು, ಮಾನಸಿಕ ಅಸ್ವಸ್ಥರು, ನಾನಾ ರೋಗಗಳಿಂದ ಬಳಲುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಆದರೆ ಇಂತಹವರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವಲ್ಲಿ ಸಂಬಂಧಿಸಿದ ಇಲಾಖೆಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ.


 ಶಿವಮೊಗ್ಗ ನಗರ ಪ್ರದೇಶದ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುವ ವ್ಯಕ್ತಿಗಳ ವಿರುದ್ದ ನಿಯಾಮಾನುಸಾರ ಸಮಾಜ ಕಲ್ಯಾಣ ಇಲಾಖೆ ಕ್ರಮ ಜರುಗಿಸಬೇಕು. ಭಿಕ್ಷಾಟನೆ ನಡೆಸುವವರನ್ನು ಕರ್ನಾಟಕ ಭಿಕ್ಷಾಟನೆ ನಿರ್ಮೂಲನಾ ಕಾಯ್ದೆ - 1975 ರ ಅನ್ವಯ ವಶಕ್ಕೆ ಪಡೆದು ತಹಶೀಲ್ದಾರ್ ಮುಂಭಾಗ ಹಾಜರುಪಡಿಸಬೇಕು. ನಂತರ ತ್ಯಾವರೆಕೊಪ್ಪ ಗ್ರಾಮದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರಿಸಿ ಯೋಗಕ್ಷೇಮ ನೋಡಿಕೊಳ್ಳಬೇಕು.   ನಗರದಲ್ಲಿ ಭಿಕ್ಷಾಟನೆ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಅಂತಹವರ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಅಥವಾ ನಿರಾಶ್ರಿತರ ಪರಿಹಾರ ಕೇಂದ್ರದ ಮೊಬೈಲ್ ಸಂಖ್ಯೆ 82778 - 02660 ಗೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ. 
- ಡಾ. ಎಂ. ಲೋಕೇಶ್, ಜಿಲ್ಲಾಧಿಕಾರಿ. 

ಭಿಕ್ಷಾಟನೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಈ ರೀತಿ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಪತ್ತೆ ಹಚ್ಚಿ ಸೂಕ್ತ ಪುನರ್ವಸತಿ ಕಲ್ಪಿಸಲು ನಗರದ ಹೊರವಲಯ ತ್ಯಾವರೆಕೊಪ್ಪ ಭಿಕ್ಷುಕರ ಪುನರ್ವಸತಿ ಕೇಂದ್ರ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಣೆ ಮಾಡುತ್ತಿದೆ.  ಈ ಕೇಂದ್ರದ ನಿರ್ವಹಣೆಗೆ ಹಾಗೂ ಭಿಕ್ಷುಕರ ಪತ್ತೆಗೆ ಸಿಬ್ಬಂದಿ, ವಾಹನ ಸೌಲಭ್ಯವಿದೆ. ಇಷ್ಟೆಲ್ಲ ವ್ಯವಸ್ಥೆಯಿದ್ದರೂ ನಗರದಲ್ಲಿ ಕಂಡುಬರುವ ಭಿಕ್ಷುಕರಿಗೆ ನಿಯಮಾನುಸಾರ ಸೂಕ್ತ ಪುನರ್ವಸತಿ ಸೌಲಭ್ಯ ಕಲ್ಪಿಸುವಲ್ಲಿ ಸಂಬಂಧಿಸಿದವರು ಗಮನಹರಿಸುತ್ತಿಲ್ಲ. ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ.
ಇದರಿಂದ ನಾನಾ ರೀತಿಯ ದೈಹಿಕ - ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು ಭಿಕ್ಷಾಟನೆ ನಡೆಸುತ್ತಿದ್ದಾರೆ. ಅತ್ಯಂತ ದಯನೀಯ ಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ. ಇನ್ನೂ ಕೆಲವರು ಸರಿಯಾಗಿ ಊಟ ಸಿಗದೆ, ಅನಾರೋಗ್ಯ ಮತ್ತಿತರ ಕಾರಣಗಳಿಂದ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಭಿಕ್ಷಾಟನೆ ನಡೆಸಿ ಜೀವನ ನಡೆಸುವವರ ರಕ್ಷಣೆಗೆಂದೇ ಸರ್ಕಾರಗಳು ಕೋಟ್ಯಂತರ ರೂ. ವ್ಯಯಿಸುತ್ತಿವೆ. ಅಧಿಕಾರಿ, ಸಿಬ್ಬಂದಿಗಳ ನಿಯೋಜನೆ ಮಾಡಿದೆ. ಆದರೆ ಭಿಕ್ಷುಕರ ಸಂರಕ್ಷಣೆಗೆ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ.
ವಿಶೇಷವಾಗಿ ನಗರದ ಖಾಸಗಿ ಸಬ್ ನಿಲ್ದಾಣವಂತೂ ಭಿಕ್ಷುಕರ ತಾಣವಾಗಿ ಮಾರ್ಪಟ್ಟಿದೆ. ರಾತ್ರಿ ಅಲ್ಲಿಯೇ ವಾಸಿಸುತ್ತ ಗಲೀಜು ಮಾಡುತ್ತಾರೆ. ಹಲವು ಭಿಕ್ಷುಕರು ಪಟ್ಟಣವನ್ನು ಸುತ್ತಾಡಿ ರಾತ್ರಿ ತಂಗಲು ಇಲ್ಲಿಗೆ ಬರುತ್ತಾರೆ. ಅದರೆ ಇವರ ಬಗ್ಗೆ ಇಲಾಖೆ ಗಮನಹರಿಸುತ್ತಿಲ್ಲ. ಕಂಡಲ್ಲೆಲ್ಲ ಹೊಲಸು ಮಾಡುವುದು, ಕಿರುಚಾಡುವುದು, ತಮ್ಮತಮ್ಮಲ್ಲೇ ಗಲಾಟೆ ಮಾಡಿಕೊಳ್ಳುವುದು, ಅಸಭ್ಯ ವರ್ತನೆ ನಡೆಯುತ್ತಿದೆ. ಇವರಲ್ಲಿ ಮಾಸಿನ ಅಸ್ವಸ್ಥರೂ ಸೇರಿದ್ದಾರೆ. ಅವರು ಇನ್ನೂ ವಿಚಿತ್ರವಾಗಿ ವರ್ತಿಸುತ್ತ ತಿರುಗಾಡುತ್ತಿರುತ್ತಾರೆ. ಪಾಲಿಕೆಯ ಅಧಿಕಾರಿಗಳು ಇವರನ್ನು ನಿಗ್ರಹಿಸುವ ಕೆಲಸ ಮಾಡುತ್ತಿಲ್ಲ. ಜಿಲ್ಲಾಧಿಕಾರಿ ಸೂಚಿಸಿದಂತೆ ಇನ್ನಾದರೂ ಸಮಾಜ ಕಲ್ಯಾಣ ಇಲಾಖೆ ಇಂತಹ ಭಿಕ್ಷುಕರನ್ನು ಹಿಡಿದು ಭಿಕ್ಷುಕರ ಕೇಂದ್ರಕ್ಕೆ ಸಾಗಿಸಬೇಕಿದೆ.
ಬಸ್ ನಿಲ್ದಾಣ ಮತ್ತಿತರೆಡೆ ಅಶಕ್ತ ಬಿಕ್ಷುಕರು ಮಲಗಿದ್ದಲ್ಲೇ ಇದ್ದು, ಅವರನ್ನು ಸಾಗಿಸುವ ಕೆಲಸವನ್ನು ಇಲಾಖೆ ಮೊದಲು ಮಾಡಬೇಕಿದೆ. ಕೈಕಾಲು ಇಲ್ಲದೆ ಅಂಗವಿಕಲರಾಗಿ ಅಲ್ಲಿಯೇ ಮಳೆ, ಚಳಿ ಎನ್ನದೆ ಭಿಕ್ಷೆ ಬೇಡುತ್ತಿದ್ದಾರೆ. ಮಾನವೀಯತೆ ತೋರಿ ಭಿಕ್ಷುಕರ ಕೇಂದ್ರಕ್ಕೆ ಸೇರಿಸುವ ಕೆಲಸವನ್ನು ಸಾರ್ವಜನಿಕರು ಮಾಡಬೇಕಿದೆ. ಇಲಾಖಾಧಿಕಾರಿಗಳು ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇದಕ್ಕಾಗಿ ಸಾರ್ವಜನಿಕರೇ ನಿರ್ವಸಿತರ ಕೇಂದ್ರದ ಮೊಬೈಲ್ ನಂಬರ್ ಕೇಂದ್ರದ ಮೊಬೈಲ್ ಸಂಖ್ಯೆ 82778 - 02660 ಗೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.
   ಸಂಬಂಧಿಸಿದ ಕೇಂದ್ರಗಳಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸಿ, ನೆಮ್ಮದಿಯಾಗಿ ಜೀವನ ನಡೆಸುವಂತಹ ವಾತಾವರಣ ಸೃಷ್ಟಿ ಮಾಡಬೇಕಾಗಿದೆ.
------------------------------

Saturday, 9 September 2017

 ಭತ್ತದ ಕಣಜದ ಖ್ಯಾತಿ ಇನ್ನು ಇತಿಹಾಸ  



  ಜಿಲ್ಲೆ ಇಲ್ಲಿಯವರೆಗೆ ಭತ್ತದ ಕಣಜವಾಗಿತ್ತು. ಅತಿ ಹೆಚ್ಚು ಭತ್ತ ಬೆಳೆಯುವ ಜಿಲ್ಲೆಗಳಲ್ಲಿ ಒಂದಾಗಿತ್ತು. ಆದರೆ ನಾಲ್ಕಾರು ವರ್ಷಗಳಿಂದ ಮಳೆ ಕೊರತೆ, ಭತ್ತದ ಗದ್ದೆಗಳನ್ನು ಅಡಕೆ ತೋಟಗಳನ್ನಾಗಿ ಪರಿವರ್ತನೆ ಮಾಡುತ್ತಿರುವುದು, ಹೆಚ್ಚಾಗುತ್ತಿರುವ ಕೃಷಿ ವೆಚ್ಚ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿರುವುದು ಸೇರಿದಂತೆ ಹಲವು ಕಾರಣದಿಂದ ವರ್ಷದಿಂದ ವರ್ಷಕ್ಕೆ ಭತ್ತದ ಇಳುವರಿ ಕಡಿಮೆಯಾಗುತ್ತಿದೆ. ಇಲ್ಲಿರುವ ಅಕ್ಕಿಮಿಲ್‌ಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಈ ಮಿಲ್‌ಗಳ ಅಪಾರ ಮೌಲ್ಯದ ಜಾಗಗಳನ್ನು ಶೋರೂಂ, ಕಾಂಪ್ಲೆಕ್ಸ್ ಮೊದಲಾದವುಗಳಿಗೆ ಬಳಸಲಾಗುತ್ತಿದೆ.  



ಜಿಲ್ಲೆಯಲ್ಲಿ ಇಂದಿಗೂ ಭತ್ತದ ಬೆಳೆಯಲ್ಲಿ ದಾಖಲೆ ಮಾಡಿದವರಿದ್ದಾರೆ. ಕೆಲವರು ಇನ್ನೂ ಭತ್ತದ ಮೂಲಕವೇ ಖ್ಯಾತರಾಗುತ್ತಿದ್ದಾರೆ. ಆದರೆ ಶಿಕಾರಿಪುರ ಮತ್ತು ಸೊರಬ ಭಾಗದಲ್ಲಿ ಭತ್ತ ಹೆಚ್ಚು- ಕಡಿಮೆ ಸಂಪೂರ್ಣ ಕಣ್ಮರೆಯಾಗುತ್ತಿದೆ. ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಅಲ್ಲಲ್ಲಿ ಚೆನ್ನಾಗಿದೆ. ನಾಲೆಯ ನೀರನ್ನು ನಂಬಿಕೊಂಡು ಇಲ್ಲಿಯವರೆಗೆ ಭತ್ತ ಬೆಳೆಯುತ್ತಿದ್ದವರು ಇನ್ನು ಭತ್ತ ಕೈಬಿಟ್ಟು ಬೇರೆ ಬೆಳೆೆಯತ್ತ ಮನಸ್ಸು ಮಾಡಬೇಕಿದೆ. ಭತ್ತಕ್ಕೆ ನೀರು ಕೊಡಲು ಸಾಧ್ಯವಿಲ್ಲ ಎಂದು ಈಗಾಗಲೆ ಭದ್ರಾ ಅಚ್ಚುಕಟ್ಟು ಪ್ರಾಧಿಕರದ ಅಧ್ಯಕ್ಷರು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2-3 ವರ್ಷಗಳಲ್ಲಿ ಭತ್ತದ ಬೆಳೆ ಸಾವಿರಾರು ಹೆಕ್ಟೇರ್‌ಗೆ ಸಿಮಿತವಾಗಲಿದೆ.
 ಜಗದೀಶ ನಾಯ್ಕ್,  ಮಲವಗೊಪ್ಪ, ಭತ್ತ ಬೆಳೆಗಾರ

 ಭತ್ತದ ಕಣಜವಾಗಿದ್ದ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದಿರುವುದರ ನೇರ ಪರಿಣಾಮ ಬತ್ತದ ಬೆಳೆಯ ಮೇಲೆ ಬೀರಿದೆ. ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬತ್ತ ಬಿತ್ತನೆ, ನಾಟಿ ಪ್ರಕ್ರಿಯೆ ಜಿಲ್ಲೆಯಲ್ಲಿ ನಡೆದಿಲ್ಲ. ನಿರೀಕ್ಷಿತ ಗುರಿ ಸಾಧನೆಯಾಗಿಲ್ಲ. ಮತ್ತೊಂದೆಡೆ, ಮುಸುಕಿನ ಜೋಳ ಬಿತ್ತನೆಯಲ್ಲಿ ಗುರಿ ಮೀರಿದ ಸಾಧನೆ ಮಾಡಲಾಗಿದೆ.
ಕೃಷಿ ಇಲಾಖೆ ನೀಡುವ ಮಾಹಿತಿಯ ಪ್ರಕಾರ, 2017 ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಏಳು ತಾಲೂಕುಗಳ ವ್ಯಾಪ್ತಿಗಳಲ್ಲಿ 1,07,760 ಹೆಕ್ಟೇರ್ ಪ್ರದೇಶಗಳಲ್ಲಿಭತ್ತ ಬೆಳೆಯುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಇಲ್ಲಿಯವರೆಗೂ ಕೇವಲ 37,436 ಹೆಕ್ಟೇರ್ ಪ್ರದೇಶಗಳಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಶೇ. 50 ರಷ್ಟು ಪ್ರದೇಶದಲ್ಲಿಯೂ ಬಿತ್ತನೆಯಾಗಿಲ್ಲ.
ವಿಶೇಷವಾಗಿ ಶಿಕಾರಿಪುರ ಮತ್ತು ಸೊರಬ ತಾಲೂಕು ಜೊತೆಗೆ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ ಗ್ರಾಮಾಂತರದ ಕೆಲವು ಹೋಬಳಿಗಳು ಭತ್ತಕ್ಕೆ ಪ್ರಸಿದ್ಧವಾಗಿದ್ದವು. ಇಲ್ಲಿಂದ ಭತ್ತ ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಪೂರೈಕೆಯಾಗುತ್ತಿತ್ತು. ಇಲ್ಲಿನ ಹೆಸರಾಂತ ತಳಿಯ ಭತ್ತಕ್ಕೆ ಅಪಾರ ಬೇಡಿಕೆಯೂ ಇತ್ತು. ಈ ಕಾರಣದಿಂದಲೇ ಈ ಭಾಗದಲ್ಲಿ ಅಕ್ಕಿ ಮಿಲ್‌ಗಳ ಸಂಖ್ಯೆ ಅಧಿಕವಿತ್ತು. ಆಗಿದ್ದ ಮಿಲ್‌ಗಳ ಶೇ. 50ರಷ್ಟು ಮಿಲ್‌ಗಳು ಈಗಿಲ್ಲ. ಜೊತೆಗೆ ಬಹುತೇಕ ಜನರು ಭತ್ತ ವ್ಯಾಪಾರಸ್ಥರಾಗಿದ್ದರು. ಈಗ ಅವರೆಲ್ಲ ಮೆಕ್ಕೆಜೋಳ ಮತ್ತು ಶುಂಠಿ ವ್ಯಾಪಾರಸ್ಥರಾಗಿ ಬದಲಾಗಿದ್ದಾರೆ.
ಇಲ್ಲಿನ ಅಕ್ಕಿಗೆ ತುಂಬಾ ಬೇಡಿಕೆ ಇತ್ತು. ವಿಶೇಷವಾಗಿ ಆನವಟ್ಟಿ ಭಾಗದ ದೇಸಿ ತಳಿಯ ಅಕ್ಕಿ ಇಂದಿಗೂ ಪ್ರಸಿದ್ಧ. ಶಿಕಾರಿಪುರದ ಕೆಲವು ಹಳ್ಳಿಗಳಲ್ಲೂ ಇದೇ ತರಹದ ಭತ್ತ ಬೆಳೆಯಲಾಗುತ್ತಿತ್ತು. ಉತ್ತಮ ಆರೋಗ್ಯಕ್ಕೆ ಹೇಳಿ ಮಾಡಿಸಿದ ತಳಿಗಳು ಇವಾಗಿದ್ದವು. ಆದರೆ ಇಂದೇನಾಗಿದೆ. ನೀರಿನ ಸಮಸ್ಯೆಯಿಂದಾಗಿ ಭತ್ತ ಕಣ್ಮರೆಯಾಗುತ್ತಿದೆ. ಅದರ ಜಾಗವನ್ನು ಮೆಕ್ಕೆಜೋಳ ಮತ್ತು ಶುಂಠಿ ಆಕ್ರಮಿಸಿದೆ. ಭತ್ತ ಬೆಳೆಗಾರರು ಕೆಲವೆಡೆ ಗದ್ದೆಯನ್ನೇ ಪಾಳುಬಿಟ್ಟಿದ್ದಾರೆ ಅಂದರೆ ಭತ್ತದ ಕೃಷಿ ಇನ್ನು ಕೈಗೆ ಹತ್ತದು ಎಂಬಂತಾಗಿದೆ. ಅತಿ ಹೆಚ್ಚು ನೀರನ್ನು ಬಳಸಿಕೊಳ್ಳುವ ಬೆಳೆ ಭತ್ತವಾಗಿದ್ದರಿಂದ, ಜೊತೆಗೆ ಮಳೆ ಕೈಕೊಟ್ಟಿದ್ದರಿಂದ ಭತ್ತದ ಕಣಜ ಕಾಣದಾಗುತ್ತಿದೆ. ಕಣಜ ಎನ್ನುವುದು ಇನ್ನು ಇತಿಹಾಸ ಸೇರಲಿದೆ.  
ಜಿಲ್ಲೆಯಲ್ಲಿ ಮುಸುಕಿನ ಜೋಳ ಬಿತ್ತನೆಯಲ್ಲಿ ಗುರಿ ಮೀರಿದ ಸಾಧನೆ ಕಂಡುಬಂದಿದೆ. ಹಾಲಿ ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 54,894 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿಟ್ಟುಕೊಳ್ಳಲಾಗಿತ್ತು. ಆದರೆ 60,216 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗಿದೆ.
  1216 ಹೆಕ್ಟೇರ್ ಪ್ರದೇಶದಲ್ಲಿ ಇತರೆ ಏಕದಳ ಬೆಳೆ ಬೆಳೆಯುವ ಗುರಿ ಹಾಕಿಕೊಳ್ಳಲಾಗಿದ್ದು, 377 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. 1127 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆಯುವ ಗುರಿಯಲ್ಲಿ, 736 ಹೆಕ್ಟೇರ್. 212 ಹೆಕ್ಟೇರ್ ಎಣ್ಣೆಕಾಳು ಬೆಳೆಯಲ್ಲಿ 91 ಹೆಕ್ಟೇರ್ ಹಾಗೂ 3818 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆ ಬೆಳೆಯುವ ಗುರಿ ಹಾಕಿಕೊಳ್ಳಲಾಗಿದ್ದು, ಇದರಲ್ಲಿ 2597 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆ ಬೆಳೆಯಲಾಗಿದೆ.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 1,69,027 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುವ ಗುರಿ ಹಾಕಿಕೊಳ್ಳಲಾಗಿದ್ದು, ಇಲ್ಲಿಯವರೆಗೂ 1,01,453 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗಿದೆ.  ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಮುಂಗಾರು ಮಳೆ ಅವಧಿಯ ಮೂರು ತಿಂಗಳಲ್ಲಿಯೂ ವಾಡಿಕೆಯ ಮಳೆಯಾಗಿಲ್ಲ. ಮಳೆ ಕೊರತೆಯಿಂದ ಹಲವೆಡೆ ಕೆರೆಕಟ್ಟೆಗಳು ಭರ್ತಿಯಾಗಿಲ್ಲ. ಇದರಿಂದ ಭತ್ತ ಬೆಳೆಗೆ ಹಿನ್ನಡೆಯಾಗುವಂತಾಗಿದೆ.  . ಮತ್ತೆ ಕೆಲವು ರೈತರು ಬತ್ತ ಪರ್ಯಾಯವಾಗಿ ಮೆಕ್ಕೆಜೋಳ, ರಾಗಿ ಸೇರಿದಂತೆ ಕಡಿಮೆ ನೀರು ಬೇಕಾಗುವ ಬೆಳೆಯತ್ತ ಗಮನಹರಿಸಿದ್ದಾರೆ.

-------------------------------------
ಆಸ್ತಿ ಸರ್ವೇ ನಡೆಸದೆ  ಪ್ರಾಪರ್ಟಿ ಕಾರ್ಡ್ ಜಾರಿ

ಪ್ರಾಪರ್ಟಿ ಕಾರ್ಡ್ ನೀಡುವ ಮುನ್ನ ಸಮಗ್ರವಾಗಿ ಆಸ್ತಿಯ ಸರ್ವೇ ನಡೆಯಬೇಕು. ಆದರೆ ಇದನ್ನು ಮಾಡುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಇದರಿಂದ ಸಮಸ್ಯೆ ಹುಟ್ಟಿಕೊಂಡಿದೆ.  ಸರ್ವೇ ಆದ ನಂತರ ನೊಟಿಫಿಕೇಶನ್ ಆಗಬೇಕು, ಆನಂತರ  ಆಕ್ಷೇಪಣೆ ಕೇಳಬೇಕು. ಇದಾದ ಬಳಿಕ ಅಂತಿಮ ನೊಟಿಫಿಕೇಶನ್ ನಡೆಯಬೇಕು. ಇಷ್ಟೆಲ್ಲಾ ಪ್ರಕ್ರಿಯೆ ಮಾಡದೆ ಆರಂಭಿಸಲಾಗಿದೆ. ಇದರಿಂದ ಜನರಿಗೆ ತೊಂದರೆಯಾಗಿದ್ದು ನಿಜ. ಇನ್ನು ಮುಂದೆ ಸರ್ವೇ ನಡೆಸಿಯೇ ಪ್ರಾಪರ್ಟಿ ಕಾರ್ಡ್ ನೀಡಲಾಗುವುದು. ಈಗ ಜನ ಅಲೆಯುವಂತಾಗಿದೆ. ಇದನ್ನು ಆದಷ್ಟು ಬೇಗ  ಸರಿಪಡಿಸಲಾಗುವುದು.
-ಕಾಗೋಡು ತಿಮ್ಮಪ್ಪ.

 ಇಡೀ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದಲ್ಲಿ ಕಂದಾಯ ಇಲಾಖೆಯ ಸರ್ವೇ ವಿಭಾಗವು ಉಪಗ್ರಹ ಆಧಾರಿತ ಆಸ್ತಿ ಮಾಲಿಕತ್ವ ದಾಖಲೆ (ಯುಪಿಓಆರ್) ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕಳೆದ ಸರಿಸುಮಾರು ಒಂದು ವರ್ಷದಿಂದ ಸ್ಥಿರಾಸ್ತಿ ನೊಂದಣಿಗೆ ಈ ಯೋಜನೆಯಡಿ ನೀಡುವ ಪ್ರಾಪರ್ಟಿ ಕಾರ್ಡ್ (ಪಿ.ಆರ್.) ಹೊಂದಿರುವುದು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉಪಗ್ರಹದ ಮೂಲಕ ಖಾಸಗಿ ಹಾಗೂ ಸರ್ಕಾರಿ ಆಸ್ತಿ ಗುರುತಿಸುವುದು, ಸ್ಥಿರಾಸ್ತಿ ನೊಂದಣಿಯ ವೇಳೆ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕುವುದು, ಆಸ್ತಿ ಮಾಲಿಕತ್ವವನ್ನು ವೈಜ್ಞಾನಿಕವಾಗಿ ಗುರುತಿಸುವುದು, ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ವಂಚಿಸುವ ಪ್ರಕರಣಗಳಿಗೆ ಕಡಿವಾಣ ಹಾಕುವುದು ಮೊದಲಾದ ಮಹತ್ತರ ಉದ್ದೇಶವನ್ನಿಟ್ಟುಕೊಂಡು ಯುಪಿಓಆರ್ ಯೋಜನೆಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಯಗತಗೊಳಿಸಲಾಗಿತ್ತು.
ಪ್ರಾಯೋಗಿಕವಾಗಿ ಶಿವಮೊಗ್ಗ, ಮೈಸೂರು, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಐದಾರು ನಗರಗಳಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಈ ನಗರಗಳಲ್ಲಿ ಉಪಗ್ರಹ ಆಧಾರಿತ ಸರ್ವೇ ಕಾರ್ಯಕ್ಕೂ ಚಾಲನೆ ನೀಡಲಾಗಿತ್ತು. ಆದರೆ ನಾನಾ ಕಾರಣಗಳಿಂದ ಕೆಲವು ನಗರಗಳಲ್ಲಿ ಸಮರ್ಪಕವಾಗಿ ಸರ್ವೇ ಕಾರ್ಯ ನಡೆಯಲಿಲ್ಲ. ಅಂತಿಮವಾಗಿ ಶಿವಮೊಗ್ಗ ಹಾಗೂ ಮೈಸೂರು ನಗರಗಳಲ್ಲಿ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ನಿರ್ಧರಿಸಲಾಗಿತ್ತು.
ಅದರಂತೆ ಎರಡು ನಗರಗಳಲ್ಲಿಯೂ ಯುಪಿಓಆರ್ ಕಚೇರಿ ಕೂಡ ತೆರೆಯಲಾಗಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ ನಗರದಲ್ಲಿ ಮಾತ್ರ ಯೋಜನೆ ಕಾರ್ಯಗತಗೊಳಿಸಿ, ಸ್ಥಿರಾಸ್ತಿ ನೊಂದಣಿಗೆ ಯುಪಿಓಆರ್ ಕಚೇರಿಯಿಂದ ಪ್ರಾಪರ್ಟಿ ಕಾರ್ಡ್ ಪಡೆಯಬೇಕೆಂಬ ನಿಬಂಧನೆ ಹೇರಲಾಯಿತು. ಈಗ ಶಿವಮೊಗ್ಗ ನಗರದಲ್ಲಿ ಪ್ರಾಪರ್ಟಿ ಕಾರ್ಡ್ ಹೊಂದಿದ ಸ್ಥಿರಾಸ್ತಿಗಳನ್ನು ಮಾತ್ರ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೊಂದಣಿ ಮಾಡಲಾಗುತ್ತಿದೆ.
ಒಟ್ಟಾರೆ ಶಿವಮೊಗ್ಗದಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಸ್ಥಿರಾಸ್ತಿಗಳನ್ನು ಗುರುತಿಸಲಾಗಿದೆ. ಆದರೆ ಇಲ್ಲಿಯವರೆಗೂ ಇವುಗಳ ಮಾಲಿಕರಿಗೆ ಪ್ರಾಪರ್ಟಿ ಕಾರ್ಡ್ ನೀಡಿಲ್ಲ. ಮತ್ತೊಂದೆಡೆ ಕೆಲವು ಮಾಲಿಕರು ಕೂಡ ತಮ್ಮ ಸ್ಥಿರಾಸ್ತಿಗಳಿಗೆ ಪಿ.ಆರ್.ಕಾರ್ಡ್ ಮಾಡಿಸುವ ಗೋಜಿಗೆ ಹೋಗಿಲ್ಲ. ನೊಂದಣಿ, ಕ್ರಯಪತ್ರ ಮಾಡಿಸುವ ಅಗತ್ಯವಿರುವವರು ಮಾತ್ರ ಸ್ಥಿರಾಸ್ತಿಗಳಿಗೆ ಕಾರ್ಡ್ ಮಾಡಿಸುತ್ತಿದ್ದಾರೆ. ಯುಪಿಓಆರ್ ಕಚೇರಿಯಲ್ಲಿ ಪ್ರಾಪರ್ಟಿ ಕಾರ್ಡ್ ನೀಡುವ ಪ್ರಕ್ರಿಯೆ ವಿಳಂಬಗತಿಯಲ್ಲಿ ಸಾಗುತ್ತಿದೆ. ಸಾರ್ವಜನಿಕರು ದಿನನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ. ಹಾಗೆಯೇ ಪ್ರಾಪರ್ಟಿ ಕಾರ್ಡ್‌ನಲ್ಲಿ ಹತ್ತು ಹಲವು ಲೋಪದೋಷಗಳಿರುತ್ತವೆ. ಇದು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವಂತೆ ಮಾಡಿದೆ.
ಹಲವು ದಿನಗಳಿಂದ ಯುಪಿಓಆರ್ ಕಚೇರಿಯ ಅಂತರ್ಜಾಲದಲ್ಲಿ ಸರ್ವರ್ ಡೌನ್, ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದರಿಂದ ಕೆಲವು ದಿನಗಳ ಕಾಲ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಯುಪಿಓಆರ್ ವೆಬ್ ತಾಣ ತೆರೆದುಕೊಳ್ಳುತ್ತಿರಲಿಲ್ಲ. ಸ್ಥಿರಾಸ್ತಿ ನೊಂದಣಿ ಪ್ರಕ್ರಿಯೆಯು ಸಂಪೂರ್ಣ ಸ್ಥಗಿತಗೊಂಡಿತ್ತು. ಇದು ಸ್ಥಿರಾಸ್ತಿ ನೊಂದಣಿ ಮಾಡಿಸಲೇಬೇಕಾದ ತುರ್ತು ಅಗತ್ಯವಿರುವವರು ತೀವ್ರ ಸಂಕಷ್ಟ ಪಡುವಂತಾಗಿತ್ತು.
ಸಬ್ ರಿಜಿಸ್ಟಾರ್ ಕಚೇರಿಯ ಸಮಸ್ಯೆ ಪರಿಹಾರವಾದರೂ ಯಪಿಓಆರ್ ಕಚೇರಿಯಲ್ಲಿನ ಸಮಸ್ಯೆ ಪರಿಹಾರವಾಗುತ್ತಿಲ್ಲ. ಕಾಲಮಿತಿಯಲ್ಲಿ ಪ್ರಾಪರ್ಟಿ ಕಾರ್ಡ್ ಸಿಗುತ್ತಿಲ್ಲ. ಸರ್ವರ್ ಡೌನ್, ತಂತ್ರಾಂಶ ಅಪ್‌ಡೇಟ್ ಮಾಡಲಾಗುತ್ತಿದೆ ಎಂಬಿತ್ಯಾದಿ ಸಿದ್ಧ ಉತ್ತರಗಳನ್ನು ಕಚೇರಿ ಸಿಬ್ಬಂದಿಗಳು ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
---------------------------------------

Thursday, 7 September 2017

ಜಯಂತಿಗಳ ಪಾಡು ಯಾರಿಗೆ ಬೇಕಾಗಿದೆ? 
* ಕಾಟಾಚಾರಕ್ಕೆಂಬಂತೆ ನಡೆಯುತ್ತಿರುವ ಸರ್ಕಾರಿ ಜಯಂತಿಗಳು


ಇನ್ನು ಮುಂದೆ ಇಂತಹ ಜಯಂತಿಯನ್ನು ಕುವೆಂಪು ರಂಗಮಂದಿರದಲ್ಲಿ ಆಚರಿಸುವುದನ್ನು ಬಿಟ್ಟು ಅಂಬೇಡ್ಕರ್ ಭವನದಲ್ಲಿ ಆಚರಿಸುವುದು ಒಳಿತು. ಏಕೆಂದರೆ ಅಲ್ಲಿ ಕಡಿಮೆ ಆಸನಗಳಿರುವುದರಿಂದ ಕಡಿಮೆ ಜನರು ಬಂದರೂ ಅಷ್ಟೇನೂ ಅಭಾಸ ಎನಿಸುವುದಿಲ್ಲ. ಅಂಬೇಡ್ಕರ್ ಭವನ ಸಹ ಜಿಲ್ಲಾಧಿಕಾರಿ ಮತ್ತು ಪಾಲಿಕೆಯ ಅಡಿಯಲ್ಲಿ ಬರುವುದರಿಂದ ಬಾಡಿಗೆಯನ್ನೇನೂ ತೆರಬೇಕಾಗಿಲ್ಲ. ರಂಗಮಂದಿರದಲ್ಲಿ ಬೇರೆ ಯಾವುದಾದರೂ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುತ್ತದೆ. ನಾಟಕ ಪ್ರದರ್ಶನಕ್ಕೆ ತಿಂಗಳ ಮೊದಲೇ ಬುಕ್ ಮಾಡಿದರೂ ಆನಂತರ ಜಯಂತಿ ಅಥವಾ ಇನ್ನಿತರ ಸಮಾರಂಭದ ಕಾರಣ ಹೇಳಿ ಅದನ್ನು ರದ್ದುಗೊಳಿಸುತ್ತಿರುವುದನ್ನು ನಾಟಕಕಾರು ನೆನೆಪಿಸುತ್ತಾರೆ. ಇಂತಹ ಕೆಲಸ ಮಾಡುವುದಕ್ಕಿಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಯಂತಿಗಳಿಗೆ ಅಂಬೇಡ್ಕರ್ ಭವನ ಮೀಸಲಿಡುವುದು ಸೂಕ್ತ. ಇಲ್ಲವೇ ಯಾವುದಾದರು ಶಾಲೆ- ಕಾಲೇಜಿನಲ್ಲಿ ಮಾಡಿ ಮುಗಿಸುವುದು ಇನ್ನೂ ಒಳ್ಳೆಯದು.

   ಪ್ರತಿ ಜಾತಿಗೊಬ್ಬ ಮಹನೀಯರನ್ನು ಗುರುತಿಸಿ ಅವರವರ ಜಯಂತಿಯನ್ನು ರಾಜ್ಯದಲ್ಲಿ ಆಚರಿಸಲಾಗುತ್ತಿದೆ. ಆರಂಭದಲ್ಲಿ ಉತ್ಸಾಹದಿಂದ ಸಂಬಂಧಿತ ಸಮುದಾಯದವರು ಅದ್ದೂರಿ ಮೆರವಣಿಗೆ, ಜಾನಪದ ನೃತ್ಯದ ಮೂಲಕ ಮೆರವಣಿಗೆಯಲ್ಲಿ ಬಂದು ಆಚರಿಸಿದರಾದರೂ ಕಳೆದೆರಡು ವರ್ಷದಿಂದ ಸಮಾಜದವರಿಗೇ ಜಯಂತಿ ಬೇಡವಾದಂತೆ ಕಂಡುಬರುತ್ತಿದೆ. ಇದರಿಂದಾಗಿ ಸರ್ಕಾರ ಸಂಬಂಧಿತ ಜಯಂತಿಗಳಿಗೆ ಬಿಡುಗಡೆ ಮಾಡುವ ಹಣವನ್ನು ಅನಿವಾರ್ಯವಾಗಿ ಆಚರಿಸಿ ಖರ್ಚು ಮಾಡಬೇಕಾದ ಸ್ಥಿತಿಯಲ್ಲಿ ಅಧಿಕಾರಿಗಳಿದ್ದಾರೆ.
 ನಗರದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ ಹಮ್ಮಿಕೊಳ್ಳುವ ಕೆಲವು ಮಹಾನ್ ಪುರುಷರ ಜಯಂತಿ ಕಾರ್ಯಕ್ರಮಗಳು ಕೇವಲ ಕಾಟಾಚಾರಕ್ಕೆ ಎಂಬಂತಾಗಿವೆ. ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮ ಮಾಡಿ ಮುಗಿಸುವ ಕೆಲಸ ನಡೆಯುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಸೆ.6ರಂದು ರಂಗಮಂದಿರದಲ್ಲಿ  ನಡೆದ ನಾರಾಯಣ ಗುರು ಜಯಂತಿ ಸಾಕ್ಷಿಯಾಯಿತು.
ಈ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿದ್ದ ಬಹುಪಾಲು ಜನಪ್ರತಿನಿಧಿಗಳು ಗೈರು ಹಾಜರಾಗಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಸಭಿಕರ ಬರ ಕೂಡ ಕಂಡುಬಂದಿತು. ಕಾರ್ಯಕ್ರಮ ನಡೆದ ಕುವೆಂಪು ರಂಗಮಂದಿರದಲ್ಲಿ ಕೇವಲ ಬೆರಳೆಣಿಕೆಯ ಜನ ಭಾಗವಹಿಸಿದ್ದರು. ಬರೀ ಖಾಲಿ ಕುರ್ಚಿಗಳು ಗೋಚರವಾದವು.
 ಜಿಲ್ಲಾಡಳಿತ ಪ್ರಕಟಿಸಿದ್ದ ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿದ್ದ ಅತಿಥಿ ಮಹೋದಯರ ಸಂಖ್ಯೆ ಬರೋಬ್ಬರಿ 15 ಕ್ಕೂ ಅಧಿಕವಾಗಿದೆ. ಆದರೆ ವೇದಿಕೆಯ ಮೇಲೆ ಅಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದ ಅತಿಥಿಗಳ ಸಂಖ್ಯೆ ಕೇವಲ ಐದು. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಆರ್ಯ ಈಡಿಗರ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್ ಮಂಜೇಗೌಡ ಹಾಗೂ ಎನ್.ಆರ್.ಪುರದಿಂದ ಉಪನ್ಯಾಸ ನೀಡಲು ಆಗಮಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಅಣ್ಣಪ್ಪ ಎನ್. ಮಳೀಮಠ ವೇದಿಕೆಯಲ್ಲಿದ್ದರು.
 ಸುಮಾರು 800 ಕ್ಕೂ ಅಧಿಕ ಆಸನ ವ್ಯವಸ್ಥೆಯಿರುವ ಕುವೆಂಪು ರಂಗಮಂದಿರದಲ್ಲಿದ್ದ ಸಭಿಕರ ಸಂಖ್ಯೆ ಕೇವಲ 40 ರಿಂದ 50 ಜನ ಮಾತ್ರವಾಗಿತ್ತು. ಇದರಲ್ಲಿ ಕೆಲವರು ಅರ್ಧಕ್ಕೆ ಕಾರ್ಯಕ್ರಮದಿಂದ ನಿಗರ್ಮಿಸುತ್ತಿದ್ದ ದೃಶ್ಯ ಕಂಡುಬಂದಿತು. ಇದರಿಂದ ವೇದಿಕೆಯ ಮೇಲಿದ್ದ ಅತಿಥಿ ಗಣ್ಯರು ತೀವ್ರ ಮುಜುಗರಕ್ಕೀಡಾಗುವಂತಾಯಿತು. ತಾವು ಮಾತನಾಡಬೇಕೋ ಅಥವಾ ಎದ್ದುಹೋಗುವುದು ಉಚಿತವೋ ಎನ್ನುವ ಚಿಂತನೆ ಅವರಲ್ಲಿ ಉಂಟಾಗುವಂತಾಗಿತ್ತು.
 ಮಹಾನ್ ಪುರುಷರ ತತ್ವಾದರ್ಶಗಳು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂಬ ಸದುದ್ದೇಶದಿಂದ ಸರ್ಕಾರಗಳು ಮಹಾನ್ ನಾಯಕರ ಜಯಂತಿಯನ್ನು ಸರ್ಕಾರದ ಮೂಲಕ ಆಚರಣೆ ಮಾಡುತ್ತವೆ. ಇದಕ್ಕಾಗಿ ಲಕ್ಷಾಂತರ ರೂ. ವ್ಯಯ ಮಾಡುತ್ತದೆ. ಆದರೆ ಈ ರೀತಿಯ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಹಾಗೂ ಸಭಿಕರು ಆಗಮಿಸದೆ ಗೈರು ಹಾಜರಾಗುವ ಪರಿಪಾಠ ಹೆಚ್ಚಾಗುತ್ತಿದೆ. ಇದರಿಂದ ಸರ್ಕಾರ ಮಾಡುವ ಲಕ್ಷಾಂತರ ರೂಪಾಯಿ ಅನಗತ್ಯ ಪೋಲಾಗುವಂತಾಗಿದೆ.
 ಇಂತಹ ಜಯಂತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮುದಾಯವನ್ನು ಸೇರಿಸುವ ಕೆಲಸವನ್ನು ಆಡಳಿತ ವ್ಯವಸ್ಥೆ ಮತ್ತು ಸಂಬಂಧಿತ ಸಮುದಾಯದವರು ಮಾಡಬೇಕು. ಈ ಮೂಲಕ ಮಹಾನ್ ನಾಯಕರ ವಿಚಾರಧಾರೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಕೆಲಸ ಮಾಡಿದರೆ ಭವಿಷ್ಯದ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಯುವ ಸಮುದಾಯದ ಚಿಂತನೆಯಲ್ಲಿ ಆಮೂಲಾಗ್ರ ಬದಲಾವಣೆಯಾಗುವ ಸಾಧ್ಯತೆಯಿರುತ್ತದೆ.
-----------------------------------------
ಹರಿತ ಲೇಖನಿya ಹಾರಿಸಿದ ಬುಲೆಟ್





 ಸಾಹಿತಿಗಳನ್ನು ಮತ್ತು ಪ್ರಗತಿಪರರನ್ನು ಬೇಟೆಯಾಡುವ ಪರಿಪಾಠ ಭಾರತದಲ್ಲಿ ಮುಂದುವರೆದಿರುವುದು ನಿಜಕ್ಕೂ ಚಿಂತೆ ಹುಟ್ಟಿಸಿದೆ. ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಕೆಲವರು ಭಯೋತ್ಪಾದನೆ ನಡೆಸಿದರೆ ವಿಚಾರಗಳನ್ನು ಹತ್ಯೆ ಮಾಡಲು ಸಾಧ್ಯವಿಲ್ಲ, ವಿಚಾರವಾದಿಗಳನ್ನು ಮಾತ್ರ ಹತ್ಯೆ ಮಾಡಬಹುದು. ಗೌರಿ ಅವರ ಹರಿತವಾದ ಲೇಖನಗಳು ಸೈ
ದ್ಧಾಂತಿಕ ವಿರೋಧಿಗಳಿಗೆ ಖಾರವಾದವು. ಅವರ ಚಿಂತನೆಗಳು ಸದಾ ಚುಚ್ಚುತ್ತಿದ್ದವು. ಅವುಗಳನ್ನು ಅರಗಿಸಿಕೊಳ್ಳದೆ ವೈಚಾರಿಕ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಪತ್ರಕರ್ತರ ಧ್ವನಿಯನ್ನು ಹತ್ತಿಕ್ಕುವುದು ಎಲ್ಲೆಡೆ ನಡೆಯುತ್ತಿದೆ. ವಿಮರ್ಶೆ, ಭಿನ್ನಾಭಿಪ್ರಾಯ ಹುಟ್ಟುಹಾಕುವ ಬಹುವಿಧದ ಅಭಿಪ್ರಾಯ ಅಥವಾ ಲೇಖನಗಳೇ ಪ್ರಜಾಪ್ರಭುತ್ವದ ಇನ್ನೊಂದು ಅಂಗ. ಇದನ್ನು ಚಿಂತನೆಗೆ ಒಳಪಡಿಸಬೇಕೇ ಹತ್ತಿಕ್ಕುವ ಕೆಲಸಕ್ಕೆ ಕೈಹಾಕಿದರೆ ಸಂಘರ್ಷಕ್ಕೆ ನಾಂದಿ ಹಾಡಿದಂತಾಗುತ್ತದೆ. ಪ್ರತಿರೋಧದ ದನಿಯನ್ನು ಹತ್ತ್ತಿಕ್ಕುವ ಶಕ್ತಿಗಳು ದೊಡ್ಡದಾಗಿ ಬೆಳೆಯದಂತೆ ಮಾಡುವ ಕೆಲಸ ಸರ್ಕಾರದ ಮುಂದಿದೆ.




ಮುಂಬೈನ ನರೇಂದ್ರ  ದಾಬೋಲ್ಕರ್, ಪುಣೆಯ ಗೋವಿಂದ ಪನ್ಸಾರೆ, ಧಾರವಾಡದ ಎಂ.ಎಂ. ಕಲಬುರ್ಗಿ, ಬೆಂಗಳೂರಿನ ಗೌರಿ ಲಂಕೇಶ್.......
ಇವರೆಲ್ಲರನ್ನೂ ಕೊಂದಿದ್ದು ಬುಲೆಟ್. ತಮ್ಮ ಸಿದ್ಧಾಂತ ಮತ್ತು ದಿಟ್ಟ ಹೋರಾಟದ ಬದುಕಿನಿಂದ ಮೇಲೆದ್ದು ಬಂದ ಇವರ ಕೊಲೆ ವಿಲಕ್ಷಣ ರೀತಿಯಲ್ಲಿ ನಡೆದಿದೆ. ಅಸಮ್ಮತಿಗೆ ಇದು ಭಯಾನಕ ಕಾಲ. ಹಾಗಾಗಿ ಕೊಲೆ ಮೂಲಕ ಅದನ್ನು ಮುಗಿಸುವ ಕೆಲಸ ನಡೆಯುತ್ತಿದೆ. ಆದರೆ ಒಂದಂತೂ ಸತ್ಯ. ಸತ್ಯ ಯಾವತ್ತಿಗೂ ಮೌನವಾಗುವುದಿಲ್ಲ. ವ್ಯಕ್ತಿಯ ಆಲೋಚನೆಯನ್ನು ಕೊಲ್ಲುವುದು ಪ್ರಜಾಪ್ರಭುತ್ವವೂ ಅಲ್ಲ.  
ಗೌರಿ ಲಂಕೇಶ್ ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ, ಚಿಂತಕಿ. ಅವರಿಗೆ ಯಾರ ಬಗ್ಗೆಯೂ ಭಯವಿರಲಿಲ್ಲ. ಆದರೆ ಕೆಲವರಿಗೆ ಅವರ ಬಗ್ಗೆ ಭಯವಿತ್ತು. ತಮ್ಮ ವಿಚಾರಧಾರೆಗಳನ್ನು ನೇರವಾಗಿ ಹರಿಯಬಿಡುವ ಅವರು ದಿಟ್ಟತನದಿಂದಲೇ ಬದುಕಿದವರು. ಈಗ ಅವರ ಕೊಲೆಯಾದ ನಂತರ ಅವರ ಚಿಂತನೆಗಳೇ ಕೊಲೆಗೆ ಕಾರಣವಾದವೇ ಎನ್ನುವ ಪ್ರಶ್ನೆ ಕೇಳಿಬರುತ್ತಿದೆ. ಜಾತ್ಯತೀತ ಮಹಿಳಾ ಪ್ರತಿನಿಧಿಯಾಗಿದ್ದ ಗೌರಿ ದಶಕ ಕಾಲ ಆಂಗ್ಲ ಭಾಷೆಯ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿದ್ದವರು. ತಮ್ಮ ತಂದೆಯ ನಿಧನಾನಂತರ ಅಂದರೆ 2000ರ ಆನಂತರ ಲಂಕೇಶ್ ಪತ್ರಿಕೆಯನ್ನು ನಡೆಸುವ ಜವಾಬ್ದಾರಿ ಹೊತ್ತರು.
 ಪತ್ರಿಕೆಯಲ್ಲಿ ಭ್ರಷ್ಟರನ್ನು. ಜಾತಿವಾದಿಗಳನ್ನು ತಮ್ಮ ಪ್ರಖರ ಬರೆಹಗಳಿಂದ ಸದಾ ಖಂಡಿಸುತ್ತಲೇ ಬಂದರು. ಅಲ್ಲಿಂದೀಚೆಗೆೆ ಅವರ ಮೇಲೆ ಹಲವರು ಹಲ್ಲುಮಸೆಯತೊಡಗಿದರು. ಮತೀಯವಾದಿಗಳು ಮತ್ತು ಕೋಮುವಾದಿಗಳ ವಿರುದ್ದ ಅವರ ಬರೆಹಗಳು ಹಲವರ ಕಣ್ಣು ಕೆಂಪಗಾಗಿಸಿದವು. ಹಿಂಸೆ ಮತ್ತು ರಕ್ತಪಾತವನ್ನು ಪ್ರಬಲವಾಗಿ ವಿರೋಧಿಸಿದರು. ಜಾತ್ಯತೀತತೆಯನ್ನು ಪತ್ರಿಕೆಯ ಮೂಲಕ ಬಿತ್ತರಿಸಿದರು. ಮೇಧಾವಿತನದ ಅವರ ಬರೆಹಗಳು ಸಮಾಜದ ಕಣ್ತೆರೆಸಿದವು.
 ಈ ಮಧ್ಯೆ  ನಕ್ಸಲ್ ಚಳವಳಿಯಲ್ಲಿದ್ದವರನ್ನು ಸಮಾಜಮುಖಿಯಾಗಿ  ಬೆಳೆಸಲು ಯತ್ನಿಸಿದ್ದರ ಫಲವಾಗಿ ನಕ್ಸಲರ  ಪರ ಎಂಬ ಆಪಾದನೆಯನ್ನು ಅವರು ಹೊರಬೇಕಾಯಿತು. ಹಲವು ನಕ್ಸಲ್ ನಾಯಕರನ್ನು ಚಳವಳಿಯಿಂದ ಹೊರಕ್ಕೆ ತಂದು ದಾರಿತೋರಿಸಿದರು. ಕೊಲೆ, ರಕ್ತಪಾತ, ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಮೂಲಕ ಅವರ ಬಾಳಿಗೊಂದು ಬೆಳಕಾದರು. ನಕ್ಸಲ್ ಪರಿವರ್ತನಾ ಸಮಿತಿಯ ನಿರ್ದೇಶಕರಾಗಿ ಕೆಲಸ ಮಾಡಿದರು. ಈ ಎಲ್ಲ ಕೆಲಸವನ್ನು ಸಮರ್ಥವಾಗಿ ಮಾಡಿದ್ದರಿಂದ ರಾಜಕಾರಣಿಗಳು ಬಾಯಿಗೆ ಬಂದಂತೆ ಅವರ ವಿರುದ್ದ ಮಾತನಾಡಿದ ಘಟನೆಗಳೂ ಸಹ ನಡೆದವು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮಡೆಸ್ನಾನವನ್ನು ಪ್ರಬಲವಾಗಿ ವಿರೋಧಿಸಿ ಅದರ ಬಗ್ಗೆ ಹೋರಾಟ ನಡೆಸಿದರು. ದಲಿತರ ವಿರುದ್ಧ ವಿವಿಧ ರಾಜ್ಯಗಳಲ್ಲಿ ನಡೆದ ಅಮಾನವೀಯ ದೌರ್ಜ್ಯನ್ಯ, ಹಲ್ಲೆಗಳನ್ನು ಖಂಡಿಸಿ ಹೋರಾಟ ಮಾಡಿದರಲ್ಲದೆ ಚಿಂತನ-ಮಂಥನ ಸಭೆ ನಡೆಸಿದರು. ತಮ್ಮ ಜೀವನದುದ್ದಕ್ಕೂ ಎಡಪಂಥೀಯ ವಿಚಾರಧಾರೆಗಳೇ ಅವರಿಗೆ ಆಧಾರವಾಗಿದ್ದವು. ಮೌಢ್ಯ ಮತ್ತು ಜಾತೀಯತೆ, ಅಸಮಾನತೆ ಮೊದಲಾದ ವಿಚಾರಗಳ ಬಗ್ಗೆ ಅವರು ಸಾವಿರಾರು ಭಾಷಣ ಮಾಡಿದರು. ರಾಜ್ಯ ಹೊರತಾಗಿ ಹೊರರಾಜ್ಯದಲ್ಲೂ ಈ ಕಾರ್ಯನಡೆಸಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ, ಚಿಂತನೆಗಳನ್ನು ಬಿತ್ತುವಲ್ಲಿ  ಸಫಲರಾದರು. ಪರಿಣಾಮವಾಗಿ ಅನೇಕ ಹೋರಾಟಗಾರರು ಇದರಿಂದ ಪ್ರೇರಿತರಾಗಿ ಚಳವಳಿ ಆರಂಭಿಸುವಂತಾಯಿತು.  
ನೋಡಲು ತೆಳುದೇಹವಾಗಿದ್ದರೂ ಸದಾ ಕ್ರಿಯಾಶೀಲರಾಗಿರುತ್ತಿದ್ದರು. ಕರ್ನಾಟಕದ ಪ್ರಗತಿಪರರ ಹೋರಾಟದ ಮುಂಚೂಣಿಯಲ್ಲಿದ್ದರು. ತಮ್ಮ ನಿರ್ಭೀತ ನಿಲುವುಗಳಿಂದಲೆ ಅವರು ಪತ್ರಿಕೆಯನ್ನು ಜನಪ್ರಿಯಗೊಳಿಸಿದರು. ರಾಜಕಾರಣಿಗಳಿಗೆ ಸದಾ ಚಾಟಿ ಬಿಸುತ್ತಲೇ ಅವರ ವಿರೋಧವನ್ನು ಕಟ್ಟಿಕೊಂಡಿದ್ದರು. ಅಸಮಾನತೆ, ಲಿಂಗತಾರತಮ್ಯ, ಜಾತಿ ವ್ಯವಸ್ಥೆ, ಕೋಮುವಾದಿ ರಾಜಕಾರಣದ ಪ್ರಬಲ ವಿರೋಧಿಯಾಗಿದ್ದರು. ಅವರ ತಂದೆ ಲಂಕೇಶ್  ಸಹ ಇದೇ ಮಾರ್ಗದಲ್ಲಿ ಸಾಗಿದವರು. ವ್ಯವಸ್ಥೆಯೊಂದಿಗೆ ಎಂದೂ ರಾಜಿ ಮಾಡಿಕೊಳ್ಳುವ ಜಾಯಮಾನ ಅವರದಾಗಿರಲಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಲೇ, ಪ್ರತಿರೋಧವನ್ನು ನಿರ್ಭೀತವಾಗಿ ಎದುರಿಸುವುದು ಅವರಿಗೆ ರಕ್ತಗತವಾಗಿ ಬಂದಿತ್ತು.
ನುಡಿದಂತೆ ನಡೆದ ಗೌರಿ, ಪತ್ರಿಕೋದ್ಯಮಕ್ಕೆ ಹೊಸ ಆಯಾಮವನ್ನು ತಂದುಕೊಟ್ಟವರು. ವೈಚಾರಿಕ ಚಿಂತನೆಯಲ್ಲಿ ಜನರಲ್ಲಿ ಬಿತ್ತಲು ಯತ್ನಿಸಿದವರು. ಆದರೆ ವಿಮರ್ಶಿಸುವ ಹಕ್ಕಿನ ಮೇಲೆಯೇ ಈಗ ಗುಂಡಿನ ದಾಳಿ ನಡೆಯಲಾರಂಭಿಸಿದೆ. ಈ ಮೂಲಕ ವ್ಯಕ್ತಿಯ ಆಲೋಚನೆಯನ್ನೆ ಕೊಲ್ಲುವ ಕೆಲಸ ಮಾಡಲಾಗುತ್ತಿದೆ. ನಮಗಾಗದವರು ನಮ್ಮ ಕಣ್ಣೆದುರು ಇರಬಾರದೆನ್ನುವ ಕುತ್ಸಿತ ಮನೋಭಾವ ಬೆಳೆಯುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
ಇಲ್ಲಿಯವರೆಗೆ ಲೇಖನಿ ಖಡ್ಗಕ್ಕಿಂತ ಹರಿತ ಎಂದು ಹೇಳಲಾಗುತ್ತಿತ್ತು. ಆದರ ಇದನ್ನು ಕೆಲವರು ಬದಲಾಯಿಸಿ ಗನ್ ಲೇಖನಿಗಿಂತ ಹರಿತ ಎಂದು ತೋರಿಸಲಾರಂಭಿಸಿದ್ದಾರೆ.. ಇವೇನೇ ಇದ್ದರೂ ಚಿಂತನೆಗೆ ಸಾವಿಲ್ಲ ಎನ್ನುವುದನ್ನು ಯಾರೂ ಮರೆಯಬಾರದು. ಆದರೆ ಚಿಂತನೆಗೋಸ್ಕರವೇ ಕೊಲೆ ಮಾಡಿದರೆ ಅದು ಅಕ್ಷಮ್ಯ ಅಪರಾಧ.
.....................................    

Saturday, 2 September 2017


ಇನ್ನು   ‘ಸೌಹಾರ್ದ’ ಗಣಪ!
 - ಹಿಂದೂ ಮಹಾಸಭಾ ಗಣೇಶ ವಿಸರ್ಜನೆಗೆ ಸರ್ವಧರ್ಮೀಯರ ನೇತೃತ್ವ *  
ರಾಜ್ಯದಲ್ಲೇ ಮಾದರಿ ಯೋಜನೆ ರೂಪಿಸಿದ ಎಸ್‌ಪಿ ಅಭಿನವ್ ಖರೆ




ಪ್ರತಿವರ್ಷ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಜನರು ಒಂದು ರೀತಿಯ ಭಯದ ವಾತಾವರಣದಲ್ಲಿ ಇರುವಂತಾಗಿತ್ತು. ವಿಸರ್ಜನೆ ಮುಗಿದ ನಂತರ ನಿರಾಳರಾಗುತ್ತಿದ್ದರು. ಇಂತಹ ವಾತಾವರಣ ನಿರ್ಮಾಣವಾಗದಂತೆ ಮಾಡುವ ಯೋಜನೆ ರೂಪಿಸಲಾಗಿದೆ. ಎಲ್ಲಾ ಧರ್ಮೀಯರು ಇದರಲ್ಲಿ ಭಾಗವಹಿಸಬೇಕು. ಎಲ್ಲಾ ಹಬ್ಬಗಳಲ್ಲೂ ಇದು ಜಾರಿಯಾಗಬೇಕು. ಮೆರವಣಿಗೆಯು ಸರ್ವಧರ್ಮದ ಸಂಕೇತವಾಗಬೇಕು. ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು, ಕೋಮು ಸೌಹಾರ್ದತೆ ಕಾಯ್ದುಕೊಳ್ಳಲು ಸರ್ವಧರ್ಮೀಯರ ಸಹಕಾರ ಅಗತ್ಯ.
- ಅಭಿನವ್ ಖರೆ


ಹಿಂದೂ ಮಹಾಸಭಾ  ಅಂಗಸಂಸ್ಥೆಯಾದ  ಹಿಂದೂ ಸಂಘಟನಾ ಮಹಾಮಂಡಳಿಯವರು ನಗರದ ಕೋಟೆ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ಪ್ರತಿಷ್ಠಾಪಿಸುವ ಗಣೇಶನ ವಿಸರ್ಜನಾಪೂರ್ವ ಮೆರವಣಿಗೆಗೆ ಎಲ್ಲಿಲ್ಲದ ಬಂದೊಬಸ್ತ್ ಏರ್ಪಡುತ್ತದೆ. ಶಾಲಾ-ಕಾಲೇಜುಗಳಿಗೆ ಅಂದು ರಜೆ. ಅಮೀರ್ ಅಹಮದ್ ವೃತ್ತ ಮತ್ತು
ಗಾಂಧಿಬಜಾರ್ ಪ್ರದೇಶಕ್ಕೆ ಸೇರುವ ಬಹುತೇಕ ರಸ್ತೆಗಳಿಗೆಲ್ಲ ಬೇಲಿ. ಎಲ್ಲೆಡೆ ಪೊಲೀಸ್ ಸರ್ಪಗಾವಲು. ಕ್ಷಿಪ್ರ ಕಾರ್ಯಾಚರಣೆ ಪಡೆಯಿಂದಲೂ ಕಣ್ಗಾವಲು.  ಈ ಮಧ್ಯೆ ಸಾರ್ವಜನಿಕರಲ್ಲಿ ಏನಾಗುತ್ತದೆಯೊ ಎಂಬ ಆತಂಕ.  ಒಂದರ್ಥದಲ್ಲಿ ನಗರಕ್ಕೇ ರಜೆ ಘೋಷಿಸಿದಂತಹ ಅನುಭವ.  
ಆರೆಂಟು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡೇ ಬಂದಿದೆ. ಆದರೆ ಇದಕ್ಕೆ ವಿರಾಮ ಹಾಕಬೇಕೆಂದು ಈ ಬಾರಿ ಪೊಲಿಸ್ ಇಲಾಖೆ ನಿರ್ಧರಿಸಿದೆ. ಯಾವ ಕಾರಣಕ್ಕೂ ಜನರಲ್ಲಿ ಆತಂಕ ಮನೆಮಾಡಬಾರದು, ನಿಭೀರ್ತಿಯಿಂದ ಎಲ್ಲ ಧರ್ಮೀಯರೂ ಪಾಲ್ಗೊಂಡು ಯಶಸ್ವೀ ಮೆರವಣಿಗೆ ನಡೆಸಬೇಕೆನ್ನುವ ಹಂಬಲದೊಂದಿಗೆ ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ. ಇದರ ರೂವಾರಿ ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ್ ಖರೆ.
ಈ ಬಾರಿ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ಸೆ. 5ರಂದು ನಡೆಯಲಿದೆ. ಅಂದು ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೂ ಇದು ನಡೆಯುತ್ತದೆ.  ನಗರದ ಅನೇಕ ಪ್ರಮುಖ ರಸ್ತೆ, ವೃತ್ತಗಳಲ್ಲಿ ಇದು ಸಾಗುವುದರಿಂದ ಎಲ್ಲರೂ ಇದನ್ನು ನೋಡಿ ಆನಂದಿಸಲು ಇಚ್ಛಿಸುತ್ತಾರೆ. ಸಾಧ್ಯವಾದವರು ಪಾಲ್ಗೊಳ್ಳುತ್ತಾರೆ. ಹೀಗೆ ಜನಸ್ತೋಮವೇ ಸೇರುತ್ತದೆ. ಆದರೆ ಕೇವಲ ಹಿಂದೂಗಳು ಮಾತ್ರ ಇದರಲ್ಲಿ ಪಾಲ್ಗೊಳ್ಳುತ್ತ್ತಿದ್ದರು.
ಈ ಬಾರಿ ಸರ್ವಧರ್ಮದವರನ್ನೂ ಸೇರಿಸಿಕೊಂಡು ಎಲ್ಲರ ನೇತೃತ್ವದಲ್ಲಿ ನಡೆಸಲು ವಿಶೇಷ ಪ್ರಯತ್ನ ನಡೆಸಲಾಗಿದೆ. ಈ ಸಂಬಂಧ ಸರ್ವಧರ್ಮ ಸಭೆ ನಡೆಸಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಕರೆಕೊಡಲಾಗಿದೆ. ಪ್ರತಿ ಧರ್ಮದ 50 ಜನರನ್ನು ಸೇರಿಸಿ ಅವರಿಗೆ ಸಾಕಷ್ಟು ಮಾಹಿತಿ ನೀಡಿ ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿದೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅವರವರ ಸಮುದಾಯದ ಜನರನ್ನು ಈ 50 ಜನರು ನಿಯಂತ್ರಿಸುವಂತೆ ಸೂಚಿಸಲಾಗಿದೆ.
ಈ 50 ಜನರಿಗೆ ಟಿ-ಶರ್ಟ್ ಮತ್ತು ಕ್ಯಾಪ್‌ಗಳನ್ನು ವಿತರಿಸಲಾಗಿದೆ. ಮೆರವಣಿಗೆಯ ವೇಳೆ ಇವರು ಇದನ್ನು ಧರಿಸಲು ಕೋರಲಾಗಿದೆ. ಸಮುದಾಯದ ಇನ್ನಷ್ಟು ಜನರನ್ನು ಮೆರವಣಿಗೆಗೆ ಕರೆದುಕೊಂಡು ಬಂದು ಶಾಂತಿಯುತವಾಗಿ ಅದು ಯಶಸ್ವಿಯಾಗಲು ಕಾರಣರಾಗಬೇಕೆಂದು ಮನವಿ ಮಾಡಲಾಗಿದೆ. ಎಸ್‌ಪಿಯವರು ಈ ಬಾರಿ ವಿನೂತನವಾದ ಪ್ರಯೋಗಕ್ಕೆ ಕೈಹಾಕಿದ್ದಾರೆ. ಈ ಮೂಲಕ  ಗಣೇಶೋತ್ಸವದ ನಿಜವಾದ ಅರ್ಥ ಸಾಬೀತಾಗುವಂತೆ ಮಾಡಬೇಕೆನ್ನುವುದು ಅವರ ಆಶಯ.
 ಸರ್ವಜನಾಂಗದವರೂ ಸ್ವಾತಂತ್ರ್ಯಾನಂತರ ಮತ್ತು ಅದಕ್ಕೂ ಪೂರ್ವದಲ್ಲಿ ಇದೇ ಮಾದರಿಯಲ್ಲಿ ಗಣೇಶೋತ್ಸವ ಆಚರಿಸುತ್ತಿದ್ದರು. ಈ ಮೂಲಕ ಒಗ್ಗಟ್ಟು ಪ್ರದರ್ಶಿಸುತ್ತಿದ್ದರು ಎನ್ನುವುದನ್ನು ಕೇಳಿರುವ, ಓದಿರುವ ನಾವು ಅಂದಿದ್ದ ಭ್ರಾತೃತ್ವ ಇಂದೂ ಸಹ ಇದೆ ಎನ್ನುವುದನ್ನು ಸಾಬೀತುಪಡಿಸಬೇಕು. ಎಲ್ಲ ಧರ್ಮೀಯರಲ್ಲೂ ಹಬ್ಬ ಎಂದರೆ ಉತ್ಸಾಹ, ಸಂತೋಷ ಇರಬೇಕೇ ವಿನಾ ಅದು ಆತಂಕವನ್ನುಂಟು ಮಾಡುವ ಸಂದರ್ಭವನ್ನು ತಂದೊಡ್ಡಬಾರದು.
 ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿ ಎನ್ನುವಂತೆ ಶಿವಮೊಗ್ಗದಲ್ಲಿ ಈ ಪ್ರಯೋಗ ಮಾಡಲು ಸಕಲ ತಯಾರಿ ನಡೆಸಲಾಗಿದೆ. ಪ್ರತಿ ಧರ್ಮೀಯರ ಹಬ್ಬವೂ ಇದೇ ಮಾದರಿಯಲ್ಲಿ ನಡೆದಾಗ ಆ ನಗರವಾಸಿಗಳು ಇನ್ನಷ್ಟು ಸಹೋದರತ್ವ, ಪ್ರೀತಿ, ವಿಶ್ವಾಸ, ನಂಬುಗೆಯಿಂದ ಬಾಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ಸಾಧ್ಯವಾಗುತ್ತದೆ ಎನ್ನುವುದು ಎಸ್‌ಪಿ ಅವರ ಅನಿಸಿಕೆ.


----------------------------------------



Monday, 28 August 2017

ಮೈಸೂರು ದಸರಾ ಉದ್ಘಾಟಿಸಲಿರುವ ಪ್ರಪ್ರಥಮ ಮುಸ್ಲಿಂ 
 ನಿಸಾರ್ ಅಹಮದ್‌ಗೆ, ಜಾತ್ಯತೀತ ನಾಡಿಗೆ ವಿಶೇಷ ಗರಿ




ಉದಾರವಾದಿ, ಚಿಂತಕ ನಿಸಾರ್, ಮೈಸೂರು ದಸರಾ ಉದ್ಘಾಟಿಸಲಿರುವ ಪ್ರಪ್ರಥಮ ಮುಸ್ಲಿಂ ಆಗಲಿದ್ದಾರೆ. ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದವರು, ಭಗವದ್ಗೀತೆ ಮತ್ತು ರಾಮಾಯಣವನ್ನು ಆಳವಾಗಿ ಅಭ್ಯಸಿಸಿದವರು, ಜೊತೆಗೆ ಮಾತನಾಡಬಲ್ಲವರು. ಕೇವಲ ಬರೆಹಗಾರರಾಗಿ ಮಾತ್ರವಲ್ಲದೆ, ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲೂ ಮಹತ್ವದ ವ್ಯಕ್ತಿಯಾಗಿದ್ದಾರೆ. ಆದ್ದರಿಂದಲೇ ಇವರ ಆಯ್ಕೆ ದಸರಾಕ್ಕೆ ವಿಶೇಷ ಅರ್ಥ ತರಲಿದೆ. ಎಲ್ಲ ನಂಬಿಕೆಯವರು ಮತ್ತು ಧರ್ಮೀಯರು ಸೇರಿ ಆಚರಿಸುವ ಹಬ್ಬವಿದು. ಜಾತ್ಯತೀತ ನಾಡು ಇದು ಎನ್ನುವುದಕ್ಕೆ ನಿಸಾರ್ ಆಯ್ಕೆ ಇನ್ನಷ್ಟು ಪುಷ್ಠಿ ನೀಡಲಿದೆ


ನಾಡಹಬ್ಬ ದಸರಾ ಸಮೀಪಿಸುತ್ತಿರುವಂತೆಯೇ ಅದರ ಪೂರ್ವ ಸಿದ್ಧತೆಗಳೂ ಆರಂಭವಾಗಿವೆ. ವಿಶೇಷವಾಗಿ  ದಸರಾ ಎಂದರೆ ಮೈಸೂರು ದಸರಾ ನೆನೆಪಾಗುತ್ತದೆ. ತನ್ನ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳಿಂದ ಜನಮಾನಸದಲ್ಲಿ ಅಷ್ಟೆ ಏಕೆ, ವಿಶ್ವವಿಖ್ಯಾತವಾಗಿರುವ ಮೈಸೂರು ದಸರಾ ಈ ವರ್ಷ ಸೆಪ್ಟೆಂಬರ್ 21ರಂದು ಉದ್ಘಾಟನೆಗೊಳ್ಳಲಿದೆ.
ಈ ಬಾರಿಯ 408ನೆಯ  ದಸರಾ ಉದ್ಘಾಟನೆಯನ್ನು ನಾಡಿನ ನವ್ಯ, ಹಿರಿಯ ಮತ್ತು ನಿತ್ಯೋತ್ಸವ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಉದ್ಘಾಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಎಲ್ಲರೂ ಖುಷಿಪಟ್ಟರು. ಏಕೆಂದರೆ, ಕನ್ನಡ ಸಾಹಿತ್ಯದಲ್ಲಿ ಎಂದೂ ಜಾತಿ, ಗುಂಪುಗಾರಿಕೆ ಮಾಡದೆ ಅಮೂಲ್ಯ ಕವನಗಳನ್ನು ರಚಿಸಿದವರು ನಿಸಾರ್ ಅವರು. ಅವರು ಮುಸ್ಲಿಮರಾದರೂ ಎಲ್ಲೂ ಮುಸ್ಲಿಮರೆಂದು ತೋರಿಸಿಕೊಳ್ಳಲೇ ಇಲ್ಲ. ಅವರ ಕನ್ನಡ ಸಾಹಿತ್ಯದಲ್ಲಿಯೂ ಅದರ ವಾಸನೆ ಇಲ್ಲವೇ ಅಲ್ಲ, ಶುದ್ಧ ಕನ್ನಡದಲ್ಲಿ, ಕನ್ನಡಾಂಬೆಯ ಸಾಹಿತ್ಯ ಸೇವೆಯನ್ನು ಮಾಡಿದವರು ಅವರು. ಈ ಕಾರಣದಿಂದಲೇ ಅವರ ಆಯ್ಕೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಈ ಹಿಂದೆಯೂ ಕವಿ ಚೆನ್ನವಿರ ಕಣವಿ, ಜನಪದ ಸಾಹಿತಿ ಪ್ರೊ. ಚಂದ್ರಶೇಖರ್ ಕಂಬಾರ್, ಸಾಹಿತಿ ನಾ. ಡಿಸೋಜಾ ಮೈಸೂರು ದಸರಾ ಉದ್ಘಾಟಿಸಿದ್ದಾರೆ. ಇದು ಅವರ ಸಾಹಿತ್ಯ ಸೇವೆ ಗಮನಿಸಿ ಸಿಕ್ಕಿರುವ ಗೌರವ. ಅದರಂತೆ ಈ ಬಾರಿಯೂ 81ರ ಹರಯದ ನಿಸಾರ್ ಅಹಮದ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ........
ಎಂಬ ಪ್ರಸಿದ್ಧ ಕವನದಿಂದಲೇ ಖ್ಯಾತರಾದ ನಿಸಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯವರು.  ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ 1967ರಿಂದ 72ರವರೆಗೆ ಮತ್ತು 1975ರಿಂದ 78ರವರೆಗೆ ಭೂಗರ್ಭಶಾಸ್ತ್ರ ಪ್ರಾಧ್ಯಾಪಕರಾಗಿ ಇಲ್ಲಿಯೇ ನಿವೃತ್ತರಾದವರು.  ಅವರು ಶಿವಮೊಗ್ಗದಲ್ಲಿದ್ದಾಗಲೇ ಜೋಗದ ವೈಭವವನ್ನು ಕಂಡು ಮನಸೋತು ಈ ಕವನ ರಚಿಸಿದ್ದಾರೆ. ಇದು ಇಷ್ಟು ಪ್ರಖ್ಯಾತವಾಗಿದೆ ಎಂದರೆ ನಾಡಿನ ಉದ್ದಗಲಕ್ಕೂ ಪ್ರಮುಖ ಸಾಹಿತ್ಯಿಕ ಸಮಾರಂಭಗಳಲ್ಲಿ ಇದು ಹಾಡಲ್ಪಡುತ್ತದೆ. ಜೊತೆಗೆ ಕ್ಯಾಸೆಟ್ ಮೂಲಕ ಇದನ್ನು ಅವರು ಹೊರತಂದಾಗ ಇನ್ನಷ್ಟು ಮನೆಮಾತಾಯಿತು.
ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಕ್ಯಾಸೆಟ್ ಮೂಲಕ ಭಾವಗಿತೆಗಳನ್ನು ಪರಿಚಯಿಸಿದವರು ಇವರು. ನಿಸಾರ್ ಅವರಿಗೆ ಶಿವಮೊಗ್ಗದ ನಂಟು ಹೆಚ್ಚು. 2007ರಲ್ಲಿ  ಶಿವಮೊಗ್ಗದಲ್ಲಿ ಜರುಗಿದ 73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಕೀರ್ತಿ ಅವರದ್ದು. ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಇಲ್ಲಿಗೆ ಬಂದು ಭಾಗವಹಿಸಿರುವ ಅವರು ಇಂದಿಗೂ ನಗರವನ್ನು ಸದಾ ಸ್ಮರಿಸುತ್ತಾರೆ. ಅದೇ ರೀತಿ ಶಿವಮೊಗ್ಗದವರೂ ಅವರನ್ನು ಸದಾ ನೆನೆಪಿಸಿಕೊಳ್ಳುತ್ತಾರೆ.
2011ರಲ್ಲಿ ಬೆಳಗಾವಿಯಲ್ಲಿ ಜರುಗಿದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕವಿಗೋಷ್ಠಿ ನಡೆಸಿಕೊಟ್ಟವರು ನಿಸಾರ್. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಲಹಾ ಸಮಿತಿಯಲ್ಲಿ ಕೆಲಸ ಮಾಡಿದ್ದಾರೆ. ಕಾನೂನು ವಿಶ್ವಕೋಶ ರಚನಾ ಮಂಡಳಿಯಲ್ಲೂ ಸದಸ್ಯರಾಗಿದ್ದರು. ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇಂತಹ ಹತ್ತಾರು ಮಹತ್ಸಾಧನೆ ಮಾಡಿರುವ ಅವರಿಗೆ 2008ರಲ್ಲಿ ಪದ್ಮಶ್ರೀ ಮತ್ತು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದೆ.
ಉದಾರವಾದಿ ಮತ್ತು ಚಿಂತಕರಾಗಿರುವ ನಿಸಾರ್, ಮೈಸೂರು ದಸರಾ ಉದ್ಘಾಟಿಸಲಿರುವ ಪ್ರಪ್ರಥಮ ಮುಸ್ಲಿಂ ಆಗಲಿದ್ದಾರೆ. ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದವರು, ಭಗವದ್ಗೀತೆ ಮತ್ತು ರಾಮಾಯಣವನ್ನು ಆಳವಾಗಿ ಅಭ್ಯಸಿಸಿದವರು, ಜೊತೆಗೆ ಮಾತನಾಡಬಲ್ಲವರು. ಕೇವಲ ಬರೆಹಗಾರರಾಗಿ ಮಾತ್ರವಲ್ಲದೆ, ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲೂ ಮಹತ್ವದ ವ್ಯಕ್ತಿಯಾಗಿದ್ದಾರೆ. ಆದ್ದರಿಂದಲೇ ಇವರ ಆಯ್ಕೆ ದಸರಾಕ್ಕೆ ವಿಶೇಷ ಅರ್ಥ ತರಲಿದೆ. ಎಲ್ಲ ನಂಬಿಕೆಯವರು ಮತ್ತು ಧರ್ಮೀಯರು ಸೇರಿ ಆಚರಿಸುವ ಹಬ್ಬವಿದು. ಜಾತ್ಯತೀತ ನಾಡು ಇದು ಎನ್ನುವುದಕ್ಕೆ ನಿಸಾರ್ ಆಯ್ಕೆ ಇನ್ನಷ್ಟು ಪುಷ್ಠಿ ನೀಡಲಿದೆ.  
ಸರ್ಕಾರದ ಆಯ್ಕೆಗಳೆಲ್ಲ ಹೆಚ್ಚು ಕಡಿಮೆ ರಾಜಕೀಯಪ್ರೇರಿತವಾಗಿರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಆದರೆ ಮೈಸೂರು ದಸರಾ ವಿಚಾರದಲ್ಲಿ ಮಾತ್ರ ಇದು ಸುಳ್ಳಾಗಿದೆ. ಇಲ್ಲಿಯವರೆಗೆ ದಸರಾ ಉದ್ಘಾಟನೆ ಮಾಡಿದವರೆಲ್ಲ ನಾಡಿನ ಗಣ್ಯರೇ ಆಗಿದ್ದು, ಒಂದಿಲ್ಲೊಂದು ಕ್ಷೇತ್ರದಲ್ಲಿ ಅವಿಸ್ಮರಣೀಯ ಕೆಲಸ ಮಾಡಿದವರಾಗಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಮತ್ತು ನಾಡಿನಲ್ಲಿ ರೈತರ ಆತ್ಮಹತ್ಯೆ ಒಂದೇ ಸಮನೆ ಏರುತ್ತಿದ್ದುದರಿಂದ ರೈತರಲ್ಲಿ ಆತ್ಮವಿಶ್ವಾಸ ತುಂಬಲು ರೈತ ನಾಯಕ ಪುಟ್ಟಯ್ಯ ಅವರಿಂದ ಉದ್ಘಾಟನೆ ಮಾಡಿದ ಉದಾಹರಣೆ ನಮ್ಮ ಮುಂದಿದೆ. ಜಾತಿ-ಮತ, ಧರ್ಮ, ವೃತ್ತಿ ನೋಡದೆ ಇಂತಹವರ ಆಯ್ಕೆ ನಡೆಯುತ್ತಿರುವುದು ನಿಜಕ್ಕೂ ಒಂದು ಸತ್ಸಂಪ್ರದಾಯ. ಮುಂದಿನ ವರ್ಷಗಳಲ್ಲೂ ಈ ಪರಂಪರೆ ಮುಂದುವರೆದರೆ ಮೈಸೂರು ದಸರಾಕ್ಕೆ ಇನ್ನಷ್ಟು ಉತ್ತಮ ಹೆಸರು ಬರಲು ಸಾಧ್ಯವಿದೆ. ಆರಂಭದಲ್ಲೇ ಅಂದರೆ ದಸರಾ ಉದ್ಘಾಟನೆ ಮಾಡುವವರ ಆಯ್ಕೆಯ ವಿಚಾರದಲ್ಲೇ ವಿವಾದ ಆರಂಭವಾದರೆ ಅದು ಮುಂದಿನ ಎಲ್ಲ ಕಾರ್ಯಕ್ರಮಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ನಾಡ ಹಬ್ಬದ ಸಂದರ್ದಲ್ಲಿ ಎಲ್ಲ ಜಾತಿ- ಧರ್ಮದವರು ಒಗ್ಗಟ್ಟಾಗಿ ಆಚರಿಸಬೇಕಾಗುತ್ತದೆ. ದಸರಾ ಸಮಿತಿಯಲ್ಲೂ ಎಲ್ಲ ವರ್ಗದವರಿಗೂ ಪ್ರಾತಿನಿಧ್ಯವಿರುತ್ತದೆ. ಎಲ್ಲರೂ ಸೇರಿ ಇದನ್ನು ಆಚರಿಸಿದಾಗ ಅದಕ್ಕೆ ವಿಶಿಷ್ಟ ಅರ್ಥ ಬರುತ್ತದೆ. ಎಲ್ಲರಿಗೂ ಮಾದರಿಯಾಗುತ್ತದೆ. ಇಲ್ಲಿಯವರೆಗೆ ದಸರಾ ಆಚರಣೆ ಇದೇ ಮಾದರಿಯಲ್ಲಿ ನಡೆದು ಬಂದಿರುವುದರಿಂದಲೇ ವರ್ಷದಿಂದ ವರ್ಷಕ್ಕೆ ಅದರ ಕೀರ್ತಿ, ವೈಭವ ಪಸರಿಸುತ್ತಿದೆ.
..................................